ಹುಬ್ಬಳ್ಳಿಯ ಮಾನ್ಯ ಪಾಟೀಲ್ ಎಂಬ ಇಪ್ಪತ್ತು ವರ್ಷದ ಹುಡುಗಿ, ಅನ್ಯಜಾತಿಯ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದು ಅವಳ ಬದುಕಿಗೆ ಮುಳುವಾಯಿತು. ಮಗಳು ಗರ್ಭಿಣಿಯೆಂಬುದನ್ನೂ ಪರಿಗಣಿಸದೆ ಅವಳ ತಂದೆ ಅವಳನ್ನು ಕೊಂದುಬಿಟ್ಟ. ಅಂತರ್ಜಾತೀಯ ಮದುವೆಯಾಗಿದ್ದಕ್ಕೆ ಕಲಬುರಗಿಯ ಕವಿತಾ ಕೊಲ್ಲೂರ ಎಂಬಾಕೆಯನ್ನು ಅವಳ ತಂದೆ ಮತ್ತು ಸಂಬಂಧಿಕರು ಕೊಂದು ಸುಟ್ಟು ಹಾಕಿದ್ದೂ ೨೦೨೫ರ ಆಗಸ್ಟ್ ನಲ್ಲಿ ನಡೆದ ಘಟನೆ. ಕಳೆದ ವರ್ಷದಲ್ಲಿಯೇ ಸಾಕ್ಷ್ಯಂ ಟೇಟೆ ಎಂಬ ೨೦ ವರ್ಷದ ಹುಡುಗನನ್ನು ಅವಳು ಪ್ರೀತಿಸಿದ ಹುಡುಗಿಯ ತಂದೆ ಮತ್ತು ಸಹೋದರರು ಕೊಂದರು. ಆ ಹುಡುಗಿ ಹುಡುಗನ ಶವದೊಂದಿಗೆ ಮದುವೆ ಮಾಡಿಕೊಂಡಳು ಎನ್ನುವುದು ತುಂಬಾ ಸುದ್ದಿಯಾಯಿತು. ಉತ್ತರಪ್ರದೇಶದಲ್ಲಿ ೨೪ ವರ್ಷದ ಅರ್ಮಾನ್ ಮತ್ತು ೧೮ ವರ್ಷದ ಕಾಜಲ್ ಅಂತರ್ಧರ್ಮೀಯ ವಿವಾಹ ಮಾಡಿಕೊಂಡವರನ್ನು ಹುಡುಗಿಯ ಅಣ್ಣಂದಿರು ಕೊಂದು ಹೂತುಹಾಕಿದರು. ಇವೆಲ್ಲವೂ ಇತ್ತೀಚಿನ ಕೆಲವು ತಿಂಗಳುಗಳಲ್ಲಿ ನಡೆದ ಘಟನೆಗಳು. ಸಮಾಜದ ಕಣ್ಣಿಗೆ ಇವು ಮರ್ಯಾದಾ ಹತ್ಯೆಗಳು, ಕಾನೂನಿನ ಕಣ್ಣಿಗೆ ಹೊಸಕೇಸುಗಳು. ಆದರೆ ಆಯಾ ಕುಟುಂಬಗಳ ಪಾಲಿಗೆ, ಅವರ ತಂದೆ ತಾಯಂದಿರಿಗೆ, ಆಪ್ತ ಬಂಧುಗಳಿಗೆ ಎಂದೂ ಮಾಸದ ಗಾಯಗಳು. ಜೀವ ಕಳೆದುಕೊಂಡವರು ಮಣ್ಣಾಗುತ್ತಾರೆ, ಕೊಂದವರು ಜೈಲು ಪಾಲಾಗುತ್ತಾರೆ, ಉಳಿದವರು ಜೀವನ ಪರ್ಯಂತ ಅವಮಾನ, ನೋವು, ಸಂಕಟ, ಪುತ್ರ/ಪುತ್ರಿ ಶೋಕಗಳಿಂದ ನರಳುತ್ತಾರೆ.
ಮರ್ಯಾದಾ ಹತ್ಯೆಗಳನ್ನು ಖಂಡಿತಾ ಸಮರ್ಥಿಸಿಕೊಳ್ಳುವುದಕ್ಕಿಲ್ಲ. ಉಸಿರು ನಿಂತ ಶರೀರಕ್ಕೆ ಉಸಿರು ತುಂಬುವ ಶಕ್ತಿ ನಮ್ಮಲ್ಲಿಲ್ಲದ ಮೇಲೆ ಯಾರ ಉಸಿರನ್ನೇ ಆದರೂ ಕಸಿದುಕೊಳ್ಳುವ ಹಕ್ಕು ಯಾರಿಗೂ ಇಲ್ಲ. ಸತ್ತವರನ್ನು ಬದುಕಿಸಲಾರೆವು ಎಂದ ಮೇಲೆ ಬದುಕಿರುವವರನ್ನು ಕೊಲ್ಲುವುದಕ್ಕೆ ಮನುಷ್ಯರಿಗೆ ಯಾವ ಅಧಿಕಾರವೂ ಇಲ್ಲ. ಆದರೆ ಈ ಬಗೆಯ ಹತ್ಯೆಗಳು ಏಕೆ ಘಟಿಸುತ್ತವೆ? ಯೋಚಿಸಬೇಕಾದುದೇ. ನಮ್ಮ ಭಾರತೀಯ ಸಮಾಜದಲ್ಲಿ ಸಾವಿರಾರು ಬದುಕಿನ ರೀತಿಗಳಿವೆ, ವಿಭಿನ್ನ ಸಂಸ್ಕೃತಿಗಳಿವೆ. ಎಲ್ಲವೂ ಅವರವರ ಮಟ್ಟಿಗೆ ಶ್ರೇಷ್ಠವೇ. ಬಹುಶಃ ಭಾರತೀಯ ಸಂಸ್ಕೃತಿಯಲ್ಲಿನ ಈ ವೈವಿಧ್ಯತೆ ಇಲ್ಲಿನ ಸೊಗಸು ಕೂಡ. ದೇವರು, ಧರ್ಮ, ಪೂಜೆ ಪುನಸ್ಕಾರಗಳು ಎಲ್ಲವೂ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ, ಒಂದು ಜಾತಿಯಿಂದ ಇನ್ನೊಂದು ಜಾತಿಗೆ ವ್ಯತ್ಯಾಸವಾಗುತ್ತಲೇ ಇರುತ್ತವೆ. ನಮ್ಮದು ಶ್ರೀಮಂತ ಸಂಸ್ಕೃತಿಯೆಂಬುದರ ಹಿಂದೆ ಈ ಆಚರಣೆಗಳೂ ಸೇರಿವೆ. ಆದರೆ ನಮ್ಮದರಷ್ಟೇ ಮತ್ತೊಬ್ಬರದೂ ಶ್ರೇಷ್ಠ ಎಂಬುದನ್ನು ಒಪ್ಪಿಕೊಳ್ಳುವ ವಿಶಾಲಮನಸ್ಸು ನಮ್ಮಲ್ಲಿದ್ದರೆ ಅನೇಕ ಸಮಸ್ಯೆಗಳಿಗೆ ಸರಳವಾಗಿ ಪರಿಹಾರ ಸಿಗಬಹುದೇನೋ!
ಹಾಗೆ ನೋಡಿದರೆ ಮದುವೆ ಎಂಬ ಒಂದು ಹೊಸ ಸಂಬಂಧ ಬೆಳೆಸುವುದೇ ಅತ್ಯಂತ ಕಠಿಣ ಕೆಲಸ. ‘ಮದುವೆ ಮಾಡಿ ನೋಡು… ಮನೆ ಕಟ್ಟಿ ನೋಡು’ ಎಂಬ ಗಾದೆಯೇ ಇದೆಯಲ್ಲ. ಒಂದೇ ಸಮುದಾಯದವರ ನಡುವೆ ಏರ್ಪಡುವ ವಿವಾಹವೇ ಆದರೂ ಭೌಗೋಳಿಕವಾಗಿ ಬೇರೆ ಪ್ರದೇಶದವರಾಗಿದ್ದರೆ ಅವರ ಮದುವೆಯ ಕ್ರಮಗಳಲ್ಲಿ ಭಿನ್ನತೆ ಇರುತ್ತದೆ. ಮದುವೆ ಮಂಟಪದಲ್ಲಿಯೇ ಅನೇಕ ತಕರಾರುಗಳು ಏಳುವುದನ್ನೂ ಕೇಳಿದ್ದೇವೆ. ಹುಡುಗಿಯ ಕಡೆಯವರು ಧಾರೆ ಎರೆಯುವವರಾದ್ದರಿಂದ ಅವರ ಕ್ರಮದಂತೆ ಮಾಡಬೇಕು ಎಂದು ವಧುವಿನ ಕಡೆಯವರು ಹೇಳಿದರೆ, ವರೋಪಚಾರ ಮಾಡಿ ವಧುವನ್ನು ಧಾರೆಯೆರೆದು ಕೊಡುವುದರಿಂದ ವರನ ಕಡೆಯ ಕ್ರಮದಂತೆ ನಡೆಯಬೇಕು ಎಂದು ಅವರು. ಕೆಲವು ಸಹಾನುಭೂತಿಯುಳ್ಳ ಮಂದಿ ಮದುವೆ ನಿಶ್ಚಿತಾರ್ಥದಂದೇ ಇವೆಲ್ಲವನ್ನೂ ಮಾತನಾಡಿಕೊಂಡು ಮದುವೆಯ ದಿನ ಯಾವುದೇ ಗೊಂದಲವಿಲ್ಲದೆ ಸರಾಗವಾಗಿ ಎಲ್ಲವನ್ನೂ ಸಾಂಗವಾಗಿ ನೆರವೇರಲು ಅನುಕೂಲ ಮಾಡಿಕೊಳ್ಳುತ್ತಾರೆ. ಇನ್ನೂ ಕೆಲವರು ಮದುವೆಯ ಮಂಟಪದಲ್ಲಿ ಸ್ವಪ್ರತಿಷ್ಠೆ ಮೆರೆಯಲು ಹೊರಟು ಎಲ್ಲವನ್ನೂ ಕೆಡಿಸಿ ಬಿಡುತ್ತಾರೆ. ಇಲ್ಲಿ ವಧು-ವರರಿಗೂ ಗೊಂದಲವೇ. ತಾನು ಮುಂದೆ ಅನುಸರಿಸಬೇಕಾದ ಕ್ರಮಗಳೆಲ್ಲ ವರನ ಕಡೆಯದ್ದಾದ್ದರಿಂದ ಅವರೆಂದಂತೆ ಅವರ ಕ್ರಮದಲ್ಲಿ ಆಗಲಿ ಎಂದು ವಧು ಯೋಚಿಸಿದರೆ, ಮುಂದೆ ಹೇಗೂ ನಮ್ಮ ಸಂಪ್ರದಾಯದಂತೆ ಇರುತ್ತದೆ, ವಧುವಿನ ಕಡೆಯವರು ಅವರ ಸಂತೋಷದಂತೆ ಧಾರೆಯೆರೆದು ಕೊಡಲಿ ಎಂದು ವರ ಯೋಚಿಸಿದರೆ ಅವರವರ ಕುಟುಂಬದವರಿಗೆ ಅದನ್ನು ಒಪ್ಪಿಕೊಳ್ಳಲಾಗುವುದಿಲ್ಲ. ‘ಇನ್ನೂ ತಾಳಿ ಕಟ್ಟಿಲ್ಲ, ಆಗಲೇ ಅವನನ್ನು ವಹಿಸಿಕೊಳ್ಳುತ್ತಾಳೆ’ ಎಂದು ವಧುವಿನ ಕಡೆಯವರು, ‘ಇನ್ನೂ ಮನೆ ಹೊಸಿಲು ತುಳಿದಿಲ್ಲ, ಆಗಲೇ ನಮ್ಮ ಹುಡುಗನನ್ನು ಅವಳ ತಾಳಕ್ಕೆ ಕುಣಿಸುತ್ತಾಳೆ’ ಎಂದು ವರನ ಕಡೆಯವರು ತಿಕ್ಕಾಟಕ್ಕೆ ಬಿದ್ದು ಬಿಡುತ್ತಾರೆ!
ತಮ್ಮ ಮಕ್ಕಳ ಬಗ್ಗೆ ಹೆತ್ತವರು ಕಾಣುವ ಕನಸುಗಳಲ್ಲಿ ಮದುವೆಯದ್ದು ಬಲುದೊಡ್ಡ ಕನಸು. ಏಕೆಂದರೆ ವ್ಯಕ್ತಿಯೊಬ್ಬ ಜೀವನದ ಹೆಚ್ಚಿನ ಸಮಯವನ್ನು ಕಳೆಯುವುದು ತಮ್ಮ ಸಂಗಾತಿಯ ಜೊತೆಯಲ್ಲಿ. ಅದು ಬದುಕಿನುದ್ದಕ್ಕೂ ಇರಬೇಕಾದ ಬಂಧ. ಹಾಗಿರುವಾಗ ಪುಟ್ಟದೊಂದು ಪೆನ್ನು ಪೆನ್ಸಿಲ್ಲು ಬೇಕಾದರೂ ತಮ್ಮನ್ನು ಕೇಳಿ ತೆಗೆದುಕೊಳ್ಳುವ ಮಗ/ಮಗಳು ಬದುಕಿನ ಬಲುದೊಡ್ಡ ನಿರ್ಧಾರವನ್ನು ತಾನೇ ತೆಗೆದುಕೊಳ್ಳುವುದನ್ನು ಅನೇಕ ಮನಸ್ಸುಗಳು ಸ್ವೀಕರಿಸುವುದಕ್ಕೆ ಸಿದ್ಧವಿರುವುದಿಲ್ಲ. ಈಗೀಗ ಆಧುನಿಕತೆ ಹೆಚ್ಚು ಆವರಿಸಿದಂತೆ ಮನಸ್ಸುಗಳೂ ತಕ್ಕಮಟ್ಟಿಗೆ ವಿಶಾಲವಾಗಿ ತಮ್ಮ ಸಂಗಾತಿಯನ್ನು ತಾವೇ ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವನ್ನು ಕೆಲವು ಮಂದಿ ತಂದೆತಾಯಿ ತಮ್ಮ ಮಕ್ಕಳಿಗೆ ಕೊಟ್ಟಿರಬಹುದು. ಸಂತೋಷವಾಗಿಯೇ ಮದುವೆಯನ್ನು ನೆರವೇರಿಸಿಯೂ ಇರಬಹುದು. ಆದರೆ ಜಾತಿಯ ಪ್ರಶ್ನೆ ಬಂದಾಗ ಒಪ್ಪಿಕೊಳ್ಳುವುದು ಸುಲಭದ ವಿಚಾರವೇನಲ್ಲ. ಅದರಲ್ಲೂ ಸಸ್ಯಾಹಾರಿ ಮತ್ತು ಮಾಂಸಾಹಾರಿಗಳ ನಡುವೆ ಮದುವೆ ಸಂಬಂಧ ಏರ್ಪಡಬೇಕಾದಾಗ ತಂದೆತಾಯಿ ತುಂಬ ಯೋಚನೆ ಮಾಡಬೇಕಾಗುತ್ತದೆ. ಆಹಾರವೆನ್ನುವುದು ಅವರವರ ಆಯ್ಕೆ ಎಂಬುದನ್ನು ಖಂಡಿತಾ ಒಪ್ಪೋಣ. ಆದರೆ ಹಲವು ಕಡೆ ಮದುವೆಯವರೆಗೆ ಇಲ್ಲದ ಸಮಸ್ಯೆಗಳು ಅಡುಗೆಮನೆಯಲ್ಲಿ ಪ್ರಾರಂಭವಾಗುತ್ತದೆ. ಇಬ್ಬರಲ್ಲಿ ಒಬ್ಬರು ಮಾಂಸವನ್ನು ಇಷ್ಟಪಡುವವರಾದಾಗ ಮನೆಯಲ್ಲಿ ಅಡುಗೆ ಮಾಡಬೇಕೆಂದರೆ ಮತ್ತೊಬ್ಬರಿಗೆ ಅದು ಸಹಿಸಿಕೊಳ್ಳಲು ಕಷ್ಟದ ವಿಷಯವೂ ಆಗಬಹುದು. ಮನೆಯ ಹಿರಿಯರು ಇದರಿಂದ ಕಸಿವಿಸಿಯನ್ನು ಅನುಭವಿಸಬೇಕಾಗಿಯೂ ಬರಬಹುದು.
ಸರಕಾರವೇನೋ ಅಂತರ್ಜಾತೀಯ ಮದುವೆಯನ್ನು ಪ್ರೋತ್ಸಾಹಿಸಿದರೂ ಮನೆಯ ಹಿರಿಯರು ಹೆಚ್ಚಿನ ಸಂದರ್ಭಗಳಲ್ಲಿ ಅಂತರ್ಜಾತೀಯ ಮದುವೆಯನ್ನು ಒಪ್ಪುವುದಿಲ್ಲ. ಹಿಂದೆ ಘಟಶ್ರಾದ್ಧವನ್ನೇ ಮಾಡಿಬಿಡುತ್ತಿದ್ದರಲ್ಲ? ಮನೆಮಂದಿಯನ್ನು ಎದುರು ಹಾಕಿಕೊಂಡು ಮದುವೆ ಮಾಡಿಕೊಳ್ಳುವುದು ಅನೇಕಬಗೆಯ ಒತ್ತಡಗಳಿಗೆ ಕಾರಣವಾಗಬಹುದು. ಕಾರಣ – ನಮ್ಮ ಬದುಕಿನ ರೀತಿಯಲ್ಲಿ ಆಳವಾಗಿ ಬೇರೂರಿರುವ ಜಾತಿ-ಸಂಸ್ಕೃತಿಯನ್ನು ಮರೆಯುವುದು ಸುಲಭವಲ್ಲ. ಇದೇ ಕಾರಣಕ್ಕೆ ಮಕ್ಕಳನ್ನು ಕೊನೆಯ ತನಕವೂ ನೋಡದೆ ಒಳಗೊಳಗೇ ಕೊರಗಿ ಸತ್ತವರೆಷ್ಟೋ! ತೀರಾ ಸಾಂಪ್ರದಾಯಿಕ ಕುಟುಂಬಗಳಲ್ಲಿ ಮದುವೆ ಮಾಡಿಕೊಂಡವರನ್ನು ಮಾತ್ರವಲ್ಲದೆ ಅವರ ತಂದೆತಾಯಂದಿರನ್ನೂ ಕುಟುಂಬದಿಂದ ಹೊರಗಿನವರಂತೆ ಕಾಣುವ ಪದ್ಧತಿಗಳೂ ಇವೆ. ಅಲ್ಲಿಯವರೆಗೆ ಸಮಾಜದಲ್ಲಿ ಗೌರವಯುತವಾಗಿ ಬಾಳಿದವರು ಮಕ್ಕಳ ಮದುವೆಯ ಕಾರಣದಿಂದ ಆ ಗೌರವಕ್ಕೆ ಎರವಾಗಿ ಬದುಕುವುದು ಅದೆಷ್ಟು ಹಿಂಸೆಯೆನಿಸಬಹುದು? ಇಬ್ಬರ ತಂದೆತಾಯಿಯ ಪೈಕಿ ಒಂದು ಕಡೆಯವರು ಮಾತ್ರ ಒಪ್ಪಿ ಆಗುವ ಮದುವೆಯೂ ದಂಪತಿಗಳ ಪಾಲಿಗೆ ಒತ್ತಡದ್ದೇ ಆಗಿರುತ್ತದೆ. ಸದಾಕಾಲವೂ ಹೆತ್ತವರು ಕಣ್ಣೀರಿಳಿಸಿಕೊಂಡಿದ್ದರೆ ಮಕ್ಕಳ ಬದುಕು ಹಸನಾದೀತೇ? ಇದರೊಂದಿಗೆ ಅಕ್ಕಪಕ್ಕದವರು, ಊರಿನವರು ಆಡಿಕೊಳ್ಳುವ ಮಾತುಗಳೂ ನೂರಿರುತ್ತವೆ. ಎಲ್ಲದಕ್ಕೂ ನಿರ್ಲಿಪ್ತರಾಗಿರುವುದಕ್ಕೆ ಮನುಷ್ಯರೇನೂ ದೇವರಲ್ಲವಲ್ಲ?
ಮದುವೆಯಾದ ಒಂದೆರಡು ವರ್ಷಗಳಲ್ಲಿ ದಂಪತಿಗಳಿಗೂ ಎಲ್ಲವೂ ಚೆನ್ನಾಗಿದೆ ಅನ್ನಿಸುವ ಭರದಲ್ಲಿ ಕೊರತೆಗಳು ಯಾವುವೂ ಗೋಚರಿಸದೆ ಇರಬಹುದು. ಆದರೆ ನಿಧಾನವಾಗಿ ಹೊಸ ಬದುಕು ಹಳೆಯದಾಗುತ್ತ ಸಣ್ಣಪುಟ್ಟ ಕೊರತೆಗಳೂ ದೊಡ್ಡದಾಗಿ ಕಾಣಿಸಲು ಪ್ರಾರಂಭವಾಗುತ್ತವೆ. ಹಬ್ಬಗಳ ಆಚರಣೆಯಲ್ಲಿನ ವ್ಯತ್ಯಾಸಗಳು ಕೂಡ ದೊಡ್ಡ ಕಂದಕವನ್ನೇ ಸೃಷ್ಟಿ ಮಾಡಬಲ್ಲವು. ಪರಸ್ಪರ ಗೌರವದಿಂದ ನಡೆದುಕೊಳ್ಳುವ ಮನಸ್ಸು ಇದ್ದಲ್ಲಿ ಮಾತ್ರ ಬದುಕು ಚೆನ್ನಾಗಿರುವುದು ಸಾಧ್ಯ.
(ಮುಂದುವರಿಯುತ್ತದೆ)






