ಕಳೆದ ಕೆಲವು ತಿಂಗಳುಗಳಲ್ಲಿ ಏನನ್ನೆಲ್ಲ ಕಂಡುಬಿಟ್ಟೆವು.
ಎಲ್ಲ ದೇಶಗಳನ್ನೂ ತಟ್ಟಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವ್ಯಾಪಾರ ಕಿರಿಕಿರಿ. ದಿನಕ್ಕೊಂದು ಮಾತು-ಬೆದರಿಕೆ. ಭಾರತದ ವಿರುದ್ಧವೂ ಹಲವು ಬಗೆಯ ಮಾತಿನ ಪ್ರಹಾರ.
ಇರಾನ್-ವೆನೆಜುವೆಲಾಗಳಲ್ಲಿ ಅಲ್ಲಾಡಿರುವ ಆಡಳಿತಗಳು.
ಜಾಗತಿಕ ಸಂಸ್ಥೆಗಳ ಮಧ್ಯಸ್ಥಿಕೆಯಲ್ಲಿ ವ್ಯವಹಾರ ಮಾಡುತ್ತಿದ್ದ ಮಾದರಿ ಅಪ್ರಸ್ತುತವಾಗುತ್ತ ಭಾರತವೂ ಸೇರಿದಂತೆ ಜಗತ್ತಿನ ಪ್ರಮುಖ ದೇಶಗಳೆಲ್ಲ ಪರಸ್ಪರ ಮುಕ್ತ ವ್ಯಾಪಾರ ಒಪ್ಪಂದಗಳಿಗೆ ಮುಂದಾಗುತ್ತಿರುವ ವಿಶಿಷ್ಟ ಬೆಳವಣಿಗೆ…
ಅತ್ತ ಅಮೆರಿಕವು ಭಾರತದ ವಿರುದ್ಧ ವಿಪರೀತ ತೆರಿಗೆ ಹಾಕಿಕೊಂಡಿದ್ದಾಗಲೇ ‘ಮದರ್ ಆಫ್ ಆಲ್ ಡೀಲ್’ ಎಂಬಂತೆ ದಶಕಗಳ ಕಾಲ ಚೌಕಾಶಿಯಲ್ಲಿದ್ದ ಮುಕ್ತ ವ್ಯಾಪಾರ ಒಪ್ಪಂದವನ್ನು ಭಾರತದೊಂದಿಗೆ ಸಾಕಾರಗೊಳಿಸಿಕೊಂಡ ಯೂರೋಪ್ ಒಕ್ಕೂಟ.
ಆರ್ಥಿಕತೆಯ ಚೌಕಟ್ಟನ್ನೂ ಮೀರಿ ಭಾರತದೊಂದಿಗೆ ರಕ್ಷಣಾ ಒಪ್ಪಂದ ಮಾಡಿಕೊಂಡು ಯುನೈಟೆಡ್ ಅರಬ್ ಎಮಿರೇಟ್ಸ್(ಯುಎಇ).
ಇವೆಲ್ಲ ನೋಡುತ್ತ, ತಾನೂ ಒತ್ತಡಕ್ಕೆ ಬಿದ್ದಂತಾಗಿ ಭಾರತದೊಂದಿಗೆ ಒಂದು ಹಂತದ ವ್ಯಾಪಾರ ಒಪ್ಪಂದ ಮಾಡಿಕೊಂಡು ತೆರಿಗೆಗಳನ್ನು ಇಳಿಸಿದ ಅಮೆರಿಕ.
ವ್ಯಾಪಾರ ಚೌಕಾಶಿ, ರಾಜತಾಂತ್ರಿಕತೆ, ಗಡಿಯಲ್ಲಿ ಚಕಮಕಿ ಇವೆಲ್ಲ ಇದ್ದಿರುವಂಥದ್ದೇ. ಆದರೆ ೨೦೨೫ರಲ್ಲಿ ನಾವು ಕಂಡಿರುವುದು ಹಾಗೂ ೨೦೨೬ರಲ್ಲಿ ಮುಂದುವರಿದಿರುವ ಜಾಗತಿಕ ವಿದ್ಯಮಾನಗಳು ಮಾರ್ಗಮಧ್ಯೆ ಸಿಗುತ್ತಿರುವ ಮಾಮೂಲಿನ ಅಡ್ಡಿಗಳಲ್ಲ. ಬದಲಿಗೆ ಇವು ಮಾರ್ಗವನ್ನೇ ಬದಲಿಸುವ, ವ್ಯವಸ್ಥೆಯೊಂದನ್ನು ಮರುರಚಿಸುತ್ತಿರುವ ವಿದ್ಯಮಾನಗಳು. ಅಂದರೆ, ಟ್ರಂಪ್ ಆಡಳಿತದ ಅನಂತರ ಈ ನೀತಿಗಳು ಬದಲಾಗುತ್ತವೆ ಎಂದಾಗಲಿ, ಇನ್ನಾವುದೋ ವಿದ್ಯಮಾನ ಬದಲಾದರೆ ಈಗಿನ ಆರ್ಥಿಕ ನೀತಿಗಳು ಬೇರೆ ಮಾರ್ಗ ಹಿಡಿಯುತ್ತವೆ ಎಂದುಕೊಳ್ಳುವುದಕ್ಕಾಗಲಿ ಅವಕಾಶವಿಲ್ಲ. ಅದೇಕೆ ಎಂದು ಅರ್ಥಮಾಡಿಕೊಳ್ಳಬೇಕಾದರೆ, ಅಂಕಿ-ಅಂಶಗಳಾಚೆಗೆ ಈಗ ನಡೆಯುತ್ತಿರುವ ಪರಿವರ್ತನೆ ಯಾವ ಮಟ್ಟದ್ದೆಂದು ಅರ್ಥಮಾಡಿಕೊಳ್ಳಬೇಕು. ಅದಕ್ಕೆ ಇತಿಹಾಸದ ನೆರವನ್ನೂ ಪಡೆಯಬೇಕಾಗುತ್ತದೆ.
ಭಾರತ ಎಂಬ ಚರಿತ್ರೆಯ ಪವರ್ ಹೌಸ್!
ಮೆಸಪೊಟೇಮಿಯಾ, ಸುಮೇರಿಯ, ಸಿಂಧು-ಸರಸ್ವತಿ ನಾಗರಿಕತೆ ಇವು ಸದ್ಯಕ್ಕೆ ಚರಿತ್ರೆಯಲ್ಲಿ ದೊಡ್ಡಮಟ್ಟದಲ್ಲಿ ದಾಖಲಾಗಿರುವ ಪ್ರಾಚೀನ ಸಭ್ಯತೆಗಳು. ಈ ಕಾಲದಲ್ಲಿ ವ್ಯಾಪಾರಿ ಶಕ್ತಿ ಎಂಬುದು ಮುಖ್ಯವಾಗಿ ಸಿಂಧು-ಸರಸ್ವತಿ ನಾಗರಿಕತೆಯೇ ಆಗಿತ್ತು ಎಂಬುದು ಈಗ ಹಲವು ಆಧಾರಗಳಿಂದ ದೃಢಗೊಂಡಿದೆ. ಭಾರತದ ನಾಗರಿಕತೆಯ ವ್ಯಾಪಾರಿ ಮುದ್ರೆಗಳು ಬೇರೆಡೆಗಳಲ್ಲಿ ಸಿಕ್ಕಿವೆ. ಬರವಣಿಗೆಯಲ್ಲಿ ಸಹ ಇತರರು ಮೆಲುಹ ಎಂದು ಗುರುತಿಸಿರುವುದು ಸಿಂಧು ನಾಗರಿಕತೆಗೆ ಸೇರಿದ ಜನರನ್ನೇ ಎಂದು ಇತಿಹಾಸಕಾರರ ಬಹುಮತದ ಅಭಿಪ್ರಾಯವಿದೆ. ಮಣಿ ಆಭರಣಗಳು, ದಂತ, ಬಳೆ ಇತ್ಯಾದಿಗಳನ್ನೆಲ್ಲ ದೊಡ್ಡಮಟ್ಟದಲ್ಲಿ ಮಾರುತ್ತಿದ್ದ ಭಾರತದ ನಾಗರಿಕತೆ, ಸಮುದ್ರಯಾನಕ್ಕೆ ಬೇಕಾದ ಅವತ್ತಿನ ಕಾಲದ ಹಾಯಿ ಹಡಗುಗಳನ್ನು ಚೆನ್ನಾಗಿ ಅಭಿವೃದ್ಧಿಪಡಿಸಿಕೊಂಡಿತ್ತು ಎಂಬುದು ತಿಳಿದುಬರುತ್ತದೆ.
ಮುಂದುವರಿದು ರೋಮನ್ನರ ಕಾಲಕ್ಕೆ ಬಂದಾಗ ಭಾರತದ ಹತ್ತಿ ಮತ್ತು ಮಸ್ಲಿನ್ ಬಟ್ಟೆಗಳಿಗೆಲ್ಲ ಯಾವ ಬಗೆಯ ಬೇಡಿಕೆ ಇತ್ತು ಎಂದರೆ, ಒಂದು ಹಂತದಲ್ಲಿ “ನಮ್ಮ ಬೆಳ್ಳಿ-ಬಂಗಾರಗಳನ್ನೆಲ್ಲ ಭಾರತವೇ ನುಂಗುತ್ತಿದೆ’’ ಎಂದು ಅಲ್ಲಿನ ಆಡಳಿತವು ಭಾರತಕ್ಕೆ ವ್ಯಾಪಾರ ನಿರ್ಬಂಧವನ್ನೇ ಹೇರಿತ್ತು. ಏಕೆಂದರೆ ಅವರು ಟಂಕಿಸುತ್ತಿದ್ದ ನಾಣ್ಯಗಳೆಲ್ಲ ಭಾರತದ ವಸ್ತುಗಳನ್ನು ಖರೀದಿಸುವುದಕ್ಕೆ ವ್ಯಯವಾಗುತ್ತಿದ್ದವು. ಈ ನಿರ್ಬಂಧದಿಂದ ಆಗುವ ನಷ್ಟ ತುಂಬಿಸಿಕೊಳ್ಳುವುದಕ್ಕೆ ಭಾರತವು ಆಗ್ನೇಯ ಏಷ್ಯದತ್ತ ತಿರುಗಿತು. ಕೇವಲ ವ್ಯಾಪಾರವಷ್ಟೇ ಅಲ್ಲಿಗೆ ಹೋಗಲಿಲ್ಲ, ಸಂಸ್ಕೃತಿಯೂ ಹರಡಿತು. ಹಿಂದು-ಬೌದ್ಧ ಸಂಸ್ಕೃತಿಗಳೇ ಆ ನೆಲಗಳನ್ನು ಬಹುಕಾಲದವರೆಗೆ ಪೊರೆದವು.
ಮುಂದೊಮ್ಮೆ ಅಲ್ಲಿನ ಶ್ರೀವಿಜಯ ಸಾಮ್ರಾಜ್ಯವು ಸೂಕ್ಷ್ಮ ಸಾಗರ ಸಂಧಿಗಳನ್ನು ತನ್ನ ಹಿಡಿತದಲ್ಲಿರಿಸಿಕೊಂಡು ಅಲ್ಲಿಂದ ಹೋಗಬೇಕಾದ ಹಡಗುಗಳಿಗೆಲ್ಲ ತೀವ್ರ ಸುಂಕ ಹಾಕತೊಡಗಿತು. ಈ ವ್ಯಾಪಾರ ಬಿಕ್ಕಟ್ಟನ್ನು ಪರಿಹರಿಸಿಕೊಳ್ಳುವುದಕ್ಕೆ ಚೋಳರ ಮಿಲಿಟರಿ ಬಲ ನೀರಿಗಿಳಿಯಿತು. ಆಗಿನ ಕಾಲದ ವ್ಯಾಪಾರಿ ಒಕ್ಕೂಟಗಳು ಅತಿ ಶ್ರೀಮಂತ ಹಾಗೂ ದೊಡ್ಡಮಟ್ಟದ ತೆರಿಗೆದಾರರಾಗಿದ್ದರು. ಅಲ್ಲದೆ, ವ್ಯಾಪಾರಿ ಮಾರ್ಗಗಳ ರಕ್ಷಣೆಗೆಂದು ಅವರು ತಮ್ಮದೇ ಖಾಸಗಿ ಸೇನೆಯಂತಹ ವ್ಯವಸ್ಥೆಯೊಂದನ್ನು ಸಹ ಹೊಂದಿದ್ದರು. ಬಹುಶಃ ಈ ನೌಕಾಬಲವನ್ನು ಉಪಯೋಗಿಸಿಕೊಂಡೇ ಆಗ್ನೇಯ ಏಷ್ಯದ ಶ್ರೀವಿಜಯ ಸಾಮ್ರಾಜ್ಯವನ್ನು ಮಣಿಸಿದ ಚೋಳರು, ಅಲ್ಲಿ ಭಾರತದ ವಹಿವಾಟು ಜಾಲದ ಪಾರಮ್ಯವನ್ನು ಮರುಸ್ಥಾಪಿಸಿಕೊಟ್ಟರು.
ಜಾಗತಿಕ ವ್ಯಾಪಾರ ವಹಿವಾಟುಗಳಿಂದ ಭಾರತವು ಸಾಧಿಸಿದ್ದ ಈ ಸಮೃದ್ಧಿಯೇ ಇಸ್ಲಾಮಿ ಪಡೆಯನ್ನು, ಯೂರೋಪಿಯನ್ ಶಕ್ತಿಗಳನ್ನು ಆಕರ್ಷಿಸುವುದಕ್ಕೆ ಕಾರಣವಾಗಿದ್ದದ್ದು ಹಾಗೂ ಭಾರತವು ಪ್ರಾರಂಭದಲ್ಲಿ ಇಸ್ಲಾಂ ಆಕ್ರಮಣ ಹಾಗೂ ಅನಂತರದ ಯೂರೋಪಿಯನ್ ಆಕ್ರಮಣಗಳಲ್ಲಿ ಸರಿಸುಮಾರು ಸಾವಿರ ವರ್ಷಗಳ ಕಾಲ ವಸಾಹತು ಆಗಬೇಕಾಗಿ ಬಂದಿದ್ದು ಇಲ್ಲಿನ ದುರಂತ. ಅದಾಗಿ ಸ್ವಾತಂತ್ರ್ಯದ ಹಲವು ದಶಕಗಳವರೆಗೆ ಆಹಾರ ಹಾಗೂ ಪ್ರಾಥಮಿಕ ಆವಶ್ಯಕತೆಗಳನ್ನು ಪೂರೈಸಿಕೊಳ್ಳುವುದರಲ್ಲೇ ಭಾರತ ಹೆಣಗಾಡಿತು. ವಸಾಹತು ಮನಃಸ್ಥಿತಿಯನ್ನೇ ತಮ್ಮದಾಗಿಸಿಕೊಂಡಿದ್ದ ವಿಶ್ಲೇಷಕರೆಲ್ಲ ಇದನ್ನು “ಹಿಂದು ರೇಟ್ ಆಫ್ ಗ್ರೋತ್’’ ಎಂದು ಗೇಲಿ ಮಾಡಿದ್ದೂ ಆಯಿತು.
ಆದರೆ… ಈಗ, ಹಲವು ಶತಮಾನಗಳ ಗುಲಾಮಿತನದ ಗಾಯಗಳನ್ನೆಲ್ಲ ಮಾಗಿಸಿಕೊಂಡು ಭಾರತವು ಆತ್ಮವಿಶ್ವಾಸದ ಪಥದಲ್ಲಿ ನಿಂತಿದೆ. ಜಾಗತಿಕ ಆರ್ಥಿಕತೆಗಳೆಲ್ಲದರ ಪೈಕಿ ಅತಿಹೆಚ್ಚಿನ ಬೆಳವಣಿಗೆ ದರವನ್ನು ತೋರಿಸುತ್ತಿರುವ ದೇಶ ಭಾರತ. ಯಾವ ಜನಸಂಖ್ಯೆಯನ್ನು ಗೇಲಿಯ, ತಾತ್ಸಾರದ ಸಂಗತಿಯನ್ನಾಗಿ ನೋಡಲಾಗಿತ್ತೋ ಅದೇ ಈಗ ಶಕ್ತಿಯಾಗಿ ತೋರುತ್ತಿದೆ. ಭಾರತದ ಮಾರುಕಟ್ಟೆಯನ್ನು ನಾವು ಮಿಸ್ ಮಾಡಿಕೊಳ್ಳಲಾಗುವುದಿಲ್ಲ ಎಂದು ಜಗತ್ತಿನ ಎಲ್ಲ ದೇಶಗಳೂ ಹೇಳುತ್ತಿವೆ. ಭಾರತದ ಅಭ್ಯುದಯ ಸಹಿಸದೆ ಇರುವವರೂ ಸಹ ಈ ಮಾತನ್ನು ಒಪ್ಪಿಕೊಳ್ಳುತ್ತಿದ್ದಾರೆ. ಅಮೆರಿಕವು ಭಾರತದ ಜೊತೆ ಬಿರುಮಾತುಗಳನ್ನಾಡುತ್ತ ಇದ್ದ ಸಂದರ್ಭದಲ್ಲೇ ಅದರ ಮಿತ್ರ ದೇಶಗಳೇ ಆಗಿರುವ ಯುಕೆ, ಆಸ್ಟ್ರೇಲಿಯಗಳು ಭಾರತದೊಂದಿಗೆ ಮುಕ್ತ ವ್ಯಾಪಾರ ಒಪ್ಪಂದ ಮಾಡಿಕೊಂಡೇಬಿಟ್ಟವು. ತೀರಾ ಇತ್ತೀಚೆಗೆ, ಯೂರೋಪ್ ಒಕ್ಕೂಟವು ಇಂಥದೊಂದು ಒಪ್ಪಂದ ಮಾಡಿಕೊಂಡಾಗ, “ರಷ್ಯದ ತೈಲ ತರಿಸಿಕೊಳ್ಳುತ್ತಿರುವ ಭಾರತದೊಂದಿಗೆ ಒಪ್ಪಂದ ಮಾಡಿಕೊಳ್ಳುವ ಮೂಲಕ ಯೂರೋಪ್ ತನ್ನ ಮೇಲಿನ ಯುದ್ಧವನ್ನು ತಾನೇ ಆಹ್ವಾನಿಸಿಕೊಳ್ಳುತ್ತಿದೆ’’ ಎಂದು ಕಟಕಿಯಾಡಿದ್ದ ಅಮೆರಿಕವು ಕೊನೆಗೆ ತಾನೂ ಭಾರತದೊಂದಿಗೆ ಒಂದುಮಟ್ಟದ ಒಪ್ಪಂದ ಮಾಡಿಕೊಂಡಿತು.
ಹೀಗೆ ಇತಿಹಾಸ ಚಕ್ರದ ತಿರುಗುವಿಕೆಯ ಮುಖ್ಯಾಂಶಗಳನ್ನು ಗಮನಿಸಿದಾಗ ನಮಗೆ ಎದುರಾಗುವ ಬೆರಗಿನ ಪ್ರಶ್ನೆ ಏನೆಂದರೆ – ಮುಂದಿನ ಸಾವಿರ ವರ್ಷಗಳನ್ನು ಮುನ್ನಡೆಸಲಿರುವ ನಿಜವಾದ “ಹಿಂದು ರೇಟ್ ಆಫ್ ಗ್ರೋತ್’’ ಈಗಷ್ಟೇ ಶುರುವಾಗಿದೆಯೇ?
ಇಷ್ಟಕ್ಕೂ ಅಮೆರಿಕ-ಪ್ರಣೀತ ಅರ್ಥವ್ಯವಸ್ಥೆಗೆ ಬಲ ಬಂದಿದ್ದಾರೂ ಹೇಗೆ?
ಟ್ರಂಪ್ ನೀತಿಗಳಿಂದ ಹೀಗಾಗುತ್ತಿದೆ, ಅಮೆರಿಕದಲ್ಲಿ ಅಧಿಕಾರ ಬದಲಾವಣೆ ಆದಾಗ ಮತ್ತೆ ಹಳೆಯ ಆರ್ಥಿಕ ವ್ಯವಸ್ಥೆ ಮರಳಬಹುದು ಎಂದೆಲ್ಲ ಮೇಲ್ನೋಟಕ್ಕೆ ಅನ್ನಿಸಬಹುದು. ಆದರೆ, ಇದು ಹಿಂದಕ್ಕೆ ಹೋಗಲಾಗದಂತಹ ಜಾಗತಿಕ ಆರ್ಥಿಕ ಬದಲಾವಣೆ ಎನ್ನುವುದಕ್ಕೆ ಕೆಲವು ಸ್ಪಷ್ಟ ಸೂಚನೆಗಳಿವೆ. ಆ ಎಲ್ಲ ಸೂಚನೆಗಳು ಒಂದು ವಿದ್ಯಮಾನದಲ್ಲಿ ಏಕೀಕೃತಗೊಂಡಿವೆ. ಅದೆಂದರೆ ಡಾಲರನ್ನು ಮುದ್ರಿಸುವ ಹಕ್ಕು ಇರುವ ಏಕೈಕ ಕಾರಣಕ್ಕೆ ಅಮೆರಿಕವು ಯಾವತ್ತೂ ತೀರಿಸಲಾಗದ ಮಟ್ಟದ ೩೪ ಟ್ರಿಲಿಯನ್ ಡಾಲರುಗಳ ಸಾಲವನ್ನು ಹೊತ್ತಿರುವುದು.
ಎಲ್ಲ ದೇಶಗಳೂ ಅವರವರ ನೋಟು ಮುದ್ರಿಸುತ್ತವೆ. ಆದರೆ ಡಾಲರ್ ನೋಟಿಗೆ ಮಾತ್ರವೇ ಇಷ್ಟು ಬಲ ಬಂದಿದ್ದೇಕೆಂದರೆ ಅದು ಜಗತ್ತಿನ ರಿಸರ್ವ್ ಕರೆನ್ಸಿ ಆಗಿರುವುದರಿಂದ. ಡಾಲರ್ ಪ್ರವರ್ಧಮಾನಕ್ಕೆ ಬಂದಿದ್ದು ಎರಡನೇ ವಿಶ್ವಯುದ್ಧದ ಅನಂತರ. ಅವತ್ತಿನ ಪ್ರಬಲ ಜಾಗತಿಕ ಶಕ್ತಿ ಯುನೈಟೆಡ್ ಕಿಂಗ್ಡಮ್ ಯುದ್ಧದಲ್ಲಿ ಬಸವಳಿದಿತ್ತು. ಮತ್ತೊಂದು ಜಾಗತಿಕ ಶಕ್ತಿಯಾಗಿ ಹೊರಹೊಮ್ಮುತ್ತಿದ್ದ ಜಪಾನ್ ಶರಣಾಗತಿಯ ಷರತ್ತುಗಳಿಂದಾಗಿ ಸಂಪೂರ್ಣ ಬಲ ಕುಗ್ಗಿಸಿಕೊಂಡಿತ್ತು. ಯುದ್ಧದಲ್ಲಿ ಪಾಲ್ಗೊಂಡಿದ್ದ ಪ್ರಮುಖ ದೇಶಗಳೆಲ್ಲ ಆರ್ಥಿಕವಾಗಿ ಜರ್ಜರಿತವಾಗಿದ್ದವು. ವಾಸ್ತವದಲ್ಲಿ ಅಮೆರಿಕವು ಯುದ್ಧಕ್ಕೆ ಪ್ರವೇಶ ಮಾಡಿದ್ದು ತುಂಬ ಅನಂತರದ ಅವಧಿಯಲ್ಲಿ. ಆವರೆಗೆ ಶಸ್ತ್ರಾಸ್ತ್ರ, ಆಹಾರ ಇತ್ಯಾದಿಗಳನ್ನೆಲ್ಲ ಖರೀದಿಸುವುದಕ್ಕೆ ಬ್ರಿಟನ್, ಫ್ರಾನ್ಸ್ ಇತ್ಯಾದಿ ದೇಶಗಳೆಲ್ಲ ಚಿನ್ನವನ್ನೇ ಅಮೆರಿಕಕ್ಕೆ ಕೊಟ್ಟವು. ಪರಿಣಾಮವಾಗಿ, ವಿಶ್ವಯುದ್ಧ ಮುಗಿದಾಗ ಅವತ್ತಿನ ಜಾಗತಿಕ ಚಿನ್ನ ಸಂಗ್ರಹದ ಶೇ. ೬೦ರಷ್ಟು ಭಾಗ ಅಮೆರಿಕದ ಹತ್ತಿರವಿತ್ತು. ವಿಶ್ವ ಆರ್ಥಿಕತೆಯನ್ನು ಮರುರೂಪಿಸುವ ಹಂತದಲ್ಲಿ ಈ ಚಿನ್ನದ ಬಲವನ್ನು ಬಳಸಿಕೊಂಡ ಅಮೆರಿಕವು, ೧೯೪೪ರ ಬ್ರೆಟನ್ವುಡ್ ಕಾನ್ಫರೆನ್ಸ್ನಲ್ಲಿ (Bretton Woods Conference) ಒಂದು ಪ್ರಸ್ತಾವ ಮಾಡಿತು. ಅದೆಂದರೆ, ಅಮೆರಿಕವು ಛಾಪಿಸುವ ಎಲ್ಲ ಡಾಲರ್ ನೋಟುಗಳು ಚಿನ್ನದ ಆಧಾರ ಹೊಂದಿರುತ್ತವೆ ಅಂತ. ಒಂದು ಔನ್ಸ್ ಬಂಗಾರಕ್ಕೆ ೩೫ ಡಾಲರುಗಳ ಬೆಲೆ ನಿರ್ದಿಷ್ಟಗೊಳಿಸಲಾಯಿತು. ಇದರ ಅರ್ಥ ಏನೆಂದರೆ, ನೀವು ಯಾವುದೇ ದೇಶದವರಾಗಿದ್ದರೂ ನಿಮ್ಮಲ್ಲಿ ಅಮೆರಿಕದ ಡಾಲರ್ ಇದೆ ಎಂದಾದರೆ, ಅದನ್ನು ಯಾವತ್ತಾದರೂ ಅಮೆರಿಕದ ಕೇಂದ್ರ ಬ್ಯಾಂಕಿಗೆ ನೀಡಿ ಅದಕ್ಕೆ ತತ್ಸಮಾನ ಚಿನ್ನ ಪಡೆಯಬಹುದು ಅನ್ನೋದು. ಇದು ಎಲ್ಲರಿಗೂ ಡಾಲರ್ ಅನ್ನು ಆಕರ್ಷಕವಾಗಿಸಿತು. ಆದರೆ, ಡಾಲರ್ ಬೇಡಿಕೆಗೆ ತಕ್ಕಂತೆ ಚಿನ್ನವನ್ನು ಯಾವತ್ತೂ ಇಟ್ಟುಕೊಂಡಿರುವುದು ಸಾಧ್ಯವಾಗದೆಂದು ಅರಿವಾದಾಗ, ೧೯೭೧ರಲ್ಲಿ ಅಮೆರಿಕವು ತನ್ನ ಕರೆನ್ಸಿಗೂ ಚಿನ್ನಕ್ಕೂ ಸಂಬಂಧವಿಲ್ಲ ಎಂದು ಘೋಷಿಸಿತು. ಅದನ್ನು ನಿಕ್ಸನ್ ಶಾಕ್ ಎಂದೇ ಕರೆಯಲಾಗಿದೆ. ಆದರೆ, ಅದಾಗಲೇ ಡಾಲರ್ ಅನ್ನು ತಮ್ಮ ರಿಸರ್ವ್ ಕರೆನ್ಸಿ ಆಗಿಸಿಕೊಂಡಿದ್ದ, ವಿನಿಮಯದ ಮಾಧ್ಯಮವಾಗಿಸಿಕೊಂಡಿದ್ದ ಎಲ್ಲ ದೇಶಗಳು ರಾತ್ರೋರಾತ್ರಿ ಅದರಿಂದ ಹಿಂದೆ ಸರಿಯುವುದಕ್ಕೆ ಆಗುತ್ತಿರಲಿಲ್ಲ.
ಮುಂದೆ ೧೯೭೪ರ ವೇಳೆಗೆ ಡಾಲರ್ ಸ್ಥಾನವನ್ನು ಗಟ್ಟಿಗೊಳಿಸಿಕೊಳ್ಳುವ ಇನ್ನೊಂದು ಹೆಜ್ಜೆಯನ್ನು ಅಮೆರಿಕ ಇಟ್ಟಿತು. ಅದೆಂದರೆ, ಗಲ್ಫ್ ತೈಲ ಸಂಪನ್ನ ದೇಶಗಳೊಂದಿಗೆ ಮಾಡಿಕೊಂಡ ಒಪ್ಪಂದದ ಪ್ರಕಾರ ಅವರೆಲ್ಲ ತೈಲವನ್ನು ಡಾಲರ್ ಕರೆನ್ಸಿಯಲ್ಲಿ ಮಾರುವುದಕ್ಕೆ ಒಪ್ಪಿಕೊಂಡರು. ಇದಕ್ಕೆ ಪ್ರತಿಯಾಗಿ ಆ ದೇಶಗಳಿಗೆ ಮಿಲಿಟರಿ ಸುರಕ್ಷತೆಯ ಹೊಣೆಯನ್ನು ಅಮೆರಿಕ ಹೊತ್ತುಕೊಂಡಿತು. ನ್ಯಾಟೊ ಮೂಲಕ ಯೂರೋಪಿನ ಮೇಲೆ ಅಮೆರಿಕವು ಸಾಧಿಸಿದ್ದೂ ಈ ಸುರಕ್ಷತಾ ವ್ಯವಸ್ಥೆಯನ್ನೇ.
ಈಗಿನ ಬದಲಾವಣೆಯನ್ನು ತಡೆಯುವುದಕ್ಕೆ ಅಮೆರಿಕಕ್ಕೆ ಆಗದೆ?
ಮೊದಲನೆಯದಾಗಿ, ಭಾರತ, ಚೀನಾ, ರಷ್ಯ ಸೇರಿದಂತೆ ಜಗತ್ತಿನ ಎಲ್ಲ ದೇಶಗಳೂ ಕಳೆದೆರಡು ವರ್ಷಗಳಿಂದ ತಮ್ಮ ಚಿನ್ನದ ಸಂಗ್ರಹವನ್ನು ದೊಡ್ಡಮಟ್ಟದಲ್ಲಿ ಏರಿಸಿಕೊಂಡಿವೆ. ಡಾಲರ್ ಎಂಬುದನ್ನು ಇನ್ನೂ ಒಪ್ಪಿಕೊಳ್ಳುತ್ತ ಹೋದರೆ, ಅದು ಕೊನೆಗೆ ತಮ್ಮ ದೇಶದಲ್ಲೇ ಹಣದುಬ್ಬರ ಸೃಷ್ಟಿಸುತ್ತದೆ ಎಂಬ ವಾಸ್ತವ ಕಾಡಿರುವುದು ಒಂದೆಡೆಯಾದರೆ, ರಷ್ಯದ ವಿಷಯದಲ್ಲಿ ಮಾಡಿದಂತೆ ತಮ್ಮ ಡಾಲರ್ ಸಂಗ್ರಹವನ್ನೇ ಅಮಾನ್ಯವಾಗಿಸುವ ಶಕ್ತಿ ಅಮೆರಿಕಕ್ಕೆ ಇರುವುದು ಅತ್ಯಂತ ಅಪಾಯಕಾರಿ ಎಂಬುದನ್ನು ಖುದ್ದು ಅದರ ಮಿತ್ರ ರಾಷ್ಟ್ರಗಳೂ ಮನಗಂಡಿವೆ. ಖುದ್ದು ಅಮೆರಿಕದ ನೆಲದಲ್ಲಿ ಡಾಲರ್ ಹಣದುಬ್ಬರವನ್ನು ಸೃಷ್ಟಿಸಿದೆ.
ಎರಡನೆಯದಾಗಿ, ಡಾಲರ್ ಒಪ್ಪಿಕೊಂಡಿದ್ದಕ್ಕೆ ಪ್ರತಿಯಾಗಿ ಅಮೆರಿಕದಿಂದ ರಕ್ಷಣೆ ಸಿಗುತ್ತದೆ ಹಾಗೂ ಅಮೆರಿಕವನ್ನು ಬೆನ್ನಿಗಿಟ್ಟುಕೊಂಡರೆ ಯುದ್ಧ ಗೆಲ್ಲಬಹುದು ಎಂಬ ವಿಶ್ವಾಸಗಳು ಅಲ್ಲಾಡಿಹೋಗಿವೆ. ಇದರರ್ಥ ಅಮೆರಿಕದ ಮಿಲಿಟರಿ ಬಲ ಕುಸಿದಿದೆ ಎಂದಲ್ಲ. ಆದರೆ ಇರಾಕ್, ಆಫಘಾನಿಸ್ತಾನ ಹೀಗೆ ಅಮೆರಿಕವು ಎಲ್ಲೇ ಮಿಲಿಟರಿ ನುಗ್ಗಿಸಿದ್ದರೂ ನಿರ್ಣಾಯಕ ಜಯ ಎನ್ನುವಂಥದ್ದು ಅದಕ್ಕೆ ಎಲ್ಲೂ ಸಾಧ್ಯವಾಗಿಲ್ಲ. ಅಲ್ಲದೆ, ಸಂಪನ್ಮೂಲಗಳ ಸಂಗ್ರಹಕ್ಕಾಗಿ ಅಮೆರಿಕವು ಈಗ ಮಿತ್ರಕೂಟದಲ್ಲಿರುವ ಗ್ರೀನ್ಲ್ಯಾಂಡ್, ಕೆನಡಾಗಳಿಗೇ ಬ್ಲ್ಯಾಕ್ ಮೇಲ್ ಮಾಡುತ್ತಿರುವಾಗ, ನ್ಯಾಟೋ ಪಡೆಗಳೇ ಅಮೆರಿಕಕ್ಕೆ ಹಣ ನೀಡಬೇಕು ಎನ್ನುತ್ತಿರುವಾಗ ಈ ಭದ್ರತಾ ಛತ್ರದ ವಿಶ್ವಾಸವೂ ಕಮರಿಹೋಗಿದೆ.
ಮೂರನೆಯದಾಗಿ, ಎಲ್ಲ ದೇಶಗಳೂ ಸಾಧ್ಯವಾದಲ್ಲೆಲ್ಲ ಸ್ಥಳೀಯ ಕರೆನ್ಸಿಯಲ್ಲಿ ಜಾಗತಿಕ ವ್ಯವಹಾರ ಮಾಡುತ್ತಿವೆ. ವಿಶ್ವಸಂಸ್ಥೆ, ವಿಶ್ವ ವ್ಯಾಪಾರ ಒಕ್ಕೂಟಗಳಿಗೆ ಒಳಪಟ್ಟಿದ್ದ ಒಪ್ಪಂದದ ಚೌಕಟ್ಟುಗಳಿಂದ ಹೊರಬಂದು ದ್ವಿಪಕ್ಷೀಯ ನೆಲೆಯಲ್ಲಿ ಒಪ್ಪಂದ ಮಾಡಿಕೊಳ್ಳುತ್ತಿವೆ. ಭಾರತದ ಜೊತೆಗೆ ಸಾಕಾರವಾಗುತ್ತಿರುವ ಮುಕ್ತ ವ್ಯಾಪಾರ ಒಪ್ಪಂದ (ಎಫ್.ಟಿ.ಎ.)ಗಳೆಲ್ಲ ಇದೇ ಜಾಯಮಾನದವು. ಅಮೆರಿಕದ ಮಧ್ಯಸ್ಥಿಕೆ ಇಲ್ಲದೆ ನಾವೆಲ್ಲ ಪರಸ್ಪರ ವ್ಯವಹಾರ ಮಾಡಿಕೊಳ್ಳುತ್ತೇವೆ ಎಂಬುದೇ ಇಲ್ಲಿನ ಸಂದೇಶ.
ಇವುಗಳೇನೇ ಇದ್ದರೂ ಕಾಮನ್ ಕರೆನ್ಸಿ ಒಂದಿರದಿದ್ದರೆ ಎಲ್ಲರೂ ಅವರವರ ಲೋಕಲ್ ಕರೆನ್ಸಿಯಲ್ಲಿ ವ್ಯವಹರಿಸುವುದು ಪ್ರಾಯೋಗಿಕವಾಗಿ ಹೇಗೆ ಸಾಧ್ಯ ಎಂಬ ಪ್ರಶ್ನೆ ಒಂದಿದೆ. ಭಾರತದ ರೂಪಾಯಿಯನ್ನೆಲ್ಲ ಗುಡ್ಡೆ ಹಾಕಿಕೊಂಡ ರಷ್ಯಕ್ಕೆ ಒಂದು ಹಂತದಲ್ಲಿ ಅದನ್ನು ಏನು ಮಾಡುವುದೆಂದು ತಿಳಿಯದಾಯಿತು ಎಂಬ ಉದಾಹರಣೆಯನ್ನೂ ಈ ನಿಟ್ಟಿನಲ್ಲಿ ಕೆಲವರು ಕೊಡಬಹುದಾಗಿದೆ. ಹಾಗಾದರೆ ಡಾಲರಿಗೆ ಪರ್ಯಾಯವಾಗಿ ಬ್ರಿಕ್ಸ್ ಕರೆನ್ಸಿ ಬರುತ್ತಾ? ಚೀನಾ-ಭಾರತಗಳು ಹೇಗೆ ಒಂದು ಕರೆನ್ಸಿ ಒಪ್ಪಿಯಾವು ಎಂಬೆಲ್ಲ ಪ್ರಶ್ನೆಗಳಿವೆ. ಆದರೆ ಈಗ ವ್ಯಾಪಿಸುತ್ತಿರುವ ತಂತ್ರಜ್ಞಾನದಲ್ಲಿ ಇದಕ್ಕೆಲ್ಲ ಉತ್ತರವಿದೆ. ಅದುವೇ ಈ ಮೇಲಿನ ಮೂರೂ ಅಂಶಗಳನ್ನು ಪೋಣಿಸಬಲ್ಲ ಬ್ಲಾಕ್ಚೈನ್ ತಂತ್ರಜ್ಞಾನ. ಬಿಟ್ ಕಾಯಿನ್, ಕ್ರಿಪ್ಟೋ ಇತ್ಯಾದಿ ಪದಪುಂಜಗಳೆಲ್ಲ ಕೇಳಿಬರುವಾಗ ಅದರ ಹಿಂದಿರುವ ಒಟ್ಟಾರೆ ತಂತ್ರಜ್ಞಾನ ಅದೇ ಆಗಿದೆ. ಸರಳವಾಗಿ ಹೇಳಬೇಕೆಂದರೆ ನಾವಿಲ್ಲಿ ರೂಪಾಯಿಯಲ್ಲಿ ಮಾಡಿದ ಪೇಮೆಂಟ್ ಚೀನಾಕ್ಕೆ ಯುವಾನಿನಲ್ಲೇ ಹೋಗಿ ತಲಪುತ್ತದೆ. ಎಲ್ಲವೂ ಡಿಜಿಟಲ್. ಮಧ್ಯದಲ್ಲಿ ಡಾಲರ್ ಬೇಕಾಗಿಯೇ ಇಲ್ಲ. ಹಾಗಾದರೆ ಯಾವ ಕರೆನ್ಸಿ ಬಲ ಏನು ಎಂದು ಹೇಗೆ ನಿರ್ಧಾರವಾಗುತ್ತದೆ? ಸಾರ್ವತ್ರಿಕವಾಗಿ ಒಂದು ರೂಪಾಯಿಯೇ ಒಂದು ಯುವಾನಿಗೆ, ಒಂದು ಧಿರಮ್, ಒಂದು ರುಬೆಲ್ ಇವಕ್ಕೆಲ್ಲ ಸಮ ಎಂದೇನೂ ಆಗುವುದಿಲ್ಲವಲ್ಲ? ನಿಜ. ಈ ನಿಟ್ಟಿನಲ್ಲಿ ಒಂದು ಚೌಕಟ್ಟು ಸಹಜವಾಗಿಯೇ ಸಿದ್ಧವಾಗುತ್ತದೆ. ಬಹುಶಃ ಬ್ರಿಕ್ಸ್ ದೇಶಗಳೇ ಮುಂಚೂಣಿಯಲ್ಲಿ ನಿಂತು ಇದನ್ನು ಮಾಡಿಯಾವು. ಆಯಾ ದೇಶದ ಬಳಿ ಇರುವ ಚಿನ್ನ, ವಿರಳ ಲೋಹಗಳು, ಆಹಾರ ಉತ್ಪಾದನೆ ಸಾಮರ್ಥ್ಯ, ವಸ್ತು ಉತ್ಪಾದನೆ ಸಾಮರ್ಥ್ಯ ಇವನ್ನೆಲ್ಲ ಆಧರಿಸಿ ಒಂದು ಎಕ್ಸ್ಚೇಂಜ್ ರೇಟ್ ತರಹದ್ದು ರೂಪಗೊಳ್ಳಬಹುದಾಗಿದೆ. ಒಟ್ಟಿನಲ್ಲಿ ಡಾಲರಿಗೆ ಪರ್ಯಾಯವಾಗಿ ಯಾವುದೇ ಒಂದು ಕರೆನ್ಸಿ ಇರದೆ ಎಲ್ಲ ಕರೆನ್ಸಿಗಳೂ ಒಂದು ಡಿಜಿಟಲ್ ವ್ಯವಸ್ಥೆಗೆ ಒಳಪಟ್ಟು ವ್ಯವಹರಿಸುವ ವ್ಯವಸ್ಥೆಯೊಂದು ಬರಬಲ್ಲುದು ಎಂಬುದಕ್ಕೆ ಇತ್ತೀಚೆಗೆ ಎಲ್ಲ ದೇಶಗಳ ಚಿನ್ನ-ಬೆಳ್ಳಿ ಹಾಗೂ ವಿರಳ ಲೋಹಗಳ ಸಂಗ್ರಹಣೆ, ಪೂರೈಕೆ ಜಾಲಗಳ ಮೇಲಿನ ಹಿಡಿತಕ್ಕೆ ಪೈಪೋಟಿ, ಪರಸ್ಪರರ ಉತ್ಪಾದನೆ ಆಧಾರದ ಮೇಲೆ ಮಾಡಿಕೊಳ್ಳುತ್ತಿರುವ ದ್ವಿಪಕ್ಷೀಯ ಒಪ್ಪಂದಗಳು ಇವೇ ಸೂಚನೆ ನೀಡುತ್ತಿವೆ.
ಕ್ಷಾತ್ರ – ಇದುವೇ ಭಾರತದ ನಿಜ ಪತಾಕೆ
ಭಾರತವು ಅತಿದೊಡ್ಡ ಮಾರುಕಟ್ಟೆ, ಜಗತ್ತಿಗೆ ಆಹಾರ ಬೆಳೆದುಕೊಡಬಲ್ಲದು, ಪ್ರತಿಭೆಗಳನ್ನು ಒದಗಿಸಿಕೊಡಬಲ್ಲದು. ಈ ಎಲ್ಲ ಕಾರಣಗಳಿಂದ ಎಲ್ಲ ದೇಶಗಳೂ ಭಾರತದೊಂದಿಗೆ ಒಪ್ಪಂದಗಳನ್ನು ಹೊಂದುವುದಕ್ಕೆ ಮುಂದಾಗಿವೆ ಎಂಬುದು ಮೇಲ್ನೋಟದ ವಿಶ್ಲೇಷಣೆ ಆಗುತ್ತದೆ. ಭಾರತವು ಇವೆಲ್ಲವನ್ನು ಹೊಂದಿಯೂ ಒಂದು ಏಕೀಕೃತವಾದ, ಬಲಶಾಲಿ ಸೇನಾಪಡೆ ಇಲ್ಲದಿದ್ದರೆ ಈ ಮನ್ನಣೆ ಸಿಗುತ್ತಲೇ ಇರಲಿಲ್ಲ. ಭಾರತದಿಂದ ಬೇಕಾದುದನ್ನು ಈ ಹಿಂದಿನ ದಾಳಿಕೋರರು ಮಾಡಿದಂತೆಯೇ ಎಲ್ಲರೂ ಕಿತ್ತು ತಿನ್ನುತ್ತಿದ್ದರಷ್ಟೆ.
ಭಾರತ ಒಂದು ಅಣ್ವಸ್ತ್ರಶಕ್ತಿ. ಇದರದ್ದು ವೃತ್ತಿನಿರತ ಹಾಗೂ ಸಮರಸನ್ನದ್ಧ ಪಡೆ. ಕಳೆದ ಒಂದು ದಶಕದಲ್ಲಿ ಇದು ಶಸ್ತಾçಸ್ತçಗಳನ್ನು ರಫ್ತು ಮಾಡುವ ಮಟ್ಟಕ್ಕೆ ಬೆಳೆದುನಿಂತಿದೆ. ಭಾರತೀಯ ಸೇನೆಗೆ ಶೌರ್ಯ ಯಾವತ್ತೂ ಇತ್ತು. ಅದಕ್ಕೀಗ ಆಧುನಿಕ ರಕ್ಷಣಾ ಪರಿಕರಗಳ ಬಲವೂ ಸೇರಿಕೊಂಡಿದೆ. ಸರ್ಜಿಕಲ್ ಸ್ಟ್ರೈಕ್, ಬಾಲಾಕೋಟ್, ಆಪರೇಷನ್ ಸಿಂದೂರ್ ಇವೆಲ್ಲ ಭಾರತದ ಸಾಮರ್ಥ್ಯವನ್ನು ಜಗತ್ತಿಗೆ ಸಾರಿ ಸಾರಿ ಹೇಳಿಬಿಟ್ಟಿವೆ.
ಇದಕ್ಕೆ ಪ್ರತಿಯಾಗಿ, ಯಾವ ಶಕ್ತಿಗಳು ನಮ್ಮನ್ನು ಗುಲಾಮಿತನಕ್ಕೆ ತಂದಿದ್ದವೋ ಅಲ್ಲಿನ ರಕ್ಷಣಾ ಸ್ಥಿತಿ ಹೇಗಿದೆ. ಅರಬ್, ಟರ್ಕಿ, ಮಂಗೋಲ್ ಮೂಲದಿಂದ ಇಸ್ಲಾಂ ಸೇನಾದಾಳಿಗಳಾಗಿ ಭಾರತವು ಮೊಘಲರ ಆಡಳಿತವನ್ನು ಕಾಣಬೇಕಾಯಿತಷ್ಟೆ. ಅಂತಹ ಇಸ್ಲಾಂ ನೆಲದಲ್ಲಿ ಇವತ್ತಿಗೆ ಬಹುದೊಡ್ಡ ಸೇನಾಪಡೆಗಳು ಇರುವುದು ಇರಾನ್ ಮತ್ತು ಟರ್ಕಿಗಳಲ್ಲಿ ಮಾತ್ರ. ಉಳಿದಂತೆ, ಪಾಕಿಸ್ತಾನ ಹಾಗೂ ಇತರ ದೇಶಗಳಲ್ಲಿ ಹಲವು ಬಗೆಯ ಉಗ್ರ ಪಡೆಗಳಿವೆ. ಈ ಪೈಕಿ ಇರಾನ್ ಹಾಗೂ ಹಮಾಸ್ ಬಲವನ್ನು ಕಳೆದೆರಡು ವರ್ಷಗಳಿಂದ ಇಸ್ರೇಲ್ ನುಜ್ಜುಗುಜ್ಜಾಗಿಸಿಬಿಟ್ಟಿದೆ. ಟರ್ಕಿ ಯಾರ ಮೇಲೋ ದಂಡೆತ್ತುವಷ್ಟು ಶಕ್ತಿ ಗಳಿಸಿಕೊಂಡಿರುವ ಸೇನಾಬಲವೇನೂ ಅಲ್ಲ, ಅದರ ಆರ್ಥಿಕತೆಯೂ ಆ ಮಟ್ಟದ ಯುದ್ಧದಲ್ಲಿ ತೊಡಗುವುದಕ್ಕೆ ಪೂರಕವಾಗಿಲ್ಲ. ಇನ್ನು, ಇಸ್ಲಾಂ ಹುಟ್ಟಿದ ಜಾಗಗಳ ಆಸುಪಾಸಿನ ಸೌದಿ, ಕತಾರ್, ಒಮಾನ್, ಯುಎಇ ಇಲ್ಲೆಲ್ಲೂ ಬಹುದೊಡ್ಡ ಪಡೆ ಇಲ್ಲ. ಅಲ್ಲಿನ ರಾಜಮನೆತನಗಳನ್ನು ಕಾಪಾಡುವಷ್ಟು ಯುದ್ಧಸಾಮರ್ಥ್ಯ ಇದ್ದಿರಬಹುದೇ ಹೊರತು ದಂಡೆತ್ತಿ ಹೋಗುವ ಬಲ ಅವಕ್ಕಿಲ್ಲ. ಹಾಗೆಂದೇ ಅವು ಅಮೆರಿಕವನ್ನು ತಮ್ಮ ರಕ್ಷಣೆಗೆ ನೆಚ್ಚಿಕೊಂಡಿದ್ದವು.
ಇದೀಗ ಯೂರೋಪ್ ಹಾಗೂ ಗಲ್ಫ್ ದೇಶಗಳಿಗೆ ಅಮೆರಿಕವನ್ನು ರಕ್ಷಣೆಗೆ ನೆಚ್ಚಿಕೊಳ್ಳಲಾಗದ ಸ್ಥಿತಿ ಇದೆ. ಅವು ಈಗ ಕಟ್ಟಿ ನಿಲ್ಲಿಸಿರುವ ಸಾಮ್ರಾಜ್ಯಗಳನ್ನು ಉಗ್ರವಾದಿಗಳಿಂದ, ಅರಾಜಕ ಶಕ್ತಿಗಳಿಂದ ರಕ್ಷಿಸಿಕೊಳ್ಳುವುದಕ್ಕೆ ಏನು ಮಾಡಿಯಾವು? ಕೇವಲ ಅತ್ಯಾಧುನಿಕ ಅಸ್ತçಗಳು, ಯುದ್ಧ ವಿಮಾನಗಳಿದ್ದ ಮಾತ್ರಕ್ಕೆ ರಕ್ಷಣೆಯನ್ನು ಸಾಧಿಸಿಕೊಳ್ಳಲಾಗುವುದಿಲ್ಲ. ಕಾಲಾಳುಗಳು ಬೇಕೇಬೇಕು. ಯೂರೋಪಿನಲ್ಲಂತೂ ಜನನ ಪ್ರಮಾಣವೇ ಕುಸಿದಿರುವಾಗ ಸದ್ಯಕ್ಕೆ ಸೇನೆ ಕಟ್ಟಿ ನಿಲ್ಲಿಸುವುದು ಸಾಧ್ಯವಿಲ್ಲದ ಮಾತು.
ಈ ಎಲ್ಲ ಹಿನ್ನೆಲೆಯಲ್ಲಿ ಅಳೆದೂ ತೂಗಿ ಇವರೆಲ್ಲ ಭಾರತಕ್ಕೆ ಮಣೆ ಹಾಕಿದ್ದಾರೆ. ವ್ಯಾಪಾರವೇ ಇಲ್ಲಿನ ಕೇಂದ್ರ ಎಂಬುದೇನೋ ನಿಜ. ಆದರೆ, ಈ ವ್ಯಾಪಾರ ಮಾರ್ಗಗಳನ್ನು ರಕ್ಷಿಸಿಕೊಳ್ಳಬಲ್ಲ ಸೇನಾ ತಾಕತ್ತು ಇರುವುದು ಭಾರತಕ್ಕೆ ಮಾತ್ರ ಎಂಬುದನ್ನು ಇವರೆಲ್ಲ ಅರ್ಥ ಮಾಡಿಕೊಂಡಿದ್ದಾರೆ. ಮೊದಲ ಹಾಗೂ ಎರಡನೇ ವಿಶ್ವಯುದ್ಧದಲ್ಲಿ ಬ್ರಿಟನ್ ನೇತೃತ್ವದ ಪಡೆ ಗೆಲ್ಲುವುದರಲ್ಲಿ, ಆ ಕಾಲದ ವಸಾಹತಾಗಿದ್ದ ಭಾರತದಿಂದ ಹೋಗಿದ್ದ ಭಾರತೀಯ ಯೋಧರ ಬಲಿದಾನಗಳೇ ದೊಡ್ಡವು ಎಂಬುದು ಚರಿತ್ರೆ ಹೇಳುತ್ತಿರುವ ತಥ್ಯ. ಚೀನಾ ಸಹ ಬಹುದೊಡ್ಡ ಸೇನಾಶಕ್ತಿ ಹಾಗೂ ತಂತ್ರಜ್ಞಾನದಲ್ಲಿ ಭಾರತವನ್ನು ಮೀರಿಸಬಲ್ಲದು ಎಂಬುದು ನಿಜವಿದ್ದಿರಬಹುದು. ಆದರೆ ಚೀನಾ ಶೀಘ್ರವಾಗಿ ವಯೋವೃದ್ಧತೆ ಹೊಂದುತ್ತಿರುವ ದೇಶ. ಸರಾಸರಿ ವಯೋಮಾನದ ಲೆಕ್ಕಾಚಾರದಲ್ಲಿ ಭಾರತವು ಯುವದೇಶ. ಇಲ್ಲೂ ಜನಸಂಖ್ಯೆಯನ್ನು ಪೊರೆಯುವ ಫಲವತ್ತತೆಯ ದರ ಇಳಿಯುತ್ತಿರುವುದರ ಬಗ್ಗೆ ಆತಂಕಗಳಿವೆಯಾದರೂ ಇನ್ನೆರಡು ದಶಕಗಳ ತನಕವಂತೂ ಮಾನವ ಶಕ್ತಿಯ ಆಯಾಮದಲ್ಲಿ ಸೇನಾಬಲವನ್ನು ಪೊರೆಯುವುದಕ್ಕೆ ಏನೂ ತೊಂದರೆ ಇಲ್ಲ. ಈ ನಿಟ್ಟಿನಲ್ಲಿ ಉತ್ತರಪ್ರದೇಶ ಹಾಗೂ ಬಿಹಾರಗಳ ತಾಯಂದಿರಿಗೆ ವಿಶೇಷ ಕೃತಜ್ಞತೆ ಹೇಳಬೇಕಾಗುತ್ತದೆ. ಜನಸಂಖ್ಯಾ ರಚನೆಯಲ್ಲಿ ಭಾರತವನ್ನು ಕಡೆಗಣಿಸಲಾಗದ ಶಕ್ತಿಯಾಗಿರಿಸಿರುವುದರಲ್ಲಿ ಈ ತಾಯಂದಿರು ಹೆಚ್ಚಿನ ಮಕ್ಕಳನ್ನು ಹೆತ್ತುಕೊಟ್ಟಿರುವುದರ ಸೂಕ್ಷ್ಮ ಆಯಾಮ ಇದೆ.
೨೦೨೩ರಲ್ಲಿ ಜಿ-೨೦ ಸಾರಥ್ಯ ವಹಿಸಿದ್ದ ಭಾರತವು ಆಗಲೇ ಐಮೆಕ್ ಕಾರಿಡಾರ್ ಅನ್ನು ಘೋಷಿಸಿತ್ತು. ಭಾರತದ ಪಶ್ಚಿಮದ ತಟದಿಂದ ಸರಕುಗಳು ಗಲ್ಫ್ ತೀರ ತಲಪಿಕೊಳ್ಳುತ್ತವೆ. ಅಲ್ಲಿ ಯುಎಇ, ಒಮಾನ್, ಸೌದಿಗಳೆಲ್ಲ ತಮ್ಮ ತಮ್ಮ ನೆಲದಲ್ಲಿ ಈ ಸಾಗಣೆ ಮುಂದಕ್ಕೆ ಸಾಗುವುದಕ್ಕೆ ಬೇಕಾದ ಮೂಲಸೌಕರ್ಯ ಒದಗಿಸುತ್ತವೆ. ಅದು ಮುಂದೆ ಇಸ್ರೇಲ್ ಅನ್ನು ತಲಪಿಕೊಂಡು, ಮತ್ತೆ ಸಮುದ್ರ ಮಾರ್ಗ ಮಾಡಿ ಯೂರೋಪನ್ನು ತಲಪಿಕೊಳ್ಳುತ್ತದೆ ಎಂಬುದು ನೀಲನಕ್ಷೆ. ಈ ವ್ಯಾಪಾರಿ ಮಾರ್ಗಕ್ಕೆ ಸುರಕ್ಷತೆ ಸಹ ಬೇಕಲ್ಲ? ಅದನ್ನು ಕೊಡಲಿಕ್ಕಿರುವುದು ಭಾರತದ ಸೇನಾಬಲವೇ. ಕಳೆದ ಕೆಲವು ವರ್ಷಗಳಲ್ಲಿ ಬೇರೆ ದೇಶದ ಕೆಲವು ನೌಕೆಗಳನ್ನು ಸಹ ಸಮುದ್ರಗಳ್ಳರಿಂದ ರಕ್ಷಿಸುವ ಕೆಲಸವನ್ನು ಭಾರತದ ನೌಕಾಸೇನೆ ಯಶಸ್ವಿಯಾಗಿ ಮಾಡಿದೆ.
ಅದಾಗಲೇ ಯುಎಇ ಭಾರತದೊಂದಿಗೆ ರಕ್ಷಣಾ ಒಪ್ಪಂದವನ್ನು ಘೋಷಿಸಿಕೊಂಡಿದೆ. ಇದರರ್ಥ ಏನೆಂದರೆ, ರಫೈಲ್ ಸೇರಿದಂತೆ ಯುಎಇ ಬಳಿ ಇರುವ ರಕ್ಷಣಾ ಪರಿಕರಗಳನ್ನು ಜಂಟಿ ಉದ್ದೇಶಕ್ಕಾಗಿ ಭಾರತವೂ ಬಳಸಿಕೊಳ್ಳಬಹುದು. ಇನ್ನು, ಯೂರೋಪಿನ ವಿಚಾರಕ್ಕೆ ಬಂದರೆ ಅಲ್ಲಿ ರಕ್ಷಣೆಗೆ ಸಂಬಂಧಿಸಿದ ಹಲವು ಉದ್ದಿಮೆಗಳಿವೆ. ಈಗ ರೂಪಗೊಳ್ಳುತ್ತಿರುವ ಹೊಸ ಸಮೀಕರಣದಲ್ಲಿ ಭಾರತಕ್ಕೆ ರಕ್ಷಣಾ ಉದ್ದಿಮೆಗಳಲ್ಲಿ ಸಹಭಾಗಿತ್ವ ಅಪೇಕ್ಷಿಸಬಹುದಾಗಿದೆ. ಇದೇ ರೀತಿ ಏಷ್ಯದಲ್ಲಿ ಮತ್ತೆ ರಕ್ಷಣಾ ಉದ್ಯಮವನ್ನು ತನ್ನದಾಗಿಸಿಕೊಳ್ಳುವ ಉಮೇದು ಹೊಂದಿರುವ ದೇಶವೆಂದರೆ ಜಪಾನ್. ಎರಡನೇ ವಿಶ್ವಯುದ್ಧದ ಅನಂತರ ಇದರ ಮೇಲೆ ಹಿಡಿತ ಸಾಧಿಸಿದ ಅಮೆರಿಕವು ಅಲ್ಲಿ ಮಿಲಿಟರಿ ಬಲವಾಗಲಿ, ಮಿಲಿಟರಿ ತಂತ್ರಜ್ಞಾನವಾಗಲಿ ಬೆಳೆಯದಂತೆ ನೋಡಿಕೊಂಡಿತು. ಇದೀಗ ನಿಧಾನಕ್ಕೆ ಜಪಾನ್ ತನ್ನ ಮಿಲಿಟರಿ ಬಜೆಟ್ ಅನ್ನು ಹೆಚ್ಚಿಸಿಕೊಳ್ಳುತ್ತಿದೆ. ಭವಿಷ್ಯದಲ್ಲಿ ಡಾಲರ್ ಗಣನೀಯವಾಗಿ ಬಲ ಕಳೆದುಕೊಂಡಿದ್ದೇ ಆದರೆ, ಜಪಾನ್ ಅದಾಗಲೇ ವಾಹನೋದ್ದಿಮೆ ಇತ್ಯಾದಿಗಳಲ್ಲಿರುವ ತನ್ನ ತಂತ್ರಜ್ಞಾನ ಕೌಶಲವನ್ನು ರಕ್ಷಣಾ ತಂತ್ರಜ್ಞಾನದ ಮರುಜೀವಕ್ಕೂ ಬಳಸಿಕೊಂಡೀತೇನೋ. ಇಲ್ಲಿಯೂ ಅದಕ್ಕೆ ಒದಗುವ ಸಹಭಾಗಿತ್ವ ಭಾರತದ್ದೇ. ದಶಕಗಳ ಅನಂತರ ಭಾರತವು ನಿಧಾನಕ್ಕೆ ತಂತ್ರಜ್ಞಾನವನ್ನು ತನಗೆ ವರ್ಗೀಕರಿಸಿಕೊಳ್ಳುವ ಕೆಲಸವನ್ನು ಸಹಜವಾಗಿಯೇ ಮಾಡುತ್ತದೆ.
ಅಲ್ಲಿಗೆ, ಈ ಅಂಕಣದ ಪ್ರಾರಂಭ ಭಾಗದಲ್ಲಿ ವಿವರಿಸಿದ್ದ ಇತಿಹಾಸ ವೈಭವವು ತುಸು ಬೇರೆಯದೇ ರೀತಿಯಲ್ಲಿ ಭಾರತಕ್ಕೆ ಮರಳಬಹುದಾಗಿದೆ. ಪಶ್ಚಿಮದವರ ರೀತಿಯಲ್ಲಿ ಭಾರತೀಯರು ಕಾಲವನ್ನು ಕಲ್ಪಿಸಿಕೊಂಡೇ ಇಲ್ಲ. ಪಶ್ಚಿಮದವರ ಪಾಲಿಗೆ ಒಂದು ಬಿಂದುವಿನಲ್ಲಿ ಸೃಷ್ಟಿ ಆರಂಭವಾಗುತ್ತದೆ. ಅದು ಮುಂದುವರಿದಂತೆಲ್ಲಿ ಹಿಂದಿನದಕ್ಕಿಂತ ಭವ್ಯವಾಗುತ್ತ ಪ್ರಗತಿ ಸಾಧಿಸುತ್ತದೆ ಹಾಗೂ ಮತ್ತೊಂದು ಬಿಂದುವಿನಲ್ಲಿ “ತೀರ್ಪಿನ ದಿನ’’ ಬಂದು, ಸ್ವರ್ಗಕ್ಕೆ ಯಾರೆಲ್ಲ ಹಾಗೂ ನರಕಕ್ಕೆ ಯಾರೆಲ್ಲ ಎಂಬುದು ನಿಷ್ಕರ್ಷೆಯಾಗಿ ವಿಶ್ವ ಸ್ತಬ್ಧವಾಗುತ್ತದೆ. ಆದರೆ ಭಾರತೀಯರ ಪಾಲಿಗೆ ಕಾಲವೆಂಬುದು ವೃತ್ತಾಕಾರದ ಸುರುಳಿ ಸುರುಳಿ. ಏಳುತ್ತ-ಬೀಳುತ್ತ, ಕತೆಗಳು ಮಾರ್ಪಾಟಿನೊಂದಿಗೆ ಮತ್ತೆ ಸಾಕಾರವಾಗುತ್ತ, ಕ್ಷಯವಾಗಿದ್ದ ಯಾವುದೋ ತಂತ್ರವು ಮತ್ತೆ ಆವಿರ್ಭವಿಸುತ್ತ ಸಾಗುವ ಅನಂತ ಲೀಲೆ ಇದು.
ಮದರ್ ಆಫ್ ಆಲ್ ಡೀಲ್, ಮರುಭೂಮಿ ನೆಲದ ಸ್ನೇಹಹಸ್ತ, ಅರ್ಥವ್ಯವಸ್ಥೆಯ ಏರುಬೆಳವಣಿಗೆ ಇವೆಲ್ಲ ಅಂಥದೊಂದು ಮರುವೈಭವದ ಮಹಾಪಯಣದ ಆರಂಭವನ್ನು ಭಾರತದ ಪಾಲಿಗೆ ಸೂಚಿಸುತ್ತಿವೆಯಾ?
***






