ಪ್ಲುಟೋ

 “ಬೀದಿನಾಯಿ ಅಲ್ಲ ಇದು, ನಮ್ಮ ಮನೆಯ ನಾಯಿ. ಇದಕ್ಕೆ ಹೆಸರಿದೆ. ನಾಯಿಗಳಿಗೆ ಹಾಕೋ ಚೈನೂ ಹಾಕಿದ್ದೀನಿ. ಮತ್ತೆ… ಇಂಥ ನಾಯಿಗಳಿಗೆಲ್ಲ ಪ್ರವೇಶ ಇಲ್ಲ ಅಂದರೆ, ನಾಯಿ ಮತ್ತೆ ಹೇಗೆ ಇರಬೇಕು? ಇದು ನಾಯಿ ಅಲ್ಲ ಅಂತ ಸಾಧಿಸಿ ಅನಂತರ “ಪ್ರವೇಶ ಇಲ್ಲ ಅನ್ನಿ” ಎಂದು ದಬಾಯಿಸಿದಳು ಸಾನ್ವಿ. ಅವಳಿಗೆ ಹದಿನೈದು ವರ್ಷ ಎಂಬುದೇನೋ ನಿಜವೇ. ಆದರೆ ವಾದಕ್ಕೆ ನಿಂತರೆ ಸಾನ್ವಿಯ ಎದುರು ಸುಪ್ರೀಂ ಕೋರ್ಟಿನ ಜಡ್ಜ್ ಸಾಹೇಬರು ಕೂಡ ಗಪ್‌ಚುಪ್ ಆಗಲೇಬೇಕು!

ಸಾವಿತ್ರಿಪುರದ ಬಸ್‌ಸ್ಟ್ಯಾಂಡಿನಲ್ಲಿ ಹಾಕಿದ್ದ ‘ನಾಯಿಗಳ ಸ್ಪರ್ಧೆ’ ಎಂಬ ಬ್ಯಾನರು ಸಾನ್ವಿಯ ಗಮನ ಸೆಳೆಯಿತು. ‘ನಾಯಿಗಳಿಗೂ ಸ್ಪರ್ಧೆಯೆ?’ ಎಂದುಕೊಂಡಳು. ಮನೆಯಲ್ಲಿ ಅಜ್ಜನ ಬಳಿ ಈ ವಿಷಯ ಪ್ರಸ್ತಾವ ಮಾಡಿದಳು. ಅವರು ಪ್ರತಿದಿನ ಪೇಪರ್ ಓದುವವರಾದ್ದರಿಂದ ಇಂಥ ಸ್ಪರ್ಧೆಗಳು ನಡೆಯುವುದು ಅವರಿಗೆ ಗೊತ್ತಿತ್ತು.

“ಹೌದಮ್ಮ ಸಾನ್ವಿ. ನಾಯಿಗಳಿಗೂ ಸ್ಪರ್ಧೆ ಇಡುತ್ತಾರೆ. ಅವುಗಳ ಎತ್ತರ, ಆರೋಗ್ಯ, ಚಂದ ಇದೆಲ್ಲವನ್ನು ನೋಡಿ ಅವುಗಳಿಗೆ ಬಹುಮಾನ ಕೊಡ್ತಾರೆ” ಎಂದರವರು.

“ನಾಯಿಗಳಿಗೂ ಬಹುಮಾನವೆ! ಎತ್ತರ ಬೆಳೆಯೋದಕ್ಕೆ, ಚೆಂದ ಕಾಣಿಸೋದಕ್ಕೆ ಅವೇನೂ ಕಸರತ್ತು ಮಾಡಿಲ್ವಲ್ಲ? ಸಹಜವಾಗಿ ಬರೋ ಆಕಾರಕ್ಕೂ ಪ್ರಶಸ್ತಿಯ ಮಾನದಂಡವೆ?” ಎಂದಳು ಸಾನ್ವಿ.

ಅವಳಿಗೆ ಆಶ್ಚರ್ಯವಾಗಿತ್ತು. ಹಾದಿಬೀದಿಯಲ್ಲಿರುವ ನಾಯಿಗಳಿಗೆಲ್ಲ ಸ್ಪರ್ಧೆ ಮಾಡಿ ಪ್ರಶಸ್ತಿ ಕೊಡ್ತಾರೆಯೆ? ಮರುಕ್ಷಣ ಹೀಗೂ ಅನ್ನಿಸಿತು: ಯಾಕಿರಬಾರದು? ಮನುಷ್ಯರಲ್ಲಿ ಮಿಸ್ಟರ್ ಇಂಡಿಯಾ, ಮಿಸ್ ವರ್ಲ್ಡ್ ಎಂದೆಲ್ಲ ಮಾಡಬಹುದಾದರೆ ನಾಯಿಗಳಿಗೆ ಇರಬಾರದೆ? ಬೆಕ್ಕುಗಳಿಗೆ ಇರಬಾರದೆ? ಅವುಗಳೇನು ಪಾಪ ಮಾಡಿದ್ದಾವೆ ಅಂತ ಅವನ್ನು ಸ್ಪರ್ಧೆಯಿಂದ ಹೊರಗಿಡಬೇಕು? ಏನೇ ಇರಲಿ, ಇದರಿಂದ ನಮ್ಮ ಪ್ಲುಟೋಗೆ ಒಂದು ಛಾನ್ಸ್ ಸಿಕ್ಕಿದ್ದಂತೂ ನಿಜ! ಅವನನ್ನು ಈ ಸ್ಪರ್ಧೆಗೆ ಕರೆದುಕೊಂಡು ಹೋಗಬೇಕು ಎಂದು ನಿಶ್ಚಯಿಸಿದಳು ಸಾನ್ವಿ.

“ಏನು? ನಮ್ಮ ಪ್ಲುಟೋನನ್ನು ಕರೆದುಕೊಂಡು ಹೋಗ್ತೀಯಾ? ನಿನಗೆಲ್ಲೋ ಭ್ರಾಂತು! ಯಾವ ಜಾತಿಯೂ ಅಲ್ಲದ ಈ ಊರನಾಯಿಗೆ ಅವರು ಏನು ಪ್ರಶಸ್ತಿ ಕೊಡ್ತಾರೆ? ಅಲ್ಲದೆ ನಮ್ಮ ಪ್ಲುಟೋ ಏನು ಘನಂದಾರಿ ಕೆಲಸ ಮಾಡ್ತಾನೆ ಅಂತ ಪ್ರಶಸ್ತಿ!” ಎಂದು ಮನೆಯವರು ನಕ್ಕರು. ಆದರೆ ಸಾನ್ವಿ ಒಮ್ಮೆ ನಿರ್ಧರಿಸಿದಳೆಂದರೆ ಹಿಂದಕ್ಕೆ ಹೋಗುವವಳೇ ಅಲ್ಲ – ಅವಳ ಮಾತನ್ನೇ ಅವಳು ಆಮೇಲೆ ಕೇಳುವುದಿಲ್ಲ! ತಿಂಗಳ ಎರಡನೇ ಭಾನುವಾರ ಊರಿನ ಗಾಂಧಿ ಮೈದಾನದಲ್ಲಿ ನಾಯಿಗಳ ಸ್ಪರ್ಧೆ ಎಂಬುದನ್ನು ಓದಿ ನೋಟ್ ಮಾಡಿಕೊಂಡಳು. “ಈ ಸಲ ಏನೇ ಆಗಲಿ, ಪ್ರಶಸ್ತಿ ನಮ್ಮ ಪ್ಲುಟೋಗೇ ಸಿಗಬೇಕು!” ಎಂದು ಅವಳಿಗವಳೇ ನಿರ್ಧರಿಸಿಯೂ ಬಿಟ್ಟಳು. ಅಂದಿನಿಂದ ಪ್ರತಿ ರಾತ್ರಿ ಅವಳಿಗೆ ಪ್ಲುಟೋ, ಸ್ಪರ್ಧೆಯಲ್ಲಿ ಗೆದ್ದು ಪದಕವನ್ನು ಕೊರಳಿಗೆ ಹಾಕಿಕೊಂಡದ್ದೇ ಕನಸು!

ಸ್ಪರ್ಧೆಯ ದಿನ ಹತ್ತಿರ ಬಂತು. ಪ್ಲುಟೋಗೆ ಸಾನ್ವಿ ಚೆನ್ನಾಗಿ ಮೈದಡವಿದಳು. “ನೋಡು, ನೀನು ನಿತ್ಯ ಏನೇನು ಮಾಡ್ತೀಯೋ ಅದನ್ನೇ ಅಲ್ಲಿ ಚೆನ್ನಾಗಿ ಮಾಡು ಅಷ್ಟೆ” ಎಂದು ಬುದ್ಧಿಮಾತು ಹೇಳಿದಳು. ಚೆಂಡನ್ನು ಎತ್ತಿ ಎಸೆದು, ಅದನ್ನು ಅವನ ಕೈಯಲ್ಲಿ ಹಿಡಿದುತರಿಸುವ ಕೆಲಸ ಮಾಡಿಸಿದಳು. ಒಂದೆರಡು ಸಲ ಚೆಂಡನ್ನು ಖುಷಿಯಿಂದ ತಂದ ಪ್ಲುಟೋ ಮೂರನೇ ಬಾರಿ ಹೋಗಲೇ ಇಲ್ಲ. “ನಾನು ತರೋದು, ನೀನು ಎಸೆಯೋದು! ನೀನು ಎಸೆಯೋದೇ ಆದರೆ ನಾನ್ಯಾಕೆ ತಂದುಕೊಡಬೇಕು?” ಎಂದು ಕೇಳುವಂತೆ ಅವನು ಸಾನ್ವಿಯನ್ನು ನೋಡಿದ. ಓಟವೂ ಅಷ್ಟೇ. ಪಕ್ಕದ ಬೀದಿಯ ಬೆಕ್ಕುಗಳನ್ನು ಹಿಡಿಯಲು ಆಕಾಶಕ್ಕೆ ಲಾಗ ಹಾಕುವ ಪ್ಲುಟೋ, ಲಾಗ ಹಾಕು ಎಂದಾಗ ಕಾಲನ್ನೇ ಎತ್ತಲಿಲ್ಲ. “ಅವನಿಗೆ ಅಗತ್ಯ ಇದ್ದಾಗ ಲಾಗ ಹಾಕ್ತಾನೆ, ಲಾಂಗ್ ಜಂಪ್ ಕೂಡ ಮಾಡ್ತಾನೆ. ನಾವು ಹೇಳಿದಾಗ ಮಾಡ್ತಾನೆಯೇ?” ಎಂದರು ಅಜ್ಜಿ ನಗುತ್ತ. “ಪರೀಕ್ಷೆಯಲ್ಲಿ ನಮಗೆ ಅಗತ್ಯ ಇದೆಯೋ ಇಲ್ವೋ ಆದರೆ ಬಾಬರ್ ಯಾವಾಗ ಹುಟ್ಟಿದ, ಅಕ್ಬರ್ ಹೇಗೆ ರಾಜ್ಯಭಾರ ಮಾಡಿದ, ಟಿಪ್ಪು ಎಷ್ಟೆಷ್ಟು ಜನರನ್ನು ಸೋಲಿಸಿದ ಅಂತ ಕತೆ ಬರೀತೀವೋ ಇಲ್ವೋ? ಮಾರ್ಕ್ಸು ಬೇಕಾದರೆ ಬರೀಬೇಕು, ಹಾಗೇ ಪ್ರಶಸ್ತಿ ಬೇಕಾದರೆ ಓಡೋದು, ಲಾಗಾ ಹಾಕೋದು ಎಲ್ಲ ಮಾಡ್ಬೇಕು” ಎಂದು ಪ್ಲುಟೋನನ್ನು ಕೆಕ್ಕರಿಸಿನೋಡುತ್ತ ಅಜ್ಜಿಗೆ ಉತ್ತರಿಸಿದಳು ಸಾನ್ವಿ. “ಮನುಷ್ಯನ ತೆವಲಿಗೆ ನಾಯಿಗೆ ಸ್ಪರ್ಧೆ!” ಎಂದು ಹಣೆಚಚ್ಚಿಕೊಂಡು ಅಜ್ಜಿ ‘ಶುಕ್ಲಾಂಬರಧರಂ..’ ಎಂದು ಮಂತ್ರ ಗುಣುಗುಣಿಸುತ್ತ ದೇವರ ಪೂಜೆಗೆ ಹೋದರು.

ಸ್ಪರ್ಧೆ ಬಂದೇಬಿಟ್ಟಿತು. ಅಂದು ಮುಂಜಾನೆಯಿಂದಲೇ ಸಾನ್ವಿಗೆ ಕೈತುಂಬ ಕೆಲಸ. ಪ್ಲುಟೋನನ್ನು ಹಿಡಿದುಕೂರಿಸಿ ಸ್ನಾನ ಮಾಡಿಸಿದಳು. ಅದಕ್ಕಾಗಿಯೇ ಹೊಸ ಸೋಪು ತೆಗೆದಳು. ಅಪ್ಪ ನೀರೆರೆದರು, ಅಮ್ಮ ಪ್ಲುಟೋನ ಮೈಯನ್ನು ಗಜಗಜ ಎಂದು ಬ್ರಷ್‌ನಲ್ಲಿ ಉಜ್ಜಿದರು. ಸ್ನಾನ ಮಾಡಿಸಿತಂದ ಪ್ಲುಟೋನ ಮೈಯನ್ನು ಬಟ್ಟೆಯಲ್ಲಿ ಒರೆಸಿ ಬೆಚ್ಚಗೆ ಮಾಡಿದರು ಅಜ್ಜ. “ಫಸ್ಟ್ ರ‍್ಯಾಂಕ್ ಬಾರಪ್ಪ” ಎಂದು ಅಜ್ಜಿ ಅವನ ಹಣೆಗೆ ಸ್ವಲ್ಪ ಭಸ್ಮ ಲೇಪಿಸಿ, ಕೆನ್ನೆಗೊಂದು ದೃಷ್ಟಿಬೊಟ್ಟು ಇಟ್ಟರು. ಪ್ಲುಟೋನ ಕೊರಳಿಗೆ ಚೈನ್ ಹಾಕಿ, ಅವನನ್ನು ಮನೆಯ ಟೆರೇಸಿನಲ್ಲಿ, ಬೆಚ್ಚಗಿನ ಎಳೆಬಿಸಿಲಿನಲ್ಲಿ ಹತ್ತು ಸುತ್ತು ಹಾಕಿಸಿದಳು ಸಾನ್ವಿ. ಹಾಗೆ ಸುತ್ತುಹೊಡೆಸುವಾಗ “ಅಲ್ಲಿ ಮನಸ್ಸಿಗೆ ಬಂದಂತೆ ಬೊಗಳಬಾರದು. ಸಿಕ್ಕಸಿಕ್ಕಲ್ಲಿ ಕಾಲೆತ್ತಿ ಸುಸ್ಸು ಮಾಡಬಾರದು. ಸ್ವಲ್ಪ ಸಭ್ಯವಾಗಿರಬೇಕು” ಎಂದು ಬುದ್ಧಿಮಾತನ್ನೂ ಹೇಳಿದಳು. ಎಲ್ಲವೂ ಚೆನ್ನಾಗಿ ಅರ್ಥವಾಯಿತು ಎಂದು ಪ್ಲುಟೋ ತಲೆಯಾಡಿಸಿದ.

– ೨ –

ಸಾನ್ವಿ, ಪ್ಲುಟೋನನ್ನು ಕರೆದುಕೊಂಡು ಗಾಂಧಿ ಮೈದಾನಕ್ಕೆ ಹೋದಾಗ ಹತ್ತೂವರೆ ಗಂಟೆ. ಸ್ಪರ್ಧೆ ಶುರುವಾಗಲು ಇನ್ನೂ ಅರ್ಧ ಗಂಟೆ ಬಾಕಿಯಿತ್ತು. ಆದರೆ ಸ್ಪರ್ಧಿಗಳು ಆಗಲೇ ಮೈದಾನದ ತುಂಬ ತುಂಬಿಕೊಂಡಿದ್ದರು. ಕೆಲವು ನಾಯಿಗಳು ಕಾರುಗಳಿಂದ ಇಳಿಯುತ್ತಿದ್ದವು, ಇನ್ನು ಕೆಲವನ್ನು ನಾಯಿಗಳ ಮಾಲಕರೇ ಮಕ್ಕಳನ್ನು ಎತ್ತಿಕೊಂಡಂತೆ ಎತ್ತಿಕೊಂಡು ಸಂಭ್ರಮದಿಂದ ಓಡಾಡುತ್ತಿದ್ದರು. ಕೆಲವರು ತಮ್ಮ ನಾಯಿಗಳಿಗೆ ಕ್ಷಣಕ್ಷಣಕ್ಕೆ ಲೊಚಲೊಚ ಮುತ್ತಿಡುತ್ತಿದ್ದರು. ಒಂದು ಸಣ್ಣ ಜಾತಿಯ ನಾಯಿಗೆ ಅಂಗಿ ತೊಡಿಸಿದ್ದರು. ಇನ್ನೊಂದಕ್ಕೆ ತಲೆಗೆ ರಿಬ್ಬನ್ ಕಟ್ಟಿದ್ದರು. ಒಂದು ನಾಯಿಗೆ ನೇಲ್ ಪಾಲಿಶ್ ಮಾಡಿದ್ದರು. ಮತ್ತೊಂದಕ್ಕೆ ಸ್ಕಾರ್ಫ್ ಸುತ್ತಿದ್ದರು. ಎಲ್ಲ ನಾಯಿಗಳೂ ತಮ್ಮ ಬಾಲಗಳನ್ನು ಬಿಡುವಿಲ್ಲದೆ ಬೀಸುತ್ತ ಇದ್ದುದರಿಂದ ನೂರಾರು ಪೆಂಡುಲಮ್ ಗಡಿಯಾರಗಳಿರುವ ಗಡಿಯಾರದಂಗಡಿಗೆ ಬಂದಂತೆ ಅನ್ನಿಸಿತು ಸಾನ್ವಿಗೆ.

ಅಲ್ಲಿ, ಒಬ್ಬರು ತಮ್ಮ ನಾಯಿಯ ಮೈಬಣ್ಣದ್ದೇ ತರಹದ ಬಟ್ಟೆ ಹಾಕಿಕೊಂಡಿದ್ದರು. ಇನ್ನೊಬ್ಬರು ಷರ್ಟಿನ ಬೆನ್ನ ಮೇಲೆ ತಮ್ಮ ನಾಯಿಯ ಚಿತ್ರ ಬರೆಸಿಕೊಂಡಿದ್ದರು. ಸಾನ್ವಿಯೇನು, ಪ್ಲುಟೋ ಕೂಡ ಇದೆಲ್ಲವನ್ನು ಕಣ್ಣುಬಾಯಿ ಬಿಟ್ಟು ನೋಡಿದ. ಅವನಿಗೆ ನಾಯಿಗಳಲ್ಲೂ ಇಷ್ಟೆಲ್ಲ ವೆರೈಟಿಗಳಿರುತ್ತವೆಯೇ ಎಂದೂ ಆಶ್ಚರ್ಯವಾಗಿತ್ತು. ಒಂದು – ಕಿಸೆಯಲ್ಲಿಡಬಹುದಾದ ಚೀಹ್ವಾಹ್ವಾ ಜಾತಿಯ ನಾಯಿ, ಇನ್ನೊಂದು – ನಾಲ್ಕು ಜನರನ್ನು ಒಂದೇಟಿಗೆ ಹೊಡೆದು ಮಲಗಿಸಬಲ್ಲ ಮುಧೋಳ ಜಾತಿಯ ನಾಯಿ! ಇಷ್ಟು ಭಿನ್ನ ತಳಿಯ ನಾಯಿಗಳು ಇಲ್ಲಿ ಎಲ್ಲವೂ ಯಾಕೆ ಬಂದಿದ್ದಾವೆ, ಅವುಗಳೇನು ಮಾಡಲಿದ್ದಾವೆ ಎಂಬುದೇ ಪ್ಲುಟೋಗೆ ಯಕ್ಷಪ್ರಶ್ನೆಯಾಗಿತ್ತು. “ನಾಯಿಯನ್ನು ಮನುಷ್ಯ ಎತ್ತಿಕೊಳ್ಳುವುದೇ? ಛಿ ಛೀ!” ಎಂದುಕೊಂಡ ಅವನು. ಸ್ವತಂತ್ರವಾಗಿ ಓಡಾಡುವ ನಮ್ಮನ್ನು ಕೈಲಾಗದವರು ಎಂಬಂತೆ ಮನುಷ್ಯಪ್ರಾಣಿ ಎತ್ತಿಕೊಂಡು ಓಡಾಡುವುದು ಏನು ಚೆನ್ನ ಎಂಬುದು ಅವನ ಭಾವನೆ.

ಸಾನ್ವಿ ಪ್ಲುಟೋನನ್ನು ಕರೆದುಕೊಂಡು ಪ್ರವೇಶದ್ವಾರದ ಬಳಿಹೋದಳು. ಅಲ್ಲಿ ನೋಂದಣಿಯ ಕೌಂಟರ್ ಇತ್ತು. ಒಳಹೋಗುವ ನಾಯಿಗಳ ವಿವರಗಳನ್ನು ಅಲ್ಲಿ ಕೊಡಬೇಕಾಗಿತ್ತು.

“ಹೆಸರು?”

“ಸಾನ್ವಿ”

“ನಾಯಿಯದೋ ನಿಮ್ಮದೋ?”

“ನನ್ನ ಹೆಸರು ಸಾನ್ವಿ, ನಾಯಿಯ ಹೆಸರು ಪ್ಲುಟೋ”

“ನಾಯಿಯ ಜಾತಿ?”

“ಜಾತಿ? ನಾಯಿಗಳಿಗೆ ಜಾತಿ ಇರುತ್ಯೇ? ಇರುವುದೆಲ್ಲ ಒಂದೇ ಜಾತಿ – ನಾಯಿಜಾತಿ ಅಲ್ವೆ?” ಎಂದಳು ಸಾನ್ವಿ.

ಇಷ್ಟು ಹೊತ್ತು ತಲೆ ಕೆಳಹಾಕಿ ವಿವರಗಳನ್ನು ಬರೆದುಕೊಳ್ಳುತ್ತಿದ್ದವನು ತಲೆಯೆತ್ತಿ ಸಾನ್ವಿಯನ್ನೂ ನಾಯಿಯನ್ನೂ ನೋಡಿ ಗೊಳ್ಳನೆ ನಕ್ಕ. “ಅಲ್ಲಾ ಹುಡುಗಿ! ಒಂದು ಬೀದಿನಾಯಿಯನ್ನು ಕರೆದುಕೊಂಡು ಬಂದಿದ್ದೀಯಲ್ಲಾ! ಇಂಥ ನಾಯಿಗಳಿಗೆಲ್ಲ ಇಲ್ಲಿ ಪ್ರವೇಶವಿಲ್ಲ!” ಎಂದುಬಿಟ್ಟ.

“ಬೀದಿನಾಯಿ ಅಲ್ಲ ಇದು, ನಮ್ಮ ಮನೆಯ ನಾಯಿ. ಇದಕ್ಕೆ ಹೆಸರಿದೆ. ನಾಯಿಗಳಿಗೆ ಹಾಕೋ ಚೈನೂ ಹಾಕಿದ್ದೀನಿ. ಮತ್ತೆ, ಇಂಥ ನಾಯಿಗಳಿಗೆಲ್ಲ ಪ್ರವೇಶ ಇಲ್ಲ ಅಂದರೆ, ನಾಯಿ ಮತ್ತೆ ಹೇಗೆ ಇರಬೇಕು? ಇದು ನಾಯಿ ಅಲ್ಲ ಅಂತ ಸಾಧಿಸಿ ಅನಂತರ “ಪ್ರವೇಶ ಇಲ್ಲ ಅನ್ನಿ” ಎಂದು ದಬಾಯಿಸಿದಳು ಸಾನ್ವಿ. ಅವಳಿಗೆ ಹದಿನೈದು ವರ್ಷ ಎಂಬುದೇನೋ ನಿಜವೇ. ಆದರೆ ವಾದಕ್ಕೆ ನಿಂತರೆ ಸಾನ್ವಿಯ ಎದುರು ಸುಪ್ರೀಂ ಕೋರ್ಟಿನ ಜಡ್ಜ್ ಸಾಹೇಬರು ಕೂಡ ಗಪ್‌ಚುಪ್ ಆಗಲೇಬೇಕು!

ಇಬ್ಬರ ನಡುವಿನ ಮಾತುಕತೆ ಸ್ವಲ್ಪ ಬಿಸಿಯೇರುತ್ತಿದ್ದುದನ್ನು ಕಂಡ ಇನ್ನೊಬ್ಬಳು ಮಹಿಳೆ ಅಲ್ಲಿಗೆ ಬಂದರು. ಅವರಿಗೆ ನಲವತ್ತರ ಆಸುಪಾಸು ವಯಸ್ಸು. ಸ್ಪರ್ಧೆಯ ಆಯೋಜಕರಲ್ಲಿ ಅವರೂ ಒಬ್ಬರು ಎಂಬುದನ್ನು ಅವರ ಕ್ಯಾಪ್, ಕೊರಳಿಗೆ ನೇತಾಡಿಸಿಕೊಂಡಿದ್ದ ಐಡಿ ಕಾರ್ಡ್ ಹೇಳುತ್ತಿದ್ದವು. “ನೋ, ನೋ, ಮನೀಶ್! ಹಾಗೆಲ್ಲ ಸ್ಪರ್ಧಿಗಳ ಜೊತೆ ಜಗಳ ತೆಗೆಯಬಾರದು. ನಾಯಿಗಳು ಹೇಗಿದ್ದರೂ ಪ್ರವೇಶಕ್ಕೆ ಅರ್ಹವೇ. ಮುಖ್ಯವಾಗಿ ಅವು ನಾಯಿಗಳಾಗಿದ್ದರೆ ಆಯಿತು. ಆ ಹುಡುಗಿಗೆ ಪ್ರವೇಶ ಕೊಡಿ” ಎಂದು ಆಕೆ ತುಂಬ ಸಭ್ಯತೆಯಿಂದ ಮಾತಾಡಿ “ಹುಡುಗೀ! ನೀನು ಒಳಕ್ಕೆ ಹೋಗಬಹುದು. ಅಂದ ಹಾಗೆ, ನಿನ್ನ ನಾಯಿಯ ಸಂಖ್ಯೆ ೧೭” ಎಂದರು. “ಥ್ಯಾಂಕ್ಯೂ ಮೇಡಮ್! ಸಂಖ್ಯೆ ಯಾವುದಾದರೂ ಇರಲಿ, ನಾನು ಅವನನ್ನು ಪ್ಲುಟೋ ಎಂದೇ ಕರೆಯೋದು” ಎಂದು ನಗುತ್ತ ಸಾನ್ವಿ, ಪ್ಲುಟೋನನ್ನು ಕರೆದುಕೊಂಡು ಸ್ಪರ್ಧಾಂಗಣದ ಒಳಗೆ ಕಾಲಿಟ್ಟಳು.

ಅಲ್ಲಿ ಒಂದು ಕ್ಷಣಕ್ಕೆ “ಇದು ನಮ್ಮ ಗಾಂಧಿ ಮೈದಾನವೇ?” ಎಂದು ಅಚ್ಚರಿಯಾಗುವಷ್ಟು ಬದಲಾವಣೆಗಳು ಆಗಿದ್ದವು. ಮೈದಾನದ ಒಂದು ಕಡೆ ದೊಡ್ಡ ಸ್ಟೇಜ್ ಕಟ್ಟಿದ್ದರು. ಇನ್ನೊಂದು ಕಡೆ ಓಡುವ ಟ್ರಾö್ಯಕ್ ಮಾಡಿದ್ದರು. ನಾಯಿಗಳಿಗೆ ಹಾರಲು ಅನುಕೂಲವಾಗುವಂಥ ಸಣ್ಣ ತಡೆಗಳನ್ನು ಅಲ್ಲಲ್ಲಿ ಇಟ್ಟಿದ್ದರು. ಒಂದು ಕಡೆ ಎತ್ತರದ ಕಂಬಗಳನ್ನು ನಿಲ್ಲಿಸಿ ಅವಕ್ಕೆ ಹಗ್ಗಗಳನ್ನು ಇಳಿಬಿಟ್ಟಿದ್ದರು. ಒಂದು ಕಂಬದಿಂದ ಇನ್ನೊಂದಕ್ಕೆ ಎರಡೆರಡು ಹಗ್ಗಗಳನ್ನು ಸೇತುವೆಯಂತೆ ಕಟ್ಟಿದ್ದರು. ಒಂದು ಕಡೆಯಲ್ಲಿ ಜನರಿಗೆ ಕುಳಿತುಕೊಳ್ಳಲು ವ್ಯವಸ್ಥೆಯಾಗಿತ್ತು. ಈಗಾಗಲೇ ಬಂದಿದ್ದವರ ನಾಯಿಗಳು ಅಲ್ಲಿ ಒಂದು ಕಡೆ ಸೇರಿದ್ದವು. ಕೆಲವಕ್ಕೆ ತಂಪು ಕಣ್ಣಡಕ ಇತ್ತು. ಒಂದು ನಾಯಿಯ ನಾಲ್ಕು ಪಾದಗಳಿಗೆ ಪುಟ್ಟ ಪುಟ್ಟ ಶೂಗಳಿದ್ದವು. ಅದು ಅವನ್ನು ಎತ್ತೆತ್ತಿ ದೂರಕ್ಕೆ ಎಸೆಯುವಂತೆ ನಾಲ್ಕೂ ಕಾಲುಗಳನ್ನು ದೂರದೂರಕ್ಕಿಡುತ್ತ ನಡೆಯುತ್ತಿತ್ತು. “ಹೌ ಕ್ಯೂಟ್! ಕ್ಯಾಟ್‌ವಾಕ್ ಸ್ಪರ್ಧೆಯಲ್ಲಿ ನಿಮ್ಮ ನಾಯಿಗೆ ಪ್ರಶಸ್ತಿ ಗ್ಯಾರಂಟಿ!” ಎಂದು ಅಂಕಲ್ ಒಬ್ಬರು ಮೆಚ್ಚುಗೆ ಸೂಚಿಸಿದರು. “ನಾಯಿ ಅಲ್ಲ, ಲಡ್ಡೂ” ತಿದ್ದಿದಳು ಅದರ “ತಾಯಿ”. ಲಡ್ಡೂ ತನ್ನ ಕಾಲುಗಳ ಚಲನೆಯನ್ನು ನಿಲ್ಲಿಸಿ ಒಮ್ಮೆ ತಲೆಯೆತ್ತಿ ಆಕೆಯನ್ನು ನೋಡಿ, ಮತ್ತೆ ಮುಂದಕ್ಕೆ ಹೆಜ್ಜೆ ಇಟ್ಟಿತು. ಒಂದು ನಾಯಿಮರಿ ಒಳ್ಳೆಯ ಮೆತ್ತನೆಯ ಬಟ್ಟೆಗಳನ್ನು ಹಾಸಿದ ಬುಟ್ಟಿಯಲ್ಲಿತ್ತು. “ತುಂಬ ಮುದ್ದಾಗಿದಾನೆ. ಏನು ಹೆಸರಿಟ್ಟಿದೀರಿ? ಬೇಬಿ ಷವರ್ಸ್ ಆಯ್ತಾ?” ಎಂದು ದಪ್ಪ ಚೌಕಟ್ಟಿನ ಕಣ್ಣಡಕ ಹಾಕಿದ್ದ ಹೆಂಗಸೊಬ್ಬಳು ಆ ನಾಯಿಯ ಬಾಸ್ಕೆಟ್ ಹೊತ್ತಿದ್ದ ಇಪ್ಪತ್ತರ ಹರೆಯದ ಯುವತಿಯನ್ನು ವಿಚಾರಿಸಿದರು. “ಇವನ ಹೆಸರು ಪುಚ್ಕಾ” ಎಂದಳಾಕೆ. ಹಾಜರಿ ಕರೆಯುವಾಗ ಮಕ್ಕಳು ಕೈಯೆತ್ತಿ “ಪ್ರೆಸೆಂಟ್ ಮಿಸ್” ಎನ್ನುವಂತೆ ಪುಚ್ಕ ಮೆತ್ತಗೆ ಬಾಲವನ್ನು ಅಲ್ಲಾಡಿಸಿ ಮತ್ತೆ ಮಲಗಿತು.

ಜಾತ್ರೆಗೆ ಬಂದ ಮಗುವಿನಂತೆ ಖುಷಿಯಾಗಿದ್ದ ಪ್ಲುಟೋ ನೆಲದ ಮೇಲೆ ನಿಂತಿದ್ದ ಇತರ ನಾಯಿಗಳ ಬಳಿ ಹೋಗಲು ಯತ್ನಿಸಿದ. ಎಲ್ಲ ನಾಯಿಗಳೂ ಪರಸ್ಪರ ನೋಡುತ್ತ ಹಾಯ್ ಹಲೋ ಹೇಗಿದ್ದೀರಾ ಎಂದು ಕುಶಲ ವಿಚಾರಿಸಿಕೊಂಡವು. ಆದರೆ ಪ್ಲುಟೋವನ್ನು ನೋಡಿದ ಉಳಿದವರು ಮಾತ್ರ ತಂತಮ್ಮ ನಾಯಿಗಳನ್ನು ತಮ್ಮ ಕಾಲಕೆಳಗೇ ಎಳೆದುಕೊಂಡು ರಕ್ಷಿಸಿಕೊಂಡರು. “ನೋಡ್ರಿ, ಆ ನಾಯಿ ಸ್ನಾನ ಮಾಡಿಲ್ಲ” ಎಂದು ಒಬ್ಬರೆಂದರೆ “ರಸ್ತೆಯಲ್ಲಿ ಹೋಗುತ್ತಿದ್ದ ನಾಯಿ ತಪ್ಪಿಸಿಕೊಂಡು ಇಲ್ಲಿ ಬಂದಿರಬೇಕು” ಎಂದರು ಮತ್ತೊಬ್ಬರು. “ಆ ನಾಯಿಗೆ ವ್ಯಾಕ್ಸಿನೇಶನ್ ಆಗಿದೆಯಾ?” ಎಂದು ಒಬ್ಬರು ಮೆತ್ತಗೆ ವಿಚಾರಿಸಿದರೆ ಇನ್ನೊಬ್ಬರು “ಆ ನಾಯಿಯ ಮಾಲಿಕಳು ಆ ಹುಡುಗೀನೇ. ಚಿಕ್ಕವಳಾದರೂ ಘಟವಾಣಿ! ನಮಗೇಕೆ ಬೇಕು ಉಸಾಬರಿ!” ಎಂದರು.

– ೩ –

ನಾಯಿಗಳ ಸ್ಪರ್ಧೆ ಶುರುವಾಯಿತು. “ಇವತ್ತು ಈ ಸ್ಪರ್ಧೆಗೆ ಅಭೂತಪೂರ್ವ ಪ್ರತಿಕ್ರಿಯೆ ಬಂದಿದೆ. ಒಟ್ಟು ೨೬ ಶ್ವಾನಗಳು ಇವತ್ತಿನ ಸ್ಪರ್ಧೆಗೆ ಸ್ಫರ್ಧಾರ್ಥಿಗಳಾಗಿ ಬಂದಿದ್ದಾರೆ. ಇವರಲ್ಲಿ ೫ ಲ್ಯಾಬ್ರಡಾರ್ ರಿಟ್ರೀವರ್, ೪ ಜರ್ಮನ್ ಷೆಪರ್ಡ್, ತಲಾ ೩ ಪೊಮೇರಿಯನ್, ಪಗ್ ಮತ್ತು ಬೀಗಲ್, ತಲಾ ೨ ಡಾಬರ್‌ಮನ್ ಮತ್ತು ಡಾಲ್ಮೇಷಿಯನ್, ತಲಾ ೧ ಗೋಲ್ಡನ್ ರಿಟ್ರೀವರ್, ಗ್ರೇಟ್ ಡೇನ್, ಸೈಂಟ್ ಬರ್ನಾರ್ಡ್ ಬಂದಿದ್ದಾರೆ. ಹಾಗೇನೇ ಯಾವುದೇ ಬ್ರೀಡ್ ಅಲ್ಲದ ಒಂದು ನಾಯಿ ಕೂಡ ಇದೆ. ಎಲ್ಲ ಶ್ವಾನಗಳಿಗೆ, ಶ್ವಾನಗಳ ಮಾಲಕರಿಗೆ ಸ್ವಾಗತ” ಎಂದು ಆಯೋಜಕರು ಸ್ವಾಗತಿಸಿದರು. ಒಂದು ಶ್ವಾನವು ಬಾಯಲ್ಲಿ ಗುಲಾಬಿ ಹೂವನ್ನು ಕಚ್ಚಿಹಿಡಿದುಕೊಂಡು ವೇದಿಕೆಯನ್ನೇರಿ ಅವರಿಗೆ ಹೂವನ್ನು ಕೊಟ್ಟಿತು. ನೆರೆದವರೆಲ್ಲರೂ “ವಾವ್! ಎಷ್ಟು ಬುದ್ಧಿ! ಏನು ವಿನಯ! ಎಂಥಾ ಕೌಶಲ!” ಎಂದು ಮೆಚ್ಚುಗೆ ಸೂಚಿಸಿದರು.

ಸ್ಪರ್ಧೆಯ ಮೊದಲ ಸುತ್ತಿನಲ್ಲಿ ನಾಯಿಗಳ ಸ್ವಚ್ಛತೆಯ ಪರೀಕ್ಷೆ. ಒಬ್ಬರು ನೀಳ ದೇಹದ, ಸೂಜಿ ಮೀಸೆಯ ನಾಯಿ ಡಾಕ್ಟುç ಬಿಳಿ ಕೋಟು, ಕೊರಳಲ್ಲಿ ಸ್ಟೆತಾಸ್ಕೋಪು ನೇತಾಡಿಸುತ್ತ ಎಲ್ಲ ನಾಯಿಗಳ ಪರೀಕ್ಷೆಗೆ ಹೊರಟರು.

“ಏನಿವಳ ಹೆಸರು?” ವೈದ್ಯರು ಕೇಳುವರು.

“ಕುಲ್ಫಿ… ಸೋನಾ…” ಇತ್ಯಾದಿಯಾಗಿ ಅವರವರ ನಾಯಿಗಳ ಹೆಸರುಗಳನ್ನು ಮಾಲಿಕರು ಹೇಳುವರು.

“ತುಂಬ ಒಳ್ಳೆಯ ಹೆಸರು. ತುಂಬ ಯೋಚಿಸಿ ಇಟ್ಟಿದ್ದೀರಿ” ಎಂದು ಶ್ವಾನವನ್ನೂ ಶ್ವಾನದ ಮಾಲಕರನ್ನೂ ಹೊಗಳುತ್ತ ವೈದ್ಯರು ನಾಯಿಗಳ ಕಣ್ಣು, ನಾಲಗೆ, ಹಲ್ಲು, ಕಂಕುಳು ಇತ್ಯಾದಿ ಪರೀಕ್ಷಿಸುವರು. ತಮ್ಮ ನೋಟ್‌ಪ್ಯಾಡಿನಲ್ಲಿ ಏನೋ ಬರೆದುಕೊಳ್ಳುವರು.

“ಡಾಕ್ಟರ್, ಕಳೆದ ಜೂನ್ ತಿಂಗಳಲ್ಲಿ ನಿಮ್ಮ ಕ್ಲಿನಿಕ್ಕಿಗೆ ಬಂದಿದ್ದೆ. ನಮ್ಮ ಟ್ಯಾಂಗೋನನ್ನು ಪರೀಕ್ಷೆ ಮಾಡಿದ್ದಿರಿ. ಈ ಸಲದ ಶ್ವಾನಸ್ಪರ್ಧೆಯಲ್ಲಿ ಅವನಿಗೆ ಪ್ರಶಸ್ತಿ ಖಚಿತ ಎಂದು ಹೇಳಿದ್ದಿರಿ” ಎಂದು ಕೆಲವರು ನೆನಪು ಮಾಡಿಕೊಡುವರು. “ಹೌದೇನು? ಹಾಗೆ ಹೇಳಿದ್ದೆನೆ?” ಎಂದು ವೈದ್ಯರು ಬರೆಯುವುದನ್ನು ಕ್ಷಣ ನಿಲ್ಲಿಸಿ ಪೆನ್ನಿನಿಂದ ತಲೆ ತುರಿಸಿಕೊಂಡು ಯೋಚಿಸುವರು. ಅನಂತರ “ಇರಲಿ, ಇರಲಿ! ಇಲ್ಲಿ ಯಾವ ಶ್ವಾನಕ್ಕೆ ಜಾಸ್ತಿ ಅಂಕಗಳೋ ಅದೇ ಗೆಲ್ಲುವುದು” ಎಂದು ನಗುತ್ತ ಮುಂದಕ್ಕೆ ಸಾಗುವರು.

ವೈದ್ಯರು ಹಾಗೆ ತಪಾಸಣೆ ನಡೆಸುತ್ತ ಸಾನ್ವಿಯ ಎದುರು ಬಂದರು. “ಏನಮ್ಮ ನಿಮ್ಮ ನಾಯಿಯ ಹೆಸರು?” ಕೇಳಿದರು.

“ಪ್ಲುಟೋ” ಎಂದಳು ಸಾನ್ವಿ.

“ಇದು ನಾನು ನನ್ನ ಕ್ಲಿನಿಕ್ಕಿನಲ್ಲಿ ನೋಡುವ ಯಾವ ನಾಯಿಗಳ ಹಾಗೂ ಇಲ್ಲವಲ್ಲ!” ಎಂದು ಅಚ್ಚರಿ ವ್ಯಕ್ತಪಡಿಸುತ್ತ ವೈದ್ಯರು ಪ್ಲುಟೋನ ಎತ್ತರಕ್ಕೆ ಬಗ್ಗಿದರು. “ಹಾಯ್ ಪ್ಲುಟೋ!” ಎಂದು ಕಿಸಕ್ಕನೆ ನಗುತ್ತ ಅದರ ಮೈದಡವಿದರು. ತಲೆ ನೇವರಿಸಿದರು. “ಏನಮ್ಮ, ಈ ನಾಯಿಗೆ ಶ್ಯಾಂಪೂ ಹಾಕಿಲ್ಲವೆ? ಸ್ನಾನದ ಬಳಿಕ ಬಾಡಿ ಸ್ಪ್ರೇ ಮಾಡಿಲ್ಲವೆ? ಕಾಲಿನ ಪಾದಗಳಿಗೆ ಕ್ರೀಮ್ ಹಚ್ಚಿಲ್ಲವೆ? ಉಗುರುಗಳಿಗೆ ಬಣ್ಣ ಬಳಿದಿಲ್ಲವೆ? ಸೆಂಟು ಹಾಕಿದ ಹಾಗೂ ಇಲ್ಲವಲ್ಲ!” ಎಂದು ವಿಚಾರಿಸಿದರು.

“ನಮ್ಮ ಪ್ಲುಟೋನಿಗೆ ಅದೆಲ್ಲ ಇಷ್ಟ ಆಗುವುದಿಲ್ಲ. ಸ್ಪ್ರೇ ಹೊಡೆದುಕೊಂಡು, ಸೆಂಟು ಬಳಿದುಕೊಂಡು, ಮೇಕಪ್ ಮಾಡಿಕೊಂಡು ಬರುವವರನ್ನು ಕಂಡರೆ ಬೊಗಳಿ, ಹಾರಿ, ಕಚ್ಚಿ ಓಡಿಸಿಬಿಡುತ್ತಾನೆ” ಎಂದಳು ಸಾನ್ವಿ. ಅದಕ್ಕೆ ತಕ್ಕಂತೆ ಪ್ಲುಟೋನೂ ತನ್ನ ಬಾಯಿಯಲ್ಲಿ ಒಂದು ಬದಿಯಲ್ಲಿ ತುಟಿಗಳನ್ನು ಎತ್ತಿ ಗರಗಸದಂಥ ಹಲ್ಲುಗಳನ್ನು ತೋರಿಸಿ ಗುರ್ ಗುರ್ ಎಂದ. “ಹೋ! ಸರಿ, ಸರಿ! ನಾಯಿಗಳಿರಬೇಕಾದ್ದೇ ಹಾಗೆ. ಅವುಗಳನ್ನು ಚೆನ್ನಾಗಿ ಸ್ನಾನ ಮಾಡಿಸಿ ಬಿಸಿಲಿನಲ್ಲಿ ವಾಕ್ ಮಾಡಿಸಿದರೆ ಸಾಕಾಗುತ್ತದೆ. ಮಿಕ್ಕಿದ್ದೆಲ್ಲ ಸುಮ್ಮನೆ ವ್ಯರ್ಥ!” ಎಂದು ವೈದ್ಯರು ನಡುನಡುಗುತ್ತ ತಮ್ಮ ನೋಟ್‌ಪ್ಯಾಡಿನಲ್ಲಿ ಏನನ್ನೋ ಬರೆದುಕೊಂಡು ಮುಂದಕ್ಕೆ ಹೋದರು. ಮುಂದಕ್ಕೆ ಹೋದ ವೈದ್ಯರನ್ನು ಸಾನ್ವಿಯ ಅನಂತರ ನಿಂತಿದ್ದ ಮಾಲಕರ ಕೈಯಲ್ಲಿದ್ದ ಪಗ್ ನಾಯಿ ನಡುಬಗ್ಗಿಸಿ ಹೌ ಹೌ ಎಂದು ಬೊಗಳಿ ಸ್ವಾಗತಿಸಿತು.

ಅನಂತರದ ಸುತ್ತು ನಾಯಿಗಳ ಆಹಾರಕ್ರಮದ ಪರಿಶೀಲನೆ. “ಶ್ವಾನಕ್ಕೆ ತಿನ್ನಲು ಏನೇನು ಕೊಡುತ್ತೀರಿ?” ಎಂದು ಆಯೋಜಕರು ಕೇಳುವ ಪ್ರಶ್ನೆಗಳಿಗೆ ಶ್ವಾನಗಳ ಮಾಲಕರು ಉತ್ತರಿಸಬೇಕಾಗಿತ್ತು.

“ಬೆಣ್ಣೆ, ಗಿಣ್ಣು, ಹಾಲು, ಬ್ರೆಡ್ಡು, ಪಾಸ್ತಾ, ಪೀಝಾ, ಬರ್ಗರ್, ಐಸ್‌ಕ್ರೀಮ್” ಮುಂತಾದ ಬಗೆಬಗೆಯ ಉತ್ತರಗಳು ಬಂದವು. ಸಾಲ್ಮನ್ ಮೀನಿನ ವಾಸನೆಯಿರುವ ನಾಯಿಯ ಆಹಾರ ಕೊಡುತ್ತೇವೆ ಎಂದು ಕೆಲವರೆಂದರು. ನಾವು ಇಂತಿಂಥಾ ಅಂಗಡಿಗಳಲ್ಲಿ ಮಾರುವ ನಾಯಿಯ ಆಹಾರವನ್ನಷ್ಟೇ ಕೊಳ್ಳುತ್ತೇವೆ. ಬೆಲೆ ಎಷ್ಟಾದರೂ ಪರವಾಗಿಲ್ಲ, ನಾಯಿಯ ಆರೋಗ್ಯ ಮುಖ್ಯ ಎಂದು ಮತ್ತೊಂದಿಷ್ಟು ಮಂದಿ ಹೇಳಿದರು. ಅವರು ಹೇಳುತ್ತಿದ್ದ ಅದೆಷ್ಟೋ ಹೆಸರುಗಳನ್ನು ಸ್ವತಃ ಸಾನ್ವಿಯೇ ಕೇಳಿರಲಿಲ್ಲ, ಇನ್ನು ಪ್ಲುಟೋ ಅವನ್ನೆಲ್ಲ ನೋಡಿರುವುದು, ತಿಂದಿರುವುದು ಹೇಗೆ ಸಾಧ್ಯ!

“ನೀವೇನು ತಿನ್ನಿಸುತ್ತೀರಿ?” ಎಂದು ಕೇಳಿದ ಪ್ರಶ್ನೆಗೆ ಸಾನ್ವಿ “ಬೆಳಗ್ಗೆ ದೋಸೆ, ಇಡ್ಲಿ, ಅನ್ನ” ಎಂದಳು. “ಮಧ್ಯಾಹ್ನ, ಅನ್ನ-ಸಾಂಬಾರ್” ಎಂದಳು. “ಸಂಜೆ ಮೊಸರನ್ನ” ಎಂದಳು. “ನಡುವೆ ನಾವು ಚಹ-ಕಾಫಿ ಕುಡಿಯೋ ಸಮಯದಲ್ಲಿ ನಮ್ಮ ನಾಯಿಗೆ ಹಾಲು, ಬಿಸ್ಕತ್ತು, ಚಕ್ಲಿ, ಕೋಡುಬಳೆ ಹಾಕ್ತೇವೆ” ಎಂದಳು. ಈ ಯಾವ ಉತ್ತರಗಳಲ್ಲೂ ಆಯೋಜಕರು ನಿರೀಕ್ಷಿಸುತ್ತಿದ್ದ ಉತ್ತರ ಬಂದಿರಲೇ ಇಲ್ಲ. ಅವಳಿಗೆ ಅರ್ಥ ಮಾಡಿಸುವಂತೆ “ಹಾಗಲ್ಲಮ್ಮ, ನೀವು ನಿಮ್ಮ ಶ್ವಾನಕ್ಕೆ ವಿಶೇಷವಾದ ಆಹಾರ ಅನ್ನುವಂಥದ್ದೇನನ್ನೂ ಹಾಕೋಲ್ವೇ?” ಎಂದು ಆಯೋಜಕರು ಅಭಿನಯಿಸಿ ತೋರಿಸಿದರು. ಸಾನ್ವಿ ಯೋಚಿಸಿ “ಹೌದ್ ಹೌದು! ಅಷ್ಟಮಿಯ ಸಮಯದಲ್ಲಿ ನಾಲ್ಕೈದು ಬಗೆಯ ಉಂಡೆ, ಸಂಕ್ರಾಂತಿಗೆ ಪೊಂಗಲ್, ದೀಪಾವಳಿಗೆ ಒಬ್ಬಟ್ಟು, ಗಣೇಶ ಚತುರ್ಥಿಗೆ ಮೋದಕ. ಇವನ್ನು ಕೂಡ ನಮ್ಮ ಪ್ಲುಟೋ ತಿಂತಾನೆ” ಎಂದಳು. ಉಳಿದವರು ನಗು ತಡೆಯಲಾರದೆ ಗೊಳ್ ಎಂದರು.

ಒಬ್ಬಟ್ಟು, ಶ್ಯಾವಿಗೆ, ಚಕ್ಲಿ ಎಂಬೆಲ್ಲ ಹೆಸರುಗಳನ್ನು ಹೇಳುತ್ತಿದ್ದಂತೆಯೇ ಪ್ಲುಟೋನಿಗೆ ಅವನ ನಿಯಂತ್ರಣವನ್ನೂ ಮೀರಿ ಲಾಲಾರಸ ಉತ್ಪತ್ತಿಯಾಯಿತು. ನಗು ಒತ್ತರಿಸಿ ಬರುತ್ತಿದ್ದರೂ ಅದನ್ನು ತಡೆದುಕೊಂಡು ಆಯೋಜಕರು ಮುಂದಿನ ಪ್ರಶ್ನೆ ಕೇಳಲೇಬೇಕಾಗಿತ್ತು – ಜನಗಣತಿಗೆ ಬರುವ ಶಿಕ್ಷಕರು ಕೇಳುವಂತೆ – “ಮತ್ತೆ ನಿಮ್ಮ ನಾಯಿಗೆ ಆಹಾರದ ವಿಷಯದಲ್ಲಿ ಏನಾದರೂ ಅಲರ್ಜಿ ಇದೆಯೆ?” ಈ ಪ್ರಶ್ನೆಗೆ ಈಗಾಗಲೇ ತರಹೇವಾರಿ ಉತ್ತರಗಳು ಬಂದಿದ್ದವು. “ನಮ್ಮ ಸಿಂಬಾ-ಗೆ ಪೀನಟ್ ಬಟರ್ ಆಗಿಬರೋಲ್ಲ” ಎಂದು ಒಬ್ಬರೆಂದರೆ “ಬೇರಾವ ಐಸ್‌ಕ್ರೀಮಾದರೂ ಓಕೆ, ಆದರೆ ತಿರಮಿಸು ತಿಂದರೆ ನಮ್ಮ ಚಂಪಳಿಗೆ ಶೀತ ಆಗ್ಬಿಡುತ್ತೆ” ಎಂದು ಇನ್ನೊಬ್ಬರು. “ಪ್ಲುಟೋನಿಗೂ ಕೆಲವು ಅಲರ್ಜಿ ಇದೆ” ಎಂದಳು ಸಾನ್ವಿ. “ಏನೇನು?” ಎಂದು ಆಯೋಜಕರು ತಮ್ಮ ಬರೆಯುವ ಪ್ಯಾಡು ಹಿಡಿದು ಪಟ್ಟಿ ಮಾಡಿಕೊಳ್ಳಲು ತಯಾರಾದರು. “ಮೊದಲನೆಯದಾಗಿ ಅವನಿಗೆ ನಿನ್ನೆಯ ತಂಗಳನ್ನ ಇವತ್ತು ಚಿತ್ರಾನ್ನ ಮಾಡಿ ಹಾಕಿದರೆ ಕೋಪ ಬರುತ್ತೆ. ಹಾಗೇನೇ ಹಪ್ಪಳದ ಹಾಗೆ ರಟ್ಟಾಗಿರೋ ಚಪಾತಿ, ಚಪಾತಿಯ ಹಾಗೆ ಮೆತ್ತಗಿರೋ ಹಪ್ಪಳ – ಎರಡೂ ಆಗಲ್ಲ!” ಎಂದಳು ಸಾನ್ವಿ. “ಏನೇನು ಹಾಕ್ತಾರೆ ನೋಡಿ ಅವರ ನಾಯಿಗೆ! ಅದೇನು ಹೊಟ್ಟೇನೋ, ಕಸದ ತೊಟ್ಟೀನೋ!” ಎಂದು ಒಬ್ಬರು ಇನ್ನೊಬ್ಬರ ಕಿವಿಯಲ್ಲಿ ಪಿಸುಮಾತನಾಡಿದರು. “ಹೇಳಿದ ಪಟ್ಟಿಯಲ್ಲಿ ಆರೋಗ್ಯಪೂರ್ಣವಾದದ್ದು ಏನೂ ಇಲ್ಲ ನೋಡಿ! ನಾವು ನಮ್ಮ ನಾಯಿಗೆ ಹಲ್ಲಿನ ಬೆಳವಣಿಗೆ ಚೆನ್ನಾಗಿ ಆಗಲಿ ಅಂತ ಅಂಗಡಿಯಿಂದ ಮೂಳೆ ಆಟಿಕೆ ತಂದುಕೊಡ್ತೀವಿ” ಎಂದರು ಮತ್ತೊಬ್ಬರು ತಮ್ಮ ಪಕ್ಕದವರ ಕಿವಿಯಲ್ಲಿ ಗುಸುಗುಸು ಎನ್ನುತ್ತ. “ನಮ್ಮ ಪ್ಲುಟೋ ಸಂಚಾರ ಹೋದರೆ ನಿಜವಾದ ಮೂಳೆಗಳನ್ನೇ ಕಚ್ಚಿಕೊಂಡು ಬರ್ತಾನೆ!” ಎಂದಳು ಸಾನ್ವಿ ಆ ಎಲ್ಲ ಮಾತುಗಳಿಗೆ ಪೂರ್ಣವಿರಾಮವಿಡುವಂತೆ.

– ೪ –

ಸಾನ್ವಿಯ ಉತ್ತರಗಳನ್ನೂ ಅವಳ ಆ ನಾಯಿಯನ್ನೂ ನೋಡಿದರೆ ಯಾವ ವಿಭಾಗದಲ್ಲೂ ಅದು ಅಂಕಗಳನ್ನು ಸಂಪಾದಿಸುವಂತೆ ಕಾಣಲಿಲ್ಲ. ಇನ್ನು ಮುಂದಿನ ಹಂತಗಳಂತೂ ವಿಶೇಷವಾದ ಆರೈಕೆ ಮಾಡಿಸಿಕೊಂಡ ನಾಯಿಗಳಿಗಷ್ಟೇ ಸೀಮಿತವಾಗಿದ್ದಂತೆ ಇತ್ತು. ನಾಯಿಗಳ ವೇಷಭೂಷಣ – ಎಂಬುದು ಅಂಥದೊಂದು ರೌಂಡು. ಆ ರೌಂಡಿನಲ್ಲಿ ಸ್ಕಾರ್ಫ್ ಕಟ್ಟಿಸಿಕೊಂಡ, ಅಂಗಿ ಹಾಕಿದ, ಚಡ್ಡಿ ತೊಟ್ಟ, ಕಾಲುಗಳಿಗೆ ಸಾಕ್ಸ್ ಧರಿಸಿದ, ಶೂ ಬಿಗಿದ, ಸೊಂಟಕ್ಕೆ ಬೆಲ್ಟ್ ಹಾಕಿಸಿಕೊಂಡ – ಹೀಗೆ ಬಗೆಬಗೆಯ ವಿಶೇಷಗಳಿರುವ ನಾಯಿಗಳೆಲ್ಲವೂ ವೇದಿಕೆಗೆ ಬಂದವು. ಅವನ್ನು ಹೊತ್ತುತಂದು ವೇದಿಕೆಯಲ್ಲಿಟ್ಟ ಶ್ವಾನಮಾಲಕರಂತೂ ತಾವೇ ಫ್ಯಾಶನ್ ಶೋದಲ್ಲಿ ಇದ್ದೇವೇನೋ ಎಂಬಂತೆ ವರ್ತಿಸುತ್ತಿದ್ದರು. ವೇದಿಕೆಯ ಮುಂಭಾಗದಲ್ಲಿ ಹತ್ತಾರು ಮಂದಿ ಕ್ಯಾಮರ ಹಿಡಿದು ನಿಂತಿದ್ದರು. ಅವರ ಕ್ಯಾಮರಗಳು ಕ್ಲಿಕ್ ಕ್ಲಿಕ್ ಕ್ಲಿಕ್ ಎನ್ನುತ್ತ ಬಿಡುವಿಲ್ಲದೆ ಶ್ವಾನಗಳನ್ನೂ ಅವುಗಳ ಮಾಲಕರನ್ನೂ ಸೆರೆಹಿಡಿದವು.

“ನೀನು ನಿನ್ನ ನಾಯಿಯನ್ನು ಪ್ರದರ್ಶನ ಮಾಡುವುದಿಲ್ಲವೇನಮ್ಮ?” ಎಂದು ಹಿರಿಯರೊಬ್ಬರು ಕೇಳಿದಾಗ ಸಾನ್ವಿ ಅತ್ತ ತಿರುಗಿದಳು. ಅಲ್ಲಿದ್ದವರು ಒಬ್ಬ ಸಭ್ಯ ಹಿರಿಯರು. ತಲೆಗೆ ಚಪ್ಪಟೆ ಟೋಪಿ ಧರಿಸಿದ್ದರು. ಗಿರಿಜಾಮೀಸೆ. ಮಿಲಿಟ್ರಿ ಮಾಮನಂತೆ ಕಾಣುತ್ತಿದ್ದರು. “ನಮ್ಮ ಪ್ಲುಟೋಗೆ ವೇಷಭೂಷಣ ಇಷ್ಟವಾಗೋಲ್ಲ” ಎಂದಳು ಸಾನ್ವಿ. “ನಿಜ ಕಣಮ್ಮ! ಪ್ರಾಣಿಗಳು ಸ್ವಚ್ಛಂದವಾಗಿದ್ದಷ್ಟೂ ಒಳ್ಳೆಯದು! ನಾಯಿಗೆ ಅದರ ಕಾಲೇ ಶೂ! ಅದರ ಮೈಯ ರೋಮರಾಶಿಯೇ ಅದರ ಸ್ವೆಟರ್! ಮನುಷ್ಯನ ಹಾಗಿರಬೇಕು ಅಂತ ಅದಕ್ಕೆ ಪದ್ಮಾಸನ ಹಾಕಿಸೋಕಾಗುತ್ಯೆ!” ಎಂದರು ಆ ಹಿರಿಯರು. ಆ ದಿನದಲ್ಲಿ ಮೊದಲ ಸಲ ಸಾನ್ವಿ ಮನಸ್ಸು ಹಗುರಾಗಿ ನಕ್ಕಿದ್ದು ಆಗಲೇ.

“ಒಬ್ಬಳೇ ಬಂದಿದ್ದೇಯನಮ್ಮ?” ಕೇಳಿದರು ಹಿರಿಯರು.

“ಹೌದು, ಪ್ಲುಟೋನನ್ನು ಕರೆದುಕೊಂಡು ನಾನೊಬ್ಬಳೇ ಬಂದಿರೋದು” ಎಂದಳು ಸಾನ್ವಿ.

“ಈ ಸ್ಪರ್ಧೆ ಇಲ್ಲಿ ನಡೆಯುತ್ತಿರಲಿ. ನಾವು ಈ ಮೈದಾನದಲ್ಲಿ ಒಂದು ಸುತ್ತುಹಾಕಿಬರೋಣ, ಬಾ” ಎಂದು ಹಿರಿಯರು ಸಾನ್ವಿಯನ್ನು ಎಬ್ಬಿಸಿಕೊಂಡು ಆ ಸ್ಪರ್ಧೆಯ ಕಣದಿಂದ ಹೊರಬಂದರು. ಸಾನ್ವಿಗೂ ಯಾವಾಗ ಅಲ್ಲಿಂದ ಆಚೆ ಬರುವುದೋ ಎಂಬಂತಾಗಿತ್ತಲ್ಲ! ಪ್ಲುಟೋ ಅಂತೂ ಅಂಗಿ-ಚಡ್ಡಿ ಹಾಕಿಕೊಂಡು ಕ್ಯಾಟ್‌ವಾಕ್ ಮಾಡುತ್ತಿದ್ದ ಇತರೇ ನಾಯಿಗಳನ್ನು ಅರ್ಧ ಆಶ್ಚರ್ಯದಿಂದ ಅರ್ಧ ಬೇಸರದಿಂದ ನೋಡುತ್ತ ಆಕಾಶಕ್ಕೊಮ್ಮೆ ಭೂಮಿಗೊಮ್ಮೆ ಮುಖ ಮಾಡುತ್ತಿದ್ದ. ಈಚೆ ಬಂದದ್ದು ಅವನಿಗೂ ನೆಮ್ಮದಿ ತಂದಿರಬೇಕು! ಮೈಕೊಡವಿಕೊಂಡು ಬೌಬೌ ಎಂದು ನಾಲ್ಕು ಸಲ ಜೋರಾಗಿ ಬೊಗಳಿ ಗಂಟಲು ಸರಿಮಾಡಿಕೊಂಡ.

“ನಾನು ಕ್ಯಾಪ್ಟನ್ ವಿಶ್ವನಾಥ್. ಸೇನೆಯಲ್ಲಿ ನಾಯಿಗಳ ಸ್ಕಾ÷್ವಡ್ ಇರುತ್ತವೆ. ಅಂಥ ಒಂದು ಸ್ಕ್ವಾಡ್ ನೋಡಿಕೊಳ್ಳುತ್ತಿದ್ದೆ. ಅಲ್ಲಿ ನಾವು ನಾಯಿಗಳಿಗೆ ಎಷ್ಟೆಷ್ಟೋ ವಿಷಯಗಳಲ್ಲಿ ತರಬೇತಿ ಕೊಡುತ್ತೇವೆ. ನಾಯಿಗಳು ನಮಗಿಂತ ಹತ್ತುಪಟ್ಟು ಚೆನ್ನಾಗಿ ಕೆಲಸ ಮಾಡುತ್ತವೆ, ಹತ್ತುಪಟ್ಟು ಚೆನ್ನಾಗಿ ಸನ್ನಿವೇಶಗಳನ್ನು ಅರ್ಥ ಮಾಡಿಕೊಳ್ಳುತ್ತವೆ. ಅವನ್ನು ಬಳಸಿಕೊಂಡು ಮನುಷ್ಯ ತನಗೆ ಸಾಧ್ಯವಾಗದ ಎಷ್ಟೋ ಕೆಲಸಗಳನ್ನು ಮಾಡಿಕೊಳ್ಳಬಹುದು. ಅಷ್ಟೇ ಏಕೆ, ರೋಬಾಟ್‌ಗಳು ಮಾಡಲಿಕ್ಕಾಗದ ಕೆಲಸಗಳನ್ನು ಕೂಡ ತರಬೇತಿ ಪಡೆದ ನಾಯಿಗಳು ಮಾಡಿತೋರಿಸುತ್ತವೆ. ಎಷ್ಟೋ ಸಂದರ್ಭಗಳಲ್ಲಿ ನಾಯಿಗಳು ತಾವು ಪ್ರಾಣತ್ಯಾಗ ಮಾಡಿ ಮನುಷ್ಯರನ್ನು ರಕ್ಷಣೆ ಮಾಡ್ತವೆ. ದೆ ಆರ್ ಗ್ರೇಟ್!” ಎಂದರು ಹಿರಿಯರು. ಅವರ ಮಾತುಗಳನ್ನು ಕೇಳುತ್ತ ಸಾನ್ವಿ ಮಂತ್ರಮುಗ್ಧಳಾದಳು. ಇಬ್ಬರೂ ಮೈದಾನದ ಒಂದು ಮೂಲೆಯಲ್ಲಿದ್ದ ಸಿಮೆಂಟ್ ಬೆಂಚಿನ ಮೇಲೆ ಕೂತರು. ಪ್ಲುಟೋ ಅವರ ಮಧ್ಯದಲ್ಲಿ ಕೂತ. ಮಿಲ್ಟ್ರಿ ಮಾಮನ ಜೊತೆ ಅವನಿಗೇನೋ ವಿಶೇಷ ಬಾಂಧವ್ಯ ಹುಟ್ಟಿಕೊಂಡಂತಿತ್ತು. ಅವರ ಕಾಲುಗಳೆಡೆಯಲ್ಲಿ ಹೋಗಿಬಂದು ಬಾಲವಲ್ಲಾಡಿಸಿ ಅವರ ಮುಖ ನೋಡಿ ಎರಡು ಬೊಗಳಿದ.

“ಅಂದ ಹಾಗೆ, ಇವನ ಬ್ರೀಡ್ ಏನು ಗೊತ್ತಿದೆಯಾ ನಿನಗೆ ಮಿಸ್…” – ಅವಳ ಹೆಸರು ಹೇಳಲು ತಡವರಿಸಿದರು.

“..ಸಾನ್ವಿ” – ಎಂದು ಅವರ ಕೆಲಸವನ್ನು ಸುಲಭ ಮಾಡಿದಳು.

“ಹ್ಞಾ! ಒಳ್ಳೆಯ ಹೆಸರು. ಸಾನ್ವಿ, ಈ ಪ್ಲುಟೋನ ನಾಯಿಜಾತಿ ಯಾವುದು ಗೊತ್ತಿದೆಯಾ ನಿನಗೆ?”

“ಇಲ್ಲ ಅಂಕಲ್! ನನಗೆ ನಾಯಿಗಳಲ್ಲೂ ಬಹಳಷ್ಟು ಜಾತಿಗಳಿವೆ ಎಂಬುದೇ ಗೊತ್ತಿರಲಿಲ್ಲ!”

“ಹೇಗೆ ಗೊತ್ತಾಗಬೇಕು! ನಾವು ನಮ್ಮ ಪರಿಸರದಲ್ಲಿ ನೋಡುವ ನಾಯಿಗಳೆಲ್ಲವೂ ಒಂದೇ ರೀತಿಯವಿರುವಾಗ! ಪ್ಲುಟೋನ ಜಾತಿಯನ್ನು ಇಂಡಿಯನ್ ಪರಿಯಾ ಎನ್ನುತ್ತಾರೆ. ಈ ತಳಿಯ ನಾಯಿಗಳು ಭಾರತದಲ್ಲಿ ಎಷ್ಟು ವರ್ಷಗಳಿಂದ ಇವೆ ಗೊತ್ತೆ? ಕನಿಷ್ಠ ಐದು ಸಾವಿರ ವರ್ಷಗಳಿಂದ ಅವು ಮನುಷ್ಯನ ಜೊತೆ ಸ್ನೇಹಿತನಾಗಿ ಬಾಳ್ವೆ ಮಾಡಿಕೊಂಡಿವೆ! ಆ ಕಾರಣಕ್ಕೋ ಏನೋ, ಭಾರತೀಯರನ್ನು ಬಹುತೇಕ ಸರಿಯಾಗಿ ಅರ್ಥ ಮಾಡಿಕೊಳ್ಳುವ ಸಾಮರ್ಥ್ಯ ಇವುಗಳಿಗುಂಟು. ಭಾರತದಲ್ಲಿ ಕಾಣಸಿಗುವ ಬೀದಿನಾಯಿಗಳೆಲ್ಲವೂ ಇದೇ ತಳಿಯವೇ. ಆದರೆ ಬೀದಿನಾಯಿ ಎಂದು ಉಪೇಕ್ಷೆ ಮಾಡುವಂತಿಲ್ಲ. ಭೂಮಿಯಿಂದ ಆಚೆಗೆ ರಾಕೆಟ್ಟಿನಲ್ಲಿ ಹೋದ ಪ್ರಾಣಿ ಯಾವುದು ಗೊತ್ತೆ? ಒಂದು ಬೀದಿನಾಯಿಯೇ!”

“ಹೌದಾ!” ಸಾನ್ವಿಗೆ ಅಚ್ಚರಿಯಾಯಿತು. ಜೂಲು ಮೈಯ, ಕರಡಿಯಂತಿರುವ, ಉದ್ದ ಕಾಲಿನ, ಕೋರೆಹಲ್ಲಿನ… ಇಂಥ ಬೇರೆಲ್ಲ ಜಾತಿಯನ್ನು ಬಿಟ್ಟು ಬೀದಿನಾಯಿಯನ್ನು ರಾಕೆಟ್ಟಿನಲ್ಲಿ ಯಾಕೆ ಕೂರಿಸಿದರು! ಸಾನ್ವಿ ಆ ಸಂಶಯವನ್ನು ಆ ಮಾಮನ ಮುಂದಿಟ್ಟಳು.

“ನೀನು ಹೇಳುವ ಆ ಉಳಿದೆಲ್ಲ ಜಾತಿಯ ನಾಯಿಗಳಿದ್ದಾವಲ್ಲ, ಅವಕ್ಕೆ ಹೊಸ ಪರಿಸರಕ್ಕೆ ಹೊಂದಿಕೊಳ್ಳುವ ಸಾಮರ್ಥ್ಯ ಕಡಮೆ. ಅಲ್ಲದೆ ಅವಕ್ಕೆ ರೋಗಪ್ರತಿರೋಧ ಶಕ್ತಿಯೂ ಸ್ವಲ್ಪ ಕಡಮೆಯೇ. ಅವನ್ನು ಸದಾ ಒಳ್ಳೊಳ್ಳೆಯ ಆಹಾರ ಕೊಟ್ಟು, ಬೆಚ್ಚಗೆ ನೋಡಿಕೊಳ್ಳಬೇಕು. ಕಾಲಕಾಲಕ್ಕೆ ಲಸಿಕೆ ಹಾಕಿಸಬೇಕು. ಉಷ್ಣತೆಯ ವ್ಯತ್ಯಾಸವಾಗದಂತೆ ಕಾಪಾಡಬೇಕು. ಆದರೆ ಬೀದಿನಾಯಿ? ಅದು ಸಿಕ್ಕಿದ್ದನ್ನು ತಿನ್ನುತ್ತದೆ! ಜಾಗ ಸಿಕ್ಕಲ್ಲಿ ಮಲಗುತ್ತದೆ! ಹೊಡೆದರೆ ಹೊಡೆಸಿಕೊಳ್ಳುತ್ತದೆ, ಮಳೆಯಲ್ಲಿ ತೋಯಿಸಿಕೊಳ್ಳುತ್ತದೆ. ಬೀದಿನಾಯಿಗೆ ಹೀಗೆ ಯಾವ ಪರಿಸ್ಥಿತಿಯನ್ನೂ ಎದುರಿಸುವ ಸಾಮರ್ಥ್ಯ ಇದೆ ಎಂಬ ಕಾರಣಕ್ಕೇ ರಷಿಯಾದವರು ಒಂದು ಬೀದಿನಾಯಿಯನ್ನು ತಂದು ಲೈಕಾ ಎಂದು ಹೆಸರಿಟ್ಟು ಅದನ್ನು ರಾಕೆಟ್‌ನಲ್ಲಿಟ್ಟು ಆಕಾಶಕ್ಕೆ ಹಾರಿಸಿದರು.”

“ಈ ಕಥೆ ಗೊತ್ತೇ ಇರಲಿಲ್ಲ ನನಗೆ ಮಾಮ!” ಎಂದಳು ಸಾನ್ವಿ. ಇದೆಲ್ಲ ದೊಡ್ಡ ಸಂಗತಿಗಳ ಸಹವಾಸವೇ ತನಗೆ ಬೇಡವೆಂಬಂತೆ ಪ್ಲುಟೋ ಅಲ್ಲೇ ಅವರಿಬ್ಬರ ನಡುವೆ ಮಲಗಿಕೊಂಡು ಒಂದು ನಿದ್ದೆ ತೆಗೆದ.

– ೫ –

ಇಷ್ಟು ಹೊತ್ತು ಪ್ಲುಟೋನ ಜಾತಿ ಉಳಿದೆಲ್ಲರಿಗಿಂತ ಸ್ವಲ್ಪ ಕೆಳಗಿನದು ಎಂಬ ಬೇಸರದಲ್ಲಿದ್ದ ಸಾನ್ವಿಗೆ ಈಗ ಸಾಕಷ್ಟು ನೆಮ್ಮದಿಯಾಯಿತು. “ಪ್ಲುಟೋ! ನಿನ್ನ ತಳಿಗೂ ಒಂದು ಹೆಸರಿದೆ ಕಣೊ! ಇಂಡಿಯನ್ ಪರಿಯಾ! ಗೊತ್ತಾಯಿತಾ?” ಎಂದು ಅವನಿಗೆ ತಿಳಿಹೇಳಿದಳು. ಪ್ಲುಟೋ ಒಮ್ಮೆ ಕಿವಿ ನೆಟ್ಟಗಾಗಿಸಿ, ತಲೆಯನ್ನು ೪೫ ಡಿಗ್ರಿ ಬಲಕ್ಕೆ ತಿರುಗಿಸಿ ಅವಳ ಮಾತುಗಳನ್ನು ಅರ್ಥ ಮಾಡಿಕೊಂಡವನಂತೆ ಹ್ಞೂಗುಟ್ಟಿದ.

ನಾಯಿಗಳ ಸ್ಪರ್ಧೆಯ ಮತ್ತಷ್ಟು ಸುತ್ತುಗಳು ನಡೆಯುತ್ತಲೇ ಇದ್ದವು. ನಾಯಿಗಳ ಆರೋಗ್ಯವನ್ನು ಪರೀಕ್ಷಿಸುವ ಸುತ್ತು ನಡೆಯಿತು. ನಾಯಿಗಳು ಎಷ್ಟೆಷ್ಟು ದೈಹಿಕವಾಗಿ ಗಟ್ಟಿಯಾಗಿವೆ ಎಂಬುದರ ಪರೀಕ್ಷೆಯೂ ನಡೆಯಿತು. ಎಸೆದ ಚೆಂಡುಗಳನ್ನು ನಾಯಿಗಳು ಕಚ್ಚಿ ತಂದುಕೊಡುವ ಆಟಗಳನ್ನೂ ಆಡಿಸಲಾಯಿತು. ಈ ಸುತ್ತುಗಳಲ್ಲಿ ಶ್ವಾನಮಾಲಕರು ಹೇಳುತ್ತಿದ್ದ ಕೆಲವು ಸಂಗತಿಗಳಂತೂ ಸಾನ್ವಿಗೆ ಬಹಳ ಮಜಾ ಕೊಟ್ಟವು.

ಒಬ್ಬರೆಂದರು: “ನಮ್ಮ ಮಿಷ್ಟಿ ಮನೆಗೆ ಬಂದುಹೋಗುವ ಪ್ರತಿಯೊಬ್ಬರನ್ನೂ ಮೂಸಿನೋಡಿ ಪರಿಚಯಿಸಿಕೊಳ್ಳುತ್ತಾಳೆ” ಸಾನ್ವಿ ಅಂದುಕೊಂಡಳು: ಪ್ಲುಟೋ ಹಾಗೆಲ್ಲ ಎಲ್ಲರನ್ನೂ ಮೂಸುವುದಿಲ್ಲ. ಮನೆಗೆ ಬಂದುಹೋಗುವ ನಿತ್ಯದ ಮಂದಿಯ ಪರಿಚಯ ಅವನಿಗುಂಟೇ ಉಂಟು! ಅಷ್ಟರಮಟ್ಟಿಗೆ ಅವನ ಸ್ಮರಣೆ ಚುರುಕಾಗಿದೆ!

ಇನ್ನೊಬ್ಬರೆಂದರು: “ಮನುಷ್ಯನಿಗೆ ದಿನಕ್ಕೆ ಕನಿಷ್ಠ ಎಂಟು ತಾಸು ನಿದ್ದೆ ಬೇಕು. ನಾಯಿಯಾದರೂ ಜಿಂಜರ್ ಇದನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಾನೆ. ರಾತ್ರಿ ೧೦ಕ್ಕೆ ಮಲಗಿ ಬೆಳಗ್ಗೆ ೬ಕ್ಕೆ ಏಳುತ್ತಾನೆ.” ಸಾನ್ವಿ ತನ್ನೊಳಗೇ ಹೇಳಿಕೊಂಡಳು: “ಪ್ಲುಟೋ ರಾತ್ರಿಯಾಗುತ್ತಲೇ ಚುರುಕಾಗುತ್ತಾನೆ! ರಾತ್ರಿ ಇಡೀ ಎಚ್ಚರಿದ್ದು ಮನೆ ಕಾಯುತ್ತಾನೆ! ಅವನು ನಿದ್ದೆ ಮಾಡುವುದೇನಿದ್ದರೂ ಹಗಲು ಹೊತ್ತಿನಲ್ಲಿ. ಇದನ್ನು ನಾಯಿಯ ಸಹಜ ಸ್ವಭಾವ ಎನ್ನಬೇಕೋ ಅಥವಾ ಆರೋಗ್ಯ ಸಮಸ್ಯೆ ಎನ್ನಬೇಕೋ?” ಕೇಳೋಣವೆಂದರೆ ಮಿಲ್ಟ್ರಿ ಮಾಮ ಅಲ್ಲೆಲ್ಲೂ ಕಾಣಲಿಲ್ಲ; ಬಹುಶಃ ಅವರು ಅದಾಗಲೇ ಮನೆಗೆ ಹೊರಟುಹೋಗಿರಬೇಕು!

ಇನ್ನೊಬ್ಬರು ತಮ್ಮ ನಾಯಿಯನ್ನು ಹೊಗಳುವ ಭರದಲ್ಲಿ “ನಮ್ಮ ತೂಫಾನ್ ಅಂತೂ ಮನೆಯಿಂದ ಹೊರಗೇ ಹೋಗುವುದಿಲ್ಲ! ಅವನಿಗಿಷ್ಟದ ಟಿವಿ ಶೋ ನೋಡುತ್ತ ಮನೆಯಲ್ಲೇ ಮಲಗಿರುತ್ತಾನೆ” ಎಂದು ಹೇಳಿದಾಗಂತೂ ಸಾನ್ವಿಗೆ ನಗು ತಡೆಯಲಾಗಲಿಲ್ಲ. “ಈ ಚಂದಕ್ಕೆ ನಾಯಿಗೆ ತೂಫಾನ್ ಎಂಬ ಹೆಸರು ಬೇಕೆ! ನಿಜವಾದ ತೂಫಾನ್ ಎಂದರೆ ನಮ್ಮ ಪ್ಲುಟೋನೇ. ಕ್ಷಣಮಾತ್ರದಲ್ಲಿ ಮನೆಬೀದಿಯ ಕೊನೆಯಲ್ಲೋ ಇನ್ನೊಂದು ಬೀದಿಯ ನಡುವಿನಲ್ಲೋ ಇರುತ್ತಾನೆ. ಇನ್ನು ಬೀದಿಯ ಉಳಿದ ನಾಯಿಗಳ ಜೊತೆ ಆಡುವುದು, ಓಡುವುದೇ ಅವನ ಇಷ್ಟದ ಟಿವಿ ಕಾರ್ಯಕ್ರಮ! ನಿಜವಾದ ಟಿವಿಯ ಮುಂದೆ ಅವನು ಒಮ್ಮೆಯಾದರೂ ಸುಳಿದಾಡಿದವನೇ ಅಲ್ಲ!

ಈ ಹಲವು ಸುತ್ತುಗಳ ಸ್ಪರ್ಧೆಗಳ ನಡುವೆ ಚಹಾವಿರಾಮದಲ್ಲಿ, ಕಾಲೇಜ್ ಹುಡುಗನಂತಿದ್ದ ಹಾಗೂ ಗೋಣಿಚೀಲದಂತಿದ್ದ ಪ್ಯಾಂಟ್ ತೊಟ್ಟಿದ್ದ ಒಬ್ಬ ನರಪೇತಲ ಹುಡುಗ ಬಂದು ಸಾನ್ವಿಯ ಬಳಿ ಮಾತಾಡಿದ. ತನ್ನನ್ನು ಪರಿಚಯಿಸಿಕೊಂಡ. ಅವನ ನಾಯಿಯೋ ಗಾತ್ರದಲ್ಲಿ ಪ್ಲುಟೋನ ಅರ್ಧದಷ್ಟಿತ್ತು. ಅದನ್ನು ಅವನು ಮಗುವಿನಂತೆ ತನ್ನೆರಡೂ ಬಾಹುಗಳಿಂದ ಅವುಚಿ ಹಿಡಿದಿದ್ದ. “ಇವಳ ಹೆಸರು ಬಿಜಿಲಿ. ಇನ್‌ಸ್ಟಾಗ್ರಾಂನಲ್ಲಿ ಇವಳದೇ ಒಂದು ಖಾತೆ ಇದೆ. ಅಲ್ಲಿ ಇವಳಿಗೆ ೧ ಲಕ್ಷ ಜನ ಫಾಲೋವರ್ಸ್ ಇದಾರೆ. ನೀವೂ ಆ ಖಾತೆಯನ್ನು ಫಾಲೋ ಮಾಡಬೇಕೆಂದು ಮನವಿ ಮಾಡಲು ಬಂದೆ” ಎಂದ ಆ ಹುಡುಗ. ಇಷ್ಟು ಹೊತ್ತಿಗಾಗಲೇ ಸಾನ್ವಿಗೆ ಹೊಟ್ಟೆ ಹಸಿಯುತ್ತಿತ್ತು. ಸ್ಪರ್ಧೆಯ ವಿವಿಧ ಸುತ್ತುಗಳನ್ನು ನೋಡಿ ತಲೆಸುತ್ತೂ ಬರುವಂತಾಗಿತ್ತು. “ನನ್ನ ನಾಯಿಯನ್ನು ಫಾಲೋ ಮಾಡಿ” ಎಂದು ಹೇಳಿದ ಅವನ ಧಾರ್ಷ್ಟ್ರ್ಯದ ಮಾತಂತೂ ಸುತಾರಾಂ ಹಿಡಿಸಲಿಲ್ಲ. “ಒಂದು ಲಕ್ಷ ಫಾಲೋವರ್ಸ್! ಬಹಳ ಒಳ್ಳೆಯದು! ನನ್ನ ಪ್ಲುಟೋಗೆ ಇರುವುದು ಹೆಚ್ಚೆಂದರೆ ಹತ್ತು ಫಾಲೋವರ್ಸ್ ಅಷ್ಟೆ. ಎಲ್ಲರೂ ನಮ್ಮ ಮನೆಯ ಬೀದಿಯಲ್ಲೇ ಇರುವವರು. ವಿಶೇಷ ಏನು ಗೊತ್ತೆ? ಇವನು ಬೀದಿಗಿಳಿದರೆ ಆ ಹತ್ತೂ ಮಂದಿ ಇವನನ್ನು ಸೇರಿಕೊಳ್ಳಲು ಓಡಿಬರ್ತಾರೆ. ಅಷ್ಟು ಬಿಟ್ಟರೆ ಪ್ಲುಟೋಗೆ ಲೈಕ್ ಒತ್ತುವ ಒಬ್ಬ ಫಾಲೋವರ್ ಕೂಡ ಇಲ್ಲ!” ಎಂದುಬಿಟ್ಟಳು ಸಾನ್ವಿ ನೇರಾನೇರ. ಅಷ್ಟು ಮಾತು ಮುಗಿವಷ್ಟರಲ್ಲಿ ಆ ನರಪೇತಲ ಹುಡುಗ ಕಾಣಿಸಿಕೊಂಡಷ್ಟೇ ವೇಗವಾಗಿ ಅವಳ ಕಣ್ಣೆದುರಿನಿಂದ ಮಾಯವಾಗಿಬಿಟ್ಟ!

“ಬಾರೋ ಪ್ಲುಟೋ, ಹೋಗೋಣ ಮನೆಗೆ! ಇಲ್ಲಿದ್ದು ನೀನು ಗೆಲ್ಲುವುದು ಅಷ್ಟರಲ್ಲೇ ಇದೆ! ಅಷ್ಟಕ್ಕೂ ನೀನು ಈ ನಾಯಿಗಳ ಮಧ್ಯದಲ್ಲಿ ಗೆದ್ದು ಆಗುವುದೇನಿದೆ?” ಎಂದು ಸಾನ್ವಿ ಪ್ಲುಟೋನ ಚೈನ್ ಹಿಡಿದು ಮೈದಾನದ ಹೊರಗೆ ನಡೆದಳು. ಜೈಲಿಂದ ಹೊರಗೆ ಬರುತ್ತಿದ್ದೇನೋ ಎಂಬ ಭಾವನೆಯುಂಟಾಯಿತು ಅವಳಿಗೆ. ಅವಳಿಗಿಂತ ಮೊದಲೇ ಪ್ಲುಟೋ ಮೈದಾನದ ಆಚೆಗಿರುವ ರಸ್ತೆಗೆ ಜಿಗಿಯಲು ದೌಡಾಯಿಸುತ್ತಿದ್ದ. “ಮಿಸ್! ಸ್ಪರ್ಧೆ ಈಗ ಕೊನೆಯ ಹಂತಕ್ಕೆ ಬಂದಿದೆ! ಬಹುಮಾನ ಕೊಡುವ ಸಮಯ!” ಎಂಬ ಧ್ವನಿ ಕೇಳಿಸಿತು ಹಿಂದಿನಿಂದ. ನೋಂದಣಿ ಮಾಡಿಸುವಾಗ ದ್ವಾರದಲ್ಲಿ ಕೂತಿದ್ದ ಮನೀಶ್ ಈಗ ಸಾನ್ವಿಯನ್ನು ಕರೆಯುತ್ತ ಮಾತಾಡುತ್ತಿದ್ದ. ಆದರೆ ಸಾನ್ವಿಗೆ ಆ ಕೊನೆಯ ಹಂತದಲ್ಲೇನೂ ಆಸಕ್ತಿ ಇರಲಿಲ್ಲ. ಯಾವ್ಯಾವ ವಿಭಾಗಗಳಲ್ಲಿ ಪ್ಲುಟೋಗೆ ಬಹುಮಾನ ಬರುವುದಿಲ್ಲವೆಂಬುದು ಅವಳಿಗೆ ಸ್ಪಷ್ಟವಿತ್ತು. ಬಟ್ಟೆಯನ್ನೇ ತೊಡದ ಪ್ಲುಟೋ ವಸ್ತ್ರಧಾರಣೆಯ ಸುತ್ತಿನಲ್ಲಿ ಪ್ರಶಸ್ತಿ ತಗೊಳ್ಳುವುದು ಹೇಗೆ? ಚಿತ್ರಾನ್ನ, ಮೊಸರನ್ನ ತಿನ್ನುವ ಆತ ಶ್ವಾನಾಹಾರವನ್ನೇ ತಿನ್ನುವ ನಾಯಿಗಳ ಮಧ್ಯೆ ಯಾವ ಪ್ರಶಸ್ತಿ ಎತ್ತಿಯಾನು? ಇನ್ನು, ಟ್ರೆಡ್‌ಮಿಲ್ ಮೇಲೆ ಓಡುವ ನಾಯಿಗಳ ನಡುವೆ ಬೀದಿಬೀದಿ ಓಡಾಡುವ ಈ ನಾಯಿಯನ್ನು ಯಾರು ಪರಿಗಣಿಸುತ್ತಾರೆ! ಅವನಿಗೆ ಫಿಟ್‌ನೆಸ್ ಪ್ರಶಸ್ತಿ ಬರುವುದು ಕನಸಿನ ಮಾತು!

– ೬ –

ಸಾನ್ವಿ ಮೈದಾನದಿಂದ ಹೊರಗೆ ಬರುತ್ತಿರುವಾಗ ಅತ್ತ ಪ್ರಶಸ್ತಿ ವಿತರಣೆಯ ಕಾರ್ಯಕ್ರಮ ನಡೆಯತೊಡಗಿತು. ಉತ್ತಮ ವಸ್ತ್ರಧಾರಣೆ – ಚಿಕೂ. ಉತ್ತಮ ಗಾತ್ರ – ಗೋಲು. ಉತ್ತಮ ಬೊಗಳುವಿಕೆ – ಗುನ್‌ಗುನ್. ಉತ್ತಮ ಮೇಕಪ್ – ಗುಡಿಯಾ, ಉತ್ತಮ ಡೋಗ (ಡಾಗ್ ಯೋಗ) – ಟಫಿ… ಧ್ವನಿವರ್ಧಕದಲ್ಲಿ ಕೇಳುತ್ತಿದ್ದ ಉದ್ಘೋಷಗಳು. ಅವಕ್ಕೆ ಬೀಳುತ್ತಿದ್ದ ಜೋರಾದ ಕರತಾಡನಗಳು. ಆಹಾ.. ಊಹೂ.. ಉದ್ಗಾರಗಳು. ಕಿವಿದುಂಬುವ ವಿಷಲ್‌ಗಳು.

“ಇಲ್ಲಿ ಬಂದಿರುವ ಪ್ರತಿ ಶ್ವಾನಕ್ಕೂ ಒಂದಿಲ್ಲೊಂದು ಪ್ರಶಸ್ತಿ ಕೊಡಬೇಕೆಂದು ನಾವು ನಿರ್ಧರಿಸಿರುವುದರಿಂದ… ಇದೀಗ ಕೊನೆಯದಾಗಿ, ವಿಶೇಷ ಹಾಜರಿ ಪ್ರಶಸ್ತಿ… ಜಾತಿ ನಮೂದಾಗದ ಪ್ಲುಟೋ…

ಪ್ಲುಟೋ…

ಎಲ್ಲಿದ್ದರೂ ಬರಬೇಕು, ಪ್ಲುಟೋ….”

ಘೋಷಣೆ ಕೇಳುತ್ತಿತ್ತು.

“ಎಲ್ಲಿ, ಎಲ್ಲಿ, ಆ ಕಾಡುನಾಯಿ? ಎಲ್ಲಿ ಆ ಹುಡುಗಿ? ಎಲ್ಲಿ?” ಎಂಬ ಗುಸುಗುಸು ಪಿಸುಮಾತುಗಳು ಕೂಡ ತನ್ನ ಕಿವಿಗಳಿಗೆ ಅಪ್ಪಳಿಸುತ್ತಿರುವಂತೆ ಅನ್ನಿಸಿತು ಸಾನ್ವಿಗೆ. ಅಷ್ಟರಲ್ಲಿ ಸಾನ್ವಿ ಮೈದಾನದಿಂದ ಹೊರಗೆ ಬಂದುಬಿಟ್ಟಿದ್ದಳು. ಪ್ಲುಟೋ ಎಂದಿನಂತೆ ಮಣ್ಣಿನಲ್ಲಿ ಒಂದು ಸುತ್ತು ಹೊರಳಾಡಿ, ಮೈಯೆಲ್ಲ ದೂಳು ಮೆತ್ತಿಕೊಂಡು ಎದ್ದು ಸಾನ್ವಿಯನ್ನು ನೋಡಿದ, “ಇನ್ನೊಮ್ಮೆ ಸ್ನಾನ ಮಾಡಿಸಬೇಡ” ಎಂಬಂತೆ. ಅವಳು ನಕ್ಕಳು. “ನೀವು ನಿಮ್ಮ ಶ್ವಾನವನ್ನು ದಿನವೂ ಒಂದು ಮೈಲಿ ಕಡ್ಡಾಯವಾಗಿ ನಡೆಸಬೇಕು. ಆದರೆ ನಮ್ಮ ಪ್ಲುಟೋ ನಾವು ಹೋಗುವ ಎಲ್ಲ ಕಡೆಗಳಿಗೆ ನಮ್ಮನ್ನು ಅನುಸರಿಸಿ ನಡೆಯುತ್ತಾನೆ – ಒಂದೋ ಹತ್ತೋ ಎಷ್ಟು ಮೈಲಿಗಳೋ ಲೆಕ್ಕ ಇಟ್ಟವರಾರು!” ಎಂಬ ಮಾತನ್ನು ಆ ಮೋಮೋ ಎಂಬ ನಾಯಿಯ ಒಡತಿಗೆ ಹೇಳಬೇಕಿತ್ತು… ಅನ್ನಿಸಿತು ಸಾನ್ವಿಗೆ. ಆದರೇನಂತೆ, ಸ್ಪರ್ಧೆಯೇ ಈಗ ಮುಗಿದುಹೋಗಿದೆಯಲ್ಲ!

ಪ್ಲುಟೋ ಈ ಸ್ಪರ್ಧೆಯನ್ನೇನೂ ಬಯಸಿರಲಿಲ್ಲ. ಸ್ಪರ್ಧೆಯ ನಿಯಮಗಳೊಳಗೆ ಒಗ್ಗಿಕೊಳ್ಳಲು ತನ್ನನ್ನು ಆತ ಬದಲಾಯಿಸಿಕೊಳ್ಳಲೂ ಇಲ್ಲ. ತಮ್ಮ ಮಾನದಂಡಕ್ಕೆ ಒಪ್ಪುವುದಿಲ್ಲವೆಂದು ಪ್ಲುಟೋನನ್ನು ನಿರ್ಣಾಯಕರು ಹೊರಗಿಟ್ಟಾಗಲೂ ಅವನಿಗೇನೂ ಬೇಸರವಾದಂತೆ ಕಾಣಲಿಲ್ಲ. ಜಾತಿನಾಯಿಗಳ ಪಂಗಡದಿಂದ ಬಹಿಷ್ಕೃತನಾದರೂ ಅವನ ಬಾಲ ಈಗಲೂ ಬೀಸಣಿಗೆಯಂತೆ ಬೀಸಿಕೊಳ್ಳುತ್ತಲೇ ಇತ್ತು! “ನಿನಗೆ ಪ್ರಶಸ್ತಿ ಬೇಡ ಕಣೊ ಪ್ಲುಟೋ! ನೀನು ಈಗಾಗಲೇ ನಮ್ಮ ಮನೆಯ ಹೀರೋ!” ಎಂದಳು ಸಾನ್ವಿ ತನ್ನಷ್ಟಕ್ಕೇ.

ಯಾವ ಟ್ರೋಫಿಯ ಭಾರವೂ ಬೇಡವೆಂಬಂತೆ ಹಗುರಾಗಿ ಹಾರುತ್ತ ಪ್ಲುಟೋ ಗಾಳಿಯಲ್ಲಿ ತೇಲುತ್ತಿದ್ದ ಚಿಟ್ಟೆಯನ್ನು ಅಟ್ಟಿಸಿಕೊಂಡು ಹೋಗಿ ಬೀದಿಯ ತಿರುವಿನಲ್ಲಿ ಮರೆಯಾದ.

***

Facebook
X
WhatsApp
Print
Email