ಬಾಳಬೇಕಾದವರು ಯಾರು?  ಬದುಕಬೇಕಾದುದು ಹೇಗೆ?

ಮಕ್ಕಳು ಅಂತರ್ಜಾತೀಯ, ಅಂತರ್ಧರ್ಮೀಯ ಮದುವೆಗಳನ್ನು ಮಾಡಿಕೊಳ್ಳುವುದಕ್ಕೆ ಮುಂದಾದಾಗ ಅತ್ಯಂತ ಪ್ರೀತಿಯಿಂದಲೇ ಒಪ್ಪಿಗೆ ಕೊಟ್ಟು ಮುಂದೆ ನಿಂತು ಮದುವೆ ಮಾಡಿಸಿದ ತಾಯ್ತಂದೆಯರೂ ಸಾಕಷ್ಟು ಸಂಖ್ಯೆಯಲ್ಲಿ ಇದ್ದಾರೆ. ಕ್ರಮಗಳು ಬೇರೆ ಇರಬಹುದು, ಹಬ್ಬ–ಹರಿದಿನಗಳು ಬೇರೆ ಇರಬಹುದು, ಆದರೆ ನಾವು ಬಯಸುವುದು ನಮ್ಮ ಮಕ್ಕಳು ಸಂತೋಷವಾಗಿರಬೇಕು ಎಂಬುದನ್ನು ಮಾತ್ರ. ಒಂದು ವೇಳೆ ಅವರ ಆಯ್ಕೆಯನ್ನು ನಾವು ಒಪ್ಪದೆ ಹೋದರೆ ಅವರು ನಮ್ಮಿಂದ ದೂರವಾಗುತ್ತಾರೆ.

ಅಂತರ್ಜಾತೀಯ ಮದುವೆಗಳ ವಿಷಯ ಬಂದಾಗ ಕೆಲವೊಮ್ಮೆ ತುಂಬಾ ಯೋಚನೆಗೆ ಬೀಳುವುದಿದೆ. ನಮ್ಮ ಸಮೀಪದ ಬಂಧುಗಳಿಂದ ತೊಡಗಿ ತೀರಾ ಆಪ್ತ ಸ್ನೇಹಿತರವರೆಗೂ ಈ ಬಗೆಯ ಮದುವೆಯ ಬಂಧಗಳಿಗೆ ಕಟ್ಟುಬಿದ್ದದ್ದನ್ನು ನೋಡಿ, ಕೇಳಿ ಗೊತ್ತಿದೆ. ಎಲ್ಲ ಕಡೆಯೂ ಎಲ್ಲವೂ ಚೆನ್ನಾಗಿಯೇ ಆಗುತ್ತದೆ ಎಂದೇನೂ ಇಲ್ಲ, ಎಲ್ಲವೂ ಋಣಾತ್ಮಕವೇ ಆಗುತ್ತದೆ ಎಂದೂ ಇಲ್ಲ. ಒಂದೆರಡು ಸಣ್ಣ ಸಂಗತಿಗಳು ಮಗ್ಗುಲ ಮುಳ್ಳಾಗಿ ಹೇಗೆ ಕಾಡಬಹುದು ಎಂಬುದನ್ನು ಇಲ್ಲಿ ಉಲ್ಲೇಖಿಸುತ್ತೇನೆ.

ನಮ್ಮ ಸ್ನೇಹಿತರಿಬ್ಬರು ವಿಭಿನ್ನ ವರ್ಗಕ್ಕೆ ಸೇರಿದವರು ಮದುವೆಯಾಗುವ ನಿರ್ಧಾರ ತೆಗೆದುಕೊಂಡರು. ಸರಿ, ಅಂತರ್ಜಾತೀಯ ಮದುವೆಯಾಗಿದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಬಂಧುಗಳನ್ನು ನಿರೀಕ್ಷಿಸುವ ಸಾಧ್ಯತೆ ಇರಲಿಲ್ಲ.

ಅವರ ನಡುವಿನ ಒಪ್ಪಂದವೂ ಅದೇ ಆಗಿತ್ತು. ಹುಡುಗಿಯ ಕಡೆಯಿಂದ ಹೆಚ್ಚೆಂದರೆ ಒಂದೈವತ್ತು ಮಂದಿ, ಹುಡುಗನ ಕಡೆಯಿಂದಲೂ ಅಷ್ಟೇ ಮಂದಿಯನ್ನು ನಿರೀಕ್ಷಿಸಲಾಗಿತ್ತು. ಆದರೆ ಮದುವೆ ಹಾಲ್‌ಗೆ ಹೋದಾಗ ಹುಡುಗಿಗೆ ಅಚ್ಚರಿ ಕಾದಿತ್ತು. ಹುಡುಗನ ಕಡೆಯಿಂದ ಐನೂರಕ್ಕೂ ಹೆಚ್ಚು ಜನ ಸೇರಿದ್ದರು! ಅದನ್ನು ವರನ ಕಡೆಯ ಬೆಂಬಲ ಅಂದುಕೊಳ್ಳೋಣ. ಆದರೆ ಹುಡುಗಿಗೆ ಅದೊಂದು ರೀತಿಯ ವಚನ ಭಂಗವೇ ಅಲ್ಲವೆ? ಮನಸ್ಸಿಗೊಂದು ಕಸಿವಿಸಿ ಮದುವೆ ಮಂಟಪದಲ್ಲೇ ಮೊದಲುಗೊಂಡರೆ ಅದು ಬದುಕಿನುದ್ದಕ್ಕೂ ಚುಚ್ಚುತ್ತಲೇ ಇರುತ್ತದೆ. ಇಲ್ಲಿ ಗಮನಿಸಬೇಕಾದ ಇನ್ನೊಂದು ಅಂಶವೆAದರೆ ಹುಡುಗ/ ಹುಡುಗಿ ಪರಸ್ಪರ ಇಷ್ಟಪಟ್ಟಂತೆ, ಪ್ರೀತಿಸಿದಂತೆ ಬದುಕು ಕೇವಲ ಅವರದ್ದಿಬ್ಬರದ್ದಾಗಿರುವುದಿಲ್ಲ. ಪರಸ್ಪರರ ಬಂಧುಗಳನ್ನೂ ಗೌರವಿಸಬೇಕು, ತಮ್ಮವರೆಂದು ಸ್ವೀಕರಿಸಬೇಕು. ಜೊತೆಯಲ್ಲಿ ಬಾಳುವುದು ಇವರೀರ್ವರೇ ಎಂಬ ಭಾವವಿದ್ದರೂ ಸಮೀಪದ ಬಂಧುಗಳನ್ನು ತಿರಸ್ಕಾರದಿಂದ ಕಾಣಬಾರದಲ್ಲ! ಇತ್ತೀಚಿಗಿನ ದಿನಗಳಲ್ಲಿ ಜಾತಕ ನೋಡಿ ಹೊಂದಿಸಿ ಮಾಡಿದ ಮದುವೆಗಳೇ ಮುರಿಯುವ ಹೊತ್ತಿಗೆ ಎಷ್ಟು ಎಚ್ಚರದಿಂದಿದ್ದರೂ ಸಾಲದು.

ಇನ್ನೋರ್ವ ಗೆಳತಿಯ ಬದುಕು ಇದೇ ಕಾರಣಕ್ಕೆ ಮುಳ್ಳಿನ ಮೇಲಿನ ನಡಿಗೆಯಾಯ್ತು. ಅವಳ ಹೆತ್ತವರು ಎಲ್ಲ ಹಂತಗಳಲ್ಲೂ ಅವರ ಮನೆಯ ರೀತಿರಿವಾಜುಗಳಂತೆ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರೆ ಗಂಡನ ಮನೆಯವರಿಗೆ ಅದನ್ನು ಒಪ್ಪಿಕೊಳ್ಳುವುದು ಬಹಳ ಕಷ್ಟವಿತ್ತು. ಈ ಹುಡುಗಿಗೆ ಅತ್ತ ತವರಿನವರಿಗೂ ಹೇಳಲಾಗದು, ಇತ್ತ ಗಂಡನ ಮನೆಯವರಿಗೂ ಹೇಳಲಾಗದು. ಅವಳು ಅನುಭವಿಸಿದ ಒತ್ತಡಗಳು ಒಂದೆರಡಲ್ಲ. ಈ ಬಗೆಯ ಸನ್ನಿವೇಶಗಳು ಒಂದೇ ಸಮುದಾಯದಲ್ಲಿ ನಡೆದ ಮದುವೆಗಳಲ್ಲೂ ಇದ್ದೇ ಇರುತ್ತದೆ, ಇಲ್ಲವೆಂದಲ್ಲ. ಆದರೆ ವಿಭಿನ್ನ ಸಮುದಾಯಗಳು ಎಂದಾದಾಗ ಅದು ತೆಗೆದುಕೊಳ್ಳುವ ಸ್ವರೂಪ ಬೇರೆಯಾಗುತ್ತದೆ. ಮಾತುಮಾತಿಗೂ ಜಾತಿಯ ಪ್ರಸ್ತಾಪ ಬಂದರೆ ಅದರಿಂದ ಆಗುವ ನೋವು ಹೆಚ್ಚು ಆಳವಾದ ಗಾಯಗಳನ್ನು ಉಂಟುಮಾಡುತ್ತದೆ. ಇನ್ನೂ ಒಂದು ಕಡೆ ಮೇಲ್ವರ್ಗದ (ಹಾಗೆಂದು ಸಮಾಜ ಗ್ರಹಿಸುವ) ಹೆಣ್ಣುಮಗಳು ತಾನು ಮದುವೆಯಾದ ಹುಡುಗನ ಕಡೆಯವರು ಯಾರೇ ಬಂದರೂ, ಅವರು ತಮ್ಮ ಮನೆಯ ಸೋಫಾದ ಮೇಲೆ ಕುಳಿತರೂ, ಬೆಡ್ ಮೇಲೆ ಕುಳಿತರೂ ಇರಿಸುಮುರಿಸು ಅನುಭವಿಸುತ್ತಿದ್ದಳು. ಆಡುವಂತಿಲ್ಲ, ಅನುಭವಿಸುವಂತಿಲ್ಲ. ಇಬ್ಬರ ನಡುವೆ ವೈಮನಸ್ಯ ಬರುವುದಕ್ಕೆ ಇದೇ ಸಾಕಲ್ಲ? ಒಂದೇ ಸಮುದಾಯದವರ ನಡುವಿನ ಮದುವೆಯೇ ಆದರೂ ಇಂತಹ ವಿಷಯಗಳಿಗೆ ಬಂದಾಗ ಅನಗತ್ಯ ಕಸಿವಿಸಿಗಳನ್ನು ತುಂಬಿಕೊಳ್ಳುವವರು ಇಲ್ಲದಿಲ್ಲ.

ಗಂಡ-ಹೆಂಡತಿಯರ ನಡುವಿನ ಈ ಬಗೆಯ ಒತ್ತಡಗಳು ಒಂದೆಡೆಯಾದರೆ ಮಕ್ಕಳಿಗೆ ಉಂಟಾಗುವ ಸಮಸ್ಯೆ ಇನ್ನೊಂದು ಬಗೆಯದ್ದು. ಅವರಿಗೆ ತಮ್ಮ ಅಸ್ತಿತ್ವದ ಪ್ರಶ್ನೆ. ನಮ್ಮ ಸರಕಾರದ ಎಲ್ಲ ದಾಖಲೆಗಳಿಗೂ ಜಾತಿಯ ಕಾಲಂ ತುಂಬುವುದು ಕಡ್ಡಾಯವೇ ಹೌದು. ಹಾಗಿರುವಾಗ ಅಂತರ್ಜಾತೀಯ ಪೋಷಕರ ಮಕ್ಕಳು ಉಲ್ಲೇಖಿಸಬೇಕಾದ ಜಾತಿ ಯಾವುದು? ಈ ಪ್ರಶ್ನೆಗೆ ತಂದೆಯ ಜಾತಿ ಎಂಬುದೇ ಸರಿ, ಹೌದಲ್ಲ? ಸರಕಾರ ಹಿಂದೆ ಜಾತಿಗಣತಿ ಮಾಡುವಾಗಲೂ ಇದೇ ಸೂಚನೆಯನ್ನು ನೀಡಿತ್ತು. ಇದು ಎಷ್ಟರಮಟ್ಟಿಗೆ ಸಮಂಜಸ? ಜಾತಿವ್ಯವಸ್ಥೆಯನ್ನು ತಳಮಟ್ಟದಿಂದ ಕಿತ್ತೆಸೆಯಬೇಕಾದರೆ ಅಂತರ್ಜಾತೀಯ ಮದುವೆಗಳಿಂದ ಸಾಧ್ಯ ಎಂಬುದು ಅಲ್ಲಿಗೆ ಸುಳ್ಳು ಎಂದಾಯಿತಲ್ಲ? ಮಕ್ಕಳಿಗಾದರೂ ತಾವು ಅನುಸರಿಸಬೇಕಾದ ಆಚಾರ-ವಿಚಾರಗಳು ಗೊಂದಲಮಯವೇ ಆಗುತ್ತದೆ. ಬದುಕಿನ ಎಲ್ಲ ಹಂತದಲ್ಲೂ ಐಡೆಂಟಿಟಿಯ ಪ್ರಶ್ನೆಗಳು ಅವರನ್ನು ಕಾಡುತ್ತವೆ. ಇದನ್ನು ನಾನು ಕಲ್ಪಿಸಿ ಹೇಳುತ್ತಿರುವುದಲ್ಲ. ಎರಡು ವಿಭಿನ್ನ ಆಚರಣೆಗಳ ದಂಪತಿಗಳ ಮಕ್ಕಳು ಸ್ವತಃ ಆಡಿದ ಮಾತುಗಳು ಇವು. ಮುಂದೆ ಅವರ ಮಕ್ಕಳ ಮದುವೆಯವರೆಗೂ ಈ ತಾಕಲಾಟಗಳು ಮುಂದುವರಿದೇ ಇರುತ್ತವೆ. ಇವರಂತೆ ಅವರೂ ಸ್ವ-ಆಯ್ಕೆಯ ಮದುವೆಗೆ ಮುಂದಾದರೆ ಪರವಾಗಿಲ್ಲ, ತಾವು ಹುಡುಕಿ ಮಾಡಬೇಕು ಎನ್ನುವಾಗ ಯಾವ ಕಡೆಗೆ ಕೊಡಬೇಕು ಎಂಬುದು ಕಷ್ಟ ಎನ್ನುತ್ತಾರೆ ಅವರು. ಒಂದು ಪುಟ್ಟ ಬದುಕಿಗೆ ಎಷ್ಟೆಲ್ಲ ಒದ್ದಾಟಗಳು!

ಮಕ್ಕಳು ಅಂತರ್ಜಾತೀಯ, ಅಂತರ್ಧರ್ಮೀಯ ಮದುವೆಗಳನ್ನು ಮಾಡಿಕೊಳ್ಳುವುದಕ್ಕೆ ಮುಂದಾದಾಗ ಅತ್ಯಂತ ಪ್ರೀತಿಯಿಂದಲೇ ಒಪ್ಪಿಗೆ ಕೊಟ್ಟು ಮುಂದೆ ನಿಂತು ಮದುವೆ ಮಾಡಿಸಿದ ತಾಯ್ತಂದೆಯರೂ ಸಾಕಷ್ಟು ಸಂಖ್ಯೆಯಲ್ಲಿ ಇದ್ದಾರೆ. ಕ್ರಮಗಳು ಬೇರೆ ಇರಬಹುದು, ಹಬ್ಬ-ಹರಿದಿನಗಳು ಬೇರೆ ಇರಬಹುದು, ಆದರೆ ನಾವು ಬಯಸುವುದು ನಮ್ಮ ಮಕ್ಕಳು ಸಂತೋಷವಾಗಿರಬೇಕು ಎಂಬುದನ್ನು ಮಾತ್ರ. ಒಂದು ವೇಳೆ ಅವರ ಆಯ್ಕೆಯನ್ನುನಾವು ಒಪ್ಪದೆ ಹೋದರೆ ಅವರು ನಮ್ಮಿಂದ ದೂರವಾಗುತ್ತಾರೆ. ಬದುಕನ್ನು ಮುಗಿಸಿಕೊಳ್ಳುವ ನಿರ್ಧಾರ ಮಾಡಿದರೆ ಶಾಶ್ವತವಾಗಿ ಅವರನ್ನು ಕಳೆದುಕೊಳ್ಳುತ್ತೇವೆ. ಅದಕ್ಕಿಂತ ಮಕ್ಕಳು ನಮ್ಮೆದುರು ಖುಷಿಯಾಗಿ ಇದ್ದಾರೆ, ನಮ್ಮನ್ನು ನೋಡಿಕೊಳ್ಳುತ್ತಾರೆ ಎಂಬುದು ಮಾತ್ರ ನಮಗೆ ಮುಖ್ಯ. ಮತ್ತೆ ಸಮಾಜ ನಾಲ್ಕಾರು ದಿನ ಏನಾದರೂ ಹೇಳಬಹುದು. ಮತ್ತೆ ಹೊಸ ವಿಷಯ ಸಿಗುವಾಗ ಇದನ್ನು ಮರೆಯುತ್ತಾರೆ. ಯಾರೋ ಮೂರನೆಯವರಿಗೆ ಬೇಕಾಗಿ ನಮ್ಮ ಬದುಕನ್ನು ಬಲಿಕೊಡುವುದು ಎಷ್ಟರಮಟ್ಟಿಗೆ ಸರಿಯಾದೀತು? ಅಷ್ಟಕ್ಕೂ ಮದುವೆಯೆಂಬ  ಬಂಧದಲ್ಲಿ ಬೇರೆ ಎಲ್ಲರಿಗಿಂತಲೂ ಅವರೀರ್ವರಿಗೆ  ಹೊಂದಾಣಿಕೆ ಬರುವುದೇ ಮುಖ್ಯ. ಬಲವಂತವಾಗಿ ಅವರು ಇಷ್ಟಪಟ್ಟವರನ್ನು ದೂರ ಮಾಡಿ ಮತ್ತಾರಿಗೋ ಮದುವೆ ಮಾಡಿಸಿದರೆ ನಾಲ್ಕು ಮಂದಿಯ ಮನಸ್ಸು ಒಡೆದುಹೋಗುತ್ತದೆ. ಬಲವಂತಕ್ಕೆ ಬೇರೆಯವರನ್ನು ಮದುವೆಯಾಗಲು ಒಪ್ಪಿದರೂ ಅವರನ್ನು ಚೆನ್ನಾಗಿ ನೋಡಿಕೊಂಡಾರು ಎನ್ನುವ ಭರವಸೆಯೇನು…? ಎನ್ನುವುದು ಅವರ ವಾದ. ಒಪ್ಪತಕ್ಕದ್ದೇ.

ಒಟ್ಟಿನಲ್ಲಿ ಹೇಳುವುದಿಷ್ಟೆ: ಮದುವೆಯೆಂಬುದು ಯಶಸ್ವಿ ಬದುಕಿನ ಮೆಟ್ಟಿಲಾಗಬೇಕಾದರೆ ಮನಸ್ಸುಗಳು ಮಧುರವಾಗಿರಬೇಕು. ಅದು ಬ್ರಹ್ಮಗಂಟು ಹೌದು ಎಂಬುದೇ ನಿಜವಾದರೆ, ಸ್ವರ್ಗದಲ್ಲೇ ನಿಗದಿಯಾಗಿರುವುದು ಹೌದಾದರೆ ಅದನ್ನು ಯಾರೂ ತಪ್ಪಿಸಬಾರದು. ಆದರೆ ಮದುವೆಯ ವಿಚಾರದಲ್ಲಿ ಮಕ್ಕಳೂ ಎಚ್ಚರಿಕೆಯ ನಿರ್ಧಾರವನ್ನು ತೆಗೆದುಕೊಳ್ಳಬೇಕು. ಪ್ರೇಮಪ್ರಣಯದ ಹೆಸರಿನಲ್ಲಿ

ಪಾಶ್ಚಾತ್ಯ ಸಂಸ್ಕೃತಿಯನ್ನು ಅನುಸರಿಸಹೊರಟರೆ ಬದುಕು ಮುಳ್ಳಾದೀತು. ಮದುವೆಯೆಂದರೆ ಕೇವಲ ಮನೋದೈಹಿಕ ಸಂತೋಷಕ್ಕಾಗಿ ಇರುವುದಲ್ಲ, ಅದು ಸಮಾಜಕ್ಕೆನಾವು ತೋರುವ ಬದ್ಧತೆಯೂ ಹೌದು. ಪರಸ್ಪರರ ಮನೆಮಂದಿಯೂ ಒಪ್ಪಿ ಆಗುವಂತಾದರೆ, ಎಲ್ಲರೂನೆಮ್ಮದಿಯಿಂದಲೇ ಬಾಳಬಹುದು. ಆಧುನಿಕ ಜಗತ್ತಿನಲ್ಲಿ ಜನರು ಮೊದಲಿಗಿಂತ ಹೆಚ್ಚು ವಿಶಾಲಹೃದಯದಿಂದ ಅಂತರ ಜಾತೀಯ ಮದುವೆಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ ಎಂಬುದು ನಿಜವೇ. ಆದರೆ ಒಂದೆಡೆ ಪ್ರೀತಿಯ ಹೆಸರಿನಲ್ಲಿ ಮತಾಂತರದ ಕೆಲಸ ನಡೆಯುತ್ತಿರುವುದರ ಬಗ್ಗೆಯೂ ಯುವಜನಾಂಗಕ್ಕೆ ಎಚ್ಚರ ಬೇಕು. ಮದುವೆಯೆಂದರೆ ಒಂದೆರಡು ದಿನಗಳ ಬಂಧವಲ್ಲ. ಅದು ಜೀವನಪರ್ಯಂತ ಪರಸ್ಪರರೊಂದಿಗೆ ಅವಿನಾಭಾವ ಸಂಬಂಧದಿಂದ ಬಾಳುವುದಕ್ಕಿರುವ ಹೊಣೆಗಾರಿಕೆ. ಜವಾಬ್ದಾರಿಯುತವಾಗಿ ನಡೆದುಕೊಂಡರೆ ಬದುಕು ಸುಗಮವಾಗುತ್ತದೆ. ಇಲ್ಲವೇ, ಅಕಾಲದಲ್ಲಿ ಅಂತ್ಯ ಕಾಣುತ್ತದೆ.

ಎಲ್ಲದಕ್ಕಿಂತ ಹೆಚ್ಚು ಅಗತ್ಯವಿರುವುದು ಮಾನವೀಯ ಮೌಲ್ಯಗಳೊಂದಿಗೆ ಬದುಕುವುದು. ಮಕ್ಕಳು ಇಷ್ಟಪಟ್ಟವರನ್ನು ಕೊಂದು, ಮಕ್ಕಳನ್ನು ಕೊಂದು ಯಾರೂ ಸುಖವಾಗಿ ಬದುಕಲು ಸಾಧ್ಯವಿಲ್ಲ. ಅವರವರ ಬದುಕು ಅವರವರ ಇಷ್ಟ ಎಂದು ಬದುಕಲಾಗದು. ಆದರೆ ಜಗತ್ತು ವಿಶಾಲವಾಗಿದೆ ಎಂಬುದನ್ನೂ ಮರೆಯಬಾರದು.

***

Facebook
X
WhatsApp
Print
Email
Leave A Reply