ಪ್ರತಿಭಾನ್ವಿತನಾದ ಕವಿಗೆ ಸಾಕಷ್ಟು ಮನ್ನಣೆ ಪುರಸ್ಕಾರಗಳು ದೊರೆತುಬಿಟ್ಟರೆ ಉಳಿದ ಕವಿಗಳಿಗೆ ಸಹಿಸುವುದಕ್ಕೆ ಕಷ್ಟವಾಗುತ್ತದೆ. ತಾಮಸಿಕವಾದ ಮಾತ್ಸರ್ಯ ಬೆಳೆಯುತ್ತದೆ. ಹಾಗಾಗಿ ಆ ಕವಿಯನ್ನು ಹೇಗಾದರೂ ನಾಲ್ಕು ಜನರೆದುರು ಅವಮಾನಿಸಬೇಕು ಎಂದು ಆಲೋಚಿಸುತ್ತಲೇ ಇರುತ್ತಾರೆ. ಇಂತಹ ಕೆಲವು ಕಥೆಗಳು ಕಾಳಿದಾಸನನ್ನು ಕುರಿತೂ ಹುಟ್ಟಿಕೊಂಡಿವೆ.
ಮಾತ್ಸರ್ಯ ಎಂಬುದು ಎಂತೆಂತಹವರನ್ನೂ ಬಿಟ್ಟಿಲ್ಲ. ಸಂತೋಷದಿಂದ ಇರುವವರನ್ನು ಕಂಡು ಹೊಟ್ಟೆಕಿಚ್ಚನ್ನು ಪಡುವವರು ಅದೆಷ್ಟು ಜನ ಜಗತ್ತಿನಲ್ಲಿ ಕಾಣಿಸುವುದಿಲ್ಲ. ಒಂದು ಪ್ರಸಿದ್ಧವಾದ ಸುಭಾಷಿತ ಹೀಗಿದೆ:
ದೃಷ್ಟ್ವಾ ಯತಿರ್ಯತಿಂ ಸದ್ಯೋ ವೈದ್ಯೋ ವೈದ್ಯಂ
ನಟಂ ನಟಃ|
ಯಾಚಕೋ ಯಾಚಕಂ ದೃಷ್ಟ್ವಾ ಶ್ವಾನವದ್
ಗುರ್ಗುರಾಯತೇ||
ಸಂನ್ಯಾಸಿಗಳು, ವೈದ್ಯರು, ನಟರು, ಭಿಕ್ಷುಕರು ಇವರುಗಳೆಲ್ಲರೂ ತಮ್ಮದೇ ವೃತ್ತಿಯ ಇನ್ನೊಬ್ಬರನ್ನು ಕಂಡಾಗ, ಒಂದು ನಾಯಿ ಇನ್ನೊಂದು ನಾಯಿಯನ್ನು ನೋಡಿ ಗುರುಗುಟ್ಟುವಂತೆ ಮಾಡುತ್ತಾರೆ. ಎಂದರೆ ಹೊಟ್ಟೆಕಿಚ್ಚು ಸಂನ್ಯಾಸಿಗಳನ್ನೂ ಬಿಟ್ಟಿಲ್ಲ, ಭಿಕ್ಷುಕರನ್ನೂ ಬಿಟ್ಟಿಲ್ಲ ಎಂದಾಯಿತು. ಈರ್ಷ್ಯೆಯಿಂದ ಇನ್ನೊಬ್ಬರ ಏಳ್ಗೆಯನ್ನು ಸಹಿಸದೆ ಇರುವುದು ಸಮಾನವೃತ್ತಿಯಲ್ಲಿ ಇರುವವರೆಲ್ಲರಲ್ಲೂ ಕಂಡೇ ಕಾಣಿಸುತ್ತದೆ. ಎಲ್ಲಿಯೋ ಕೆಲವರು ಈ ಮಾತ್ಸರ್ಯವನ್ನು ಗೆದ್ದಂತಹವರು ಬೆರಳೆಣಿಕೆಯಷ್ಟು ಜನ ಮಹನೀಯರು ಸಿಗಬಹುದು.
ಕವಿಗಳಲ್ಲಿ ಮಾತ್ಸರ್ಯ ಹುಟ್ಟುವುದೂ ಇನ್ನೂ ಸಹಜವೇ ಆಗಿದೆ. ಎಲ್ಲ ಕವಿಗಳ ಪ್ರತಿಭೆಯೂ ಒಂದೇ ತರಹ ಇರುವುದಿಲ್ಲ. ನಿಸರ್ಗಸಹಜವಾದ ಪ್ರತಿಭೆಯಲ್ಲಿ ತಾರತಮ್ಯ ಇದ್ದೇ ಇರುತ್ತದೆ. ಆ ಕಾರಣದಿಂದ ಒಬ್ಬೊಬ್ಬ ಕವಿಯ ರಚನೆಯೂ ಅವರವರ ಮನೋಧರ್ಮಕ್ಕೆ ತಕ್ಕಂತೆ, ಅವರ ಪ್ರತಿಭೆಯಲ್ಲಿ ಪರಿಪಾಕವನ್ನು ಪಡೆದು ಪದ್ಯವಾಗಿ ಎರಕವಾಗಿರುತ್ತದೆ. ಒಬ್ಬೊಬ್ಬರ ನಯ, ಹದ, ಪದಪಾಕ, ಶಬ್ದಶಯ್ಯೆ, ಶೈಲಿ ಎಲ್ಲವೂ ಒಂದೊಂದು ತರಹ. ಆ ಕಾರಣ ತಮಗಿಂತಲೂ ಚೆನ್ನಾಗಿ ಬರೆಯುವ ಕವಿಗಳನ್ನು ಕಂಡರೆ ಹೊಟ್ಟೆಕಿಚ್ಚಾಗುವುದು ಸಹಜ. ಆದರೆ ಈ ಮಾತ್ಸರ್ಯದಲ್ಲಿ ಎರಡು ವಿಧ. “ಅಯ್ಯೋ, ಈ ಕವಿ ಅದೆಷ್ಟು ಚೆನ್ನಾಗಿ ಬರೆದುಬಿಟ್ಟಿದ್ದಾನೆ! ನನಗೆ ಇವನ ತರಹ ಬರೆಯಲು ಆಗುವುದಿಲ್ಲವಲ್ಲಾ. ಇವನು ನಿಜಕ್ಕೂ ಮಹಾಕವಿಯೇ ಸರಿ” ಎಂದುಕೊಂಡು ಆ ಕವಿಯನ್ನು ಮೆಚ್ಚಿಕೊಳ್ಳುವಂತಹದ್ದು ಮೊದಲನೆಯ ಸಾತ್ತಿ÷್ವಕವಾದ ಮಾತ್ಸರ್ಯ. “ಅಯ್ಯೋ! ಈ ಕವಿ ಅದೆಷ್ಟು ಚೆನ್ನಾಗಿ ಬರೆದುಬಿಟ್ಟಿದ್ದಾನೆ. ಎಲ್ಲರೂ ಅವನನ್ನೇ ಮೆಚ್ಚಿಕೊಳ್ಳುತ್ತಾರಲ್ಲಾ. ನಾನು ಬರೆದದ್ದನ್ನು ಕೇಳುವವರೇ ಇಲ್ಲವಲ್ಲ. ಇವನು ಇರುವಷ್ಟು ದಿನ ನನಗೆ ಬೆಳೆಯಲು ಆಗುವುದಿಲ್ಲ” ಎಂದು ಹಗೆಯನ್ನು ಸಾಧಿಸಲು ಹೊರಡುವುದು ಎರಡನೆಯದಾದ ತಾಮಸಿಕವಾದ ಮಾತ್ಸರ್ಯ.
ಪ್ರತಿಭಾನ್ವಿತನಾದ ಕವಿಗೆ ಸಾಕಷ್ಟು ಮನ್ನಣೆ ಪುರಸ್ಕಾರಗಳು ದೊರೆತುಬಿಟ್ಟರೆ ಉಳಿದ ಕವಿಗಳಿಗೆ ಸಹಿಸುವುದಕ್ಕೆ ಕಷ್ಟವಾಗುತ್ತದೆ. ತಾಮಸಿಕವಾದ ಮಾತ್ಸರ್ಯ ಬೆಳೆಯುತ್ತದೆ. ಹಾಗಾಗಿ ಆ ಕವಿಯನ್ನು ಹೇಗಾದರೂ ನಾಲ್ಕು ಜನರೆದುರು ಅವಮಾನಿಸಬೇಕು ಎಂದು ಆಲೋಚಿಸುತ್ತಲೇ ಇರುತ್ತಾರೆ. ಇಂತಹ ಕೆಲವು ಕಥೆಗಳು ಕಾಳಿದಾಸನನ್ನು ಕುರಿತೂ ಹುಟ್ಟಿಕೊಂಡಿವೆ.
ಕಾಳಿದಾಸನ ಗುರುಗಳು
ಒಬ್ಬ ಬಡವನಿಗೆ ಹೇಗಾದರೂ ತಾನೂ ರಾಜನಿಂದ ಸತ್ಕಾರವನ್ನು ಪಡೆಯಬೇಕೆಂದು ಬಹಳ ಆಸೆಯಾಯಿತು. ಆದರೆ ಅವನು ಪಂಡಿತನಲ್ಲ. ಕವಿಯಂತೂ ಅಲ್ಲವೇ ಅಲ್ಲ. ರಾಜನ ಬಳಿಯಲ್ಲಿ ಸತ್ಕಾರವನ್ನು ಪಡೆಯಲು ಬೇಕಾದ ಯಾವ ಅರ್ಹತೆಯೂ ಇಲ್ಲ. ಆದರೂ ಆಸೆ ಬೆಟ್ಟದಷ್ಟಿದೆ. ಅಂತಹವನು ಹೇಗೋ ಭೋಜರಾಜನ ಆಸ್ಥಾನದಲ್ಲಿದ್ದ ಪಂಡಿತನೊಬ್ಬನನ್ನು ಗುಟ್ಟಾಗಿ ಭೆಟ್ಟಿಯಾದ. ಅವನಲ್ಲಿ ತನ್ನ ಆಸೆಯನ್ನು ಬಿನ್ನವಿಸಿಕೊಂಡ, “ಅಯ್ಯಾ, ಪಂಡಿತರೇ! ನಾನು ಬಹಳ ಬಡವ. ಏನಾದರೂ ಸಹಾಯ ದೊರೆಯಬಹುದು ಎಂದುಕೊಂಡು ಬಂದಿದ್ದೇನೆ. ಆದರೆ ನನಗೆ ಯಾವ ವಿದ್ಯೆಯಲ್ಲಿಯೂ ಪ್ರವೇಶವಿಲ್ಲ. ಹೇಗಾದರೂ ಮಾಡಿ ನನಗೆ ರಾಜಸತ್ಕಾರ ದೊರೆಯುವಂತೆ ಮಾಡಿ” ಎಂದು ಬೇಡಿಕೊಂಡ. ಆ ಪಂಡಿತನಿಗೆ ಕಾಳಿದಾಸನ ಮೇಲೆ ಮಾತ್ಸರ್ಯ. ಹೇಗಾದರೂ ಕಾಳಿದಾಸನನ್ನು ಪೇಚಿಗೆ ಸಿಕ್ಕಿಸಬೇಕೆಂದುಕೊಂಡು ಕಾಯುತ್ತಿದ್ದವನಿಗೆ ಹುಡುಕುತ್ತಿದ್ದ ಬಳ್ಳಿ ಕಾಲಿಗೆ ತೊಡರಿದಂತಾಯಿತು.
“ಅಯ್ಯಾ ಬ್ರಾಹ್ಮಣನೇ, ನೀನು ಏನೇ ಮಾಡಿದರೂ ಸಭೆಯಲ್ಲಿ ಬಂದು ಮಾತನಾಡಿ, ಒಳ್ಳೆಯ ಪದ್ಯವನ್ನು ಹೇಳಿ ಭೋಜರಾಜನಿಂದ ಸಂಮಾನವನ್ನು ಪಡೆಯಲಾರೆ. ಆದಕಾರಣ ನಾನೊಂದು ಉಪಾಯವನ್ನು ಹೇಳುತ್ತೇನೆ ಕೇಳು. ನಿನ್ನ ಜೊತೆ ನಾಲ್ಕು ಜನ ಹಿಂಬಾಲಕರನ್ನು ಕಳಿಸುತ್ತೇನೆ. ನೀನು ಒಬ್ಬ ಸಂನ್ಯಾಸಿಯ ತರಹ ಕಾವಿ ಬಟ್ಟೆಯನ್ನು ತೊಟ್ಟುಕೊಂಡು ಪಟ್ಟಣದಲ್ಲಿ ಸಂಚರಿಸುತ್ತಿರು. ಯಾರಾದರೂ ವಿಚಾರಿಸಿದರೆ ‘ನಾನು ಕಾಳಿದಾಸನ ಗುರು’ ಎಂದು ಹೇಳಿಕೋ. ನಿನ್ನ ಜೊತೆಯಲ್ಲಿರುವ ಶಿಷ್ಯರೂ ಅದನ್ನೇ ಹೇಳುತ್ತಾರೆ. ಆಗ ಮಹಾರಾಜ ನಿನಗೆ ಕಾಳಿದಾಸನಿಗಿಂತಲೂ ಹೆಚ್ಚಿನ ಗೌರವ-ಸಂಮಾನಗಳನ್ನು ಮಾಡಿ ಕಳಿಸುತ್ತಾನೆ” ಎಂದು ಹೇಳಿದ. ಆ ಮೂಢನಿಗೂ ಇದು ಬಹಳ ಸುಲಭವಾದ ಉಪಾಯವೆಂದೆನಿಸಿತು.
ಆ ದಿನವೇ ಅವನೊಂದು ಕಾವಿಯ ಬಟ್ಟೆಯನ್ನು ತೊಟ್ಟುಕೊಂಡು, ತಲೆಯನ್ನು ಬೋಳಿಸಿಕೊಂಡು, ಕೈಯಲ್ಲಿ ದಂಡ-ಕಮಂಡಲುಗಳನ್ನು ಹಿಡಿದುಕೊಂಡು ಸಿದ್ಧನಾದ. ಅವನ ಹಿಂದೆ ನಾಲ್ಕು ಜನ ಶಿಷ್ಯಂದಿರೂ ಆ ಪಂಡಿತನ ಮಾತಿನಂತೆ ಬಂದು ಸೇರಿಕೊಂಡರು. ಈ ಗುಂಪು ನಗರದಲ್ಲೆಲ್ಲ ಸಂಚರಿಸತೊಡಗಿತು. ಎಲ್ಲರಿಗೂ ಇವರು ಯಾರೆಂಬ ಕುತೂಹಲ. ಪ್ರಶ್ನೆ ಕೇಳಿದವರಿಗೆಲ್ಲ “ಕಾಳಿದಾಸನ ಗುರುಗಳು” ಎಂಬ ಉತ್ತರ ಸಿಗತೊಡಗಿತು. ಕೆಲವೇ ದಿನಗಳಲ್ಲಿ ಈ ಸುದ್ದಿ ಕಾಳಿದಾಸನಿಗೂ ಭೋಜರಾಜನಿಗೂ ತಲಪಿತು. ಭೋಜರಾನಿಗೂ, “ನಮ್ಮ ಆಸ್ಥಾನದಲ್ಲಿ ಕಾಳಿದಾಸನಂತಹವರು ಇನ್ನೊಬ್ಬರಿಲ್ಲ. ಈಗ ಸಾಕ್ಷಾತ್ ಕಾಳಿದಾಸನ ಗುರುಗಳೇ ಬಂದಿದ್ದಾರೆ ಎಂದಾದರೆ, ಅವರ ಪಾಂಡಿತ್ಯ-ಪ್ರತಿಭೆಗಳು ಹೇಗಿರಬಹುದು” ಎಂದೆನಿಸತೊಡಗಿತು. ಕಾಳಿದಾಸನ ಬಳಿಯಲ್ಲೇ, “ಮಿತ್ರ! ಕಾಳಿದಾಸ! ನಿನ್ನ ಗುರುಗಳು ನಗರಕ್ಕೆ ಬಂದಿದ್ದಾರಂತೆ. ನಮಗೆಲ್ಲ ಅವರ ದರ್ಶನವನ್ನು ಯಾವಾಗ ಮಾಡಿಸುತ್ತೀಯಾ?” ಎಂದು ಕೇಳಿದ. ಕಾಳಿದಾಸನೂ ಇಲ್ಲೇನೋ ಕಪಟವಿದೆ ಎಂದು ಅರಿತುಕೊಂಡಿದ್ದ ಕಾರಣ, ಅದನ್ನು ಸ್ಪಷ್ಟಪಡಿಸಿಕೊಂಡು ಬಗೆಹರಿಸಿಕೊಂಡು ಆಮೇಲೆಯೇ ಭೋಜರಾಜನನ್ನು ಮಾತನಾಡಿಸಬೇಕು ಎಂದುಕೊಂಡು, “ಆದಷ್ಟು ಶೀಘ್ರದಲ್ಲಿಯೇ ಪ್ರಭು. ಅವರ ಬಿಡುವಿನ ಸಮಯವನ್ನು ಕೇಳಿಕೊಂಡು ಬಂದು ತಮಗೆ ಅರಿಕೆ ಮಾಡಿಕೊಳ್ಳುತ್ತೇನೆ” ಎಂದ.
ಆ ದಿನವೇ ಈ ಕಪಟ ಸಂನ್ಯಾಸಿಯ ಬಳಿಗೆ ಹೋದ ಕಾಳಿದಾಸ, “ಯಾರು ನೀವು?” ಎಂದ. ಆ ಬಡವ, “ಕಾಳಿದಾಸನ ಗುರುಗಳು” ಎಂದ. ಕಾಳಿದಾಸ, “ಕಾಳಿದಾಸನ ಗುರುಗಳು ಎನ್ನುತ್ತೀರಲ್ಲ. ಕಾಳಿದಾಸನನ್ನು ನೋಡಿದ್ದೀರಾ?” ಎಂದು ಕೇಳಿದ. ಆ ಮೂಢವಿಪ್ರÀ ಗಾಬರಿಗೊಂಡ. ತಾನೇ ಕಾಳಿದಾಸ ಎಂದು ಹೇಳಿದ ಬಳಿಕವಂತೂ ಕೈಕಾಲುಗಳೆಲ್ಲ ನಡುಗಲು ಪ್ರಾರಂಭವಾಯಿತು. ತನ್ನ ಕಥೆ ಮುಗಿಯಿತು ಎಂದು ಥರಥರನೆ ನಡುಗುತ್ತ ಕಾಳಿದಾಸನ ಕಾಲಿಗೆ ಬಿದ್ದ. ಕಾಳಿದಾಸನಿಗೆ ನಡೆದದ್ದನ್ನೆಲ್ಲವನ್ನೂ ವಿವರಿಸಿದ. ಅವನನ್ನು ಸಂತವಿಸಿ ಕಾಳಿದಾಸ, “ಆಗಲಿ. ನೀನು ಕಪಟವನ್ನರಿಯದ ಮುಗ್ಧ. ಯಾರದ್ದೋ ಕುತಂತ್ರದಿಂದ ನಿನಗೆ ನಷ್ಟವಾಗುವುದೂ ಯುಕ್ತವಲ್ಲ. ಆದರೆ ಮಹಾರಾಜ ನಿನ್ನನ್ನು ಸಭೆಗೆ ಕರೆಸಿಯೇ ಕರೆಸುತ್ತಾನೆ. ಏನೂ ವಿಚಾರಿಸದೆ ನಿನ್ನನ್ನು ಸತ್ಕರಿಸಿ ಕಳುಹಿಸಿದರೆ ಚಿಂತೆಯಿಲ್ಲ. ಆದರೆ ಏನಾದರೂ ಪ್ರಶ್ನೆಗಳನ್ನು ಕೇಳಿದರೆ ಮಾತ್ರ ನಿನ್ನ ಗುಟ್ಟು ರಟ್ಟಾಗಿಬಿಡುತ್ತದೆ. ಹಾಗಾಗಿ ಅಲ್ಲಿ ಏನು ಪ್ರಶ್ನೆ ಕೇಳಿದರೂ ನನ್ನ ಕಡೆ ಬೆರಳು ತೋರಿಸಿಬಿಡು. ನಾನು ಉತ್ತರವನ್ನು ಕೊಟ್ಟು ಕಾಪಾಡುತ್ತೇನೆ. ಅದರಿಂದ ನಿನಗೂ ಏನೋ ಧನಲಾಭವಾಗುತ್ತದೆ. ನಿನ್ನನ್ನು ಹೀಗೆ ಕಳುಹಿಸಿದ ಪಂಡಿತರಿಗೂ ಪಾಠವಾಗುತ್ತದೆ. ಆ ಬಳಿಕ ಮಹಾರಾಜನ ಬಳಿಯಲ್ಲಿ ನಾನು ಸತ್ಯವಾಗಿ ನಡೆದದ್ದೇನೆಂದು ತಿಳಿಸುತ್ತೇನೆ” ಎಂದು ಅವನನ್ನು ಎಚ್ಚರಿಸಿ ಅಲ್ಲಿಂದ ನಿರ್ಗಮಿಸಿದ.
ಮಾರನೆಯ ದಿನ ಆ ಗುರುಗಳನ್ನು ನೋಡಬೇಕೆಂಬ ಬಯಕೆಯಲ್ಲಿ ಭೋಜರಾಜ ಅರಮನೆಯಿಂದ ಒಂದು ಪಲ್ಲಕ್ಕಿಯನ್ನು ಕಳುಹಿಸಿದ. ಪಲ್ಲಕ್ಕಿಯ ಜೊತೆಯಲ್ಲಿ ಕಾಳಿದಾಸನೂ ಮತ್ತೂ ಅನೇಕ ವಿದ್ವಾಂಸರೂ ಹೋಗಿದ್ದರು. ಭೂರಿಸತ್ಕಾರದೊಂದಿಗೆ ದೊಡ್ಡ ಮೆರವಣಿಗೆಯಲ್ಲಿ ಕಾಳಿದಾಸನ ಗುರುಗಳನ್ನು ಆಸ್ಥಾನಕ್ಕೆ ಕರೆಸಿಕೊಂಡ ಭೋಜರಾಜ. ಅಲ್ಲಿ ವಿಶೇಷವಾದ ಸಿಂಹಾಸನದಲ್ಲಿ ಅವನನ್ನು ಕುಳ್ಳಿರಿಸಿದ. ಅವನ ಪಕ್ಕದಲ್ಲಿಯೇ ಕಾಳಿದಾಸನೂ ನಿಂತುಕೊಂಡ. ಆ ಬಳಿಕ ಅವನ ಜೊತೆ ಸಂಭಾಷಣೆಯನ್ನು ನಡೆಸುವುದಕ್ಕೋಸ್ಕರ ಭೋಜರಾಜ ಹೀಗೆ ಕೇಳಿದ.
ಭೋಜ: ಗುರುಗಳ ಪ್ರಯಾಣ ಎತ್ತ ಕಡೆ ಸಾಗುತ್ತಿದೆ?
ಗುರು: ರಾಜ, ನಾವು ಉಜ್ಜಯಿನಿಯಿಂದ ದಕ್ಷಿಣದೇಶಗಳ ಕಡೆ ತೀರ್ಥಯಾತ್ರೆಗೆ ಹೊರಟಿದ್ದೆವು. ಮಧ್ಯದಲ್ಲಿ ಇಲ್ಲಿ ಧಾರಾನಗರಿಯಲ್ಲಿ ನಮ್ಮ ಪ್ರಿಯಶಿಷ್ಯ ಕಾಳಿದಾಸನಿದ್ದಾನೆಂದು ಗೊತ್ತಾಯಿತು. ಅವನ ಯೋಗಕ್ಷೇಮವನ್ನೂ ವಿಚಾರಿಸಿಕೊಂಡು ಹೋದರಾಯಿತು ಎಂದು ಇಲ್ಲಿಗೆ ಬಂದೆವು.
ಭೋಜ: ಬಹಳ ಸಂತೋಷ. ಕಾಳಿದಾಸನಿಗೆ ನೀವು ವಿದ್ಯಾಭ್ಯಾಸವನ್ನು ಯಾವಾಗ ಮಾಡಿಸಿದಿರಿ?
ಗುರು: ಅವನ ಚಿಕ್ಕಂದಿನಿಂದಲೇ ವಿದ್ಯಾಭ್ಯಾಸವನ್ನು ಮಾಡಿಸಿದ್ದೆವು. ಆ ಬಳಿಕ ಕಾಶಿಗೆ ಹೋಗಿ ನಾವು ಸಂನ್ಯಾಸವನ್ನು ತೆಗೆದುಕೊಂಡ ಮೇಲೆ ಅವನು ಇತ್ತ ಕಡೆ ಬಂದ.
ಭೋಜ: ನೀವು ಮಹಾವಿದ್ವಾಂಸರೆಂದು ಕೇಳಿದ್ದೇವೆ. ಈಗ ಕೆಲವು ಕಾಲದಿಂದ ನಾನೂ ರಾಮಾಯಣವನ್ನು ಚಂಪೂಶೈಲಿಯಲ್ಲಿ ಬರೆಯುತ್ತಿದ್ದೇನೆ. ಅದನ್ನು ಬರೆಯುವಾಗ ಒಂದು ಸಂಶಯ ಬಂದಿದೆ. ಈ ರಾವಣ ಎಂಬ ಶಬ್ದದ ವ್ಯುತ್ಪತ್ತಿಯನ್ನು ಕುರಿತು ಜಿಜ್ಞಾಸೆಯಾಗಿದೆ. ತಾವು ದಯವಿಟ್ಟು ಅದನ್ನು ಪರಿಹರಿಸಬೇಕು.
ಗುರು: ಆಂ, ಏನು ರಾಭಣನೋ?
ಭೋಜ: ಇದೇನು ಸ್ವಾಮಿಗಳೇ, ಎಲ್ಲರೂ ರಾವಣ ಎಂದರೆ ತಾವು ರಾಭಣ ಎಂದು ಹೇಳುತ್ತಿದ್ದೀರಲ್ಲ.
ಆಗ ಸಿಕ್ಕಿಹಾಕಿಕೊಂಡೆನೆಂದು ಭಯಗೊಂಡ ಕಪಟಗುರು ಗಲಿಬಿಲಿಗೊಂಡರೂ ಕಾಳಿದಾಸನ ಕಡೆ ಕೈ ತೋರಿಸಿದ. ಅವನ ಮನಸ್ಸಿನಲ್ಲಿರುವುದನ್ನು ಕಾಳಿದಾಸನೇ ಹೇಳುತ್ತಾನೆಂದು ಎಲ್ಲರೂ ಕಾಳಿದಾಸನ ಕಡೆಗೆ ನೋಡಿದರು. ಕಾಳಿದಾಸ ಹೀಗೆ ಉತ್ತರಿಸಿದ –
ಭಕಾರಃ ಕುಂಭಕರ್ಣೇ ಚ ಭಕಾರಶ್ಚ ವಿಭೀಷಣೇ |
ತಯೋರ್ಜ್ಯೇಷ್ಠೇ ಕುಲಶ್ರೇಷ್ಠೇ ಭಕಾರಃ ಕಿಂ ನ ವಿದ್ಯತೇ ||
(ಕುಂಭಕರ್ಣ ಎಂಬ ಹೆಸರಿನಲ್ಲಿಯೂ ‘ಭ’ ಎಂಬ ಅಕ್ಷರವಿದೆ. ವಿಭೀಷಣ ಎಂಬ ಹೆಸರಿನಲ್ಲಿಯೂ ‘ಭ’ಕಾರವಿದೆ. ಅವರಿಬ್ಬರಿಗಿಂತಲೂ ಜ್ಯೇಷ್ಠನೂ ಕುಲದಲ್ಲಿಯೇ ಶ್ರೇಷ್ಠನೂ ಆದ ರಾವಣನಲ್ಲಿ ಯಾಕೆ ಭಕಾರವಿಲ್ಲ.)
ಭೋಜರಾಜನೂ ಉಳಿದ ಸಭಾಸದರೂ ಸಂತಸಗೊಂಡರು. ಅವನನ್ನು ಭೋಜರಾಜನೂ ಸತ್ಕರಿಸಿ ಕಳುಹಿಸಿದ. ಆ ವಿಪ್ರನನ್ನು ಕಪಟಗುರುವಿನ ವೇಷದಲ್ಲಿ ಕಳಿಸಿದ ಪಂಡಿತನೇ ಮೊದಲಾಗಿ ಇನ್ನೂ ಕೆಲವರು ಕಾಳಿದಾಸನ ಪ್ರತಿಭೆ ಪಾಂಡಿತ್ಯಗಳಿಂದ ಮತ್ತಷ್ಟು ಹೊಟ್ಟೆಕಿಚ್ಚನ್ನು ಪಟ್ಟುಕೊಂಡರು.
ಹೇಗಾದರೂ ಮಾಡಿ ಕಾಳಿದಾಸನನ್ನು ಅವಮಾನಗೊಳಿಸಬೇಕೆಂಬ ಮನೋಭಾವ ಅವರಲ್ಲಿ ಬೆಳೆಯುತ್ತಲೇಹೋಯಿತು. ಕಾಳಿದಾಸನನ್ನು ಕುರಿತು ಸುಳ್ಳುಸುದ್ದಿಗಳನ್ನು ಹಬ್ಬಿಸಲು ಪ್ರಯತ್ನಿಸಿದರು. ಹಾಗೆ ಒಂದು ಸುದ್ದಿ ಕಾಳಿದಾಸ ಕದ್ದುಮುಚ್ಚಿ ಮೀನನ್ನು ತಿನ್ನುತ್ತಾನೆ ಎಂದು. ಈ ಸುದ್ದಿ ಭೋಜರಾಜನವರೆಗೂ ತಲಪಿತು. ಕಾಳಿದಾಸನಿಗೂ ಈ ಸುದ್ದಿ ತಲಪಿತು. ಭೋಜರಾಜನ ಬಳಿ ಚಾಡಿ ಹೇಳಿದ ಕೆಲವರ ಬಳಿ ಭೋಜರಾಜ, “ಯಾವತ್ತಾದರೂ ಕಾಳಿದಾಸ ಮೀನನ್ನು ತೆಗೆದುಕೊಂಡು ಹೋಗುತ್ತಿರುವಾಗ ಕಾಣಿಸಿದರೆ ತಡ ಮಾಡದೆ ನೇರವಾಗಿ ನನ್ನ ಬಳಿಗೆ ಕರೆದುಕೊಂಡು ಬನ್ನಿ” ಎಂದು ಹೇಳಿದ. ಇವರೆಲ್ಲರೂ ಕಾಳಿದಾಸನ ಮೇಲೆ ವೃಥಾ ಅಪವಾದವನ್ನು ಹೊರಿಸುತ್ತಿದ್ದಾರೆಂದು ಅವನಿಗೆ ಗೊತ್ತಿತ್ತು.
ಯಾರಾದರೂ ನಮ್ಮ ಮೇಲೆ ಅಪವಾದವನ್ನು ಹೊರಿಸಿದಾಗ ಸಾಮಾನ್ಯರಾದವರು ನೊಂದುಕೊಳ್ಳುತ್ತಾರೆ. ಧೀಮಂತರಾದವರು ಅದರಿಂದ ಹೇಗೆ ಪಾರಾಗಬೇಕೆಂಬುದರ ಕಡೆಗೆ ಆಲೋಚಿಸುತ್ತಾರೆ. ನಿರ್ಲಿಪ್ತರಾದವರು ಯಾರೇನು ಚಿಂತಿಸಿದರೆ ನನಗೇನು ಎಂದು ಮರೆತುಬಿಡುತ್ತಾರೆ.
ವಶ್ಯವಾಕ್ಕಾದ ಕಾಳಿದಾಸ ಈ ಪ್ರಸಂಗಕ್ಕೆ ಒಂದು ತಮಾಷೆಯ ಅಂತ್ಯವನ್ನು ಕಾಣಿಸೋಣ ಎಂದು ಯೋಚಿಸಿಕೊಂಡು ಒಂದು ದಿನ ಮೀನು-ಮಾರುಕಟ್ಟೆಗೆ ಹೋಗಿ ಒಂದಷ್ಟು ಮೀನುಗಳನ್ನು ಗಂಟು ಕಟ್ಟಿಸಿಕೊಂಡು, ಬಾಲವಷ್ಟೇ ಹೊರಗೆ ಕಾಣಿಸುವಂತೆ ಸುತ್ತಿಕೊಂಡು ಕಂಕುಳಲ್ಲಿ ಇಟ್ಟುಕೊಂಡು ಮನೆಯ ಕಡೆಗೆ ಹೊರಟ. ಇಂತಹ ಸಂದರ್ಭಕ್ಕೆಂದೇ ಅವನನ್ನು ಹಿಂಬಾಲಿಸುತ್ತಾ ಕಾಯುತ್ತಿದ್ದ ಚಾಡಿಕೋರರು ಧುತ್ತನೆ ಅವನ ಎದುರು ಕಾಣಿಸಿಕೊಂಡರು. “ಮಹಾರಾಜರು ಈ ಕೂಡಲೇ ಬರಲು ಹೇಳಿದ್ದಾರೆ. ಹೇಗಿದ್ದೀರೋ ಹಾಗೆ, ಎಲ್ಲಿದ್ದೀರೋ ಅಲ್ಲಿಂದಲೇ ಕರೆದುಕೊಂಡು ಬನ್ನಿ ಎಂದಿದ್ದಾರೆ” ಎಂದು ಹೇಳಿದರು. ಕಾಳಿದಾಸನೂ ಒಳಗೊಳಗೇ ನಗುತ್ತ, ಹೊರಗೆ ಭಯವನ್ನು ನಟಿಸುತ್ತ, ಚಿಂತಿತನಾದವನಂತೆ ಅವರ ಜೊತೆಯಲ್ಲಿ ಸಭೆಗೆ ಹೋದ. ಕಾಳಿದಾಸನ ಕಂಕುಳಲ್ಲಿದ್ದ ಮೀನಿನ ಬಾಲವು ಹೊರಗೆ ಕಾಣಿಸುತ್ತಿದ್ದುದನ್ನು ನೋಡಿ ಅವನನ್ನು ದ್ವೇಷಿಸುತ್ತಿದ್ದವರೆಲ್ಲ ಒಳಗೊಳಗೇ ಹಿಗ್ಗಿದರು. ಅದರಿಂದ ನೀರೂ ತೊಟ್ಟಿಕ್ಕುತ್ತಿದ್ದುದೂ, ವಾಸನೆಯೂ ಬರುತ್ತಿದ್ದುದನ್ನು ನೋಡಿದ ಅವರಿಗೆಲ್ಲ, ‘ಅಂತೂ ಇಂತೂ ಕಾಳಿದಾಸ ಸಿಕ್ಕಿಬಿದ್ದ. ಇನ್ನು ಅವನ ಕಥೆ ಮುಗಿದಂತೆಯೇ’ ಎಂದು ಸಂಭ್ರಮವೋ ಸಂಭ್ರಮ.
ಭೋಜರಾಜನೂ ಆ ಚಾಡಿಕೋರರ ಮಾತನ್ನು ಮೊದಲು ನಂಬದಿದ್ದವನು, ಕಾಳಿದಾಸನನ್ನು ಹೀಗೆ ಕಂಡು ಬೆರಗಾದರೂ ಅವನನ್ನು ಪದ್ಯದಲ್ಲಿಯೇ ಪ್ರಶ್ನಿಸಿದ.
ಭೋಜ – “ಕಕ್ಷ್ಯೇ ಕಿಂ ತವ?”
(ನಿನ್ನ ಕಂಕುಳಲ್ಲಿರುವುದೇನು?)
ಕಾಳಿದಾಸ – “ಪುಸ್ತಕಂ” (ಪುಸ್ತಕ)
ಭೋಜ – “ಕಿಮುದಕಂ”
(ಅದರಿಂದ ಬರುತ್ತಿರುವ ನೀರು ಏನು?)
ಕಾಳಿದಾಸ – “ಕಾವ್ಯಾರ್ಥಸಾರೋದಕಂ” (ಕಾವ್ಯಾರ್ಥದ ಸಾರ. ರಸವೇ ನೀರಿನ ತರಹ ಬೀಳುತ್ತಿದೆ)
ಭೋಜ – “ಗಂಧಃ ಕಿಂ?” (ಏನದು ವಾಸನೆ?)
ಕಾಳಿದಾಸ – “ನನು ರಾಮರಾವಣಮಹಾಸಂಗ್ರಾಮರಂಗೋದ್ಭವಃ”
(ರಾಮರಾವಣರ ಮಹಾಸಂಗ್ರಾಮರಂಗದಲ್ಲಿ ಆದ ವಾಸನೆ ಅಲ್ಲವೇ)
ಭೋಜ – “ಪುಚ್ಛಃ ಕಿಂ?”
(ಅದೇನು ಬಾಲವೂ ಕಾಣುತ್ತಿದೆಯಲ್ಲ)
ಕಾಳಿದಾಸ – “ನನು ತಾಳಪತ್ರಲಿಖಿತಂ” (ತಾಳೆಯ ಗರಿಯಲ್ಲಿ ಬರೆದಿದ್ದಲ್ಲವೇ?)
ಭೋಜ – “ಕಿಂ ಪುಸ್ತಕಂ ಭೋಃ ಕವೇ?” (ಅದು ಯಾವ ಪುಸ್ತಕ ಕವಿಯೇ!)
ಕಾಳಿದಾಸ – “ರಾಜನ್! ಭೂಮಿಜನೈಶ್ಚ ಸೇವಿತಮಿದಂ ರಾಮಾಯಣಂ ಪುಸ್ತಕಮ್” (ರಾಜನೇ! ಭೂಮಿಯಲ್ಲಿ ಸರ್ವರಿಂದಲೂ ಪೂಜಿತವಾದ ರಾಮಾಯಣ ಪುಸ್ತಕ)
“ಕಕ್ಷ್ಯೇ ಕಿಂ ತವ?” “ಪುಸ್ತಕಂ” “ಕಿಮುದಕಂ” “ಕಾವ್ಯಾರ್ಥಸಾರೋದಕಂ”
“ಗಂಧಃ ಕಿಂ?”
“ನನು ರಾಮರಾವಣಮಹಾಸಂಗ್ರಾಮರಂಗೋದ್ಭವಃ”
“ಪುಚ್ಛಃ ಕಿಂ?” “ನನು ತಾಳಪತ್ರಲಿಖಿತಂ” “ಕಿಂ ಪುಸ್ತಕಂ ಭೋಃ ಕವೇ?”
“ರಾಜನ್! ಭೂಮಿಜನೈಶ್ಚ ಸೇವಿತಮಿದಂ ರಾಮಾಯಣಂ ಪುಸ್ತಕಮ್”
ಈ ಮಾತುಗಳನ್ನು ಕೇಳಿ ಭೋಜರಾಜ ಅವನ ಕಂಕುಳಲ್ಲಿದ್ದ ಕಟ್ಟನ್ನು ಬಿಚ್ಚಲು ಹೇಳಿದ. ಕಾಳಿದಾಸನೂ ಆ ಕಟ್ಟನ್ನು ಬಿಚ್ಚಿ ತೋರಿಸಿದಾಗ ಅದರಲ್ಲಿ ಮೀನುಗಳಿಲ್ಲದೇ ರಾಮಾಯಣ ಪುಸ್ತಕ ಇತ್ತು. ಭೋಜರಾಜನಿಗೆ ಬಹಳ ಸಂತೋಷವಾಯಿತು, ಜೊತೆಗೆ ಪಿಸುಣರ ಮೇಲೆ ಕೋಪವೂ ಬಂತು. ಆ ಮತ್ಸರಗ್ರಸ್ತರನ್ನೆಲ್ಲ ದಂಡಿಸಬೇಕೆಂದು ಆಜ್ಞೆ ಮಾಡಿದ. ಆದರೆ ಎಲ್ಲ ಮನುಷ್ಯರ ಸ್ವಭಾವವನ್ನು ಬಲ್ಲವನಾದ ಕಾಳಿದಾಸನೇ ಭೋಜರಾಜನಿಗೆ ಸಮಾಧಾನ ಮಾಡಿ ಅವರಿಗೆ ಶಿಕ್ಷೆಯಿಲ್ಲದಂತೆ ಮಾಡಿದ.
***






