
ಆಚಾರ್ಯರ ಸಂಗೀತ ಪರಂಪರೆ ಮೊಮ್ಮಕ್ಕಳಿಗೆ ನಿಲ್ಲದೆ, ರಾಜಾರಾಂರವರ ಪೌತ್ರ ಚಿ|| ವಾಸುದೇವ ರಾಮಚಂದ್ರರ ಮೂಲಕವೂ ಹರಿದು ಮುಂದುವರಿಯುತ್ತಿರುವುದು ವಿಶೇಷ. ಈ ಯುವಕ ವಿ|| ಬಿ. ರಘುರಾಂ ಅವರಲ್ಲಿ ವಯೋಲಿನ್ ವಾದನದ ಶಿಕ್ಷಣ ಪಡೆದುದ್ದಲ್ಲದೆ, ವಯೋಲಿನ್ ತಯಾರಿಸುವುದರಲ್ಲೂ ನಿಷ್ಣಾತರು.
ಕರ್ನಾಟಕ ಶಾಸ್ತ್ರೀಯ ಸಂಗೀತದ ವಾಗ್ಗೇಯ ಪರಂಪರೆಯಲ್ಲಿ “ಅಭಿನವ ತ್ಯಾಗರಾಜ”ರೆಂದೇ ಖ್ಯಾತರಾದವರು ಮೈಸೂರು ವಾಸುದೇವಾಚಾರ್ಯರು (೧೮೬೫-೧೯೬೧). ಅವರ ಏಕೈಕ ಪುತ್ರ ಸುಬ್ರಹ್ಮಣ್ಯಂ, ಸೊಸೆ ಪದ್ಮಾವತಮ್ಮನವರ ಮಕ್ಕಳಾದ ಕೃಷ್ಣಮೂರ್ತಿ (ಎಸ್.ಕೆ.ಎಂ.) ರಾಜಾರಾಂ (ಎಸ್.ಆರ್.), ರಾಘವೇಂದ್ರ, ನಾಗಮ್ಮ ಮತ್ತು ಕಮಲಮ್ಮ – ಇವರೆಲ್ಲರೂ ಆಚಾರ್ಯರ ಸಾಧನೆ-ಬೋಧನೆಯ ವೇಳೆ ಹೊರಹೊಮ್ಮುತ್ತಿದ ನಾದಝರಿಯಲ್ಲಿ ಮಿಂದೆದ್ದವರು.
ಆಚಾರ್ಯರು ಪ್ರತಿನಿತ್ಯ ಶ್ರೀಮದ್ ರಾಮಾಯಣ ಪಾರಾಯಣ ಮಾಡುತ್ತಿದ್ದು, ಪ್ರತಿ ಮಂಗಳಾಚರಣೆಯಾಗುವಾಗ ಮೊಮ್ಮಕ್ಕಳಿಗೆ ಪಾರಾಯಣದ ಫಲವನ್ನು ಧಾರೆಯೆರೆದು ಆಶೀರ್ವದಿಸುತ್ತಿದ್ದ ಪರಿಣಾಮವಾಗಿ ಎಲ್ಲರೂ ದೀರ್ಘ ಆಯಸ್ಸು, ಸುಖ, ನೆಮ್ಮದಿಯಿಂದ ಸರ್ವಾಂಗೀಣವಾಗಿ ಸಮೃದ್ಧಿ ಹೊಂದಿ ಅವರವರ ಜೀವನವನ್ನು ಕಟ್ಟಿಕೊಳ್ಳುವಂತಾಯಿತು.
ಪ್ರಸ್ತುತ ಅವರ ಮೊಮ್ಮಕ್ಕಳಾದ ಕೃಷ್ಣಮೂರ್ತಿ ಹಾಗೂ ರಾಜಾರಾಂರವರ ಯಶೋಗಾಥೆಯೇ ಈ ಲೇಖನ.
ಇವರಿಬ್ಬರೂ ಅತಿ ಚಿಕ್ಕವಯಸ್ಸಿನಲ್ಲಿಯೇ ಆಚಾರ್ಯರ ಶಿಷ್ಯರಾಗಿದ್ದ ವಿ|| ಎನ್. ಚೆನ್ನಕೇಶವಯ್ಯನವರಲ್ಲೂ, ತದನಂತರ ತಾತನವರಲ್ಲೂ ಹಾಡುಗಾರಿಕೆಯಲ್ಲಿ ಶಿಕ್ಷಣ ಪಡೆದರು. ಜಲತರಂಗ ವಾದನವನ್ನು ಕಲಿಯಬೇಕೆಂಬ ಹಂಬಲದಿಂದ ಡಿ. ದೇವೇಂದ್ರಪ್ಪನವರಲ್ಲಿ ಕಲಿತು, ನಾಲ್ವಡಿ ಪ್ರಭುಗಳ ಮೆಚ್ಚುಗೆ ಪಡೆದರು. ಅರಮನೆಯಲ್ಲಿ ನಡೆಯುತ್ತಿದ್ದ ಪಾಶ್ಚಾತ್ಯ ವಾದ್ಯವೃಂದಗಳಲ್ಲಿ ನುಡಿಸಲು ಅವಕಾಶ ದೊರಕಿತು. ಇದಲ್ಲದೆ ನರಸಿಂಗ್ರಾವ್ ಮಾನೆಯವರಿಂದ ಪಾಶ್ಚಾತ್ಯ ಸಂಗೀತವನ್ನು ಅಭ್ಯಸಿಸಿ ಹಲವಾರು ಪರೀಕ್ಷೆಗಳಲ್ಲಿ ತೇರ್ಗಡೆ ಆದದ್ದು ಅವರ ಸಂಗೀತ ಜ್ಞಾನಾರ್ಜನೆಗೆ ಸಹಾಯವಾಯಿತು.
ಈ ಸಹೋದರರೀರ್ವರೂ ‘ಕಲಾದೇಗುಲ’ವಾದ ಆಕಾಶವಾಣಿ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಪಡೆದವರು. ಆಕಾಶವಾಣಿಗೆ ಬರುತ್ತಿದ್ದ ಸಮಾಜದ ಅನೇಕ ಕ್ಷೇತ್ರದ ದಿಗ್ಗಜರ ಪರಿಚಯ-ಒಡನಾಟ ಸಿಗುವುದು ಸಹಜವಷ್ಟೆ. ಅದನ್ನು ಸದುಪಯೋಗ ಪಡೆದ ಜಾಣರಿವರು. ಕೃತಿರಚನಾ ಕಲೆಯೊಂದಿಗೆ, ಸರಸ ಸಂಭಾಷಣೆ ಮತ್ತು ಹಾಸ್ಯಭರಿತ ಬರವಣಿಗೆಗಳು, ತಾತ ಹಾಗೂ ತಂದೆಯಿಂದ ರಕ್ತಗತವಾಗಿ ಬಂದವು. ಅಣ್ಣತಮ್ಮಂದಿರು ರಾಮಲಕ್ಷ್ಮಣರಂತೆ ಒಂದೇ ಆತ್ಮ ಎರಡು ದೇಹದಂತೆ ಅಪಾರವಾದ ಪ್ರೀತಿ ವಿಶ್ವಾಸದಿಂದ್ದಿದ್ದರು.
ಎಸ್. ಕೃಷ್ಣಮೂರ್ತಿ (೧೯೨೨-೨೦೧೫)
ಎಂ.ಎ. (ಎಕನಾಮಿಕ್ಸ್) ಪದವೀಧರರಾಗಿ, ರಿಸರ್ವ್ ಬ್ಯಾಂಕ್ ಮುಂಬಯಿಯಲ್ಲಿ ವೃತ್ತಿಜೀವನ ಆರಂಭಿಸಲು ಅವಕಾಶ ದೊರಕಿದಾಗ, ಆಚಾರ್ಯರ ಶಿಷ್ಯರಾಗಿದ್ದ ಜಯಚಾಮರಾಜ ಒಡೆಯರ್ ಅವರ ಸಲಹೆಯಂತೆ ಆಕಾಶವಾಣಿ ಮೈಸೂರಿನಲ್ಲಿ ವೃತ್ತಿಜೀವನ ಆರಂಭಿಸಿದರು. ವಿವಿಧ ವಿಭಾಗಗಳಲ್ಲಿ ಕೆಲಸ ನಿರ್ವಹಿಸಿ ಮೈಸೂರು, ಮೀಜೋರಾಂ, ಹೈದರಾಬಾದ್, ಪಾಂಡಿಚೇರಿ, ಕೊನೆಯಲ್ಲಿ ಧಾರವಾಡ ನಿಲಯದ ನಿರ್ದೇಶಕರಾಗಿ ನಿವೃತ್ತಿ ಹೊಂದಿದರು.
ಇವರದು ಬಹುಮುಖ ಪ್ರತಿಭೆ. ಸಂಗೀತವಲ್ಲದೆ, ನಾಟಕ, ಚಿತ್ರಕಲೆ, ತೋಟಗಾರಿಕೆ, ಸಂಗೀತ ಸಂಬಂಧವಾದ ಬರವಣಿಗೆಗಳೊಂದಿಗೆ ಸಾರ್ಥಕಜೀವನ ನಡೆಸಿದವರು.
ಆಕಾಶವಾಣಿಯಲ್ಲಿ ತದನಂತರ ಭಾರತೀಯ ವಿದ್ಯಾಭವನದಲ್ಲಿ ಅನೇಕ ಶ್ಲೋಕ, ವಚನಗಳು, ದೇವರನಾಮಗಳು ಮತ್ತು ಭಾವಗೀತೆಗಳಿಗೆ ಸಂಗೀತ ನಿರ್ದೇಶನ ಮಾಡಿ ಖ್ಯಾತರಾದವರು. ‘ವಾದ್ಯ ವೃಂದ’ ನಿರ್ದೇಶಿಸುವುದರಲ್ಲಿ ಇವರು ಸಿದ್ಧಹಸ್ತರಾಗಿದ್ದರು. ದೆಹಲಿಯ ಆಕಾಶವಾಣಿ ಕೇಂದ್ರದಲ್ಲಿ ರಾಷ್ಟ್ರೀಯ ವಾದ್ಯವೃಂದ ವಿಭಾಗಕ್ಕೆ ಆಹ್ವಾನಿತರಾದ ಮೊದಲ ಕನ್ನಡಿಗರು. ಇವರು ನಿರ್ಮಿಸಿದ ಕಾರ್ಯಕ್ರಮಗಳಿಗೆ ಆಕಾಶವಾಣಿ ನೀಡುವ ರಾಷ್ಟ್ರೀಯ ಪ್ರಶಸ್ತಿಗೆ ಸತತವಾಗಿ ಮೂರು ವರ್ಷ ನೀಡಲ್ಪಟ್ಟು ಅದು ಇಂದಿಗೂ ದಾಖಲೆಯಾಗಿ ಉಳಿದಿದೆ. ಡಿವಿಜಿ, ಮಾಸ್ತಿ, ವೀಸಿ, ಅನಕೃ, ಶಿವರಾಮ ಕಾರಂತ ಮುಂತಾದ ಸಾಹಿತಿಗಳ ಕೊಡುಗೆಗಳ ಬಗ್ಗೆ ಅವರ ಸಂದರ್ಶನ, ತದನಂತರ ಅವರಿಂದಲೇ ಅವರ ಬರಹಗಳಿಂದ ಆಯ್ದ ಭಾಗಗಳ ವಾಚನಗಳೊಳಗೊಂಡ ಕಾರ್ಯಕ್ರಮ, ಆಹ್ವಾನಿತ ಶ್ರೋತೃಗಳ ಸಮ್ಮುಖದಲ್ಲಿ ನಾಟಕರಂಗದ ದಿಗ್ಗಜರಾಗಿದ್ದ ಆರ್. ನಾಗೇಂದ್ರರಾವ್, ಗುಬ್ಬಿ ವೀರಣ್ಣ, ಜಯಮ್ಮ, ಹಿರಣ್ಣಯ್ಯನಂತಹವರಿಂದಲೇ ಅವರುಗಳಾಡಿದ ನಾಟಕಗಳ ಭಾಗಗಳಿಂದ ನಟನೆ ಮಾಡಿಸಿದ ಕೀರ್ತಿ ಇವರದು. ಸಿದ್ದಯ್ಯ ಪುರಾಣಿಕರ ‘ಗಿರಿಜಾ ಕಲ್ಯಾಣ’, ಭಾರತೀಯ-ಪಾಶ್ಚಾತ್ಯ ಸಂಗೀತಗಳಲ್ಲಿನ ಸಾಮ್ಯತೆ-ಭಿನ್ನತೆಗಳ ವಿವರವಿರುವ ಕಾರ್ಯಕ್ರಮ, ‘ನಿಸರ್ಗ ನಿನಾದ’ವೆಂಬ ಪ್ರಕೃತಿಯಿಂದ ಸಂಗೀತದ ಉಗಮ – ಹೀಗೆ ಹತ್ತು ಹಲವಾರು ಕಾರ್ಯಕ್ರಮಗಳನ್ನು ರೂಪಿಸಿ ಬಿತ್ತರಿಸಿದ್ದರು. ‘ಅಪೂರ್ಣ ರಾಮಾಯಣ’, ‘ಹನ್ನೆರಡೂಕಾಲು’ ಎಂಬ ಹಾಸ್ಯಭರಿತ ನಾಟಕಗಳು ಆಕಾಶವಾಣಿಗಾಗಿ, ತದನಂತರ ರಂಗಭೂಮಿಯಲ್ಲೂ ಪ್ರದರ್ಶನಗೊಂಡವು.
ತಾತ ವಾಸುದೇವಾಚಾರ್ಯರ ಸಮಗ್ರ ರಚನೆಗಳನ್ನು ನಾಡಿನ ಹೆಸರಾಂತ ಕಲಾವಿದರಿಂದ ಹಾಡಿಸಿ ಧ್ವನಿಮುದ್ರಿಸಿದ್ದಾರೆ. ಇದಕ್ಕೆ ಕೈಜೋಡಿಸಿದವರು ವಿ|| ಆರ್.ಕೆ. ಪದ್ಮನಾಭ, ನಂತರ ‘ವಾಸುದೇವ ಕೀರ್ತನ ಮಂಜರಿ’ಯನ್ನು ಕನ್ನಡದಲ್ಲಿ ಹಾಗೂ ಆಂಗ್ಲ ಭಾಷೆಗಳಲ್ಲಿ ಸಂಪಾದಿಸಿದ್ದಾರೆ. ಜಯಚಾಮರಾಜೇಂದ್ರ ಒಡೆಯರ ೯೪ ರಚನೆಗಳನ್ನು ಆಕಾಶವಾಣಿಯಲ್ಲಿ ಹಲವಾರು ಕಂತುಗಳಲ್ಲಿ ವಿವಿಧ ಕಲಾವಿದರಿಂದ ಹಾಡಿಸಿ, ತದನಂತರ ಇವರು ‘ಶ್ರೀ ವಿದ್ಯಾಗಾನ ವಾರಿಧಿ’ ಎಂಬ ಶೀರ್ಷಿಕೆಯಲ್ಲಿ ಪುಸ್ತಕರೂಪದಲ್ಲಿ ಪ್ರಕಟಿಸಿದ್ದು, ವಿದ್ವಾಂಸರು ಹಾಗೂ ವಿದ್ಯಾರ್ಥಿಗಳಿಗೆ ಇದು ಒಂದು ವರವೆಂದೇ ಹೇಳಬೇಕು.
ಇನ್ನು ಇವರ ಪುಸ್ತಕಗಳಾದ ವಾಗ್ಗೇಯ ವಾಸುದೇವಾಚಾರ್ಯ, ಸಂಗೀತ ಕಲಾನಿಧಿ, ರಸಋಷಿ ತ್ಯಾಗರಾಜ, ಸಂಗೀತ ಸಮಯ, ಹೃನ್ಮನ ದೀಪ್ತಿ, ಸಂಗೀತ ಸರಿತಾ ಮುಂತಾದವುಗಳು ಸರಳಶೈಲಿಯಲ್ಲಿದ್ದು, ಹಾಸ್ಯಲೇಪಿತದಿಂದಿದ್ದು ಓದುಗರ ಮನಸನ್ನು ಮುದಗೊಳಿಸದಿರದು. ಇವರು ರಚಿಸಿರುವ ನಾಲ್ವಡಿ ಭೂಪರ, ವಿ|| ವೆಂಕಟಗಿರಿಯಪ್ಪ, ವಿ|| ಮುತ್ತಯ್ಯ ಭಾಗವತರ ರೇಖಾಚಿತ್ರಗಳು ಸುಂದರವಾಗಿ ಮೂಡಿಬಂದಿವೆ. ಹೀಗಾಗಿ ಅವರ ಹಸ್ತಪ್ರತಿಗಳು ದುಂಡಗಿನ ಅಕ್ಷರದೊಂದಿಗಿರುವುದು ನೋಡಲೇ ಚಂದ.
ವೈಣಿಕ ಡಾ. ದೊರೆಸ್ವಾಮಿ ಅಯ್ಯಂಗರ್ಯರೊಂದಿಗೆ ‘ಸುಬ್ಬಾಶಾಸ್ತ್ರೀ’ ಚಲನಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಇದಲ್ಲದೆ ಅನೇಕ ಸಾಕ್ಷ್ಯಚಿತ್ರಗಳಿಗೂ ಇವರು ಸಂಗೀತ ನಿರ್ದೇಶಿಸಿದ್ದಾರೆ. ಲಂಡನ್ ಭಾರತೀಯ ವಿದ್ಯಾಭವನದಲ್ಲಿ ಸಂಗೀತ ಶಿಬಿರವನ್ನು ನಡೆಸಿಕೊಟ್ಟಾಗ ಈ ಲೇಖಕನನ್ನು ಸಹಾಯಕನನ್ನಾಗಿ ತಮ್ಮೊಂದಿಗೆ ಕರೆದೊಯ್ದಿದ್ದರು. ಇವರಿಗೆ ಅನೇಕ ಸಂಮಾನಗಳು ಸಹಜವಾಗಿ ದೊರಕಿದವು – ಸಂಗೀತ ಕಲಾರತ್ನ, ಕರ್ನಾಟಕ ಕಲಾಶ್ರೀ, ಗಾಂಧರ್ವ ವಿದ್ಯಾನಿಧಿ, ಚಿತ್ಪ್ರಭಾನಂದ ಪ್ರಶಸ್ತಿ, ಸಂಗೀತ ಶಾಸ್ತ್ರ ರತ್ನಾಕರ, ಇತ್ಯಾದಿ. ವಾಗ್ಗೇಯಕಾರರಾಗಿ ಅನೇಕ ಸ್ವರಜತಿ, ವರ್ಣ, ಕೀರ್ತನೆ, ತಿಲ್ಲಾನಗಳನ್ನು ರಚಿಸಿದ್ದಾರೆ.
೨೦೧೫ರ ಮೇ ೨೮ರಂದು ವಾಸುದೇವಾಚಾರ್ಯರ ಜನ್ಮದಿನದ ಪ್ರಯುಕ್ತ ತಿರುಮಲೆಯಲ್ಲಿ ‘ನಾದನೀರಾಜನಂ’ ಕಾರ್ಯಕ್ರಮದಲ್ಲಿ ನಾನು ಮತ್ತು ನನ್ನ ಶಿಷ್ಯರೆಲ್ಲ ಹಾಡಿದಾಗ ನಮ್ಮೊಂದಿಗೆ ಕೃಷ್ಣಮೂರ್ತಿಗಳು ಬಂದಿದ್ದು ಆಚಾರ್ಯರ ಜೀವನ ಸಾಧನೆಗಳ ಬಗ್ಗೆ ಸಂಕ್ಷಿಪ್ತವಾಗಿ ಆಂಗ್ಲಭಾಷೆಯಲ್ಲಿ ನಿರೂಪಣೆ ಮಾಡಿದರು. ಅದೇ ವರ್ಷ ೨೦೧೫ ಡಿಸೆಂಬರ್ ೫ರಂದು ವಯೋಸಹಜವಾದ ದೈಹಿಕ ಆಲಸ್ಯದಿಂದ ನಮ್ಮನ್ನಗಲಿದರು.
ಇವರ ಜೀವನಸಂಗಾತಿ ದೇವಕೀ ಮೂರ್ತಿ ಪ್ರಸಿದ್ಧ ಕಾದಂಬರಿಗಾರರು. ಇವರ ಕಾದಂಬರಿ ಆಧಾರಿತ ‘ಉಪಾಸನೆ’ ಪ್ರಸಿದ್ಧ ಚಲನಚಿತ್ರವಾಗಿ ಪುಟ್ಟಣ್ಣ ಕಣಗಲ್ರವರ ನಿರ್ದೇಶನದಲ್ಲಿ ಹೊರಬಂದಿತ್ತು. ವಯೋಲಿನ್ ವಾದನವನ್ನು ಕಲಿತಿರುವರು. ಏಕೈಕ ಪುತ್ರಿ ಕುಸುಮ ಅವರು ವೀಣಾವಾದಕಿ, ರಂಗೋಲಿ ಕಲಾವಿದೆ, ಆಂಗ್ಲಭಾಷೆಯಲ್ಲಿ ಅಂಕಣಗಾರ್ತಿಯಾಗಿದ್ದಾರೆ.
ಎಸ್. ರಾಜಾರಾಂ (೧೯೨೫-೨೦೦೯)

ಬಿ.ಎ. (ಆನರ್ಸ್) ಪದವಿ ಪಡೆದು ತಮಗೆ ಪ್ರಿಯವಾಗಿದ್ದ ಸಂಗೀತವನ್ನೇ ವೃತ್ತಿಯಾಗಿಸಿಕೊಂಡು ೧೯೫೦ರಲ್ಲಿ ಧಾರವಾಡ ಆಕಾಶವಾಣಿ ಕೇಂದ್ರದಲ್ಲಿ ಜಲತರಂಗ ಹಾಗೂ ಮೃದಂಗ (ಶೇಷಪ್ಪನವರಿಂದ ಕಲಿತ ವಿದ್ಯೆ) ವಾದಕರಾಗಿ ಸೇವೆ ಆರಂಭಿಸಿದರು. ೧೯೫೩ರಲ್ಲಿ ಅಂದಿನ ಮದ್ರಾಸಿನಲ್ಲಿ ಅಂತರರಾಷ್ಟ್ರೀಯ ಖ್ಯಾತಿಯ ನೃತ್ಯಪಟು ರುಕ್ಮಿಣೀದೇವಿ ಅರುಂಡೇಲ್ ಅವರ ಬಿನ್ನಹವನ್ನು ಮನ್ನಿಸಿ ಆಚಾರ್ಯರು ಶ್ರೀಮದ್ರಾಮಾಯಣದ ಶ್ಲೋಕಗಳನ್ನಾಧರಿಸಿದ ನೃತ್ಯರೂಪಕಕ್ಕೆ ಸಂಗೀತ ನಿರ್ದೇಶನ ಮಾಡಲು ಮದ್ರಾಸಿನಲ್ಲಿ ಬಂದು ನೆಲೆಸಿದರು. ಆಚಾರ್ಯರ ಸಲಹೆಯಂತೆ ರುಕ್ಮಿಣೀದೇವಿ ರಾಜಾರಾಂ ಅವರನ್ನು ಧಾರವಾಡದಿಂದ ಮದ್ರಾಸಿಗೆ ವರ್ಗಾಯಿಸುವಂತೆ ಏರ್ಪಾಡು ಮಾಡಿದರ ಫಲವಾಗಿ ಯುವಕ ರಾಜಾರಾಂ ತಮ್ಮ ತಂದೆ-ತಾಯಿ-ತಾತನವರೊಂದಿಗೆ ‘ಕೃಷ್ಣ ಕಾಟೇಜ್’ ಮನೆಯಲ್ಲಿ ವಾಸ್ತವ್ಯ ಹೂಡಿ ಆಕಾಶವಾಣಿಯ ಕೆಲಸದ ನಂತರ ತಾತನವರ ನೃತ್ಯರೂಪಕದ ಸಂಗೀತ ನಿರ್ದೇಶನದಲ್ಲಿ ತಮ್ಮ ಸಹಾಯಹಸ್ತ ನೀಡಿ ಅದರ ಮರ್ಮಗಳನ್ನು ತಿಳಿದುಕೊಂಡರು. ಆಚಾರ್ಯರು ಪ್ರತಿನಿತ್ಯ ರಾಮನ ಸ್ಮರಣೆ ಮಾಡುತ್ತ ಸೂಕ್ತ ರಾಗಗಳನ್ನು-ಗತಿಗಳನ್ನು ಅನುಗ್ರಹಿಸುವಂತೆ ಬೇಡುತ್ತಿದ್ದರಂತೆ. ಕಾರಣ ‘ಸ್ವಂತ ರಚನೆ ಸೃಷ್ಟಿಸುವುದು ಇದಕ್ಕಿಂತ ಸುಲಭದ ವಿಚಾರ’, ಆದರೆ ಬೇರೆಯವರ ಸಾಹಿತ್ಯಕ್ಕೆ ಸಂಗೀತ ಒದಗಿಸುವುದಾದರೆ ಆ ಸಾಹಿತ್ಯ ರಚನಾಕಾರನಲ್ಲಿ ಪರಕಾಯ ಪ್ರವೇಶ ಮಾಡಿ ಅವನ ಇಂಗಿತವನ್ನು ಮೈಗೂಡಿಸಿಕೊಂಡು ಸಂಗೀತವನ್ನು ನೀಡಬೇಕಾಗುವುದು ಆವಶ್ಯಕ ಎನ್ನುತ್ತಿದ್ದರಂತೆ.
‘ಸೀತಾ ಸ್ವಯಂವರ’ದ ಸಂದರ್ಭ – ಜನಕನು ಸೀತೆಯನ್ನು ಶ್ರೀರಾಮನಿಗೆ ಕನ್ಯಾದಾನ ಮಾಡುವಾಗ ‘ಇಯಂ ಸೀತಾ ಮಮ ಸುತಾ’ ಎಂಬ ಶ್ಲೋಕಕ್ಕೆ ರಾಗದ ಆಯ್ಕೆಗೆ ಅನೇಕ ಪ್ರಯೋಗ ಮಾಡಿದರೂ ಸರಿಗಾಣದೆ ದುಃಖಿತರಾದ ಆಚಾರ್ಯರು, ದಿನವಿಡೀ ಯೋಚಿಸಿದರೂ ಹೊಳೆಯದ ರಾಗ ಅಂದಿನ ಅರ್ಧರಾತ್ರಿಯಲ್ಲಿ ‘ಹರಿಕಾಂಬೋಧಿ’ಯಲ್ಲಿ ಹಾಡಿಕೊಂಡಾಗ ಪೂರ್ಣ ತೃಪ್ತಿಯಾಗಿತ್ತು. ಅದಾಗಲೇ ನಿದ್ರೆಗೆ ಜಾರಿದ್ದ ಮೊಮ್ಮಗನನ್ನು ಎಬ್ಬಿಸಿ ರಾಗ ಸಂಯೋಜಿಸಿದ ಸ್ವರಗಳನ್ನು ಬರೆಯುವಂತೆ ಸೂಚಿಸಿದರು.
ಈ ನೃತ್ಯ ಪ್ರದರ್ಶನಕ್ಕೆ ಮುಂಚೆ ತಿರುಪತಿ ತಿಮ್ಮಪ್ಪನ ಮುಂದೆ ಹಾಡಬೇಕೆಂಬ ಅಭಿಲಾಷೆಯನ್ನು ರುಕ್ಮಿಣಿದೇವಿಯವರು ಪೂರೈಸಲು ತಿರುಮಲೆ ತಲಪಿದಾಗ ಸಂಜೆ ೪ರ ಸಮಯ. ಅಲ್ಲಿನ ನಿಯಮದಂತೆ ಆಗ ಸ್ವಾಮಿಗೆ ಪರದೆ ಎಳೆದಾಗಿದ್ದು, ಅದು ತೆರೆಯಲು ಇನ್ನೂ ಬಹಳ ಸಮಯವಾಗುವುದೆಂದು ತಿಳಿದು ನಿರಾಶರಾದರು. ಆದರೂ ಸ್ವಾಮಿಯ ಮುಂದೆ ಹಾಡಲನುವಾದಾಗ ಸ್ವಾಮಿಯ ಉತ್ಸವಮೂರ್ತಿ ಹೊತ್ತ ಮೇನೆ ಪ್ರಾಕಾರವನ್ನು ಸುತ್ತಿ ಗರ್ಭಗುಡಿ ಪ್ರವೇಶ ಮಾಡಿದಾಗ ತೆರೆ ತೆರೆಯಲೇಬೇಕಾಯಿತು. ಮಂಗಳಾರತಿಯ ಬೆಳಕಿನಲ್ಲಿ ಆ ಭವ್ಯ ಮೂರ್ತಿಯನ್ನು ಆನಂದಭಾಷ್ಪದೊಂದಿಗೆ ಸಕಲ ಕಲಾ ತಂಡದವರು ಕಣ್ತುಂಬಿಕೊಂಡರು. ಈ ಭಗವಂತನ ಕಣ್ಣುಮುಚ್ಚಾಲೆಯ ಆಟ ನಡೆದುದ್ದನ್ನು ಓದುವುದೇ ರೋಮಾಂಚನಕಾರಿಯಾದರೆ, ಇನ್ನು ಪ್ರತ್ಯಕ್ಷದರ್ಶಿಗಳ ಆನಂದಕ್ಕೆ ಏನು ಹೇಳುವುದಿದೆ?
ಮೇ ೧೭, ೧೯೬೧ ಸುಮಾರು ಆರು ದಶಕಗಳ ಹಿಂದೆ, ಎಂದಿನಂತೆ ಆಚಾರ್ಯರು ದೇವತಾರ್ಚನೆ, ರಾಮಾಯಣ ಪಾರಾಯಣ, ಸಾಧನೆ, ಬೋಧನೆ ನಂತರ ಸಂಜೆ ಆಪ್ತರಾಗಿದ್ದ ಗೋಟುವಾದ್ಯ ವಿದ್ವಾಂಸರಾಗಿದ್ದ ಬೂದಲೂರು ಕೃಷ್ಣಮೂರ್ತಿ ಶಾಸ್ತ್ರಿಗಳೊಡನೆ ಹರಟುತ್ತಾ “ಶಾಸ್ತ್ರಿಗಳೇ ನಾನು ಈ ಜನ್ಮದಲ್ಲಿ ಸಂಗೀತವನ್ನು ಅರಿತದ್ದು ಅಂಗೈಯಷ್ಟು, ಕಲಿಯಬೇಕಾದದ್ದು ಸಾಗರದಷ್ಟು. ಹಿರಿಯ ವಿದ್ವಾಂಸರಿಗೆ ನನ್ನ ನಮನವನ್ನು, ಕಿರಿಯರಿಗೆ ಆಶೀರ್ವಾದಗಳನ್ನು ತಿಳಿಸಿ” ಎಂದಾಗ ಬೆರಗಾದರು ಶಾಸ್ತ್ರಿಗಳು. ಪ್ರತಿನಿತ್ಯದಂತೆ ಇವರ ಆರೋಗ್ಯ ತಪಾಸಣೆಗಾಗಿ ವೈದ್ಯರ ಭೇಟಿ. “ಡಾಕ್ಟ್ರೇ ಹೇಗಿದೆ ನನ್ನ ಆರೋಗ್ಯಸ್ಥಿತಿ?” ವೈದ್ಯರು “ಆಚಾರ್ಯರೇ ಎಲ್ಲ್ಲ ಸಮರ್ಪಕವಾಗಿದೆ, ಇನ್ನು ನಾಲ್ಕು ವರ್ಷದಲ್ಲಿ ಸೆಂಚುರಿ (೧೦೦) ಬಾರಿಸುವಿರಿ.” ಆಚಾರ್ಯರು “ಹೌದು, ನೀವು ಹೀಗೆ ಹೇಳಬೇಕಾದದ್ದು ನಿಮ್ಮ ವೃತ್ತಿಧರ್ಮದಂತೆ ನ್ಯಾಯವಾದದ್ದೇ” ಎಂದರಂತೆ. ಬಂದವರೆಲ್ಲರೂ ತೆರಳಿದ ಮೇಲೆ ಸೊಸೆಯನ್ನು ಕರೆದು “ನೀವೆಲ್ಲರೂ ಊಟ ಮಾಡಿ ನನಗೆ ಊಟ ಬೇಡವೆನಿಸುತ್ತಿದೆ. ಹೀಗೆ ಎರಡು ಹೆಜ್ಜೆ ಹಾಕುತ್ತೇನೆ” ಎಂದರು. ದಿನನಿತ್ಯದಂತೆ ದೇವರಿಗೆ ಸಾಯಂಕಾಲದ ಮಂಗಳಾರತಿ ಆಯಿತು. ಸುಮಾರು ಎಂಟಕ್ಕೆ ರಾಜಾರಾಂ ಅವರಿಗೆ ತಂಬೂರಿಯ ಶೃತಿಯಲ್ಲಿ ‘ಇಂಥ ಪ್ರಭುವ ಕಾಣೆನೋ’ ಹಾಡೆಂದರು. ಮಂಚದಿಂದ ಎದ್ದು ಚಾಪೆಯ ಮೇಲೆ ಮಲಗಿ ಶೃತಿಯನ್ನು ಕೇಳುತ್ತ ಆನಂದದಿಂದ ತಲೆ ಎತ್ತಲು ಆಗದಾಗ ದಿಂಬಿಗೆ ಒರಗಿ ಅರ್ಥಶಃ ನಾದದಲ್ಲಿ ಲೀನರಾದರು. ರುಕ್ಮಿಣೀದೇವಿ ಅವರು ಆದಿಯಾಗಿ ಎಲ್ಲ ಬೋಧಕರು, ವಿದ್ಯಾರ್ಥಿಗಳು ದುಃಖದಲ್ಲಿ ಭಾಗಿಯಾದರು.
ಆಚಾರ್ಯರಿಂದ ಆರಂಭಗೊಂಡ ಸಂಗೀತ ನಿರ್ದೇಶನದಲ್ಲಿ ಇನ್ನೆರಡು ಭಾಗಗಳು ಉಳಿದಿದ್ದವು. ಕೊನೆಗೆ ರುಕ್ಮಿಣಿದೇವಿಯವರು ಆಚಾರ್ಯರು ಸಂಯೋಜಿಸಲ್ಪಟ್ಟ ಸಂಗೀತದ ಧಾಟಿಯನ್ನು ಅರಿತಿದ್ದ ಚಿ|| ರಾಜಾರಾಂ ಅವರೇ ಮುಂದುವರಿಸಬೇಕೆಂದು ಅಪೇಕ್ಷಿಸಿದರು. ಆಳುಕಿನಿಂದಲೇ ಒಪ್ಪಿದ ರಾಜಾರಾಂ, ಆಕೆಯ ಪ್ರೀತಿ, ವಾತ್ಸಲ್ಯ, ಭರವಸೆಗೆ ಮಣಿದು ಉಳಿದ ಭಾಗಗಳ ಸಂಗೀತ ನಿರ್ದೇಶನವನ್ನು ಮುಂದುವರಿಸಿ ಯಶಸ್ವಿಗೊಂಡರು. ಇದು ಸಾಧ್ಯವಾದದ್ದು ಆಚಾರ್ಯರ ಆಶೀರ್ವಾದ ಹಾಗೂ ಮಾರ್ಗದರ್ಶನದಿಂದ – ‘ಭರತನು ರಾಮನ ಪಾದುಕೆಯನಿಟ್ಟುಕೊಂಡೇ ಅಯೋಧ್ಯೆಯ ರಾಜ್ಯಭಾರ ಮಾಡಿದಂತೆ ಮಾಡಿರುವೆ’ – ಎನ್ನುತ್ತಿದ್ದರು ರಾಜಾರಾಂ. ಅವರು ಕಲಿತ ಗಾಯನ ಹಾಗೂ ಮೃದಂಗ ವಾದನದ ಫಲವಾಗಿ ನೃತ್ಯಕ್ಕೆ ಬೇಕಾದ ರಾಗ ತಾಳದ ವೈವಿಧ್ಯತೆಯನ್ನು ತೋರಲು ಸುಲಭವಾಯಿತೆನ್ನುತ್ತಿದ್ದರು.
ನಂತರ ಬಡ್ತಿಪಡೆದು ಆಕಾಶವಾಣಿ ವಿಜಯವಾಡ, ದೆಹಲಿ ಮತ್ತು ಹೈದರಾಬಾದ್ನಲ್ಲಿ ಸೇವೆಸಲ್ಲಿಸಿ ನಿವೃತ್ತರಾದರು. ವಿಜಯವಾಡದಲ್ಲಿ ವಿ|| ಎಲ್ಲಾ ಸೋಮಣ್ಣನವರಲ್ಲಿ ವೃದಂಗ ಕಲಿತದ್ದು ಅವರ ವಿದ್ಯಾದಾಹಕ್ಕೆ ದ್ಯೋತಕ. ೧೯೮೩ರಲ್ಲಿ ನಿವೃತ್ತಿನಂತರ ಮೈಸೂರಿನಲ್ಲಿ ವಾಸ ಆರಂಭಿಸುತ್ತಿದ್ದಂತೆ ರುಕ್ಮಿಣಿಯವರಿಂದ ಮತ್ತೆ ಕಲಾಕ್ಷೇತ್ರಕ್ಕೆ ಬರುವಂತೆ ಆಹ್ವಾನ. ಅಲ್ಲಿನ ಪ್ರಾಂಶುಪಾಲರಾಗಿ ನೇಮಕ. ರುಕ್ಮಿಣಿಯವರ ನಿಧನದ ನಂತರ ಶಂಕರ್ ಮೆನನ್ ಕಲಾಕ್ಷೇತ್ರದ ಸಾರಥ್ಯದಲ್ಲಿ ನಡೆದುದಾದರೂ ಅವರ ನಂತರ ರಾಜಾರಾಂರವರೇ ‘ಡೈರೆಕ್ಟರ್’ ಹುದ್ದೆಯನ್ನು ಅಲಂಕರಿಸಿದರು. ತಾವು ಹಿಂದೆ ಕಾಣುತ್ತಿದ್ದ ಕಲಾಕ್ಷೇತ್ರದಲ್ಲಿನ ಶಿಸ್ತು ಸಡಿಲವಾಗುತ್ತ ಬರುತ್ತಿದ್ದು, ಅನೇಕ ಆಡಳಿತ ಸಮಸ್ಯೆಗಳು ತಲೆಎತ್ತಿದಾಗ ನಿರ್ಭಯವಾಗಿ ಹಾಗೂ ಸಮರ್ಥವಾಗಿ ಅವುಗಳನ್ನು ಎದುರಿಸಿದರು.
ಹಳೆಯ ನೃತ್ಯರೂಪಕಗಳೊಂದಿಗೆ ತಮ್ಮ ಅಪಾರ ಅನುಭವದಿಂದ ಹೊಸ ಪ್ರಯೋಗಗಳನ್ನು ಮಾಡಿ ಯಶಸ್ಸು ಕಂಡರು. ಅವುಗಳೆಂದರೆ ಭಕ್ತ ಜಯದೇವ, ಭಕ್ತ ವಿಜಯ (ಸಂಸ್ಕೃತ), ಶಿವ ಗೀತಮಾಲಾ, ಕನ್ನಡದ ಗೀತೆಗಳನ್ನಾಧರಿಸಿ ಪುರಂದರ, ಅಕ್ಕಮಹಾದೇವಿ, ಮಲೆಯಾಳದ ಕರ್ಣ ಶಪಥಂ, ಮುಂತಾದವು. ಆಯಾ ಭಾಷಾಪಂಡಿತರನ್ನು ಸಂಪರ್ಕಿಸಿ ಮಾಹಿತಿಗಳನ್ನು ಕಲೆಹಾಕಿ ರಾಗಸಂಯೋಜಿಸಿ ಪ್ರಯೋಗಿಸಿದರೆಂದರೆ ಅವರಿಗಿದ್ದ ಜವಾಬ್ದಾರಿ, ಕಾಳಜಿ ತಿಳಿಯಬಹುದಾಗಿದೆ.
ರುಕ್ಮಿಣಿದೇವಿಯವರು ಕಲಾಕ್ಷೇತ್ರದಲ್ಲಿದ್ದ ಬೋಧಕರಿಗೆ, ವಿದ್ಯಾರ್ಥಿಗಳಿಗೆ ಹಾಗೂ ಮಿತ್ರರಿಗೆ ‘ಅತ್ತೆ’ ಎಂದೇ ಪರಿಚಿತರು, ಆದರೆ ರಾಜಾರಾಂ ಅವರು ಮೊದಲಿನಿಂದಲೂ ಆಕೆಯನ್ನು ‘ಅಮ್ಮಾ’ ಎಂದೇ ಸಂಬೋಧಿಸುತ್ತಿದ್ದರು. ಅವರಿಬ್ಬರಲ್ಲಿದ್ದ ಪರಸ್ಪರ ವಿಶ್ವಾಸವನ್ನು ಕಾಣಬಹುದಾಗಿದೆ. ನೃತ್ಯಕ್ಕಾಗಿ ಪದವರ್ಣಗಳು, ಗೀತೆಗಳು, ತಿಲ್ಲಾನಗಳು ಅಲ್ಲದೆ ‘ರುಕ್ಮಿಣೀಶ’ ಎಂಬ ಅಂಕಿತದಲ್ಲಿ ಸೊಗಸಾದ ದೇವರನಾಮಗಳನ್ನು ರಚಿಸಿದ್ದಾರೆ. ಈ ಮುದ್ರೆಯಲ್ಲಿ ತಮ್ಮನ್ನು ರೂಪಿಸಿದ ರುಕ್ಮಿಣೀದೇವಿಯವರ ಹಾಗೂ ವರಿಸಿದ ಧರ್ಮಪತ್ನಿ ರುಕ್ಮಿಣಿಯವರ ಹೆಸರು ಸೇರಿರುವುದು ವಿಶೇಷ. ಕಲಾಕ್ಷೇತ್ರದ ನೃತ್ಯ ತಂಡದ ನಾಯಕರಾಗಿ ಅನೇಕ ದೇಶಗಳಲ್ಲಿ ಕಾರ್ಯಕ್ರಮಗಳನ್ನು ನೀಡಿರುವ ಹೆಗ್ಗಳಿಕೆ ಇವರದು.
೨೦೦೫ರಲ್ಲಿ ಬೆಂಗಳೂರಿಗೆ ವಿಶ್ರಾಂತಿ ಜೀವನ ನಡೆಸಲು ಬಂದು ಸಂಗೀತ ರಚನೆಯಲ್ಲಿ ದಿನಕಳೆದರು. ತಮ್ಮೊಂದಿಗೆ ಬೆಂಗಳೂರಿನಲ್ಲಿದ್ದ ಮಕ್ಕಳಾದ ಇಂದಿರಾ ಕೃಷ್ಣಮೂರ್ತಿ (ವೀಣೆ), ಪರಿಮಳ ಹರೀಶ್ (ಮೃದಂಗ) ಹಾಗೂ ಮಗ ರಾಮಚಂದ್ರರ (ಕೊಳಲು) ಒಡನಾಟದಲ್ಲಿ ಸುಖವಾದ ವಿಶ್ರಾಂತಿ ಜೀವನವನ್ನು ನಡೆಸಿದರು. ಮಕ್ಕಳೆಲ್ಲರೂ ಸಂಗೀತವನ್ನು ಕಲಿತವರೆಂಬುದು ಗಮನಾರ್ಹ. ಜೂನ್ ೧, ೨೦೦೯ರಂದು ಕೇವಲ ಒಂದೆರಡು ದಿವಸದ ದೇಹಾಲಸ್ಯದಿಂದ ಬಳಲಿ ಇಹಲೋಕಯಾತ್ರೆ ಮುಗಿಸಿದರು.
ಅವರ ಅಪಾರವಾದ ಸಂಗೀತ ಸೇವೆಯನ್ನು ಗುರುತಿಸಿ ಅನೇಕ ಸಭೆಗಳು ಅವರನ್ನು ಗೌರವಿಸಿವೆ. ನಾದಕ್ಕನಲ್, ಕಲೈಮಗಳ್ ಪ್ರಶಸ್ತಿ, ಲಲಿತ ಕಲಾರತ್ನ, ಕಲಾ ವಿಪಂಚಿ, ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ೨೦೦೧ ಪ್ರಶಸ್ತಿ, ‘ನೃತ್ಯ ಸೇವಾ ರತ್ನ’, ಕ್ಲೀವ್ಲ್ಯಾಂಡ್ ೨೦೦೩ ತ್ಯಾಗರಾಜ ಆರಾಧನಾ ಸಮಿತಿಯಿಂದ ಗೌರವ ಮುಂತಾದ ಬಿರುದು ಹಾಗೂ ಪ್ರಶಸ್ತಿಗಳು ಇವರಿಗೆ ಸಂದಿವೆ.
ವಾಸುದೇವ ರಾಮಚಂದ್ರ
ಆಚಾರ್ಯರ ಸಂಗೀತ ಪರಂಪರೆ ಮೊಮ್ಮಕ್ಕಳಿಗೆ ನಿಲ್ಲದೆ, ರಾಜಾರಾಂರವರ ಪೌತ್ರ ಚಿ|| ವಾಸುದೇವ ರಾಮಚಂದ್ರರ ಮೂಲಕವೂ ಹರಿದು ಮುಂದುವರಿಯುತ್ತಿರುವುದು ವಿಶೇಷ. ಈ ಯುವಕ ವಿ|| ಬಿ. ರಘುರಾಂ ಅವರಲ್ಲಿ ವಯೋಲಿನ್ ವಾದನದ ಶಿಕ್ಷಣ ಪಡೆದುದ್ದಲ್ಲದೆ, ವಯೋಲಿನ್ ತಯಾರಿಸುವುದರಲ್ಲೂ ನಿಷ್ಣಾತರು. ಹೊಸ ಹೊಸ ಆಕಾರ, ನಾದ ಹೊಮ್ಮಿಸಬಲ್ಲ ವಿವಿಧ ತಾಂತ್ರಿಕತೆಯ ವಯೋಲಿನ್ ತಯಾರಿಸಿ, ಕೆಲವಕ್ಕೆ ಹೆಚ್ಚಿನ ತಂತಿಗಳನ್ನು ಅಳವಡಿಸಿ, ಇನ್ನು ಕೆಲವಕ್ಕೆ ಗಿಟಾರ್ನಂತೆ ಈಡಿeಣs (ಮನೆಗಳನ್ನು) ಅಳವಡಿಸಿದ್ದಾರೆ. ವಯೋಲಿನ್ಗಳನ್ನು ಗ್ರಾಹಕರ ಅಭಿರುಚಿ ಹಾಗೂ ನಿರ್ದಿಷ್ಟತೆಯನ್ನು ಅರ್ಥಮಾಡಿಕೊಂಡು, ಅವರಿಗೆ ಬೇಕಾದ ರೀತಿಯಲ್ಲಿ ತಯಾರಿಸಿಕೊಟ್ಟಿದ್ದಾರೆ.
ಬೆಂಗಳೂರಿನಲ್ಲಿ ಬಿ.ಇ. (ಎಲೆಕ್ಟ್ರಿಕಲ್ & ಎಲೆಕ್ಟ್ರಾನಿಕ್ಸ್) ಪದವಿಯ ನಂತರ ಸ್ವೀಡನ್ನಲ್ಲಿ ಮಾಸ್ಟರ್ ಸ್ನಾತಕೋತ್ತರ ಪದವಿ ಪಡೆದು ಪ್ರಸ್ತುತ ರಿಸರ್ಜ್ ಇನ್ಸ್ಟಿಟ್ಯೂಟ್ ಆಫ್ ಸ್ವಿಡನ್ನಲ್ಲಿ (Sweden) ರಿಸರ್ಚ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. Battery Technologyಯಲ್ಲಿ Doctorateಗಾಗಿ ಅಧ್ಯಯನಶೀಲರಾಗಿರುವ ಅಪರೂಪದ ಯುವಕ ವಾಸುದೇವ ರಾಮಚಂದ್ರ.
ಇವರ ಕ್ರಿಯಾಶೀಲತೆಯಿಂದ ಅವಿಷ್ಕಾರಗೊಂಡಿರುವ ಇವರ ಪ್ರತಿಭೆಗೆ ಅನನ್ಯ ಪುರಸ್ಕಾರ, ಸ್ಟಾರ್ ಎಂಟರ್ಪ್ರೈನರ್ ಅವಾರ್ಡ್ ಮುಂತಾದ ಸಂಮಾನಗಳು ಸಂದಿವೆ. ಅನೇಕ ವಸ್ತುಪ್ರದರ್ಶನಗಳಲ್ಲಿ ಇವರಿಂದ ತಯಾರಾದ ವಿವಿಧ ರೀತಿಯ ವಯೋಲಿನ್ಗಳು ಪ್ರದರ್ಶಿಸಲ್ಪಟ್ಟಿವೆ.
ಹೀಗೆ ಈ ಮೂವರೂ ವಾಸುದೇವಾಚಾರ್ಯರ ವಂಶೋದ್ಧಾರಕರಲ್ಲದೆ ಮತ್ತೇನು?
ಒಟ್ಟಿನಲ್ಲಿ ಆಚಾರ್ಯರ ಸುನಾದವಿನೋದಿನಿ ರಾಗದ ರಚನೆ ‘ದೇವಾದಿ ದೇವ ಶ್ರೀವಾಸುದೇವ’ದಲ್ಲಿ ಹೇಳಿದಂತೆ ‘ನೇಜೇಸಿನ ಪೂಜಾಫಲಮೋ – ನಾ ಪೂರ್ವಜುಲ ಪುಣ್ಯ ಫಲಮೋ’ ಎಂಬುದು ಈ ಸದ್ವಂಶಕ್ಕೆ ಅನ್ವರ್ಥವಲ್ಲವೆ?
***






