ಅಂತರಂಗದಲಿ ಅರಳುವ ಹೂವು, ಕನ್ನಡ ತಾಯಿಯ ಕುಡಿಯು
ಆಡುತ ಹಾಡುತ ನಲಿವು ಹಬ್ಬುವುದು, ನಾವು ಕಟ್ಟಿದ ಗುಡಿಯು
**
ಶತಶತಮಾನದ ಚರಿತೆಯ ಪರಿ ಇದೆ, ಹೃದಯಕೆ ಪುಷ್ಟಿಯ ಸೊದೆಯು
ಅಮೃತವ ಸವಿದ ಖುಷಿಯಲಿ ಕುಣಿವುದು, ಮಕ್ಕಳ ಪ್ರಾಂಜಲ ಎದೆಯು//
**
ಕೊರಳಲಿ ಭಾವ, ಅರಳಲಿ ಜೀವ, ಮಿಡಿಯಲಿ ಕನ್ನಡ ರವವು
ಬಿದ್ದರೆ ನೀರು ಬೆಳೆವುದು ಗಿಡವು, ನುಡಿಗೆ ಮಿಡಿಯಲಿ ಭವವು//
**
ಹಿಂದಿನ ಹಾದಿಯ ಮಾದರಿ ಮುಂದಿದೆ, ಎಂದಿದೆ ಒಳಗಿನ ಲೋಕ
ಮುಂದಿನ ದಾರಿಯ ತೊಡರನು ಕಂಡು, ದಾರಿ ಕಾಣದೆ ಮೂಕ! //
**
ನಮ್ಮ ನುಡಿಯನು ನುಂಗಿ ನೊಣೆಯುತಿದೆ ಮನಸಿನೊಳಗಿನ ದಾಸ್ಯ
ಕಲಿವ ತಾಣದಲಿ ಇರಲಿ ಕನ್ನಡ, ಉಳಿದು ಬೆಳೆಯಲಿ ಲಾಸ್ಯ//
**
ಕನ್ನಡ ಸೊಲ್ಲಲಿ ತುಂಬಿ ಇರುವುದು ಸಹಜ ಖುಷಿಯ ಭಾಷ್ಯ
ಎಲ್ಲರ ಸಂಗಡ ಹರಿಯಲಿ ಕನ್ನಡ, ನಾಡಿಗೆ ತರಲದು ಭಾಗ್ಯ//
**
ಕನ್ನಡವೆಂದರೆ ಅಮ್ಮನ ಹಾಗೆ, ಅಭಯವಿರುವ ಮಡಿಲು
ಅವಳು ಉಳಿದರೆ ನಾವು ಉಳಿವೆವು, ಅಮೃತ ಮಥನದ ಕಡಲು//
(23 ಅಕ್ಟೋಬರ್ 2026, ಶುಕ್ರವಾರ)






