ಸ್ವಾತಂತ್ರ್ಯನಾಣ್ಯದ ಇನ್ನೊಂದು ಬದಿ

ವಸಾಹತುಶಾಹಿಯ ಪ್ರತಿ ಅಂಗವನ್ನೂ ಬ್ರಿಟಿಷರು ತಮ್ಮ ಪ್ರಯೋಜನಕ್ಕಾಗಿ ಬಗೆಬಗೆಯಾಗಿ ಬಳಸಿಕೊಳ್ಳುತ್ತಿದ್ದರೆಂಬುದರ ಕಲಾತ್ಮಕತೆಯನ್ನು ಮೆಚ್ಚಬೇಕು. ತಾವು ಮಾಡುತ್ತಿದ್ದುದು ಅಧೀನ ರಾಷ್ಟ್ರಗಳ ಉದ್ಧಾರಕ್ಕಾಗಿ ಎಂಬ ಚಿತ್ರವನ್ನು ಮೂಡಿಸುತ್ತಿದ್ದುದರಲ್ಲಿ ಅವರ ನಿಪುಣತೆ ಎದ್ದು ಕಾಣುತ್ತಿತ್ತು. ಹೀಗೆ ಭ್ರಾಂತಿನಿರ್ಮಾಣ, ದಮನಿತರ ಕೃತಜ್ಞತೆ – ಎರಡೂ ಅವರ ಬಗಲನ್ನು ಸೇರುತ್ತಿದ್ದವು.

ಕಗ್ಗತ್ತಲ ಯುಗದಿಂದ ಭಾರತವನ್ನು ಬ್ರಿಟಿಷರು ಮೇಲಕ್ಕೆತ್ತಿದವರೆಂದು ೨೦೨೫ರಲ್ಲಿಯೂ ನಂಬುವ ‘ಸುಶಿಕ್ಷಿತರು’ ಇದ್ದಾರೆಂಬುದು ಬ್ರಿಟಿಷರ ಕುಟಿಲತೆಯ ಯಶಸ್ಸಿಗೆ ತಾರ್ಕಣೆಯಾಗಿದೆ. ಆ ದೀರ್ಘ ಅಪ-ಇತಿಹಾಸದ ವಿವರಗಳು ಸಮಗ್ರವಾಗಿ ಇನ್ನೂ ದಾಖಲೆಯಾಗಬೇಕಾಗಿದೆ. ಪ್ರಸ್ತುತಕ್ಕೆ ಎರಡು ಪ್ರಸಂಗಗಳನ್ನು ಸ್ಮರಿಸಬಹುದು.

ಅಡ್ಡ ತಿರುಗಿದ ಕಥೆ

‘ಇಂಡಿಯನ್ ಸಮ್ಮರ್’ ಶೀರ್ಷಿಕೆಯ ಪ್ರಸಿದ್ಧ ಗ್ರಂಥದಲ್ಲಿ ಆ್ಯಲೆಕ್ಸ್ ಫಾನ್ ತುನ್‌ಜಲ್‌ಮನ್ ೧೯೪೭ರ ಆಗಸ್ಟ್ ೧೪ರ ನಡುರಾತ್ರಿ ನಡೆದ ವಿದ್ಯಮಾನಗಳನ್ನು ಯಥಾರ್ಥವಾಗಿ ವಿವರಿಸಿದ್ದಾರೆ. ತಮ್ಮ ಮತ್ತು ಮೌಂಟ್‌ಬ್ಯಾಟನ್ನರ ಬಟ್ಟಲುಗಳಿಗೆ ಜವಾಹರಲಾಲ್ ನೆಹರು ಷಾಂಪೇನ್ ತುಂಬಿಸಿ ಪದ್ಧತಿಯಂತೆ ಕೈಯೆತ್ತಿ ಆಶಂಸೆ (‘ಟೋಸ್ಟ್’) ಘೋಷಿಸಿದರು.

ನೆಹರು ಹೇಳಿದ್ದು ‘ಭಾರತದ ಉಜ್ಜ್ಜ್ವಲ ಭವಿಷ್ಯಕ್ಕೆ’ ಎಂದು.

ಮೌಂಟ್‌ಬ್ಯಾಟನ್ ಹೇಳಿದ್ದು ‘ಜಾರ್ಜ್ ದೊರೆಯ ಯಶೋವರ್ಧನೆಗೆ’ ಎಂದು.

ಮಾರನೆಯ ದಿನ ‘ಭಾರತ ಈಗ ಕಡೆಗೂ ಸ್ವತಂತ್ರವಾಯಿತು’ ಎಂಬ ಅಧಿಕೃತ ಘೋಷಣೆಯ ಹಿಂದುಗೂಡಿ ಮೌಂಟ್‌ಬ್ಯಾಟನ್ ತನ್ನ ಪ್ರೀತಿಪಾತ್ರ ನೆಹರುಗೆಂದೇ ವೈಭವಯುತ ಔತಣವನ್ನು ಏರ್ಪಡಿಸಿದ. ತುನ್‌ಜಲ್‌ಮನ್ ವರ್ಣಿಸುತ್ತಾರೆ: “ವಾಸ್ತವವಾಗಿ ಆ ಪ್ರಜ್ವಲ ಔತಣಕೂಟ ಬ್ರಿಟಿಷ್ ಸಾಮ್ರಾಜ್ಯದ ಹಂಸಗೀತೆಯಾಗಿತ್ತು. ಅದು ಭಾರತದ ಇತಿಹಾಸದಲ್ಲಿಯೆ ಭವ್ಯ ಸಂದರ್ಭವನ್ನು ಆ ಸಮಾರಂಭ ಸಂಕೇತಿಸುತ್ತದೆಂದು ಎಲ್ಲರೂ ಭಾವಿಸಿದ್ದರು. ಆದರೆ ಮೌಂಟ್‌ಬ್ಯಾಟನನ ಕರಾಮತ್ತಿನಿಂದಾಗಿ ಆ ಉತ್ಸವಾಚರಣೆ ಇಂಗ್ಲೆಂಡಿನ ಚರಿತ್ರೆಯ ಭಾಗವೂ ಆಗಿಬಿಟ್ಟಿತು! ಮೌಂಟ್‌ಬ್ಯಾಟನನ ಜನಸಂಪರ್ಕ ಕೌಶಲದಿಂದಾಗಿ ‘ಬ್ರಿಟಿಷ್ ಸಾಮ್ರಾಜ್ಯದ ಸಮಾಧಿ’ ಎನಿಸಬೇಕಾಗಿದ್ದುದು ‘ಸಾಮ್ರಾಜ್ಯದ ಗುರಿಯ ಈಡೇರಿಕೆ’ ಎಂದು ಅಂಕಿತಗೊಂಡುಬಿಟ್ಟಿತು; ಇಂಗ್ಲೆಂಡಿನಿಂದ ತಾಯಿಯಂತೆ ಆರೈಕೆಗೊಂಡು ಪುಷ್ಟವಾದ ಭಾರತ ಈಗ ಪ್ರೌಢಿಮೆ ಗಳಿಸಿ ಸ್ವತಂತ್ರಗೊಂಡು ಇಂಗ್ಲೆಂಡಿಗೆ ಕೀರ್ತಿ ತರುತ್ತಿದೆ – ಎಂದು ಮಂಡಿಸಲಾಯಿತು. ಬ್ರಿಟಿಷರು ಘನತೆಯಿಂದ ನಿರ್ಗಮಿಸಿದರೆಂಬ, ಉಭಯರಾಷ್ಟçಗಳ ಮೈತ್ರಿಯ ಮುಂದುವರಿಕೆಗೆ ತಳಹದಿ ನಿರ್ಮಾಣವಾಗಿದೆಯೆಂಬ ಜಾಡಿನ ಸತ್ಯದೂರ ಕಥನಗಳಿಗೆ ಹೀಗೆ ಬೀಜಾರೋಪ ಮಾಡಿದ್ದಾಯಿತು.

ಇದೇ ಅನುಕೂಲಸಿಂಧು ಕಥನ ಕಳೆದ ನಾಲ್ಕು ಪೀಳಿಗೆಗಳವರ ಮನಸ್ಸುಗಳಲ್ಲಿ ವಿಜೃಂಭಿಸಿದೆ.

ಸ್ವಾತಂತ್ರ್ಯಕ್ಕೆ ತೆರಬೇಕಾದ ಬೆಲೆ?

ಈಗ ಎರಡನೇ ಪ್ರಸಂಗಕ್ಕೆ ಬರೋಣ. ಇದಕ್ಕೆ ಆಧಾರ ಸ್ವಾತಂತ್ರ್ಯಯೋಧರಾದ ಮಧ್ಯಪ್ರದೇಶದ ಮುಖ್ಯಮಂತ್ರಿಯೂ ಆಗಿದ್ದ ದ್ವಾರಕಾ ಪ್ರಸಾದ್ ಮಿಶ್ರ ಅವರ ಆತ್ಮಕಥೆ. ಬ್ರಿಟಿಷ್ ಆಳ್ವಿಕೆಯ ಕಟ್ಟರ ವಿರೋಧಿಯಾಗಿದ್ದವರು, ಅದಕ್ಕಾಗಿ ಕ್ಲೇಶಗಳಿಗೊಳಗಾದವರು, ೧೯೪೦ರ ದಶಕದ ವಿದ್ಯಮಾನಗಳಿಗೆ ನೇರ ಸಾಕ್ಷಿಯಾಗಿದ್ದವರು.

“ಸಾಮಾನ್ಯವಾಗಿ ವಿದೇಶೀ ಪ್ರಭುತ್ವದ ಅಂತ್ಯದೊಡನೆ ಮುಕ್ತ ರಾಷ್ಟ್ರದಲ್ಲಿ ಐಕ್ಯಕ್ಕೂ ಭದ್ರತೆಗೂ ಧಕ್ಕೆಯೊದಗುವುದು ವಿರಳವಲ್ಲ. ಭಾರತದಲ್ಲಿ ಆದದ್ದೂ ಅದೇ. ಸ್ವಾತಂತ್ರ್ಯದ ಆಗಮನದೊಡಗೂಡಿ ಐಕ್ಯಭಾವ ಇಲ್ಲಿಂದ ಅದೃಶ್ಯವಾಯಿತು. ಈ ತಥ್ಯವನ್ನು ಸ್ವತಃ ಮೌಂಟ್‌ಬ್ಯಾಟನನೇ ಒಪ್ಪಬೇಕಾಯಿತು. ಲಂಡನ್ನಿನಲ್ಲಿ ಕುಲದೀಪ್ ನಯ್ಯರರೊಡನೆ ೧೯೭೧ರಲ್ಲಿ ನಡೆದ ಸಂದರ್ಶನದಲ್ಲಿ ಆತ ಸಂದೇಹಕ್ಕೆಡೆಯಿಲ್ಲದಂತೆ ಹೇಳಿದ: ‘ಎಲ್ಲೆಲ್ಲಿ ಸಾಮ್ರಾಜ್ಯಪ್ರಭುತ್ವ ಕೊನೆಗೊಂಡಿತೋ ಅಲ್ಲೆಲ್ಲ ರಕ್ತಪಾತವೇ ಆಗಿದೆ. ಇದು ಸ್ವಾತಂತ್ರ್ಯಕ್ಕೆ ನೀವು ಕೊಡಬೇಕಾದ ಬೆಲೆಯೇನೊ!’ ಅಧಿಕಾರದ ಹಸ್ತಾಂತರ ಶಾಂತಿಯುತವಾಗಿ ನಡೆಯಿತೆಂಬ ಕಥನ ಅಪ್ಪಟ ಸುಳ್ಳೆಂಬುದನ್ನು ವಾಯವ್ಯ ಭಾರತದಲ್ಲಿ ನಡೆದ ಅಪಾರ ನರಮೇಧವೇ ಸಾಬೀತುಪಡಿಸಿದೆ. ಸ್ವತಂತ್ರ ರಾಷ್ಟ್ರದ ಉದಯವೆಂದು ವರ್ಣಿಸಲಾದ ಆ ಘಳಿಗೆಯಲ್ಲಿಯೆ ಭಾರತ ತನ್ನ ಅಸ್ತಿತ್ವಕ್ಕಾಗಿ ತೀಕ್ಷಣ ಸೆಣಸಾಟ ನಡೆಸಬೇಕಾಯಿತು!”

ಉದಯದೊಡನೆಯೇ ಗ್ರಹಣ!

ವಿಭಜನೆಯೊಡಗೂಡಿದ ಕಗ್ಗೊಲೆ-ಅತ್ಯಾಚಾರ- ಭೀಭತ್ಸಗಳು ಇತಿಹಾಸದಲ್ಲಿಯೇ ಕಂಡುಕೇಳಿರದಂಥವು ಎಂಬುದು ಸುವಿದಿತ. ಆದರೆ ಬ್ರಿಟಿಷ್ ಅಧಿಕಾರಹಸ್ತಾಂತರದ ಅನುಗೂಡಿ ನಡೆದ ಇತರ ಅಕಲ್ಪನೀಯ ವಿಪರಿಣಾಮಗಳ ಕರಾಳತೆಗಳನ್ನು ಎಲ್ಲರೂ ಬಹುಮಟ್ಟಿಗೆ ಮರೆತೇಹೋಗಿರುವುದು ದೊಡ್ಡ ವಿಪರ್ಯಾಸ. ಇವು ಉತ್ತರಭಾರತದ ಅಧಿಕ ಭಾಗಗಳವರನ್ನು ಗ್ರಹಣದಂತೆ ಮುಸುಕಿದ್ದವೆಂಬುದು ವಾಸ್ತವ. ಅವರ ಇರುವಿಕೆಯನ್ನೇ ಅಲ್ಲೋಲಕಲ್ಲೋಲಗೊಳಿಸಿದ್ದವು ಇವು – ಅನಂತರ ಕಾಶ್ಮೀರದಲ್ಲಾದಂತೆ. ಅಂತಿಮವಾಗಿ ಪಾಕಿಸ್ತಾನವನ್ನು ಕಸಿದುಕೊಂಡ ತಥೋಕ್ತ ದ್ವಿರಾಷ್ಟ್ರವಾದಿ ಪಂಥಗಳವರಿಗೆ ಈಗ ರಕ್ತದ ರುಚಿ ಹತ್ತಿತ್ತು, ತೃಷ್ಣೆ ಬೆಳೆದಿತ್ತು, ತಮ್ಮ ಲಕ್ಷ್ಯವನ್ನು ಇನ್ನಷ್ಟು ಎತ್ತರಿಸಿದರು; ದೆಹಲಿಯನ್ನೇ ಆಕ್ರಮಿಸಿಕೊಳ್ಳಲು ಹವಣಿಸಿದರು. ಅಲ್ಪ ಕಾಲಾನಂತರ ೧೯೪೮ರಲ್ಲಿ ಹೈದರಾಬಾದಿನಲ್ಲಿ ಕಾಸಿಂ ರಜ್ವಿ ತನ್ನ ಅನುಯಾಯಿ ರಜಾಕಾರರಿಗೆ ‘ಕೆಂಪುಕೋಟೆಯ ಮೇಲೆ ಇಸ್ಲಾಮೀ ಧ್ವಜವನ್ನು ನೆಡುವುದು ನಮ್ಮ ಗುರಿಯಾಗಿರಲಿ’ ಎಂದು ಕರೆಕೊಟ್ಟಿದುದಕ್ಕೆ ಮೇಲಣ ಉತ್ತರಭಾರತದ ಹವಣಿಕೆಗಳು ಪೀಠಿಕೆಯಂತಿವೆ.

ನವಜಾತ ಪಾಕಿಸ್ತಾನದ ನೂತನ ನಾಯಕರು ಲೆಕ್ಕ ಹಾಕಿದ್ದು ಹೀಗೆ: ‘ಹೇಗೂ ಭಾರತದವರು ವಿಭಜನಜನಿತ ಅಗಣಿತ ಸಮಸ್ಯೆಗಳ ಪರಿಹಾರದಲ್ಲಿ ಮಗ್ನರಾಗಿರುತ್ತಾರೆ. ಹೀಗೆ ನಾವು ಮುನ್ಸೂಚನೆಯಿಲ್ಲದೆ ದಿಢೀರನೆ ಮೇಲೆರಗಿ ದೆಹಲಿಯನ್ನು ವಶಪಡಿಸಿಕೊಳ್ಳಬಹುದು.’ ಈ ಯೋಜನೆಯನ್ನು ವಾಸ್ತವವಾಗಿಯೆ ಕೈಗೆತ್ತಿಕೊಳ್ಳಲಾಯಿತು. ಭಾರತದೊಳಗಿನ ಮುಸ್ಲಿಮರೇ ಇದರ ಸಂಚಾಲಕರಾಗಬೇಕೆಂದೂ ನಿಶ್ಚಯಿಸಲಾಯಿತು. ಈ ಯೋಜನೆ ಸಫಲವಾಗಲೂಬಹುದಿತ್ತು – ಸರ್ದಾರ್ ಪಟೇಲರ ನಿಶಿತಮನಸ್ಕತೆಯೂ ಪ್ರಯತ್ನದಾರ್ಢ್ಯವೂ ಇರದಿದ್ದರೆ.

ದೆಹಲಿಯ ಮೇಲೆ ಆಕ್ರಮಣ ನಡೆಸುವ ಮುಸ್ಲಿಮರ ಪ್ರಯತ್ನ ನಡೆದದ್ದು ೧೯೪೭ರ ಸೆಪ್ಟೆಂಬರ್‌ನಲ್ಲಿ – ಎಂದರೆ ವಿಭಜನೆ ಆದ ಒಂದೇ ತಿಂಗಳಲ್ಲಿ. ಇದರ ಸ್ಥಿರೀಕರಣವನ್ನು ಸರ್ದಾರ್ ಪಟೇಲರ ಬಲಗೈಯಾಗಿದ್ದ ವಿ.ಪಿ. ಮೆನನ್ (‘ದಿ ಟ್ರಾನ್ಸ್ಫರ್ ಆಫ್ ಪವರ್ ಇನ್ ಇಂಡಿಯಾ’), ದುರ್ಗಾದಾಸ್ (‘ಇಂಡಿಯಾ ಫ್ರಂ ಕರ್ಜನ್ ಟು ನೆಹರು ಅಂಡ್ ಆ್ಯಫ್ಟರ್’), ಗಾಂಧಿಯ ಕಾರ್ಯದರ್ಶಿಯಾಗಿದ್ದ ಪ್ಯಾರೇಲಾಲ್ (‘ಮಹಾತ್ಮಗಾಂಧಿ – ದಿ ಲಾಸ್ಟ್ ಫೇಸ್’), ಡಿ.ಪಿ. ಮಿಶ್ರ (ಆತ್ಮಕಥೆ) ಮೊದಲಾದವರ ಬರಹಗಳಲ್ಲಿ ಸ್ಪಷ್ಟವಾಗಿ ಕಾಣಬಹುದು. ಲ್ಯಾರಿ ಕಾಲಿನ್ಸ್-ಡಾಮಿನೀಕ್ ಲ್ಯಾಪಿಯೆರ್ ಅವರ ಅತಿರಂಜಿತ ‘ಫ್ರೀಡಂ ಅಟ್ ಮಿಡ್‌ನೈಟ್’ ಗ್ರಂಥದಲ್ಲೂ ಅದರ ಉಲ್ಲೇಖವಿದೆ.

ವ್ಯವಸ್ಥಿತ ಪಿತೂರಿ

ಪ್ರಕರಣ ಪ್ರಾರಂಭವಾಗುವುದು ರಾಯ್‌ಬಹಾದುರ್ ಬಕ್ಷಿ ಬದರೀನಾಥ್ ಎಂಬ ಗುಪ್ತಚರ ವಿಭಾಗದ ಅಧಿಕಾರಿಯ ವರದಿಯೊಂದಿಗೆ. ವಿಶೇಷವಾಗಿ ವಾಯವ್ಯಭಾರತ ಭಾಗಗಳಲ್ಲಿ ಮುಸ್ಲಿಂ ಲೀಗಿನ ಚಟುವಟಿಕೆಗಳನ್ನು ಗಮನಿಸುತ್ತಿದ್ದವರು ಅವರು. ವಿಭಜನೆಯ ಹಿಂದುಗೂಡಿ ಪಂಜಾಬ್, ಹರ್ಯಾಣಾ, ದೆಹಲಿ ಮೊದಲಾದೆಡೆ ಸೃಷ್ಟಿಸಲಾಗಿದ್ದ ಅಶಾಂತಿ-ಹಿಂಸಾಚರಣೆಗಳನ್ನೆಲ್ಲ ಅವರು ದಾಖಲೆ ಮಾಡಿದ್ದರು. ಬದರೀನಾಥರ ವರದಿಯ ಸಂಗ್ರಹರೂಪವನ್ನು ದುರ್ಗಾದಾಸ್ ಅವರೂ ತಮ್ಮ ಗ್ರಂಥ ಸರಣಿಯಲ್ಲಿ ನೀಡಿದ್ದಾರೆ: “…. ಪಾಕಿಸ್ತಾನದ ಗಡಿಯನ್ನು ಯಮುನಾ ನದಿಯವರೆಗೆ ವಿಸ್ತರಿಸಬೇಕೆಂಬ ಪಿತೂರಿಯನ್ನು ಹೆಣೆಯಲಾಗಿತ್ತು. ಆಡಳಿತ ಪರಿವರ್ತನೆಯ ಫಲವಾಗಿ ಪೂರ್ವಪಾಕಿಸ್ತಾನದ ಜಿಲ್ಲೆಗಳಲ್ಲೆಲ್ಲ ಪೊಲೀಸ್ ಅಧಿಕಾರಿಗಳಲ್ಲಿ ಹೆಚ್ಚಿನವರು ಮುಸ್ಲಿಮರೇ ಇದ್ದರು. ಅವರನ್ನು ಬಳಸಿಕೊಂಡು ಆ ಭಾಗಗಳಲ್ಲಿದ್ದ ಆಯುಧಾಗಾರಗಳನ್ನೆಲ್ಲ ೧೨-೧೪ ಆಗಸ್ಟ್ ಅವಧಿಯಲ್ಲಿ ಸ್ವವಶ ಮಾಡಿಕೊಳ್ಳಬೇಕೆಂಬುದು ಮುಸ್ಲಿಂ ಲೀಗಿನ ಯೋಜನೆಯಾಗಿತ್ತು. ತಡೆಯೊಡ್ಡಿದ ಹಿಂದೂ ಮತ್ತು ಸಿಖ್ಖ್ ಅಧಿಕಾರಿಗಳನ್ನೆಲ್ಲ ಕೊಚ್ಚಿಹಾಕಬೇಕು. ಅದಾದೊಡನೆ ಆ ಇಡೀ ಭೂಭಾಗವು ಭಾರತದಿಂದ ಮುಕ್ತಗೊಂಡಿದೆಯೆಂದು ಘೋಷಣೆ ಮಾಡಬೇಕು.”

ಭಾರತ ಗಣರಾಜ್ಯದೊಳಕ್ಕೆ ಮಹಾರಾಜರುಗಳ ಆಳ್ವಿಕೆಯಲ್ಲಿದ್ದ ಸಂಸ್ಥಾನಗಳನ್ನು ಸೇರ್ಪಡೆಗೊಳಿಸುವುದರಲ್ಲಿ ಸರ್ದಾರ್ ಪಟೇಲರಿಗೆ ಪ್ರಮುಖ ಸಹಾಯಕರಾಗಿದ್ದ ವಿ.ಪಿ. ಮೆನನ್ ಹೀಗೆಂದಿದ್ದಾರೆ: “ಜೀವಭಯಕ್ಕೊಳಗಾದ ಅಸಂಖ್ಯ ನಾಗರಿಕರು ದೆಹಲಿಯೊಳಕ್ಕೆ ಧಾವಿಸತೊಡಗಿದ್ದರು. ನವಜಾತ ಭಾರತ ಸರ್ಕಾರವನ್ನು ಪದಭ್ರಷ್ಟಗೊಳಿಸಿ ರಾಜಧಾನಿ ದೆಹಲಿಯನ್ನು ಸ್ವಾಧೀನಪಡಿಸಿಕೊಳ್ಳಬೇಕೆಂಬ ಪಿತೂರಿಯನ್ನು ಬಹಳ ಹಿಂದಿನಿಂದಲೇ ಮುಸ್ಲಿಮರು ಸಿದ್ಧಪಡಿಸಿಕೊಂಡಿದ್ದರೆಂಬ ವರದಿಗಳು ವ್ಯಾಪಕವಾಗಿ ಹರಡಿದ್ದುದು ಜನರ ಆತಂಕವನ್ನು ಹೆಚ್ಚಿಸಿತ್ತು.”

* * *

ಪ್ರಧಾನಿ ಜವಾಹರಲಾಲ ನೆಹರುರಾದರೋ ಎಲ್ಲ ವದಂತಿಗಳಿಗೂ ಕಿವುಡಾಗಿದ್ದುದಲ್ಲದೆ, ಅಚ್ಚರಿ ತರುವಂಥ ಅಮಾಯಕತೆಯನ್ನು ಮೆರೆದರು! ತಾವು ತಮ್ಮ ಹಳೆಯ ಮಿತ್ರ ಲಿಯಾಖತ್-ಅಲಿ-ಖಾನ್‌ರನ್ನು ಒಲಿಸಿ ಒಂದು ಮಾತು ಹೇಳಿದೆನೆಂದರೆ ಅವರು ದಾಳಿಕೋರರನ್ನು ಹಿಂದಕ್ಕೆ ಕರೆಸಿಕೊಂಡುಬಿಡುತ್ತಾರೆ – ಎಂದು ನಂಬಿದ್ದರು. ಪಟೇಲರು ಇಂಥ ಭ್ರಮೆಗಳಿಗೊಳಗಾಗದೆ ವಾಸ್ತವಪ್ರಜ್ಞೆಗೆ ಅಂಟಿಕೊಂಡು ಅದರ ನಿರ್ದೇಶನದಂತೆ ನಿರ್ಣಯ ಕೈಗೊಂಡು ಆಚರಣೆಗೆ ತರುತ್ತಿದ್ದರು.

ನೆಹರುರವರ ಬೇಡಿಕೆಯಂತೆ ಗಾಂಧಿ ಕೋಲ್ಕತಾದಿಂದ ಹೊರಟು ದೆಹಲಿ ತಲಪುತ್ತಿದ್ದಂತೆಯೆ ದೆಹಲಿಯ ಮೇಲಣ ಉದ್ದಿಷ್ಟ ಆಕ್ರಮಣದ ಮೊದಮೊದಲ ಸೂಚನೆಗಳು ಗೋಚರಿಸಿದವು. ಗಾಂಧಿಯವರಂಥ ಸಂತರ ಉಪಸ್ಥಿತಿ ರಾಜಧಾನಿಯಲ್ಲಿನ ಕ್ಷೋಭೆಯನ್ನು ಅಣಗಿಸಬಹುದು ಎಂದು ನೆಹರು ಆಶಿಸಿದ್ದರು. ಆದದ್ದೇನು? ಸಂತ್ರಸ್ತರನ್ನೂ ನಿರಾಶ್ರಿತರನ್ನೂ ಸಾಂತ್ವನಗೊಳಿಸಲು ಗಾಂಧಿ ಅರ್ವಿನ್ ಆಸ್ಪತ್ರೆಗೆ (ಈಗ ‘ಲೋಕನಾಯಕ್ ಆಸ್ಪತ್ರೆ’) ಹೋದರು. ಅವರು ಅಲ್ಲಿಂದ ತೆರಳಿದೊಡನೆಯೆ ಆಸ್ಪತ್ರೆಯ ಮೇಲೆ ಗುಂಡಿನ ಸುರಿಮಳೆಯಾಯಿತು! ಕಿಟಕಿಗಳು ಮುರಿದುಬಿದ್ದಿದ್ದವು; ಗೋಡೆಗಳ ತುಂಬಾ ಸೀಳು-ತೂತು-ಬಿರುಕುಗಳು. ಗುಂಡುಗಳು ಬಂದಿದ್ದುದು ಎದುರಿನ ಕಟ್ಟಡಗಳಿಂದ. ಮುಸ್ಲಿಂ ಲೀಗಿನ ಪತ್ರಿಕೆ ‘ಡಾನ್’, ಮುಸ್ಲಿಂ ಲೀಗ್ ಸದಸ್ಯರ ವಸತಿಗಳು, ಒಂದು ಮಸೀದಿ – ಇವೆಲ್ಲ ಆ ಸಂಕೀರ್ಣದಲ್ಲಿಯೆ ಇರುವುದು.

ಪಟೇಲರ ವಾಸ್ತವಪ್ರಜ್ಞೆ

ಈ ವಾರ್ತೆ ತಲಪಿದೊಡನೆ ಇದು ಯುದ್ಧಸದೃಶ ಸನ್ನಿವೇಶವೆಂದು ಸರ್ದಾರ್ ಪಟೇಲ್ ಗ್ರಹಿಸಿದರು, ಕೂಡಲೆ ಕಾರ್ಯತತ್ಪರರಾದರು. ಅವರಿಂದ ನಿಯುಕ್ತರಾದ ಪೊಲೀಸ್ ಸಿಬ್ಬಂದಿಯು ‘ಡಾನ್’ ಕಚೇರಿ, ನೆರೆಯ ಮಸೀದಿ, ಮುಸ್ಲಿಂ ಮನೆಗಳು – ಎಲ್ಲವನ್ನೂ ಜಾಲಾಡಿತು. ಹೇರಳ ಸ್ಟೆನ್‌ಗನ್‌ಗಳು, ರೈಫಲ್‌ಗಳು, ರಿವಾಲ್ವರ್‌ಗಳು, ಗ್ರೈನೇಡ್‌ಗಳು, ವೈರ್‌ಲೆಸ್ ಟ್ರಾನ್ಸ್ ಮೀಟರ್‌ಗಳು ವಶವಾದವು. ದೆಹಲಿಯನ್ನು ವಶಪಡಿಸಿಕೊಳ್ಳಲು ಮುಸ್ಲಿಮರು ಪಿತೂರಿ ನಡೆಸಿದ್ದರೆಂಬ ಗುಪ್ತಚರ ಅಧಿಕಾರಿಯ ವರದಿ ಈಗ ಋಜುಗೊಂಡಿತ್ತು. ಪಟೇಲರಿಗಿದ್ದ ಇನ್ನೊಂದು ದೊಡ್ಡ ಸಮಸ್ಯೆಯೆಂದರೆ ಪೊಲೀಸ್ ಸಿಬ್ಬಂದಿಯ ಕೊರತೆ. ವಿ.ಪಿ. ಮೆನನ್ ಹೇಳುವಂತೆ: “ಪಂಜಾಬ್-ಸ್ಥಿತ ಪೊಲೀಸ್ ಪಡೆಗಳಲ್ಲಿ ಹೆಚ್ಚಿನವರು ಮುಸ್ಲಿಮರಿದ್ದು ಪಾಕಿಸ್ತಾನದ ಕಡೆಗೆ ಸೇರಿಬಿಟ್ಟಿದ್ದರು. ಈ ಕಾರಣದಿಂದ ನಮ್ಮ ಕಡೆ ಪೊಲೀಸರ ಕೊರತೆ ಏರ್ಪಟ್ಟಿತ್ತು. ಆದರೆ ಹೇಗಾದರೂ ದೆಹಲಿಯನ್ನು ಉಳಿಸಲೇಬೇಕಾಗಿತ್ತು. ರಾಜಧಾನಿಯಾದ ದೆಹಲಿಯೇ ಅಪಾಯಕ್ಕೆ ಒಳಗಾಯಿತೆಂದರೆ ನವಸ್ವತಂತ್ರ ದೇಶದ ಉಳಿದ ಭಾಗಗಳವರೂ ಗೊಂದಲಕ್ಕೀಡಾಗುವುದಿಲ್ಲವೆ? ಹೀಗೆ ತೀವ್ರ ಕ್ರಮಗಳು ಅನಿವರ‍್ಯವಾಗಿದ್ದವು.”

ಪಟೇಲರು ಕ್ಷಿಪ್ರವಾಗಿ ತುರ್ತು ಸಮಿತಿಯೊಂದನ್ನು ಸೇರಿಸಿದರು. ಸಿಮ್ಲಾದಲ್ಲಿದ್ದ ಮೌಂಟ್‌ಬ್ಯಾಟನನನ್ನೂ ಕರೆಸಿದರು. ತಮ್ಮನ್ನು ಅನಿವರ‍್ಯಗೊಳಿಸಿಕೊಳ್ಳುವುದೂ ಒಂದು ಜನಜನಿತ ಬ್ರಿಟಿಷ್ ಕುತಂತ್ರ. ದೆಹಲಿಯಲ್ಲಿ ಮೌಂಟ್‌ಬ್ಯಾಟನ್‌ನಿದ್ದುದು ಪಾಕಿಸ್ತಾನದೊಳಗಿನ ಬಂಡುಕೋರರ ಉರುಬನ್ನು ತಗ್ಗಿಸೀತೆಂಬುದು ನೆಹರು ಮತ್ತು ಪಟೇಲರ ಲೆಕ್ಕಾಚಾರವಾಗಿತ್ತು.

ತುರ್ತು ಸಮಿತಿಯಲ್ಲಿ ೧೫ ಮಂದಿ ಸದಸ್ಯರಿದ್ದರು. ಸಚಿವಸಂಪುಟ ಸದಸ್ಯರು, ಸೇನಾ ದಂಡನಾಯಕ ಹಾಗೂ ಅನ್ಯ ಉನ್ನತ ಸೇನಾಧಿಕಾರಿಗಳು, ದೆಹಲಿಯ ಕಮಿಶನರ್, ಪೊಲೀಸ್ ಇನ್‌ಸ್ಪೆಕ್ಟರ್-ಜನರಲ್, ವೈಮಾನಿಕ ಹಾಗೂ ವೈದ್ಯಕೀಯ ಇಲಾಖೆಗಳ ಪ್ರಮುಖರು. ೧೯೪೭ ಸೆಪ್ಟೆಂಬರ್ ೬ಕ್ಕೆ ಆರಂಭವಾದ ಸಭೆಗಳ ಅಧ್ಯಕ್ಷತೆಯನ್ನು ಮೌಂಟ್‌ಬ್ಯಾಟನನಿಗೆ ವಹಿಸಲಾಯಿತು. ಸಭೆ ನಡೆದದ್ದೂ ಮೌಂಟ್‌ಬ್ಯಾಟನನ ವ್ಯಾಸಂಗಕಕ್ಷದಲ್ಲಿಯೇ. ಆವಶ್ಯಕ ಕಾರ್ಯಾಚರಣೆಯ ಪಡೆಗೆ ಪಟೇಲರೇ ಮುಖಂಡರಾಗಿರಬೇಕೆಂದು ನೆಹರು ಸೇರಿದಂತೆ ಎಲ್ಲರ ಅಭಿಮತವಾಗಿತ್ತು. ಪಟೇಲರ ಕರ್ತೃತ್ವಶಾಲಿ ವ್ಯಕ್ತಿತ್ವವನ್ನು ಡಿ.ಪಿ. ಮಿಶ್ರ ಹೇಳುತ್ತಾರೆ: “ಪಟೇಲರ ಚಹರೆ, ಆಗಿನ ರಾಜಧಾನಿಯ ಸ್ಥಿತಿಯಷ್ಟೆ ಗಂಭೀರವಾಗಿತ್ತು.”

ನಿಜ ನಾಯಕತ್ವ

ಗಾಂಧಿ-ನೆಹರುರಂತೆ ಪಟೇಲ್ ಪಾಕಿಸ್ತಾನದ ಯಾವುದೇ ಭ್ರಮೆಗಳಿಗಾಗಲಿ ಅನಿಶ್ಚಿತತೆಗಳಿಗಾಗಲಿ ಒಳಗಾದವರಲ್ಲ – ಕಠಿಣ ಕ್ರಮಗಳನ್ನು ಕೈಗೊಳ್ಳಲು ಎಂದೂ ಹಿಂದೆಗೆದವರಲ್ಲ. ತತ್‌ಕ್ಷಣವೇ ಸೇನಾಧಿಕಾರಿಗಳಿಗೂ ಪೊಲೀಸರಿಗೂ ಪೂರ್ಣ ಕಾರ್ಯಸ್ವಾತಂತ್ರ್ಯ ನೀಡಿದರು. ಉತ್ತರಪ್ರದೇಶ, ಮಧ್ಯಪ್ರದೇಶ ಮೊದಲಾದ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಅವರ ಪೊಲೀಸ್ ಪಡೆಗಳನ್ನು ಕೂಡಲೇ ದೆಹಲಿಗೆ ಕಳಿಸುವಂತೆ ಆದೇಶಿಸಿದರು. ಡಿ.ಪಿ. ಮಿಶ್ರರಿಗೂ ಆ ಪತ್ರ ತಲಪಿತು.

ವಾಸ್ತವಸ್ಥಿತಿಯನ್ನು ಅರಿಯಲು ಪಟೇಲರೇ ಖುದ್ದಾಗಿ ಪ್ರತಿದಿನ ದೆಹಲಿಯ ರಸ್ತೆಗಳಲ್ಲೆಲ್ಲ ಸಂಚರಿಸಿದರು.

ಆ ದಿನಗಳ ಒಂದು ಘಟನೆಯನ್ನು ಪ್ಯಾರೇಲಾಲ್ ದಾಖಲೆ ಮಾಡಿದ್ದಾರೆ. ಮುಸ್ಲಿಮರು ಆಕ್ರಮಿಸಿಕೊಂಡಿದ್ದ ಕಟ್ಟಡವೊಂದರಲ್ಲಿ ಇಪ್ಪತ್ತನಾಲ್ಕು ಗಂಟೆಗಳಿಂದ ಸತತ ಗುಂಡಿನ ಚಕಮಕಿ ನಡೆದಿದ್ದುದು ಪಟೇಲರ ಗಮನಕ್ಕೆ ಬಂದಿತು. ಸಂಗಡ ಇದ್ದ ಉನ್ನತ ಸೇನಾಧಿಕಾರಿಯನ್ನು ಪಟೇಲ್ ಪ್ರಶ್ನಿಸಿದರು: “ಆ ಕಟ್ಟಡವನ್ನು ಇನ್ನೂ ಏಕೆ ತೆರವು ಮಾಡಿಸಿಲ್ಲ?” ಆತ ಹೇಳಿದ – “ನಮ್ಮ ಸಿಬ್ಬಂದಿ ಸಾಲದು. ಒಂದೇ ಪರ್ಯಾಯವೆಂದರೆ ಆ ಇಡೀ ಕಟ್ಟಡವನ್ನೇ ಸುಟ್ಟುಹಾಕುವುದು.”

ಪಟೇಲ್ ಕ್ಷಣವೂ ಆಲಸ್ಯ ಮಾಡದೆ ಉತ್ತರಿಸಿದರು:

“ಹಾಗಾದರೆ ಇನ್ನೂ ಏಕೆ ತಡಮಾಡುತ್ತಿದ್ದೀರಿ?”

ಸೈನಿಕರಿಗೆ ಬೇಕಾಗಿದ್ದುದು ಇಂಥ ನಾಯಕತ್ವ.

ಕೆಲವೇ ದಿನಗಳಲ್ಲಿ ದೆಹಲಿಯ ಪರಿಸ್ಥಿತಿ ತಹಬಂದಿಗೆ ಬಂದಿತು. ಪಾಕಿಸ್ತಾನದಲ್ಲಿ ಯೋಜಿತವಾಗಿ ಮುಸ್ಲಿಂ ಲೀಗಿನಿಂದ ಸಂಚಾಲಿತವಾಗತೊಡಗಿದ್ದ ಪಿತೂರಿಯನ್ನು ಸರ್ದಾರ್ ಪಟೇಲ್ ನಿಃಶೇಷಗೊಳಿಸಿದರು.

ಆದರೆ ಅತ್ಯಂತ ನಿಂದನೀಯವೆನಿಸುವ ವರ್ತನೆಗೆ ಸಾಕ್ಷಿಪ್ರಾಯವಾದ ಬೆಳವಣಿಗೆಯನ್ನು ಇಲ್ಲಿ ಉಲ್ಲೇಖಿಸಬೇಕು. ಡಿ.ಪಿ. ಮಿಶ್ರ ಅವರೇ ಹೇಳಿರುವಂತೆ: “ರಾಜಧಾನಿಯನ್ನುಳಿಸಲು ಪಟೇಲ್ ಕೈಗೊಂಡ ಕ್ರಮಗಳನ್ನು ಗಾಂಧಿಯವರಾಗಲಿ ನೆಹರುರವರಾಗಲಿ ಮೌಲಾನಾ ಆಜಾದ್‌ರಾಗಲಿ ಅನುಮೋದಿಸಲಿಲ್ಲ.” ವ್ಯಾಖ್ಯಾನದ ಆವಶ್ಯಕತೆ ಇಲ್ಲ.

***

Facebook
X
WhatsApp
Print
Email