ತುಳುನಾಡು ಎಂದು ಚರಿತ್ರೆಯಲ್ಲಿ ಪ್ರಸಿದ್ಧವಾಗಿರುವ ಕರ್ನಾಟಕದ ಕರಾವಳಿಯ ದಕ್ಷಿಣ ಭಾಗ ಪ್ರಾಚೀನ ಕಾಲದಿಂದಲೂ ಕನ್ನಡನಾಡಿನ ಭಾಗವೆಂದೇ ಪರಿಗಣನೆಗೆ ಬರಲು ಕಾರಣ ಕನ್ನಡ ರಾಜವಂಶಗಳು ಈ ಪ್ರದೇಶವನ್ನು ತಮ್ಮ ಅಂಕೆಯೊಳಗೆ ಇಟ್ಟುಕೊಂಡದ್ದೇ ಆಗಿದೆ. ಇಲ್ಲಿನ ಬಹುತೇಕ ಜನರಾಡುವ ಮಾತೃಭಾಷೆ ತುಳುವೇ ಆಗಿದೆ. ಈ ಭಾಷೆಗೆ ಒಂದು ಲಿಪಿಯೂ ಇದೆ; ಈ ಲಿಪಿಯಲ್ಲಿ ಆಳುಪರ ಸಹಿತ ರಾಜರು ಶಾಸನಗಳನ್ನೂ ಬರೆಸಿದ್ದಾರೆ; ಕವಿಗಳು ಕಾವ್ಯಗಳನ್ನೂ ಬರೆದಿದ್ದಾರೆ. ಆದರೆ ಕನ್ನಡವು ಇಲ್ಲಿನ ರಾಜಭಾಷೆಯಾಗಿಯೂ, ಸಂಪರ್ಕ ಭಾಷೆಯಾಗಿಯೂ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ.
ಈಗಿನ ದಕ್ಷಿಣಕನ್ನಡ, ಕಾಸರಗೋಡು ಮತ್ತು ಉಡುಪಿ ಜಿಲ್ಲೆಗಳು ಸೇರಿದ ವಿಭಜನಪೂರ್ವ ದಕ್ಷಿಣಕನ್ನಡ ಜಿಲ್ಲೆಯನ್ನು ತುಳುನಾಡು ಎಂದು ಕರೆಯುವುದು ವಾಡಿಕೆ. ಮೊದಲು ಕಾಸರಗೋಡು ಜಿಲ್ಲೆಯ ಚಂದ್ರಗಿರಿ ನದಿಯಿಂದ ಉಡುಪಿ ಜಿಲ್ಲೆಯ ಸೀತಾನದಿಯವರೆಗೂ ತುಳುನಾಡಿನ ವ್ಯಾಪ್ತಿಯಿತ್ತು. ಕೆಲವರ ಪ್ರಕಾರ ಸುವರ್ಣಾ ನದಿಯೇ ಉತ್ತರದ ಗಡಿಯಾಗಿದೆ. ವಿಜಯನಗರದ ಆಳ್ವಿಕೆಯಲ್ಲಿ ತುಳು ರಾಜ್ಯವನ್ನು ಎರಡಾಗಿ ವಿಂಗಡಿಸಿ ಉತ್ತರದಲ್ಲಿ ಬಾರಕೂರು ಮತ್ತು ದಕ್ಷಿಣದಲ್ಲಿ ಮಂಗಳೂರು ರಾಜಧಾನಿಯಾಗಿ ಉಳ್ಳ ಎರಡು ರಾಜ್ಯಗಳನ್ನು ಮಾಡಿ ಎರಡಕ್ಕೂ ಒಬ್ಬೊಬ್ಬ ರಾಜ್ಯಪಾಲರನ್ನು ನೇಮಿಸಿದ್ದರು. ಬಾರಕೂರನ್ನು ಈಗಲೂ ತುಳು ರಾಜ್ಯದ ರಾಜಧಾನಿ ಎಂದು ಕರೆಯುವ ವಾಡಿಕೆಯಿದೆ.
ಬಾರಕೂರು (ಬಾರ್ಕೂರು) ಎನ್ನುವುದು ತುಳು ರಾಜ್ಯದ ರಾಜಧಾನಿ, ತುಳುನಾಡಿನ ಹಂಪೆ ಎಂದು ಪೇಜಾವರ ಸದಾಶಿವರಾಯರು ತಮ್ಮ ‘ಲಕ್ಕಣ’ ಕವಿತೆಯಲ್ಲಿ ಹೇಳಿದ್ದಾರೆ:
“ತೌಳವವಿಭವದ ವಸನವನುಟ್ಟು
ಬಿಂಕದಿ ನಿಂತಿದೆ ಬಾರ್ಕೂರು
ಭೂಪತಿ ಪಾಂಡ್ಯ ದಿಗಂಬರ ಜೈನರ
ಮಾತೆಯ ವಿಜಯದ ತವರೂರು
ನಾಡಿಗರೊಲುಮೆಯ ಸೊಗದೂರು…
ಇದು ತುಳು ನಾಡಿನ ಹಂಪೆ
ಈಗಿದು ಕೊಳೆ ಕೊಂಪೆ”
ಕಯ್ಯಾರ ಕಿಞ್ಞಣ್ಣ ರೈಯವರು ‘ತುಳುನಾಡಿತಿ’ ಕವಿತೆಯಲ್ಲಿ ಹೀಗೆ ಹೇಳಿದ್ದಾರೆ:
“ಕಾಲನು ಕುಣಿತದಿ ಕೆದರೆ
ಹಾ! ಹಾಳಾಯಿತೆ ಬಿದಿರೆ!
ಬಾರ್ಕೂರಿನ ರಸ ಕಥೆಯ
ಗತ ವೈಭವದುರುವ್ಯಥೆಯ.”
ಬಾರಕೂರು ಈಗ ಕನ್ನಡ ಮಾತಾಡುವವರ ಊರಾಗಿದೆ; ಅಲ್ಲಿ ಬೆರಳೆಣಿಕೆಯಷ್ಟು ತುಳು ಕುಟುಂಬಗಳು ಇರಬಹುದೇನೋ. ಆದರೆ ತುಳುನಾಡಿನ ಒಬ್ಬ ಪ್ರಾಚೀನ ರಾಜ ಎಂದು ಇತಿಹಾಸದಲ್ಲಿ ಗುರುತಿಸಬಹುದಾದ ಕ್ರಿಸ್ತಶಕ ಒಂದನೆಯ ಶತಮಾನದ ಭೂತಾಳ ಪಾಂಡ್ಯ ದೊರೆಯು ಬಾರಕೂರಿನಲ್ಲಿ ರಾಜ್ಯವಾಳುತ್ತಿದ್ದವನು.
ಪ್ರಾಚೀನ ಉಲ್ಲೇಖಗಳಿಂದ ಊಹಿಸಬಹುದಾದಂತೆ ಪ್ರಾರಂಭದಲ್ಲಿ ಸಾತವಾ(ಹ)ನರು ಈ ನಾಡನ್ನು ಆಳಿದ್ದಾಗಿ ಗೋವಿಂದ ಪೈಗಳು ಹೇಳುತ್ತಾರೆ. ಈ ಸಾತವಾಹನ ರಾಜನ ರಾಜಧಾನಿ ಬಸರೂರು ಇರಬಹುದು. ಬಸರೂರಿನಲ್ಲಿ ತುಳುವೇಶ್ವರ (ಈಗಲೂ ಇದರ ಗರ್ಭಗುಡಿಯು ಮರದ ಪೊಟರೆಯೊಂದರಲ್ಲಿ ಇದ್ದು ಪೂಜೆ ಸಲ್ಲುತ್ತಿದೆ.) ಮತ್ತು ತುಳುವೇಶ್ವರಿ (ಭೂಗತವಾಗಿದೆ) ದೇವಾಲಯಗಳಿದ್ದವು. ಅಷ್ಟಮಂಗಲ ಜ್ಯೋತಿಷ್ಯ, ಹಿರಿಯರ ಹೇಳಿಕೆಗಳು ಇತ್ಯಾದಿಗಳಿಂದ ತಿಳಿದುಬಂದ ಪ್ರಕಾರ ಅವುಗಳನ್ನು ತುಳುನಾಡಿನ ರಾಜರು ಸ್ಥಾಪಿಸಿದ್ದೆಂದು ಹೇಳಲಾಗುತ್ತಿದೆ. ಬಸರೂರಿನ ಹತ್ತಿರ ಸಾತವಾಡಿ ಎಂಬ ಹಳ್ಳಿಯಿದೆ. ಹೀಗಾಗಿ ಸಾತವಾಹನರು ಬಸರೂರನ್ನೇ ರಾಜಧಾನಿಯನ್ನಾಗಿ ಮಾಡಿಕೊಂಡಿದ್ದರೆಂಬುದು ಒಂದು ಊಹೆಯಷ್ಟೆ.
ಗೋವಿಂದ ಪೈಗಳ ಅಧ್ಯಯನಾಧಾರಿತ ಚಿಂತನೆ ಹೀಗಿದೆ: ಪ್ರಾಚೀನ ತುಳುನಾಡಿನಲ್ಲಿ ಒಂದು ಬಗೆಯ ‘ಅರಾಜಕ’ (ನಿಶ್ಚಿತ ರಾಜವಂಶ ಇಲ್ಲದ ಸ್ಥಿತಿ) – ಪ್ರಜಾಪ್ರಭುತ್ವ ಪದ್ಧತಿ ಇತ್ತು. ಮೊದಲನೆಯ ಸಾತವಾನ ರಾಜನು ಪ್ರಜೆಗಳ ಕೋರಿಕೆಯಂತೆ ರಾಜ್ಯಭಾರವನ್ನು ನಿರ್ವಹಿಸಿರಬೇಕೆಂದು ಪೈಗಳು ಹೇಳುತ್ತಾರೆ.
ಪ್ರಾಚೀನ ತುಳುನಾಡಿಗೆ ‘ತಾಲವನ’ ಎಂಬ ಹೆಸರಿತ್ತು. ಸಂಸ್ಕೃತದ ಈ ಪದದ ಪ್ರಾಕೃತ ರೂಪ ‘ಸಾತವಾನ’ ಎಂದಾಗುತ್ತದೆ. ‘ಸಾತವಾನ’ (ಅಂದರೆ ತಾಲವಾನ – ತಾಲವನದ ಒಡೆಯ) ಎನ್ನುವುದು ದಾಖಲೆಯಲ್ಲಿ ಸಿಗುವ ಅತ್ಯಂತ ಹಿಂದಿನ ರಾಜನ ಹೆಸರು – ಅದು ಬಹುಶಃ ಅವನನ್ನು ಪಟ್ಟಕ್ಕೇರಿಸಿದಾಗ ಇಲ್ಲಿನ ಜನ ಕೊಟ್ಟ ಬಿರುದು – ಎಂದು ಪೈಗಳು ಅಭಿಪ್ರಾಯಪಟ್ಟಿದ್ದಾರೆ. ಸಾತವಾನ (ಸಾತವಾಹನ) ನಂತರ ವಂಶಕ್ಕೆ ಅಂಟಿಕೊಂಡ ಹೆಸರಾಯಿತು.
ಪೈಗಳ ವಾದ (‘ಗೋವಿಂದ ಪೈ ಸಂಶೋಧನ ಸಂಪುಟ’, ೧೯೯೫) ಹೀಗಿದೆ: “…. ‘ಸಾತವಾಹನ’ರ ಹಿರಿಯರು ಆರ್ಯಾವತದಿಂದ ದಕ್ಷಿಣಾಪಥಕ್ಕೆ ಇಳಿತಂದು ನಮ್ಮೀ ತುಳುನಾಡಿನಲ್ಲಿ ನೆಲೆಸಿರಬೇಕು; ಮತ್ತೀ ತುಳುನಾಡಿನಿಂದಲೇ ಅವರ ಕುಲದಲ್ಲಿಯ ಈ ‘ಸಾತವಾಹನ’ ವಂಶವು ಮೊಳೆತಿರಬೇಕು, ಅಂದರೆ ‘ಸಾತವಾಹನ’ ಎಂಬೀ ವಂಶದ ಮೂಲಸ್ಥಾನವು ಈ ತುಳುನಾಡಾಗಿರಬೇಕು.” (ಪುಟ ೫೬೮). “….ಅಶೋಕನ ಶಿಲಾಲೇಖದಲ್ಲಿ ‘ಕೇರಲಪುತ’ ದೇಶದ ನೆರೆಯಲ್ಲಿ ಅಂದರೆ ‘ತಾಲವನ’ ಅಥವಾ ‘ಸಾತಿಯ (ಪುತ)’ ಎಂಬೀ ತುಳುನಾಡಿನಲ್ಲಿ ರಾಜನಾದಾಗ ತನ್ನ ‘ಸಾತವಾ(ಹ)ನ’ ಎಂಬ ಹೆಸರನ್ನು ಈ ದೇಶದಿಂದ ಹೆಸರಿನಿಂದಲೇ ಆಂತುಕೊಂಶುದಲ್ಲದೆ, ಅದು ಆತಗೆ ಅದಕ್ಕಿಂತ ಮುಂಚಿತವಾಗಿ ಇದ್ದ ಹೆಸರಲ್ಲ; ಇದು ಹೇಗಂದರೆ – ‘ತಾಲವನ’ ದೇಶ – ‘ತಾಲವಾನ’ರು ಎಂದರೆ ತದ್ದೇಶೀಯರು – ‘ತಾಲವಾನ’ = ‘ಸಾತವಾನ’ = ‘ಸಾತವಾ(ಹ)ನ’. ಸಂಸ್ಕೃತ ಶಬ್ದವೆಂದು ಭಾವಿಸಲ್ಪಟ್ಟಿರುವ ಈ ‘ಸಾತವಾ(ಹ)ನ’ ಶಬ್ದವು ‘ತಾಲವನ’ ಎಂಬುದರಿಂದಲೇ ಉಂಟಾದ ಪ್ರಾಕೃತ ಶಬ್ದವೆಂಬುದು ಯಥಾರ್ಥವೆಂದು ಕಾಣುತ್ತದೆ.” (ಪುಟ ೫೬೯)
“ಶಾಲಿವಾಹನ ಎಂಬ ಶಬ್ದವು ಹೀಗೆಯೇ ‘ತಾಲೀವಹನ’ ಎಂಬ ಮೂಲ ಶಬ್ದದಿಂದುಂಟಾದುದು” ಎಂದೂ ಪೈಗಳು ಸ್ಪಷ್ಟಪಡಿಸಿದ್ದಾರೆ (ಪುಟ ೫೬೯). ಅಂದರೆ ಶಾಲಿವಾಹನ ಶಕೆಗೂ ಸಾತವಾಹನರಿಗೂ, ತುಳುನಾಡಿಗೂ ಸಂಬಂಧವಿದೆ ಎನ್ನುವುದನ್ನು ಊಹಿಸಲು ಸಾಧ್ಯವಾಗುತ್ತದೆ.
ಅಶೋಕನ ಶಾಸನಗಳಲ್ಲಿ ಉಲ್ಲೇಖಿತವಾಗಿರುವ ಆತನ ಸಾಮ್ರಾಜ್ಯದ ಹೊರಗಿನ ಸ್ವತಂತ್ರ ಪ್ರದೇಶಗಳಾದ ಕೇರಳ ಪುತೊ ಮತ್ತು ‘ಸಾತ ಪುತೊ’ಗಳಲ್ಲಿ ‘ಸಾತ ಪುತ್ರರು’ ಎನ್ನುವ ಅರ್ಥದ ಪದ ತುಳುನಾಡಿನವರನ್ನು ಸೂಚಿಸುತ್ತದೆ. ಅಶೋಕನ ಕಾಲ ಕ್ರಿಸ್ತಪೂರ್ವ ೩ನೆಯ ಶತಮಾನವಾದುದರಿಂದ ಆವೇಳೆಗಾಗಲೆ ತುಳುನಾಡನ್ನು ಸಾತವಾಹನರು ಆಳುತ್ತಿದ್ದರು ಎಂದು ಗೋವಿಂದ ಪೈಗಳು ಅಭಿಪ್ರಾಯಪಟ್ಟಿದ್ದಾರೆ.
ಕೆಲವು ಚಿಂತಕರು ಅಶೋಕನ ಶಾಸನಗಳಲ್ಲಿರುವ ಪದದ ಅರ್ಥ ‘ಸತಿಯ ಪುತ್ರ’ ಅಂದರೆ ಅದು ಮಾತೃಮೂಲೀಯ ಕುಟುಂಬ ವ್ಯವಸ್ಥೆ ಉಳ್ಳ ತುಳುವರನ್ನು ಸೂಚಿಸುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಆದರೆ ಅದು ಜನಾಂಗವಾಚಕ ಪದವಾಗಿ ಸ್ವೀಕಾರಾರ್ಹವಲ್ಲ. ಗೋವಿಂದ ಪೈಗಳ ಅಭಿಪ್ರಾಯವನ್ನು ಇಲ್ಲಿ ಸ್ವೀಕರಿಸಲಾಗಿದೆ.
ಶಾಲಿವಾಹನ ಶಕಪುರುಷ ಯಾರು?
ತುಳುನಾಡಿನಲ್ಲಿ ಶಾಲಿವಾಹನ ಶಕೆಯು ಪ್ರಚಲಿತವಾಗಿದೆ. ಅದು ಕ್ರಿಸ್ತಶಕ ಅಥವಾ ಸಾಮಾನ್ಯ ಶಕೆಗಿಂಗ ೭೮ ವರ್ಷ ಈಚೆಗಿನದು; ಮತ್ತು ಚಾಂದ್ರಮಾನವನ್ನು ಅನುಸರಿಸುವಂಥದ್ದು. ಉದಾಹರಣೆಗೆ ೨೦೨೫ರ ಚಾಂದ್ರಮಾನ ಯುಗಾದಿಯಿಂದ ಪ್ರಾರಂಭಿಸಿ ೨೦೨೬ರ ಚಾಂದ್ರಮಾನ ಯುಗಾದಿಯವರೆಗೆ ಶಾಲಿವಾಹನ ಶಕವರ್ಷ ೧೯೪೭ ನಡೆಯುತ್ತಿದೆ. (ಈ ವರ್ಷವನ್ನು ಬೇರೆ ಶಕಮಾನಗಳಲ್ಲಿ ಹೇಳುವುದಾದರೆ ಕಲಿವರ್ಷ ೫೧೨೬; ವಿಕ್ರಮ ಶಕವರ್ಷ೨೦೮೧-೮೨. ಮಹಾವೀರ ಶಕವರ್ಷ ೨೫೫೧-೫೨.)
ಈ ಶಾಲಿವಾಹನ ಯಾರು ಎನ್ನುವ ಬಗ್ಗೆ ಖಚಿತವಾದ ತೀರ್ಮಾನಕ್ಕೆ ಬರಲು ಸಾಧ್ಯವಾಗಿಲ್ಲ. ಶಾಲಿವಾಹನ ಎಂದರೆ ಶಾತವಾಹನ ದೊರೆ ಎನ್ನುವ ಅಭಿಪ್ರಾಯವು ಪ್ರಧಾನವಾಗಿ ಮೂಡಿಬಂದಿದೆ. ಆತನು ವಿಕ್ರಮ ಶಕಕ್ಕೆ ಸಂಬಂಧಿಸಿದ ಉತ್ತರಭಾರತದ ವಿಕ್ರಮನನ್ನು ಪರಾಭವಗೊಳಿಸಿದ ವರ್ಷದಿಂದ ಶಾಲಿವಾಹನ ಶಕೆಯ ಪರಿಗಣನೆ ಪ್ರಾರಂಭವಾಯಿತು ಎಂದು ಹೇಳುತ್ತಾರೆ. ಶಾಲಿವಾಹನ ಜನ್ಮದಿನಾಂಕದಿಂದ ಪರಿಗಣನೆ ಎನ್ನುವುದು ಇನ್ನೊಂದು ಅಭಿಪ್ರಾಯ. ವಿಕ್ರಮನನ್ನು ಪರಾಭವಗೊಳಿಸಿದ ವರ್ಷ ಎನ್ನುವುದು ಸಾಂಕೇತಿಕವೂ ಆಗಿರಬಹುದು. ತುಳುನಾಡಿನಲ್ಲಿ ತಮ್ಮದೇ ಆದ ಕಾಲಗಣನೆಯನ್ನು ಪ್ರಾರಂಭಿಸಿದ ಒಂದು ಪ್ರಮುಖ ವರ್ಷ ಅದು ಎನ್ನುವುದಕ್ಕೆ ಎರಡು ಮಾತಿಲ್ಲ. ಆಳುಪ ಅರಸರು ಶಾಲಿವಾಹನ ಶಕವನ್ನು ಉಲ್ಲೇಖಿಸಿ ಶಾಸನಗಳನ್ನು ಬರೆಸಿದ್ದಾರೆ. ಆದರೆ ಕೆಳಗೆ ಉಲ್ಲೇಖಿಸಿದ ಕದ್ರಿ ಲೋಕೇಶ್ವರ ವಿಗ್ರಹದ ಶಾಸನ ಒಂದರಲ್ಲಿ ಮಾತ್ರ ಶಾಲಿವಾಹನ ಶಕವನ್ನು ಹೇಳದೆ, ಕಲಿಯುಗದ ಲೆಕ್ಕಾಚಾರವನ್ನು ಬಳಸಿದ್ದಾರೆ. ಇದಕ್ಕೆ ಕಾರಣ ಈ ಲೆಕ್ಕಾಚಾರ ದೇಶದ ಇತರ ಭಾಗದವರಿಗೂ ತಿಳಿಯಲಿ ಎಂದಾಗಿರಬಹುದು ಎನ್ನುವುದು ಗೋವಿಂದ ಪೈಗಳ ವಿವರಣೆಯಾಗಿದೆ.
ತಮಿಳುನಾಡಿನಲ್ಲಿ ‘ಚೋಳ ಪೂರ್ವ ಪಟಯಮ್’ ಎನ್ನುವ ತಮಿಳು ಹಸ್ತಪ್ರತಿಯಿದೆ. ಅದರಲ್ಲಿ ಶಾಲಿವಾಹನನ ಮೂಲ ಹೆಸರು ‘ಭೋಜ’, ಅವನು ಅಯೋಧ್ಯೆಯಲ್ಲಿ ಕುಂಬಾರರ ವಂಶದಲ್ಲಿ ಜನಿಸಿದವನು (ಹಾಗಾಗಿ, ತುಳುನಾಡಿನ ಕುಲಾಲ ಸಮುದಾಯದವರು ಶಾಲಿವಾಹನನ ವಂಶದವರು ಎನ್ನುವ ಅಭಿಪ್ರಾಯ ಇದೆ), ‘ಜೈನ ಧರ್ಮದ್ದು’ ಎನ್ನಬಹುದಾದ ನಂಬಿಕೆಯುಳ್ಳವನು ಇತ್ಯಾದಿ ವಿವರಗಳಿವೆ. ಮುಖ್ಯವಾಗಿ ಶಿವನು ಅವನನ್ನು ಸೋಲಿಸಲು ಚೋಳ, ಚೇರ ಮತ್ತು ಪಾಂಡ್ಯ ಎಂಬ ಮೂರು ರಾಜವಂಶಗಳನ್ನು ಸೃಷ್ಟಿಸಿ ಶಾಲಿವಾಹನನ್ನು ಸೋಲಿಸಲು ಕಳುಹಿಸಿದನು. ಕಾಂಚಿಯ ದುರ್ಗೆಯ (ಕಾಮಾಕ್ಷಿ?) ಆಶೀರ್ವಾದದಿಂದ ಮತ್ತು ಕಾಶಿಯ ಅನುಗ್ರಹದಿಂದ ಈ ಮೂವರು ಶಾಲಿವಾಹನನ್ನು ಯುದ್ಧದಲ್ಲಿ ಸೋಲಿಸುತ್ತಾರೆ. ಶಿವ ಮತ್ತು ವಿಷ್ಣುವಿನ ಆರಾಧನೆ ಮಾಡುವಂತೆ ಶಾಲಿವಾಹನನ ಮೇಲೆ ಒತ್ತಡಹೇರುತ್ತಾರೆ. ಈ ಕಥೆಯಲ್ಲಿ ಕೆಲವು ಐತಿಹಾಸಿಕ ಮಾಹಿತಿಗಳು ಆಶಯಗಳ ಹೊದಿಕೆಯಡಿಯಲ್ಲಿ ಹುದುಗಿರುವ ಸಾಧ್ಯತೆ ಇದೆ.
ಶಾಲಿವಾಹನ ಶಕದ ಮೊತ್ತಮೊದಲನೆಯ ಉಲ್ಲೇಖ ಇರುವುದು ಕನ್ನಡದ ಪಠ್ಯವೊಂದರಲ್ಲಿ ಎನ್ನುವುದು ಕುತೂಹಲಕರ. ಸೋಮರಾಜನ ‘ಉದ್ಭಟಕಾವ್ಯ’ದಲ್ಲಿ ಶಾಲಿವಾಹನ ಶಕದ ಉಲ್ಲೇಖವಿದೆ. ತನ್ನ ಕಾವ್ಯವು ಶಾಲಿವಾಹನ ಶಕ ೧೧೪೪ರಲ್ಲಿ (ಸಾಮಾನ್ಯ ಶಕ ೧೨೨೨) ಸಮಾಪ್ತಿಯಾಯಿತು ಎಂದು ಆತನೇ ಹೇಳಿಕೊಂಡಿದ್ದಾನೆ. ಈ ಸೋಮರಸನು ತುಳುನಾಡಿನವನೇ ಎಂದು ಕಯ್ಯಾರ ಕಿಞ್ಞಣ್ಣ ರೈಗಳು ಹೇಳುವುದು ಕುತೂಹಲಕರವಾಗಿದೆ.
ಈ ಶಾಲಿವಾಹನನು ಸಾತವಾನ (ಶಾತವಾಹನ)ನೇ, ಅಂದರೆ ತುಳುನಾಡನ್ನು ಆಳಿದ ರಾಜನೇ ಆಗಿರಬೇಕು. ಕ್ರಿಸ್ತಶಕ ಒಂದನೆಯ ಶತಮಾನದಲ್ಲಿ ಇದ್ದ ಶಕಪುರುಷ ಶಾಲಿವಾಹನನು ತುಳುನಾಡನ್ನಾಳಿದ ಮೊದಲನೆಯ ಸಾತವಾನನೇ ಆಗಿರುವ ಸಾಧ್ಯತೆ ಇರಲಾರದು. ನಂತರದ ಸಾತವಾನನೊಬ್ಬನಾಗಿರಬೇಕು. ಆದರೆ ತುಳುನಾಡಿನವರು ಸಾತವಾಹನರನ್ನು ತಮ್ಮ ರಾಜರೆಂದು ಪರಿಗಣಿಸಿ, ಶಾಲಿವಾಹನ ಶಕೆಯನ್ನು ಈಗಲೂ ಅನುಸರಿಸುತ್ತಾರೆ.
ತುಳುನಾಡಿನ ಬೆರ್ಮನು ಸಾತವಾನನೆ?
ತುಳುನಾಡಿನಲ್ಲಿ ಪ್ರಧಾನವಾದ ದೈವವನ್ನು ‘ಬೆರ್ಮೆ’ ಅಥವಾ ‘ಬೆರ್ಮೆರ್’ ಎಂದು ಕರೆಯುತ್ತಾರೆ. ತಮಿಳಿನ ‘ಪೆರುಮಾನ್ / ಪೆರುಮಾಳ್’ ಎನ್ನುವ ಹಾಗೆ ‘ಪೂರ್ವಜ / ದೇವತಾಸ್ವರೂಪಿ’ ಎಂಬ ಅರ್ಥ ಕೊಡುವ ಪದ ಅದು. ಅವನ ವಿಗ್ರಹದ ರೂಪ ಹೆಚ್ಚಿನ ಕಡೆಗಳಲ್ಲಿ ಕುದುರೆಯ ಮೇಲೆ, ರಾಜಶಿರಸ್ತಾçಣ ತೊಟ್ಟು, ಕೈಯಲ್ಲಿ ಖಡ್ಗ ಹಿಡಿದು ಕುಳಿತಿರುವ ಯೋಧನದು. ಈ ರೂಪವು ಸಾತವಾನ ಅಥವಾ ಶಾಲಿವಾಹನನದಾಗಿರುವ ಸಂಭವ ಹೆಚ್ಚು. ಈ ಸಾತವಾನನೇ ‘ಶಾಸ್ತಾವು’ ಎಂದು ಗುಡಿಗಳಲ್ಲಿ ನಂಬುವ ದೇವರು ಎಂದು ಗೋವಿಂದ ಪೈಗಳ ಅಭಿಪ್ರಾಯವನ್ನು ಇಲ್ಲಿ ಉಲ್ಲೇಖಿಸಬಹುದು.
ಬಾರಕೂರಿನ ಪಾಂಡ್ಯರು
ಬಾರಕೂರಿನ ಪಾಂಡ್ಯ ವಂಶದ ಪ್ರಾರಂಭವೂ ಹೀಗೆ ಜನರು ಜಯ ಪಾಂಡ್ಯನನ್ನು ರಾಜನಾಗುವಂತೆ ಕೇಳಿಕೊಂಡ ಕಾರಣದಿಂದ ಆಯಿತೆಂದು ಗಣಪತಿರಾವ್ ಐಗಳ್ ಹೇಳುತ್ತಾರೆ. ಕೆಳಗೆ ‘ದೇವಪಾಂಡ್ಯ – ಭೂತಾಳ ಪಾಂಡ್ಯ’ ಎಂಬ ವಿಷಯದಡಿಯಲ್ಲಿ ಇದರ ವಿವರಗಳಿವೆ.
ತುಳುನಾಡಿನಲ್ಲಿ ಕ್ರಿಸ್ತಪೂರ್ವ ಶತಮಾನಗಳಲ್ಲಿ ನಾಲ್ಕು ಭಾಷೆಗಳನ್ನು ಬಲ್ಲ ಕೋಶರರು ರಾಜ್ಯವಾಳುತ್ತಿದ್ದರು ಎನ್ನುವ ಉಲ್ಲೇಖವಿದೆ. ಈ ನಾಲ್ಕು ಭಾಷೆಗಳು ತಮಿಳು, ಕನ್ನಡ, ತುಳು ಮತ್ತು ತೆಲುಗು ಭಾಷೆಗಳೆಂದು ಹೇಳುತ್ತಾರೆ (‘ತುಳುನಾಡಿನ ಇತಿಹಾಸ’. ಡಾ. ಕೆ.ವಿ. ರಮೇಶ್). ಮಲಯಾಳಂ ಭಾಷೆಯು ನಂತರ ಹುಟ್ಟಿಕೊಂಡ ಭಾಷೆಯಾಗಿದೆ.
ಅನಂತರ ಕೋಶರರನ್ನು ಕೊಂಕಣದ ಮೌರ್ಯರ ವಂಶದ ನನ್ನನ್ ಎಂಬ ರಾಜ ಸೋಲಿಸಿ ತುಳುನಾಡನ್ನು ಆಳುತ್ತಿದ್ದ. ಅವನ ಕಾಲ ಮೊದಲ ಮೂರು ಶತಮಾನಗಳಲ್ಲಿ ಯಾವುದಾದರೂ ಒಂದು; ಯಾವುದೆಂದು ಖಚಿತವಾಗಿಲ್ಲ. ಅವನನ್ನು ಕೇರಳದ ಚೇರರಾಜ ಸೋಲಿಸಿದ. ಅವನ ಅವಸಾನದ ನಂತರ ಬಾರಕೂರಿನಲ್ಲಿ ಭೂತಾಳ ಪಾಂಡ್ಯನು ಸಣ್ಣದೊಂದು ರಾಜ್ಯವನ್ನು ಕಟ್ಟಿ ಆಳುತ್ತಿರಬಹುದು.
ಆಳುಪರು ಸಾಮಾನ್ಯ ಶಕ (ಕ್ರಿಸ್ತಶಕ ಎಂದು ಹಿಂದೆ ಹೇಳಲಾಗುತ್ತಿತ್ತು) ಎರಡನೆಯ ಶತಮಾನದಿಂದಲೇ ಆಳುತ್ತಿರಬಹುದಾದ ಸಾಧ್ಯತೆ ಇದೆ. ಗ್ರೀಕ್ ಇತಿಹಾಸಕಾರ ಟಾಲೆಮಿಯು ಎರಡನೆಯ ಶತಮಾನದಲ್ಲಿಯೇ ಭಾರತದ ಆಳ್ವಖೇಡದ ಕರಾವಳಿಯು ಕಡಲ್ಗಳ್ಳರ ಕೇಂದ್ರವಾಗಿತ್ತೆಂದು ಹೇಳಿದ್ದಾನೆ.
ಸಾ.ಶ. ೫ನೆಯ ಶತಮಾನದ ಮಧ್ಯಭಾಗದಲ್ಲಿ ತುಳುನಾಡು ಕದಂಬರ ಅಧೀನದಲ್ಲಿತ್ತು. ಹಲ್ಮಿಡಿ ಶಾಸನವೇ ಅದಕ್ಕೆ ಆಧಾರವಾಗಿದೆ. ಅದರಲ್ಲಿ ಉಲ್ಲೇಖಿತವಾಗಿರುವ ಪಶುಪತಿಯು ಆಳುಪರಸನೆಂದು ಕೆಲವು ಇತಿಹಾಸಕಾರರು ಹೇಳುತ್ತಾರೆ. ಸಾ.ಶ. ಏಳನೆಯ ಶತಮಾನದಲ್ಲಿ ಮೊದಲನೆಯ ಆಳುಪರಸನು (ಒಂದನೆಯ ಆಳುವರಸ: ಸಾ.ಶ. ೬೫೦-೬೮೦) ಇದ್ದುದು ಖಚಿತವಾಗಿದೆ. ಪಶುಪತಿಯನ್ನೂ ಪರಿಗಣಿಸಿದರೆ ಐದನೆಯ ಶತಮಾನದಲ್ಲಿಯೇ ಆಳುಪರಸರು ತುಳುನಾಡನ್ನು ಆಳುತ್ತಿದ್ದುದು ಖಚಿತವಾಗುತ್ತದೆ. ಆದರೆ ಕನ್ನಡ ಸಾಮ್ರಾಜ್ಯಗಳಿಗೆ ಅಧೀನವಾಗಿ ಅವರು ರಾಜ್ಯವಾಳಿಕೊಂಡಿದ್ದರು.
ತುಳುನಾಡಿನ ಪಾಂಡ್ಯ ರಾಜರು
ಬಾರಕೂರಿನಲ್ಲಿ ವ್ಯಾಪಾರಿಯಾಗಿದ್ದ ದೇವ ಪಾಂಡ್ಯನು ಮಧುರೆಯ ಪಾಂಡ್ಯ ಅರಸನ ತಮ್ಮ. ಅವರ ತಂದೆಯ ಕಾಲಾನಂತರ ಪದ್ಧತಿಯಂತೆ ಹಿರಿಯ ಮಗನಿಗೆ ಪಟ್ಟಾಭಿಷೇಕವಾಯಿತು. ಅಣ್ಣನಿಗೆ ರಾಜ್ಯಾಡಳಿತ ಸಿಕ್ಕಿದ ಮೇಲೆ ದೇವಪಾಂಡ್ಯನು ಮದುರೆಯಲ್ಲಿ ಇರಲು ಇಷ್ಟಪಡದೆ ವಾಣಿಜ್ಯ ನೌಕೆಗಳೊಂದಿಗೆ ತುಳುನಾಡಿಗೆ ಬಂದು ಬಾರಕೂರಿನಲ್ಲಿ ನೆಲೆಸಿದನು. ತಮಿಳುನಾಡಿನ ಸಮುದ್ರ ತೀರದಲ್ಲಿ ದಕ್ಷಿಣಕ್ಕೆ ಮುಂದುವರಿದಂತೆ ಕೇರಳದ ಪಶ್ಚಿಮ ತೀರ, ನಂತರ ತುಳು ನಾಡು ಸಿಗುತ್ತವೆ. ಈಗ ಭೂಪಟ ನೋಡಿದಾಗ ಕನ್ಯಾಕುಮಾರಿಯ ಬಳಿ ಉತ್ತರಕ್ಕೆ ತಿರುಗಿರುವುದು ಕಂಡರೂ ನೆಲದ ಮೇಲೆ ಸಮುದ್ರಗುಂಟ ಸಾಗುವವರಿಗೆ ಹೀಗೆ ಉತ್ತರಕ್ಕೆ ತಿರುಗುವುದು ಅರಿವಿಗೆ ಬರುವುದಿಲ್ಲ. ಈ ರೀತಿಯಾಗಿ ಮೀನುಗಾರರೂ, ವ್ಯಾಪಾರಿಗಳೂ, ಸೈನಿಕರೂ ಬರುತ್ತಲೂ ಇದ್ದರು. ತಮಿಳುನಾಡಿನ ಚೋಳ ಅರಸರು ಇದೇ ರೀತಿ ತಮ್ಮ ಸೈನ್ಯವನ್ನು ತಂದು ತುಳುನಾಡಿನ ಅರಸರನ್ನು ಸೋಲಿಸಿ ಇಲ್ಲಿನ ಆಧಿಪತ್ಯವನ್ನು ಸಾಧಿಸಿದ್ದು ಉಂಟು. ಹಾಗಾಗಿ ತಮಿಳುನಾಡಿನ ಪ್ರಭಾವ ಕೇರಳದ ಮೇಲೂ, ತುಳುನಾಡಿನ ಮೇಲೂ ಇದೆ.
ಉದಾಹರಣೆಗೆ ಕುಂದಾಪುರ ತಾಲೂಕಿನ ಶಂಕರನಾರಾಯಣದ ಸಮೀಪದಲ್ಲಿರುವ ಕೈಲ್ಕೆರೆ ಎನ್ನುವ ಊರಿನಲ್ಲಿ ತಮಿಳು ಸಂಸ್ಕೃತಿಯ ಕುರುಹುಗಳಿವೆ. ಇದು ಕವಿಲ್ಕೆರೆ ಎನ್ನುವ ಪದದಿಂದ ರೂಪಾಂತರಗೊಂಡ ಊರಿನ ಹೆಸರು. ‘ಕೋವಿಲ್ ಕೆರೆ’ ಎನ್ನುವುದು ಇದರ ಮೂಲ ಹೆಸರಾಗಿರಬಹುದು. ತಮಿಳಿನಲ್ಲಿ ‘ಕೋವಿಲ್’ ಅಂದರೆ ದೇವಾಲಯ. ಈ ಕೈಲ್ಕೆರೆಯಲ್ಲಿ ವಿಜಯನಗರ ಕಾಲದ ಶಾಸನವಿದೆ (ಸಾ.ಶ. ೧೩೯೪). ಈ ಶಾಸನದಲ್ಲಿ ‘ಕಂಚಿಕಾದೇವಿ ದೇವಸ್ವ’ ಎನ್ನುವ ಪದವಿದೆ. ಇಲ್ಲಿ ‘ಕೆಂಚಮ್ಮ’ (ಅಂದರೆ ಕಂಚಿಕಾದೇವಿ) ದೇವಸ್ಥಾನವಿದೆ. ಕೈಲ್ಕೆರೆ ಗ್ರಾಮದ ಪ್ರಧಾನ ದೇವರಾದ ಕಂಚಿಕಾದೇವಿಯು ತಮಿಳುನಾಡಿನ ಕಂಚಿಯ ಕಾಮಾಕ್ಷಿ ಅಮ್ಮನ ಮಾದರಿಯಲ್ಲಿ ತಮಿಳರು ಇಲ್ಲಿ ನಿರ್ಮಿಸಿದ ದೇವಾಲಯ ಆಗಿರಬಹುದು. ಕೈಲ್ಕೆರೆಯ ದೈವಸ್ಥಾನದ ದೇವರ ಹೆಸರು ‘ಕೆಂಚಮ್ಮ’ ಅಂದರೆ ‘ಕಂಚಿ ಅಮ್ಮ’ ಎನ್ನುವ ಪದದಿಂದ ಹುಟ್ಟಿರಬೇಕೆಂದು ಇತಿಹಾಸಚಿಂತಕ ಕಂಚಾರ್ತಿ ರಾಜೇಶ್ವರ ಉಪಾಧ್ಯಾಯ ತಮ್ಮ ಒಂದು ಬರಹದಲ್ಲಿ ಹೇಳಿದ್ದಾರೆ (‘ಕೈಲ್ಕೆರೆಯಲ್ಲಿರುವ ಇಮ್ಮಡಿ ಹರಿಹರನ ಶಾಸನದ ಒಂದು ಅಧ್ಯಯನ’ – ಲೇಖಕರ ಫೇಸ್ಬುಕ್ನಿಂದ ಪಡೆಯಲಾಗಿದೆ). ಉಪಾಧ್ಯಾಯರು ಹೇಳುವ ಪ್ರಕಾರ, “ಬಹುಶಃ ಕವಿಲಕೇರಿ ಮೊದಲಿನಿಂದಲೂ ಈಗಿನ ತಮಿಳುನಾಡಿನ ಕಂಚಿಯೊಂದಿಗೆ ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕ ಶೈಕ್ಷಣಿಕ, ವಾಣಿಜ್ಯ ಮತ್ತು ರಾಜಕೀಯ ಸಂಬಂಧ ಹೊಂದಿರುವಂತೆ ಕಂಡುಬರುತ್ತದೆ.”
ಉಡುಪಿ ಜಿಲ್ಲೆಯ ಕಂಚಾರ್ತಿ ಎನ್ನುವ ಊರಿನಲ್ಲಿಯೂ ಒಂದು ದೇವಿಯ ದೇವಾಲಯವಿದ್ದು ಅಲ್ಲಿನ ವಿಗ್ರಹವು ಕಂಚಿಯ ಕಾಮಾಕ್ಷಿ ಅಮ್ಮನ ವಿಗ್ರಹವನ್ನೇ ಪ್ರತಿಮಾಲಕ್ಷಣದಲ್ಲಿ ಹೋಲುತ್ತದೆ. ‘ಕಂಚಾರ್ತಿ’ ಎನ್ನುವ ಪದದಲ್ಲಿಯೂ ‘ಕಂಚಿ’ಯ ಹೆಸರು ಎದ್ದು ಕಾಣಿಸುತ್ತಿದೆ.
ದೇವಪಾಂಡ್ಯ – ಭೂತಾಳಪಾಂಡ್ಯ
ಸಾ.ಶ. ಒಂದನೆಯ ಶತಮಾನದ ಸುಮಾರಿಗೆ ಬಾರಕೂರಿನಲ್ಲಿ ನೆಲಸಿ ವ್ಯಾಪಾರ ಸಾಮ್ರಾಜ್ಯವನ್ನು ಕಟ್ಟಿದ ದೇವಪಾಂಡ್ಯ ಜೈನ ಧರ್ಮೀಯ. ಮಧುರೆಯ ಪಾಂಡ್ಯರಲ್ಲಿ ಕೆಲವರು ಜೈನರೂ, ಕೆಲವರು ಹಿಂದುಗಳೂ ಆಗಿದ್ದರು. ಅದರಂತೆ ಆಳುಪರೂ ಜೈನಮತವನ್ನೂ ಬೆಂಬಲಿಸುತ್ತಿದ್ದರು, ಹಿಂದೂ ದೇವರನ್ನೂ ಪೂಜಿಸುತ್ತಿದ್ದರು.
ದೇವಪಾಂಡ್ಯನು ರಾಜ ಎನ್ನುವುದಕ್ಕಿಂತ ವ್ಯಾಪಾರಿ ಎನ್ನಬಹುದು. ಅವನು ಕಟ್ಟಿಸಿದ ಹೊಸ ಹಡಗೊಂದು ನೀರಿಗಿಳಿಯಲು ಕುಂಡೋದರ ಎಂಬ ಭೂತದ ಅಡಚಣೆ ಉಂಟಾಯಿತು. ಅದು ನರಬಲಿಯನ್ನು ಕೇಳಿತು. ರಾಜ ತನ್ನ ಮಗನನ್ನೆ ಬಲಿಕೊಡಲು ನಿರ್ಧರಿಸಿದಾಗ ಅವನ ಪತ್ನಿ ಅದಕ್ಕೆ ಒಪ್ಪಲಿಲ್ಲ. ಆಗ ಅವನ ಸಹೋದರಿ ತನ್ನ ಮಗ ಜಯಪಾಂಡ್ಯನನ್ನು ಬಲಿಯಾಗಲು ಒಪ್ಪಿಸಿಕೊಟ್ಟಳು. ಬಲಿಕೊಡಲು ಪೂಜಾದಿಗಳು ನಡೆದಾಗ ಕುಂಡೋದರ ಭೂತ ಬಲಿ ಬೇಕಾಗಿಲ್ಲ, ಸಂಕಲ್ಪದಿಂದ ತಾನು ಸಂತುಷ್ಟನಾಗಿದ್ದೇನೆ ಎಂದು ಹೇಳಿ, ಹಡಗನ್ನು ಸಮುದ್ರಕ್ಕಿಳಿಯಲು ಅಪ್ಪಣೆಕೊಟ್ಟಿತು.
ಈ ಘಟನೆಯ ನಂತರ ದೇವಪಾಂಡ್ಯನು ಸೋದರಳಿಯ ಜಯಪಾಂಡ್ಯನನ್ನು ತನ್ನ ಉತ್ತರಾಧಿಕಾರಿಯನ್ನಾಗಿ ಮಾಡಿದನು. ತುಳುನಾಡಿನ ಆಗಿನ ರಾಜನಿಗೆ ಪುತ್ರ ಸಂತಾನ ಇಲ್ಲದಿರಲು ಪ್ರಜೆಗಳ ಬೆಂಬಲದಿಂದ ತುಳುನಾಡಿನ ರಾಜ ಪಟ್ಟದಲ್ಲಿ ಅವನನ್ನೇ ಕೂರಿಸಲಾಯಿತು. ಆ ಸಂದರ್ಭದಲ್ಲಿ ಅವನಿಗೆ ‘ಭೂತಾಳ ಪಾಂಡ್ಯ’ ಎಂಬ ಹೆಸರನ್ನು ನೀಡಲಾಗಿತ್ತು. ಬಹುಶಃ ಭೂತದ ಅನುಗ್ರಹದಿಂದ ಬದುಕಿ ಉಳಿದವನಾದ ಕಾರಣ ಅವನಿಗೆ ಭೂತಾಳಪಾಂಡ್ಯನೆಂಬ ಜನಪ್ರಿಯ ಹೆಸರಿತ್ತು.
ಕಯ್ಯಾರ ಕಿಞ್ಞಣ್ಣ ರೈಗಳು ತಮ್ಮ ‘ಭೂತಾಳ ಪಾಂಡ್ಯ’ ಕಥನಕವನದಲ್ಲಿ ನರಬಲಿ ಕೇಳಿದ ಘಟನೆ ನಡೆದುದು ಮಧುರೆಯಲ್ಲಿಯೇ, ಜಯ ಪಾಂಡ್ಯನು ನಂತರ ತುಳುನಾಡಿಗೆ ಬಂದನು ಎಂದು ಹೇಳಿದ್ದಾರೆ (ಇದಕ್ಕೆ ಅವರಿಗೆ ಸಿಕ್ಕಿದ್ದ ಆಧಾರ ಯಾವುದೆಂದು ತಿಳಿಯದು). ಈ ಕವನದ ಕೆಲವು ಸಾಲುಗಳು ಹೀಗಿವೆ:
ಕುಂಡೋದರ ಭೂತಕೆ ಬಲಿ ಕೊಡುವರೆ
ಕೊಂಡೊಯ್ದುದರಿಂ ಭೂತಾಳ-
ಪಾಂಡ್ಯನೆನುವ ಹೆಸರೆತ್ತಿಯೆ ಕರೆದರು,
ಮಂಡಲ ಭೂಮಿಯ ಜನರೆಲ್ಲ!
…….
ಕಡಲಿನ ತೆರೆಗಳ ತುಳಿಯುತ ನರ್ತಿಪ-
ಳಲ್ಲವೆ ತುಳುನಾಡಿನ ರಾಣಿ?
ಹಡಗದಿ ಬಾರ್ಕೂರಲಿ ಬಂದಿಳಿದನು
ಪಾಂಡ್ಯನು ನಿಜಕೂ ಭಾಗ್ಯಮಣಿ!
ಮರಣವ ಹೊಂದಿರೆ, ಬಾರ್ಕೂರಿನ ದೊರೆ,
ಪಟ್ಟವನೇರಲು ಸುತರಿರದೆ,
ಅರಮನೆಯಾನೆಯ ಕೈಯ್ಯಲಿ, ಮಾಲೆಯ-
ನಿತ್ತರು ಸತ್ಯದ ನೆಲೆ ತಿಳಿದೇ!
ಮಾಲೆಯನೆತ್ತುತ ಮದಗಜ ಹೊರಟಿತು,
ಕೇರಿಕೇರಿಗಳನಲೆದಾಡಿ;
ಲೀಲೆಯೊಳಿಕ್ಕಿತು ಪಾಂಡ್ಯನ ಕೊರಳಿಗೆ
ಮಾಲೆಯನಾತನ ಗುಣ ನೋಡಿ!
ಜಯಪಾಂಡ್ಯನು ಸಿರಿಪಟ್ಟದಿ ಕುಳಿತನು
ತುಳುನಾಡಿನ ದೊರೆಯೆನಿಸಿದನು;
ಯಾವೆಡೆಯಲ್ಲಿಯು ಸುಖವೆಲ್ಲೆಲ್ಲಿಯು,
ದಾನ ಧರ್ಮಗಳ ನಡೆಸಿದನು.
ಅಳಿಯನು ಮಾವನ ಸೊತ್ತನು ಪಡೆದಾ
ಕತೆಯನು ಪ್ರಜೆಗಳು ಕೇಳಿದರು,
ತಿಳಿದರು ಸತ್ಯವ, ಪ್ರೀತಿಯ ತತ್ವವ
ಅಳಿಯಕಟ್ಟಿನೊಳೆ ಬಾಳಿದರು.
ಐಗಳ್ ಅವರ ವಿವರಣೆ ಹೀಗಿದೆ: “ಬಾರಕೂರಿನಲ್ಲಿ ಆಳುತ್ತಿದ್ದ ಸಂತತಿಯ ಕಡೇ ಅರಸನು ಕಾಲವಾಗಲು, ಸಿಂಹಾಸನಕ್ಕೆ ಹಕ್ಕುದಾರರಿಲ್ಲದೆ, ಪ್ರಜೆಗಳೆಲ್ಲರೂ ಕೂಡಿ ಬಹಳ ಐಶ್ವರ್ಯವಂತನಾದ ದೇವಪಾಂಡ್ಯನ ಅಳಿಯ ಜಯಪಾಂಡ್ಯನಿಗೆ ಪಟ್ಟ ಕಟುವುದೆಂದು ಆಲೋಚಿಸಿದರು. ಆಮೇಲೆ ಅವನಿಗೆ ಪಟ್ಟಕಟ್ಟಿ ‘ಭೂತಾಳಪಾಂಡ್ಯ’ನೆಂಬ ಹೆಸರಿಟ್ಟರು……. ಈ ಸಮಯದಲ್ಲಿ ಕನ್ನಡ ಜಿಲ್ಲೆಯು ಬನವಾಸಿಯ ಕದಂಬರಾಜರ ಆಳಿಕೆಯಲ್ಲಿತ್ತು. ಕದಂಬರ ಮಹಾಮಂಡಲೇಶ್ವರನು ಗೋಕರ್ಣದಲ್ಲಿ ಆಳುತ್ತಿದ್ದಾಗ ಭೂತಾಳ ಪಾಂಡ್ಯನು ಅವನ ಕೈಕೆಳಗೆ ಮಂಡಲೇಶ್ವರನಾಗಿ ಆಳುತ್ತಿದ್ದನು. ಭೂತಾಳಪಾಂಡ್ಯ ಚರಿತ್ರೆಯಲ್ಲಿ ಇವನ ಬಿರುದುಗಳು ಹೀಗೆ ಇವೆ – “ರಾಜರಾಜೇಂದ್ರ, ರಾಮಭೋಜ, ಸಿಂಹಾಸನಾಧೀಶ್ವರ, ಬಾರಕನ್ಯಾಪುರ ಗೋಕರ್ಣಮಂಡಲಾಧೀಶ್ವರ, ತ್ರಿಪುಣಾತ್ರಿ, ತ್ರಿಶೊತ್ರಿ, ಆಪ್ರತಿಮನರಾಧೀಶ್ವರ, ಪಾಂಡ್ಯಕುಮಾರ, ಸತ್ಯವತಿ ಬಾಲ, ಜಿನಕುಲಾಶ್ವ, ದೇವಪಾಂಡ್ಯ ಪ್ರತಿನಿಧಿ, ಸಾಲಕ ಸಂಪ್ರದಾಯ ಪ್ರತಿನಿಧಿ, ಕೋಟೆ ಬಿರಿದಂಕದೇವ, ಗುರುದ್ವಿಜಸಾಧು ಶಡುಮತ ಸನ್ನುತಾಧೀಶ್ವರ, ಸಕಲಕುಲಧರ್ಮ ಸಂಸ್ತಿತಿಮಾರ್ಗ, ಸದ್ಧರ್ಮ ವಿಚಾರ, ಶ್ರೀಮತ್ ತೌಳವವನ್ನಾಳುವ ಬಾರಕನ್ಯಾಪುರವರಾಧೀಶ್ವರಾ.” (‘ದಕ್ಷಿಣಕನ್ನಡ ಜಿಲ್ಲೆಯ ಪ್ರಾಚೀನ ಇತಿಹಾಸ’, ಪುಟ ೩೧. ಮಿಯಾರು ಮತ್ತು ನೆಲ್ಲಿಕಾರು ಎಂಬ ಗ್ರಾಮಗಳಲ್ಲಿ ಸಿಕ್ಕಿದ ಭೂತಾಳಪಾಂಡ್ಯ ಚರಿತ್ರೆಯಲ್ಲಿ ಈ ಬಿರುದುಗಳಿವೆ ಎಂದು ಐಗಳ ತಿಳಿಸಿದ್ದಾರೆ). ತುಳುನಾಡನ್ನು ‘ರಾಮಭೋಜ’ ಎಂಬಾತ ಆಳುತ್ತಿದ್ದನೆಂಬ ವಿಚಾರ ಬೇರೆ ಕೆಲವು ಉಲ್ಲೇಖಗಳಲ್ಲಿಯೂ ಇವೆಯೆಂದು ವಿದ್ವಾಂಸರು ಹೇಳಿದ್ದಾರೆ. ರಾಮಭೋಜನೇ ಭೂತಾಳ ಪಾಂಡ್ಯ ಎಂದು ಐಗಳ್ ಈ ಮೂಲಕ ಸೂಚಿಸಿದ್ದಾರೆ.
ತನ್ನ ಮಾವನ ಸೂಚನೆಯಂತೆ ಭೂತಾಳಪಾಂಡ್ಯನು “ಇನ್ನುಮುಂದೆ ತುಳುನಾಡಿನ ಜನರು ಅಳಿಯ ಸಂತಾನ ವ್ಯವಸ್ಥೆಯನ್ನು ಅನುಸರಿಸಬೇಕೆಂದು” ಆಜ್ಞೆ ಹೊರಡಿಸಿದನು.
ಈ ಚರಿತ್ರೆಯು ಎಂ. ಗಣಪತಿರಾವ್ ಐಗಳ್ ಅವರ ‘ದಕ್ಷಿಣಕನ್ನಡ ಜಿಲ್ಲೆಯ ಪ್ರಾಚೀನ ಇತಿಹಾಸ’(೧೯೨೩) ಗ್ರಂಥದಲ್ಲಿದೆ. ೨೦೦೪ರಲ್ಲಿ ಈ ಪುಸ್ತಕವನ್ನು ಮರುಮುದ್ರಿಸಿದಾಗ ಪ್ರವೇಶಕ ಲೇಖನವನ್ನು ಬರೆದ ಡಾ. ಕೆ.ವಿ. ರಮೇಶ್ ಅವರು ಭೂತಾಳ ಪಾಂಡ್ಯನ ಚರಿತ್ರೆಯಲ್ಲಿ ಐತಿಹಾಸಿಕ ಸತ್ಯವಿದೆ ಎಂದು ಒಪ್ಪಿದ್ದಾರೆ.
ಭೂತಾಳಪಾಂಡ್ಯನು ಹೀಗೆ ಆಜ್ಞೆ ಹೊರಡಿಸಿ, ತುಳುನಾಡಿನ ಜನರೆಲ್ಲ ಅದನ್ನು ಅನುಸರಿಸಿದರೆಂದಾದರೆ ಅವನು ತುಳುನಾಡಿನ ರಾಜನೇ ಆಗಿದ್ದನೆನ್ನಲು ಅಡ್ಡಿಯಿಲ್ಲ.
ಮುಂದೆ ಉಡುಪಿ ಸಮೀಪದ ಉದ್ಯಾವರವನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಆಳಿದ ಪ್ರಸಿದ್ಧ ಆಳುಪ ವಂಶದವರು ಕೂಡ ಪಾಂಡ್ಯ ವಂಶಜರೇ. ಆದರೆ ಅವರು ಬಾರಕೂರು ಪಾಂಡ್ಯರ ವಂಶದವರೆನ್ನಲು ಆಧಾರವಿಲ್ಲ. ಪಾಂಡ್ಯರ ಹಲವು ಕವಲುಗಳ ಹಾಗೆ ಉದ್ಯಾವರ ಪಾಂಡ್ಯರ ಕವಲಿನವರು ಆಳುಪರೆಂದು ಪ್ರಸಿದ್ಧರಾದರು. ಆಳುಪ ಅರಸರಿಗೂ ಪಾಂಡ್ಯ ಎನ್ನುವ ಕುಲನಾಮ ಇತ್ತು. ಮಧುರೆ ಪಾಂಡ್ಯರ ರಾಜಲಾಂಛನ ಜೋಡಿ ಮೀನುಗಳಾಗಿದ್ದವು; ತುಳುನಾಡಿನ ಆಳುಪರು ಅಥವಾ ಪಾಂಡ್ಯರೂ ಜೋಡಿ ಮೀನುಗಳನ್ನೇ ಲಾಂಛನವಾಗಿ ಇಟ್ಟುಕೊಂಡಿದ್ದರು. ಸಾಮಾನ್ಯ ಶಕ ಎಂಟನೆಯ ಶತಮಾನದ ಎರಡನೆಯ ಆಳುಪರಸನ ಬೆಳ್ಮಣ್ಣು ಶಾಸನದಲ್ಲಿ ಆಳುಪರಸರನ್ನು ಸ್ತುತಿಸಿ, ‘ಪಾಂಡ್ಯ ವಂಶಗಳು ವೃದ್ಧಿಸಲಿ’ ಎಂಬ ಆಶೀರ್ವಚನವನ್ನು ದಾಖಲಿಸಲಾಗಿದೆ. ಆಳುಪರ ಇತರ ಕೆಲವು ಶಾಸನಗಳಲ್ಲಿಯೂ ಅವರು ಪಾಂಡ್ಯರೆಂದು ಸ್ಪಷ್ಟಪಡಿಸಲಾಗಿದೆ.
ಮಂಜೇಶ್ವರ ಗೋವಿಂದ ಪೈಗಳು ಕೂಡ ಮದುರೆಯ ಪಾಂಡ್ಯರೇ ತುಳುನಾಡನ್ನು ಆಳಿದ ಪಾಂಡ್ಯರ ವಂಶದ ಮೂಲ ಕವಲಿನವರು ಎಂದು ಅಭಿಪ್ರಾಯಪಟ್ಟಿದ್ದಾರೆ. ಆಳುಪರಲ್ಲಿ ಕೆಲವು ರಾಜರು ಕುಲಶೇಖರ ಎಂಬ ಹೆಸರಿಟ್ಟುಕೊಂಡಿದ್ದನ್ನೂ, ಆ ಹೆಸರು ಮಧುರೆ ಪಾಂಡ್ಯ ವಂಶದ ರಾಜರಿಗೆ ಇಡುತ್ತಿದ್ದ ಹೆಸರಾಗಿರುವುದನ್ನೂ ಅವರು ಉಲ್ಲೇಖಿಸಿದ್ದಾರೆ. (ಗೋವಿಂದ ಪೈ ಸಂಶೋಧನ ಸಂಪುಟ.)
ಕನ್ನಡ ನಾಡಿನಲ್ಲಿ ಬೇರೆ ಪಾಂಡ್ಯ ವಂಶಗಳೂ ಆಳುತ್ತಿದ್ದವು. ಉದಾಹರಣೆಗೆ ಕಾರ್ಕಳವನ್ನು ಆಳುತ್ತಿದ್ದ ಭೈರವರಸರೂ ಪಾಂಡ್ಯರೇ ಆಗಿದ್ದರು. ಕ್ರಿಸ್ತಶಕ ಹತ್ತನೆಯ ಶತಮಾನದಿಂದ ಹನ್ನೆರಡನೆಯ ಶತಮಾನದ ನಡುವೆ, ಮಧುರೆಯ ಪಾಂಡ್ಯ ವಂಶದ ಇನ್ನೊಂದು ಕವಲಿನವರು – ಭೂಮಾರ್ಗವಾಗಿ ಮೈಸೂರು ಸೀಮೆಯ ಮೂಲಕ ಹೊಂಬುಜಕ್ಕೆ ಬಂದು ರಾಜ್ಯ ಕಟ್ಟಿದವರು – ಕಾರ್ಕಳದಲ್ಲಿ ಅಧಿಕಾರವನ್ನು ಹಿಡಿದರು. ಇವರ ಮೂಲಪುರುಷ, ಕ್ರಿಸ್ತಶಕ ಒಂಬತ್ತನೆಯ ಶತಮಾನದ ಜಿನದತ್ತರಾಯ ಮಧುರೆಯ ಪಾಂಡ್ಯ ರಾಜನ ಮಗನೇ. ಅವನ ಕೊಲೆಯ ಪ್ರಯತ್ನಗಳಾದಾಗ ಅವನು ಹೊಂಬುಜಕ್ಕೆ ಓಡಿಬಂದು ಅಲ್ಲಿ ರಾಜ್ಯವನ್ನು ಕಟ್ಟಿದನು. ಅವನ ಪತ್ನಿಯೂ ತಮಿಳು ಪಾಂಡ್ಯ ವಂಶದವಳೇ. ಅವರ ಮಗ ಪಾರ್ಶ್ವಚಂದ್ರನೆಂಬವನು ಪಟ್ಟಾಭಿಷೇಕ ಆಗುವಾಗ ‘ಪಾಂಡ್ಯ ಭೈರವ ಅರಸ’ ಎಂಬ ಪಟ್ಟದ ಹೆಸರನ್ನು ಧರಿಸಿದನು. ಈ ಕುಟುಂಬದ ಅರಸರ ಪಟ್ಟದ ಹೆಸರುಗಳು ಭೈರವರಸು ಮತ್ತು ಪಾಂಡ್ಯ ಅರಸು ಎಂದು ಪರ್ಯಾಯವಾಗಿ ಬರುತ್ತದೆ. ಕಾರ್ಕಳದ ಬಾಹುಬಲಿ (ಗೋಮಟ) ವಿಗ್ರಹವನ್ನು ಸ್ಥಾಪಿಸಿದವನು ವೀರ ಪಾಂಡ್ಯನೆಂಬ ಅರಸ. ಈ ವಂಶದವರಲ್ಲಿ ಕಾರ್ಕಳವನ್ನಾಳಿದ ಮೊದಲನೆಯ ಅರಸನನ್ನು ಪಾಂಡ್ಯ ಚಕ್ರವರ್ತಿ ಎಂದೇ ಕರೆಯುತ್ತಿದ್ದರು.
ಕರ್ನಾಟಕದ ಇತರ ಪ್ರದೇಶಗಳಲ್ಲಿಯೂ ಪಾಂಡ್ಯ ವಂಶಗಳು ಆಳ್ವಿಕೆ ನಡೆಸಿವೆ. ಅವರಲ್ಲಿ ಮುಖ್ಯರಾದವರು: ಹೈಗದ (ಉತ್ತರ ಕನ್ನಡ) ಪಾಂಡ್ಯರು, ಉಚ್ಚಂಗಿಯ ಪಾಂಡ್ಯರು ಮತ್ತು ನೊಳಂಬವಾಡಿಯ ಪಾಂಡ್ಯರು.
ತಮಿಳುನಾಡಿನ ಚೋಳರ ಆಧಿಪತ್ಯ ತುಳುನಾಡಿನಲ್ಲಿ ಇತ್ತು. ಅವರ ಸೈನ್ಯವೂ ತುಳುನಾಡಿನಲ್ಲಿತ್ತು. ಹತ್ತನೆಯ ಶತಮಾನದ ಕೊನೆಯಲ್ಲಿ ಅಥವಾ ಹನ್ನೊಂದನೆಯ ಶತಮಾನದ ಪ್ರಾರಂಭದಲ್ಲಿ (ಸಾ.ಶ. ೧೦೧೦ ಎನ್ನುವುದೊಂದು ಊಹೆ) ರಾಜೇಂದ್ರ ಚೋಳನು ತುಳುನಾಡನ್ನು ವಶಪಡಿಸಿಕೊಂಡಿದ್ದನು. ಆಳುಪರಸ ಒಂದನೆಯ ಜಯಸಿಂಹನು ಅವನ ಜತೆಗಿನ ಯುದ್ಧದಲ್ಲಿಯೆ ಹತನಾದವನು. ಅವನ ಮಗನಾಗಿದ್ದಿರಬಹುದಾದ ನಂತರದ ಆಳುಪರಸ ಬಂಕಿದೇವನು ಚೋಳ ರಾಜ ರಾಜೇಂದ್ರನನ್ನು ಹೊಡೆದಟ್ಟಿದನೆಂದು ಬಾರಕೂರಿನ ಶಾಸನವೊಂದು ತಿಳಿಸಿದೆ. “ಮಾರಿ ಮೇಲೆ ವನ್ದ ಚೋಳನ ದಂಡಂ ಬೆಂಕೊಂಡರೆಯಟ್ಟಿದ”ನೆಂದು ಅವನ ಬಗ್ಗೆ ಹೇಳಲಾಗಿದೆ. ಬಾರಕೂರಿನಲ್ಲಿದ್ದ ಚೋಳರ ಸೈನ್ಯವನ್ನು ರಾಜನು ಬೇರೆ ದಿಕ್ಕಿನಲ್ಲಿ ಯುದ್ಧಗಳಿಗಾಗಿ ಹಿಂದೆ ಕರೆಸಿಕೊಳ್ಳುವಾಗ ಬಂಕಿದೇವನು ಬೆನ್ನಟ್ಟಿ ಅವರಿಗೆ ಕಷ್ಟನಷ್ಟಗಳನ್ನು ಮಾಡಿರಬೇಕು ಎಂದು ಎಂದು ಕೆ.ವಿ. ರಮೇಶ್ ಹೇಳುತ್ತಾರೆ. ಅಲ್ಲದೆ ಬಾರಕೂರಿನಲ್ಲಿರುವ ಚೌಳಿಕೇರಿ ಎನ್ನುವುದು ಚೋಳರಿಗೆ ಸಂಬಂಧಿಸಿದ ಹೆಸರು ಎಂದು ಅವರು ಹೇಳುತ್ತಾರೆ.
ಅಳಿಯಕಟ್ಟು – ಮಾತೃಮೂಲೀಯ ವ್ಯವಸ್ಥೆ
ತುಳುನಾಡಿನಲ್ಲಿ ಹಿಂದಿನಿಂದಲೂ ಇದ್ದ ಕುಟುಂಬ ವ್ಯವಸ್ಥೆ ಅಳಿಯಕಟ್ಟು ಅಥವಾ ಮಾತೃಮೂಲೀಯ ವ್ಯವಸ್ಥೆ ಎನ್ನುವ ಗೋವಿಂದ ಪೈಗಳು ಭೂತಾಳಪಾಂಡ್ಯನೇ ಇದನ್ನು ಪ್ರಾರಂಭಿಸಿದನೆಂಬುದನ್ನು ಒಪ್ಪುವುದಿಲ್ಲ. ಆದರೆ ಅವರು ಅಂತಹ ವ್ಯವಸ್ಥೆಯೊಂದು ರೂಪುಗೊಳ್ಳಲು ಇದ್ದಿರಬಹುದಾದ ಕಾರಣವನ್ನು ಚರ್ಚಿಸಿಲ್ಲ. ಸೇಡಿಯಾಪು ಕೃಷ್ಣ ಭಟ್ಟರು ಅದಕ್ಕೆ ಇದ್ದಿರಬಹುದಾದ ಕಾರಣವನ್ನು ಸೂಚಿಸಿದ್ದಾರೆ. ‘ಕೆಲವು ದೇಶನಾಮಗಳು’ ಕೃತಿಯಲ್ಲಿ ಅವರು ಆ ಕಾಲದಲ್ಲಿ ಗಂಡಸರು ಪಾಂಡ್ಯರ ಹಡಗುಗಳಲ್ಲಿ ವಿದೇಶ ವ್ಯಾಪಾರಕ್ಕೆ ಹೋಗುತ್ತಿದ್ದುದರಿಂದ ಅವರ ಬದುಕು ಹೆಚ್ಚು ಅನಿಶ್ಚಿತವಾಗಿತ್ತು. ಕಡಲು ದಾಟಿ ಪರದೇಶಗಳಿಗೆ ಹೋದ ಗಂಡಸರು ಹಿಂದೆ ಬರುತ್ತಾರೆನ್ನುವುದು ಖಚಿತವಾಗಿರುತ್ತಿರಲಿಲ್ಲ. ಅಂತಹ ಸಂದರ್ಭದಲ್ಲಿ ಹಿಂದೆ ಬಾರದ ಗಂಡಸರ ಪತ್ನಿಯರು ಅನಾಥರಾಗುತ್ತಿದ್ದರು. ಇದಕ್ಕಾಗಿ ಅಂತಹ ಗಂಡಸರಿಗೆ ಮದುವೆಯಾಗಲು ಹೆಣ್ಣುಗಳು ಸಿಗುತ್ತಿರಲಿಲ್ಲ. ಮಹಿಳೆಯನ್ನೇ ಮನೆಯ ಒಡತಿಯನ್ನಾಗಿ ಮಾಡಿದರೆ ಈ ಸಮಸ್ಯೆ ಪರಿಹಾರವಾಗುವುದೆಂದು ಅರಸರು ಕಂಡುಕೊಂಡದ್ದರಿಂದ ಈ ಮಾತೃಮೂಲೀಯ ವ್ಯವಸ್ಥೆಯನ್ನು ಜಾರಿಗೆ ತಂದಿರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.
ಅದೇ ಬಗೆಯಲ್ಲಿ ಚಿಂತಿಸಿರುವ ಕಯ್ಯಾರ ಕಿಞ್ಞಣ್ಣ ರೈಗಳು ಈ ವ್ಯವಸ್ಥೆಯ ಅಗತ್ಯ ಉಂಟಾಗಲು ತಮ್ಮದೇ ಆದ ಕಾರಣವನ್ನೂ ಕೊಡುತ್ತಾರೆ: “ಈ ಪದ್ಧತಿಯ ಪ್ರಾಚೀನ ಹಿನ್ನೆಲೆಯನ್ನು ‘ಬಂಟ’ ಪದದ ವ್ಯುತ್ಪತ್ತಿಯಲ್ಲಿಯೂ ನಾವು ನೋಡಬಹುದು. ಕನ್ನಡದ ಮಹಾನಿಘಂಟುಕಾರನಾದ ರೆ| ಕಿಟ್ಟಲ್ ಮಹಾಶಯನು ತನ್ನ ನಿಘಂಟಿನಲ್ಲಿ ‘ಬಂಟ’ ಎನ್ನುವ ಪದ ‘ಭಟ’ ಎಂಬ ಸಂಸ್ಕೃತ ಪದದ ತದ್ಭವವೆಂದು ತಿಳಿಸಿದ್ದಾನೆ. ಭಟ ಎಂದರೆ ಯೋಧ, ಅದಾಗಿ, ಬಂಟರು ಯೋಧ ಜನಾಂಗ, ಕನ್ನಡ ರಾಜ್ಯಾಂತರ್ಗತವಾದ ಈ ತುಳುನಾಡಿನಲ್ಲಿ ಆಳಿದ ಅರಸರಲ್ಲಿ ಇವರು ಯೋಧರಾಗಿದ್ದರು. ಯೋಧರು ಯುದ್ಧದ ಸಲುವಾಗಿ ಊರಿಂದ ಊರಿಗೆ ಆಗಾಗ ಹೋಗಲೇಬೇಕು; ಯುದ್ಧಕ್ಕೆ ಹೋದವರು ಮರಳಿ ಬರುವುದೂ ನಿಶ್ಚಯವಿಲ್ಲ. ಮನೆಯೊಡತಿ ಸ್ತ್ರೀಯೇ ಆದಳು; ಅವಳ ಗಂಡುಮಕ್ಕಳೂ ಮುಂದೆ ಯೋಧರಾಗಿ ಹೋಗುವವರು; ಹಾಗಾಗಿ ಆಸ್ತಿ ಬದುಕಿನ ಒಡೆತನ ತಾಯಿಯಿಂದ ಮಗಳಿಗೆ ಸ್ಥಿರವಾಗಿ ಉಳಿಯಿತು” (ದುಡಿತವೇ ನನ್ನ ದೇವರು: ಆತ್ಮಕಥನ. ೧೯೯೫).
(ಮುಂದುವರಿಯುವುದು…)






