ಅವಳು ಸಿಕ್ಕಳೆ…!

ಬೇಗ ಬಾರೆ… ಇದೇ ಜಾತ್ರೆ ವಿಶೇಷ ಬಸ್ಸು. ನಿಧಾನ ಮಾಡಿದ್ರೆ ಸೀಟ್ ಸಿಗಲ್ಲ! ಒಳ್ಳೆ ಆಮೆ ತರ ಬರ್ತಿಯಲ್ಲ, ಬೇಗ್ಬೇಗ ಬರಕ್ಕೆ ಏನಾಗಾಯ್ತೆ?!’’

“ಅಯ್ಯೋ, ಇರು ಮಾರಾಯ್ತಿ, ಈ ಬ್ಯಾಗ್ ಜೊತೆ ನನ್ನನ್ನು ಎಳ್ಕೊಂಡು ಬರಬಾರ್ದ? ನೀನಂತು ಡಯಟು ಗಿಯಟು ಅಂತ ಜಿಂಕೆ ತರ ಹಾರ್ತಿಯಾ…!”

“ಕೊಡೆ ಇಲ್ಲಿ ಬ್ಯಾಗು, ಇಲ್ಲೇ ಸೀಟ್ ಅಯ್ತೆ, ಕೂತಿರು” ಎಂದು ಬ್ಯಾಗನ್ನು ಲಗೇಜ್ ಇಡುವಲ್ಲಿ ನೂಕಿ ಆಗಲೇ ಹ್ಯಾಡೆಗಳಿಂದ ತೊಟ್ಟಿಕ್ಕುವ ಜೇನಿನಂತೆ ಜಿನುಗುತ್ತಿದ್ದ ಮೈ ಬೆವರನ್ನು ಒರೆಸಿಕೊಳ್ಳುತ್ತಿದ್ದ ಗೆಳತಿ ಸಾವಿತ್ರಿಗೆ “ಜರ್ಗೆ ಸ್ವಲ್ಪ” ಅಂತ ಹೇಳಿ ಕುಳಿತುಕೊಂಡೆ. ಕುಳ್ಳಗೆ ಸ್ವಲ್ಪ ದುಂಡು ದುಂಡಾಗಿದ್ದ ಗೆಳತಿಯು ಒಂದೂವರೆ ಸೀಟನ್ನು ಆಕ್ರಮಿಸಿಕೊಂಡುಬಿಟ್ಟಿದ್ದಳು. ಯಾಕೋ ಇದು ಸರಿ ಬರಲ್ಲ ಅಂತ “ಲೇ ನಾನು ಕಿಟಕಿ ಪಕ್ಕ ಕೂತ್ಕೋತೀನಿ” ಅಂತ ಅವಳನ್ನು ಎಬ್ಬಿಸಿ ತಣ್ಣಗೆ ಬೀಸುವ ಗಾಳಿಗೆ ಮುತ್ತಿಕ್ಕಲು ಮುಖವ ಬಿಟ್ಟುಕೊಟ್ಟು ಸೀಟಿನ ಮೇಲೆ ಮೈ ಚೆಲ್ಲಿದೆ.

ರಸ್ತೆಯ ಬದಿಯಲ್ಲಿ ಓಟ ಕೀಳಲಾರಂಭಿಸಿದ ಗಿಡಮರಗಳನ್ನು ಕಾಣುತ್ತ “ಅವು ನಿಂತರು ನಾವು ನಿಲ್ಲೆವು, ಬದುಕು ಜಟಕಾ ಬಂಡಿ. ಏನೇ ಓಡಿದರೂ ಅವುಗಳ ನೆಮ್ಮದಿ ನಮಗೆಲ್ಲಿ ಸಿಗಬೇಕು? ಬಂಡಿ ನಿಂತಾಗಲೇ ನಾವು ನಿಲ್ಲೋದು. ನಿಲ್ಲುವ ಜಾಗ, ಸಮಯ, ಯಾರಿಗೂ ತಿಳಿಯದು. ಹಚ್ಚಹಸಿರಿನ ಮಲೆಗಳ ಮಡಿಲಲ್ಲಿರುವ ಮಾದಪ್ಪನನ್ನು ಯಾವಾಗ ಕಾಣುವೆನೋ? ನನ್ನ ಹರಕೆಯನ್ನು ಯಾವಾಗ ಅವನ ಪಾದಕ್ಕೆ ಒಪ್ಪಿಸುವೆನು?’’ ಎಂಬ ಹಂಬಲ ಕಾಡತೊಡಗಿತು.

ನಾನು ಮಾದೇಶ್ವರನ ಬೆಟ್ಟಕ್ಕೆ ಹೋಗಿದ್ದು ಶಿಕ್ಷಕರ ಜೊತೆಗೆ ನಾಲ್ಕನೆಯ ತರಗತಿಯಲ್ಲಿ ಓದುವಾಗ. ಆಗ ಹೋಗಿದ್ದರ ಒಂದೇ ಒಂದು ನೆನಪೆಂದರೆ, ಪ್ರವಾಸದ ಉದ್ದಕ್ಕೂ ವಾಂತಿ ಮಾಡುತ್ತಿದ್ದ ನಾನು ಅಲ್ಲಿ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದ ಅನಂತರ ವಾಂತಿ ಮಾಡದೆ ಆರಾಮಾಗಿ ಮನೆ ತಲಪಿದ್ದು. ಇದು ಮಾಯ್ಕಾರ ಮಾದೇಶ್ವರನ ಮಹಿಮೆಯೋ! ಪವಾಡವೋ? ಏನೋ? ಎಂದು ಮನಸ್ಸಲ್ಲೇ ನೆನೆದೆ. ಇತ್ತ ವೇಗವಾಗಿ ಓಡುತ್ತಿದ್ದ ಬಸ್ಸು ರ‍್ರನೆ ಶಬ್ದ ಮಾಡುತ್ತ ತಲೆ ಗಿರಕಿ ಹೊಡೆಯುವ ಹಾಗೆ ದಡಕ್ಕೆಂದು ರಸ್ತೆಯ ಪಕ್ಕಕ್ಕೆ ನಿಂತಿತು. ಡ್ರೈವರ್ ಬಸ್ ಸ್ಟಾರ್ಟ್ ಮಾಡಿದಾಗ ಕಟಕಟ ಎಂದು ಶಬ್ದ ಮಾಡುತ್ತ ಎಮ್ಮೆಯ ಮೇಲೆ ಕುಳಿತಾಗ ವೈಯ್ ಯ್… ಎಂದು ಎಗರೆಗರಿ ಬೀಳುವಂತೆ ಬಸ್ಸು ನಿಲ್ಲುತ್ತಿತ್ತು. ಕ್ಲಚ್ ಏನೋ ಪ್ರಾಬ್ಲಂ ಅಂತ ಡ್ರೈವರು ಕಂಡಕ್ಟರ್‌ಗೆ ಹೇಳಿ ಎಲ್ಲರನ್ನು ಇಳಿಸಿ ಬೇರೆ ಬಸ್ ಹತ್ತಿಸುವ ಮಾತುಕತೆಯಲ್ಲಿ ತೊಡಗಿದ್ದ.

“ಈ ಬಿಸ್ಲಲ್ಲಿ ಇನ್ನೊಂದು ಬಸ್ ಹತ್ತೋದ್ ಹೆಂಗೆ! ಹಾಳಾದ್ ನಾವ್ ಹತ್ತಿದ್ ಬಸ್ಸೇ ಹಿಂಗ್ ಆಗಬೇಕಿತ್ತಾ? ಇಳಿದ್ ಬಾ” ಎನ್ನುತ್ತ ಎರಡು ಬ್ಯಾಗನ್ನೆಳೆದುಕೊಂಡು ಕೆಳಗೆ ಇಳಿದೆ. ಪುಣ್ಯಕ್ಕೆ ಮಾದೇಶ್ವರನ ಬೆಟ್ಟಕ್ಕೆ ಹೋಗೋ ಮತ್ತೊಂದು ಬಸ್ಸು ಅಲ್ಲೇ ನಿಂತಿತ್ತು. ಇಬ್ಬರೂ ಕಬ್ಬಿಣದ ಸೆಳೆತಕ್ಕೆ ಆಯಸ್ಕಾಂತ ಹೆಂಗೆ ಲಪಕ್ ಅಂತ ಕಚ್ಚಿಕೊಳ್ಳುವುದೋ ಹಾಗೆ ಕ್ಷಣಮಾತ್ರದಲ್ಲಿ ಬಸ್ಸನ್ನು ಹಿಡಿದೆವು. ಆಗಲೇ ಮಧ್ಯಾಹ್ನ ಎರಡಾಗಿತ್ತು ಹೊಟ್ಟೆಯೊಳಗಿನ ಹಸುವಿನ ಹೆಬ್ಬಾವು ಪದೇಪದೇ ಸುತ್ತುತ್ತಲೇ ಇತ್ತು. ಹೊಟ್ಟೆ ಹಸಿವಿನಿಂದ ಬೇಜಾರಾದ ಅವಳ ಮುಖವನ್ನು ಕಂಡು “ತಾಳುಬೆಟ್ಟದಲ್ಲಿ ಊಟ ಸಿಗುತ್ತೆ ಕಣೆ. ನೀನು ಬೇಜಾರಾದ್ರೆ, ನೋಡು ನಂಗೂ ಬೇಜಾರಾಗುತ್ತೆ. ಇಲ್ಲಿ ತಿನ್ನೋಕೆ ಹೋದ್ರೆ ಪಾದಯಾತ್ರೆ ಮಾಡಕ್ಕಾಗಲ್ಲ” ಅಂತ ಸಮಾಧಾನ ಮಾಡಿ ಹ್ಯಾಂಡ್ ಬ್ಯಾಗಿನಲ್ಲಿದ್ದ ಬಿಸ್ಕೆಟ್ ಪ್ಯಾಕನ್ನು ಹೊರತೆಗೆದೆ. ಕೈಯಲ್ಲಿದ್ದ ಬಿಸ್ಕೆಟ್ ತಕ್ಷಣವೇ ಶೂನ್ಯಕ್ಕೆ ತಿರುಗಿತು. “ಯಾವತ್ತೂ ಬಿಸ್ಕೆಟ್ ತಿಂದೆ ಇಲ್ವೇನೆ ನೀನು?” ಎಂದು ಬಾಯಿ ತುಂಬಾ ಬಿಸ್ಕೆಟ್ ತೂರಿಸಿಕೊಂಡಿದ್ದ ಅವಳನ್ನು ಕಂಡು ನಗು ತಡೆಯಲಾರದವಳೆ ಕಿಟಕಿಯ ಕಡೆ ಮುಖ ಮಾಡಿದೆ.

ಒಂದೆರಡು ನಿಮಿಷಗಳ ಹೊತ್ತಿಗೆ ಅದಾಗಲೇ ಬಸ್ಸು ತುಂಬಿ ತುಳುಕುತ್ತಿತ್ತು. “ಈ ಫ್ರೀ ಬಸ್ಸು ಅಂತ ಮಾಡಿ ಎಲ್ಲಿ ನೋಡಿದ್ರು ಬರೀ ಹೆಂಗುಸ್ರೆ! ಕಾಸೆಲ್ಲಾ ನಮ್ದು ಸೀಟೆಲ್ಲ ಅವರ್ದು” ಎಂದು ಮುಂದಕ್ಕಿದ್ದ ಹೊಟ್ಟೆಯನ್ನು ಬಲವಂತವಾಗಿ ಒಳಗೆಳೆದುಕೊಳ್ಳುತ್ತ ಕಂಬಿಯ ಹಿಡಿದು ನಿಲ್ಲಲು ಹರಸಾಹಸಪಡುತ್ತಿದ್ದ ಗಂಡಸನ್ನು ನೋಡಿ ನಾವಿಬ್ಬರೂ ಮುಸಿಮುಸಿ ನಕ್ಕೆವು. ಇದೆಲ್ಲದರ ಮಧ್ಯೆ ಮುಂದಿನ ಸೀಟಿನಲ್ಲೊಬ್ಬ ಪದೇಪದೇ ಹಿಂದಕ್ಕೆ ತಿರುಗಿ ನೋಡುವುದನ್ನು ಗಮನಿಸಿದ ನಾನು ಅವರ ಕಡೆಯ ಯಾರನ್ನೋ ಹುಡುಕುತ್ತಿರಬೇಕೆಂದುಕೊಂಡು ಕಿಟಕಿಯ ಕಡೆ ಮುಖ ಮಾಡಿದೆ.

ಕೊಳ್ಳೇಗಾಲದಿಂದ ಮಾದೇಶ್ವರನ ಬೆಟ್ಟಕ್ಕೆ ಹೋಗುವ ದಾರಿ ನಮ್ಮ ಬಯಲುಸೀಮೆಗಿಂತ ಹೆಚ್ಚು ಬೆಟ್ಟಗಳನ್ನು ಹೊತ್ತು ಜಾತ್ರೆಗಳಲ್ಲಿ ಚೀಲಗಳಲ್ಲಿ ತುಂಬಿರುವ ಕಡ್ಲೆಪುರಿ ಗುಡ್ಡೆಗಳಂತೆ ಕಾಣುತ್ತಿದ್ದವು. ಬಿಸಿಲಿನ ಝಳಕ್ಕೆ ಬಾಡಿ ಹೋಗಿದ್ದ ಮುಖ ತಂಗಾಳಿಗೆ ಚೇತರಿಕೆ ಕಂಡಿತು. ಬಸ್ಸಿನಲ್ಲಿ ಹಿಂದಿನವರು ‘ಮಾದಪ್ಪನ ಪಾದಕ್ಕೊಮ್ಮೆ’ ಅಂದ್ರೆ ‘ಉಘೇ ಅನ್ರಪ್ಪ’ ಎನ್ನುತ್ತಿದ್ದಂತೆ ಬಸ್ಸಿಗೆ ಬಸ್ಸೇ ‘ಉಘೇ’ ಎಂದಿತು. ಪಕ್ಕದ ಸೀಟಿನಲ್ಲಿ ಕುಳಿತ್ತಿದ್ದ ಇಬ್ಬರು ಗಂಡಸರು ಮಾದಪ್ಪನ ಹಾಡುಗಳನ್ನು ಹಾಡತೊಡಗಿದರು. ನಾನು ಅಲ್ಪಸ್ವಲ್ಪ ಸೊಲ್ಲನ್ನು ಸೇರಿಸಿ ಗುನುಗತೊಡಗಿದೆ. ಮತ್ತೆ ಎದ್ದ ಅವನು ನಾನಿದ್ದೇನೆ ಎಂಬುದನ್ನು ಖಾತರಿಪಡಿಸಿಕೊಂಡು ಕುಳಿತುಕೊಂಡ. ನನ್ನನ್ನು ನೋಡಿ ಇವನ್ಯಾಕೆ ಶಾಂತಚಿತ್ತದಿಂದ ಕುಳಿತುಕೊಂಡ? ಮುಖ ನೋಡಿದರೆ ಪರಿಚಯ ಇದ್ದಂತಿಲ್ಲ! ಯಾರಾದ್ರೂ ದೂರದ ಸಂಬಂಧಿಕನಾಗಿರಬಹುದೆ? ಅಪ್ಪನ ಪರಿಚಯಸ್ತನೆ? ನನ್ನನ್ನ ಎಲ್ಲಿಯಾದರೂ ನೋಡಿ ಮಾತನಾಡಿಸಲು ಪ್ರಯತ್ನಿಸುತ್ತಿರಬಹುದೆ? ಎಂದುಕೊಂಡು ಸುಮ್ಮನಾದೆ. “ಏನೇ ಅನ್ನು ನಿಂಗೆ ಲೈನ್ ಹಾಕ್ತಿದ್ದಾನೆ ಅನ್ಸುತ್ತೆ! ನಿನ್ನನ್ನೇ ಪದೇಪದೇ ನೋಡ್ತಾನೆ. ಏನ್ ವಿಷಯ?” ಅಂತ ಗೆಳತಿ ಕಿಚಾಯಿಸಿದಳು. ಮೊದಲೇ ತಲೆಕೆಟ್ಟು ಹೋಗಿತ್ತು. ಅವಳ ಮಾತು ಮತ್ತಷ್ಟು ರೇಜಿಗೆ ಹುಟ್ಟಿಸಿತು. ತಣ್ಣನೆಯ ಗಾಳಿ ಹೊರ ಬೆವರನ್ನು ನುಂಗುತ್ತಿದ್ದರೆ, ಒಳಗಿನ ಆತಂಕ ಮತ್ತದನ್ನು ಹೊರಹಾಕುತ್ತಲೇ ಇತ್ತು. “ಸುಮ್ನಿರೆ ಅವ್ನು ಯಾರನ್ನೋ ಹುಡುಕುತ್ತಿರಬೇಕು. ಮಾದಪ್ಪನ ದರ್ಶನಕ್ಕೆ ಅಂತ ಬರೋರು ಯಾರಾದ್ರೂ ಇಂಥ ಕೆಲ್ಸಾ ಮಾಡ್ತಾರಾ? ನಮ್ಗೆ ನಾವೇ ಏನೇನೋ ಅನ್ಕೋಬಾರ್ದು” ಎಂದು ಅವಳನ್ನು ಗದರಿಸಿದೆ. ಎದೆಯಲ್ಲಿ ಮೊಳೆತ ಆತಂಕ ಆ ಕ್ಷಣಕ್ಕೂ ಮುಂದುವರಿದಿತ್ತು. ನಾನಲ್ಲದೆ ಗೆಳತಿಯು ಅವನ ನೋಟವನ್ನು ಗಮನಿಸಿರಬೇಕಾದರೆ ಅವನು ನನ್ನನ್ನೇ ನೋಡುತ್ತಿರುವುದು ಖಚಿತವೆಂದು ಮನಸ್ಸಿಗೆ ಅನಿಸಿದ ಕೂಡಲೇ ಬ್ಯಾಗಿನಿಂದ ತೆಗೆದ ಟೋಪಿಯನ್ನು ಮುಖದ ಮೇಲೆ ಇರಿಸಿಕೊಂಡು ಹಾಗೆ ಹಿಂದಕ್ಕೆ ಒರಗಿದೆ.

ತಾಳು ಬೆಟ್ಟದಿಂದ ಪಾದಯಾತ್ರೆ ಮಾಡುವ ಅಂತ ಹತ್ತಿದ ಮೊದಲ ಬಸ್ಸು ಹಾಗಾಯಿತು, ಈ ಬಸ್ಸಿನಲ್ಲಿ ಇವನೆಲ್ಲಿ ತಗಲಾಕಿಕೊಂಡ ಎಂದುಕೊಂಡೆ ಹಾಗೆಯೇ ಮಲಗಿದ್ದವಳು ಮತ್ತೆ ಎಚ್ಚರಗೊಂಡಾಗ ನನ್ನನ್ನು ಬಿಗಿದಪ್ಪಲು ನಿಂತಂತೆ ಸಾಲುಸಾಲು ಬೆಟ್ಟಗಳು ಕಂಡವು. “ಉಘೇ ಮಾದಪ್ಪ” ಎನ್ನುತ್ತ ಜನರು ಜಲಪಾತದಿಂದ ಧುಮುಕುವ ನೀರಿನಂತೆ ಬಸ್ಸಿನಿಂದ ಧುಮುಕತೊಡಗಿದರು. ಮುಂದೆ ನೋಡುತ್ತಿದ್ದರೆ ಸಾಲು ಬೆಟ್ಟಗಳು ನನ್ನ ಬಹುದಿನದ ಕನಸು… ನನ್ನ ಮುಂದೆ ಎದುರುನಿಂತಂತೆ… ನಾನೆಲ್ಲಿ ಕಳೆದು ಹೋಗುವೆನೋ, ಮನದೊಳಗಿನ ಆನಂದವನ್ನು ತಡೆಯದಾದೆ. ಮೊದಲು ಬಸ್ ಇಳಿದುಬಿಡುವ ಎಂದು ಬ್ಯಾಗ್ ಎತ್ತಿಕೊಳ್ಳೋಣವೆಂದು ನಿಂತರೆ ಅವನಲ್ಲೇ ಸೀಟಿನಲ್ಲೇ ಕೂತಿದ್ದನು. ಓರೆಗಣ್ಣನ್ನು ಅವನೆಡೆಗೆ ಬಿಟ್ಟು ಬ್ಯಾಗನ್ನೆಳೆದುಕೊಂಡು ಅವನು ನನ್ನನ್ನು ಗಮನಿಸುತ್ತಿಲ್ಲವೆಂದು ಖಾತರಿಪಡಿಸಿಕೊಳ್ಳುತ್ತ ಬ್ಯಾಗ್ ಎಳೆಯಲು ಯತ್ನಿಸಿದೆ. “ಲೇ ಬ್ಯಾಗು ಕಿತ್ತೋಗುತ್ತೆ ಕಣೆ, ಹಿಂದಕ್ಕೆ ತುರುಕಿದ್ದಾರೆ ನೋಡ್ಕೊಂಡು ನಿಧಾನವಾಗಿ ತೆಗಿ” ಎಂದು ಕೂಗಿದ ಗೆಳತಿಗೆ “ನಂಗೂ ಕಾಣಿಸುತ್ತೆ ಸುಮ್ನಿರೆ” ಎನ್ನುತ್ತ ಬ್ಯಾಗನ್ನೆಳೆದುಕೊಂಡು ಬಸ್ ಇಳಿದೆವು.

ನಾನಿನ್ನು ನಿದ್ದೆಯಲ್ಲಿದ್ದೇನಾ? ಅಥವಾ ವಾಸ್ತವದಲ್ಲಿದ್ದೇನಾ? ಎಂದು ಪಕ್ಕದಲ್ಲಿ ನಿಂತಿದ್ದ ಗೆಳತಿಗೆ ಒಮ್ಮೆ ಚಿವುಟಿದೆ. ಬೆನ್ನ ಮೇಲೆ ಬಿದ್ದ ಏಟಿಗೆ ಇದು ವಾಸ್ತವವೇ ಎಂದು ತಿಳಿದು ಬೆರಗುಗಣ್ಣುಗಳಿಂದ ನಿಂತುಬಿಟ್ಟೆ. ಅವಳಿಗೂ ನನ್ನಂತೆ ಅದು ಹೊಸದು. ಕಣ್ಗಳನ್ನು ಮುಚ್ಚಿದರೆ ಎಲ್ಲಿ ಕಳೆದು ಹೋಗುವೆವೋ ಎಂದು ರೆಪ್ಪೆಗಳಿಗೂ ಕೆಲಸ ಕೊಡದಂತೆ ಇಬ್ಬರೂ ನೋಡನಿಂತೆವು. ಮರದ ತೊಗಟೆ ಬಿಡಿಸಿದಾಗ ಅಲ್ಲಿರುವ ಸಾವಿರಾರು ಗೆದ್ದಲು ಹುಳುಗಳು ಒಮ್ಮೆಲೆ ಧುತ್ತೆಂದು ಪ್ರತ್ಯಕ್ಷವಾಗುವಂತೆ ಜನಜಂಗುಳಿಯೋ ಜಂಗುಳಿ. ದೂರದ ಊರುಗಳಿಂದ ನಡೆದು ಬಂದು ವಿಶ್ರಾಂತಿಗಾಗಿ ಕುಳಿತಿರುವವರು, ಮಲಗಿರುವವರು, ಜೋಲಿಯಲ್ಲಿ ಮಲಗಿದ ಮಕ್ಕಳನ್ನು ತೂಗುತ್ತಿರುವವರು, ಹರಕೆ ಹೊತ್ತು ಯಾತ್ರಿಕರಿಗೆ ಅಡುಗೆ ಮಾಡುತ್ತಿರುವವರು, ಪ್ರಸಾದಕ್ಕಾಗಿ ಸಾಲುಗಳಲ್ಲಿ ನಿಂತಿರುವವರು, ಧೂಪ ಹಾಕುತ್ತ ಬೆಟ್ಟದತ್ತ ಮುಖ ಮಾಡಿ ಕೈ ಮುಗಿಯುತ್ತ ತುಟಿಯನ್ನು ಪಿಟಪಿಟ ಎನಿಸುತ್ತಿದ್ದವರು, ಹೋಟೆಲುಗಳಲ್ಲಿ ಚಹಾದೊಂದಿಗೆ ಬಜ್ಜಿ ಬೋಂಡಾ ಸವಿಯುತ್ತಿದ್ದವರು, ಮಲಗಲು ನೂರು ರೂಪಾಯಿಗೆ ಒಂದು ಟಾರ್ಪಲ್ ಎಂದು ಗ್ರಾಹಕರಿಗಾಗಿ ಕೂಗುತ್ತಿದ್ದವರು, ಹಾಲು ಕುಡಿಯುವ ಮಕ್ಕಳಿಂದಿಡಿದು ಹಣ್ಣುಹಣ್ಣು ಮುದುಕರಾದಿಯಾಗಿರುವವರು, ಒಂದು ಕೈಯಲ್ಲಿ ವಿಭೂತಿ ಗಟ್ಟಿ ಮತ್ತೊಂದು ಕೈಯಲ್ಲಿ ಜೋಳಿಗೆ ಏರಿಸಿಕೊಂಡು ಹಣೆಗೆ ಪಟ್ಟೆ ಎಳೆಯಲು ಕಾದು ನಿಂತ ದೇವರ ಗುಡ್ಡರು – ಇವರೆಲ್ಲರನ್ನು ಒಂದೇ ಪಟದಲ್ಲಿ ಚಿತ್ರಸಂತೆಯನ್ನು ಸೆರೆಹಿಡಿದಂತಾಗಿತ್ತು.

ಹಿಂದಿನಿಂದ ಬಟ್ಟೆ ಎಳೆದಂತಾಯಿತು. ಗಾಬರಿಗಣ್ಣುಗಳಿಂದ ಹಿಂದಿರುಗಿ ನೋಡಿದರೆ ಕೆದರಿದ ಕೂದಲ, ಆಸೆಕಣ್ಗಳ ದಿಟ್ಟ ಹುಡುಗಿ ನಿಂತು “ಅಕ್ಕ…ಅಕ್ಕ.. ಧೂಪ ತಗೊಳ್ಳಿ” ಎಂದು ಕೈಗೆ ಕಾಡು ಧೂಪದ ಪುಡಿಯನ್ನು ಇಟ್ಟಳು. ಚಿಲ್ಲರೆ ಕಾಸಿಗಾಗಿ ತಡಕಾಡಿದಾಗ “ಮೊದ್ಲು ಧೂಪ ಹಾಕಿ ಆಮೇಲೆ ಕೊಡಿವ್ರಂತೆ” ಎನ್ನುವ ಅವಳ ವ್ಯಾಪಾರದ ಚಾಕಚಕ್ಯತೆಗೆ ಮನದಲ್ಲೇ ಮೆಚ್ಚುಗೆ ಸೂಚಿಸುತ್ತ ಬೆಚ್ಚನೆಯ ಭಾವದಲ್ಲಿ ಅಲ್ಲಿದ್ದ ಕೊಂಡಕ್ಕೆ ಧೂಪಹಾಕಿ ಕೈಮುಗಿದೆ. ಯಾತ್ರೆ ಚೆನ್ನಾಗಿ ಆಗಲೆಂದು ತಾಳು ಬೆಟ್ಟದ ಕಮಾನು ಕಂಬದ ಬಳಿ ಇರುವ ಕೊಂಡಕ್ಕೆ ಧೂಪ ಹಾಕಿ ಹೋಗುವುದು ಇಲ್ಲಿನ ಸಂಪ್ರದಾಯ. ನೂರಾರು ಕಿಲೋಮೀಟರ್‌ಗಟ್ಟಲೆ ನಡೆದು ಬಂದ ಭಕ್ತಾದಿಗಳನ್ನು ಕಂಡೇ ನನಗೆ ಹೃದಯ ತುಂಬಿ ಬಂತು. ಮಕ್ಕಳಿಗಾಗಿ, ಮದುವೆಗಾಗಿ, ಉದ್ಯೋಗಕ್ಕಾಗಿ, ಮನೆ ಕಟ್ಟುವುದಕ್ಕಾಗಿ – ಹೀಗೆ ನೂರಾರು ಹರಕೆಗಳನ್ನು ಹೊತ್ತು ಎಲ್ಲವನ್ನು ಮಾದೇಶ್ವರನ ಪಾದಕ್ಕೆ ಹಾಕಿ ಬರುವ ಭಕ್ತಾದಿಗಳನ್ನು ಕಂಡು ವಿಸ್ಮಯವೆನಿಸಿತು.

“ಬಾರೇ ಸಾಕು… ಜನ್ರನ್ನ ನೋಡಿದ್ದು, ಆಗ್ಲೆ ನಾಲ್ಕು ಗಂಟೆ ಆಯ್ತು. ಮಧ್ಯಾಹ್ನ ಒಂದ್ ಬಿಸ್ಕೆಟ್ ಪ್ಯಾಕ್ ತಿಂದಿದ್ ಅಷ್ಟೆ, ಹೊಟ್ಟೆ ತಾಳಹಾಕ್ತಿದೆ. ಮೊದಲು ಉಂಡು ಆಮೇಲೆ ಬೆಟ್ಟ ಹತ್ತುವಾ” ಎಂದ ಗೆಳತಿಯ ಮಾತಿಗೆ ಎದುರಾಡದೆ ಊಟ ಮಾಡಲು ಹೋದೆ. ಮನಸ್ಸು ತುಂಬಿದ್ದ ನಂಗೆ ಯಾಕೋ ಊಟ ಬೇಡವೆನಿಸಿತು. “ನೀನ್ ಊಟ ಮಾಡು ಮಾರಾಯ್ತಿ… ಹೊಟ್ಟೆ ತುಂಬುದ್ರೆ ಬೆಟ್ಟ ಹತ್ತಕ್ಕಾಗಲ್ಲ” ಎಂದು ಪಾಯಸ ಮಾತ್ರ ಕುಡಿದೆ. ಗೆಳತಿಯಂತೂ ಪ್ರಸಾದ ಚೆನ್ನಾಗಿದೆ ಅಂತ ಹೇಳಿ ಎರಡು ಮೂರು ಸಲ ಹಾಕಿಸಿಕೊಂಡು ಬಾರಿಸಿದಳು. “ಅನ್ನ ದೇವರ ಮುಂದೆ ಇನ್ನು ದೇವರು ಉಂಟೆ” ಎಂದ ಅವಳ ಮಾತಿಗೆ “ಮಾದೇಶ್ವರನ ಪ್ರಸಾದ ಇನ್ನೂ ಹೆಚ್ಚೆ ಶಕ್ತಿನೆ ಕೊಡುತ್ತೆ ಬಾ” ಅಂತ ನಗುತ್ತ ಹೊರಡಲು ಸಿದ್ಧವಾದೆವು. ಕತ್ತಲ ರಾತ್ರಿಗೆ ಬಾಡಿಗೆ ಬೆಳಕನ್ನು ಕೊಡುವ ಬ್ಯಾಟರಿಗಳನ್ನು ಒಪ್ಪವಾಗಿ ಜೋಡಿಸಿದ ಬಣ್ಣಬಣ್ಣದ ಬ್ಯಾಟರಿಗಳ ಗುಡ್ಡೆಯ ಮುಂದೆ ನಿಂತೆವು. ಬ್ಯಾಟರಿ ಕೊಂಡ ಗೆಳತಿ ಅವರನ್ನೇ “ಅಣ್ಣ ದೇಗುಲಕ್ಕೆ ಇಲ್ಲಿಂದ ಎಷ್ಟು ದೂರ” ಎಂದು ಕೇಳಿದಳು. “ಅಕ್ಕ ಇಲ್ಲಿಂದ ಸುಮಾರು ಮೂವತ್ತು ಕಿಲೋಮೀಟರ್” ಎಂದವನ ಮಾತಿಗೆ ಗೆಳತಿಯು ಬಾಯಿ ಬಿಡುತ್ತ ಎದೆ ನಡುಗಿದವಳಂತೆ ನಿಂತಳು. ಅವಳಿಗಾಗಲೇ ತಾನು ನಡೆಯಲು ಸಾಧ್ಯವಾಗುವುದಿಲ್ಲವೆಂಬುದು ಖಾತ್ರಿಯಾಗಿತ್ತು. ನಮ್ಮ ಗಾಬರಿಯನ್ನು ಕಂಡು ಅಲ್ಲೇ ನಿಂತಿದ್ದ ಪೊಲೀಸಪ್ಪ “ಸುಮಾರು ಹದಿನೆಂಟು ಕಿಲೋಮೀಟರ್ ಆಗುತ್ತೆ. ಕಾಲುದಾರಿಯಲ್ಲಿ ನಡೆದರೆ ಇನ್ನೂ ಕಡಮೆಯಾಗುತ್ತೆ” ಎಂದು ಧೈರ್ಯ ತುಂಬಿದರು.

ಕಮಾನು ಕಂಬದ ಕೆಳಗೆ ಸೆಲ್ಫಿಗೆ ಮುಖವೊಡ್ಡಿ ಆಗಲೇ ಬೆಟ್ಟಕ್ಕೆ ಹೋಗುತ್ತಿದ್ದ ಇರುವೆ ಸಾಲಿಗೆ ನಾವು ಸೇರಿಕೊಂಡವು. ಸೂರ್ಯ ಆ ದಿನದ ಪಾದಯಾತ್ರೆಯನ್ನು ಮುಗಿಸಿ ವಿಶ್ರಾಂತಿಗೆ ತೆರಳುವವನಿದ್ದ. ಅವನ ಮೈಯಿಂದ ಹೊರಹೊಮ್ಮಿದ ಕೆಂಪು ಕಿರಣಗಳು ಮರಗಳ ಮೇಲೆ ಬಿದ್ದು ಹಸಿರು ರಥಗಳ ಮೇಲೆ ಚಿನ್ನದ ಕಳಶಗಳಂತೆ ಕಂಗೊಳಿಸುವಂತೆ ಮಾಡಿತ್ತು. ಸರ್ಪ ಚಲಿಸಿದ ದಾರಿಯಲ್ಲಿ ಓಡುತ್ತ, ನಡೆಯುತ್ತ, ಕಾಲನ್ನು ಎಳೆಯುತ್ತ, ಸುಸ್ತಾದಾಗಲೆಲ್ಲ ‘ಉಘೇ ಮಾದಪ್ಪ’ ಎಂದು ಕೂಗುತ್ತ ಶಕ್ತಿ ತುಂಬಿಕೊಳ್ಳುತ್ತ ಸಾಗುತ್ತಿದ್ದವು. ಅಷ್ಟೇ ಬಂತು. ತಕ್ಷಣವೇ ‘ಮೇಡಂ’ ಎಂಬ ದನಿ ಕೇಳಿ ಹಿಂತಿರುಗಿದರೇ ಅವನೇ!? “…ಇದು ನಿಮ್ಮದೇ ಅನ್ಸುತ್ತೆ ತಗೊಳ್ಳಿ” ಎಂದು ಟೋಪಿಯನ್ನು ಕೈಗಿರಿಸಿದ. ನೋಡಲು ಸುಮಾರು ಮೂವತ್ತು ವಯಸ್ಸಿನ ವಿದ್ಯಾವಂತನಂತೆ ಕಾಣುತ್ತಿದ್ದರೂ ಅವನ ಕಣ್ಣುಗಳು ಮಾತ್ರ ನಮ್ಮನ್ನೆ ನುಂಗಲು ಬಂದಿರುವ ತಿಮಿಂಗಿಲದ ಬಾಯಿಯಂತೆ ಕಾಣುತ್ತಿದ್ದವು. ಕಣ್ಣಿನ ತೀಕ್ಷ್ಣತೆಗೆ ಅವನ ಕಣ್ಣುಗಳನ್ನು ದಿಟ್ಟಿಸಲು ಸಾಧ್ಯವಾಗದಂತಿದ್ದವು. ಅಜಾನುಬಾಹುವಾದ ದೇಹದಾರ್ಢ್ಯತೆ ಇತ್ತು. ಒಟ್ಟಿನಲ್ಲಿ ಅವನೇನಾದರೂ ನನ್ನನ್ನ ಹಿಡಿದರೆ ಮೊಸಳೆಯ ಬಾಯಿಗೆ ಸಿಕ್ಕ ಬಾತುಕೋಳಿಯಂತಾಗುತ್ತದೆ ಎಂದುಕೊಂಡು ಕೈಚಾಚಿ ಟೋಪಿ ತೆಗೆದುಕೊಂಡೆ.

“ಏನೇ ಇವ್ನು ಟೋಪಿ ಹಿಡ್ಕೊಂಡು ಹುಡ್ಕೊಂಡೆ ಬಂದವ್ನೆ…” ಎಂದ ಗೆಳತಿಯ ಮಾತಿಗೆ ಕಂಪನಕ್ಕೆ ಅಲುಗಾಡುವ ಮೇಜ ಮೇಲಿನ ವಸ್ತುಗಳಂತೆ ಕಾಲುಗಳು ನಡುಗತೊಡಗಿದವು. ಇಷ್ಟೊಂದು ಜನರಿರುವಾಗ ಅವನೇನು ಮಾಡಲು ಸಾಧ್ಯ ಮನದೊಳಗೆ ಅಂದುಕೊಳ್ಳುತ್ತ ಯಾತ್ರೆಯನ್ನು ಆರಂಭಿಸಿದೆ.

ಮುಂದೆ ಕಾಡಿನಲ್ಲಿ ಸಾಗುತ್ತಿದ್ದರೆ ಮರಗಳ ನೆರಳು ರಸ್ತೆಯಲ್ಲಿ ಸೂರ್ಯನ ಬೆಳಕನ್ನು ಮುಚ್ಚಿ ತನ್ನ ಹೆಚ್ಚುಗಾರಿಕೆಯನ್ನು ತೋರಿತ್ತು. ಅಲ್ಲಲ್ಲೇ ಮೆಟ್ಟಿಲುಗಳು, ಮತ್ತೆ ಒಂದಷ್ಟು ದೂರ ಸಮತಟ್ಟಾದ ದಾರಿ, ಅಲ್ಲಲ್ಲೇ ಕೂರುತ್ತ, ತಂಗಾಳಿಗೆ ಮೈಯೊಡ್ಡುತ್ತ ಅತ್ಯುತ್ಸಾಹದಿಂದ ಗೆಳತಿಯನ್ನು ಹಿಂದಿಕ್ಕಿ ಹೆಜ್ಜೆ ಹಾಕಿದೆ. ಇರುವೆ ಸಾಲಿನಂತೆ ಬಂದ ಜನ ಸಾಗುತ್ತ ಸಾಗುತ್ತ ಗುಂಪುಗುಂಪುಗಳಾಗಿ ಚೆದುರಿದರು. ಎಲ್ಲ ಗುಂಪುಗಳಲ್ಲಿ ಮಾದಪ್ಪನ ಪವಾಡಗಳ ಬಗ್ಗೆ ಮಾತುಕತೆಗಳು. ನಾನಂತೂ ಕಾಡಿನ ನಡುವೆ ಹಕ್ಕಿಗಳ ಕಲರವ, ತಂಪಾದ ಗಾಳಿ, ಮರಗಳ ವಾಲಾಡುವಿಕೆಯ ಸಪ್ಪಳದ ಆಲಾಪವನ್ನು ಆಸ್ವಾದಿಸುತ್ತ ಹೆಜ್ಜೆ ಹಾಕಿದೆ. ಸ್ವಲ್ಪ ದೂರ ನಡೆದ ನನಗೆ ಒಂಟಿ ಪಯಣ ಸಾಕೆನಿಸಿತು. ಗೆಳತಿಯೆಲ್ಲೋ ಹಿಂದಿನ ಗುಂಪಿನಲ್ಲಿ ಬರುತ್ತಿರಬಹುದು ಇಲ್ಲೇ ಕುಳಿತು ಏದುಸಿರನ್ನಾದರೂ ಕಡಮೆ ಮಾಡಿಕೊಳ್ಳುವ ಎಂದುಕೊಂಡು ಕಲ್ಲಿನ ಜಗುಲಿ ಮೇಲೆ ಕುಳಿತೆ. ಹಿಂದಿನಿಂದ ಎರಡು ಮೂರು ಗುಂಪುಗಳು ಬಂದರೂ ಅವಳು ಬರದಿದ್ದನ್ನು ನೋಡಿ ನಿಧಾನವಾಗಿ ನಡೆದುಕೊಂಡು ಹೋಗೋಣ ಎಂದು ಕಾಲೆಳೆಯುತ್ತಾ ಸಾಗಿದೆ. ಹತ್ತು ಹೆಜ್ಜೆ ಸವೆಸುವುದರೊಳಗೆ ಮತ್ತದೇ ಬಂದೂಕಿನ ಕಣ್ಣುಗಳು ಬೆನ್ನುಹತ್ತಿದಂತೆ ಭಾಸವಾಯಿತು. ಇದ್ಯಾಕೋ ವಿಚಿತ್ರವಾಯಿತಲ್ಲ ಎಂದುಕೊಂಡು ತಿರುವಿನಲ್ಲಿ ನಿಂತು ಹಿಂದಿರುಗಿ ನೋಡಿದೆ. ಯಾರು ಇಲ್ಲ! ಎಲೆಗಳ ಮೇಲೆ ಸರಪರ ಎಂದು ಪಾದ ಊರಿದ ಶಬ್ದ ಮತ್ತೆ ಕೇಳಿ ಬಂತು. ನನ್ನ ಗೆಳತಿಯೇ ಆಟ ಆಡಿಸುತ್ತಿರಬಹುದೆಂದುಕೊಂಡು “ಲೇ ನಾನು ನೋಡ್ದೆ ಕಣಾ ಬಾರೆ. ನೀನೇ ಅಂತಾ ಗೊತ್ತಾಯ್ತು” ಎಂದುಕೊಂಡು ಹಿಂದುರಿಗಿದೆ. ಯಾರು ಇಲ್ಲ! …ಎಲ್ಲೋ ಕಾಡುಮಿಕದ ಸದ್ದಾಗಿರಬಹುದೇ? ಎಂದುಕೊಂಡು ಬ್ಯಾಗಿನಲ್ಲಿದ್ದ ಬ್ಯಾಟರಿ ಆನ್ ಮಾಡಿ ಮುಂದೆ ಕಾಲನಿರಿಸಿದೆ. ಮತ್ತೆ ಎಲೆಗಳ ಮೇಲೆ ಸರಪರ ಸದ್ದು. ಯಾವುದೋ ಸರಿಸೃಪ ಹರಿದು ಹೋಗುತ್ತಿರಬೇಕೆಂದುಕೊಂಡು ಹಿಂದೆ ನೋಡದೆ ವೇಗವಾಗಿ ಹೆಜ್ಜೆಯನಿಡುತ್ತಾ ಸಾಗಿದೆ. ನನ್ನ ಗೆಳತಿಗೆ ಈ ರೀತಿ ಕೋಟಲೆ ಕೊಡುವ ಚಟವಿದ್ದುದ್ದರಿಂದ ಅವಳೇ ನನ್ನನ್ನ ಹೀಗೆ ಗೋಳು ಹೊಯ್ದುಕೊಳ್ಳುತ್ತಿರುತ್ತಾಳೆಂದು ಧೈರ್ಯದಿಂದ ಹೆಜ್ಜೆ ಗೊತ್ತಾದರೂ ಗೊತ್ತಾಗದವಳಂತೆ ಹೆಜ್ಜೆ ಹಾಕಿದೆ. ನನ್ನ ಆರು ಹೆಜ್ಜೆಗಳ ಮಟ್ಟಕ್ಕೆ ಹಿಂದಿನ ಮೂರು ಹೆಜ್ಜೆಗಳು ಸರಿಸಮನಾಗಿ ಬರುತ್ತಿವೆಯೇನೋ ಎಂಬಂತೆನಿಸಿತು. ಗೆಳತಿಯ ಕೀಟಲೆ ಜಾಸ್ತಿಯಾಯಿತೆಂದು ಬೈಯೋಣವೆಂದು ಹಿಂದಿರುಗಿ ನೋಡಿದೆ. ಅವನೇ…! ಒಮ್ಮೆಲೇ ಬೆಟ್ಟಕ್ಕೆ ಬೆಟ್ಟವೇ ಕುಸಿದಂತಾಯಿತು. ಬಾಯೆಲ್ಲ ಒಣಗಿ ಕಿರುಚೋಣವೆಂದು ಬಾಯಿ ತೆಗೆದೆ. ಬಾಯಿಂದ ಸದ್ದೇ ಬರಲಿಲ್ಲ. ಅವನು ಹತ್ತಿರ ಬರುತ್ತಿದ್ದಂತೆ ನನಗರಿವಿಲ್ಲದಂತೆ ಹೆಜ್ಜೆಗಳು ಬಿರುಸಾದವು. ಕಾಲುಗಳು ಮುಂದಾದರೂ ಕಣ್ಣುಗಳು ಬೆನ್ನಿಗೆ ಅಂಟಿದ್ದವು. ಈ ಕತ್ತಲ ಕಾಡಲ್ಲಿ ಒಂಟಿಯಾಗಿ ಸಿಕ್ಕ ನನ್ನನ್ನು ಏನು ಮಾಡುವನೋ? ಎಂಬ ಆತಂಕ ಬೆಟ್ಟವಾಗಿ “ಬೆಟ್ಟದ ಮಾದೇವ ನನ್ನನ್ನ ಕಾಪಾಡಪ್ಪ” ಎಂದು ದಾರಿಯ ಬದಿಯಲ್ಲಿ ಚೆಲ್ಲಿದ್ದ ಚೂಪುಗಲ್ಲನೆತ್ತಿಕೊಂಡು ಇನ್ನೇನು ಅವನ ಮೇಲೆ ಒಗೆಯಬೇಕು ಎನ್ನುವಷ್ಟರಲ್ಲಿ ಹಿಂದೆ ‘ಉಘೇ ಮಾದಪ್ಪ’ ಎಂದು ಕೂಗುತ್ತ ಗುಂಪೊಂದು ಹತ್ತಿರವಾಯಿತು. ತಕ್ಷಣವೇ ಅವನು ಏನೂ ತಿಳಿಯದವನಂತೆ ನಟಿಸುತ್ತ ಗುಂಪಿನೊಳಗೆ ಕಳೆದು ಹೋದ. ಇತ್ತ ನಿಟ್ಟುಸಿರುಬಿಡುತ್ತ ಹಾಗೆಯೆ ಕುಳಿತೆ. ನೋಡನೋಡುತ್ತಿದ್ದಂತೆ ಗುಂಪು ಕತ್ತಲಲ್ಲಿ ಕರಗಿಹೋಯಿತು.

“ಯಾಕೆ ಏನಾಯ್ತು? ಈ ಮೂಲೆಯಲ್ಲಿ ಕೂತ್ತಿದ್ದೀಯಲ್ಲಾ. ಏನಾದ್ರೂ ಆಯ್ತಾ?” ಎನ್ನುತ್ತಾ ಗೆಳತಿ ಭುಜದ ಮೇಲೆ ಕೈ ಹಾಕಿದಾಗಲೇ ನಾನು ಧರೆಗಿಳಿದ್ದಿದ್ದು. ಅವಳು ಕೊಟ್ಟ ನೀರನ್ನು ಎರಡು ಬಾರಿ ಗುಟುಕಿಸಿ “ಏನಿಲ್ಲ ಏನೋ ಕಾಲಿಗೆ ಹೊಡೆದಂತಾಯಿತು ನೋಡೋಣ ಅಂತ ಕುಳಿತೆ” ಎಂದು ಹೇಳುತ್ತ ಮೇಲಕ್ಕೆದ್ದೆ. ಹಾಗೆ ಜೊತೆಯಲ್ಲಿ ನಡೆಯುತ್ತಿದ್ದಾಗ ಆಗಿದ್ದ ಆಯಾಸವನ್ನು ಪರಿಹರಿಸಿಕೊಳ್ಳುವ ಸಲುವಾಗಿ ಅಲ್ಲೇ ಗಾಡಿಯಲ್ಲಿ ಮಾರುತ್ತಿದ್ದ ಐಸ್‌ಕ್ರೀಮ್ ಅನ್ನು ಕೊಂಡುಕೊಂಡೆವು. ನಾಲಿಗೆಗೆ ಎರಡು ಬಾರಿ ತಾಕಿಸಿ ಸುಖಿಸುವಷ್ಟರಲ್ಲಿ ಅದೆಲ್ಲಿತ್ತೋ ಏನೋ ಕಾಡಿನ ಎದೆ ಒಡೆಯುವಂತೆ ಕಿರುಚುತ್ತ ಬಂದ ಒಂದು ಆ್ಯಂಬುಲೆನ್ಸ್ ನಮ್ಮ ಕಣ್ಣಳತೆಯ ದೂರದಲ್ಲಿ ನಿಂತಿತು. ಬಲವಿಲ್ಲದ ಬಲದಿಂದ ವೇಗವಾಗಿ ಹೆಜ್ಜೆ ಇರಿಸಿ ನೋಡಿದರೆ ಸುಮಾರು ಐವತ್ತು ವರ್ಷದ ಪುರುಷರೊಬ್ಬರು ಹೃದಯಾಘಾತದಿಂದ ನೆಲಕ್ಕುರುಳಿದ್ದರು, “ಅಪ್ಪ ಮಾದಪ್ಪ ಏನಪ್ಪಾ ನಿನ್ ಲೀಲೆ, ಇಷ್ಟು ಬೇಗ ನಿನ್ನ ಬಳಿಗೆ ಕರೆಸಿಕೊಂಡುಬಿಟ್ಟೆಯಾ” ಎಂದು ಅಲ್ಲಿ ನೆರೆದಿದ್ದವರೆಲ್ಲ ಗುಸುಗುಸು ಎನ್ನುತ್ತಿದ್ದರು. ವ್ಯಾನಿನಿಂದ ಇಳಿದ ಇಬ್ಬರು ಅವರನ್ನು ಸ್ಟçಕ್ಚರ್ ಮೇಲೆ ಮಲಗಿಸಿ ವ್ಯಾನಿನ ಒಳಗಿರಿಸಿಕೊಳ್ಳುತ್ತಲೇ ವ್ಯಾನ್ ಹಿಂದಕ್ಕೆ ಸಾಗಿತು. “ಯಾರ ಬಾಳಯಾತ್ರೆ ಎಲ್ಲಿಯವರೆಗೋ? ಮಾಯ್ಕಾರನ ಲೀಲೆಯನ್ನು ಬಲ್ಲರ‍್ಯಾರು…?” ಎಂದು ನಮ್ಮ ಕೈಗಳನ್ನು ನೋಡಿಕೊಂಡಾಗಲೇ ತಿಳಿದಿದ್ದು, ಐಸ್‌ಕ್ರೀಮ್ ಎಲ್ಲ ಕರಗಿ ನೆಲಕ್ಕೆ ತೊಟ್ಟಿಕ್ಕಿ ಬರೀ ಕಡ್ಡಿ ಉಳಿದಿತ್ತು. ಬದುಕು ಇಷ್ಟೇ ಅಲ್ಲವೇ? ಇದು ಬದುಕಿನ ವಿಚಿತ್ರ ವೈರುಧ್ಯಗಳಿಗೆ ಸಾಕ್ಷಿಯಾಗಿ ಅದು ನಮ್ಮ ಮುಂದೆ ನಿಂತಿತ್ತು.

ಗಾಳಿಗೆ ಲಟ-ಪಟ ಎನ್ನುವ ಮರಗಳು, ಆಗೊಮ್ಮೆ ಈಗೊಮ್ಮೆ ಪೋಂ..ಪೋಂ ಎಂದು ಶಬ್ದ ಮಾಡುತ್ತ ಬರುವ ಬಸ್ಸುಗಳು, ಮಾದಪ್ಪನ ಪಾದಕ್ಕೆ ಉಘೇ ಎನ್ನುತ್ತ ಹೋಗುತ್ತಿದ್ದ ಭಕ್ತಗಣಗಳು ಒಂದಷ್ಟು ಮನಸ್ಸಿಗೆ ಧೈರ್ಯ ತಂದವು. ಜೊತೆಯಲ್ಲಿ ಸಾಗುವ ಮಹಿಮೆಯನ್ನು ತಿಳಿದ ನಾನು ಮತ್ತೆ ಒಂಟಿಯಾಗುವ ಸಾಹಸಕ್ಕೆ ಕೈ ಹಾಕದೆ ಒಟ್ಟಾಗಿಯೇ ಸಾಗುತ್ತ ಬೆಟ್ಟವನ್ನು ಹತ್ತಿ ಇಳಿದು ಗುಡಿ ತಲಪುವಷ್ಟರಲ್ಲಾಗಲೇ ಸಮಯ ಎಂಟು ಆಗಿತ್ತು.

ಇತ್ತೀಚಿನ ವರ್ಷಗಳಲ್ಲಿ ಈ ದೇವಾಲಯಕ್ಕೆ ಬಂದಿಲ್ಲವಾದ್ದರಿಂದ ಇಷ್ಟೊಂದು ರಷ್ ಆಗಿರುತ್ತದೆ ಎಂದು ಊಹಿಸಿರಲಿಲ್ಲ. ದರ್ಶನದ ಸಾಲು ಕಾಶ್ಮೀರದಿಂದ ಕನ್ಯಾಕುಮಾರಿಯವರೆಗಿನ ರಸ್ತೆಯಂತಿದ್ದರೂ ಬಸವನ ಹುಳುವಿನಂತೆ ತೆವಳುತ್ತಿತ್ತು. ಯಾವತ್ತು ಅಷ್ಟು ದೂರ ನಡೆಯದ ಕಾಲುಗಳು ಆಗಲೇ ಪದ ಹೇಳಲು ಶುರು ಮಾಡಿದ್ದವು.

ಎಪ್ಪತ್ತೇಳು ಮಲೆಗಳಲ್ಲಿ ನಲಿದು ನಾಟ್ಯವಾಡುತ್ತಿರುವ ಮಾದೇಶ್ವರನಿಗೆ ಒಂದು ಸಾರಿ ಉಘೇ ಅನ್ರಪ್ಪೋ ಅನ್ನೋ ಕೂಗಿಗೆ ‘ಉಘೇ’ ಎಂಬ ಸೊಲ್ಲನ್ನು ಸೇರಿಸುತ್ತ ನಿಂತಿದ್ದೆವು. ಜಾಲರಿಯ ಕಣ್ಣುಗಳು ಮತ್ತೆ ನನ್ನನ್ನು ಗಮನಿಸುವಂತೆ ಅನಿಸಿತು. ಹಿಂದಿರುಗಿ ನೋಡಿದರೆ ಅವನೇ! ನನ್ನಿಂದ ಇಬ್ಬರ ಹಿಂದೆ ನಿಂತುಕೊಂಡು ನೋಡುತ್ತಲೇ ಇದ್ದಾನಲ್ಲಾ! ಏನಾದರೂ ಮಾಡಿ ಇವನಿಗೆ ಇವತ್ತು ಗ್ರಹಚಾರ ಬಿಡಿಸಬೇಕು ಎನಿಸಿತು. ಇವನೇನು ಹೆಣ್ಣೆ ನೋಡಿಲ್ವಾ? ಹಾಳಾದೋನು ಹೆಂಗಾದ್ರೂ ನೋಡಿಕೊಳ್ಳಲಿ ನನಗೇನಂತೆ? ಅವನ ಕಡೆ ನೋಡದೆ ಇದ್ದರೆ ಆಯ್ತು ಎಂದು ಸರದಿ ಸಾಲಿನಲ್ಲಿ ಸರಿದೆ.

ಮಾದಪ್ಪನನ್ನು ಕಣ್ತುಂಬಿಕೊಂಡು ಹೊರಗೆ ಬರುವುದರೊಳಗೆ ರಾತ್ರಿ ಹತ್ತು ಗಂಟೆಯಾಗಿತ್ತು. ಸಂಜೆ ಕುಡಿದ ಪಾಯಸ ಯಾವಾಗಲೋ ಜೀರ್ಣವಾಗಿ ಹೊಟ್ಟೆ ಅಬೋ ಎನ್ನುತ್ತಿತ್ತು. ದಾಸೋಹ ಭವನದಲ್ಲಿ ಮೊದಲಿಗೆ ಊಟ ಮಾಡಿಯೇ ಬಿಡುವ ಎಂದುಕೊಂಡು ಗೆಳತಿಯ ಕೈ ಹಿಡಿದು ಹೊರಟೆ ಪುಣ್ಯಕ್ಕೆ ಹೊತ್ತು ಜಾಸ್ತಿಯಾಗಿದ್ದರಿಂದ ರಷ್ ಆಗಿರಲಿಲ್ಲ. ನೇರವಾಗಿ ಊಟದ ಹಾಲಿಗೆ ಹೋಗಿ ಕುಳಿತುಕೊಂಡೆವು. ಬಂಡಿಯಲ್ಲಿ ಬಂದ ಅನ್ನ ಸಾರು ತಟ್ಟೆ ಸೇರಿತು. ಉಘೇ ಮಾದಪ್ಪ ಅಂದ ಕೂಗಿಗೆ ಭವನಕ್ಕೆ ಭವನವೇ ಉಘೇ ಉಘೇ ಎಂದಿತು. ಊಟಕ್ಕೆ ಶುರು ಹಚ್ಚಿದೆವು.

ನನ್ನೆದುರಿಗೆ ಕುಳಿತ ಸುಮಾರು ಒಂದೂವರೆ ವರ್ಷದ ಮಗು ಊಟ ಮಾಡದೆ ರಂಪಾಟ ಮಾಡುತ್ತಿತ್ತು. ಅವರಮ್ಮ ಕಥೆ ಹೇಳಿ ತಿನ್ನಿಸುತ್ತಿದ್ದರು. ಮಗುವಿನ ಸಾಲಿನ ಹಿಂದಿನಿಂದ ನನ್ನನ್ನು ಎವೆಯಿಕ್ಕದ ಕಣ್ಣುಗಳು ನನ್ನನ್ನೆ ಗಮನಿಸುತ್ತಿದ್ದವು. ಅದೇ ಅವನೇ! “ಥೂ… ಅವ್ನು ಹೆಣ್ ಜಾತಿನೇ ನೋಡಿಲ್ವಾ? ಮಾದಪ್ಪನ ಹೆಸ್ರ ಹೇಳ್ಕೊಂಡು ಇಲ್ಲಿವರ್ಗೂ ಬರಬೇಕಾ, ಇರಲಿ… ಎಂದು ತಲೆ ಎತ್ತದೆ ಆರು ತುತ್ತಾಗುವುದನ್ನು ಮೂರು ತುತ್ತಲ್ಲೇ ತಿಂದು ಮುಗಿಸಿದೆ. “ಏನೇ ಇವನು ನಿನ್ನನ್ನೇ ತಿನ್ನೋತರ ನೋಡ್ತಿದ್ದಾನೆ. ಮೊದ್ಲೇ ಗೊತ್ತಾ ನಿಂಗೆ? ಲವ್ವಾ! ಹೇಳೆ ನಾನ್ ಯಾರಿಗೂ ಹೇಳಲ್ಲ. ಅಲ್ಲಿಂದ ಫಾಲೋ ಮಾಡ್ಕೊಂಡ್ ಬರ್ತಿದ್ದಾನೆ ಅಂದ್ರೆ ಸಂಥಿಂಗ್ ಇಸ್ ದೇರ್.. ಹೇ ಕಳ್ಳಿ…” ಎಂದು ಸೊಂಟಕ್ಕೆ ತಿವಿದಳು. ಯಾವ ಪರಿಚಯನೂ ಇಲ್ಲ, ಮಣ್ಣು ಇಲ್ಲ, ಬಾ ಅವನಿಗೆ ಒಂದ್ ಗತಿ ಕಾಣ್ಸೋಣ. ಹೆಣ್ಮಕ್ಕು ಅಂದ್ರೆ ಸದ್ರ ಅಂದ್ಕೊಬಿಟ್ಟಿದ್ದಾನೆ” ಎಂದು ಗೆಳತಿಗೆ ರೇಗಿದೆ.

ಪ್ರಸಾದವನ್ನು ನೆಮ್ಮದಿಯಿಲ್ಲದೆ ಗಬಗಬನೆ ತಿನ್ನುವಂತಾಯಿತಲ್ಲ ಮನದೊಳಗೇ ಎಂದುಕೊಳ್ಳುತ್ತಿರುವಾಗಲೇ ಮತ್ತೊಮ್ಮೆ ಹಾಕಿಸಿಕೊಳ್ಳಲು ಅನುವಾಗುತ್ತಿದ್ದ ಗೆಳತಿಗೆ “ಲೇ ತಿಂದಿದ್ದು ಸಾಕು ಬಿಡೆ” ಎಂದು ಗೆಳತಿಗೆ ಹೇಳಿ ಊಟದ ಪೂಜೆ ಮುಗಿಸಿ ಹೊರಬಂದೆವು.

“ನಾವಿಬ್ರೂ ಹೆಣ್ಣು ಮಕ್ಳೇ ಬಂದವ್ರೇ ಅಂತ ಬೆನ್ನುಹತ್ತವ್ನೇ. ಯಾರು ಗಂಡಸ್ರು ಜೊತೆಗಿಲ್ಲ ಅನ್ನೊ ಭಂಡ ಧೈರ್ಯ ಇವನಿಗೆ. ಇವತ್ ಅವ್ನು ಕನಸಿನಲ್ಲೂ ಹೆಣ್ ಮಕ್ಕಳ್ನ ನೆನ್ಸಕೊಂಡ್ರೆ ಎದ್ದೋಡ್ಬೇಕು ಅನ್ನೋತರ ಮಾಡ್ತೀನಿ” ಎಂದವಳೇ ಅವನಿಗಾಗಿ ಹೊರಗೆ ಕಾಯುತ್ತಾ ನಿಂತೆ.

ಅವನು ಕೈ ತೊಳೆದುಕೊಂಡು ಎದುರಾಗುತ್ತಿದ್ದಂತೆ “ಏನ್ರೀ ನಿಮ್ಗೆ ಮಾನ ಮರ್ಯಾದೆ ಇಲ್ವಾ? ಕೊಳ್ಳೇಗಾಲದಿಂದಲೂ ನಮ್ಮನ್ನ ಹಿಂಬಾಲಿಸ್ಕೊಂಡು ಬರ್ತಾ ಇದ್ದೀರಲ್ಲಾ? ಅಕ್ಕತಂಗೀರ ಜೊತೆ ಹುಟ್ಟಿಲ್ವಾ ದೇವಸ್ಥಾನಕ್ಕೆ ಅಂತ ಬಂದು ಏನ್ ಕೆಲಸ ಮಾಡ್ತೀರಿ ನೀವು? ನಡಿ ನಡಿ ಪೊಲೀಸ್ ಸ್ಟೇಷನ್‌ಗೆ. ಸುಮ್ಮೆನೆ ಬಾಯಿ ಮಾತಿಗೆಲ್ಲ ಬಗ್ಗಲ್ಲ ನೀನು ಎಂದು ಅಬ್ಬರಿಸತೊಡಗಿದೆ. ನನ್ನ ಬಿರುನುಡಿಗಳನ್ನು ನಿರೀಕ್ಷಿಸಿರದ ಅವನು “ಮೇಡಂ, ಇಲ್ಲಿ ಕೇಳಿ” ಎಂದು ತಡವರಿಸತೊಡಗಿದ. ಊಟ ಮುಗಿಸಿ ಕೈ ತೊಳೆದು ಬರುತ್ತಿದ್ದ ಜನರು “ಏನಾಯ್ತು ಮೇಡಂ?” ಎಂದು ಸುತ್ತುವರಿದರು. ನಾನು ಸಂಜೆಯಿಂದ ನಡೆದಿದ್ದೆಲ್ಲವನ್ನು ತಿಳಿಸಿದೆ. ಅವರಲ್ಲಿ ಒಬ್ಬ “ಏನ್ ಗಂಡೋ ನೀನು, ನಿನ್ನಿಂದ ಗಂಡಸ್ರ ಜಾತಿಗೆ ಅವಮಾನ” ಎಂದು ಕತ್ತಿನ ಪಟ್ಟಿಗೆ ಕೈಹಾಕಿ ಕೆನ್ನೆಗೆ ಎರಡು ಬಾರಿಸಿದ. “ನಾನು ಅಂತವನಲ್ಲ ಇಲ್ ಕೇಳಿ” ಎಂದು ಕೈ ಮುಗಿಯುತ್ತ ನಿಂತ. ಅವನ ಶರಣಾಗತಿಗೆ “ಹೋಗ್ಲಿ ಬಿಡಿ, ಇಂತವ್ಕೆಲ್ಲಾ ಹೊಡ್ದು, ಈ ಪುಣ್ಯಕ್ಷೇತ್ರಕ್ಕೆ ಬಂದು ಮನಸ್ಸನ್ನು ಘಾಸಿಮಾಡಿಕೊಳ್ಳುವುದೇಕೆ? ಎಂದು ನಾನೇ ತಡೆದೆ. ಜನರೆಲ್ಲಾ ಅಲ್ಲಿಂದ ಚದುರಿದರು. ಹೊರಡುವ ಎಂದು ಗೆಳತಿಗೆ ಕೇಳಿದೆ. ಇಬ್ಬರು ಹೊರಟಾಗ “ನೋಡಿ ಮೇಡಂ” ಎಂದು ನನಗೆ ಮೊಬೈಲ್ ಕೊಟ್ಟ. ಅದರಲ್ಲಿ ಒಂದು ಹೆಣ್ಣಿನ ಚಿತ್ರವಿತ್ತು. ಥೇಟ್ ನಾನೇ! ಎನ್ನುವಂತಿತ್ತು. “ಇವ್ಳು ನನ್ನ ತಂಗಿ, ಆರು ವರ್ಷಗಳ ಹಿಂದೆ ಪಾದಯಾತ್ರೆಗೆ ಅಂತ ಬಂದಿದ್ದವಳು ಅವನಾವನೋ ಜೊತೆ ಓಡಿಹೋದ್ಲು. ಮನೇಲಿ ಅವಳನ್ನು ಹುಡುಕಿಸೋ ಒಂದು ಪ್ರಯತ್ನವನ್ನೂ ಮಾಡ್ಲಿಲ್ಲ. ಅವಳಿಗೆ ಪ್ರತಿ ವರ್ಷ ಪಾದಯಾತ್ರೆಗೆ ಬರೋ ಹುಚ್ಚು. ನಾನು ಪ್ರತಿವರ್ಷವೂ ಅವಳಿಗಾಗಿ ಬರ್ತೀನಿ. ನೀವು ನನ್ನ ತಂಗಿ ತರಾನೇ ಕಾಣಿಸಿದ್ರಿ. ನನ್ನ ಗುರ್ತು ಹಿಡಿಬಹುದೇನೋ ಅಂತ ಪದೇಪದೇ ನಿಮ್ಮ ಹಿಂದೆ ಬರುತ್ತಿದ್ದೆ” ಎಂದು ನಿಟ್ಟುಸಿರುಬಿಡುತ್ತ ಮೊಬೈಲನ್ನು ವಾಪಸ್ ಪಡೆದ.

ನಿಟ್ಟುಸಿರುಬಿಡುತ್ತ ಎಂತಹ ಆತುರಪಟ್ಟೆ… ಎಂದು ಅಲ್ಲಿಂದಲೇ ಮಾದೇಶ್ವರನಿಗೆ ಕೈಮುಗಿದೆ. ಮೊಬೈಲ್ ನಂಬರ್‌ಗಳು ವಿನಿಮಯಗೊಂಡವು.

***

Facebook
X
WhatsApp
Print
Email