ರಚನಾತ್ಮಕ ಚಳವಳಿಗಳಿಂದ ಕಲ್ಯಾಣ ಸಾಧ್ಯ

ಸಂಸ್ಕೃತದ ಚಲನವಲನ ಪದವೇ ಕನ್ನಡದಲ್ಲಿ ಚಳವಳಿ, ಚಳುವಳಿ ಎಂಬ ರೂಪದಲ್ಲಿದೆ. ಚಲನೆಯಲ್ಲಿ ಹಲವು ವಿನ್ಯಾಸಗಳಿವೆ. ಅವುಗಳಲ್ಲಿ ಪ್ರಮುಖವಾಗಿ ದಿಕ್ಕುದೆಸೆಯ ಹಿನ್ನೆಲೆಯಲ್ಲಿ ನಾಲ್ಕು ವಿನ್ಯಾಸಗಳು ಹೀಗಿವೆ: ೧. ಸಮತಟ್ಟಿನಲ್ಲಿನ ಚಲನೆ ೨. ಅಧೋಗಾಮಿಯಾದ ಚಲನೆ ೩. ಊರ್ಧ್ವಗಾಮಿಯಾದ ಚಲನೆ ೪. ಪೂರ್ಣ ಪರಿಕ್ರಮಣದ ಚಲನೆ. ನೀರು ಸಮತಟ್ಟಿನಲ್ಲಿ ಚಲಿಸುತ್ತದೆ ಮತ್ತು ಅಧೋಗಾಮಿಯಾಗಿ ಚಲಿಸುತ್ತದೆ. ಅದು ಮೇಲಿನ ಟ್ಯಾಂಕಿಗೆ ತಲಪಬೇಕೆಂದರೆ ಮೋಟರ್ ಮತ್ತು ಕರೆಂಟಿನ ನೆರವು ಬೇಕು. ಕಲ್ಲು ಮೊದಲಾದ ಘನವಸ್ತುಗಳು ಎಷ್ಟೇ ಮೇಲಕ್ಕೆಸೆದರೂ ಗುರುತ್ವಾಕರ್ಷಣೆಯ ಕಾರಣ ಅವು ಕೆಳಮುಖವಾಗಿಯೇ ಚಲಿಸುತ್ತವೆ. ಕಲ್ಲು ಮೇಲಿನಿಂದ ಕೆಳಕ್ಕೆ ಬೀಳುವುದಕ್ಕೆ ಯಾವುದೇ ಮೋಟರ್ ಮತ್ತು ಕರೆಂಟಿನ ಅಗತ್ಯವಿರುವುದಿಲ್ಲ. ಬಸ್ಸು, ರೈಲು ಮುಂತಾದವುಗಳು ಸಮತಟ್ಟಿನಲ್ಲಿ ಚಲಿಸಬಲ್ಲವು. ಆದರೆ ತಾವಾಗಿಯೇ ಚಲಿಸಲಾರವು. ಮೋಟರ್, ಕರೆಂಟ್ ಮತ್ತು ಡ್ರೈವರ್‌ಗಳ ಅಗತ್ಯವಿದೆ. ಬೆಳಕು ಎಲ್ಲ ದಿಕ್ಕುಗಳಲ್ಲಿ ತನ್ನ ಶಕ್ತ್ಯಾನುಸಾರ ಚಲಿಸಬಲ್ಲದು. ಸೂರ್ಯನ ಬೆಳಕು ಎಲ್ಲ ಕಡೆಯೂ ಚಲಿಸಬಲ್ಲದು. ಮನುಷ್ಯನ ಮನಸ್ಸು ಕೂಡ ಚಲನಶೀಲವಾದುದು. ಹಾಗಾಗಿ ಮಲಗಿರುವಾಗಲೂ ಮನುಷ್ಯನ ಮನಸ್ಸು ಕ್ರಿಯಾಶೀಲವಾಗಿರುತ್ತದೆ. ಚಳವಳಿಗಳೂ ಕೂಡ ಹೀಗೆಯೇ!

ಈ ಚಲನವಲನದಿಂದ ಕೂಡಿದ ಕ್ರಿಯಾಶೀಲತೆಯೇ ಎಲ್ಲ ಜೀವಿಗಳ ಜೀವನಕ್ಕೆ ಕಾರಣ. ಅದರಲ್ಲೂ ಮನುಷ್ಯನ ಮನಸ್ಸಿನ ವಿಕಾಸದ ಫಲವೇ ಮಾನವನ ಸಂಸ್ಕೃತಿ ಮತ್ತು ನಾಗರಿಕತೆಯ ವಿಕಾಸವಾಗಿದೆ. ಹಸಿವು ಮನುಷ್ಯನನ್ನು ಚಳವಳಿಗಾರನನ್ನಾಗಿ ಮಾಡಿರುವ ಬಹುದೊಡ್ಡ ಪ್ರಚೋದಕ ಶಕ್ತಿ. ಈ ಹಸಿವನ್ನು ಇಂಗಿಸಿಕೊಳ್ಳಲು ಬೇಟೆಯಿಂದ ಪ್ರಾರಂಭಿಸಿ, ಕೃಷಿ, ವ್ಯಾಪಾರ, ರಾಜಕಾರಣ ಮೊದಲಾದ ಹತ್ತಾರು ರೀತಿಯ ಚಟುವಟಿಕೆಗಳು ಅವುಗಳಿಂದಾದ ವ್ಯವಸ್ಥೆಗಳು ರೂಪಗೊಂಡಿವೆ. ಹೊಟ್ಟೆ ತುಂಬಿದ ಬಳಿಕ ಬಟ್ಟೆ, ವಸತಿ, ರಕ್ಷಣೆ, ಮನ್ನಣೆ, ಅಧಿಕಾರ, ಅಂತಸ್ತು, ಹಣ, ಹೆಣ್ಣು, ರಾಜ್ಯ ಮೊದಲಾದ ಹಲವು ರೀತಿಯ ಹೊಸ ಹಸಿವುಗಳು ಮನುಷ್ಯನನ್ನು ಮತ್ತಷ್ಟು ಮಗದಷ್ಟು ಚಲನಶೀಲನೂ ಕ್ರಿಯಾಶೀಲನೂ ಆಗುವಂತೆ ಮಾಡಿವೆ.

ಮಾನವನ ಇತಿಹಾಸದಲ್ಲಿ ಬೇಟೆಯಾಡುವುದೇ ಮೊದಲ ಚಳವಳಿ ಎನಿಸುತ್ತದೆ. ಬೇಟೆಯ ದಿನಗಳ ಬಳಿಕ ಮನುಷ್ಯ ರಾಜ್ಯವನ್ನು ಕಟ್ಟಿ ರಾಜನಾದ, ಬಳಿಕ ಒಂದು ರಾಜ್ಯಕ್ಕೂ ಮತ್ತೊಂದು ರಾಜ್ಯಕ್ಕೂ, ಒಂದು ಬುಡಕಟ್ಟಿಗೂ ಮತ್ತೊಂದು ಬುಡಕಟ್ಟಿಗೂ ಯುದ್ಧಗಳು, ದಂಗೆಗಳು, ಪರಸ್ಪರ ಹಲ್ಲೆ, ರಕ್ತಪಾತ, ಸಾವುನೋವುಗಳು ವ್ಯವಸ್ಥೆಯನ್ನು ಬದಲಾಯಿಸಿವೆ. ಇಲ್ಲೆಲ್ಲ ಮೃಗೀಯ ಕ್ರೌರ್ಯಗಳೇ ದಾಖಲಾಗಿವೆ. ಭರತ-ಬಾಹುಬಲಿಯಂಥ ಸೋದರರ ನಡುವಿನ ಯುದ್ಧದಲ್ಲಿ ಕೆಲವು ಬುದ್ಧಿವಂತ ಮಂತ್ರಿಗಳ ಮಧ್ಯಪ್ರವೇಶದಿಂದಾಗಿ ಸೈನಿಕರ ಸಾವುನೋವುಗಳು ತಪ್ಪಿವೆ. ನಿಜವಾದ ಯುದ್ಧದ ಬದಲು ದೃಷ್ಟಿಯುದ್ಧ, ಜಲಯುದ್ಧ, ಮಲ್ಲಯುದ್ಧ ಮಾದರಿಯ ರಚನಾತ್ಮಕವಾದ, ಅಹಿಂಸಾತ್ಮಕವಾದ ಯುದ್ಧಗಳು ಆರಂಭವಾದುದ್ದೇ ನಮ್ಮ ದೇಶದ ಮೊದಲ ಪ್ರಜಾಪ್ರಭುತ್ವ ಸ್ವರೂಪ ಮೈದಳೆದುದರ ಕುರುಹುಗಳೆನಿಸುತ್ತವೆ. ಒಟ್ಟಾರೆ ಯುದ್ಧಗಳು ವಿನಾಶಕಾರಿ ಚಳವಳಿಗಳು ಅಥವಾ ಆಧುನಿಕ ಕಾಲದ ಕಮ್ಯೂನಿಸ್ಟರ ರಕ್ತಕ್ರಾಂತಿಗಳು ಆಗಿದ್ದವೆನಿಸುತ್ತದೆ. ಉದ್ದೇಶಗಳು, ಸಿದ್ಧಾಂತಗಳು ಬೇರೆ ಬೇರೆ ಆಗಿದ್ದರೂ ರಕ್ತಪಾತ, ವರ್ಗಸಂಘರ್ಷ, ಸರ್ವಾಧಿಕಾರಿ ಧೋರಣೆಗಳಲ್ಲಿ ವ್ಯತ್ಯಾಸಗಳಿಲ್ಲವೆನಿಸುತ್ತದೆ. ಪ್ರಜಾಪ್ರಭುತ್ವ ಮತ್ತು ಕಮ್ಯೂನಿಸಂ ಎಂದೂ ಒಂದಾಗಲಾರವು. ಒಂದೆಡೆ ಇರಲಾರವು. ಅದೇ ಹೊತ್ತಿನಲ್ಲಿ ಬಂಡವಾಳಶಾಹಿ ಸರ್ವಾಧಿಕಾರಿ ಅರಸು ಪ್ರಭುತ್ವ ಮತ್ತು ಪ್ರಜಾಪ್ರಭುತ್ವ ಕೂಡ ಒಟ್ಟಿಗೆ ಇರುವುದಿಲ್ಲ. ಪ್ರಜಾಪ್ರಭುತ್ವ ಎಂದರೆ ಪ್ರಜೆಗಳಿಂದ, ಪ್ರಜೆಗಳಿಗಾಗಿ, ಪ್ರಜೆಗಳಿಗೋಸ್ಕರ ಇರುವ ಸರ್ಕಾರ ಮತ್ತು ಪ್ರಭುತ್ವ. ಅಲ್ಲಿ ಪ್ರಜೆಯಾದವರು ತನ್ನ ಸರ್ಕಾರದ ಅಥವಾ ಪ್ರಭುತ್ವದ ವಿರುದ್ಧ ಹೋರಾಡುವ ಸಂಪೂರ್ಣ ಸ್ವಾತಂತ್ರ್ಯವಿದೆ. ಆದರೆ ತನ್ನ ದೇಶವನ್ನೇ ನಾಶಮಾಡುವ, ತನ್ನ ಪ್ರಜೆಗಳನ್ನೂ ಪ್ರಜೆಗಳ ಮಾನ ಪ್ರಾಣ ಆಸ್ತಿಗಳನ್ನು ನಾಶಮಾಡುವ ಯಾವ ಅಧಿಕಾರವೂ ಇಲ್ಲ. ಸ್ವಾತಂತ್ರ್ಯವೂ ಇಲ್ಲ. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಸುಪ್ರೀಂ. ಅವರೆಲ್ಲರೂ ಸೇರಿ ಅಂಗೀಕರಿಸಿರುವ ಸಂವಿಧಾನವೇ ಸುಪ್ರೀಂ. ಸಂವಿಧಾನಕ್ಕಿಂತ ದೊಡ್ಡವರು ಯಾರೂ ಇಲ್ಲ. ಅಹಿಂಸಾತ್ಮಕ ಹೋರಾಟಕ್ಕೆ ಜಾಗವಿದೆ. ಹಿಂಸಾತ್ಮಕ ಹೋರಾಟಕ್ಕೆ ಜಾಗವಿಲ್ಲ. ಹಾಗಾಗಿ ಪ್ರಜಾಪ್ರಭುತ್ವ ಉಳಿದು ಬೆಳೆಯಬೇಕಾದರೆ ಹಿಂಸೆಯನ್ನು ಯಾರೂ ಯಾವುದೇ ಕಾರಣಕ್ಕೂ ಬಳಸಬಾರದು. ಬಳಸಿದರೆ ಪ್ರಜಾಸರ್ಕಾರ ಸಮರ್ಥವಾಗಿ ಹತ್ತಿಕ್ಕಬೇಕು. ಇಲ್ಲವಾದರೆ ಆ ದೇಶದಲ್ಲಿ, ರಾಜ್ಯದಲ್ಲಿ ಪ್ರಜಾಪ್ರಭುತ್ವ ಉಳಿಯಲಾರದು. ತಮ್ಮ ದೇಶದ ನಾಶವನ್ನು ಬಯಸುವವರು ಎಷ್ಟೇ ಶಕ್ತಿಶಾಲಿಯಾಗಿದ್ದರೂ ಅವರು ದೇಶಭಕ್ತರಾಗಿರುವುದಿಲ್ಲ ಮತ್ತು ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇರುವವರಾಗಿರುವುದಿಲ್ಲ. ಅಂಥವರು ರಾಷ್ಟ್ರಕ್ಕೂ ಪ್ರಜಾಪ್ರಭುತ್ವಕ್ಕೂ ಕಂಟಕರಾಗಿರುತ್ತಾರೆ. ಇಂಥ ಸಂದರ್ಭಗಳಲ್ಲಿ ಅಧಿಕಾರದಲ್ಲಿರುವ ಸರ್ಕಾರ ಕೂಡ ತನ್ನ ಪ್ರಜೆಗಳ ಹಸಿವನ್ನು ಅಶಾಂತಿಯನ್ನು ಮಾನವೀಯತೆಯಿಂದ ಕೇಳಿಸಿಕೊಳ್ಳಬೇಕು. ತನ್ನ ಸೈನಿಕ ಶಕ್ತಿ ಮತ್ತು ಪೊಲೀಸ್ ಶಕ್ತಿಯನ್ನೂ ಬಳಸಿ ಜನಾಭಿಪ್ರಾಯವನ್ನು ಹತ್ತಿಕ್ಕಬಾರದು. ಹತ್ತಿಕ್ಕಿದರೆ ಒಂದಲ್ಲ ಒಂದು ದಿನ ಅದು ಸ್ಫೋಟಗೊಂಡು ವ್ಯವಸ್ಥೆಯನ್ನೇ ಬುಡಮೇಲು ಮಾಡುತ್ತದೆ.

ಆಧುನಿಕ ಭಾರತದ ಸಂದರ್ಭದ ಮೊಟ್ಟಮೊದಲ ಪ್ರಜಾಸತ್ತಾತ್ಮಕ ಚಳವಳಿ ಎಂದರೆ ಅದು ಸ್ವಾತಂತ್ರ್ಯ ಚಳವಳಿ. ಲಕ್ಷಾಂತರ ಜನರು ತಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣಾರ್ಪಣೆ ಮಾಡಿದರು. ಇದು ಸ್ವಂತದ ಲಾಭಕ್ಕೋ, ವಿಚಾರಕ್ಕೋ, ಅಧಿಕಾರಕ್ಕೋ ನಡೆದ ಚಳವಳಿಯಲ್ಲ. ದೇಶಕ್ಕಾಗಿ, ದೇಶದ ಸ್ವಾತಂತ್ರ್ಯಕ್ಕಾಗಿ ಸ್ವಯಂಪ್ರೇರಿತರಾಗಿ ಸ್ವಸಂಘಟಿತರಾಗಿ ನಡೆಸಿದ ಬೃಹತ್ ಚಳವಳಿ. ಅದರ ಪರಿಣಾಮ ೧೯೪೭ರ ಆಗಸ್ಟ್ ೧೫ರಂದು ಭಾರತ ದೇಶ ಸ್ವತಂತ್ರವಾಯಿತು. ಆದರೆ ಮುಸ್ಲಿಂ ಲೀಗ್ ಮತ್ತು ಮಹಮ್ಮದ್ ಆಲಿ ಜಿನ್ನಾ ಮೊದಲಾದವರ ಸ್ವಾರ್ಥ ರಾಜಕಾರಣ ಹಾಗೂ ಮತಾಂಧತೆಯಿಂದ ಕೂಡಿದ ಮತೀಯ ರಾಷ್ಟ್ರನಿರ್ಮಾಣದ ಖಿಲಾಫತ್ ಚಳವಳಿಯಿಂದ ಪ್ರಾರಂಭವಾದ ಒಂದು ಬೀಜ ದೇಶವಿಭಜನೆಯ ದುರಂತದಲ್ಲಿ ಕೊನೆಯಾಯಿತು. ೧೮೫೭ರಿಂದ ಪ್ರಾರಂಭವಾದ ಒಂದೇ ಹೋರಾಟ ಎರಡು ಭಿನ್ನ ನಿಲವು, ಮತ, ವಿಚಾರಗಳ ಕಾರಣದಿಂದಾಗಿ ಎರಡು ಭಿನ್ನ ಪರಿಣಾಮಗಳನ್ನು ನೀಡಿದೆ. ಒಂದು ಮುಸ್ಲಿಂ ರಾಷ್ಟ್ರವಾಗಿ ಪಾಕಿಸ್ತಾನ ಎಂದೆನಿಸಿಕೊಂಡರೆ ಮತ್ತೊಂದು ಹಿಂದೂ ಬಹುಸಂಖ್ಯಾತ, ಜಾತ್ಯತೀತ, ಸಮಾಜವಾದಿ ಗಣತಂತ್ರವಾಗಿ ಭಾರತ ಎಂದೆನಿಸಿಕೊಂಡಿದೆ. ೧೯೪೭ರಿಂದ ಇಂದಿನವರೆಗಿನ ಎರಡೂ ದೇಶಗಳಲ್ಲಿ ನಡೆದ ಹತ್ತು ಹಲವು ಚಳವಳಿಗಳು ಅವುಗಳ ಸ್ವರೂಪ, ಪರಿಣಾಮಗಳನ್ನೂ ತೌಲನಿಕವಾಗಿ ಅಧ್ಯಯನ ಮಾಡಿದರೆ ಭಾರತದ ಪ್ರಜಾಪ್ರಭುತ್ವ ಮತ್ತು ಇಲ್ಲಿನ ಜನಾಂದೋಲನಗಳ ರಚನಾತ್ಮಕ ಸ್ವರೂಪ ಸ್ಪಷ್ಟವಾಗುತ್ತದೆ.
ಜನರ ಪರವಾಗಿ ದೇಶದ ಪರವಾಗಿ ಸರ್ಕಾರ ನಡೆಸುವ ಆಂದೋಲನವೂ ಕೂಡ ಜನಾಂದೋಲನ ಎನ್ನಬೇಕು. ಏಕೆಂದರೆ ಅದು ಜನರ ಸರ್ಕಾರ. ಅದಕ್ಕೆ ಉತ್ತಮವಾದಂತಹ ಉದಾಹರಣೆ ಎಂದರೆ ವಲ್ಲಭಬಾಯಿ ಪಟೇಲರು ಹೈದರಾಬಾದ್ ನಿಜಾಮನ ವಿರುದ್ಧ ಕೈಗೊಂಡಂತಹ ಪೋಲೋ ಕಾರ್ಯಾಚರಣೆ, ನರೇಂದ್ರ ಮೋದಿಯವರ ಸರ್ಕಾರ ಇತ್ತೀಚೆಗೆ ಸಾಧಿಸಿದ ಆಪರೇಷನ್ ಸಿಂದೂರ್ ಎನ್ನಬಹುದು. ಅದೇ ಹೊತ್ತಿನಲ್ಲಿ ಜನರು ತಾವೇ ಆಯ್ಕೆ ಮಾಡಿದ ಸರ್ಕಾರದ ಕೆಲವು ತಪ್ಪು ನಿರ್ಧಾರಗಳ ವಿರುದ್ಧ ಹೋರಾಟಕ್ಕಿಳಿಯಬಹುದು. ಆ ಮೂಲಕ ದೇಶವಿರೋಧಿ, ಪ್ರಜಾವಿರೋಧಿ ಸರ್ಕಾರಗಳನ್ನೇ ಕಿತ್ತುಹಾಕುವ ಜನಾಭಿಪ್ರಾಯವನ್ನು ರೂಪಿಸಬಹುದು. ಆದರದು ಚುನಾವಣೆಯಂಥ ಅಥವಾ ರಾಜೀನಾಮೆಯಂಥ ಪ್ರಜಾಸತ್ತಾತ್ಮಕ ಸಾಂವಿಧಾನಿಕ ಕ್ರಮಗಳ ಮೂಲಕವೂ ಆಗುತ್ತದೆ, ಆಗಬೇಕು. ಇದಕ್ಕೆ ಅತ್ಯುತ್ತಮ ಉದಾಹರಣೆ ಶ್ರೀಮತಿ ಇಂದಿರಾಗಾಂಧಿ ಭಾರತದ ಮೇಲೆ ಹೇರಿದ ತುರ್ತುಪರಿಸ್ಥಿತಿಯ ವಿರುದ್ಧ ನಡೆದ ಜೆಪಿ ಆಂದೋಲನ ಹಾಗೂ ನರೇಂದ್ರ ಮೋದಿಯವರು ಮೊನ್ನೆ ಮೊನ್ನೆ ದೆಹಲಿಯ ಜಂತರ್‌ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಹೋರಾಟವನ್ನು ಪರಿಗಣಿಸಿದ ರೀತಿ. ದೇಶ ಮೊದಲು ಎನ್ನುವುದೇ ಪ್ರಜಾಪ್ರಭುತ್ವವನ್ನು ದೇಶವನ್ನು ಬಲಪಡಿಸುತ್ತದೆ.

ಯಾವುದೇ ಕಾಲದಲ್ಲೂ ಒಳಸಂಚುಗಳು ಸರ್ವೇಸಾಮಾನ್ಯವಾಗಿರುತ್ತವೆ. ಈ ಒಳಸಂಚುಕೋರರು ಪರಿಸ್ಥಿತಿಯ ಲಾಭವನ್ನು ಪಡೆಯಲು ಹಾತೊರೆಯುತ್ತಿರುತ್ತಾರೆ. ಅವುಗಳಿಗೆ ಜನ, ದೇಶ, ಸಮಸ್ಯೆ, ಪರಿಹಾರ, ಪ್ರಗತಿ ಯಾವುದೂ ಮುಖ್ಯವಾಗಿರುವುದಿಲ್ಲ. ಅವುಗಳಿಗೆ ತಮ್ಮ ತಮ್ಮ ಸ್ವಾರ್ಥ ಸಾಧನೆಯೇ ಮುಖ್ಯವಾಗಿರುತ್ತದೆ. ಉದಾಹರಣೆಗೆ ಸ್ವಾತಂತ್ರ್ಯಪೂರ್ವದಲ್ಲಿ ಕಾಂಗ್ರೆಸ್ ನಡೆಸಿದ ಹೋರಾಟದಲ್ಲಿದ್ದ ಜಿನ್ನಾನಂಥವರೇ ದೇಶವಿಭಜನೆಗೆ ಕಾರಣರಾದರು. ಭಾರತಸರ್ಕಾರದ ರಕ್ಷಣಾಮಂತ್ರಿಯೇ ತಮ್ಮ ಕಮ್ಯೂನಿಸಂ ಸಿದ್ಧಾಂತದ ಕಾರಣ ಚೀನಾ-ಭಾರತಗಳ ನಡುವಿನ ಯುದ್ಧವನ್ನು ಸರಿಯಾಗಿ ನಿರ್ವಹಿಸದೆ ಸಾವಿರಾರು ಭಾರತೀಯ ಯೋಧರ ಸಾವಿಗೆ ಹೇಗೆ ಕಾರಣರಾದರೆಂಬುದು ’ಹಿಮಾಲಯನ್ ಬ್ಲಂಡರ‍್ಸ್’ ಕೃತಿಯಲ್ಲಿದೆ. ಅದೇ ರೀತಿ ಇತ್ತೀಚೆಗೆ ದೆಹಲಿಯಲ್ಲಾದ ವಿದ್ಯಾರ್ಥಿಗಳ ಚಳವಳಿಗಳಲ್ಲಿ ಕೆಲವು ದೇಶದ್ರೋಹಿ ಶಕ್ತಿಗಳು ವಿದೇಶೀ ವಿದ್ರೋಹಿಶಕ್ತಿಗಳ ನೆರವಿನೊಂದಿಗೆ ಭಾರತದ ಪ್ರಜಾಸತ್ತಾತ್ಮಕ ಸರ್ಕಾರಗಳನ್ನು ಹಿಂಸಾಚಾರದ ಮೂಲಕ ಬುಡಮೇಲು ಮಾಡಲು ಒಳಸಂಚುಗಳನ್ನು ರೂಪಿಸಿದ್ದವು ಎಂಬುದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಅಂದರೆ ಒಂದು ಚಳವಳಿ ಎಷ್ಟೇ ಆದರ್ಶಮಯವಾಗಿದ್ದರೂ ಸುಸಂಘಟಿತವಾಗಿರದಿದ್ದರೆ ಹೊರಗಿನ ದುಷ್ಟಶಕ್ತಿಗಳು ಅದನ್ನು ಹೈಜಾಕ್ ಮಾಡುವ ಎಲ್ಲ ಸಾಧ್ಯತೆಗಳಿವೆ. ಇದು ಜನತಂತ್ರಕ್ಕೆ ತುಂಬಾ ಅಪಾಯಕಾರಿಯಾದ ನಡೆ. ಉದಾಹರಣೆಗೆ ಪಾಕಿಸ್ತಾನ, ಆಫಘಾನಿಸ್ತಾನ, ಬಾಂಗ್ಲಾದೇಶಗಳ ಸರ್ಕಾರಗಳನ್ನು ಪತನಗೊಳಿಸಿದ ಘಟನೆಗಳು ಅಪ್ರಜಾಸತ್ತಾತ್ಮಕ ಹಾಗೂ ಹಿಂಸಾತ್ಮಕ ಎಂಬುದನ್ನೂ ಮರೆಯುವಂತಿಲ್ಲ.

ರಷ್ಯಾಕ್ರಾಂತಿಯ ಬಳಿಕ ಕಮ್ಯೂನಿಸಂ ಎಂಬುದು ’ಜನ’ರ ಹೆಸರಲ್ಲಿಯೇ ಸರ್ವಾಧಿಕಾರಿ ಪ್ರಭುತ್ವವನ್ನು ತಂದಿದೆ. ಉದಾಹರಣೆಗೆ ಲೆನಿನ್ ಮಾಡಿದ ಜನಾಂದೋಲನ ಸ್ಟಾಲಿನ್ ಕಾಲಕ್ಕೆ ಕಮ್ಯೂನಿಸ್ಟರಾದಿಯಾಗಿ ಜನಸಾಮಾನ್ಯರ ಸಾವುನೋವುಗಳಲ್ಲಿ ವಿಜೃಂಭಿಸಿದವು. ಸರ್ವಾಧಿಕಾರ ಮತ್ತು ರಕ್ತಪಾತದ ಕರಾಳ ಹೆಜ್ಜೆಗಳು ಜಗತ್ತಿನ ಇತಿಹಾಸದ ಪುಟದಲ್ಲಿ ದಾಖಲಾಗಿವೆ. ಅದೇ ರೀತಿ ಭಾರತದಲ್ಲೂ ಜನಸಾಮಾನ್ಯರ, ರೈತರ, ಕಾರ್ಮಿಕರ ಸಮಸ್ಯೆಗಳಿಗಾಗಿಯೇ ಹೋರಾಡುತ್ತೇವೆ ಎಂದು ಹಲವು ಚಳವಳಿಗಳನ್ನು ಕಟ್ಟಿದ ಭಾರತದ ಕಮ್ಯೂನಿಸ್ಟರು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಒಳಗಿನಿಂದಲೇ ಮುಗಿಸುವ ಒಳಸಂಚುಗಳೊಂದಿಗೆ ನಕ್ಸಲ್ ಚಳವಳಿಯ ರೂವಾರಿಗಳಾದರು. ಪಶ್ಚಿಮಬಂಗಾಳದ ಜ್ಞಾನಪೀಠ ಪ್ರಶಸ್ತಿ ವಿಜೇತ ಲೇಖಕಿ ಮಹಾಶ್ವೇತಾದೇವಿಯವರು ತಮ್ಮ ’ಅಗ್ನಿಗರ್ಭ’ ಕಾದಂಬರಿಯಲ್ಲಿ ಸಂತಾಲ ನಾಯಕನ ಹತ್ಯೆ ಹಾಗೂ ಬುಡಕಟ್ಟು ಜನಾಂಗದ ಅನ್ಯಾಯವನ್ನು ಚಿತ್ರಿಸಿದ್ದಾರೆ. ತಸ್ಲೀಮಾ ನಸ್ರೀನ್ ತಮ್ಮ ’ಲಜ್ಜಾ’ ಕಾದಂಬರಿಯಲ್ಲಿ ಮತಾಂಧತೆಯ ಕ್ರೌರ್ಯವನ್ನು ದಾಖಲಿಸಿದ್ದಾರೆ.

ಪ್ರಜಾಪ್ರಭುತ್ವದ ಉಸಿರೇ ಪ್ರಜಾ ಆಂದೋಲನಗಳು. ಆದರೆ ಅವು ಸಂವಿಧಾನಕ್ಕೆ ವಿರೋಧಿಯಾಗಿರಬಾರದು, ಹಿಂಸಾತ್ಮಕವಾಗಿರಬಾರದು. ವಿದೇಶೀ ದುಷ್ಟಶಕ್ತಿಗಳ ಕೈಗೊಂಬೆಗಳಾಗಿರಬಾರದು, ಸ್ವಾರ್ಥಸಾಧನೆಯ ಕುತಂತ್ರಗಳಾಗಿರಬಾರದು ಎಂಬುದು ಅಷ್ಟೇ ಸತ್ಯ. ಒಂದು ಆಂದೋಲನವು ಸಮಸ್ಯೆಗಳ ಪರಿಹಾರಕ್ಕೆ ಹಾಗೂ ಜನರ ಕಲ್ಯಾಣಕ್ಕೆ ದೇಶದ ಸುಭದ್ರತೆಗೆ ಕಾರಣವಾಗಬೇಕು. ಸಮಸ್ಯೆಗಳ ಆಳವಾದ ಅರಿವಿಲ್ಲದ, ಅಧ್ಯಯನವಿಲ್ಲದ ಪರಿಹಾರದ ಸೂಕ್ತ ಬೇಡಿಕೆಗಳಿಲ್ಲದ ಹೋರಾಟಗಳು ಸಮೂಹಸನ್ನಿಗಳಾಗಬಹುದೇ ಹೊರತು ಪರಿಹಾರ, ಸುಧಾರಣೆಗೆ ಕಾರಣವಾಗಲಾರವು. ಅದರಲ್ಲೂ ಹದಿಹರೆಯದ ಯುವ ಮನಸ್ಸುಗಳಿಗೆ ದೇಶವಿರೋಧಿ, ಜನವಿರೋಧಿ, ಹಿಂಸಾಚಾರದ ಆಫೀಮನ್ನು ಯಾರೂ ಕುಡಿಸಬಾರದು ಮತ್ತು ಶಾಂತಿಯುತವಾಗಿ ಹೋರಾಡುವ ಯುವಜನರನ್ನು ಚೀನಾ ಸರ್ಕಾರ ಬೀಜಿಂಗ್‌ನಲ್ಲಿ ಗುಂಡಿಕ್ಕಿ ಕೊಂದಂತೆ ಯಾರೂ ಕೊಲ್ಲಬಾರದು. ದೇಶದ ಜನರ ಅಶಾಂತಿಯನ್ನು ಯಾವ ಪೊಲೀಸರ ಲಾಟಿಗಳೂ ಬಂದೂಕುಗಳು ಇಲ್ಲವಾಗಿಸಲು ಸಾಧ್ಯವಿಲ್ಲ. ಅಶಾಂತಿಗೆ ಅಶಾಂತಿ ಎಂದೂ ಉತ್ತರವಲ್ಲ. ಪ್ರಜೆಗಳ ಅನ್ನ-ಅರಿವು-ಆರೋಗ್ಯ-ಸಂಸ್ಕೃತಿಗಳ ಪೂರ್ಣ ಹೊಣೆ ಸರ್ಕಾರದ್ದಾಗಿರುತ್ತದೆ. ಅದಕ್ಕೆ ಧಕ್ಕೆಯಾದಾಗ ದಂಗೆ ಅಷ್ಟೇ ಸಹಜವಾಗಿರುತ್ತದೆ. ಕೆಲವರು ಜನರು ದಂಗೆ ಏಳಲಿ ಎಂದೇ ಸಮಸ್ಯೆಗಳನ್ನು ಸೃಷ್ಟಿಸುತ್ತಾರೆ. ಉದಾಹರಣೆಗೆ ಮೊನ್ನೆ ಮೊನ್ನೆ ಭಾರತದ ನೀಟ್ ಪರೀಕ್ಷೆ ಪ್ರಶ್ನೆಪತ್ರಿಕೆಗಳನ್ನು ಸೋರಿಕೆ ಮಾಡಿದವರು ಪ್ರಶ್ನೆಪತ್ರಿಕೆಗಳನ್ನು ಸಿದ್ಧಪಡಿಸಿದ ಪ್ರಾಧ್ಯಾಪಕರೇ ಎಂಬ ಸುದ್ದಿ ಆಘಾತಕಾರಿಯಾದುದು. ಬೇಲಿಯೇ ಎದ್ದು ಹೊಲ ಮೇಯ್ದಂತೆ! ಅದನ್ನು ನಿಯಂತ್ರಿಸಲೇಬೇಕು, ಶಿಕ್ಷಿಸಲೇಬೇಕು.
ನೀಟ್ ಪರೀಕ್ಷೆಯ ಬೆಂಕಿಯ ಬೇಗುದಿಯನ್ನು ಕೆಲವು ಪಟ್ಟಭದ್ರ ಶಕ್ತಿಗಳು ದುರುಪಯೋಗ ಮಾಡಿಕೊಂಡಿರುವುದು ವಾಸ್ತವಾದರೂ, ದೇಶದ ವಿದ್ಯಾರ್ಥಿಗಳೇಕೆ ಅಶಾಂತರಾಗಿದ್ದಾರೆ ಎಂಬ ಬಗ್ಗೆ ಸರ್ಕಾರ ಶಾಂತಚಿತ್ತದಿಂದ ಯೋಚಿಸಬೇಕು. ಮೆಡಿಕಲ್ ಸೀಟಿರುವುದು ಒಂದು ಲಕ್ಷದ ನಲವತ್ತು ಸಾವಿರ! ಪರೀಕ್ಷೆ ತೆಗೆದುಕೊಂಡವರು ಇಪ್ಪತ್ತು ಲಕ್ಷ! ಪಾಸಾದವರು ಹನ್ನೊಂದು ಲಕ್ಷ! ಸೀಟು ಸಿಗುವುದು ಒಂದು ಲಕ್ಷದ ನಲವತ್ತು ಸಾವಿರ ಜನರಿಗೆ!! ಅದರಲ್ಲೂ ಸರ್ಕಾರೀ ಸೀಟುಗಳು ಅರವತ್ತು ಸಾವಿರದ ಆಸುಪಾಸು! ಕೋಟಿ ಕೋಟಿ ರೂಪಾಯಿಗಳಿಗೆ ಮಾರಾಟವಾಗುವ ಖಾಸಗಿ ಸೀಟುಗಳು ಎಪ್ಪತ್ತು ಸಾವಿರದ ಆಸುಪಾಸು! ಒಟ್ಟು ದೇಶದ ೪.೫ ಕೋಟಿ ವಿದ್ಯಾರ್ಥಿಗಳಲ್ಲಿ ಕಲಾ ವಿಷಯ ಓದುವವರೇ ಅಧಿಕ. ಅವರೇ ಅತಿ ಹೆಚ್ಚಿನ ನಿರುದ್ಯೋಗಿಗಳು. ನಮ್ಮ ದೇಶದ ಕೋಟಿ ಕೋಟಿ ಪದವೀಧರರು ಸರ್ಕಾರೀ ಉದ್ಯೋಗವೂ ಇಲ್ಲದೆ, ಸ್ವಉದ್ಯೋಗವೂ ಇಲ್ಲದೆ, ಬೀದಿಗೆ ಬಿದ್ದರೆ, ಡ್ರಗ್ಸ್‌ಗಳಿಗೆ ದಾಸರಾದರೆ, ರಾಜಕಾರಣಿಗಳ ಬಾಲಂಗೋಚಿಗಳಾದರೆ, ಭಯೋತ್ಪಾದನೆ, ಮತಾಂಧತೆ, ಗೂಂಡಾಗಿರಿಗೆ ಸಿಲುಕಿದರೆ ದೇಶ, ಸಮಾಜ ಹೇಗೆ ಸ್ವಸ್ಥವಾಗಿರಬಲ್ಲದು? ’ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು’ ಸಾಧ್ಯವಾದಲ್ಲಿ ಶಾಂತ ಪ್ರಜಾಪ್ರಭುತ್ವ ಸಾಧ್ಯ.

Facebook
X
WhatsApp
Print
Email