ಈಗ್ಗೆ ಎಪ್ಪತ್ತೆಂಬತ್ತು ವರ್ಷ ಹಿಂದಿನವರೆಗೆ ಎರಡುಮೂರು ತಲೆಮಾರಿನವರು ಒಟ್ಟಿಗೇ ‘ಕೂಡು-ಕುಟುಂಬ’ವಾಗಿ ಇರುತ್ತಿದ್ದುದು ವಿರಳವಾಗಿರಲಿಲ್ಲ. ಉದ್ಯೋಗಾರ್ಥ ನಗರಗಳಿಗೋ ವಿದೇಶಗಳಿಗೋ ವಲಸೆ ಹೋಗುವುದು ಮೊದಲಾದ ಹಲವು ಕಾರಣಗಳಿಂದ ‘ಒಡೆದ’ ಕುಟುಂಬಗಳು ವ್ಯಾಪಕಗೊಂಡವು. ಕುಟುಂಬನಿಯಂತ್ರಣದ ಕಾರಣದಿಂದಲೂ ಕುಟುಂಬಗಳು ಸಂಕುಚಿತಗೊಳ್ಳತೊಡಗಿದವು. ಸ್ವಚ್ಛಂದತೆಯ ಆಕಾಂಕ್ಷೆ ಮೊದಲಾದವೂ ಸೇರಿಕೊಂಡವು. ಈಗಲಾದರೋ ಒಂದೇ ಮಗು ಇರುವ ಕುಟುಂಬಗಳು ಸಾಮಾನ್ಯ. ಸಮಸ್ಯೆಗಳು ತಲೆದೋರುವುದು ಅಪಘಾತಗಳೋ ಸಾವುನೋವುಗಳೋ ಎರಗಿದಾಗ. ಆಸರೆಗೆ ಜನರೇ ಇಲ್ಲದ ಸ್ಥಿತಿಯುಂಟಾಗುತ್ತದೆ. ಹೆಚ್ಚು ಜನರ ಸಂಗಡಿಕೆಯು ವ್ಯಾವಹಾರಿಕತೆಯಿಂದಾಚೆಗೆ ಸಾಂಸ್ಕೃತಿಕ-ಮಾನಸಿಕ ಆವಶ್ಯಕತೆಯನ್ನೂ ಪೂರಯಿಸುತ್ತದೆ. ಈಚಿನ ಕೋವಿಡ್ ಸಂದರ್ಭದಲ್ಲಿ ಅನೇಕರನ್ನು ಈ ಸಮಸ್ಯೆ ಕಾಡಿದುದು ಹೌದು. ‘ವರ್ಕ್ ಫ್ರಂ ಹೋಮ್’ ಸೌಲಭ್ಯ ಏರ್ಪಟ್ಟಾಗ ಗಣನೀಯ ಸಂಖ್ಯೆಯವರು ಹಳ್ಳಿಮನೆಗಳಿಗೋ ತಂದೆತಾಯಿಯರ ಮನೆಗೋ ಹೋದದ್ದು ಗಮನಕ್ಕೆ ಬಂದಿತು. ಪರಿಚಿತರೋ ನಂಟರೋ ಹತ್ತಿರಹತ್ತಿರ ಇರುವ ಅಪಾರ್ಟ್ಮೆಂಟ್‌ಗಳನ್ನು ಅರಸುತ್ತಿದ್ದಾರೆಂದು ಕೆಲವರು ರಿಯಲ್ ಎಸ್ಟೇಟ್ ಏಜೆಂಟರು ಹೇಳಿದ್ದಾರೆ. ಈ ಹಲವು ಪ್ರವೃತ್ತಿಗಳನ್ನು ಜನರಲ್ಲಿ ಕೂಡು-ಕುಟುಂಬ ವ್ಯವಸ್ಥೆಯ ಬಗೆಗೆ ಒಲವು ಹೆಚ್ಚುತ್ತಿರುವುದರ ದ್ಯೋತಕವೆಂದು ಭಾವಿಸಬಹುದೆ? ಉತ್ತರ ಭವಿಷ್ಯದಲ್ಲಿ. ಕಾದು ನೋಡೋಣ.
ಕೂಡು-ಕುಟುಂಬ
Month : April-2024 Episode : Author :




