ಈಗ್ಗೆ ಎರಡೂವರೆ ಸಾವಿರ ವರ್ಷಗಳ ಹಿಂದೆ ಇದ್ದ ಚೀಣೀ ದಾರ್ಶನಿಕ ಕನ್ಫ್ಯೂಶಿಯಸ್ ಹೇಳಿದ್ದ ಮಾತು: ‘‘ಯಾವುದಾದರೂ ಸಮುದಾಯವನ್ನು ಭಗ್ನಗೊಳಿಸಬೇಕೆನಿಸಿದರೆ ಮೊತ್ತಮೊದಲು ಮಾಡಬೇಕಾದ ಕೆಲಸ ಅದರ ಭಾಷೆಯನ್ನು ಕುಲಗೆಡಿಸುವುದು!” ಹಾಗೆ ಭಾರತದಲ್ಲೂ ನಡೆದಿದೆ. ನೆಹರು ಆದಿಯಾಗಿ ನಾಯಕಮಣಿಗಳು ಹಿಂದೂವಿರೋಧದ ತಮ್ಮ ಆಶಯಕ್ಕೆ ಬಗೆಬಗೆಯ ಗವುಸುಗಳನ್ನು ತೊಡಿಸುತ್ತಬಂದರು. ಐರೋಪ್ಯಮೂಲದಿಂದ ಪೂರ್ತಿ ಭಿನ್ನ ಅರ್ಥದಲ್ಲಿ ‘ಸೆಕ್ಯುಲರಿಸ್ಮ್’ ಶಬ್ದವನ್ನು ಹರಿಯಬಿಟ್ಟರು. ತಮ್ಮ ನಿಲವು ಮುಸ್ಲಿಂಪರವೆಂಬುದನ್ನು ಹೊರನೋಟಕ್ಕಾದರೂ ಅಲ್ಲಗಳೆಯಲು ‘ಅಲ್ಪಸಂಖ್ಯಾತ’ ಎಂಬ ಬಿರುದನ್ನು ಮುಸ್ಲಿಮರಿಗಿತ್ತರು. ಆದರೆ ದೇಶದಲ್ಲಿ ಶೇ. ೨.೩ರಷ್ಟು ಇರುವ ಕ್ರೈಸ್ತರಾಗಲಿ ೧.೭ರಷ್ಟು ಇರುವ ಸೀಖರಾಗಲಿ ೦.೦೫ರಷ್ಟು ಮಾತ್ರವಿರುವ ಪಾರ್ಸಿಗಳಾಗಲಿ ಕಾಂಗ್ರೆಸ್ ಸರ್ಕಾರಗಳ ಗಣನೆಯಲ್ಲಿ ‘ಅಲ್ಪಸಂಖ್ಯಾತ’ರೆನಿಸಲಿಲ್ಲ. ಕಾಂಗ್ರೆಸ್ ಸರ್ಕಾರಗಳು ಮುಸ್ಲಿಂಪಕ್ಷಪಾತಿಗಳೆಂಬುದು ಹಗಲಿನಷ್ಟು ಸ್ಪಷ್ಟ. ಎಷ್ಟೇ ನಾಜೂಕಿನ ಪರಿಭಾಷೆ ಬಳಸಿದರೂ ಸ್ಥಿತಿ ವ್ಯತ್ಯಾಸವಾಗದೆಂಬುದನ್ನು ಆಚರಣೆಗಳೇ ಸಾರುವಾಗ ಭಾಷೆಯ ದೊಂಬರಾಟಗಳೇಕೆ? ಈಚಿನ ಸನ್ನಿವೇಶವನ್ನೇ ನೋಡೋಣ. ರಾಹುಲ್ಗಾಂಧಿ ಅಮೇಠಿಯನ್ನು ತ್ಯಜಿಸಿ ಮುಸ್ಲಿಮರೂ ಕ್ರೈಸ್ತರೂ ಜನಸಂಖ್ಯೆಯ ಅರ್ಧದಷ್ಟಿರುವ ವಯನಾಡಿನಿಂದ ಸ್ಪರ್ಧಿಸಹೊರಟದ್ದು ಏಕೆ? ಈಚಿನ ಲೋಕಸಭೆ ಚುನಾವಣೆಯ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಪಕ್ಷ ‘ಅಲ್ಪಸಂಖ್ಯಾತರು’ ಎಂಬ ಈಗ ಅರ್ಥ ಕಳೆದುಕೊಂಡಿರುವ ಆಲಂಕಾರಿಕ ಶಬ್ದವನ್ನು ೪೮ ಬಾರಿ ಬಳಸಿರುವುದರ ಹಿನ್ನೆಲೆಯಲ್ಲಿ ಯಾರನ್ನೂ ಮೋಸಗೊಳಿಸಲಾರದ ಹಳಸಲು ಪರಿಭಾಷೆ ಕುರಿತು ಮೇಲಣ ಟಿಪ್ಪಣಿ ಮಾಡಬೇಕಾಯಿತು.
ಭಾಷೆಯ ವ್ಯಭಿಚರಣ
Month : July-2024 Episode : Author : -ಎಸ್.ಆರ್.ಆರ್.