ಪರಕಾಯಪ್ರವೇಶ ಬೆಳಗ್ಗೆ ಹತ್ತು ಗಂಟೆಗೆ ನಡೆಯುವುದೆಂದು ನಿಶ್ಚಯವಾಗಿತ್ತು. ದೀಕ್ಷಿತರು ಹಿಂದಿನ ದಿನ ರಾತ್ರಿಯೇ ಕೆಲ ವಿಧಿಗಳನ್ನು ನೇರವೇರಿಸಿದ್ದರು. ಹಿಂದಿನ ರಾತ್ರಿಯೇ ಅಮೆರಿಕೆಯ ಡಾ. ರಿಚರ್ಡ್ ಜೇಫರಸನ್ರ ಪ್ರತಿರೂಪ ಅಲ್ಲಿಗೆ ತಲಪಿತ್ತು. ಜೇಫರ್ಸನ್ ಅವರೇ ವಿದ್ಯುನ್ಮಾನಸಾಗಣೆಯ (ಟೆಲಿಪೋರ್ಟೇಶನ್) ನೇತಾರರು. ಡಾ. ಅಂಕಿತಪಟೇಲರ ಪ್ರತಿರೂಪವನ್ನು ಅಮೆರಿಕೆಯವರು ತಮ್ಮ ಪ್ರಯೋಗಸ್ಥಳದಲ್ಲಿ ರವಾನೆ ಮಾಡಿಕೊಂಡಿದ್ದರು. ಡಾ. ಅಂಕಿತರನ್ನು ದೀಕ್ಷಿತರ ಎದುರು ಮಲಗಿಸಲಾಗಿತ್ತು. ಡಾ. ಜೇಫರ್ಸನ್ರ ಪ್ರತಿರೂಪವನ್ನು ಹಿಮಪೆಟ್ಟಿಗೆಯಲ್ಲಿ ಕೆಡದಂತೆ ಇಡಲಾಗಿತ್ತು.
ಅಮೆರಿಕೆಯ ದೂತಾವಾಸದ ಇಬ್ಬರು ಉನ್ನತಾಧಿಕಾರಿಗಳು ಅಲ್ಲಿ ಉಪಸ್ಥಿತರಿದ್ದರು. ಭಾರತೀಯ ವೈದ್ಯರ ತಂಡವೂ ಅಲ್ಲಿತ್ತು. ಪ್ರಧಾನಿಗಳು, ವಿದೇಶಾಂಗ ಸಚಿವರು, ಒಂದಿಬ್ಬರು ಅಧಿಕಾರಿಗಳೂ ಅಲ್ಲಿದ್ದರು. ಅಮೆರಿಕೆಯಲ್ಲಿ ನಡೆಯುವುದನ್ನೆಲ್ಲ ಪರದೆಯ ಮೇಲೆ ಕಾಣುವಂತೆ ವ್ಯವಸ್ಥೆಯಾಗಿತ್ತು. ಇಲ್ಲಿ ನಡೆಯುವುದನ್ನೂ ಅಮೆರಿಕೆಯವರು ನೋಡಬಹುದಾಗಿತ್ತು.
ನಾನು ಪರಮಶಿವನ್. ಪ್ರಧಾನಮಂತ್ರಿಯವರ ಕಾರ್ಯಾಲಯದಿಂದ ಬರುತ್ತಿದ್ದೇನೆ. ನಿನ್ನೆ ಫೋನ್ ಮಾಡಿದ್ದೆ….” – ದೀಕ್ಷಿತರನ್ನು ನಮಸ್ಕರಿಸುತ್ತ ಹೇಳಿದರು ಪರಮಶಿವನ್.
“ಬನ್ನಿ, ಬನ್ನಿ. ನೀವು ಬಂದುದು ತುಂಬ ಸಂತೋಷ” ಎನ್ನುತ್ತ ದೀಕ್ಷಿತರು ಕುಳಿತುಕೊಳ್ಳುವುದಕ್ಕೆ ಕುರ್ಚಿ ತೋರಿಸಿದರು.
“ಪ್ರಧಾನಮಂತ್ರಿಗಳು ನಿಮ್ಮೊಂದಿಗೆ ಮಾತನಾಡಬಯಸುತ್ತಾರೆ…”
“ನಿನ್ನೆಯೇ ತಿಳಿಸಿದ್ದಿರಲ್ಲ ಅದನ್ನು…”
“ಅದಕ್ಕೆ ಪೂರ್ವತಯಾರಿಯಾಗಿ ನಾವು ಒಂದಿಷ್ಟು ಸಲಕರಣೆಗಳನ್ನು ಜೋಡಿಸಿಕೊಳ್ಳಬೇಕು. ತಾವು ಅಪ್ಪಣೆಕೊಟ್ಟರೆ ನಾವು ಅದನ್ನು ಶುರು ಹಚ್ಚಿಕೊಳ್ಳುತ್ತೇವೆ.”
“ಖಂಡಿತ ತೊಡಗಿಕೊಳ್ಳಿ. ಸಲಕರಣೆಗಳನ್ನೆಲ್ಲ ಜೋಡಿಸಲು ನಿಮಗೆ ಸ್ವಲ್ಪ ವಿಶಾಲ ಸ್ಥಳ ಬೇಕಲ್ಲವೇ?” ಎನ್ನುತ್ತ ಪಕ್ಕದ ವಿಶಾಲ ಕೋಣೆಯನ್ನು ತೋರಿಸಿದರು ದೀಕ್ಷಿತರು.
“ಇದು ಸಾಕು. ಪ್ರಧಾನಮಂತ್ರಿಯವರೊಂದಿಗೆ ಮಾತುಕತೆ ಅತ್ಯಂತ ಗೌಪ್ಯವಾದದ್ದು. ಆದ್ದರಿಂದ ಆಶ್ರಮದಲ್ಲಿ ಬೇರಾರೂ ಇರುವಂತಿಲ್ಲ.”
“ಸರಿ, ವ್ಯವಸ್ಥೆ ಮಾಡೋಣ. ನನ್ನ ಸಹಾಯಕ ಸನಂದನರು ನನ್ನ ಜೊತೆಗಿದ್ದರೆ ನಿಮಗೇನಾದರೂ ತೊಂದರೆÉಯೇನಿದೆಯೇ? ನಿಮಗೆ ಒಪ್ಪಿತವಾಗುವುದಾದರೆ ಅವರು ನನ್ನೊಡನಿರಲಿ.”
“ಆಯಿತು. ಅವರೊಬ್ಬರಿರಲಿ ನಿಮ್ಮ ಜೊತೆ. ಉಳಿದವರೆಲ್ಲ ಕೂಡಲೇ ತೆರಳಿದರೆ ಒಳಿತು.”
“ಅದಕ್ಕೇನು? ಕೂಡಲೇ ವ್ಯವಸ್ಥೆ ಮಾಡೋಣ” ಎನ್ನುತ್ತ ದೀಕ್ಷಿತರು ಸನಂದನರನ್ನು ಕರೆದು – “ಎಲ್ಲ ವಿದ್ಯಾರ್ಥಿಗಳೂ, ಆಚಾರ್ಯರೂ ಕೂಡಲೇ ತೋಟಕ್ಕೆ ಹೋಗಬೇಕು. ಅಡುಗೆಯವರೂ ಹೋಗಲಿ. ಸದ್ಯೊಜಾತರು ಅಲ್ಲಿನ ವ್ಯವಸ್ಥೆ ಗಮನಿಸಲಿ. ಮುಂದಿನ ಸೂಚನೆ ದೊರೆಯುವವರೆಗೂ ಎಲ್ಲರೂ ಅಲ್ಲೇ ಇರಬೇಕು. ಎಲ್ಲರನ್ನೂ ಕಳುಹಿಸಿ ನೀವಿಲ್ಲಿ ಬನ್ನಿ” ಎಂದು ಸೂಚಿಸಿದರು.
ಐದು ನಿಮಿಷಗಳೊಳಗೆ ಆಶ್ರಮದಲ್ಲಿದ್ದವರೆಲ್ಲ ತೋಟದೆಡೆ ಸಾಗಿಯಾಗಿತ್ತು. ಪರಮಶಿವರ ಕಡೆಯವರು ದೂರದಲ್ಲಿ ನಿಲ್ಲಿಸಿದ್ದ ಮೆಟಡೋರ್ನಿಂದ ಇಳಿದು ಆಶ್ರಮ ತಲಪಿ ಹತ್ತು-ಹದಿನೈದು ನಿಮಿಷಗಳಲ್ಲಿ ಚಕಾಚಕ್ ಎಂದು ಎಲ್ಲವನ್ನೂ ಜೋಡಿಸಿದರು. ಸಾಮಾನ್ಯ ವೇಶದಲ್ಲಿದ್ದ ಸುರಕಾ ವಿಭಾಗದವರು ತಮ್ಮ ತಮ್ಮ ಜಾಗ ಗುರುತಿಸಿಕೊಂಡು ಆಶ್ರಮದ ಸುತ್ತೆಲ್ಲ ಅಲ್ಲಲ್ಲಿ ನಿಂತರು.
ಎಲ್ಲ ತಯಾರಿ ಮುಗಿದ ಮೇಲೆ, ಮತ್ತೊಮ್ಮೆ ಎಲ್ಲವನ್ನೂ ಪರಿಶೀಲಿಸಿ ಯಾವುದೇ ಅಡಚಣೆಯಿಲ್ಲವೆಂಬುದನ್ನು ಖಚಿತಪಡಿಸಿಕೊಂಡ ಪರಮಶಿವನ್ ಹೇಳಿದರು – “ನಾವಿನ್ನು ಸಂಭಾಷಣೆಗೆ ಮೊದಲುಗೊಳ್ಳಬಹುದಾಗಿದೆ…”
ದೀಕ್ಷಿತರನ್ನು ಒಂದು ಕುರ್ಚಿಯಲ್ಲಿ ಕುಳ್ಳಿರಿಸಲಾಯಿತು. ಅದರ ಎದುರಿನ ಪರದೆಯಲ್ಲಿ ಪ್ರಧಾನಮಂತ್ರಿ ಕಾರ್ಯಾಲಯದ ದೃಶ್ಯ ತೋರಿ ಬರುತ್ತಿತ್ತು.
ಪ್ರಧಾನಮಂತ್ರಿ ಹಾಗೂ ಅವರ ಸಹಾಯಕರ ಚಿತ್ರ ಅಲ್ಲಿ ಮೂಡಿಬರುತ್ತಿದ್ದಂತೆ ದೀಕ್ಷಿತರು ಮುಗುಳುನಗುತ್ತ ನಮಸ್ಕರಿಸಿದರು. ಪ್ರಧಾನಮಂತ್ರಿಗಳು ನಮಸ್ಕರಿಸುತ್ತ ಮುಗುಳುನಗೆ ಬೀರಿದರು.
ಅವರ ಸಹಾಯಕ ನಮಸ್ಕರಿಸಿ – “ದೀಕ್ಷಿತರೇ, ನಾನು ಪ್ರಧಾನಮಂತ್ರಿಗಳ ವೈಜ್ಞಾನಿಕ ಸಹಾಯಕ ಅಂಕಿತ ಪಟೇಲ್. ವಿಷಯದ ಸ್ಪಷ್ಟತೆಗಾಗಿ ನಾನು ಮೊದಲು ಸ್ವಲ್ಪ ವಿವರಿಸುತ್ತೇನೆ. ನಂತರ ಪ್ರಧಾನಮಂತ್ರಿಗಳು ಮಾತನಾಡುತ್ತಾರೆ…” ಎಂದು ಹೇಳುತ್ತಿದ್ದಂತೆಯೇ ಪ್ರಧಾನಮಂತ್ರಿಗಳು ಹೇಳಿದರು – “ದೀಕ್ಷಿತರೇ, ನಿಮ್ಮ ಸಹಾಯಕ ಸನಂದನರೆಲ್ಲಿ? ಅವರೂ ಆಶ್ರಮದಲ್ಲಿರುತ್ತಾರೆಂದು ಪರಮಶಿವರು ತಿಳಿಸಿದ್ದರು.”
“ಅವರು ಇಲ್ಲೇ ಬಾಗಿಲಿನ ಹೊರಗೆ ಕುಳಿತಿದ್ದಾರೆ” ಎಂದರು ಪರಮಶಿವನ್.
“ಅವರೂ ಕುಳಿತಿರಲಿ ದೀಕ್ಷಿತರ ಪಕ್ಕದಲ್ಲಿ. ಎಲ್ಲ ವಿವರವೂ ಅವರಿಗೂ ತಿಳಿದಿದ್ದರೆ ಒಳಿತು” ಎಂದು ಪ್ರಧಾನಮಂತ್ರಿಗಳು ಸೂಚಿಸುತ್ತಿದ್ದಂತೆ ಪರಮಶಿವರು ದೀಕ್ಷಿತರ ಪಕ್ಕದಲ್ಲಿ ಒಂದು ಕುರ್ಚಿ ಹಾಕಿ ಸನಂದನರಿಗೆ ಕುಳಿತುಕೊಳ್ಳಲು ವ್ಯವಸ್ಥೆ ಮಾಡಿದರು.
ಡಾ. ಅಂಕಿತ ಪಟೇಲ್ ವಿವರಿಸಲುದ್ಯುಕ್ತರಾದರು. ಪರದೆಯಲ್ಲಿ ಅವರ ಚಿತ್ರವೊಂದೇ ತೋರಿಬರುವಂತಾಯ್ತು.
“ಟಂಕಿಸಿದ ಪತ್ರವನ್ನೋ, ಚಿತ್ರ ಅಥವಾ ಹಲವು ಪುಟಗಳಿರುವ ಕಡತಗಳನ್ನೋ ಜಗತ್ತಿನ ಯಾವುದೇ ಮೂಲೆಯಲ್ಲಿರುವ ವ್ಯಕ್ತಿಗೆ ಮಿಂಚಂಚೆಯ ಮೂಲಕ ತಲಪಿಸಬಹುದಾಗಿದೆ ಎಂಬುದು ನಮಗೆಲ್ಲ ತಿಳಿದೇ ಇದೆ. ಮಿಂಚಂಚೆಯ ಮೂಲಕ ಕಳುಹಿಸುವ ಯಾವುದೇ ಕಡತ ಅಥವಾ ಪತ್ರಗಳು ಅಕ್ಷರಗಳಾಗಿಯೆ ಅಥವಾ ಕಡತಗಳಾಗಿಯೆ ಇನ್ನೊಂದು ತುದಿ ತಲಪುವುದಿಲ್ಲ. ಅಕ್ಷರ ಕಡತಗಳು ಸಂಖ್ಯೆಗಳಾಗಿ, ಸಂಖ್ಯೆಗಳು ವಿದ್ಯುತ್ಸಂಜ್ಞೆಗಳಾಗಿ ಬದಲಾಗಿ ವಿದ್ಯುನ್ಮಾನವ್ಯವಸ್ಥೆಯ ಮೂಲಕ ಇನ್ನೊಂದೆಡೆ ಸಾಗುತ್ತವೆ. ಆ ವಿದ್ಯುನ್ಮಾನಸಂಜ್ಞೆಯನ್ನು ಸೂಕ್ತವಾಗಿ ಓದಿದ ಇನ್ನೊಂದು ತುದಿಯಲ್ಲಿರುವ ಸಂಸ್ಕರಣ ಘಟಕ (ಪ್ರೊಸೆಸರ್) ಅದನ್ನು ಮಿಂಚಂಚೆಯ ಸ್ವರೂಪ ನೀಡಿ ಬಳಕೆದಾರರಿಗೆ ಒದಗಿಸುತ್ತದೆ. ಇದೇ ಕ್ರಮದಲ್ಲಿಯೇ ಆಡಿಯೋ, ವೀಡಿಯೋ, ಫೋಟೋ ಮುಂತಾದ ದತ್ತಾಂಶಗಳನ್ನು ರವಾನಿಸಲಾಗುತ್ತದೆ. ಹೀಗೆ ವಿದ್ಯುನ್ಮಾನವ್ಯವಸ್ಥೆಯನ್ನು ಇಲ್ಲಿ ಸಾಗಾಟದ ಸಾಧನವಾಗಿ ಬಳಸಲಾಗುತ್ತದೆ.
ಇದೇ ತತ್ತ್ವವನ್ನೇ ಬಳಸಿ ಭೌತಿಕ ಸ್ವರೂಪ ಹೊಂದಿರುವ ಬಗೆಬಗೆಯ ವಸ್ತುಗಳನ್ನೂ ಸಾಗಿಸಬಹುದೇ ಎಂಬ ಚಿಂತನೆ ಇತ್ತೀಚಿನ ದಿನಗಳಲ್ಲಿ ವಿಜ್ಞಾನಿಗಳ ನಡುವೆ ಹರಿದಾಡುತ್ತಿದೆ. ಯಾವುದೇ ಭೌತಿಕ ಸ್ವರೂಪದ ವಸ್ತುವನ್ನು ಗಣಿತವಿಜ್ಞಾನದ ನೆರವಿನಿಂದ ವಿದ್ಯುನ್ಮಾನವ್ಯವಸ್ಥೆ ಬಳಸಿ ಬೇಕಾದಲ್ಲಿಗೆ ಕಳುಹಿಸಬಹುದೆಂದು ಪ್ರಯೋಗಗಳ ಮೂಲಕ ಕೆಲ ವಿಜ್ಞಾನಿಗಳು ಕಂಡುಕೊಂಡಿದ್ದಾರೆ. ಅದರಲ್ಲಿಯೂ ಒಂದು ಜೀವಿಯನ್ನು ಇನ್ನೊಂದೆಡೆ ಸಾಗಿಸಬಹುದು ಎಂಬುದನ್ನು ವಿಜ್ಞಾನ ಇಂದು ಸಾಧಿಸಿ ತೋರಿಸಿದೆ. ಜೀವಿಯಲ್ಲಿ ವರ್ಣತಂತುಗಳು (ಡಿ.ಎನ್.ಎ.) ವಾಸ್ತವಿಕವಾಗಿ ಗಣಿತಸ್ವರೂಪದಲ್ಲಿಯೇ ಇರುತ್ತವೆ. ವಂಶವಾಹಿಗಳಾದ ಇವು ಕೇವಲ ಸ್ವರೂಪದಲ್ಲಿಯೇ ಇದ್ದು ತಮ್ಮ ಗುಣಲಕ್ಷಣಗಳನ್ನು ಮುಂದಿನ ಸಂತಾನದ ಜೀವಿಗೂ ಕೊಂಡೊಯ್ಯುತ್ತವೆ. ಅನೇಕ ತಲೆಮಾರುಗಳವರೆಗೆ ಜೀವಿಯಿಂದ ಜೀವಿಗೆ ಮಂದುವರಿಯುತ್ತವೆ ಇವು. ಇದನ್ನೇ ಆಧರಿಸಿ ಜೀವಿಗೆ ಡಿಜಿಟಲï ರೂಪ ಕೊಡಲು ಸಾಧ್ಯ ಎಂಬುದನ್ನು ವಿಜ್ಞಾನ ಸಾಧ್ಯವಾಗಿಸಿದೆ. ಭೌತಿಕವಾಗಿರುವ ಜೀವಿಯನ್ನು ಇನ್ನೊಂದೆಡೆ ಸಾಗಿಸಲು ವಿಜ್ಞಾನ ದಾರಿ ಹುಡುಕಿದೆಯಾದರೂ ಅದರಲ್ಲಿ ಜೀವ ತುಂಬಲು ಅದಕ್ಕೆ ಸಾಧ್ಯವಾಗಿಲ್ಲ. ಜೀವವನ್ನು ಒಂದೆಡೆಯಿಂದ ಇನ್ನೊಂದೆಡೆ ಸಾಗಿಸುವ ದಾರಿ ವಿಜ್ಞಾನಕ್ಕೆ ದಕ್ಕಿಲ್ಲ. ಜೀವವನ್ನು ಸಾಗಿಸುವುದು ಸಾಧ್ಯವೇ ಇಲ್ಲ ಎಂದು ಕೆಲವು ವಿಜ್ಞಾನಿಗಳು ಹೇಳುತ್ತಾರೆ. ಪ್ರಯತ್ನಪಟ್ಟರೆ ದಾರಿ ಸಿಗಬಹುದೇನೋ ಎಂಬುದು ಬೇರೆ ಕೆಲ ವಿಜ್ಞಾನಿಗಳ ಅಂಬೋಣ.”
“ಇದನ್ನೆಲ್ಲ ನನ್ನ ಮುಂದೇಕೆ ನೀವು ವಿವರಿಸುತ್ತಿದ್ದೀರಿ ಎಂಬುದು ನನಗೆ ಅರ್ಥವಾಗುತ್ತಿಲ್ಲ. ನಾನಂತೂ ಹೇಳಿಕೇಳಿ ವೇದಪಂಡಿತ, ಶಾಸ್ತ್ರಜ್ಞ. ವಿಜ್ಞಾನದ ಈ ನಡೆಗಳೆಲ್ಲ ನನಗೆ ಅರ್ಥವಾಗುವುದೂ ಇಲ್ಲ. ಅರ್ಥ ಮಾಡಿಕೊಳ್ಳುವಲ್ಲಿ ಆಸಕ್ತಿಯೂ ಇಲ್ಲ.”
“ಇಷ್ಟೆಲ್ಲ ವಿವರಿಸಿದ್ದುದಕ್ಕೆ ಬಲವಾದ ಒಂದು ಕಾರಣವಿದೆ. ಮುಂದಿನ ಹಂತದಲ್ಲಿ ಈ ಕುರಿತಂತೆ ನಿಮ್ಮ ನೆರವು ಬೇಕಾಗಿದೆ.”
“ನನ್ನ ನೆರವು! ಅದೂ ವಿಜ್ಞಾನದ ಕ್ಷೇತ್ರದಲ್ಲಿ! ಇದೇನನ್ನುತ್ತಿದ್ದೀರಿ ನೀವು? ನನಗೂ ವಿಜ್ಞಾನಕ್ಕೂ ಎತ್ತಣೆತ್ತರ ಸಂಬಂಧ? ಮಂತ್ರಕ್ಕೆ ಮಾವಿನಕಾಯಿ ಉದುರುವುದಿಲ್ಲ ಎಂಬ ಗಾದೆಮಾತು ನಿಮಗೆ ತಿಳಿಯದೆ? ಹೋಗಲಿ, ನನ್ನಿಂದ ಎಂತಹ ನೆರವನ್ನು ನೀವು ಬಯಸುತ್ತೀರಿ?”
“ಅದನ್ನು ನಮ್ಮ ಮಾನ್ಯ ಪ್ರಧಾನಮಂತ್ರಿಗಳೇ ವಿವರಿಸುತ್ತಾರೆ” – ಡಾ. ಅಂಕಿತ ಪಟೇಲರು ಅರುಹುತ್ತಿದ್ದಂತೆ ಪರದೆಯ ಮೇಲೆ ಪ್ರಧಾನಮಂತ್ರಿಗಳ ಚಿತ್ರ ಮೂಡಿಬಂತು.
ಮತ್ತೊಮ್ಮೆ ನಮಸ್ಕರಿಸಿ ಪ್ರಧಾನಮಂತ್ರಿಗಳು ಹೇಳಿದರು – “ಜೀವವನ್ನು ಸಾಗಿಸುವ ಕುರಿತು ಅಂಕಿತ ಪಟೇಲರು ಹೇಳಿದರಷ್ಟೇ. ವಿಜ್ಞಾನವು ಈ ವಿಷಯದಲ್ಲಿ ಅಸಹಾಯ. ಮುಂದೆಯೂ ಈ ಕೆಲಸ ವಿಜ್ಞಾನದಿಂದ ಸಾಧ್ಯವಾದೀತೆಂದು ಅನಿಸುವುದಿಲ್ಲ. ಅದಕ್ಕೆ ನಾವು ನಿಮ್ಮನ್ನೇ ಶರಣು ಹೋಗಬೇಕಷ್ಟೆ.”
“ಪ್ರಧಾನಮಂತ್ರಿಗಳೇ! ತಿಳಿದವರಾದ ನೀವೂ ಹೀಗೆ ಹೇಳಬಹುದೆ? ವಿಜ್ಞಾನಕ್ಷೇತ್ರದ ಸಮಸ್ಯೆಗೆ ನಾನೇನು ಪರಿಹಾರ ಹೇಳಬಹುದೆ? ವಿಜ್ಞಾನದ ವರ್ಣಮಾಲೆಯನ್ನೂ ಕಲಿತವನಲ್ಲ ನಾನು…”
“ಸಮಸ್ಯೆಗೆ ಪರಿಹಾರ ಒದಗಿಸಲು ನೀವು ವಿಜ್ಞಾನವನ್ನು ಕಲಿತಿರಬೇಕೆಂಬುದಿಲ್ಲ. ನೀವು ಯೋಗಕ್ಷೇತ್ರದಲ್ಲಿ ನಿಪುಣತೆಯುಳ್ಳವರು. ಕೆಲವು ಸಿದ್ಧಿಗಳನ್ನು ಪಡೆದವರು. ಜೀವ ಸಾಗಿಸುವ ಪ್ರಸ್ತಾಪ ಬಂತಲ್ಲ. ಅದನ್ನು ಸಾಧಿಸಲು ನಿಮ್ಮಂತಹವರೇ ಶಕ್ತರು. ನಮ್ಮಲ್ಲಿ ಪರಕಾಯಪ್ರವೇಶ ವಿದ್ಯೆಯಿದೆಯಲ್ಲವೇ? ಜೀವ ಸಾಗಿಸುವುದು ಎಂದರೆ ಅದೇ ತಾನೇ? ನಮ್ಮಲ್ಲಿ ಇದು ಎಂದಿನಿಂದಲೂ ಇರುವ ವಿದ್ಯೆ. ವಿಜ್ಞಾನಕ್ಕಾದರೋ ಇದು ಎಟುಕದ ಸಂಗತಿ…”
“ಭೌತಿಕವಾದ ಜೀವಿಯ ಸಾಗಣೆ ಎಂದರು ಡಾ. ಅಂಕಿತ. ಅಂದರೆ ವಿಜ್ಞಾನವು ಪ್ರತಿರೂಪದ ಸೃಷ್ಟಿ ಮಾಡುವಲ್ಲಿ ಹಾಗೂ ಸಾಗಿಸುವಲ್ಲಿ ಸಫಲತೆ ಕಂಡಿದೆ ಎಂದAತಾಯಿತು.”
“ಹೌದು. ದೇವರು ಅವತಾರವೆತ್ತಿ ಭೂಲೋಕದಲ್ಲಿ ವಾಸಿಸುವಂತೆಯೇ ಇದೂ. ಅವತಾರದಲ್ಲಿ ಎರಡೂ ಕಡೆ ಜೀವವಿರುತ್ತೆ. ದೇವರ ಅಂಶ ಮಾತ್ರ ಅವತಾರದಲ್ಲಿ ಕಂಡುಬರುತ್ತದೆ. ಪ್ರತಿರೂಪದಲ್ಲಿಯಾದರೋ ಮೂಲದಲ್ಲಿಯಂತೆ ಜೀವ ಕಂಡುಬರುವುದಿಲ್ಲ. ಪಾಶ್ಚಾತ್ಯ ವಿಜ್ಞಾನಿಗಳು ಜೀವವನ್ನು ಸಾಗಿಸುವಲ್ಲಿ ಸಾಕಷ್ಟು ಹೆಣಗಿದರಾದರೂ ಏನೂ ಫಲ ದೊರೆಯಲಿಲ್ಲ. ಈಗ ಒಂದು ಜೀವವನ್ನು ಇನ್ನೊಂದೆಡೆ ಸಾಗಿಸಿ ತೋರಿಸುವ ಮೂಲಕ ಬೇರೆಲ್ಲೂ ಇಲ್ಲದ ಸಾಮರ್ಥ್ಯ ನಮ್ಮಲ್ಲಿದೆ ಎಂಬುದನ್ನು ನಾವು ಸಾದರಪಡಿಸಬೇಕಾಗಿದೆ.”
“ಅದರಿಂದೇನು ಪ್ರಯೋಜನ ಪ್ರಧಾನಮಂತ್ರಿಗಳೇ? ಬೇರೆಡೆ ಇಲ್ಲದ್ದು ನಮ್ಮಲ್ಲಿದೆ ಎಂದು ತೋರಿಸಿಬಿಟ್ಟ ಮಾತ್ರಕ್ಕೆ ಏನು ಹೆಗ್ಗಳಿಕೆ ದೊರೆತಂತಾದೀತು? ಸುಮ್ಮನೆ ಸಿದ್ಧಿಶಕ್ತಿಯ ಅಪವ್ಯಯ! ಸಿದ್ಧಿಯನ್ನು ಎಂದೂ ಪ್ರದರ್ಶನಕ್ಕೆ ಬಳಸಿಕೊಳ್ಳಬಾರದು ಎನ್ನುತ್ತದೆ ನಮ್ಮ ಪರಂಪರೆ. ನೀವು ನನ್ನನ್ನು ಪರಕಾಯ ಪ್ರವೇಶಕ್ಕೆ ತೊಡಗಿಸ ಬಯಸುತ್ತೀರಿ ತಾನೇ? ಪರಂಪರೆಗೆ ವಿರುದ್ಧವಾಗಿ ನಾನು ನಡೆಯಬೇಕೆಂಬುದು ನಿಮ್ಮ ಬಯಕೆಯೇ?”
“ದೀಕ್ಷಿತರೇ, ದಯವಿಟ್ಟು ತಪ್ಪು ತಿಳಿಯಬೇಡಿ. ಪರಂಪರೆಯ ಬಗ್ಗೆ ನನಗೆ ಅಪಾರ ಗೌರವವಿದೆ. ಅದರಲ್ಲಿಯೂ ತಮ್ಮಂತಹ ಮಹಿಮಾನ್ವಿತರನ್ನು ಹೆಚ್ಚುಗಾರಿಕೆ ತೋರಿಸಲು ಬಳಸಿಕೊಳ್ಳಬಾರದು ಎಂಬ ಪರಿಜ್ಞಾನ ನನಗೆ ಇದ್ದೇ ಇದೆ. ಸಾಕಷ್ಟು ಆಲೋಚಿಸಿಯೇ ನಾನು ನಿಮ್ಮ ಸಂಪರ್ಕಕ್ಕೆ ಮನಸ್ಸು ಮಾಡಿದ್ದು. ಈ ಪರಕಾಯಪ್ರವೇಶದ ಹಿನ್ನೆಲೆಯಲ್ಲಿ ರಾಷ್ಟ್ರದ ಹಿತ ಹಾಗೂ ಏಳಿಗೆ ಅಡಗಿದೆ. ರಾಷ್ಟ್ರಹಿತದ ಪ್ರಶ್ನೆ ಬಂದಾಗ ನೀವು ಖಂಡಿತ ಸಹಕಾರ ನೀಡುತ್ತೀರಿ ಎಂಬ ನಂಬಿಕೆಯೂ ನನ್ನಲ್ಲಿ ಬಲವಾಗಿದೆ.”
“ಈ ಪರಕಾಯ ಪ್ರವೇಶದ ವಿಷಯದಲ್ಲಿ ರಾಷ್ಟ್ರಹಿತ ಅಡಗಿದೆ ಎಂದು ನೀವು ಹೇಳಿದಿರಲ್ಲ. ಅದು ನನಗೆ ಸ್ಪಷ್ಟವಾಗಿಲ್ಲ.”
“ಪ್ರತಿರೂಪ ಸೃಷ್ಟಿಯ ಮಾತು ಬಂತಲ್ಲ. ಅದಕ್ಕೆ ಬೇಕಾದ ಪರಿಣತಿ ನಮ್ಮ ದೇಶದಲ್ಲಿ ಈಗ ಸಿದ್ಧಿಸಿಲ್ಲ. ಪ್ರಯತ್ನಪಟ್ಟರೆ ಮುಂದೆಂದಾದರೂ ಅದು ಸಿದ್ಧಿಸಬಹುದೇನೋ, ಆದರೆ ಅದಕ್ಕೆ ತುಂಬ ಕಾಲ ಕಾಯಬೇಕು.”
“ಪರಕಾಯ ಪ್ರವೇಶ ಮಾಡಿದ ಮಾತ್ರಕ್ಕೆ ಪ್ರತಿರೂಪ ಸೃಷ್ಟಿಸುವ ಪರಿಣತಿ ನಮಗೆ ದೊರೆತು ಬಿಡುತ್ತದೆಯೇ? ಪರಕಾಯ ಪ್ರವೇಶವೇ ಬೇರೆ, ಪ್ರತಿರೂಪ ಸೃಷ್ಟಿಯೇ ಬೇರೆಯಲ್ಲವೆ?”
“ಹೌದು. ಒಂದನ್ನು ವಿಜ್ಞಾನ ಸಾಧಿಸಬಹುದಾದರೆ ಇನ್ನೊಂದನ್ನು ಸಾಧಿಸಲು ಸಿದ್ಧಿಮಾರ್ಗದ ಅವಲಂಬನೆ ಬೇಕೇ ಬೇಕು. ಸಿದ್ಧಿಯ ಬಗೆಗಿನ ಪರಿಣತಿ ನಮ್ಮಲ್ಲಿದೆ ಎಂಬುದನ್ನು ತೋರಿಸಬಯಸುತ್ತೇವೆ ನಾವು. ಪ್ರತಿರೂಪದ ನಿರ್ಮಾಣಕ್ಕೆ ಬೇಕಾದ ತಂತ್ರಜ್ಞಾನವನ್ನು ನಮಗೆ ಒದಗಿಸಿದರಷ್ಟೇ ಸಿದ್ಧಿಯ ಮಾರ್ಗ ತೋರಿಸುವುದು ಎಂಬ ನಿಬಂಧನೆ ವಿಧಿಸಲಾಗುತ್ತದೆ. ಇದರಿಂದ ಸ್ವಲ್ಪವೇ ಶ್ರಮದಿಂದ ಪ್ರತಿರೂಪನಿರ್ಮಾಣದ ತಂತ್ರಜ್ಞಾನ ನಮ್ಮ ಕೈ ಸೇರಬಹುದಾಗಿದೆ.”
“ಅವರು ಪ್ರತಿರೂಪ ನಿರ್ಮಿಸುವ ತಂತ್ರಜ್ಞಾನ ನೀಡಬೇಕು, ನಾವು ಸಿದ್ಧಿ ಪಡೆಯುವ ಪರಿಯನ್ನು ಕಲಿಸಿಕೊಡಬೇಕು ಎಂಬುದು ತಾನೇ ನಿಮ್ಮ ಒಡಂಬಡಿಕೆಯ ಅರ್ಥ?”
“ಸುಮಾರಾಗಿ ಹೌದು. ಅದರ ತಂತ್ರಜ್ಞಾನ ವಿಜ್ಞಾನಕ್ಕೆ ಸಂಬಂಧಿಸಿದ್ದು. ಅದಕ್ಕೆ ಬೇಕಾದ ವಿವರಣೆಯನ್ನು ಅವರು ನಮ್ಮ ದೇಶದ ವಿಜ್ಞಾನಿಗಳಿಗೆ ನೀಡಿದರೆ ನಮ್ಮವರು ಅದನ್ನು ಬಳಸಿ, ತಮ್ಮ ಮೇಧಾವಿತನವನ್ನೂ ಉಪಯೋಗಿಸಿ ಪ್ರತಿರೂಪವನ್ನು ತಯಾರಿಸುವಲ್ಲಿ ಶಕ್ತರಾಗಬಹುದು. ಆದರೆ ಸಿದ್ಧಿಯ ಮಾತು ಹಾಗಲ್ಲ ಎಂಬುದು ಅವರಿಗೆ ತಿಳಿದಿಲ್ಲ. ಸಿದ್ಧಿ ಬಳಸುವ ಪ್ರಕ್ರಿಯೆಯನ್ನು ನೋಡಿದರೆ ಸಿದ್ಧಿ ದೊರೆತಂತೆ ಎಂದು ಅವರು ಅಂದುಕೊಂಡಿದ್ದಾರೆ. ಅದರಿಂದ ಸಿದ್ಧಿಯನ್ನು ಬಳಸುವ ಪರಿಯನ್ನು ಅವರು ನೋಡಬಹುದಷ್ಟೇ. ಚಿತ್ರೀಕರಣ ಕೂಡ ಮಾಡಬಹುದು. ಮಾಡಿಕೊಳ್ಳಲಿ ಬಿಡಿ. ನೀವು ಧ್ಯಾನ ಸ್ಥಿತಿಯಲ್ಲಿ ಕುಳಿತಿರುವುದನ್ನು ಅವರು ಚಿತ್ರೀಕರಿಸಿಕೊಂಡಾರು. ಧ್ಯಾನಸ್ಥಿತಿಯಲ್ಲಿ ಏಕಾಗ್ರತೆಯ ಮಟ್ಟಕ್ಕೇರಿ ಆಧ್ಯಾತ್ಮಿಕತೆಯ ಹಂತದಲ್ಲಿ ಮುಂದುವರಿದು ಸಿದ್ಧಿಯನ್ನು ಕಂಡುಕೊಂಡು ಬಳಸುವುದೆಲ್ಲ ಹೊರಗಿನಿಂದ ಕಾಣಲಾಗದು. ನಮ್ಮ ಒಳಗೆ ನಡೆಯುವ ಪ್ರಕ್ರಿಯೆಯನ್ನು ಹೇಗೆ ಅವರು ಅರ್ಥೈಸಿಕೊಂಡಾರು? ಸಿದ್ಧಿಯನ್ನು ಪಡೆಯಬೇಕಾದರೆ ಪ್ರಾಪಂಚಿಕತೆಯಿಂದ ವಿಮುಖತೆ ಪಡೆದು ತಪಸ್ಸು ಮಾಡಬೇಕಾಗುತ್ತದೆ. ಸಿದ್ಧಿಯನ್ನು ಬಳಸಬೇಕಾದರಂತೂ ಆಧ್ಯಾತ್ಮಿಕ ಯೋಗ್ಯತೆಯನ್ನು ಉಳಿಸಿಕೊಳ್ಳಬೇಕಾಗುತ್ತದೆ. ಕೋಟಿಗೊಬ್ಬರೋ, ಹತ್ತು ಕೋಟಿಗೊಬ್ಬರೋ ಇಂತಹ ಯೋಗ್ಯತೆಯುಳ್ಳವರು ದೊರೆತಾರು. ಇದೆಲ್ಲದರ ಹಿನ್ನೆಲೆಯನ್ನೇನೂ ಅರಿಯದ ಆ ವಿಜ್ಞಾನಿಗಳು ನೋಡುವುದರಿಂದ ಅಥವಾ ವಿವರಣೆಯನ್ನು ಅರಿಯುವುದರಿಂದ ಎಲ್ಲವೂ ಸಿದ್ಧಿಸಿಬಿಡುತ್ತದೆ ಎಂಬ ಭ್ರಮೆಯಲ್ಲಿದ್ದಾರೆ. ಅವರು ಏನಾದರೂ ಅಂದುಕೊಂಡಿರಲಿ. ನಮ್ಮ ಒಡಂಬಡಿಕೆಯಲ್ಲಿ ಎರಡೂ ಕಡೆಯವರೂ ಪ್ರಕ್ರಿಯೆಯನ್ನು ತೋರಿಸಬೇಕು ಎಂಬ ನಿಬಂಧನೆಯಿರುತ್ತದೆ. ಪ್ರಯೋಜನ ಪಡೆಯುವುದು ಅವರವರಿಗೆ ಬಿಟ್ಟದ್ದು.”
“ಒಡಂಬಡಿಕೆ ಮಾಡಿಕೊಂಡು ಪ್ರತಿರೂಪವನ್ನು ತಯಾರಿಸುವ ತಂತ್ರಜ್ಞಾನವನ್ನು ಪಡೆದ ಮಾತ್ರಕ್ಕೆ ಏನನ್ನು ಸಾಧಿಸಿದಂತಾದೀತು? ಇದರಿಂದ ದೇಶಹಿತ ಸಿದ್ಧಿಸುತ್ತದೆಯೆನ್ನುತ್ತೀರಾ?”
“ದೇಶಹಿತಕ್ಕೆ ಒದಗಿ ಬರದ ಯಾವುದೇ ನಿರ್ಣಯವನ್ನೂ ನಾನು ಕೈಗೆತ್ತಿಕೊಳ್ಳುವುದಿಲ್ಲವೆಂಬುದನ್ನು ನೀವು ಗಮನಿಸಿಯೇ ಇರಬಹುದು. ಕೆಲವು ನಿರ್ಣಯಗಳ ಫಲ ಕೂಡಲೇ ದೊರೆತೀತು. ಮತ್ತೆ ಕೆಲವುಗಳದ್ದು ತಡವಾಗಿ. ಇನ್ನೊಂದೆಂದರೆ ಯಾವುದೇ ಹೊಸ ಸಂಶೋಧನೆಯ ಫಲ ಕೂಡಲೇ ದೊರೆಯುವುದಿಲ್ಲ. ಆ ಹೊಸ ಸಂಶೋಧನೆಯನ್ನು ಆಧರಿಸಿ ವಿಜ್ಞಾನಿಗಳು ಜನೋಪಕಾರಿಯಾದ ತಂತ್ರಗಳನ್ನು ಅಭಿವೃದ್ಧಿಪಡಿಸುತ್ತಾರೆ. ಅದೇ ಫಲ ನೀಡುವುದು. ಹೊಸ ಸಂಶೋಧನೆಯಷ್ಟೇ ಎಂದಿಗೂ ಫಲ ನೀಡದು. ವಿದ್ಯುಚ್ಛಕ್ತಿಯನ್ನೂ ಒಳಗೊಂಡAತೆ ಉಪಗ್ರಹಗಳ ಉಡಾವಣೆಯವರೆಗಿನ ಎಲ್ಲ ಸಂಶೋಧನೆಗಳೂ ಇದೇ ಮಾದರಿಯವು. ಅವುಗಳಿಂದಾಗಿ ಇಂದು ಸಾಮಾನ್ಯರ ಜನಜೀವನದಲ್ಲೂ ಸಾಕಷ್ಟು ಅನುಕೂಲತೆಗಳು ಒದಗಿಬಂದಿವೆ ಎಂಬುದನ್ನು ನಾವು ಖಂಡಿತ ಅರಿತುಕೊಳ್ಳಬಲ್ಲೆವು. ಪ್ರತಿರೂಪದ ಸಂಶೋಧನೆಯೂ ಇದೇ ತರಹದ್ದು. ಇದನ್ನಾಧರಿಸಿ ಎಂತೆಂತಹ ಅಭಿವೃದ್ಧಿಗಳಾದಾವೋ ಎಂಬುದನ್ನು ನಾವಿಂದು ಊಹಿಸಲಾರೆವು. ವಿಜ್ಞಾನಿಗಳು ತಮ್ಮ ಪ್ರತಿಭೆಯನ್ನು ಪಣಕ್ಕಿಟ್ಟ್ಟು ಇದನ್ನು ಸಾಧಿಸುತ್ತಾರೆ. ಅದರಲ್ಲೂ ನಮ್ಮ ಭಾರತೀಯ ವಿಜ್ಞಾನಿಗಳಂತೂ ಜನಹಿತವನ್ನೇ ಮುಖ್ಯವಾಗಿ ಮನಸ್ಸಿನಲ್ಲಿರಿಸಿ ಅಭಿವೃದ್ಧಿ ಸಾಧಿಸುತ್ತಾರೆ. ಇದು ಸ್ಪರ್ಧಾಯುಗ. ಒಂದು ದೇಶ ಹತ್ತು ಹೆಜ್ಜೆ ಇರಿಸುವಷ್ಟರಲ್ಲಿ ನಾವೂ ಹತ್ತು ಹೆಜ್ಜೆ ಇರಿಸುವಂತಾಗಬೇಕು. ಬೇರೆಯವರು ನೂರು ಹೆಜ್ಜೆ ಮುಂದಿದ್ದರೂ, ನಾವು ಒಂದೆರಡು ಹೆಜ್ಜೆ ಇಡುವಲ್ಲಿಯೂ ತಡಕಾಡುತ್ತಿರುತ್ತೇವಾದರೆ ನಮ್ಮ ಪ್ರಗತಿ ಕುಂಠಿತವಾಗುತ್ತದೆAದೇ ಲೆಕ್ಕ. ಆದ್ದರಿಂದಲೇ ನಾನೆನ್ನುವುದು – ವಿದೇಶದವರು ಪ್ರತಿರೂಪ ನಿರ್ಮಿಸುವ ಕ್ಷೇತ್ರದಲ್ಲಿ ಸಿದ್ಧಿ ಪಡೆದಿದ್ದಾರೆಂದರೆ ನಾವೂ ಕೂಡಲೇ ಆ ತಂತ್ರಜ್ಞಾನವನ್ನು ಪಡೆದುಕೊಳ್ಳಬೇಕು. ಅದನ್ನು ಬಳಸಿ ಹೊಸ ಸಂಶೋಧನೆಗಳು ಬೇರೆಡೆ ನಡೆಯುವ ವೇಳೆಯಲ್ಲೇ ನಮ್ಮಲ್ಲೂ ಸಂಶೋಧನೆ ನಡೆಯುವಂತಾಗÀಬೇಕು. ನಾವು ಯಾವುದೇ ಕ್ಷೇತ್ರದಲ್ಲಿ ಹಿಂದಿರಬಾರದು ಎಂಬುದು ನನ್ನ ಹೆಬ್ಬಯಕೆ.”
“ಸರಿ, ನಿಮ್ಮ ದೂರದೃಷ್ಟಿ ನನಗಿಲ್ಲದಿರಬಹುದು, ಆದರೆ ನಿಮ್ಮ ನಡೆಗಳ ಬಗ್ಗೆ ನನಗೆ ಅಪಾರ ಗೌರವವಿದೆ. ನೀವು ಎಂದೂ ತಪ್ಪು ಹೆಜ್ಜೆ ಇಡುವವರಲ್ಲವೆಂಬ ನಂಬಿಕೆ ನನಗೆ ಬಲವಾಗಿದೆ. ಆದ್ದರಿಂದ ನಿಮ್ಮ ಪ್ರಸ್ತಾಪವನ್ನು ನಾನು ಖಂಡಿತ ಒಪ್ಪುತ್ತೇನೆ. ನೀವು ಹೇಳಿರುವುದನ್ನು ಕಣ್ಣುಮುಚ್ಚಿ ಪಾಲಿಸುತ್ತೇನೆ.”
“ನನ್ನಲ್ಲಿ ಇಷ್ಟೆಲ್ಲ ನಂಬಿಕೆಯಿಟ್ಟಿರುವುದಕ್ಕೆ ನಾನು ಧನ್ಯ. ನಿಮ್ಮ ನಂಬಿಕೆಯನ್ನು ಉಳಿಸಿಕೊಳ್ಳಲು ಶಕ್ತಿಮೀರಿ ಪ್ರಯತ್ನಿಸುತ್ತೇನೆ. ನಾನು ಸಂಕಲ್ಪಿಸಿದ ಈ ಕೆಲಸದಲ್ಲಿ ರಿಸ್ಕ್ ಸ್ವಲ್ಪ ಹೆಚ್ಚಾಗಿಯೇ ಇದೆ. ಇಂತಹವುಗಳ ವಿಷಯದಲ್ಲಿ ಧೈರ್ಯದಿಂದ ಮುನ್ನುಗ್ಗಿದರಷ್ಟೇ ಎಣೆಯಿಲ್ಲದ ಪ್ರಯೋಜನ ದೊರೆತೀತು. ಹೆದರಿಕೊಂಡು ಇದ್ದಲ್ಲಿಯೇ ಇದ್ದರೆ ಪ್ರಗತಿ ಸಿದ್ಧಿಸದು. ನಾವೆಲ್ಲ ಸೇರಿ ದೇಶವನ್ನು ವೇಗವಾಗಿ ಮುನ್ನಡೆಸೋಣ. ನಿಮ್ಮಂತಹವರು ಜೊತೆಗಿರುವುದು ನನಗಂತೂ ಹೆಮ್ಮೆಯ ವಿಷಯ.”
“ನಮ್ಮದೇನು ಬಿಡಿ, ನೀವು ಹೇಳಿದಂತೆ ಮಾಡುವವರು ನಾವು. ಅದಿರಲಿ, ಪರಕಾಯ ಪ್ರವೇಶದ ಬಗ್ಗೆ ನನ್ನನ್ನೇ ಸಂಪರ್ಕಿಸಿದ ಹಿನ್ನೆಲೆಯೇನು? ನನ್ನ ಬಗ್ಗೆ ವಿವರ ನಿಮಗೆ ಹೇಗೆ ದೊರೆಯಿತು?”
“ದೀಕ್ಷಿತರೇ, ಹೂವೊಂದು ಅರಳಿದರೆ ದುಂಬಿಗಳಿಗೆ ಸುದ್ದಿ ತಿಳಿಯದೆ? ದೂರ ದೂರದಿಂದ ಮಕರಂದವನ್ನು ಅರಸಿ ಬರುತ್ತವೆ ಅವು. ನನ್ನ ದೇಶದಲ್ಲಿ ರತ್ನಗಳು ಎಲ್ಲೆಲ್ಲಿ ಅಡಗಿವೆ ಎಂಬುದನ್ನು ನಾನು ಸದಾ ಗಮನಿಸುತ್ತಿರುತ್ತೇನೆ. ಎಲೆಮರೆಯ ಕಾಯಿಗಳನ್ನು ಗುರುತಿಸುವುದಕ್ಕಾಗಿಯೇ ಒಂದು ಕಾರ್ಯಪಡೆ ಕಟ್ಟುವ ಕೆಲಸ ಸದಾ ಜಾರಿಯಲ್ಲಿರುತ್ತದೆ. ಆದ್ದರಿಂದಲೇ ಎಲ್ಲೆಡೆಯಿಂದಲೂ ನನಗೆ ಮಾಹಿತಿ ದೊರೆಯುತ್ತಲೇ ಇರುತ್ತದೆ.”
“ಸರಿ, ನಾನೇನು ಮಾಡಬೇಕೆಂದು ಸ್ಪಷ್ಟವಾಗಿ ತಿಳಿಸಿದರೆ ಅದಕ್ಕೆ ತಕ್ಕಂತೆ ಪ್ರಯತ್ನಕ್ಕೆ ತೊಡಗಿಯೇನು.”
“ಅದನ್ನು ನಮ್ಮ ಡಾ. ಅಂಕಿತರೋ, ಪರಮಶಿವರೋ ನಿಮ್ಮ ಗಮನಕ್ಕೆ ತರುತ್ತಾರೆ. ನೀವು ಒಪ್ಪಿಕೊಂಡ ಹಿನ್ನೆಲೆಯಲ್ಲಿ ಸಂಬಂಧಪಟ್ಟವರೊಂದಿಗೆ ಒಡಂಬಡಿಕೆ ತಯಾರಿಸುವ ನಿಟ್ಟಿನಲ್ಲಿ ನಾವು ಕೂಡಲೇ ಮುಂದುವರಿಯುತ್ತೇವೆ. ಅದಕ್ಕೊಂದು ರೂಪ ಸಿಗುತ್ತಿದ್ದಂತೆ ನಿಮಗೆ ಮಾಹಿತಿ ನೀಡುತ್ತೇವೆ. ಈ ಕೆಲಸಕ್ಕಾಗಿ ನೀವು ದೆಹಲಿಗೆ ಬರಬೇಕಾಗುತ್ತೆ.”
“ಯಾಕೆ, ನಾನಿದ್ದಲ್ಲಿಯೇ ಇದನ್ನು ಮಾಡಿದರಾಗದೇ?”
“ಹಿಂದೆಯೇ ತಿಳಿಸಿದಂತೆ ನಿಮ್ಮ ಎಲ್ಲ ನಡೆಯನ್ನೂ ಚಿತ್ರೀಕರಿಸಲಾಗುತ್ತದೆ. ವಿದೇಶದವರೂ ಅಲ್ಲಿ ಉಪಸ್ಥಿತರಿರುತ್ತಾರೆ. ಇದಕ್ಕೆಲ್ಲ ಬೇಕಾದ ವ್ಯವಸ್ಥೆಯನ್ನು ಚಿಕ್ಕ ಊರಿನಲ್ಲಿ ನೇರ್ಪಡಿಸುವುದು ಕಷ್ಟದ ಕೆಲಸ. ಸುರಕ್ಷೆಯ ಸಂಗತಿಯೂ ಇಲ್ಲಿ ಅಡಕವಾಗಿದೆ. ಅದನ್ನೆಲ್ಲ ನೀವಿದ್ದಲ್ಲಿ ಒದಗಿಸಲಾಗದು. ನೀವು ದೆಹಲಿಗೆ ಬನ್ನಿ. ನಿಮ್ಮ ಆಶ್ರಮದಲ್ಲಿ ಎಂತಹ ಅನುಕೂಲ ವಾತಾವರಣವಿದ್ದೀತೋ ಅದನ್ನೆಲ್ಲ ದೆಹಲಿಯಲ್ಲಿ ಒದಗುವಂತೆ ವ್ಯವಸ್ಥೆ ಮಾಡುವುದು ನನ್ನ ಜವಾಬ್ದಾರಿ. ಸಹಕಾರಿಗಳೂ ನಿಮ್ಮ ಜೊತೆಗೇ ಬರಲಿ. ವ್ಯವಸ್ಥೆಯ ಬಗ್ಗೆ ನೀವು ಇನಿತೂ ಚಿಂತೆ ಮಾಡಬೇಕಾದುದಿಲ್ಲ.”
“ಸರಿ, ಸ್ವಲ್ಪ ಮುಂಚಿತವಾಗಿ ತಿಳಿಸಿ. ನೀವು ತಿಳಿಸಿದ ದಿನ ಖಂಡಿತ ಬರುತ್ತೇನೆ. ನೀವು ಹೇಳಿದ್ದನ್ನು ಸಾಧಿಸಲು ಶಕ್ತಿ ಮೀರಿ ಪ್ರಯತ್ನಿಸುತ್ತೇನೆ. ಪ್ರಯತ್ನಕ್ಕೆ ತಕ್ಕ ಫಲವನ್ನು ದೇವರು ನೀಡಿಯೇ ನೀಡುತ್ತಾನಾದ್ದರಿಂದ ಕೈಗೊಂಡ ಕಾರ್ಯ ಯಶಸ್ವಿಯಾಗುವುದರಲ್ಲಿ ಸಂದೇಹವೇ ಇಲ್ಲ.”
ಮುಖತಃ ಭೇಟಿಯಾಗುವ ಸದಾಶಯದೊಂದಿಗೆ ಅಂದಿನ ಸಮಾಲೋಚನೆ ಮುಕ್ತಾಯಗೊಂಡಿತು.
* * *
ಪ್ರಧಾನಮಂತ್ರಿಗಳು ಸೂಚಿಸಿದ ದಿನದಂದು ದೀಕ್ಷಿತರು ದೆಹಲಿಗೆ ತೆರಳಿದರು. ಸನಂದನಾಚಾರ್ಯರೂ, ಸದ್ಯೋಜಾತಾಚಾರ್ಯರೂ, ಅಡಿಗೆಯವರೂ ಅವರ ಜೊತೆಗಿದ್ದರು. ವಿಮಾನದಿಂದ ಇಳಿದ ಕೂಡಲೇ ಅವರನ್ನು ಕರೆದೊಯ್ಯಲು ಪ್ರಧಾನಮಂತ್ರಿಗಳ ಕಾರ್ಯಾಲಯದಿಂದ ವಾಹನವ್ಯವಸ್ಥೆ ಮಾಡಲಾಗಿತ್ತು. ಪ್ರಧಾನಮಂತ್ರಿಗಳ ನಿವಾಸದಲ್ಲಿಯೇ ಇವರಿಗೂ ವ್ಯವಸ್ಥೆ ಮಾಡಲಾಗಿತ್ತು.
ಪ್ರಧಾನಮಂತ್ರಿಗಳ ನಿವಾಸ ಸುಮಾರು ೪-೫ ಹೆಕ್ಟೇರ್ ವಿಸ್ತೃತವಾಗಿದೆ. ಅದರ ಒಂದು ಭಾಗದಲ್ಲಿ ಹೆಚ್ಚು ಮರಗಳಿರುವೆಡೆ ದೀಕ್ಷಿತರ ಆಶ್ರಮವನ್ನೇ ಹೋಲುವ ಆಶ್ರಮವೊಂದನ್ನು ಸಿದ್ಧಪಡಿಸಲಾಗಿತ್ತು. ದೀಕ್ಷಿತರ ಆಶ್ರಮದ ಪಡಿಯಚ್ಚಿನಂತಿತ್ತು ಅದು. ಒಮ್ಮೆ ಎಲ್ಲೆಡೆ ಸುತ್ತಾಡಿ ಪರಿಶೀಲಿಸಿದ ದೀಕ್ಷಿತರು ತೃಪ್ತಿ ವ್ಯಕ್ತಪಡಿಸಿದರು. ಧ್ಯಾನಾದಿಗಳಿಗೆ ಅನುಕೂಲವಾದ ವಾತಾವರಣವಿದ್ದುದರಿಂದ ಅವರಿಗೆ ಹೆಚ್ಚಿನ ಸಂತೋಷವಾಗಿತ್ತು. ಆಶ್ರಮದಲ್ಲಿರುವಂತೆಯೇ ಇತ್ತು ಎಲ್ಲ ವ್ಯವಸ್ಥೆ.
ಅದೇ ದಿನ ಮಧ್ಯಾಹ್ನ ಪ್ರಧಾನಮಂತ್ರಿಗಳು ಪೂರ್ವಸೂಚನೆಯನ್ನೇನೂ ನೀಡದೇ ಬಂದು ದೀಕ್ಷಿತರಿಗೆ ನಮಿಸಿ ಕುಶಲ ಪ್ರಶ್ನೆಯ ನಂತರ – “ತಾವು ಬಂದುದು ನಮಗೆ ಆನೆಯ ಬಲ ಬಂದಂತಾಗಿದೆ. ಆಚೆ ನಾಡಿದ್ದು ಪರಕಾಯ ಪ್ರವೇಶ ಪ್ರಕ್ರಿಯೆ ಜರುಗಲಿದೆ. ಅಂದು ನಮ್ಮ ದೇಶದವರೊಬ್ಬರ ಜೀವವನ್ನು ಪ್ರತಿರೂಪಕ್ಕೆ ವರ್ಗಾಯಿಸಬೇಕು. ಅವರ ಪ್ರತಿರೂಪ ಅಮೆರಿಕೆಯಲ್ಲಿರುತ್ತದೆ. ಅದೇರೀತಿ ಅಮೆರಿಕೆಯಲ್ಲಿರುವವರೊಬ್ಬರ ಪ್ರತಿರೂಪ ನಮ್ಮ ಬಳಿ ಇರುತ್ತದೆ. ಎರಡೂ ಪ್ರತಿರೂಪಗಳಲ್ಲಿ ಜೀವವರ್ಗಾವಣೆ ಆಗಬೇಕು. ಸುಮಾರು ಒಂದು ತಾಸಿನ ನಂತರ ಪ್ರತಿರೂಪದಿಂದ ಜೀವವನ್ನು ಮೂಲ ಶರೀರಕ್ಕೆ ಹಿಂದಿರುಗಿಸಬೇಕು. ಎರಡೂ ಕಡೆ ಜರುಗುವ ಎಲ್ಲ ಪ್ರಕ್ರಿಯೆಯ ಚಿತ್ರಮುದ್ರಣ ಮಾಡಲಾಗುತ್ತ್ತದೆ. ನಮ್ಮಲ್ಲಿ ನಡೆಯುವುದೆಲ್ಲವನ್ನೂ ಅಮೆರಿಕೆಯ ತಂಡದವರು ನೋಡಬಹುದಾಗಿದೆ. ನಮ್ಮಲ್ಲಿ ಪ್ರಕ್ರಿಯೆ ನಡೆಯುವ ಸ್ಥಳದಲ್ಲಿ ಅಮೆರಿಕೆಯ ಕೆಲ ಸದಸ್ಯರೂ ಇರುತ್ತಾರೆ. ಹಾಗೆಯೇ ಅಮೆರಿಕೆಯಲ್ಲಿ ನಡೆಯುವ ಸ್ಥಳದಲ್ಲಿ ನಮ್ಮವರಿರುತ್ತಾರೆ. ಒಡಂಬಡಿಕೆಯಲ್ಲಿ ಉಲ್ಲೇಖಿಸಿದಂತೆಯೆ ಎರಡೂ ಕಡೆ ಪ್ರಕ್ರಿಯೆಗಳು ಜರುಗುತ್ತವೆ. ಪ್ರಕ್ರಿಯೆ ಮುಗಿಯುವವರೆಗೂ ನಾನೂ ಉಪಸ್ಥಿತನಿರುತ್ತೇನೆ.”
“ಎಲ್ಲವೂ ಧ್ಯಾನಸ್ಥಿತಿಯಲ್ಲಿ ನಡೆಯುತ್ತದಾದ್ದರಿಂದ ಮಧ್ಯೆ ಅಡೆತಡೆಯೇನೂ ಆಗಬಾರದು, ಅಂದರೆ ಯಾರೂ ಏನೂ ಕೇಳುವಂತಿಲ್ಲ”
“ಅದನ್ನು ಸ್ಪಷ್ಟಪಡಿಸಲಾಗಿದೆ. ಪ್ರಕ್ರಿಯೆ ಪೂರ್ಣಗೊಂಡ ಮೇಲೆ ನೀವು ಚೇತರಿಸಿಕೊಂಡ ನಂತರವಷ್ಟೇ ನಿಮ್ಮೊಡನೆ ಸಮಾಲೋಚನೆ ಸಾಧ್ಯವಾಗಬಹುದಾಗಿದೆ ಎಂಬುದನ್ನು ಒಡಂಬಡಿಕೆಯಲ್ಲೇ ಉಲ್ಲೇಖಿಸಲಾಗಿದೆ.”
“ಎಲ್ಲವನ್ನೂ ನೀವು ಆಲೋಚಿಸಿಯೇ ಇರುತ್ತೀರಿ. ಆದರೂ ನನ್ನ ಸಮಾಧಾನಕ್ಕಾಗಿ ಹೇಳಿದೆ ಅಷ್ಟೇ.”
“ಇಲ್ಲಿ ಎಲ್ಲ ವ್ಯವಸ್ಥೆಯೂ ಸರಿಯಾಗಿದೆಯೆಂದು ಕೊಂಡಿದ್ದೇನೆ. ಏನೇ ಬೇಕಾದರೂ ಇಲ್ಲಿಯ ಅಧಿಕಾರಿಗಳಿಗೆ ತಿಳಿಸಿ. ಕೂಡಲೇ ಹೊಂದಿಸಿ ಕೊಡಲಾಗುತ್ತದೆ. ಯಾವುದಕ್ಕೂ ನೀವು ಸಂಕೋಚ ಪಟ್ಟುಕೊಳ್ಳಬೇಡಿ. ಈಗ ನಾನು ಒಂದು ಮೀಟಿಂಗಿಗೆ ತೆರಳಬೇಕಾಗಿದೆ. ಬಿಡುವಾದಾಗ ಮತ್ತೆ ಯಾವಾಗಲಾದರೂ ಭೇಟಿಯಾದೇನು” ಎಂದು ಹೇಳಿ ಪ್ರಧಾನಮಂತ್ರಿಗಳು ಅಲ್ಲಿಂದ ತೆರಳಿದರು.
* * *
ಪರಕಾಯಪ್ರವೇಶ ಬೆಳಗ್ಗೆ ಹತ್ತು ಗಂಟೆಗೆ ನಡೆಯುವುದೆಂದು ನಿಶ್ಚಯವಾಗಿತ್ತು. ದೀಕ್ಷಿತರು ಹಿಂದಿನ ದಿನ ರಾತ್ರಿಯೇ ಕೆಲ ವಿಧಿಗಳನ್ನು ನೇರವೇರಿಸಿದ್ದರು. ಹಿಂದಿನ ರಾತ್ರಿಯೇ ಅಮೆರಿಕೆಯ ಡಾ. ರಿಚರ್ಡ್ ಜೇಫರಸನ್ರ ಪ್ರತಿರೂಪ ಅಲ್ಲಿಗೆ ತಲಪಿತ್ತು. ಜೇಫರ್ಸನ್ ಅವರೇ ವಿದ್ಯುನ್ಮಾನಸಾಗಣೆಯ (ಟೆಲಿಪೋರ್ಟೇಶನ್) ನೇತಾರರು. ಡಾ. ಅಂಕಿತಪಟೇಲರ ಪ್ರತಿರೂಪವನ್ನು ಅಮೆರಿಕೆಯವರು ತಮ್ಮ ಪ್ರಯೋಗಸ್ಥಳದಲ್ಲಿ ರವಾನೆ ಮಾಡಿಕೊಂಡಿದ್ದರು. ಡಾ. ಅಂಕಿತರನ್ನು ದೀಕ್ಷಿತರ ಎದುರು ಮಲಗಿಸಲಾಗಿತ್ತು. ಡಾ. ಜೇಫರ್ಸನ್ರ ಪ್ರತಿರೂಪವನ್ನು ಹಿಮಪೆಟ್ಟಿಗೆಯಲ್ಲಿ ಕೆಡದಂತೆ ಇಡಲಾಗಿತ್ತು.
ಅಮೆರಿಕೆಯ ದೂತಾವಾಸದ ಇಬ್ಬರು ಉನ್ನತಾಧಿಕಾರಿಗಳು ಅಲ್ಲಿ ಉಪಸ್ಥಿತರಿದ್ದರು. ಭಾರತೀಯ ವೈದ್ಯರ ತಂಡವೂ ಅಲ್ಲಿತ್ತು. ಪ್ರಧಾನಿಗಳು, ವಿದೇಶಾಂಗ ಸಚಿವರು, ಒಂದಿಬ್ಬರು ಅಧಿಕಾರಿಗಳೂ ಅಲ್ಲಿದ್ದರು. ಅಮೆರಿಕೆಯಲ್ಲಿ ನಡೆಯುವುದನ್ನೆಲ್ಲ ಪರದೆಯ ಮೇಲೆ ಕಾಣುವಂತೆ ವ್ಯವಸ್ಥೆಯಾಗಿತ್ತು. ಇಲ್ಲಿ ನಡೆಯುವುದನ್ನೂ ಅಮೆರಿಕೆಯವರು ನೋಡಬಹುದಾಗಿತ್ತು.
ದೀಕ್ಷಿತರು ಸಮಾಧಿಸ್ಥಿತಿ ತಲಪಿ ಆಜ್ಞಾಚಕ್ರ ಹಾಗೂ ಸಹಸ್ರಾರ ಚಕ್ರವನ್ನು ಜಾಗೃತಗೊಳಿಸಿ ಅವುಗಳ ಮೇಲೆ ನಿಯಂತ್ರಣ ಸಾಧಿಸಿದರು. ನಂತರ ಸಿದ್ಧಿಯನ್ನು ಎಚ್ಚರಗೊಳಿಸಿದ್ದಾಯಿತು. ಮೆಲ್ಲಮೆಲ್ಲಗೆ ಡಾ. ಅಂಕಿತರ ಶರೀರ ಜೀವರಹಿತವಾಯಿತು. ಶರೀರವನ್ನು ಪರೀಕ್ಷಿಸಿದ ವೈದ್ಯರ ತಂಡ ಕೂಡಲೇ ಆ ಶರೀರವನ್ನು ಸಂರಕ್ಷಣೆಗಾಗಿ ಹಿಮಪೆಟ್ಟಿಗೆಯಲ್ಲಿರಿಸಿತು. ಮತ್ತೆ ಕೆಲವೇ ಕ್ಷಣಗಳಲ್ಲಿ ಜೇಫರ್ಸನ್ರ ಶರೀರದಲ್ಲಿ ಚೈತನ್ಯ ಕಂಡುಬAತು. ಪೂರ್ತಿ ಚೈತನ್ಯ ಬರುತ್ತಲೇ ಅವರ ಶರೀರವನ್ನು ಹಿಮಪೆಟ್ಟಿಗೆಯಿಂದ ಹೊರಗೆ ತೆಗೆದು ಹಾಸಿಗೆಯಲ್ಲಿ ಮಲಗಿಸಲಾಯಿತು.
ಕೆಲ ಕ್ಷಣಗಳ ನಂತರ ಅವರು ಎದ್ದು ಕುಳಿತುಕೊಂಡು ಸುತ್ತೆಲ್ಲ ಕಣ್ಣಾಡಿಸಿದರು. ಸುತ್ತ ನೆರೆದಿದ್ದವರೆಲ್ಲ ಚಪ್ಪಾಳೆ ತಟ್ಟಿ ಅವರನ್ನು ಸ್ವಾಗತಿಸಿದರು. ಅಮೆರಿಕೆಯಲ್ಲಿಯೂ ಡಾ. ಅಂಕಿತರ ಪ್ರತಿರೂಪ ಚೈತನ್ಯ ಪಡೆದಾಗಿತ್ತು. ಸ್ವಲ್ಪೇ ಹೊತ್ತಿನಲ್ಲಿ ಡಾ. ಅಂಕಿತರ ಪ್ರತಿರೂಪ ಎದ್ದು ಸಂಚರಿಸುತ್ತ ವಿಜ್ಞಾನಿಗಳೊಂದಿಗೆ ಸಮಾಲೋಚನೆಯಲ್ಲೂ ತೊಡಗಿಕೊಂಡಾಗಿತ್ತು.
ಡಾ. ಜೇಫರ್ಸನ್ ಅವರು ಎದ್ದು ಪ್ರಧಾನಮಂತ್ರಿಗಳ, ವಿಜ್ಞಾನಿಗಳ ಹಾಗೂ ಅಮೆರಿಕೆಯ ದೂತಾವಾಸದ ಅಧಿಕಾರಿಗಳ ಪರಿಚಯದ ನಂತರ ದೀಕ್ಷಿತರಿಗೆ ದೂರದಿಂದಲೇ ನಮಸ್ಕರಿಸಿದರು. ಡಾ. ಜೇಫರ್ಸನ್ರವರು ಅಲ್ಲಿನ ವ್ಯವಸ್ಥೆಯನ್ನು ಒಂದೊಂದಾಗಿ ನೋಡುತ್ತ ವಿವರಣೆ ಪಡೆಯತೊಡಗಿದರು.
ಸುಮಾರು ಅರ್ಧಗಂಟೆ ಕಳೆದ ಮೇಲೆ ಅಮೆರಿಕೆಯ ತಂಡದ ದೂರವಾಣಿ ಕರೆ ಬಂತು – “ಇಲ್ಲಿ ಡಾ. ಜೇಫರ್ಸನ್ರವರ ಶರೀರ ಚೈತನ್ಯ ಕಳೆದುಕೊಂಡಿದೆ. ಕೂಡಲೇ ಅದನ್ನು ಹಿಂದಿರುಗಿಸಿ. ಅವರು ಡಾ. ಅಂಕಿತರೊಂದಿಗೆ ಮಾತನಾಡುವಂತಾಗಬೇಕು.”
ಅದಕ್ಕೆ ವಿದೇಶಾಂಗ ಮಂತ್ರಿಗಳು ಉತ್ತರಿಸಿದರು – “ಒಡಂಬಡಿಕೆಯ ನಿಯಮದಂತೆ ಡಾ. ಅಂಕಿತರ ಚೈತನ್ಯವನ್ನು ಹಿಂಪಡೆಯುವುದು ಹಾಗೂ ಜೇಫರ್ಸನ್ರವರ ಚೈತನ್ಯವನ್ನು ಮರಳಿಸುವುದು ಒಂದೇ ಕಾಲದಲ್ಲಿ ನಡೆಯುತ್ತದೆ. ಆದ್ದರಿಂದ ಅವರಿಬ್ಬರೂ ಪರಸ್ಪರ ಭೇಟಿಯಾಗುವುದು ಅಸಂಭವ.”
“ಡಾ. ಜೇಫರ್ಸನ್ರು ಚೈತನ್ಯರಹಿತರಾಗುತ್ತಾರೆಂದು ನೀವು ತಿಳಿಸಿಯೇ ಇರಲಿಲ್ಲ. ಒಡಂಬಡಿಕೆಯಲ್ಲೂ ಈ ಕುರಿತು ಉಲ್ಲೇಖವಿಲ್ಲ.”
“ನೋಡಿ, ಜೀವವಿರುವುದು ಒಂದೇ. ಅದನ್ನು ಬೇರೆಡೆಗೆ ವರ್ಗಾಯಿಸುವುದು ಎಂದರೆ ಮೂಲ ಸ್ಥಳದಲ್ಲಿ ಅದು ಇಲ್ಲವಾಗುತ್ತದೆ ಎಂದೇ. ಚೈತನ್ಯವನ್ನು ವಿಭಾಗಿಸಲಾಗದು. ಇದೊಂದು ಸಾಮಾನ್ಯಜ್ಞಾನ. ಚೈತನ್ಯದ ಬಗ್ಗೆ ಅಲ್ಪಸ್ವಲ್ಪ ಅರಿವಿರುವವರಿಗೂ ಇದು ತಿಳಿದೇ ಇರುತ್ತದೆ.”
“ಅದನ್ನೆಲ್ಲ ಬದಿಗಿರಿಸಿ ಕೂಡಲೇ ಡಾ. ಜೇಫರ್ಸನ್ರ ಚೈತನ್ಯವನ್ನು ಹಿಂದಿರುಗಿಸಿ.”
“ಚೈತನ್ಯವನ್ನು ಮರುನೀಡುವ ಹಾಗೂ ಹಿಂಪಡೆಯುವ ಕೆಲಸ ಒಂದೇ ಕಾಲಕ್ಕೆ ಆಗಬೇಕಾದದ್ದು. ನಿಗದಿತ ಸಮಯಕ್ಕಿಂತ ಮುಂಚೆಯೇ ನೀವು ಇದನ್ನೆಲ್ಲ ಬಯಸುವಿರಾದರೆ ನಾವು ಇದನ್ನೆಲ್ಲ ನಡೆಸಿಕೊಡುವ ಮಾನ್ಯ ದೀಕ್ಷಿತರ ಬಳಲಿಕೆಯತ್ತಲೂ ಗಮನಹರಿಸಬೇಕು. ನಿಗದಿತ ಸಮಯಕ್ಕೆ ಮೊದಲೇ ಇದು ಸಾಧ್ಯವಾದೀತೇ ಎಂದು ಅವರನ್ನು ಕೇಳಬೇಕು.”
“ಇವೆಲ್ಲ ಕುಂಟು ನೆಪಗಳು ನಮಗೆ ಬೇಡ. ಕೂಡಲೇ ಡಾ. ಜೇಫರ್ಸನ್ರ ಚೈತನ್ಯ ಹಿಂದಿರುಗಿಸಿ. ಇಲ್ಲವಾದರೆ ನಾವು ಡಾ. ಅಂಕಿತರನ್ನು ಬಂಧಿಸಬೇಕಾಗುತ್ತದೆ. ಡಾ. ಜೇಫರ್ಸನ್ರ ಚೈತನ್ಯ ಮರಳಿ ಬಂದ ನಂತರ ಅವರ ಸಲಹೆಯ ಮೇರೆಗೆ ನಾವು ಮುಂದಿನ ನಡೆ ನಿರ್ಧರಿಸುತ್ತೇವೆ.”
“ಡಾ. ಅಂಕಿತರನ್ನು ಬಂಧಿಸುವುದರಿಂದ ಒಡಂಬಡಿಕೆಯ ನಿಯಮವನ್ನು ಮುರಿದಂತಾಗುತ್ತದೆ.”
“ನೀವೇನಾದರೂ ಅಂದುಕೊಳ್ಳಿ. ಡಾ. ಅಂಕಿತರ ಬಂಧನ ಬೇಡವೆಂದಾದರೆ ಕೂಡಲೇ ಡಾ. ಜೇಫರ್ಸನ್ರ ಚೈತನ್ಯ ಮರಳಿಸಿ.”
“ಒಂದೇ ಚೈತನ್ಯದ ವರ್ಗಾವಣೆ ಖಂಡಿತ ಸಾಧ್ಯವಿಲ್ಲ. ಮಾನ್ಯ ದೀಕ್ಷಿತರು ಒಪ್ಪಿದರೆ ನಿಗದಿತ ಸಮಯಕ್ಕೂ ಮುಂಚೆ ಎರಡೂ ಚೈತನ್ಯಗಳ ವರ್ಗಾವಣೆಯ ಸಾಧ್ಯತೆಯ ಬಗ್ಗೆ ಆಲೋಚಿಸಬಹುದಾಗಿದೆ.”
“ನಮಗೆ ಖಚಿತ ಉತ್ತರ ಬೇಕು. ಈ ರೀತಿ ಅಸ್ಪಷ್ಟ ಉತ್ತರವಲ್ಲ.”
ಇದನ್ನು ಕೇಳಿದ ವಿದೇಶಾಂಗ ಸಚಿವರು ಪ್ರಧಾನಮಂತ್ರಿಗಳ ಮುಖ ನೋಡಿದರು. ಪ್ರಧಾನಮಂತ್ರಿಗಳು ಹೇಳಿದರು – “ಒಬ್ಬರದೇ ಚೈತನ್ಯವನ್ನು ವರ್ಗಾಯಿಸುವುದನ್ನು ನಾವು ಒಪ್ಪುವುದಿಲ್ಲ. ಇದು ನಮ್ಮ ಖಚಿತ ಉತ್ತರ. ಒಡಂಬಡಿಕೆಯಲ್ಲಿರುವಂತೆ ನಡೆದುಕೊಳ್ಳುವುದಕ್ಕೆ ನಾವು ಬದ್ಧರು.”
“ನೀವು ನಮ್ಮ ಅಪೇಕ್ಷೆ ಈಡೇರಿಸದಿದ್ದರೆ ನಾವು ಡಾ. ಅಂಕಿತರನ್ನು ಬಂಧಿಸುವವರೇ.”
“ಅದರಿಂದ ಒಡಂಬಡಿಕೆ ಮುರಿದಂತಾಗುತ್ತದೆ. ನೀವು ಹಾಗೆ ಮುರಿದರೆ ನಾವು ಮುಂದೆ ಒಡಂಬಡಿಕೆಯ ಯಾವುದೇ ಶರತ್ತುಗಳಿಗೆ ಬದ್ಧರಾಗಿರುವುದಿಲ್ಲ.”
“ನೀವೇನು ಮಾಡೀರಿ ನಮಗೆ? ನಾವು ಬಂಧಿಸುವವರೇ.”
ಮರುಕ್ಷಣದಲ್ಲೇ ‘ಅರೆಸ್ಟ್ ಹಿಮ್’ ಎಂಬ ಆದೇಶ ಕೇಳಿ ಬಂತು. ಡಾ. ಅಂಕಿತರನ್ನು ಬಂಧಿಸುವ ಚಿತ್ರವೂ ಪರದೆಯಲ್ಲಿ ಮೂಡಿಬಂತು. ಇದನ್ನು ಕಂಡ ಅಲ್ಲಿದ್ದ ಎಲ್ಲರೂ ಸ್ತಬ್ಧರಾದರು. ಮುಂದೇನು ನಡೆದೀತೆಂದು ಎಲ್ಲರಿಗೂ ಆತಂಕ.
ಪ್ರಧಾನಿಗಳು ಅಮೆರಿಕೆಯ ದೂತಾವಾಸದ ಅಧಿಕಾರಿಗಳನ್ನುದ್ದೇಶಿಸಿ ಹೇಳಿದರು – “ನಡೆದುದನ್ನೆಲ್ಲ ನೀವು ನೋಡಿದ್ದೀರಲ್ಲ. ಒಡಂಬಡಿಕೆ ಮುರಿದು ಹೋಗಿರುವುದು ಖಚಿತ.”
‘ನಾವು ಒಂದು ಕ್ಷಣ ನಮ್ಮವರೊಂದಿಗೆ ಸಮಾಲೋಚಿಸ ಬಯಸುತ್ತೇವೆ’ ಎಂದು ಹೇಳಿದ ಒಬ್ಬ ಅಧಿಕಾರಿ ಪಕ್ಕಕ್ಕೆ ತೆರಳಿ ದೂರವಾಣಿಯ ಮೂಲಕ ಅಮೆರಿಕೆಯ ತಂಡದ ಪ್ರಮುಖರ ಜೊತೆ ಸಮಾಲೋಚಿಸಿದರು. ನಂತರ ಹಿಂದಿರುಗಿ ಬಂದ ಅವರು ಹೇಳಿದರು – “ನೀವು ನಮ್ಮ ಅಪೇಕ್ಷೆಯನ್ನು ಈಡೇರಿಸಲು ಒಪ್ಪದ್ದರಿಂದ ನಮ್ಮ ದೇಶ ಈ ಕಠಿಣ ನಿಲವು ತಳೆಯಿತು. ನಮ್ಮ ದೇಶ ಯಾರಿಗೂ ಬಗ್ಗಿ ನಡೆಯುವುದಿಲ್ಲ ಎಂಬುದನ್ನು ನಾವು ನೆನಪಿಸಬಯಸುತ್ತೇವೆ. ನಿಮ್ಮ ದೂತಾವಾಸದ ಅಧಿಕಾರಿಗಳನ್ನು ನಮ್ಮ ಸರಕಾರ ಪ್ರಯೋಗಕ್ಷೇತ್ರದಿಂದ ಹೊರಕಳುಹಿಸುತ್ತಿದೆ.”
ಇದನ್ನು ಕೇಳಿದ ಪ್ರಧಾನಮಂತ್ರಿಗಳು ಹೇಳಿದರು – “ಹಾಗಾದರೆ ಒಡಂಬಡಿಕೆ ಮುರಿದಿದೆಯೆಂಬ ಪತ್ರಕ್ಕೆ ಸಹಿ ಮಾಡಿ ನೀವೂ ಕೂಡಲೇ ಇಲ್ಲಿಂದ ತೆರಳಬಹುದಾಗಿದೆ.”
ಒಂದೈದು ನಿಮಿಷದಲ್ಲೇ ಒಡಂಬಡಿಕೆ ಮುರಿಯಿತೆಂಬ ಪತ್ರ ಸಿದ್ಧಪಡಿಸಲಾಯಿತು. ಅದಕ್ಕೆ ಸಹಿ ಮಾಡಿದ ಅಮೆರಿಕಾದೂತಾವಾಸದ ಅಧಿಕಾರಿಗಳು ಅಲ್ಲಿಂದ ತೆರಳಿದರು. ಕೂಡಲೇ ಆ ಪತ್ರದ ಪ್ರತಿಯನ್ನು ಅಮೆರಿಕೆಯ ತಂಡಕ್ಕೆ ಕಳುಹಿಸಿ ಎರಡೂ ತಂಡಗಳ ನಡುವಿನ ಸಂಪರ್ಕವನ್ನು ಕಡಿದು ಹಾಕಲಾಯಿತು.
ನಂತರ ಪ್ರಧಾನಿಗಳು ದೀಕ್ಷಿತರನ್ನು ಕೇಳಿಕೊಂಡರು – ‘ಕೂಡಲೇ ಡಾ. ಅಂಕಿತರ ಚೈತನ್ಯವನ್ನು ಮರಳಿ ಆವಾಹಿಸಿ’ ಎಂದು.
ಒಂದೈದು ನಿಮಿಷದಲ್ಲೇ ಡಾ. ಅಂಕಿತರು ಎದ್ದು ಕುಳಿತುಕೊಂಡರು.
“ಡಾ. ಜೇಫರ್ಸನ್ರ ಜೀವ ಮತ್ತೆ ಮೂಲ ಶರೀರಕ್ಕೆ ಮರಳದಂತೆ ದಿಗ್ಬಂಧನ ಹಾಕಿ” ಎಂದು ಕೇಳಿಕೊಂಡರು ಪ್ರಧಾನಿ.
“ಅದರಿಂದ ಆ ಜೀವ ಪ್ರತಿರೂಪದಲ್ಲಿಯೇ ಸ್ಥಿರವಾಗಿ ನೆಲೆಸುವಂತಾಗುತ್ತದೆ. ಮುಂದೆ ಮೂಲ ಶರೀರಕ್ಕೆ ಅದೆಂದೂ ಹೋಗಲಾಗದು” ಎಂದು ವಿವರಿಸಿದರು ದೀಕ್ಷಿತರು.
‘ಆಗಬೇಕಾದುದು ಅದೇ’ ಎಂದರು ಪ್ರಧಾನಿ. ಅದರಂತೆಯೇ ದೀಕ್ಷಿತರು ವ್ಯವಸ್ಥೆ ಮಾಡಿದರು.
ದೀಕ್ಷಿತರು ಮಾಡಬೇಕಾದುದನ್ನೆಲ್ಲ ಪೂರೈಸಿದ್ದರಿಂದ ಅವರನ್ನು ವಿಶ್ರಾಂತಿಗಾಗಿ ಕೋಣೆಗೆ ಕರೆದುಕೊಂಡು ಹೋಗಲಾಯಿತು. ಕೋಣೆಗೆ ಹೋಗುತ್ತ ದೀಕ್ಷಿತರು ಪ್ರಧಾನಿಯವರನ್ನು ಕೇಳಿದರು – “ಎಲ್ಲವೂ ನೀವಂದುಕೊಂಡಂತೆ ಆಯಿತೇ?”
“ಅಲ್ಪ ಸ್ವಲ್ಪ ವ್ಯತ್ಯಾಸವಾಯಿತು. ಆದರೂ ಫಲದ ದೃಷ್ಟಿಯಿಂದ ಎಲ್ಲವೂ ಸರಿಯಾದೀತೆಂಬ ಆಸೆಯಿದೆ” ಎಂದರು ಪ್ರಧಾನಿ ನಗುತ್ತ.
ಮರುದಿನ ಎಲ್ಲ ಪತ್ರಿಕೆಗಳಲ್ಲೂ ‘ಚೈತನ್ಯದ ವಿದ್ಯುನ್ಮಾನ ಸಾಗಣೆಯ ಒಪ್ಪಂದ’ ಮುರಿದುಬಿದ್ದ ಸುದ್ದಿಯೇ ಮುಖಪುಟದಲ್ಲಿ ಎದ್ದು ತೋರುತ್ತಿತ್ತು. ಅಮೆರಿಕೆಯ ಪತ್ರಿಕೆಗಳು ಭಾರತದ ನಡೆಯನ್ನು ನಿಂದಿಸಿದರೆ ಭಾರತದ ಪತ್ರಿಕೆಗಳಲ್ಲಿ ಅಮೆರಿಕದ ನಡೆ ತಪ್ಪೆಂದು ಪ್ರತಿಪಾದಿಸಲಾಗಿತ್ತು. ವಸ್ತುತಃ ಏನು ನಡೆಯಿತೆಂದು ಯಾವ ಪತ್ರಿಕೆಗಳಿಗೂ ತಿಳಿದಿರಲಿಲ್ಲ. ಸರಕಾರ ನೀಡಿದ ಹೇಳಿಕೆಗಳನ್ನು ಆಧರಿಸಿ ಅವು ಊಹಾಪೋಹವನ್ನು ಹರಿಯಬಿಟ್ಟಿದ್ದವು.
ಪತ್ರಿಕೆಗಳಲ್ಲಿ ಪ್ರಕಟವಾದ ಇನ್ನೊಂದು ಮುಖ್ಯ ಸುದ್ದಿ – ಡಾ. ಜೇಫರ್ಸನ್ರ ಪ್ರಾಣತ್ಯಾಗ. ಅವರ ಪ್ರಾಣತ್ಯಾಗದ ಬಗ್ಗೆ ವಿಜ್ಞಾನಲೋಕ ಕಂಬನಿ ಮಿಡಿದಿತ್ತು. ‘ವಿದ್ಯುನ್ಮಾನ ಸಾಗಣೆಯ ಪಿತಾಮಹರೆನಿಸಿದ್ದ ಅವರ ದೇಹತ್ಯಾಗ ತುಂಬಲಾಗದ ಹಾನಿ’ ಎಂದು ಪತ್ರಿಕೆಗಳು ಬಣ್ಣಿಸಿದ್ದವು. ಇದನ್ನೆಲ್ಲ ಓದಿದ ಪ್ರಧಾನಿಗಳು ಮನಸ್ಸಿನಲ್ಲೇ ನಕ್ಕರು.
ಡಾ. ಜೇಫರ್ಸನ್ರವರು ನಡೆದುದನ್ನೆಲ್ಲ ನೆನೆಯುತ್ತ ಚಿಂತಾಲೋಕದಲ್ಲಿ ಮುಳುಗಿದ್ದರು. ಪ್ರಧಾನಿಗಳು ಅವರ ಬಳಿ ಬಂದು ಪತ್ರಿಕೆಗಳನ್ನು ಅವರ ಮುಂದಿರಿಸಿದರು. ಎಲ್ಲವನ್ನೂ ಓದಿದ ಡಾ. ಜೇಫರ್ಸನ್ ಅವರು ವಿಷಾದದ ನಗೆ ನಕ್ಕರು.
“ಮಾನ್ಯರೇ, ನಿಮ್ಮ ದೇಶ ನಿಮ್ಮ ದೇಹತ್ಯಾಗವನ್ನು ದೃಢಪಡಿಸಿದೆ. ಜಗತ್ತಿನಲ್ಲೆಡೆ ಈ ಸುದ್ದಿ ಪ್ರಸಾರಗೊಂಡಿದೆ” – ಮುಗುಳುನಗುತ್ತ ಹೇಳಿದರು ಪ್ರಧಾನಿ.
“ಹೌದು. ಮೂಲ ದೇಹ ಅಳಿಯಿತು. ಅದರಿಂದ ಅದಕ್ಕಿದ್ದ ಹೆಸರೂ ಅಳಿದಂತೆಯೇ. ಇನ್ನೊಂದು ದೇಹದಲ್ಲಿ ನಾನಿದ್ದೇನೆ. ಅದಕ್ಕೆ ಹೆಸರೇ ಇಲ್ಲ.”
“ಜಗದ್ಧರ ಎಂದು ನಾವು ಅದನ್ನು ಹೆಸರಿಸಬಹುದಾಗಿದೆ. ಭಾರತದಲ್ಲಿ ಇರುವುದರಿಂದ ಭಾರತದ ಹೆಸರು.”
“ಹೊಸ ಹೆಸರು ಜಗದ್ಧರ ಎಂದೇ ಆಗಲೊಲ್ಲದೇಕೆ? ಎರಡು ದಿನಗಳಿಂದ ನಾನು ಇಲ್ಲಿಯೇ ಇದ್ದೇನೆ. ಹೊರ ಜಗತ್ತಿಗೆ ನಾನು ಕಾಣಿಸಿಕೊಳ್ಳಬಹುದೇ?”
“ಧಾರಾಳವಾಗಿ. ನಾವು ನಿಮಗೆ ಯಾವ ಕಟ್ಟುಪಾಡುಗಳನ್ನೂ ವಿಧಿಸುತ್ತಿಲ್ಲ. ನೀವು ಹೇಗೆ ಬೇಕೋ ಹಾಗೆ ನಡೆದುಕೊಳ್ಳಬಹುದಾಗಿದೆ. ನಿಮ್ಮ ಅಪೇಕ್ಷೆ ತಿಳಿದರೆ ಅದಕ್ಕೆ ತಕ್ಕಂತೆ ನಾವು ಬೇಕಾದ ವ್ಯವಸ್ಥೆ ಮಾಡಿಯೇವು.”
“ನಾನು ಮೊಟ್ಟಮೊದಲು ದೀಕ್ಷಿತರೊಂದಿಗೆ ಮಾತನಾಡಬಯಸುತ್ತೇನೆ. ಅದು ಸಾಧ್ಯವಾಗಬಹುದೇ?”
“ಅವರು ಸಾಕಷ್ಟು ದಣಿದಿದ್ದಾರೆ. ಒಂದೆರಡು ದಿನ ಎದ್ದು ಓಡಾಡುವುದು ಬೇಡವೆಂದು ನಾವೇ ಅವರಿಗೆ ಕಟ್ಟುಪಾಡು ವಿಧಿಸಿದ್ದೇವೆ. ಆದರೆ ದಿಂಬಿಗೊರಗಿ ಕುಳಿತು ಅವರು ಮಾತನಾಡಬಹುದಾಗಿದೆ. ಕೂಡಲೇ ಅದಕ್ಕೆ ವ್ಯವಸ್ಥೆ ಮಾಡಲಾಗುತ್ತದೆ.”
ಮತ್ತೆ ಕೆಲ ಹೊತ್ತಿನಲ್ಲೇ ಅವರನ್ನು ದೀಕ್ಷಿತರ ಕೋಣೆಗೆ ಕರೆದೊಯ್ಯಲಾಯಿತು. ಅವರು ಕಾಲುಮುಟ್ಟಿ ದೀಕ್ಷಿತರನ್ನು ನಮಿಸಿ – “ನಾನು ಜಗದ್ಧರ ಎಂದು ಹೊಸ ಹೆಸರು ಪಡೆದಿದ್ದೇನೆ” ಎಂದರು.
“ತುಂಬ ಚೆಂದದ ಹೆಸರು. ಒಳ್ಳೆಯ ನಡತೆಯಿಂದ ಜಗತ್ತನ್ನೇ ಎತ್ತಿ ಹಿಡಿಯುವವರಾಗಿ” ಎಂದು ಆಶೀರ್ವದಿಸಿದರು ದೀಕ್ಷಿತರು.
“ಮಾನ್ಯರೇ! ನನ್ನದೊಂದು ಮೂಲಭೂತ ಪ್ರಶ್ನೆಯಿದೆ. ನನ್ನ ಮೂಲರೂಪ ಅಳಿದಿದೆ. ಈಗ ಇರುವುದು ಪ್ರತಿರೂಪ ಮಾತ್ರ. ಇದು ಎಷ್ಟು ದಿನ ಉಳಿದೀತು?”
“ಅದನ್ನು ನಾನು ಖಚಿತವಾಗಿ ಹೇಳಲಾರೆ. ಪ್ರತಿರೂಪದ ಸೃಷ್ಟಿ ನನಗೆ ತಿಳಿದ ವಿದ್ಯೆಯಲ್ಲ. ಮೂಲರೂಪ ಅಳಿದರೂ ಪ್ರತಿರೂಪದ ರೂಪದಲ್ಲಿ ನೀವು ಯಾವುದೇ ತೊಂದರೆಯಿಲ್ಲದೆ ಇದ್ದೀರಾದ್ದರಿಂದ ಮೂಲರೂಪದ ಆರೋಗ್ಯ ಆಯಸ್ಸುಗಳೇ ಪ್ರತಿರೂಪಕ್ಕೂ ಇರುತ್ತವೆ ಎಂದುಕೊಳ್ಳುತ್ತೇನೆ.”
“ಮೂಲರೂಪ ಅಳಿದರೂ ನನಗಿರುವ ಜ್ಞಾನ ಮುಕ್ಕಾದಂತೆನಿಸುತ್ತಿಲ್ಲ. ಅದು ಹೇಗೆ?”
“ನಮ್ಮಲ್ಲಿ ಇದನ್ನು ಸಂಸ್ಕಾರವೆನ್ನುತ್ತೇವೆ. ಶರೀರದ ಮೂಲಕವೇ ಪಡೆಯುವ ಜ್ಞಾನ-ಸಂಸ್ಕಾರಗಳು ಜೀವಕ್ಕೆ ಅಂಟಿಕೊಳ್ಳುತ್ತವೆ. ನಿಮ್ಮ ಮೂಲದೇಹ ಅಳಿದಿದ್ದರೂ ಜೀವಸಂಸ್ಕಾರ ಅಳಿದಿಲ್ಲ. ಈ ದೇಹ ಇರುವವರೆಗೂ ಅದು ಮುಂದುವರಿಯಬಹುದೆಂದು ನಾನು ಭಾವಿಸುತ್ತೇನೆ.”
“ಈ ಪ್ರತಿರೂಪಕ್ಕೆ ಜೀವ ಕೊಟ್ಟವರು ನೀವು. ನನ್ನ ಹಿಂದಿನ ಬದುಕು ಅಳಿದಾಗಿದೆ. ಈಗ ನೀವೇ ನನ್ನ ತಂದೆಯೆಂದು ಭಾವಿಸುತ್ತೇನೆ. ಮುಂದೆ ನಾನು ಏನು ಮಾಡಬೇಕೆಂದು ನೀವು ತಿಳಿಸಿದರೆ ಅದರಂತೆ ನಡೆದೇನು.”
“ಭಾರತದಲ್ಲಿ ಹುಟ್ಟಿ ಬೆಳೆದವ ನಾನು. ಈ ನೆಲ ನನ್ನ ತಾಯಿ. ಈ ಭಾರತಮಾತೆಯ ಒಳಿತಿಗಾಗಿ ಏನಾದರೂ ಮಾಡಿ ಎನ್ನುವವನು ನಾನು. ನೀವು ವಿದೇಶದಲ್ಲಿ ಹುಟ್ಟಿ ಬೆಳೆದವರು. ಭಾರತದ ಬಗ್ಗೆ ನಿಮ್ಮ ಅನಿಸಿಕೆಯೇನೆಂದು ನಾನರಿಯೆ. ಆದ್ದರಿಂದ ನಿಮಗನಿಸಿದಂತೆ ಬದುಕಿ, ಒಳ್ಳೆಯವರಾಗಿ ಬಾಳಿ ಎಂದಷ್ಟೇ ಹೇಳಬಲ್ಲೆ. ಭಾರತದ ಬಗ್ಗೆ ಏನಾದರೂ ಮಾಡಬಯಸುವಿರಾದರೆ ಪ್ರಧಾನಿಯವರೊಂದಿಗೆ ಸಮಾಲೋಚಿಸಿ. ನನ್ನನ್ನು ಈ ಕೆಲಸದಲ್ಲಿ ತೊಡಗಿಸಿದವರೂ ಅವರೇ. ಅದಿರಲಿ, ಭಾರತದ ಬಗ್ಗೆ ನಿಮ್ಮ ಅನಿಸಿಕೆಯೇನು?”
“ನನ್ನ ಅಜ್ಜ ಭಾರತದಲ್ಲಿ ಹುಟ್ಟಿದವನಂತೆ. ಅಜ್ಜಿ ಶ್ರೀಲಂಕಾದವಳಂತೆ. ಅವರಿಬ್ಬರನ್ನೂ ನಾನು ನೋಡಿಲ್ಲ. ತಂದೆ ತಾಯಿಯರಿಬ್ಬರೂ ಅಮೆರಿಕೆಯಲ್ಲೇ ಹುಟ್ಟಿ ಬೆಳೆದವರು. ನಾನು ಭಾರತದಲ್ಲಿ ಕಾಲಿರಿಸಿರುವುದು ಇದೇ ಮೊದಲು. ಆದರೆ ಭಾರತದ ಬಗ್ಗೆ ಸಾಕಷ್ಟು ಕೇಳಿದ್ದೇನೆ. ನನ್ನ ಅರಿವು ವಿಶೇಷವಾಗಿ ವಿಜ್ಞಾನಕ್ಷೇತ್ರಕ್ಕೆ ಸಂಬAಧಿಸಿದ್ದು. ಆ ಕ್ಷೇತ್ರದಲ್ಲಿ ಭಾರತ ಅಚ್ಚರಿಪಡುವಷ್ಟು ಪ್ರಗತಿ ಸಾಧಿಸುತ್ತಿದೆ ಎಂದು ಮಾತ್ರ ದೃಢವಾಗಿ ಹೇಳಬಲ್ಲೆ.”
“ಮದುವೆ, ಹೆಂಡತಿ ಮಕ್ಕಳು?”
“ಯಾವುದೂ ಇಲ್ಲ. ಓದು ಮುಗಿದ ನಂತರ ಕೆಲಸಕ್ಕೆ ಸೇರಿದ ಹೊಸದರಲ್ಲಿ ನಾನು ಒಬ್ಬ ಮಾಯಾಂಗನೆಯ ಮೋಹಜಾಲಕ್ಕೆ ಸಿಲುಕಿದ್ದೆ. ಸುಮಾರು ಎರಡು ವರ್ಷ ಆಕೆ ನನ್ನನ್ನು ಅಟಕಾಯಿಸಿದಳು. ಉಪಾಯದಿಂದ ನನ್ನಲ್ಲಿಯ ಸಾಕಷ್ಟು ಹಣವನ್ನು ಲಪಟಾಯಿಸಿ ಕೊನೆಗೆ ಕೈಕೊಟ್ಟಳು. ಇದನ್ನೆಲ್ಲ ಮರೆಯಲು ನಾನು ಹಗಲೂ ರಾತ್ರಿ ವಿಜ್ಞಾನದ ಕ್ಷೇತ್ರದಲ್ಲಿ ಮುಳುಗಿದೆ. ಅದು ನನ್ನನ್ನು ಎಷ್ಟು ಬಲವಾಗಿ ಹಿಡಿದುಕೊಂಡಿತೆಂದರೆ ಮುಂದೆಂದೂ ನಾನು ಲೌಕಿಕ ಜೀವನದಲ್ಲಿ ಆಸಕ್ತಿಯನ್ನೇ ತೋರಲಿಲ್ಲ. ತಂದೆ-ತಾಯಿಯರು ಇಂದಿಲ್ಲ. ವಿಜ್ಞಾನವನ್ನೇ ಉಸಿರಾಗಿ ಬದುಕುವುದನ್ನು ಬಿಟ್ಟರೆ ನನಗೆ ಬೇರೇನೂ ಗೊತ್ತಿಲ್ಲ.”
“ವಿಜ್ಞಾನಕ್ಷೇತ್ರದಲ್ಲಿ ನೀವು ಸಾಕಷ್ಟು ಪರಿಶ್ರಮ ಮಾಡಿದ್ದೀರಿ ಎಂದು ನಾನು ಕೇಳಿ ಬಲ್ಲೆ. ನೀವು ವಿಜ್ಞಾನಿಗಳು. ಯಾವ-ಯಾವುದೋ ಸಂಶೋಧನೆ ಮಾಡುತ್ತೀರಿ. ಆದರೆ ಕೆಲವೊಮ್ಮೆ ಕೆಟ್ಟ ಉದ್ದೇಶಕ್ಕೂ ಅದರ ಬಳಕೆಯಾಗುತ್ತದೆ. ಲೋಕಹಿತವನ್ನೇ ಮುಖ್ಯವಾಗಿ ಸಂಶೋಧನೆಯನ್ನು ಅಭಿವೃದ್ಧಿಪಡಿಸಿದರೆ ಜನರಿಗೆ ಸಾಕಷ್ಟು ಉಪಕಾರವಾದೀತು. ಹಲವು ವೈಜ್ಞಾನಿಕ ಸಂಶೋಧನೆಗಳು ಲೋಕಕ್ಕೆ ಉಪಕಾರಿಯಾಗಿವೆ. ಆದರೆ ಎಲ್ಲವೂ ಅಲ್ಲ.”
“ನೀವು ಜೀವ ವರ್ಗಾಯಿಸಿದಿರಲ್ಲ. ಅದನ್ನು ನಾನೂ ಕಲಿಯಬಹುದೇ?”
ಇದನ್ನು ಕೇಳಿ ಮಂದಹಾಸ ತೋರುತ್ತ ದೀಕ್ಷಿತರು ಹೇಳಿದರು – “ಯಾವುದೇ ವಿದ್ಯೆಯನ್ನೂ ಯಾರೂ ಕಲಿಯಬಾರದೆಂಬುದಿಲ್ಲ, ಕಲಿಯಲಾಗದೆಂಬುದೂ ಇಲ್ಲ. ಆದರೆ ಈಗ ಇದನ್ನು ಕಲಿಯಲು ನಿಮ್ಮ ವಯಸ್ಸು ಅಡ್ಡಿಯಾಗುತ್ತದೆನಿಸುತ್ತದೆ. ಸಿದ್ಧಿ ಪಡೆಯುವುದು ಅಧ್ಯಾತ್ಮಕ್ಷೇತ್ರದ ಒಂದು ಹಂತ. ಚಿಕ್ಕಂದಿನಿಂದಲೇ ಆಧ್ಯಾತ್ಮದಲ್ಲಿ ತೊಡಗಿಕೊಂಡರೆ ಒಂದಾನೊಂದು ದಿನ ಸಿದ್ಧಿ ತಾನಾಗಿಯೇ ದೊರೆತೀತು. ಈ ಹಾದಿಯಲ್ಲಿ ಸಾಗಬೇಕೆಂದಾದಲ್ಲಿ ಸಂಯಮದ ಜೀವನವಿರಬೇಕು. ಲೌಕಿಕ ಮೋಹ ತೊರೆಯಬೇಕು. ಗುರುವಿನ ಮಾರ್ಗದರ್ಶನ ಪಡೆದು ಅದೇ ಕ್ಷೇತ್ರದಲ್ಲಿ ಮುಳುಗಿರಬೇಕು. ತುಂಬ ಕಠಿಣ ದಾರಿಯದು. ಸಿದ್ಧಿ ಎಲ್ಲರಿಗೂ ಒಲಿಯುವುದಿಲ್ಲ. ಅದು ಸಿಕ್ಕರೂ ಪ್ರದರ್ಶನಕ್ಕಾಗಿ ಬಳಸಬಾರದೆಂಬ ಕಟ್ಟುಪಾಡಿದೆ. ಸಿದ್ಧಿ ದೊರೆತರೂ ಅಧ್ಯಾತ್ಮದ ಹಾದಿಯಲ್ಲಿ ಮುಂದುವರಿಯುವುದನ್ನು ಬಿಡಬಾರದು ಎಂಬ ವಿಧಿಯಿದೆ. ಆಸಕ್ತಿಯಿದ್ದರೆ ನೀವು ಅಧ್ಯಾತ್ಮದ ಹಾದಿ ಹಿಡಿಯಬಹುದಾಗಿದೆ. ಸಿದ್ಧಿ ಪಡೆಯುವ ಹಂತ ತಲಪಲಾಗದಿದ್ದರೂ ಒಂದಿಷ್ಟು ಪ್ರಗತಿಯನ್ನಂತೂ ಸಾಧಿಸಬಹುದಾಗಿದೆ.”
“ನಾನು ಹೇಳಿ-ಕೇಳಿ ವಿಜ್ಞಾನಿ. ಆಧ್ಯಾತ್ಮಿಕತೆ ನನಗೆ ಅಷ್ಟಾಗಿ ಒಗ್ಗುವುದಿಲ್ಲವೆನಿಸುತ್ತದೆ.”
“ಯಾಕೆ ಹಾಗೆಂದುಕೊಳ್ಳುತ್ತೀರಿ? ನಮ್ಮ ಪ್ರಧಾನಿಯವರನ್ನೇ ನೋಡಿ. ಅವರು ದೇಶದ ಚುಕ್ಕಾಣಿಯನ್ನು ಹಿಡಿದಿದ್ದರೂ ಅಧ್ಯಾತ್ಮದ ಒಲವನ್ನು ಎಂದೂ ಕೈ ಬಿಟ್ಟಿಲ್ಲ. ಅದರಿಂದಾಗಿಯೇ ಅವರ ವ್ಯಕ್ತಿತ್ವಕ್ಕೊಂದು ಹೊಸ ಮೆರಗಿದೆ. ಇಂತಹ ಬದುಕನ್ನೇ ನೀವೂ ನಿಮ್ಮದಾಗಿಸಿಕೊಳ್ಳಬಹುದು. ಇದಕ್ಕೆ ಪ್ರಧಾನಿಯವರ ಸಲಹೆ ಪಡೆಯಿರಿ. ಅದು ನಿಮಗೆಂದೂ ಮೋಸ ಮಾಡದು.”
* * *
ಮುಂದಿನ ದಾರಿ ಏನಿರಬೇಕೆಂಬುದರ ಬಗ್ಗೆ ಚರ್ಚಿಸಲು ಪ್ರಧಾನಿಯವರ ಬಳಿ ಹೋದಾಗ ಪ್ರಧಾನಿಯವರು ಕೇಳಿದ್ದು – “ನಿನ್ನೆ ದೀಕ್ಷಿತರನ್ನು ನೋಡಿದಿರಲ್ಲ, ಏನೆನ್ನಿಸಿತು?”
ಆಗ ಡಾ. ಜಗದ್ಧರರು ತುಂಬು ಹೃದಯದಿಂದ ಹೇಳಿದರು – “ಅವರದು ಮೇರುತುಲ್ಯ ವ್ಯಕ್ತಿತ್ವ. ಅವರೊಂದಿಗೆ ನಾನು ಕಳೆದುದು ಕೆಲವೇ ನಿಮಿಷಗಳನ್ನು. ಅಷ್ಟರಲ್ಲಿಯೇ ಅವರು ಮೋಡಿ ಮಾಡಿಬಿಟ್ಟರು. ಜೀವಕೊಟ್ಟ ಅವರು ದಿಕ್ಕನ್ನೂ ನೀಡಿದರು ಎನ್ನಬಹುದು.”
“ಅವರ ವ್ಯಕ್ತಿತ್ವವನ್ನು ನೀವು ಕಂಡಿದ್ದುದು ಸ್ವಲ್ಪ ಮಾತ್ರ. ಅದರ ಆಳ ಹಾಗೂ ಅಗಲ ಅಪಾರವಾಗಿದೆ. ಅವರ ಸಹವಾಸ ಹೆಚ್ಚು ಹೆಚ್ಚು ದೊರೆತಂತೆಲ್ಲ ಅದು ನಿಮ್ಮ ಅರಿವಿಗೆ ಬಂದೀತು. ಅದಿರಲಿ, ಮುಂದಿನ ದಾರಿಯ ಬಗ್ಗೆ ಅವರ ಅಭಿಪ್ರಾಯವೇನು?”
“ನಿಮ್ಮ ಸಲಹೆ ಪಡೆದು ಮುಂದುವರಿಯಿರಿ ಎಂದು ಅವರು ಅಪ್ಪಣಿಸಿದರು.”
“ನಾನೆನ್ನುವುದು ಒಂದೇ ಒಂದು – ಈ ತಾಯ್ನೆಲಕ್ಕೆ ನಿಮ್ಮ ಸೇವೆ ಸಲ್ಲುವಂತಾಗಬೇಕು ಎಂದು.”
“ದೀಕ್ಷಿತರ ಅಭಿಪ್ರಾಯವೂ ಅದೇ. ನಾನೂ ಅದನ್ನು ಈಗ ಒಪ್ಪುತ್ತೇನೆ. ದೀಕ್ಷಿತರ ಆಶಯಕ್ಕೆ ವಿರುದ್ಧವಾಗಿ ಎಂದೂ ನಡೆಯಬಾರದೆಂದು ಸಂಕಲ್ಪ ಮಾಡಿದ್ದೇನೆ. ಪೂರ್ವಾಶ್ರಮದಲ್ಲಿ ನನ್ನ ಬದುಕು ಬೇರೆ ತರಹದ್ದಿತ್ತು. ಅದಿಂದು ಮುಗಿದ ಕಥೆ. ನಾನು ಮರುಜನ್ಮ ಪಡೆದಿದ್ದೇನೆ. ನನ್ನ ಇರುವಿಕೆ ಜಗತ್ತಿಗೆ ಗೊತ್ತಿಲ್ಲ. ಆದ್ದರಿಂದ ಜಗತ್ತಿನೆದುರು ನಾನು ಹೊಸ ವ್ಯಕ್ತಿತ್ವವನ್ನೇ ತೋರಿಸ ಬಯಸುತ್ತೇನೆ. ಹೇಳಿ ಕೇಳಿ ನಾನು ವಿಜ್ಞಾನ ಕ್ಷೇತ್ರದವನು. ಆದ್ದರಿಂದ ಅದೇ ಕ್ಷೇತ್ರದಲ್ಲಿ ಮುಂದುವರಿಯುವುದೇ ಹೆಚ್ಚು ಸಮಂಜಸವೆಂದು ನನಗನಿಸುತ್ತದೆ. ಅದರ ಜೊತೆ ಒಂದಿಷ್ಟು ಆಧ್ಯಾತ್ಮಿಕತೆಯನ್ನು ಜೋಡಿಸಬಯಸುತ್ತೇನೆ. ದೀಕ್ಷಿತರ ಅಭಿಪ್ರಾಯ ಕೂಡ ಅದೇ…”
“ಸರಿಯಾದ ನಿಲವಿದು. ಹೊಸ ವ್ಯಕ್ತಿತ್ವ, ಹೊಸ ದೃಷ್ಟಿಯಿಂದ ಬದುಕು ಸಾಗಿಸಬಯಸುವುದು ತುಂಬ ಶ್ಲಾಘ್ಯವೇ ಸರಿ. ನಿಮ್ಮ ಈ ಹೊಸ ವ್ಯಕ್ತಿತ್ವದ ರೂಪ ಜಗತ್ತಿನೆದುರು ಬೇರೆಯ ರೂಪದಲ್ಲೇ ಇರಲಿ ಎಂಬುದು ನನ್ನ ಅಪೇಕ್ಷೆ. ಆದ್ದರಿಂದ ನೀವು ಸುರೂಪ ಚಿಕಿತ್ಸೆಗೆ (ಪ್ಲಾಸ್ಟಿಕ್ ಸರ್ಜರಿ) ಒಳಗಾಗಿ ಮುಖದ ಸ್ವರೂಪ ಬದಲಿಸಿಕೊಳ್ಳಿ. ಜಗತ್ತಿನ ಎದುರು ಅದೇ ಕಂಡುಬರಲಿ. ಪೂರ್ವಾಶ್ರಮದ ಬದುಕು ಸತ್ತಂತೆಯೇ ಎಂದು ನೀವೇ ಹೇಳಿದಿರಿ. ರೂಪದ ಬಗ್ಗೆಯೂ ಹಾಗೆಯೇ ಆಲೋಚಿಸಿ. ಹಳೆಯ ರೂಪ ಜಗತ್ತಿನೆದುರಿಗೆ ಬಂದರೆ ಕೆಲವರು ನಿಮ್ಮತ್ತ ಬೊಟ್ಟು ಮಾಡಿಯಾರು – ಎಂದೆನಿಸುತ್ತದೆ ನನಗೆ. ಹೊಸರೂಪ ಪಡೆದರೆ ನಿಮ್ಮನ್ನು ಯಾರೂ ಗುರುತಿಸಲಾರರು. ಹೊಸ ಮುಖ ನಿಮ್ಮ ವ್ಯಕ್ತಿತ್ವಕ್ಕೆ ಬೇರೆಯದೇ ಮಹತ್ತ್ವ ಪರಿಕಲ್ಪಿಸಲಿ.”
“ಒಪ್ಪತಕ್ಕ ಸಲಹೆಯಿದು. ಕೂಡಲೇ ಈ ಕುರಿತು ಪ್ರಯತ್ನ ಮಾಡುತ್ತೇನೆ. ಈಗ ವಿಜ್ಞಾನದ ಕೆಲಸದ ಬಗ್ಗೆ ಹೇಳಿರಲ್ಲ.”
“ನೀವು ವಿದ್ಯುನ್ಮಾನ ಸಾಗಣೆಯಲ್ಲಿ ಪರಿಣತರು ತಾನೇ. ಪ್ರತಿರೂಪವನ್ನು ಸಾಗಿಸುವ ತಂತ್ರಜ್ಞಾನವನ್ನು ನಮ್ಮ ವಿಜ್ಞಾನಿಗಳಿಗೆ ಮೊದಲು ಕಲಿಸಿಕೊಡಿ.”
“ಆಗಬಹುದು. ಆದರೆ ಇದರಲ್ಲಿ ಚಿಕ್ಕದೊಂದು ತೊಡಕಿದೆ. ಇದಕ್ಕೆ ಸಂಬಂಧಿಸಿದ ಕ್ರಮವಿಧಿ (ಪ್ರೋಗ್ರಾಂ) ಬರೆದವರು ಹಲವರು. ಅವೆಲ್ಲವನ್ನು ಸಂಕಲಿಸಿ ರೂಪುಕೊಟ್ಟವನು ನಾನು. ಆ ಎಲ್ಲ ಕ್ರಮವಿಧಿಗಳ ಪರಿಚಯ ನನಗಿಲ್ಲ. ಬುದ್ಧಿಯನ್ನುಪಯೋಗಿಸಿ ಅದನ್ನೆಲ್ಲ ಬರೆಯಬಹುದಾದರೂ ಅದಕ್ಕೆ ಸಾಕಷ್ಟು ಸಮಯ ಬೇಕು. ಆದರೆ ಅದಕ್ಕೂ ಒಂದು ಒಳದಾರಿಯಿದೆ.”
“ಅದೇನು?”
“ನೀವೊಂದು ಶಕ್ತಿಯುತವಾದ ಕಂಪ್ಯೂಟರನ್ನು ನನಗೆ ಕೊಡಿ. ಅರ್ಧ ದಿನ ಸಮಯಾವಕಾಶವನ್ನು ನೀಡಿ. ಅದರ ನಂತರ ಆ ಒಳದಾರಿ ಯಾವುದೆಂದು ತಿಳಿಸುತ್ತೇನೆ.”
ಡಾ. ಜಗದ್ಧರರ ಅಪೇಕ್ಷೆಯಂತೆ ಪರಮ (ಸೂಪರ್) ಕಂಪ್ಯೂಟರ್ ಒಂದನ್ನು ಅವರಿಗೆ ನೀಡಲಾಯಿತು. ನಾಲ್ಕಾರು ತಾಸು ಕಳೆದ ನಂತರ ಅವರು ಪ್ರಧಾನಿಯವರಿಗೆ ಜಯದ ಸಂಕೇತ ಕಳುಹಿಸಿದರು. ಅದಾದ ಅರ್ಧಗಂಟೆಯಲ್ಲಿ ಪ್ರಧಾನಿಗಳು ಅವರ ಬಳಿ ಬಂದರು.
“ಒಳದಾರಿ ಮುಚ್ಚಿರಲಿಲ್ಲ. ಆದ್ದರಿಂದ ನಿಧಿಯೇ ಸಿಕ್ಕಿತೆನ್ನಬಹುದು. ಇನ್ನು ಭಾರತದ ವಿಜ್ಞಾನಿಗಳಿಗೆ ಜೀವಿಗಳ ವಿದ್ಯುನ್ಮಾನ ಸಾಗಣೆಯ ತಂತ್ರಜ್ಞಾನವನ್ನು ತಿಳಿಯಪಡಿಸುವುದು ಕಷ್ಟದ ಕೆಲಸವಲ್ಲ.”
“ಅದೇನೋ ಒಳದಾರಿಯೆಂದಿರಲ್ಲ. ಅದೇನೆಂದು ಮೊದಲು ವಿವರಿಸಿ.”
“ಇದಕ್ಕೆ ನನ್ನ ಪೂರ್ವಾಶ್ರಮದ ಅನುಭವ ಕೇಳಿಸಬೇಕು. ಈಗೊಂದು ತಿಂಗಳ ಹಿಂದೆ ಗಡಿಪಾರು ಶಿಕ್ಷೆಗೊಳಗಾಗಿ ಅರಿಂದಮ ಘೋಷ ಎಂಬ ವಿಜ್ಞಾನಿ ಭಾರತಕ್ಕೆ ಹಿಂದಿರುಗಿದರಲ್ಲ, ಅದೇಕೆಂದು ನಿಮಗೆ ತಿಳಿದಿದೆಯೇ? ಅವರು ಭಾರತಕ್ಕೆ ಬರುವಾಗ ಯಾವ ಸ್ಥಿತಿಯಲ್ಲಿದ್ದರು ಎಂಬುದರ ಬಗ್ಗೆ ಮಾಹಿತಿಯಿದೆಯೇ?”
“ಇಲ್ಲದೇನು? ಯಾರನ್ನೂ ಗುರುತಿಸಲಾಗದ, ಏನನ್ನೂ ನೆನಪಿಸಿಕೊಳ್ಳಲಾಗದ ಸತ್ತ ಮೆದುಳಿನ ಸ್ಥಿತಿಯಲ್ಲಿ ಅವರನ್ನು ಭಾರತಕ್ಕೆ ಕಳುಹಿಸಲಾಯಿತು. ಇಂದೂ ಅವರು ಅದೇ ಸ್ಥಿತಿಯಲ್ಲಿ ಇದ್ದಾರೆ. ಇದು ಯಾವುದೇ ಖಾಯಿಲೆಯಿಂದ ಬಂದ ಸ್ಥಿತಿಯಲ್ಲ. ಒತ್ತಾಯಪೂರ್ವಕವಾಗಿ ಅವರನ್ನು ಆ ಸ್ಥಿತಿಗೆ ತಳ್ಳಿ ಅವರ ವ್ಯಕ್ತಿತ್ವವನ್ನೇ ಕೊಲ್ಲಲಾಯಿತು. ಮರಣದಂಡನೆಗಿಂತ ಕ್ರೂರವಾದ ಶಿಕ್ಷೆಯಿದು. ಮಾನವತೆ ಮರೆಯಾಗಿದೆ ಇಲ್ಲಿ. ಪೈಶಾಚಿಕತೆ ವಿಜೃಂಭಿಸಿದೆ. ಅವರನ್ನು ನೀವು ಬಲ್ಲಿರೇನು?”
“ಚೆನ್ನಾಗಿ ಬಲ್ಲೆ. ಯಾಕೆಂದರೆ ನಾನು ಪ್ರಮುಖನಾಗಿದ್ದ ಸಂಸ್ಥೆಯಲ್ಲಿ ಅವರೂ ವಿಜ್ಞಾನಿಯಾಗಿದ್ದರು. ಅಸಾಧಾರಣ ಪ್ರತಿಭೆಯುಳ್ಳ ವ್ಯಕ್ತಿತ್ವ ಅವರದು. ಯಾವುದೇ ಸಮಸ್ಯೆಯನ್ನು ಚಿಟಿಕೆ ಹೊಡೆಯುವಷ್ಟರಲ್ಲಿ ಪರಿಹರಿಸಬಲ್ಲರಾಗಿದ್ದರು ಅವರು. ಯಾವುದೇ ಅಪೇಕ್ಷೆಯನ್ನೂ ರಾತ್ರಿ ಬೆಳಗಾಗುವುದರೊಳಗೆ ಪೂರೈಸುವ ಸಾಮರ್ಥ್ಯವಿತ್ತು ಅವರಲ್ಲಿ. ಆದರೆ ಒಂದು ಚಿಕ್ಕ ತಪ್ಪು ಹೊರಬಿದ್ದುದರಿಂದಾಗಿ ಅವರು ಅಂತಹ ಅಮಾನವೀಯ ಶಿಕ್ಷೆಗೆ ಒಳಪಡಬೇಕಾಯಿತು. ಅವರು ಮಾಡಿದ ತಪ್ಪೇನೆನ್ನುತ್ತೀರಾ? ಅಂತಹ ತಪ್ಪನ್ನು ಬೇರೆಯವರೂ ಮಾಡುತ್ತಾರೆ. ಆದರೆ ಅದು ಬೆಳಕಿಗೆ ಬರುವುದೇ ಇಲ್ಲ. ಇವರಾದರೋ ಸಿಕ್ಕಿ ಬಿದ್ದರು.
ಎಲ್ಲ ಮಾಹಿತಿಯನ್ನೂ ಎಲ್ಲ ಉದ್ಯೋಗಿಗಳೂ ಸಂಸ್ಥೆಯ ಸರ್ವರ್ನಲ್ಲೇ ಸಂಗ್ರಹಿಸಿಡಬೇಕು ಎಂದು ಕಂಪೆನಿಗಳಲ್ಲಿ ಕಟ್ಟುನಿಟ್ಟಿನ ನಿಯಮವಿರುತ್ತದೆ. ರಹಸ್ಯ ಹೊರಹೋಗದಂತೆ ಎಚ್ಚರಿಕೆ ವಹಿಸುವುದು ಇದರ ಉದ್ದೇಶ. ಅದಕ್ಕಾಗಿಯೇ ಮಾಹಿತಿ ಸಂಗ್ರಹದ ಸುತ್ತ ಬಲವಾದ ರಕ್ಷಣಾ ಕವಚವನ್ನು ಏರ್ಪಡಿಸಲಾಗುತ್ತದೆ. ಆ ರಕ್ಷಣಾಬೇಲಿಯನ್ನು ದಾಟಿ ಮಾಹಿತಿಯನ್ನು ಬೇರೆಡೆ ಸಂರಕ್ಷಿಸುವುದು ಸುಲಭಸಾಧ್ಯವಲ್ಲ. ಆದರೂ ಹಲವರು ಇದಕ್ಕೆಳಸುತ್ತಾರೆ. ಈ ಉದ್ಯೋಗ ಕೈ ತಪ್ಪಿದರೆ ಊರುಗೋಲೊಂದಿರಲಿ ಎಂದು ಕೆಲವರು ಭಾವಿಸಿದರೆ, ಇನ್ನು ಕೆಲವರು ಗುಟ್ಟಾಗಿ ಪ್ರತಿಸ್ಪರ್ಧಿ ಸಂಸ್ಥೆಗೆ ಮಾರಾಟ ಮಾಡಿ ಅಪಾರ ಹಣ ಸಂಗ್ರಹಿಸುತ್ತಾರೆ. ಆದ್ದರಿಂದಲೇ ಎಲ್ಲ ಸಂಸ್ಥೆಗಳೂ ಮಾಹಿತಿ ಸಂರಕ್ಷಣೆಯ ಬಗ್ಗೆ ಕಠೋರ ನಿಯಮ ಹಾಗೂ ದಂಡನೆಯನ್ನು ವಿಧಿಸುತ್ತವೆ. ಅರಿಂದಮರು ಯಾವುದೋ ಉದ್ದೇಶಕ್ಕಾಗಿ ತಾವು ಶ್ರಮವಹಿಸಿ ಸಿದ್ಧಪಡಿಸಿದ ಕ್ರಮವಿಧಿಗಳ ಮಾಹಿತಿಯನ್ನು ಗುಟ್ಟಾಗಿ ಸ್ವಂತ ಜಾಲತಾಣದಲ್ಲಿಯೂ ಸಂರಕ್ಷಿಸುತ್ತಿದ್ದರು. ಇದು ಎಷ್ಟು ಕಾಲದಿಂದ ನಡೆದಿತ್ತೋ ನಾ ಕಾಣೆ. ಒಂದು ದಿನ ಇದು ಸಂಸ್ಥೆಯ ಹದ್ದಿನ ಕಣ್ಣಿಗೆ ಬಿದ್ದೇ ಬಿತ್ತು. ಕೂಡಲೇ ಅವರನ್ನು ಅಮಾನತುಗೊಳಿಸಿ, ವಿಚಾರಣೆಗೊಳಪಡಿಸಿ, ಅವರು ಕದ್ದು ಸಂರಕ್ಷಿಸಿದ ಎಲ್ಲ ಮಾಹಿತಿಯನ್ನು ನಾಶಮಾಡಿದ್ದಾಯಿತು. ನಂತರ ಮೆದುಳಿಗೆ ಮತ್ತೆಮತ್ತೆ ವಿದ್ಯುದಾಘಾತ ನೀಡುವ ಮೂಲಕ ಅವರ ನೆನಪಿನ ಶಕ್ತಿಯನ್ನೇ ನಾಶಪಡಿಸಿದ್ದಾಯಿತು. ಒಂದು ತಿಂಗಳಿನಷ್ಟು ಕಾಲ ಅವರನ್ನು ಪರೀಕ್ಷಣೆಗೊಳಪಡಿಸಿ ನೆನಪಿನ ಶಕ್ತಿ ಪೂರ್ತಿ ನಾಶವಾಗಿದೆಯೆಂಬುದನ್ನು ಖಚಿತಪಡಿಸಿಕೊಂಡು ಅವರನ್ನು ಗಡಿಪಾರು ಮಾಡಲಾಯಿತು.”
“ಈ ಘಟನೆಗೂ, ನಿಮ್ಮ ಒಳದಾರಿಗೂ ಯಾವ ಸಂಬಂಧ?”
“ಸಂಬಂಧವಿದೆ. ಅದನ್ನೇ ವಿವರಿಸುತ್ತೇನೆ. ನಮ್ಮ ಸಂಸ್ಥೆಯಲ್ಲಿ ಇಂತಹ ಘಟನೆ ಕಳೆದ ಎಂಟು-ಹತ್ತು ವರ್ಷಗಳಲ್ಲಿ ನಾಲ್ಕೆöÊದು ನಡೆದಿವೆ ಎಂಬ ಖಚಿತ ಮಾಹಿತಿ ನನಗೆ ಸಿಕ್ಕಿತು. ಯಾವುದೇ ವ್ಯಕ್ತಿ ಎಂತಹದೇ ಘೋರ ಅಪರಾಧವೆಸಗಿದ್ದರೂ ಇಂತಹ ನರಕಕ್ಕೆ ತಳ್ಳುವ ಪರಿ ಮರಣದಂಡನೆಗಿಂತಲೂ ಕೆಳಮಟ್ಟದ್ದು. ಈ ಶಿಕ್ಷೆಯ ಬಗ್ಗೆ ನನ್ನ ಸಹಮತವಿರಲಿಲ್ಲ. ಇಂತಹ ಘಟನೆ ನಾಲ್ಕಾರು ನಡೆದಿವೆ ಎಂದು ತಿಳಿದ ಮೇಲೆ ಏಕೋ ಏನೋ ನನ್ನಲ್ಲೂ ವಿದ್ರೋಹ ಭಾವನೆ ಮೊಳಕೆಯೊಡೆದು ಹೆಮ್ಮರವಾಯಿತು. ಆದ್ದರಿಂದ ನಾನೂ ಮಾಹಿತಿ ಕದಿಯುವ ನಿರ್ಣಯ ಕೈಗೊಂಡೆ. ಬೀಗ ತಯಾರಿಸುವವನಿಗೆ ಅದನ್ನು ತೆರೆಯುವ ಹಲವು ಬಗೆಗಳ ಬಗ್ಗೆಯೂ ಮಾಹಿತಿಯಿದ್ದೇ ಇರುತ್ತದೆ. ಆದ್ದರಿಂದ ಸಂಸ್ಥೆಯ ಸಂರಕ್ಷಣಾ ಬೇಲಿಯನ್ನು ಜಿಗಿದು ಮಾಹಿತಿ ಬೇರೆಡೆ ಸಂಗ್ರಹಿಸುವ ಕೆಲಸ ನನಗೆ ಕಷ್ಟದ್ದಾಗಿರಲಿಲ್ಲ. ನಾನೇನಾದರೂ ದಂಡನೆಗೊಳಗಾದರೆ ಆ ಎಲ್ಲ ಮಾಹಿತಿಯೂ ನನ್ನ ಆಪ್ತ ಸ್ನೇಹಿತನ ಕೈ ಸೇರುವಂತೆ ನಾನು ವ್ಯವಸ್ಥೆ ಮಾಡಿಕೊಂಡಿದ್ದ. ಈಗ ನಾನು ಪ್ರತಿರೂಪ ಪ್ರಕ್ರಿಯೆಗೊಳಪಟ್ಟು ಪೂರ್ವಜನ್ಮವನ್ನೇ ಕಳೆದುಕೊಂಡವನಾಗಿ ಹೊಸ ವ್ಯಕ್ತಿಯಾಗಿದ್ದಾನೆ. ಇವತ್ತು ನಾನು ಅದೇ ಮಾಹಿತಿಯನ್ನೇ ನೀವು ಕೊಟ್ಟ ಯಂತ್ರದಲ್ಲಿ ಸಂಸ್ಥಾಪಿಸಿದ್ದು. ಕಳ್ಳ ಜಾಗದಲ್ಲಿದ್ದ ಎಲ್ಲ ಮಾಹಿತಿಯನ್ನು ಅಳಿಸಿಹಾಕಿ ಆ ಜಾಗವನ್ನು ಗುಡಿಸಿ ಸಾರಿಸಿದ್ದಾಯಿತು. ಇನ್ನು ಅದು ಬೇರೆಡೆ ಸಾಗಿದೆಯೆಂಬ ಸುಳಿವೂ ಯಾರಿಗೂ ದೊರೆಯದು. ಅದೀಗ ಭಾರತದ ಸ್ವತ್ತು. ಒಂದಿಬ್ಬರು ಸಮರ್ಥ ಜನರನ್ನು ನನಗೆ ಒದಗಿಸಿ. ಕೆಲವೇ ತಿಂಗಳುಗಳಲ್ಲಿ ನಾನು ಜೀವಿ ವಿದ್ಯುನ್ಮಾನ ಸಾಗಣೆಯ ಮಾಹಿತಿಯನ್ನು ಭಾರತದಲ್ಲಿ ಪ್ರತಿಷ್ಠಾಪಿಸಬಲ್ಲೆ.”
“ನೀವು ಸಿಕ್ಕಿದುದು ನಮ್ಮ ಸೌಭಾಗ್ಯ. ನಿಮ್ಮ ಬಳಿ ಮಾಹಿತಿಯ ಕಣಜವೇ ಇರುವುದೂ ಸೌಭಾಗ್ಯವೇ ಸರಿ. ಅರಿಂದಮ ಘೋಷರ ಪ್ರಸ್ತಾಪ ಮಾಡಿದಿರಲ್ಲ. ಅವರ ನೆನಪಿನ ಶಕ್ತಿಯನ್ನೇನಾದರೂ ಮರಳಿ ತರುವಂತಾದಲ್ಲಿ ಅವರು ನಿಮಗೆ ಉಪಯೋಗಕ್ಕೆ ಬಂದಾರೇ?”
“ಅವರು ಭಾರತಕ್ಕಾಗಿ ಕೆಲಸ ಮಾಡುವರೆಂಬ ನಂಬಿಕೆ ನಿಮಗಿದ್ದರೆ ಅವರನ್ನು ಖಂಡಿತ ಬಳಸಿಕೊಳ್ಳಬಹುದಾಗಿತ್ತೇನೋ. ಆದರೆ ಅವರಿಗೆ ನೆನಪಿನ ಶಕ್ತಿಯೇ ಇಲ್ಲವಲ್ಲ!”
“ಅವರ ನೆನಪಿನ ಶಕ್ತಿ ನಾಶವಾದುದರ ಹಿನ್ನೆಲೆ ನನಗೆ ತಿಳಿದದ್ದು ಇವತ್ತೇ. ಇಂತಹವರ ನೆನಪಿನ ಶಕ್ತಿಯನ್ನು ಮತ್ತೆ ಪಡೆಯುವಲ್ಲಿ ದೀಕ್ಷಿತರು ನೆರವಿಗೆ ಬಂದಾರೆನಿಸುತ್ತದೆ. ಯೋಗ ಹಾಗೂ ಸಿದ್ಧಿಗಳು ಮೇಳೈಸುವಂತೆ ಮಾಡಿ ಅವರು ಅಸಾಧ್ಯವಾದುದನ್ನೂ ಸಾಧ್ಯವಾಗಿಸಬಲ್ಲರು. ನಾವೊಮ್ಮೆ ಅವರ ಜೊತೆ ಚರ್ಚಿಸೋಣ” ಎಂದು ಹೇಳಿದ ಪ್ರಧಾನಿಗಳು ಕೂಡಲೇ ಡಾ. ಜಗದ್ಧರರೊಂದಿಗೆ ದೀಕ್ಷಿತರ ಬಳಿ ಸಾಗಿ ಅರಿಂದಮರ ಬಗ್ಗೆ ಎಲ್ಲ ಮಾಹಿತಿ ನೀಡಿ – “ಇವರ ನೆನಪಿನ ಶಕ್ತಿಯನ್ನೇನಾದರೂ ನಾವು ಮರಳಿ ಪಡೆಯಬಲ್ಲೆವೆ?” ಎಂದು ಕೇಳಿದರು.
“ಪ್ರಧಾನಮಂತ್ರಿಗಳೇ! ನೀವು ಆಗಾಗ ತುಂಬ ಕ್ಲಿಷ್ಟ ಸಮಸ್ಯೆಯಲ್ಲಿ ನನ್ನನ್ನು ನೂಕಿ ನಾನು ಪಾಡು ಪಡುವುದನ್ನು ನೋಡಿ ದೂರದಿಂದ ನಗುತ್ತಿರುತ್ತೀರಿ” ಎಂದು ನಗುತ್ತಾ ಹೇಳಿದರು ದೀಕ್ಷಿತರು.
“ಅಂದರೆ ನೆನಪಿನ ಶಕ್ತಿಯನ್ನು ಮರಳಿ ಪಡೆಯುವ ಸಾಧ್ಯತೆಯಿದೆ ಎಂದಾಯ್ತು!” – ಪ್ರಧಾನಮಂತ್ರಿಗಳು ನಗುತ್ತಾ ಹೇಳಿದರು.
“ಸಾಧ್ಯತೆಯಿರುವುದೇನೋ ಹೌದು. ಆದರೆ ನಾನೀವರೆಗೂ ಇಂತಹ ಪ್ರಯತ್ನ ಮಾಡಿಲ್ಲ. ಆದ್ದರಿಂದ ಸಫಲತೆಯ ಬಗ್ಗೆ ಖಚಿತವಾಗಿ ಏನೂ ಹೇಳಲಾರೆ. ಆದರೆ ಪ್ರಯತ್ನ ಮಾಡಲೇನೂ ಅಡ್ಡಿಯಿಲ್ಲ. ಎರಡು-ಮೂರು ತಿಂಗಳ ಹಿಂದಿನ ನೆನಪನ್ನು ಮರಳಿ ತರಬಹುದೆನ್ನಿಸುತ್ತದೆ. ಮುಂದಿನದು ದೊರೆಯದೇನೋ.”
“ನಿಮ್ಮಿಂದ ಇಷ್ಟು ಭರವಸೆ ಸಿಕ್ಕಿದರೆ ಸಾಕು. ನಿಧಿಯೇ ಸಿಕ್ಕಂತಾಗುತ್ತೆ ನಮಗೆ. ಇಂದೇ ಅರಿಂದಮರನ್ನು ಇಲ್ಲಿಗೆ ಕರೆಸಲು ಆದೇಶ ನೀಡುತ್ತೇನೆ. ಒಂದೆರಡು ದಿನಗಳಲ್ಲಿ ಅವರನ್ನಿಲ್ಲಿಗೆ ಕರೆತರಲಾಗುವುದು.”
“ಅವರ ಜೊತೆಗೇ ಅವರನ್ನು ಪರೀಕ್ಷಿಸಿದ ವೈದ್ಯರೂ ಬರಲಿ. ಮೆದುಳಿನಲ್ಲಿ ಹಲವಾರು ನೆನಪಿನ ಕೋಷಗಳಿರುತ್ತವೆ. ಅವುಗಳಲ್ಲಿ ಎಡ-ಬಲಗಳಲ್ಲಿ ಎಷ್ಟು ಕೋಷಗಳಿಗೆ ಹಾನಿಯಾಗಿದೆ ಎಂಬ ಮಾಹಿತಿ ನನಗೆ ಬೇಕು. ಮನೆಮಂದಿಯೂ ಜೊತೆಯಲ್ಲಿ ಬರಲಿ.”
ದೀಕ್ಷಿತರ ಅಪೇಕ್ಷೆಯಂತೆ ಅರಿಂದಮರನ್ನು ಕರೆತರಲಾಯಿತು. ವೈದ್ಯರೂ ಜೊತೆಗೇ ಬಂದರು. ಮನೆ ಮಂದಿಯೂ ಜೊತೆಗಿದ್ದರು. ವೈದ್ಯರು ಹೇಳಿದರು – “ಎಡ ಹಾಗೂ ಬಲ ಭಾಗದ ಎರಡೆರಡು ನೆನಪಿನ ಕೋಷಗಳು ಪೂರ್ತಿ ಹಾಳಾಗಿವೆ.”
“ಮೆದುಳಿನಲ್ಲಿ ಬಳಸದೇ ಇರುವ ಕೋಷಗಳೂ ಹಲವಾರಿರುತ್ತವೆ. ಹಿಂಪಡೆಯುವ ನೆನಪುಗಳನ್ನು ಅವುಗಳಲ್ಲಿ ಶೇಖರಿಸಿಡಬಹುದಾಗಿದೆ” ಎಂದು ಹೇಳಿದ ದೀಕ್ಷಿತರು ಮುಂದಿನ ಕ್ರಿಯಾಕಲಾಪಕ್ಕೆ ಉದ್ಯುಕ್ತರಾದರು.
ಈ ಬಾರಿ ಅವರು ಸ್ವತಃ ತಾವೇ ತೊಡಗಿಕೊಳ್ಳದೆ ಸನಂದನಾಚಾರ್ಯರನ್ನು ದೀಕ್ಷಾಬದ್ಧರನ್ನಾಗಿ ಮಾಡಿ, ಅವರ ಪಕ್ಕದಲ್ಲಿಯೇ ಕುಳಿತು ಹೆಜ್ಜೆಹೆಜ್ಜೆಗೂ ಮಾರ್ಗದರ್ಶನ ಮಾಡಿದರು.
ಅವರ ನಿರೀಕ್ಷೆ ಸುಳ್ಳಾಗಲಿಲ್ಲ. ಅರಿಂದಮ ಘೋಷರು ಮೂರು ತಿಂಗಳ ಹಿಂದಿನ ನೆನಪುಗಳನ್ನು ಮರಳಿ ಪಡೆದುಕೊಂಡರು. ಮಲಗಿದ್ದ ಅವರು ಮೆಲ್ಲಗೆ ಕಣ್ಣು ಬಿಟ್ಟು ಮನೆಮಂದಿಯನ್ನು ಗುರುತಿಸಿದರು. ಅವರ ಮುಖದಲ್ಲಿ ಮುಗುಳುನಗೆ ಮಿನುಗುತ್ತಿತ್ತು. ಇದನ್ನು ಕಂಡ ಎಲ್ಲರೂ ಹಿಮಾಲಯ ಪರ್ವತವನ್ನೇ ಏರಿದಷ್ಟು ಸಂತೋಷ ಪಡೆದರು.
ಪಕ್ಕದಲ್ಲೇ ಇದ್ದ ಡಾ. ಜಗದ್ಧರರನ್ನು ನೋಡಿ – “ಮಾನ್ಯ ಜೇಫರ್ಸನ್ರೇ! ನೀವೂ ಇಲ್ಲೇ ಇದ್ದೀರಾ? ನಾನೆಲ್ಲಿದ್ದೇನೆ? ಅಮೆರಿಕೆಯಲ್ಲಿ ತಾನೆ?” ಎಂದು ಗಲಿಬಿಲಿಯಿಂದ ಕೇಳಿದರು.
“ಈಗ ನೀವಿರುವುದು ಭಾರತದಲ್ಲಿ, ನಮ್ಮೆಲ್ಲರ ಮಧ್ಯೆ. ನಿಮ್ಮ ಕಷ್ಟಗಳು ನೀಗಿದವು. ನೀವು ನೆನಪಿನ ಶಕ್ತಿಯನ್ನೇ ಪೂರ್ತಿ ಕಳೆದುಕೊಂಡು ಜೀವಚ್ಛವವಾಗಿದ್ದಿರಿ ಎಂಬುದೇನಾದರೂ ನೆನಪಿದೆಯೆ?” – ಜಗದ್ಧರರು ಕೇಳಿದರು.
“ನಾನು ನೆನಪಿನ ಶಕ್ತಿಯನ್ನೇ ಕಳೆದುಕೊಂಡಿದ್ದೆನೇ? ನನ್ನ ವಿಚಾರಣೆ ನಡೆಯುತ್ತಿತ್ತಲ್ಲ. ಅದರ ಗತಿಯೇನಾಯಿತು? ಮುಂದಿನದೇನೂ ನನಗೆ ನೆನಪಾಗುತ್ತಿಲ್ಲ.”
“ಮುಂದೆ ನಿಮ್ಮ ನೆನಪಿನ ಶಕ್ತಿಯನ್ನೇ ಅಳಿಸಿ ಹಾಕಿ ನಿಮ್ಮನ್ನು ನರಕಕ್ಕೆ ತಳ್ಳಲಾಯಿತು. ಆದ್ದರಿಂದ ಮುಂದಿನದನ್ನು ನೀವು ಹೇಗೆ ನೆನಪಿಸಿಕೊಂಡಿರಿ?” ಎಂದೆನ್ನುತ್ತ ಡಾ. ಜಗದ್ಧರರು ನಡೆದುದನ್ನೆಲ್ಲ ಸಂಕ್ಷೇಪವಾಗಿ ವಿವರಿಸಿದರು. ತಾವು ಭಾರತಕ್ಕೆ ಬಂದು ಈಗ ಭಾರತದ ಪರವಾಗಿ ಕೆಲಸ ಮಾಡುತ್ತಿರುವುದನ್ನೂ, ಇದೆಲ್ಲವೂ ದೀಕ್ಷಿತರ ಮಹಿಮೆಯಿಂದಾಗಿ ಸಾಧ್ಯವಾಯಿತೆಂದೂ ವಿವರಿಸಿದರು.
“ಅಬ್ಬಬ್ಬ! ಎಷ್ಟೆಲ್ಲ ಘಟನೆಗಳು ನಡೆದುಬಿಟ್ಟಿವೆ ಇತ್ತೀಚೆಗೆ? ಇವೆಲ್ಲವುಗಳ ಹಿನ್ನೆಲೆಯಲ್ಲಿದ್ದು ಅಸಾಧ್ಯವನ್ನೂ ಸಾಧ್ಯ ಮಾಡಿದ ದೀಕ್ಷಿತರೇ! ಇದೋ ನಿಮಗೆ ಸಾಷ್ಟಾಂಗ ನಮಸ್ಕಾರ” ಎನ್ನುತ್ತ ಮಲಗಿದ್ದಲ್ಲಿಂದಲೇ ನಮಿಸಿದರು ಅರಿಂದಮಘೋಷರು.
“ಇದನ್ನೆಲ್ಲ ಮಾಡಿಸಿದ್ದು ಮಾನ್ಯ ಪ್ರಧಾನಿಗಳು. ನಾನೇನಿದ್ದರೂ ಆದೇಶಪಾಲಕ ಮಾತ್ರ” ಎಂದರು ದೀಕ್ಷಿತರು.
“ಅರಿಂದಮರೇ! ನಿಮ್ಮ ನೆನಪಿನ ಶಕ್ತಿ ಮರಳಿದೆ. ಡಾ. ಜಗದ್ಧರರು ಭಾರತದ ಪರವಾಗಿ ಕೆಲಸ ಮಾಡಲು ಸಹರ್ಷವಾಗಿ ಒಪ್ಪಿಕೊಂಡಿದ್ದಾರೆ. ನೀವೂ ಇದೇ ದಾರಿಯಲ್ಲೇ ಸಾಗುವಿರೆಂದು ನಾನು ನಂಬಿದ್ದೇನೆ” – ಪ್ರಧಾನಿಗಳು ಹೇಳಿದರು.
“ಡಾ. ಜಗದ್ಧರರೇ ನಿಮ್ಮ ಪರವಾಗಿದ್ದಾರೆಂದರೆ ನನ್ನ ಬಗ್ಗೆ ಮತ್ತೆ ಹೇಳಬೇಕಾದುದೇನು? ಸತ್ತಂತಿದ್ದ ನನಗೆ ಮರುಜೀವ ಕೊಟ್ಟಿದ್ದು ಈ ದೇಶ. ನಾನು ಈ ನೆಲದಲ್ಲೇ ಹುಟ್ಟಿದವ. ಆದ್ದರಿಂದ ತಾಯ್ನೆಲಕ್ಕಾಗಿ ದುಡಿಯುವುದು ನನ್ನ ಕರ್ತವ್ಯ. ಅದು ನನಗೂ ಹೆಮ್ಮೆಯ ಸಂಗತಿಯೇ. ನಾನೂ ನಿಮ್ಮ ಆದೇಶಪಾಲಕನೇ” – ಅರಿಂದಮರು ಹೇಳಿದರು.
“ಡಾ. ಜಗದ್ಧರರೇ! ನಿಮಗೆ ಯೋಗ್ಯ ಸಹಕಾರಿ ಸಿಕ್ಕಂತಾಯಿತು ತಾನೆ? ಡಾ. ಅಂಕಿತರೂ ನಿಮ್ಮ ಜೊತೆಗಿರುತ್ತಾರೆ. ಕೂಡಲೇ ವಿದ್ಯುನ್ಮಾನ ಸಾಗಣೆಯ ಮೂಲಕ ಜೀವಿಯನ್ನು ವರ್ಗಾಯಿಸುವ ತಂತ್ರಜ್ಞಾನವನ್ನು ಭಾರತದಲ್ಲಿ ವಿಕಸಿತಗೊಳಿಸಲು ತೊಡಗಿಕೊಳ್ಳಿ. ಮುಂದೆ ಅದು ಜನರ ಉಪಯೋಗಕ್ಕೆ ಹೇಗೆ ಬಳಸಬಹುದೆಂದೂ ಆಲೋಚಿಸಿ ಬೇಕಾದ ವ್ಯವಸ್ಥೆಯನ್ನೂ ಅಭಿವೃದ್ಧಿಪಡಿಸಿ. ತರುಣ ವಿಜ್ಞಾನಿಗಳ ಪಡೆಯೊಂದನ್ನು ನಿಮ್ಮ ನೆರವಿಗಾಗಿ ಸಿಗುವಂತೆ ಮಾಡುತ್ತೇನೆ. ಬೇಗನೇ ಸಿಹಿ ಸುದ್ದಿ ನೀಡಿ” ಎಂದರು ಪ್ರಧಾನಮಂತ್ರಿಗಳು.