ಎರಡೂವರೆ ತಿಂಗಳಿನಷ್ಟು ದೀರ್ಘ ಅವಧಿಯಲ್ಲಿ ಹರಡಿಕೊಂಡು ಯಶಸ್ವಿಯಾಗಿ ಮುಗಿದು ಫಲಿತಾಂಶವನ್ನೂ ಹೊರಹಾಕಿರುವ ಈಚಿನ ಸಾರ್ವತ್ರಿಕ ಚುನಾವಣೆಯತ್ತ ಹಿನ್ನೋಟ ಬೀರಿದಲ್ಲಿ ತ್ರಯಸ್ಥವಾಗಿ ಚಿಂತಿಸುವ ಯಾರೂ ವಿಸ್ಮಯಗೊಳ್ಳದಿರಲಾರರು. ಆರೋಪ-ಪ್ರತ್ಯಾರೋಪಗಳು, ಕೇಳರಿಯದ ಆಮಿಷ-ಪ್ರಲೋಭನೆಗಳು, ರಾಡಿಯ ವಿನಿಮಯವೇ ಸಂವಾದಭಾಷೆಯಾಗಿರುವುದು – ಇವೆಲ್ಲ ಹಾಗಿರಲಿ. ಈ ಯಾವವೂ ಚುನಾವಣೆಯ ಪ್ರಕ್ರಿಯೆಯನ್ನು ಶಿಥಿಲಗೊಳಿಸಲಿಲ್ಲ. ಚುನಾವಣೆಯ ಕಲಾಪದ ಗಾತ್ರವೇ ದಿಗ್ಭ್ರಮೆ ತರುವಂತಹದು – ೬೪.೨ ಕೋಟಿಯಷ್ಟು ಅಧಿಕ ಮತದಾರರು: ಎಂದರೆ ಜಿ-೭ ದೇಶಗಳ ಒಟ್ಟು ಮತದಾರರ ಒಂದೂವರೆಪಟ್ಟು; ಯೂರೋಪಿಯನ್ ಒಕ್ಕೂಟದ ಅಷ್ಟೂ ಮತದಾರರ ಎರಡೂವರೆಪಟ್ಟು. ಇದೊಂದು ವಿಶ್ವ ದಾಖಲೆ ಎಂದರೆ ಹೆಚ್ಚು ಹೇಳಿದ ಹಾಗಾಗಲಿಲ್ಲ. ಈ ಗಾತ್ರದ ಚುನಾವಣೆಯ ಪ್ರಕ್ರಿಯೆ ಅಪೇಕ್ಷಿಸುವ ವ್ಯವಸ್ಥೆಯ ಪ್ರಮಾಣವೇ ಕಲ್ಪನಾತೀತ. ಹತ್ತೂವರೆ ಲಕ್ಷ ಮತಗಟ್ಟೆಗಳನ್ನೊಳಗೊಂಡ ಅಗಾಧವಾದ ಈ ಕಟ್ಟಳೆಯನ್ನು ದಕ್ಷತೆಯಿಂದ ನಿರ್ವಹಿಸಿದ ಒಂದೂವರೆ ಕೋಟಿಯಷ್ಟು ಭದ್ರತಾ ಸಿಬ್ಬಂದಿಯೂ, ೬೮,೦೦೦ ಮೇಲ್ವಿಚಾರಣ ತಂಡಗಳೂ ಧನ್ಯವಾದಾರ್ಹರೆಂದು ಹೇಳಲೇಬೇಕು; ಮತ್ತು ಇಡೀ ದೇಶದ ಜನತೆಯಲ್ಲಿ ವ್ಯವಸ್ಥಾನಿಬದ್ಧತೆ ಇದ್ದರಷ್ಟೆ ಈ ಕಲಾಪಸರಣಿ ನಿರಾತಂಕವಾಗಿ ನಡೆದೀತು. ಹೀಗೆ ಚುನಾವಣೆಯಲ್ಲಿ ‘ಗೆದ್ದದ್ದು’ ಸಾಂವಿಧಾನಿಕತೆ ಎಂದರೆ ತಪ್ಪಾಗದು.
ಸಾಂವಿಧಾನಿಕತೆಯ ಗೆಲವು
Month : September-2024 Episode : Author :