ಸ್ಮಾರ್ಟ್ಫೋನ್ ಬಳಕೆದಾರರ ಸಂಖ್ಯೆ ಹೆಚ್ಚುತ್ತಲೇ ಇದೆ. ಅದರ ಜೊತೆ ಮೊಬೈಲ್ ಆಪ್ಗಳ ಸಂಖ್ಯೆ ಕೂಡ ಲೆಕ್ಕವಿಲ್ಲದಷ್ಟು ಬೆಳೆದಿದೆ. ಸುದ್ದಿ ಓದಲು, ಸಂಗೀತ ಕೇಳಲು, ವಿಡಿಯೋ ನೋಡಲು, ಚಾಟ್ ಮಾಡಲು….. ಹೀಗೆ ಹಲವು ಆಪ್ಗಳು ನಿಮ್ಮ ಮೊಬೈಲಿನಲ್ಲಿ ತುಂಬಿರುತ್ತವೆ. ಆಪ್ಗಳ ರಾಶಿಯಿಂದ ಅಗತ್ಯವಿರುವವುಗಳನ್ನು ಹುಡುಕಿ ಹೆಕ್ಕಿಕೊಳ್ಳುವುದೇ ಒಂದು ಕೆಲಸ. ಕೆಲವನ್ನು ನೀವು ಬೇಕೆಂದಾಗ ಅನುಷ್ಠಾಪಿಸಿಕೊಳ್ಳಬಹುದಾಗಿದ್ದು, ಕೆಲವು ಆಪ್ಗಳು ನಿಮ್ಮ ಬಳಿ ರೆಡೀ ಇದ್ದರೆ ಯಾವಾಗಲಾದರೂ ಉಪಯೋಗಕ್ಕೆ ಬರುತ್ತದೆ. ಕೆಲವು ಅಂತಹವುಗಳ ಪರಿಚಯ ಇಲ್ಲಿದೆ.
ಶೇರ್ ಇಟ್
ಮೊಬೈಲಿನಿಂದ ಮೊಬೈಲು-ಕಂಪ್ಯೂಟರುಗಳ ಮಧ್ಯೆ ಮಾಹಿತಿ, ಕಡತಗಳನ್ನು ಕಳುಹಿಸಿಕೊಳ್ಳಲು ಹಲವು ವಿಧಾನಗಳಿವೆ. ಬ್ಲೂಟೂತ್ ಇದಕ್ಕೆ ಸಾಮಾನ್ಯವಾಗಿ ಬಳಸಲ್ಪಡುತ್ತದೆ. ಇಂಟರ್ನೆಟ್ ಮೂಲಕ, ಡಾಟಾ ತಂತಿಗಳ ಮೂಲಕ ಕಳುಹಿಸುವುದೂ ಸಾಮಾನ್ಯ. ಆದರೆ ಅಂತರ್ಜಾಲವಿಲ್ಲದೆಯೂ ವೈಫೈ ಮೂಲಕ ಕಡತಗಳನ್ನು ಕಳುಹಿಕೊಳ್ಳಲು ಶೇರ್ ಇಟ್ ಸಹಕಾರಿ. ನಮಗೆ ಬೇಕಾದ ಫೊಟೋ, ವಿಡಿಯೋಗಳು ಸ್ನೇಹಿತರ ಬಳಿ ಕಂಡರೆ ಶೇರ್ ಇಟ್ ಮೂಲಕ ನಿಮ್ಮದಾಗಿಸಿಕೊಳ್ಳಿ! ನಿಮ್ಮ ಮೊಬೈಲಿನ ವೈಫೈ ಹಾಟ್ ಸ್ಪಾಟ್ ಬಳಸಿ ಮೊಬೈಲನ್ನೇ ಸರ್ವರ್ ಆಗಿ ಬಳಸಿ ಶೇರ್ ಇಟ್ ಕಾರ್ಯ ನಿರ್ವಹಿಸುತ್ತದೆ. ಆಂಡ್ರಾಯ್ಡ್, ಐಫೋನ್, ವಿಂಡೋಸ್ ಮೊಬೈಲ್ ಹಾಗೂ ಡೆಸ್ಕ್ಟಾಪ್ಗಳಲ್ಲಿ ಇದು ಲಭ್ಯವಿದೆ. http://shareit.lenovo.com/
ಕ್ಯಾಮ್ ಸ್ಕ್ಯಾನರ್
ಬರಹಗಳು, ಪತ್ರಗಳು, ಪ್ರಮುಖ ದಾಖಲೆಗಳು, ಪತ್ರಿಕೆಗಳ ಪುಟಗಳು ಹೀಗೆ ಅನೇಕ ಕಡತಗಳನ್ನು ಸ್ಕ್ಯಾನ್ ಮಾಡಿ ಕಂಪ್ಯೂಟರಿನಲ್ಲಿ ಸಂಗ್ರಹಿಸುವ, ಇತರರಿಗೆ ಕಳುಹಿಸುವ, ಸಾಮಾಜಿಕ ತಾಣದಲ್ಲಿ ಹಂಚುವ ಅಗತ್ಯಗಳಿರುತ್ತವೆ. ಸ್ಕ್ಯಾನರ್ ಇಲ್ಲದಿದ್ದರೆ ಮೊಬೈಲಿನಲ್ಲೆ ಫೋಟೋ ತೆಗೆದು ಕಳುಹಿಸುವುದೂ ಇದೆ. ಆದರೆ ಆ ರೀತಿಯ ಫೋಟೋಗಳು ಅಷ್ಟು ಚೆನ್ನಾಗಿ ಕಾಣಿಸುವುದಿಲ್ಲ ಎಂಬುದನ್ನು ನೀವು ಗಮನಿಸಿರಬಹುದು. ನೀವು ನೇರವಾಗಿ ಕ್ಯಾಮರಾವನ್ನು ಹಿಡಿದಿರುವುದಿಲ್ಲ ಮತ್ತು ಚೌಕಟ್ಟಿನ ಹೊರಗಿನ ಭಾಗವನ್ನೂ ಚಿತ್ರ ಆವರಿಸಿಕೊಂಡಿರುತ್ತದೆ. ಕೆಲವೊಮ್ಮೆ ಬೆಳಕು ಹೆಚ್ಚು/ಕಡಮೆಯಿರುತ್ತದೆ, ಚಿತ್ರ ಕಪ್ಪಾಗಿ ಬರುತ್ತದೆ. ಇವುಗಳನ್ನು ಸರಿಪಡಿಸಿ ಸ್ಕ್ಯಾನ್ ಮಾಡಿದಂತೆಯೇ ಕಾಣಿಸುವಂತಾಗಿಸುವ ಆಪ್ – ಕ್ಯಾಮ್ ಸ್ಕ್ಯಾನರ್. ಆಂಡ್ರಾಯ್ಡ್, ಐಫೋನ್, ವಿಂಡೋಸ್ ಫೋನುಗಳಿಗೆ ಲಭ್ಯ. camscanner.com
ಆಫ್ಟರ್ ಫೋಕಸ್
ನೀವು ಚೆನ್ನಾಗಿರುವ ಫೋಟೋಗಳನ್ನು ತೆಗೆಯುತ್ತೀರಿ. ಆದರೆ ದುಬಾರಿ ಕ್ಯಾಮರಾಗಳಲ್ಲಿರುವಂತೆ ಒಂದು ವಸ್ತುವನ್ನೇ ಫೋಕಸ್ ಮಾಡುವ ಅವಕಾಶ ಮೊಬೈಲ್ ಕ್ಯಾಮರಾಗಳಲ್ಲಿರುವುದಿಲ್ಲ. ಮೊಬೈಲ್ ಫೋನುಗಳ ಗಾತ್ರದಿಂದಾಗಿ ದೊಡ್ಡ ಲೆನ್ಸುಗಳನ್ನು ಅಳವಡಿಸುವುದು ಸಾಧ್ಯವಿಲ್ಲ. ಚಿತ್ರ ತೆಗೆದ ನಂತರ ಅದರಲ್ಲಿರುವ ಒಂದು ವಸ್ತುವನ್ನು ಫೋಕಸ್ ಮಾಡಿ ಹಿನ್ನೆಲೆಯನ್ನು ಮಸುಕಾಗಿಸಿ ಚಿತ್ರವನ್ನು ಚೆನ್ನಾಗಿ ಕಾಣುವಂತೆ ಮಾಡುತ್ತದೆ, ಈ ಆಪ್. ಹಿನ್ನೆಲೆಯನ್ನು ಕಪ್ಪು-ಬಿಳುಪು ಮಾಡುವುದು ಸೇರಿದಂತೆ ಹಲವು ರೀತಿಯ ಆಕರ್ಷಕ ಫಿಲ್ಟರ್ ಅವಕಾಶಗಳು ಇದರಲ್ಲಿವೆ. ಒಮ್ಮೆ ಬಳಸಿ ನೋಡಿ.
ಏರ್ಡ್ರೋಯ್ಡ್
ನೀವು ಕಂಪ್ಯೂಟರ್ ಮುಂದೆಯೇ ಇರುತ್ತೀರಿ. ನಿಮ್ಮ ಹಲವು ಮಾಹಿತಿ, ಕಡತಗಳು ಮೊಬೈಲಿನಲ್ಲಿರುತ್ತದೆ. ಆದರೆ ಕಂಪ್ಯೂಟರಿನಲ್ಲಿ ಸುಲಭ – ಮೊಬೈಲಿನಲ್ಲಿ ಕಷ್ಟವಾಗಿರುವ ಕೆಲವು ಕೆಲಸಗಳನ್ನು ನಿಮ್ಮ ಕಡತ ಅಲ್ಲಿರುವ ಕಾರಣ ಮೊಬೈಲಲ್ಲೇ ಮಾಡಬೇಕಾಗಿರುತ್ತದೆ. ಇನ್ನು ಎಸ್ಎಂಎಸ್ ಕಳಿಸುವುದು, ಕಂಪ್ಯೂಟರ್ ಕೀಬೋರ್ಡಿನಲ್ಲಿ ಟೈಪಿಸುವಂತಿದ್ದರೆ ಎಷ್ಟು ಸುಲಭ ಅಲ್ಲವೆ? ಪ್ರತಿಯೊಂದು ನೋಟಿಫಿಕೇಶನ್ಗಳು ಬಂದಾಗಲೂ ಮೊಬೈಲಿನತ್ತ ಮುಖ ತಿರುಗಿಸಬೇಕಾಗುತ್ತದೆ. ಇದಕ್ಕೆಲ್ಲ ಪರಿಹಾರ ಏರ್ ಡ್ರೋಯ್ಡ್ ಆಪ್. airdroid.com
ಕಾಂಟಾಕ್ಟ್ ಪ್ಲಸ್
ನಿಮ್ಮ ಸಂಪರ್ಕದಲ್ಲಿರುವವರ ಮೊಬೈಲ್ ನಂಬರ್, ಈಮೈಲ್ ಇತ್ಯಾದಿಗಳನ್ನು ಮೊಬೈಲಲ್ಲಿ ಬರೆದಿಡುತ್ತೀರಿ. ಆದರೆ ಫೇಸ್ಬುಕ್, ಟ್ವಿಟ್ಟರ್ ಖಾತೆಗಳು, ವಾಟ್ಸಾಪ್ ಇತ್ಯಾದಿ ಖಾತೆಗಳಲ್ಲಿರುವ ಸಂಪರ್ಕವನ್ನು ಜೊತೆಗೆ ಸೇರಿಸಿ, ಅವರ ಪ್ರೊಫ಼ೈಲ್ ಚಿತ್ರಗಳನ್ನೂ ಅವರ ಸಂಪರ್ಕದ ಜೊತೆಗೆ ಲಗತ್ತಿಸುವ ಆಪ್ ಕಾಂಟಾಕ್ಟ್ ಪ್ಲಸ್. ನೀವು ಪದೇ ಪದೇ ಸಂಪರ್ಕಿಸುವವರ ಸಂಪರ್ಕವನ್ನು ಮೊದಲು ತೋರಿಸುವುದು, ಉತ್ತಮ ವಿನ್ಯಾಸ ಇದರ ಉಪಯೋಗಗಳು. ಕರೆ ಚರಿತ್ರೆ, ಎಸ್ಎಂಎಸ್ ಎಲ್ಲವೂ ಒಂದೇ ಆಪ್ ಮೂಲಕ ನಿರ್ವಹಿಸಬಹುದು. ಬ್ಯಾಕಪ್ ಸೌಲಭ್ಯವೂ ಇದೆ. ಇಂತಹ ಆಪ್ ಬೇಕಿದ್ದರೆ contactspls.com ನಿಂದ ಪಡೆದುಕೊಳ್ಳಿ. ನಿಮ್ಮ ಮೊಬೈಲಲ್ಲಿರುವ ಸಂಪರ್ಕಗಳ ಹುಡುಕಾಟ ವಿಧಾನ ಚೆನ್ನಾಗಿಲ್ಲವಾಗಿದ್ದರೆ ಇದು ಖಂಡಿತಾ ನಿಮಗೆ ಇಷ್ಟವಾಗಬಹುದು.
ಗೂಗಲ್ ಕೀಪ್
ನಿಮ್ಮ ಮೊಬೈಲಲ್ಲಿ ನೋಟ್ಪುಸ್ತಕದಂತ ಬಳಸಬಹುದಾದ ಆಪ್ ಈಗಾಗಲೇ ಇರಬಹುದು. ಆದರೂ ಗೂಗಲ್ ಕೀಪ್ ಒಮ್ಮೆ ಬಳಸಿ ನೋಡಿ. ನೀವು ಬರೆದ ನೋಟ್ಸ್, ಪಟ್ಟಿ, ಫೊಟೋಗಳನ್ನು ನಿರ್ವಹಿಸಲು ಇದು ಅತ್ಯುತ್ತಮ ಆಪ್. ಅತ್ಯಂತ ಸರಳ ಆಯ್ಕೆಗಳು, ನೀವು ಬರೆಯುತ್ತಿದ್ದಂತೆ ಸೇವ್ ಆಗುವುದಲ್ಲದೆ, ಆನ್-ಲೈನ್ನಲ್ಲಿ ಕೂಡ ಇದರ ಪ್ರತಿ ಸೇವ್ ಆಗುತ್ತದೆ. ನೀವು ಕಂಪ್ಯೂಟರಿನಲ್ಲಿ ನೋಟ್ ಬರೆದು ಮೊಬೈಲಿನಲ್ಲಿ ಅದನ್ನು ಬಳಸಬಹುದು. ಮೊಬೈಲ್ ಬದಲಾಯಿಸಿದರೂ ನಿಮ್ಮ ನೋಟ್ ಹಾಗೇ ಇರುತ್ತದೆ. keep.google.com
ಟೆಕ್ ಸುದ್ದಿ
- ಡಿಜಿಟಲ್ ಇಂಡಿಯಾ ಯೋಜನೆಯ ಭಾಗವಾಗಿ ರೈಲುನಿಲ್ದಾಣಗಳಲ್ಲಿ ವೈಫೈ ಇಂಟರ್ನೆಟ್ ಹಾಗೂ ಗೂಗಲ್ ಮ್ಯಾಪಿನಲ್ಲಿ ರೈಲು ವೇಳಾಪಟ್ಟಿಗಳನ್ನು ನೀಡುವ ಸೌಲಭ್ಯ ಗೂಗಲ್ ಆರಂಭಿಸಿದೆ. ಆರಂಭದಲ್ಲಿ ಕೆಲವು ರೈಲು ನಿಲ್ದಾಣಗಳಲ್ಲಿ ಈ ವ್ಯವಸ್ಥೆ ಇರಲಿದೆ.
ನಿಮ್ಮ ವಾಟ್ಸಾಪ್ ಹರಟೆ, ಚರ್ಚೆ, ಚಿತ್ರಗಳೆಲ್ಲವನ್ನು ನೀವು ಮೊಬೈಲ್ ಬದಲಿಸಿದಾಗ/ ಕಳೆದುಕೊಂಡಾಗ ಸುರಕ್ಷಿತವಾಗಿ ಮತ್ತೆ ಪಡೆಯಬೇಕೆ? ಇದಕ್ಕಾಗಿ ಗೂಗಲ್ ಡ್ರೈವ್ ಮೂಲಕ ಬ್ಯಾಕಪ್ ಮಾಡುವ ಸೌಲಭ್ಯವನ್ನು ಈಗ ವಾಟ್ಸಾಪ್ ನೀಡುತ್ತಿದೆ. ಸೆಟ್ಟಿಂಗ್ಸ್->ಚಾಟ್ಸ್ ಮತ್ತು ಕಾಲ್ಸ್ ಹೋಗಿ ನೋಡಿ, ನಿಮಗೆ ಈ ಸೌಲಭ್ಯ ದೊರೆತಿದ್ದರೆ ಅಲ್ಲಿ ಬ್ಯಾಕಪ್ ಚಾಟ್ಸ್ ಎಂಬ ಅವಕಾಶವಿರುತ್ತದೆ.