ಅಮೆರಿಕದ ಜನತೆ ಪ್ರಚೋದಕ ಘೋಷಣೆಗಳಲ್ಲಿ ರಮಿಸುವ ಟ್ರಂಪ್ರನ್ನು ಬೆಂಬಲಿಸುತ್ತಾರೆಯೆ ಅಥವಾ ಮುತ್ಸದ್ದಿತನವನ್ನುಳಿಸಿಕೊಂಡಿರುವ ಹಿಲರಿ ಕ್ಲಿಂಟನ್ರ ಬಗೆಗೆ ಒಲುಮೆ ತೋರುತ್ತಾರೆಯೆ?
ಈಚಿನ ಯುಗದಲ್ಲಿ ಜಗತ್ತಿನ ಸನ್ನಿವೇಶ ಎಷ್ಟು ಸಂಕೀರ್ಣವಾಗಿದೆಯೆಂದರೆ ಯಾವ ದೇಶವೂ ಅನ್ಯದೇಶ ವಿದ್ಯಮಾನಗಳ ಪ್ರಭಾವವನ್ನು ನಿವಾರಿಸಿಕೊಳ್ಳುವುದು ದುಷ್ಕರ. ಕೆಲವು ವಾರಗಳ ಹಿಂದೆ ಯೂರೋಪ್ ಒಕ್ಕೂಟದಿಂದ ಇಂಗ್ಲೆಂಡ್ ವಿಚ್ಛೇದಗೊಂಡಿತು. ಪ್ರಮುಖ ಯೂರೋಪ್ ದೇಶಗಳೊಡನೆ ಭಾರತದ ವಾಣಿಜ್ಯ ನಂಟಸ್ತಿಕೆ ಇದೆ. ಹೀಗೆ ಯೂರೋಪಿನ ಒಳಗಿನ ವಿದ್ಯಮಾನಗಳು ಭಾರತದ ಆರ್ಥಿಕತೆಯ ಮೇಲೆ ಪರಿಣಾಮ ಬೀರುವ ಸಂಭವ ತಪ್ಪಿದ್ದಲ್ಲ. ಅದರಂತೆ ಬರುವ ನವೆಂಬರ್ ತಿಂಗಳಿನಲ್ಲಿ ನಡೆಯಲಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಪರಿಣಾಮವನ್ನು ಭಾರತವೂ ಆಸಕ್ತಿಯಿಂದ ಎದುರುನೋಡಬೇಕಾಗಿದೆ. ಹಲವು ದೇಶಗಳೊಡನೆ ಭಾರತಕ್ಕೆ ಇರುವ ಸಂಬಂಧಗಳ ಮೇಲೂ ಅಮೆರಿಕದಲ್ಲಿನ ಚುನಾವಣೆ ಪರಿಣಾಮ ಬೀರೀತು. ಅದು ಹೇಗಾದರಾಗಲಿ; ಈ ಸಲದ ಅಮೆರಿಕ ಚುನಾವಣೆ ಹಲವು ವೈಚಿತ್ರ್ಯಗಳಿಂದ ಕೂಡಿದೆ. ಇಬ್ಬರು ಪ್ರಮುಖ ಅಭ್ಯರ್ಥಿಗಳ ನಿಲುಮೆಗಳು ಎರಡು ಧ್ರುವಗಳಷ್ಟು ಭಿನ್ನವಾಗಿವೆ.
“ಅಧಃಪಾತದ ಸನ್ನಿವೇಶ ಇದ್ದರೂ ಯಾರಾದರೊಬ್ಬರನ್ನು ಆಯ್ಕೆ ಮಾಡಲೇಬೇಕಾದ ಅನಿವಾರ್ಯತೆಯಂತೂ ಅಮೆರಿಕದ ಜನತೆಯ ಮುಂದಿದೆ. ಅಮೆರಿಕ-ಸ್ಥಿತ ವಲಸಿಗ ಭಾರತೀಯರು ತಾಟಸ್ಥ್ಯವಹಿಸದೆ ಚುನಾವಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡರೆ ಮುಂದಿನ ದಿನಗಳಲ್ಲಿ ‘ಲಾಬಿಯಿಂಗ್’ಗಾದರೂ ಸ್ವಲ್ಪ ಅನುಕೂಲವಾದೀತೆಂಬ ಅನಿಸಿಕೆ ಇದೆ.
ಅಮೆರಿಕದಲ್ಲಿ ಇರುವ ಪ್ರಮುಖ ರಾಜಕೀಯ ಪಕ್ಷಗಳು ಎರಡು. ಅವುಗಳಲ್ಲಿ ಅಧ್ಯಕ್ಷಸ್ಥಾನಕ್ಕೆ ಉಮೇದುವಾರರಾಗಿರುವವರು ರಿಪಬ್ಲಿಕನ್ ಪಕ್ಷದಿಂದ ಡೊನಾಲ್ಡ್ ಟ್ರಂಪ್; ಡೆಮೊಕ್ರ್ಯಾಟಿಕ್ ಪಕ್ಷದ ಅಭ್ಯರ್ಥಿಯಾಗಿರುವವರು ಮಾಜಿ ಅಧ್ಯಕ್ಷನ ಪತ್ನಿ ಹಿಲರಿ ಕ್ಲಿಂಟನ್. ಈ ಇಬ್ಬರಲ್ಲಿ ಯಾರು ವಿಜಯ ಗಳಿಸಿದರೂ ಅಮೆರಿಕದ ರಾಜಕೀಯದಲ್ಲಿ ತೀವ್ರ ಸಂಚಲನೆ ಉಂಟಾಗಲಿದೆ.
ದ್ವೈಧ; ಅಭದ್ರತೆ
ಅಮೆರಿಕದ ಜನತೆಯ ಮುಂದೆ ಇರುವ ದ್ವೈಧ ಇದು: ಹಿಲರಿ ಕ್ಲಿಂಟನ್ರನ್ನು ಆಯ್ಕೆ ಮಾಡಿದರೆ ಮೊತ್ತಮೊದಲಬಾರಿಗೆ ಅಮೆರಿಕದ ಸರ್ವೋಚ್ಚಸ್ಥಾನಕ್ಕೆ ಮಹಿಳೆಯೊಬ್ಬರನ್ನು ಆರಿಸಿದಂತೆ ಆಗುತ್ತದೆ. ಮಹಿಳೆಯೊಬ್ಬಳು ಅಮೆರಿಕದ ಇತಿಹಾಸದಲ್ಲಿಯೆ ಇದುವರೆಗೆ ಅಧ್ಯಕ್ಷ ಪದವಿಯನ್ನು ಅಲಂಕರಿಸಿಲ್ಲ; ಉಪಾಧ್ಯಕ್ಷ ಸ್ಥಾನಕ್ಕೆ ಕೂಡ ಹಿಂದೆಂದೂ ಮಹಿಳೆ ಆಯ್ಕೆಗೊಂಡ ನಿದರ್ಶನವಿಲ್ಲ. ಬಹಳವೆಂದರೆ ರಾಜ್ಯದ ಗವರ್ನರ್ ಸ್ಥಾನದವರೆಗಷ್ಟೆಈ ಹಿಂದೆ ಮಹಿಳಾ ಅಭ್ಯರ್ಥಿಗಳು ತಲಪಿದ್ದರು. ಇನ್ನೊಂದು ಸನ್ನಿವೇಶವೂ ಇದೆ. ಹಿಂದಿನ ಎರಡೂ ಚುನಾವಣೆಗಳಲ್ಲಿ ಡೆಮೊಕ್ರ್ಯಾಟಿಕ್ ಪಕ್ಷದ ಬರಾಕ್ ಒಬಾಮಾ ಆಯ್ಕೆಗೊಂಡಿದ್ದಾರೆ. ಈಗ ಮೂರನೇ ಬಾರಿಯೂ ಅದೇ ಪಕ್ಷವನ್ನು ಅಧಿಕಾರಕ್ಕೆ ತರುವುದು ಅಭೂತಪೂರ್ವವೆನಿಸುತ್ತದೆ.
ಮೇಲಣ ತಾತ್ತ್ವಿಕತೆಗಳಿಗಿಂತ ಹೆಚ್ಚಾಗಿ ಚರ್ಚೆಗೆ ಗ್ರಾಸವಾಗಿರುವುದು ಅಭ್ಯರ್ಥಿಗಳ ಅರ್ಹತೆಯ ವಿಷಯ. ಹಿಲರಿ ಕ್ಲಿಂಟನ್ ಮುತ್ಸದ್ದಿ; ಡೊನಾಲ್ಡ್ ಟ್ರಂಪ್ ಅಪ್ರಬುದ್ಧ.
ಅಸಾಮಾನ್ಯ ಪ್ರತಿಷ್ಠೆಯನ್ನೂ ದೂರದೃಷ್ಟಿಯನ್ನೂ ಉಳ್ಳ ಅಧ್ಯಕ್ಷರನ್ನು ಅಮೆರಿಕ ಕಂಡು ದಶಕಗಳೇ ಆಗಿವೆ. ಈಗಲಾದರೋ ಧನಬಲ, ಸೇನಾಬಲ – ಇವಷ್ಟು ಅಮೆರಿಕದ ಹಿರಿಯಣ್ಣನ ಸ್ಥಾನವನ್ನು ಉಳಿಸಿವೆ. ಈ ಹಿನ್ನೆಲೆಯಲ್ಲಿ ಅಧ್ಯಕ್ಷ ಚುನಾವಣೆಯ ಬಗೆಗೆ ಅಮೆರಿಕದ ಪ್ರಜೆಗಳು ಉತ್ಸಾಹಿತಗೊಳ್ಳುವಂತೇನೂ ಇಲ್ಲ. ಅಲ್ಲದೆ ತೀವ್ರ ನಿರುದ್ಯೋಗ ಮತ್ತು ಮುಗಿಲೆತ್ತರದ ಸಾಲ – ಇವೂ ಪ್ರಜೆಗಳನ್ನು ಆತಂಕಗೊಳಿಸಿವೆ; ಇದರಿಂದಾಗಿ ಇಡೀ ಜನತೆಯಲ್ಲಿ ಅಭದ್ರತೆಯ ಭಾವನೆ ತುಂಬಿದೆ. ಮುಸ್ಲಿಂ ಭಯೋತ್ಪಾದಕರಿಂದ ಇತ್ತೀಚೆಗೆ ಆರ್ಲೆಂಡೊ ಪ್ರಾಂತದಲ್ಲಿ ನಡೆದ ಹತ್ಯಾಕಾಂಡ ಜನತೆಯನ್ನು ಇನ್ನಷ್ಟುಅಸ್ವಸ್ಥಗೊಳಿಸಿದೆ. ಶಂಕಿತರನೇಕರು ಅಮೆರಿಕದಲ್ಲಿ ವಿಧ್ಯುಕ್ತವಾಗಿ ಪರವಾನಗಿ ಪಡೆದು ನೆಲಸಿದ್ದವರು – ಎಂಬ ಸಂಗತಿಯು ಅಭದ್ರತೆಯ ಭಾವನೆಯನ್ನು ಹೆಚ್ಚಿಸಿದೆ. ಈ ಹಿನ್ನೆಲೆಯಲ್ಲಿ ಸದ್ಯಃ ನಡೆಯಲಿರುವ ಚುನಾವಣೆ ಮಹತ್ತ್ವವನ್ನು ಪಡೆದಿದೆ.
ಅಭ್ಯರ್ಥಿಗಳು
ಕಣದಲ್ಲಿರುವ ಇಬ್ಬರು ಅಭ್ಯರ್ಥಿಗಳನ್ನು ಹೋಲಿಸುವಂತೆಯೆ ಇಲ್ಲ. ಡೆಮೊಕ್ರ್ಯಾಟಿಕ್ ಪಕ್ಷದ ಹಿಲರಿ ಕ್ಲಿಂಟನ್ ಒಳ್ಳೆಯ ಹೆಸರು ಪಡೆದ ನ್ಯಾಯವಾದಿ; ವರ್ಷಗಳುದ್ದಕ್ಕೂ ಮಹಿಳೆಯರ ಹಕ್ಕುಗಳ ಸ್ಥಾಪನೆಗಾಗಿ ಶ್ರಮಿಸಿದ್ದಾರೆ; ವರ್ಣಭೇದ ಮೊದಲಾದ ವಿಕೃತಿಗಳಿಗೆ ಪ್ರಬಲ ವಿರೋಧವನ್ನು ವ್ಯಕ್ತಪಡಿಸುತ್ತಬಂದಿದ್ದಾರೆ. ಎಂಟು ವರ್ಷ ಅಧ್ಯಕ್ಷರಾಗಿದ್ದ ಬಿಲ್ ಕ್ಲಿಂಟನ್ರವರ ಭಾರ್ಯೆಯಾದುದರಿಂದ ಶ್ವೇತಭವನದ ಕಾರುಬಾರುಗಳು ಆಕೆಗೆ ಕರತಲಾಮಲಕ. ಸಾಂಸದರಾಗಿಯೂ (ಸೆನೇಟರ್) ಒಳ್ಳೆಯ ಹೆಸರನ್ನು ಪಡೆದಿದ್ದಾರೆ. ಹೀಗೆ ಅರ್ಹತೆಯನ್ನು ಪರಿಗಣಿಸುವುದಾದರೆ ಹಿಲರಿ ಕ್ಲಿಂಟನ್ ಆಯ್ಕೆಗೆ ಅರ್ಹರಾದವರೆಂಬುದು ಮೇಲ್ನೋಟಕ್ಕೇ ತಿಳಿಯುತ್ತದೆ.
ಪ್ರತಿಸ್ಪರ್ಧಿಯಾಗಿರುವ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಅವರಿಗಾದರೋ ಸಕ್ರಿಯ ರಾಜಕಾರಣದ ಅನುಭವ ಇಲ್ಲ. ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿ ಅಪಾರ ಹಣ ಮಾಡಿರುವವರು, ಹಿಂದಿನ ಎಲ್ಲ ರಾಜಕೀಯ ಪಕ್ಷಗಳಿಗೂ ಉದಾರ ದೇಣಿಗೆಗಳನ್ನು ಕೊಡುತ್ತಬಂದವರು – ಇದಿಷ್ಟೆ ಅವರ ವ್ಯಕ್ತಿಪರಿಚಯ. ಕುತೂಹಲಕರ ಅಂಶವೆಂದರೆ ಹಿಂದೆ ಹಿಲರಿ ಕ್ಲಿಂಟನ್ ಅಧ್ಯಕ್ಷಪದವಿಯ ಅಭ್ಯರ್ಥನೆಯನ್ನು ಪ್ರಕಟಿಸಿದ್ದಾಗ ಅದಕ್ಕೆ ಡೊನಾಲ್ಡ್ ಟ್ರಂಪ್ ಅವರೇ ಸಮರ್ಥನೆ ನೀಡಿದ್ದರು; ’ಇವರು ಒಬಾಮಾ ಅವರಿಗಿಂತ ಸಮರ್ಥ ಅಧ್ಯಕ್ಷರೆನಿಸುತ್ತಾರೆ’ ಎಂದೆಲ್ಲ ಹೇಳಿದ್ದರು. ತಾವು ಹೇಗೆ ಇದ್ದಕ್ಕಿದ್ದಂತೆ ರಿಪಬ್ಲಿಕನ್ ಪಕ್ಷದ ಉಮೇದುವಾರರಾದರೆಂಬುದಕ್ಕೆ ಅವರಿಂದ ಯಾವ ವಿವರಣೆಯೂ ಲಬ್ಧವಿಲ್ಲ. ಆದರೂ ಅಲ್ಪಕಾಲದಲ್ಲಿ ಡೊನಾಲ್ಡ್ ಟ್ರಂಪ್ ಅತ್ಯಧಿಕ ಪ್ರಚಾರವನ್ನೂ ಜನಬೆಂಬಲವನ್ನೂ ಗಳಿಸಿರುವುದು ಒಂದು ಕೌತುಕವೇ ಎನ್ನಬೇಕು – ಭಾರತದಲ್ಲಿ ಕೇಜ್ರಿವಾಲ್ ದಿಢೀರನೆ ನಾಯಕರಾಗಿ ಹೊಮ್ಮಿದಂತೆ.
ಅಮೆರಿಕದ ಜನತೆಯಲ್ಲಿಯೂ ಅನ್ಯದೇಶಗಳಲ್ಲಿಯೂ ಹೆಚ್ಚಿನ ಚಿಂತೆಗೆ ಕಾರಣವಾಗಿರುವುದು ಟ್ರಂಪ್ ಸಾರಿರುವ ನಿಲವುಗಳು. ಎಂತಹ ಅತಾರ್ಕಿಕ ಘೋಷಣೆಗಳನ್ನಾದರೂ ಮಾಡಿ ಮತಗಳನ್ನು ಗಳಿಸಿ ಗದ್ದಿಗೆಗೇರುವುದು ಜಗತ್ತಿನಲ್ಲಿ ವಿರಳ ಸಂಗತಿಯೇನಲ್ಲ – ಎಂಬುದೇ ಆತಂಕಕ್ಕೆ ಕಾರಣವಾಗಿರುವುದು. ಟ್ರಂಪ್ ವ್ಯಕ್ತಪಡಿಸಿರುವ ಹಲವಾರು ಅಭಿಪ್ರಾಯಗಳು ಇದುವರೆಗಿನ ಅಮೆರಿಕದ ಸ್ವೀಕೃತ ಧೋರಣೆಗಳಿಗೆ ವಿರುದ್ಧದಿಕ್ಕಿನವಾಗಿವೆ. ಅವರ ಒಂದೆರಡು ಹೇಳಿಕೆಗಳನ್ನು ಸ್ಮರಿಸಿದರೆ ಪರ್ಯಾಪ್ತವಾದೀತು. ಐವತ್ತು ವ?ಗಳಿಂದ ಯುದ್ಧಸಂಬಂಧಿತ ವ್ಯವಹಾರಗಳಿಗೆ ಮಾರ್ಗದರ್ಶಕ ಸ್ಥಾನದಲ್ಲಿರುವ ನೇಟೋ (ನಾರ್ಥ್ ಅಟ್ಲಾಂಟಿಕ್ ಟ್ರೀಟಿ ಆರ್ಗಾನಿಸೇಶನ್) ಸದಸ್ಯತ್ವದಿಂದ ಅಮೆರಿಕಕ್ಕೆ ಏನೇನೂ ಪ್ರಯೋಜನವಾಗಿಲ್ಲವೆಂದೂ ನೇಟೋದಿಂದ ಇತರ ದೇಶಗಳಿಗೇ ಹೆಚ್ಚಿನ ಪ್ರಯೋಜನವಾಗಿದೆಯೆಂದೂ ಅಮೆರಿಕ ನೇಟೋ ವೇದಿಕೆಯಿಂದ ಹೊರಬರುವುದು ಮೇಲೆಂದೂ ಟ್ರಂಪ್ ಅಂಬೋಣ.
ಯುವಕರ ಉದ್ಯೋಗಗಳು ಕೈಬಿಟ್ಟುಹೋಗುತ್ತಿರುವುದನ್ನು ನಿವಾರಿಸುವುದಾಗಿ ಟ್ರಂಪ್ ಘೋಷಿಸಿದ್ದಾರೆ. ಇದಕ್ಕೆ ಪೂರಕವಾಗಿ ವೀಸಾ ರಹದಾರಿ ನಿಬಂಧನೆಗಳನ್ನು ಹೆಚ್ಚು ಬಿಗಿಗೊಳಿಸುವೆ ಎಂದಿದ್ದಾರೆ; ತಾತ್ಕಾಲಿಕ ವೀಸಾ ನೀಡಿಕೆಯನ್ನು ರದ್ದುಪಡಿಸುವೆನೆಂದೇ ಸಾರಿದ್ದಾರೆ. ಎಂದರೆ ’ಅಮೆರಿಕದ ಉದ್ಯೋಗಗಳು ಅಮೆರಿಕನ್ನರಿಗೇ’ ಎಂದು ಸೂತ್ರೀಕರಿಸಿದ್ದಾರೆ. ತಮ್ಮ ಈ ನಿಲವನ್ನು ಸ್ಪಷ್ಟೀಕರಿಸುವಲ್ಲಿ ಭಾರತೀಯರನ್ನು ಧಾರಾಳವಾಗಿಯೇ ಅಣಕಿಸಿ ಲೇವಡಿ ಮಾಡಿದ್ದಾರೆ.
ವಿವಾದಾಸ್ಪದ ನಿಲವುಗಳು
ಮುಸ್ಲಿಮರ ಬಗೆಗಂತೂ ಟ್ರಂಪ್ ತೀವ್ರ ಅಸಹನೆಯನ್ನು ವ್ಯಕ್ತಪಡಿಸಿದ್ದಾರೆ. ಮುಸ್ಲಿಮರು ಅಮೆರಿಕಕ್ಕೆ ಮಗ್ಗುಲ ಮುಳ್ಳು ಆಗಿದ್ದಾರೆ – ಎಂದಿರುವುದಲ್ಲದೆ ಅಮೆರಿಕದೊಳಕ್ಕೆ ಮುಸ್ಲಿಮರ ಪ್ರವೇಶವನ್ನು ತಡೆಗಟ್ಟುವುದಾಗಿಯೂ ಅಮೆರಿಕದಲ್ಲಿ ಈಗಾಗಲೇ ಇರುವ ಪ್ರತಿಯೊಬ್ಬ ಮುಸ್ಲಿಮನನ್ನೂ ಪ್ರಮಾದಕರ ವ್ಯಕ್ತಿಯಾಗಿ ಪರಿಗಣಿಸಿ ಸ್ಕ್ರೀನಿಂಗ್ಗೆ ಒಳಪಡಿಸುವುದಾಗಿಯೂ ಸಾರಿದ್ದಾರೆ.
ಇಂದಿನ ಜಗತ್ತಿನಲ್ಲಿ ಜನಾಂಗೀಯ ಭಾವನೆಗಳು ಕಾಲಬಾಹ್ಯ ಎಂದು ಇರಿಸಿಕೊಂಡರೂ ಡೊನಾಲ್ಡ್ ಟ್ರಂಪ್ರವರ ಈ ಅಭಿಪ್ರಾಯಗಳಿಗೆ ಮೌನವಾಗಿ ಸಮ್ಮತಿಸುವ ಅಗಾಧ ಪ್ರಮಾಣದ ಜನವರ್ಗಗಳು ಇರುವವೆಂಬುದನ್ನು ಅಲ್ಲಗಳೆಯಲಾಗದು.
ಈ ವಸ್ತುಸ್ಥಿತಿಯಿಂದಾಗಿಯೇ ಪ್ರಸಾರಮಾಧ್ಯಮಗಳಲ್ಲಿ ಟ್ರಂಪ್ ಬೆಂಬಲಿಗರ ಪ್ರಮಾಣ ಬೆಳೆಯುತ್ತಹೋಗಿರುವುದು. ಭಾರತದಲ್ಲಿ ಬಂಗ್ಲಾದೇಶಿಗರಿರುವಂತೆ ಅಮೆರಿಕದಲ್ಲಿ ಅತ್ಯಧಿಕ ಪ್ರಮಾಣದ ಮೆಕ್ಸಿಕನ್ ಅಕ್ರಮಪ್ರವೇಶಿಗರು ಹರಡಿರುವುದು ಜನತೆಯಲ್ಲಿ ಅಸಮಾಧಾನವನ್ನು ಹರಡಿದೆ ಎಂಬುದನ್ನೂ ಮರೆಯುವಂತಿಲ್ಲ.
ಟ್ರಂಪ್ರವರ ವಿವಾದಾಸ್ಪದ ಹೇಳಿಕೆಗಳಿಗೆ ಅಲ್ಲಲ್ಲಿ ಪ್ರತಿಭಟನೆಗಳೂ ನಡೆದಿವೆ. `ನೀವು ಯಾವಾಗ ಅಮೆರಿಕ ಬಿಟ್ಟು ಹೋಗುತ್ತೀರಿ?’ ಎಂದು ಅಮೆರಿಕದ ಮೂಲನಿವಾಸಿಗಳಾದ ರೆಡ್ಇಂಡಿಯನರು ಮೂದಲಿಸುತ್ತಿರುವ ಚಿತ್ರಗಳು ಪ್ರಮುಖ ನಗರಗಳಲ್ಲಿ ವ್ಯಾಪಕವಾಗಿ ಪ್ರಸಾರಗೊಂಡಿವೆ.
ಏನೇ ಆದರೂ – ಅವರ ನಿಲುಮೆಗಳು ಎಷ್ಟು ಅತಾರ್ಕಿಕವೆನಿಸಿದರೂ – ಟ್ರಂಪ್ರವರ ಹೆಚ್ಚುತ್ತಿರುವ ಜನಬೆಂಬಲದ ಪ್ರವಾಹವನ್ನು ತಡೆಯಲಾದೀತೆ ಎಂಬುದು ಯಕ್ಷಪ್ರಶ್ನೆಯಾಗಿಯೆ ಉಳಿದಿದೆ. ಇನ್ನೊಂದುಕಡೆ ಹಿಲರಿ ಕ್ಲಿಂಟನ್ ಮಹಿಳೆಯೆಂಬ ಕಾರಣದಿಂದ ಬೆಂಬಲವನ್ನು ಆಕರ್ಷಿಸುವ ಸೂಚನೆಗಳೂ ಕಾಣುತ್ತಿಲ್ಲ. ರೂಢಿಗತ ಚುನಾವಣಾ ವಿನ್ಯಾಸ ಹಿನ್ನೆಲೆಯೂ ಆಕೆಗೆ ಅನುಕೂಲಕರವಾಗಿಲ್ಲ. ಹೀಗೆ ಸದ್ಯಕ್ಕಂತೂ – ಕಾರಣಗಳೇನೇ ಇರಲಿ – ಟ್ರಂಪ್ರವರ ಅಕಾಂಡ ತಾಂಡವದ್ದೇ ಮೇಲುಗೈ ಆದಂತಿದೆ.
ಆರ್ಥಿಕಾದಿ ಕ್ಷೇತ್ರಗಳ ಪ್ರತಿಷ್ಟೆಯೂ ಅಮೆರಿಕದ ಪಾಲಿಗೆ ಈಗ ಉಳಿದಿದೆಯೆನಿಸುತ್ತಿಲ್ಲ.
ದೊಂಬರಾಟ
ಅಧಃಪಾತದ ಸನ್ನಿವೇಶ ಇದ್ದರೂ ಯಾರಾದರೊಬ್ಬರನ್ನು ಆಯ್ಕೆ ಮಾಡಲೇಬೇಕಾದ ಅನಿವಾರ್ಯತೆಯಂತೂ ಅಮೆರಿಕದ ಜನತೆಯ ಮುಂದಿದೆ. ಅಮೆರಿಕ-ಸ್ಥಿತ ವಲಸಿಗ ಭಾರತೀಯರು ತಾಟಸ್ಥ್ಯವಹಿಸದೆ ಚುನಾವಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡರೆ ಮುಂದಿನ ದಿನಗಳಲ್ಲಿ `ಲಾಬಿಯಿಂಗ್’ಗಾದರೂ ಸ್ವಲ್ಪ ಅನುಕೂಲವಾದೀತೆಂಬ ಅನಿಸಿಕೆ ಇದೆ. ಒಟ್ಟಿನಮೇಲೆ ಈ ಚುನಾವಣೆಯ ಫಲಿತಕ್ಕಾಗಿ ಕುತೂಹಲದಿಂದ ಎದುರುನೋಡುವಂತಾಗಿದೆ.
ಮುಸ್ಲಿಮರು ಅಮೆರಿಕ ಪ್ರವೇಶಿಸುವುದನ್ನು ನಿಷೇಧಿಸಬೇಕು ಎಂಬ ಟ್ರಂಪ್ ಘೋಷಣೆಗೆ ಕೆಲವೇ ತಿಂಗಳ ಹಿಂದೆ ಅಸಮ್ಮತಿ ಸೂಚಿಸಿದ್ದ ಮೈಕೆಲ್ ಪೆನ್ಸ್ರವರನ್ನೇ ಟ್ರಂಪ್ ಈಗ ತಮ್ಮ ಅನುವರ್ತಿಯಾಗಿ ಎಂದರೆ ಉಪಾಧ್ಯಕ್ಷ ಅಭ್ಯರ್ಥಿಯಾಗಿ ಆಯ್ಕೆ ಮಾಡಿದ್ದಾರೆ. ಒಂದೊಮ್ಮೆ ಡೆಮೊಕ್ರ್ಯಾಟಿಕ್ ಪಕ್ಷದ ಬೆಂಬಲಿಗರಾಗಿದ್ದ ಪೆನ್ಸ್ ಈಗ ಟ್ರಂಪ್ ಧೋರಣೆಯನ್ನು ಸಮರ್ಥಿಸುತ್ತಿದ್ದಾರೆ.
ಹಿಲರಿ ಕ್ಲಿಂಟನ್ ತಮ್ಮ ಅನುವರ್ತಿಯಾಗಿ ಆಯ್ಕೆ ಮಾಡಿರುವ ಟಿಮೋತಿ ಕೇಯ್ನ್ ಮಧ್ಯಮಮಾರ್ಗಿಗಳೆಂದೂ ಭಾರತಪಕ್ಷಪಾತಿಗಳೆಂದೂ ಗಣಿಸಲ್ಪಟ್ಟವರು.
ಎರಡು ಪಕ್ಷಗಳ ಉಪಾಧ್ಯಕ್ಷಸ್ಥಾನಾಕಾಂಕ್ಷಿಗಳೂ ಮುಕ್ತ ಮಾರುಕಟ್ಟೆಯ ಸಮರ್ಥಕರು; ಇಸ್ರೇಲ್ನ ಪ್ರಬಲ ಬೆಂಬಲಿಗರು.
ಅಮೆರಿಕದ ಜನತೆ ಪ್ರಚೋದಕ ಘೋಷಣೆಗಳಲ್ಲಿ ರಮಿಸುವ ಟ್ರಂಪ್ರನ್ನು ಬೆಂಬಲಿಸುತ್ತಾರೆಯೆ ಅಥವಾ ಮುತ್ಸದ್ದಿತನವನ್ನುಳಿಸಿಕೊಂಡಿರುವ ಹಿಲರಿ ಕ್ಲಿಂಟನ್ರ ಬಗೆಗೆ ಒಲುಮೆ ತೋರುತ್ತಾರೆಯೆ ಎಂಬುದನ್ನು ಕಾದು ನೋಡಬೇಕಾಗಿದೆ.