ದಿನವು ಬಾಂದಳದಲ್ಲಿ ಗರಿಬಿಚ್ಚಿ ಹಾರಾಡಿ
ಮರಳಿ ಮನೆಗೈತರುವೆ ಗೆಳೆಯ ಬಾನಾಡಿ ||
ಇರು, ನಿನ್ನ ಸಂಗಡವೆ ಬರುವೆ ನಾ ಪಯಣಿಗನೆ
ಎನಗು ಹಾರಲು ಕಲಿಸು ಒಲಿದು ಜತೆಗೂಡಿ ||
ಭುವಿಯ ಪರಿಧಿಯ ಮೀರಿ ನಭದ ಏಣಿಯನೇರಿ
ಇಳೆಯ ಸೌಂದರ್ಯವನು ಸವಿವ ಮನದಣಿಯೆ||
ಮೋಡದಲೆಗಳ ಮೇಲೆ ಮೋದದಲಿ ತೇಲಾಡಿ
ಜೋಡಿ ಹಕ್ಕಿಗಳಾಗಿ ನಲಿವ ಮೈಮರೆಯೆ||
ಹೊಳೆವ ಸೂರ್ಯನ ಕಿರಣಗಳಿಗೆ ಮೈಯೊಡ್ಡುತಲಿ
ಪಯಣಗೈವ ನಾವು ಗಗನದೊಳು ಸಾಗಿ||
ಭವದ ಸಂಕ?ಗಳ, ದುಗುಡ ದುಮ್ಮಾನಗಳ
ಕ್ಷಣಮರೆತು ಹಾಯಾಗಿ ಇರುವ ಜೊತೆಯಾಗಿ||
ವಿಧಿಯ ಕೈಯೊಳು ನಾವು ಬರಿಯ ಗಾಳಿಪಟವು
ಹಿಡಿದ ಸೂತ್ರವು ಹರಿಯೆ ಪತನ ನೆಲತನಕ||
ಎರಡು ದಿನವೀ ಬಾಳು ಸರದಿಯೊಳು ಸುಖದುಃಖ
ಅರಿತು ಬದುಕುವ, ಜವನ ಕರೆಬರುವ ತನಕ||
ಬಾನಾಡಿ
Month : September-2017 Episode : Author : ಜಯರಾಮ ರೈ ಕುಂಜಾಡಿ