ಹಲವು ರೀತಿಯ ಕರೆನ್ಸಿಗಳು ಜಗತ್ತಿನಲ್ಲಿ ಚಲಾವಣೆಯಲ್ಲಿವೆ. ಬಹುತೇಕ ರಾಷ್ಟ್ರಗಳು/ಒಕ್ಕೂಟಗಳು ತಮ್ಮದೇ ಕರೆನ್ಸಿ ಹೊಂದಿದ್ದರೆ, ಚಿನ್ನ, ಬೆಳ್ಳಿ ಸೇರಿದಂತೆ ಹಲವು ಬೆಲೆಬಾಳುವ ಪದಾರ್ಥಗಳನ್ನು ಹಣವಾಗಿ ಬಳಸುವುದು, ಸಂಪತ್ತಿನ ಶೇಖರಣೆಗೆ ಬಳಸುವುದೂ ಇದೆ. ಎಲ್ಲಾ ಕರೆನ್ಸಿಗಳೂ ಒಂದಲ್ಲ ಒಂದು ದೇಶದ ನಿಯಂತ್ರಣದಲ್ಲಿವೆ. ಆದರೆ ಯಾರ ನಿಯಂತ್ರಣದಲ್ಲೂ ಇಲ್ಲದ, ನಾಣ್ಯ/ಕಾಗದ/ವಸ್ತುವಿನ ಸ್ವರೂಪದಲ್ಲಿರದೆ ಸಂಕೇತಾಕ್ಷರಗಳ ಡಿಜಿಟಲ್ ಸ್ವರೂಪ ಹೊಂದಿದ ಅದೃಶ್ಯ ಕರೆನ್ಸಿಯೊಂದು ಈಗ ಸದ್ದು ಮಾಡುತ್ತಿದೆ. ಉಳಿದೆಲ್ಲ ತಂತ್ರಜ್ಞಾನಗಳಲ್ಲಿ ಕ್ರಾಂತಿಯಾದಂತೆ ಕರೆನ್ಸಿಕ್ರಾಂತಿಯನ್ನು ತರಲು ಹೊರಟಿರುವ ಇಂಟರ್ನೆಟ್ ದುಡ್ಡು ಈ ಬಿಟ್ ಕಾಯಿನ್.
ಚಿನ್ನ, ಬೆಳ್ಳಿಯ ಗಣಿಗಾರಿಕೆ ವೆಚ್ಚದಾಯಕ ಮತ್ತು ಪೂರೈಕೆ ಸೀಮಿತ. ಈ ಕಾರಣಕ್ಕೆ ಸಾಮಾನ್ಯವಾಗಿ ಅವುಗಳ ಬೇಡಿಕೆ ಇದ್ದೇ ಇರುತ್ತದೆ. ಅದರ ಬೆಲೆಯ ಏರುಪೇರುಗಳಿಂದಾಗಿ ಹಲವರು ಹೂಡಿಕೆಗಾಗಿ ಅದನ್ನು ಬಳಸುತ್ತಾರೆ. ಕರೆನ್ಸಿಗಳ ಬೆಲೆ ಕುಸಿತವಾದಾಗಲೆಲ್ಲ ಚಿನ್ನಕ್ಕೆ ಬೇಡಿಕೆ ಹೆಚ್ಚುತ್ತದೆ. ಏಕೆಂದರೆ ಚಿನ್ನ ಯಾವುದೇ ಬ್ಯಾಂಕ್/ಸರಕಾರಗಳ ನಿಯಂತ್ರಣದಲ್ಲಿಲ್ಲ.
ಬಿಟ್ ಕಾಯಿನ್ ಇದೇ ಮಾದರಿಯ ಪ್ರೇರಣೆ ಪಡೆದ ಇಂಟರ್ನೆಟ್ ಕರೆನ್ಸಿ. ಇದು ಕೆಲವು ಕಂಪ್ಯೂಟರ್ ಆಧಾರಿತ ಸಂಕೇತಗಳನ್ನು ಹೊಂದಿರುವ ಅಗೋಚರ ಸ್ವರೂಪವನ್ನು ಹೊಂದಿದೆ. ಇದರ ವಿಶೇ?ತೆಗಳೆಂದರೆ ಇದಕ್ಕೆ ಯಾವುದೇ ಕೇಂದ್ರೀಕೃತ ನಿಯಂತ್ರಣ ವ್ಯವಸ್ಥೆಯಿಲ್ಲ. ಗಣಿತದ ಒಂದು ಸಂಕೀರ್ಣ ಸಮಸ್ಯೆಯನ್ನು ಬಿಡಿಸುವ ಮೂಲಕ ಈ ಕಾಯಿನ್ಗಳನ್ನು ಉತ್ಪಾದಿಸಲಾಗುತ್ತದೆ. ಇದಕ್ಕೆ ದೈತ್ಯ ಕಂಪ್ಯೂಟರುಗಳೇ ಬೇಕಾಗುತ್ತದೆ. ಯಾರು ಬೇಕಾದರೂ ತಮ್ಮ ಕಂಪ್ಯೂಟರ್ ಸಾಮರ್ಥ್ಯವನ್ನು ಇದಕ್ಕೆ ಬಳಸಬಹುದು. ಮೊದಮೊದಲು ಸಾಮಾನ್ಯ ಕಂಪ್ಯೂಟರುಗಳಲ್ಲೇ ಬಿಟ್ ಕಾಯಿನ್ ಮೈನಿಂಗ್ ಸಾಧ್ಯವಾಗುತ್ತಿತ್ತು. ಆದರೆ ಆ ಗಣಿತ ಸಿದ್ಧಾಂತ ಹೆಚ್ಚು ಬಿಟ್ ಕಾಯಿನ್ ಸಿಕ್ಕಿದಂತೆ ಕಠಿಣವಾಗುತ್ತಾ ಸಾಗುತ್ತದೆ. ಈಗ ಬಿಟ್ ಕಾಯಿನ್ ಗಣಿಗಾರಿಕೆಗೆ ಭಾರೀ ಸಾಮರ್ಥ್ಯವುಳ್ಳ ಸೂಪರ್ ಕಂಪ್ಯೂಟರುಗಳು ಹಾಗೂ ತುಂಬಾ ವಿದ್ಯುತ್ ಖರ್ಚಾಗುತ್ತದೆ. ಇದು ಸುಲಭದಲ್ಲಿ ಬಿಟ್ ಕಾಯಿನ್ ಮೈನಿಂಗ್ ಮಾಡುವುದನ್ನು ತಡೆಯುತ್ತದೆ ಹಾಗೂ ಬೇಕೋಬಿಟ್ಟಿ ಬಿಟ್ ಕಾಯಿನ್ ಹುಡುಕಿ ಮಾರುವುದನ್ನು ತಡೆಯುತ್ತದೆ.
ಇನ್ನು ಕೇಂದ್ರೀಕೃತ ವ್ಯವಸ್ಥೆಯಿಲ್ಲದ ಈ ಡಿಜಿಟಲ್ ಕರೆನ್ಸಿಯ ವ್ಯವಹಾರ ಎಲ್ಲಿ ಶೇಖರಣೆಯಾಗುತ್ತದೆ ಮತ್ತು ವ್ಯವಹಾರದ ದೃಢತೆ ಹೇಗಾಗುತ್ತದೆ ಎಂಬ ಪ್ರಶ್ನೆ ನಿಮಗೆ ಮೂಡಿರಬಹುದು. ಕಾಯಿನ್ ಹುಡುಕಾಟ ನಡೆಸುವ ಸಾವಿರಾರು ಕಂಪ್ಯೂಟರುಗಳಲ್ಲೇ ಇದೂ ನಡೆಯುತ್ತವೆ. ಒಂದೇ ಜಾಗದಲ್ಲಿ ಮಾಹಿತಿ ಇದ್ದು ಸುರಕ್ಷತೆಗೆ ಅಡ್ಡಬರುವ ಬದಲು ಹಲವು ಕಡೆ ಈ ಲೆಕ್ಕಾಚಾರಗಳು ಏಕಕಾಲಕ್ಕೆ ನಡೆಯುವಂತಹ ಸಂಕೀರ್ಣ ಮತ್ತು ಸುರಕ್ಷಿತ ವ್ಯವಸ್ಥೆ ಇದರಲ್ಲಿದೆ. ಒಂದೇ ದುಡ್ಡನ್ನು ಹಲವರಿಗೆ ನೀಡಿಲ್ಲ ಎಂಬ ದೃಢೀಕರಣ, ಹಣ ವರ್ಗಾವಣೆಯ ವಿವರವೆಲ್ಲವೂ ಭೇದಿಸಲಾಗದ ಯಂತ್ರಭಾ?ಯಲ್ಲಿ ವಿನಿಮಯವಾಗುತ್ತದೆ. ನಿಮ್ಮ ಬಳಿಯಿರುವ ಬಿಟ್ ಕಾಯಿನ್ ತಂತ್ರಾಂಶದ ಮೂಲಕ ನಿಮ್ಮ ಡಿಜಿಟಲ್ ಜೇಬಿನಲ್ಲಿರುವ ದುಡ್ಡನ್ನು ಇತರರಿಗೆ ವರ್ಗಾಯಿಸಬಹುದು.
ಬಿಟ್ ಕಾಯಿನ್ ಜನಕ
ಬಿಟ್ ಕಾಯಿನನ್ನು ಮೊದಲು ಪರಿಚಯಿಸಿದವರು ಸತೋಶಿ ನಾಗಮೋಟೊ ಎಂದು ಕರೆಸಿಕೊಳ್ಳುವ ಅಜ್ಞಾತ ವ್ಯಕ್ತಿ. ಜಪಾನೀ ಹೆಸರುಗಳಂತೆ ಹೋಲುವ ಈ ಹೆಸರಿನಲ್ಲಿ ಪ್ರಕಟವಾದ ವೈಜ್ಞಾನಿಕ ಪ್ರಬಂಧವೊಂದು ಈ ಗುಪ್ತಕರೆನ್ಸಿಯ ಮೂಲ. ಎಲ್ಲೂ ತನ್ನ ಹೆಸರನ್ನು ಬಿಟ್ಟುಕೊಡದ ಈ ವ್ಯಕ್ತಿ/ ಗುಂಪು, ಅದರ ಮೂಲ ತಂತ್ರಾಂಶವನ್ನೂ ಅಭಿವೃದ್ಧಿಪಡಿಸಿ ಮುಕ್ತವಾಗಿ ನೀಡಿದೆ. ಅನೇಕ ಬಿಟ್ ಕಾಯಿನ್ ಬೆಂಬಲಿಗರು ಅದನ್ನು ಇನ್ನಷ್ಟು ಅಭಿವೃದ್ಧಿಪಡಿಸಿದ್ದಾರೆ.
ಭಾರತದಲ್ಲಿ
ಸರಕಾರ ಇದುವರೆಗೆ ಬಿಟ್ ಕಾಯಿನ್ ಬಗ್ಗೆ ಅಧಿಕೃತ ನಿರ್ಧಾರ ತಳೆದಿಲ್ಲವಾದ್ದರಿಂದ ಬಿಟ್ ಕಾಯಿನ್ ವ್ಯವಹಾರದ ಬಗ್ಗೆ ಇದುವರೆಗೆ ಯಾವುದೇ ಕಾನೂನು ಇಲ್ಲ. ಆದರೆ ಬಿಟ್ ಕಾಯಿನ್ ಬಳಸಿ ಹವಾಲಾ, ಹಣ ಪರಿವರ್ತನೆ, ಕಾನೂನುಬಾಹಿರ ವ್ಯವಹಾರಗಳಿಗೆ ಇದರ ಬಳಕೆಯ ನಿಯಂತ್ರಣಕ್ಕೆ ತಕ್ಕ ಕಾನೂನಿನ, ನಿಯಂತ್ರಣ ವ್ಯವಸ್ಥೆಯ ಅಗತ್ಯ ಇದೆ.
ಇದೇ ವೇಳೆ, ಬಿಟ್ ಕಾಯಿನ್ ರೀತಿಯಲ್ಲಿಯೇ ಕಾರ್ಯನಿರ್ವಹಿಸುವ ಸ್ವದೇಶೀ ಕರೆನ್ಸಿಯೊಂದನ್ನು ಪರಿಚಯಿಸುವ ಯೋಜನೆ ಸರಕಾರದ ಮುಂದಿದೆ ಎಂಬ ಸುದ್ದಿಯೂ ಹರಿದಾಡುತ್ತಿದೆ. ಲಕ್ಷ್ಮೀ ಎಂಬ ಹೆಸರು ಇದಕ್ಕಿರಲಿದೆಯಂತೆ.
ಬಿಟ್ ಕಾಯಿನ್ ಮಾದರಿಯಲ್ಲೇ ಅನೇಕ ಕರೆನ್ಸಿಗಳು ಜಾಗತಿಕವಾಗಿ ಈಗಾಗಲೇ ಬಂದಿವೆ. ಎಲ್ಲವೂ ತಮ್ಮದೇ ಆದ ವೈಶಿಷ್ಟ್ಯಗಳನ್ನು ಹೊಂದಿವೆ. ಎಥೆರಿಯಮ್, ಲೈಟ್ಕಾಯಿನ್, ರಿಪ್ಪಲ್ ಮುಂತಾದವು.
ಬೆಲೆ ಎಷ್ಟು?
೨೦೧೧ರಲ್ಲಿ ೧ ಅಮೆರಿಕನ್ ಡಾಲರ್ ಅಥವಾ ೪೫ ರೂಪಾಯಿಯಷ್ಟಿದ್ದ ಬಿಟ್ ಕಾಯಿನ್ ಬೆಲೆ ಈ ಲೇಖನ ಬರೆಯುವಾಗ ೪೦೦೦ ಡಾಲರ್/೨,೬೦,೦೦೦ ರುಪಾಯಿಯವರೆಗೆ ಏರಿದೆ. ನೀವು ಓದುವ ವೇಳೆಗೆ ಇದು ೧ ಲಕ್ಷಕ್ಕೆ ಇಳಿದಿರಲೂಬಹುದು, ೫ ಲಕ್ಷಕ್ಕೆ ಏರಿರಲೂಬಹುದು. ಅಷ್ಟೊಂದು ಬದಲಾವಣೆ ಇದರ ಬೆಲೆಯಲ್ಲಿ ಆಗುತ್ತಿರುತ್ತದೆ. ಇದರ ಬೆಲೆ ಎರಡು ತಿಂಗಳ ಹಿಂದೆ ಮತ್ತೆ ಹೆಚ್ಚು ಅಂದರೆ ಮೂರೂವರೆ ಲಕ್ಷದ ಆಸುಪಾಸಿನವರೆಗೆ ಏರಿತ್ತು.
ಬಿಟ್ಕಾಯಿನ್ ಮಾರುಕಟ್ಟೆ
ಷೇರುಪೇಟೆ, ವಿದೇಶೀ ವಿನಿಮಯ ಮಾರುಕಟ್ಟೆಗಳಂತೆ ಬಿಟ್ ಕಾಯಿನ್ ಖರೀದಿ, ಮಾರಾಟದಲ್ಲಿ ತೊಡಗಿಕೊಳ್ಳುವುದು ಹೊಸ ವ್ಯವಹಾರವಾಗಿ ರೂಪುಗೊಂಡಿದೆ. ಬಿಟ್ ಕಾಯಿನ್ ಖರೀದಿ, ಮಾರಾಟಕ್ಕೆ ಹಲವು ವೆಬ್ಸೈಟ್, ಮೊಬೈಲ್ಆಪ್ ಆರಂಭವಾಗಿವೆ. ಭಾರತದಲ್ಲೂ ಹಲವು ಕಂಪೆನಿಗಳು ಇದಕ್ಕೆ ಡಿಜಿಟಲ್ ಮಾರುಕಟ್ಟೆಗಳನ್ನು ಒದಗಿಸುತ್ತವೆ. ಇಲ್ಲಿ ಷೇರು ವ್ಯವಹಾರದಂತೆ ರೂಪಾಯಿಯನ್ನು, ಡಾಲರನ್ನು ಕೊಟ್ಟು ಬಿಟ್ ಕಾಯಿನ್ ಖರೀದಿಸಬಹುದು, ಮಾರಬಹುದು. ಆದರೆ ಬಿಟ್ ಕಾಯಿನ್ ಬೆಲೆ ವಿಪರೀತ ಏರಿಳಿತವಾಗುವ ಕಾರಣದಿಂದ ಇಲ್ಲಿ ವಿನಿಯೋಗಿಸದ ಹಣವೆಲ್ಲವನ್ನೂ ಕಳೆದುಕೊಳ್ಳುವ ಸಾಧ್ಯತೆಯೂ ಇದೆ, ಸಾಕಷ್ಟು ಸಂಪಾದಿಸುವ ಅವಕಾಶವೂ ಇದೆ. ನೀವು ಈ ವ್ಯವಹಾರದಲ್ಲಿ ತೊಡಗುವುದಾದರೆ ಈ ಎಚ್ಚರಿಕೆ ಹಾಗೂ ತಿಳಿವಳಿಕೆ ಅತ್ಯಗತ್ಯ.