ನಮ್ಮ ಬದುಕು

ಊರದೇವರ ಮುಂದೆ

ಉರುಳು ಸೇವೆಯ ಮಾಡಿ

ಉಸಿರು ನೀಡಿದ

ಹೆತ್ತೊಡಲ ಮರೆತು ಬದುಕುತಲಿಹೆವು…

ಮದ್ದು ಹುಡುಕುತಲಿ

ಹತ್ತೂರ ಔಷಧಿಯ ನುಂಗಿ

ಹಿತ್ತಲ ಗಿಡವನು ಕಿತ್ತೊಗೆದು

ಬದುಕುತಲಿಹೆವು….

ಊರ ದಾರಿಯ ತುಂಬ

ಬೀದಿ ದೀಪವನುರಿಸಿ

ಮನೆಯ ಬಾಗಿಲ ಹಾಕಿ ಕತ್ತಲೆಯಲಿ

ಬದುಕುತಲಿಹೆವು….

ಪಂಡಿತನು ನಾನೆಂದು

ಪುಸ್ತಕವ ತೆರೆದೋದಿ

ಅಹಂಕಾರದ ಆಸ್ತಿ ಗಳಿಸಿ

ಬದುಕುತಲಿಹೆವು….

ದೈವ ಭಕ್ತನು ಎಂದು

ಹರಕೆ, ಕಾಣಿಕೆ ಹಾಕಿ

ಮನೆ ಬಾಗಿಲಲಿ ನಿಂತ ಜಂಗಮಗೆ ಬೈದು

ಬದುಕುತಲಿಹೆವು….

Facebook
X
WhatsApp
Print
Email