ಸಾಮಾನ್ಯ ದಿನವೊಂದನ್ನು ಕಲ್ಪಿಸಿಕೊಳ್ಳಿ. ಆಚೆ ರಸ್ತೆಯ ದರ್ಶಿನಿಯಲ್ಲಿ ಕಾಫಿ ಕುಡಿದವರು ಯುಪಿಐ ಮೂಲಕ ಹಣ ಪಾವತಿಸುತ್ತಾರೆ. ಪಕ್ಕದ ಅಂಗಡಿಯಲ್ಲಿ ಕುಳಿತವರು ಮಾರಿದ ವಸ್ತುಗಳಿಗೆ ರಸೀದಿ ಹರಿಯುತ್ತಾರೆ. ಊರಿಗೆ ಹೋಗುವವರು ಟಿಕೇಟು ಖರೀದಿಸುತ್ತಾರೆ. ವಾಹನ ಚಾಲಕರು ಟೋಲ್ ಗೇಟುಗಳನ್ನು ದಾಟಿ ಹೋಗುತ್ತಾರೆ. ಕಚೇರಿಗೋ ಕಾಲೇಜಿಗೋ ಹೋದವರು ಯಾವುದೋ ವಿಷಯವನ್ನು ಇಂಟರ್ನೆಟ್ಟಿನಲ್ಲಿ ಹುಡುಕುತ್ತಾರೆ. ಎಲ್ಲರೂ ಆನ್ಲೈನ್ ಶಾಪಿಂಗ್ ಮಾಡುತ್ತಾರೆ, ಸೋಶಿಯಲ್ ಮೀಡಿಯಾ ನೋಡುತ್ತಾರೆ.
ನಾವು ದಿನವೂ ನೋಡುವ ಇಂತಹ ಪ್ರತಿ ಸಂಗತಿಯ ಬೆನ್ನಲ್ಲೂ ಇನ್ನೊಂದು ವಿದ್ಯಮಾನ ಜರುಗುತ್ತದೆ – ಭೌತಿಕ ಜಗತ್ತಿನಲ್ಲಿ ನಡೆದ ಘಟನೆಯ ವಿವರಗಳು ಕಂಪ್ಯೂಟರಿನೊಳಗೆ ಸೇರಿ ಡಿಜಿಟಲ್ ಜಗತ್ತನ್ನು ತಲಪುತ್ತವೆ!
ಕಂಪ್ಯೂಟರಿನಲ್ಲಿ ಸಂಸ್ಕರಿಸಲು ಸಾಧ್ಯವಾಗುವ ರೂಪದಲ್ಲಿ ಸಂಗ್ರಹಿಸುವ ಇಂತಹ ವಿವರಗಳಿಗೆ ಐಟಿ ಭಾಷೆಯಲ್ಲಿ ಡೇಟಾ ಎಂದು ಹೆಸರು. ಕನ್ನಡದಲ್ಲಿ ಇದನ್ನು ದತ್ತಾಂಶ ಎಂದು ಕರೆಯಬಹುದು. ಮನುಷ್ಯರಿಗೆ ಆಹಾರ, ಆಕ್ಸಿಜನ್ನು ಇದ್ದಂತೆ ಐಟಿಗೆ ಡೇಟಾ. ಇದನ್ನು ಪ್ರಪಂಚದ ಅತ್ಯಂತ ಮಹತ್ವದ ಸಂಪನ್ಮೂಲ ಎನ್ನುವವರೂ ಇದ್ದಾರೆ.
ಅದೇಕೆ? ಕೆಲ ಉದಾಹರಣೆಗಳನ್ನು ನೋಡಿದರೆ ನಮಗೇ ಗೊತ್ತಾಗುತ್ತದೆ. ಹೆಚ್ಚಾಗಿ ಮಧ್ಯಮವರ್ಗದವರೇ ವಾಸಿಸುವ ಪ್ರದೇಶದಲ್ಲಿರುವ ಸಣ್ಣ ಅಂಗಡಿಯೊಂದಕ್ಕೆ ಹೋಗಿ ಯಾವುದೋ ಅಪರೂಪದ ಅಥವಾ ದುಬಾರಿ ಬೆಲೆಯ ವಸ್ತುವನ್ನು ಕೇಳಿನೋಡಿ. “ಅದನ್ನು ಇಲ್ಲಿ ಯಾರೂ ತೊಗೊಳೋದಿಲ್ಲ. ಹಾಗಾಗಿ ನಾವು ತರಿಸೋಲ್ಲ!” ಎಂಬ ಉತ್ತರ ಬರುತ್ತದೆ. ಕಳೆದ ದಿನ, ತಿಂಗಳು, ವರ್ಷಗಳಲ್ಲಿ ಗ್ರಾಹಕರ ಇಷ್ಟಾನಿಷ್ಟಗಳನ್ನು ಕಂಡಿರುವ ಅಂಗಡಿಯವರಿಗೆ ಈ ವಿಷಯ ತಿಳಿದಿರುತ್ತದೆ. ಯಾವುದೋ ಸಮಯದಲ್ಲಿ ಅಂತಹ ವಸ್ತುಗಳನ್ನು ತರಿಸಿ ಅವು ಖರ್ಚಾಗದೆ ಉಳಿದುಬಿಟ್ಟ ಸನ್ನಿವೇಶವೂ ಪಾಠ ಕಲಿಸಿರುತ್ತದೆ!
ಗ್ರಾಹಕರು ಏನು ಕೊಳ್ಳುತ್ತಾರೆ ಎನ್ನುವುದು ಡೇಟಾ. ಯಾವ ಸಂದರ್ಭದಲ್ಲಿ ಕೊಳ್ಳುತ್ತಾರೆ ಎನ್ನುವುದೂ ಡೇಟಾ. ಸಂಕ್ರಾಂತಿಯ ಮೊದಲು ಕೊಬ್ಬರಿಯನ್ನೂ ಬೆಲ್ಲವನ್ನೂ ಸಾಕಷ್ಟು ಪ್ರಮಾಣದಲ್ಲಿ ತರಿಸಿಡಲು ನೆರವಾಗುವುದು ಇದೇ ಡೇಟಾ. ಸಾಕಷ್ಟು ಎಂದರೆ ಎಷ್ಟೆಂದು ಹೇಳುವುದೂ ಡೇಟಾ.
ಸಣ್ಣದೊಂದು ಅಂಗಡಿಯಲ್ಲಿ ಬಹುತೇಕ ನಿರ್ಧಾರಗಳನ್ನು ಮಾಲೀಕರು ತಮ್ಮ ಅನುಭವದ ಆಧಾರದ ಮೇಲೆಯೇ ತೆಗೆದುಕೊಳ್ಳುವುದು ಸಾಧ್ಯ. ಅವರು ಅದಕ್ಕಾಗಿ ಕಂಪ್ಯೂಟರನ್ನೋ ವಿಶೇಷ ಸಾಫ್ಟ್ವೇರುಗಳನ್ನೋ ಬಳಸಬೇಕು ಎಂದೇನೂ ಇಲ್ಲ. ನಾಲ್ಕಾರು ಅಂಗಡಿಗಳಿರುವ ದೊಡ್ಡ ಸಂಸ್ಥೆಯಾದರೆ ಅಲ್ಲಿಗೆ ಈ ವಿಧಾನ ಸಾಕಾಗದು. ಸಂಸ್ಥೆಯ ಅಂಗಡಿಗಳಲ್ಲಿ ಪ್ರತಿಯೊಂದೂ ತನಗೆ ಬೇಕಾದ್ದನ್ನು ಪ್ರತ್ಯೇಕವಾಗಿ ಕೊಳ್ಳುವ ವ್ಯವಸ್ಥೆಯನ್ನು ಸಮರ್ಥವೆಂದೂ ಹೇಳಲಾಗದು. ನಾಲ್ಕು ಅಂಗಡಿಗಳನ್ನೂ ಸೇರಿ ಎಷ್ಟು ಕೊಬ್ಬರಿ ಬೇಕಾಗಬಹುದು ಎಂದು ತಿಳಿದರೆ ಮಾಲೀಕರು ಅಷ್ಟನ್ನು ಒಟ್ಟಾಗಿ ತಿಪಟೂರಿನಿಂದಲೇ ತರಿಸಬಹುದು. ಒಳ್ಳೆಯ ಗುಣಮಟ್ಟದ ಜೊತೆಗೆ ಉತ್ತಮ ಬೆಲೆಯನ್ನೂ ಪಡೆಯಬಹುದು.
ಅಡುಗೆಮನೆ ನಿಭಾಯಿಸುವಾಗಲೂ ಹೀಗೆಯೇ. ಒಂದು ತಿಂಗಳಿಗೆ ಎಷ್ಟು ದಿನಸಿ ಬೇಕಾಗುತ್ತದೆ, ಕಳೆದ ಬಾರಿ ತರಿಸಿದ್ದರಲ್ಲಿ ಎಷ್ಟು ಉಳಿದಿದೆ, ಈ ಬಾರಿ ಏನನ್ನು ಎಷ್ಟು ತರಿಸಬೇಕು, ತರಿಸಿದ್ದು ಕೆಟ್ಟುಹೋಗದಂತೆ ಸ್ಮಾರ್ಟ್ ಆಗಿ ಹೇಗೆ ಬಳಸಬೇಕು – ಎಲ್ಲವೂ ಅಮ್ಮನ ತಲೆಯಲ್ಲಿರುವ ಕಂಪ್ಯೂಟರಿನಲ್ಲಿ ಇರುತ್ತದೆ. ಖರ್ಚುವೆಚ್ಚದ ಲೆಕ್ಕಾಚಾರವೂ ಅಷ್ಟೇ. ಪುಟ್ಟಮಕ್ಕಳ ಪಾಕೆಟ್ ಮನಿ ಇರಲಿ, ಸೀನಿಯರ್ ಮ್ಯಾನೇಜರಿನ ಸಂಬಳವೇ ಇರಲಿ – ಹಣಕಾಸಿನ ವಿಷಯ ನಿಭಾಯಿಸಲು ಡೇಟಾ ಬೇಕೇಬೇಕು. ಒಂದು ಪ್ಯಾಕೆಟ್ ನೂಡಲ್ಸ್ ಹೆಚ್ಚಾಗಿ ತಂದರೆ ಉಳಿದ ಖರ್ಚುಗಳಿಗೆ ಹಣ ಸಾಲುತ್ತದೋ ಇಲ್ಲವೋ ಎನ್ನುವುದು ಮಕ್ಕಳ ಚಿಂತೆ. ಸಂಬಳದಲ್ಲಿ ಇಎಂಐ ಕಟ್ಟಿದ ಮೇಳೆ ಉಳಿದಿದ್ದರಲ್ಲಿ ಏನೆಲ್ಲ ನಿಭಾಯಿಸಬಹುದು ಎನ್ನುವುದು ಮ್ಯಾನೇಜರ ಚಿಂತೆ. ತಲೆಯಲ್ಲೋ, ನೋಟ್ ಪುಸ್ತಕದಲ್ಲೋ, ಮೊಬೈಲು-ಕಂಪ್ಯೂಟರುಗಳಲ್ಲೋ ಈ ಲೆಕ್ಕಾಚಾರಗಳೆಲ್ಲ ನಡೆದೇ ಇರುತ್ತವೆ. ಬೇರೆಬೇರೆ ವಿಷಯಗಳಿಗೆ ಸಂಬಂಧಿಸಿದ ಡೇಟಾ ಒಟ್ಟಾಗಿ ಹೊಸ ನಿರ್ಧಾರಗಳಿಗೆ ಕಾರಣವಾಗುತ್ತಿರುತ್ತವೆ!
ಒಂದು ಮನೆ ಅಥವಾ ಅಂಗಡಿಯ ನಿರ್ವಹಣೆಯಲ್ಲೇ ಇಷ್ಟು ಡೇಟಾ ಬೇಕಾಗುತ್ತದೆ ಎಂದರೆ ದೊಡ್ಡದೊಡ್ಡ ಸನ್ನಿವೇಶಗಳ ಕತೆ ಏನು?
ಫೆಬ್ರುವರಿ ತಿಂಗಳು ಕೇಂದ್ರ ಬಜೆಟ್ ಮಂಡನೆಯ ಸಮಯ. ಕೋಟ್ಯಂತರ ಜನರನ್ನು ಪ್ರಭಾವಿಸುವ ಲೆಕ್ಕಾಚಾರಗಳು ಇದರ ಹಿನ್ನೆಲೆಯಲ್ಲಿ ನಡೆದಿರುತ್ತವೆ. ಇಷ್ಟೆಲ್ಲ ಮುಖ್ಯವಾದ ಕೆಲಸ ಆಗಿರುವುದರಿಂದಲೇ ಇಲ್ಲಿ ಡೇಟಾಗೆ ಎಲ್ಲಿಲ್ಲದ ಮಹತ್ತ್ವ. ಸಾರ್ವಜನಿಕರಿಗಾಗಿ ಹೊಸ ಯೋಜನೆಗಳನ್ನು ಘೋಷಿಸಬೇಕಾದರೆ ಆ ಖರ್ಚನ್ನು ಸರಿದೂಗಿಸುವ ಆದಾಯ ಎಲ್ಲಿಂದ ಬರುತ್ತದೆಂದು ತಿಳಿಯಬೇಕು. ಆದಾಯ ಕಡಮೆಯಾದಾಗ ಅದನ್ನು ಎಲ್ಲಿಂದ ತರುವುದೆಂದು ಲೆಕ್ಕಹಾಕಬೇಕು. ಎಲ್ಲಿ ಯಾವುದನ್ನು ಏರಿಸಿದರೆ ಅದರ ಪರಿಣಾಮ ಏನಾದೀತೆಂದೂ ಯೋಚಿಸಬೇಕು. ಇದೆಲ್ಲದರಲ್ಲೂ ಡೇಟಾ ವಹಿಸುವ ಪಾತ್ರ ಅತ್ಯಂತ ಮುಖ್ಯವಾದದ್ದು. ಹಣಕಾಸು ವಹಿವಾಟುಗಳ ವಿವರ, ತೆರಿಗೆ ಸಂಗ್ರಹದ ಲೆಕ್ಕಾಚಾರ, ಹೆದ್ದಾರಿಗಳನ್ನು ಬಳಸುತ್ತಿರುವವರ ಸಂಖ್ಯೆ ಎಲ್ಲವೂ ಬಜೆಟ್ ತಯಾರಿಕೆಯಲ್ಲಿ ನೆರವಾಗುತ್ತದೆ. ಯಾವ ಭಾಗದಲ್ಲಿ ಯಾವ ಬೆಳೆ ಬೆಳೆಯಲಾಗುತ್ತಿದೆ ಎನ್ನುವ ವಿವರವನ್ನು ಉಪಗ್ರಹಗಳು ಕಳಿಸುವ ಡೇಟಾ ಒದಗಿಸುತ್ತದೆ.
ಹೀಗೆ, ಮಕ್ಕಳ ಪಾಕೆಟ್ ಮನಿಯಿಂದ ಮನೆಯ ಖರ್ಚುವೆಚ್ಚಗಳವರೆಗೆ, ಪಕ್ಕದ ಬೀದಿಯ ಅಂಗಡಿಯಿಂದ ಬಹುರಾಷ್ಟಿçÃಯ ಸಂಸ್ಥೆಗಳ ಕಾರ್ಯಾಚರಣೆ ಹಾಗೂ ಲಾಭ-ನಷ್ಟದ ಲೆಕ್ಕಾಚಾರಗಳವರೆಗೆ ಎಲ್ಲೆಡೆಯೂ ಡೇಟಾದ್ದೇ ಆಟ. ಜಾಲತಾಣದಲ್ಲಿ ನಾವು ಏನೇನು ಮಾಡುತ್ತೇವೆ, ಮ್ಯಾಪ್ ಹಾಕಿಕೊಂಡು ಎಲ್ಲೆಲ್ಲಿ ಹೋಗುತ್ತೇವೆ, ಸಮಾಜಜಾಲಗಳಲ್ಲಿ ಏನು ಹೇಳುತ್ತೇವೆ ಎನ್ನುವುದೆಲ್ಲ ಡೇಟಾದ ರೂಪದಲ್ಲಿ ಒಂದಲ್ಲ ಒಂದುಕಡೆ ಸಂಗ್ರಹವಾಗುತ್ತಿರುತ್ತದೆ. ಯಾವ ಜಾಹೀರಾತನ್ನು ಯಾರಿಗೆ ತೋರಿಸಬೇಕು ಎನ್ನುವುದರಿಂದ ಪ್ರಾರಂಭಿಸಿ ಯಾವ ಉತ್ಪನ್ನವನ್ನು ಎಷ್ಟು ಪ್ರಮಾಣದಲ್ಲಿ ತಯಾರಿಸಬೇಕು, ಎಲ್ಲಿಗೆ ಸರಬರಾಜು ಮಾಡಬೇಕು ಎನ್ನುವವರೆಗೆ ಅದೆಷ್ಟೋ ನಿರ್ಧಾರಗಳನ್ನು ಕೈಗೊಳ್ಳುವಲ್ಲಿ ಅದು ಮಹತ್ತ್ವದ ಪಾತ್ರ ವಹಿಸುತ್ತದೆ. ಗ್ರಾಹಕರು ಎಷ್ಟು ಕರೆಗಳನ್ನು ಮಾಡಿದ್ದಾರೆ, ಎಷ್ಟು ಡೇಟಾ ಬಳಸಿದ್ದಾರೆ ಎಂದು ತಿಳಿಯುವ ಮೊಬೈಲ್ ಸಂಸ್ಥೆ ಅದರ ಆಧಾರದ ಮೇಲೆ ಹೊಸ ಯೋಜನೆಗಳನ್ನು ರೂಪಿಸುತ್ತದೆ; ಹಣಕಾಸಿನ ವ್ಯವಹಾರಗಳನ್ನೆಲ್ಲ ಗಮನಿಸುವ ತೆರಿಗೆ ಇಲಾಖೆ ಅದಕ್ಕೆಲ್ಲ ತೆರಿಗೆ ಪಾವತಿಯಾಗಿದೆಯೋ ಇಲ್ಲವೋ ಎಂದು ಪರೀಕ್ಷಿಸುತ್ತದೆ; ವಿದ್ಯಾರ್ಥಿಗಳ ಕಲಿಕೆಯ ಬಗ್ಗೆ ಡೇಟಾ ಕಲೆಹಾಕುವ ತಂತ್ರಾಂಶ ಅವರಿಗೆ ಎಲ್ಲಿ ಸಹಾಯ ಬೇಕೆನ್ನುವುದನ್ನು ನಿಖರವಾಗಿ ಹೇಳುತ್ತದೆ!
ಆನ್ಲೈನ್ ಅಂಗಡಿಗಳಲ್ಲಿ ನೀವು ಯಾವುದಾದರೂ ವಸ್ತುಗಳನ್ನು ಹುಡುಕಿದಾಗ ಅಥವಾ ಕೊಂಡಾಗ ಅದಕ್ಕೆ ಸಂಬಂಧಪಟ್ಟ ಇನ್ನಷ್ಟು ವಸ್ತುಗಳನ್ನೂ ಆ ತಾಣ ನಿಮಗೆ ತೋರಿಸುತ್ತದೆ. ಅದೇ ರೀತಿ ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದಾದರೂ ಒಂದು ಬಗೆಯ ಪೋಸ್ಟುಗಳನ್ನು ಹೆಚ್ಚಾಗಿ ನೋಡುತ್ತಿದ್ದರೆ ಅದಕ್ಕೆ ಸಂಬಂಧಪಟ್ಟ ಪೋಸ್ಟುಗಳೇ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಕಾಣಲು ಪ್ರಾರಂಭವಾಗುತ್ತದೆ. ಗೂಗಲ್ನಲ್ಲಿ ಏನಾದರೂ ಹುಡುಕುವಾಗ ಅರ್ಧ ಟೈಪ್ ಮಾಡುವಷ್ಟರಲ್ಲೇ ಉಳಿದರ್ಧವನ್ನು ಅದೇ ಊಹಿಸುತ್ತದೆ. ಇದೆಲ್ಲ ಸಾಧ್ಯವಾಗುವುದು ಎಐ ತಂತ್ರಜ್ಞಾನದಿಂದ ಎಂದು ನೀವು ಕೇಳಿರಬಹುದು. ಆ ತಂತ್ರಜ್ಞಾನ ಅಷ್ಟೆಲ್ಲ ಸಮರ್ಥವಾಗಿರುವುದರ ಹಿಂದೆಯೂ ಇದೇ ಡೇಟಾದ ಕೈವಾಡ ಇದೆ.
ಅದು ಹೇಗೆ? ಯಂತ್ರಗಳು ಮನುಷ್ಯರ ಹಾಗೆ ಯೋಚಿಸಲು, ಕೆಲಸ ಮಾಡಲು ಕಲಿಯಬೇಕು ಎಂದು ಎಐ ಹೇಳುತ್ತದೆ. ಅವು ಹಾಗೆ ಕಲಿಯುವುದನ್ನು ಸಾಧ್ಯವಾಗಿಸುವುದು ಮಶೀನ್ ಲರ್ನಿಂಗ್ ಎಂಬ ಪ್ರಕ್ರಿಯೆ. ಕಲಿಕೆ ಎಂದಮೇಲೆ ಪಠ್ಯಪುಸ್ತಕ ಬೇಕಲ್ಲ, ನಿರ್ದಿಷ್ಟ ವಿಷಯ ಕುರಿತ ಡೇಟಾ ಆ ಕೆಲಸ ಮಾಡುತ್ತದೆ. ಕಂಪ್ಯೂಟರಿನ ಪ್ರಾಥಮಿಕ ಪಾಠಗಳಲ್ಲೇ ಹೇಳಿಕೊಡುವಂತೆ, ಸಾಮಾನ್ಯ ತಂತ್ರಾಂಶಗಳು ನಾವು ಹೇಳಿದ ಕೆಲಸವನ್ನಷ್ಟೇ ಮಾಡುತ್ತವೆ. ಅದರ ಬದಲು, ಲಭ್ಯವಿರುವ ಡೇಟಾ ಬಳಸಿಕೊಂಡು ಕಂಪ್ಯೂಟರುಗಳು ತಾವೇ ಕಲಿಯುವುದನ್ನು ಮಶೀನ್ ಲರ್ನಿಂಗ್ ಸಾಧ್ಯವಾಗಿಸುತ್ತದೆ. ನಾವು ಹೆಚ್ಚುಹೆಚ್ಚು ಡೇಟಾ ಒದಗಿಸಿದಷ್ಟೂ ಈ ಕಲಿಕೆ ಹೆಚ್ಚು ಪರಿಣಾಮಕಾರಿಯಾಗುತ್ತ ಹೋಗುತ್ತದೆ.
ಉದಾಹರಣೆಗೆ, ಸಾವಿರಗಟ್ಟಲೆ ಕ್ರೆಡಿಟ್ಕಾರ್ಡ್ ವಹಿವಾಟುಗಳನ್ನು, ಅದರಲ್ಲಿ ನಡೆದ ವಂಚನೆಗಳ ವಿವರವನ್ನು ಕಂಪ್ಯೂಟರಿಗೆ ಕೊಟ್ಟು ಕಲಿಸಿದರೆ ಅದು ಮುಂದೆ ನೂರಾರು ಪಟ್ಟು ಹೆಚ್ಚಿನ ಸಂಖ್ಯೆಯ ವಹಿವಾಟುಗಳನ್ನು ಥಟ್ಟನೆ ಪರೀಕ್ಷಿಸಿ ಸಂಭಾವ್ಯ ವಂಚನೆಗಳನ್ನು ಪತ್ತೆಹಚ್ಚಲು ಶಕ್ತವಾಗುತ್ತದೆ. ಇದೇ ರೀತಿ ವಿಮಾಸಂಸ್ಥೆಗೆ ಬರುವ ಅರ್ಜಿಗಳನ್ನು ಪರಿಶೀಲಿಸಿ ಇರಬಹುದಾದ ಮೋಸವನ್ನು ಗುರುತಿಸುವುದು, ಈವರೆಗಿನ ಆರೋಗ್ಯ ಗಮನಿಸಿಕೊಂಡು ಮುಂದೆ ಬರಬಹುದಾದ ಸಮಸ್ಯೆಗಳನ್ನು ಊಹಿಸುವುದು, ಯಂತ್ರಗಳ ಕಾರ್ಯಾಚರಣೆಯಲ್ಲಿ ಅಡಚಣೆ ಎಲ್ಲಿ ಬರಬಹುದೆಂದು ಅಂದಾಜಿಸಿ ಸೂಕ್ತ ಮುನ್ನೆಚ್ಚರಿಕೆ ತೆಗೆದುಕೊಳ್ಳುವುದು, ಸಮಾಜಜಾಲದ ಸಂದೇಶಗಳನ್ನು ಗಮನಿಸಿ ಅಲ್ಲಿನ ಪ್ರವೃತ್ತಿಯನ್ನು ಗುರುತಿಸುವುದು – ಹೀಗೆ ಎಐ ಸಹಾಯದಿಂದ ಎಷ್ಟೋ ಕೆಲಸಗಳನ್ನು ಮಾಡಿಸಿಕೊಳ್ಳುವಲ್ಲಿ ಡೇಟಾ ಸಹಾಯಕ್ಕೆ ಬರುತ್ತದೆ. ಚಾಟ್ಜಿಪಿಟಿ, ಗೂಗಲ್ ಜೆಮಿನಿ ಮುಂತಾದ ಜನರೇಟಿವ್ ಎಐ ಸಾಧನಗಳು ನಾವು ಕೇಳಿದ ಪಠ್ಯ, ಚಿತ್ರ, ವಿಡಿಯೋಗಳನ್ನೆಲ್ಲ ಪಟಪಟನೆ ಜನರೇಟ್ ಮಾಡಿ ಕೊಡುತ್ತವಲ್ಲ, ಅವು ಅದನ್ನೆಲ್ಲ ಕಲಿತಿರುವುದೂ ಡೇಟಾ ಸಹಾಯದಿಂದಲೇ.
ಇಷ್ಟೆಲ್ಲ ಇರುವುದರಿಂದಲೇ ಐಟಿ ಜಗತ್ತಿನಲ್ಲಿ ಡೇಟಾಗೆ ಎಲ್ಲಿಲ್ಲದ ಮಹತ್ತ್ವ. ಒಳ್ಳೆಯ ಉದ್ದೇಶಗಳಿಗೆ ಬಳಸುವವರಷ್ಟೇ ಅಲ್ಲ, ತಮ್ಮ ದುರುದ್ದೇಶಗಳನ್ನು ಸಾಧಿಸಲು ಪ್ರಯತ್ನಿಸುವವರೂ ಡೇಟಾದ ಅಸಾಧಾರಣ ಸಾಮರ್ಥ್ಯವನ್ನು ಬಳಸಿಕೊಂಡುಬಿಡಬಹುದು. ಆದ್ದರಿಂದಲೇ ಇಂದು ಡೇಟಾ ಪ್ರೈವೆಸಿಗೆ ಎಲ್ಲಿಲ್ಲದ ಮಹತ್ತ್ವ. ಡಿಜಿಟಲ್ ಜಗತ್ತಿನಲ್ಲಿ ಸರಾಗವಾಗಿ ಓಡಾಡುವುದನ್ನು ಕಲಿಯುವುದು ಎಷ್ಟು ಮುಖ್ಯವೋ ಡೇಟಾ ಪ್ರೈವೆಸಿಯ ಮಹತ್ತ್ವವನ್ನು ಅರಿತುಕೊಳ್ಳುವುದೂ ಇದೀಗ ಅಷ್ಟೇ ಮುಖ್ಯವಾಗಿದೆ.
ನಮ್ಮನ್ನು, ನಮ್ಮ ಚಟುವಟಿಕೆಗಳನ್ನು ಕುರಿತ ಅನೇಕ ವಿವರಗಳು ಡಿಜಿಟಲ್ ಜಗತ್ತಿನಲ್ಲಿರುವುದು ಸಾಮಾನ್ಯ. ಈ ಪೈಕಿ ಕೆಲವನ್ನು (ಉದಾ: ಶಾಪಿಂಗ್ ತಾಣದಲ್ಲಿ ಉಳಿಸಿಟ್ಟ ವಿಳಾಸ) ನಾವೇ ಸೇರಿಸಿರುತ್ತೇವೆ, ಇನ್ನು ಕೆಲವನ್ನು ಬೇರೆಬೇರೆ ಆ್ಯಪ್ಗಳು, ಜಾಲತಾಣಗಳು ಪಡೆದು ಉಳಿಸಿಟ್ಟುಕೊಂಡಿರುತ್ತವೆ (ಉದಾ: ಶಾಪಿಂಗ್ ತಾಣದಲ್ಲಿ ಖರೀದಿಸಿದ ವಸ್ತುಗಳ ವಿವರ). ಈ ಪೈಕಿ ಯಾವ ಡೇಟಾವನ್ನು ಯಾರು ಉಳಿಸಿಟ್ಟುಕೊಳ್ಳಬಹುದು, ಹಾಗೆ ಉಳಿಸಿಟ್ಟುಕೊಂಡಿದ್ದನ್ನು ಹೇಗೆ ಬಳಸಬಹುದು ಎನ್ನುವುದು ಬಹಳ ಮುಖ್ಯವಾಗುತ್ತದೆ. ಇದೇ ಡೇಟಾ ಪ್ರೈವೆಸಿಯ ಮೂಲಮಂತ್ರ.
ಡೇಟಾದ ವಿಶ್ವರೂಪವನ್ನು ಕೇಳುತ್ತ, ನೋಡುತ್ತಹೋದರೆ ಗಾಬರಿಯಾಗುತ್ತದೆ, ಅಲ್ಲವೆ? ಹಾಗೆ ಗಾಬರಿಯಾಗದಂತೆ ನಮ್ಮ ಡೇಟಾವನ್ನು ನಿಭಾಯಿಸಲು ಕಲಿಯುವುದು, ಅದನ್ನು ಸಮರ್ಥವಾಗಿ ಬಳಸಿಕೊಳ್ಳುವುದು ಕೂಡ ಅತ್ಯಗತ್ಯ. ಓದು-ಬರಹ ತಿಳಿದಿರುವ ಸಾಕ್ಷರತೆ ಎಷ್ಟು ಮುಖ್ಯವೋ ಡೇಟಾದ ಮಹತ್ತ್ವವನ್ನು ಅರಿಯುವ ಡೇಟಾ ಸಾಕ್ಷರತೆ, ಅಂದರೆ ಡೇಟಾ ಲಿಟರೆಸಿಯೂ ಇಂದು ಅನಿವಾರ್ಯವಾಗುತ್ತಿದೆ.
ಇಷ್ಟೆಲ್ಲ ಇರುವುದರಿಂದಲೇ ಡೇಟಾ ಎನ್ನುವುದು ಇದೀಗ ಕೇವಲ ಐಟಿ ತಜ್ಞರಿಗಷ್ಟೇ ಸೀಮಿತವಾಗಿ ಉಳಿದಿಲ್ಲ. ದರ್ಶಿನಿಯಲ್ಲಿ ಕಾಫಿ ಕುಡಿಯುವವರಿಂದ ಪ್ರಾರಂಭಿಸಿ ದೇಶದ ಬಜೆಟ್ ಮಂಡಿಸುವವರವರೆಗೆ ಎಲ್ಲರ ಮೇಲೂ ಅದು ಪ್ರಭಾವ ಬೀರುತ್ತಿದೆ. ಅದರ ಶಕ್ತಿಯನ್ನು ಅರ್ಥಮಾಡಿಕೊಳ್ಳುವುದು, ವಿವಿಧ ಸಾಧ್ಯತೆಗಳನ್ನು ಅರಿತು ಹೆಜ್ಜೆ ಇಡುವುದು ಇಂದಿನ ಡಿಜಿಟಲ್ ಯುಗದಲ್ಲಿ ನಮ್ಮೆಲ್ಲರ ಜವಾಬ್ದಾರಿಯೂ ಆಗಿಬಿಟ್ಟಿದೆ.
* * *
ಡೇಟಾದ ವಿವಿಧ ಆಯಾಮಗಳು, ನಮ್ಮ ಬದುಕಿನ ವಿವಿಧ ಕ್ಷೇತ್ರಗಳ ಮೇಲೆ ಡೇಟಾದ ಪ್ರಭಾವ, ಅದು ನಮ್ಮೆದುರು ತೆರೆದಿಡುವ ಸಾಧ್ಯತೆಗಳು ಹಾಗೂ ಅವಕಾಶಗಳೇ ಮುಂತಾದ ವಿಷಯಗಳ ಮೇಲೆ ಬೆಳಕು ಚೆಲ್ಲುವುದು ಈ ಲೇಖನಸರಣಿಯ ಉದ್ದೇಶ. ಡೇಟಾ ಸಾಕ್ಷರತೆಯತ್ತ ನಾವೆಲ್ಲರೂ ಒಟ್ಟಾಗಿ ಹೆಜ್ಜೆಹಾಕುವ ವಿಶಿಷ್ಟ ಪ್ರಯತ್ನ ಇದು.
***
ಡೇಟಾದ ಆಟ!
Month : February-2026 Episode : Author : ಟಿ.ಜಿ. ಶ್ರೀನಿಧಿ




