ಮರಗಳು ಮಣಿದಾವ ತಾಯಿ
ನೀ ನೀರುಣಿಸಿ ಬೆಳೆಸಿದ ಋಣಕ್ಕಾಗಿ
ಜನಮನ ಕಂಬನಿ ಮಿಡಿದಾವ ತಾಯಿ
ನಿನ್ನಗಲುವಿಕೆಯ ನೋವು ಅತಿಯಾಗಿ ||
ಮಕ್ಕಳಿಲ್ಲದ ನೋವು ಮರೆತವ್ವ ನೀನು
ಸಸಿಗಳ ನೆಟ್ಟು ಖುಷಿಪಟ್ಟೆ ನೀನು
ಓದದಿದ್ದರೇನು ಬರೆಯದಿದ್ದರೇನು
ಪರಿಸರದ ಪಾಠ ಕಲಿಸಿಕೊಟ್ಟೆ ನೀನು ||
ಬಿರುದು ಬಾವಲಿ ಹರಿದು ಬಂದಾವ ತಾಯಿ
ಕೀರ್ತಿಗಳಿಸಿತು ನಾಡು ನಿನ್ನ ಕೃತಿಯಿಂದಾಗಿ
ಸಾರ್ಥಕವಾಯಿತವ್ವ ನಿನ್ನ ಹೋರಾಟ
ಕಾಲದ ಎದಿಯಾಗ ಚಿರವಾಗಿ ಉಳಿದು ||
ಸ್ಪಟಿಕದಷ್ಟೇ ಪರಿಶುದ್ಧ ನಿನ್ನಂತರಂಗ
ಸ್ವಾರ್ಥಕ್ಕೆ ಇರಲಿಲ್ಲ ನಿನ್ನಲ್ಲಿ ಎಳ್ಳಷ್ಟು ಜಾಗ
ಪರಹಿತವೇ ಆಗಿತ್ತು ನಿನಗೆ ಸರ್ವಸ್ವ
ಜಗವಿದನು ಮರೆತೀತು ಹ್ಯಾಂಗವ್ವ ||
ಮಣ್ಣಾಗಿ ಹೋದರೇನು ಹಣ್ಣಾದ ಕಾಯ
ಬೀಸುವ ಗಾಳ್ಯಾಗ ಉಳಿದೈತಿ ನಿನ್ನ ಅಸ್ತಿತ್ವ
ನೆರಳಾಗಿ ಹರಡಿ ಸಾರೈತಿ ನಿನ್ನ ಸತ್ವ
ಹಸಿರಲ್ಲಿ ಹೆಸರಾಗಿ ಮರೆದೈತಿ ಅಮರತ್ವ ||
***




