ಇತ್ತೀಚೆಗೆ ಸಮೀಪದ ಬಂಧುಗಳ ಮನೆಗೆ ಹೋಗಿದ್ದೆ. ಆ ಮನೆಯ ಮಗು ಹತ್ತಾರು ಹವ್ಯಾಸಗಳಲ್ಲಿ ತೊಡಗಿಸಿಕೊಳ್ಳುವಂತೆ ಪೋಷಕರು ಅವಕಾಶ ಒದಗಿಸಿಕೊಟ್ಟಿದ್ದಾರೆ. ಮಗು ಅವರ ನಿರೀಕ್ಷೆಯಂತೆ ಚೆನ್ನಾಗಿ ಕಲೆಗಳನ್ನು ಅಭ್ಯಾಸ ಮಾಡುತ್ತಲೂ ಇದ್ದಾಳೆ. ಪೋಷಕರಿಗೆ ಅವಳು ನಮ್ಮೆದುರು ಯಾವುದಾದರೂ ಒಂದನ್ನು ಪ್ರದರ್ಶಿಸಲಿ ಎಂಬ ಆಕಾಂಕ್ಷೆ ಇತ್ತು. ಆದರೆ ದಣಿದಿದ್ದ ಆ ಮಗು ‘ತನ್ನಿಂದಾಗದು’ ಎನ್ನುತ್ತಲೇ ಇದ್ದಳು. ಹಾಗೂ ಅನುನಯಿಸಿ ಬಲವಂತ ಮಾಡಿದರೆ ಕೊಂಚ ಕಟುವಾಗಿಯೇ ತನಗೆ ಸುಸ್ತಾಗಿದೆ, ತಾನೇನೂ ಮಾಡಲಾರೆ ಎಂದಳು. ಅವಳ ಮಾತಿಗೆ ದಂಗಾಗುವ ಸರದಿ ಅಪ್ಪ ಅಮ್ಮನದ್ದು, ಜತೆಗೆ ನಮ್ಮದೂ ಕೂಡ.
‘ಅಕ್ಕ, ಈಗ ಅವಳು ಅಭಿವ್ಯಕ್ತಿಸಿದ್ದರಲ್ಲಿ ಏನಾದರೂ ತಪ್ಪಿದೆಯಾ ಹೇಳು? ಬಹುಶಃ ನಾವು ಎಳೆಯವರಿದ್ದಾಗ ನಮಗೆ ನಿಜಕ್ಕೂ ನಮ್ಮ ಮನಸ್ಸಿನಲ್ಲಿ ಇದ್ದುದನ್ನು ಇದ್ದ ಹಾಗೆ ಹೇಳುವ ಅವಕಾಶವೇ ಇರುತ್ತಿರಲಿಲ್ಲ. ದೊಡ್ಡವರ ಮುಂದೆ ಹಾಗೆ ಮಾತಾಡಬಾರದು, ಹೀಗೆ ಮಾತಾಡಬಾರದು, ಅವರು ಹೇಳಿದ್ದನ್ನು ಕೇಳಬೇಕು, ಹೇಳಿದಂತೆ ನಡೆದುಕೊಳ್ಳಬೇಕು ಎಂಬುದಷ್ಟನ್ನೇ ಕಲಿಸಿದರು. ಒಂದು ವೇಳೆ ಪ್ರತಿರೋಧಿಸಿದರೆ ನಮಗೆ ಮರುಕ್ಷಣದಲ್ಲಿ ಪೆಟ್ಟು ಬಿದ್ದಾಗುತ್ತಿತ್ತು. ಹಾಗೆಂದು ಈಗ ಮಗಳನ್ನು ಆ ರೀತಿಯಾಗಿ ದಂಡಿಸಬೇಕೇ ಬೇಡವೇ ಎಂಬುದೇ ಪ್ರಶ್ನೆ. ಮಕ್ಕಳಿಗೂ ಅವರದೇ ಆದ ಭಾವನೆಗಳು ಇರುತ್ತವಲ್ಲವೆ? ಅದನ್ನು ಅರ್ಥಮಾಡಿಕೊಳ್ಳದೆ, ವ್ಯಕ್ತಪಡಿಸಲೂ ಬಿಡದೆ ಇದ್ದರೆ ಮುಂದೆ ಅವಳ ಬದುಕಿನ ಹಲವು ಹಂತಗಳಲ್ಲಿ ಅವಳು ನಿಜಕ್ಕೂ ತನಗನ್ನಿಸಿದ್ದನ್ನು ಹೇಳಿಕೊಳ್ಳಲು ಸಾಧ್ಯವೇ ಆಗುವುದಿಲ್ಲ ಅಲ್ಲವೇ?’ ಎಂದಳು ಮಗುವಿನ ಅಮ್ಮ. ನಿಜವೇ ಹೌದಲ್ಲ?
ಸಾಮಾನ್ಯವಾಗಿ ನಮಗೆ ನಮ್ಮ ಮಗು ಹೊಸದೇನಾದರೂ ಕಲಿತರೆ ಅದನ್ನು ಮನೆಗೆ ಬರುವ ನೆಂಟರ ಮುಂದೆ ಪ್ರದರ್ಶಿಸಬೇಕೆಂಬ ಹಂಬಲ. ಮನೆಗಳಿಗೆ ಭೇಟಿಯಿಡುವವರಿಗಾದರೂ ಮಕ್ಕಳು ತಮ್ಮೆದುರು ಹಾಡಿದರೆ ಸಂತೋಷವೇ. ಇದನ್ನು ಬೇರೆಯದೇ ರೀತಿಯಲ್ಲಿ ನೋಡುವವರಿಲ್ಲವೆ ಎಂದರೆ ಇದ್ದಾರೆ. ಆದರೆ ಬಹುತೇಕ ಮಂದಿಗೆ ಅದರಲ್ಲೊಂದು ನಿಷ್ಕಲ್ಮಶ ಅಭಿಮಾನವಿರುತ್ತದೆ. ಆದರೆ ನಮ್ಮ ಬದುಕಿನ ಅನುಭವಗಳು ಗಂಭೀರವಾಗುತ್ತಾಹೋದಂತೆ ಇದರ ಹಿಂದಿನ ಸರಿತಪ್ಪುಗಳು ಗೋಚರವಾಗುತ್ತವೆ. ಮಗು ಎಂದರೆ ನಮ್ಮ ಮನಸಿನ ಸಂತೋಷದಂತೆ ಪ್ರದರ್ಶನಕ್ಕಿಟ್ಟ ಗೊಂಬೆಯಲ್ಲ. ಅದಕ್ಕೂ ಅದರದೇ ಆದ ಮನೋಲಹರಿ ಇರುತ್ತದೆ. ತಾನು ಹಾಡಬೇಕೆಂದು ಬಯಸಿದರೆ ಮಾತ್ರ ಹಾಡೀತು ವಿನಾ ಇನ್ನೊಬ್ಬರ ಒತ್ತಾಯಕ್ಕೆ ಹಾಡಲಾಗದು ಎಂಬುದು ಮನವರಿಕೆಯಾಗುತ್ತದೆ. ಉಳಿದ ಇನ್ಯಾವುದೇ ಕಲೆಗಳ ಕಥೆಯಾದರೂ ಅಷ್ಟೇ. ಖಾಲಿಲ್ ಗಿಬ್ರಾನ್ ಹೇಳುವ ‘ನಿಮ್ಮ ಮಕ್ಕಳು ನಿಮ್ಮ ಮಕ್ಕಳಲ್ಲ, ಅವು ಬದುಕಿನ ಪ್ರೀತಿಯ ಸಂಕೇತಗಳು’ ಎಂಬ ಕಾವ್ಯ ಪ್ರಬಂಧದ ಸಾಲುಗಳೂ ಹೇಳುವುದು ಅದನ್ನೇ.
ಹಾಗೆ ನೋಡಿದರೆ ಬಹುತೇಕ ಮನೆಗಳಲ್ಲಿ ಅತಿಥಿಗಳು ಬಂದಾಗ ಮಕ್ಕಳು ಹಾಡುವಂತೆ, ನೃತ್ಯ ಮಾಡುವಂತೆ, ಪದ್ಯ ಹೇಳುವಂತೆ ಅಥವಾ ತಮ್ಮ ಯಾವುದೇ ಪ್ರತಿಭೆಯನ್ನು ಪ್ರದರ್ಶಿಸುವಂತೆ ಪೋಷಕರು ಕೇಳುವುದು ಸಾಮಾನ್ಯ. ಇದನ್ನು ಪೋಷಕರು ಧನಾತ್ಮಕ ಅಭ್ಯಾಸವೆಂದುಕೊಂಡರೂ, ಮಕ್ಕಳ ಮನೋವೈಜ್ಞಾನಿಕ ಮತ್ತು ಭಾವನಾತ್ಮಕ ಬೆಳವಣಿಗೆಗೆ ಇದು ಕೆಲವೊಮ್ಮೆ ಋಣಾತ್ಮಕ ಪರಿಣಾಮಗಳನ್ನುಂಟುಮಾಡಬಹುದು. ಪೋಷಕರು ಮಕ್ಕಳ ಕುರಿತು ಹೆಮ್ಮೆಪಟ್ಟು ಅವರ ಪ್ರತಿಭೆಯನ್ನು ತೋರಿಸಲು ಬಯಸುವುದು ಸಹಜ. ಆದರೆ, ಮಕ್ಕಳ ಇಚ್ಛೆಗೆ ವಿರುದ್ಧವಾಗಿ ಆ ಕ್ಷಣದಲ್ಲೇ ಪ್ರದರ್ಶನ ಮಾಡಲು ಒತ್ತಾಯಿಸುವುದು ಅವರ ಆತ್ಮವಿಶ್ವಾಸ, ಸ್ವಾಭಿಮಾನ ಮತ್ತು ಆನಂದಕ್ಕೆ ಧಕ್ಕೆ ತರಬಹುದು ಎನ್ನುತ್ತದೆ ಮನೋವಿಜ್ಞಾನ.
ಮೊದಲನೆಯದಾಗಿ, ಮಕ್ಕಳನ್ನು ಅತಿಥಿಗಳ ಮುಂದೆ ಕಡ್ಡಾಯವಾಗಿ ಪ್ರದರ್ಶನ ನೀಡಲು ಹೇಳುವುದು ಅವರಲ್ಲಿ ಅನಗತ್ಯ ಒತ್ತಡ ಮತ್ತು ನಾಚಿಕೆಯನ್ನು ಉಂಟುಮಾಡುತ್ತದೆ. ಅನೇಕ ಮಕ್ಕಳು ಸಹಜವಾಗಿಯೇ ಲಜ್ಜೆ ಮತ್ತು ಸಭಾಕಂಪನದಿಂದ ಬಳಲುತ್ತಾರೆ. ಇಂತಹ ಮಕ್ಕಳನ್ನು ಪೋಷಕರು ಬಲವಂತವಾಗಿ ಹಾಡಿಸಲು ಅಥವಾ ನೃತ್ಯ ಮಾಡಿಸಲು ಪ್ರಯತ್ನಿಸಿದರೆ, ಅವರು ತಪ್ಪು ಮಾಡುವ ಭಯ, ಇತರರೆದುರು ನಗೆಯ ಗುರಿಯಾಗುವ ಆತಂಕ ಅಥವಾ ಪೋಷಕರ ನಿರೀಕ್ಷೆ ಈಡೇರಿಸುವ ಒತ್ತಡದಲ್ಲಿ ಸಿಲುಕುತ್ತಾರೆ. ಇಂತಹ ಪುನರಾವರ್ತಿತ ಅನುಭವಗಳು ಮಕ್ಕಳಲ್ಲಿ ಸಣ್ಣ ವಯಸ್ಸಿನಿಂದಲೇ ಆತ್ಮವಿಶ್ವಾಸವನ್ನು ಕುಂದಿಸಬಹುದು ಮತ್ತು ಆತ್ಮಸ್ಥೈರ್ಯವನ್ನು ಕಡಮೆ ಮಾಡಬಹುದು.
ಎರಡನೆಯದಾಗಿ, ಈ ಅಭ್ಯಾಸವು ಮಕ್ಕಳಿಗೆ ಪ್ರತಿಭೆ ಎಂದರೆ ತಮ್ಮ ಸಂತೋಷಕ್ಕಾಗಿ ಅಲ್ಲ, ಇತರರನ್ನು ಖುಷಿಪಡಿಸಲು ಎಂದು ಕಲಿಸಿಬಿಡುತ್ತದೆ. ಪ್ರತಿಭೆಗಳು ವಿಕಸಿಸಬೇಕಾದರೆ ಅವು ಸ್ವಯಂ ಆಸಕ್ತಿ ಮತ್ತು ಆನಂದದಿಂದ ಹೊರಹೊಮ್ಮಬೇಕು. ಆದರೆ, ಪೋಷಕರು ಪ್ರತೀ ಬಾರಿ ಅತಿಥಿಗಳು ಬಂದಾಗ `ಓಡಿಬಂದು ಹಾಡು’ ಎಂದು ಹೇಳುವುದರಿಂದ, ಮಕ್ಕಳಿಗೆ ತಮ್ಮ ಪ್ರತಿಭೆ ಒಂದು ಕರ್ತವ್ಯವಾಗಿ ಕಾಣುತ್ತದೆ. ಅವರು ಮೊದಲು ಆಸಕ್ತಿ ಹೊಂದಿದ್ದ ಕೌಶಲದ ಮೇಲೆಯೇ ಬೇಸರ ಉಂಟಾಗಬಹುದು. ಇದು ಮಕ್ಕಳ ಸರ್ಜನಶೀಲತೆಯನ್ನು ಕುಗ್ಗಿಸುವುದಲ್ಲದೆ, ಪ್ರತಿಭೆಯ ಮೂಲ ಉತ್ಸಾಹವನ್ನೇ ಕೊಚ್ಚಿಕೊಂಡು ಹೋಗುತ್ತದೆ.
ಮೂರನೆಯದಾಗಿ, ಮಕ್ಕಳನ್ನು ಒತ್ತಾಯಿಸುವುದು ಅವರ ವೈಯಕ್ತಿಕ ಮೇರೆಯನ್ನು ಗೌರವಿಸದಂತೆ ಮಾಡುತ್ತದೆ. “ಬಾ, ಮಾವನಿಗೆ ಆ ಹಾಡು ಹಾಡು, ಅಕ್ಕನೆದುರು ಈ ನೃತ್ಯ ಮಾಡು” ಎಂದು ಒತ್ತಾಯಿಸುವುದು (ಮಗುವಿನ ಸ್ಪಷ್ಟ ನಿರಾಕರಣೆ ಇದ್ದರೂ ಹೇಳುವುದು), ಅವರ ಇಚ್ಛೆಯನ್ನು ಅಪ್ರಸ್ತುತವೆಂದು ತೋರಿಸುತ್ತದೆ. ಇದರಿಂದ ಮಕ್ಕಳು `ನಾನು ಇಲ್ಲ ಎಂದರೂ ಕೇಳುವವರಿಲ್ಲ’ ಎಂಬ ಭಾವನೆ ಬೆಳೆಸಿಕೊಳ್ಳುತ್ತಾರೆ. ದೀರ್ಘಾವಧಿಯಲ್ಲಿ, ಇದು ಅವರ ನಿರಾಕರಣಾ ಸಾಮರ್ಥ್ಯ ಮತ್ತು ಸ್ವತಂತ್ರ ನಿರ್ಧಾರ ಮಾಡುವ ಶಕ್ತಿಯನ್ನು ಕುಗ್ಗಿಸಬಹುದು ಎನ್ನುತ್ತವೆ ಅಧ್ಯಯನಗಳು.
ನಾಲ್ಕನೆಯದಾಗಿ, ಅತಿಥಿಗಳ ಮುಂದೆ ಪ್ರದರ್ಶನ ನೀಡಿಸುವುದು ಮಕ್ಕಳನ್ನು ಅಗತ್ಯವಿಲ್ಲದ ಹೋಲಿಕೆ ಮತ್ತು ವಿಮರ್ಶೆಗಳಿಗೆ ಒಳಪಡಿಸುತ್ತದೆ. ಅತಿಥಿಗಳು ಕೆಲವೊಮ್ಮೆ `ಇವನು ಚೆನ್ನಾಗಿ ಹಾಡುತ್ತಾನೆ, ನೀನು ಏಕೆ ಹೀಗೆ?’ ಅಥವಾ `ಈ ಮಗಳು ಹೆಚ್ಚು ಟ್ಯಾಲೆಂಟ್, ಮಗ ಸೈಲೆಂಟ್ ಅಲ್ವಾ’ ಎಂಬಂತ ಮಾತುಗಳನ್ನಾಡಬಹುದು. ವಯಸ್ಕರಿಗೆ ಅವು ಸಾಮಾನ್ಯವಾಗಿರಬಹುದು, ಆದರೆ ಮಕ್ಕಳಿಗೆ ಅವು ಎಂದೂ ಮಾಸದ ಗಾಯವಾಗಬಹುದು. ಹೋಲಿಕೆಗಳು ಮಕ್ಕಳಲ್ಲಿ ಅಸಮಾಧಾನ, ಅಸಹನೆಯ ಭಾವನೆಗಳನ್ನು ಉಂಟುಮಾಡುತ್ತವೆ. ಮನೆಯಲ್ಲಿ ಇಬ್ಬರು ಮಕ್ಕಳಿದ್ದರೆ ಇಬ್ಬರ ಹವ್ಯಾಸಗಳು, ಆಸಕ್ತಿಗಳು ಅಥವಾ ಅವರಲ್ಲಿನ ಅಭಿವ್ಯಕ್ತಿ ಸಾಮರ್ಥ್ಯಗಳು ಒಂದೇ ತೆರನಾಗಿ ಇರುವುದಿಲ್ಲ. ಒಂದು ಮಗು ಮನೆಗೆ ಬರುವ ನೆಂಟರೊಂದಿಗೆ ಸಹಜವಾಗಿ ಸ್ನೇಹದಿಂದ ವರ್ತಿಸಿದರೆ ಇನ್ನೊಂದು ಮಗು ಸ್ವಲ್ಪ ಕಾಲಾವಕಾಶವನ್ನು ಬಯಸಬಹುದು. ತಪ್ಪಲ್ಲವಲ್ಲ?
ಕೊನೆಯದಾಗಿ, ಮಕ್ಕಳನ್ನು ಪ್ರದರ್ಶನಕ್ಕೆ ಒತ್ತಾಯಿಸುವುದು ಅವರಲ್ಲಿ ‘ಸಮಾಜಕ್ಕೆ ತೋರಿಸಿಕೊಳ್ಳುವುದೇ ಮುಖ್ಯ, ತಮ್ಮ ಆಸಕ್ತಿ ಮತ್ತು ಬೆಳವಣಿಗೆಗಿಂತ ಹೆಚ್ಚು ಪ್ರಮುಖ’ ಎಂಬ ತಪ್ಪು ಕಲ್ಪನೆ ರೂಪಿಸುತ್ತದೆ. ಪ್ರತಿಭೆಯನ್ನು ಪ್ರದರ್ಶಿಸಲು ಮಕ್ಕಳೇ ಸ್ವತಃ ತಯಾರಾಗುವವರೆಗೆ ಅವರನ್ನು ಅವರ ಪಾಡಿಗೆ ಖುಷಿಯಾಗಿಡಲು ಬಿಟ್ಟುಬಿಡಬೇಕು, ಪೋಷಕರಿಗೆ ತೋರಿಸಿಕೊಳ್ಳುವ ಸಾಮಗ್ರಿಯಂತೆ ಅಲ್ಲ. ಅವರಿಗೆ ಸಹಜವಾಗಿ ಬಂದಾಗ, ತಮ್ಮ ಆಸಕ್ತಿಯಿಂದ ಹಾಡುವಾಗ, ನೃತ್ಯ ಮಾಡುವಾಗ ಅಥವಾ ಏನಾದರೂ ತೋರಿಸಲು ಬಯಸುವಾಗ ಅವಕಾಶ ನೀಡುವುದು ಉತ್ತಮ. ಮಕ್ಕಳು ಸ್ವಯಂಪ್ರೇರಿತರಾಗಿ ತಮ್ಮ ಪ್ರತಿಭೆಯನ್ನು ಹಂಚಿಕೊಳ್ಳಲು ಬಯಸುವಾಗ ಅವರಿಗೆ ಉತ್ತೇಜನ ನೀಡುವುದು ಉತ್ತಮ. ಒತ್ತಾಯವಿಲ್ಲದ ಉತ್ತೇಜನವೇ ಮಕ್ಕಳಿಗೆ ಆತ್ಮವಿಶ್ವಾಸ ಮತ್ತು ಸಂತೋಷವನ್ನು ನೀಡುತ್ತದೆ.
ಈಗಲಂತೂ ಸಾಮಾಜಿಕ ಜಾಲತಾಣಗಳಲ್ಲಿ ರೀಲುಗಳದ್ದೇ ಅಬ್ಬರ. ಅಥವಾ ಮಕ್ಕಳ ವಿಡಿಯೋಗಳು. ಕೆಲವರು ಆಗೀಗ ಹಂಚಿಕೊಂಡರೆ ಇನ್ನೂ ಕೆಲವರು ಮಗು ಕುಳಿತದ್ದು, ನಿಂತದ್ದು, ನೀರು ಕುಡಿದದ್ದು ಹೀಗೆ ಎಲ್ಲವನ್ನೂ ಹಾಕುವವರೂ ಇದ್ದಾರೆ. ಮಕ್ಕಳಿಗೆ ದೃಷ್ಟಿ ತಾಗೀತು ಎಂಬ ನಮ್ಮ ಹಿರಿಯರ ಅಂಬೋಣಗಳು ಕೆಲವೊಮ್ಮೆ ಸರಿಯೆನ್ನಿಸುವುದು ಇದೇ ಕಾರಣಕ್ಕೆ. ರಾಸಾಯನಿಕ ಬಳಸಿ ಕಾಯನ್ನು ಹಣ್ಣು ಮಾಡುವಂತೆ ನಮಗೆ ನಮ್ಮ ಮಕ್ಕಳೂ ಅವಧಿಗೆ ಮುನ್ನವೇ ಹೆಸರು ಮಾಡಬೇಕೆಂಬ ಆಸೆ. ಅವರ ಆಸಕ್ತಿ ಕುಂದಲು, ಅಥವಾ ಅವರಿಗೂ ಲೈಕು, ಕಮೆಂಟುಗಳ ಗೀಳು ಹತ್ತಿಕೊಳ್ಳಲು ನಾವು ಮಾಡುವ ತಪ್ಪುಗಳೇ ಸಾಕಲ್ಲವೇ?
ಏನೋ! ಬದುಕಿನ ರೀತಿಯ ಬಗ್ಗೆ, ಸರಿತಪ್ಪುಗಳ ಬಗ್ಗೆ ನಾವು ಕಲಿತಷ್ಟೂ ಇನ್ನೂ ಕಲಿಯುವುದು ಇದೆ!




