ಹೊ.ವೆ. ಶೇಷಾದ್ರಿ ಅವರು ಕರ್ಮ, ಜ್ಞಾನ, ಭಕ್ತಿ ಮತ್ತು ರಾಜಯೋಗದ ಮಾರ್ಗಗಳ ಮೂಲಕ ಯೋಗದ ಸಾಮಾಜಿಕ ಅನಿವಾರ್ಯತೆ ಕುರಿತು ತಮ್ಮ ವಿಚಾರವನ್ನು ಬಹುಸುಂದರವಾಗಿ ಪ್ರಕಟಿಸಿದ್ದಾರೆ. ಮನುಷ್ಯನಲ್ಲಿರುವ ದೋಷಬೀಜಗಳನ್ನೂ, ಮಾನಸಿಕ ಏರುಪೇರುಗಳನ್ನೂ ನಿರ್ಮೂಲಗೊಳಿಸಿ, ಅವನಲ್ಲಿನ ಜನ್ಮಜಾತ ಗುಣ-ಮೌಲ್ಯಗಳ ಶಕ್ತಿಯನ್ನು ವೃದ್ಧಿಪಡಿಸಿ, ಆ ಶಕ್ತಿಯನ್ನು ಯೋಗದ ಮೂಲಕ ದೈವಾರ್ಪಣ ಮಾಡುವುದು ಹೇಗೆ ಎಂಬುದನ್ನು ಸ್ಪಷ್ಟವಾಗಿ ನಿರೂಪಿಸಿದ್ದಾರೆ.
ಅಕ್ಕರವು ಲೇಖಕ್ಕೆ ತರ್ಕ ತಾ ವಾದಕ್ಕೆ
ಮಿಕ್ಕ ಓದುಗಳು ತಿರುಪೆಗೆ
ಮೋಕ್ಷಕೆರಡಕ್ಕರವೆ ಸಾಕು – ಸರ್ವಜ್ಞ ||
ಆಧುನಿಕ ಜೀವನದಲ್ಲಿ, ಮುಖ್ಯವಾಗಿ ಕೊಳ್ಳುಬಾಕಸಂಸ್ಕೃತಿಯ ಮಧ್ಯೆ ಮನುಷ್ಯ ಸಾಕಷ್ಟು ದೂರ ಬಂದಿರುವ ಈ ಹೊತ್ತಿನಲ್ಲಿ ಸರ್ವಜ್ಞನ ಈ ವಚನ ನಮಗೆ ಏನನ್ನು ಹೇಳಬಲ್ಲದು? “ಬರೆಯುವುದಕ್ಕೆ ಅಕ್ಷರ ಬೇಕು; ವಾದ ಮಾಡಬೇಕಿದ್ದರೆ ತರ್ಕ ಬೇಕು; ಹೊಟ್ಟೆಪಾಡಿಗೆ ಇತರ ಓದು(ವಿದ್ಯೆ)ಗಳು ಬೇಕು; ಆದರೆ ಮೋಕ್ಷಕ್ಕೆ ಇವು ಯಾವುವೂ ಬೇಕಿಲ್ಲ; ಅದಕ್ಕೆ ಎರಡು ಅಕ್ಷರಗಳೇ ಸಾಕು” ಎಂದು ಈ ವಚನ ಹೇಳುತ್ತದೆ. ಎರಡಕ್ಷರ ಎಂದರೆ ಶಿವನೋ ಹರನೋ ಇರಬಹುದು.
ಇಷ್ಟೊಂದು ಸರಳವಾಗಿರುವ ಜೀವನವನ್ನು ನಮ್ಮದಾಗಿಸಿಕೊಳ್ಳಲು ಸಾಧ್ಯವಿದೆ, ಅಲ್ಲವೆ? ಹಾಗಾದರೆ ಆಧುನಿಕ ಮಾನವ ತನ್ನ ಜೀವನವನ್ನೇಕೆ ಸಂಕೀರ್ಣವೂ, ಜಟಿಲವೂ, ಆ ಮೂಲಕ ಕಷ್ಟಮಯವೂ ಆಗಿ ಮಾಡಿಕೊಂಡಿದ್ದಾನೆ? ಇದಕ್ಕೇನು ಪರಿಹಾರ? ಆಧುನಿಕ ಜೀವನದ ಹಲವು ಸಮಸ್ಯೆಗಳಿಗೆ ಪರಿಹಾರವೆಂಬಂತೆ ಮುಂದೆ ಬಂದಿರುವ ಯೋಗ ಈ ವಿಷಯದಲ್ಲಿ ಪಥದರ್ಶಕ ಆಗಬಹುದೆ? ಜಟಿಲವಾದ ಈ ಸಮಸ್ಯೆಗೆ ಅದು ಯಾವ ಪರಿಹಾರವನ್ನು ಸೂಚಿಸಬಲ್ಲದು? ನೊಂದ ಆಧುನಿಕ ಮನಸ್ಸಿಗೆ ಅದು ತಂಪೆರೆಯಬಹುದೆ? – ಮುಂತಾದ ಪ್ರಶ್ನೆಗಳು ಇಂದು ನಮ್ಮನ್ನು ಬಹಳಷ್ಟು ಕಾಡುತ್ತವೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಪ್ರಚಾರಕರಾಗಿದ್ದ ಹೊ.ವೆ. ಶೇಷಾದ್ರಿ ಅವರು `ಸಮಾಜಯೋಗ’ ಎನ್ನುವ ತಮ್ಮ ಕಿರುಹೊತ್ತಿಗೆಯಲ್ಲಿ (ಸಾಹಿತ್ಯ ಸಿಂಧು ಪ್ರಕಾಶನ, ಬೆಂಗಳೂರು, ೨೦೦೧) ಈ ಪ್ರಶ್ನೆಗಳಿಗೆ ಗುಣಾತ್ಮಕವಾದ ಉತ್ತರವನ್ನು ನೀಡಿದ್ದಾರೆ.
ಎಲ್ಲ ಬಗೆಯ ಸುಖ ಇರುವುದು ನಮ್ಮ ಒಳಗೇ ಹೊರತು ಹೊರಗಿನ ಪದಾರ್ಥಗಳಲ್ಲಲ್ಲ ಎಂಬುದೇ ಯೋಗದ ಬುನಾದಿ ಸಿದ್ಧಾಂತ. ಬಾಹ್ಯ ವ್ಯವಸ್ಥೆಗಳನ್ನು ಪರಿವರ್ತಿಸಿ ಸುಖವನ್ನು ಪಡೆಯಲಾಗದು. ಆದ್ದರಿಂದ ನಾವು ನಮ್ಮ ಅಂತರಂಗದತ್ತ ಹೆಚ್ಚು ಗಮನಹರಿಸಬೇಕು ಎಂದು ಯೋಗ ತಿಳಿಸುತ್ತದೆ. ಮೌನದ ಮಹಾಸಾಮ್ರಾಜ್ಯಕ್ಕೆ ರಾಜಮಾರ್ಗವಾಗಿರುವ ಯೋಗ ಎಲ್ಲ ತುಮುಲ (ಕ್ಲೇಶ, ಅಶಾಂತಿ)ಗಳ ಮೂಲಬೇರನ್ನೇ ನಿರ್ಮೂಲಗೊಳಿಸುತ್ತದೆ. ವಿಭಿನ್ನ ರೀತಿಯ ಎಲ್ಲ ಮನುಷ್ಯಸ್ವಭಾವಗಳಿಗೆ ಸರಿಹೊಂದುವ ಬೇರೆಬೇರೆ ಪದ್ಧತಿ ಉಪಾಯಗಳು ಯೋಗದಲ್ಲಿವೆ.
ಯೋಗಿಯೊಬ್ಬ ಸಾಧನೆ ನಡೆಸಲು ಸಹ ಸಮಾಜದ ರಕ್ಷಣೆ ಮತ್ತು ಪೋಷಣೆಗಳ ಅಗತ್ಯ ಇದ್ದೇ ಇರುತ್ತದೆ. ಸಾಮಾಜಿಕ ವಾತಾವರಣ ವಿರುದ್ಧವಾಗಿದ್ದರೆ ಸಾಧನೆ ಇರಲಿ, ಬದುಕುವುದೇ ಅಸಾಧ್ಯ.
ಪುಸ್ತಕಕ್ಕೆ ಬರೆದ ಮುನ್ನುಡಿಯಲ್ಲಿ ಜಗತ್ಪ್ರಸಿದ್ಧ ಯೋಗಗುರು ಬಿ.ಕೆ.ಎಸ್. ಅಯ್ಯಂಗಾರ್, “ಹೊ.ವೆ. ಶೇಷಾದ್ರಿ ಅವರು ಕರ್ಮ, ಜ್ಞಾನ, ಭಕ್ತಿ ಮತ್ತು ರಾಜಯೋಗದ ಮಾರ್ಗಗಳ ಮೂಲಕ ಯೋಗದ ಸಾಮಾಜಿಕ ಅನಿವಾರ್ಯತೆ ಕುರಿತು ತಮ್ಮ ವಿಚಾರವನ್ನು ಬಹುಸುಂದರವಾಗಿ ಪ್ರಕಟಿಸಿದ್ದಾರೆ. ಮನುಷ್ಯನಲ್ಲಿರುವ ದೋಷಬೀಜಗಳನ್ನೂ, ಮಾನಸಿಕ ಏರುಪೇರುಗಳನ್ನೂ ನಿರ್ಮೂಲಗೊಳಿಸಿ, ಅವನಲ್ಲಿನ ಜನ್ಮಜಾತ ಗುಣ-ಮೌಲ್ಯಗಳ ಶಕ್ತಿಯನ್ನು ವೃದ್ಧಿಪಡಿಸಿ, ಆ ಶಕ್ತಿಯನ್ನು ಯೋಗದ ಮೂಲಕ ದೈವಾರ್ಪಣ ಮಾಡುವುದು ಹೇಗೆ ಎಂಬುದನ್ನು ಸ್ಪಷ್ಟವಾಗಿ ನಿರೂಪಿಸಿದ್ದಾರೆ. ಕರ್ಮ, ಜ್ಞಾನ ಮತ್ತು ಭಕ್ತಿ ಮಾರ್ಗಗಳ ಮೂಲಕ ವ್ಯಕ್ತಿಗಳು ತಮ್ಮ ದೈಹಿಕ, ಮಾನಸಿಕ ಮತ್ತು ಬೌದ್ಧಿಕ ಸ್ವಾಸ್ಥ್ಯವನ್ನು ಹೇಗೆ ರೂಢಿಸಿಕೊಳ್ಳಬೇಕೆನ್ನುವುದನ್ನು ವಿವರಿಸಿದ್ದಾರೆ” ಎಂದು ಗುರುತಿಸಿದ್ದಾರೆ.
ಮುಂದುವರಿದು, “ಮನುಷ್ಯನು ಆರೋಗ್ಯಪೂರ್ಣವಾದ ದೇಹ, ಮನಸ್ಸು ಮತ್ತು ಬುದ್ಧಿಯನ್ನು ಪಡೆಯಲು ಪಾತಂಜಲಯೋಗವು ಸಹಾಯಕ. ಸ್ವಸ್ಥ ಶರೀರದ ಜೊತೆಗೆ ಸ್ಪಷ್ಟ-ಶುದ್ಧ-ಶ್ರೇಷ್ಠ ಆಲೋಚನೆಗಳಿಂದ ಕೂಡಿದ ಬುದ್ಧಿಯನ್ನು ಹಾಗೂ ಕಾಮರಹಿತ ಪ್ರೇಮವನ್ನು ಹೊಂದಲು ಅಗತ್ಯವಾದ ಉದಾತ್ತ ಹೃದಯವನ್ನು ರೂಪಿಸಿಕೊಳ್ಳಲು ಈ ಯೋಗದಿಂದ ಸಾಧ್ಯ. ಚೆನ್ನಾಗಿ ಸಂಗೋಪನೆಗೊಂಡ ವ್ಯಕ್ತಿಗತ ಆರೋಗ್ಯದಿಂದ ಸಾಮಾಜಿಕ ಸ್ವಾಸ್ಥ್ಯವನ್ನು ಬೆಳೆಸಲು ಪತಂಜಲಿ `ಮೈತ್ರೀಕರುಣಾಮುದಿತೋಪೇಕ್ಷಾಣಾಂ ಸುಖದುಃಖಪುಣ್ಯಾಪುಣ್ಯವಿಷಯಾಣಾಂ ಭಾವನಾತಶ್ಚಿತ್ತಪ್ರಸಾದನಮ್’ ಎಂಬ ಸೂತ್ರವನ್ನು ಹೇಳಿದ್ದಾನೆ. ಉತ್ತಮರಲ್ಲಿ, ಸಾಧುಗಳಲ್ಲಿ ಸ್ನೇಹಭಾವ, ನೊಂದವರಿಗೆ ಕರುಣೆ, ದುಷ್ಟಬುದ್ಧಿಯವರನ್ನು ಪರಿವರ್ತಿಸಲು ಯತ್ನಿಸಿ ಸಾಧ್ಯವಾಗದಿದ್ದರೆ ಅವರ ಬಗೆಗೆ ಉಪೇಕ್ಷೆ, ಸುಖ-ದುಃಖ, ಗುಣ-ದೋಷಗಳನ್ನು ಒಂದೇ ರೀತಿಯಿಂದ ಕಾಣುವುದರಿಂದ ಮನಸ್ಸು ಪ್ರಶಾಂತವಾಗುತ್ತದೆ” ಎಂದ ಅಯ್ಯಂಗಾರ್, “ಅರ್ಥ ಮತ್ತು ಕಾಮಗಳಿಂದ ಉದ್ಭವಿಸುವ ಮಾನಸಿಕತೆಯ ಏರಿಳಿತಗಳು ಧರ್ಮ-ಮೋಕ್ಷಗಳ ನಡುವೆ ಇರಿಸಿದಾಗ ಹೇಗೆ ಶಮನಗೊಳ್ಳುತ್ತವೆ ಎಂಬುದನ್ನು ಶೇಷಾದ್ರಿಯವರು ಸಮರ್ಪಕವಾಗಿ ಪ್ರಸ್ತುತಪಡಿಸಿದ್ದಾರೆ” ಎಂದು ಮೆಚ್ಚುಗೆ ಸೂಚಿಸಿದ್ದಾರೆ.
`ಸಮಾಜಯೋಗ’ ಎನ್ನುವ ಪುಸ್ತಕದ `ಏನಿದು ಸಮಾಜಯೋಗ?’ ಶೀರ್ಷಿಕೆ ಕುತೂಹಲ ಮೂಡಿಸುವಂತಿದೆ. `ಯೋಗ – ಒಂದು ಸಾಮಾಜಿಕ ಅನಿವಾರ್ಯತೆ’ ಎನ್ನುವ ಪುಸ್ತಕದ ಅಧ್ಯಾಯ ಆ ಕುರಿತ ವಿಚಾರಗಳನ್ನು ಮಂಡಿಸುತ್ತದೆ. “ವ್ಯಕ್ತಿಯ ಉದ್ಧಾರಕ್ಕಾಗಿ ನಡೆಸುವ ವೈಯಕ್ತಿಕ ಸಾಧನೆ ಯೋಗ ಎಂದು ಸಾಮಾನ್ಯವಾಗಿ ಭಾವಿಸಲಾಗಿದೆ. ವ್ಯಕ್ತಿವಿಕಾಸದ ಅಂತಿಮ ಗುರಿ ಮೋಕ್ಷವಾದ್ದರಿಂದ ಯೋಗ ವೈಯಕ್ತಿಕ ವಿಷಯ ಅನ್ನಿಸಿದಲ್ಲಿ ಆಶ್ಚರ್ಯವಿಲ್ಲ. ಆದರೆ ವ್ಯಕ್ತಿ ತನ್ನ ಕುಟುಂಬ, ವ್ಯಾಸಂಗ, ಉದ್ಯೋಗದ ಸ್ಥಳ, ವಾಸಿಸುವ ಗ್ರಾಮ-ಪಟ್ಟಣ, ಸಮಾಜ-ರಾಷ್ಟ್ರಗಳ ಜೀವಂತ ಅಂಗ. ಅದು ಇನ್ನೂ ಹಿಗ್ಗಿ ಸಕಲಸೃಷ್ಟಿಯನ್ನೇ ವ್ಯಾಪಿಸುತ್ತದೆ. `ಆತ್ಮನೋ ಮೋಕ್ಷಾರ್ಥಂ ಜಗದ್ಧಿತಾಯ ಚ’ ಎನ್ನುವ ಉಕ್ತಿಯಂತೆ ಬದುಕಿನ ಪ್ರತಿಯೊಂದು ಹಂತದಲ್ಲೂ ವೈಶ್ವಿಕ ಮತ್ತು ವೈಯಕ್ತಿಕ ಆಯಾಮಗಳೆರಡೂ ಮಿಳಿತಗೊಂಡಿರುತ್ತವೆ. ಪ್ರಸ್ತುತ ಯೋಗದ ಸಾಮಾಜಿಕ ಆಯಾಮವು ಮುಖ್ಯ ವಿಷಯವಾದ್ದರಿಂದ ವ್ಯಕ್ತಿಯ ಸಂಪರ್ಕವಲಯ ವಿಸ್ತಾರವಾದ ಹಾಗೆಲ್ಲ ಯೋಗದ ಮೂಲಕ ಅವನು ತನ್ನ ವ್ಯಕ್ತಿತ್ವವನ್ನು ವಿಕಾಸಗೊಳಿಸಿಕೊಂಡು ತನ್ನ ಸುತ್ತಲಿನವರೊಂದಿಗೆ ನೆಮ್ಮದಿಯಿಂದ ಇರುವುದು ಹೇಗೆ ಎಂಬುದನ್ನು ಚಿಂತಿಸೋಣ” ಎನ್ನುವ ಲೇಖಕರು (ಮೂಲ ಇಂಗ್ಲಿಷ್ ಪುಸ್ತಕದ ಕನ್ನಡ ಅನುವಾದ ಜಿ.ಬಿ. ಹರೀಶ್ ಅವರದ್ದು) ಮುಂದುವರಿದು, “ಇಂದ್ರಿಯಮೂಲದ ಎಲ್ಲ ಬಯಕೆ, ಉದ್ರೇಕಗಳಿಂದ ಬಿಡುಗಡೆಗೊಂಡಾಗ ಮನಸ್ಸು ತನ್ನ ಅಸ್ತಿತ್ವವನ್ನೇ ಕಳೆದುಕೊಂಡು ತನ್ನ ಮೂಲನೆಲೆಯಲ್ಲಿ ಐಕ್ಯವಾಗುತ್ತದೆಂದು ನಮ್ಮ ಯೋಗಿಗಳು ಘೋಷಿಸಿದ್ದಾರೆ. ಯೋಗ ಮನುಷ್ಯನ ವೈವಿಧ್ಯವುಳ್ಳ ಬದುಕನ್ನು ತನ್ನ ತೆಕ್ಕೆಯಲ್ಲಿ ತೆಗೆದುಕೊಳ್ಳುವಷ್ಟರ ಮಟ್ಟಿಗೆ ಸಮಗ್ರ ಆಗಿರುವುದನ್ನು ಮತ್ತೊಂದು ರೀತಿಯಲ್ಲೂ ಪರಿಶೀಲಿಸಬಹುದು” ಎಂದು ಹೇಳುತ್ತಾರೆ. ಅಂದರೆ ತನ್ನ ಮೋಕ್ಷದ ಜೊತೆಗೆ ಜಗತ್ತಿನ ಹಿತವನ್ನೂ ಸಾಧಿಸುವ ಜೀವನದ ಧ್ಯೇಯ ಯೋಗಕ್ಕೆ ಚೆನ್ನಾಗಿ ಒಪ್ಪುತ್ತದೆ; ಅದನ್ನು ಹೊ.ವೆ. ಶೇಷಾದ್ರಿ ಅವರು `ಸಮಾಜಯೋಗ’ ಎನ್ನುವ ಪದದಲ್ಲಿ ಹಿಡಿದಿಟ್ಟಿದ್ದಾರೆ.
ಇನ್ನು ವ್ಯಕ್ತಿಯ ಮಟ್ಟದಲ್ಲಿ ಉತ್ತಮವಾದದ್ದು ಸಮಾಜಕ್ಕೂ ಒಳಿತನ್ನು ಉಂಟುಮಾಡುತ್ತದೆ; ಹಾಗೆಯೇ ಸಾಮಾಜಿಕ ಹಿತ ಇರುವುದರಲ್ಲಿ ವ್ಯಕ್ತಿಯ ಹಿತವೂ ಈಡೇರುತ್ತದೆ; ಏಕೆಂದರೆ ಅವು ಬೇರಾಗದಂಥವು ಎನ್ನುವ ನಿತ್ಯಸತ್ಯ ನಮ್ಮ ಮುಂದೆ ಇದ್ದೇ ಇದೆ.
ಆಧುನಿಕ ಸಮಾಜವು ದ್ವಂದ್ವಗಳ ಸುಳಿಗೆ ಸಿಕ್ಕಿದೆ. ೧೮ನೇ ಶತಮಾನದ ಕೊನೆಯಲ್ಲಿ ಸಂಭವಿಸಿದ ಫ್ರೆಂಚ್ ಕ್ರಾಂತಿಯು ಸ್ವಾತಂತ್ರ್ಯ, ಸಮಾನತೆ, ಸಹೋದರತೆ (Liberty, Equality, Fraternity) ಎನ್ನುವ ತ್ರಿವಳಿ ಮೌಲ್ಯಗಳನ್ನು ಜಗತ್ತಿನ ಮುಂದಿರಿಸಿದ್ದು ನಿಜ. ಆದರೆ ಬಹುತೇಕ ಅದೇ ಹೊತ್ತಿಗೆ ತನ್ನ ಪರಿಣಾಮಗಳನ್ನು ಬೀರಿದ ಯೂರೋಪಿನ ಕೈಗಾರಿಕಾಕ್ರಾಂತಿ ಆ ಮೌಲ್ಯಗಳು ಆಚರಣೆಗೆ ಬರುವುದಕ್ಕೆ ತಡೆಗೋಡೆಯಾಗಿ ನಿಂತಿತು. ಸ್ವಾತಂತ್ರ್ಯ ಎಂಬ ಮೌಲ್ಯ ಅಪಾರ ಸಂಪತ್ತಿನ ಗಳಿಕೆಗೆ ಅವಕಾಶ ಮಾಡಿಕೊಟ್ಟ ಕಾರಣ ಸಮಾನತೆ ಕೈಗೂಡಲು ಕಷ್ಟವಾಯಿತು; ಬಡವ-ಶ್ರೀಮಂತರ ಅಂತರ ಬೆಳೆಯುತ್ತಾ ಹೋಯಿತು. ಸಹೋದರತ್ವವು ಇವುಗಳಷ್ಟೇ ಮುಖ್ಯವಾದದ್ದು ಎಂಬುದನ್ನು ನೆನಪಿನಲ್ಲಿ ಇರಿಸಿಕೊಂಡು ಅನುಷ್ಠಾನಕ್ಕೆ ತರುವ ಕಾರ್ಯ ನಡೆಯಲಿಲ್ಲ; ಪರಿಣಾಮವಾಗಿ ಆರ್ಥಿಕ ಪ್ರಗತಿಯಿಂದ ಸ್ವಾರ್ಥವು ಕೆರಳುವುದಷ್ಟೇ ಮುಂದುವರಿಯಿತು. ಉಳ್ಳವರ ಕೊಳ್ಳುಬಾಕತನ ಒಂದು ಶಾಪವೆನ್ನುವ ಮಟ್ಟಕ್ಕೆ ಬೆಳೆಯಿತು. ೧೯೯೦ರ ದಶಕದ ಆರಂಭದಲ್ಲಿ ಕಾರ್ಯಗತವಾದ ಉದಾರೀಕರಣ-ಖಾಸಗೀಕರಣ-ಜಾಗತೀಕರಣ(ಎಲ್.ಪಿ.ಜಿ.)ಗಳು ಎದುರಾಳಿಯ ಕುತ್ತಿಗೆ ಕೊಯ್ಯುವ ಸ್ಪರ್ಧೆಯನ್ನು ಜಾಗತಿಕರಂಗದಲ್ಲಿ ಇನ್ನಷ್ಟು ತೀವ್ರಗೊಳಿಸಿದವು; ಹಿಂದುಳಿದ ರಾಷ್ಟ್ರಗಳನ್ನು ಶೋಷಿಸುವುದಕ್ಕೆ ಶ್ರೀಮಂತ ದೇಶಗಳಿಗೆ ಇನ್ನಷ್ಟು ಆಯುಧಗಳನ್ನು ಒದಗಿಸಿಕೊಟ್ಟವು.
ಒಡೆಯುವ ವಿಕೃತಿ
ಇನ್ನು ಆಧುನಿಕ ಜಗತ್ತು ಒಪ್ಪಿ, ಅಪ್ಪಿಕೊಂಡ ವಿಜ್ಞಾನದ ದೃಷ್ಟಿಯೇ ವಿಕೃತವಾದದ್ದು. ಡಾರ್ವಿನ್, ಡೆಕಾರ್ಟ್ರ ಕಾಲದಿಂದಲೂ ವಿಜ್ಞಾನವು ಜಗತ್ತನ್ನು ವಿರೂಪಗೊಂಡ ಖಂಡದೃಷ್ಟಿಯಾಗಿ ವಿವರಿಸುತ್ತಾ ಬಂದಿದ್ದು, ಇದು ಬಹಳಷ್ಟು ಸಮಸ್ಯೆಗಳನ್ನು ಹುಟ್ಟುಹಾಕಿದೆ. ಈ ದೃಷ್ಟಿಯ ಪ್ರಕಾರ ಜಗತ್ತು ಒಂದು ಯಾಂತ್ರಿಕವಾದ ಅಸ್ತಿತ್ವ; ಅಂದರೆ ಬಿಡಿಭಾಗಗಳನ್ನು ಸೇರಿಸಿ ತಯಾರಿಸಿದ ಯಂತ್ರದಂತೆ. ಮನುಷ್ಯನನ್ನು ಕೂಡ ದೇಹ-ಮನಸ್ಸುಗಳೆಂಬ ಎರಡು ಭಿನ್ನ ಪದಾರ್ಥಗಳ ಜೋಡಣೆ ಎಂದು ವ್ಯಾಖ್ಯಾನಿಸಿದರು. ಈ ಯಾಂತ್ರಿಕ ದೃಷ್ಟಿಯಿಂದಾಗಿ ಮನುಷ್ಯರು ಪ್ರತ್ಯೇಕ, ವಿಭಿನ್ನ ಎಂದಾಯಿತು. `ನಾನು’ ಕೇವಲ ಒಂದು ಭೌತಿಕ ಪದಾರ್ಥ. ನನ್ನ ಹಾಗೆ ಕಾಣುತ್ತಿರುವ ಇತರ ವ್ಯಕ್ತಿಗಳಿಂದ ನಾನು ತೀರ ಭಿನ್ನ. ನನಗೂ ಅವರಿಗೂ ಯಾವುದೇ ಸಂಬಂಧ ಇಲ್ಲವೆಂಬ ನಡೆ-ನುಡಿ-ನಂಬಿಕೆ ಹಾಗೂ ನಮ್ಮ ಭೌತಿಕ ಆಸೆಗಳನ್ನು ಈಡೇರಿಸಿಕೊಳ್ಳುವುದರಲ್ಲೇ ನಮ್ಮ ಸುಖ ಇದೆ ಎಂಬ ಭಾವನೆ – ಇವೆಲ್ಲ ಅಂತಿಮವಾಗಿ ವಿಜ್ಞಾನದ ಕೊಡುಗೆಗಳೇ ಎನ್ನಬೇಕಾಗುತ್ತದೆ.
ಈ ಹಂತದಲ್ಲಿ ಲೇಖಕರು, ಸುಖದ ಮೂಲ ಯಾವುದು? ಈಗ ಅತ್ಯಂತ ಅಗತ್ಯವಾಗಿರುವ ವ್ಯಕ್ತಿಗಳ ಅಂತರಂಗದ ಪರಿವರ್ತನೆಗೆ ಯೋಗ ಯಾವ ರೀತಿ ಸಹಾಯಕ ಆಗಬಲ್ಲದು? ವ್ಯಷ್ಟಿಯ ಸೀಮಿತ ನೆಲೆಯಿಂದ ಸಮಷ್ಟಿಯ ವಿಸ್ತಾರ ನೆಲೆಗೆ ವ್ಯಕ್ತಿಯ ಪ್ರಜ್ಞೆ ಹೆಚ್ಚು ಹೆಚ್ಚು ವಿಸ್ತರಿಸಲು ಯೋಗವು ಯಾವ ತಂತ್ರ, ಉಪಾಯಗಳನ್ನು ಸೂಚಿಸುತ್ತದೆ? ಹೀಗೆ ಸ್ವವಿಕಾಸದಿಂದ ವ್ಯಕ್ತಿಗೆ ಯಾವ ರೀತಿಯಲ್ಲಿ ಸುಖ-ಸಂತೋಷಗಳು ದೊರೆಯುತ್ತವೆ? ಏಕೆಂದರೆ ಮನುಷ್ಯನ ಎಲ್ಲ ಪ್ರಯಾಸ-ಪ್ರಯೋಗಗಳ ಅಂತಿಮಗುರಿ ಹೆಚ್ಚು ಸುಖಿ ಆಗುವುದು – ಎಂದು ವಿಷಯವನ್ನು ಮಂಡಿಸುತ್ತಾರೆ.
ಸುಖ ಇರುವುದು ಒಳಗೆ
“ಎಲ್ಲ ಬಗೆಯ ಸುಖ ಇರುವುದು ನಮ್ಮ ಒಳಗೇ ಹೊರತು ಹೊರಗಿನ ಪದಾರ್ಥಗಳಲ್ಲಲ್ಲ ಎಂಬುದೇ ಯೋಗದ ಬುನಾದಿ ಸಿದ್ಧಾಂತ. ಬಾಹ್ಯ ವ್ಯವಸ್ಥೆಗಳನ್ನು ಪರಿವರ್ತಿಸಿ ಸುಖವನ್ನು ಪಡೆಯಲಾಗದು. ಆದ್ದರಿಂದ ನಾವು ನಮ್ಮ ಅಂತರಂಗದತ್ತ ಹೆಚ್ಚು ಗಮನಹರಿಸಬೇಕು ಎಂದು ಯೋಗ ತಿಳಿಸುತ್ತದೆ. ಮೌನದ ಮಹಾಸಾಮ್ರಾಜ್ಯಕ್ಕೆ ರಾಜಮಾರ್ಗವಾಗಿರುವ ಯೋಗ ಎಲ್ಲ ತುಮುಲ (ಕ್ಲೇಶ, ಅಶಾಂತಿ)ಗಳ ಮೂಲಬೇರನ್ನೇ ನಿರ್ಮೂಲಗೊಳಿಸುತ್ತದೆ. ವಿಭಿನ್ನ ರೀತಿಯ ಎಲ್ಲ ಮನುಷ್ಯಸ್ವಭಾವಗಳಿಗೆ ಸರಿಹೊಂದುವ ಬೇರೆಬೇರೆ ಪದ್ಧತಿ ಉಪಾಯಗಳು ಯೋಗದಲ್ಲಿವೆ” ಎಂದು ಅದರ ಬಹೂಪಯೋಗಿತ್ವವನ್ನು ಸೂಚಿಸುತ್ತಾರೆ.
ಸ್ವಾರ್ಥಿ ಚಿಂತನೆ, ಭಾವನೆ, ಪ್ರಚೋದನೆಗಳನ್ನು ವ್ಯಕ್ತಿ ತನ್ನ ವಿಶಾಲ ವ್ಯಕ್ತಿತ್ವದಲ್ಲಿ, ಅಂದರೆ ಸಮಾಜದಲ್ಲಿ ಒಂದಾಗಿಸುವ ಮಹೋನ್ನತ ಜೀವನನಿಯಮದ ರಹಸ್ಯ ಯೋಗದಲ್ಲಿದೆ. ಯೋಗದ ಅರ್ಥವೇ ಕೂಡಿಸುವುದು(‘ಯುಜಿರ್ ಯೋಗೇ’); ಪತಂಜಲಿ `ಯೋಗಃ ಚಿತ್ತವೃತ್ತಿ ನಿರೋಧಃ’ ಎಂದಾಗಲೂ ಈ ಅಂಶಕ್ಕೆ ಒತ್ತು ನೀಡಿದ್ದಾನೆ. ಅರಿವನ್ನು ವಿಸ್ತರಿಸಿದಾಗ ಮನಸ್ಸಿನ ಚಂಚಲ ಪ್ರವೃತ್ತಿಗಳು ಶಾಂತಗೊಳ್ಳುತ್ತವೆ. ಜೊತೆಗೆ ಅದು ಸಮಾಜದ ಉನ್ನತ ಧ್ಯೇಯವನ್ನು ನೆರವೇರಿಸುವ ಸಾಧನವಾಗುತ್ತದೆ. ಆಗ ವ್ಯಕ್ತಿ-ಸಮಾಜ ಎರಡೂ ಯಾವುದೇ ಆತಂಕವಿಲ್ಲದೆ ಸಂತೃಪ್ತಿಯ ಸ್ಥಿತಿಯಲ್ಲಿ ಇರುತ್ತವೆ ಎನ್ನುವ ಲೇಖಕ ಶೇಷಾದ್ರಿ ಅವರು “ವಿಜ್ಞಾನವು ಪ್ರಾಕೃತಿಕ ರಹಸ್ಯಗಳನ್ನು ಆಳವಾಗಿ ಶೋಧಿಸಿದಂತೆಲ್ಲ ಇಂದು ಯೋಗದ ಪ್ರಸ್ತುತತೆ ಹೆಚ್ಚಾಗುತ್ತಿದೆ. ಮಾನವಸಮಾಜ ಇಂದಿನ ಕಗ್ಗತ್ತಲೆಯ ಗವಿಯಿಂದ ಹೊರಬರಬೇಕಾದರೆ, ಶಾಂತಿ, ಸುಖ-ಸಮಾಧಾನಗಳ ಸೂರ್ಯರಶ್ಮಿಯಲ್ಲಿ ಮೈಯೊಡ್ಡಿ ನಿಲ್ಲಬೇಕಾದರೆ ಯೋಗ ಬಿಟ್ಟರೆ ಬೇರೆ ದಾರಿ ಇಲ್ಲ” ಎಂದು ನೇರವಾಗಿ ತಿಳಿಸುತ್ತಾರೆ. ಇನ್ನು ವ್ಯಕ್ತಿಯ ವಿಕಾಸಕ್ಕೆ ಸಂಬಂಧಿಸಿ ಹೇಳುವುದಾದರೆ, ಯೋಗವು ವ್ಯಕ್ತಿಗಳ ಅಭಿರುಚಿ, ಭೌತಿಕ, ಬೌದ್ಧಿಕ, ಭಾವನಾತ್ಮಕ ಹಂತಗಳನ್ನು ಗಣನೆಗೆ ತೆಗೆದುಕೊಂಡು ಅವರ ಆತ್ಮವಿಕಾಸಕ್ಕೆ ಅಗತ್ಯವಾದ ಸೂಕ್ತ ವಿಧಾನಗಳನ್ನು ಸೂಚಿಸುತ್ತದೆ. ಇದು ವ್ಯಕ್ತಿಗಳಿಗೆ ತಂತಮ್ಮ ಗುಣಸ್ವಭಾವಗಳಿಗೆ ತಕ್ಕಂತೆ ಆತ್ಮವಿಕಾಸದ ದಾರಿಯನ್ನು ಆಯ್ದುಕೊಳ್ಳಲು ಅವಕಾಶ ಮಾಡಿಕೊಟ್ಟಿದೆ.
ರಾಜಯೋಗ
ಮುಂದೆ ಬಿ.ಕೆ.ಎಸ್. ಅಯ್ಯಂಗಾರರು ಗುರುತಿಸಿದಂತೆ ಜ್ಞಾನ, ಭಕ್ತಿ, ರಾಜಯೋಗ, ಕರ್ಮಯೋಗಗಳ ಮೂಲಕ ಯೋಗದ ಸಾಮಾಜಿಕ ಅನಿವಾರ್ಯತೆಯ ವಿಚಾರ. ಮುಖ್ಯವಾಗಿ ರಾಜಯೋಗಕ್ಕೆ ಸಂಬಂಧಿಸಿ ಅಷ್ಟಾಂಗಯೋಗವು ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧ್ಯಾನ, ಧಾರಣ, ಸಮಾಧಿ ಎನ್ನುವ ಎಂಟು ಹಂತದ ಯೋಗ ನಿಯಮಗಳನ್ನು ಬೋಧಿಸುತ್ತದೆ. ಅವು ನಮ್ಮ ದೈಹಿಕ, ಮಾನಸಿಕ, ಬೌದ್ಧಿಕ ವಿಕೃತಿಗಳನ್ನು ಹದ್ದುಬಸ್ತಿನಲ್ಲಿಡುತ್ತವೆ. ಯೋಗದಿಂದ ಅಂತಃಕರಣ ಬಾಹ್ಯಕರಣಗಳಲ್ಲಿ ಲಯಬದ್ಧತೆ, ಸಮಶ್ರುತಿ ಮೂಡುತ್ತದೆ. ವ್ಯಕ್ತಿತ್ವವು ಅಖಂಡ ಸ್ವರೂಪವನ್ನು ತಳೆದು ಪೂರ್ಣ ಎನಿಸುತ್ತದೆ. ಸಂಪೂರ್ಣ ಸ್ವನಿಯಂತ್ರಣ ಇರುವ ವ್ಯಕ್ತಿ ಹೊರಗಿನ ಆಘಾತ, ಆಮಿಷ, ಉದ್ವಿಗ್ನತೆಗಳಿಂದ ಡೋಲಾಯಮಾನನಾಗದೆ ತಾನು ಸದಾ ಪರಮಸುಖದ ಸ್ಥಿತಿಯಲ್ಲಿರುವ ಜೊತೆಗೆ ತನ್ನ ಸುತ್ತಲಿನ ಜೀವಿಗಳಿಗೂ ಅದೇ ಸುಖವನ್ನು ಹಂಚುತ್ತಾನೆ.
ಯೋಗದ ಮತ್ತೊಂದು ಪ್ರಕಾರ ಜ್ಞಾನಮಾರ್ಗ ಅಥವಾ ಜ್ಞಾನಯೋಗ. `ನನ್ನ ನಿಜಸ್ವರೂಪ ಏನು?’ ಎಂದು ವ್ಯಕ್ತಿ ನಿರಂತರವಾಗಿ ಚಿಂತಿಸುತ್ತಾನೆ. ಅವನಿಗೆ ನಿಧಾನವಾಗಿ ತಾನು ಕೇವಲ ದೇಹವೋ ಮನಸ್ಸೋ ಅಥವಾ ಬುದ್ಧಿಯೋ ಅಲ್ಲವೆಂದು ಅರಿವಾಗುತ್ತದೆ. ಜಡ-ಚೇತನಗಳಲ್ಲಿ ವ್ಯಾಪಿಸಿದ್ದೂ ಅದನ್ನು ಮೀರುವುದೇ ತನ್ನ ಸ್ವರೂಪ ಎಂಬುದು ಅವನ ಅರಿವಿಗೆ ಬರುತ್ತದೆ. ಅಂದರೆ ಜ್ಞಾನಯೋಗಿಯಾದವನು ತನ್ನ ಸುತ್ತಲಿನ ಜೀವಿಗಳೊಂದಿಗೆ ತಾದಾತ್ಮ್ಯ ಹೊಂದುವ ಸರ್ವೋನ್ನತ ಸ್ಥಿತಿಯನ್ನು ಪಡೆಯುತ್ತಾನೆ; ಮನುಷ್ಯನ ಜೀವನನೌಕೆಗೆ ಜ್ಞಾನಯೋಗಿ ದೀಪಸ್ತಂಭ ಆಗುತ್ತಾನೆ.
ಇನ್ನು ಭಕ್ತಿಮಾರ್ಗದಿಂದ ಕೂಡ ಮನೋವಿಕಾರಗಳ ನಿವಾರಣೆ ಸಾಧ್ಯ. ದೈವದೊಡನೆ ಐಕ್ಯಭಾವದಿಂದ ದೈವೀಗುಣಗಳು ಮೈಗೂಡುತ್ತವೆ. ಎಲ್ಲ ಕ್ರಿಯೆಗಳನ್ನು ದೇವರಿಗೆ ಸಮರ್ಪಿಸಿ ದೇವರೊಡನೆ ಒಂದಾಗುವ ಸಾಧನವಿದು. ಇದರಿಂದ `ನಾನು ಮಾಡಿದೆ’ ಎಂಬ ಅಹಂ ಅಳಿದು `ನಾನು ದೇವರ ಕೈಯಲ್ಲಿರುವ ಉಪಕರಣ ಮಾತ್ರ’ ಎಂಬ ಸತ್ಯ ಗೋಚರಿಸುತ್ತದೆ. ಮುಂದೆ ತಾನು ಉಪಕರಣ ಎಂಬ ಭಾವನೆ ಕೂಡ ಇಲ್ಲವಾಗಿ ಎಲ್ಲ ಕಾರ್ಯಗಳನ್ನು ದೈವೀಚೇತನವೇ ನಡೆಸುತ್ತದೆ ಎಂಬ ಭಾವನೆ ಬರುತ್ತದೆ.
ಕರ್ಮಯೋಗ
ಸಾಧನೆಗೆ ಇರುವ ಮತ್ತೊಂದು ದಾರಿಯೆಂದರೆ ಮಾಡಿದ ಕರ್ಮದ ಫಲತ್ಯಾಗದ ಭಾವನೆ. ಇದರಲ್ಲಿ (ಕರ್ಮಯೋಗ) ತನ್ನದಾದ ಕರ್ತವ್ಯವನ್ನು ನಿರ್ವಹಿಸುವುದು ಮುಖ್ಯ. ಅಂತಿಮ ಫಲದ ಕುರಿತು ಇರುವ ಬಯಕೆ- ವ್ಯಾಮೋಹಗಳು ದೂರವಾದರೆ ಅದರಿಂದ ಉಂಟಾಗುವ ಕ್ಷೆಭೆ- ಉದ್ವಿಗ್ನತೆಗಳೂ ಮಾಯವಾಗುತ್ತವೆ. ಶ್ರೀಕೃಷ್ಣ `ಯೋಗಃ ಕರ್ಮಸು ಕೌಶಲಂ’ ಎಂಬುದಾಗಿ ಹೇಳಿದ. ಕೌಶಲದೊಂದಿಗೆ ಕೆಲಸ(ಕರ್ತವ್ಯ)ಗಳನ್ನು ನಿರ್ವಹಿಸುವುದೇ ಯೋಗ. ಫಲಾಪೇಕ್ಷೆಯಿಂದ ದೂರವಿರುವುದು ಹಾಗೂ ಸ್ವಾರ್ಥದಿಂದ ಮುಕ್ತವಾಗಿ ವಿಶಾಲ ಭೂಮಿಕೆಗೆ ಬರುವುದೇ ಕೌಶಲ; ಅದು ಕರ್ಮಫಲತ್ಯಾಗದ ಸ್ಥಿತಿ. `ಲೋಕಸಂಗ್ರಹ’ಕ್ಕಾಗಿ ತಾನು ಮತ್ತೆ ಮತ್ತೆ ಬರುತ್ತೇನೆ ಎಂಬುದಾಗಿ ಶ್ರೀಕೃಷ್ಣ ಹೇಳಿದ. “ಈ ಪ್ರಪಂಚದಿಂದ ನಾನು ಪಡೆಯಬೇಕಾದದ್ದು ಏನೂ ಇಲ್ಲ; ಮಾಡಬೇಕಾದ ಬಾಧ್ಯತೆಗಳು ಕೂಡ ಏನೂ ಇಲ್ಲ. ಆದರೂ ಮಾನವರ ಉದ್ಧಾರವಾಗಲೆಂದು ಮಾತ್ರ ನಾನು ನಿರಂತರವಾಗಿ ಕಾರ್ಯನಿರತನಾಗಿದ್ದೇನೆ” ಎಂಬುದೇ ಲೋಕಸಂಗ್ರಹ. `ಜಗತ್ತಿನಲ್ಲಿ ಶ್ರೇಷ್ಠನಾದವನು ಏನು ಮಾಡುತ್ತಾನೋ ಇತರರರು ಅದನ್ನೇ ಮಾಡುತ್ತಾರೆ.’ ತನಗೆ ಕರ್ಮಬಂಧನವಿಲ್ಲದಿದ್ದರೂ ಇತರರಿಗೊಂದು ಮಾದರಿ ಆಗುವುದಕ್ಕಾಗಿ ಆತ ಕರ್ಮನಿರತನಾಗುತ್ತಾನೆ.
ಕರ್ಮಫಲದ ನಿರೀಕ್ಷೆ ನೀಗಿತೆಂದರೆ ಯಾವುದೇ ಮಾನಸಿಕ ಒತ್ತಡ, ವಿಕಾರಗಳಿಲ್ಲದೆ ಕೆಲಸದ ಬಗ್ಗೆ ಪೂರ್ಣಗಮನ ಹರಿಸಲು ಸಾಧ್ಯವಾಗುತ್ತದೆ; ಅದರಿಂದ ಫಲವೂ ಚೆನ್ನಾಗಿ ಬರುತ್ತದೆ. ೨೦ನೇ ಶತಮಾನದ ಹೆಚ್ಚಿನ ಆಧ್ಯಾತ್ಮಿಕ ಅಗ್ರಣಿಗಳು ಕರ್ಮಯೋಗದ ತತ್ತ್ವವನ್ನು ಒತ್ತಿಹೇಳಿದ್ದಾರೆ. ನಮ್ಮ ಕರ್ಮಫಲವನ್ನು ಸಮಾಜರೂಪಿ ಭಗವಂತನಿಗೆ ಅರ್ಪಿಸಬೇಕೆಂಬುದು ಸಂದೇಶದ ಸಾರಾಂಶ. ಶ್ರೀರಾಮಕೃಷ್ಣ ಪರಮಹಂಸರು `ಜೀವನೇ ಶಿವ, ಶಿವನೇ ಜೀವ’ ಎನ್ನುತ್ತಿದ್ದರು. ಭಾರತದ ದರಿದ್ರರಲ್ಲಿ ಅಜ್ಞಾನಿಗಳಲ್ಲಿ, ರೋಗಿಗಳಲ್ಲಿ ಪರಮಾತ್ಮನನ್ನು ಕಂಡು, ನಿಷ್ಕಾಮಭಾವದಿಂದ ಅವರ ಸೇವೆ ಮಾಡಿ ಎಂದು ಸ್ವಾಮಿ ವಿವೇಕಾನಂದರು ತಮ್ಮ ಸಿಡಿಲಧ್ವನಿಯಲ್ಲಿ ಕರೆ ನೀಡಿದ್ದಾರೆ.
ಅರ್ಥ, ಕಾಮಗಳಿಗೂ ನಮ್ಮಲ್ಲಿ ಗೌರವದ ಸ್ಥಾನವಿದೆ. ಆದರೆ ಅವು ಧರ್ಮದ ಚೌಕಟ್ಟಿನಲ್ಲಿರಬೇಕು. ವ್ಯಕ್ತಿಗಳು ಹೊಂದಾಣಿಕೆಯಿಂದ ಇರುವಂತೆ ಮಾಡಿ, ಸಮಾಜ ಬಾಳುವಂತೆ ಮಾಡುವುದಕ್ಕೇ ಧರ್ಮವೆಂದು ಹೆಸರು. (‘ಧಾರಣಾತ್ ಧರ್ಮಮಿತ್ಯಾಹುಃ ಧರ್ಮೋ ಧಾರಯತಿ ಪ್ರಜಾಃ’) ವ್ಯಕ್ತಿ ಮತ್ತು ಸಮಾಜಗಳೆರಡರ ಸುಖವನ್ನು ಏಕಪ್ರಕಾರವಾಗಿ ನೋಡಿಕೊಳ್ಳುವ ನಿಯಮವಿದು. `ಯಥೋsಭ್ಯುದಯನಿಃಶ್ರೇಯಸ ಸಿದ್ಧಿಃ ಸ ಧರ್ಮಃ’ ಎಂಬ ವಾಕ್ಯ ಇದೇ ವಿಚಾರವನ್ನು ಮುಂದುವರಿಸಿ, ಭೌತಿಕ ಸುಖ-ಸಮೃದ್ಧಿಗಳೊಂದಿಗೆ ಅಂತಿಮ ಪುರುಷಾರ್ಥವಾದ ಮೋಕ್ಷದ ಹೆಬ್ಬಾಗಿಲು ಕೂಡ ಧರ್ಮದಿಂದಲೇ ತೆರೆಯುತ್ತದೆ ಎಂದು ಹೇಳುತ್ತದೆ.
ಈ ಎಲ್ಲ ಕಡೆಗಳಲ್ಲಿ ಕಾಣುವ ಸ್ಪಷ್ಟ ಅಂಶವೆಂದರೆ, ಯೋಗಕ್ಕೆ ಇರುವ ಸಾಮಾಜಿಕ ಮುಖ. ಸಮಾಜಕಲ್ಯಾಣ ಮತ್ತು ಆತ್ಮಕಲ್ಯಾಣ ಇವೆರಡೂ ಒಂದೇ ನಾಣ್ಯದ ಎರಡು ಮುಖಗಳಂತೆ. ಯೋಗಕ್ಕೆ ಸಾವಿರಾರು ವರ್ಷಗಳ ಪರಂಪರೆ ಇದೆ. ಹಲವು ಧಾರೆಗಳ ರೂಪದಲ್ಲಿ ಅದು ನಮ್ಮ ತನಕ ಹರಿದುಬಂದಿದೆ. ಇದು ಅನೇಕ ಯೋಗಿಗಳ ಸಾಧನೆ, ಸಿದ್ಧಿ ಮತ್ತು ಪೀಳಿಗೆಯಿಂದ ಪೀಳಿಗೆಗೆ ಸಮಾಜ ಕಾಪಾಡಿಕೊಂಡು ಬಂದಿರುವ ಸಾಧನೆಯ ಸಂಯುಕ್ತ ಅನುಭವದ ಫಲ.
ಯೋಗದಲ್ಲಿದೆ ಮುಕ್ತತೆ
ಒಂದು ಗುರಿಗಾಗಿ ನಿರ್ದಿಷ್ಟ ನಾಮ, ರೂಪ, ಗುಣ, ಲಕ್ಷಣಗಳಿಗೆ ಬದ್ಧರಿರಬೇಕೆಂಬ ಯಾವ ಹೇರಿಕೆಯೂ ಯೋಗದಲ್ಲಿಲ್ಲ. ಯಾವುದೇ ಚಮತ್ಕಾರಿಕ ಶಕ್ತಿಯನ್ನು ಒಪ್ಪಬೇಕೆಂಬ ಅಗತ್ಯವೂ ಇಲ್ಲ. ಏಕೆಂದರೆ ಇದು ಸ್ವಾನುಭವಕ್ಕೆ ಸಂಬಂಧಿಸಿದ್ದು. ವೈಜ್ಞಾನಿಕವಾಗಿ ಸಮರ್ಥನೀಯವಾದದ್ದು. ಆಧುನಿಕ ಸಮಾಜಗಳಿಗೆ ಯೋಗವು ಆಪ್ಯಾಯಮಾನವಾಗಲು ಇದೇ ಕಾರಣ. ಒಟ್ಟಿನಲ್ಲಿ ಯೋಗದ ಪ್ರತಿಯೊಂದು ದಾರಿಯೂ ವ್ಯಕ್ತಿಯ ಆತ್ಮವಿಕಾಸ, ಸ್ವಸಂತೋಷಗಳೊಂದಿಗೆ ಸಾಮಾಜಿಕ ಸಾಮರಸ್ಯ, ನೆಮ್ಮದಿ ಮತ್ತು ಹಿತಗಳನ್ನು ಸಾಧಿಸುತ್ತದೆ. ಆಧುನಿಕ ಜೀವನವು ನೆಮ್ಮದಿ-ಸಂತೋಷಗಳನ್ನು ನಾಶಮಾಡುವ ಕಾರಣ ಯೋಗನಿಷ್ಠ ಜೀವನಶೈಲಿಗೆ ಜಗತ್ತಿನಾದ್ಯಂತ ಮಹತ್ತ್ವ ಏರುತ್ತಿದೆ.
ಸಾಂದರ್ಭಿಕವಾಗಿ ಲೇಖಕರು ಅಮೆರಿಕದ ಒಂದು ದೊಡ್ಡಕಂಪೆನಿಯಲ್ಲಿರುವ ತಮ್ಮ ಒಬ್ಬ ಗೆಳೆಯ ಹೇಳಿದ ಒಂದು ಸಂದರ್ಭವನ್ನು ಉಲ್ಲೇಖಿಸುತ್ತಾರೆ: “ಕಂಪೆನಿಯಲ್ಲಿ ಬಹಳಷ್ಟು ಸಿಬ್ಬಂದಿಯಿದ್ದು ಅವರು ಸಾಕಷ್ಟು ಮಾನಸಿಕ ಒತ್ತಡದಲ್ಲಿ ಕೆಲಸ ಮಾಡಬೇಕಾಗುತ್ತದೆ. ಅದಕ್ಕಾಗಿ ಕಂಪೆನಿಯಲ್ಲಿ ಸಿಬ್ಬಂದಿಯ ಮಾನಸಿಕ ಆರಾಮಕ್ಕಾಗಿ ತರಗತಿಗಳನ್ನು ನಡೆಸುತ್ತೇವೆ. ಆದರೆ ಅದರಿಂದ ತಾತ್ಕಾಲಿಕ ಉಪಶಮನ ಮಾತ್ರ. ಶಾಶ್ವತ ಶಾಂತಿ-ಸಮಾಧಾನಗಳ ಜೊತೆಗೆ ನೀವು ಮಾಡುವ ಕೆಲಸದಲ್ಲಿ ದಕ್ಷತೆಯನ್ನು ಕೂಡ ಬಯಸುವುದಾದರೆ ನಿಮಗಾಗಿ ಇಲ್ಲೊಂದು ಪುಸ್ತಕವಿದೆ. ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಾದ ಸರಳ ನಿಯಮಗಳು ಅದರಲ್ಲಿವೆ; ಈ ಪುಸ್ತಕದ ಹೆಸರು ಭಗವದ್ಗೀತೆ” – ಎಂದು ಆ ಗೆಳೆಯ ಹೇಳಿದರಂತೆ. ತನ್ನ ಜೀವನವಿರಲಿ; ಅನ್ಯರದ್ದೇ ಇರಲಿ; ಜೀವನವೆಂದರೆ ಆನಂದಮಯ ಆಟದಂತೆ ಎಂದು ಬದುಕಿ ತೋರಿಸಿದವನೆಂದರೆ ಶ್ರೀಕೃಷ್ಣ. ಯೋಗಿಯು ಸಮಾಜದಲ್ಲಿ ಹೇಗಿರುತ್ತಾನೆಂದು ಆತ ತೋರಿಸಿದ್ದಾನೆ. ವ್ಯಕ್ತಿಸೀಮಿತವಾದ ಪ್ರಜ್ಞೆ ವಿಶಾಲವಾದ ಸಾಮಾಜಿಕ ಪ್ರಜ್ಞೆಯಾಗಿ ಹೇಗೆ ವಿಕಾಸ ಆಗುತ್ತದೆಂದು ಆತ ವಿವರವಾಗಿ ತಿಳಿಸಿದ್ದಾನೆ.
ಸಮಾಜಕಾರ್ಯದಲ್ಲಿ ಯೋಗ
`ಯೋಗಃ ಕರ್ಮಸು ಕೌಶಲಂ’ ಎಂಬ ಉಕ್ತಿಯಂತೆ ಕೆಲಸದಲ್ಲಿ ಕೌಶಲವಿದ್ದರೆ ಸಾಲದು; ಕೆಲಸದ ಫಲವನ್ನು ಬಯಸದಿರುವುದು ಅಷ್ಟೇ ಮುಖ್ಯ (‘ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ’ – ಭಗವದ್ಗೀತೆ). ಫಲಾಪೇಕ್ಷೆ ಇಲ್ಲದಿರುವಾಗ ಕರ್ಮದಲ್ಲಿ ಕುಶಲತೆ ಬರುತ್ತದೆಯೆ – ಎನ್ನುವ ಒಂದು ಪ್ರಶ್ನೆ ಬರಬಹುದು. ಫಲ ಬೇಕಿಲ್ಲ ಎನ್ನುವಾಗ ಹೇಗಾದರೂ ಸರಿ ಎನ್ನುವ ಭಾವನೆ. ಆದರೆ ಇದರಲ್ಲಿ ವೈರುಧ್ಯ ಇಲ್ಲ ಎಂಬುದಾಗಿ ಶ್ರೀಕೃಷ್ಣ ಸ್ಪಷ್ಟಪಡಿಸುತ್ತಾನೆ; ಫಲದ ಬಗ್ಗೆ ಯೋಚಿಸುತ್ತಾ ಕುಳಿತರೆ ಕುಶಲತೆ ಬರುವುದಿಲ್ಲ ಎನ್ನುವ ಆತನ ಅಭಿಪ್ರಾಯ ಎಲ್ಲರ ಅನುಭವವೂ ಹೌದು. ಪ್ರಯತ್ನದ ಯಶಸ್ಸಿಗೆ ಹಿಗ್ಗಬಾರದು; ಸೋಲಿನಿಂದ ಕುಗ್ಗಬಾರದು; ಕರ್ಮಿಯು ಅಂಟದೆ ಇರಬೇಕು ಎನ್ನುವ ಶ್ರೀಕೃಷ್ಣ, “ಎಲ್ಲ ನನಗೆ ಅರ್ಪಿಸಿಬಿಡು” ಎಂದು ಸೂಚಿಸುತ್ತಾನೆ. ಕೆಲಸದಲ್ಲಿ ಸಂಪೂರ್ಣ ತೊಡಗಿಸಿಕೊಂಡೂ ಮನಸ್ಸಿನ ಸಮತೋಲನವನ್ನು ಉಳಿಸಿಕೊಳ್ಳುವುದು ಕರ್ಮಯೋಗದ ಕಠಿಣ ಹಂತ. ಜ್ಞಾನ, ಭಕ್ತಿ, ಕರ್ಮ, ರಾಜಯೋಗ – ಹೀಗೆ ಯಾವ ಯೋಗವೇ ಇರಲಿ, ಮನಸ್ಸು ತಲಪಬೇಕಾದ ಕೊನೆಯ ಸ್ಥಿತಿ ಒಂದೇ: ಸಮತ್ವ, ಸಾಕ್ಷೀಭಾವ, ಚಿತ್ತವೃತ್ತಿನಿರೋಧ, ತಟಸ್ಥತೆ, ಸ್ಥಿತಪ್ರಜ್ಞತ್ವ. ಮನುಷ್ಯ ಜೀವನದ ಅಂತರಂಗ, ಬಹಿರಂಗಗಳೆರಡರ ಅತಿಶ್ರೇಷ್ಠ ಆನಂದ, ಆಹ್ಲಾದಗಳಿರುವುದು ಇದರಲ್ಲೇ.
ಎಲ್ಲ ಸಂಗತಿಗಳು ಸ್ತಬ್ಧವಾದಾಗ ಮನಸ್ಸಿನ ಅಸ್ತಿತ್ವ ಉಳಿಯದು. ಆತ್ಮನನ್ನು ಮುಸುಕಿದ್ದ ಮನಸ್ಸೆಂಬ ಮೋಡವು ಚದುರಿಹೋಗಿ ಪ್ರತಿಯೊಂದು ನರನಾಡಿಗಳಲ್ಲೂ ಅದರ ಒಳಬೆಳಕು ಪ್ರಜ್ವಲಿಸತೊಡಗುತ್ತದೆ. ಆನಂದದ ಪರಮಸ್ಥಿತಿಯನ್ನು ಹೊಂದುವುದೇ ಬದುಕಿನ ಪರಮಗುರಿ. ಮೋಕ್ಷ ಸಿದ್ಧಿಸಿದವನು ಸಾಮಾಜಿಕ ಬಾಧ್ಯತೆಯಿಂದ ಮುಕ್ತನಾಗುತ್ತಾನೆಂದು ಕೆಲವರು ನಂಬಿದ್ದಾರೆ; ಆದರೆ ಈ ಪ್ರಶ್ನೆಯ ಪ್ರಾಯೋಗಿಕ ಮುಖ ನೋಡೋಣ ಎನ್ನುವ `ಸಮಾಜಯೋಗ’ದ ಲೇಖಕರು, “ಯೋಗಿಯೊಬ್ಬ ಸಾಧನೆ ನಡೆಸಲು ಸಹ ಸಮಾಜದ ರಕ್ಷಣೆ ಮತ್ತು ಪೋಷಣೆಗಳ ಅಗತ್ಯ ಇದ್ದೇ ಇರುತ್ತದೆ. ಸಾಮಾಜಿಕ ವಾತಾವರಣ ವಿರುದ್ಧವಾಗಿದ್ದರೆ ಸಾಧನೆ ಇರಲಿ, ಬದುಕುವುದೇ ಅಸಾಧ್ಯ” ಎಂದು ಗುರುತಿಸುತ್ತಾರೆ. ರಾಮ, ಕೃಷ್ಣ, ಬುದ್ಧ, ಶಂಕರಾಚಾರ್ಯರೆಲ್ಲ, `ಆತ್ಮನೋ ಮೋಕ್ಷಾರ್ಥಂ, ಜಗದ್ಧಿತಾಯ ಚ’ ಎಂದು ಜೀವಿಸಿದವರೆಂದು ಉಲ್ಲೇಖಿಸುತ್ತಾರೆ. ವಸುಧೈವ ಕುಟುಂಬಕಮ್, ಸ್ವದೇಶೋ ಭುವನತ್ರಯಮ್, ಕೃಣ್ವಂತೋ ವಿಶ್ವಮಾರ್ಯಂ ಮುಂತಾದ ಉದಾತ್ತ ಉಕ್ತಿಗಳ ಉತ್ತಾರಾಧಿಕಾರಿಗಳಾದ ಹಿಂದುಗಳ ಮೇಲೆ ವಿಶೇಷ ಹೊಣೆಗಾರಿಕೆಯಿದೆ; ಸಕಲ ಜೀವಿಗಳಿಗೂ ಹಿತವಾಗಲಿ ಎಂಬುದೇ ನಮ್ಮ ಪ್ರಾರ್ಥನೆ. ವೇದಕಾಲದ ಋಷಿಮುನಿಗಳಿಂದ ಮೊದಲುಗೊಂಡು ಈಚಿನ ದಯಾನಂದ ಸರಸ್ವತಿ, ಸ್ವಾಮಿ ವಿವೇಕಾನಂದ, ಸ್ವಾಮಿ ರಾಮತೀರ್ಥ, ಶ್ರೀ ಅರವಿಂದರು, ತಿಲಕ್, ಗಾಂಧಿಯವರ ತನಕ ಎಲ್ಲರೂ ಈ ರಾಷ್ಟ್ರೀಯ ಧ್ಯೇಯದ ಬೆಳಕನ್ನೇ ನಮಗೆ ನೀಡಿದ್ದಾರೆ ಎನ್ನುತ್ತಾರೆ.
ಅತಿದೊಡ್ಡ ಧರ್ಮವೆಂದರೆ ಸ್ವತಂತ್ರ, ಸಂಘಟಿತ, ಸಾಂಸ್ಕೃತಿಕವಾಗಿ, ಆಧ್ಯಾತ್ಮಿಕವಾಗಿ ಬಲಸಂಪನ್ನ ಸಮಾಜವನ್ನು ಕಾಪಾಡಿಕೊಳ್ಳುವುದು. ಅದನ್ನು ಸರಿಯಾಗಿ ಆಚರಿಸಿದಾಗ ಮಾತ್ರ ವೈಯಕ್ತಿಕ ಧರ್ಮ, ಕುಟುಂಬ ಧರ್ಮ ಇತ್ಯಾದಿ ಧರ್ಮಗಳನ್ನು ನೆರವೇರಿಸಲು ಸಾಧ್ಯವಾಗುತ್ತದೆ. ಸ್ವಂತದ ಇಷ್ಟಾನಿಷ್ಟಗಳಿಂದ ಮೇಲೇರಿ ಧರ್ಮದ ವಿಶಾಲ ದೃಷ್ಟಿಯನ್ನು ವಿವೇಚನಯುತವಾಗಿ ಹೇಗೆ ಮನಗಾಣಬೇಕು ಎಂಬುದಕ್ಕೆ `ಮಹಾಭಾರತ’ ಯುದ್ಧ ಸಂದರ್ಭದಲ್ಲಿ ಶ್ರೀಕೃಷ್ಣ ಆಚರಿಸಿ ತೋರಿಸಿದ್ದೇ ನಮಗೆ ಮಾದರಿ ಎನ್ನುವ ಲೇಖಕರು, ರಾಷ್ಟ್ರೀಯ ಹಿತದ ಎದುರು ವೈಯಕ್ತಿಕ ಮೌಲ್ಯಗಳ ನೆರಳು ಕೂಡ ಸುಳಿಯಬಾರದು ಎಂದು ನಿರ್ದೇಶಿಸುತ್ತಾರೆ.
ವ್ಯಕ್ತಿತ್ವ ವಿಕಸನದತ್ತ
ಮುಂದೆ ಪುಸ್ತಕವು ಯೋಗದ ವ್ಯಾಪ್ತಿಯನ್ನು ಇನ್ನಷ್ಟು ವಿಸ್ತರಿಸುತ್ತದೆ. ಕೆಲವು ಮೌಲ್ಯಗಳ ಔನ್ನತ್ಯವನ್ನು ವಿಶ್ಲೇಷಿಸುತ್ತದೆ. ಒಂದು ಅರ್ಥದಲ್ಲಿ ಇಂದು ಬಹಳಷ್ಟು ಚಲಾವಣೆಯಲ್ಲಿರುವ `ವ್ಯಕ್ತಿತ್ವವಿಕಸನ’ದ ಕಡೆಗೂ ಸ್ವಲ್ಪಮಟ್ಟಿಗೆ ವಾಲುತ್ತದೆ. ಆದರೆ ವಿವರಣೆ – ವಿಶ್ಲೇಷಣೆಗಳು ತಮ್ಮ ಮಟ್ಟವನ್ನು ಬಿಟ್ಟುಕೊಡುವುದಿಲ್ಲ ಎಂಬುದು ಸತ್ಯ.
`ನನಗೆ ಜಗತ್ತನ್ನು ಕುರಿತಾದ ದೂರುಗಳೇನೂ ಇಲ್ಲ’ ಎನ್ನುವ ಯುವ ತಪಸ್ವಿಯ ಒಂದು ಮಾತು, `ಆ ಕುರಿತು ದೂರಿದರೆ ಉಪಯೋಗವಿಲ್ಲ’ ಎನ್ನುವ ಇನ್ನೊಂದು ಮಾತನ್ನು ಉದಾಹರಿಸುವ ಲೇಖಕರು, ವಸ್ತುನಿಷ್ಠವಾಗಿ ನೋಡುವುದು ಕಷ್ಟ. ಎಲ್ಲರದೂ ವ್ಯಕ್ತಿನಿಷ್ಠ ದೃಷ್ಟಿ ಎನ್ನುತ್ತಾ, “ನಮ್ಮ ಸ್ಥಿತಿ ಶೋಚನೀಯ ಆಗುವುದು ಹೊರಪ್ರಪಂಚದಿಂದಲ್ಲ; ಬದಲಾಗಿ ಆ ಪ್ರಪಂಚಕ್ಕೆ ನಾವು ತೋರುವ ಪ್ರತಿಕ್ರಿಯೆಯಿಂದ” ಎಂದು ವಿಶ್ಲೇಷಿಸುತ್ತಾರೆ. ವ್ಯಕ್ತಿನಿಷ್ಠವಾಗಿ ನೋಡಿದಾಗ ದೂರುಗಳು ಇರುತ್ತವೆ; ರಾಗದ್ವೇಷಗಳ ಗಡಿದಾಟಿದರೆ ಇರುವುದಿಲ್ಲ. ನಮ್ಮೊಳಗೆ ಶಾಂತಿ ನೆಲೆಸಿದರೆ ಹೊರಗಡೆ ಶಾಂತಿಯಿಂದ ಬದುಕಲು ಸಾಧ್ಯ; ಆಗ ಹೊರಗಿನ ಬಗ್ಗೆ ದೂರು ಇರುವುದಿಲ್ಲ.
ವಿಶ್ವವು ವೈರುಧ್ಯಗಳ ಅಖಂಡ ನೇಯ್ಗೆ; ಆ ವಿವಿಧತೆಯನ್ನು ನಾವು ಅಂಗೀಕರಿಸಬೇಕು ಎನ್ನುತ್ತಾ ಒಂದು ಪ್ರಾಯೋಗಿಕ ಸಮಸ್ಯೆಯನ್ನು ಎತ್ತುತ್ತಾರೆ. “ಒಳ್ಳೆಯದರ ಪರ ವಹಿಸುವುದರಿಂದ ನಾವು ಸಾಮಾಜಿಕ ಕೆಡುಕುಗಳ ಸವಾಲನ್ನು ಸದಾ ಎದುರಿಸಬೇಕಾಗುತ್ತದೆ. ಕೆಡುಕನ್ನು ಕುರಿತು ಪ್ರಚಾರ ಮಾಡಿ ಅದರ ಕುರಿತು ಜನರನ್ನು ಜಾಗೃತಗೊಳಿಸದೆ ಇರುವುದು ಹೇಗೆ? ಆದರೆ ಒಂದೇ ಸಮನೆ ದ್ವೇಷ, ತುಚ್ಛೀಕರಣದಿಂದ ಇನ್ನೊಬ್ಬರ ಬಗ್ಗೆ ಚಿಂತಿಸುತ್ತಾ, ಮಾತನಾಡುತ್ತಾ, ವರ್ತಿಸುತ್ತಾ ಇದ್ದರೆ ಅವನ ವ್ಯಕ್ತಿತ್ವವೂ ಅದೇ ರೀತಿ ನಕಾರಾತ್ಮಕದ್ದಾಗುತ್ತದೆ. ಅದರಿಂದ ಗುಣವಂತನೂ ಭಗ್ನವ್ಯಕ್ತಿತ್ವದ ದೋಷಕ್ಕೆ ಪಕ್ಕಾಗುತ್ತಾನೆ” ಎಂದು ವಿವರಿಸಿ, ಉದಾತ್ತ ಧ್ಯೇಯ ಇರುವವರು ಬಾಹ್ಯಪ್ರಪಂಚವನ್ನು ಸಕಾರಾತ್ಮಕ ದೃಷ್ಟಿಯಿಂದಲೇ ನೋಡಬೇಕೆಂದು ತೀರ್ಮಾನಿಸುತ್ತಾರೆ; ಸ್ಪಂದಿಸುವ ಮಾನವೀಯತೆಯನ್ನು ಕಳೆದುಕೊಳ್ಳಬಾರದು ಎನ್ನುತ್ತಾರೆ.
ವಿಜ್ಞಾನವು ಪ್ರಾಕೃತಿಕ ರಹಸ್ಯಗಳನ್ನು ಆಳವಾಗಿ ಶೋಧಿಸಿದಂತೆಲ್ಲ ಇಂದು ಯೋಗದ ಪ್ರಸ್ತುತತೆ ಹೆಚ್ಚಾಗುತ್ತಿದೆ. ಮಾನವಸಮಾಜ ಇಂದಿನ ಕಗ್ಗತ್ತಲೆಯ ಗವಿಯಿಂದ ಹೊರಬರಬೇಕಾದರೆ, ಶಾಂತಿ, ಸುಖ-ಸಮಾಧಾನಗಳ ಸೂರ್ಯರಶ್ಮಿಯಲ್ಲಿ ಮೈಯೊಡ್ಡಿ ನಿಲ್ಲಬೇಕಾದರೆ ಯೋಗ ಬಿಟ್ಟರೆ ಬೇರೆ ದಾರಿ ಇಲ್ಲ.
ಜಗತ್ತು ದೈವಿಕ ನರ್ತನ
ಜಗತ್ತಿನ ವಿದ್ಯಮಾನಗಳನ್ನು ದೈವಿಕ ನರ್ತನವೆಂಬಂತೆ ನೋಡಬೇಕು. ನಮ್ಮಲ್ಲಿ ಮತ್ತು ಇತರರಲ್ಲಿರುವ ಸಾಮಾನ್ಯ ಅಂಶವೊಂದನ್ನು ಕಂಡುಕೊಳ್ಳಬೇಕು. ಋಷಿಮುನಿಗಳು ಅದನ್ನು ದಿವ್ಯತೆಯ ಅಂಶವೆಂದು ಕರೆದರು. ಈ ಭಾವನೆ ನಮ್ಮಲ್ಲಿ ಉತ್ಕಟವಾಗಿದ್ದಾಗ ಮತ್ತೊಬ್ಬರಿಗೆ ಒಳ್ಳೆಯದಾಗಲೆಂದು ನೋವು ಅನುಭವಿಸಲು, ತ್ಯಾಗ ಮಾಡಲು ನಾವು ಸಿದ್ಧರಾಗುತ್ತೇವೆ ಎನ್ನುತ್ತಾ, “ನಿಜವಾಗಿ ಅಸತ್ಯ ಎಂಬುದೇ ಇಲ್ಲ; ಇರುವುದೆಲ್ಲ ಸತ್ಯದ ಪಾರ್ಶ್ವದರ್ಶನಗಳು” ಎನ್ನುವ ಸ್ವಾಮಿ ವಿವೇಕಾನಂದರ ಮಾತನ್ನು ಉಲ್ಲೇಖಿಸುತ್ತಾರೆ. ಏಕೆಂದರೆ ನಮ್ಮ ಮೂಗಿನ ನೇರಕ್ಕೆ ನೋಡಿದರೆ ಇನ್ನೊಬ್ಬನ ಮಾತು ನಮಗೆ ಸುಳ್ಳಾಗಿ ಕಾಣಬಹುದು; ಬದಲಾಗಿ ಅವನ ನೆಲೆಯಲ್ಲಿ ನಿಂತುನೋಡಿದರೆ ಅದು ಕೂಡ ಸತ್ಯ ಎಂಬ ಅರಿವು ಉಂಟಾಗುತ್ತದೆ. ಇದರಲ್ಲಿ ಸಾಮಾಜಿಕ ಕಾರ್ಯಕರ್ತ, ನಮ್ಮ ಸುತ್ತ ನಡೆಯುವ ಬದುಕಿನ ಬೇಕು-ಬೇಡಗಳು, ಸರಿ-ತಪ್ಪು, ಪ್ರೀತಿ-ದ್ವೇಷ ಇಂತಹ ದ್ವಂದ್ವ ಸಂಘರ್ಷಗಳಿಲ್ಲದ ಸ್ಥಿತಿಗೆ ಮುಟ್ಟಿ ಅವೆಲ್ಲ ದೈವತ್ವದ ನರ್ತನವೆಂದು ನೋಡುವ ಸ್ಥಿತಿಗೆ ತಲಪಬೇಕು.
`ನಿರೀಕ್ಷೆ ಎಂಬ ಅಪರಾಧಿ’ ಪುಸ್ತಕದ ಒಂದು ಆಕರ್ಷಕ ಉಪಶೀರ್ಷಿಕೆ. “ಪ್ರತಿಕ್ಷಣ ನಮ್ಮ ಸುತ್ತ ಜರಗುತ್ತಿರುವ ಘಟನೆಗಳೆಲ್ಲ ನಿರೀಕ್ಷೆಗಳಿಂದ ತುಂಬಿವೆ. ಬಹುಪಾಲು ಘಟನೆಗಳು ನಮ್ಮ ನಿರೀಕ್ಷೆಗೆ ವ್ಯತಿರಿಕ್ತವಾಗಿಯೇ ಘಟಿಸುತ್ತವೆ. ಆಗ ನಾವು ಸಂಬಂಧಪಟ್ಟವರನ್ನು, ವ್ಯವಸ್ಥೆಯನ್ನು ದೂಷಿಸುತ್ತೇವೆ. ಇಲ್ಲಿ ನಿಜವಾದ ಅಪರಾಧಿ ನಮ್ಮ ನಿರೀಕ್ಷೆ, ಅಪೇಕ್ಷೆಗಳೇ. ಏಕೆಂದರೆ ಇತರರಿಂದ ಅಪೇಕ್ಷಿಸುವುದು, ನಿರೀಕ್ಷಿಸುವುದೇ ಸಿಟ್ಟು ತರಿಸುತ್ತದೆ.” “ನಾವು ಸ್ವಲ್ಪ ಹೊತ್ತು ತಣ್ಣಗೆ ಕುಳಿತು ವಾಸ್ತವ ದೃಷ್ಟಿಯಿಂದ ಈ ಸೃಷ್ಟಿಯ ರಹಸ್ಯವನ್ನು ಗಮನಿಸಿದರೆ ಸಾಕು, ಅನಗತ್ಯ ಟೀಕೆ, ಒತ್ತಡ, ಆತಂಕಗಳಿಂದ ದೂರವಾಗಿ ಅನಿರೀಕ್ಷಿತ ರೀತಿಯಲ್ಲಿ ಒಳ್ಳೆಯದನ್ನು ಪಡೆಯಬಹುದು.”
ಅನಪೇಕ್ಷಾ, ಅನಿರ್ಣಯ
ಗೀತೆಯ `ಅನಪೇಕ್ಷಾ’ ಮತ್ತು `ನ ಶೋಚಯತಿ’ ತತ್ತ್ವಗಳನ್ನು ಉಲ್ಲೇಖಿಸುತ್ತಾ, ನಾವು ಬದುಕಬೇಕಾಗಿರುವುದು ವರ್ತಮಾನದಲ್ಲೇ ಹೊರತು ಭವಿಷ್ಯದಲ್ಲಿ ಅಲ್ಲ ಎನ್ನುವುದೇ ಅನಪೇಕ್ಷಾದ ಸಾರಾಂಶ. ನಿನ್ನೆ ಮತ್ತು ನಾಳೆ ಇವೆರಡೂ ಸ್ತಬ್ಧವಾದಾಗ ಮನಸ್ಸು ಮೌನವಾಗುತ್ತದೆ. ನಮ್ಮ ಶಾಸ್ತ್ರಗಳು ಹೇಳುವ ಆತ್ಮಸಾಕ್ಷಾತ್ಕಾರದ ಉನ್ನತಸ್ಥಿತಿಯೇ ಇದು – ಮಹಾಮೌನ. `ನ ಶೋಚಯತಿ’ ಎಂದರೆ ಯಾವುದಕ್ಕೂ ಗೋಳಾಡದಿರುವುದು. ಇದರ ಅರ್ಥ ಕೂಡ `ಪ್ರಸ್ತುತದಲ್ಲಿ ಬದುಕಿ’ ಎಂಬುದು. ಕಾರಣ ಜೀವನ ಸದಾ ಹರಿಯುವ ನೀರಿನಂತೆ.
ಆಸಕ್ತಿ ಮೂಡಿಸುವ ಲೇಖಕರ ಒಂದು ವಿವರಣೆ ಹೀಗಿದೆ: “ಅನಿರ್ಣಯ(Non-judgement) ಎಂಬ ಪದ ಒಂದು ಆಧ್ಯಾತ್ಮಿಕ ದೃಷ್ಟಿಕೋನ ಎಂದು ನಾನು ಒಂದುಕಡೆ ಓದಿದೆ. ಇದು ನಿಜವೇ ಇರಬಹುದು. ಆದರೆ ವಾಸ್ತವಿಕ ಪಾತಳಿಯಲ್ಲಿ ಇದು ಸರಿಯಲ್ಲವೆಂದೇ ಅನ್ನಿಸಿತು. ಈ ರೀತಿಯ ಮನೋಧರ್ಮವಿದ್ದರೆ ಯಾವುದೇ ದೊಡ್ಡ ಕಾರ್ಯವನ್ನು ಯಶಸ್ವಿಯಾಗಿ ಮಾಡುವುದು ಅಸಾಧ್ಯ ಅನ್ನಿಸಿತು. ಆದರೆ ಸ್ವಲ್ಪ ಸೂಕ್ಷ್ಮವಾಗಿ ನಮ್ಮ ಮನಸ್ಸಿನಲ್ಲಿ ಸುಳಿಯುವ ಆಲೋಚನೆಗಳನ್ನು ಗಮನಿಸಿದರೆ ಆಶ್ಚರ್ಯವೆನಿಸುವ ಸತ್ಯವೊಂದು ಹೊಳೆಯುತ್ತದೆ. ಅದೆಂದರೆ ನಮ್ಮ ಪಂಚೇಂದ್ರಿಯಗಳ ಪ್ರತಿಯೊಂದು ಅನುಭವದೊಂದಿಗೂ ನಿರ್ಣಯ ಇದ್ದೇ ಇರುತ್ತದೆ. ಈ ಅನುಭವಗಳು ಇಂದ್ರಿಯಗಳ ಸ್ತರಕ್ಕೆ ಸೀಮಿತವಾಗುವುದಿಲ್ಲ. ಪ್ರತಿಯೊಂದು ಸರಿ-ತಪ್ಪು, ಚೆನ್ನಾಗಿದೆ-ಕೆಟ್ಟದಾಗಿದೆ, ಬೇಕಾದದ್ದು-ಬೇಡವಾದದ್ದು ಮುಂತಾಗಿ ಮಾನಸಿಕ ಸ್ತರದಲ್ಲೂ ನಿರ್ಣಯಿಸುತ್ತೇವೆ. ಮುಂದಿನ ಹಂತ ಇದಕ್ಕಿಂತ ಮುಖ್ಯ. ನಾವು ಕಟ್ಟಿಕೊಂಡ `ಮಾನದಂಡ’ಗಳ (ರಾಗ-ದ್ವೇಷ) ಆಧಾರದ ಮೇಲೆ ನಮ್ಮ ಅಭಿಪ್ರಾಯಗಳೂ ರೂಪತಳೆಯುತ್ತವೆ. ಅವು ಬುದ್ಧಿಯ ಮಟ್ಟದಲ್ಲಿ ನಿಲ್ಲದೆ ಭಾವನೆಯ ಹಂತಕ್ಕೆ ಮುಟ್ಟುತ್ತವೆ. ನಾವು ಭಾವುಕರಾದಾಗ ಬುದ್ಧಿ ಅದಕ್ಕೆ ತಕ್ಕಂತೆ ಕುಣಿಯುತ್ತದೆ. ಒಟ್ಟಿನಲ್ಲಿ ನಾವು ಪೂರ್ವನಿರ್ಣಯ(ಪೂರ್ವಗ್ರಹ)ಕ್ಕೆ ಬರುತ್ತೇವೆ. ಒಬ್ಬ ವ್ಯಕ್ತಿಯನ್ನು ಹೊಸ ಪರಿಸ್ಥಿತಿಯ ಬೆಳಕಿನಲ್ಲಿ ಹೊಸದಾಗಿ ಅರಿಯುವ ಶಕ್ತಿಯನ್ನು ಕಳೆದುಕೊಳ್ಳುತ್ತೇವೆ. ಹೀಗಾಗಿ ನಮ್ಮ ನಿರ್ಣಯ ಬಹುಮಟ್ಟಿಗೆ ತಪ್ಪಾಗುತ್ತದೆ. ಇದಕ್ಕೆ ಹೊರತಾಗಿ ಎಲ್ಲವನ್ನೂ ಒಳಗೊಳ್ಳುವ (inclusive) ಸಕಾರಾತ್ಮಕ ಮಾನಸಿಕತೆ ಇದ್ದರೆ ಮಾತ್ರ ಎಲ್ಲರೊಡನೆ ಒಂದಾಗಿ ಕೆಲಸ ಮಾಡಿ, ಯಶಸ್ಸು ಸಿಗುತ್ತದೆ. ಅಂದರೆ ವೈಯಕ್ತಿಕ ಇಷ್ಟಾನಿಷ್ಟಗಳನ್ನು ಮೀರಿ ಇತರರ ಉತ್ತಮಗುಣಗಳನ್ನು ಗುರುತಿಸಿ ಸಾಮಾಜಿಕ ಕಾರ್ಯದಲ್ಲಿ ಜೋಡಿಸಿಕೊಳ್ಳಬೇಕು. ಅದಕ್ಕಾಗಿ ಮನಸ್ಸಿನಲ್ಲಿ ನಿರಂತರವಾಗಿ ಹರಿಯುವ ನಿರ್ಣಯಗಳೆಂಬ ಪ್ರವಾಹವನ್ನು ತಡೆಗಟ್ಟಿ `ಅನಿರ್ಣಯದ’ದ ಸ್ಥಿತಿಗೆ ಮುಟ್ಟಬೇಕು. ಇದು ಅನಿರ್ಣಯ.
ಅತಿದೊಡ್ಡ ಧರ್ಮವೆಂದರೆ ಸ್ವತಂತ್ರ, ಸಂಘಟಿತ, ಸಾಂಸ್ಕೃತಿಕವಾಗಿ, ಆಧ್ಯಾತ್ಮಿಕವಾಗಿ ಬಲಸಂಪನ್ನ ಸಮಾಜವನ್ನು ಕಾಪಾಡಿಕೊಳ್ಳುವುದು. ಅದನ್ನು ಸರಿಯಾಗಿ ಆಚರಿಸಿದಾಗ ಮಾತ್ರ ವೈಯಕ್ತಿಕ ಧರ್ಮ, ಕುಟುಂಬ ಧರ್ಮ ಇತ್ಯಾದಿ ಧರ್ಮಗಳನ್ನು ನೆರವೇರಿಸಲು ಸಾಧ್ಯವಾಗುತ್ತದೆ. ಅತಿದೊಡ್ಡ ಧರ್ಮವೆಂದರೆ ಸ್ವತಂತ್ರ, ಸಂಘಟಿತ, ಸಾಂಸ್ಕೃತಿಕವಾಗಿ, ಆಧ್ಯಾತ್ಮಿಕವಾಗಿ ಬಲಸಂಪನ್ನ ಸಮಾಜವನ್ನು ಕಾಪಾಡಿಕೊಳ್ಳುವುದು. ಅದನ್ನು ಸರಿಯಾಗಿ ಆಚರಿಸಿದಾಗ ಮಾತ್ರ ವೈಯಕ್ತಿಕ ಧರ್ಮ, ಕುಟುಂಬ ಧರ್ಮ ಇತ್ಯಾದಿ ಧರ್ಮಗಳನ್ನು ನೆರವೇರಿಸಲು ಸಾಧ್ಯವಾಗುತ್ತದೆ.
ವಿಜ್ಞಾನ-ಅದ್ವೈತ
`ವಿಜ್ಞಾನ ಮತ್ತು ಅದ್ವೈತ’ ಎನ್ನುವ ಹತ್ತನೇ ಅಧ್ಯಾಯ ಪುಸ್ತಕದ ಕೊನೆಯ ಅಧ್ಯಾಯವೂ ಹೌದು. `ಬ್ರಹ್ಮ ಸತ್ಯಂ ಜಗನ್ಮಿಥ್ಯಾ’ ಎಂದರೆ ಜಗತ್ತು ಅಸತ್ಯ, ಇಲ್ಲಿ ನಡೆಯುತ್ತಿರುವುದೆಲ್ಲ ಭ್ರಮೆ ಎನ್ನುವ ಅರ್ಥವಲ್ಲ. ಮೇಲ್ಮೈಯಲ್ಲಿ ತೋರುತ್ತಿರುವ ಜಗತ್ತಿನ ಭ್ರಾಮಕ ದೃಷ್ಟಿಯನ್ನು ದಾಟಿ, ಮನುಷ್ಯನು ಜಗತ್ತಿನ ನಿಜಸ್ವಭಾವವನ್ನು ಅರಿಯಬೇಕೆಂದು ಪ್ರೇರೇಪಿಸುವುದೇ ಇದರ ಉದ್ದೇಶ ಎನ್ನುವ ಲೇಖಕರು ಮುಂದುವರಿದು, “ಈಗ ವಿಜ್ಞಾನಿಗಳು ಕೂಡ ಅದೇ ರೀತಿ ಮಾತನಾಡುತ್ತಾರೆ. ಅಂದರೆ ಕಣ್ಣಿಗೆ ಕಾಣುವ ಇಂದ್ರಿಯಗಳ ಮೂಲಕ ತೋರುತ್ತಿರುವ ಭೌತಪ್ರಪಂಚದ ಚಿತ್ರಣ ಅದರ ನೈಜಸ್ವಭಾವವಲ್ಲ. ನಮಗೆ ಕಾಣುವುದು ಅದರ ಭ್ರಮಾತ್ಮಕ ಚಿತ್ರ ಮಾತ್ರ” ಎಂದು ಉಲ್ಲೇಖಿಸುತ್ತಾರೆ. ಉದಾಹರಣೆಗೆ ವಿಜ್ಞಾನಿ ಆರ್ಥರ್ ಎಡಿಂಗ್ಟನ್ನ `ಬಾಹ್ಯ ಜಗತ್ತೆಂದರೆ ಕೇವಲ ನೆರಳಿನ ಜಗತ್ತು’ ಎಂಬ ಮಾತು. ಅದ್ವೈತದ ಮಾಯೆಯನ್ನು ವಿಜ್ಞಾನಿ ನೆರಳು ಎಂದಿದ್ದಾನೆ; ಅಂದರೆ ಅದ್ವೈತವು ವಿಜ್ಞಾನಕ್ಕಿಂತ ಗಹನವಾದದ್ದು ಎನ್ನುತ್ತಾರೆ.
ಇದರ ವಾಸ್ತವಿಕ ಪ್ರಯೋಜನದ ಕುರಿತು ಚಿಂತಿಸುತ್ತಾ, ವಿಜ್ಞಾನದಂತೆಯೇ ದರ್ಶನದಲ್ಲೂ ಸೈದ್ಧಾಂತಿಕ ಮತ್ತು ಪ್ರಾಯೋಗಿಕ ಎಂಬ ಎರಡು ಭಾಗಗಳಿವೆ. ಪ್ರಾಯೋಗಿಕ ಭಾಗಕ್ಕೆ ಶಂಕರರ ಬದುಕೇ ಜ್ವಲಂತ ಉದಾಹರಣೆ. ಜನರ ಬಗ್ಗೆ ಅವರಿಗಿದ್ದ ತೀವ್ರ ಕಾಳಜಿ ಸಾಮಾನ್ಯರ ಬದುಕಿನಲ್ಲಿ ಸಂತಸವನ್ನು ಮೂಡಿಸಿತು; ಅವರು ಕರುಣಾವತಾರಿಯೇ ಆಗಿದ್ದರು ಎನ್ನುತ್ತಾರೆ. “ಅವರಿಗೆ ಜಗತ್ತು ಬ್ರಹ್ಮದ ಅಭಿವ್ಯಕ್ತಿಯಾಗಿತ್ತು. ನಮ್ಮ ಮಾತು, ಕೃತಿ, ಚಿಂತನೆಗಳೆಲ್ಲ ಸರ್ವವ್ಯಾಪಿಯಾದ ಬ್ರಹ್ಮಕ್ಕೆ ಅರ್ಪಣೆಯಾಗುವ ಸುಂದರ ಸುಮವಾಗುತ್ತದೆ” ಎನ್ನುವ ಹೊ.ವೆ. ಶೇಷಾದ್ರಿ ಅವರು ಯೋಗವನ್ನು ಸಮಾಜದೊಂದಿಗೆ ಬೆಸೆದಿದ್ದಾರೆ; ಅದರೊಂದಿಗೆ ಕೆಲವು ಹೊಸ ಪರಿಕಲ್ಪನೆಗಳನ್ನು ಅಳವಡಿಸಿದ್ದಾರೆ.
Comments are closed.