ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
57ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

 • ಚುನಾವಣೆಗಳು ಪಾಠ ಕಲಿಸುತ್ತವೆ ಎಂಬುದು ದಿಟವೇ. ಆದರೆ ಪ್ರತಿ ಸಾರಿ ಬೇರೆಯವೇ ಪಾಠಗಳನ್ನು ಕಲಿಸುತ್ತವೆಂಬುದೂ ದಿಟವೇ. ಯಾವುದೇ ತಂತ್ರಗಾರಿಕೆಗಳ ವಿನ್ಯಾಸವು ಸದಾಕಾಲ ನಿರೀಕ್ಷಿತ ಪರಿಣಾಮಗಳನ್ನು ನೀಡಲಾರದೆಂಬುದು ಹಲವು ಬಾರಿ ಪುರಾವೆಗೊಂಡಿದೆ. ಯಾವುದೊ ‘ಅಲೆ’ಗಳು ಪವಾಡವನ್ನೆಸಗಿಬಿಡುತ್ತದೆಂಬುದನ್ನು ಪೂರ್ಣ ನೆಚ್ಚುವಂತಿಲ್ಲವೆಂಬುದೂ ಹಲವು ಬಾರಿ ಸಾಬೀತಾಗಿದೆ.

  ಹಲವು ತಿಂಗಳುಗಳಿಂದ ದೇಶಾದ್ಯಂತ ತೀವ್ರ ಕುತೂಹಲವನ್ನು ಕೆರಳಿಸಿದ್ದ ಐದು ರಾಜ್ಯಗಳ ವಿಧಾನಸಭಾ ಚುನಾವಣೆಗಳ ಫಲಿತಾಂಶ ಮೇ 2ರಂದು ಹೊರಬಿದ್ದಿದೆ. ಅಸ್ಸಾಮಿನಲ್ಲಿ ಭಾಜಪ, ಪುದುಚೇರಿಯಲ್ಲಿ ಎನ್.ಡಿ.ಎ. ಮೈತ್ರಿಕೂಟ ಜಯ ಗಳಿಸಿವೆ. ಕೇರಳದಲ್ಲಿ ಎಲ್.ಡಿ.ಎಫ್., ತಮಿಳುನಾಡಿನಲ್ಲಿ ಡಿ.ಎಂ.ಕೆ., ಪಶ್ಚಿಮಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಇವು ಶಂಕಾತೀತ ಬಹುಮತ ಸ್ಥಾಪಿಸಿವೆ. ವಿಶೇಷವೆಂದರೆ ಈ ಮೂರು ರಾಜ್ಯಗಳಲ್ಲಿ ಸಂಖ್ಯಾತ್ಮಕವಾಗಿ ಗೆಲವನ್ನು ಸಾಧಿಸಿರುವ ಪಕ್ಷಗಳು ಸಂತೃಪ್ತಭಾವದಿಂದ ಸಂಭ್ರಮಿಸುವ ಸ್ಥಿತಿಯಲ್ಲಿಲ್ಲ. ಪಶ್ಚಿಮಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಗೆದ್ದಿದ್ದರೂ ಮಮತಾ ಬ್ಯಾನರ್ಜಿಯವರು ತಾವು ಸ್ಪರ್ಧಿಸಿದ್ದ ನಂದಿಗ್ರಾಮದಲ್ಲಿಯೆ ಪರಾಭವಗೊಂಡಿದ್ದಾರೆ. ಭಾಜಪ ಸಂಖ್ಯಾತ್ಮಕವಾಗಿ ಬಹುಮತ ಸಾಧಿಸದಿದ್ದರೂ 77ರಷ್ಟು ಅಧಿಕ ಸ್ಥಾನಗಳನ್ನು ತೆಕ್ಕೆಗೆ ಹಾಕಿಕೊಂಡಿರುವುದು ತೃಣಮೂಲ ಕಾಂಗ್ರೆಸ್ ಗೆಲವನ್ನು ಮುಕ್ಕಾಗಿಸಿದೆ. ಕೇರಳದಲ್ಲಿ ತಮ್ಮ ಮೇಲುಗೈಯನ್ನು ರಕ್ಷಿಸಿಕೊಳ್ಳಲು ಪಿಣರಾಯಿ ವಿಜಯನ್ ಶಬರಿಮಲೆ ವಿವಾದ ಮೊದಲಾದ ಜ್ವಲಂತ ವಿಷಯಗಳಿಗೆ ಸಂಬಂಧಿಸಿದಂತೆ ತಮ್ಮ ಹಿಂದಿನ ಗಡಸು ನಿಲವುಗಳನ್ನು ಕೈಬಿಡಬೇಕಾಯಿತು. ತಮಿಳುನಾಡಿನಲ್ಲಿ ಎಂ.ಕೆ. ಸ್ಟಾಲಿನ್ ನೇತೃತ್ವದ ಡಿ.ಎಂ.ಕೆ. ಪಕ್ಷದ ಮುನ್ನಡೆಯಾಗಿರುವುದು ಹೌದು. ಆದರೆ ಅನೇಕ ಪ್ರಮುಖರ ಮೇಲೆ ತೆರಿಗೆ ವಂಚನೆ ಇತ್ಯಾದಿ ಆರೋಪಗಳ ತೂಗುಗತ್ತಿ ಜೀವಂತವಿರುವುದು ಮೊದಲಾದ ಇರುಸುಮುರುಸುಗಳು ಇಲ್ಲದಿಲ್ಲ.

  ಪಶ್ಚಿಮಬಂಗಾಳದಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ ತಾಂತ್ರಿಕವಾಗಿ ಗೆಲವನ್ನು ಪಡೆದಿದ್ದರೂ ಮೊದಲ ಬಾರಿಗೆ ಭಾಜಪ 77ರಷ್ಟು ಅಧಿಕ ಸ್ಥಾನಗಳನ್ನು ಗಳಿಸಿರುವುದು ಒಂದು ಐತಿಹಾಸಿಕ ಸಾಧನೆಯೆಂದು ಒಪ್ಪಬೇಕಾಗಿದೆ. 2016ರಲ್ಲಿ ಭಾಜಪ ಗಳಿಸಲಾಗಿದ್ದುದು ಮೂರೇ ಮೂರು ಸ್ಥಾನಗಳು. ರಾಜ್ಯಮಟ್ಟದಲ್ಲಿ ಭಾಜಪಕ್ಕೆ ಹೇಳಿಕೊಳ್ಳುವಂತಹ ಸ್ಥಳೀಯ ನಾಯಕತ್ವ ಇರದಿದ್ದರೂ 77ರಷ್ಟು ಸ್ಥಾನಗಳನ್ನು ಅದು ಪಡೆದುಕೊಂಡದ್ದು ಕಡಮೆಯ ಸಾಧನೆಯಲ್ಲ.

  ಚುನಾವಣೆಗಳು ಪಾಠ ಕಲಿಸುತ್ತವೆ ಎಂಬುದು ದಿಟವೇ. ಆದರೆ ಪ್ರತಿ ಸಾರಿ ಬೇರೆಯವೇ ಪಾಠಗಳನ್ನು ಕಲಿಸುತ್ತವೆಂಬುದೂ ದಿಟವೇ. ಯಾವುದೇ ತಂತ್ರಗಾರಿಕೆಗಳ ವಿನ್ಯಾಸವು ಸದಾಕಾಲ ನಿರೀಕ್ಷಿತ ಪರಿಣಾಮಗಳನ್ನು ನೀಡಲಾರದೆಂಬುದು ಹಲವು ಬಾರಿ ಪುರಾವೆಗೊಂಡಿದೆ. ಯಾವುದೊ ‘ಅಲೆ’ಗಳು ಪವಾಡವನ್ನೆಸಗಿಬಿಡುತ್ತವೆಂಬುದನ್ನು ಪೂರ್ಣ ನೆಚ್ಚುವಂತಿಲ್ಲವೆಂಬುದೂ ಹಲವು ಬಾರಿ ಸಾಬೀತಾಗಿದೆ. ಯಾವುದೇ ಚುನಾವಣೆಯಲ್ಲಿ ಸ್ಥಳೀಯ ಸನ್ನಿವೇಶಗಳದೂ ಸ್ಥಳೀಯ ನಾಯಕತ್ವದ್ದೂ ಗಣನೀಯ ಪಾತ್ರವಿರುತ್ತದೆಂಬುದಂತೂ ಇದೀಗ ಚುನಾವಣೆಗಳು ನಡೆದ ಸಂದರ್ಭದಲ್ಲಿಯೂ ಸ್ಫುಟಗೊಂಡಿದೆ.

  ಬಂಗಾಳದ ರಾಜಕೀಯ ವಿನ್ಯಾಸ ಬದಲಾಗಬೇಕಾದುದರ ಆವಶ್ಯಕತೆಯಂತೂ ದೀರ್ಘಕಾಲದಿಂದ ಅನುಭವಕ್ಕೆ ಬಂದಿತ್ತು. ಭ್ರಷ್ಟಾಚಾರ ಪ್ರಕರಣಗಳ ವಿಷಯ ಒತ್ತಟ್ಟಿಗಿರಲಿ (ಈಗಿನ ಟಿ.ಎಂ.ಸಿ. ಸಚಿವಸಂಪುಟದಲ್ಲಿ ಶೇ. 28ರಷ್ಟು ಮಂದಿಯ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳಿವೆ.) ಆರೂಢ ಸರ್ಕಾರದ ಮೃದುಧೋರಣೆಯ ಫಲಿತವಾಗಿ ಈಚಿನ ವರ್ಷಗಳಲ್ಲಿ ಬಂಗಾಳ ಪ್ರಾಂತವು ಇಸ್ಲಾಮೀ ಆತಂಕವಾದಿ ಶಕ್ತಿಗಳ ಆಡುಂಬೊಲವಾಗಿದ್ದುದು ಅಸಂದಿಗ್ಧವಾಗಿ ಸಿದ್ಧಪಟ್ಟಿದೆ. ಅಲ್‍ಖೈದಾ ನಂಟಸ್ತಿಕೆಯಲ್ಲಿದ್ದ ಹಲವು ಸಂಘಟನೆಗಳನ್ನು ಎನ್.ಐ.ಎ. – ನ್ಯಾಶನಲ್ ಇನ್‍ವೆಸ್ಟಿಗೇಷನ್ ಏಜೆನ್ಸಿ ಬಯಲುಗೊಳಿಸಿದ್ದೂ ಇದೆ. ಆದರೂ ಆಳುವ ಪಕ್ಷವೇ ಮತಬ್ಯಾಂಕ್ ಪರಿಗಣನೆಗಳಿಂದ ರಾಷ್ಟ್ರವಿರೋಧಿ ಶಕ್ತಿಗಳ ಸಾಹಚರ್ಯವನ್ನು ಬೆಳೆಸಿಕೊಂಡಿರುವಾಗ ನಿಯಂತ್ರಣ ಎಷ್ಟುಮಟ್ಟಿಗೆ ಶಕ್ಯವಾದೀತು? ವಿರೋಧಪಕ್ಷಗಳಾದ ಕಾಂಗ್ರೆಸ್ ಮತ್ತು ಸಿ.ಪಿ.ಐ.(ಎಂ)ಗಳೂ ಬೆಂಬಲಕ್ಕಾಗಿ ಆಶ್ರಯಿಸಿರುವುದು ಇಸ್ಲಾಮೀ ವಲಯವನ್ನೇ. ಈ ಹಿನ್ನೆಲೆಯಲ್ಲಿ ವಾಮಪಕ್ಷಗಳು ತೃಣಮೂಲ ಕಾಂಗ್ರೆಸ್ಸಿನಿಂದ ಉಚ್ಚಾಟನೆಗೊಂಡ ಮೇಲೂ ಬಂಗಾಳದಲ್ಲಿ ರಾಷ್ಟ್ರೀಯತೆಯ ವ್ಯತಿರೇಕವೇ ಮುಂದುವರಿದಿದೆ. ಇಸ್ಲಾಂ ಎಂಬುದು ಬಡವರ, ಸಂತ್ರಸ್ತರ, ಅಧಿಕಾರವಂಚಿತರ ಪರವಾದ ಮತ – ಎಂಬ ಜಾಡಿನ ‘ಸೈದ್ಧಾಂತಿಕ’ ಮಂಡನೆಗಳೂ 1977ರ ದಶಕದಷ್ಟು ಹಿಂದಿನಿಂದಲೇ ಅವ್ಯಾಹತವಾಗಿ ಮೆರೆದಿರುವುದು ಮಾತ್ರವಲ್ಲದೆ ಇವೇ ಸೆಕ್ಯುಲರಿಸಮ್ ಎಂದು ಬಿಂಬಿಸಲಾಗಿದೆ. ರಾಜಕೀಯ ಪೆÇೀಷಣೆ ಪಡೆದ ಈ ವಿಕೃತಿಗಳು ಪ್ರಾಂತದ ಬಹುಸಂಖ್ಯಾತರ ಧ್ವನಿಯು ಹೊರಹೊಮ್ಮಲು ಅವಕಾಶವನ್ನೇ ನೀಡಿಲ್ಲ. ವಾಮಪಕ್ಷಗಳ ಆಸರೆ ತಪ್ಪಿದ್ದರಿಂದ ಲೇಖಕ-ಕಲಾವಿದ-ಬೋಧಕವರ್ಗಗಳ ಅನೇಕರು ತೃಣಮೂಲ ಕಾಂಗ್ರೆಸ್ ಬಣದ ತೆಕ್ಕೆಗೆ ಬಿದ್ದಿದ್ದಾರೆ. ಈ ಪರಿಸರದಲ್ಲಿ ಪ್ರಚ್ಛನ್ನ ಇಸ್ಲಾಮೀಕರಣ, ಸರ್ಕಾರೀ ನೌಕರಿಗಳಲ್ಲಿ ಮುಸ್ಲಿಂ ಅಭ್ಯರ್ಥಿಗಳಿಗೆ ಹೆಚ್ಚಿನ ಅವಕಾಶ ನೀಡಿಕೆ, ಶಿಕ್ಷಣಕ್ಷೇತ್ರದ ವಿಕೃತೀಕರಣ ಮೊದಲಾದವೆಲ್ಲ ಧಾರಾಳವಾಗಿಯೇ ನಡೆದಿವೆ.

  ಈ ಅರಾಜಕ ಪ್ರವೃತ್ತಿಗಳಿಗೆ ಚಿಕಿತ್ಸೆ ನಡೆಯಬೇಕೆಂಬ ಆಶಯದಿಂದಲೇ ಪಶ್ಚಿಮಬಂಗಾಳದ ಈ ಬಾರಿಯ ವಿಧಾನಸಭಾ ಚುನಾವಣೆಯನ್ನು ಭಾಜಪ ಮಹತ್ತ್ವದ್ದಾಗಿ ಭಾವಿಸಿದ್ದುದು. ಗಣನೀಯ ಪ್ರಮಾಣದಲ್ಲಾದರೂ ಚಿಕಿತ್ಸಕ ಪ್ರಕ್ರಿಯೆ ಉಪಕ್ರಮಗೊಂಡಿರುವುದು ರಾಷ್ಟ್ರಸ್ವಾಸ್ಥ್ಯದ ದೃಷ್ಟಿಯಿಂದ ದಾಖಲೆಗೆ ಅರ್ಹವಾದ ಸಂಗತಿಯಾಗಿದೆ.

  ಚುನಾವಣೆಯ ಫಲಶ್ರುತಿ

 • ಪ್ರಣವಸ್ವರೂಪಿಯಾದ ಶಿವನನ್ನು ಹೊಂದಲು ನಮ್ಮ ಪ್ರಣಯದ ಆಸೆ ಆಕಾಂಕ್ಷೆಗಳ ಕಾಮಕಲ್ಮಶಗಳು ಮೊದಲು ಸುಟ್ಟುಹೋಗಬೇಕು. ಅದರ ಸಂಕೇತವೇ ಕಾಮದಹನ. ಇದು ನಿತ್ಯವೂ ನಮ್ಮ ಧರ್ಮ ಕರ್ಮಗಳ ಅನುಷ್ಠಾನದಲ್ಲಿ ನಮ್ಮ ವಿವೇಕೋದಯದಿಂದ ನಡೆಯಬೇಕಾಗಿದೆ.

  ಉತ್ಸವಗಳು, ಹಬ್ಬಗಳು ನಮ್ಮ ಧಾರ್ಮಿಕ ಮತ್ತು ಸಾಮಾಜಿಕ ಜೀವನದೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿವೆ. ಕಾರಣ ಮನುಷ್ಯನು ಸಹಜವಾಗಿ ಉತ್ಸವಪ್ರಿಯನಾಗಿರುವುದು. ಈ ಸತ್ಯವನ್ನು ಮಹಾಕವಿ ಕಾಲಿದಾಸನು ತನ್ನ ಶಾಕುಂತಲ ನಾಟಕದ 6ನೇ ಅಂಕದಲ್ಲಿ ಹೀಗೆ ವ್ಯಕ್ತಪಡಿಸಿದ್ದಾನೆ: ‘ಉತ್ಸವಪ್ರಿಯಾಃ ಖಲು ಮನುಷ್ಯಾಃ.’ ಉತ್ಸವಗಳು ಮನುಷ್ಯಜೀವನದಲ್ಲಿ ಒದಗುವ ಸಂತೋಷದ ಸಂದರ್ಭಗಳು. ಬಂಧು-ಬಳಗ, ಇಷ್ಟಮಿತ್ರರು ಎಲ್ಲ ಒಂದೆಡೆ ಕಲೆತು, ಐಂದ್ರಿಯಕ ಹಾಗೂ ಮಾನಸಿಕ ಆನಂದವನ್ನು ಅನುಭವಿಸುವುದಕ್ಕಲ್ಲದೆ, ಜೀವನದ ಕಷ್ಟಕಾರ್ಪಣ್ಯಗಳನ್ನು ಮರೆಯಲೂ ಉತ್ಸವಗಳು, ಹಬ್ಬ-ಹರಿದಿನಗಳು ಕಾರಣವಾಗುತ್ತವೆ. ಮಾತ್ರವಲ್ಲ, ಅವು ನಮ್ಮ ಆಂತರ್ಯವನ್ನು ಸಮೃದ್ಧಗೊಳಿಸುವ ಸಾಧನಗಳೂ ಆಗಿವೆ.

  ಜಗತ್ತಿನಲ್ಲೆ ಅತ್ಯಂತ ವರ್ಣಮಯ ಹಬ್ಬ ಎಂದರೆ ಅದು ನಮ್ಮ ದೇಶದಲ್ಲಿ ಆಚರಿಸಲ್ಪಡುವ ಹೋಳಿಹಬ್ಬ. ಪ್ರತಿ ವರ್ಷ ಹೋಳಿಹಬ್ಬದ ಆಚರಣೆಯ ಸಂದರ್ಭದಲ್ಲಿ ದೇಶವ್ಯಾಪಿಯಾಗಿ ಜಾತಿಭೇದ, ಲಿಂಗಭೇದ ಮರೆತು ಜನರು ಪರಸ್ಪರ ಬಣ್ಣಗಳನ್ನು ಎರಚಾಡುತ್ತ ಹಾಡುತ್ತ ಕುಣಿಯುತ್ತ ಸಂಭ್ರಮಿಸುವ ಕಾರಣದಿಂದ ಈ ಹಬ್ಬವು ಬೀದಿ ಬೀದಿಗಳಲ್ಲಿ ಬಣ್ಣದ ಲೋಕವನ್ನೆ ಸೃಷ್ಟಿಸುತ್ತದೆ; ಆಬಾಲವೃದ್ಧರೂ ಸೇರಿದಂತೆ ಎಲ್ಲರಲ್ಲೂ ಸಂಭ್ರಮದ ಹೊನಲನ್ನು ಹರಿಸುತ್ತದೆ.

  ಸದ್ದು-ಗದ್ದಲದಿಂದ ತುಂಬಿದ ಮೆರವಣಿಗೆಗಳು, ಘೋಷಗಳು, ಡೋಲು-ಡಕ್ಕೆಗಳ ಬಡಿಯುವಿಕೆ, ಬಣ್ಣಗಳಲ್ಲಿ ಮುಚ್ಚಿಹೋದ ಮುಖಗಳು, ಹಾದುಹೋಗುವವರ ಮೇಲೆಲ್ಲ ಚಿಮ್ಮಿಸುವ ಬಣ್ಣಬಣ್ಣದ ನೀರಿನ ಕಾರಂಜಿ – ಇಂತಹ ದೃಶ್ಯ ಹೋಳಿಹಬ್ಬದ ಸಂದರ್ಭಗಳಲ್ಲಿ ಭಾರತದ ಉದ್ದಗಲಕ್ಕೂ ಸರ್ವೇಸಾಮಾನ್ಯ. ಬೇರೆ ದೇಶಗಳಲ್ಲೂ ಹಬ್ಬದ ಸಂದರ್ಭದಲ್ಲಿ ಇಂತಹ ಅಮೋದಪ್ರಮೋದದ ದೃಶ್ಯಗಳು ಕಂಡುಬರುತ್ತವೆ. ಅಲ್ಲೆಲ್ಲ ಉನ್ನತ ವರ್ಗದವರು ಹೂವಿನ ಅಲಂಕಾರಗಳನ್ನೂ, ಹಾಡು ಸಂಗೀತಗಳನ್ನೂ, ಸುವಾಸನಾಯುಕ್ತ ನೀರಿನ ಕಾರಂಜಿಯನ್ನು ಚಿಮ್ಮಿಸುವ ಮೂಲಕವೂ ತಮ್ಮ ಅಮೋದಪ್ರಮೋದದ ಖುಷಿಯನ್ನು ಹೆಚ್ಚಿಸಿಕೊಳ್ಳುವುದುಂಟು.

  ‘ಕಾಮನಹಬ್ಬವನ್ನು ಹೋಳಿಕಾ ಎಂದೂ ನಿರ್ದೇಶಿಸಲಾಗಿದೆ. ಅಥರ್ವಪರಿಶಿಷ್ಟದಲ್ಲಿ ಹೋಲಾಕಾ (ಹೋಲೋಕ, ಹೋಲಿಕಾ) ಪೂಜೆಯನ್ನು ಸಾಯಂಕಾಲ ಮಾಡಬೇಕೆಂದು ಹೇಳಿದೆ. ‘ಹೋಲೋಕಾಸ್’, ‘ಹಿಲೇಲಿಯ’ ಮುಂತಾದ ದಹನಸಂಬಂಧವಾದ ಆಚಾರಗಳು ಪ್ರಪಂಚದ ನಾನಾ ಭಾಗಗಳಲ್ಲಿದ್ದವು. ಭಾರತದಲ್ಲಿಯೂ ಅಥರ್ವವೇದಕಾಲದಿಂದಲೂ ಪ್ರಚಾರದಲ್ಲಿದೆಯೆಂದು ಹೇಳಬಹುದು’ – ಎಂದು ನಾಡಿನ ಪ್ರಸಿದ್ಧÀ ಸಂಶೋಧಕರಾದ ಡಾ|| ಎಸ್. ಶ್ರೀಕಂಠಶಾಸ್ತ್ರೀ ತಮ್ಮ ಒಂದು ಲೇಖನದಲ್ಲಿ ಉಲ್ಲೇಖಿಸಿದ್ದಿದೆ.

  ಹೋಳಾಕ, ಹೋಳಿಕ, ಹೋಳಿಕೋತ್ಸವ, ಹೋಳೀ, ಫಾಲ್ಗುನಿಕಾ, ವಸಂತೋತ್ಸವ, ಕಾಮನಹಬ್ಬ, ಡೋಲಾ – ಎಂದೆಲ್ಲ ಕರೆಯಲ್ಪಡುವ ಹೋಳಿಹಬ್ಬವನ್ನು ನಮ್ಮ ದೇಶದಲ್ಲಿ ವ್ಯಾಪಕವಾಗಿ ವೈವಿಧ್ಯದಿಂದಲೂ ಅತ್ಯಂತ ಸಂಭ್ರಮದಿಂದಲೂ ಆಚರಿಸುತ್ತಾರೆ. ಮೇಷಸಂಕ್ರಾಂತಿಗೆ ಹತ್ತಿರದಲ್ಲಿ, ಫಾಲ್ಗುಣ ಹುಣ್ಣಿಮೆಯಂದು ಈ ಹಬ್ಬವನ್ನು ಸಾರ್ವತ್ರಿಕವಾಗಿ ಆಚರಿಸಲಾಗುತ್ತದೆ. ಇಂಗ್ಲಿಷ್ ಕ್ಯಾಲೆಂಡರ್‍ನ ಫೆಬ್ರುವರಿ ತಿಂಗಳ ಕೊನೆಯಲ್ಲಿ ಅಥವಾ ಮಾರ್ಚ್ ತಿಂಗಳ ಆರಂಭದಲ್ಲಿ ಬರುವ ಹೋಳಿಹಬ್ಬವನ್ನು ಅತ್ಯಂತ ಪುರಾತನ ಕಾಲದಿಂದಲೂ, ಅಂದರೆ ಕ್ರಿಸ್ತಪೂರ್ವ ಹಲವು ಶತಮಾನಗಳಷ್ಟು ಹಿಂದಿನಿಂದಲೂ, ಜನರು ಶ್ರದ್ಧೆಯಿಂದ ಆಚರಿಸುತ್ತಾ ಬರುತ್ತಿದ್ದಾರೆ. ಜೈಮಿನಿಯ ಪೂರ್ವಮೀಮಾಂಸಸೂತ್ರ ಹಾಗೂ ಕಾಠಕಗೃಹ್ಯಸೂತ್ರಗಳಲ್ಲಿ ಇದನ್ನು ‘ಹೋಳಿಕಾ’ ಎಂದು ಉಲ್ಲೇಖಿಸಲಾಗಿದೆ. ನೂತನವಧುವು ವಿವಾಹಾನಂತರ ಮೊದಲು ತನ್ನ ಕುಟುಂಬದ ಶ್ರೇಯೋಭಿವೃದ್ಧಿಗೋಸ್ಕರ ಪೂರ್ಣಚಂದ್ರನನ್ನು ಪೂಜಿಸುವ ಒಂದು ವಿಶೇಷವಾದ ಹಬ್ಬ ಇದು.

  ಚಾಂದ್ರಮಾನ ಪದ್ಧತಿಯಲ್ಲಿ ಒಂದು ಮಾಸವನ್ನು ಎರಡು ರೀತಿಯಿಂದ ಗಣಿಸಲಾಗುತ್ತದೆ: ಒಂದು ‘ಪೂರ್ಣಿಮಾಂತ’; ಇನ್ನೊಂದು ‘ಅಮಾಂತ’. ಮೊದಲನೆಯ ‘ಪೂರ್ಣಿಮಾಂತ’ದಲ್ಲಿ ಪೂರ್ಣಿಮೆಯ ನಂತರದ ದಿನವನ್ನು ಮಾಸದ ಮೊದಲದಿನವಾಗಿ ಪರಿಗಣಿಸಿದರೆ, ‘ಅಮಾಂತ’ದಲ್ಲಿ ಅಮಾವಾಸ್ಯೆಯ ನಂತರದ ದಿನವನ್ನು ಮಾಸದ ಮೊದಲದಿನವಾಗಿ ಪರಿಗಣಿಸಲಾಗುತ್ತದೆ. ‘ಅಮಾಂತ’ ರೀತ್ಯಾ ದಿನಗಣನೆಯು ಇಂದು ವ್ಯಾಪಕವಾಗಿ ಬಳಕೆಯಲ್ಲಿದೆ. ಕಾಲಗಣನೆಯು ಪ್ರಾರಂಭವಾದ ದಿನಗಳಲ್ಲಿ ‘ಪೂರ್ಣಿಮಾಂತ’ ಪದ್ಧತಿಯೂ ಬಳಕೆಯಲ್ಲಿತ್ತು. ‘ಪೂರ್ಣಿಮಾಂತ’ ಪದ್ಧತಿಯಂತೆ ಫಾಲ್ಗುಣ ಪೂರ್ಣಿಮೆಯು ವರ್ಷದ ಕೊನೆಯದಿನ ಮತ್ತು ಮಾರನೆಯ ದಿನದಿಂದ ಹೊಸವರ್ಷದ ಆರಂಭ ಹಾಗೂ ವಸಂತ ಋತುವಿನ ಆಗಮನ. ಹೀಗೆ ಹೋಳೀಹಬ್ಬವು ಸಹಜವಾಗಿ ಜನಮನದಲ್ಲಿ ಸಂತೋಷ ಸಂಭ್ರಮಗಳನ್ನು ಉಂಟುಮಾಡುವ ವಸಂತೋತ್ಸವವಾಗಿ ಬೆಳೆದುಬಂತು. ಬಹುಶಃ ಇದೇ ಕಾರಣಕ್ಕಾಗಿ ಹೋಳಿಹಬ್ಬಕ್ಕೆ ‘ವಸಂತೋತ್ಸವ’, ‘ಕಾಮ-ಮಹೋತ್ಸವ’ ಎಂಬ ಹೆಸರುಗಳೂ ಬಳಕೆಗೆ ಬಂದವು.

  ಹಿನ್ನೆಲೆಆಚರಣೆ

  ‘ಧರೆಯೊಳೀ ಹೋಳಿ ಪದಗಳನು ಪೇಳುವೆನು ಹರನಿಂದ ಮಡಿದ ಕಾಮಣ್ಣ’ ಎಂದು ಶಿವನ ಹಣೆಗಣ್ಣಿನಿಂದ ಸುಟ್ಟುಹೋದ ಕಾಮಣ್ಣನ ಕಥೆಯನ್ನು ‘ಶಿವಪುರಾಣ’ ತಿಳಿಸುತ್ತದೆ. ಅಲ್ಲದೆ ಸ್ಕಾಂದಪುರಾಣ, ಕಾಲಿದಾಸನ ಕುಮಾರಸಂಭವ, ಹರಿಹರನ ಗಿರಿಜಾಕಲ್ಯಾಣ, ವಚನಸಾಹಿತ್ಯ, ದಾಸಸಾಹಿತ್ಯಗಳಲ್ಲಿಯೂ ಹೋಳಿಹಬ್ಬದ ಬಗ್ಗೆ ಸಾಕಷ್ಟು ಮಾಹಿತಿಗಳು ದೊರಕುತ್ತವೆ. ಪುರಾಣಗಳಲ್ಲಿ, ಪ್ರಾದೇಶಿಕ ಜಾನಪದ ಕಥೆಗಳಲ್ಲಿ ದೊರಕುವಂತೆ ಈ ಹಬ್ಬದ ದಿನಕ್ಕೆ ಮೂರು ವಿಶೇಷತೆಗಳಿವೆ:

  1. ತಾರಕಾಸುರನ ಉಪಟಳವನ್ನು ಸಹಿಸಿಕೊಳ್ಳಲಾಗದೆ ದೇವತೆಗಳು ಅವನ ಸಂಹಾರಕ್ಕಾಗಿ ಎಲ್ಲ ರೀತಿಯಿಂದ ಪ್ರಯತ್ನ ನಡೆಸಿದರು. ಋಷಿಮುನಿಗಳು ಶಿವಪುತ್ರನಿಂದ ಆತನ ಸಾವು ಸಾಧ್ಯವೆಂದು ತಿಳಿಸಿದಾಗ ಅವರೆಲ್ಲ ಸೇರಿ ಶಿವನಿಗೆ ವಿವಾಹಮಾಡಿಸುವ ಸಂಭ್ರಮದಲ್ಲಿ ತೊಡಗಿಕೊಂಡರು. ಈ ಮಹತ್ಕಾರ್ಯ ಕಾಮದೇವನಿಂದ ಮಾತ್ರ ಸಾಧ್ಯವೆಂದು ನಿರ್ಣಯಿಸಿ, ಆತನಿಗೆ ಆ ಜವಾಬ್ದಾರಿಯನ್ನು ವಹಿಸಿದರು. ಅನಂತರ ಪಾರ್ವತಿಯು ಪೂಜೆ ಮಾಡುತ್ತಿದ್ದಾಗ ತಪೋಮಗ್ನನಾದ ಶಿವನ ಮೇಲೆ ಕಾಮದೇವನು ಪುಷ್ಪಶರಗಳನ್ನು ಹೂಡುತ್ತಾನೆ. ತಪೋಭಂಗವುಂಟಾಗಿದ್ದರಿಂದ ಸಿಟ್ಟುಗೊಂಡ ಶಿವನು ತನ್ನ ಉರಿಗಣ್ಣನ್ನು ತೆರೆದು ಕಾಮನನ್ನು ಸುಡುತ್ತಾನೆ. ಇದರಿಂದ ಶೋಕತಪ್ತಳಾದ ರತಿಯ ಬೇಗುದಿಗೆ ಕರಗಿದ ಪಾರ್ವತಿ ಶಿವನನ್ನು ಕಾಡಿಬೇಡಿ ರತಿಗೆ ಪತಿಭಿಕ್ಷೆ ನೀಡಲು ಪ್ರಾರ್ಥಿಸುತ್ತಾಳೆ. ಅದಕ್ಕೆ ಶಿವನು ಕಾಮದೇವನು ಅನಂಗನಾಗಿ ಬದುಕಲಿ ಎಂದು ಆಶೀರ್ವದಿಸುತ್ತಾನೆ. ಕಾಮನ ಮರುಹುಟ್ಟಿನ ಸಂಕೇತವಾಗಿ ಆಚರಿಸುವ ಹಬ್ಬವೇ ಹೋಳಿಹಬ್ಬ.

  2. ರಾಕ್ಷಸದೊರೆ ಹಿರಣ್ಯಕಶಿಪು ಹಾಗೂ ದೇವತೆಗಳ ನಡುವೆ ನಡೆದ ಸಮರದಲ್ಲಿ ಹಿರಣ್ಯಕಶಿಪು ಜಯಶಾಲಿಯಾಗಿ ಗರ್ವಿಯಾದ. ತನ್ನನ್ನು ಬಿಟ್ಟು ಬೇರಾವ ದೇವರನ್ನೂ ಮುಂದೆ ಪೂಜಿಸಬಾರದೆಂದೂ, ಒಂದುವೇಳೆ ಯಾರಾದರೂ ಈ ನಿಯಮವನ್ನು ಉಲ್ಲಂಘಿಸಿದರೆ ಅಂಥವರಿಗೆ ಶಿಕ್ಷೆ ನೀಡುವುದಾಗಿಯೂ ಆಜ್ಞೆ ಹೊರಡಿಸಿದ. ಆತನ ಮಗ ಪ್ರಹ್ಲಾದ ಪರಮ ಹರಿಭಕ್ತನಾದ್ದರಿಂದ ತಂದೆಯ ಆಜ್ಞೆ ಮೀರಿ ಹರಿಯನ್ನು ಪೂಜಿಸತೊಡಗಿದ. ಇದನ್ನು ತಿಳಿದ ಹಿರಣ್ಯಕಶಿಪು ಮಗನಿಗೆ ವಿವಿಧ ರೀತಿಯ ಘೋರಶಿಕ್ಷೆ ವಿಧಿಸಿದ. ಅವುಗಳಿಂದ ಏನೂ ಪ್ರಯೋಜನ ಆಗಲಿಲ್ಲ. ಆಗ ಆತ ತನ್ನ ತಂಗಿ ಹೋಲಿಕಳ (ಈಕೆ ದುಷ್ಟರನ್ನು ಬೆಂಕಿಯಿಂದ ಸುಡುವ ಶಕ್ತಿ ಪಡೆದಿದ್ದಳು) ಬಳಿಗೆ ಬಂದು ಪ್ರಹ್ಲಾದನನ್ನು ಸುಟ್ಟುಹಾಕುವಂತೆ ಆಜ್ಞಾಪಿಸಿದ. ಹೋಲಿಕಳು ಅಗ್ನಿಯನ್ನು ಸೃಷ್ಟಿಸಿಕೊಂಡು ಪ್ರಹ್ಲಾದನನ್ನು ಸುಡಲು ತನ್ನ ತೊಡೆಯ ಮೇಲೆ ಕೂರಿಸಿಕೊಂಡಾಗ, ತಾನೇ ಸುಟ್ಟು ಬೂದಿಯಾದಳು. ದುಷ್ಟ ರಾಕ್ಷಸಿಯು ತನ್ನ ಪಾಪಕರ್ಮಕ್ಕೆ ತಕ್ಕ ಫಲ ಅನುಭವಿಸಿ ಸತ್ಪುರುಷನ ರಕ್ಷಣೆಯಾದುದನ್ನು ನೆನಪಿಸಿಕೊಳ್ಳುವುದೇ ಈ ಕಟ್ಟಿಗೆ ಹಾಕಿ ಸುಡುವ ಹೋಳಿಹಬ್ಬದ ಆಚರಣೆಗೆ ಮೂಲಪ್ರೇರಣೆ.

  3. ಪೃಥು ಅಥವಾ ರಘು ಎಂಬ ರಾಜನ ಕಾಲದಲ್ಲಿ ಶಿವನಿಂದ ವರವನ್ನು ಪಡೆದು ಶಿಶುಹತ್ಯೆ ಮಾಡುತ್ತ, ಮಕ್ಕಳಿಗೆ ಕಂಟಕಪ್ರಾಯಳಾಗಿದ್ದ, ಮಾಲೀ ಎಂಬ ರಾಕ್ಷಸರಾಜನ ಪುತ್ರಿ ‘ಢುಂಢಾ’ ಎಂಬ ರಾಕ್ಷಸಿಯ ಉಪಟಳವು ಕೊನೆಗೊಂಡದ್ದು ಇದೇ ದಿನ. ಫಾಲ್ಗುಣ ಪೂರ್ಣಿಮೆಯಂದು ರಾಜ ಪೃಥುವಿನ ಆಜ್ಞೆಯಂತೆ ದೇಶದ ಎಲ್ಲ ಬಾಲಕರು ಹುಚ್ಚುಹುಚ್ಚಾಗಿ ಕುಣಿಯುತ್ತಾ ಕೂಗುತ್ತಾ ಸೌದೆ, ಕಸ, ಕಡ್ಡಿ, ಬೆರಣಿಗಳನ್ನು ಸೇರಿಸಿ ಬೆಂಕಿಹಚ್ಚಿದಾಗ ರಾಕ್ಷಸಿಯು ಭಯಗ್ರಸ್ತಳಾಗಿ ಮನುಷ್ಯಲೋಕವನ್ನೆ ತ್ಯಜಿಸಿ ಓಡಿಹೋದಳು. ಅದರ ನೆನಪಿಗಾಗಿ ಹೋಳಿಹಬ್ಬದ ದಿನದಂದು ಸೌದೆ, ಕಸ, ಕಡ್ಡಿ, ಬೆರಣಿಗಳನ್ನೆಲ್ಲ ಸೇರಿಸಿ ಸುಡುವುದು ರೂಢಿ. 

  ಹೋಳಿಹಬ್ಬದ ಆಚರಣೆಯಲ್ಲಿ ಪೂಜೆ, ಉಪವಾಸ ಇತ್ಯಾದಿ ಯಾವುದೇ ಧಾರ್ಮಿಕ ಆಚರಣೆಗಳು ಇಲ್ಲವೆಂದೇ ಹೇಳಬಹುದು. ಸಾಮಾನ್ಯವಾಗಿ ಹೋಳಿಹಬ್ಬಕ್ಕೆ 40 ದಿನಗಳಷ್ಟು ಮೊದಲೆ, ವಸಂತ ಪಂಚಮಿ(ಮಾಘ ಶುಕ್ಲ ಪಂಚಮಿ)ಯಂದೆ, ಸಾರ್ವಜನಿಕವಾಗಿ ಪ್ರಮುಖಸ್ಥಳದಲ್ಲಿ ಮರದ ದಿಮ್ಮಿಯೊಂದನ್ನು ಇರಿಸಿ, ಅದರ ಮೇಲೆ ಬೇಗ ಉರಿದು ಬೂದಿಯಾಗುವಂಥ ಹೋಳಿಕಾ ಮೂರ್ತಿಯೊಂದನ್ನು ಇಟ್ಟು, ಅದರ ತೊಡೆಯ ಮೇಲೆ ಬೆಂಕಿಯ ಬಾಧೆಗೆ ತುತ್ತಾಗದಂಥ ಬಾಲಪ್ರಹ್ಲಾದನ ಮೂರ್ತಿಯನ್ನು ಇರಿಸುತ್ತಾರೆ. ಅನಂತರ ಅಲ್ಲಿಗೆ ಊರ ಜನರು ತಮ್ಮ ಬಳಿಯಿರುವ ಮರದ ತುಂಡುಗಳೇ ಮೊದಲಾದ ಅನುಪಯುಕ್ತ ದಹನಶೀಲ ವಸ್ತುಗಳನ್ನು ತಂದು ಸುರಿಯುತ್ತಾರೆ. ಇದು ಫಾಲ್ಗುಣ ಪೂರ್ಣಿಮೆಯ ವರೆಗೂ ನಡೆಯುತ್ತದೆ. ಆ ವೇಳೆಗೆ ಅಲ್ಲಿ ದಹನಶೀಲ ವಸ್ತುಗಳ ಒಂದು ರಾಶಿಯೇ ಏರ್ಪಟ್ಟಿರುತ್ತದೆ. ಹೋಳಿಹಬ್ಬದ ದಿನ (ಫಾಲ್ಗುಣ ಪೂರ್ಣಿಮೆ) ರಾತ್ರಿ ಸರಳ ರೀತಿಯಲ್ಲಿ ಅದನ್ನು ದಹಿಸಲಾಗುತ್ತದೆ. ಈ ಸಂದರ್ಭದಲ್ಲಿ, ಕೆಲವು ಕಡೆ/ಕೆಲವೊಮ್ಮೆ ದುಷ್ಟಶಕ್ತಿಗಳಿಂದ ರಕ್ಷಣೆ ದೊರೆಯಲಿ ಎಂದು ಋಗ್ವೇದದ ರಕ್ಷೋಘ್ನ ಮಂತ್ರಗಳನ್ನು (4.4.1-15; 10.87.1-25 ಮೊದಲಾದವು) ಪಠಿಸಲಾಗುತ್ತದೆ. ಮರುದಿನ ಬೆಳಗ್ಗೆ ಅಲ್ಲಿರುವ ಭೂತಿಯನ್ನು ಪ್ರಸಾದವಾಗಿ ಅಂಗಾಂಗಗಳಲ್ಲಿ ಧರಿಸಿಕೊಳ್ಳುತ್ತಾರೆ. ಉಚ್ಛಿಷ್ಟವಾಗಿ ತೆಂಗಿನಕಾಯಿ ಏನಾದರೂ ಉಳಿದಿದ್ದರೆ ಅದನ್ನು ಸೇವಿಸುತ್ತಾರೆ.

  ದೇಶದ ಕೆಲವು ಕಡೆ, ಕೆಲವು ಮನೆಗಳಲ್ಲಿ ಅಂಗಳದಲ್ಲಿ ಅಥವಾ ಒಳಗಿನ ಅಂಕಣದಲ್ಲಿ ಕಾಮದೇವನ ವಿಗ್ರಹವನ್ನು ಇಟ್ಟು ಸರಳವಾಗಿ ಪೂಜಿಸುತ್ತಾರೆ. ಅನಂತರ ಮಾವಿನಚಿಗುರು ಹಾಗೂ ತೇಯ್ದ ಶ್ರೀಗಂಧವನ್ನು ಪ್ರಸಾದವಾಗಿ ಸೇವಿಸುವ ಪದ್ಧತಿಯಿದೆ.

  ವೃತ್ತೇ ತುಷಾರಸಮಯೇ ಸಿತಪಂಚದಶ್ಯಾಃ

  ಪ್ರಾತರ್ವಸನ್ತಸಮಯೇ ಸಮುಪಸ್ಥಿತೇ ಚ |

  ಸಂಪ್ರಾಶ್ಯ ಚೂತಕುಸುಮಂ ಸಹ ಚಂದನೇನ

  ಸತ್ಯಂ ಹಿ ಪಾರ್ಥ ಸತತಂ ಪುರುಷಸ್ಸುಖೀ ಸ್ಯಾತ್ ||

  ಫಾಲ್ಗುಣ ಕೃಷ್ಣ ಪ್ರತಿಪದೆಯಂದು ವಿನೋದಾಚರಣೆ, ವಿಶೇಷವಾಗಿ ಗುಲಾಲ್ ಅಥವಾ ಬಣ್ಣದನೀರು ಅಥವಾ ಸುಗಂಧಿತ ಬಣ್ಣದ ಪುಡಿಗಳನ್ನು ಪರಸ್ಪರ ಎರಚಿಕೊಳ್ಳುವುದು ಬಳಿದುಕೊಳ್ಳುವುದು ನಡೆಯುತ್ತದೆ. ಕೆಳಸಂಸ್ಕೃತಿಯ ಜನರನ್ನು ಹೊರತುಪಡಿಸಿ, ಕೆಸರನ್ನೂ ಮಣ್ಣನ್ನೂ ಪರಸ್ಪರ ಎರಚಿಕೊಳ್ಳುವುದಕ್ಕೆ ಹೋಳಿಹಬ್ಬ ಪ್ರಾರಂಭವಾದ ದಿನಗಳಿಂದಲೂ ಅವಕಾಶವಿರಲಿಲ್ಲ. ‘ಹೋಳಿಹಬ್ಬದಲ್ಲಿ ಕಂಡಕಂಡವರ ಮೇಲೆ ಬಣ್ಣದ ನೀರನ್ನು ಎರಚಿ ಬಣ್ಣದಪುಡಿಗಳನ್ನು ತೂರಿ ಅವರ ವಸ್ತುಗಳನ್ನು ಮಲಿನ ಮಾಡುವುದು ಸಭ್ಯತೆಯೇ? – ಎಂದು ಪ್ರಶ್ನಿಸಿದರೆ, ಅದು ಸಭ್ಯತೆಯಲ್ಲ. ಅದು ಸಭ್ಯತೆಯೆಂದು ಶಾಸ್ತ್ರವು ಅನುಮತಿಸುವುದೂ ಇಲ್ಲ. ಆದರೆ ಯಾರು ಈ ಹಬ್ಬದ ಅರ್ಥ, ಪರಮಾರ್ಥಗಳನ್ನು ಅರಿತು ಸಂತೋಷದ ಸ್ಥಿತಿಯಲ್ಲಿ ಇರುತ್ತಾರೋ ಅವರ ಮೇಲೆ ಅದನ್ನು ಒಂದು ಮರ್ಯಾದೆಯಲ್ಲಿ ಎರಚುವುದು ದೋಷವಲ್ಲ’ ಎಂದು ಶ್ರೀಶ್ರೀ ರಂಗಪ್ರಿಯ ಸ್ವಾಮಿಗಳು ಸಂದೇಹಕ್ಕೆ ಸಮಾಧಾನವನ್ನು ನೀಡುತ್ತಾರೆ.

  ಡೋಲಾ ಪೂರ್ಣಿಮೆ

  ಬಂಗಾಳದಲ್ಲಿ ಹೋಳಿಹಬ್ಬವನ್ನು ‘ಡೋಲಾ ಪೂರ್ಣಿಮಾ’ ಅಥವಾ ‘ಡೋಲಾಯಾತ್ರಾ’ (ಪಲ್ಲಕಿ ಜಾತ್ರೆ) ಎಂದು ಬಹಳ ಗೌರವದಿಂದ ಆಚರಿಸುತ್ತಾರೆ. ಈ ರೀತಿಯಲ್ಲಿ, ಫಾಲ್ಗುಣ ಶುಕ್ಲ ಚತುರ್ದಶಿಯಿಂದ ಮೊದಲ್ಗೊಂಡು ಮೂರು ಅಥವಾ ಐದು ದಿನಗಳ ಕಾಲ ನಡೆಯುವ ಉತ್ಸವಾಚರಣೆಯನ್ನು ವೃಂದಾವನದಲ್ಲಿ ರಾಜಾ ಇಂದ್ರದ್ಯುಮ್ನ ಆರಂಭಿಸಿದನೆಂದು ಪ್ರತೀತಿಯಿದೆ. ಅಗ್ನಿದೇವನ ಬಗೆಗೆ ಗೌರವ ಹಾಗೂ ಶ್ರೀಕೃಷ್ಣನನ್ನು ಪೂಜಿಸಲು ಅವರ ಪುತ್ತಳಿಯನ್ನು ಜೋಕಾಲಿಯಲ್ಲಿ (ಡೋಲಾ) ಇರಿಸಿ ತೂಗುವುದು ಆಚರಣೆಯ ಪ್ರಮುಖ ಆಕರ್ಷಣೆ. ಉತ್ಸವಾಚರಣೆಯ ಮೊದಲ ದಿನದಂದು ಉರಿಸಿದ ಅಗ್ನಿಯನ್ನು ಉತ್ಸವದ ಕೊನೆಯ ವರೆಗೂ ಆರಿಹೋಗದಂತೆ ಕಾಪಿಡಲಾಗುತ್ತದೆ. ಅಂತಿಮ ದಿನದಂದು ಸಾಲಂಕೃತ ಪುತ್ತಳಿಗಳನ್ನು ಜೋಕಾಲಿಯಲ್ಲಿ 21 ಬಾರಿ ತೂಗಲಾಗುತ್ತದೆ.

  ಉತ್ತರಪ್ರದೇಶದ ಮಥುರಾ, ವೃಂದಾವನ, ಒಡಿಶಾದ ಪುರಿಯೂ ಸೇರಿದಂತೆ ಬಂಗಾಳದಲ್ಲಿ ಇದೇ ದಿನವನ್ನು ಸಂತಶ್ರೇಷ್ಠ ಶ್ರೀ ಕೃಷ್ಣಚೈತನ್ಯ ಮಹಾಪ್ರಭುಗಳ (ಕ್ರಿ.ಶ. 1486-1533) ಜನ್ಮದಿನವಾಗಿಯೂ ವಿಜೃಂಭಣೆಯಿಂದ ಅಭಿಮಾನಿಗಳು ಆಚರಿಸುತ್ತಾರೆ.

  ಕರ್ನಾಟಕದಲ್ಲಿ

  ‘ಕಾಮನ ಹಬ್ಬವು ಹಿಂದೆ ಬೆಂಗಳೂರು, ಚಿತ್ರದುರ್ಗ, ಇತ್ಯಾದಿ ಸ್ಥಳಗಳಲ್ಲಿ ಬಹಳ ವಿಜೃಂಭಣೆಯಿಂದ ನಡೆಯುತ್ತಿತ್ತು. ವಿಜಯನಗರದ ಅರಸರು ತಮ್ಮ ರಾಜಧಾನಿಯಲ್ಲಿ ಹೋಳಿಹಬ್ಬವನ್ನು ಆಚರಿಸುತ್ತಿದ್ದ ವಿಧಾನವನ್ನು ಪಾಶ್ಚಾತ್ಯ ಪ್ರವಾಸಿಗಳು ವರ್ಣಿಸಿರುವರು. ಅಂತೆಯೇ ಸಾಮ್ರಾಜ್ಯದ ಪಾಳೆಯಗಾರರೂ ಸಂಗೀತ ನೃತ್ಯ ತಾಳಮೇಳಗಳೊಡನೆ ವೈಭವದಿಂದ ನಡೆಸುತ್ತಿದ್ದರು. ಹುಡುಗರು ತಿಂಗಳು ಮುಂಚೆಯೇ ಗೃಹಸ್ಥರನ್ನು ಪೀಡಿಸಿ ಕಾಮನ ಕಟ್ಟಿಗೆ ಭೀಮನ ಬೆರಣಿಗಳನ್ನು ಸಂಗ್ರಹಿಸಿ ಕೋಲಾಟದ ಪದಗಳನ್ನು ಹಾಡುತ್ತ ವಸಂತವನ್ನು ಎರಚಿ ಬೈಸಿಕೊಳ್ಳುತ್ತಾ ನಲಿಯುತ್ತಿದ್ದರು. ಕೇವಲ ಪಾಮರರಿಗೇ ಅಲ್ಲದೆ ಕಲಾಭಿಮಾನಿಗಳಿಗೆಲ್ಲ ಹೋಲಿಕೋತ್ಸವವು ಮುಖ್ಯವಾಗಿದ್ದಿತು’ ಎಂಬುದಾಗಿ ಡಾ|| ಎಸ್. ಶ್ರೀಕಂಠಶಾಸ್ತ್ರೀ ದಾಖಲಿಸಿದ್ದಾರೆ. (ಸಂಶೋಧನ ಲೇಖನಗಳು; ಪ್ರಕಾಶಕರು: ಕಾಮಧೇನು ಪುಸ್ತಕಭವನ, ಬೆಂಗಳೂರು, 2014; ಮೂಲಲೇಖನ ‘ಪ್ರಜಾವಾಣಿ’ ದಿನಪತ್ರಿಕೆಯಲ್ಲಿ 10.3.1957ರಂದು ಪ್ರಕಟವಾಗಿತ್ತು.)

  ‘ಹೋಳಿಹಬ್ಬದ ಸಂದರ್ಭದಲ್ಲಿ ಊರಿನ ತರುಣರೂ ವಯಸ್ಸಾದ ವೃದ್ಧರೂ ಬಲುಹುರುಪಿನಿಂದ ಹೋಳಿ ಆಚರಿಸಲು ಮನೆಯಿಂದ ಹೊರಬೀಳುವರು. ಹುಣ್ಣಿಮೆಯ ದಿವಸ ಕಾಮನ ಸುಂದರವಾದ ಪ್ರತಿಮೆ ಮಾಡಿ ಆ ಪ್ರತಿಮೆಗೆ ಅಲಂಕರಣ ಮಾಡಿ, ಸಿಂಗರಿಸಿ ಊರಿನ ಕಾಮನಕಟ್ಟೆಯ ಮುಂದಿನ ಚಪ್ಪರದ ಅಂಗಳದಲ್ಲಿ ಕಾಮನ ಪ್ರತಿಮೆ ಕೂರಿಸುವರು. ಅನಂತರ ಊರಿನ ಸುತ್ತ ತಮಟೆ ಡೋಲಿನ ವಾದ್ಯಗಳ ಅಬ್ಬರದೊಂದಿಗೆ ಕುಣಿದು ಕುಪ್ಪಳಿಸಿ ಮನೆ ಮನೆಯಿಂದ ಸೌದೆ, ಬೆರಣಿ, ಬಿದಿರು, ಹಳೆಯ ಮರದ ಸಾಮಾನುಗಳು ಇತ್ಯಾದಿ ವಸ್ತುಗಳನ್ನು ಸಂಗ್ರಹಿಸುವರು. ಈ ಸಂದರ್ಭ ಕುರಿತ ಜನಪದ ತ್ರಿಪದಿಯೊಂದು ಹೀಗಿದೆ:

  ಕಾಮಣ್ಣ ಸತ್ತಾನಂತ ಭೀಮಣ್ಣ ಗೋಳಾಡ್ತಾನೆ

  ಮನೆಗೈದೈದು ಸೌದೆ ಕೊಡ್ರವ್ವೋ ! 

  ಕಾಮಣ್ಣನಿಗೆ ಚೆಂದಾಗಿ ಕಿಚ್ಚ ಹಾಯ್ಸೋಣ ||

  – ಹೀಗೆ ಹಾಡಿನ ಮೂಲಕ ಆಡಿ ಕುಣಿದು ಕುಪ್ಪಳಿಸಿ, ಸಂಗ್ರಹಿಸಿದ ಸೌದೆ-ಬೆರಣಿಗಳನ್ನು ಚಪ್ಪರಹಾಕಿದ ಕಾಮನಕಟ್ಟೆಯ ಮುಂದಿರಿಸಿ ಅದರ ಮೇಲೆ ಕಾಮನನ್ನು ಕೂರಿಸಿ ಹರಿಜನರ ಮನೆಯಲ್ಲಿ ಸಿದ್ಧಪಡಿಸಿದ ರತಿಪ್ರತಿಮೆ ಹಾಗೂ ಅವರ ಮನೆಯಿಂದಲೇ ಬೆಂಕಿಯನ್ನೂ ಕದ್ದು ತಂದು ರತಿಕಾಮರನ್ನು ಅಶ್ಲೀಲ ಬೈಗುಳಗಳಿಂದ, ಹಾಡುಗಳೊಂದಿಗೆ ನಿಂದಿಸಿ, ವಾದ್ಯದೊಂದಿಗೆ ಕುಣಿದು ಸುಡುವರು. ಮರುದಿನ ಕಾಮನನ್ನು ಸುಟ್ಟ ಬೂದಿಯನ್ನು ರೈತರು ತಮ್ಮ ಜಮೀನಿನಲ್ಲಿ ಚೆಲ್ಲಿ, ಬಿತ್ತುವ ಬೀಜಗಳೊಂದಿಗೆ ಬೆರೆಸಿ ಉಳುಮೆ ಮಾಡುವರು. ಈ ಆಚರಣೆಯಿಂದ ಮಳೆ ಬಿದ್ದು ಸಮೃದ್ಧ ಫಲ ದೊರೆಯುತ್ತದೆಂಬ ನಂಬಿಕೆ ರೈತರಲ್ಲಿದೆ. ಸುಟ್ಟ ಕಾಮಣ್ಣನ ಬೂದಿಯನ್ನು ವಿವಿಧ ಬಣ್ಣದ ಪುಡಿಯೊಂದಿಗೆ ಬೆರೆಸಿ ಆತ್ಮೀಯ ಸ್ನೇಹಿತರಿಗೆ, ನೆರೆಹೊರೆಯವರಿಗೆ ಮುಖ, ಮೈ, ಕೈ, ಬಟ್ಟೆಗಳಿಗೆ ಸಂತೋಷ-ಸಡಗರದಿಂದ ಬಳಿದು ಸಿಹಿ ಹಂಚಿ ಸಂಭ್ರಮಿಸುವರು. ಇನ್ನೂ ಕೆಲವೆಡೆ ಈ ಬಣ್ಣದ ಪುಡಿಗಳನ್ನು ನೀರಿನ ತಪ್ಪಲೆಯಲ್ಲಿ ಬೆರೆಸಿ ಸ್ನೇಹಿತರ ತಲೆಯ ಮೇಲೆ ಸುರಿದು ಸಂತೋಷ ಹಂಚಿಕೊಳ್ಳುವುದಿದೆ. ವಿವಿಧ ಬಣ್ಣದ ನೀರನ್ನು ಬಿದಿರಿನ ಬೊಂಬು ಅಥವಾ ಬಾಟಲಿಗಳಲ್ಲಿ, ಪಿಚಕಾರಿಯಲ್ಲಿ ತುಂಬಿಸಿ ಓಕುಳಿಯಾಡುವುದೂ ಇದೆ. ಈ ರೀತಿಯ ಮನರಂಜನೆಯ ಆಟ ಮುಗಿದ ಅನಂತರ ಪ್ರತಿಯೊಬ್ಬರೂ ತಮ್ಮ ತಮ್ಮ ಮನೆಗಳಲ್ಲಿ ಸ್ನಾನ ಮಾಡಿ ಹೋಳಿಹಬ್ಬದ ಪ್ರಯುಕ್ತ ಸಿದ್ಧಪಡಿಸಿದ ವಿವಿಧ ಭಕ್ಷ್ಯಭೋಜ್ಯಗಳ ಔತಣಕೂಟದಲ್ಲಿ ಪಾಲ್ಗೊಂಡು ಹಬ್ಬದ ಸಂತೋಷವನ್ನು ಸಾಮೂಹಿಕವಾಗಿ ಹಂಚಿಕೊಳ್ಳುವರು.’ (ಕನ್ನಡ ವಿಷಯ ವಿಶ್ವಕೋಶ, ಸಂಪುಟ 2; ಪ್ರಕಾಶಕರು: ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿಶ್ವವಿದ್ಯಾನಿಲಯ, 2007.)

  ‘ಕರ್ನಾಟಕದಲ್ಲೂ ಹೋಳಿಹಬ್ಬವು ಒಂದು ಜಾನಪದ ಹಬ್ಬವಾಗಿ ಆಚರಣೆಯಲ್ಲಿದೆ. ಜಾನಪದ ಪರಂಪರೆಯ ಸಾಮಾಜಿಕ ಸಂಪ್ರದಾಯಗಳ ಸಂಕೇತಗಳನ್ನು ಈ ಹಬ್ಬದ ನಡಾವಳಿಗಳಲ್ಲಿ ಸ್ಪಷ್ಟವಾಗಿ ಗುರುತಿಸಬಹುದು. ಹೋಳಿಹಬ್ಬದ ಆಚರಣೆಗಾಗಿ ಹಳೆಯ ವಸ್ತುಗಳನ್ನು ಸಂಗ್ರಹಿಸುವುದು, ಬೆರಣಿ, ಕಟ್ಟಿಗೆ ಕಳುವುಮಾಡಿ ತರುವುದು, ಹಳ್ಳಿಗಳಲ್ಲಿ ಹಬ್ಬದ ಬೇರೆ ಬೇರೆ ಕಾರ್ಯಗಳಿಗಾಗಿ ಬೇರೆ ಬೇರೆ ಹಕ್ಕುದಾರರಿರುವುದು, ಇವರೆಲ್ಲರ ಮೇಲೆ ಹೋಳಿಯ ನಾಯಕನೆಂದು ಹಿರಿಯನೊಬ್ಬನಿರುವುದು ಇವೆಲ್ಲ ಜಾನಪದ ಸಂಪ್ರದಾಯಗಳು. ಹೋಳಿಹಬ್ಬದ ಕುರಿತಂತೆ ಉತ್ತರಕರ್ನಾಟಕದಲ್ಲಿ ಜಾನಪದ ಲಾವಣಿಗಳು, ದುಂದುಮೆ ಹಾಡುಗಳು, ಹಿಯಾಲುಗಳು ಮೊದಲಾದ ಜಾನಪದ ಸಾಹಿತ್ಯಗಳು ಕಂಡುಬರುತ್ತವೆ’ – ಎಂದು ಲೇಖಕ ಸಂಪಟೂರು ವಿಶ್ವನಾಥ್ ದಾಖಲಿಸಿದ್ದಾರೆ. (ಹಬ್ಬಗಳು ಮತ್ತು ದಿನಾಚರಣೆಗಳು; ಪ್ರಕಾಶಕರು: ಅಂಕಿತ ಪುಸ್ತಕ, ಬೆಂಗಳೂರು, 2014.)

  ವಿದ್ವದ್ವಲಯದಲ್ಲಿ

  ‘ಹೋಳಿಹಬ್ಬದಲ್ಲಿ ನಡೆಯುವ ಕಾಮದಹನವನ್ನು ಪ್ರತಿಮಾ ವಿಧಾನದಿಂದ ನೋಡಬೇಕು. ಶಿವನ ಹಣೆಗಣ್ಣು ಎಂದರೆ ಜ್ಞಾನಚಕ್ಷು. ಕಾಮ ಎಂದರೆ ಕೆಟ್ಟ ಆಸೆ. ಕೆಟ್ಟ ಆಸೆಯನ್ನು ಜ್ಞಾನಸೂರ್ಯನಿಂದ ದಗ್ಧಗೊಳಿಸುವುದೇ ಕಾಮದಹನ’ – ಎಂಬುದು ಕೆಲವು ವಿದ್ವಾಂಸರ ಅಭಿಮತ.

  ರತಿ, ಪ್ರೀತಿ, ಪ್ರೇಮ, ಕಾಮ ಮುಂತಾದ ಮನೋಧರ್ಮಗಳಿಲ್ಲದೆ ಜಗದ್ವ್ಯಾಪಾರವು ನಡೆಯಲಾರದು. ಋಗ್ವೇದ ಮತ್ತು ಅಥರ್ವಣವೇದಗಳಲ್ಲಿ ಕಂಡುಬರುವ ಕಾಮಸೂಕ್ತದಲ್ಲಿ ಕಾಮದಿಂದಲೇ ಪ್ರಪಂಚದ ಸೃಷ್ಟಿಯು ಆರಂಭವಾಯಿತು ಎಂದು ಹೇಳಿದೆ: ‘ಕಾಮಸ್ತದಗ್ರೇ ಸಮವರ್ತತಾಧಿ ಮನಸೋರೇತಃ ಪ್ರಥಮಂ ಯದಾಸೀತ್’ (ತೈತ್ತಿರೀಯಾರಣ್ಯಕ).

  ಪ್ರಣವಸ್ವರೂಪಿಯಾದ ಶಿವನನ್ನು ಹೊಂದಲು ನಮ್ಮ ಪ್ರಣಯದ ಆಸೆ ಆಕಾಂಕ್ಷೆಗಳ ಕಾಮಕಲ್ಮಶಗಳು ಮೊದಲು ಸುಟ್ಟುಹೋಗಬೇಕು. ಅದರ ಸಂಕೇತವೇ ಕಾಮದಹನ. ಇದು ನಿತ್ಯವೂ ನಮ್ಮ ಧರ್ಮ ಕರ್ಮಗಳ ಅನುಷ್ಠಾನದಲ್ಲಿ ನಮ್ಮ ವಿವೇಕೋದಯದಿಂದ ನಡೆಯಬೇಕಾಗಿದೆ.

  ಕಾಮಕ್ಕೂ ಪ್ರೇಮಕ್ಕೂ ಅಜಗಜಾಂತರವಿದೆ. ಕಾಮವು ಕ್ಷಣಿಕ, ಪ್ರೇಮವು ಶಾಶ್ವತ. ಕಾಮವು ದೈಹಿಕ, ಪ್ರೇಮವು ಮಾನಸಿಕ. ಕಾಮವನ್ನು ಪುರುಷಾರ್ಥಗಳಲ್ಲಿ ಒಂದೆಂದು ಪರಿಗಣಿಸಲಾಗಿದೆಯಾದರೂ ಧರ್ಮದಿಂದ ಪ್ರಚೋದಿತವಾದ ಕಾಮದ ಗಳಿಕೆಯು (ಅರ್ಥ) ಮೋಕ್ಷಕ್ಕೆ ಕಾರಣವಾಗುವುದು. ಆದ್ದರಿಂದ ನಮ್ಮ ಆಸೆ ಆಕಾಂಕ್ಷೆಗಳಲ್ಲಿ ಧರ್ಮಸೂಕ್ಷ್ಮ, ದರ್ಶನಕಾಣ್ಕೆಯಿದ್ದು ಅಂತರಂಗ-ಬಹಿರಂಗ ಶುದ್ಧಿಯಿಂದ ಪವಿತ್ರತೆಯುಂಟಾಗಬೇಕು. ಆಗ ಕಾಮದಹನವು ಒಂದು ನಿತ್ಯಸತ್ಯದ ಬೆಳಕಿನ ಹಬ್ಬವಾಗುತ್ತದೆ – ಎಂಬುದು ವಿದ್ವಜ್ಜನರ ಅಭಿಪ್ರಾಯ.

  ಹೋಳಿ ಹಬ್ಬ : ಎಲ್ಲ ಹಬ್ಬಗಳಂತೆ ಅಲ್ಲ ಈ ಹಬ್ಬ

 • ಮಾಲತಿ ಹೆಗಡೆ

  ಮನೋರಮಾ ಅವರ ನೈಸರ್ಗಿಕ ಬಣ್ಣಗಳ ತಯಾರಿಕೆ ನಾಡಿನಲ್ಲಿಯೇ ಪರಿಸರಸ್ನೇಹಿಯಾದ ಒಂದು ಅನುಶೋಧನೆ. ಪರಿಸರಪ್ರಿಯರಿಗೆ ಹಿತವಾಗುವಂತೆ ಇವರು ತಯಾರಿಸುವ ಬಣ್ಣಗಳು ಚರ್ಮಕ್ಕೆ, ಬಟ್ಟೆಗೆ, ಮಣ್ಣಿಗೂ ಹಿತ. ಉದ್ಯಮ ಸಾಮಾಜಿಕ ಹಿತವನ್ನೂ, ಕುಟುಂಬಕ್ಕೆ ಆರ್ಥಿಕ ಸುಸ್ಥಿರತೆಯನ್ನೂ ನೀಡಿರುವುದಲ್ಲದೆ ಹಲವರಿಗೆ ಉದ್ಯೋಗಾವಕಾಶವನ್ನೂ ಸೃಷ್ಟಿಸಿದೆ.ಅನನ್ಯ

  ‘ಕಾಮನ ಬಿಲ್ಲು ಕಮಾನು ಕಟ್ಟಿದೆ’ ಎಂದು ಹಾಡುತ್ತ ಏಳು ಬಣ್ಣಗಳನ್ನೆಣಿಸುತ್ತ ಸಂಭ್ರಮಿಸುತ್ತಲೇ ಬಾಲ್ಯ ಕಳೆದವರು ನಾವು. ಪಾಠಗಳನ್ನು ಓದಿ, ಬರೆಯಿರಿ ಎನ್ನುವ ಮಾಸ್ತರರ ಆಜ್ಞೆಗಿಂತ ಚಿತ್ರ ಬಿಡಿಸಿ ಬಣ್ಣ ತುಂಬಿ ಎಂದರೆ ಹಿಗ್ಗಿದವರು ನಾವು. ಹೂವು ಹೂವಿಗೂ, ಎಲೆ ಎಲೆಗೂ ಅನನ್ಯತೆಯನ್ನಿಟ್ಟು ಚೆಲುವ ಚಿತ್ತಾರ ಬಿಡಿಸುವ ಪ್ರಕೃತಿಮಾತೆಯ ಕೌಶಲಕ್ಕೆ ಬೆರಗಾದವರು ನಾವು.  ಬಣ್ಣಗಳೆಂದರೆ ಚೆಲುವು, ಬೆಡಗು, ಸೊಗಸು ಸಂಭ್ರಮಗಳ ಒಟ್ಟಂದ. ದೈನಂದಿನ ಬದುಕಿನ ಏಕತಾನತೆ ಕಳೆಯಲೆಂದೇ ಏನೋ ಭಾರತೀಯರ ಬದುಕಿನಲ್ಲಿ ಹಲವಾರು ಹಬ್ಬಗಳನ್ನು ಆಚರಿಸುವ ಕ್ರಮವಿದೆ. ಬಣ್ಣಗಳೊಂದಿಗೆ ಬೆಸೆದುಕೊಂಡು ಆಚರಿಸುವ ಹಬ್ಬವೇ ಹೋಳಿಹುಣ್ಣಿಮೆ.

  ಮಾವಿನಿಂದ ಬೇವಿನವರೆಗೆ, ಮುತ್ತುಗದಿಂದ ಕೊಡಸದವರೆಗೆ ಭೂಮಿಯ ಮೇಲಿನ ಬಹುತೇಕ ಸಸ್ಯಗಳು ಚಿಗಿತು ಹೂವಾಗುವ ವಸುಂಧರೆಯನ್ನು ಶೃಂಗರಿಸುವ, ವಸಂತನಾಗಮನಕ್ಕೆ ಕಾತರಿಸಿ ನಿಲ್ಲುವ ಈ ಹೊತ್ತಿನಲ್ಲಿ ನಾಡಿನೆಲ್ಲೆಡೆ ಹೋಳಿಹುಣ್ಣಿಮೆಯ ಸಂಭ್ರಮ ಗರಿಬಿಚ್ಚಿಕೊಳ್ಳುತ್ತದೆ. ಕಾಮನನ್ನು ಸುಟ್ಟು ಪ್ರೇಮದಿಂದ ಬಣ್ಣವನ್ನಾಡುವುದೇ ಈ ಹಬ್ಬದ ವಿಶೇಷ.

  ವಸಂತಮಾಸದಲ್ಲಿ ಗಿಡ ಮರ ಬಳ್ಳಿಗಳೆಲ್ಲ ಚಿಗಿತು ಇಡೀ ಪರಿಸರವೇ ಮದುವಣಗಿತ್ತಿಯಂತಾಗುವ ಕಾಲದಲ್ಲಿ ಆಚರಿಸಲ್ಪಡುವ ಹೋಳಿಹಬ್ಬವನ್ನು ಬಹುಶಃ ಪರಿಸರಸ್ನೇಹಿಯಾಗಿಯೇ ಆಚರಿಸುವ ಕ್ರಮವಿತ್ತೇನೋ. ಹಿಂದೆ ದೇಶದ ಕೆಲವು ಪ್ರದೇಶಗಳಲ್ಲಿ ಮಾತ್ರ ಆಚರಿಸಲ್ಪಡುತ್ತಿದ್ದ ಹೋಳಿಹಬ್ಬ ಈಗ ದೇಶದ ಬಹುತೇಕ ರಾಜ್ಯಗಳಲ್ಲಿ ಆಚರಿಸಲ್ಪಡುತ್ತಿದೆ. ಬಣ್ಣಗಳಿಗೆ ಬೇಡಿಕೆ ಹೆಚ್ಚಾದಂತೆ ವ್ಯಾಪಾರಸ್ಥರು ಆರ್ಸೆನಿಕ್‍ಯುಕ್ತ ಗಾಢವರ್ಣದ ರಾಸಾಯನಿಕ ಬಣ್ಣಗಳನ್ನು ಮಾರಲಾರಂಭಿಸಿದರು. ನೋಡಲು ಅತ್ಯಾಕರ್ಷಕವೆನಿಸುವ ಈ ಬಣ್ಣಗಳನ್ನು ಪರಸ್ಪರ ಎರಚಿಕೊಂಡು ಆನಂದದಲ್ಲಿ ಆಟವಾಡಲು ತೊಡಗಿದರೆ ಕೆಲ ಸಮಯದಲ್ಲಿಯೇ ಅದರ ದುಷ್ಪರಿಣಾಮಗಳು ಕಾಣಿಸಿಕೊಳ್ಳಲಾರಂಭಿಸುತ್ತವೆ. ಮೈ ಉರಿ ಕೆರೆತದಂತಹ ಸಮಸ್ಯೆ ಕಣ್ಣಿಗೆ ಬಿದ್ದರೆ ಅಲರ್ಜಿ. ಕೂದಲಿಗೆ ಬಿದ್ದರೆ ನಾಲ್ಕಾರು ದಿನ ತಲೆ ತೊಳೆದುಕೊಳ್ಳಬೇಕಾದ ಸ್ಥಿತಿ ನಿರ್ಮಾಣವಾಗುತ್ತದೆ. ಅನೇಕರು ಒಂದೆರಡು ವರ್ಷ ಬಣ್ಣಗಳನ್ನಾಡಿದ ಮೇಲೆ ತಿರುಗಿ ಆ ಆಚರಣೆಗೇ ಶಾಶ್ವತ ವಿದಾಯ ಹೇಳಿಬಿಡುವುದು ಇದೇ ಕಾರಣಕ್ಕೆ.

  ಎಳೆಯರು, ಹರಯದವರು ಮಾತ್ರ ಕಷ್ಟವಾದರೂ ಇಷ್ಟವೆಂದುಕೊಂಡೇ ಬಣ್ಣವನ್ನಾಡುತ್ತಾರೆ.

  ನಿಸರ್ಗದಲ್ಲಿ ಅಸಂಖ್ಯಾತ ಬಣ್ಣಗಳಿದ್ದರೂ ಹೋಳಿಹಬ್ಬವನ್ನು ಆರೋಗ್ಯಕ್ಕೆ ಹಾನಿಕಾರಕವಾದ ರಾಸಾಯನಿಕ ಬಣ್ಣಗಳಿಂದ ಆಚರಿಸುತ್ತಿರುವುದು ದುರಂತವಲ್ಲವೇ? ಸುರಕ್ಷಿತವಾಗಿ, ಪರಿಸರಸ್ನೇಹಿಯಾಗಿ, ನೈಸರ್ಗಿಕ ಬಣ್ಣಗಳಿಂದ ಹೋಳಿಹಬ್ಬವನ್ನಾಚರಿಸಿ ಎನ್ನುವ ಪ್ರಜ್ಞಾವಂತರ ಕೂಗನ್ನು ಕೇಳಿ ಮಾರುಕಟ್ಟೆಯಲ್ಲಿ ಹುಡುಕಿದರೆ ನೈಸರ್ಗಿಕ ಬಣ್ಣಗಳು ಸಿಗುವುದು ಕಷ್ಟವೇ….

  ಭೂಮಿಯ ಬಿಕ್ಕು

  ಬಣ್ಣಗಳನ್ನು ಪರಸ್ಪರ ಎರಚಿಕೊಳ್ಳುವ ಸಂದರ್ಭದಲ್ಲಿ ಸಾವಿರಾರು ಟನ್ ಬಣ್ಣ ಭೂಮಿ ಪಾಲಾಗುತ್ತದೆ. ಬಣ್ಣವಾಡಿದ ನಂತರ ಮನೆಯನ್ನೂ, ರಸ್ತೆಯನ್ನೂ, ಬಣ್ಣವಾಡಲು ಧರಿಸಿದ ಬಟ್ಟೆಗಳನ್ನೂ ತೊಳೆಯುವಾಗ ಕೋಟ್ಯಂತರ ಲೀಟರ್ ರಾಸಾಯನಿಕಯುಕ್ತ ನೀರು ಭೂಮಿಯೊಡಲನ್ನು ಸೇರುತ್ತದೆ. ರಾಸಾಯನಿಕ ಬಣ್ಣಭರಿತ ಬಟ್ಟೆಗಳು ತ್ಯಾಜ್ಯದ ರೂಪದಲ್ಲಿ ಭೂಮಿಗೇ ಸೇರುತ್ತದೆ. ಈ ಕಷ್ಟ ಸಹಿಸಲಾರದೆ ಭೂಮಿ ಬಿಕ್ಕುವುದಲ್ಲವೇ? ಅದನ್ನು ಆಲಿಸಲು ಮನವಿರಬೇಕು, ಪ್ರಜ್ಞಾವಂತಿಕೆ ಬೇಕು.

  ‘ಭೂಮಿಗೆ ಕಷ್ಟವೆಂದು ಬಣ್ಣವಾಡುವುದನ್ನು ಬಿಡಲಾಗುವುದಿಲ್ಲ. ಹಬ್ಬ ಆಚರಿಸುವುದು ನಮ್ಮ ಸಂಪ್ರದಾಯ. ಮಾರುಕಟ್ಟೆಯಲ್ಲಿ ಸಿಗುವುದೆಲ್ಲವೂ ರಾಸಾಯನಿಕ ಬಣ್ಣಗಳೇ, ನಾವೇನು ಮಾಡಲಾದೀತು?’ ಎಂದು ವಾದಿಸುವವರಿದ್ದಾರೆ. ಅಂಥವರು ಪರ್ಯಾಯ ಮಾರ್ಗಗಳ ಬಗ್ಗೆ ನಡೆದ ಚಿಂತನೆಯನ್ನೂ, ಪ್ರಯತ್ನಗಳನ್ನೂ ಗಮನಿಸುವುದೊಳಿತು.

  ಅನನ್ಯ ಉದ್ಯಮ ಜನ್ಮತಾಳಿತು

  ನಾನು ರಾಸಾಯನಿಕ ಬಣ್ಣಗಳಿಗೆ ಬೆನ್ನುತಿರುವಿ ಹುಡುಕಿದಾಗ ಸಿಕ್ಕಿದ್ದು ನೈಸರ್ಗಿಕ ಬಣ್ಣಗಳ ಉದ್ಯಮದ ಮನೋರಮಾ ಅವರ ಮನೋಜ್ಞವಾದ ಕಥೆ. ಉತ್ತರಕನ್ನಡದ ಪ್ರವಾಸಿಕ್ಷೇತ್ರವಾದ ಸೋಂದಾ ಕಳೆದ ಹದಿನೈದು ವರ್ಷಗಳಿಂದ ನೈಸರ್ಗಿಕ ಬಣ್ಣದಿಂದಲೂ ಪ್ರಸಿದ್ದವಾಗಿದೆ. ಸೋಂದಾ ವ್ಯಾಪ್ತಿಯಲ್ಲಿ ಬರುವ ನಂದೀಹೊಂಡ ಕಾಡಿನ ಮಡಿಲಿನ ಒಂದೇ ಮನೆಯ ಒಂದು ಊರು. ಮೂಲತಃ ಸಾವಯವ ಕೃಷಿಕರಾದ ಮನೋರಮಾ ಸೂರ್ಯನಾರಾಯಣ ಜೋಷಿ ತಮ್ಮ ಅಡಿಕೆತೋಟದಲ್ಲಿ ಮಿಶ್ರಬೆಳೆಯಾಗಿ ಬಾಳೆ, ಮೆಣಸು, ತೆಂಗನ್ನು ಬೆಳೆಯುತ್ತಾರೆ. ಗದ್ದೆಯಲ್ಲಿ ಭತ್ತ ಮತ್ತು ಕಬ್ಬನ್ನು ಬೆಳೆಯುತ್ತಾರೆ. “ವರ್ಷದಲ್ಲಿ ಒಮ್ಮೆ ಮಾತ್ರ ಆದಾಯ ಸಿಗುವ ಅಡಿಕೆಗೆ ವಿಪರೀತ ಬೆಲೆ ಏರಿಳಿತಗಳು. ಆದ್ದರಿಂದ ಹಣ ಹೂಡಿದ ಅಲ್ಪ ಅವಧಿಯಲ್ಲಿ ಲಾಭ ಬರುವಂತಹ ಏನಾದರೂ ಉದ್ಯಮ ಆರಂಭಿಸಬೇಕು, ಅದು ಪರಿಸರಕ್ಕೆ ಪೂರಕವಾಗಿರಬೇಕು, ಸಮಾಜಕ್ಕೆ ಉಪಯುಕ್ತವಾಗಿರಬೇಕು” ಎಂದು ಅವರು ವಿಚಾರ ಮಾಡಿದರು.

  ಅದೇ ಸಮಯದಲ್ಲಿ ಪುಣೆಯ ಸಂಸ್ಥೆಯೊಂದು ಹೋಳಿಹುಣ್ಣಿಮೆಗೆ ಪರಿಸರಸ್ನೇಹಿಯಾದ ಬಣ್ಣ ತಯಾರಿಸಿ ಕೊಡುವುದಾದರೆ ಖರೀದಿಸುತ್ತೇವೆ ಎಂದಿತು. ಬಣ್ಣ ಆಡುವ ಸಂಪ್ರದಾಯದ ಅರಿವಿಲ್ಲದ ಮನೋರಮಾ ಅವರಿಗೆ ಇದೊಂದು ಸವಾಲಿನಂತೆ ಭಾಸವಾಯಿತು. ಆ ಕೆಲಸದಲ್ಲಿ ಹೊಸತನವಿತ್ತು. ಪರಿಸರದಲ್ಲಿ ನೂರಾರು ಬಣ್ಣಗಳಿರುವಾಗ ನಾಲ್ಕೈದು ಬಣ್ಣಗಳನ್ನು ತಯಾರಿಸಲು ಸಾಧ್ಯವಿಲ್ಲವೆ? –  ಎಂದುಕೊಳ್ಳುತ್ತಲೇ ಪ್ರಯೋಗಕ್ಕಿಳಿದರು. ನೈಸರ್ಗಿಕ ಬಣ್ಣ ತಯಾರಿಸುವುದಕ್ಕೆ ಸಿದ್ಧ ಸೂತ್ರಗಳೇನೂ ಇರಲಿಲ್ಲ. “ಒಣಗಿದ ಹೂವು, ಅರಿಶಿನ, ಕುಂಕುಮ, ಅಕ್ಕಿಹಿಟ್ಟು, ಬೀಟ್ರೂಟ್, ಪಾಲಕ್ ಸೊಪ್ಪು, ಕೆಂಪುಮಣ್ಣು ಎಲ್ಲವನ್ನು ಮಿಶ್ರ ಮಾಡುವುದು – ‘ಹೇಗಿದೆ ಬಣ್ಣ?’ ಎನ್ನುತ್ತಿದ್ದ ನನ್ನನ್ನು ಗಂಡ, ಮಕ್ಕಳು ಗೇಲಿ ಮಾಡುತ್ತಿದ್ದರು. ಆದರೆ ನಾನು ಸತತವಾಗಿ ಈ ವಿಷಯದಲ್ಲಿ ಪ್ರಯತ್ನ ಮಾಡುವುದನ್ನು ಕಂಡು ನಂತರ ಸಲಹೆ ಸಹಕಾರ ನೀಡಿದ್ದಲ್ಲದೆ ಕೆಲಸದಲ್ಲಿ ಕೈಗೂಡಿಸಿದರು” ಎಂದು ಮನೋರಮಾ ನಗುತ್ತಾರೆ.

  ಉತ್ತಮ ಗುಣಮಟ್ಟದ ನೈಸರ್ಗಿಕ ಬಣ್ಣಕ್ಕೆ ತುಂಬಾ ಬೇಡಿಕೆ ಬಂತು. ಉದ್ಯಮವನ್ನು ಪುಣೆಯಿಂದ ಬೆಂಗಳೂರಿನ ಸಾವಯವ ಮಳಿಗೆಗಳಿಗೂ ವಿಸ್ತರಿಸಿದರು. ಇವರು ತಯಾರಿಸುವ ಬಣ್ಣಗಳಲ್ಲಿ ಅರಿಶಿನ ಪ್ರಧಾನ ಪಾತ್ರ ವಹಿಸಿದೆ. ಕುಂಕುಮ ಇಂಡಿಗೋ ಅಕ್ಕಿಹಿಟ್ಟು. .ಹೀಗೆ ಬೆರೆಸಿ ಕೆಂಪು ನೀಲಿ ಕೇಸರಿ ಹಸಿರು ಹಳದಿ ಹೀಗೆ ಐದು ಬಣ್ಣಗಳನ್ನು ತಯಾರಿಸುತ್ತಾರೆ. ಬಣ್ಣಗಳು ಚರ್ಮಕ್ಕೆ ಹಿತಕರವಾಗಿರಬೇಕು ಎಂಬ ಕಾರಣಕ್ಕೆ ಲಕ್ಕಿಸೊಪ್ಪು, ಪಚ್ಚಕರ್ಪೂರ, ಕಹಿಜೀರಿಗೆ, ಬಜೆ, ಚಕ್ಕೆಯಪುಡಿಯನ್ನು ಅಲ್ಪ ಪ್ರಮಾಣದಲ್ಲಿ ಮಿಶ್ರಣ ಮಾಡುತ್ತಾರೆ.

  ಯಾವುದೇ ಬಗೆಯ ತರಬೇತಿ ಇಲ್ಲದೆ ರಕ್ತಗತ ಪರಿಸರಾಸಕ್ತಿಯಿಂದ ಸಮಾಜಕ್ಕೆ ಉಪಯುಕ್ತವಾದ ಉದ್ಯಮವೊಂದನ್ನು ಹುಟ್ಟುಹಾಕಿದ ಮನೋರಮಾ ಜೋಷಿಯವರು ಆರ್ಥಿಕ ಸ್ವಾವಲಂಬನೆಯನ್ನು ಸಾಧಿಸಿದ್ದಾರೆ. ಆರಂಭದಲ್ಲಿ ಬಣ್ಣ ತಯಾರಿಸುವಾಗ ಮನೆಯವರೇ ಕೆಲಸವನ್ನು ನಿರ್ವಹಿಸಿದರು. ಈಗ ಏಳು ಮಹಿಳೆಯರಿಗೆ ವರ್ಷದಲ್ಲಿ ಮೂರು ತಿಂಗಳು ಕೆಲಸ ನೀಡುತ್ತಾರೆ. “ಭತ್ತ ಅಡಿಕೆಯ ಕೊಯಿಲು ಮುಗಿಸಿದ ನಂತರ ಕೆಲಸವಿಲ್ಲದೇ ಸುಮ್ಮನೇ ಕೂಡುತ್ತಿದ್ದೆವು. ಈಗ ಬಣ್ಣದ ತಯಾರಿಗೆ ಬರುವುದರಿಂದ ಆರ್ಥಿಕವಾಗಿ ಅನುಕೂಲವಾಗುತ್ತದೆ’’ ಎನ್ನುತ್ತಾರೆ ಪ್ಯಾಕಿಂಗಿಗೆ ಬರುವ ಸವಿತಕ್ಕ; “ಬಣ್ಣಗಳನ್ನು ತಿಕ್ಕಿ ಮಿಶ್ರ ಮಾಡುವ, ಜರಡಿ ಹಿಡಿಯುವ, ಪ್ಯಾಕಿಂಗ್ ಮಾಡುವ ಗಡಿಬಿಡಿಯ ಕೆಲಸದ ನಡುವೆ ಹತ್ತಾರು ಜನ ಒಟ್ಟುಗೂಡುವುದರಿಂದ ಮಾತುಕತೆ, ಹರಟೆ, ರೇಗಿಸುವುದು, ಹಾಡು, ಅಂತ್ಯಾಕ್ಷರಿ…. ಒಟ್ಟೊಟ್ಟಿಗೇ ನಡೆದಿರುತ್ತದೆ.”

  “ನಗರಗಳಲ್ಲಿ ಒಂದು ದಿನ ಹೋಳಿಹಬ್ಬವಾದರೆ ಅದನ್ನು ತಯಾರಿಸುವ ನಮಗೆ ಮೂರು ತಿಂಗಳು ಹೋಳಿಯ ಧೂಳು, ಸಂಭ್ರಮ. ಪ್ರತಿವರ್ಷವೂ ಹೋಳಿಹುಣ್ಣಿಮೆಗೆ ನಮ್ಮದು ಭರದ ಸಿದ್ಧತೆ” ಎಂಬುದು ಅಲ್ಲಿ ಕೆಲಸ ಮಾಡುವವರ ಒಕ್ಕೊರಲ ನುಡಿ. ಬಣ್ಣ ತಯಾರಿಕೆಗೆ ಬೇಕಾಗುವ ಅಕ್ಕಿ, ಅರಿಶಿನ, ಕುಂಕುಮ… ಮುಂತಾದ ಕಚ್ಛಾವಸ್ತುಗಳನ್ನು ಸುತ್ತಮುತ್ತಲಿನ ರೈತರ ಬಳಿ ಖರೀದಿಸುತ್ತಾರೆ. ಮನೋರಮಾ ಅವರ ಮಗ ವಿವೇಕ ಅಪ್ಪ ಅಮ್ಮನೊಂದಿಗೆ ಉದ್ಯಮದಲ್ಲಿಯೂ ನೆರವಾಗುತ್ತಿದ್ದಾರೆ. ಕಾಗದದ ಪ್ಯಾಕೆಟ್‍ನಲ್ಲಿ ಲಭಿಸುವ ಇವರ ಬಣ್ಣಗಳು ‘ಮೈತ್ರಿ’ ಎಂಬ ಹೆಸರಿನಲ್ಲಿ ಪುಣೆ, ಗೋವಾ, ಬೆಂಗಳೂರು, ಕೈಗಾ, ಧಾರವಾಡದ ಸಾವಯವ ಮಳಿಗೆಗಳಲ್ಲಿ ಲಭಿಸುತ್ತವೆ.

  “ವರ್ಷದಲ್ಲಿ ಒಂದೇ ದಿನ ಆಡುವ ಬಣ್ಣದಾಟಕ್ಕೆ ಸಾವಿರಾರು ಟನ್ ಬಣ್ಣ ಉಪಯೋಗಿಸುತ್ತಾರೆ. ಆದರೆ ಖರೀದಿಸುವವರು ಯಾರೂ ತುಂಬ ದಿನಗಳ ಮೊದಲು ಖರೀದಿಸುವುದಿಲ್ಲ. ಹಬ್ಬ ಮುಗಿದ ಮೇಲೆಯೂ ಖರೀದಿಸುವುದಿಲ್ಲ. ಬೇಡಿಕೆ ಕೊನೆಯ ಘಳಿಗೆಯಲ್ಲಿ ಬಂದರೆ ತಕ್ಷಣ ತಯಾರಿಸುವುದಕ್ಕೆ ಸಾಧ್ಯವಿಲ್ಲ. ಅದಕ್ಕೆ ಸಾಕಷ್ಟು ಮಾನವಶ್ರಮ, ಸಮಯ ಎರಡೂ ಬೇಕು. ಬೇಡಿಕೆ-ಪೂರೈಕೆಯಲ್ಲಿ ಹೊಂದಾಣಿಕೆ ಇರುವಂತೆ ನೋಡಿಕೊಳ್ಳಬೇಕು” ಎನ್ನುತ್ತಾರೆ ಮನೋರಮಾ. ಇಂತಹ ಎಲ್ಲ ಸವಾಲುಗಳನ್ನು ಎದುರಿಸಿಯೂ ಇವರು ತಯಾರಿಸುವ ಬಣ್ಣ ಬಲು ಬೇಡಿಕೆಯನ್ನುಳಿಸಿಕೊಂಡಿದೆ. ಅನೇಕ ಶಾಲಾ ಕಾಲೇಜು ಕ್ಯಾಂಪಸ್‍ಗಳಲ್ಲಿ ಪ್ರತಿವರ್ಷ ಇವರಿಂದ ಬಣ್ಣಗಳನ್ನು ಖರೀದಿಸಿ ಸುರಕ್ಷಿತ ಹೋಳಿಯನ್ನು ಆಚರಿಸುವವರಿದ್ದಾರೆ.

  ನಾಡಿನಲ್ಲಿಯೇ ಅಪರೂಪದ ಯತ್ನ ಎಂದು ಧಾರವಾಡ ಕೃಷಿ ವಿಶ್ವವಿದ್ಯಾಲಯವು ಮನೋರಮಾರನ್ನು ‘ಕೃಷಿಪಂಡಿತ’ ಪ್ರಶಸ್ತಿನೀಡಿ ಗೌರವಿಸಿದೆ. ಹಲವಾರು ಸಂಘ-ಸಂಸ್ಥೆಗಳು ಇವರ ಸಾಧನೆಯನ್ನು ಗುರುತಿಸಿ ಗೌರವಿಸಿದೆ. ಕೃಷಿಯೊಂದಿಗೆ ಜೊತೆಯಾಗಿ ಸಾಗುವ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಯ ಈ ಉಪಕಸುಬು ಗ್ರಾಮವನ್ನು, ನಗರವನ್ನು ಬೆಸೆದಿದೆ. “ನಾವು ತಯಾರಿಸುವ ಬಣ್ಣಗಳಿಂದ ಸಾವಿರಾರು ಜನರು ನೆಮ್ಮದಿಯ ಹಬ್ಬ ಆಚರಿಸುತ್ತಾರೆ… ಈ ಸಮಾಜಕ್ಕೆ ಒಳಿತಾಗುವ ಕೆಲಸ ನಮ್ಮಿಂದ ಆಗುತ್ತಿದೆ” – ಎನ್ನುವುದು ಇವರ ಹೆಮ್ಮೆ. ಹಬ್ಬಗಳ ಆಚರಣೆಯನ್ನು ಪರಿಸರಸ್ನೇಹಿಯಾಗಿಸಲೇಬೇಕಾದ ತುರ್ತು ಇದ್ದೇ ಇದೆ ಅಲ್ಲವೇ?

  ವಿವೇಕ ಜೋಷಿ ಸಂಪರ್ಕ ಸಂಖ್ಯೆ: 9480265616

  ಹೋಳಿಹುಣ್ಣಿಮೆಗಿರಲಿ ನೈಸರ್ಗಿಕ ಬಣ್ಣದ ಮೆರುಗು

 • “ಕೇಳ್ರೇ, ನಾವು ಈ ವಾರ ಶಿವಮೊಗ್ಗಕ್ಕೆ ಹೋಗ್ತಾ ಇದ್ವಿ. ದಾರಿಯಲ್ಲಿ ಒಂದಷ್ಟು ಹೆಣ್ಣುಮಕ್ಕಳು ಸೇರಿ ತಮ್ಮನ್ನು ಚುಡಾಯಿಸಿದ ಹುಡುಗನನ್ನು ಹಿಡಿದು ಬಡಿಯುತ್ತಾ ಇದ್ರು. ಈಗಿನ ಕಾಲದ ಹೆಣ್ಣುಮಕ್ಳು ನಮ್ಮ ಹಾಂಗಲ್ಲ ಕಣ್ರೆ” ಭಾನುವಾರ ಸಂಜೆಯ ನಮ್ಮ ಫ್ಲ್ಯಾಟಿನ ಹೆಂಗಸರ ಗುಂಪಿನ ಹರಟೆಯಲ್ಲಿ ಗೆಳತಿಯೊಬ್ಬಳು ಹೇಳಿದಾಗ ಗುಂಪಿನಲ್ಲಿ ಜೋರಾದ ನಗು. ನನಗಂತೂ ಆ ಹೆಣ್ಣುಮಕ್ಕಳು ಕಿತ್ತೂರರಾಣಿ ಚೆನ್ನಮ್ಮರಂತೆ ಭಾಸವಾಗಿದ್ದು ಸುಳ್ಳಲ್ಲ. 

  “ವಾವ್, ಎಷ್ಟು ಧೈರ್ಯ! ಹೀಗಿರಬೇಕು ಹೆಣ್ಣುಮಕ್ಕಳೆಂದರೆ. ‘ಯತ್ರ ನಾರ್ಯಸ್ತು ಪೂಜ್ಯಂತೇ’ ಎಂದು ಸುಮ್ಮನೇ ಹೇಳಿದ್ದಾರಾ? ಹೆಣ್ಣಿಗೆ ಗೌರವ ಕೊಡದಿದ್ದರೆ ಕೊಡುವುದನ್ನು ಹೆಣ್ಣೇ ಕಲಿಸಬೇಕು.” ನನ್ನ ಕೈಯೂ ಮುಷ್ಟಿಬಿಗಿದಿತ್ತು.

  “ಅಲ್ಲ, ಆ ಗಂಡಸಿಗೆ ತಣ್ಣಗೆ ಇರಲಿಕ್ಕೆ ಏನಾಗಿತ್ತು ಧಾಡಿ? ಮಾರಾಯ್ತಿ, ಸುಮ್ನೆ ಹೋಗಿಹೋಗಿ ಹೆಣ್ಣುಮಕ್ಳ ಹತ್ರ ಹೊಡ್ತ ತಿನ್ನೂದಾ” ಮಂಗಳೂರಿನ ಗೆಳತಿ ಹೇಳುತ್ತಿದ್ದಳು.

  ದಿನವೂ ಪತ್ರಿಕೆಯಲ್ಲಿ ಬಾಲಕಿಯ ಮೇಲೆ ಅತ್ಯಾಚಾರ, ಮಹಿಳೆಗೆ ಇರಿದು ಕೊಲೆ, ವರದಕ್ಷಿಣೆ ಕಿರುಕುಳ, ಇವೆಲ್ಲದರ ಜೊತೆಗೆ ಗಂಡ ಹೆಂಡತಿಗೆ ಹೊಡೆಯುವ ಗುಸುಗುಸು ಸುದ್ದಿ ಇಂಥವೇ ಕೇಳಿ ಓದಿ ನನ್ನ ಮನಸ್ಸಿನಲ್ಲಿ ‘ಈ ಪರಿ ಹೆಂಗಸರನ್ನು ಹಿಂಸಿಸುವ ಗಂಡಸರಿಗೆ ನಾಲ್ಕು ಬಡಿಯಬೇಕು’ ಎನ್ನುವ ಆಸೆ ಸದ್ದಿಲ್ಲದೆ ಮೊಳೆಯತೊಡಗಿತ್ತು. ಹಾಗಾಗಿ ನಾನು ಕೂಡ “ಏ ಹೋಗ್ಲಿ ಬಿಡೆ. ಅವರೂ ಚೆನ್ನಾಗಿ ಬಾರಿಸಿದ್ರಲ್ಲ. ಖುಷಿ ಆಯ್ತು ನನಗೆ’’ ಎನ್ನುತ್ತ ನನ್ನ ಆಸೆಯೇ ತೀರಿದಂತೆ ಖುಷಿಪಟ್ಟೆ.

  ಮಹಿಳಾಮಣಿಗಳ ಮೀಟಿಂಗ್ ಮುಗಿಯುವ ಸಮಯವಾಯ್ತು. ‘ಅಬ್ಬಾ! ಹೆಂಗಸರು ಒಮ್ಮೆ ಕೈಗೆ ಕೋಲು ಹಿಡಿದಾಗಲೇ ಗಂಡಸು ಸುಧಾರಿಸುತ್ತಾನೆ’ – ಪಕ್ಕದ ಮನೆ ನಳಿನಿ ಜಡ್ಜಮೆಂಟ್ ಕೊಟ್ಟದ್ದಲ್ಲದೆ, ಇನ್ನೂ ಒಂದು ಹೊಸ ವಿಷಯವನ್ನು ನಮ್ಮ ಕಿವಿಗೆ ಹಾಕಿಯೇ ಆಕೆ ಮನೆಗೆ ಹೋದದ್ದು.

  ಲಠ್ಮಾರ್ ಹೋಳಿ

  ಅವಳು ಮೊದಲೊಂದು ಫ್ಲ್ಯಾಟ್‍ನಲ್ಲಿ ಬಾಡಿಗೆಗೆ ಇದ್ದಳಂತೆ. ಇವರ ಕುಟುಂಬಕ್ಕೆ ಹತ್ತಿರವಾದವರು ಉತ್ತರಪ್ರದೇಶದ ಒಂದು ಕುಟುಂಬ.

   “ನಿಮಗೆ ಗೊತ್ತಾ? ಮಥುರಾದ ಬಳಿ ಇರುವ ಬರಸಾನಾದಲ್ಲಿ ಹೋಳಿಹಬ್ಬದಲ್ಲಿ ಹೆಂಗಸರು ಗಂಡಸರಿಗೆ ಕೋಲಿನಿಂದ ಬಡಿಯುತ್ತಾರಂತೆ!”

  ನನ್ನ ಕಿವಿ ನೆಟ್ಟಗಾಗಿ ನಳಿನಿ ಹೇಳಿದ್ದನ್ನೆಲ್ಲ ಕೇಳಿಸಿಕೊಳ್ಳತೊಡಗಿತು.

  “ಅದೆಂಥದು ಗಂಡಸಿಗೆ ಹೊಡಿಯೂ ಹಬ್ಬ?” ಮಂಗಳೂರಿನ ಸ್ನೇಹಿತೆ ರಾಗ ಎಳೆದಾಗ ನಳಿನಿ,

  “ನಮ್ಮದು ಸಾಂಸ್ಕೃತಿಕವಾಗಿ ವೈವಿಧ್ಯ ಇರುವ ದೇಶ ಅಲ್ವಾ. ಎಲ್ಲರೂ ಅವರವರದೇ ಆದ ಬಗೆಯಲ್ಲಿ ಹಬ್ಬವನ್ನು ಆಚರಿಸುವ ರೂಢಿ ಇದೆ. ಅದರಲ್ಲೂ ಹಬ್ಬ ಆಚರಿಸುವುದರಲ್ಲಿ ನಮಗೆ ಉತ್ಸಾಹ, ನಿಷ್ಠೆ ತುಸು ಜಾಸ್ತಿಯೆ. ನಮ್ಮ ಹಬ್ಬಗಳೇ ಒಂದು ಬಗೆಯಲ್ಲಿ ಅಧ್ಯಯನ ಮಾಡುವುದಕ್ಕೆ ಒಳ್ಳೆಯ ವಸ್ತು ಅಲ್ವಾ. ಹೋಳಿ ಎಂದರೂ ಅಷ್ಟೆ; ಎಷ್ಟೊಂದು ವೈವಿಧ್ಯಮಯವಾಗಿ ಆಚರಿಸುತ್ತಾರೆ ಗೊತ್ತಾ?” ಹಾಗೆಂದು ಮಂಗಳೂರಿನ ಗೆಳತಿಗೆ ಉತ್ತರಿಸುತ್ತ ತನ್ನ ಹಳೆಯ ಗೆಳತಿಯ ಸಂಭಾಷಣೆಗಳನ್ನು ಎಳೆದು ಎಳೆದು ಹೇಳತೊಡಗಿದಳು.

  “ಶ್ರೀಕೃಷ್ಣನ ಬಗ್ಗೆ ನಮ್ಮಲ್ಲಿ ಅದೆಷ್ಟು ಕಥೆಗಳಿವೆಯೋ, ನಮಗೂ ಗೊತ್ತಿಲ್ಲ ಬಿಡಿ. ಆತ ಹುಟ್ಟಿದ್ದು ದೇವಕಿಯ ಹೊಟ್ಟೆಯಲ್ಲಾದರೂ ಬೆಳೆದದ್ದು ಮಾತ್ರ ಯಶೋದೆಯ ಮಡಿಲಲ್ಲಿ. ಬಾಲಕ ಕೃಷ್ಣ ಸಕತ್ ತುಂಟತನ ಮಾಡುತ್ತಿದ್ದನಂತಲ್ಲ; ಆತ ನಂದಗ್ರಾಮದವನಾಗಿದ್ದ. ಆಗಾಗ ಪಕ್ಕದ ಬರಸಾನಾ ಗ್ರಾಮಕ್ಕೆ ಹೋಗಿಬರುತ್ತಿದ್ದನಂತೆ. ಅದು ಆತನ ಪ್ರೀತಿಯ ರಾಧೆಯ ಹಳ್ಳಿ. ಒಮ್ಮೆ ಹೀಗಾಯ್ತಂತೆ….”

  “ಅಯ್ಯೋ, ಗಂಡಸರಿಗೆ ಹೊಡಿಯೂದಕ್ಕೂ ಕೃಷ್ಣಂಗೂ ಏನ್ರಿ ಸಂಬಂಧ?”

  ನಮ್ಮ ಮಂಗಳೂರಿನ ಗೆಳತಿಗೆ ಆತುರ ಜಾಸ್ತಿ. ಮಧ್ಯೆ ಕೇಳಿದ್ದಕ್ಕೆ ನಳಿನಿಗೆ ಕೋಪ ಬಂದೇಬಿಡ್ತು.

  “ಸ್ವಲ್ಪ ಸುಮ್ನಿರ್ತೀಯಾ. ಮೊದಲು ಕೇಳಿಸ್ಕೋಬೇಕು. ಒಮ್ಮೆ ಕೃಷ್ಣ ಹೋಳಿಹಬ್ಬಕ್ಕೆ ಮುನ್ನಾದಿನವೇ ಬರಸಾನಾ ಹಳ್ಳಿಗೆ ತನ್ನ ಸ್ನೇಹಿತರ ಜೊತೆಗೆ ಹೋಗಿದ್ದನಂತೆ. ಹೇಳಿಕೇಳಿ ಬಣ್ಣದ ಹಬ್ಬ ಅದು. ಹೋಗಿದ್ದವರು ಸುಮ್ಮನೆ ಇರದೆ ರಾಧೆಯನ್ನೂ ಅವಳ ಸ್ನೇಹಿತೆಯರನ್ನೂ ಚುಡಾಯಿಸಿದ್ದಾರೆ. ಚುಡಾಯಿಸಿದಾಗ ಅವರಿಗೆ ಕೋಪಬಂದು ಕೈಗೆ ಕೋಲು ತೆಗೆದುಕೊಂಡು ಹೊಡೆದು ಹುಡುಗರನ್ನು ಓಡಿಸಿದರಂತೆ. ಅದರ ಸಂಕೇತವಾಗಿ ‘ಲಠ್‍ಮಾರ್ ಹೋಳಿ’ಯ ಆಚರಣೆ. ಆಚರಣೆಯ ಹಿನ್ನೆಲೆ ಇದು. ಗೊತ್ತಾಯ್ತಾ?” ನಳಿನಿಗೆ ನಮ್ಮೆಲ್ಲರಿಗೂ ಏನಾದರೂ ವಿಚಾರ ತಿಳಿಸುವ ಆಸೆ ಬಹಳ. “ಈ ಬಗೆಯಲ್ಲಿ ಹೊಡೆದು ಗಂಡಸರಿಗೆ ಬುದ್ಧಿಕಲಿಸೂದಾ?” ಮಂಗಳೂರಿನ ಗೆಳತಿಗೆ ಪ್ರಶ್ನೆ ಹುಟ್ಟುವುದು ಜಾಸ್ತಿ.

  “ಇನ್ನೂ ಇದೆ ತಡಿಯೆ. ಅದೆಲ್ಲ ಹಬ್ಬದ ತಮಾಷೆಗೆ ಮಾತ್ರ. ನೀವು ಲಠ್‍ಮಾರ್ ಹೋಳಿಯನ್ನು ಯೂಟ್ಯೂಬ್‍ನಲ್ಲಿ ನೋಡಿ. ಎಂಥಾ ಮಜ ಗೊತ್ತಾ? ಹೋಳಿಹಬ್ಬಕ್ಕೆ ಮೂರು-ನಾಲ್ಕು ದಿನ ಇರುವಾಗಲೆ ಬ್ರಜ್‍ಭೂಮಿಯ ಹೋಳಿ ಆಚರಣೆ ಶುರುವಾಗುತ್ತದೆ.

  ಮೊದಲುಲಡ್ಡುಮಾರ್

  ಲಠ್‍ಮಾರ್ ಹೋಳಿಗೆ ಮೊದಲು ‘ಲಡ್ಡು ಮಾರ್’ ಹೋಳಿ ಆಚರಿಸಲಾಗುತ್ತದೆ. ಬರಸಾನಾ ಗ್ರಾಮದಿಂದ ನಂದಗ್ರಾಮಕ್ಕೆ ಹೋಳಿ ಆಡಲಿಕ್ಕೆ ನಿಮಂತ್ರಣವನ್ನು ತೆಗೆದುಕೊಂಡು ಹೋಗಲಾಗುತ್ತದೆ. ಬಳಿಕ ನಂದಗ್ರಾಮದಿಂದ ಒಬ್ಬ ಪಂಡಾ ಅಥವಾ ಪಂಡಿತರು ಬರಸಾನಾ ಗ್ರಾಮಕ್ಕೆ ಬಂದು ನಿಮಂತ್ರಣವನ್ನು ಸ್ವೀಕರಿಸಿ ಖುಷಿಯನ್ನು ಆಚರಿಸುವುದೇ ಲಡ್ಡುಮಾರ್ ಹೋಳಿ. ಪ್ರಸಾದ ವಿನಿಮಯವೂ ನಡೆಯುತ್ತದೆ. ಪಂಡಿತನ ಝೋಲಿಯನ್ನು ಲಡ್ಡುವಿನಿಂದ ಭರ್ತಿ ಮಾಡಲಾಗುತ್ತದೆ. ಅವರಿಗೆ ಬರಸಾನಾದ ಗೋಪಿಕೆಯರು ರಂಗು ಬಳಿದು ಖುಷಿ ಆಚರಿಸುತ್ತಾರೆ. ನಂದಗ್ರಾಮದಿಂದಲೂ ಹೋಳಿ ಆಡಲಿಕ್ಕೆ ಗಂಡಸರು ಬಂದು ಹೆಂಗಸರು ಅವರಿಗೆ ರಂಗು ಬಳಿದು ಖುಷಿ ಆಚರಿಸುತ್ತಾರೆ. ಲಡ್ಡುಮಾರ್ ಹೋಳಿಯಲ್ಲಿ ರಾಧಾರಾಣಿಯನ್ನು ಚಿಕ್ಕಬಾಲಕಿಯಾಗಿ ಪರಿಗಣಿಸುವುದು ವಿಶೇಷ. ಅವಳು ಬರಸಾನಾದ ಮನೆಯ ಮಗಳು. ಮನೆಯಲ್ಲಿ ಪುಟ್ಟಮಕ್ಕಳಿಗೆ ಪ್ರಿಯವಾದ ವಸ್ತುಗಳನ್ನೆಲ್ಲ ತರುವಂತೆ ಪೀಪಿ, ಲಡ್ಡು, ಆಟಿಕೆ, ವಸ್ತ್ರಗಳನ್ನೆಲ್ಲ ಒಂದು ಟೋಕರಿಯಲ್ಲಿ ಇಟ್ಟು ರಾಧಾರಾಣಿಯ ಮಂದಿರಕ್ಕೆ ಹೋಗಿ ಅಲ್ಲಿ ನೈವೇದ್ಯ ಮಾಡಿ ಬಳಿಕ ಪ್ರಸಾದವನ್ನು ಸ್ವೀಕರಿಸಿ ಮಂದಿರದ ಮೇಲ್ಭಾಗದಿಂದ ಕೆಳಗೆ ನೆರೆದ ಜನಸಮೂಹದೆಡೆಗೆ ಪ್ರಸಾದವನ್ನು ಎಸೆಯುವ ಮೂಲಕ ಹಂಚಲಾಗುತ್ತದೆ. ನೆರೆದ ಸಮೂಹವು ಪ್ರಸಾದವನ್ನು ಹಿಡಿಯುತ್ತದೆ. ಅದನ್ನು ಇಟ್ಟುಕೊಂಡರೆ ಅದೃಷ್ಟವೆಂಬ ನಂಬಿಕೆ ಇದೆ.

  ರಂಗ್ ರಂಗೀಲೀ ಗಲಿ

  ಲಾಠ್ ಎಂದರೆ ಬಡಿಗೆ, ಮಾರ್ ಎಂದರೆ ಹೊಡೆಯುವುದು. ನಂದಗ್ರಾಮದ ಹುಡುಗರನ್ನು ‘ಹೊರಿಯಾರೇ’ ಎಂದು ಕರೆಯುತ್ತಾರೆ. ಉತ್ಸವಕ್ಕೆ ಉತ್ತರಪ್ರದೇಶದ ಮಥುರಾದ ಸುತ್ತಮುತ್ತಲ ಗ್ರಾಮದಿಂದಲೂ ಸಾವಿರಾರು ಜನ ಬರಸಾನಾ ಗ್ರಾಮದಲ್ಲಿರುವ ರಾಧಾರಾಣಿ ದೇವಸ್ಥಾನಕ್ಕೆ ಬರುತ್ತಾರೆ. ಸಣ್ಣ ಪೂಜೆಯ ಬಳಿಕ ದೇವಸ್ಥಾನದ ಅಂಗಳದಲ್ಲಿ ಮತ್ತು ‘ರಂಗ್ ರಂಗೀಲೀ ಗಲೀ’ ಎಂದು ಕರೆಯುವ ದೇವಸ್ಥಾನದ ಎದುರಿನ ಚಿಕ್ಕ ಗಲ್ಲಿಗಳಲ್ಲಿ ಸೇರುತ್ತಾರೆ.

  ಹೆಂಗಸರು ಗಂಡಸರ ಮೇಲೆ ಬಣ್ಣ ಎರಚುವ ಮೂಲಕ ಆಚರಣೆಯು ಆರಂಭವಾಗುತ್ತದೆ. ಹಳ್ಳಿಗರು ಜನಪದ ಹಾಡನ್ನು ಹಾಡುತ್ತಾರೆ, ಹೆಂಗಸರು ನೃತ್ಯ ಮಾಡಿ ಪ್ರೇಕ್ಷಕರನ್ನು ರಂಜಿಸುತ್ತಾರೆ. ಆಗೆಲ್ಲ ಅಲ್ಲಿರುವ ತಿಂಡಿ ಅಂಗಡಿಗಳು ‘ಥಂಡೈ’ ಎಂದು ಕರೆಯುವ ತಂಪುಪಾನೀಯದಿಂದ ತುಂಬಿಹೋಗುತ್ತವೆ. ಅದರಲ್ಲಿ ಭಾಂಗ್ ಬಳಕೆ ಮಾಡುತ್ತಾರಂತೆ!

  “ಹೌದಾ!” ಮತ್ತೊಬ್ಬ ಸ್ನೇಹಿತೆ ಇಂತಹ ಹೆಸರನ್ನೂ ಕೇಳುವ ಇಚ್ಛೆ ಇದ್ದವಳಲ್ಲ.

  “ಹಬ್ಬದ ವೇಳೆಗೆ ಮಾತ್ರ ಅದನ್ನು ತೆಗೆದುಕೊಳ್ಳುವ ರೂಢಿ ಇರಬಹುದಪ್ಪ. ಲಡ್ಡುಮಾರ್ ಹೋಳಿ ಕಳೆದು ಲಠ್‍ಮಾರ್ ಹೋಳಿ ದಿನ ಗಂಡಸರು ಬರಸಾನಾಕ್ಕೆ ಬಂದು ಸೇರುತ್ತಿದ್ದಂತೆ ಹೆಂಗಸರ ಮೇಲೆ ಬಣ್ಣ ಎರಚುವ ಪ್ರಯತ್ನ ಮಾಡುತ್ತಾರೆ. ಆಗ ಹೆಂಗಸರು ಕೈಗೆ ಉದ್ದುದ್ದ ಬಡಿಗೆ ತೆಗೆದುಕೊಂಡು ಗಂಡಸರಿಗೆ ಹೊಡೆಯುವ ಹಾಗೆ ಮಾಡುತ್ತಾರೆ, ಗಂಡಸರು ತಗಡಿನ ಗುರಾಣಿಯನ್ನು ತಲೆಯ ಮೇಲಿಟ್ಟುಕೊಂಡು ತಮ್ಮನ್ನು ರಕ್ಷಿಸಿಕೊಳ್ಳುವುದನ್ನು ನೋಡುವುದು ಮಜಾ ಎನ್ನಿಸುತ್ತದೆ. ಹೊಡೆಯಬೇಡಿರೆಂದು ಕೈಮುಗಿಯುವವರೂ ಇದ್ದಾರೆ. ಗಂಡಸರು ಹಾಗೆ ರಕ್ಷಣೆ ಮಾಡಿಕೊಳ್ಳುತ್ತಿರುವಾಗ ಅಲ್ಲಿದ್ದ ಇತರ ಹೆಂಗಸರು ಇನ್ನೂ ಗಟ್ಟಿಯಾಗಿ ಹೊಡೆಯುವುದಕ್ಕೆ ಕೂಗಿ ಕಿರುಚಿ ಪ್ರೇರಣೆ ನೀಡುತ್ತಾರೆ. ಇವೆಲ್ಲ ಮೋಜಿಗಾಗಿ.”

  “ಅಲ್ಲ, ಗಂಡಸರಿಗೆ ಹೆಣ್ಣನ್ನು ಗೌರವಿಸು, ಇಲ್ಲವಾದರೆ ಹೀಗೆ ಹೊಡೆತ ಬೀಳುತ್ತದೆ ಎನ್ನುವುದನ್ನು ಕಲಿಸುವ ಆಚರಣೆ ಅಲ್ಲವೇ ಇದು?” ನನ್ನ ಪ್ರಶ್ನೆ ಹೊರಬರುತ್ತಿದ್ದಂತೆ,

  “ಅಯ್ಯೋ ರಾಮ, ಎಲ್ಲಿ ಬಿಡ್ತೀಯಾ ನಿನ್ನ ಪತ್ರಿಕೆಬುದ್ಧಿ. ನನಗೆ ಅದೆಲ್ಲ ಗೊತ್ತಿಲ್ಲಮ್ಮ. ಹೀಗೊಂದು ಆಚರಣೆ ಇದೆಯಂತೆ” ಎನ್ನುತ್ತ ನಳಿನಿ ಅಡುಗೆಗೆ ಹೊತ್ತಾಯಿತೆಂದು ಓಡಿದರೆ, ಮಂಗಳೂರ ಗೆಳತಿಯೂ “ಬರತೆ ಮಾರಾಯ್ತಿ. ಕೆಸುವಿನಎಲೆ ಊರಿಂದ ಬಂದಿದೆ. ಪತ್ರೊಡೆ ಮಾಡಲಿಕ್ಕುಂಟು” ಎನ್ನುತ್ತ ಮನೆಗೆ ಹೊರಟಳು.

  ಮಿಠಾಯಿ, ಪಿಠಾಯಿ, ಥಂಡಾಯಿ

  ನನಗೋ ಈ ಹಬ್ಬ ಹೇಗಿರುತ್ತದೆ ಎಂದು ನೋಡುವ ಕುತೂಹಲ. ಯೂಟ್ಯೂಬ್ ತೆರೆದೆ. ಬಗೆಬಗೆಯ ವೀಡಿಯೋ ನೋಡುತ್ತ ಲಠ್‍ಮಾರ್ ಹೋಳಿ ಮಜಾ ಅನುಭವಿಸಿದೆ. ಅವರು ಹೊಡೆಯುವ ಪರಿ, ಗಂಡಸರಂತೂ ಏನೋ ತಪ್ಪುಮಾಡಿ ಸಿಕ್ಕಿಕೊಂಡವರಂತೆ ತಲೆಯಮೇಲೆ ತಗಡಿನ ಗುರಾಣಿಯನ್ನು ಇಟ್ಟುಕೊಂಡು

  ಹೆಂಗಸರು ಹೊಡೆದಷ್ಟೂ ಹೊಡೆತವನ್ನು ತಿನ್ನುವುದು; ನೋಡಿಯೇ ಅನುಭವಿಸಬೇಕು. ನಂದಗ್ರಾಮದ ಹುಡುಗರು ಫಾಲ್ಗುಣಮಾಸ ಶುಕ್ಲಪಕ್ಷದ ನವಮಿಯಂದು ಲಠ್‍ಮಾರ್ ಹೋಳಿಯಲ್ಲಿ ಭಾಗವಹಿಸಲು ಸಾಂಪ್ರದಾಯಿಕ ಉಡುಗೆ ತೊಟ್ಟು ನಂದಗ್ರಾಮದ ನಂದಲಾಲ ಮಂದಿರದಿಂದ ತಮ್ಮ ಪ್ರಯಾಣವನ್ನು ಆರಂಭಿಸಿ ಬರಸಾನಾ ಕಡೆಗೆ ಹೋಗುತ್ತಾರೆ. ಅಲ್ಲಿ ರಾಧಾರಮಣ ಮಂದಿರಕ್ಕೆ ಹೋಗಿ ಅಲ್ಲಿಂದ ಪ್ರಿಯಾಕುಂಡಕ್ಕೆ ಹೋಗಿ ತಮ್ಮನ್ನು ಶೃಂಗರಿಸಿಕೊಳ್ಳುತ್ತಾರೆ. ನಂತರ ನೋಡಬೇಕು ರಂಗ್ ರಂಗೀಲೀ ಗಲಿಯ ರಂಗುರಂಗಿನಹೋಳಿಯನ್ನು. ಬ್ರಜ್‍ವಾಸಿಗಳು ಆಚರಿಸುವ ಈ ಹೋಳಿಯನ್ನು ಶತಮಾನಗಳಿಂದ ಇದೇ ರೀತಿ ಆಚರಿಸಿಕೊಂಡು ಬರಲಾಗುತ್ತಿದೆ. ‘ಕೃಷ್ಣ ಹೀಗೆ ಬರುತ್ತಿದ್ದ, ರಾಧೆ ತನ್ನ ಸ್ನೇಹಿತೆಯರೊಡಗೂಡಿ ಆತನಿಗೆ ಇದೇ ರೀತಿ ಪ್ರೇಮ ತುಂಬಿ ಹೊಡೆಯುತ್ತಿದ್ದಳು’ ಎನ್ನುವುದು ಅಲ್ಲಿನವರ ನಂಬಿಕೆ. ಪಂಜಾಬ್ ಲುಧಿಯಾನಾ ದೆಹಲಿಯಿಂದೆಲ್ಲ ಇಲ್ಲಿ ಹೋಳಿ ಆಡಲು ಬರುತ್ತಾರೆ. ಬರಸಾನಾದ ಈ ಹೋಳಿ ಆಚರಣೆಯು ವಿಶ್ವಪ್ರಸಿದ್ಧವಾದದ್ದು.  ಗಂಡಸರನ್ನು, ‘ಹೊಡೆದರೆ ನೋವಾಗುವುದಿಲ್ಲವೇ?’ ಎಂದು ಕೇಳಿದರೆ ‘ಇಲ್ಲಪ್ಪಾ, ಇದು ರಾಧೆಯ ಸ್ಥಳ” ಎನ್ನುತ್ತಾರೆ. (‘ನಮ್ಮ ತಲೆ ಕಲ್ಲುಬಂಡೆಯಂತೆ’ ಎಂದವರೂ ಇದ್ದಾರೆ ಬಿಡಿ.) ಎಲ್ಲರ ಬಾಯಲ್ಲೂ ರಾಧೆ-ಕೃಷ್ಣನದೇ ಜಪ. ಜೈಕಾರ. ಹಾಡು, ನೃತ್ಯ, ಬಣ್ಣಗಳಿಂದ ಆ ಪ್ರದೇಶವೆಲ್ಲ ತುಂಬಿಹೋಗುತ್ತದೆ. ಹೆಂಗಸರಂತೂ ಕೈಯಲ್ಲಿ ಕೋಲು ಹಿಡಿದೇ ಗಂಡಸರನ್ನು ಸ್ವಾಗತಿಸುತ್ತಾರೆ. ‘ಮಿಠಾಯಿ, ಪಿಠಾಯಿ, ಥಂಡಾಯಿ’ ಇವುಗಳಿಂದ ಹೋಳಿಹಬ್ಬವು ಬಣ್ಣ ತುಂಬಿಕೊಂಡು ಬದುಕಿಗೆ ಹೊಸರಂಗನ್ನು ತುಂಬುತ್ತದೆ. ಇದು ತಮಾಷೆಗೆ ಹೊಡೆದ ಹೊಡೆತವಾದದ್ದಾದರೂ ಇಲ್ಲಿ ಹೊಡೆತ ತಿಂದ ಯಾವ ಗಂಡಸೂ ಬಹುಶಃ ಜೀವನದಲ್ಲಿ ಸ್ತ್ರೀಯರನ್ನು ಅವಮಾನಿಸುವುದಿಲ್ಲ.

  ಇನ್ನೊಂದು ಬಗೆ

  ಇನ್ನೊಂದು ಬಗೆಯ ಆಚರಣೆಯಲ್ಲಿ ಗಂಡಸರು ಕೈಯಲ್ಲಿ ಉದ್ದನೆಯ ಕೋಲು ಹಿಡಿದು ಓಡತೊಡಗುತ್ತಾರೆ.

  ಗ್ರಾಮದ ಗಲ್ಲಿಗಲ್ಲಿ ತಿರುಗುತ್ತ ಓಡುತ್ತಿದ್ದರೆ ಹೆಂಗಸರು ಸಹ ಉದ್ದನೆಯ ಕೋಲನ್ನು ಹಿಡಿದುಕೊಂಡು ಅವರ ಹಿಂದೆಹಿಂದೆ ಓಡಿಹೋಗಿ ಅವರ ಕೋಲಿಗೆ ತಮ್ಮ ಕೋಲಿನಿಂದ ಹೊಡೆಯುತ್ತಾರೆ. ಗಂಡಸರು ಓಡೋಡಿ ತಪ್ಪಿಸಿಕೊಳ್ಳುತ್ತಾರೆ. ಬರಸಾನಾದ ಪಂಡಾಗಳ ನೃತ್ಯ, ಗೋಕುಲದ ‘ಛಡಿಮಾರ್ ಹೋಳಿ’ಯನ್ನೂ ಎಂಜಾಯ್ ಮಾಡಿಯೇ ಮಾಡಿದೆ. ಅಲ್ಲೂ ಹೆಂಗಸರ ಕೈಯಲ್ಲಿ ಉದ್ದುದ್ದ ಕೋಲು.

  ಮಾರ್ರ್ರೆ!

  ನಾನೀಗ ಮಥುರಾದಲ್ಲಿದ್ದೆ. ಹೋಳಿಹಬ್ಬದ ಸಂಭ್ರಮ ಅಲ್ಲೆಲ್ಲ ಹರಡಿತ್ತು. ಬಣ್ಣ ಎಲ್ಲ ಕಡೆ ಮಾರಾಟವಾಗುತ್ತಿತ್ತು. ಮಥುರಾ ನೋಡಿ ರಾಧೆಯ ಊರಾದ ಬರಸಾನಾಕ್ಕೆ ಹೋಗಿ ಆ ಊರನ್ನೆಲ್ಲ ಸುತ್ತಿದೆ. ಹೋಳಿ ಆಚರಣೆ ಆರಂಭವಾಗಿತ್ತು. ನನ್ನಂತೆ ದೆಹಲಿ, ಗುಜರಾತ್ ಕಡೆಯಿಂದೆಲ್ಲ ಗಂಡಸರು ಹೆಂಗಸರು ಲಾಠ್‍ಮಾರ್ ಹೋಳಿ ಮಜಾ ತೆಗೆದುಕೊಳ್ಳಲಿಕ್ಕೆ ಸೇರಿದ್ದರು. ಹೋಳಿ ಆರಂಭವಾಗಿ ಹೊಡೆಯಲಿಕ್ಕೆ ಶುರುಮಾಡಿದ್ದೆ ತಡ, ಎಲ್ಲರಿಗೂ ಉಮೇದು ಬಂತು ನೋಡಿ! ನಾವೆಲ್ಲ ಕೋಲು ಹಿಡಿದು ಗಂಡಸರಿಗೆ ಹೊಡೆಯುವುದು, ಗಂಡಸರು ತಲೆಯ ಮೇಲೆ ಗುರಾಣಿಯನ್ನು ಅಡ್ಡಹಿಡಿದುಕೊಂಡು ಬೀಳುತ್ತಿದ್ದ ಪೆಟ್ಟನ್ನೆಲ್ಲ ತಿನ್ನುತ್ತಿದ್ದರೆ ನಮಗೆ ಎಲ್ಲಿಲ್ಲದ ಉಮೇದು.

  ಹಾಗೇ ಹೊಡೆದೆ ಹೊಡೆದೆ ಹೊಡೆದೆ…. ನೋಡಿ “ಏಯ್ ಯಾಕೆ ನನಗೆ ಹೊಡೆಯುತ್ತೀಯಾ, ಏನಾದರೂ ಕನಸು ಬಿತ್ತೇನೆ?” ಪತಿರಾಯರು ಅಲುಗಾಡಿಸುತ್ತ ಎಬ್ಬಿಸುತ್ತಿದ್ದರೆ ನಾನು ದಡಬಡನೆ ಎದ್ದು ಸುತ್ತಲೂ ನೋಡತೊಡಗಿದ್ದೆ. ನನ್ನ ಅವಸ್ಥೆ ನೋಡಿ ಅವರು ನಗುತ್ತಿದ್ದರೆ, ಸುಖಾಸುಮ್ಮನೆ ಅವರಿಗೆ ಹೊಡೆದದ್ದಕ್ಕಾಗಿ ನಾಚಿಕೆಯಿಂದ ತಲೆತಗ್ಗಿಸಿದೆ.

  ಲಟ್ಟಣಿಗೆಯವರ ‘ಲಠ್ ಮಾರ್ ಹೋಳಿ’!

 • ಹೋಳಿಹಬ್ಬದ ಮೇಲೆ ಚಿತ್ರರಂಗಕ್ಕೆ ಮೊದಲಿನಿಂದಲೂ ಏನೊ ಒಂದು ತರಹದ ಪ್ರೀತಿ. ಈ ಹಬ್ಬದ ಸೀಕ್ವೆನ್ಸನ್ನು ಸಿನೆಮಾದಲ್ಲಿ ಹೇಗೆ ಬೇಕಾದರೂ ಬಳಸಬಹುದು. ಈ ಹಬ್ಬದ ಚಿತ್ರೀಕರಣವಿದೆ ಎಂದು ತಿಳಿದರೆ ನಿರ್ದೇಶಕರಿಗೆ ಉತ್ಸಾಹ, ಕ್ಯಾಮರಾಮನ್‍ಗೆ ರೋಮಾಂಚನ, ನಟ-ನಟಿಯರಿಗೆ ಪುಳಕ. ಈ ಹಬ್ಬವೇ ಹೋಳಿ. ಕಪ್ಪು-ಬಿಳುಪು ಸಿನೆಮಾಗಳಲ್ಲೂ ಓಕುಳಿಯಾಡಲಾಗಿತ್ತು ಎಂದರೆ ಈ ಹಬ್ಬದ ಮೇಲೆ ಸಿನಿರಂಗದವರಿಗೆ ಇರುವ ಒಲವನ್ನು ಅರ್ಥಮಾಡಿಕೊಳ್ಳಬಹುದು.

  ಹೋಳಿಹಬ್ಬವನ್ನು ಭಾರತೀಯ ಚಲನಚಿತ್ರಗಳಲ್ಲಿ ಅದ್ಭುತವಾಗಿ ಚಿತ್ರಿಸಲಾಗಿದೆ. ಅದ್ಧೂರಿ ತಾರಾಗಣ, ಭರ್ಜರಿ ಸೆಟ್, ನೂರಾರು ನೃತ್ಯಗಾರರು, ಕುರ್ಚಿಯಿಂದ ಪುಟಿದೆದ್ದು ಹೆಜ್ಜೆಹಾಕಲು ಪ್ರೇರೇಪಿಸುವ ಉನ್ಮಾದದ ಸಂಗೀತ, ‘ಕರಿಮೋಡಕಿಂತ ಸೊಗಸು ಮುಂಗುರುಳ ಮೋಹಕ ಬಣ್ಣ, ಬಿಳಿದಂತಕಿಂತ ಚೆಲುವು ನಿನ್ನೊಡಲ ಮೋಹಕ ಬಣ್ಣ’ ಎಂಬಂತಹ ಹಾಡಿನ ಸಾಲುಗಳು, ಹಾಡಿನಲ್ಲಿ ನಿಧಾನವಾಗಿ ವಿವಿಧ ಬಣ್ಣಗಳಲ್ಲಿ ಮಿಂದೇಳುವ ನಟ-ನಟಿ, ಕಂಡೂ ಕಾಣದಂತೆ ಮಿಂಚಿನಂತೆ ಬಂದು ಹೋಗುವ ಮೈಮಾಟ – ಹೀಗೆ ಚಲನಚಿತ್ರಗಳಲ್ಲಿ 1930ರ ದಶಕದಿಂದ ಆರಂಭಿಸಿ ಇತ್ತೀಚಿನವರೆಗೂ ಹೋಳಿಹಬ್ಬವನ್ನು ರಮಣೀಯವಾಗಿ, ಸುಂದರವಾಗಿ, ಮನಸ್ಸಿಗೂ ಇಂದ್ರಿಯಗಳಿಗೂ ಮುದ ನೀಡುವಂತೆ ಚಿತ್ರಿಸಲಾಗಿದೆ. ಇದಕ್ಕಾಗಿ ನಿರ್ದೇಶಕ, ಕ್ಯಾಮರಾಮನ್, ನಟ-ನಟಿ, ಗೀತರಚನಕಾರ, ಸಂಗೀತ ನಿರ್ದೇಶಕ, ವಸ್ತ್ರವಿನ್ಯಾಸಕ, ನೃತ್ಯನಿರ್ದೇಶಕ, ಸಂಕಲನಕಾರ – ಎಲ್ಲರೂ ಶ್ರಮಿಸಿದ್ದಾರೆ.

  ಐದಾರು ದಶಕಗಳ ಹಿಂದಿನ ಹೋಳಿಯ ಹಾಡುಗಳು ಇಂದಿನ ಹೋಳಿಯ ಸಂಭ್ರಮದಲ್ಲಿ ಹೋಟೆಲ್, ರಿಸಾರ್ಟ್, ಬಡಾವಣೆ, ಆರ್ಕೆಸ್ಟ್ರಾ, ಗೆಳೆಯ-ಗೆಳತಿಯರ ಪಟಾಲಂ, ಡಿಜಿಟಲ್ ಸಂಗೀತ ಕಾರ್ಯಕ್ರಮ, ಎಫ್.ಎಂ.ಗಳಲ್ಲಿ ಮತ್ತೆ ಮತ್ತೆ ಕೇಳಿಸುತ್ತಿರುವುದೇ ಇವುಗಳ ಜನಪ್ರಿಯತೆಗೆ ಸಾಕ್ಷಿ. ‘ಸಿಲ್‍ಸಿಲಾ’ ಚಿತ್ರದ ‘ರಂಗ ಬರಸೇ ಭೀಗೇ ಚುನರವಾಲೀ’, ‘ಶೋಲೆ’ ಚಿತ್ರದ ‘ಹೋಲೀ ಕೇ ದಿನ್ ದಿಲ್ ಖಿಲ್ ಜಾತೇ ಹೈ’ ಮುಂತಾದ ಹಾಡುಗಳು ಮೂರುತಲೆಮಾರುಗಳ ಹೋಳಿಯ ಸಂಭ್ರಮಕ್ಕೆ ಕಾರಣವಾಗಿವೆ. ‘ನವರಂಗ್’ ಸಿನೆಮಾದ ಹಾಡುಗಳು ಜನಪ್ರಿಯತೆಯ ಜೊತೆಗೆ ಗೀತರಚನಕಾರ, ನಟಿ, ನೃತ್ಯನಿರ್ದೇಶಕ, ಸಂಗೀತನಿರ್ದೇಶಕ ಹಾಗೂ ನಿರ್ದೇಶಕರ ಪ್ರತಿಭೆಗೆ ಸಾಕ್ಷಿಯಾಗಿವೆ.

  ಹೋಳಿಗೆ ತನ್ನದೇ ಆದ ಇತಿಹಾಸವಿದೆ. ಮನುಷ್ಯನ ರಸಿಕತೆ, ಶೃಂಗಾರ ಕಲ್ಪನೆ, ವಯಸ್ಸಿಗೆ ಬಂದ ಹೆಣ್ಣು-ಗಂಡುಗಳು ಸಾಮಾಜಿಕ ಚೌಕಟ್ಟಿನಲ್ಲಿಯೇ ಕೀಟಲೆ ಮಾಡಿಕೊಂಡು ಓಕುಳಿಯಾಡಿ ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳುವ ದೃಷ್ಟಿಯಿಂದ ನಮ್ಮ ಹಿರಿಯರು ಕಂಡುಕೊಂಡ ಉತ್ಸವವೇ ಹೋಳಿಹಬ್ಬ.

  ರಾಸ್‍ಲೀಲಾ, ಲಠ್‍ಮಾರ್ ಹೋಳಿ, ಕಾಮಣ್ಣನ ಹಬ್ಬ, ಭಾಂಗ್ ಸೇವನೆ, ಕ್ರಾಸ್ ಡ್ರೆಸ್ಸಿಂಗ್, ಬೊಬ್ಬೆಹೊಡೆಯುವುದು, ತೃತೀಯ ಲಿಂಗಿಗಳ ನೃತ್ಯ ಎಲ್ಲವೂ ಹೋಳಿಯ ಜೊತೆ ಬೆರೆತುಕೊಂಡ ಆಚರಣೆಗಳು. ಉಳಿದ ಸಮಯದಲ್ಲಿ ನಿಷಿದ್ಧವಾಗಿರುವ ಚುಡಾಯಿಸುವಿಕೆ, ಕಿರುಚಾಟ, ವಿಪರೀತ ಕುಣಿತ – ಎಲ್ಲಕ್ಕೂ ಹೋಳಿಹಬ್ಬದಂದು ಮಾತ್ರ ಅಧಿಕೃತ ಮುದ್ರೆ. ಹಾಗಾಗಿಯೇ ಉತ್ತರಭಾರತದಲ್ಲಿ ಹೇಳುವುದು – “ಹೋಲೀ ಹೈ ಭಾಯ್ ಹೋಲೀ ಹೇ, ಬುರಾ ನ ಮಾನೋ ಹೋಲೀ ಹೈ’’ (ಹೋಲಿ ಇದೆಯಪ್ಪ ಹೋಲಿ ಇದೆ, ತಪ್ಪು ತಿಳ್ಕೋಬೇಡಿ ಹೋಲಿ ಇದೆ).

  ಹೆಣ್ಣನ್ನು ಕೇವಲ ಭೋಗವಸ್ತುವೆಂದುಕೊಂಡಿರುವ ವಿದೇಶೀ ಮತ, ಜಾತಿ, ತತ್ತ್ವಗಳಿಗೆ ಹೋಳಿ ಸದಾ ಅಶ್ಲೀಲವಾಗಿ ಕಂಡಿದೆ. ಆದರೆ ಆರೋಗ್ಯಕರ ಸಮಾಜಕ್ಕೆ ಹೋಳಿಯಂತಹ ಆಚರಣೆ ಎಷ್ಟು ಮುಖ್ಯ ಎಂದು ನಮ್ಮ ಪೂರ್ವಜರು ನೂರಾರು ವರ್ಷಗಳ ಹಿಂದೆಯೇ ವಸಂತೋತ್ಸವ, ಹೋಳಿಯ ಮೂಲಕ  ಕಂಡುಕೊಂಡಿದ್ದರು.

  ಇಂತಹ ಹೋಳಿಯನ್ನು ಭಾರತದ ಭಾಗಶಃ ಎಲ್ಲ ಭಾಷೆಗಳ ಚಿತ್ರಗಳು – ಮುಖ್ಯವಾಗಿ ಹಿಂದಿ – ಪರಿಣಾಮಕಾರಿಯಾಗಿ, ಕಾವ್ಯಾತ್ಮಕವಾಗಿ, ಶೃಂಗಾರಕಾವ್ಯವಾಗಿ ಬಳಸಿಕೊಂಡಿವೆ. ಹೋಳಿಹಾಡುಗಳಲ್ಲಿ ಚಿತ್ರಕ್ಕೆ ಮಹತ್ತ್ವದ ತಿರುವು ನೀಡಲಾಗಿದೆ, ಕಾಮೆಡಿ ಸೃಷ್ಟಿಸಲಾಗಿದೆ, ಪ್ರೇಮನಿವೇದನೆ ಮಾಡಲಾಗಿದೆ, ಹಾಗೆಯೇ ಹಲವೊಮ್ಮೆ ಸಾಮಾಜಿಕ ಹೋರಾಟದ ಸ್ವರೂಪವನ್ನೂ ನೀಡಲಾಗಿದೆ.

  ಹೋಳಿಹಾಡುಗಳನ್ನು, ಸಂದರ್ಭಗಳನ್ನು ಚಲನಚಿತ್ರಗಳಲ್ಲಿ ಅಳವಡಿಸಿಕೊಳ್ಳುವ ಪರಿಪಾಟಿ ಸ್ವಾತಂತ್ರ್ಯಪೂರ್ವದಲ್ಲೇ ಕಾಣಬಹುದು. 1931ರಲ್ಲಿ ತೆರೆಕಂಡ ಚಿತ್ರ ‘ಘರ್ ಕೀ ಲಕ್ಷ್ಮೀ’. ನಿರ್ದೇಶಕರು ಕಾಂಜಿಭಾಯಿ ರಾಠೋಡ್. ಬಹುಶಃ ಹೋಳಿ ಕುರಿತು ಚಲನಚಿತ್ರದಲ್ಲಿ ಬಂದ ಮೊದಲ ಗೀತೆ ‘ಮೋಪೆ ಡಾರ್ ಗಯೋ ರಂಗ್ ಕೇ ಗಗರ್, ಕೈಸಾ ಧೋಕಾ ಕಿಯಾ’ ಈ ಚಿತ್ರದ್ದು.

  ಅದಾದ ಬಳಿಕ 1940ರಲ್ಲಿ ಮೆಹಬೂಬ್‍ಖಾನ್ ನಿರ್ದೇಶನದ ಚಿತ್ರ ‘ಔರತ್’ ಬಿಡುಗಡೆಯಾಯಿತು. ಸರ್ದಾರ್ ಅಖ್ತರ್ ನಟನೆಯ ಈ ಚಿತ್ರದಲ್ಲಿ ಬರುವ ಹಾಡು ‘ಜಮುನಾ ತಟ್ ಶ್ಯಾಮ್ ಖೇಲೇ ಹೋಲೀ, ಜಮುನಾ ತಟ್’. ಡಾ. ಸಫ್ದರ್ ಸಾಹಿತ್ಯಕ್ಕೆ ಸಂಗೀತ ನೀಡಿದ್ದು ಅನಿಲ್ ಬಿಸ್ವಾಸ್. (ಹದಿನೇಳು ವರ್ಷಗಳ ಬಳಿಕ ಬಂದ ಮಹತ್ತ್ವದ ಚಿತ್ರ ‘ಮದರ್ ಇಂಡಿಯಾ’ಕ್ಕೂ, ‘ಔರತ್’ಗೂ ಸಂಬಂಧವಿದೆ. ವಾಸ್ತವವಾಗಿ ‘ಔರತ್’ ಚಿತ್ರವೇ 1957ರಲ್ಲಿ ‘ಮದರ್ ಇಂಡಿಯಾ’ ಮೂಲಕ ಹೊಸರೂಪದಲ್ಲಿ ಮತ್ತೊಮ್ಮೆ ಮೆಹಬೂಬ್‍ಖಾನ್ ನಿರ್ದೇಶನದಲ್ಲಿ ಬೆಳ್ಳಿತೆರೆಗೆ ಬಂದಿತು.)

  1955ರಲ್ಲಿ ಬಿಡುಗಡೆಯಾದ ‘ಇನ್ಸಾನಿಯತ್’ ಚಿತ್ರದಲ್ಲಿ ಕೂಡ ಹೋಳಿಯ ಹಾಡಿದೆ. ‘ತೇರೇ ಸಂಗ್ ಸಂಗ್ ಸಂಗ್ ಪಿಯಾ ಖೇಲ್’ ಹಾಡನ್ನು ಹಾಡಿದ್ದು ಲತಾ ಮಂಗೇಶ್ಕರ್. ಸಿ. ರಾಮಚಂದ್ರ ಸಂಗೀತದಲ್ಲಿ ಶಿಳ್ಳೆಯನ್ನು ಕೂಡ ತಾಳಕ್ಕೆ ತಕ್ಕಂತೆ ಬಳಸಿರುವುದು ವಿಶೇಷ. ಹೋಳಿಯ ಹಾಡಿನಲ್ಲಿ ಶಿಳ್ಳೆ ಇರದಿದ್ದರೆ ಹೇಗೆ ಅಲ್ಲವೆ!

  ಆದರೆ ಈ ಎಲ್ಲ ಹೋಳಿಯ ಹಾಡುಗಳಿಗಿಂತ ಜನಪ್ರಿಯತೆಯನ್ನು ಗಳಿಸಿದ ಹಾಡು ‘ಹೋಲೀ ಆಯೀ ರೇ ಕನ್ಹಾಯಿ ಹೋಲೀ ಆಯೀ ರೇ’ 1957ರಲ್ಲಿ ಬೆಳ್ಳಿತೆರೆಗೆ ಬಂತು, ‘ಮದರ್ ಇಂಡಿಯಾ’ ಚಿತ್ರದ ಮೂಲಕ.

  ಭಾರತಕ್ಕೆ ಸ್ವಾತಂತ್ರ್ಯ ಬಂದು, ಚಿತ್ರರಂಗದಲ್ಲಿ ಸಾಕಷ್ಟು ಪ್ರಯೋಗಗಳು ನಡೆಯುತ್ತಿದ್ದ ಕಾಲ. ಮೆಹಬೂಬ್ ಖಾನ್ ನಿರ್ದೇಶನದ ಈ ಚಿತ್ರ ಭಾರತೀಯ ಚಿತ್ರರಂಗದಲ್ಲಿ ಹೊಸ ಮೈಲುಗಲ್ಲನ್ನೇ ಸ್ಥಾಪಿಸಿತು. ಬಾಕ್ಸ್‍ಆಫೀಸ್ ಗಳಿಕೆಗಿಂತ ತನ್ನ ಸಂದೇಶದ ಮೂಲಕ ಅದು ಮನೆಮಾತಾಯಿತು. ಹಳ್ಳಿಯ ಧೂರ್ತ ಲೇಣಿದೇಣಿಗಾರನ ವಿರುದ್ಧ ಹೋರಾಟ ನಡೆಸುವ ಹೆಣ್ಣುಮಗಳೊಬ್ಬಳ ಕಥೆ ಇದು. ನರ್ಗೀಸ್, ರಾಜಕುಮಾರ್, ಸುನೀಲ್‍ದತ್, ರಾಜೇಂದ್ರಕುಮಾರ್ ಇದ್ದ ಅದ್ಧೂರಿ ತಾರಾಗಣ. ಭಾರತೀಯಸಮಾಜ ಮತ್ತು ಮಹಿಳೆಯ ಕುರಿತು ಇದ್ದ ಋಣಾತ್ಮಕ ಭಾವನೆಯನ್ನು ಅಂತಾರಾಷ್ಟ್ರೀಯಮಟ್ಟದಲ್ಲಿ ತೊಳೆದುಹಾಕಿದ ಚಿತ್ರವೆಂದು ಖ್ಯಾತಿ ಗಳಿಸಿತು.

  ಹೋಳಿಯ ಕುರಿತು ತುಂಬಾ ಅದ್ಧೂರಿಯಾಗಿ ಚಿತ್ರಿತಗೊಂಡ ಮೊದಲ ಹಾಡು ಇದೇ ಚಿತ್ರದ್ದು ಎನ್ನಬಹುದು. ಹಾಡು ಆರಂಭವಾಗುವುದೇ ಹೆಣ್ಣೊಬ್ಬಳು ಗಂಡಿನ ವೇಷ ಧರಿಸಿ ನೃತ್ಯ ಮಾಡುವುದರೊಂದಿಗೆ. ಹಾಡಿನ ಆರಂಭದಲ್ಲಿ ಫ್ರೇಮ್‍ನಲ್ಲಿ ಬಣ್ಣಗಳು ನಿಧಾನವಾಗಿ ತೂರಿಕೊಂಡು ಬರುವುದೇ ಒಂದು ಚೆಂದ. ಇದೇ ಹಾಡಿನ ಸಂದರ್ಭದಲ್ಲಿಯೇ ‘ಮದರ್ ಇಂಡಿಯಾ’ ತಿರುವು ಪಡೆಯುತ್ತದೆ. ಲೇಣಿದೇಣಿಗಾರನ ಮಗಳು, ಬಿರ್ಜುನ (ಸುನಿಲ್‍ದತ್) ತಾಯಿಯ ಬಳೆಗಳನ್ನು ತೋರಿಸುತ್ತ ಬಿರ್ಜುನನ್ನು ಅಣಕಿಸುತ್ತಾಳೆ. ಆ ಬಳೆಗಳನ್ನು ಲೇಣಿದೇಣಿಗಾರ, ಬಿರ್ಜುನ ತಾಯಿಯಿಂದ ಮೋಸಮಾಡಿ ಪಡೆದುಕೊಂಡಿರುತ್ತಾನೆ. ಹಾಡಿನ ಕೊನೆಯಲ್ಲಿ ಬಿರ್ಜು ಆ ಬಳೆಗಳನ್ನು ತೆಗೆಯಲು ಹೋದಾಗ ಆತನ ಮೇಲೆ ಹೆಣ್ಣಿನ ಮಾನದ ಮೇಲೆ ಕೈಹಾಕಿದ ಆರೋಪ ಬಂದು ಗದ್ದಲ ಆರಂಭವಾಗುತ್ತದೆ. ಹೋಳಿಯ ಸಂದರ್ಭದ ಈ ಗಲಾಟೆಯೇ ಮುಂದೆ ನಡೆಯುವ ಎಲ್ಲ ಘಟನೆಗಳ ಮೂಲ. ಹೆಣ್ಣಿನ ಮಾನ ಹಾಗೂ ಮಗನ ಪ್ರಾಣವನ್ನು ಆಯ್ಕೆ ಮಾಡಿಕೊಳ್ಳಬೇಕಾದ ಪ್ರಸಂಗ ಬಂದಾಗ, ತಾಯಿಯಾದವಳು (ನರ್ಗೀಸ್) ಹೆಣ್ಣಿನ ಮಾನವನ್ನೇ ಆಯ್ಕೆ ಮಾಡಿಕೊಂಡು ಮಗನನ್ನು ಕೊಲ್ಲುತ್ತಾಳೆ. ತಾಯಿಯ ಮಡಿಲಲ್ಲಿ ಬಿರ್ಜು ಪ್ರಾಣ ಬಿಡುತ್ತಾನೆ. ಹೀಗೆ ತಾಯಿಯ ಮಡಿಲಲ್ಲಿ ಪ್ರಾಣಬಿಡುವ ದೃಶ್ಯ ಸುನೀಲ್‍ದತ್‍ಗೆ ಅಪಾರ ಕೀರ್ತಿ ತಂದರೆ, ಇದೇ ರೀತಿಯ ಸನ್ನಿವೇಶ ಸುನೀಲ್‍ದತ್ ಮಗ ಸಂಜಯ್ ದತ್‍ನ ಮೇಲೆ ‘ವಾಸ್ತವ್’ ಚಿತ್ರದಲ್ಲಿ ಚಿತ್ರಿತವಾಗಿದೆ. ಅಲ್ಲಿ ಕೂಡ ತಾಯಿ ಮಗನನ್ನು ಕೊಲ್ಲುತ್ತಾಳೆ. ಇದು ಸಂಜಯ್‍ದತ್‍ನನ್ನು ಜನಪ್ರಿಯಗೊಳಿಸಿತು. ಹೀಗೆ ಹೋಳಿಯ ಸಂದರ್ಭ ‘ಮದರ್ ಇಂಡಿಯಾ’ ಚಿತ್ರದ ಪ್ರಮುಖ ಘಟ್ಟ.

  1971ರಲ್ಲಿ ತೆರೆ ಕಂಡ ರಾಜೇಶ್ ಖನ್ನಾ, ಆಶಾ ಪಾರೇಖ್ ಅಭಿನಯದ ಚಿತ್ರ ‘ಕಟಿ ಪತಂಗ್’. ಅದರಲ್ಲಿನ ಹಾಡು ‘ಆಜ್ ನಾ ಛೋಡೇಂಗೆ ಬಸ್ ಹಮ್ ಜೋಲೀ’. ಹಲವಾರು ಹಿಟ್ ಹಾಡುಗಳನ್ನು ನೀಡಿರುವ ಆರ್.ಡಿ. ಬರ್ಮನ್ ಈ ಹಾಡಿನ ಸಂಗೀತ ನಿರ್ದೇಶಕರು. ಕಿಶೋರ್‍ಕುಮಾರ್ ಹಾಗೂ ಲತಾ ಮಂಗೇಶ್ಕರ್ ಯುಗಳ ಸ್ವರದಲ್ಲಿ ಬಂದ ಈ ಹಾಡು ಇಂದಿಗೂ ಡಿಜೆಗಳ ಅತ್ಯಾಪ್ತ ಹಾಡು. ವಿಶೇಷವೆಂದರೆ ಕಮಲ್ (ರಾಜೇಶ್ ಖನ್ನಾ) ಎಷ್ಟೇ ಉತ್ಸಾಹದಿಂದ ಕರೆದರೂ ಮಧು (ಆಶಾ ಪಾರೇಖ್) ಕೊನೆಯವರೆಗೂ ಹೋಳಿ ಆಡಲು ಬರುವುದಿಲ್ಲ. ಆಕೆ ವಿಧವೆಯಾಗಿರುವುದೇ ಇದಕ್ಕೆ ಕಾರಣ. ತನ್ನ ಎಲ್ಲ ಸಂಕಟಗಳನ್ನೂ, ಸಮಾಜದ ಭೀತಿಯನ್ನೂ, ತನ್ನ ದುರದೃಷ್ಟವನ್ನೂ ಈ ಹಾಡಿನಲ್ಲಿ ಹೇಳಿಕೊಂಡರೆ, ಸಮಾಜದ ಬಗ್ಗೆ ಚಿಂತೆ ಮಾಡದೆ ಮುಂದಿರುವ ಬಂಗಾರದಂತಹ ಬದುಕನ್ನು ಬಣ್ಣದಿಂದ ಅಲಂಕರಿಸುವಂತೆ ಕಮಲ್ ಹೇಳುತ್ತಾನೆ. ವಿಧವೆಯಾಗಿರುವುದರಿಂದ ಬಿಳಿಸೀರೆ ಉಟ್ಟ ಮಧು ಹಿಂಜರಿಯುತ್ತಾಳೆ. ಆದರೆ ಹಾಡಿನ ಕೊನೆಯಲ್ಲಿ ಆಕೆಯನ್ನು ಗುಂಪಿಗೆ ಕರೆದು, ಆಕೆಯ ಬಿಳಿಬಣ್ಣದ ಸೀರೆಯ ಮೇಲೆ ಬಣ್ಣವನ್ನು ಹಾಕುವ ಮೂಲಕ, ಮಹಿಳಾ ಸ್ವಾತಂತ್ರ್ಯದ ಕುರಿತಂತೆ ಜಡ್ಡುಗಟ್ಟಿರುವ ಸಮಾಜಕ್ಕೆ ಹಲವು ಸಂದೇಶಗಳನ್ನು ನೀಡುತ್ತಾನೆ ಕಮಲ್. ಹೋಳಿಯಂತಹ ಹಾಡಿನಲ್ಲಿ ಶೃಂಗಾರ ಹಾಗೂ ಕರುಣ ಎರಡೂ ರಸಗಳನ್ನು ಉಕ್ಕಿಸುವ ಹಾಡು ಇದು.

  ಇನ್ನು ಭಾರತೀಯ ಸಿನಿರಂಗ ಕಂಡ ಶ್ರೇಷ್ಠ ಚಿತ್ರ 1975ರಲ್ಲಿ ತೆರೆಕಂಡ ರಮೇಶ್ ಸಿಪ್ಪಿ ನಿರ್ದೇಶನದ ‘ಶೋಲೇ’. ಇದರಲ್ಲಿನ ‘ಹೋಲೀ ಕೇ ದಿನ್ ದಿಲ್ ಖಿಲ್ ಜಾತೇ ಹೈ’ ಹಾಡು ಬಣ್ಣಗಳು ಬೆಳ್ಳಿಪರದೆಯ ಮೇಲೆ ಎಂತಹ ಪ್ರಭಾವವನ್ನು ಬೀರಬಲ್ಲವು ಎಂಬುದಕ್ಕೆ ಸಾಕ್ಷಿ. ಈ ಹಾಡು ಕೂಡ ಆರ್.ಡಿ. ಬರ್ಮನ್, ಕಿಶೋರ್‍ಕುಮಾರ್ ಮತ್ತು ಲತಾ ಮಂಗೇಶ್ಕರ್ ಕಾಂಬಿನೇಶನ್ನಿನ ಹಾಡು. ಬರೆದವರು ಆನಂದ್ ಭಕ್ಷಿ. ಹಾಡಿನ ವಿಶೇಷವೆಂದರೆ ವಸ್ತ್ರವಿನ್ಯಾಸ. ಬಹುತೇಕ ಹೋಳಿಹಾಡುಗಳಲ್ಲಿ ನಟ-ನಟಿಯರು, ನೃತ್ಯಗಾರರು ಬಿಳಿಬಣ್ಣದ ಕಾಸ್ಟ್ಯೂಮ್ ಧರಿಸಿದರೆ ಈ ಹಾಡಿನಲ್ಲಿ ಧರ್ಮೇಂದ್ರ, ಹೇಮಾಮಾಲಿನಿ, ಅಮಿತಾಭ್ ಬಚ್ಚನ್ ಸೇರಿದಂತೆ ಎಲ್ಲರೂ ಆಗಲೇ ವಿವಿಧ ಬಣ್ಣಗಳ ಕಾಸ್ಟ್ಯೂಮನ್ನೇ ಧರಿಸಿದ್ದಾರೆ. ಹಾಗಾಗಿ ಬಣ್ಣದ ಮೇಲೆ ಬಣ್ಣ. ಇಡೀ ಹಾಡಿನಲ್ಲಿ ಭಿನ್ನವಾಗಿ ಎದ್ದು ಕಾಣುವ ಒಂದೇ ಬಣ್ಣವೆಂದರೆ ಬಿಳಿಸೀರೆಯುಟ್ಟಿರುವ ಜಯಾಭಾದುರಿಯದ್ದು.

  1981ರಲ್ಲಿ ತೆರೆಕಂಡ ಯಶ್ ಚೋಪ್ರಾ ನಿರ್ದೇಶನದ ‘ಸಿಲ್‍ಸಿಲಾ’ ಚಿತ್ರ ಹಲವು ಕಾರಣಗಳಿಂದ ಖ್ಯಾತಿ ಗಳಿಸಿತು. ಇದರ ‘ರಂಗ್ ಬರಸೇ ಭೀಗೇ ಚುನರವಾಲೀ’ ಹಾಡನ್ನು ಬರೆದದ್ದು ತಂದೆಯಾದರೆ, ಹಾಡಿದ್ದು ಮಗ. ಅಂದರೆ ಹರಿವಂಶರಾಯ್ ಬಚ್ಚನ್ ಗೀತೆ ರಚಿಸಿದ್ದರೆ, ಅಮಿತಾಭ್ ಬಚ್ಚನ್ ಹಾಡಿದ್ದಾರೆ. (ಹೋಳಿಯ ಕುರಿತೇ ಅಮಿತಾಭ್ ಹಾಡಿದ ಮತ್ತೊಂದು ಹಾಡೆಂದರೆ 2003ರಲ್ಲಿ ತೆರೆಕಂಡ ‘ಬಾಗ್ ಬಾನ್’ ಚಿತ್ರದ ‘ಹೋರಿ ಖೇಲೇ ರಘುವೀರಾ ಅವಧ್ ಮೇಂ’). ಅಮಿತ್ ಮಲ್ಹೋತ್ರಾ (ಅಮಿತಾಭ್ ಬಚ್ಚನ್) ಹಾಗೂ ಚಾಂದನಿ (ರೇಖಾ) ನಡುವಿನ ಪ್ರೀತಿ ಈ ಹಾಡಿನಲ್ಲೇ ಜಗಜ್ಜಾಹೀರಾಗುತ್ತದೆ. ಅಮಿತ್ ಮಲ್ಹೋತ್ರಾ ಭಾಂಗ್ ಕುಡಿದ ಗುಂಗಿನಲ್ಲಿ ಚಾಂದನಿ ಜೊತೆಗೆ ‘ಓವರ್ ಆಗಿ ಆಡುವುದನ್ನು’ ನೋಡಿದ ಡಾ. ವಿ.ಕೆ. ಆನಂದ್ (ಸಂಜೀವ್‍ಕುಮಾರ್) ಹಾಗೂ ಶೋಭಾ ಮಲ್ಹೋತ್ರಾ(ಜಯಾಭಾದುರಿ)ಗೆ  ಮೊಸರಲ್ಲಿ ಕಲ್ಲಿರುವುದು ಗೊತ್ತಾಗುತ್ತದೆ. ಅಂತೂ ಅದುಮಿಟ್ಟ ಪ್ರೀತಿಯನ್ನು ಹೇಳಿಕೊಳ್ಳಲು ಹೋಳಿಹಬ್ಬವೇ ಬರಬೇಕಾಯಿತು!

  ಹಿಂದೆ ಬೀಳದ ಕನ್ನಡ ಚಿತ್ರರಂಗ

  ಹೋಳಿಯ ಹಾಡುಗಳನ್ನು ಬಳಸಿಕೊಳ್ಳುವಲ್ಲಿ ಕನ್ನಡ ಚಿತ್ರರಂಗವೂ ಹಿಂದೆಬಿದ್ದಿಲ್ಲ. ಬಣ್ಣಗಳೆಂದರೆ ಕನ್ನಡಿಗರಿಗೆ ಇಂದಿಗೂ ನೆನಪಾಗುವ ಹಾಡು ಮೂರು ದಶಕಗಳ ಹಿಂದಿನ ‘ಬಣ್ಣ ನನ್ನ ಒಲವಿನ ಬಣ್ಣ’. ಚಿತ್ರ ‘ಬಂಧನ’. ಉಷಾ ನವರತ್ನರಾಂ ಅವರ ಕಾದಂಬರಿ ಆಧಾರಿತ ಈ ಚಿತ್ರವನ್ನು ನಿರ್ದೇಶಿಸಿದ್ದು ಎಸ್.ವಿ. ರಾಜೇಂದ್ರಸಿಂಗ್ ಬಾಬು. ಹಳ್ಳಿಯಲ್ಲಿ ವೈದ್ಯಕೀಯ ಶಿಬಿರಕ್ಕೆ ತೆರಳುವ ಮಾರ್ಗದಲ್ಲಿ ವೈದ್ಯರ ತಂಡದ ಮೇಲೆ ಹೋಳಿಹಬ್ಬದ ಗುಂಗಿನಲ್ಲಿರುವ ತಂಡವೊಂದು ಬಣ್ಣವೆರಚುತ್ತದೆ. ಮೈತುಂಬಾ ಬಣ್ಣಗಳನ್ನು ಮಾಡಿಕೊಂಡ ಡಾ. ಆನಂದ್ (ವಿಷ್ಣುವರ್ಧನ್), ಡಾ. ನಂದಿನಿ(ಸುಹಾಸಿನಿ)ಯ ಪ್ರೀತಿಯಲ್ಲಿ ಬೀಳುತ್ತಾರೆ. ಹಾಗೆಯೇ ಕನಸು ಕಾಣುತ್ತಾರೆ. ಆ ಕನಸೇ ‘ಬಣ್ಣ ನನ್ನ ಒಲವಿನ ಬಣ್ಣ’ ಹಾಡು. ಆರ್.ಎನ್. ಜಯಗೋಪಾಲ್ ರಚಿಸಿರುವ ಸಾಹಿತ್ಯಕ್ಕೆ ಸ್ವರ ಸಂಯೋಜಿಸಿದವರು ಎಂ. ರಂಗರಾವ್. ಹಾಡಿದ್ದು ನಮ್ಮೆಲ್ಲರ ಅಚ್ಚುಮೆಚ್ಚಿನ ಎಸ್.ಪಿ. ಬಾಲಸುಬ್ರಹ್ಮಣ್ಯಂ ಹಾಗೂ ಎಸ್. ಜಾನಕಿ. ಹಾಡಿನುದ್ದಕ್ಕೂ ಆನಂದ್ ಹಾಗೂ ನಂದಿನಿ ಹಲವು ಕಾಸ್ಟ್ಯೂಮ್‍ಗಳನ್ನು ಬದಲಿಸಿದ್ದಾರೆ. ಹಾಡು ಆರಂಭವಾಗುವುದೇ ನಂದಿನಿ 6 ಬಣ್ಣಗಳ ಬೇರೆ ಬೇರೆ ಸೀರೆಗಳನ್ನು ಉಟ್ಟು ಸಂಭ್ರಮಿಸುವ ಮೂಲಕ. ಹಾಡಿನುದ್ದಕ್ಕೂ ಆನಂದ್ ನಂದಿನಿಯ ಮೇಲೆ ವಿವಿಧ ಬಣ್ಣಗಳ ನೀರನ್ನು ಸುರಿಯುತ್ತಾರೆ. ಗಮನಿಸಬೇಕಾದ ಅಂಶವೆಂದರೆ ಸಾಮಾನ್ಯವಾಗಿ ಹೋಳಿಯ ಎಲ್ಲ ಹಾಡುಗಳಲ್ಲಿ ಹೀರೋಯಿನ್ ಮೇಲೆ ಹೀರೋ ಬಣ್ಣ ಚೆಲ್ಲುವುದು, ಪಿಚಕಾರಿಯಿಂದ ನೀರು ಹಾರಿಸುವುದು, ಸೀರೆ ತೋಯಿಸುವುದು ಮಾಡಿದರೆ, ಈ ಹಾಡಿನಲ್ಲಿ ಮಾತ್ರ ಒಂದು ದೃಶ್ಯದಲ್ಲಿ ನಂದಿನಿ, ಆನಂದ್ ಮೇಲೆ ಹಾಲು ಸುರಿದು ಅವರನ್ನು ತೊಯ್ಯಿಸುತ್ತಾರೆ. ಆ ಸಂದರ್ಭದಲ್ಲಿ ಹಾಡಿನ ಲೈನ್ ಹೀಗಿದೆ – ‘ನೊರೆಹಾಲಿಗಿಂತ ಬಿಳುಪು ಈ ನಿನ್ನ ಮನಸಿನ ಬಣ್ಣ, ಮುಂಜಾನೆ ಮಂಜಿನ ಹಾಗೆ ತಂಪಾದ ಮಾತಿನ ಬಣ್ಣ’. ಒಮ್ಮುಖ ಪ್ರೀತಿ ಸಾಧ್ಯವಿಲ್ಲವಲ್ಲವೆ?

  1993ರಲ್ಲಿ ತೆರೆಕಂಡ ಹಿಂದಿ ಚಲನಚಿತ್ರ ‘ಡರ್’. ಇದರ ರಿಮೇಕ್ ಕನ್ನಡದಲ್ಲಿ ಆಗಿದ್ದು 2000 ಇಸವಿಯಲ್ಲಿ, ‘ಪ್ರೀತ್ಸೆ’ ಎಂಬ ಹೆಸರಿನಿಂದ. ‘ಡರ್’ನಲ್ಲಿ ‘ಅಂಗ್ ಸೇ ಅಂಗ್ ಲಗಾನಾ’ ಹಾಡು ಹಾಗೂ ಕನ್ನಡದಲ್ಲಿ ‘ಹೋಳಿ ಹೋಳಿ ಹೋಳಿ ಹೋಳಿ’ ಹಾಡು ಎರಡೂ ತೀರ ಜನಪ್ರಿಯವಾದವು.

  1984ರಲ್ಲಿ ‘ಫಿಲಂ ಆಂಡ್ ಟೆಲೆವಿಷನ್ ಇನ್‍ಸ್ಟಿಟ್ಯೂಟ್ ಆಫ್ ಇಂಡಿಯಾ’ದ ವಿದ್ಯಾರ್ಥಿಕಾರ್ಯಾಗಾರದ ಭಾಗವಾಗಿ ರೂಪಗೊಂಡ ಸಿನೆಮಾ ‘ಹೋಲೀ’. ಮಹೇಶ್ ಎಲಕುಂಚವಾರ್ ಅವರ ನಾಟಕವನ್ನೇ ಸಿನೆಮಾವನ್ನಾಗಿ ಮಾಡಲಾಯಿತು. ಕೇತನ್ ಮೆಹ್ತಾ ನಿರ್ದೇಶನದ ಈ ಚಿತ್ರ, ಹೋಳಿಯ ಸಂದರ್ಭದಲ್ಲಿ ಕಾಲೇಜಿಗೆ ರಜೆ ನೀಡದೆ ಇದ್ದಾಗ ನಡೆಯುವ ಕುರಿತ ಘಟನೆಯದ್ದಾಗಿದೆ. ಆಶುತೋಷ ಗೋವರೀಕರ್, ಆಮೀರ್‍ಖಾನ್ (ಆಗಿನ್ನೂ ಆಮೀರ್ ಹುಸೇನ್), ಓಂ ಪುರಿ, ದೀಪ್ತಿ ನವಲ್, ಮೋಹನ್ ಗೋಖಲೆ, ಪರೇಶ್ ರಾವಲ್, ಶ್ರೀರಾಮ್ ಲಾಗೂ, ನಾಸಿರುದ್ದೀನ್ ಷಾ ತಾರಾಗಣದ ಈ ಚಿತ್ರ, ಆಮೀರ್‍ಖಾನ್‍ರ ಮೊದಲ ಚಿತ್ರವೂ ಹೌದು.

  ಸನ್ನಿ ದೇವಲ್ ಅವರ ‘ಯೇ ಢಾಯಿ ಕಿಲೋ ಕಾ ಹಾತ್’ ಹಾಗೂ ‘ತಾರೀಖ್ ಪೇ ತಾರೀಖ್’ ಡೈಲಾಗ್‍ಗಳಿಂದ ಪ್ರಸಿದ್ಧವಾದ, ಹೆಣ್ಣೊಬ್ಬಳು ವ್ಯವಸ್ಥೆಯ ವಿರುದ್ಧ ಹೋರಾಡುವ ಚಿತ್ರಕಥೆಯನ್ನು ಹೊಂದಿರುವ, ದಿಟ್ಟ ಚಲನಚಿತ್ರ ರಾಜ್‍ಕುಮಾರ್ ಸಂತೋಷಿ ನಿರ್ದೇಶನದ ‘ದಾಮಿನಿ’. 1993ರಲ್ಲಿ ತೆರೆಕಂಡ ಈ ಚಿತ್ರದಲ್ಲಿ ಸನ್ನಿದೇವಲ್, ರಿಷಿಕಪೂರ್, ಅಮರೀಷ್ ಪುರಿ, ಮೀನಾಕ್ಷಿ ಶೇಷಾದ್ರಿ, ರೋಹಿಣಿ ಹಟ್ಟಂಗಡಿ, ಪರೇಶ್ ರಾವಲ್, ಕುಲಭೂಷಣ ಖರಬಂದಾ ನಟಿಸಿದ್ದಾರೆ. ಹೋಳಿಯ ಸಂದರ್ಭದಲ್ಲಿ ಮುಖಕ್ಕೆ ಸಂಪೂರ್ಣ ಬಣ್ಣ ಬಳಿದುಕೊಂಡು, ಮನೆಯ ಕೆಲಸದವಳ ಮೇಲೆ ಮನೆಯೊಡೆಯನ ಮಗ ಹಾಗೂ ಸ್ನೇಹಿತರು ನಡೆಸುವ ಅತ್ಯಾಚಾರ, ಅದನ್ನು ಮುಚ್ಚಿಹಾಕುವ ದುಷ್ಟಶಕ್ತಿಗಳ ಹುನ್ನಾರ, ಆ ಹುನ್ನಾರದ ವಿರುದ್ಧ ದಾಮಿನಿಯ (ಮೀನಾಕ್ಷಿ ಶೇಷಾದ್ರಿ) ಹೋರಾಟದ ಸುತ್ತ ಈ ಚಿತ್ರವಿದೆ. ಅತ್ಯಾಚಾರದ ಸಂದರ್ಭದಲ್ಲಿ ಆರೋಪಿಗಳು ಬಣ್ಣ ಹಚ್ಚಿಕೊಂಡಿದ್ದರಿಂದ ಅವರ ಮುಖ ಸರಿಯಾಗಿ ಕಾಣಿಸುವುದಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡ ಲಾಯರ್ ಚಡ್ಡಾ (ಅಮರೀಷ್ ಪುರಿ) ಕೋರ್ಟಿನಲ್ಲಿ ಬಣ್ಣ ಬಳಿದುಕೊಂಡಿರುವ ಏಳೆಂಟು ಜನರನ್ನು ಕರೆತಂದು ಅದರಲ್ಲಿ ಅತ್ಯಾಚಾರ ಮಾಡಿದವರು ಯಾರೆಂದು ಕೇಳಿ ದಾಮಿನಿಯನ್ನು ಒತ್ತಡಕ್ಕೆ ಸಿಲುಕಿಸುತ್ತಾನೆ. ಇಡೀ ಚಿತ್ರ ಮಹಿಳೆಯ ಹೋರಾಟ, ಅತ್ಯಾಚಾರ ಸಂತ್ರಸ್ತೆಗೆ ಮಾಧ್ಯಮಗಳು ಎಸೆಯುವ ಪ್ರಶ್ನೆ, ನ್ಯಾಯಪ್ರಕ್ರಿಯೆಯ ವಿಳಂಬನೀತಿ, ಹಣದ ಮುಂದೆ ಶರಣಾಗುವ ಪೊಲೀಸ್ ಇಲಾಖೆ, ಕೊನೆಗೆ ಸಾಮಾನ್ಯ ಮನುಷ್ಯನೂ ಕೈಗೆ ಕಲ್ಲೆತ್ತಿಕೊಂಡು ದುಷ್ಟಕೂಟದ ವಿರುದ್ಧ ಸೆಟೆದು ನಿಲ್ಲುವಂತಹ ಅಂಶಗಳಿಂದ ವಿಶಿಷ್ಟವೆನಿಸುತ್ತದೆ.

  ಹೋಳಿಯ ಪರಿಕಲ್ಪನೆ, ಹಾಡುಗಳು ಇರುವ ಚಲನಚಿತ್ರಗಳು ಇಂದಿಗೂ ಬರುತ್ತಲೇ ಇವೆ. ‘ಯೇ ಜವಾನೀ ಹೈ ದಿವಾನೀ’ (2013) ಚಿತ್ರದ ‘ಬಲಮ್ ಪಿಚಕಾರಿ ಜೋ ತೂನ್ಹೇ ಮುಝೇ ಮಾರೀ’, ‘ಬದರಿನಾಥ್ ಕೀ ದುಲ್ಹನಿಯಾ’ (2017)ದ ಟೈಟಲ್ ಟ್ರಾಕ್, ಹೋಳಿಯ ಹಾಡುಗಳಿರುವ ಇತ್ತೀಚಿನ ಚಿತ್ರಗಳು.

  ಮಥುರಾದ ‘ಲಠ್‍ಮಾರ್ ಹೋಲೀ’ (ಹೆಂಗಸರು ಗಂಡಸರಿಗೆ ಕೋಲಿನಿಂದ ಹೊಡೆಯುವುದು, ಗಂಡಸರು ಗುರಾಣಿಯಿಂದ ರಕ್ಷಣೆ ಪಡೆಯುವ ಸಾಂಪ್ರದಾಯಿಕ ಆಚರಣೆ) ಸುಂದರವಾಗಿ ಚಿತ್ರಿತವಾಗಿರುವುದು 2017ರಲ್ಲಿ ತೆರೆಗೆ ಬಂದ ‘ಟಾಯ್ಲೆಟ್ ಏಕ್ ಪ್ರೇಮ್‍ಕಥಾ’ದಲ್ಲಿ. ಮನೆಯಲ್ಲಿ ಶೌಚಾಲಯ ಇಲ್ಲದ್ದರಿಂದ ಆಗುವ ಅನಾಹುತಗಳ ಸುತ್ತ ಹೆಣೆದಿರುವ ಕಥೆ ಇದು. ಅಕ್ಷಯ್‍ಕುಮಾರ್, ಭೂಮಿ ಪೆಡ್ನೇಕರ್, ಅನುಪಮ್ ಖೇರ್, ಸಚಿನ್ ಖೇಡೆಕರ್ ಅಭಿನಯಿಸಿರುವ ಈ ಚಿತ್ರದಲ್ಲಿ, ಕೇಶವ್ (ಅಕ್ಷಯ್ ಕುಮಾರ್), ಜಯಾ ಶರ್ಮಾ(ಭೂಮಿ ಪೆಡ್ನೆಕರ್)ಳನ್ನು ಮದುವೆಯಾಗುತ್ತಾನೆ. ಆದರೆ ಗಂಡನ ಮನೆಯಲ್ಲಿ ಶೌಚಾಲಯವಿಲ್ಲದ್ದರಿಂದ ಜಯಾ ಸಾಕಷ್ಟು ಕಷ್ಟಪಡುತ್ತಾಳೆ. ಶೌಚಾಲಯ ಸಮಸ್ಯೆಯಿಂದ ರೋಸಿಹೋದ ಜಯಾ ತವರಿಗೆ ಹೋಗುತ್ತಾಳೆ. ಈ ಎಲ್ಲ ಗೊಂದಲಗಳ ನಡುವೆ ಚಿತ್ರಿತವಾದ ಹಾಡು ‘ಗೋರೀ ತು ಲಠ್ ಮಾರ್’. ಗರಿಮಾ ವಹಾಲ್ ಹಾಗೂ ಸಿದ್ಧಾರ್ಥ್ ಸಿಂಗ್ ಬರೆದಿರುವ ಹಾಡನ್ನು ಹಾಡಿದ್ದು ಸೋನು ನಿಗಮ್ ಹಾಗೂ ಪಲಕ್ ಮುಚ್ಛಲ್.

  ಐತಿಹ್ಯಗಳ ಪ್ರಕಾರ ಮಹಾಭಾರತದ ಸಂದರ್ಭದಲ್ಲಿ ಮಥುರಾದಲ್ಲಿ ಗೋಪಿಕೆಯರನ್ನು ಗೊಲ್ಲಬಾಲರು ಕಾಡಿಸುತ್ತಾರೆ. ಸಿಟ್ಟಾದ ಗೋಪಿಕೆಯರು ಕೋಲಿನಿಂದ ಗೊಲ್ಲಬಾಲರಿಗೆ ಹೊಡೆಯುತ್ತಾರೆ. ಇದರ ಆಚರಣೆಯೇ ಮಥುರಾದ ‘ಲಠ್ ಮಾರ್ ಹೋಲೀ’ ಎಂಬುದು ನಂಬಿಕೆ.

  ಪುರುಷಪ್ರಧಾನ ಸಮಾಜದಲ್ಲಿ ಸ್ತ್ರೀ ಅನೇಕ ಹೊಂದಾಣಿಕೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಸಮಾಜ ಎಷ್ಟೇ ಆಧುನಿಕವಾಗಿದ್ದರೂ ಸ್ತ್ರೀ ಸಂವೇದನೆಯನ್ನು ಅರ್ಥಮಾಡಿಕೊಳ್ಳುವಲ್ಲಿ, ಸ್ತ್ರೀಯರಿಗೆ ಬೇಕಾದ ದೈಹಿಕ ಮತ್ತು ಮಾನಸಿಕ ಅನುಕೂಲತೆಗಳನ್ನು ಸೃಷ್ಟಿಸಿಕೊಡುವಲ್ಲಿ ಪುರುಷಪ್ರಧಾನ ವ್ಯವಸ್ಥೆ ಇನ್ನೂ ಯಶಸ್ವಿಯಾಗಿಲ್ಲ. ಹೀಗಾಗಿ ಮಹಿಳೆಯರು ತಮ್ಮ ಕೋಪವನ್ನು ಪುರುಷರ ಮೇಲೆ ತೀರಿಸಿಕೊಳ್ಳಲು ‘ಲಠ್ ಮಾರ್ ಹೋಲೀ’ ಅವಕಾಶ ಒದಗಿಸುತ್ತದೆ ಎಂಬುದು ಸಮಾಜವಿಜ್ಞಾನಿಗಳ ಅಭಿಪ್ರಾಯ. ‘ಟಾಯ್ಲೆಟ್ ಏಕ್ ಪ್ರೇಮ್‍ಕಥಾ’ದಲ್ಲೂ ಕೇಶವ್ ಇದನ್ನೇ ಹೇಳುತ್ತಾನೆ. “ನಾನು ಇದುವರೆಗೂ ನಿನ್ನ ಮೇಲೆ ಮಾಡಿರುವ ಶೋಷಣೆಯ ಪ್ರತೀಕಾರ ತೀರಿಸಿಕೋ. ನನಗೆ ಹೊಡೆ” ಎಂದು ಹೇಳಿ ಕೊನೆಗೆ ತನ್ನ ಗುರಾಣಿಯನ್ನು ಬಿಟ್ಟುಬಿಡುತ್ತಾನೆ. ಜಯಾ ಆತನಿಗೆ ನೇರವಾಗಿಯೇ ಕೋಲಿನಿಂದ ಹೊಡೆಯುತ್ತಾಳೆ. ಸಿಟ್ಟು, ದ್ವೇಷ, ಅಸಹಾಯಕತೆಯ ನಡುವೆಯೇ ಹೋಳಿಯ ರಂಗಿನಲ್ಲಿ ದಂಪತಿಯ ಪ್ರೇಮ ಅರಳುತ್ತದೆ.

  ಇಷ್ಟೇ ಅಲ್ಲದೆ, ‘ಮಶಾಲ್’ ಚಿತ್ರದ ಕಿಶೋರ್‍ಕುಮಾರ್-ಲತಾ ಜೋಡಿಯ ‘ಓ ಹೋಲೀ ಆಯಿ ಹೋಲೀ ಆಯಿ ದೇಖೋ ಹೋಲೀ ಆಯಿ ರೇ’, ‘ನದಿಯಾ ಕೇ ಪಾರ್’ ಚಿತ್ರದ ಚಂದ್ರಾಣಿ ಮುಖರ್ಜಿ, ಹೇಮಲತಾ ಹಾಗೂ ಜಸ್ಪಾಲ್‍ಸಿಂಗ್ ಧ್ವನಿಯಲ್ಲಿ ಮೂಡಿಬಂದಿರುವ ‘ಜೋಗಿಜೀ ಧೀರೇ ಧೀರೇ, ನದೀ ಕೇ ತೀರೆ ತೀರೆ’ ಹಾಡುಗಳೂ ಜನಪ್ರಿಯವಾಗಿದೆ. ಮರಾಠಿ, ತೆಲುಗು, ಓಡಿಯಾ, ಭೋಜಪುರಿ ಚಿತ್ರಗಳಲ್ಲೂ ಕೂಡ ಹೋಳಿಹಾಡುಗಳು ವಿಜೃಂಭಿಸಿವೆ.

  ಹೋಳಿ ಹಾಡುಶೃಂಗಾರದ ವೈಭವೀಕರಣ

  ಕೆಲ ದಶಕಗಳ ಹಿಂದೆ ‘ಹೋಳಿಯ ಹಾಡುಗಳು ನಟಿಯ ಮೈಮಾಟವನ್ನು ತೋರಿಸಲಷ್ಟೇ ಸೀಮಿತವಾಗಿವೆ, ಹೋಳಿಯ ಹೆಸರಿನಲ್ಲಿ ನಟಿಗೆ ಬಿಳಿ ಸೀರೆ ಉಡಿಸಿ, ಆಕೆಯನ್ನು ನೀರಿನಲ್ಲಿ ನೆನೆಯುವಂತೆ ಮಾಡಿ ಅಶ್ಲೀಲತೆಯನ್ನು ವಿಜೃಂಭಿಸಲಾಗುತ್ತಿದೆ’ ಎಂಬ ಆರೋಪ ಮಡಿವಂತರಿಂದ ಕೇಳಿಬಂದಿತ್ತು. ಐಟಂಸಾಂಗ್‍ಗಳು, ಹಸಿ-ಬಿಸಿ ದೃಶ್ಯಗಳನ್ನು ಎಗ್ಗಿಲ್ಲದೆ ಚಿತ್ರದಲ್ಲಿ ತುರುಕಿಸುವ ಸ್ವಾತಂತ್ರ್ಯವಿದೆ ಈ ಕಾಲದಲ್ಲಿ. ವಾಸ್ತವವಾಗಿ ಶೃಂಗಾರ, ರಸಿಕತೆಯನ್ನು ತೋರಿಸಲು ಹೋಳಿ ಹಾಡುಗಳು ಆಗಿನ ಕಾಲದಲ್ಲಿ ನಿರ್ದೇಶಕರಿಗೆ ಪರ್ಯಾಯ ಆಯ್ಕೆಗಳಾಗಿದ್ದವು. ಆದರೆ ಆಯ್ಕೆಯ ಸ್ವಾತಂತ್ರ್ಯವನ್ನು ಭಾರತೀಯ ನಿರ್ದೇಶಕರು ಸಮರ್ಪಕವಾಗಿಯೇ ಬಳಸಿಕೊಂಡಿದ್ದಾರೆ. ಎಲ್ಲೂ ಅಶ್ಲೀಲತೆಯ ಭಾವ ಮೂಡಿಸದೆ, ಚೌಕಟ್ಟನ್ನು ಮುರಿಯುವ ಸಂದರ್ಭ ಎದುರಾದಾಗ ಅಂತಹ ಸಂದರ್ಭದಲ್ಲಿ ಬಣ್ಣ ಹಾರಿಸಿ ಆ ದೃಶ್ಯವನ್ನು ತೋರಿಸದೇ ತೋರಿಸಿದ್ದಾರೆ. ಇದು ನಿರ್ದೇಶಕರ ಜಾಣ್ಮೆ.

  ಚಿತ್ರರಂಗ ಹಾಗೂ ಹೋಳಿ ಒಂದನ್ನೊಂದು ಬಿಟ್ಟಿರಲಾರದಂತೆ ಬೆಸೆದುಕೊಂಡಿವೆ. ಬಣ್ಣಗಳಿಗೂ ಬಣ್ಣದ ಬದುಕಿಗೂ, ಬಣ್ಣದ ಪರದೆಗೂ, ಇರುವ ಸಂಬಂಧ ಕಾಲಚಕ್ರ ತಿರುಗಿದಂತೆ ಮತ್ತಷ್ಟು ಬೆಸೆಯುತ್ತಿದೆ. ಕಪ್ಪು-ಬಿಳುಪು ಚಲನಚಿತ್ರಗಳ ಕಾಲದಲ್ಲೇ ಬಣ್ಣಗಳನ್ನು ತೋರಿಸಲು ಪ್ರಯತ್ನಪಟ್ಟ ಚಿತ್ರರಂಗ, ಇಂದಿನ ವಿಆರ್ (ವರ್ಚುವಲ್ ರಿಯಾಲಿಟಿ) ಕಾಲದಲ್ಲಿ ಹೋಳಿಯನ್ನು ಮುಂದಿಟ್ಟುಕೊಂಡು ಮತ್ತಷ್ಟು ಪ್ರಯತ್ನಗಳನ್ನು ಮಾಡಲು ಮುಂದಾಗಿದೆ. 2ಡಿ ಅಥವಾ ವಿಆರ್, ಬೆಳ್ಳಿಪರದೆಯ ಓಕುಳಿಯಾಟ ಹೇಗೇ ನಡೆದರೂ ಪ್ರೇಕ್ಷಕನ ಮನರಂಜನೆಯಂತೂ ಹೋಳಿಯಿಂದ ಹೆಚ್ಚಾಗುತ್ತಲೇ ಇರುತ್ತದೆ. ಚಿತ್ರರಂಗ ಹಾಗೂ ಹೋಳಿಯ ಬಂಧ ಹೀಗೆಯೆ ಮುಂದುವರಿಯಲಿ. ಬೆಳ್ಳಿಪರದೆ ಮತ್ತಷ್ಟು ಬಣ್ಣಗಳಿಂದ ಸಿಂಗಾರಗೊಳ್ಳಲಿ.

  ಬಣ್ಣಗಳನ್ನು ಸಂಭ್ರಮಿಸುವನವರಂಗ್ಚಲನಚಿತ್ರ

  ಬಣ್ಣಗಳನ್ನು ಸಂಭ್ರಮಿಸುವ ಎಲ್ಲ ಚಲನಚಿತ್ರಗಳ ಮಧ್ಯೆ ವಿಭಿನ್ನವಾಗಿ ನಿಲ್ಲುವುದು 1959ರಲ್ಲಿ ತೆರೆಗೆ ಬಂದ ‘ನವರಂಗ್’. ಅದರ ಕಥೆ, ಹಾಡುಗಳು, ನೃತ್ಯ, ನೃತ್ಯದ ಪ್ರಯೋಗಗಳು, ಹಾಡಿನ ಸಾಹಿತ್ಯ, ಸಂಗೀತ, ಆನೆಯ ಕುಣಿತ ಎಲ್ಲವೂ ಇಂದಿಗೂ ಜನಪ್ರಿಯ. ವಿ. ಶಾಂತಾರಾಮ್ ನಿರ್ದೇಶನದ ಈ ಸಿನೆಮಾದಲ್ಲಿ ಅಭಿನಯಿಸಿದ್ದು ಸಂಧ್ಯಾ ಹಾಗೂ ಮಹಿಪಾಲ್. ಸಿ. ರಾಮಚಂದ್ರ ಸಂಗೀತ ನಿರ್ದೇಶಿಸಿದರೆ, ಸಾಹಿತ್ಯರಚನೆ ಪ್ರಸಿದ್ಧ ಕವಿ ಭರತ್ ವ್ಯಾಸ್‍ರದ್ದು. ಒಂದಕ್ಕಿಂತ ಒಂದು ಹಾಡು ವಾಹ್ ಎನ್ನಿಸುತ್ತವೆ. ಅದರಲ್ಲಿನ ರಂಗುರಂಗಾದ ಹಾಡು ಹೀಗಿದೆ –

  ಅಟಕ ಅಟಕ ಝಟಪಟ ಪನಘಟ ಪರ

  ಚಟಕ ಮಟಕ ಏಕ ನಾರ ನವೇಲಿ

  ಗೋರಿ ಗೋರಿ ಗ್ವಾಲನ ಕೀ ಛೋರಿ ಚಲೀ

  ಚೋರಿ ಚೋರಿ ಮುಖ ಮೋರಿ ಮೋರಿ

  ಮುಸಕಾಯೆ ಅಲಬೇಲೀ

  ಕಂಕರಿ ಗಲೇ ಮೇ ಮಾರಿ ಕಂಕರಿ ಕನ್ಹೈಯೆ ನೇ

  ಪಕರಿ ಬಾಂಹ್ ಔರ ಕೀ ಅಟಖೇಲೀ

  ಭರಿ ಪಿಚಕಾರಿ ಮಾರಿ ಸಾರರರರರರ

  ಭೋಲೀ ಪನಿಹಾರಿ ಬೋಲೀ

  ಅರೆ ಜಾರೆ ಹಟ್ ನಟಖಟ್ ನಾ ಛೂರೆ ಮೇರಾ

  ಘೂಂಗಟ್,

  ಪಲಟ್ ಕೇ ದೂಂಗೀ ಆಜ್ ತುಝೆ ಗಾಲಿ ರೇ,

  ಮುಝೇ ಸಮಝೋ ನ ತುಮ್ ಭೋಲೀ

  ಭಾಲಿ ರೇ

  ಇದು ಕೂಡ ಡ್ರೀಮ್ ಸೀಕ್ವೆನ್ಸ್. ಚಿತ್ರದಲ್ಲಿ ದಿವಾಕರ್ (ಮಹಿಪಾಲ್) ತನ್ನ ಪತ್ನಿ ಜಮುನಾಳನ್ನು (ಸಂಧ್ಯಾ) ಮೋಹಿನಿ ಎಂದು ಕಲ್ಪಿಸಿಕೊಂಡು ಹಾಡುಕಟ್ಟಿ ಹಾಡುತ್ತಿರುತ್ತಾನೆ. ಆ ಸಂದರ್ಭದ ಹೋಲಿ ಹಾಡು ಇದು. ವಿಶೇಷವೆಂದರೆ ಸಂಧ್ಯಾ ಅವರು ಪುರುಷ ಹಾಗೂ ಸ್ತ್ರೀ ಎರಡೂ ಆಗಿ ನರ್ತಿಸಿದ್ದಾರೆ. ಒಂದು ಹಂತದಲ್ಲಿ ಮುಂದಿನಿಂದ ಸ್ತ್ರೀಯಾಗಿ ತಿರುಗಿ ನಿಂತಾಗ ಪುರುಷನಾಗಿ ಕೊಂಚವೂ ಹೆಜ್ಜೆತಪ್ಪದೆ ಸಂಧ್ಯಾ ನರ್ತಿಸಿರುವುದು ವಿಶೇಷ. ಗಣೇಶ ಮೂರ್ತಿಯ ಮುಂದೆ ನಾಟ್ಯವಾಡುತ್ತಿರಬೇಕಾದರೆ ಅಲ್ಲಿ ಸ್ವತಃ ಗಣಪತಿಯೇ ಆನೆಯ ರೂಪದಲ್ಲಿ ಬಂದು ತಾನೂ ಕೂಡ ನರ್ತಿಸುತ್ತಾನೆ. ಸಿ. ರಾಮಚಂದ್ರ ಇಲ್ಲಿ ಕೂಡ ಶಿಳ್ಳೆಯನ್ನು ಅದ್ಭುತವಾಗಿ ಬಳಸಿದ್ದಾರೆ. ಹಾಡಿನ ಕೊನೆಯಲ್ಲಿ ಸಂಧ್ಯಾಳ ದೇಹದಿಂದ ಪಿಚಕಾರಿಯಂತೆ ಬಣ್ಣದ ನೀರು ಚಿಮ್ಮಿ ಚಿಮ್ಮಿ ಬರುವುದಂತೂ ಕಣ್ಣಿಗೆ ಹಬ್ಬ. ಗಜರಾಜ ಕೂಡ ಖುಷಿಯಾಗಿ ಸೊಂಡಿಲಿನಿಂದ ಬಣ್ಣದ ನೀರನ್ನು ಸಿಡಿಸುತ್ತಾನೆ.

  ಒಟ್ಟಿನಲ್ಲಿ ಹೇಳಬೇಕೆಂದರೆ ಹೋಳಿಯ ಹಾಡುಗಳಲ್ಲಿ ಅಷ್ಟೇ ಅಲ್ಲ, ಭಾರತೀಯ ಚಿತ್ರರಂಗದ ಎಲ್ಲ ಹಾಡುಗಳಲ್ಲಿಯೂ ಈ ಹಾಡು ನೃತ್ಯ, ಸಾಹಿತ್ಯ, ಸಂಗೀತ, ವಸ್ತ್ರವಿನ್ಯಾಸ, ಪರಿಕಲ್ಪನೆಯ ದೃಷ್ಟಿಯಿಂದ ವಿಭಿನ್ನ ಎನಿಸುತ್ತದೆ. ಈ ಹಾಡಿಗೆ ಟಕ್ಕರ್ ಕೊಡುವಂತಹ ಹಾಡು ಇನ್ನೂ ಕೂಡ ಬಂದಿಲ್ಲ ಎಂದೇ ಹೇಳಬಹುದು.

  ಬೆಳ್ಳಿಪರದೆಯ ಓಕುಳಿಯಾಟ

ಚುನಾವಣೆಯ ಫಲಶ್ರುತಿ
ಚುನಾವಣೆಯ ಫಲಶ್ರುತಿ

ಚುನಾವಣೆಗಳು ಪಾಠ ಕಲಿಸುತ್ತವೆ ಎಂಬುದು ದಿಟವೇ. ಆದರೆ ಪ್ರತಿ ಸಾರಿ ಬೇರೆಯವೇ ಪಾಠಗಳನ್ನು ಕಲಿಸುತ್ತವೆಂಬುದೂ ದಿಟವೇ. ಯಾವುದೇ ತಂತ್ರಗಾರಿಕೆಗಳ ವಿನ್ಯಾಸವು ಸದಾಕಾಲ ನಿರೀಕ್ಷಿತ ಪರಿಣಾಮಗಳನ್ನು ನೀಡಲಾರದೆಂಬುದು ಹಲವು ಬಾರಿ ಪುರಾವೆಗೊಂಡಿದೆ. ಯಾವುದೊ ‘ಅಲೆ’ಗಳು ಪವಾಡವನ್ನೆಸಗಿಬಿಡುತ್ತದೆಂಬುದನ್ನು ಪೂರ್ಣ ನೆಚ್ಚುವಂತಿಲ್ಲವೆಂಬುದೂ ಹಲವು ಬಾರಿ ಸಾಬೀತಾಗಿದೆ....

ಹೋಳಿ ಹಬ್ಬ : ಎಲ್ಲ ಹಬ್ಬಗಳಂತೆ ಅಲ್ಲ ಈ ಹಬ್ಬ
ಹೋಳಿ ಹಬ್ಬ : ಎಲ್ಲ ಹಬ್ಬಗಳಂತೆ ಅಲ್ಲ ಈ ಹಬ್ಬ

ಪ್ರಣವಸ್ವರೂಪಿಯಾದ ಶಿವನನ್ನು ಹೊಂದಲು ನಮ್ಮ ಪ್ರಣಯದ ಆಸೆ ಆಕಾಂಕ್ಷೆಗಳ ಕಾಮಕಲ್ಮಶಗಳು ಮೊದಲು ಸುಟ್ಟುಹೋಗಬೇಕು. ಅದರ ಸಂಕೇತವೇ ಕಾಮದಹನ. ಇದು ನಿತ್ಯವೂ ನಮ್ಮ ಧರ್ಮ ಕರ್ಮಗಳ ಅನುಷ್ಠಾನದಲ್ಲಿ ನಮ್ಮ ವಿವೇಕೋದಯದಿಂದ ನಡೆಯಬೇಕಾಗಿದೆ. ಉತ್ಸವಗಳು, ಹಬ್ಬಗಳು ನಮ್ಮ ಧಾರ್ಮಿಕ ಮತ್ತು ಸಾಮಾಜಿಕ ಜೀವನದೊಂದಿಗೆ ಅವಿನಾಭಾವ...

ಹೋಳಿಹುಣ್ಣಿಮೆಗಿರಲಿ ನೈಸರ್ಗಿಕ ಬಣ್ಣದ ಮೆರುಗು
ಹೋಳಿಹುಣ್ಣಿಮೆಗಿರಲಿ ನೈಸರ್ಗಿಕ ಬಣ್ಣದ ಮೆರುಗು

–ಮಾಲತಿ ಹೆಗಡೆ ಮನೋರಮಾ ಅವರ ನೈಸರ್ಗಿಕ ಬಣ್ಣಗಳ ತಯಾರಿಕೆ ನಾಡಿನಲ್ಲಿಯೇ ಪರಿಸರಸ್ನೇಹಿಯಾದ ಒಂದು ಅನುಶೋಧನೆ. ಪರಿಸರಪ್ರಿಯರಿಗೆ ಹಿತವಾಗುವಂತೆ ಇವರು ತಯಾರಿಸುವ ಬಣ್ಣಗಳು ಚರ್ಮಕ್ಕೆ, ಬಟ್ಟೆಗೆ, ಮಣ್ಣಿಗೂ ಹಿತ. ಈ ಉದ್ಯಮ ಸಾಮಾಜಿಕ ಹಿತವನ್ನೂ, ಕುಟುಂಬಕ್ಕೆ ಆರ್ಥಿಕ ಸುಸ್ಥಿರತೆಯನ್ನೂ ನೀಡಿರುವುದಲ್ಲದೆ ಹಲವರಿಗೆ ಉದ್ಯೋಗಾವಕಾಶವನ್ನೂ...

ಲಟ್ಟಣಿಗೆಯವರ ‘ಲಠ್ ಮಾರ್ ಹೋಳಿ’!
ಲಟ್ಟಣಿಗೆಯವರ ‘ಲಠ್ ಮಾರ್ ಹೋಳಿ’!

“ಕೇಳ್ರೇ, ನಾವು ಈ ವಾರ ಶಿವಮೊಗ್ಗಕ್ಕೆ ಹೋಗ್ತಾ ಇದ್ವಿ. ದಾರಿಯಲ್ಲಿ ಒಂದಷ್ಟು ಹೆಣ್ಣುಮಕ್ಕಳು ಸೇರಿ ತಮ್ಮನ್ನು ಚುಡಾಯಿಸಿದ ಹುಡುಗನನ್ನು ಹಿಡಿದು ಬಡಿಯುತ್ತಾ ಇದ್ರು. ಈಗಿನ ಕಾಲದ ಹೆಣ್ಣುಮಕ್ಳು ನಮ್ಮ ಹಾಂಗಲ್ಲ ಕಣ್ರೆ” ಭಾನುವಾರ ಸಂಜೆಯ ನಮ್ಮ ಫ್ಲ್ಯಾಟಿನ ಹೆಂಗಸರ ಗುಂಪಿನ ಹರಟೆಯಲ್ಲಿ...

ಬೆಳ್ಳಿಪರದೆಯ ಓಕುಳಿಯಾಟ
ಬೆಳ್ಳಿಪರದೆಯ ಓಕುಳಿಯಾಟ

ಹೋಳಿಹಬ್ಬದ ಮೇಲೆ ಚಿತ್ರರಂಗಕ್ಕೆ ಮೊದಲಿನಿಂದಲೂ ಏನೊ ಒಂದು ತರಹದ ಪ್ರೀತಿ. ಈ ಹಬ್ಬದ ಸೀಕ್ವೆನ್ಸನ್ನು ಸಿನೆಮಾದಲ್ಲಿ ಹೇಗೆ ಬೇಕಾದರೂ ಬಳಸಬಹುದು. ಈ ಹಬ್ಬದ ಚಿತ್ರೀಕರಣವಿದೆ ಎಂದು ತಿಳಿದರೆ ನಿರ್ದೇಶಕರಿಗೆ ಉತ್ಸಾಹ, ಕ್ಯಾಮರಾಮನ್‍ಗೆ ರೋಮಾಂಚನ, ನಟ-ನಟಿಯರಿಗೆ ಪುಳಕ. ಈ ಹಬ್ಬವೇ ಹೋಳಿ. ಕಪ್ಪು-ಬಿಳುಪು...

ಚುನಾವಣೆಯ ಫಲಶ್ರುತಿ
ಚುನಾವಣೆಯ ಫಲಶ್ರುತಿ

ಚುನಾವಣೆಗಳು ಪಾಠ ಕಲಿಸುತ್ತವೆ ಎಂಬುದು ದಿಟವೇ. ಆದರೆ ಪ್ರತಿ ಸಾರಿ ಬೇರೆಯವೇ ಪಾಠಗಳನ್ನು ಕಲಿಸುತ್ತವೆಂಬುದೂ ದಿಟವೇ. ಯಾವುದೇ ತಂತ್ರಗಾರಿಕೆಗಳ ವಿನ್ಯಾಸವು ಸದಾಕಾಲ ನಿರೀಕ್ಷಿತ ಪರಿಣಾಮಗಳನ್ನು ನೀಡಲಾರದೆಂಬುದು ಹಲವು ಬಾರಿ ಪುರಾವೆಗೊಂಡಿದೆ. ಯಾವುದೊ ‘ಅಲೆ’ಗಳು ಪವಾಡವನ್ನೆಸಗಿಬಿಡುತ್ತದೆಂಬುದನ್ನು ಪೂರ್ಣ ನೆಚ್ಚುವಂತಿಲ್ಲವೆಂಬುದೂ ಹಲವು ಬಾರಿ ಸಾಬೀತಾಗಿದೆ....

ಹೋಳಿ ಹಬ್ಬ : ಎಲ್ಲ ಹಬ್ಬಗಳಂತೆ ಅಲ್ಲ ಈ ಹಬ್ಬ
ಹೋಳಿ ಹಬ್ಬ : ಎಲ್ಲ ಹಬ್ಬಗಳಂತೆ ಅಲ್ಲ ಈ ಹಬ್ಬ

ಪ್ರಣವಸ್ವರೂಪಿಯಾದ ಶಿವನನ್ನು ಹೊಂದಲು ನಮ್ಮ ಪ್ರಣಯದ ಆಸೆ ಆಕಾಂಕ್ಷೆಗಳ ಕಾಮಕಲ್ಮಶಗಳು ಮೊದಲು ಸುಟ್ಟುಹೋಗಬೇಕು. ಅದರ ಸಂಕೇತವೇ ಕಾಮದಹನ. ಇದು ನಿತ್ಯವೂ ನಮ್ಮ ಧರ್ಮ ಕರ್ಮಗಳ ಅನುಷ್ಠಾನದಲ್ಲಿ ನಮ್ಮ ವಿವೇಕೋದಯದಿಂದ ನಡೆಯಬೇಕಾಗಿದೆ. ಉತ್ಸವಗಳು, ಹಬ್ಬಗಳು ನಮ್ಮ ಧಾರ್ಮಿಕ ಮತ್ತು ಸಾಮಾಜಿಕ ಜೀವನದೊಂದಿಗೆ ಅವಿನಾಭಾವ...

ಹೋಳಿಹುಣ್ಣಿಮೆಗಿರಲಿ ನೈಸರ್ಗಿಕ ಬಣ್ಣದ ಮೆರುಗು
ಹೋಳಿಹುಣ್ಣಿಮೆಗಿರಲಿ ನೈಸರ್ಗಿಕ ಬಣ್ಣದ ಮೆರುಗು

–ಮಾಲತಿ ಹೆಗಡೆ ಮನೋರಮಾ ಅವರ ನೈಸರ್ಗಿಕ ಬಣ್ಣಗಳ ತಯಾರಿಕೆ ನಾಡಿನಲ್ಲಿಯೇ ಪರಿಸರಸ್ನೇಹಿಯಾದ ಒಂದು ಅನುಶೋಧನೆ. ಪರಿಸರಪ್ರಿಯರಿಗೆ ಹಿತವಾಗುವಂತೆ ಇವರು ತಯಾರಿಸುವ ಬಣ್ಣಗಳು ಚರ್ಮಕ್ಕೆ, ಬಟ್ಟೆಗೆ, ಮಣ್ಣಿಗೂ ಹಿತ. ಈ ಉದ್ಯಮ ಸಾಮಾಜಿಕ ಹಿತವನ್ನೂ, ಕುಟುಂಬಕ್ಕೆ ಆರ್ಥಿಕ ಸುಸ್ಥಿರತೆಯನ್ನೂ ನೀಡಿರುವುದಲ್ಲದೆ ಹಲವರಿಗೆ ಉದ್ಯೋಗಾವಕಾಶವನ್ನೂ...

ಲಟ್ಟಣಿಗೆಯವರ ‘ಲಠ್ ಮಾರ್ ಹೋಳಿ’!
ಲಟ್ಟಣಿಗೆಯವರ ‘ಲಠ್ ಮಾರ್ ಹೋಳಿ’!

“ಕೇಳ್ರೇ, ನಾವು ಈ ವಾರ ಶಿವಮೊಗ್ಗಕ್ಕೆ ಹೋಗ್ತಾ ಇದ್ವಿ. ದಾರಿಯಲ್ಲಿ ಒಂದಷ್ಟು ಹೆಣ್ಣುಮಕ್ಕಳು ಸೇರಿ ತಮ್ಮನ್ನು ಚುಡಾಯಿಸಿದ ಹುಡುಗನನ್ನು ಹಿಡಿದು ಬಡಿಯುತ್ತಾ ಇದ್ರು. ಈಗಿನ ಕಾಲದ ಹೆಣ್ಣುಮಕ್ಳು ನಮ್ಮ ಹಾಂಗಲ್ಲ ಕಣ್ರೆ” ಭಾನುವಾರ ಸಂಜೆಯ ನಮ್ಮ ಫ್ಲ್ಯಾಟಿನ ಹೆಂಗಸರ ಗುಂಪಿನ ಹರಟೆಯಲ್ಲಿ...

ಬೆಳ್ಳಿಪರದೆಯ ಓಕುಳಿಯಾಟ
ಬೆಳ್ಳಿಪರದೆಯ ಓಕುಳಿಯಾಟ

ಹೋಳಿಹಬ್ಬದ ಮೇಲೆ ಚಿತ್ರರಂಗಕ್ಕೆ ಮೊದಲಿನಿಂದಲೂ ಏನೊ ಒಂದು ತರಹದ ಪ್ರೀತಿ. ಈ ಹಬ್ಬದ ಸೀಕ್ವೆನ್ಸನ್ನು ಸಿನೆಮಾದಲ್ಲಿ ಹೇಗೆ ಬೇಕಾದರೂ ಬಳಸಬಹುದು. ಈ ಹಬ್ಬದ ಚಿತ್ರೀಕರಣವಿದೆ ಎಂದು ತಿಳಿದರೆ ನಿರ್ದೇಶಕರಿಗೆ ಉತ್ಸಾಹ, ಕ್ಯಾಮರಾಮನ್‍ಗೆ ರೋಮಾಂಚನ, ನಟ-ನಟಿಯರಿಗೆ ಪುಳಕ. ಈ ಹಬ್ಬವೇ ಹೋಳಿ. ಕಪ್ಪು-ಬಿಳುಪು...

ಅಜ್ಜಿಮನೆಯೆಂಬ ಅಮರಾವತಿ!
ಅಜ್ಜಿಮನೆಯೆಂಬ ಅಮರಾವತಿ!

ಅಜ್ಜಿಯಿಂದ, ಅಜ್ಜಿಮನೆಯಿಂದ ಇಡೀ ಜೀವನಕ್ಕೆ ಬೇಕಾಗುವ ಹಲವು ಪಾಠಗಳನ್ನು ನೋಡಿ ನೋಡಿಯೇ ಕಲಿತೆವು. ಬೋಧನಾ ಪಾಠಕ್ಕಿಂತ, ಅನುಭವಿಸುವ ಪಾಠಗಳು, ಹಿರಿಯರು ಹಾಕಿಕೊಟ್ಟ ಮೌಲ್ಯಗಳ ಅನುಕರಣೆ, ಅನುಸರಣೆಯೇ ನಮ್ಮ ಬಾಳಿಗೆ ಸ್ಪಷ್ಟಮಾರ್ಗ ರೂಪಿಸಿವೆ. ‘ಆ ಕಾಲವೊಂದಿತ್ತು.. ದಿವ್ಯ ತಾನಾಗಿತ್ತು… ಅದು ಬಾಲ್ಯವಾಗಿತ್ತು!’ –...

ಹದವಾದ ಮಣ್ಣು ಹಸನಾದ ಬದುಕು
ಹದವಾದ ಮಣ್ಣು ಹಸನಾದ ಬದುಕು

ಅರಳೀಕಟ್ಟೆಗೆ ಕುಳಿತ ಮಲ್ಲೇಶಜ್ಜ ಹಿಗ್ಗಾಮುಗ್ಗಾ ಬೈಯದಿದ್ದರೆ ಈವತ್ತಿಗೂ ಹಮಾಲಿ ಕೆಲಸವನ್ನೇ ತಾನು ಮಾಡಕೊಂತಿರ್ತಿದ್ನೇನೋ! ‘ನಾ ಎಷ್ಟೇ ಕಟುಕಿ ಮಾತಾಡಲಿ ಸಹಿಸ್ಕೊಂಡು ತ್ವಾಟಾ ಮಾಡಿದಾಕಿ ಈಕಿ’ ಎಂಬ ಹೆಮ್ಮೆಯಿಂದ ಹೆಂಡತಿಯನ್ನು ಮತ್ತೆ ಮತ್ತೆ ನೋಡಿದ ಮಾದಪ್ಪ. ಮಂಜೀಹಾಳದ ಹದಗೆಟ್ಟ ರಸ್ತೆಯ ಎರಡೂ ಕಡೆ...

ಭ್ರಮೆ
ಭ್ರಮೆ

ಶೀಲಾ, ಲತಾ, ರಶ್ಮಿ ಮತ್ತು ನಾನು ಒಳ್ಳೆಯ ಸ್ನೇಹಿತೆಯರು. ಆಗಾಗ ಒಟ್ಟಿಗೆ ಸೇರಿ ಮಾತನಾಡುತ್ತಿದ್ದೆವು. ನಾವು ಮೂವರು ವಾಚಾಳಿಗಳಾದರೆ ಶೀಲಾ ನಮ್ಮಂತಲ್ಲ. ಮೌನವನ್ನು ಅಭಿವ್ಯಕ್ತಿಸುವವಳು. ಒಳ್ಳೆಯ ಬರಹಗಾರ್ತಿಯಾದ ಅವಳು ತನ್ನ ಅನೇಕ ಕಥೆಗಳಿಗೆ ಪ್ರಶಸ್ತಿಗಳನ್ನು ಕೂಡ ಪಡೆದಂಥವಳು. ತಾನು ಬರೆದ ಅನೇಕ...

ತ್ರಿಕೂಟ 4. ಗೌತಮ
ತ್ರಿಕೂಟ 4. ಗೌತಮ

ಮುದ್ಗಲಾಶ್ರಮಕ್ಕೆ ತಲಪುವವರೆಗೂ ನನಗಿದ್ದ ಉದ್ದೇಶ ಒಬ್ಬಳು ಸಂಸ್ಕಾರವಂತೆಯಾದ ಹೆಣ್ಣನ್ನು ಪತ್ನಿಯಾಗಿ ಪಡೆಯುವುದು ಮಾತ್ರ. ಅವಳು ಮುದ್ಗಲಮುನಿಯ ಮಗಳು ಎಂಬುದು ಋಷಿತ್ವಕ್ಕೆ ಪ್ರಿಯವೆನಿಸಿತ್ತು ಅಷ್ಟೇ. ಅದರಿಂದಾಚೆಗೆ ನಾನು ಏನನ್ನೂ ಯೋಚಿಸಿರಲಿಲ್ಲ. ನಮ್ಮಂತಹ ಆಶ್ರಮವಾಸಿಗಳ ಜೀವನದಲ್ಲಿ ಭವಿತವ್ಯದ ಕುರಿತು ಕನಸುಗಳು ಮೂಡುವುದೂ ಕಡಮೆಯಷ್ಟೆ? ಹಾಗಾಗಿ...

ಶಕುಂತಲೆ ನಮ್ಮ ಮನೆಯಲ್ಲಿ ಹುಟ್ಟಲಿ!
ಶಕುಂತಲೆ ನಮ್ಮ ಮನೆಯಲ್ಲಿ ಹುಟ್ಟಲಿ!

–ಪ್ರೊ. ಜಿ.ಎಚ್. ಹನ್ನೆರಡುಮಠ ನೆನಪಿದೆಯಾ ಆ ನಮ್ಮ ಹಳ್ಳಿಯ ಹಳ್ಳ-ಕೊಳ್ಳ-ಹಳವು-ಕೊನ್ನಾರುಗಳ ಹಸಿರು ಕಾಡು? ನಮ್ಮ ಅಜ್ಜಿ-ಅಮ್ಮ-ಮುತ್ತಜ್ಜಿ ಹರೆಯದವರಾಗಿದ್ದಾಗ ಎಲ್ಲೆಂದರಲ್ಲಿ ಹುಲುಸಾಗಿ ಹುಚ್ಚೆದ್ದು ಬೆಳೆದ ಹೊಲಗಳೇ ತಪೋವನಗಳಾಗಿದ್ದವು; ಹೊಲದಲ್ಲಿ ಹುಲುಸಾಗಿ ಬೆಳೆದ ಕರ್ಕಿ-ಕಣಗಿಲೆಯೇ ಲಿಂಗಾರ್ಚನೆಯ ಪತ್ರಪುಷ್ಪವಾಗಿದ್ದವು. ಚೆಲ್ಲುಲ್ಲಿಗೋ ಚೆಲ್ಲಾಟ ಆ ಗಿಡ-ಮರ ಗುಲ್ಮಗಳಲ್ಲಿ...

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : utthana1965@gmail.com

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ