ತುಂಬಾ ದೂರ ನಡೆದುಕೊಂಡೇ ಹೋಗಲು ಇದ್ದಾಗ ದಾರಿ ಖರ್ಚಿಗೆ ಅಂತ ಏನಾದರೂ ಜೊತೆಗಿರಬೇಕು ಎಂಬೊಂದು ರೂಢಿಯಿದೆ. ಹರಟೆ ಹೊಡೆಯುತ್ತಾ ಸಾಗಲೊಬ್ಬ ಸಹಪಯಣಿಗ, ಮತ್ತೆ ಮತ್ತೆ ಗುನುಗುನಿಸಲು ಯಾವುದೋ ಹಾಡಿನ ಜನಪ್ರಿಯ ಸಾಲುಗಳು, ನಾಟಕ ಇಲ್ಲವೇ ಯಕ್ಷಗಾನದ ಪ್ರಸಿದ್ಧ ಡೈಲಾಗ್ ಜೊತೆಯಾದರೆ ಅದೆಷ್ಟೇ ದೂರದ ದಾರಿಯಾದರೂ ಸಾಗಿದ್ದೇ ಗೊತ್ತಾಗುವುದಿಲ್ಲ. ಕೆಲವರಂತೂ ಅವನ್ನು ಹೇಳುತ್ತಾ ತಕ್ಕ ಹಾವಭಾವ, ಸಣ್ಣಗೆ ಕೈ ಸನ್ನೆಯನ್ನೂ ಮಾಡುತ್ತಾ ನಡೆಯುವುದಿದೆ. ಇಳಿವಯಸ್ಸಿನಲ್ಲಿ ನನ್ನಜ್ಜನಿಗೆ ಒಂದು ಅಭ್ಯಾಸವಿತ್ತು. ಒಬ್ಬರೇ ಎಲ್ಲಿಯಾದರೂ ಹೋಗುವಾಗಲೂ ತನ್ನಷ್ಟಕ್ಕೆ ತಾನೇ ಮಾತನಾಡಿಕೊಂಡು ಸಾಗುವುದು. ಕೆಲವು ಸಂದರ್ಭಗಳಲ್ಲಿ ಚಿಕ್ಕ ಮಕ್ಕಳನ್ನು ಜೊತೆಗೆ ಕರೆದುಕೊಂಡು ಹೋಗಲಿದ್ದಾಗ ಅವರಿಗೆ ದಾರಿ ಖರ್ಚಿಗೆಂದು ಒಂದೆರಡು ಪೊಟ್ಟಣ ಮಂಡಕ್ಕಿ, ಹುರಿಗಡಲೆ, ನೆಲಗಡಲೆಯನ್ನೋ ಕೊಡಿಸುತ್ತಿದ್ದರು. ಮಕ್ಕಳು ಇವನ್ನು ಮೆಲ್ಲುತ್ತಾ ಹೆಜ್ಜೆ ಹಾಕಿದರೆ, ಹಿರಿಯರು ಅವರ ಆಯ್ಕೆಯ – ಮೇಲೆ ತಿಳಿಸಿದ ಏನನ್ನಾದರೂ ದಾರಿ ಖರ್ಚಿಗೆಂದು ಬಳಸಿಕೊಳ್ಳುತ್ತಿದ್ದರು. ಹೀಗೆ ಫರ್ಲಾಂಗುಗಟ್ಟಲೆ ನಡೆದದ್ದೇ ತಿಳಿಯುತ್ತಿರಲಿಲ್ಲ.
ಸರ್ ಈ ಅಡ್ರೆಸ್ ಎಲ್ ಬರುತ್ತೆ ಗೊತ್ತಾ?”
ಪುಟ್ಟ ಚೀಟಿಯೊಂದನ್ನು ಮುಂದಕ್ಕೆ ಚಾಚಿ ಅಸಹಾಯಕ ದನಿಯಲ್ಲಿ ಕೇಳಿದ ಆ ಮಧ್ಯ ವಯಸ್ಕ ವ್ಯಕ್ತಿಯ ಮುಖದಲ್ಲಿ ಆಯಾಸವಿತ್ತು. ತಾನು ತಲಪಬೇಕಾಗಿದ್ದ ಸ್ಥಳದ ದಾರಿ ಹುಡುಕುತ್ತಾ ಅವರು ಅದಾಗಲೇ ಒಂದೆರಡು ಕಿಲೋಮೀಟರ್ ನಡೆದುಬಿಟ್ಟಿರಬೇಕು. ಆ ಚೀಟಿಯಲ್ಲಿದ್ದ ಸ್ಥಳದ ಸರಿಯಾದ ದಾರಿ ನನಗೂ ಅಷ್ಟಾಗಿ ಗೊತ್ತಿರಲಿಲ್ಲ. ಆದರೂ ಈ ಮಹಾನಗರಗಳಲ್ಲಿ ದಾರಿ ಹುಡುಕುವ ಪಡಿಪಾಟಲು ಗೊತ್ತಿದ್ದ ನಾನು, ಚಕ್ಕನೇ ಮೊಬೈಲ್ ಹೊರತೆಗೆದು ಆ ಜಾಗವನ್ನು ಗೂಗಲ್ ಮ್ಯಾಪ್ನಲ್ಲಿ ಹುಡುಕಿ, ಅವರು ಸಾಗಬೇಕಾದ ದಾರಿ ತಿಳಿಸಿಕೊಟ್ಟೆ. ಎಲ್ಲಿಂದ ನಡೆದುಕೊಂಡು ಬಂದಿದ್ದರೋ ಅಲ್ಲೇ ಸಮೀಪದಲ್ಲೇ ಇತ್ತು ಅವರು ತಲಪಬೇಕಾಗಿದ್ದ ಸ್ಥಳ. ನನಗೇ ಅಪರಿಚಿತವಾಗಿದ್ದ ದಾರಿಯನ್ನು, ಆಧುನಿಕ ತಂತ್ರಜ್ಞಾನದ ನೆರವಿನಿಂದ ಹುಡುಕಿ ತಿಳಿಸಿದ್ದು ನನ್ನಲ್ಲಿ ಒಂದು ಸಣ್ಣ ಸಂತೃಪ್ತಿಯ ಭಾವವನ್ನು ಮೂಡಿಸಿತ್ತು. ಈ ಮೊದಲಿನವರು ತಪ್ಪಾದ ದಾರಿ ತೋರಿಸಿದ ಕಾರಣಕ್ಕೆ ಅಷ್ಟೊಂದು ನಡೆಯುವಂತಾಗಿತ್ತು. ಆ ಕಹಿ ಅನುಭವದ ಕಾರಣಕ್ಕೋ ಏನೋ, ನಾನು ತಿಳಿಸಿಕೊಟ್ಟ ದಾರಿಯಲ್ಲಿ ಸಾಗುವ ಮುನ್ನ ತುಸು ಅನುಮಾನದ ದೃಷ್ಟಿಯಿಂದ ನನ್ನತ್ತ ಎರಡು ಮೂರು ಬಾರಿ ತಿರುಗಿ ನೋಡಿ, ಮುಖಭಾವದಲ್ಲೇ ಖಚಿತಪಡಿಸಿಕೊಂಡರು.
ಹತ್ತಾರು ಆಧುನಿಕ ಸೌಲಭ್ಯ, ತಂತ್ರಜ್ಞಾನದ ನೆರವುಗಳು ಇರುವ ಹೊರತಾಗಿಯೂ ನಿತ್ಯ ಹೀಗೆ ದಾರಿ ಹುಡುಕಿಕೊಂಡು ಅಲೆದಾಡುವ ಜನರು ಎಲ್ಲೇ ಹೋದರೂ ಕಣ್ಣಿಗೆ ಬೀಳುತ್ತಾರೆ. ಹೇಗಾದರೂ ಮಾಡಿ ದಾರಿಯನ್ನು ಒಲಿಸಿಕೊಳ್ಳುವ ಮೂಲಕ ಹೋಗಬೇಕಾದ ಸ್ಥಳವನ್ನು ಯಶಸ್ವಿಯಾಗಿ ತಲಪುವುದಷ್ಟೇ ಅಲ್ಲಿ ಮುಖ್ಯವಾಗುತ್ತದೆ. ಹೀಗೆ ಪ್ರಯತ್ನಿಸುವಾಗ, ಕೆಲವೊಮ್ಮೆ ತೀರಾ ಅಪರಿಚಿತ, ಕ್ಲಿಷ್ಟಕರ ಎಂದೆನಿಸಿದ ದಾರಿಯೇ ಸರಾಗವಾಗಿ ಮುನ್ನಡೆಸಿಕೊಂಡು ಸಾಗಿ ಗಮ್ಯದೆಡೆಗೆ ತಲಪಿಸಿಬಿಟ್ಟರೆ, ಸುಲಭ ಎಂದುಕೊಂಡಿದ್ದ ದಾರಿಯೂ ಒಮ್ಮೊಮ್ಮೆ ಎಲ್ಲೋ ಅರ್ಧಕ್ಕೆ ಕೈಕೊಟ್ಟು ನಮ್ಮ ದಿಕ್ಕು ತಪ್ಪಿಸಿಬಿಡುತ್ತದೆ. ಯಾವ ದಾರಿಯೂ ಒಂದೇ ಸಲಕ್ಕೆ ನಮಗೆ ಒಲಿದು ಬಿಡುವುದಿಲ್ಲ. ಅದರಲ್ಲೂ ಮಹಾನಗರಗಳಲ್ಲಂತೂ ಈ ದಾರಿಗಳು ಜನರನ್ನು ಇನ್ನಿಲ್ಲದಂತೆ ಸತಾಯಿಸುತ್ತವೆ. ಹೊಸ ಊರೊಂದರ ಅಂಗಳದಲ್ಲಿ ನಿಂತು, ಒಂದು ಅಂದಾಜಿನ ದಾರಿ ಹಿಡಿದು ಸಾಗಿ, ಮತ್ತೆ ಅದನ್ನು ಬದಲಿಸಿ, ಇನ್ನೆಲ್ಲೋ ಹುಡುಕಿ ಮಾಡುವ ಪ್ರಯತ್ನ ದಾರಿಯ ಸಖ್ಯ ದಕ್ಕಿಸಿಕೊಳ್ಳಲು ಅನಿವಾರ್ಯ. ಹಾಗೆ ನೋಡಿದರೆ ಯಾವುದೇ ಒಂದು ಊರು ಉಸಿರಾಡುವುದೇ ಹಬ್ಬಿ ಕುಳಿತಿರುವ ಇಂಥ ‘ದಾರಿ’ಗಳಿಂದ ಎಂದರೆ ತಪ್ಪಾಗಲಿಕ್ಕಿಲ್ಲ. ಇಲ್ಲಿ ದಾರಿಯೆಂದರೆ ಅದು ರಸ್ತೆ ಮಾರ್ಗವಲ್ಲ. ಕಾಲು ಸಂಕ, ಏರಿ, ಹಕ್ಕಲು, ಗದ್ದೆಯ ಅಂಚು, ಕೊರಕಲು ಓಣಿ ಇತ್ಯಾದಿಗಳನ್ನು ಬಳಸಿಕೊಂಡು ಸಾಗುವಂಥ ಹತ್ತಾರು ತಿರುವು, ಕವಲುಗಳನ್ನು ಹೊಂದಿರುವ ಕಾಲು ನಡಿಗೆಗಷ್ಟೇ ಸೂಕ್ತವಾದ ದಾರಿ.
ಊರೆಂದರೆ, ಜನರು ನಡೆದಾಡುವ ದಾರಿಗೆ ೩-೪ ಫೂಟು ಜಾಗ ಬಿಡದಿರುವ, ಇದ್ದ ದಾರಿಯನ್ನು ಮುಚ್ಚುವವರೇ ಇಲ್ಲವೇನೋ ಎಂಬಂಥ ಕಾಲಘಟ್ಟವೊಂದಿತ್ತು. ಹಾಗೆ ಯಾರಾದರೂ ಮಾಡಿದರೆ ಅಂಥವರನ್ನು ಕೇಡಿಗರು ಎಂದೇ ಬಗೆಯುತ್ತಿತ್ತು ಊರು. ಆಗೆಲ್ಲ ಕಾಲುದಾರಿ, ಒಳದಾರಿ, ಹೊರೆದಾರಿ (ತಲೆ ಮೇಲೆ ಹೊರೆಗಳನ್ನು ಹೊತ್ತು ಸಾಗಲು ಸೂಕ್ತವಾದ ಹಾದಿ), ಗಂಟಿದಾರಿ (ದನಕರುಗಳು ಸಾಗಲೆಂದೇ ಇರುವ ದಾರಿ), ಕವಲುದಾರಿ – ಹೀಗೆ ಹಲವು ಬಗೆಯ ದಾರಿಗಳು ಹಳ್ಳಿಯ ಒಡಲನ್ನು ಭದ್ರಗೊಳಿಸಿದ್ದವು. ಊರು ಬೆಳೆಯುತ್ತಾ ಹೋದಂತೆ ಒಂದಿದ್ದ ಮನೆ ನಾಲ್ಕಾಗಿ, ನೋಡನೋಡುತ್ತಿರುವಂತೆ ಆ ನಾಲ್ಕು ಹದಿನಾಲ್ಕಾಗುವ ವೇಗದಲ್ಲಿ ದೊಡ್ಡ ದೊಡ್ಡ ಕಟ್ಟಡಗಳು, ಮನೆಗಳು ಎದ್ದು ನಿಲ್ಲಲಾರಂಭಿಸಿದ ಪರಿಗೆ ಸುತ್ತಮುತ್ತಲ ದಾರಿಗಳೂ ತತ್ತರಿಸಿ ಹೋದವು. ಭದ್ರ ಬೇಲಿಯ ಸೈಟು, ಬಣ್ಣಬಣ್ಣದ ಮನೆ, ಎದ್ದು ನಿಂತ ಕಂಪೌಂಡು, ಕಾಂಕ್ರೀಟ್ ನೆಲಹಾಸು, ಹಚ್ಚಹಸುರಿನ ಬಿಗುವಾದ ತೋಟಗಳು ನುಂಗಿಹಾಕಿದ ದಾರಿಗಳ ಲೆಕ್ಕವೇ ಇಲ್ಲವೇನೋ.
ಖಾಲಿ ಬಿದ್ದಿರುತ್ತಿದ್ದ ಜಾಗಗಳು ಹೇರಳವಾಗಿರುತ್ತಿದ್ದ ಸಂದರ್ಭದಲ್ಲಿ ಆನೆ ನಡೆದದ್ದೇ ದಾರಿ ಎಂಬಂತೆ ಮನುಷ್ಯ ನಡೆದದ್ದೇ ದಾರಿಯಾಗಿತ್ತು. ಒಂದೊಂದು ಸ್ಥಳಕ್ಕೂ ನಾಲ್ಕಾರು ಹಾದಿಗಳು. ಯಾವ ದಾರಿ ಹಿಡಿಯಬೇಕು ಎನ್ನುವುದು ಸಾಗುವವನ ಸ್ವಾತಂತ್ರ್ಯ. ಆದಾಗ್ಯೂ ಅದರಲ್ಲೇ ಸಾಗಬೇಕೆಂಬ ಕಡ್ಡಾಯವಿಲ್ಲ. ಈಗಲೋ ಅವೆಲ್ಲ ಮರೆಯಾಗಿ ಎಲ್ಲೋ ಒಂದೆರಡು ಉಳಿದುಕೊಂಡಿದ್ದರೇ ಹೆಚ್ಚು. ಅದೂ ಸೊರಗಿ, ಸವಕಲಾಗಿ ಇನ್ನೇನು ಮೂಲೆ ಹಿಡಿದುಬಿಡುತ್ತದೇನೋ ಎಂಬಂತಿರುತ್ತದೆ. ಆದರೂ ಆ ನಿಶ್ಚಿತ ದಾರಿಯಲ್ಲೇ ಹೋಗಬೇಕು. ಅದು ಬಿಟ್ಟು ಬಿಡುಬೀಸಾಗಿ ಯಾರದೋ ಮನೆಯ ಅಂಗಳ, ತೋಟದ ಮೂಲಕವೆಲ್ಲ ನಡದರೆ “ದಾರಿ ಇಲ್ವಾ, ಅದರಲ್ಲೇ ನಡೆಯಲಿಕ್ಕಾಗುವುದಿಲ್ವಾ? ಎಲ್ಲೆಂದರಲ್ಲಿ ನುಗ್ಗುವುದೇಕೆ?” ಎಂದು ಮುಖಕ್ಕೆ ಮಂಗಳಾರತಿ ಎತ್ತುತ್ತಾರೆ.
ಬರುಬರುತ್ತಾ ದಾರಿಯ ವಿಷಯವೂ ಸಂಘರ್ಷ, ಹಣಾಹಣಿಯ ಸಂಗತಿಯಾಗಿ ದಾರಿಯೂ ಕೂಡಾ ವ್ಯಾಜ್ಯಗಳ ಹುಟ್ಟಿಗೆ ಕಾರಣವಾಯಿತು. ಅದು ಪೊಲೀಸು, ಕಾನೂನು, ಕಟ್ಲೆ, ನ್ಯೂಸ್ ಆಗುವವರೆಗೂ ಮುಂದುವರಿಯಿತು. ಹಳ್ಳಿಗಳಲ್ಲೇ ಹೆಚ್ಚಾಗಿರುತ್ತಿದ್ದ ಇಂಥ ಸಮಸ್ಯೆ ಉದ್ಭವಿಸಿದಾಗ ಅಲ್ಲಿನ ಸ್ಥಳೀಯ ಮುಖಂಡನೋ, ಬಲಾಢ್ಯ ವ್ಯಕ್ತಿಯೋ ಅಥವಾ ಸ್ವಘೋಷಿತ ಮುಂದಾಳುಗಳೋ ಪಂಚಾಯಿತಿ ಸೇರಿಸಿ, ಏನೋ ಒಂದು ಮಾತುಕತೆ ಮಾಡಿ ಅಲ್ಲಲ್ಲೇ ಪರಿಹರಿಸುತ್ತಿದ್ದರು. ಕೆಲವು ಕಡೆಗಳಲ್ಲಿ ‘ದೇವರಿಗೆ ತಲೆ ಬಿಟ್ಟವರು’ ಅಂದರೆ ದೇವರ ದರ್ಶನ ಮಾಡುವ ಪಾತ್ರಿಗಳ ಹೆಗಲೇರುತ್ತಿತ್ತು ಈ ಜವಾಬ್ದಾರಿ. ಅವರ ಮಾತುಗಳೆಂದರೆ ಖುದ್ದು ದೇವರೇ ನುಡಿದಂತೆ ಎಂಬ ಧೋರಣೆಯಿದ್ದು ಆ ಬಗ್ಗೆ ತುಸು ಹೆಚ್ಚೇ ಭಕ್ತಿ-ಭಾವದ ಗೌರವಾದರ ಇರುತ್ತಾದ್ದರಿಂದ ಸಮಸ್ಯೆ ಸಲೀಸಾಗಿ ಪರಿಹರಿಸಲ್ಪಡುತ್ತದೆ ಎಂಬ ನಿರೀಕ್ಷೆ.
ದಾರಿಗೆ ಸಂಬಂಧಿಸಿದ ವ್ಯಾಜ್ಯ ಎಂದಾಗಲೆಲ್ಲ ನಮ್ಮೂರಲ್ಲಿ ನಡೆದ ಅದೊಂದು ಘಟನೆ ಯಾವಾಗಲೂ ನೆನಪಾಗುತ್ತದೆ.
ಜಾತಿ, ಹಣಬಲ ಹಾಗೂ ಜನಬಲಗಳಲ್ಲಿ ಪ್ರಬಲನಾಗಿದ್ದ ನಾಲ್ಕು ಜನಕ್ಕೆ ಬೇಕಾದವ ಎನಿಸಿಕೊಂಡಿದ್ದ ವ್ಯಕ್ತಿಯೊಬ್ಬ, ಅದಾವುದರಲ್ಲೂ ಸರಿಸಮನಾಗಿರದ ತನ್ನದೇ ಪಕ್ಕದ ಮನೆಯವರ ಮೇಲೆ ದಾರಿ ದಿಗ್ಬಂಧನದ ಮೂಲಕ ಹಗೆಯನ್ನು ಸಾರಿದ್ದ. ಅದೂ ಎಲ್ಲೋ ಒಂದೆರಡು ವರ್ಷಗಳ ಕಾಲವಲ್ಲ. ಬರೋಬ್ಬರಿ ೮-೧೦ ವರ್ಷಗಳಷ್ಟು ಆ ಪಕ್ಕದ ಮನೆಯವರಿಗೆ ಆತ ಕೊಟ್ಟ ಕಾಟ ಒಂದೆರಡಲ್ಲ. ಆ ಮನೆಯವರನ್ನು ಗೋಳುಹೊಯಿಸಲೆಂದೇ, ಆತ ಮಾಡಿದ ಕೃತ್ಯ ಅಷ್ಟಿಷ್ಟಲ್ಲ. ಆ ಮನೆಗೆ ಸರಿಯಾದ ದಾರಿಯೇ ಇಲ್ಲದಂತೆ ಮಾಡಿದ್ದ.
ಕೊನೆಗೆ ಆ ಮನೆಯ ಒಂದು ಪಾರ್ಶ್ವಕ್ಕಿದ್ದ ಸಣ್ಣ ತೋಟದ ಮೂಲಕ ಹಾದುಹೋಗುವ ಚಿಕ್ಕದಾದ ಕಿರಿದಾದ ಕಾಲುದಾರಿಯೊಂದು ಮಾತ್ರ ಉಳಿದಿತ್ತು. ಅದು ಬೇರೆಯವರ ತೋಟ. ಅದನ್ನೂ ಖರೀದಿಸುವ ಮೂಲಕ ಇದ್ದೊಂದು ಪುಟ್ಟ ದಾರಿಗೂ ಅಡ್ಡಲಾಗಿ ಮುಳ್ಳು ಜಡಿಯುವಲ್ಲಿ ಯಶಸ್ವಿಯಾದ. ಒಂದೋ ಅವರು ಇಡೀ ಬಯಲು ಸುತ್ತು ಹಾಕಿಕೊಂಡು ಓಡಾಡಬೇಕು, ಇಲ್ಲವೇ ಮನುಷ್ಯ ಮಾತ್ರರಿಂದ ನಡೆಯಲು ಸಾಧ್ಯವಾಗದ ಕೊರಕಲು ಕಣಿವೆಯಂತಿದ್ದ, ಬಲು ಇಕ್ಕಟ್ಟಾದ, ಹರಿತ ಕಲ್ಲುಗಳಿದ್ದ, ಹಳ್ಳ ದಿಣ್ಣೆಗಳಿಂದ ಕೂಡಿದ್ದ, ಮಳೆಗಾಲದಲ್ಲಿ ನೀರು ಧುಮ್ಮಿಕ್ಕುವ ಓಣಿಯಲ್ಲೇ ಓಡಾಡಬೇಕು. ೮-೧೦ ಅಡಿ ಆಳವಿದ್ದ ಆ ಓಣಿಯಲ್ಲಿ ನಡೆಯುವುದೆಂದರೆ ಯಾವುದೋ ಕಣಿವೆಯಲ್ಲಿ ಹೆಜ್ಜೆ ಹಾಕಿದಂತೆ ಭಾಸವಾಗುತ್ತಿತ್ತು. ಒಂದಿನಿತು ಎಚ್ಚರ ತಪ್ಪಿ ಹೆಜ್ಜೆ ಊರಿದರೂ ಅಲ್ಲಿದ್ದ ಹರಿತ ಕಲ್ಲುಗಳು ಪಾದದ ಚರ್ಮವನ್ನು ಸೀಳಿ ರಕ್ತ ಚಿಮ್ಮುವುದು ಖಚಿತ. ಅಂಥ ಕಚ್ಚಾತಿ ಕಚ್ಚಾ ಕಿರುದಾರಿಯಲ್ಲೇ ಮನೆಗೆ ಅಗತ್ಯವಿದ್ದ ಸಾಮಾನು ಸರಂಜಾಮು, ವಸ್ತುಗಳನ್ನು ಹೊತ್ತು ಸಾಗಿಸುವ ಮೂಲಕ ಬದುಕಿನ ಬಂಡಿಯನ್ನು ಮುನ್ನಡೆಸಿಕೊಂಡು ಹೋಗಬೇಕಾಯಿತು. ಆ ಮನೆಯ ಹೆಂಗಸು ‘ನಮಗೆ ದಾರಿಯಿಲ್ಲವಲ್ಲ’ ಎಂದು ಅಸಹಾಯಕತೆಯಿಂದ ಅವಡುಗಚ್ಚಿ ಕಣ್ಣೀರುಗೆರೆಯುತ್ತಿದ್ದರೆ ಒಂದೊಳ್ಳೆಯ ದಾರಿಯ ಪ್ರಾಮುಖ್ಯತೆಯೂ, ಅದಕ್ಕೂ ಅಡ್ಡಿಯಾಗುವ ಮನುಷ್ಯನ ಹೀನತನವೂ ಮನಸ್ಸನ್ನು ತಾಕುತ್ತಿದ್ದವು.
ದಾರಿಯ ಮುಂದೆ ಕೆಲವು ದೊಡ್ಡವರ ಸಣ್ಣತನ ಹೇಗೆಲ್ಲ ಬಟಾಬಯಲಾಗುತ್ತದಲ್ಲ! ಊರಿನ ಯಾವುದೋ ಒಂದು ಮುಖ್ಯ ದಾರಿಯನ್ನು ಸ್ವಲ್ಪ ವಿಸ್ತಾರಗೊಳಿಸುವ ಮಾತುಕತೆ ನಡೆಯುತ್ತಿತ್ತು. ಆ ಹಾದಿ ಯಾರ ಜಾಗದ ಮೂಲಕವೆಲ್ಲ ಹಾದುಹೋಗುತ್ತಿತ್ತೋ ಅವರು, ಹಾಗೆಯೇ ಊರ ಮಂದಿ ಸೇರಿದ್ದರು. ದಾರಿ ಹಾದುಹೋಗುವ ಜಾಗದ ಸಿರಿವಂತ ಮಾಲೀಕ ಮೂರು ಅಡಿಯ ಕೋಲೊಂದನ್ನು ಹಿಡಿದು ಮಾರ್ಕ್ ಮಾಡುತ್ತಾ, ‘ಈಗ ಯಾರೂ ಖಾಸಗಿ ಜಾಗದ ಮೂಲಕ ದಾರಿ ಕೊಡಲಾರರು. ನೋಡಿ ಇಷ್ಟರಲ್ಲೇ ಇರಬೇಕು ದಾರಿ. ಇದಕ್ಕಿಂತ ಒಂದೇ ಒಂದಂಗುಲ ಹೆಚ್ಚು ಜಾಗ ಹೋದರೂ ನಾ ಸುಮ್ಮನಿರಲಾರೆ’ ಎಂದು ಒಂದೇ ಸಮನೆ ಆರ್ಭಟಿಸುತ್ತಿದ್ದ. ಅಸಲಿಗೆ ಅದು ಕಾಲಾನುಕಾಲದಿಂದಲೂ ಇದ್ದ ದಾರಿಯೇ ಆಗಿತ್ತು. ಆದರೆ ಇನ್ನೊಮ್ಮೆ ಕಚ್ಚಾರಸ್ತೆ ಮಾಡುವ ಸಂದರ್ಭದಲ್ಲಿ ಅದೇ ವ್ಯಕ್ತಿ ‘ನೋಡಿ ಸಾಧ್ಯವಾದಷ್ಟೂ ಅಗಲಕ್ಕೆ ತೆಗೆದುಕೊಳ್ಳಿ, ಓ ಅಲ್ಲಿದೆಯಲ್ಲ ಆ ಮರ ಹೋಗಲಿ, ಇದರ ಗೆಲ್ಲನ್ನೂ ಕತ್ತರಿಸಿ ಬಿಡಿ, ಚರಂಡಿಗೂ ಸ್ವಲ್ಪ ಜಾಗ ಬಿಡಿ’ ಎನ್ನುತ್ತಾ ದಾರಿಯ ವಿಷಯದಲ್ಲಿ ಉದಾರವಾಗಿರಬೇಕು ಇಲ್ಲವಾದರೆ ಮುಂದೆ ಎಲ್ಲರಿಗೂ ಕಷ್ಟ ಎಂದು ಪುಕ್ಕಟೆ ಸಲಹೆ ನೀಡುತ್ತಿದ್ದ. ಅದು ಆತನ ಮನೆಗೆ ಹೋಗುವ ರಸ್ತೆ ಮತ್ತು ಅಕ್ಕಪಕ್ಕದ ಜಾಗ ಬೇರೆ ಯಾರದ್ದೋ ಅಮಾಯಕರದ್ದು. ಹಾಗಾಗಿ ಉದಾರತೆ ಮೆರೆಯುವುದು ಬಲು ಸುಲಭ!
‘ಹೋಯ್ ಎಲ್ಲಾ ಮನಿ ಹೊಕ್ಕಂಡ್ ಕೂಕಣಿ ಅಲ್ ಅಂವ ದಾರಿ ಕಟ್ತಿದ್ದ ಕಾಣಿ’ ಎಂದು ಪಕ್ಕದ ಮನೆಯ ಅಕ್ಕಣಿಯಜ್ಜಿ ಮಟ ಮಟ ಮಧ್ಯಾಹ್ನದ ಬಿಸಿಲನ್ನೂ ಮೀರಿಸುವ ಏರುದನಿಯಲ್ಲಿ ಕೂಗು ಹಾಕುತ್ತಾ ಬಂದಳೆಂದರೆ, ಮೇಲ್ಮನೆ ವೆಂಕಪ್ಪ ಯಾವುದೋ ದಾರಿಗೆ ಅಡ್ಡಲಾಗಿ ಬೇಲಿ ಹೆಣೆಯುತ್ತಿದ್ದಾನೆ ಎಂದೇ ಅರ್ಥ. ಆತ ಅದನ್ನು ಮಾಡುವುದೇ ಏರು ಬಿಸಿಲಿನ ಮಧ್ಯಾಹ್ನದ ಹೊತ್ತು, ಎಲ್ಲರೂ ಊಟ ಮಾಡಿ ತುಸು ವಿರಮಿಸುವ ಸಮಯದಲ್ಲಿ. ಆಗ ಜನರ ಓಡಾಟವೂ ವಿರಳವಾಗಿರುವುದರಿಂದ ಈತನ ಚಿಲ್ರೆ ಕೆಲಸ ನಿರಾತಂಕವಾಗಿ ನೆರವೇರುತ್ತದೆನ್ನುವ ಲೆಕ್ಕಾಚಾರ. ಆದಾಗ್ಯೂ ಹೀಗೆ ಯಾರಾದರೂ ಅದನ್ನು ಗಮನಿಸಿ ಎಚ್ಚರಿಸಿದರೆ ಎಲ್ಲರೂ ಏಕಾಏಕಿ ಕಿತ್ತೆದ್ದು ದೌಡಾಯಿಸಿಯೇ ಬಿಡುತ್ತಿದ್ದರು. ಜೋರು ಮಾತು, ಗಲಾಟೆ, ಹೊಯ್ ಕೈಯಿಂದ ಹಿಡಿದು, ದಾರಿಗೆ ಅಡ್ಡಲಾಗಿ ಹಾಕಿದ್ದನ್ನೆಲ್ಲಾ ಕಿತ್ತೆಸೆಯುವವರೆಗೆ, ಅಲ್ಲಿ ಸೇರಿದ್ದವರ ಆಕ್ರೋಶ ಬೇರೆ ಬೇರೆ ರೀತಿಯಲ್ಲಿ ಧುಮ್ಮಿಕ್ಕಿ ಹರಿಯುತ್ತಿತ್ತು. ಈ ನೆಪದಲ್ಲಿ ಉಳಿದೆಲ್ಲರೂ ತಮ್ಮ ತಮ್ಮ ವೈಯಕ್ತಿಕ ರಾಗ-ದ್ವೇಷಗಳನ್ನು ಮರೆತು ಆ ಕ್ಷಣಕ್ಕೆ ಒಂದಾಗುತ್ತಿದ್ದರು. ಆತ ಮಾಡುತ್ತಿದ್ದುದು ನೀಚ ಕೆಲಸವೇ ಆಗಿದ್ದರೂ, ಅದು ಆಗಾಗ ಊರವರ ಒಗ್ಗಟ್ಟನ್ನು ನಿರೂಪಿಸುತ್ತಿದುದಂತೂ ಸುಳ್ಳಲ್ಲ
ಎಷ್ಟೋ ವರ್ಷಗಳಿಂದ ಜನ ಓಡಾಡಿಕೊಂಡಿದ್ದ ದಾರಿಯೊಂದಕ್ಕೆ ಬೇಲಿ ಹಾಕುವುದೂ ಒಂದೇ, ಆ ಹಾದಿಯೊಂದಿಗಿನ ಅಸಂಖ್ಯಾತ ಜನರ ಒಡನಾಟ, ನೆನಪು, ಭಾವನೆಗಳ ಮೂಟೆಗೇ ಕೊಳ್ಳಿ ಇಡುವುದೂ ಒಂದೇ. ಹೀಗೆ ಅನಾಮತ್ತಾಗಿ ದಾರಿಯೊಂದರ ಕತ್ತು ಹಿಸುಕಿದರೆ, ಕೆಲಕಾಲ ಅನಾಥವಾಗಿ ಬೀಳುವ ದಾರಿಯನ್ನು ಪೊದೆ, ಹುಲ್ಲು ಕುರುಚಲು ಗಿಡಗಳು ಇಷ್ಟಿಷ್ಟೇ ಆವರಿಸಿಕೊಳ್ಳುತ್ತಾ ಹೋಗಿ ಕೊನೆಗೆ ಸಂಪೂರ್ಣವಾಗಿ ಆಪೋಶನ ತೆಗೆದುಕೊಳ್ಳುತ್ತವೆ. ಹೀಗೆ ಸಣ್ಣ ಕುರುಹೂ ಉಳಿಯದಂತೆ ದಾರಿಯೊಂದು ಸಂಪೂರ್ಣವಾಗಿ ನಾಮಾವಶೇಷ ಹೊಂದುತ್ತದೆ.
ಆತನಿಗೋ ಅದೊಂಥರ ಗೀಳೇ ಆಗಿ ಹೋಗಿತ್ತು. ಅವರ ಮನೆಯ ಜಾಗದ ಮೂಲಕ ಹಾದು ಹೋಗುವ ಹಾದಿಗಳನ್ನೆಲ್ಲಾ ಒಂದೊಂದಾಗಿ ಮುಚ್ಚುವುದು, ಇಲ್ಲವೇ ಸ್ಥಳಾಂತರಿಸುವುದು, ಸಾಮಾನ್ಯರಿಗೆ ದಾಟಿ ಹೋಗಲೇ ಆಗದಂಥ ತೊಡಮೆ ಹಾಕುವುದು, ದಾರಿಯ ಪಕ್ಕದಲ್ಲೇ ಹೊಂಡ ತೆಗೆದು ಗಿಡ ಹಾಕುವುದು ಇಂಥದ್ದೇ ಏನಾದರೂ ದಾರಿಗೆ ಅಡಚಣೆ ಉಂಟು ಮಾಡುವ ಕಿತಾಪತಿಗಳನ್ನು ಮಾಡುವುದರಲ್ಲಿ ಆತ ಬಲು ನಿಸ್ಸೀಮ. ಹಾಗೆಯೇ ಆತ ಅನ್ಯರ ಜಾಗದಲ್ಲಿರುತ್ತಿದ್ದ ದಾರಿ ಮುಚ್ಚಿಸಲೂ ಏನೇನೋ ಚಿತಾವಣೆ ಹೂಡುತ್ತಿದ್ದ. ಹಾಗಾಗಿ ಆತನ ತಲೆ ಕಂಡರೆ ಸಾಕು, ‘ಇನ್ ಎಲ್ ದಾರಿ ಕಟ್ಟುಕ್ ಹೊಂಚ್ ಹಾಕ್ತಿದ್ನೋ’ ಎಂದು ಗೊಣಗಿಕೊಳ್ಳುವ ಮೂಲಕ ಆತನ ಬಗೆಗಿನ ತಮ್ಮ ಅಸಮಧಾನವನ್ನು ಹೊರಹಾಕುತ್ತಿದ್ದರು. ಈಗ ಕಾಲ ಸಾಕಷ್ಟು ಸರಿದಿದೆ. ವೆಂಕಪ್ಪ ಬೇರೆಡೆ ಜಾಗ ಖರೀದಿಸಿ ಮನೆ ಕಟ್ಟಿದ. ಅದೇನೋ ಸಮಸ್ಯೆಯಾಗಿ, ಮನೆಗಿದ್ದ ಕಚ್ಚಾ ರಸ್ತೆಯೂ ಬಂದ್ ಆಗಿದೆ. ಇದ್ದೊಂದ ಕಾಲು ದಾರಿಯೂ ಸೊರಗಿದೆ, ಜೊತೆಗೆ ದಾರಿ ಕಟ್ಟುವ ಆತನ ಹುಮ್ಮಸ್ಸೂ ಕೂಡಾ.
ಹಿಂದಿನ ಕಾಲದ ಮನೆಗಳಲ್ಲಿ ಹೆಬ್ಬಾಗಿಲು, ಪೌಳಿ ಇರುತ್ತಿದ್ದವು. ಮನೆಯ ಮುಂಭಾಗದ ಅಂಗಳದ ಹೊರ ಅಂಚಿನಲ್ಲಿರುತ್ತಿದ್ದ ಈ ಹೆಬ್ಬಾಗಿಲಿನ ಎರಡೂ ಕಡೆಗಳಲ್ಲಿ ಪುಟ್ಟ ಪುಟ್ಟ ಜಗುಲಿಗಳೂ ಇರುತ್ತಿದ್ದವು. ಹತ್ತು ಹಲವು ಮೈಲು ನಡಿಗೆಯಲ್ಲಿಯೇ ಕ್ರಮಿಸುತ್ತಿದ್ದ ಆ ಕಾಲದಲ್ಲಿ ಇಂಥ ಜಗುಲಿಗಳು ದಾರಿಹೋಕರಿಗೆ ವಿಶ್ರಾಂತಿ ತಾಣ. ಅಲ್ಲೇ ಒಂದರೆಕ್ಷಣ ಕುಳಿತು, ಮನೆಯೊಡತಿಯಿಂದ ಕೇಳಿ ಪಡೆದು ಒಂದು ತಂಬಿಗೆ ನೀರು ಕುಡಿದು, ಎಲೆ-ಅಡಿಕೆ ಮೆಲ್ಲಿ, ಆ ಮನೆಯವರ ಜೊತೆಗೊಂದು ಲಘು ಪಟ್ಟಾಂಗ ಹೊಡೆದು ದಣಿವಾರಿಸಿಕೊಂಡು ಮತ್ತೆ ತಮ್ಮ ಪ್ರಯಾಣ ಮುಂದುವರಿಸುತ್ತಿದ್ದರು. ಇನ್ನು ನಡೆದು ನಡೆದು ರಾತ್ರಿಯಾದರೆ ಅಲ್ಲಿಯೇ ತಂಗಿ ಬೆಳಗ್ಗೆದ್ದು ಹೊರಡುವುದೂ ಇದೆ. ಅಲ್ಲಲ್ಲಿ ಇಂಥ ಮನೆಗಳೂ, ಉಪಚಾರಗಳೂ ಸಿಗುತ್ತವಾದ್ದರಿಂದ ಯಾವ ದಾರಿಯೂ ಕಷ್ಟವಲ್ಲ, ತೀರಾ ಅಪರಿಚಿತವೂ ಆಗಿರುತ್ತಿರಲಿಲ್ಲ. ಹೀಗೆ ಯಾವುದೇ ದಾರಿ ಹಿಡಿದು ಹೋದರೂ ಕನಿಷ್ಠ ಹತ್ತೆಂಟು ಪರಿಚಯಗಳಾದರೂ ಎದುರುಗೊಳ್ಳುತ್ತಿದ್ದವು.
ಯಾರು, ಯಾವಾಗ ಬಂದಾರು ಎನ್ನುವುದು ನಿಖರವಾಗಿ ಗೊತ್ತಿರುವಂಥ, ಮುನ್ಸೂಚನೆ ನೀಡಿಯೇ ಹೊರಡುವ ಮಾದರಿ ಇತ್ತೀಚಿನದ್ದು. ಆಗೆಲ್ಲ ಅದಕ್ಕೆ ಅವಕಾಶವಿರಲಿಲ್ಲ. ಹೀಗಾಗಿ ಮನೆಯವರ ದೃಷ್ಟಿ ಆಗಾಗ ದಾರಿಯತ್ತ ನಿರುಕಿಸುತ್ತಲೇ ಇರುತ್ತಿತ್ತು. ಹೊರಗಡೆಯೆಲ್ಲೋ ಆಡಿಕೊಂಡಿದ್ದ ಮಕ್ಕಳು, ದೂರದ ದಾರಿಯಲ್ಲಿ ಯಾರದ್ದಾದರೂ ತಲೆ ಕಂಡು `ಹೋ.. ಹೋ .. ಅಲ್ಲಿ ಯಾರೋ ಬರ್ತಿದ್ದಾರೆ’ ಎಂದು ಜೋರಾಗಿ ಕಿರುಚಿಕೊಂಡು ಮನೆಯೊಳಗೆ ಓಡುವ ಮೂಲಕ ಉಳಿದವರಿಗೆ ಸುದ್ದಿ ಮುಟ್ಟಿಸುತ್ತಿದ್ದವು. ಮನೆಯ ಹಿರಿಯರು ಲಗುಬಗೆಯಿಂದ ತೋಟದಂಚಿಗೆ ಹೋಗಿ ನಿಂತು ಬಗ್ಗಿ ನೋಡಿ ಬರುತ್ತಿರುವವರು ಯಾರೆನ್ನುವುದನ್ನು ಖಚಿತಪಡಿಸಿಕೊಂಡ ನಂತರವಷ್ಟೇ, ನೀರಿನ ತಂಬಿಗೆ, ಬೆಲ್ಲ, ಕವಳದ ಹರಿವಾಣ, ಬಿಡಿಸಿಟ್ಟ ಚಾಪೆ ಇತ್ಯಾದಿಗಳನ್ನು ಸಜ್ಜುಗೊಳಿಸಬೇಕೋ ಬೇಡವೋ ಎನ್ನುವುದು ನಿರ್ಧಾರವಾಗುತ್ತಿತ್ತು. ಇನ್ನು ‘ಯಾರೋ ಬಂದರು’ ಎಂಬ ಖುಷಿಯ ವ್ಯಾಲಿಡಿಟಿ ಕೂಡಾ ಅದನ್ನೇ ಅವಲಂಬಿಸಿರುತ್ತಿತ್ತು.
ನಮ್ಮಿಷ್ಟದ ಗಮ್ಯದಷ್ಟೇ ಅಲ್ಲಿಗೆ ತಲುಪುವ ದಾರಿಯೂ ಕೂಡಾ ನಮಗೆ ಬಲು ಆಪ್ತವೆನಿಸುತ್ತದೆ. ಆ ಹಾದಿಯಲ್ಲಿ ನಾಲ್ಕು ಹೆಜ್ಜೆ ಇಡುತ್ತಿದ್ದಂತೆ ನಡಿಗೆಗೊಂದು ವೇಗ ಪ್ರಾಪ್ತವಾಗುತ್ತದೆ. ಸುತ್ತಲ ಪರಿಸರದ ಯಾವುದೋ ತಿರುವು, ಇನ್ನಾವುದೋ ದಿಬ್ಬ, ಹಳೆಯ ಮರ, ಮತ್ಯಾವುದೋ ಕೆರೆದಂಡೆ ನಮ್ಮ ಮೆಚ್ಚಿನ ಗಮ್ಯಸ್ಥಾನ ಸನಿಹವಾಗುತ್ತಿರುವುದನ್ನು ಸೂಚಿಸುತ್ತಾ ಮನಸ್ಸಿಗೆ ಮುದ ನೀಡುತ್ತವೆ. ಇಂತಿಪ್ಪ ಆ ಹಾದಿಯೇ ತೀರಾ ದೂರವೆನಿಸಿದರೆ, ಮನಸ್ಸಿಗೆ ಆಹ್ಲಾದ ನೀಡುತ್ತಿಲ್ಲ ಎಂದಾದರೆ ನಾವು ಯಾವುದೋ ಅಹಿತಕರ ಬೆಳವಣಿಗೆಯ ಕಾರಣಕ್ಕೆ ಅಲ್ಲಿಗೆ ಹೋಗುತ್ತಿದ್ದೇವೆ ಎಂದೇ ಅರ್ಥ. ಯಾವುದೇ ದಾರಿಯಾದರೂ ಅಷ್ಟೇ, ಮೊದಲ ಬಾರಿಗೆ ದೀರ್ಘವೆನಿಸಿದ್ದು, ಮತ್ತೆ ಮತ್ತೆ ಅದರ ಮೂಲಕ ಸಾಗಿದಾಗ ತುಸು ಹತ್ತಿರ ಎಂಬ ಭಾವವನ್ನೇ ಮೂಡಿಸುತ್ತದೆ. ಅಂದರೆ ಆ ಮೂಲಕ ದಾರಿಯೂ ಕೂಡಾ ನಮ್ಮ ಮನಸ್ಸಿಗೆ ನಿಕಟವಾಗುತ್ತಾ ಹೋಗುತ್ತದೆ.
ತುಂಬಾ ದೂರ ನಡೆದುಕೊಂಡೇ ಹೋಗಲು ಇದ್ದಾಗ ದಾರಿ ಖರ್ಚಿಗೆ ಅಂತ ಏನಾದರೂ ಜೊತೆಗಿರಬೇಕು ಎಂಬೊಂದು ರೂಢಿಯಿದೆ. ಹರಟೆ ಹೊಡೆಯುತ್ತಾ ಸಾಗಲೊಬ್ಬ ಸಹಪಯಣಿಗ, ಮತ್ತೆ ಮತ್ತೆ ಗುನುಗುನಿಸಲು ಯಾವುದೋ ಹಾಡಿನ ಜನಪ್ರಿಯ ಸಾಲುಗಳು, ನಾಟಕ ಇಲ್ಲವೇ ಯಕ್ಷಗಾನದ ಪ್ರಸಿದ್ಧ ಡೈಲಾಗ್ ಜೊತೆಯಾದರೆ ಅದೆಷ್ಟೇ ದೂರದ ದಾರಿಯಾದರೂ ಸಾಗಿದ್ದೇ ಗೊತ್ತಾಗುವುದಿಲ್ಲ. ಕೆಲವರಂತೂ ಅವನ್ನು ಹೇಳುತ್ತಾ ತಕ್ಕ ಹಾವಭಾವ, ಸಣ್ಣಗೆ ಕೈ ಸನ್ನೆಯನ್ನೂ ಮಾಡುತ್ತಾ ನಡೆಯುವುದಿದೆ. ಇಳಿ ವಯಸ್ಸಿನಲ್ಲಿ ನನ್ನಜ್ಜನಿಗೆ ಒಂದು ಅಭ್ಯಾಸವಿತ್ತು. ಒಬ್ಬರೇ ಎಲ್ಲಿಯಾದರೂ ಹೋಗುವಾಗಲೂ ತನ್ನಷ್ಟಕ್ಕೆ ತಾನೇ ಮಾತನಾಡಿಕೊಂಡು ಸಾಗುವುದು. ಕೆಲವು ಸಂದರ್ಭಗಳಲ್ಲಿ ಚಿಕ್ಕ ಮಕ್ಕಳನ್ನು ಜೊತೆಗೆ ಕರೆದುಕೊಂಡು ಹೋಗಲಿದ್ದಾಗ ಅವರಿಗೆ ದಾರಿ ಖರ್ಚಿಗೆಂದು ಒಂದೆರಡು ಪೊಟ್ಟಣ ಮಂಡಕ್ಕಿ, ಹುರಿಗಡಲೆ, ನೆಲಗಡಲೆಯನ್ನೋ ಕೊಡಿಸುತ್ತಿದ್ದರು. ಮಕ್ಕಳು ಇವನ್ನು ಮೆಲ್ಲುತ್ತಾ ಹೆಜ್ಜೆ ಹಾಕಿದರೆ, ಹಿರಿಯರು ಅವರ ಆಯ್ಕೆಯ – ಮೇಲೆ ತಿಳಿಸಿದ ಏನನ್ನಾದರೂ ದಾರಿ ಖರ್ಚಿಗೆಂದು ಬಳಸಿಕೊಳ್ಳುತ್ತಿದ್ದರು. ಹೀಗೆ ಫರ್ಲಾಂಗುಗಟ್ಟಲೆ ನಡೆದದ್ದೇ ತಿಳಿಯುತ್ತಿರಲಿಲ್ಲ.
ಮೊನ್ನೆ ಮೊನ್ನೆ ಊರಿಗೆ ಹೋಗಿದ್ದೆ. ಬಸ್ಸಿನಿಂದಿಳಿದು ನಾವು ನಡೆದು ಹೋಗುತ್ತಿದ್ದ ನಮ್ಮೂರಿನ ದಾರಿ ತೀರಾ ಬಳಲಿ ಕೃಶವಾದಂತೆ ಕಂಡಿತು. ಅದು ಆ ದಾರಿಯಲ್ಲಿ ನಡೆಯುವವರ ಸಂಖ್ಯೆ ಕುಂಠಿತವಾದ್ದರಿಂದ ಉಂಟಾದ ವ್ಯಥೆಯ ಬಳಲಿಕೆ. ಸದಾ ಕೆಲಸ ಮಾಡಿಕೊಂಡಿದ್ದವರಿಗೆ ಏನೂ ಕೆಲಸ ನೀಡದೆ ಮೂಲೆಯಲ್ಲಿ ಕುಳ್ಳಿರಿಸಿದಾಗ ಹೇಗಾಗುತ್ತಲ್ಲ ಅದೇ ಪಾಡು ಈ ದಾರಿಯದ್ದೂ ಕೂಡಾ. ಅದಕ್ಕೆ ಪರ್ಯಾಯವಾಗಿ ಮಣ್ಣಿನ ರಸ್ತೆಯೊಂದು ಗಾಡಿಗಳ ಗಾಲಿ ತಿರುಗಿ ತಿರುಗಿ ತುಂಬಾ ದೃಢವಾಗಿ ಕಾಲೂರಿ ನಿಂತಂತೆ ಕಾಣಿಸುತ್ತಿದೆ. ಅಲ್ಲೀಗ ಜನರ, ವಾಹನಗಳ ಸಂಚಾರದ ನಿತ್ಯ ಕಲರವ. ಇಷ್ಟರಲ್ಲೇ ಆ ರಸ್ತೆಯೂ ಕೂಡಾ ಕಾಂಕ್ರೀಟ್ ಹೊದಿಕೆ ತೊಟ್ಟು ಇನ್ನಷ್ಟು ಕಳೆ ಕಳೆಯಾಗಲಿದೆಯಂತೆ. ಅಂದರೆ ಆ ಕಾಲು ದಾರಿ ಕಾಲಗರ್ಭದಲ್ಲಿ ಕಳೆದು ಹೋಗಲು ಹೆಚ್ಚು ಸಮಯ ಹಿಡಿಯಲಿಕ್ಕಿಲ್ಲ. ಈ ಬಗ್ಗೆ ಗೊತ್ತಿಲ್ಲದೇ ಅಲ್ಲಿ ಇಳಿದು ಹೆಜ್ಜೆ ಹಾಕ ಹೊರಟರೆ, `ದಾರಿ ಕಾಣದಾಗಿದೆ’ಎಂದು ಪರಿತಪಿಸಬೇಕಷ್ಟೇ!