ಕೆಲವರು ಭೂಮಿಗೆ ಭಾರವಾಗಿ ಬದುಕಿ, ಅವನು ಸತ್ತರೆ ಸಾಕಪ್ಪಾ ಎಂದು ಛೀಮಾರಿ ಹಾಕಿಸಿಕೊಂಡು ಸಾಯುತ್ತಾರೆ. ಕೆಲವರು ತಮ್ಮ ಬದುಕನ್ನು ಲೋಕಹಿತಕ್ಕಾಗಿ ಸವೆಸಿ ಅಮರರಾಗುತ್ತಾರೆ. ದುಷ್ಟರು ಬದುಕಿದ್ದಾಗಲೂ ನೆಮ್ಮದಿಯಿಂದ ತಾವೂ ಬದುಕುವುದಿಲ್ಲ, ಇತರರನ್ನೂ ಸುಖವಾಗಿ ಬಾಳಲು ಬಿಡುವುದಿಲ್ಲ. ಚಿನ್ನದಂತಹ ಲಂಕೆಯ ಅಧಿಪತಿ ರಾವಣ, ತಾನೂ ಅತೃಪ್ತನಾಗಿ ಬಾಳಿದ. ಆದರೆ ದೈವರಹಸ್ಯ ಶಕ್ತಿಯ ಮುಂದೆ ಎಲ್ಲರೂ ತಲೆಬಾಗಲೇಬೇಕು. ದುಷ್ಟ ಶಕ್ತಿಯ ನಾಶಕ್ಕಾಗಿ, ಶಿಷ್ಟಜನರುದ್ಧಾರಕ್ಕಾಗಿ ಭಗವಂತ ತಾನೇ ಅವತರಿಸಿ ಬರಬೇಕಾಯಿತು. ರಾವಣಸಂಹಾರಕ್ಕಾಗಿ ರಾಮನ ಅವತಾರವಾಯಿತು.
ಕೈಕೇಯಿ: ಕೇಕಯ ರಾಜನ ಮಗಳು. ರೂಪವತಿ, ವೀರರಮಣಿ. ದಶರಥ ರಾಜನಿಗೆ ಮೂರನೆಯ ಪತ್ನಿ. ದಶರಥ ಕೈಕೇಯಿಯ ರೂಪದ ಮೋಹಕ್ಕೆ ಬಲಿಯಾಗಿ, ತನ್ನ ಉಳಿದಿಬ್ಬರು ಪತ್ನಿಯರ ಕಡೆ ಉದಾಸೀನತೆಯನ್ನು ತೋರಲಾರಂಭಿಸಿದ. ಕೈಕೇಯಿಯ ಸೂತ್ರದ ಗೊಂಬೆ ಆಗಿಬಿಟ್ಟ. ದೇವಾಸುರರ ಯುದ್ಧ ನಡೆದಾಗ ಕೈಕೇಯಿ ಸಹ ದಶರಥನ ಜೊತೆಯಲ್ಲಿ ದೇವತೆಗಳ ಕಡೆ ಹೋರಾಡಲು ಹೋಗಿದ್ದಳು. ಆಗ ದಶರಥನ ರಥದ ಗಾಲಿಗೆ ತೊಂದರೆಯಾದಾಗ ಕೈಕೇಯಿ ಸಾಹಸಪಟ್ಟು ಆ ಸಮಯವನ್ನು ನಿರ್ವಹಿಸಿದಳು. ದಶರಥ ಅವಳ ಕಾರ್ಯಕ್ಕೆ ಮೆಚ್ಚಿ ಎರಡು ವರಗಳನ್ನು ಕೊಟ್ಟನು. ಸಮಯ ಬಂದಾಗ ಉಪಯೋಗಿಸಿಕೊಳ್ಳುತ್ತೇನೆಂದು ಕೈಕೇಯಿ ಹೇಳಿದಾಗ ಆಗಲಿ ಎಂದು ರಾಜ ಒಪ್ಪಿದ.
ಕೈಕೇಯಿಗೆ ಸವತಿಯರ ಮೇಲೆ ಮತ್ಸರವಿದ್ದಿತೇ ವಿನಾ ಮಕ್ಕಳನ್ನು ಕಂಡರೆ ಪ್ರೀತಿಸುತ್ತಿದ್ದಳು. ವಿಶೇಷವಾಗಿ ರಾಮನ ಗುಣಗಳು ಅವಳಿಗೆ ಅಚ್ಚುಮೆಚ್ಚಾಗಿದ್ದವು. ತನ್ನ ಮಗ ಭರತನಿಗಿಂತ ಒಂದು ಕೈ ಮೇಲಾಗಿಯೇ ಪ್ರೀತಿಸುತ್ತಿದ್ದಳು. ಮಂಥರೆ ಬಂದು ರಾಮನಿಗೆ ಯುವರಾಜ್ಯಾಭಿಷೇಕದ ವಿಷಯ ತಿಳಿಸಿದಾಗ ಅತ್ಯಂತ ಸಂಭ್ರಮಪಟ್ಟಳು. ಇಂತಹ ಪ್ರೀತಿಯ ಬದಲಿಗೆ ರಾಮನನ್ನು ವನವಾಸಕ್ಕೆ ಕಳುಹಿಸಬೇಕಾಗಿ ವರ ಬೇಡುವುದೆಂದರೆ ವಿಧಿಯ ವಿಪರ್ಯಾಸವಲ್ಲದೆ ಮತ್ತೇನೆಂದು ಹೇಳಬಹುದು. ಲೋಕಕಲ್ಯಾಣಕ್ಕಾಗಿ, ರಾವಣಸಂಹಾರಕ್ಕಾಗಿ ಯಾವ ರೀತಿಯಲ್ಲಿ ಸರಪಣಿಯ ಕೊಂಡಿಗಳು ಬೆಸೆದುಕೊಂಡಿವೆ ಎಂದು ಯೋಚಿಸಬೇಕಾದದ್ದೇ! ಮನುಷ್ಯನ ಮನಸ್ಸು ಚಂಚಲ. ಅದನ್ನು ತಡೆಹಿಡಿದವರೇ ಮಹಾತ್ಮರು. ಆದರೆ ಸತ್ಕಾರ್ಯಕ್ಕಾಗಿ ಅಂತಹವರೂ ಸಹ ಕೆಲವು ವೇಳೆ ಬಾಗಬೇಕಾಗುತ್ತದೆ.
ಮಂಥರೆಯ ಮಾತುಗಳು ಕೈಕೇಯಿಯ ಮನಸ್ಸಿನ ಮೇಲೆ ಪ್ರಭಾವ ಬೀರಿದವು. ಎಷ್ಟಾದರೂ ಸ್ವಸುಖವನ್ನು ಬಿಟ್ಟುಕೊಡಲು ಸಿದ್ಧಳಾಗಲಿಲ್ಲ. ಸಂಶಯಪಿಶಾಚಿ ತನ್ನ ಕೈಚಳಕವನ್ನು ತೋರಿಸಲಾರಂಭಿಸಿದೆ. ಬೆಳಗಾಗಿದೆ. ಮಹಾರಾಜನು ತನ್ನ ಅಂತಃಪುರಕ್ಕೆ ಬರುವುದಕ್ಕೆ ಮುಂಚೆಯೇ ಮಂಥರೆಯ ಮಾತಿನಂತೆ ಕೋಪಗೃಹವನ್ನು ಸೇರಿದಳು. ತನ್ನ ಸೌಭಾಗ್ಯವನ್ನು ತಾನೇ ಕಳೆದುಕೊಳ್ಳಲು ಸಿದ್ಧಳಾದಳೆನ್ನಬಹುದು. ದಶರಥನು ರಾಮನ ಪಟ್ಟಾಭಿಷೇಕದ ವಿಷಯವನ್ನು ಪ್ರೀತಿಯ ಮಡದಿಗೆ ತಿಳಿಸಲು ಅತ್ಯಂತ ಸಂಭ್ರಮದಿಂದ ಬರುತ್ತಿದ್ದಾನೆ. ಆದರೆ ಕೈಕೇಯಿಯ ಅರಮನೆಯ ಒಳಗೆ ಪ್ರವೇಶಿಸುತ್ತಿದ್ದಂತೆಯೇ ಏನೋ ಅಪಶಕುನದ ಅನುಭವವಾಯಿತು. ಕೈಕೇಯಿಯನ್ನು ಕರೆಯುತ್ತ ಬಂದಾಗ, ಅವಳು ಕೋಪಗೃಹದಲ್ಲಿರುವ ವಿಷಯ ತಿಳಿದು ಪೆಚ್ಚಾದ. ನೆಲದ ಮೇಲೆ ವಿಚಿತ್ರ ರೀತಿಯಲ್ಲಿ ಮಲಗಿರುವ ಹೆಂಡತಿಯನ್ನು ಕಂಡು ಮತ್ತಷ್ಟು ನೊಂದವನಾಗಿ, ಬಳಿಯೇ ಕುಳಿತು ಸಾಂತ್ವನದ ಮಾತುಗಳನ್ನಾಡತೊಡಗಿದ. ನೀನು ಕೇಳಿದ್ದನ್ನು ನಡೆಸಿಕೊಡುತ್ತೇನೆ ಎಂದು ಹೇಳಿದಾಗ, ಕ್ರೋಧಗೊಂಡ ನಾಗಿಣಿಯಂತೆ ಎದ್ದಳು! ದಶರಥನಿಂದ ಪುನಃ ಪುನಃ ವಚನ ಬದ್ಧತೆಯ ಮಾತುಗಳನ್ನು ಖಚಿತಪಡಿಸಿಕೊಂಡು ಹೇಳಿದಳು. ಹಿಂದೆ ಕೊಟ್ಟಿದ್ದ ವರಗಳನ್ನು ಈಗ ನಡೆಸಿಕೊಡು. ಒಂದನೆಯದು ಭರತನಿಗೆ ಯುವರಾಜ್ಯಾಭಿಷೇಕ. ಎರಡನೆಯದು ರಾಮನಿಗೆ ಹದಿನಾಲ್ಕು ವರ್ಷ ವನವಾಸ! ದಶರಥನಿಗೆ ಕುಳಿತಿದ್ದ ನೆಲವೇ ಕುಸಿದಂತಾಯಿತು. ಬಹಳ ರೀತಿಯಲ್ಲಿ ತಿಳಿಯಹೇಳಿದ. ಭರತನಿಗೆ ರಾಜ್ಯ ಕೊಡುತ್ತೇನೆ, ರಾಮನಿಗೆ ವನವಾಸ ಬೇಡ ಎಂದು ಬೇಡಿಕೊಂಡರೂ ಕೈಕೇಯಿ ತನ್ನ ಹಠವನ್ನು ಬಿಡದಿದ್ದಾಗ ಮೂರ್ಛೆ ಹೋಗಿಬಿಟ್ಟ.
ಇಲ್ಲಿಗೆ ಕೈಕೇಯಿಯ ಕಾರ್ಯ ಮುಗಿಯಿತೇ? ಇಲ್ಲ. ಮುಂದಿನ ಕೆಲಸವಾಗಬೇಕಾಗಿದೆ. ರಾಮನನ್ನು ಕರೆಯಕಳುಹಿಸಿದಳು. ರಾಮನು ರಾತ್ರಿಯೆಲ್ಲ ವ್ರತನಿಯಮ ಪಾಲಿಸುತ್ತ ಕಳೆದು, ತಾಯಿ ಕೌಸಲ್ಯೆಗೂ ಸುದ್ದಿ ತಿಳಿಸಲು ಬಂದಿದ್ದಾನೆ. ಚಿಕ್ಕಮ್ಮನ ಕರೆಗೆ ಗಮನಕೊಟ್ಟು ತಕ್ಷಣ ಅಲ್ಲಿಗೆ ಧಾವಿಸಿದ. ಅಲ್ಲಿಯ ದೃಶ್ಯವನ್ನು ಕಂಡು, ಕಾರಣವೇನೆಂದು ಕೇಳಿದಾಗ, ಕೈಕೇಯಿ ನಡೆದ ವಿಷಯವನ್ನೆಲ್ಲ ತಿಳಿಸುತ್ತಾಳೆ. ದಶರಥನಿಗೆ ಎಚ್ಚರವಿದ್ದಂತಿಲ್ಲ. ರಾಮ ಸ್ಥಿತಪ್ರಜ್ಞ! ಕೈಕೇಯಿಗೆ ನಮಸ್ಕರಿಸುತ್ತ, ನಾನು ತಂದೆಯ ಮಾತನ್ನು ನಡೆಸಿಕೊಡುತ್ತೇನೆ. ಭರತ ರಾಜ್ಯವನ್ನಾಳಲಿ. ನಾನು ಈಗಲೇ ವನವಾಸಕ್ಕೆ ಹೋಗಲು ಸಿದ್ಧನಾಗಿದ್ದೇನೆ ಎಂದು ಅಲ್ಲಿಂದ ಹೊರಟ.
ಕೈಕೇಯಿಯ ಪಾತ್ರ ಇನ್ನೂ ಸ್ವಲ್ಪ ಉಳಿದಿದೆ. ರಾಮ, ಸೀತೆ, ಲಕ್ಷ್ಮಣ ಮೂವರೂ ಅಯೋಧ್ಯೆಯಿಂದ ವನವಾಸಕ್ಕಾಗಿ ತೆರಳಿದರು ಎಂಬ ಸುದ್ದಿ ಬಂದ ಮೇಲೆ ಅವಳ ಮನಸ್ಸು ತಿಳಿಗೊಳ್ಳಲಾರಂಭಿಸಿತು. ಆದರೆ ಆಗಬಾರದ ಅನಾಹುತ ನಡೆದಿತ್ತು. ದಶರಥ ಪುತ್ರವಿಯೋಗದಿಂದ ಮರಣ ಹೊಂದಿದ! ಸೀತೆಯೂ ರಾಮನೊಡನೆ ಕಾಡಿಗೆ ಹೊರಟಿದ್ದು ದೈತ್ಯಸಂಹಾರಕ್ಕೆ ಮುನ್ಸೂಚನೆಯಂತಾಗಲಿಲ್ಲವೆ? ಕೈಕೇಯಿಯ ಪಾತ್ರ ರಾವಣಸಂಹಾರ ಕಾರ್ಯದಲ್ಲಿ ಹೇಗೆ ಬೆಸೆಯಿತೆಂಬುದನ್ನು ಅರಿಯಬಹುದು.
ಕೌಸಲ್ಯೆ: ರಾಮಾವತಾರಕ್ಕಾಗಿಯೇ ವಿಧಿನಿಯಮದಂತೆ ಕೋಸಲ ರಾಜನ ಮಗಳಾಗಿ ಜನಿಸಿ, ರಾವಣಸಂಹಾರಕ್ಕಾಗಿ ರಾಮನಂತಹ ಮಗನನ್ನು ಹೆತ್ತ ಮಹಾತಾಯಿ ಕೌಸಲ್ಯೆ. ಈಗ ರಾಮನು ವನವಾಸಕ್ಕೆ ಹೊರಟ ಸಮಯದಲ್ಲಿ ಲೋಕಕಲ್ಯಾಣಕ್ಕಾಗಿ ಆಶೀರ್ವದಿಸಿ ಕಳುಹಿಸಿದ ಮಹಾಮಾತೆ. ಕೈಕೇಯಿಯ ಮೂಲಕ ದಶರಥನ ವರಗಳ ವಿಚಾರ ತಿಳಿದ ಬಳಿಕ ರಾಮನು ಪಿತೃವಾಕ್ಯ ಪರಿಪಾಲನೆಗಾಗಿ ವನವಾಸಕ್ಕೆ ಹೊರಡುವ ಮುನ್ನ ತಾಯಿಯ ಬಳಿ ಬರುತ್ತಾನೆ. ವಿಷಯವನ್ನೆಲ್ಲ ತಿಳಿಸುತ್ತಾನೆ. ಹೇಳುತ್ತಾನೆ, ಅಮ್ಮ, ತಂದೆಯವರ ಪರಿಸ್ಥಿತಿ ಬಹಳ ಸೂಕ್ಷ್ಮವಾಗಿದೆ. ನಿನ್ನ ಸತಿಧರ್ಮಕ್ಕೆ ಅನುಗುಣವಾಗಿ ಈಗ ಅವರ ಬಳಿ ಇದ್ದು ಸೇವೆ, ಶುಶ್ರೂಷೆ ಮಾಡಿ ಅವರನ್ನು ಕಾಪಾಡಿಕೊ ಎಂದು. ಸಹಜವಾಗಿ ಕೌಸಲ್ಯೆ ಇದನ್ನು ವಿರೋಧಿಸಬಹುದಾಗಿತ್ತು. ಕೈಕೇಯಿ ಅರಮನೆಗೆ ಬಂದ ನಂತರ ರಾಜನು ಇವಳನ್ನು ಉದಾಸೀನ ಮಾಡತೊಡಗಿದ್ದ. ಅದೂ ಅಲ್ಲದೆ ಹಿರಿಯ ಮಗನಾದ ರಾಮನಿಗೇ ಉತ್ತರಾಧಿಕಾರದ ಹಕ್ಕು ಎಂದು ಸಾಧಿಸಬಹುದಾಗಿತ್ತು. ಸತ್ಯ ವಚನವನ್ನು ಪಾಲಿಸುವುದಕ್ಕಾಗಿ ಸಿದ್ಧಳಾದಳು. ರಾಮಾ, ನಿನ್ನ ವನವಾಸ ಯಶಸ್ವಿಯಾಗಲಿ ಎಂದು ಹರಸುತ್ತಾಳೆ. ತಾಯಿಯ ಹರಕೆ ಎಂದಾದರೂ ಸುಳ್ಳಾದೀತೆ? ತನ್ನ ಮನಸ್ಸಿನ ಬೇಗುದಿಯನ್ನು ಹತ್ತಿಕ್ಕಿ ಲೋಕಕಲ್ಯಾಣದ ಕಡೆ ಗಮನವಿತ್ತಳು. ನೋವು ನುಂಗಿ ನಲಿವು ನೀಡಿದ ಮಹಾಸಾಧ್ವಿ! ರಾಮಕಾರ್ಯಕ್ಕೆ ಸಹಕರಿಸಿ, ಪರೋಕ್ಷವಾಗಿ ಬೆಂಬಲಿಸಿದ ನಾರೀಮಣಿ!
ಸುಮಿತ್ರೆ:- ದಶರಥನ ಎರಡನೆಯ ರಾಣಿ. ಅವಳ ಹೆಸರಿನಲ್ಲಿಯೇ ಅಡಗಿದೆ ಅವಳ ಸಹಕಾರ. ಲಕ್ಷ್ಮಣ, ಶತ್ರುಘ್ನ ಇಬ್ಬರು ಮಕ್ಕಳು. ಬಾಲ್ಯದಿಂದಲೂ ರಾಮನ ಜೊತೆ ಲಕ್ಷ್ಮಣ, ಭರತನ ಜೊತೆ ಶತ್ರುಘ್ನ ನೆರಳಿನಂತೆ ಜೊತೆ-ಜೊತೆಯಾಗಿಯೇ ಬೆಳೆದವರು. ಲಕ್ಷ್ಮಣ ಮುಂಗೋಪಿ, ಆದರೆ ರಾಮನ ಮಾತಿಗೆ ಎಂದೂ ಎದುರಾಡಿದವನಲ್ಲ. ನೇರವಾಗಿ ಸುಮಿತ್ರೆಗೆ ರಾಮನ ವನವಾಸದ ತಿಳಿಸಿದ ವಿಷಯ ಅಪ್ರಸ್ತುತ. ಆದರೆ ರಾಮನ ಜೊತೆಯಲ್ಲಿ ಲಕ್ಷ್ಮಣನೂ ಹೊರಟಿದ್ದಾನೆ ಎಂದು ತಿಳಿದಾಗ ಮಗನಿಗೆ ನಿನ್ನ ಅಣ್ಣ- ಅತ್ತಿಗೆಯನ್ನು ತಂದೆ-ತಾಯಿಯರೆಂದು ಭಾವಿಸಿ ಸೇವಿಸು. ಅವರನ್ನು ಎಚ್ಚರದಿಂದ ರಕ್ಷಿಸು ಎಂದು ಹಿತವಚನವನ್ನು ಹೇಳುತ್ತಾಳೆ. ಲಕ್ಷ್ಮಣನೂ ರಾಜ್ಯಕ್ಕೆ ಹಕ್ಕುದಾರನಾಗಬಹುದೆಂದು ಒಂದು ಸಣ್ಣ ಮಾತನ್ನೂ ಹೇಳದ ನಿಃಸ್ವಾರ್ಥಿ, ವಿಶಾಲಹೃದಯಿ. ಪಿತೃವಾಕ್ಯ ಪರಿಪಾಲನೆಗಾಗಿ ಒತ್ತಾಸೆ ನೀಡಿದವಳು. ಹಾಗೆ ದುಷ್ಟನಿಗ್ರಹ-ಶಿಷ್ಟ ಪರಿಪಾಲನೆಯ ರಾಮಾವತಾರಕ್ಕೆ ಸಹಕರಿಸಿದ ಮಹಿಮಳು ಸುಮಿತ್ರೆ!
ಊರ್ಮಿಳೆ: ಲಕ್ಷ್ಮಣನ ಹೆಂಡತಿ. ಅನ್ಯೋನ್ಯವಾಗಿ ಬಾಳುತ್ತಿದ್ದ ದಂಪತಿಗಳು. ಊರ್ಮಿಳೆ ತನ್ನ ಅರಮನೆಯಲ್ಲಿದ್ದಾಳೆ. ರಾಮನು ವನವಾಸಕ್ಕೆ ಹೊರಟ ವಿಷಯದ ಜೊತೆಗೆ ಲಕ್ಷ್ಮಣನೂ ಹಿಂಬಾಲಿಸಿದ್ದೂ ತಿಳಿಯಿತು. ಅವಳಿಂದ ಯಾವ ಪ್ರತಿಕ್ರಿಯೆಯೂ ಹೊರಡಲಿಲ್ಲ. ಲಕ್ಷ್ಮಣ ರಾಮನ ಜೊತೆಯಲ್ಲಿದ್ದ. ವನವಾಸಕ್ಕೆ ಹೊರಟಾಗ, ಅಲ್ಲಿಂದಲೇ ಅವನ ಜೊತೆಯಲ್ಲಿ ಹೊರಟುಬಿಟ್ಟ! ತನ್ನದು, ತನಗೆ ಎಂಬ ಭಾವನೆ ಎಂದಿಗೂ ಇರಲಿಲ್ಲ. ರಾಮನ ವಾಕ್ಯವೇ ಅವನಿಗೆ ವೇದವಾಕ್ಯ. ಮುಂದೆ ರಾವಣಸಂಹಾರ ಕಾರ್ಯದಲ್ಲಿ ಲಕ್ಷ್ಮಣನ ಪಾತ್ರ ವಿಶೇಷವಾದದ್ದು. ಅದಕ್ಕೆ ತಕ್ಕ ಶಕ್ತಿ, ಸಾಮರ್ಥ್ಯಗಳು ಅವನಲ್ಲಿವೆ.
ಲಕ್ಷ್ಮಣನಿಗೆ ಬೇರಾವ ಉದ್ದೇಶವೂ ಇರಲಿಲ್ಲ. ಹೊರಡುವ ತವಕದಲ್ಲಿ ಊರ್ಮಿಳೆಗೆ ತಿಳಿಸಿ ಹೋಗಬೇಕೆಂಬ ಭಾವನೆಯೂ ಬರಲೇ ಇಲ್ಲ ಎನ್ನಬಹುದು. ಊರ್ಮಿಳೆ ಸ್ಥಿರಚಿತ್ತೆ, ಸ್ವಾಭಿಮಾನಿ! ದುರಭಿಮಾನಿಯಲ್ಲ. ತನಗೆ ತಿಳಿಸದೇ ಹೊರಟಿದ್ದು ಸರಿಯೆ? ಮಾನಸಿಕವಾಗಿ ನೊಂದಿರಬಹುದು. ಇಕ್ಷ್ವಾಕು ವಂಶದ ಗೌರವವನ್ನು ಕಾಪಾಡಬೇಕಾದದ್ದು ತನ್ನ ಕರ್ತವ್ಯ. ಪಿತೃವಾಕ್ಯ ಪರಿಪಾಲನೆಗಾಗಿ ವನವಾಸಕ್ಕೆ ಹೊರಟ ರಾಮನ ಸೇವೆ/ರಕ್ಷಕನಾಗಿ ಲಕ್ಷ್ಮಣನೂ ಹೊರಟಿದ್ದಾನೆ. ಭಾರತೀಯ ನಾರಿ ಸಂಸ್ಕೃತಿಯನ್ನು ಮೆರೆದಿದ್ದಾಳೆ ಊರ್ಮಿಳೆ. ಪತಿಯ ಕಾರ್ಯದಲ್ಲಿ ಸಹಧರ್ಮಿಣಿಯ ಕರ್ತವ್ಯವನ್ನು ಮೆರೆದಿದ್ದಾಳೆ. ಹಾಗೆ ಧರ್ಮವನ್ನು ರಕ್ಷಿಸಿದವಳು ಊರ್ಮಿಳೆ.
ಅರಮನೆಯಲ್ಲಿಯೇ ಇದ್ದಾಳೆ. ಆದರೆ ತಪಸ್ವಿನಿಯಂತೆ, ಲಕ್ಷ್ಮಣ ಕೈಗೊಂಡ ವನವಾಸದ ರೀತಿಯಲ್ಲಿ ತಾನೂ ಇರಲು ಸಂಕಲ್ಪ ಮಾಡಿದಳು. ತನ್ನಂತೆಯೇ ಅಥವಾ ಬೇರೆ ರೀತಿಯಲ್ಲಿ ಜೀವನದಲ್ಲಿ ನೊಂದ ಹೆಣ್ಣು ಮಕ್ಕಳಿಗೆ ಸಾಂತ್ವನ ಹೇಳುವುದರ ಜೊತೆಗೆ ಬದುಕನ್ನು ಸಾರ್ಥಕಗೊಳಿಸಿಕೊಂಡು, ಸ್ವಾವಲಂಬಿಯಾಗಿ ಬಾಳುವ ದಾರಿಯನ್ನು ತೋರಿಸುವ ಸಲುವಾಗಿ, ಅನೇಕ ರೀತಿಯ ಕಾರ್ಯಚಟುವಟಿಕೆಗಳನ್ನು ಪ್ರಾರಂಭಿಸಿ, ಸಮಾಜಕಲ್ಯಾಣಕ್ಕಾಗಿ ದುಡಿದಳು. ಕರ್ತವ್ಯ ಪರಿಪಾಲನೆ ಮಾಡಿ ಋಣಮುಕ್ತಳಾದ ಸಾಧ್ವಿ ಊರ್ಮಿಳೆ! ಗೌತಮಬುದ್ಧನ ಹೆಂಡತಿ ಯಶೋಧರೆಯ ಜೀವನವೂ ಹೇಗೆ ಸಾರ್ಥಕವಾಯಿತು ಎಂದು ನೆನಪಿಗೆ ಬರುತ್ತದೆ. ಸಿದ್ಧಾರ್ಥನು ಮಲಗಿದ್ದ ಮಗು ಹಾಗೂ ಹೆಂಡತಿಯನ್ನು ಬಿಟ್ಟು, ನಡುರಾತ್ರಿಯಲ್ಲಿ ಅರಮನೆಯನ್ನು ತ್ಯಜಿಸಿ ಜ್ಞಾನಸಂಪಾದನೆಗಾಗಿ ಹೊರಟ. ಅನಂತರ ಅವನ ಸೇವಕನಿಂದ ವಿಷಯ ತಿಳಿಯಿತು. ಸಂನ್ಯಾಸಿಯಾಗಿ ತಪಸ್ಸಿನಿಂದ, ದುಃಖಕ್ಕೆ ಕಾರಣವೇನೆಂಬುದನ್ನು ತಿಳಿಯಲು ಮುನ್ನಡೆದದ್ದನ್ನು ಅರಿತಳು.
ಯಶೋಧರೆ ಗಂಡನ ಕಾರ್ಯಕ್ಕೆ ಬೇಸರಿಸಲಿಲ್ಲ. ತನಗೆ ಹೇಳಿಯೇ ಹೋಗಬಹುದಾಗಿತ್ತಲ್ಲವೆ? – ಎಂದು ಮನಸ್ಸಿನಲ್ಲಿ ಭಾವಿಸಿದಳು. ಆದರೆ ಕೊರಗಲಿಲ್ಲ. ತನ್ನ ಕರ್ತವ್ಯದತ್ತ ಗಮನಕೊಟ್ಟಳು. ರಾಜವೈಭೋಗದ ನಡುವೆ ಇದ್ದರೂ ಸಹಧರ್ಮಿಣಿಯ ಕಾರ್ಯ ಮರೆಯಲಿಲ್ಲ. ತಾನೂ ಸಂನ್ಯಾಸಿನಿಯಂತೆಯೇ ಬಾಳತೊಡಗಿದಳು. ಅವಳ ತಾಯಿಯ ಕರ್ತವ್ಯ ಎಚ್ಚರಿಸಿತು. ಮಗನನ್ನು (ರಾಹುಲ) ಕ್ಷತ್ರಿಯ ಕುಲಕ್ಕೆ ತಕ್ಕಂತೆ ಬೆಳೆಸಬೇಕು. ತಂದೆ ಮಾಡುವ ಕೆಲಸದ ಜವಾಬ್ದಾರಿಯನ್ನೂ ಹೊತ್ತುಕೊಂಡು, ಎಲ್ಲ ವಿಧವಾದ ಶಿಕ್ಷಣಗಳನ್ನು ಕೊಡಿಸಿ ತೃಪ್ತಳಾದಳು. ಅರಮನೆಯಿಂದ ಹೊರಬರಲಿಲ್ಲ. ಸಿದ್ಧಾರ್ಥನು ಬುದ್ಧನಾಗಿ ರಾಜ್ಯಕ್ಕೆ ಬಂದಿದ್ದಾನೆಂದು ತಿಳಿದಾಗಲೂ, ಅವನಿಗಾಗಿ ಕಾಯುತ್ತಿದ್ದಳು. ಬುದ್ಧ ಅರಮನೆಗೆ ಬಂದಾಗ ಭಿಕ್ಷಾರೂಪದಲ್ಲಿ ಸುಶಿಕ್ಷಿತನಾದ ಮಗನನ್ನು ನೀಡಿದಳು ಸ್ವಾಭಿಮಾನಿ ಯಶೋಧರೆ! ಕರ್ತವ್ಯ ನಿಷ್ಠುರೆ! ಸಹಧರ್ಮಿಣಿ, ಪತಿಯ ಕಾರ್ಯಕ್ಕೆ ಸಹಕರಿಸಿ ಕೀರ್ತಿಶೇಷಳಾದ ಭಾರತೀಯ ನಾರಿ.
ಊರ್ಮಿಳೆಯ ತಪಸ್ವಿ ಜೀವನ, ಮುಂದೆ ರಾಮ-ರಾವಣರ ಯುದ್ಧದಲ್ಲಿ ಹೇಗೆ ಬೆಂಬಲಿಸಿತು? ರಾವಣನ ಮಗ ಇಂದ್ರಜಿತ್ ಮಹಾಪರಾಕ್ರಮಶಾಲಿ. ಅವನನ್ನು ಕೊಲ್ಲತಕ್ಕವನು, ಜಿತೇಂದ್ರಿಯನಾಗಿ, ನಿರಾಹಾರನಾಗಿ, ನಿದ್ರಾರಹಿತನಾಗಿ, ಬ್ರಹ್ಮಚರ್ಯದಿಂದ ಶಕ್ತಿಯನ್ನು ಕೂಡಿಸಿಕೊಂಡಾಗ ಮಾತ್ರ ಕಾರ್ಯದಲ್ಲಿ ಜಯಗಳಿಸಬಹುದಾಗಿತ್ತು. ಇಲ್ಲಿ ಲಕ್ಷ್ಮಣನ ವನವಾಸ ಅದಕ್ಕೆ ತಕ್ಕಂತೆ ನಡೆಯುತ್ತಿದೆ. ಊರ್ಮಿಳೆಯು ಪತಿಯ ಕಾರ್ಯಕ್ಕೆ ಬೆಂಬಲಿಸಿದ್ದಾಳೆ. ಯುದ್ಧಭೂಮಿಯಲ್ಲಿ ಲಕ್ಷ್ಮಣ ಮೂರ್ಛೆ ಹೋಗುತ್ತಾನೆ. ಆಗ ರಾಮ ಬಹಳವಾಗಿ ನೊಂದುಕೊಂಡು, ಇಂತಹ ತಮ್ಮನಿಲ್ಲದೆ ನಾನು ಬದುಕುವುದು ಸಾಧ್ಯವಿಲ್ಲ ಎನ್ನುತ್ತಾನೆ. ಆಗ ಮೂರ್ಛಿತನಾಗಿ ಬಿದ್ದಿದ್ದ ಲಕ್ಷ್ಮಣನ ಮೇಲೊಂದು ದಿವ್ಯ ತೇಜಸ್ಸು ಹಾದು ಹೋದಂತಾಗುವುದನ್ನು ರಾಮ, ಮತ್ತಿತರ ಕೆಲವರು ಕಾಣುತ್ತಾರೆ. ಲಕ್ಷ್ಮಣನಿಗೆ ಎಚ್ಚರವಾಯಿತು. ಎಲ್ಲರಿಗೂ ಸಮಾಧಾನವೂ ಆಯಿತು. ದೇವತೆಗಳು ಪುಷ್ಪವೃಷ್ಟಿ ಕರೆದರು. ಅನಂತರ ಅಲ್ಲಿದ್ದ ಹಿರಿಯರ ಅಭಿಮತ ಹೀಗಿತ್ತು ಇದು ಊರ್ಮಿಳೆಯ ಪಾತಿವ್ರತ್ಯದ ತೇಜಸ್ಸು. ಅದು ಅವನನ್ನು ರಕ್ಷಿಸಿದೆ ಎಂದು. ತಾನು ಉರಿದು ಜಗತ್ತಿಗೆ ಬೆಳಕು ನೀಡುವ ದೀಪವಾದಳಲ್ಲವೆ? ರಾವಣಸಂಹಾರಕಾರ್ಯದಲ್ಲಿ ನಾರೀಶಕ್ತಿ ಹೇಗೆ ಬೆಸೆದುಕೊಂಡಿತು ಎಂದು ಯೋಚಿಸಬಹುದಲ್ಲವೆ? ಧನ್ಯೆ ಊರ್ಮಿಳೆ.
ಮಾಂಡವಿ: ಜನಕಮಹಾರಾಜನ ತಮ್ಮ ಕುಶಧ್ವಜನ ಮಗಳು. ದಶರಥನ ಸೊಸೆ. ಭರತನ ಹೆಂಡತಿ. ರಾಮ ವನವಾಸಕ್ಕೆ ಹೊರಟಾಗ ಭರತ ಅಯೋಧ್ಯೆಯಲ್ಲಿ ಇರಲಿಲ್ಲ. ತಾತನ ಮನೆಗೆ ಹೋಗಿದ್ದ. ಇದ್ದಕ್ಕಿದ್ದಂತೆ ಕುಲಗುರುಗಳಾದ ವಸಿಷ್ಠರು ವೇಗದೂತರ ಮೂಲಕ ಭರತನನ್ನು ಅಯೋಧ್ಯೆಗೆ ಕರೆಸಿಕೊಂಡರು. ಇಲ್ಲಿಗೆ ಬಂದಮೇಲೆ ವಿಷಯವೆಲ್ಲ ತಿಳಿಯಿತು. ಪುತ್ರವಿಯೋಗದಿಂದ ದಶರಥನು ಮರಣ ಹೊಂದಿದ ವಿಷಯ ಕೇಳಿ, ತಾಯಿ ಕೈಕೇಯಿಯ ಮೇಲೆ ಅತ್ಯಂತ ಕ್ರೋಧಗೊಂಡಾಗ, ವಸಿಷ್ಠರು ಮೊದಲು ದಶರಥನ ಉತ್ತರಕ್ರಿಯಾದಿಗಳನ್ನು ನಡೆಸು. ಅನಂತರ ಬೇರೆ ವಿಷಯದ ಕಡೆ ಗಮನಕೊಡುವುದಾಗಲಿ ಎಂದು ಧೈರ್ಯ ಹೇಳಿದರು. ಕ್ರಮಬದ್ಧವಾಗಿ ಪಿತೃಕಾರ್ಯ ನೆರವೇರಿತು. ಅನಂತರ ಭರತನು ರಾಮನೇ ರಾಜ್ಯಕ್ಕೆ ಹಕ್ಕುದಾರ. ನಾನು ಅವನ ಸೇವಕನಷ್ಟೆ. ಕಾಡಿನಿಂದ ರಾಮನನ್ನು ಕರೆತಂದು ರಾಜ್ಯವನ್ನು ಆಳುವಂತೆ ಮಾಡುತ್ತೇನೆ. ಅಲ್ಲಿಯವರೆಗೂ ನನಗೆ ನೆಮ್ಮದಿ ಇಲ್ಲ ಎಂದು ರಾಮನನ್ನು ಕರೆತರುವುದಕ್ಕಾಗಿ ಹೊರಟನು. ಮಾಂಡವಿ ಅರಮನೆಯಲ್ಲಿಯೇ ಉಳಿದಳು. ಅಯೋಧ್ಯೆಯಿಂದ ಗುರುಗಳೂ, ರಾಣಿಯರೂ, ಪುರಜನರೂ ಹೊರಟಿದ್ದಾರೆ. ಚಿತ್ರಕೂಟದಲ್ಲಿ ರಾಮ, ಸೀತೆ, ಲಕ್ಷ್ಮಣರನ್ನು ಕಂಡು, ಪುನಃ ಅಯೋಧ್ಯೆಗೆ ಹಿಂತಿರುಗಬೇಕಾಗಿ ಬಹಳಷ್ಟು ರೀತಿಯಲ್ಲಿ ಕೇಳಿಕೊಂಡರೂ ರಾಮ ಒಪ್ಪಲಿಲ್ಲ. ತಂದೆಯ ಮಾತನ್ನು ನಡೆಸಿಕೊಡುವುದು ಇಬ್ಬರ ಕರ್ತವ್ಯವೂ ಆಗಿದೆ ಎಂದು ಹೇಳಿದಾಗ ರಾಮನಿಂದ ಪಾದುಕೆಯನ್ನು ಸ್ವೀಕರಿಸಿ, ಅದನ್ನು ಸಿಂಹಾಸನದ ಮೇಲಿಟ್ಟು, ಅಯೋಧ್ಯೆಯ ರಾಜ್ಯಭಾರವನ್ನು ನಡೆಸತೊಡಗಿದ. ಅಯೋಧ್ಯೆ ನಗರದ ಹೊರಗಿದ್ದ ನಂದಿ ಗ್ರಾಮದಲ್ಲಿಯೇ ವಾಸಿಸತೊಡಗಿದನು. ರಾಮನಂತೆಯೇ ವನವಾಸ ವ್ರತವನ್ನು ಕೈಕೊಂಡು, ಕರ್ತವ್ಯಪರನಾದನು. ಮಾಂಡವಿ ಅರಮನೆಯಲ್ಲಿದ್ದವಳು, ಭರತನ ಸಂಕಲ್ಪವನ್ನು ತಿಳಿದು, ಪತಿಯ ಕಾರ್ಯದಲ್ಲಿ ನೆರವಿತ್ತಿದ್ದು ಹೇಗೆ?
ಅರಮನೆಯ ಹೊರಗಡೆ ಸರಯೂ ನದಿಯ ತೀರದಲ್ಲಿ ಕುಟೀರವನ್ನು ಕಟ್ಟಿಕೊಂಡು, ತಾಪಸಿಯ ಜೀವನ ನಡೆಸತೊಡಗಿದಳು. ಸಾಮಾಜಿಕವಾಗಿ ಕೈಲಾದ ಸೇವೆ ಸಲ್ಲಿಸುತ್ತ, ಸಹಧರ್ಮವನ್ನು ಮೆರೆದಳು. ರಾಮನು ವನವಾಸದಿಂದ ಯಶಸ್ವಿಯಾಗಿ ಹಿಂತಿರುಗುವ ದಿನವನ್ನು ನಿರೀಕ್ಷಿಸುತ್ತ ಕಾಲಯಾಪನೆ ಮಾಡುತ್ತಿದ್ದಳು. ಹೀಗೆ ಪಿತೃವಾಕ್ಯ ಪರಿಪಾಲನೆಗಾಗಿ ಕೈಕೊಂಡ ವ್ರತದಲ್ಲಿ ಮಾಂಡವಿ ಸಹಕರಿಸಿದಳು. ತನ್ಮೂಲಕ ಭರತನ ಕಾರ್ಯಕ್ಕೆ ಜಯ ಲಭಿಸಿತು. ರಾವಣ ಸಂಹಾರಕಾರ್ಯದಲ್ಲಿ ಪರೋಕ್ಷವಾಗಿ ಮಾಂಡವಿಯ ನಾರೀಶಕ್ತಿ ಜೊತೆಕೂಡಿತೆಂಬುವುದು ಅಚ್ಚರಿಯ ವಿಷಯವಲ್ಲ. ಕೈ-ಕೈಗೂಡಿದರೆ ತಾನೇ ಒಂದು ಕಾರ್ಯ ಯಶಸ್ವಿಯಾಗುವುದು. ನಿಃಸ್ವಾರ್ಥಿಯಾಗಿ, ದೇಶಹಿತಕ್ಕಾಗಿ ಪತಿಯ ಕಾರ್ಯಕ್ಕೆ ಸಹಕರಿಸಿದ ಮಾಂಡವಿಯ ನಡೆ ಮೆಚ್ಚತಕ್ಕದ್ದಲ್ಲವೆ?
ಶ್ರುತಕೀರ್ತಿ: ಶತ್ರುಘ್ನನ ಸಹಧರ್ಮಿಣಿ. ಮಾಂಡವಿಯ ತಂಗಿ. ಹದಿಹರೆಯದ ದಂಪತಿಗಳು. ಹುಟ್ಟಿದ್ದೂ ರಾಜವಂಶ, ಸೇರಿದ್ದೂ ರಾಜವಂಶ. ರಾಜವೈಭೋಗದಲ್ಲಿ ಮೆರೆದಾಡುವ ಅವಕಾಶಕ್ಕೆ ಕೊರತೆ ಇರಲಿಲ್ಲ. ದಶರಥನ ಮಕ್ಕಳ ಪೈಕಿ ಶತ್ರುಘ್ನನೂ ಇವನೂ ಒಬ್ಬನಲ್ಲವೆ? ರಾಜ್ಯ ಸಿಂಹಾಸನದ ಹಕ್ಕು ಇವನಿಗೂ ಇದೆ. ಆದರೆ ಕುಲಗೌರವವನ್ನು ಕಾಪಾಡುವುದಕ್ಕಾಗಿ, ಪಿತೃವಾಕ್ಯಪರಿಪಾಲನೆಗಾಗಿ ತಮ್ಮ ಸುಖ, ಭೋಗಗಳನ್ನು ತ್ಯಜಿಸಿ, ಕೈ ಜೋಡಿಸಿದರು. ತಮಗಾಗಿ ಎಂದು ಯಾರೂ ಏನನ್ನೂ ಬಯಸಲಿಲ್ಲ. ರಾಮಪಾದುಕೆಗಳನ್ನು ತಂದು, ಅದರ ಹೆಸರಿನಲ್ಲಿಯೇ ರಾಜ್ಯಭಾರ ಮಾಡತೊಡಗಿದ ಮಹಾಪುರುಷ ಭರತ! ಅಯೋಧ್ಯಾನಗರದೊಳಗೆ ಪ್ರವೇಶಿಸಲಿಲ್ಲ. ಹತ್ತಿರದ ನಂದಿ ಗ್ರಾಮದಲ್ಲಿಯೇ ವಾಸ್ತವ್ಯ ಹೂಡಿದ. ಆ ಸಂದರ್ಭದಲ್ಲಿ ಅಯೋಧ್ಯಾನಗರ ರಕ್ಷಣೆ, ಅರಮನೆಯ ಮೇಲ್ವಿಚಾರಣೆ, ತಾಯಂದಿರ ಜವಾಬ್ದಾರಿಯನ್ನು ಶತ್ರುಘ್ನನಿಗೆ ವಹಿಸಿದ. ಅಣ್ಣನ ಮಾತಿಗೆ ಸಮ್ಮತಿಸಿದ. ಅರಮನೆಯಲ್ಲಿಯೇ ಶ್ರುತಕೀರ್ತಿಯೊಡನೆಯೇ ಇದ್ದರೂ, ಅಣ್ಣಂದಿರ ಜಾಡಿನಲ್ಲಿಯೇ ನಡೆದು, ಹದಿನಾಲ್ಕು ವರ್ಷಗಳನ್ನು ಕಳೆದ ಜಿತೇಂದ್ರಿಯ ಶತ್ರುಘ್ನ!
ಶ್ರುತಕೀರ್ತಿ ಪತಿವ್ರತೆ. ಪತಿಗೆ ತಕ್ಕಂತೆ ಬಾಳಿದ ಮಹಾಸತಿ! ಗಂಡನ ಕಾರ್ಯಭಾರದಲ್ಲಿ ಸಹಕರಿಸಿದಳು. ಮೂವರು ಅತ್ತೆಯರ ಯೋಗಕ್ಷೇಮ, ಅಕ್ಕಂದಿರ ಮನಸ್ಸಿನ ಬೇಗುದಿಯ ಭಾವನೆಗಳಿಗನುಸಾರವಾಗಿ, ಅವರ ಬೇಕು ಬೇಡಗಳ ಕಡೆಗೆ ಗಮನಕೊಡುವುದು, ಗಂಡನ ನಗರ ರಕ್ಷಣೆಯ ಕಾರ್ಯದಲ್ಲಿ ಕೈಜೋಡಿಸಿ, ಯಶಸ್ವಿಯಾಗುವಂತೆ ಪ್ರೇರೇಪಿಸುವುದು ಇತ್ಯಾದಿಗಳ ಕಡೆ ಗಮನಹರಿಸಿ, ತನ್ನ ಸ್ವಾರ್ಥವನ್ನು ಬದಿಗಿಟ್ಟು ಬದುಕಿದ ಸಾಧ್ವಿ ಶ್ರುತಕೀರ್ತಿ! ರಾಮನ ವನವಾಸಕ್ಕೆ ಲಕ್ಷ್ಮಣನ ಸೇವೆಗೆ, ಭರತನ ನಿಃಸ್ಪೃಹತೆಗೆ ಸ್ವಲ್ಪವೂ ಧಕ್ಕೆ ಬಾರದ ರೀತಿಯಲ್ಲಿ ನಡೆದರು ದಂಪತಿಗಳು. ರಾಮಕಾರ್ಯಕ್ಕೆ, ಲೋಕಮಂಗಳಕ್ಕೆ ಶಕ್ತಿಯಾದ ನಾರಿಯರಿವರು!
ಈ ರೀತಿಯಲ್ಲಿ ಕೊಂಡಿಗೆ ಕೊಂಡಿ ಬೆಸೆದಿದೆ. ಯಾರೂ ವಿರೋಧಿಸಲಿಲ್ಲ. ಸ್ನೇಹ, ಪ್ರೀತಿ, ಗೌರವಗಳಿಂದ ತಮ್ಮ ತಮ್ಮ ಭಾಗದ ಕಾರ್ಯವನ್ನು ನಿರ್ವಹಿಸಿದ್ದಾರೆ. ರಾವಣನ ಸಂಹಾರಕ್ಕೆ ಸೀತೆಯೇ ಕಾರಣ ಎನ್ನುವುದು ಮುಂದೆ ತಿಳಿಯುತ್ತದೆ. ಸೀತೆಗೂ-ರಾವಣನಿಗೂ ಯಾವರೀತಿಯಲ್ಲಿ ಭೇಟಿ ಆಯಿತು? ಅವನು ಲಂಕಾಧೀಶ. ಸೀತೆ ವನವಾಸಿ. ಇದರ ಹಿಂದೆ ಯಾರ ಕೈವಾಡವಿದೆ? ದುಷ್ಟಶಿಕ್ಷಣ/ಶಿಷ್ಟರಕ್ಷಣೆ ಆಗಬೇಕಾಗಿದೆ. ರಾಮಾವತಾರದ ಉದ್ದೇಶ ಸಫಲವಾಗಬೇಕಿದೆ. ಈ ಪ್ರಮುಖವಾದ ಕಾರ್ಯಕ್ಕೆ ಕಾರಣರಾದವರೂ ಸ್ತ್ರೀಯರೇ! ಕೆಲವೊಮ್ಮೆ ಕೆಲಸಗಳು ಮೈತ್ರಿಗಿಂತ, ದ್ವೇಷ/ವೈರತ್ವದ ಮೂಲಕವೇ ಸಾಧಿಸಲ್ಪಡುತ್ತದೆ. ಉತ್ತಾನಪಾದರಾಯನ ಮಗ ಧ್ರುವನನ್ನು, ಚಿಕ್ಕಮ್ಮನಾದ ಸುರುಚಿ ತಿರಸ್ಕಾರರೂಪದಲ್ಲಿ ಕಂಡಿದ್ದರಿಂದಲ್ಲವೇ ಶ್ರೀಮನ್ನಾರಾಯಣನ ಸಾಕ್ಷಾತ್ಕಾರಕ್ಕಾಗಿ ಕಠಿಣ ತಪಸ್ಸು ಕೈಕೊಂಡು, ಅಮರನಾದದ್ದು! ರಾಮ ವನವಾಸದ ಮುಂದಿನ ಕತೆ ಏನಾಯಿತು?
ಚಿತ್ರಕೂಟದಲ್ಲಿದ್ದಾಗ ಭರತನು ಬಂದು, ರಾಮನ ಪಾದುಕೆಯನ್ನು ಸ್ವೀಕರಿಸಿ ಅಯೋಧ್ಯೆಗೆ ಹಿಂದಿರುಗಿದ ಮೇಲೆ ರಾಮ, ಲಕ್ಷ್ಮಣರು ಯೋಚಿಸಿದರು ಚಿತ್ರಕೂಟದಲ್ಲಿಯೇ ಇದ್ದರೆ, ಅಯೋಧ್ಯೆಯಿಂದ ಆಗಾಗ ಯಾರಾದರೂ ಬರುವುದಕ್ಕೆ ಅವಕಾಶವಿದೆ. ಆದ್ದರಿಂದ ಈ ಜಾಗದಿಂದ ಬೇರೆ ಕಡೆ ಹೋಗುವುದು ಒಳ್ಳೆಯದು ಎಂದು. ಪ್ರತಿ ಕೆಲಸ/ಚಿಂತೆಯ ಹಿಂದೆಯೂ ಅಗೋಚರ ಶಕ್ತಿಯ ಕೈವಾಡವಿದ್ದೇ ಇರುತ್ತದೆ. ಅದು ರಹಸ್ಯ. ಇವರು ಬೇರೆ ಕಡೆಗೆ ಹೋಗುವ ವಿಷಯ ಮಾತನಾಡುತ್ತಿದ್ದಾಗಲೇ ಕೆಲವು ಋಷಿ ಮುನಿಗಳೂ ವನವಾಸಿಗಳೂ ಬಂದು ರಾಮನಿಗೆ ನಮಸ್ಕರಿಸಿ, ರಾಮಾ, ನೀನು ವನವಾಸಕ್ಕೆ ಬಂದಿರುವ ವಿಷಯ ತಿಳಿಯಿತು. ನೀನು ದುಷ್ಟಶಿಕ್ಷಕ. ಈಗ ಚಿತ್ರಕೂಟ ಪರ್ವತ ಪರಿಸರ ನೆಮ್ಮದಿ, ಶಾಂತಿಯಿಂದ ಕೂಡಿದೆ. ನಾವು ದಂಡಕಾರಣ್ಯ ವಾಸಿಗಳು. ಅಲ್ಲಿ ಖರ, ದೂಷಣರೆಂಬ ರಾಕ್ಷಸರು ತಮ್ಮ ಅಸಂಖ್ಯ ಪರಿವಾರದವರೊಡನೆ ಇದ್ದಾರೆ. ಅವರ ಉಪಟಳದಿಂದ ನಮ್ಮ ಯಾಗ, ಯಜ್ಞಗಳು ಸುಗಮವಾಗಿ ನಡೆಯುತ್ತಿಲ್ಲ. ವನವಾಸಿಗಳ ಜೀವನಕ್ಕೂ ಅಭದ್ರತೆ ಇದೆ. ನೀನು ಅಲ್ಲಿಗೆ ಬಂದು ನಮ್ಮ ಕೋರಿಕೆಯನ್ನು ನಡೆಸಿಕೊಡು. ನೀನು ಧರ್ಮರಕ್ಷಕ ಎಂದು ಅಹವಾಲನ್ನು ಹೇಳಿಕೊಂಡರು. ರಾಕ್ಷಸರನ್ನು ಕೊಂದು, ನಿಮ್ಮ ಕಾರ್ಯಕ್ಕೆ ಅನುಕೂಲ ಮಾಡುತ್ತೇನೆ ಎಂದ. ರಾಮ ರಾಮನ ವನವಾಸಕ್ಕೆ ಒಂದು ನಿರ್ದಿಷ್ಟ ಸ್ಥಾನ ಸಿಕ್ಕಂತಾಯಿತು. ಆಗ ಸೀತೆ ರಾಮನನ್ನು ಕೇಳುತ್ತಾಳೆ. ನಮಗೆ ಯಾರಿಂದಲಾದರೂ ತೊಂದರೆ ಆದಾಗ, ಅವರಿಗೆ ಶಿಕ್ಷೆ ಕೊಡುವುದು ಧರ್ಮ ಹಾಗೂ ಕರ್ತವ್ಯ. ದಂಡಕಾರಣ್ಯದ ರಾಕ್ಷಸರಿಂದ ನಮಗೆ ಯಾವ ತೊಂದರೆಯೂ ಆಗಿಲ್ಲ. ಅವರನ್ನು ಕೊಲ್ಲುತ್ತೇನೆ ಎಂದು ಹೇಳುವುದು ಅಧರ್ಮವಲ್ಲವೇ? – ಎಂದು. ರಾಮ ಸೀತೆ, ಇದು ಭರತನ ರಾಜ್ಯ. ನಾವು ಅವನ ಪ್ರಜೆಗಳು. ಕ್ಷತ್ರಿಯರು. ರಾಜ್ಯದಲ್ಲಿ ಇರುವವರ ಕಷ್ಟ, ಸುಖಗಳಿಗೆ ರಾಜನಿಗೆ ನಾವು ಸ್ಪಂದಿಸಬೇಕು. ಭರತನ ರಾಜ್ಯದಲ್ಲಿ ಅನ್ಯಾಯ, ಅಧರ್ಮಗಳಿಂದ ನೊಂದವರಿಗೆ ನಾವು ರಕ್ಷಣೆ ನೀಡಬೇಕು. ಆದ್ದರಿಂದ ಈ ರಾಕ್ಷಸರು ವಧಾರ್ಹರಾಗಿದ್ದಾರೆ. ಕಾರಣವಿಲ್ಲದೆ ಕಾರ್ಯವಿಲ್ಲ. ಈಗ ದುಷ್ಟರು ಶಿಷ್ಟರಿಗೆ ಕೊಡುತ್ತಿರುವ ಕೋಟಲೆಗಳೇ ಸಾಕು ಅವರನ್ನು ಕೊಲ್ಲುವುದಕ್ಕೆ. ಇದು ಧರ್ಮಕಾರ್ಯ ಎಂದು ಸಮಾಧಾನ ಹೇಳಿ, ದಂಡಕಾರಣ್ಯಕ್ಕೆ ಹೊರಡುವ ಸಿದ್ಧತೆ ಮಾಡಿಕೊಳ್ಳುತ್ತಾನೆ. ಇದು ರಾವಣಸಂಹಾರಕ್ಕೆ ಪೀಠಿಕೆ ಇದ್ದಂತೆ. ಸಂಚರಿಸುತ್ತ ಪಂಚವಟಿ ಎಂಬ ಸ್ಥಳದಲ್ಲಿ ಬೇಕಾದ ಸೌಕರ್ಯಗಳನ್ನು ಕಂಡು, ಅಲ್ಲಿಯೇ ಕುಟೀರವನ್ನು ಕಟ್ಟಿಕೊಂಡರು.
ಅದಕ್ಕೆ ಸಮೀಪದಲ್ಲಿದ್ದ ಒಂದು ವಿಶಾಲವಾದ ಮರದ ಮೇಲಿದ್ದ ಒಂದು ಗರುಡಜಾತಿಗೆ ಸೇರಿದ ಪಕ್ಷಿಯ ಭೇಟಿ ಆಯಿತು. ಅದರ ಹೆಸರು ಜಟಾಯು! ಅದು ದಶರಥನ ಮಿತ್ರನಂತೆ. ರಾಮ, ಲಕ್ಷ್ಮಣ, ಸೀತೆಯರು ವನವಾಸಕ್ಕೆ ಬಂದ ಕಾರಣವನ್ನು ತಿಳಿದು, ಹಾಗೂ ಮಿತ್ರ ದಶರಥನ ಸೊಸೆ ಸೀತೆಯ ಬಗ್ಗೆ ವಿಶೇಷವಾಗಿ ಹೇಳಿತು. ನೀವು ಅಣ್ಣತಮ್ಮಂದಿರು ಹೊರಗಡೆ ಕೆಲಸಕ್ಕೆ ಹೋದಾಗ, ನಾನು ಸೀತೆಯನ್ನು ನೋಡಿಕೊಳ್ಳುತ್ತೇನೆ. ಚಿಂತಿಸಬೇಡಿ ಎಂದು ಆಶ್ವಾಸನೆ ನೀಡಿತು. ಇದರ ಸಹಾಯ ಬಹಳ ಅಮೂಲ್ಯವಾದದ್ದು. ಮುಂದೆ ತಿಳಿಯೋಣ.
ಶೂರ್ಪನಖಿ: ಲಂಕೇಶ ರಾವಣನ ತಂಗಿ. ಸ್ವಾರ್ಥಕ್ಕಾಗಿ ರಾವಣ ತನ್ನ ತಂಗಿಯ ಗಂಡನನ್ನೇ ಕೊಂದ, ವಿಧವೆ. ಶೂರ್ಪನಖಿಯನ್ನು ಒಲಿಸಿಕೊಳ್ಳುವುದಕ್ಕಾಗಿ. ಅವಳು ಸ್ವೇಚ್ಛೆಯಾಗಿ ಎಲ್ಲೆಂದರಲ್ಲಿ ತಿರುಗಾಡುವ ಹಾಗೂ ಹೇಗೆ ಬೇಕಾದರೂ ನಡೆದುಕೊಳ್ಳುವ ಹಾಗೆ ಅವಕಾಶ ಕಲ್ಪಿಸಿದ್ದ. ಇದು ಕಪಿಗೆ ಹೆಂಡ ಕುಡಿಸಿದಂತೆ ಆಯಿತು. ಮೊದಲೇ ರಾಕ್ಷಸಿ, ಈಗ ಸ್ವೇಚ್ಛಾಚಾರಿಣಿ! ದಂಡಕಾರಣ್ಯದಲ್ಲಿ ರಾವಣನ ಸೋದರರಾದ ಖರ, ದೂಷಣ ಎಂಬವರು ಹದಿನಾಲ್ಕು ಸಾವಿರ ರಾಕ್ಷಸರೊಡನೆ ವಾಸವಾಗಿದ್ದರು. ಇವರ ಉಪಟಳದಿಂದ ಪೂರ್ವನಿವಾಸಿಗಳಾದ ಋಷಿ ಮುನಿಗಳು ಹಾಗೂ ಇತರ ವನವಾಸಿಗಳ ಬದುಕು ಬಹಳ ಶೋಚನೀಯವಾಗಿತ್ತು. ಇವರ ಬೇಡಿಕೆಯ ಮೇರೆಗೆ ರಾಮನು ಸೀತೆ ಮತ್ತು ಲಕ್ಷ್ಮಣರೊಡನೆ ಇಲ್ಲಿಗೆ ಬಂದು ಪಂಚವಟಿಯಲ್ಲಿ ವಾಸಿಸತೊಡಗಿದ. ಶೂರ್ಪನಖಿ ತನ್ನ ಅಣ್ಣಂದಿರೊಡನೆ ಅಲ್ಲಿಯೇ ಇದ್ದಳು.
ಮನಸ್ಸು ಎಂಬುದು ಚಂಚಲ. ತನ್ನ ಆಸೆ, ಆಕಾಂಕ್ಷೆಗಳನ್ನು ಪೂರೈಸಿಕೊಳ್ಳಲು ಯಾವ ರೀತಿಯಲ್ಲಾದರೂ ಸರಿಯೇ ತವಕಿಸುತ್ತಲೇ ಇರುತ್ತದೆ. ಮಹಾತ್ಮರು ಮನಸ್ಸನ್ನು ಹಿಡಿತದಲ್ಲಿಟ್ಟುಕೊಂಡು ಸನ್ಮಾರ್ಗದಲ್ಲಿ ನಡೆಯುತ್ತಾರೆ. ಸಾಮಾನ್ಯರಿಗೆ ಇದು ಸುಲಭವಲ್ಲ. ಅದರಲ್ಲಿಯೂ ತನಗಿಲ್ಲದ ಸುಖ, ಸಂತೋಷಗಳನ್ನು ಮತ್ತೊಬ್ಬರು ಅನುಭವಿಸುತ್ತಿದ್ದರೆ, ಸಹಿಸಲಾರರು. ಹೇಗಾದರೂ ಮಾಡಿ ಅವರಿಗೆ ನೋವುಂಟು ಮಾಡಲು ಪ್ರಯತ್ನಿಸುತ್ತಾರೆ. ಶೂರ್ಪನಖಿ, ಸ್ವೇಚ್ಛಾಚಾರಿಯಾಗಿ ಬದುಕುತ್ತಿದ್ದರೂ, ಮನದಾಳದಲ್ಲಿ ವೈಧವ್ಯದ ನೋವು ಹುದುಗಿತ್ತು. ಅಣ್ಣ ರಾವಣನ ಮೇಲೆ ದ್ವೇಷವೂ ಇತ್ತು. ಅದನ್ನು ಹೊರಗೆಡವಿ ಎದುರಿಸುವ ಶಕ್ತಿ ಅವಳಲ್ಲಿರಲಿಲ್ಲ. ಅವನು ದೈತ್ಯ ಚಕ್ರವರ್ತಿಯಲ್ಲವೆ. ಇವಳ ಸಹಾಯಕ್ಕೆ ಯಾರೂ ಮುಂದೆ ಬಂದವರಿಲ್ಲ. ದ್ವೇಷದ ಕಿಡಿ ಒಳಗೇ ಇತ್ತು. ಮೇಲ್ನೋಟಕ್ಕೆ ಅಣ್ಣನ ಮಾತಿಗೆ ಎದುರಾಡದೆ, ಖರ ದೂಷಣರ ಜೊತೆಯಲ್ಲಿಯೇ ಇದ್ದಳು.
ರಾಮನ ವನವಾಸದ ಅವಧಿ ಮುಗಿಯುತ್ತ ಬಂದಿದೆ. ಇನ್ನೊಂದು ವರ್ಷ ಬಾಕಿ ಇದೆ. ರಾಮಾವತಾರದ ಮುಖ್ಯ ಉದ್ದೇಶಕ್ಕೆ ಇನ್ನೂ ಕಾಲ ಕೂಡಿಬಂದಿಲ್ಲ. ದೇವತೆಗಳೂ ಕಾಯುತ್ತಿದ್ದಾರೆ. ಅಗೋಚರ ಶಕ್ತಿಯ ಕೈವಾಡವನ್ನು ಅರಿತವರಾರು? ಕಾಲ, ಕರ್ಮ ಕೂಡಿ ಬರಬೇಕಲ್ಲವೆ? ಒಂದು ಬೆಳದಿಂಗಳ ರಾತ್ರಿ. ಪಂಚವಟಿಯ ಕುಟೀರದಲ್ಲಿ ಸೀತಾ-ರಾಮರಿದ್ದಾರೆ. ಹೊರಗಡೆ ಒಂದು ಬಂಡೆಯ ಮೇಲೆ ಧನುರ್ಧಾರಿಯಾಗಿ ಲಕ್ಷ್ಮಣ ಎಚ್ಚರವಾಗಿ ಕುಳಿತಿದ್ದಾನೆ. ಆ ರಾತ್ರಿ ಶೂರ್ಪನಖಿ, ನಿಶಾಚರಿ ದಂಡಕಾರಣ್ಯದಲ್ಲಿ ತಿರುಗಾಡುತ್ತಿದ್ದಾಳೆ. ಮನುಷ್ಯರವಾಸನೆ ಮೂಗಿಗೆ ಬಡಿಯಿತು! ಜಾಗೃತಳಾದಳು. ಅಲ್ಲಲ್ಲಿ ಹುಡುಕಾಡುತ್ತಿದ್ದಾಳೆ. ಒಂಟಿಯಾಗಿ ಕುಳಿತಿದ್ದ ಲಕ್ಷ್ಮಣನನ್ನು ಕಂಡಳು. ಅವಳು ಕಾಮೋದ್ರಿಕ್ತಳಾದಳು. ತರುಣನಿಗೆ ತಕ್ಕಂತೆ ಸುಂದರಿಯ ರೂಪದಿಂದ ಅವನೆದುರಿನಲ್ಲಿ ಧುತ್ತೆಂದು ನಿಂತಳು! ಲಕ್ಷ್ಮಣ ಸ್ಥಿತಪ್ರಜ್ಞ. ಆದರೂ ಯಾರಿರಬಹುದೆಂಬ ಸಂದೇಹ ಮನದಲ್ಲಿ ಮೂಡಿತು. ಎದುರಿಗಿದ್ದ ತರುಣಿಯೇ ಮಾತನಾಡಿದಳು. ಏಕಾಂಗಿ, ಧನುರ್ಧಾರಿ, ಋಷಿವೇಷದಲ್ಲಿ ನಿನ್ನನ್ನು ಕಂಡು ಮನಸ್ಸು ಚಂಚಲವಾಯಿತು. ನಿನ್ನನ್ನು ವಿವಾಹವಾಗಿ ಸುಖ, ಸಂತೋಷ ಪಡಬೇಕೆಂಬ ಆಸೆ ಉಂಟಾಗಿದೆ. ಯೌವನವನ್ನು ವ್ಯರ್ಥಗೊಳಿಸಬೇಡ. ನನ್ನ ಇಚ್ಛೆಯನ್ನು ಪೂರೈಸು.
ಲಕ್ಷ್ಮಣ ಈಗ ಪೂರ್ಣವಾಗಿ ಜಾಗೃತನಾದ. ಇದು ರಾಕ್ಷಸರ ಮಾಯೆ ಎಂದರಿತ. ತರುಣಿಗೆ ನಾನಾ ರೀತಿಯಲ್ಲಿ ತಿಳಿಯ ಹೇಳಿದ- ಇದು ಸಾಧುವಲ್ಲ. ನಿನ್ನ ರೀತಿ ಸರಿಯಲ್ಲ. ನಿನ್ನ ಯೋಗ್ಯತೆಗೆ ತಕ್ಕ ವರನನ್ನು ಹುಡುಕಿಕೊ ಎಂದು. ಅವಳು ಒಪ್ಪದೆ ವಾದ-ವಿವಾದಗಳು ನಡೆಯುತ್ತಿದ್ದವು. ಆಗ ಕುಟೀರದ ಬಾಗಿಲು ತೆರೆಯಿತು. ರಾಮ ಹೊರಗಡೆ ಬಂದಾಗ, ಎದುರಿನ ದೃಶ್ಯ ಕಣ್ಣಿಗೆ ಬಿತ್ತು. ಇತ್ತ ರಾಮನನ್ನು ಕಾಣುತ್ತಲೇ, ಲಕ್ಷ್ಮಣ ಅಲ್ಲಿ ನೋಡು, ನಮ್ಮ ಅಣ್ಣನಿದ್ದಾನೆ. ಅವನೊಡನೆ ನಿನ್ನ ಇಚ್ಛೆಯನ್ನು ಈಡೇರಿಸುವಂತೆ ಕೇಳಿಕೊ ಎಂದನು. ತರುಣಿ ಅತ್ತ ತಿರುಗಿದಳು. ರಾಮನನ್ನು ಕಂಡು ಧಾವಿಸಿ, ತನ್ನಿಚ್ಛೆಯನ್ನು ತಿಳಿಸಿದಳು. ಆದರೆ ಅಣ್ಣತಮ್ಮಂದಿರ ನಕಾರಾತ್ಮಕ ಉತ್ತರ ಅವಳನ್ನು ಕೆರಳಿಸಿತು. ಜೊತೆಗೆ ಕುಟೀರದ ಒಳಗೆ ರಾಮನ ಹಿಂದೆ ನಿಂತಿದ್ದ ಸೀತೆಯನ್ನೂ ನೋಡಿದಳು. ಇವಳಲ್ಲಿ ಅಡಗಿದ್ದ ದ್ವೇಷದ ಕಿಡಿಗೆ ತುಪ್ಪ ಸುರಿದಂತೆ ಆಯಿತು. ತನ್ನ ದಾಂಪತ್ಯಜೀವನದ ಸೌಖ್ಯವನ್ನು ಕಿತ್ತುಕೊಂಡಿದ್ದ ಜ್ವಾಲೆ ಈಗ ಹೊರಬಿದ್ದಿತು. ಅಣ್ಣತಮ್ಮಂದಿರಿಂದಾದ ಅಪಮಾನಕ್ಕೆ ಸೇಡು ತೀರಿಸಿಕೊಳ್ಳಲು ಅನುವಾದಳು. ಮೂಲರೂಪವನ್ನು ಧರಿಸಿದಳು! ಭಯಂಕರ ವ್ಯಕ್ತಿತ್ವಕ್ಕೆ ತಕ್ಕಂತೆ ಅವಳ ಅಂಗಾಂಗಗಳು ಭೀಕರರೂಪವಾಗಿ ಮಾರ್ಪಟ್ಟವು. ಅವಳ ಕೈಬೆರಳಿನ ಉಗುರುಗಳು ಮೊರದಂತಿದ್ದವು. ಶೂರ್ಪನಖಿ!
ಸೀತೆ ಬೆಚ್ಚಿದಳು. ರಾಮ, ಲಕ್ಷ್ಮಣನಿಗೆ ಮುಂದೆಂದೂ ಬದಲಾಗದಂತೆ ಇವಳ ಕಿವಿ, ಮೂಗುಗಳನ್ನು ಕತ್ತರಿಸಿ, ವಿಕಲಾಂಗಿಯನ್ನಾಗಿಸು. ಯಾರನ್ನೂ ಮೋಸದ ಬಲೆಗೆ ಬೀಳಿಸಿಕೊಳ್ಳದಂತೆ ಮಾಡು ಎಂದಾಗ, ಲಕ್ಷ್ಮಣ ಕೂಡಲೇ ಅವಳ ಕಿವಿ, ಮೂಗುಗಳನ್ನು ಕತ್ತರಿಸಿಹಾಕಿದ! ಅವಳ ಕಿರುಚಾಟ ಅರಣ್ಯದಲ್ಲೆಲ್ಲ ಮಾರ್ದನಿಸಿತು. ಇವರಿಗೆ ತಕ್ಕ ಶಿಕ್ಷೆ ಮಾಡಿಸುತ್ತೇನೆ ಎಂದು ಖರ, ದೂಷಣರ ಬಳಿಗೆ ಓಡಿದಳು. ತನ್ನ ಅವಸ್ಥೆಗೆ ಕಾರಣರಾದ ರಾಮಲಕ್ಷ್ಮಣರನ್ನು ವಧಿಸುವಂತೆ ಹೇಳಿದಳು. ದೈತ್ಯಸಂಹಾರಕ್ಕೆ ನಾಂದಿ ಆಯಿತು. ರಾಮ ತನ್ನ ಬಾಣದಿಂದ ಅಲ್ಲಿದ್ದ ರಾಕ್ಷಸರೆಲ್ಲರನ್ನೂ ಕೊಂದುಹಾಕಿದ. ರಾಕ್ಷಸರ ವಧೆಗೆ ಕಾರಣಳಾದವಳು ಶೂರ್ಪನಖಿ! ದಂಡಕಾರಣ್ಯ ವಾಸಿಗಳಿಗಿದ್ದ ಭಯವು ದೂರವಾಯಿತು. ನೆಮ್ಮದಿ, ಶಾಂತಿ ನೆಲೆಸಿತು.
ಆದರೆ ಮಹತ್ಕಾರ್ಯವಾಗಬೇಕಾಗಿದೆ ಅಲ್ಲವೆ? ಶೂರ್ಪನಖಿಗೆ ತನ್ನ ಇಷ್ಟ ನೆರವೇರಲಿಲ್ಲವೆಂಬ ಸಂಕಟದ ಜೊತೆಗೆ ಸೋದರರನ್ನೆಲ್ಲ ಕಳೆದುಕೊಂಡಂತಾಯಿತು. ಅವಳಲ್ಲಿದ್ದ ಮತ್ಸರದ ನಂಜು ಅಡಗಲಿಲ್ಲ. ತನ್ನ ದುಃಸ್ಥಿತಿಗೆ ರಾವಣನೇ ಕಾರಣನಲ್ಲವೆ? ಅವನು ದೈತ್ಯ ಚಕ್ರವರ್ತಿ! ಅವನಿಂದ ಇದರ ಪ್ರತೀಕಾರವನ್ನು ಮಾಡಿಸಿಯೇ ತೀರುತ್ತೇನೆ ಎಂದು ಅಬ್ಬರಿಸುತ್ತ, ಲಂಕೆಗೆ ಹಾರಿದಳು.
ದರ್ಬಾರಿನಲ್ಲಿದ್ದ ರಾವಣನಿಗೆ ತಂಗಿಯ ಅವಸ್ಥೆಯನ್ನು ಕಂಡು ಅಚ್ಚರಿಯೂ ಆಯಿತು. ಏಕೆಂದರೆ ಅವಳ ಎದುರಿಗೆ ನಿಲ್ಲಬಲ್ಲವರಾರಿದ್ದಾರೆ? ಆಗ ಶೂರ್ಪನಖಿಯು ಪಂಚವಟಿಯಲ್ಲಿ ನಡೆದ ಕತೆಯಿಂದ ಪ್ರಾರಂಭಿಸಿ, ಖರ ದೂಷಣರ ವಧೆಯವರೆಗಿನ ಕತೆಯನ್ನು ವಿವರವಾಗಿ ತಿಳಿಸಿದಳು. ರಾವಣನ ಕೋಪವನ್ನು ಉದ್ರಿಕ್ತಗೊಳಿಸುವುದಕ್ಕಾಗಿ, ಅವನ ಶಕ್ತಿಯನ್ನೂ ಅವಹೇಳನ ಮಾಡತೊಡಗಿದಳು. ನೀನು ತ್ರಿಲೋಕಾಧಿಪತಿ ಆದರೇನು? ರಾಮನ ಹೆಂಡತಿಯಂತಹ ಸುಂದರಿಯನ್ನು ಪಡೆಯಲಾರದವನು ಎಂದು ಕೆಣಕಿದಾಗ ಹಳೆಯ ನೆನಪು ಕಣ್ಣ ಮುಂದೆ ಕುಣಿಯಿತು. ಸೀತಾ ಸ್ವಯಂವರ! ಧನುಸ್ಸನ್ನು ಎತ್ತಲಾರದೆ ಮುಗ್ಗರಿಸಿಬಿದ್ದದ್ದು. ರಾಣಿವಾಸದವರ ಅಟ್ಟಹಾಸ! ಹೇಗಾದರೂ ಸರಿ ಸೀತೆಯನ್ನು ಪಡೆದೇ ತೀರುತ್ತೇನೆ ಎಂಬ ಶಪಥ. ಈಗ ಎಚ್ಚೆತ್ತ. ತಂಗಿಗೆ ಸಮಾಧಾನ ಮಾಡಿದ. ಮುಂದಿನ ಕಾರ್ಯರಚನೆಗೆ ಸಿದ್ಧನಾದ.
ಶೂರ್ಪನಖಿ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಗಳನ್ನು ಹೊಡೆದಳು. ಸೀತೆಯ ದಾಂಪತ್ಯ ಸಂತೋಷವನ್ನು ಕಂಡು ಸಹಿಸಲಾರದಾಗಿದ್ದಳು. ತನಗಿಲ್ಲದ ಸುಖ ಮತ್ತೊಬ್ಬರು ಅನುಭವಿಸಿದರೆ ಮತ್ಸರ ಉಂಟಾಗುತ್ತದೆ. ಅದರಲ್ಲಿಯೂ ರಾಕ್ಷಸಿ ಶೂರ್ಪನಖಿ! ಸೀತೆಯ ಸುಖಜೀವನಕ್ಕೆ ಕೊಳ್ಳಿ ಹಚ್ಚಿ ಆನಂದಪಡುವ ವಿಕೃತ ಮನದವಳು. ಮತ್ತೊಂದು ತನ್ನ ವೈಧವ್ಯಕ್ಕೆ, ದಾಂಪತ್ಯ ಸುಖವಂಚನೆಗೆ ಕಾರಣನಾದ ರಾವಣನನ್ನು ನೆಮ್ಮದಿಯಾಗಿ ಇರುವಂತೆ ಬಿಡದೆ ಅವನಲ್ಲಿಯೂ ಕಿಚ್ಚನ್ನು ಹಚ್ಚಿದಳು! ಸೀತೆಯೇ ಮೂಲ ವಸ್ತು ಆದಳು. ರಾವಣ ಸಂಹಾರಕ್ಕೆ ಸೀತೆಯೇ ಕಾರಣಳು ಎನ್ನುವ ಮಾತಿಗೆ ಕಾರಣವಾದವಳು ಶೂರ್ಪನಖಿ! ಎಲ್ಲಿಂದೆಲ್ಲಿಗೆ ನಂಟು ಬೆಳೆಯಿತು? ದಂಡಕಾರಣ್ಯದಲ್ಲಿ ರಾಮ, ಲಕ್ಷ್ಮಣರ ಬಿಲ್ಲಿನ ಪ್ರಭಾವವನ್ನು ಕಂಡಿದ್ದಳು. ಹೀಗೆ ಶೂರ್ಪನಖಿಯೂ ರಾಮಾವತಾರದ ಉದ್ದೇಶ ಸಫಲಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದಳು. ಲೋಕಕಲ್ಯಾಣ ಕಾರ್ಯದಲ್ಲಿ ತಿರುವನ್ನು ತಂದಳು.
ರಾವಣ ತಂಗಿಯ ಮಾತಿನಲ್ಲಿ ಅಡಗಿದ್ದ ವಿಪರ್ಯಾಸವನ್ನು ಅರಿತಂತೆ ಕಾಣಲಿಲ್ಲ. ಸೀತೆಯನ್ನು ಹೇಗೆ ಪಡೆಯಬಹುದೆಂದು ಕುತಂತ್ರವನ್ನು ಯೋಚಿಸತೊಡಗಿದ. ತನ್ನ ಸೋದರಳಿಯನಾದ ಮಾರೀಚ ದಂಡಕಾರಣ್ಯದಲ್ಲಿ ಇರುವುದು ನೆನಪಿಗೆ ಬಂತು. ಅವನ ಮೂಲಕ ತನ್ನ ಶಪಥವನ್ನು ಪೂರೈಸಿಕೊಳ್ಳಲು ಸನ್ನದ್ಧನಾಗಿ ಬಂದು, ತನ್ನ ಯೋಚನೆಯನ್ನು ತಿಳಿಸಿದಾಗ, ಮಾರೀಚನೂ ಬಾಲ್ಯದಲ್ಲಿಯೇ ರಾಮಬಾಣದ ರುಚಿಯನ್ನು ಕಂಡಿದ್ದುದರಿಂದ, ಮಾರೀಚ ಈ ಕೆಲಸದಲ್ಲಿ ಸಹಾಯ ಮಾಡಲು ಒಪ್ಪದಿದ್ದಾಗ, ರಾವಣ ತನ್ನ ದರ್ಪವನ್ನು, ಅಧಿಕಾರವನ್ನು ಬಳಸಿಕೊಂಡು, ಆಜ್ಞೆ ಮಾಡಿಬಿಟ್ಟ! ಮಾರೀಚನೂ ಸಹ ರಾವಣನ ಕೈಲಿ ಸಾಯುವುದಕ್ಕಿಂತ ರಾಮನ ಕೈಲಿ ಸಾಯುವುದೇ ಮೇಲೆಂದು ಯೋಚಿಸಿ, ಕಾಂಚನ ಮೃಗವಾಗಿ, ಪರ್ಣ ಕುಟೀರದ ಮುಂದೆ ಸುಳಿದಾಡಿದಾಗ, ಎಂದೂ ಯಾವುದನ್ನೂ ತನಗೆ ಬೇಕೆಂದು ಕೇಳದ ಸೀತೆ ಈ ಮೃಗವನ್ನು ಹಿಡಿದು ತರುವಂತೆ ರಾಮನನ್ನು ಕೇಳಿದಳು. ವಿಧಿಲಿಖಿತಕ್ಕೆ ಯಾರೂ ಎದುರಿಲ್ಲ.
ರಾಮ ಜಿಂಕೆಯ ಬೇಟೆಗಾಗಿ ಹೊರಟ. ಸ್ವಲ್ಪ ಹೊತ್ತಿನಲ್ಲೇ ಹಾ, ಸೀತೆ; ಹಾ ಲಕ್ಷ್ಮಣ ಎಂಬ ರಾಮನ ಧ್ವನಿಯನ್ನು ಕೇಳಿ, ತನ್ನ ಕಾವಲಿಗಿದ್ದ ಲಕ್ಷ್ಮಣನನ್ನೂ ಬಲಾತ್ಕಾರವಾಗಿ ರಾಮನ ಸಹಾಯಕ್ಕೆ ಕಳುಹಿಸಿದಳು. ಮೊದಲೇ ರೂಪಿಸಿದ್ದಂತೆ ರಾವಣನು ಸಂನ್ಯಾಸಿ ವೇಷದಿಂದ ಭಿಕ್ಷೆ ಕೇಳಲು ಬಂದಾಗ, ವಿಧಿಯಿಲ್ಲದೆ ಲಕ್ಷ್ಮಣ ಹಾಕಿದ್ದ ರೇಖೆಯನ್ನು ದಾಟಿ, ಹೊರಗೆ ಬಂದಾಗ ಸೀತೆಯನ್ನು ಅಪಹರಿಸಿದ ರಾವಣ! ಸೀತೆ ತನ್ನ ಪಾತಿವ್ರತ್ಯ ಬಲದಿಂದ ಅವನನ್ನು ಅಲ್ಲಿಯೇ ದಹಿಸಿಬಿಡಬಲ್ಲವಳಾಗಿದ್ದಳು. ಆದರೆ ರಾಮನಿಂದ ಆ ಕಾರ್ಯವಾಗಬೇಕಾಗಿದೆ. ಅಲ್ಲದೆ ಇನ್ನೂ ದುಷ್ಟದೈತ್ಯರ ಸಂಹಾರವಾಗಬೇಕಾಗಿದೆ. ಅದಕ್ಕಾಗಿ ಸೀತೆ ಬಂದಿ ಆದಳು. ಲೋಕಕಲ್ಯಾಣಕ್ಕಾಗಿ ತಾನು ದುಷ್ಟನ ಕೈಗೆ ಸಿಲುಕಿದಳು. ಹಣತೆಯಲ್ಲಿನ ಬತ್ತಿಯಂತೆ ತಾನು ಉರಿದು ಲೋಕದ ಕತ್ತಲನ್ನು ಅಳಿಸಿ ಬೆಳಕು ನೀಡಿದ ಮಹಾಸತಿ! ರಾವಣ ತನ್ನ ಶಪಥವನ್ನು ಪೂರೈಸಿಕೊಂಡ. ಸೀತೆಯನ್ನು ಕದ್ದೊಯ್ದ. ಆದರೆ ತನ್ನವಳನ್ನಾಗಿ ಮಾಡಿಕೊಳ್ಳಲಾಗಲಿಲ್ಲ. ತಾನು ತಂದಿರುವ ಸೀತೆಯೇ ತನಗೆ ಮೃತ್ಯು ಎಂದರಿಯದೇ ಹೋದ. ಸೀತೆ ಎಂಬ ನಾರಿಶಕ್ತಿಯೇ ರಾವಣನ ಸಂಹಾರಕ್ಕೆ ಕಾರಣವಾಯಿತು.
ರಾಮ ಕಾಂಚನಮೃಗದ ಹಿಂದೆ ಹೋದದ್ದು ಮುಂದಿನ ದೈತ್ಯಸಂಹಾರಕ್ಕೆ ಕಾರಣವಾಯಿತು. ಮಾರೀಚನನ್ನು ಕೊಂದು, ಹಿಂತಿರುಗುವಾಗ, ಎದುರಿಗೆ ಲಕ್ಷ್ಮಣನನ್ನು ಕಂಡು, ಸೀತೆಗೆ ಏನಾದರೂ ಅಪಾಯವಾಗಬಹುದೆಂದು ಕುಟೀರಕ್ಕೆ ಹಿಂತಿರುಗಿದರು. ಸೀತೆ ಇಲ್ಲ! ಸುತ್ತಮುತ್ತ ಹುಡುಕುತ್ತ ವಿಶ್ವಾಸಿಯಾದ ಜಟಾಯುವಿನ ಬಳಿಗೆ ಬಂದರು. ಅಲ್ಲಿ ಮರಣಾವಸ್ಥೆಯಲ್ಲಿದ್ದ ಜಟಾಯುವಿನಿಂದ ರಾವಣ ಸೀತೆಯನ್ನು ಕೊಂಡೊಯ್ದ ವಿಷಯ ತಿಳಿಸಿತು. ರಾವಣನೊಡನೆ ಹೋರಾಡಿ, ಪ್ರಾಣಪಕ್ಷಿ ಹಾರುವುದಕ್ಕೆ ಮುಂಚೆ ರಾಮನಿಗೆ ವಿಷಯ ತಿಳಿಸಿ ಮರಣ ಹೊಂದಿತು. ಈಗ ರಾಮನು ರಾವಣನ ಸಂಹಾರಕ್ಕೆ ಸಂಕಲ್ಪ ಮಾಡಿದ! ಕಾರಣವಿಲ್ಲದೆ ಯಾರನ್ನೂ ಕೊಲ್ಲಬಾರದೆಂಬ ಸೀತೆಯ ಮಾತಿಗೆ ಹಿಂದೆ ಧರ್ಮ/ಕರ್ತವ್ಯದ ಬಗ್ಗೆ ತಿಳಿಸಿದ್ದನಲ್ಲವೆ? ಈಗ ರಾಮಾವತಾರದ ಉದ್ದೇಶಕ್ಕೆ ಸರಿಯಾದ ಕಾರಣ ಸಿಕ್ಕಿತು. ಜಟಾಯುವಿನ ಪಾತ್ರ ಬಹಳ ಮುಖ್ಯವಾದದ್ದು. ಮುಂದೆ ಸೀತೆಯನ್ನು ಹುಡುಕಲು, ಮುಳುಗುತ್ತಿರುವವನಿಗೆ ಹುಲ್ಲುಕಡ್ಡಿ ಆಧಾರ ಸಿಕ್ಕಂತಾಯಿತು. ರಾಮಲಕ್ಷ್ಮಣರು ಸೀತೆಯನ್ನು ಹುಡುಕುತ್ತ ಹೊರಟಾಗ ಕಬಂಧನೆಂಬ ರಾಕ್ಷಸನಿಂದ ಮತ್ತೊಂದು ಸೂಚನೆ ಸಿಕ್ಕಿತು, ಶಬರಿ ಎಂಬವಳನ್ನು ಭೇಟಿಯಾದರೆ ನಿಮ್ಮ ಕಾರ್ಯಕ್ಕೆ ಅನುಕೂಲವಾಗುತ್ತದೆ ಎಂದು. ಹೀಗೆ ರಾವಣಸಂಹಾರಕ್ಕೆ ಸೀತೆ ಕಾರಣಳಾದಳು. ಅದಕ್ಕೆ ಕಾರಣ ಶೂರ್ಪನಖಿ! ಒಂದು ಕಾರ್ಯ ಸಫಲವಾಗಬೇಕಾದರೆ ನಾನಾ ರೀತಿಯಲ್ಲಿ ಸಹಕಾರ ಸಿಗಬೇಕು. ಇಲ್ಲಿಯವರೆಗೆ ಸಿಕ್ಕ ಸ್ತ್ರೀಪಾತ್ರಗಳೆಲ್ಲ ರಾಮನ ವನವಾಸಕ್ಕೆ, ಸತ್ಯಪರಿಪಾಲನೆಗೆ ಸಹಕರಿಸಿದಂತೆ ಕಂಡುಬಂದರೂ, ಈಗ ಶೂರ್ಪನಖಿಯ ವಿಪರೀತವಾದ ರೀತಿಯು ರಾವಣಸಂಹಾರಕ್ಕೆ ಶಕ್ತಿ ನೀಡಿತು.
ಶಬರಿ: ಮತಂಗ ಋಷಿಗಳ ಶಿಷ್ಯೆ. ಅವರ ಆಶ್ರಮದ ಪರಿಸರದ ಕಾರ್ಯ ಮತ್ತು ಗುರುಗಳ ಸೇವೆ ಇವೆರಡೇ ಅವಳ ಜೀವನವನ್ನು ಸಾರ್ಥಕಗೊಳಿಸಿದ್ದವು. ತಪಸ್ವಿ ಜೀವನವನ್ನು ರೂಪಿಸಿತ್ತು. ಗುರುಗಳಿಗೆ ವೃದ್ಧಾಪ್ಯ ಆವರಿಸಿತು. ಆಗ ಒಂದು ದಿನ ಶಬರಿ, ಈ ವನಕ್ಕೆ ರಾಮ ಬಂದಿದ್ದಾನೆಂದು ತಿಳಿಯಿತು. ಸಾಕ್ಷಾತ್ ಭಗವಂತ ಅವನು! ಆದರೆ ನಾನು ಅವನನ್ನು ನೋಡಲಾರೆ. ಶರೀರವನ್ನು ತ್ಯಜಿಸಬೇಕಾದ ಸಮಯ ಬಂದಿದೆ. ನೀನು ಅವನ ದರ್ಶನಕ್ಕಾಗಿ ಕಾಯುತ್ತಿರು. ಅವನಿಂದ ಲೋಕಕಲ್ಯಾಣವಾಗಬೇಕಾಗಿದೆ. ಅವನ ಕಾರ್ಯಕ್ಕೆ ಕೈ ಜೋಡಿಸು ಎಂದು ಹೇಳಿ, ತಮ್ಮ ಜೀರ್ಣಶರೀರವನ್ನು ತ್ಯಜಿಸಿ, ಮುಕ್ತರಾದರು. ಅಂದಿನಿಂದ ಶಬರಿ ಗುರುಗಳ ಆಶ್ರಮದಿಂದ ಸ್ವಲ್ಪ ದೂರದಲ್ಲಿ ಚಿಕ್ಕ ಪರ್ಣಕುಟೀರವನ್ನು ಕಟ್ಟಿಕೊಂಡು ವಾಸಿಸುತ್ತ ರಾಮನ ಆಗಮನದ ನಿರೀಕ್ಷೆಯಲ್ಲಿ ದಿನ ಕಳೆಯುತ್ತಿದ್ದಾಳೆ. ಪ್ರತಿನಿತ್ಯವೂ ಬೆಳಗಾಗೆದ್ದು, ಕುಟೀರದ ಸುತ್ತಮುತ್ತ ಸ್ವಚ್ಛಗೊಳಿಸಿ ಕಾಡಿನಲ್ಲಿ ಸಿಗುವ ಗೆಡ್ಡೆಗೆಣಸು, ಹಣ್ಣು-ಹಂಪಲುಗಳನ್ನು ತಂದು ಶುಚಿಗೊಳಿಸಿ ಇಟ್ಟುಕೊಂಡು ರಾಮನಿಗಾಗಿ ಕಾಯುವುದು ದಿನಚರಿ ಆಯಿತು. ಸುಮಾರು ಹತ್ತು ವರ್ಷಗಳೇ ಉರುಳಿಹೋಗಿವೆ. ಈಗ ವೃದ್ಧೆ. ಆದರೂ ರಾಮನ ಅತಿಥಿ ಸತ್ಕಾರದ ವಿಷಯದಲ್ಲಿ ಯಾವ ಬದಲಾವಣೆಯೂ ಇಲ್ಲ.
ಎಂದಿನಂತೆ ಒಂದು ಮುಂಜಾನೆ ಎದ್ದು ಕಾರ್ಯನಿರತಳಾಗಿದ್ದಾಳೆ. ಆ ದಿನ ಮನಸ್ಸಿನಲ್ಲಿ ಏನೋ ಒಂದು ಆಶಾಭಾವನೆ ಮೂಡಿದೆ. ಸುತ್ತಮುತ್ತ ಮಂಜು ಆವರಿಸಿದೆ. ಕುಟೀರದ ಮುಂದಿನ ಮರದ ಬಳಿ ನಿಂತು, ಸುತ್ತ ನಾಲ್ಕೂ ಕಡೆ ಕಣ್ಣು ಹಾಯಿಸುತ್ತಿದ್ದಾಳೆ. ಮೊದಲೇ ಕಣ್ಣು ಮಂಜಾಗಿದೆ. ಜೊತೆಗೆ ಹೊರಗಿನ ಮಂಜೂ ಸೇರಿದೆ. ತನ್ನಷ್ಟಕ್ಕೆ ತಾನೇ ಗೊಣಗಿಕೊಳ್ಳುತ್ತಿದ್ದಾಳೆ. ರಾಮಾ, ಯಾವಾಗ ಬರುವೆ? ಕಾದು-ಕಾದು ನಿರಾಶಳಾಗುತ್ತಿದ್ದೇನೆ. ಈ ಶರೀರ ಹೋಗುವುದಕ್ಕೆ ಮುಂಚೆ ಬಾರಯ್ಯ. ಗುರುಗಳ ಮಾತು ಸುಳ್ಳಾಗಬಾರದಲ್ಲವೆ? ಎಂದು. ಸೂರ್ಯದೇವ ಸ್ವಲ್ಪ-ಸ್ವಲ್ಪವಾಗಿ ಮೇಲೇರುತ್ತಿದ್ದಂತೆ, ಮಂಜೂ ಕರಗತೊಡಗಿದೆ. ಕಣ್ಣಿಗೆ ಕೈಯನ್ನು ಮರೆಯಾಗಿಟ್ಟುಕೊಂಡು ನೋಡುತ್ತಿದ್ದಾಳೆ. ದೂರದಲ್ಲಿ ಎರಡು ಮನುಷ್ಯರ ಆಕೃತಿ ಅಸ್ಪಷ್ಟವಾಗಿ ಕಾಣುತ್ತಿದೆ. ಮನದೊಳಗಿನ ಹಂಬಲ ಇವಳನ್ನು ಚುರುಕುಗೊಳಿಸಿತು. ಆ ವೇಳೆಗೆ ಆ ಆಕೃತಿಗಳೂ ಸಮೀಪಕ್ಕೆ ಬಂದಿವೆ. ಅವರುಗಳನ್ನು ನೋಡಿ ಶಬರಿಗೆ ಸಂತೋಷವಾಗಲಿಲ್ಲ. ಒಂದು ರೀತಿಯ ಉದಾಸೀನತೆ ಉಂಟಾಯಿತು. ಗುರುಗಳು ರಾಮ ಭಗವಂತ ಎಂದಿದ್ದರು. ಅವಳ ಮನಸ್ಸಿನಲ್ಲಿ ಆ ರೀತಿ ದೇವತಾ ಚಿತ್ರವೇ ಇದ್ದದ್ದು. ಈಗ ಎದುರಿಗೆ ಕಾಣುತ್ತಿರುವುದು ಧೂಳು-ಧೂಸರಿತ ಧನುರ್ಧಾರಿಗಳಾದ ಬೇಡರಂತೆ! ಆದರೆ ಅವಳ ಸುಸಂಸ್ಕಾರ ಅವರನ್ನು ತಿರಸ್ಕರಿಸಲಿಲ್ಲ. ಕುಟೀರಕ್ಕೆ ಕರೆದೊಯ್ದಳು. ಅವರಿಬ್ಬರೂ ಸ್ನಾನ ಮಾಡಿಕೊಂಡು ಬರಲು ಹತ್ತಿರವಿದ್ದ ಕೊಳಕ್ಕೆ ಹೋದರು.
ಸ್ನಾನ ಮಾಡಿ ಬಂದ ನಂತರ ಅವರಿಬ್ಬರ ವರ್ಚಸ್ಸು ಇವಳಿಗೆ ಮತ್ತಷ್ಟು ಸೋಜಿಗವಾಯಿತು. ರಾಜಕುಮಾರರಂತೆ ಇದ್ದಾರೆ. ಆದರೆ ಜಟಾ, ವಲ್ಕಲಧಾರಿಗಳಾಗಿದ್ದಾರೆ. ಏನಾದರಾಗಲಿ, ತಾನು (ರಾಮನಿಗಾಗಿ) ಸಂಗ್ರಹಿಸಿಟ್ಟಿದ್ದ ಹಣ್ಣು ಹಂಪಲುಗಳನ್ನಿತ್ತು ಪ್ರೀತಿಯಿಂದ ಸತ್ಕರಿಸುತ್ತ ಯಾರ ಸೊತ್ತು ಯಾರಿಗೋ ಎಂದು ಗೊಣಗಿದ್ದು, ರಾಮನಿಗೆ ಕೇಳಿಸಿ ಏನು ಹೇಳಿದೆ ಅಜ್ಜಿ? ಎಂದು ಕೇಳಿದಾಗ, ವಿಷಯವನ್ನು ತೇಲಿಸಿಬಿಟ್ಟಳು. ಅನಂತರ ವಿಶ್ರಾಂತಿಗಾಗಿ ರಾಮ ಕುಟೀರದ ಒಳಗಡೆ ಮಲಗಿದ. ಲಕ್ಷ್ಮಣ ಹೊರಗಡೆ ಬಂಡೆಯ ಮೇಲೆ ಕುಳಿತ. ರಾಮ ನಿದ್ದೆ ಮಾಡುತ್ತಿದ್ದವನು ಇದ್ದಕ್ಕಿದ್ದಂತೆ, ಸೀತೇ, ನಿನ್ನನ್ನು ಕದ್ದೊಯ್ದ ರಾವಣನನ್ನು ಸುಮ್ಮನೇ ಬಿಡುವುದಿಲ್ಲ. ಕೊಂದು ನಿನ್ನನ್ನು ಕರೆತರುತ್ತೇನೆ ಎಂದು ಹೇಳುತ್ತ ಎದ್ದು ಕುಳಿತ. ಅಲ್ಲಿಯೇ ಇದ್ದ ಶಬರಿಯನ್ನು ಕಂಡು ತಲೆತಗ್ಗಿಸಿ, ಕ್ಷಮಿಸು ಅಜ್ಜಿ. ಕನವರಿಕೆಯಲ್ಲಿ ಏನೇನೋ ಹೇಳಿಬಿಟ್ಟೆ ಎಂದಾಗ ಶಬರಿ ಇಲ್ಲಾ ಮಗು, ಬೆಳಗಿನಿಂದ ನಿಮ್ಮನ್ನು ಕಂಡಾಗಿನಿಂದ ಏನೋ ಉತ್ಸಾಹ, ವಾತ್ಸಲ್ಯ ಮನಸ್ಸಿನಲ್ಲಿ ಏಳುತ್ತಿತ್ತು. ಆದರೆ ಈಗ ನನ್ನ ಅನುಮಾನ ಪರಿಹಾರವಾಯಿತು. ನೀನು ರಾಮ. ನನ್ನ ಗುರುಗಳು ಹೇಳಿದ್ದ ರಾಮ ನೀನೇ! ಆದರೆ ಸೀತೆಯ ವಿಷಯ ನಿನ್ನಿಂದ ಈಗ ತಿಳಿದಂತಾಯ್ತು ಎಂದಳು. ರಾಮನನ್ನು ಪ್ರೀತಿಯಿಂದ ಸಮಾಧಾನಗೊಳಿಸಿದಳು. ರಾಮನು ತನ್ನ ಪೂರ್ವಚರಿತ್ರೆಯನ್ನೆಲ್ಲ ಹೇಳಿದನು.
ಆವತ್ತಿನಿಂದ ರಾಮ-ಲಕ್ಷ್ಮಣರನ್ನು ತನ್ನ ಆರಾಧ್ಯದೇವತೆಯನ್ನು ಎಚ್ಚರದಿಂದ ಸತ್ಕರಿಸತೊಡಗಿದಳು. ಆದರೂ ಸೀತೆಯ ವಿರಹದಿಂದ ರಾಮನ ಆರೋಗ್ಯ ಕ್ಷೀಣಿಸಿತು. ಅತ್ಯಂತ ಕೃಶನಾಗುತ್ತ ಬಂದನು. ಒಂದು ದಿನ ರಾತ್ರಿ ಲಕ್ಷ್ಮಣ ಹೊರಗಡೆ ಚಿಂತಿಸುತ್ತ ಕುಳಿತಿದ್ದಾನೆ. ಆಗ ಶಬರಿ ಬಂದು, ಅವನ ಚಿಂತೆಗೆ ಕಾರಣವನ್ನು ಕೇಳುತ್ತಾಳೆ. ಲಕ್ಷ್ಮಣ ಅಜ್ಜಿ, ವನವಾಸಿಗಳಾಗಿರುವ ನಮಗೆ ಇನ್ನೂ ಏನೇನು ಕಷ್ಟ ಕಾದಿದೆಯೋ ಗೊತ್ತಿಲ್ಲ. ಅತ್ತಿಗೆಯೂ ರಾಕ್ಷಸನ ಕೈಗೆ ಸಿಲುಕಿ ಕಷ್ಟಪಡುತ್ತಿದ್ದಾಳೆ. ಇತ್ತ ಅಣ್ಣನ ಸ್ಥಿತಿಯೂ ಚೆನ್ನಾಗಿಲ್ಲ ಎಂದು ಶೋಕಾನ್ವಿತನಾಗಿ ಹೇಳಿದ. ಆಗ ಶಬರಿ ಮಗು, ಚಿಂತಿಸಬೇಡ. ನಿನ್ನ ಅಣ್ಣನ ಆರೋಗ್ಯಕ್ಕೆ ನಾನು ಹೊಣೆ ಆಗುತ್ತೇನೆ. ಬಾ ಎಂದು ಅವನನ್ನೂ ಕರೆದುಕೊಂಡು ಕುಟೀರದಲ್ಲಿ ಮಲಗಿದ್ದ ರಾಮನ ಬಳಿಗೆ ಬಂದಳು. ರಾಮನ ಪಾದದ ಬಳಿ ನಿಂತು, ತನ್ನ ಗುರುಗಳನ್ನು ಸ್ಮರಿಸುತ್ತ, ರಾಮನನ್ನು ಪ್ರದಕ್ಷಿಣೆಯಾಗಿ ಬಂದು ಪ್ರಾರ್ಥಿಸತೊಡಗಿದಳು. ತನ್ನ ತಪಃಶಕ್ತಿಯನ್ನು ರಾಮನಿಗೆ ಧಾರೆ ಎರೆದಳು!
ಬೆಳಗಾಯಿತು. ರಾಮ ಉತ್ಸಾಹದಿಂದ ಎದ್ದನು. ನವಚೈತನ್ಯ ಬಂದಂತಾಗಿದೆ. ಇತ್ತ ಶಬರಿ ದುರ್ಬಲಳಾಗುತ್ತ ಬರುತ್ತಿದ್ದಾಳೆ. ರಾಮಲಕ್ಷ್ಮಣರಿಬ್ಬರೂ ಅವಳಿಗೆ ಉಪಚಾರ ಮಾಡತೊಡಗಿದರು. ಹೇಳುತ್ತಾಳೆ ಉದುರುವ ಹಣ್ಣೆಲೆಗೆ ಉಪಚಾರವೇಕೆ? ನಿನ್ನಿಂದ ಲೋಕಕಲ್ಯಾಣವಾಗಬೇಕಾಗಿದೆ. ಇದು ನನ್ನ ಗುರುಗಳ ಆಜ್ಞೆ ಆಗಿತ್ತು. ಅದನ್ನು ನೆರವೇರಿಸಿದ್ದೇನೆ. ನಿನ್ನ ಕಾರ್ಯದಲ್ಲಿ (ಸೀತೆಯನ್ನು ಹುಡುಕುವುದು ಹತ್ತಿರದಲ್ಲಿರುವ ಋಷಮೂಕ ಪರ್ವತದಲ್ಲಿ ಸುಗ್ರೀವನೆಂಬ ವಾನರರಾಜನಿದ್ದಾನೆ. ಅವನಿಂದ ಅನುಕೂಲವಾಗುತ್ತದೆ. ಅವನೂ ಸಹ ತನ್ನ ಹೆಂಡತಿಯನ್ನೂ, ರಾಜ್ಯವನ್ನೂ ಅಣ್ಣ ವಾಲಿಯ ಅಧರ್ಮದಿಂದ ಕಳೆದುಕೊಂಡಿದ್ದಾನೆ. ನೀವಿಬ್ಬರೂ ಸಮಾನ ದುಃಖಿಗಳು. ಅವನನ್ನು ಭೇಟಿ ಮಾಡು ಎನ್ನುತ್ತ ತನ್ನ ಶರೀರವನ್ನು ತ್ಯಜಿಸಿದಳು. ಗುರುವಾಜ್ಞೆಯನ್ನು ಪಾಲಿಸಿದ ಧನ್ಯೆ!
ದುಷ್ಟನಿಗ್ರಹಕ್ಕಾಗಿ ರಾಮನಿಗೆ ತನ್ನ ತಪಃಶಕ್ತಿಯನ್ನು ಧಾರೆ ಎರೆದ ಮಾನ್ಯೆ! ಲೋಕಹಿತಕ್ಕಾಗಿ ಬಾಳಿದ ಪುಣ್ಯಾತ್ಮಳು! ಜಟಾಯುವಿನಿಂದ ಸೀತೆಯನ್ನು ರಾವಣನು ಕದ್ದೊಯ್ದ ವಿಷಯವೇನೋ ತಿಳಿಯಿತು. ಆದರೆ ಹುಡುಕುವುದು ಹೇಗೆ? ಶಬರಿಯ ಮೂಲಕ ಆ ಸಮಸ್ಯೆಗೆ ಪರಿಹಾರ ದೊರಕಿದಂತಾಯಿತು. ರಾವಣನ ಸಂಹಾರ ಕಾರ್ಯದಲ್ಲಿ ಶಬರಿಯ ಕೊಡುಗೆಗೆ ಬೆಲೆಕಟ್ಟಲಾಗುವುದಿಲ್ಲ. ಶಬರಿ ತನ್ನ ಶಕ್ತಿಯನ್ನು ರಾಮನಿಗೆ ಹರಿಸಿದಳು ಎನ್ನುವ ವಿಷಯದಲ್ಲಿ ಅನುಮಾನ ಉಂಟಾಗುವುದು ಸಹಜ. ಹೀಗೂ ಆಗಬಹುದೇ ಎಂದು. ಪುರಾಣಗಳಲ್ಲಿ ನಮಗೆ ಸಾಕಷ್ಟು ಉದಾಹರಣೆಗಳು ಸಿಗುತ್ತವೆ. ಯಯಾತಿಗೆ ಪುರು ತನ್ನ ಯೌವನವನ್ನು ಕೊಟ್ಟ ವಿಷಯ ಸರ್ವವಿದಿತ. ಇತ್ತೀಚೆಗೆ ಕೇವಲ ನೂರೈವತ್ತು ವರ್ಷಗಳ ಹಿಂದೆ ಶ್ರೀರಾಮಕೃಷ್ಣ ಪರಮಹಂಸರು ತಮ್ಮ ದೈವೀಶಕ್ತಿಯನ್ನು ಸಹಧರ್ಮಿಣಿ ಶಾರದಾದೇವಿಯವರಿಗೆ ಕೊಟ್ಟು ತಮ್ಮ ಆರಾಧ್ಯದೇವತೆಯಾದ ಭವತಾರಿಣಿಯನ್ನೇ ಅವರಲ್ಲಿ ಕಂಡು, ಜಗನ್ಮಾತೆಯ ಸ್ಥಾನಕ್ಕೆ ಏರಿಸಿದರು! ಶ್ರೀರಾಮಕೃಷ್ಣರು ತಮ್ಮ ಆಪ್ತ ಶಿಷ್ಯ ಯುವಕ ನರೇಂದ್ರನಿಗೆ ತಮ್ಮ ಆಧ್ಯಾತ್ಮಿಕ ಶಕ್ತಿಯನ್ನು ಕೊಟ್ಟು ನನ್ನೆಲ್ಲವನ್ನೂ ನಿನಗೆ ಕೊಟ್ಟಿದ್ದೇನೆ. ಇಂದು ನಾನು ಫಕೀರ. ಲೋಕಕಲ್ಯಾಣಕ್ಕಾಗಿ ಉಪಯೋಗಿಸು ಎಂದು ತಮ್ಮ ಮಹಾಸಮಾಧಿಗೆ ಒಂದೆರಡು ದಿನ ಮುಂಚಿತವಾಗಿ ಹೇಳಿದರು. ಮಹಾತ್ಮರ ಬದುಕು ಆದರ್ಶನೀಯ.
ಮುಂದೆ, ಸುಗ್ರೀವನ ನೆರವಿನಿಂದ ವಾನರಸೇನೆಯ ಮೂಲಕ ಸೀತಾನ್ವೇಷಣೆಯ ಕಾರ್ಯ ನಡೆಯುತ್ತದೆ. ವಾನರರು ಹುಡುಕುವಿಕೆಯಲ್ಲಿ ನಿರಾಶರಾಗಿದ್ದಾಗ, ದಕ್ಷಿಣದ ಸಮುದ್ರದಡದಲ್ಲಿ ಚಿಂತಾಕ್ರಾಂತರಾಗಿ ಮಾತನಾಡುತ್ತ, ಜಟಾಯುವಿನ ವಿಷಯ ಪ್ರಸ್ತಾಪಿಸುತ್ತಿದ್ದುದನ್ನು ಹತ್ತಿರದ ಬೆಟ್ಟದ ಮೇಲಿದ್ದ (ಗರುಡಪಕ್ಷಿಯ ಜಾತಿಗೆ ಸೇರಿದ್ದು) ಒಂದು ಪಕ್ಷಿ ರೆಕ್ಕೆಯನ್ನು ಕಳೆದುಕೊಂಡಿದ್ದು, ಹಾರಲಾರದ ಸ್ಥಿತಿಯಲ್ಲಿ ಜೋರಾಗಿ ಕೂಗಿ ಹೇಳಿತು ಜಟಾಯು ನನ್ನ ಸೋದರ. ದಯವಿಟ್ಟು ಅವನ ವಿಷಯವನ್ನು ತಿಳಿಸಿ ಎಂದು. ವಾನರರಿಗೆ ಆಶ್ಚರ್ಯವಾಯಿತು. ಅದರಲ್ಲಿ ಕೆಲವರು ಪಕ್ಷಿಯ ಬಳಿಗೆ ಹೋಗಿ ರಾಮನ ವಿಷಯವನ್ನೆಲ್ಲ ಹೇಳಿದರು. ಆಗ ಆ ಪಕ್ಷಿ, ನನಗೆ ದೂರದೃಷ್ಟಿ ಇದೆ. ಸೀತೆ ಎಲ್ಲಿ ಇದ್ದಾಳೆ ಎಂಬುದನ್ನು ನೋಡಿ, ಹೇಳುತ್ತೇನೆ ಎಂದು ರಾವಣನ ಲಂಕೆಯ ಕಡೆ ನೋಡುತ್ತ ಸೀತೆಯನ್ನು ರಾವಣ ಅಶೋಕವನದಲ್ಲಿ ಇಟ್ಟಿದ್ದಾನೆ. ಲಂಕೆ ಅಲ್ಲಿಂದ ನೂರು ಯೋಜನದಲ್ಲಿದೆ. ಸಮುದ್ರವನ್ನು ದಾಟಿ ಹೋಗಿ, ಅವಳನ್ನು ಕಾಣಬಹುದು ಎಂದು ನಿರ್ದಿಷ್ಟವಾದ ಸ್ಥಳವನ್ನು ತಿಳಿಸುತ್ತಿದ್ದಂತೆಯೇ ಅದರ ಸುಟ್ಟರೆಕ್ಕೆಗಳು ಮೊದಲ ಸ್ಥಿತಿಗೆ ಬಂತು. ನಿಮ್ಮ ಕೆಲಸ ಯಶಸ್ವಿ ಆಗಲಿ ಎಂದು ಹಾರಿಹೋಯಿತು. ಸತ್ಕಾರ್ಯಕ್ಕೆ ಸಿಕ್ಕ ಫಲ, ಪಕ್ಷಿಗೆ ರೆಕ್ಕೆ ಬಂತು. ಅದರ ಹೆಸರು ಸಂಪಾತಿ! ಸೀತಾನ್ವೇಷಣೆಯ ಕಾರ್ಯದಲ್ಲಿ ಪ್ರಧಾನವಾದ ನೆರವನ್ನು ನೀಡಿದ ಪಕ್ಷಿ ಸೋದರರನ್ನು ಕೃತಜ್ಞತೆಯಿಂದ ಸ್ಮರಿಸಬೇಕಲ್ಲವೆ? ಹನುಮಂತನ ರಾಮಭಕ್ತಿ, ರಾಮನ ಕಾರ್ಯವನ್ನು ಸುಗಮಗೊಳಿಸಿತು. ಸೀತೆಯನ್ನು ಕಂಡು, ರಾವಣ ಸಂಹಾರಕ್ಕೆ ಸಿದ್ಧತೆ ಮಾಡಿಕೊಂಡು, ರಾಮಾವತಾರದ ಉದ್ದೇಶಕ್ಕೆ ಯಶಸ್ಸು ಲಭಿಸಿದಂತೆ ಆಗಲು, ಎಷ್ಟು ಜನರ ಕೈ ಜೋಡಣೆ ಇದೆ ಎಂದು ಯೋಚಿಸಬೇಕಲ್ಲವೆ?
ಲಂಕೇಶ ರಾವಣನ ಮೂರು ಲೋಕಗಳಿಗೂ ತಾನೇ ಅಧಿಪತಿಯಾಗಿ ಮೆರೆಯಬೇಕೆಂಬ ಮಹತ್ತ್ವಾಕಾಂಕ್ಷೆ ಸಾಧುವಾದುದಲ್ಲ. ಎಲ್ಲರನ್ನೂ ತುಳಿದು ಅವರ ಗೋರಿಯ ಮೇಲೆ ಚಿನ್ನದ ಸಿಂಹಾಸನವನ್ನು ಹಾಕಿ ಕುಳಿತರೂ ಪ್ರಕೃತಿ ತನ್ನ ನಿಯಮವನ್ನು ಸಡಿಲಗೊಳಿಸುವುದಿಲ್ಲ. ಹುಟ್ಟಿದ್ದು ಸಾಯಲೇಬೇಕೆಂಬ ನಿಯಮದಂತೆ ರಾವಣನೂ ಮರಣವನ್ನು ಹೊಂದಲೇಬೇಕಾಯಿತು. ಕೆಲವರು ಭೂಮಿಗೆ ಭಾರವಾಗಿ ಬದುಕಿ, ಅವನು ಸತ್ತರೆ ಸಾಕಪ್ಪಾ ಎಂದು ಛೀಮಾರಿ ಹಾಕಿಸಿಕೊಂಡು ಸಾಯುತ್ತಾರೆ. ಕೆಲವರು ತಮ್ಮ ಬದುಕನ್ನು ಲೋಕಹಿತಕ್ಕಾಗಿ ಸವೆಸಿ ಅಮರರಾಗುತ್ತಾರೆ. ದುಷ್ಟರು ಬದುಕಿದ್ದಾಗಲೂ ನೆಮ್ಮದಿಯಿಂದ ತಾವೂ ಬದುಕುವುದಿಲ್ಲ, ಇತರರನ್ನೂ ಸುಖವಾಗಿ ಬಾಳಲು ಬಿಡುವುದಿಲ್ಲ. ಚಿನ್ನದಂತಹ ಲಂಕೆಯ ಅಧಿಪತಿ ರಾವಣ, ತಾನೂ ಅತೃಪ್ತನಾಗಿ ಬಾಳಿದ. ಆದರೆ ದೈವರಹಸ್ಯ ಶಕ್ತಿಯ ಮುಂದೆ ಎಲ್ಲರೂ ತಲೆಬಾಗಲೇಬೇಕು. ದುಷ್ಟ ಶಕ್ತಿಯ ನಾಶಕ್ಕಾಗಿ, ಶಿಷ್ಟಜನರುದ್ಧಾರಕ್ಕಾಗಿ ಭಗವಂತ ತಾನೇ ಅವತರಿಸಿ ಬರಬೇಕಾಯಿತು. ರಾವಣಸಂಹಾರಕ್ಕಾಗಿ ರಾಮನ ಅವತಾರವಾಯಿತು. ರಾಮನ ಲೋಕಕಲ್ಯಾಣ ಕಾರ್ಯಕ್ಕಾಗಿ ಜೊತೆಗೂಡಿ ಧರೆಗಿಳಿದವರು ಬಹಳ ಮಂದಿ ರಾವಣನ ಮರಣ ಸೂಚನೆಯನ್ನು ಮೊಳಗಿದ ಅಶರೀರವಾಣಿಯಿಂದ ಪ್ರಾರಂಭವಾಗಿ, ಅನೇಕ ರೀತಿಗಳಲ್ಲಿ ನೆರವಾದವರಿಗೆ ಕೊರತೆ ಇಲ್ಲ. ಪ್ರಸ್ತುತ ಲೇಖನದಲ್ಲಿ ದುಷ್ಟನಿಗ್ರಹ ಕಾರ್ಯದಲ್ಲಿ ಯಥಾಶಕ್ತಿ ತಮ್ಮ ಶಕ್ತಿ, ಸಾಮರ್ಥ್ಯಗಳನ್ನು ಪ್ರತ್ಯಕ್ಷ/ಪರೋಕ್ಷವಾಗಿ ನೆರವಾದ ಕೆಲವು ನಾರಿಯರನ್ನಷ್ಟೆ ಸ್ಮರಿಸಲಾಗಿದೆ. ರೀತಿಗಳು ವೈವಿಧ್ಯಮಯವಾಗಿವೆ. ಭಗವಂತನ ಲೀಲೆಯನ್ನು ಕೊಂಡಾಡಲು ಅವಕಾಶ ಪಡೆದವರು ಧನ್ಯರು. ಶಕ್ತಿ ಇಲ್ಲದೆ ಯಾವ ಕಾರ್ಯವೂ ನಡೆಯುವುದಿಲ್ಲ. ಕೈಯಲ್ಲಿ ಕೋದಂಡವಿರಬಹುದು. ಅದರ ಸಾರ್ಥಕ ಪ್ರಯೋಗದಿಂದ ಅದಕ್ಕೆ ಮಹತ್ತ್ವವುಂಟು. ನಾರಿ ಶಕ್ತಿಸ್ವರೂಪಿಣಿ. ನಾರಿಯರಿಗೆ ಗೌರವಾದರಗಳಿದ್ದಲ್ಲಿ ದೇವತೆಗಳು ಸಂತುಷ್ಟರಾಗಿರುತ್ತಾರೆ. ರಾವಣ ನಾರೀಶಕ್ತಿಗೆ ವಿರುದ್ಧವಾಗಿ ನಡೆದುಕೊಂಡ. ಶೂರ್ಪನಖಿಗೆ ಮಾಡಿದ ಅಗೌರವ, ಕುಲಕ್ಕೇ ಕೊಡಲಿಪೆಟ್ಟು ಹಾಕಿತು. ಸೀತೆಗಾಗಿ ಅವಳನ್ನು ಪಡೆಯುವುದಕ್ಕಾಗಿ ಮಾಡಿದ ಕುತಂತ್ರದಿಂದ ಪಡೆದದ್ದು ಯಃಕಶ್ಚಿತ್ ಮಾನವರೂಪದ ಬಗ್ಗೆ ತಿರಸ್ಕಾರವಿದ್ದ, ರಾಮನ ಬಾಣದಿಂದ ಮರಣ! ನಾರೀಶಕ್ತಿಯ ನೆರವು ರಾವಣಸಂಹಾರದಲ್ಲಿ ರಾಮನಿಗೆ ನಾನಾ ರೀತಿಯಲ್ಲಿ ಸಂದಿರುವುದನ್ನು ಕಾಣುತ್ತೇವೆ. ಭಗವಂತ ತನ್ನ ಅಭಯ ವಾಣಿಯಂತೆ ಲೋಕಹಿತಕ್ಕಾಗಿ ಅವತರಿಸುತ್ತಾನೆ.
ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಾಂ|
ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ||
ಅವತಾರಪುರುಷನಿಗೆ ನಮಿಸಿ ಧನ್ಯರಾಗೋಣ.
ಓಂ ತತ್ಸತ್|