‘ಕೃಷ್ಣ ಹೇಳುತ್ತಾನೆ : ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ | ಮಾ ಕರ್ಮಫಲಹೇತುರ್ಭೂರ್ಮಾ ತೇ ಸಂಗೋಸ್ತ್ವಕರ್ಮಣಿ || – ಅಂತ. ಅದರ ಅರ್ಥವನ್ನು ಹೀಗೆ ಕೊಟ್ಟಿದ್ದಾರೆ – ನಿನಗೆ ಕರ್ಮ ಮಾಡುವುದರಲ್ಲಿ ಮಾತ್ರ ಅಧಿಕಾರವಿದೆ. ಅದರ ಫಲದಲ್ಲಿ ಇಲ್ಲ. ಆದ್ದರಿಂದ ಮಾಡಿದ ಕೆಲಸಕ್ಕೆ ಪ್ರತಿಫಲಾಕಾಂಕ್ಷಿಯಾಗಿ ಫಲಕ್ಕೆ ಕಾರಣನೂ ನೀನೆಂದುಕೊಳ್ಳಬೇಡ ಮತ್ತು ಕರ್ಮ ಮಾಡದೆ ಜೀವಿಸಬೇಕೆಂಬ ಹಂಬಲ ನಿನ್ನಲ್ಲಿ ಹುಟ್ಟದಿರಲಿ… ಎಂದು ಮುಂತಾಗಿ. ನನ್ನ ಸಮಸ್ಯೆ ಅಂದರೆ ಸಾಮಾನ್ಯ ಮನುಷ್ಯರು ಆಚರಿಸಲಾಗದಂತಹ ಉಪದೇಶ ಇದಾಗುವುದಿಲ್ಲವೆ? ಒಬ್ಬಾತ ಏನೋ ಬಿಜಿನೆಸ್ ಮಾಡುತ್ತಾನೆ ಅಂತಾದರೆ ಅದರಲ್ಲಿ ಲಾಭ ಬರಬೇಕು, ಅದರಿಂದ ನನ್ನ ಜೀವನ ನಿರ್ವಹಣೆ ಆಗಬೇಕು ಅಂತ ತಾನೆ? ಒಬ್ಬ ಕಕ್ಷಿದಾರ ನನ್ನ ಬಳಿ ಬಂದು ಏನೋ ಕೆಲಸ ಹೇಳುತ್ತಾನೆ. ಅಫಿಡವಿಟ್ಟೊ ಮತ್ತೊಂದೊ ಅಂತಿಟ್ಟುಕೋ. ನಾನದನ್ನ ಮಾಡಿಕೊಡುತ್ತೇನೆ. ಪುಕ್ಕಟೆ ಮಾಡಿಕೊಡುವುದಕ್ಕಾದೀತಾ? ಅವನಿಂದ ಪ್ರತಿಫಲ ಪಡೆದುಕೊಂಡರೆ ತಾನೇ ನಾನು ನನ್ನ ಹೆಂಡತಿ ಮಕ್ಕಳಿಗೆ ಊಟ ಹಾಕಲಿಕ್ಕಾಗುವುದು? ಪ್ರತಿಫಲದ ಅಪೇಕ್ಷೆ ಇಲ್ಲದೆ ನಾನು ಕೆಲಸ ಮಾಡಿಕೊಡುತ್ತೇನೆ, ಏನೂ ಕೇಳುವುದಿಲ್ಲ ಎಂದೇನಾದರೂ ಜನಗಳಿಗೆ ಗೊತ್ತಾಗಿಬಿಟ್ಟರೆ ಯಾರೂ ನಯಾಪೈಸೆ ಕೊಡುವುದಿಲ್ಲ. ಮತ್ತೆ ನಾನು ಉಪವಾಸ ಬೀಳುವುದೇ. ಈಗಿನ ಕಾಲಕ್ಕೆ ಇದು ಹೊಂದುವುದಿಲ್ಲವಪ್ಪ’ ಎಂದ.
ಇಡೀ ಭಾರತವೇ ಲಾಕ್ಡೌನ್ನಿಂದಾಗಿ ಅಡ್ಡಮಲಗಿದ್ದ ದುರ್ಘಳಿಗೆಯಲ್ಲಿ ನನ್ನ ವಕೀಲ ಭಾವನಿಗೆ ಹೊತ್ತು ಕಳೆಯುವ ದೊಡ್ಡ ಸಮಸ್ಯೆ ಎದುರಾಯಿತು. ಆಫೀಸಿಗೆ ಹೋಗುವಂತಿಲ್ಲ, ಬಾಗಿಲು ತೆರೆಯುವಂತಿಲ್ಲ. ನಾಲ್ಕು ಗೋಡೆಗಳ ನಡುವೆ ಮನೆಯಲ್ಲಿಯೇ ಕುಳಿತು ಹೊತ್ತನ್ನು ಹೇಗೆ ಕೊಲ್ಲುವುದು? ಕೂಡಲೆ ನನಗೆ ಫೋನಿಸಿದ. ‘ಏನಾದರೂ ಓದುತ್ತಿರು, ಹೊತ್ತು ತಾನಾಗೆ ಜಾರುತ್ತೆ’ ಎಂದು ಹೇಳಿದೆ. `ಓದುತ್ತೇನಲ್ಲಪ್ಪ, ದಿನಾ ರಾತ್ರಿ ಮಲಗುವಾಗ ಒಂದರ್ಧ ಗಂಟೆ ಓದದೆ ನನಗೆ ನಿದ್ದೆಯೇ ಬರುವುದಿಲ್ಲ. ಇಡೀ ದಿನ ಏನಂತ ಓದುವುದು?’ ಎಂದ.
‘ಸರಳವಾದ ಕಾದಂಬರಿಗಳನ್ನೊ, ಪತ್ರಿಕೆಗಳನ್ನೊ ಓದುವುದಲ್ಲ. ಆಧ್ಯಾತ್ಮಿಕ ಗ್ರಂಥಗಳನ್ನು ಓದು; ಅರ್ಥ ಮಾಡಿಕೊಳ್ಳಲು ಪ್ರಯತ್ನಿಸು. ನಾವಿಬ್ಬರು ಈಗ ಅರವತ್ತು ದಾಟಿದವರು. ಹಾಗಾಗಿ ಇನ್ನು ನಮ್ಮ ಫೀಲ್ಡು ಅದೇ ಆಗಿರಲಿ’ ಎಂದೆ.
‘ನೀನೇನೊ ಪಿಂಚಣಿ ಹಣ ತಿನ್ನುತ್ತೀಯ – ಎಷ್ಟೆಂದರೂ ಸರಕಾರಿ ನೌಕರನಾಗಿದ್ದೋನು; ನಾವು ಹಾಂಗೆ ಮಾಡಲಿಕ್ಕೆ ಬರುತ್ತದಾ?’ ಎಂದು ಪ್ರಶ್ನೆಯಿಟ್ಟ.
‘ಹೊತ್ತು ಕಳೆಯಲು ಈಗ ಅದು ಅನಿವರ್ಯ ಅಲ್ಲವಾ?’ – ಅಂತ ಅವನ ಧಾಟಿಯಲ್ಲಿಯೆ ಕೇಳಿ ಬಾಯಿ ಮುಚ್ಚಿಸಿದೆ. ಆದರೆ ನನ್ನ ಸೂಚನೆ ಆತ ಪಾಲಿಸಿದ ಮತ್ತು ಆ ಸೂಚನೆ ಕೊಟ್ಟು ನಾನು ಬಹಳ ದೊಡ್ಡ ತಪ್ಪು ಮಾಡಿದೆ ಅಂತ ಗೊತ್ತಾದದ್ದು ಬಳಿಕ.
ಈ ನನ್ನ ವಕೀಲ ಭಾವನ ಸಂದೇಹ ಎಷ್ಟು ಕವಲುಗಳನ್ನು ಪಡೆದು ತಲೆ ತಿನ್ನುತ್ತದೆ ಎಂದು ಈ ಹಿಂದೆ ಒಮ್ಮೆ ಹೇಳಿದ ನೆನಪು ನನಗಿದೆ. ‘ಸರ್ವೇ ಜನಾಃ ಸುಖಿನೋ ಭವಂತು’ ಎನ್ನುವ ವಾಕ್ಯ ಹಿಡಿದು ನನ್ನನ್ನು ಅಟ್ಟಾಡಿಸಿದ್ದ. ಈ ಬಾರಿಯೂ ಹಾಗೆಯೆ. ನನ್ನ ಸಲಹೆಯ ಮೇರೆಗೆ ಆತ ಎತ್ತಿಕೊಂಡದ್ದು ಅಂತಿಂಥ ಪುಸ್ತಕವನ್ನಲ್ಲ – ಭಗವದ್ಗೀತೆಯನ್ನೆ. ಏಳುನೂರು ಶ್ಲೋಕಗಳಿಗೆ ಹತ್ತಾರು ಸಾವಿರ ಪುಟಗಳ ಭಾಷ್ಯಗಳನ್ನು ಹುಟ್ಟುಹಾಕಿರೋ ಪುಸ್ತಕ. ಆದರೂ ನಿತ್ಯ ಹೊಸ ಹೊಸ ಭಾಷ್ಯಗಳಿಗೇನೂ ಬರವಿಲ್ಲ. ಅಂಥಾದ್ದರಲ್ಲಿ ಬರಿದೆ ತರ್ಕಪಂಡಿತನಾದ ಭಾವ ಅದನ್ನ ಹೇಗೆ ಸ್ವೀಕರಿಸಿಯಾನು?
‘ನಾನಿದನ್ನು ಒಪ್ಪುವುದಿಲ್ಲ ಟಿ.ಎಂ.’ ಎಂದು ಬೆಳಗಾ ಬೆಳಗಾ ಫೋನ್ ಮಾಡಿದ.
‘ಕೊರೊನಾ ಇರೋದನ್ನೊ, ಮೋದಿ ಲಾಕ್ಡೌನ್ ಹೇರಿರೋದನ್ನೊ ಯಾವುದನ್ನು ನೀನು ಒಪ್ಪದೆ ಇರೋದು ಮಾರಾಯ?’ ಅಂದೆ.
‘ಅಲ್ಲಪ್ಪ, ಭಗವದ್ಗೀತೆಯ ಈ ಮಾತನ್ನು ನೀನು ಹ್ಯಾಗೆ ವ್ಯಾಖ್ಯಾನಿಸುತ್ತೀಯ ಹೇಳು ನೋಡೋಣ’ ಎಂದು ಶುರುಮಾಡಿದ. ಕಾರಂತರ ‘ಅಳಿದಮೇಲೆ’ಯ ಮರು ಓದಿನಲ್ಲಿ ತೊಡಗಿಕೊಂಡಿದ್ದ ನಾನು ಬೇಜಾರದಿಂದ ‘ನೋಡು ಭಾವ, ನಿಜ ಹೇಳಬೇಕು ಅಂದರೆ ನನಗೂ ನನ್ನಂಥ ಕೋಟ್ಯಂತರ ಮಂದಿಗೂ ಕೂಡಾ ಭಗವದ್ಗೀತೆ ಇನ್ನೂ ಅರ್ಥವಾಗಿಲ್ಲ. ಒಂದೊಂದು ಶ್ಲೋಕಕ್ಕೂ ಸಾವಿರ ಸಾವಿರ ವ್ಯಾಖ್ಯಾನಗಳಿವೆ. ನೀನು. ಓದು ಎಂದು ಸೂಚನೆ ಕೊಟ್ಟವನು ನೀನೇ, ನನ್ನ ಸಮಸ್ಯೆ ಬಗೆಹರಿಸಬೇಕಾದವನು ನೀನೇ. ಬುದ್ಧಿಜೀವಿ ಎಂದು ಕರೆದುಕೊಳ್ಳುವ ನೀನೇ ಹೇಳುತ್ತೀಯೋ, ಬೇರೆಯವರಲ್ಲಿ ಕೇಳಿ ಹೇಳುತ್ತೀಯೋ, ಅದು ನಿನಗೆ ಬಿಟ್ಟದ್ದು’ ಎಂದ. ಅಸಹಾಯನಾಗಿ, ‘ಆತು ಹೇಳಪ್ಪ’ ಎಂದೆ – ಮನಸ್ಸಿನಲ್ಲಿಯೆ ಇನ್ನು ಭಗವದ್ಗೀತೆಯ ಸಾರಾರ್ಥ ಇರುವ ಪುಸ್ತಕ ಹುಡುಕಿ ಹೇಳಬೇಕಲ್ಲ ಎಂದು ಯೋಚಿಸುತ್ತ.
‘ಕೃಷ್ಣ ಹೇಳುತ್ತಾನೆ – ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ | ಮಾ ಕರ್ಮಫಲಹೇತುರ್ಭೂರ್ಮಾ ತೇ ಸಂಗೋಸ್ತ್ವಕರ್ಮಣಿ || ಅಂತ. ಅದರ ಅರ್ಥವನ್ನು ಹೀಗೆ ಕೊಟ್ಟಿದ್ದಾರೆ – ನಿನಗೆ ಕರ್ಮ ಮಾಡುವುದರಲ್ಲಿ ಮಾತ್ರ ಅಧಿಕಾರವಿದೆ. ಅದರ ಫಲದಲ್ಲಿ ಇಲ್ಲ. ಆದ್ದರಿಂದ ಮಾಡಿದ ಕೆಲಸಕ್ಕೆ ಪ್ರತಿಫಲಾಕಾಂಕ್ಷಿಯಾಗಿ ಫಲಕ್ಕೆ ಕಾರಣನೂ ನೀನೆಂದುಕೊಳ್ಳಬೇಡ ಮತ್ತು ಕರ್ಮ ಮಾಡದೆ ಜೀವಿಸಬೇಕೆಂಬ ಹಂಬಲ ನಿನ್ನಲ್ಲಿ ಹುಟ್ಟದಿರಲಿ… ಎಂದು ಮುಂತಾಗಿ. ನನ್ನ ಸಮಸ್ಯೆ ಅಂದರೆ ಸಾಮಾನ್ಯ ಮನುಷ್ಯರು ಆಚರಿಸಲಾಗದಂತಹ ಉಪದೇಶ ಇದಾಗುವುದಿಲ್ಲವೆ? ಒಬ್ಬಾತ ಏನೋ ಬಿಜಿನೆಸ್ ಮಾಡುತ್ತಾನೆ ಅಂತಾದರೆ ಅದರಲ್ಲಿ ಲಾಭ ಬರಬೇಕು, ಅದರಿಂದ ನನ್ನ ಜೀವನ ನಿರ್ವಹಣೆ ಆಗಬೇಕು ಅಂತ ತಾನೆ? ಒಬ್ಬ ಕಕ್ಷಿದಾರ ನನ್ನ ಬಳಿ ಬಂದು ಏನೋ ಕೆಲಸ ಹೇಳುತ್ತಾನೆ. ಅಫಿಡವಿಟ್ಟೊ ಮತ್ತೊಂದೊ ಅಂತಿಟ್ಟುಕೋ. ನಾನದನ್ನ ಮಾಡಿಕೊಡುತ್ತೇನೆ. ಪುಕ್ಕಟೆ ಮಾಡಿಕೊಡುವುದಕ್ಕಾದೀತಾ? ಅವನಿಂದ ಪ್ರತಿಫಲ ಪಡೆದುಕೊಂಡರೆ ತಾನೇ ನಾನು ನನ್ನ ಹೆಂಡತಿ ಮಕ್ಕಳಿಗೆ ಊಟ ಹಾಕಲಿಕ್ಕಾಗುವುದು? ಪ್ರತಿಫಲದ ಅಪೇಕ್ಷೆ ಇಲ್ಲದೆ ನಾನು ಕೆಲಸ ಮಾಡಿಕೊಡುತ್ತೇನೆ, ಏನೂ ಕೇಳುವುದಿಲ್ಲ ಎಂದೇನಾದರೂ ಜನಗಳಿಗೆ ಗೊತ್ತಾಗಿಬಿಟ್ಟರೆ ಯಾರೂ ನಯಾಪೈಸೆ ಕೊಡುವುದಿಲ್ಲ. ಮತ್ತೆ ನಾನು ಉಪವಾಸ ಬೀಳುವುದೇ. ಈಗಿನ ಕಾಲಕ್ಕೆ ಇದು ಹೊಂದುವುದಿಲ್ಲವಪ್ಪ’ ಎಂದ.
‘ಸಾವಕಾಶ, ಸಾವಕಾಶ’ ನಾನು ಹೇಳಿದೆ – ‘ಭಗವದ್ಗೀತೆ ಅಂದರೆ ಬರೀ ಅದೊಂದೇ ಶ್ಲೋಕವಲ್ಲ, ಅದನ್ನ ಬಿಟ್ಹಾಕಿ ಉಳಿದುದರ ಅರ್ಥ ನೋಡಿಕೋ’ – ಹೇಗಾದರೂ ತಪ್ಪಿಸಿಕೊಳ್ಳುವ ಹುನ್ನಾರು ನನ್ನದು. ‘ಅದೆಲ್ಲ ಬಿಟ್ಬಿಡು. ನನ್ನಿಂದ ನೀನು ಅಷ್ಟು ಸುಲಭಕ್ಕೆ ತಪ್ಪಿಸಿಕೊಳ್ಳಲಾರೆ. ನೆವ ಬೇಡ ನನಗೆ. ಈ ಶ್ಲೋಕ ಭಗವದ್ಗೀತೆಯ ಮುಖ್ಯ ಶ್ಲೋಕ, ಎಲ್ಲರೂ ಉದಾಹರಿಸ್ತಾರೆ ಅಂತ ನಂಗೊತ್ತು. ಹಾಗಾಗಿ ತಪ್ಪಿಸಿಕೊಳ್ಳದೆ ನನಗೆ ಉತ್ತರ ಕೊಡು. ಇದು ಸರೀನಾ?’
‘ಭಾವ, ನಾನೂ ಈ ಶ್ಲೋಕ ಕೇಳಿದ್ದೇನೆ ಹೊರತಾಗಿ ಈ ಕುರಿತು ಹೆಚ್ಚು ಯೋಚಿಸಿಲ್ಲ. (ನಿನ್ನ ಹಾಗೆ ಬೇಡದ ವಿಷಯಕ್ಕೆ ತಲೆ ಕೆಡಿಸಿಕೊಂಡಿಲ್ಲ) ಆಯಿತಪ್ಪ. ನನಗೆರಡು ದಿವಸ ಟೈಂ ಕೊಡು. ಅದರ ಸರಿಯಾದ ಅರ್ಥ ಯಾರಾದರೂ ವಿಶ್ಲೇಷಿಸಿದ್ದಾರೋ ನೋಡಿ ಹೇಳ್ತೇನೆ’ ಎಂದೆ. ಬೀಸೋ ದೊಣ್ಣೆ ತಪ್ಪಿದರೆ ಸಾಕೆಂದು ತಪ್ಪಿಸಿಕೊಳ್ಳಲು ನೋಡಿದೆ.
‘ಸರಿಯಪ್ಪ. ಇವತ್ತು ಮಂಗಳವಾರ. ನಾನು ನಿನಗೆ ಎರಡು ದಿನವಲ್ಲ, ನಾಲ್ಕು ದಿನ ಟೈಂ ಕೊಡ್ತೇನೆ. ಬರುವ ಭಾನುವಾರ ಬೆಳಗ್ಗೆ ಹೇಳತಕ್ಕದ್ದು’ ಎಂದ. ಅವನ ಆಡರ್ರೇ ಹಾಗೆ. ಒಂದರ್ಥದಲ್ಲಿ ಅವನು ನನ್ನ ಪ್ರತಿರೂಪ ಅಂತಿಟ್ಕೊಳ್ಳಿ.
ಆಗ ನನಗೆ ತಟ್ಟನೆ ನೆನಪಿಗೆ ಬಂದದ್ದು ನನ್ನ ಕಾಲೇಜುಮೇಟು ಆಗಿದ್ದು ಈಗ ದೊಡ್ಡ ವಿದ್ವಾಂಸನಾಗಿ ಭಗವದ್ಗೀತೆಯ ಕುರಿತಾಗಿ ಪ್ರವಚನ ಮಾಡುವ ಶೇಖರ ಶರ್ಮ. ನಾಲ್ಕಾರು ಬಾರಿಯ ಸತತ ಪ್ರಯತ್ನದ ನಂತರ ದೂರವಾಣಿಯಲ್ಲಿ ದಕ್ಕಿದ. ಭಾವನ ಪ್ರಶ್ನೆಯನ್ನೆ ಅವನೆದುರು ಇಟ್ಟೆ.
‘ಕರ್ಮ ಅಂದರೆ ನಿಷ್ಕಾಮಕರ್ಮವಾಗಿರಬೇಕು. ಅದು ಅಧ್ಯಾತ್ಮದ ಭಾಷೆ. ನಮ್ಮಲ್ಲಿರುವ ಆಸೆಯನ್ನು ಸುಟ್ಟರೆ ಆಸೆ ಈಡೇರುತ್ತೆ ಎನ್ನುತ್ತಾರೆ. ಉದಾಹರಣೆಗೆ ಮಕ್ಕಳಾಗಲೆಂದು ಮಾಡುವ ಪುತ್ರಕಾಮೇಷ್ಟಿ ಯಾಗ. ಅಂದರೆ ಪುತ್ರಕಾಮವನ್ನು – ಮಗನು ಬೇಕೆಂಬ ಇಚ್ಛೆಯನ್ನೆ ಯಜ್ಞಕ್ಕೆ ಆಹುತಿ ಮಾಡುವುದು. ಆಗ ಅದು ಈಡೇರುತ್ತದೆ. ಅದಕ್ಕೆ ನೀನು ಕರ್ಮ ಮಾಡು, ನಿಷ್ಕಾಮವಾಗಿರಲಿ. ಪ್ರತಿಫಲ ನಿರೀಕ್ಷಿಸಬೇಡ, ಅದಾಗಿಯೇ ಬರುತ್ತದೆ ಮತ್ತು ಅದರ ಸಂತೋಷಾಧಿಕ್ಯ ಹಿರಿದಾಗಿರುತ್ತದೆ ಎನ್ನುವ ಅರ್ಥ. ಈಗ ನೋಡು, ನೀನು ಯಾವುದೋ ಸ್ಪರ್ಧೆಗೆ ಕಥೆ ಕಳಿಸಿದ್ದೀಯ ಅಂತಿಟ್ಕೊ. ಬರಹಗಾರನಾಗಿ ನಿನ್ನ ಕರ್ತವ್ಯ ಮಾಡಿದ್ದೀಯ. ಅದು ನಿನ್ನ ಕರ್ಮ. ಬಹುಮಾನದ ನಿರೀಕ್ಷೆಯಲ್ಲಿರಬೇಡ. ಅದಕ್ಕೆ ಬಹುಮಾನ ಬಂದಿದೆ ಎಂದರೆ ಅದರ ಸಂತೋಷ ನೀನು ಬಹುಮಾನ ಬರಲಿ ಎಂದು ನಿರೀಕ್ಷಿಸುತ್ತ ಕುಳಿತುಕೊಳ್ಳುವುದಕ್ಕಿಂತ ಹೆಚ್ಚಿನದಾಗಿರುತ್ತದೆ. ಹಾಗಿರಬೇಕು ಅನ್ನುವ ಅರ್ಥದಲ್ಲಿ ಈ ಶ್ಲೋಕವನ್ನು ವ್ಯಾಖ್ಯಾನಿಸಬೇಕು’ ಶೇಖರಶರ್ಮ ಸುದೀರ್ಘವಾಗಿ ಪ್ರವಚಿಸಿದ.
ಇವನಲ್ಲಿಯೂ ನನಗೆ ಸಲುಗೆಯಿತ್ತು, ವಿರೋಧಿಸಿದೆ. ‘ನಿನ್ನ ಉದಾಹರಣೆಯ ಕುರಿತೇ ಹೇಳುವುದಾದರೆ, ಸ್ಪರ್ಧೆಯಲ್ಲಿ ಬಹುಮಾನ ಬರಲಿ ಎಂಬ ಆಸೆಯಿಲ್ಲದಿದ್ದರೆ ನನಗೆ ಕಥೆ ಬರೆಯಲಿಕ್ಕೇ ಆಗುತ್ತಿರಲಿಲ್ಲ. ಪ್ರತಿಫಲ ಇಲ್ಲದಿದ್ದರೆ ಕರ್ಮ ಮಾಡಲಾಗುವುದೇ ಇಲ್ಲ. ದೇವರ ಪೂಜೆ ಮಾಡುವವನೂ ಆಯುರಾರೋಗ್ಯ ಸಂಪದಭಿವೃದ್ಧಿ ಆಗಲಿ ಅಂತ ಕೇಳ್ತಾನೆ ತಾನೆ? ನೀನು ಸಂಸ್ಕöÈತ ವಿದ್ವಾಂಸ, ಪ್ರವಚನಕಾರ. ದಿನಕ್ಕೊಂದು ಕಡೆ ಪ್ರವಚನಕ್ಕೆ ಕರೆಯುತ್ತಾರೆ. ಪುಕ್ಕಟೆ ಕರೆದರೆ ಹೋಗುತ್ತೀಯಾ ಪ್ರವಚನ ಮಾಡಕ್ಕೆ?’ ಎಂದೆ. ‘ಮಹರಾಯ, ನಾನು ಹೇಳಿದ್ದು ಶ್ಲೋಕದ ಸಾರವನ್ನ. ನಾನೂ ನೀನೂ ಅದನ್ನು ಮೀರಿದವರಲ್ಲ. ಹಾಗೆ ಮೀರಿದವರೇ ಋಷಿಮುನಿಗಳು, ಸ್ಥಿತಪ್ರಜ್ಞರು. ಆ ಹಂತ ತಲಪಲು ಕಾಡಿಗೆ ಹೋಗಿ ತಪಸ್ಸು ಮಾಡಬೇಕು. ಸಂನ್ಯಾಸಿಯಾಗಿ ಲೋಕಹಿತವನ್ನು ಮಾತ್ರ ಗಣಿಸಬೇಕು. ಪ್ರತಿಯೊಬ್ಬನೂ ಆ ಹಂತವನ್ನು ತಲಪಬೇಕು ಎನ್ನುವುದು ಶ್ಲೋಕದ ಆಶಯ’ ಎಂದ.
ಅವನು ಸಂನ್ಯಾಸಿ ಎಂದಾಕ್ಷಣ ನನಗೆ ನಮ್ಮ ಮಠದ ಗುರುಗಳ ನೆನಪಾಯಿತು. ನನಗೆ ತಿಳಿದ ಹಾಗೆ ಮಠದ ಸಂನ್ಯಾಸಿ ಗುರುಗಳಿಗೆ ಪಾದಪೂಜೆಗೆ, ಭಿಕ್ಷೆಗೆ ಇಂತಿಷ್ಟು ಅಂತ ರೇಟು ಫಿಕ್ಸ್ ಆಗಿರುತ್ತೆ. ಅಷ್ಟಲ್ಲದೆ, ಹೋದಲ್ಲಿ ಸುಂದರವಾದದ್ದೇನಾದರೂ ಕಂಡರೆ, ನಮ್ಮ ದೇವರು ಇದನ್ನು ಇಷ್ಟಪಡುವಂತಿದೆ ಎಂದು ಭಕ್ತರಲ್ಲಿ ಹೇಳಿ ಅದನ್ನೂ ತರುವ ಸ್ವಾಮಿಗಳ ಬಗ್ಗೆ ಕೇಳಿದ್ದುಂಟು. ಆದರೆ ಅದನ್ನೆಲ್ಲ ಶರ್ಮನ ಮುಂದೆ ಹೇಳಿದರೆ ನಾಸ್ತಿಕ, ಶುದ್ಧ ನಾಸ್ತಿಕ ಎಂದು ನನ್ನ ಬಗ್ಗೆ ಅಪಪ್ರಚಾರ ಶುರುಮಾಡುವ ಮಹಾಶಯ ಆತ ಎನ್ನುವುದು ಗೊತ್ತಿದ್ದರಿಂದ ಬಾಯಿ ಮುಚ್ಚಿಕೊಳ್ಳಬೇಕಾಯಿತು. ಆದರೂ ಮನಸ್ಸು ತಡೆಯದೆ ಒಂದು ಚಿಕ್ಕ ಪ್ರಶ್ನೆಯಿಟ್ಟೆ. ‘ಅಲ್ಲ ಮಹರಾಯ, ತಪಸ್ಸಿಗೆ ಅಂತ ಕಾಡಿಗೆ ಹೋಗುತ್ತಾರೆ, ತಪಸ್ಸು ಮಾಡುತ್ತಾರೆ ಮುನಿಗಳು. ಅವರಿಗೆ ಪ್ರತಿಫಲಾಪೇಕ್ಷೆ ಇರುವುದಿಲ್ಲ ಅನ್ನುತ್ತೀಯಾ? ನಮ್ಮ ಪುರಾಣಗಳು ಹಾಗೆ ಹೇಳುವುದಿಲ್ಲವಲ್ಲ – ದೇವರು ಪ್ರತ್ಯಕ್ಷನಾದರೆ, ನನಗೆ ಮನೆ ಬೇಕು, ಹೆಂಡತಿ ಬೇಕು, ಬಂಗಾರ ಬೇಕು ಅಂತ ಕೇಳುವುದಿಲ್ಲವಾದರೂ ಮೋಕ್ಷ ಕರುಣಿಸು, ಸಾಯುಜ್ಯ ಕರುಣಿಸು ಅಂತೆಲ್ಲ ಕೇಳುತ್ತಾರಲ್ಲ, ಅದೂ ಪ್ರತಿಫಲದ ಆಶೆಯೆ ಅಲ್ಲವೆ?’
‘ಇಲ್ಲ. ಅವರು ನಿಷ್ಕಾಮಕರ್ಮಿಗಳಾಗಿರುತ್ತಾರೆ. ಅವರೇ ನಿಜವಾದ ತಪಸ್ವಿಗಳು. ದೇವರೇ ಅವರ ಆಸೆ ಇದು ಅಂತ ನೆರವೇರಿಸುತ್ತಾನೆ. ಮೂಲ ಕಥೆ ಇರುವುದು ಹಾಗೆ. ನಾವು ನಮ್ಮ ಮನಸ್ಸನ್ನ ಅದರ ಮೇಲೆ ಹೇರಿ ಬರವಣಿಗೆಯಲ್ಲಿ ಹಾಗೆ ಕೇಳಿದ ಅಂತ ಬರೆಯುತ್ತೇವಷ್ಟೆ’ ಶರ್ಮನ ಜಾಣ್ಮೆಯ ಉತ್ತರ ಸಿದ್ಧವಾಗಿಯೇ ಇತ್ತು. ಎಷ್ಟು ಪ್ರವಚನಗಳಲ್ಲಿ ಇಂಥ ತರಲೆ ಪ್ರಶ್ನೆಗಳಿಗೆ ಉತ್ತರಿಸಿದ್ದಾನೋ!
ಒಟ್ಟಿನಲ್ಲಿ ನನ್ನ ಗೊಂದಲ ಜಾಸ್ತಿಯಾಯಿತು. ಶ್ಲೋಕಕ್ಕೂ ಇವನ ಮಾತಿಗೂ ಸಂಬಂಧವೇ ಇಲ್ಲ ಎಂದೂ ಅನ್ನಿಸಿತು. ಈ ಬಗ್ಗೆ ಭಾವನಿಗೆ ಹೇಳಿದರೆ ಅವನು ನನ್ನನ್ನ ಮತ್ತಷ್ಟು ಗೊಂದಲಗೊಳಿಸುತ್ತಾನೆ ಎನ್ನಿಸಿ ಆ ವಿಚಾರ ಬಿಟ್ಟೆ.
ಹೋಗಲಿ, ಬೇರೆಬೇರೆಯವರು ಭಗವದ್ಗೀತೆಯ ಬಗ್ಗೆ ಪ್ರವಚನ ಮಾಡಿದ್ದಾರಲ್ಲ, ನೋಡುವ ಅಂತ ಹುಡುಕಿದರೆ ಈ ಶ್ಲೋಕದ ಮೇಲೆ ಒಂದು ವ್ಯಾಖ್ಯಾನ ಸುಲಭಕ್ಕೆ ಸಿಕ್ಕಿತು. ಅದು ಒಂದು ವೀಡಿಯೋ. ಕೇಳಿದೆ. ಪ್ರವಚನಕಾರರ ಹೇಳಿಕೆ ಸ್ವಾರಸ್ಯಕರವಾಗಿತ್ತು. ‘ಈ ಶ್ಲೋಕವನ್ನ ಅಕ್ಷರಶಃ ಅರ್ಥವಿಸಲು ಹೋಗಬಾರದು. ಅಂತರರ್ಥವನ್ನು ತಿಳಿದುಕೊಳ್ಳಬೇಕು. ಕಾರ್ಮಿಕನೊಬ್ಬನಿಂದ ಕೆಲಸವನ್ನು ಪಡೆದುಕೊಂಡು ಅವನಿಗೆ ಸಂಬಳ ಕೊಡದಿದ್ದರೆ ಅದು ಅಕ್ಷಮ್ಯ ಅಪರಾಧವೇ ಆಗುತ್ತದೆ. ಅವನೂ ಹಾಗೆಯೆ ದುಡಿದು ಹೋಗುವ ಮೂರ್ಖನಾಗಿರುವುದಿಲ್ಲ. ಹಾಗಿದ್ದರೆ ಮಾ ಫಲೇಷು ಕದಾಚನ ಅನ್ನುವುದಕ್ಕೇನು ಅರ್ಥ? ಅಥವಾ ಅರ್ಥವೇ ಇಲ್ಲವೋ? ಅರ್ಥ ಇದೆ. ಯೋಚನೆ ಮಾಡಬೇಕು. ಅರ್ಥವಿಲ್ಲದ ಮಾತನ್ನು ಹೇಳುವುದಕ್ಕೆ ಕೃಷ್ಣ ನಮ್ಮ ನಿಮ್ಮ ಹಾಗೆ ಮೂರ್ಖನಲ್ಲ. ದೇವರು. ಸಾರ್ವಕಾಲಿಕ ಅರ್ಥವನ್ನೇ ಹುದುಗಿಸಿರುತ್ತಾನೆ. ಅರ್ಥ ಇಷ್ಟೆ: ಎಲ್ಲ ಕರ್ಮಕ್ಕೂ ಎರಡು ರೀತಿಯ ಪ್ರತಿಫಲ ಇರುತ್ತದೆ. ಮೇಜಿನ ಮೇಲಿನದೊಂದು – ಅದಕ್ಕೆ ಸಂಬಳ ಎನ್ನುತ್ತಾರೆ, ಮೇಜಿನ ಕೆಳಗಿನದೊಂದು – ಅದಕ್ಕೆ ಗಿಂಬಳ ಎನ್ನುತ್ತಾರೆ. (ಶ್ರೋತೃಗಳಿಂದ ಜೋರಾದ ನಗು). ಕೆಳಗಿನ ಫಲಕ್ಕಾಗಿ ಆಶೆ ಪಡಬೇಡ. ಹೌದು, ಲಂಚ ತಗೋಬಾರದು ಅನ್ನೋದೆ ಅದರರ್ಥ.’
ಪ್ರವಚನ ಕೇಳಿದ್ದೆ ಸ್ವಾರಸ್ಯಕರವಾದ ಹರಿಕಥೆ ಎಂದು ನಗು ಬಂತಷ್ಟೇ ಹೊರತಾಗಿ ಉತ್ತರವೇನು ಸಿಕ್ಕಿದಂತಾಗಿರಲಿಲ್ಲ. ಇಷ್ಟೆಲ್ಲ ಹುಡುಕುವಷ್ಟರಲ್ಲಿ ಶುಕ್ರವಾರ ಕಳೆದಾಗಿತ್ತು. ಇನ್ನೆರಡೇ ದಿನ. ನನಗೇನು ತಲೆ ಹೋಗುವ ಕೆಲಸ ಇರಲಿಲ್ಲವಾದರೂ ಭಾವನ ಡೆಡ್ಲೈನ್ ಇತ್ತಲ್ಲ! ಆಗಲೆ ತಟ್ಟನೆ ‘ಈಗ ಏನು ಬೇಕಾದರೂ ಹುಡುಕಿಕೊಡುವವಳೊಬ್ಬಳಿದ್ದಾಳೆ – ಗೂಗಲತ್ತಿಗೆ ಎನ್ನುವುದು ಅವಳ ಹೆಸರು’ ಎಂದು ಮಗಳು ಹೇಳುತ್ತಿದ್ದ ನೆನಪಾಗಿ ಈ ಶ್ಲೋಕದ ಭಾಷ್ಯಗಳ ಕುರಿತು ತಡಕಾಡಿದರೆ ಹಿಮಾಲಯ ಪರ್ವತವೇ ಎದುರು ನಿಂತಂತಾಯಿತು. ಎಷ್ಟು ಜನ ಭಗವದ್ಗೀತೆಯನ್ನು ಕುರಿತು ಬರೆದವರು! ತಿಲಕರು, ಅರವಿಂದರು, ವಿನೋಬಾಭಾವೆ, ಬನ್ನಂಜೆಯವರು – ಒಬ್ಬಿಬ್ಬರೇ ಅಲ್ಲ. ಒಂದೆರಡು ಮಹನೀಯರ ವಿಶ್ಲೇಷಣೆ ನೋಡಿದೆ. ಬಹಳ ಅರ್ಥಗರ್ಭಿತವಾಗಿತ್ತು. ಇದನ್ನೆಲ್ಲ ಓದುವ ಅವಕಾಶ ಕಲ್ಪಿಸಿದ ಭಾವನಿಗೆ ಮನಸ್ಸಿನಲ್ಲಿಯೆ ಧನ್ಯವಾದ ಹೇಳುತ್ತ, ಅವನಿಗೆ ಸಂಕ್ಷಿಪ್ತವಾಗಿ ಹೇಳಬಹುದಾದ ಒಂದೆರಡು ಉತ್ತರ ಗುರುತು ಹಾಕಿಕೊಂಡೆ:
‘ಗಮನಿಸಬೇಕಾದ ಅಂಶವೆಂದರೆ ಶ್ಲೋಕದಲ್ಲಿ ‘ಮಾ ಫಲೇಷು’ ಎಂದಿರುವುದೇ ಹೊರತು ‘ನ ಫಲೇಷು’ ಎಂದಿಲ್ಲ. ಅಂದರೆ ಪ್ರತಿಫಲ ಇಲ್ಲ ಎಂದಲ್ಲ. ನ ಎನ್ನುವುದು ನಿಷೇಧಾತ್ಮಕ ಅವ್ಯಯ. ಮಾ ಎನ್ನುವುದು ಕರ್ಮಾಧಿಕಾರಿಗಷ್ಟೆ ಸಂಬಂಧಿತ ಎನ್ನುವುದನ್ನು ಗಮನಿಸಬೇಕು. ಈ ನೆಲೆಯಲ್ಲಿ ಅರ್ಥವಿಸಿಕೊಳ್ಳಬೇಕು. ಸತ್ಕರ್ಮ ಮಾಡಿದ ತಕ್ಷಣ ಫಲ ಬೇಕು ಎನ್ನುವುದು ಅಹಂಭಾವನೆಯ ಪ್ರತೀಕ. ಸತ್ಕರ್ಮ ತಾನೇ ಫಲವನ್ನು ಕೊಡುತ್ತದೆ. ನಾವು ಹಪಹಪಿಸಬಾರದು’ ‘ಆಸೆ ದುಃಖವನ್ನ ತರುತ್ತದೆ’ ‘ಗೋಮಾತೆ ಹುಲ್ಲು ತಿನ್ನುವುದು; ಆದರೆ ದೇವರಿಗೆ ಹುಲ್ಲುಕೊಡು ಅಂತ ಕೇಳುತ್ತಿರುವುದಿಲ್ಲ’.
ಜೊತೆ ಜೊತೆಗಿರುವ ಉಳಿದ ಶ್ಲೋಕಗಳನ್ನು ಸೇರಿಸಿ ಅರ್ಥ ಮಾಡಿಕೊಳ್ಳಬೇಕು. ಯುದ್ಧದಲ್ಲಿ ಗೆಲವು ಆಗುವುದೋ ಇಲ್ಲವೋ ಎನ್ನುವ ದ್ವಂದ್ವ ಮನಸ್ಸಿನಲ್ಲಿರುವ ಅರ್ಜುನನಿಗೆ ಕೃಷ್ಣ ಕೊಡುವ ಉತ್ತರ ಇದು. ‘ನೀನು ಯುದ್ಧ ಮಾಡು; ಏಕಾಗ್ರತೆಯಿರಲಿ ನಿನ್ನ ಕರ್ತವ್ಯದಲ್ಲಿ. ಪರಿಣಾಮದ ಕುರಿತು ಈಗಲೆ ಯೋಚಿಸುವುದೇಕೆ? ಸುಖ ದುಃಖ ಲಾಭ ನಷ್ಟದ ಕುರಿತು ಸಮಭಾವ ಇರುವುದೇ ಸುಂದರ ಬದುಕಿಗೆ ನಾಂದಿ. ಇಲ್ಲಿ ಯುದ್ಧ ಅಂದರೆ ಜೀವನ.’
ಹೀಗೆ ಒಂದಿಷ್ಟು ಬರೆದುಕೊಂಡೆ. ಇನ್ನೂ ಬೇಕಾದರೆ ಈ ಲಿಂಕಿನಲ್ಲಿ ಹುಡುಕು ಅಂತಾನು ಹೇಳಬೇಕೆಂದುಕೊಂಡೆ. ಭಾನುವಾರ ಸಂಜೆ ನಾಲ್ಕಾರು ಬಾರಿ ಫೋನು ಮಾಡಿದರೂ ಭಾವ ಸಿಗಲಿಲ್ಲ. ಮರುದಿನ ಮತ್ತೆ ಹತ್ತು ಗಂಟೆ ಹೊತ್ತಿಗೆ ಫೋನು ಮಾಡಿದೆ. ಎತ್ತುತ್ತಿದ್ದಂತೆ ಹೇಳಿದೆ – ‘ಭಾವ, ನಿನ್ನ ಭಗವದ್ಗೀತೆಯ ಅನುಮಾನಕ್ಕೆ ಉತ್ತರ…’ ಎನ್ನುತ್ತಿದ್ದಂತೆ ನನ್ನನ್ನು ತಡೆದ ಆತ – ‘ಅಯ್ಯೋ, ಭಗವದ್ಗೀತೆ ಹಿಡಿಯೋಕ್ಕೆ ಇನ್ನೂ ಸಮಯ ಇದೆ ಟೀಎಂ. ನಿನಗೆ ಗೊತ್ತಿರಬೇಕಲ್ಲ – ಲಾಕ್ಡೌನ್ ಸಡಿಲಿಸಿದ್ದಾರೆ. ತಿಂಗಳ ಕಾಲದ ನನ್ನ ಕೆಲಸ ಬಾಕಿ ಬಿದ್ದಿದೆ. ಬಹಳ ಬಿಜಿ ಇದ್ದೇನೆ. ಬರುವ ಭಾನುವಾರ ಫೋನ್ ಮಾಡು. ವಿರಾಮವಾಗಿ ಮಾತಾಡುವ. ಭಗವದ್ಗೀತೆಯ ಬಗ್ಗೆಯೆಲ್ಲ ಇನ್ಹತ್ತು ವರ್ಷದ ನಂತರ ಮಾತಾಡುವ. ಈಗ ಕರ್ತವ್ಯ’ ಎಂದ.
ನಿಜವಾಗಿ ಕರ್ಮಣ್ಯೇವಾಧಿಕಾರಸ್ತೇ ಅರ್ಥಮಾಡಿಕೊಳ್ಳದೆಯೂ ಆಚರಿಸುತ್ತಿರುವವನು ಈ ಭಾವನೇ ಎಂದುಕೊಂಡೆ.