ಕಳೆದ ತಿಂಗಳು ನಮ್ಮಮ್ಮನ ವರ್ಷಾಬ್ದಿಕಕ್ಕೆ ನನ್ನ ಸಹೋದರ ಬಂದಾಗ ಅಮ್ಮನ ಕಾಗದ ಪತ್ರಗಳನ್ನು ಪರಿಶೀಲಿಸಲು ಆಲ್ಮೆರಾ ತೆಗೆದೆವು. ಕಾಗದ ಪತ್ರಗಳ ತಳದಲ್ಲಿ ಒಂದು ಪ್ಲಾಸ್ಟಿಕ್ ಚೀಲದ ಗಂಟು ಅಡಗಿಕೊಂಡಿತ್ತು. ಗಂಟು ಬಿಚ್ಚಿದೆ. ಒಳಗೆ ಇನ್ನೊಂದು ಗಂಟಿತ್ತು. ಅದರಲ್ಲಿ ಮತ್ತೊಂದು, ಅದರಲ್ಲಿ ಮಗದೊಂದು! ಬಿಚ್ಚುತ್ತಲೇ ಹೋದೆ. ಒಂಬತ್ತು ಬಾರಿ ಬಿಚ್ಚಿದಾಗ ಒಳಗಿತ್ತು ಚೀಟಿ ಅಂಟಿಸಿದ್ದ ಹಿಮಾಲಯಾ ಪೌಡರ್ ಡಬ್ಬ. ಇದು ನಮ್ಮಮ್ಮನ ಭದ್ರತಾ ವ್ಯವಸ್ಥೆ! ಡಬ್ಬಿಯೊಳಗೆ ನಾಲ್ಕು ಸಾವಿರ ಚಿಲ್ಲರೆ ದುಡ್ಡಿತ್ತು. “ಅಮ್ಮನಂತೆ ನೀನೂ ಬ್ಯಾಂಕಿನ ವ್ಯವಹಾರ ಮುಂದುವರಿಸುತ್ತಿಯಾ?” ತಮ್ಮ ಕೇಳಿದ. “ನೆನ್ನೆ ಮನೆ ಕೆಲಸದೋಳು ಮಗನ ಶಾಲೆ ಫೀಸಿಗಾಗಿ ಇಪ್ಪತ್ತು ಸಾವಿರಕ್ಕೆ ಬೇಡಿಕೆ ಇಟ್ಟಿದ್ದಾಳೆ. ಅಮ್ಮನ ಬ್ಯಾಂಕ್ ಈಗಿನ ಕಾಲಕ್ಕೆ ಹೊಂದೋಲ್ಲ ಬಿಡು” ಎಂದೆ.
ಇದ್ಯಾವ್ದಪ್ಪ ಹೊಸ ಬ್ಯಾಂಕು? ಕೇಳಿಯೇ ಇಲ್ವಲ್ಲಾ ಅಂದುಕೊಳ್ಳಬೇಡಿ. ಇದೆಲ್ಲಿದೆ? ಸ್ಥಾಪಕರಾರು? ಯಾರು ಮ್ಯಾನೇಜರು? ಎಲ್ಲ ಸಂದೇಹಕ್ಕೆ ಒಂದೇ ಉತ್ತರ. ನಮ್ಮಮ್ಮ. ಇದನ್ನು ಸ್ಥಾಪಿಸಿದ್ದು ನಮ್ಮಮ್ಮ. ಮಾನೇಜರ್, ಕ್ಯಾಶಿಯರ್, ಅಟೆಂಡರ್ – ಎಲ್ಲವೂ ಅವಳೇ. ಅದು ಇರೋದೂ ನಮ್ಮನೇಲೇ. ಇನ್ನೂ ನಿರ್ದಿಷ್ಟವಾಗಿ ಹೇಳ್ಬೇಕೂಂತಂದ್ರೆ ಅಮ್ಮನ ಆಲ್ಮಿರಾದಲ್ಲಿ. ಇದು ಯಾವಾಗ ಆರಂಭವಾಯಿತೆಂಬೋದು ನಮ್ಮಮ್ಮನನ್ನೂ ಒಳಗೊಂಡು ಯಾರಿಗೂ ನೆನಪಿಲ್ಲ.
ದೇವರಲ್ಲಿ ಅಪಾರ ಭಕ್ತಿ, ಶ್ರದ್ಧೆ, ನಂಬಿಕೆ ಇಟ್ಟಿದ್ದ ಅಮ್ಮ ವಾರಕ್ಕೊಮ್ಮೆ ಕುಲದೇವರಿಗೆ ಕಾಣಿಕೆಯನ್ನು ಬಲುಜನರಿಗೆ ಪ್ರಿಯವಾಗಿದ್ದ ಹಿಮಾಲಯ ಟಾಲ್ಕಮ್ ಪೌಡರಿನ ಖಾಲಿ ಡಬ್ಬಿಯಲ್ಲಿ ತೆಗೆದಿರಿಸುತ್ತಿದ್ದಳು. ಆ ಡಬ್ಬಿಯ ಮೇಲೆ ‘ದೇವರ ಡಬ್ಬಿ’ ಎಂದು ಚೀಟಿ ಅಂಟಿಸಿದ್ದಳು. ವಾರಕ್ಕೊಮ್ಮೆ ಹಾಕುತ್ತಿದ್ದ ಕಾಣಿಕೆಯ ಜೊತೆ ತೊಂದರೆ ತಾಪತ್ರಯಗಳಾದಾಗ ಕಟ್ಟಿಡುತ್ತಿದ್ದ ಮುಡುಪಿನ ಮೊತ್ತವೂ ಬೋನಸ್ಸಿನಂತೆ ಆ ಡಬ್ಬಿ ಸೇರುತ್ತಿತ್ತು. ವರ್ಷಕ್ಕೊಮ್ಮೆಯೋ ಎರಡು ವರ್ಷಗಳಿಗೊಮ್ಮೆಯೋ ಕುಲದೇವರ ಸೇವೆಗೆ ಹೋದಾಗ ಡಬ್ಬಿಯ ಹಣ ದೇಗುಲದ ಹುಂಡಿಯೊಳಕ್ಕಿಳಿಯುತ್ತಿತ್ತು. ಮನೆಯಲ್ಲಿ ಯಾರಿಗಾದರೂ ಚಿಲ್ಲರೆ ಬೇಕಾದಾಗ ಡಬ್ಬಿಯಿಂದ ಚಿಲ್ಲರೆ ತೆಗೆದು ನೋಟನ್ನು ಹಾಕುತ್ತಿದ್ದರು. ಕಾಲಕ್ರಮೇಣ ನಾಣ್ಯಗಳೆಲ್ಲ ನೋಟುಗಳಾಗಿ ಪರಿವರ್ತಿತಗೊಂಡು ಡಬ್ಬಿ ಶಬ್ದ ಮಾಡದೇ ಹಗುರಗೊಂಡಿತು!
ಒಮ್ಮೆ ಕಾರಣಾಂತರದಿಂದ ಹಲವು ವರ್ಷಗಳು ಕುಲದೇವರ ಆಲಯಕ್ಕೆ ಹೋಗಲಾಗದೆ ಡಬ್ಬಿಯಲ್ಲಿ ಸಾಕಷ್ಟು ಹಣ ಶೇಖರಗೊಂಡಿತ್ತು. ಅಮ್ಮನ ಬ್ಯಾಂಕ್ ಜನ್ಮತಾಳುವ ಅಮೃತಘಳಿಗೆ ಸಮೀಪಿಸಿರಬೇಕು. ನಮ್ಮ ತಂದೆಯವರ ಆಫೀಸಿನ ಜವಾನ ಬಸವಣ್ಣೆಪ್ಪ ಎಂದಿನಂತೆ ಆಫೀಸಿನ ಫೈಲ್ಗಳನ್ನು ಅಪ್ಪನ ಟೇಬಲ್ ಮೇಲೆ ತಂದಿಟ್ಟು ಒಳಗೆ ಬಂದು ಅಮ್ಮನ ಮುಂದೆ ತಲೆ ತುರಿಸಿಕೊಳ್ಳುತ್ತ ನಿಂತಿದ್ದ.
“ಅಮ್ಮಾವ್ರೆ, ನಿಮ್ಮನ್ನೊಂದು ಕೇಳೋದಿತ್ರಿ.”
“ಅದೇನಪ್ಪ? ಚಾ ಕುಡೀತಿಯಾ?”
“ಬ್ಯಾಡ್ರೀ” ಎನ್ನುತ್ತ ಮತ್ತೆ ತಲೆ ತುರಿಸುತ್ತಾ ನಿಂತ. ಅವನಿಗೆ ಕೆಲ ತಿಂಗಳ ಹಿಂದೆ ಮದುವೆಯಾಗಿತ್ತು. ಹೆಂಡತಿಯನ್ನು ಕರೆತಂದು ನಮಸ್ಕಾರ ಮಾಡಿ ಸಿಹಿ ತಿಂದು ಉಡುಗೊರೆ ಪಡೆದು ಹೋಗಿದ್ದ.
“ನನ್ನ ಹೇಣ್ತಿ ಸಿಟ್ಟುಗೊಂಡು ನನ್ಕೂಡ ಮಾತು ಬಿಟ್ಟಾಳ್ರೀ.”
“ಅಯ್ಯೋ! ಇದೀಗ ಲಗ್ನ ಆಗೀರಿ. ಇಬ್ರೂ ಅನ್ಯೋನ್ಯವಾಗಿರೋದ್ಬಿಟ್ಟು ಇದೇನು ರಾಮಾಯ್ಣ? ಯಾಕೆ ಮುನಿಸ್ಕೊಂಡಾಳ?”
“ಪಂಚ್ಮೀ ಹಬ್ಬಕ್ಕೆ ತೌರಿಗೆ ಹೋಗ್ತಾಳಂತ್ರೀ. ಅದಕ್ಕೆ ಹೊಸ ಸೀರೆ ಬೇಕಂತೆ. ನನಗಂಡ ಕೊಡಸ್ದ ಅಂತ ಗೆಳೆತೀರಿಗೆ ತೋರಸ್ಬೇಕಂತೆ. ನಾನು ಪಗಾರ ಬಂದಮ್ಯಾಕ ನೋಡೋಣು ಅಂತಂದ್ರೆ ಮುನಿಸ್ಕೊಂಡು ಮಾತು ಬಿಟ್ಟಾಳ್ರೀಯಮ್ಮ. ನೀವು ಒಂದು ಇಪ್ಪತ್ತು ರೂಪಾಯಿ ಸಾಲಕೊಟ್ರೆ ಆಕಿಗಿ ಸೀರೆ ಕೊಡ್ಸಿ ಪಗಾರ ಬಂದ್ಕೂಡ್ಲೆ ಪರತ್ ಕೊಡ್ತೀನ್ರಿ” ಎಂದ ಹಲ್ಕಿರಿಯುತ್ತಾ. ಅಮ್ಮನಿಗೆ ಕರುಣೆಯುಕ್ಕಿತು. ಹುಡುಗಾಟದ ಹದಿಹರೆಯದ ಜೋಡಿ. ಹಣ ಕೊಡುವ ಮನಸ್ಸಿದ್ದರೂ ಅವಳಿಗೂ ಹಣದ ಅಡಚಣೆ. ಅಪ್ಪ ಸರಕಾರೀ ಅಧಿಕಾರಿಯಾದರೂ ಗಿಂಬಳದಿಂದ ದೂರವಿದ್ದು ಕೇವಲ ಸಂಬಳದಿಂದಲೇ ಬದುಕುತ್ತಿದ್ದು ತಿಂಗಳ ಕೊನೆಯಲ್ಲಿ ಕೈ ಖಾಲಿಯಾಗುತ್ತಿತ್ತು. ಅಮ್ಮನ ನೆನಪಿಗೆ ಆಗ ಸುಳಿದಿದ್ದು ಆ ದೇವರ ಡಬ್ಬಿ. ದೇವರು ದಯಾಮಯ. ಕಷ್ಟದಲ್ಲಿದ್ದವರ ಸಹಾಯಕ್ಕೆ ಅದರಿಂದ ಹಣ ತೆಗೆದರೆ ಆತ ಸಂತುಷ್ಟನಾದಾನು ಎನಿಸಿತು. ಅಲ್ಮೆರಾ ತೆಗೆದು ದೇವರ ಡಬ್ಬಿಯಿಂದ ಎರಡು ಹತ್ತರ ನೋಟನ್ನು ತೆಗೆದುಕೊಟ್ಟರು. “ನೋಡಪ್ಪಾ, ಇದು ದೇವರಿಗೆ ಸೇರಿದ ಹಣ. ಕೊಡುತ್ತಿದ್ದೇನೆ. ಪಗಾರ ಬಂದಕೂಡ್ಲೆ ತಂದುಕೊಡು. ಜೊತೆಗೆ ತಪ್ಪುಕಾಣಿಕೆ ಅಂತ ಬೇರೆ ಹಣ ಕೊಡು.”
“ತಪ್ಪು ಕಾಣೀಕೇರೀ? ನಾನೇನು ತಪ್ಪು ಮಾಡಿಲ್ರೀ”
“ದೇವರ ದುಡ್ಡು ತೆಗೆಯೋದು ತಪ್ಪಲ್ವೇ? ಅದಕ್ಕೇ ಪ್ರಾಯಶ್ಚಿತ್ತವಾಗಿ ಹೆಚ್ಚು ಕಾಣಿಕೆ ಕೊಡ್ಬೇಕು.”
“ಕಾಣಿಕೆ ಅಂದ್ರ ಎಷ್ಟರೀ?”
“ಅದು ನಿನ್ನಿಷ್ಟ. ಒಂದ್ರುಪಾಯೋ ಎರಡ್ರೂಪಾಯೋ ನಿನಗಿಷ್ಟ ಬಂದಷ್ಟು.”
ಅವನಿಗೆ ಹಣಕೊಟ್ಟು ಒಂದು ಚೀಟಿಯಲ್ಲಿ ಬಸವಣ್ಣೆಪ್ಪಾ – ೨೦ ರೂಪಾಯಿಗಳು ಎಂದು ಡಬ್ಬಿಯಲ್ಲಿ ಹಾಕಿದಳು. ಆತ ಆನಂದದಿಂದ ಹಣಪಡೆದು ನೆಗೆಯುತ್ತಾ ಹೋದ. ಹೊಸಹೆಂಡತಿಗೆ ಹೊಸ ಸೀರೆ ಕೊಡೆಸಿದ್ದಾಯ್ತು. ಒಂದನೆಯ ತಾರೀಕಿಗೆ ದೊರೆತ ಪಗಾರ ಮನೆಗೊಯ್ಯುವ ಮುನ್ನ ದೇವರ ಡಬ್ಬಿಗೆ ಇಪ್ಪತ್ತರ ಜೊತೆ ಒಂದು ರೂಪಾಯಿ ಹೆಚ್ಚಾಗಿ ಹಾಕಿ ಬೋಣಿಮಾಡಿದ. ಇದು ಅಮ್ಮನ ಬ್ಯಾಂಕಿಟ್ಟ ಮೊದಲ ಹೆಜ್ಜೆ.
ಒಂದೆರಡು ವಾರಗಳು ಕಳೆದಿರಬಹುದು. ತಂದೆಯೊಡನೆ ಯಾವುದೋ ಆಫೀಸಿನ ವಿಷಯ ಮಾತನಾಡಲು ಬಂದಿದ್ದ ವ್ಹಾಕ್ಸಿನೇಟರ್ ಘಾಟ್ಗೆಯವರು ಮಾತು ಮುಗಿಸಿ ನಡುಮನೆಯಲ್ಲಿ ಕುಳಿತು ತರಕಾರಿ ಹೆಚ್ಚುತ್ತಿದ್ದ ಅಮ್ಮನ ಬಳಿ ಬಂದರು.
“ನಮಸ್ಕರ್ರೀ ಅಮ್ಮಾವ್ರೇ”
“ನಮಸ್ಕಾರ. ಛಲೋ ಇದ್ದೀರಲ್ಲ?”
“ನಾ ಛಲೋ ಇದ್ದೀನ್ರೀ. ಆದ್ರೆನನ್ನ ಮಗಂಗೆ ಜಡ್ಡಾಗ್ಯದೆ. ಇಲ್ಲಿ ದವಾಖಾನೆಗೆ ತೋರಿಸ್ದೆ. ದೊಡ್ಡ ದವಾಖಾನೆಗೆ ತೊರಸ್ರೀ ಅಂರ್ರೀ. ಕೈಲಿ ರೊಕ್ಕಿಲ್ದೆ ಹ್ಯಾಂಗ ಹೋಗಲಿ? ಬಸವಣ್ಣೆಪ್ಪ ಹೇಳ್ದ, ನಂಗೆ ಜರೂರು ರೊಕ್ಕ ಬೇಕಿತ್ತು. ನೀವು ಕೊಟ್ರೆ ನಾಳೇನೇ ದೊಡ್ಡ ದವಾಖಾನೇಗೆ ಒಯ್ಯತೀನ್ರೀ” ಅಮ್ಮನಿಗೆ ಅಯ್ಯೋ ಪಾಪ ಎನಿಸಿತು. ಅವರು ಕೇಳಿದ ನೂರು ರೂಪಾಯಿ ತಂದಿತ್ತು ತಪ್ಪುಕಾಣಿಕೆಯ ಬಗ್ಗೆಯೂ ಹೇಳಿದಳು. “ಅಮ್ಮಾವ್ರೇ, ಅಷ್ಟೂ ಹಣ ಒಮ್ಮೆಗೇ ಪರತ್ ಕೊಡ್ಲಿಕ್ಕಾಗ್ದು. ತಿಂಗ್ಳಾ ತಿಂಗ್ಳಾ ಇಷ್ಟೂಂತ ಕೊಟ್ಬಿಡ್ತೀನ್ರಿ” ಎಂದು ಹಣ ಪಡೆದು ಹೋದರು. ಮುಂದೆ ಅವರ ಮಗ ಗುಣಮುಖನಾಗಿ ಬಂದು ಮೊದಲ ಕಂತಿನ ಹಣವನ್ನು ಎಂಟಾಣೆ ಕಾಣಿಕೆಯೊಡನೆ ಸ್ವಹಸ್ತದಿಂದ ಡಬ್ಬಿಯಲ್ಲಿ ಹಾಕಿದಾಗ ಅಮ್ಮನಿಗೆ ಎಂತಹುದೋ ಕೃತಾರ್ಥಭಾವ. ಅವರ ಹುಡುಗನನ್ನು ಮಡಿಲಲ್ಲಿ ಕುಳ್ಳಿರಿಸಿಕೊಂಡು ಮುದ್ದಿಸಿ ಎರಡು ರುಪಾಯಿಗಳನ್ನು ಕೈಲಿರಿಸಿ ಕಳಿಸಿದರು. ಅಮ್ಮನ ಬ್ಯಾಂಕಿನ ಬಗ್ಗೆ ಸುದ್ದಿ ಊರೆಲ್ಲ ಹರಡಿ ಗ್ರಾಹಕರ ಸಂಖ್ಯೆ ಒಂದೊAದೇ ಮೇಲೇರುತ್ತಲೇ ಹೋಯಿತು.
ನಾಗರಕಟ್ಟಿಯವರು ಅಪ್ಪನ ಆಫೀಸಿನಲ್ಲಿ ಕಾರಕೂನರು. ನಲ್ವತ್ತೈದರ ಹತ್ತಿರಹತ್ತಿರ. ಅಪ್ಪನ ಪ್ರಕಾರ ಅತಿ ತಾಪತ್ರಯದ ಮನುಷ್ಯ. ಮನೆತುಂಬಾ ಮಕ್ಕಳಿರುವ ಮಕ್ಕಳೊಂದಿಗ. ಒಮ್ಮೆ ಅಪ್ಪ ನಿಮಗೆಷ್ಟು ಮಕ್ಕಳೆಂದು ಕೇಳಿದಾಗ ತಬ್ಬಿಬ್ಬಾಗಿ ಸುಧಾರಿಸಿಕೊಂಡು ಬೆರಳೆಣಿಕೆ ಮಾಡಿ ಏಳು ಎಂದಿದ್ದರಂತೆ! ಹೆಂಡತಿಯ ಎಂಟನೆಯ ಹೆರಿಗೆ ಸಮೀಪಿಸುತ್ತಿದ್ದಂತೆ ಇನ್ನೂರೈವತ್ತು ರೂಪಾಯಿ ಕಡ ಕೇಳಲು ಬಂದಿದ್ದರು. ಅವರ ಬಗ್ಗೆ ಮೊದಲೇ ತಿಳಿದುಕೊಂಡಿದ್ದ ಅಮ್ಮ ಅಸಹನೆಯಿಂದ ಕುದಿಯುತ್ತಿದ್ದರು. “ಮೇಡಂ, ನನ್ನ ಹೇಣ್ತಿ ಹೆರಿಗೆ ಆಸ್ಪತ್ರೆ ಸರ್ಯಾಳೆ. ತುಂಬಾ ವೀಕ್ ಆಗ್ಯಾಳಂತ ಡಾಕಟ್ರು ಹೇಳ್ತಾರ. ಆಪರೇಷನ್ ಮಾಡಿಯೇ ಮಗು ತೆಗೀಬೇಕಂತ. ಖರ್ಚಿಗೇಂತ ಇನ್ನೂರು ಬೇಕಿತ್ರೀ. ತಿಂಗ್ಳಾ ತಿಂಗ್ಳಾ ಬಡ್ಡಿಸಮೇತ ಕೊಡ್ತೀನಿ” ಎಂದಾಗ ಅಮ್ಮನಿಗೆ ಅವರ ಮುಖಕ್ಕೆ ಉಗಿದು ಉಪ್ಪಿನಕಾಯಿ ಹಾಕಿ ಹಣ ಕೊಡದೆ ಕಳುಹಿಸಬೇಕೆನಿಸಿದರೂ ಆ ಹೆಣ್ಣಿನ ಸ್ಥಿತಿಗೆ ಕನಿಕರಿಸಿ ಹಣ ನೀಡಿದರು.
ಸಂಜೆ ಕೆಲಸ ಮುಗಿಸಿ ಮನೆಗೆ ಬಂದ ಅಪ್ಪನಿಗೆ ಗ್ರಹಚಾರ ಕಾದಿತ್ತು. “ನೀವು ಆರೋಗ್ಯ ಇಲಾಖೆಯಲ್ಲಿ ಅಧಿಕಾರಿ. ನಿಮ್ಮ ಇಲಾಖೆಯ ಅತಿ ದೊಡ್ಡ ಯೋಜನೆ ಕುಟುಂಬಯೋಜನೆ. ಅಲ್ಲಿಯ ಕಾರಕೂನರಾದ ನಾಗರಕಟ್ಟಿಯವರಿಗೆ ಏಳು ಮಕ್ಕಳು! ಎಂಟನೆಯ ಹೆರಿಗೆಯ ಖರ್ಚಿಗಾಗಿ ಸಾಲಕೇಳಲು ಬಂದಿದ್ದರು. ಶುದ್ಧ ನಾಚಿಕೆಗೇಡಿನ ವಿಷಯ. ಆಕೆಯೇನು ಹೆರುವ ಮೆಶೀನೇ? ನಿಮ್ಮ ಕಾರಕೂನನ ಮೇಲೆ ಒತ್ತಡಹಾಕಿ ಆಪರೇಷನ್ ಮಾಡಿಸಿಕೊಳ್ಳಲು ಹೇಳಿ” ಎಂದರು.
“ಇದು ಅವರ ವೈಯಕ್ತಿಕ ವಿಚಾರ. ನಾನು ಕೇವಲ ಸಲಹೆ ಕೊಡಬಲ್ಲೆ. ಒತ್ತಡ ಹೇಗೆ ಹಾಕಲಿ?”
“ಸ್ವಬುದ್ಧಿ ಇಲ್ಲದವರಿಗೆ ಒತ್ತಡ ಒಂದೇ ಪರಿಹಾರ. ಇದು ಕೇವಲ ಒಂದು ಕುಟುಂಬದ ಸಮಸ್ಯೆಯಲ್ಲ. ಇಡೀ ರಾಷ್ಟ್ರಕ್ಕೆ ಸಂಬಂಧಪಡುವ ಸಮಸ್ಯೆ. ನೀವು ಅವನಿಗೆ ಶಸ್ತ್ರಚಿಕಿತ್ಸೆ ಮಾಡಿಸಲೇಬೇಕು” ಎಂದು ಪಟ್ಟುಹಿಡಿದು ಜಯಗಳಿಸಿದ್ದಳು.
ಮುಂದೆ ಅಪ್ಪನಿಗೆ ಬೆಂಗಳೂರಿಗೆ ವರ್ಗವಾಗಿ ಬಂದಾಗ ಅಮ್ಮನ ಬ್ಯಾಂಕಿನ ಕೀರ್ತಿ ಅವರಿಗಿಂತ ಮುಂಚೆಯೇ ಆಫೀಸಿನ ಮಂದಿಗೆ ತಲಪಿತ್ತು. ಹೀಗಾಗಿ ಅಲ್ಲಿನ ಆಫೀಸಿನ ಗ್ರಾಹಕರೊಡನೆ ವ್ಯವಹಾರ ಮುಂದುವರಿಯಿತು. ಕ್ರಮೇಣ ಗಾಳಿಸುದ್ದಿ ನಮ್ಮ ಬಂಧುಬಳಗಕ್ಕೂ ಹರಿದುಬಂದು ಅವರ ಕಷ್ಟಗಳಿಗೂ ಬ್ಯಾಂಕು ಸ್ಪಂದಿಸುವಂತಾಯ್ತು. ದೇವರ ದುಡ್ಡಿನ ಬ್ಯಾಂಕ್ ಆದ್ದರಿಂದ ಗ್ರಾಹರ್ಯಾರೂ ಸಾಲತೀರಿಸದೇ ಇದ್ದದ್ದೇ ಇಲ್ಲ. ಭಯಭಕ್ತಿಯಿಂದ ಎಷ್ಟೋ ವೇಳೆ ನಿಗದಿತ ಸಮಯಕ್ಕೂ ಮುನ್ನ ಸಾಲದ ಮೊತ್ತದ ಜೊತೆ ಕಾಣಿಕೆಯನ್ನೂ ಖುಷಿಯಿಂದಲೇ ಭಕ್ತಿಪೂರ್ವಕವಾಗಿ ಸಲ್ಲಿಸಿ ನಮೂದಿತವಾಗಿದ್ದ ಚೀಟಿಯನ್ನು ವಾಪಸ್ಸುಪಡೆದು ಹೋಗುತ್ತಿದ್ದರು.
ಬ್ಯಾಂಕ್ ಆರಂಭಿಸಿದ ಬಳಿಕ ಮೊದಲಬಾರಿ ಕುಲದೇವರ ಆಲಯಕ್ಕೆ ಹೋದಾಗ ವಾಡಿಕೆಯಂತೆ ಡಬ್ಬಿ ಹಣ ಹುಂಡಿಗೆ ವರ್ಗಾಯಿಸುವಾಗ ಅಮ್ಮನ ಕೈ ಹಿಂಜರಿಯಿತು. ಬ್ಯಾಂಕಿನ ಪೂರ್ತಿ ಬಂಡವಾಳ ಹುಂಡಿಗೆ ಹಾಕಿದರೆ ಗ್ರಾಹಕರೊಡನಾಟ ಮುಗಿದಂತೆಯೇ. ಕಷ್ಟದಲ್ಲಿದ್ದವರಿಗೆ ಸಹಾಯಹಸ್ತ ನೀಡದಿರಬೇಕೆ? ಅದ್ಯಾಕೋ ಅಮ್ಮನ ಕೈ ಹಿಂಜರಿಯಿತು. ಸಣ್ಣ ಮೊತ್ತ ಹುಂಡಿಗೆ ಹಾಕಿ ಮಿಕ್ಕದ್ದನ್ನು ಡಬ್ಬಿಯಲ್ಲೇ ಉಳಿಸಿಕೊಂಡಳು. ವ್ಯವಹಾರ ಮುಂದುವರಿಯಿತು.
ಬದಲಾವಣೆ ಪೃಕೃತಿಯ ನಿಯಮ. ಅರ್ಥಿಕ ಜಗತ್ತು ಬದಲಾಗತೊಡಗಿತು. ರೂಪಾಯಿಯ ಮೌಲ್ಯ ಕುಸಿಯುತ್ತಾ ಹೋಯಿತು.
ಇಪ್ಪತ್ತಕ್ಕೆ ದೊರಕುತ್ತಿದ್ದ ಸೀರೆ ಎರಡು ಸಾವಿರವಾಯಿತು. ನೂರು ರೂಪಾಯಿಗೆ ಸಿಗುತ್ತಿದ್ದ ವೈದ್ಯಕೀಯ ನೆರವು ಹತ್ತು ಸಾವಿರವಾಯಿತು. ಶಾಲೆಯ ಫೀಸು ಹತ್ತಿದ್ದದ್ದು ಸಾವಿರಕ್ಕೆ ಕಮ್ಮಿ ಇಲ್ಲವಾಯಿತು. ಗ್ರಾಹಕರು ತಮ್ಮ ಖುಷಿಗೆ ನೀಡುತ್ತಿದ್ದ ತಪ್ಪುಕಾಣಿಕೆ ಮಾತ್ರ ನಿಂತಲ್ಲೇ ನಿಂತು ಬ್ಯಾಂಕಿನ ಬಂಡವಾಳ ಕ್ಷೀಣಿಸುತ್ತಲೇ ಹೋಯಿತು. ಸಾವಿರಾರು ರೂಪಾಯಿಗಳ ಗ್ರಾಹಕರ ಬೇಡಿಕೆಯನ್ನು ತೀರಿಸಲು ಅಸಮರ್ಥವಾದ ಅಮ್ಮನ ಬ್ಯಾಂಕು ಅಲ್ಮೇರಾದ ಮೂಲೆಸೇರಿತು.
ಕಳೆದ ತಿಂಗಳು ನಮ್ಮಮ್ಮನ ವರ್ಷಾಬ್ದಿಕಕ್ಕೆ ನನ್ನ ಸಹೋದರ ಬಂದಾಗ ಅಮ್ಮನ ಕಾಗದ ಪತ್ರಗಳನ್ನು ಪರಿಶೀಲಿಸಲು ಆಲ್ಮೆರಾ ತೆಗೆದೆವು. ಕಾಗದ ಪತ್ರಗಳ ತಳದಲ್ಲಿ ಒಂದು ಪ್ಲಾಸ್ಟಿಕ್ ಚೀಲದ ಗಂಟು ಅಡಗಿಕೊಂಡಿತ್ತು. ಗಂಟು ಬಿಚ್ಚಿದೆ. ಒಳಗೆ ಇನ್ನೊಂದು ಗಂಟಿತ್ತು. ಅದರಲ್ಲಿ ಮತ್ತೊಂದು, ಅದರಲ್ಲಿ ಮಗದೊಂದು! ಬಿಚ್ಚುತ್ತಲೇ ಹೋದೆ. ಒಂಬತ್ತು ಬಾರಿ ಬಿಚ್ಚಿದಾಗ ಒಳಗಿತ್ತು ಚೀಟಿ ಅಂಟಿಸಿದ್ದ ಹಿಮಾಲಯಾ ಪೌಡರ್ ಡಬ್ಬ. ಇದು ನಮ್ಮಮ್ಮನ ಭದ್ರತಾ ವ್ಯವಸ್ಥೆ! ಡಬ್ಬಿಯೊಳಗೆ ನಾಲ್ಕು ಸಾವಿರ ಚಿಲ್ಲರೆ ದುಡ್ಡಿತ್ತು. “ಅಮ್ಮನಂತೆ ನೀನೂ ಬ್ಯಾಂಕಿನ ವ್ಯವಹಾರ ಮುಂದುವರಿಸುತ್ತಿಯಾ?” ತಮ್ಮ ಕೇಳಿದ. “ನೆನ್ನೆ ಮನೆ ಕೆಲಸದೋಳು ಮಗನ ಶಾಲೆ ಫೀಸಿಗಾಗಿ ಇಪ್ಪತ್ತು ಸಾವಿರಕ್ಕೆ ಬೇಡಿಕೆ ಇಟ್ಟಿದ್ದಾಳೆ. ಅಮ್ಮನ ಬ್ಯಾಂಕ್ ಈಗಿನ ಕಾಲಕ್ಕೆ ಹೊಂದೋಲ್ಲ ಬಿಡು” ಎಂದೆ.
ಕುಲದೇವರ ಆಲಯಕ್ಕೆ ಹೋದಾಗ ಅಷ್ಟೂಹಣ ಹುಂಡಿ ಸೇರಿತು. ಹಿಮಾಲಯ ಪೌಡರ್ ಡಬ್ಬ ದೇವಸ್ಥಾನದ ಒಣಕಸದ ರಾಶಿಯ ಮೇಲೆ ವಿಶ್ರಮಿಸಿತು.