ಯಾರ್ರೀ ಪೇಷಂಟು ಎಂದು ಮೆಡಿಕಲ್ ಕಿಟ್ ಹಿಡಿದ ಡಾಕ್ಟರು ಹಜಾರಕ್ಕೆ ಬಂದಾಗ ಕುರ್ಚಿಯಲ್ಲಿ ಕುಳಿತಿದ್ದ ಅಮ್ಮ ಎದ್ದು ಚಾಪೆಯ ಮೇಲೆ ಕುಳಿತಳು. ಇವಳಿಗೇ ಡಾಕ್ಟರೇ… ಚೇಳು ಕಚ್ಚಿದೆ ಎಂದ ಅಪ್ಪ ಅವಳ ಎಡಗೈ ತೋರುಬೆರಳು ತೋರಿಸಿದರು. ಚೇಳು ಕಡಿಸಿಕೊಂಡು ಹೀಗೆ ನಿರಾತಂಕವಾಗಿ ಕುಳಿತದ್ದು ಕಂಡು ಡಾಕ್ಟರಿಗೇ ಆಶ್ಚರ್ಯ. ಅಮ್ಮ ಬೆರಳ ಬಟ್ಟೆ ಬಿಚ್ಚಿ ಅತ್ತ ಹಾಕಿದಳು. ಡಾಕ್ಟರು ಬೆರಳು ಹಿಡಿದು ನೋಡಿದರು. ಅಮ್ಮನ ಮುಖವನ್ನೊಮ್ಮೆ, ಅಪ್ಪನ ಮುಖವನ್ನೊಮ್ಮೆ, ಸುಂದರಮೂರ್ತಿಗಳ ಮುಖವನ್ನೊಮ್ಮೆ ನೋಡಿದಾಗ ನಮಗೆಲ್ಲಾ ಗಾಬರಿ. ಏನು ಹೇಳಿಬಿಡುತ್ತಾರೋ? ಬೆರಳನ್ನೇ ಕತ್ತರಿಸಿ ಬಿಡಬೇಕೆಂದುಬಿಟ್ಟರೆ ಎಂಬ ಆತಂಕ. ಹುಡುಗರಾದ ನಾವು ಮೂವರೂ ಹೆದರಿ ಅಕ್ಕನ ಹಿಂದೆ ಅವಿತಿಟ್ಟುಕೊಂಡು ಪಿಳಿಪಿಳಿ ಕಣ್ಣು ಬಿಡುತ್ತ ನೋಡತೊಡಗಿದೆವು.
ಹಳ್ಳಿಯಲ್ಲಿದ್ದ ನಮಗೆ ಭಾನುವಾರ ಬಂದಿತೆಂದರೆ ಖುಷಿ. ಎಲ್ಲ ಕೆಲಸಗಳೂ ನಿಧಾನಗತಿಯೆ. ಸ್ಕೂಲಿಗೆ ಹೋಗುವ ಆತುರವಿಲ್ಲ. ಮೇಷ್ಟ್ರು ಕೆಲಸದಲ್ಲಿದ್ದ ಅಪ್ಪನಿಗೆ ಯಾವ ತರಾತುರಿಯೂ ಇಲ್ಲ ಎಂದುಕೊಂಡ ಅಮ್ಮ ಸ್ವಲ್ಪ ನಿಧಾನವಾಗಿಯೇ ಏಳುತ್ತಿದ್ದಳು. ಆದರೆ ಅಪ್ಪನದು ಕರಾರುವಾಕ್ಕು. ಅವರು ಸ್ಕೂಲಿಗೆ ಹೋದರೂ ಅಷ್ಟೆ, ಹೋಗದಿದ್ದರೂ ಅಷ್ಟೆ. ಏಳುವ ಹೊತ್ತಿಗೆ ಎದ್ದು ಕೆರೆ ಕಡೆ ಹೋಗಿ ನೈಸರ್ಗಿಕ ಕಾರ್ಯಕ್ರಮಗಳನ್ನು ಸಾಂಗೋಪಾಂಗವಾಗಿ ನೆರವೇರಿಸಿಕೊಂಡು, ಜೊತೆಗೂಡಿದ್ದ ಒಂದಿಬ್ಬರನ್ನು ಬೆಳಗಿನ ಕಾಫಿಗೆ ಕರೆತರುವುದು ವಾಡಿಕೆ. ಅಂದೂ ಅಪ್ಪ ಬಾಗಿಲಿಗೆ ಬರುತ್ತಲೇ ಆಯ್ತೇನೇ ಕಾಫಿ ಎಂದೆನ್ನುತ್ತಾ ಬಾಗಿಲಲ್ಲಿ ನಿಂತು ಕೇಳಿದರು. ಬಂದಿದ್ದವರಿಬ್ಬರು ಜಗಲಿಯ ಮೇಳೆ ಕುಳಿತು ಮಳೆ-ಬೆಳೆ, ಗೊಬ್ಬರದ ವಿಷಯ ಮಾತನಾಡುತ್ತಿದ್ದವರು ಕಾಫಿ ಕುಡಿದು ಹೊರಟುಹೋದರು.
ಅವರು ಹೋಗುತ್ತಿದ್ದಂತೆ ಎಡಗೈ ತೋರುಬೆರಳನ್ನು ಒತ್ತಿ ಹಿಡಿದುಬಂದ ಅಮ್ಮ ಅಡುಗೆಮನೆ ಡಬ್ಬ ಇಟ್ಟಿರುವ ಮಣೆಯ ಮೇಲೆ ಏನೋ ಹರಿಯುತ್ತಾ ಹೋದಂತಾಯ್ತು ಸ್ವಲ್ಪ ನೋಡಿ ಎಂದಳು. ಅಪ್ಪ ಒಳಗೆ ಓಡಿಹೋದರು. ಏಕೆಂದರೆ ಕೈಬೆರಳಿನಿಂದ ರಕ್ತ ಬರುತ್ತಿತ್ತು, ಏನಾದರೂ ಕಚ್ಚಿರಲೇಬೇಕು. ಅದು ಏನೆಂಬುದನ್ನು ತಿಳಿದುಕೊಳ್ಳಬೇಕಲ್ಲ! ಡಬ್ಬಗಳನ್ನು ಸರಿಸುತ್ತ ಬಂದಂತೆ ಮೂಲೆಯಲ್ಲಿ ಕರ್ರಾನ್ ಕರಿಯ ಬಣ್ಣದ ದೊಡ್ಡ ಚೇಳೊಂದು ಬಾಲದ ಕೊಂಡಿಯನ್ನು ಮೇಲೆತ್ತಿ ಕುಳಿತದ್ದು ಕಂಡ ಅಪ್ಪ ಸ್ವಲ್ಪ ಆ ಮೂಲೆಯಲ್ಲೊಂದು ಕಣ್ಣಿಡು, ಚೇಳಿದೆ. ಎಲ್ಲಾದರೂ ಹೋದೀತು ನೋಡುತ್ತಿರು. ಕೋಲು ತರುತ್ತೇನೆ ಎಂದು ಅಮ್ಮನಿಗೆ ಹೇಳಿ ದುಡುದುಡು ಹೊರಬಂದು ದಪ್ಪನೆಯ ಕೋಲು ಹಿಡಿದು ಹೋಗಿ ನೋಡಿದಾಗಲೂ ಇವರ ಅದೃಷ್ಟಕ್ಕೆ ಅಲ್ಲಿಯೇ ವಿರಾಜಮಾನವಾಗಿತ್ತು. ಬಡ್ಡತ್ತದೆ ಎಂದು ಒಂದು ಬಿಟ್ಟಾಕ್ಷಣ ಕೊಂಡಿ ಮುದುರಿಕೊಂಡು ಅಲ್ಲೇ ಸತ್ತುಬಿತ್ತು.
ಮೊರಕ್ಕೆ ತಳ್ಳಿಕೊಂಡು ಬಂದ ಅಪ್ಪ ಚೇಳಿನ ಕೊಂಡಿಗೆ ದೊಡ್ಡ ದಾರ ಕಟ್ಟಿ ಅಂಗಳದ ಮೂಲೆಯಲ್ಲಿದ್ದ ಪರಂಗಿಹಣ್ಣಿನ ಗಿಡಕ್ಕೆ ನೇತು ಹಾಕಿದರು. ಎಲ್ಲಿ ನೋಡೋಣ ಎಂದು ಅಮ್ಮನ ಬೆರಳು ನೋಡಿದ ಅಪ್ಪ ಸುರಿಯುತ್ತಿರುವ ರಕ್ತ ನಿಲ್ಲಲಿ ಎಂದು ಒದ್ದೆ ಬಟ್ಟೆ ಬ್ಯಾಂಡೇಜ್ ಬಿಗಿದರು. ರಕ್ತವೇನೋ ನಿಂತಿತು, ಹಾಳು ಚೇಳು ಕಡಿದಿದೆ. ವಿಷ ದೇಹಕ್ಕೆ ಏರದಿದ್ದೀತೇ? ಏನು ಮಾಡಲು ತೋಚದ ಅಪ್ಪ ಅತ್ತಿಂದಿತ್ತ ಓಡಾಡತೊಡಗಿದರು. ಅಮ್ಮ ಚೇಳು ಕಡಿದು ಅಪಾಯವಾದೀತೆಂಬ ಚಿಂತೆಗಿಂತ ಪಾಪ, ಮಕ್ಕಳು ಹಸಿದಿದ್ದಾರೆ, ಬೆಳಗಿನ ತಿಂಡಿ ಮಾಡಲಾಗಲಿಲ್ಲವೆಂಬ ಮುಗ್ಧ ಚಿಂತೆಯಲ್ಲಿದ್ದಳು. ಅಷ್ಟರಲ್ಲಿ ಕೆಲಸದ ರಂಗಿ ಬಂದವಳು, ಇಷ್ಟೊತ್ತಿನಲ್ಲಿ ದಿನಾ ಕೆಲಸದಲ್ಲಿರುತ್ತಿದ್ದ ಅಮ್ಮಾವ್ರು ಯಾಕ್ ಹಿಂಗ್ ಕುಂತವ್ರೇ… ಎಂದುಕೊಂಡಾಗ ಅವಳಿಗೂ ವಿಷಯ ತಿಳಿಯಿತು. ಪಾತ್ರೆಗಳನ್ನು ಎತ್ತಿಕೊಂಡು ಬಾವಿಕಟ್ಟೆಯ ಬಳಿ ಹೋದ ರಂಗಿ ಪಾತ್ರೆ ತೊಳೆಯುತ್ತಲೇ ಅದು ಹೇಗೆ ಬ್ರಾಡ್ಕ್ಯಾಸ್ಟ್ ಮಾಡಿದಳೊ ದೇವರಿಗೇ ಗೊತ್ತು. ಬೀದಿ ಏಕೆ, ಊರಿನ ಜನರಿಗೆ ವಿಷಯ ತಿಳಿದು ನರಸಿಂಹಪ್ಪನವರ ಮನೆಯೋವ್ರು ರಾಜಮ್ಮೋರ್ಗೆ ಚೇಳು ಕಡಿದ್ಬುಡ್ತಂತೆ ಕಣಾ… ಎಂದು ಮನೆ ಮುಂದೆ ಆಗಲೇ ಜನ ಘೇರಾಯಿಸತೊಡಗಿದರು. ಗಾಳಿ ಬೀಸಿದಷ್ಟೇ ವೇಗವಾಗಿ ಸುದ್ದಿ ಊರಲ್ಲೆಲ್ಲಾ ಹರಡಿಕೊಂಡಿತು.
ಯಾವೊಂದು ವಿವರಣೆಯನ್ನೂ ಯಾರು ಹೇಳಬೇಕಾಗಿಯೇ ಇರಲಿಲ್ಲ. ಏಕೆಂದರೆ ಮರಕ್ಕೆ ನೇತುಹಾಕಿದ್ದ ಗತಚೇಳು ಎಲ್ಲವನ್ನೂ ತಿಳಿಸುವಂತಿದ್ದುದರಿಂದ.
ಅಯ್ಯಯ್ಯಪ್ಪೊ ಯಾನ್ ದಪ್ಪ ಐತಪ್ಪ? ಅದರ ಕೊಂಡಿ ನೋಡು. ಇಸ ಹೆಂಗೆ ತುಂಬ್ಕಂಡೈತೆ?
ಅಯ್ ಕೊಂಡಿಲಿ ಹೊಡೆಯೋದ ಹಾಗಿರ್ಲಿ. ಪಿಡಿಕೆಲಿ ಹಿಡಕಂಡ್ರೂ ಸಾಕು, ಬುಡಿಸ್ಕಳಕ್ಕೆ ಆಗಾಕಿಲ್ಲ. ಹಂಗದೆ ನೋಡು ಅದರ ಕೊಂಡಿಗಳು.
ಯಾನ್ ತಿಂತದಪ್ಪಯಿದು. ಅದರ ಹೊಟ್ಟೆ ನೋಡಾ ಯಾನ್ ಸೈಜು, ಪಳಪಳ ಅಂತಾ ಮಿಂಚತೈತೆ.
ಈ ಬಡ್ಡಿಮಗನ್ ಚೇಳು ರಾಜಮ್ಮೋರ್ಗೇ ಕಚ್ಬೇಕಾ?
– ಹೀಗೆ ಬಂದಿದ್ದವರೆಲ್ಲರೂ ನೇತುಹಾಕಿದ್ದ ಚೇಳು
ನೋಡಿಕೊಂಡು ವರ್ಣನೆಗಿಳಿದಿದ್ದರೇ ವಿನಾ ರಾಜಮ್ಮನವರಿಗೇನಾಗಿದೆ ಎಂಬುದರ ಬಗ್ಗೆ ಯಾರೂ ತಲೆ ಕೆಡಿಸಿಕೊಂಡಂತಿರಲಿಲ್ಲ.
ಆದರೂ ರಂಗಿ ತನ್ನ ಕೆಲಸ ಮುಗಿಸಿಕೊಂಡು ಬಂದು ಹಜಾರದಲ್ಲಿ ಕುರ್ಚಿಯೊಂದನ್ನು ಹಾಕಿ ಕುಂತ್ಕಳ್ಳಿ ಸುಮ್ನೆ, ಯಾನಾಗಕ್ಕಿಲ್ಲ, ಚೇಳಿನ ಮಂತ್ರ ಹಾಕ್ಸಿದ್ರೆ ಸರಿಹೋಯ್ತದೆ. ಇಸಕಂಠಪ್ಪಂಗೆ ಹ್ಯೋಳಿ ಕಳ್ಸಿವ್ನಿ ಎಂದು ಕುರ್ಚಿಯ ಮೇಲೆ ಅಮ್ಮನನ್ನು ಕೂಡಿಸಿ ವಿಷಕಂಠಪ್ಪ ಇನ್ನೂ ಯಾಕೆ ಬರ್ಲಿಲ್ಲಾ ಎಂದು ನೋಡಲು ಅಂಗಳಕ್ಕಿಳಿದಳು.
ಅಡುಗೆಮನೆಯ ಉಸ್ತುವಾರಿಯನ್ನು ಅಕ್ಕ ವಹಿಸಿಕೊಂಡದ್ದರಿಂದ ಅಮ್ಮ ಕುರ್ಚಿಯ ಮೇಲೆ ಕುಳಿತು ಬ್ಯಾಂಡೇಜ್ ಮಾಡಿದ ಬೆರಳನ್ನೇ ನೋಡುತ್ತ ಅಕ್ಕ ತಂದುಕೊಟ್ಟ ಬಿಸಿ ಬಿಸಿ ಕಾಫಿ ಕುಡಿಯತೊಡಗಿದಳು.
ವಿಷಕಂಠಪ್ಪ ಬಂದವನೇ ಜೊತೆಯಲ್ಲಿ ತಂದಿದ್ದ ಸಾಲಿಗ್ರಾಮದಂತಹ ದುಂಡಗಿನ ಒಂದು ಬಿಳಿಕಲ್ಲನ್ನು ಕೈಯಲ್ಲಿ ಹಿಡಿದು ನೋಡಿ ಸ್ವಾಮಿ ಚೇಳು ಎಲ್ಲಿ ಕಚ್ಚೈತೋ ಅಲ್ಲಿ ಈ ಕಲ್ಲ ಸ್ವಲ್ಪ ಹೊತ್ತು ಮಡಗ್ತೀನಿ. ಆ ಮ್ಯಾಕೆ ತಕ್ಕೊಂಡ್ಹೋಗಿ ನಮ್ಮ ಮನೇಲಿ ದೇವರ ಮುಂದೆ ಇಡ್ತೀನಿ. ಸಂಜೆ ವ್ಯಾಳ್ಯಾಗೆ ಅದು ನೀಲಿಬಣ್ಣಕ್ಕೆ ತಿರಕ್ಕಂಡ್ರೆ ಇಸ ಏರೈತೆ ಅಂತಾ ಅರ್ಥ. ಸಂಜೆ ಬಂದು ಔಸ್ತಿ ಮಾಡ್ತೀನಿ ಅಂತಾ ಹೇಳಿ ಬ್ಯಾಂಡೇಜ್ ಬಿಚ್ಚದೆ ಕಲ್ಲನ್ನು ಸುಮಾರು ಹತ್ತು ನಿಮಿಷ ಬೆರಳಿನ ಮೇಲಿಟ್ಟು, ಕಲ್ಲನ್ನು ಹಿಂದಕ್ಕೆ ತೆಗೆದುಕೊಂಡು ದೇವರ ಹುಂಡಿ ಕಾಣ್ಕೆ ನೂರು ರುಪಾಯಿ ನೋಟು ಮಡಗ್ಬೇಕು ತತ್ತನ್ನಿ ಎಂದು ಅಪ್ಪನ ಹತ್ತಿರ ನೂರರ ನೋಟು ಕಿತ್ತುಕೊಂಡ ವಿಷಕಂಠಪ್ಪ ಜಾಗ ಖಾಲಿ ಮಾಡಿದ.
ರಂಗಿಯ ಬ್ರಾಡ್ಕಾಸ್ಟಿಂಗ್ ಎಷ್ಟೊಂದು ವೇಗವಾಗಿ ಕೆಲಸ ಮಾಡಿತ್ತೆಂದರೆ ಊರ ಬಹುಪಾಲು ಜನಕ್ಕೆ ಈ ವಿಷಯ ತಿಳಿದು ಆಗಲೇ ಮನೆಮುಂದೆ ಜನಜಾತ್ರೆ. ಮೊದಲೇ ಹೇಳಿದಂತೆ ಯಾರಿಗೂ ಯಾವ ವಿವರಣೆಯೂ ಬೇಕೆನಿಸದೆ ಮರಕ್ಕೆ ನೇತುಹಾಕಿದ್ದ ಚೇಳನ್ನು ನೋಡಿ ಅದರ ವೈಖರಿ, ಬಣ್ಣ, ಕೊಂಡಿ, ಗಾತ್ರ, ಪಿಡಿಕೆ – ಇವುಗಳ ವರ್ಣನೆ ಮಾಡುತ್ತ ಬಂದಿದ್ದವರಲ್ಲೊಬ್ಬಳು ಬಾಗಿಲ ಬಳಿ ಇಣುಕಿ, ಅಮ್ಮ ಕುಳಿತಿದ್ದುದನ್ನು ಕಂಡು ಐ ಸುಮ್ಕೆ ಕುಂತವ್ರೆಕಣಾ ಯಾನಾಗಿಲ್ಲ. ನಾನೆಲ್ಲೋ ಗ್ಯಾನ ತಪ್ಪಿ ಮನಿಕಂಬುಟ್ಟವ್ರೆ ಅನ್ಕಂಡಿದ್ದಿ ಎಂದು ಪಿಸುಗುಡುವಂತೆ ಹೇಳಿದ್ದೇ ನಿಂತಿದ್ದ ಹತ್ತಾರು ಕಿವಿ ತಲಪಿತ್ತು. ಹೆಂಗಸರು ಅವರವರಲ್ಲೇ ವಿಚಾರ ವಿನಿಮಯ ಮಾಡಿಕೊಳ್ಳುತ್ತಾ ಹಾಲು ಕರೇಬೇಕವ್ವ ಹೊತ್ತಾಯ್ತದೆ ಎಂದು ಕೆಲವರು, ಹೊಲಕ್ಕೆ ಹೋಗವ್ರೆ ಹಿಟ್ ಮಾಡ್ಬೇಕು ಎಂದು ಕೆಲವರು, ರೇಷ್ಮೆಹುಳಕ್ಕೆ ಸೊಪ್ಪು ಹಾಕ್ಬೇಕು ಎಂದು ಮತ್ತೆ ಕೆಲವರು ತಮ್ಮ ಕೆಲಸದ ಮೇಲೆ ಹೊರಡುತ್ತಿದ್ದರೆ, ಹೊಸದಾಗಿ ಕೆಲವರು ಬಂದು ಸೇರುತ್ತಲೇ ಇದ್ದರು. ತಮಗೆ ತೋಚಿದಂತೆ ಮಾತನಾಡುತ್ತ, ಗಾಳಿಸುದ್ದಿಯನ್ನು ನಿಜದ ತಲೆಯ ಮೇಲೆ ಹೊಡೆದಂತೆ ಬಿತ್ತರಿಸುತ್ತ ಹೊತ್ತು ಹೋಗದ ಕೆಲವರು ಅಲ್ಲೇ ಠಳಾಯಿಸುತ್ತಾ, ಚೇಳು ಕಚ್ಚಿದಾಗ ತಾವೇ ಕಣ್ಣಾರೆ ಕಂಡೆವು ಎನ್ನುವಷ್ಟರಮಟ್ಟಿಗೆ ಬುರುಡೆ ಬಿಡತೊಡಗಿದರು.
ಅಯ್ಯಯ್ಯೋ ಅನ್ನಕೊಟ್ಟ ಧಣಿ ಕೈ ಕಚ್ ಬುಡ್ತಂತಲ್ಲಪ್ಪಾ… ಎಂದು ಹುಲಗೇಶಿ ಬರುವಾಗಲೇ ಬೇವಿನಸೊಪ್ಪನ್ನು ಕೈಯಲ್ಲಿ ಹಿಡಿದು ತಂದು ಬನ್ನಿ ಅಮ್ಮಾವ್ರೇ ಮಂತ್ರಿಸ್ತೀನಿ. ಅದ್ಯಾವ ಮಹಾ ಕಾಳಚೇಳು ಕಚ್ಚಿರಲಿ ಇಸ ಬುಟ್ಬುಡ್ಬೇಕು. ಸ್ವಲ್ಪ ಕೈ ಮುಂದೆ ಮಾಡಿ ಎಂದು ಅಮ್ಮನ ಪಕ್ಕದ ನೆಲದ ಮೇಲೆ ಕುಳಿತು ಮಣಮಣ ಮಂತ್ರ ಹೇಳತೊಡಗಿದ. ಈ ಕಾರ್ಯಕ್ರಮ ಸುಮಾರು ಕಾಲು ಗಂಟೆ ನಡೆದಿರಬಹುದು. ಬುಡಿ, ಯಾನ್ ಯೇಚ್ಣೆ ಮಾಡ್ಬೇಡಿ ಇಸ ಹೊಂಟೋಯ್ತದೆ ಎಂದು ಹೇಳಿದ ಹುಲಗೇಶಿ ಅಡಕೆ, ವೀಳದೆಲೆ ಇಸ್ಕೊಂಡು ಹೊರಟುಹೋದ.
ಚಿಕ್ಕ ಹುಡುಗರಾಗಿದ್ದ ನಮಗೆ ಅಮ್ಮನಿಗೆ ಚೇಳು ಕಚ್ಚಿದೆ ಎಂದಷ್ಟೇ ತಿಳಿದಿದ್ದುದು. ಅದರ ಪರಿಣಾಮವೇನು ಎಂಬುದು ನಮಗೆ ತಿಳಿಯದಿದ್ದರೂ ಅಮ್ಮನಿಗೆ ಏನೋ ಆಗಿಬಿಟ್ಟಿದೆ ಎಂಬ ಭಯದಿಂದ ದೂರದೂರವೇ ಓಡಾಡುತ್ತಾ, ಏನು ಮಾಡಲು ತೋಚದೆ ಹಜಾರ, ಅಡುಗೆಮನೆ, ರೂಮು ಸುತ್ತುತ್ತಿದ್ದೆವು.
ಆದರೆ ಅಮ್ಮ ಇದಕ್ಕೆಲ್ಲ ಕ್ಯಾರೆ ಎನ್ನದೆ ಸುಮ್ಮನೆ ಕುಳಿತಿದ್ದಳಷ್ಟೆ. ಲವಲವಿಕೆಯಿಂದ ಕೆಲಸ ಮಾಡುತ್ತಿದ್ದವಳಿಗೆ ಕೈಕಟ್ಟಿದಂತಾಗಿ ಜಡಮನಸ್ಸಿನಿಂದ ಕುಳಿತಿದ್ದಳಷ್ಟೇ ವಿನಃ ಅವಳಲ್ಲಿ ಅಂತಹ ಬದಲಾವಣೆ ಏನೂ ಕಾಣಿಸುತ್ತಿರಲಿಲ್ಲ. ಅಪ್ಪನ ಬಲವಂತಕ್ಕೆ ಅಮ್ಮ ಒಂದೆಡೆ ಕುಳಿತಿದ್ದಳಷ್ಟೆ.
ರಾಜಮ್ಮೋರ್ಗೆ ಇಂಗಾಗ್ ಬುಡ್ತಾ… ಎಂದು ಕನಿಕರದಿಂದ ಮತ್ತು ಅಮ್ಮ ಇತರರ ಕಷ್ಟದಲ್ಲಾಗುತ್ತಿದ್ದುದರ ಪ್ರೀತಿಯಿಂದ ಬಂದ ಜನ ತಮಗೆ ತಿಳಿದ ಔಷಧ, ಉಪಚಾರಗಳನ್ನು ಸೂಚಿಸತೊಡಗಿದ್ದರು. ಮರುಮಾತಾಡದೆ ಅಮ್ಮ ಎಲ್ಲರ ಬಾಯಿಗೂ ಕಿವಿಯಾಗುತ್ತ ಹೋದಳು. ಸ್ವಲ್ಪ ಬಿಡುವು ಸಿಕ್ಕಿದ್ದೇ ತಡ ಎದ್ದು ಸ್ನಾನ-ಪೂಜೆ ಮುಗಿಸಿ ಬಂದು ಕೂಡುತ್ತಿದ್ದಂತೆ ಕೇರಂ ಆಟದ ರೆಡ್ಪಾನ್ನಷ್ಟಗಲ ಕುಂಕುಮವನ್ನು ಹಣೆಗೆ ಮೆತ್ತಿಕೊಂಡು ಬಂದ ಮಾರಮ್ಮನ ಉಪಾಸಕಿ ದೇವೀರಿ ಒಸಿ ಜಗುಲಿಗೆ ಬನ್ನಿ ಅಮ್ಮಾರೆ ನಾ ಸರಿಮಾಡ್ತೀನಿ. ಮಾರಮ್ಮನ ಕುಂಕೂಮ ತಂದಿವ್ನಿ. ಹಣೆಗೆ, ಕೈಗೆ ಹಚ್ತೀನಿ. ಚಣಾರ್ಧದಲ್ಲಿ ಸರಿ ಹೋಯ್ತದೆ ಎಂದು ಅಮ್ಮನನ್ನು ಜಗಲಿಗೆ ಕರೆದಳು. ಮಡಿಯುಟ್ಟು ಬಂದಿದ್ದ ಅಮ್ಮನಿಗೆ ಇರುಸು-ಮುರುಸು. ಪುನಃ ಅವಳಿಂದ ಮೈಲಿಗೆಯಾದರೆ ತಿಂಡಿ ತಿನ್ನುವುದು ತಡವಾಗುತ್ತದೆ ಎಂದು ತಿಳಿದಾಗ ನಮ್ಮಕ್ಕ ಉಪಾಯವಾಗಿ ನೋಡು ದೇವೀರಿ ಈಗ ಬಂದು ಹೋಗಿರುವ ವಿಷಕಂಠಪ್ಪ, ಹುಲಿಗೇಶಿ ಎಲ್ಲ ಔಷಧಿ ಮಾಡಿ ಹೋಗಿದ್ದಾರೆ. ಆ ಔಷಧ ಕೆಲಸ ಮಾಡಬೇಕಾದ್ರೂ ಟೈಂ ಕೊಡೋದು ಬೇಡ್ವಾ? ಹಂಗೇನಾರ ಇದ್ರೆ ನಾನೇ ಹೇಳಿ ಕಳಿಸ್ತೀನಿ ಎಂದು ಸಾಗಿ ಹಾಕುವ ದಾರಿ ಹುಡುಕಿದಳು.
ಅಯ್ಯಯ್ಯೋ ಅದ್ಹೆಂಗಾಯ್ತದೆ ಪುಟ್ಟಮ್ಮಾರ್ರೇ? ಚೇಳು ಕಡಿಸ್ಕಂಡು ನರಳಾಡ್ತಿರೋರ ನೋಡ್ತಾ ನಾನಾದ್ರೂ ಎಂಗೆ ಸುಮ್ಕೆ ಕುಂತ್ಕಂಡಿರಕ್ಕಾಯ್ತದೇ? ಕೂಂಕುಮ ತಗಬಂದಿವ್ನಿ. ಇಟ್ಟು ಹ್ವಾಗಾದಾದ್ರೂ ಬೇಡ್ವಾ? ಚಣ ಆಚೆ ಬಂದು ಕೂತ್ಕಳ್ಳಿ. ಕೂಂಕುಮ ಇಟ್ಟು ಹೋಯ್ತೀನಿ ಎಂದಳು ದೇವೀರಿ ಕಕ್ಕುಲಾತಿಯಿಂದ. ಏಕೆಂದರೆ ಅಮ್ಮ ಹಿಂದೆ ಮಾಡಿದ ಉಪಕಾರದ ಋಣವನ್ನು ತೀರಿಸಿಬಿಡಬೇಕೆಂಬ ಪ್ರೀತಿಯ ಛಲದಿಂದ.
ಬೆಳಗಿನಿಂದ ತಿಂಡಿ, ಕಾಫಿ ಏನೂ ಮಾಡದೆ ಬಂದವರೆಲ್ಲ ಹೇಳಿದ್ದಕ್ಕೆಲ್ಲ ತಲೆ ಆಡಿಸಿಕೊಂಡು ಕೂತಿದ್ರು. ಈಗ ಎದ್ದು ಸ್ನಾನ ಮಾಡಿ ತುಳಸೀಪೂಜೆ ಮಾಡ್ಬೇಕು ಅಂತ ಅಂದ್ಕೊಂಡ್ರು. ಅದೂ ಬ್ಯಾಡಾಂತೀಯ ಹಾಗಾದ್ರೆ ದೇವೀರಿ? ಇದು ಅಕ್ಕನ ತಾತ್ತ್ವಿಕ ಪ್ರಶ್ನೆ.
ಅಷ್ಟರಲ್ಲಿ ದೇವೀರಿ ಮೊಮ್ಮಗ ಹಾಲು ಕರ್ಯೋಕ್ಕೆ ಹೋದಾಗ ಅಪ್ಪಂಗೆ ಎಮ್ಮೆ ಒದ್ಬುಡ್ತು. ಮಂಡಿ ಹಿಡಕ್ಕಂಡು ಕುಂತವ್ನೆ, ವಸಿ ಜಲ್ದಿ ಬಾ ಎಂದು ಕರೆದದ್ದೇ ತಡ ಅಯ್ಯೋ ಸಿವನೇ… ಎಂದೆನ್ನುತ್ತಾ ದೇವೀರಿ ಹೊರಟುಬಿಟ್ಟಳು. ಸದ್ಯ ಹೋದಳಲ್ಲಾ ಎಂದು ಬಾಗಿಲು ಮುಂದೆ ಮಾಡಿದ ಅಕ್ಕ, ಅಮ್ಮನಿಗೆ ತಿಂಡಿ ತಂದುಕೊಟ್ಟಳು. ತಿಂಡಿ ತಿಂದು ಕಾಫಿ ಕುಡಿದು ಪುನಃ ಕುರ್ಚಿಯಲ್ಲಿ ಬಂದು ಕುಳಿತಳು.
ಅಪ್ಪನ ಸಹೋದ್ಯೋಗಿ ಸುಂದರಮೂರ್ತಿಗಳಿಗೆ ವಿಷಯ ತಿಳಿದು ಸೀದಾ ಮನೆಯ ಹತ್ತಿರ ಓಡೋಡಿ ಬಂದರು. ನಮ್ಮ ತಂದೆ ಏನು ಮಾಡಲೂ ತೋಚದೆ ತಲೆಯ ಮೇಲೆ ಕೈ ಹೊತ್ತು ಕುಳಿತಿದ್ದರು.
ಏನ್ ನರಸಿಂಗರಾಯ್ರೇ ಬುದ್ಧಿವಂತರಾಗಿ ನೀವೂ ಹೀಗಾ ಮಾಡ್ಕೊಳ್ಳೋದು? ಚೇಳು ಕಡಿದಿದೆ ಅಂದ್ಮೇಲೆ ಆಸ್ಪತ್ರೆಗೆ ಕರ್ಕೊಂಡ್ಹೋಗಿ ಇಂಜೆಕ್ಷನ್ ಹಾಕ್ಸೋದು ಬಿಟ್ಟು ಸ್ಪರ್ಶಮಣಿ ಚಿಕಿತ್ಸೆ, ಬೇವಿನಸೊಪ್ಪಿನ ಚಿಕಿತ್ಸೆ, ಮಾರಮ್ಮನ ಭಂಡಾರ ಅಂತಾ ಈ ಮೂಢನಂಬಿಕೆಯ ಚಿಕಿತ್ಸೆಗೆಲ್ಲ ಗುಣ ಆಗುತ್ತಾ? ಏಳಿ, ಏಳಿ. ಗಾಡಿ ಕಟ್ಟಿಸ್ಕೊಂಡು ಯಳಂದೂರು ಆಸ್ಪತ್ರೆಗೆ ಕರ್ಕೊಂಡ್ಹೋಗೋಣ ಎಂದೆನ್ನುತ್ತ ಹಜಾರಕ್ಕೆ ಬಂದರು. ಬಂದವರಿಗೂ ಆಶ್ಚರ್ಯ. ಇವರು ಬಂದರೆಂದು ಸೆರಗು ಹೊದ್ದು ಲವಲವಿಕೆಯಿಂದ ಕುಳಿತಿದ್ದ ಅಮ್ಮನನ್ನೂ ಕೂಡ ಸುಂದರಮೂರ್ತಿಗಳು ರಾಜಮ್ಮೋರೇ ಹುಷಾರಾಗಿದ್ದೀರಾ ಎಂದು ವಾಡಿಕೆಯಂತೆ ಕೇಳಿದರೂ, ಏನೂ ಆಗಿಲ್ವೇನೋ ಎನ್ನುವಂತೆ ಹ್ಞೂಂ ಎಂದ ಅಮ್ಮ ನಗುಮುಖ ಬೀರಿದಳು.
ಸುಂದರಮೂರ್ತಿಗಳೂ ನೋಡಿದರು. ಕೈಬೆರಳಿಗೆ ಕಟ್ಟಿದ್ದ ಬಟ್ಟೆ ಬ್ಯಾಂಡೇಜ್ ಬಿಟ್ಟು ಕೈಕಾಲು, ದೇಹ, ಮುಖದ ಚರ್ಮದಲ್ಲಿ ವಿಷದ ಯಾವ ಕುರುಹು ಕಾಣ್ತಾಯಿಲ್ಲ. ಇವರಿಗೂ ಆಶ್ಚರ್ಯ. ಪುನಃ ಪುನಃ ಪರೀಕ್ಷಿಸಿ ನೋಡಲು ಸಂಕೋಚ. ಹೇಗಾದರಿರಲಿ ಎಂದು ನಿರ್ಧರಿಸಿದ ಸುಂದರಮೂರ್ತಿಗಳು, ನರಸಿಂಗರಾಯರೇ ಕರ್ಕೊಂಡ್ಹೋಗಿ ತೋರಿಸ್ಕೊಂಡೇ ಬಂದ್ಬಿಡೋಣ ಎಂದಾಗ ಅಪ್ಪ ಎತ್ತಿನಗಾಡಿ ವ್ಯವಸ್ಥೆ ಮಾಡಲು ಹೊರನಡೆದರು.
ಊರಪಟೇಲರಿಗೆ ಆಸ್ತಮಾ ಇದ್ದು ವಾರಕ್ಕೊಮ್ಮೆ ನೋಡಲು ಡಾ|| ಭುಜಂಗರಾಯರು ತಮ್ಮ ಕಾಂಪೌಂಡರ್ ವೆಂಕಟರಾಮ್ ಜೊತೆಗೆ ಬರುತ್ತಿದ್ದು ಅಂದು ಹಳ್ಳಿಗೆ ಬಂದಿರುವ ಸುದ್ದಿ ತಿಳಿದಾಗ ಅಪ್ಪನಿಗೆ ಖುಷಿಯೋ ಖುಷಿ. ಮನೆ ಕಡೆ ಓಡಿ ಬಂದ ಅಪ್ಪ ಸುಂದರಮೂರ್ತಿಗಳೇ ಡಾಕ್ಟರು, ಪಟೇಲರನ್ನು ನೋಡಲು ಬಂದಿದ್ದಾರೆ. ನಾವೇನೂ ಯಳಂದೂರಿಗೆ ಹೋಗಬೇಕಾಗಿಲ್ಲ. ಅವರನ್ನೇ ಕರೆ ತರುತ್ತೇನೆ ಎಂದು ಪಟೇಲರ ಮನೆ ಕಡೆ ಓಡಿದರು.
ಡಾಕ್ಟರ ಪರಿಚಯವಿದ್ದುದರಿಂದ ಅಪ್ಪ ಹೇಳಿದ ತಕ್ಷಣ ಓಡೋಡಿ ಬಂದರು. ಡಾಕ್ಟರು ಬರುತ್ತಿದ್ದಾರೆಂದು ತಲೆಬಾಚಿ, ನೀಟಾಗಿ ಸೀರೆ ಸರಿಪಡಿಸಿಕೊಂಡು ಅಮ್ಮ ರೆಡಿಯಾದಳು.
ಯಾರ್ರೀ ಪೇಷಂಟು ಎಂದು ಮೆಡಿಕಲ್ ಕಿಟ್ ಹಿಡಿದ ಡಾಕ್ಟರು ಹಜಾರಕ್ಕೆ ಬಂದಾಗ ಕುರ್ಚಿಯಲ್ಲಿ ಕುಳಿತಿದ್ದ ಅಮ್ಮ ಎದ್ದು ಚಾಪೆಯ ಮೇಲೆ ಕುಳಿತಳು. ಇವಳಿಗೇ ಡಾಕ್ಟರೇ… ಚೇಳು ಕಚ್ಚಿದೆ ಎಂದ ಅಪ್ಪ ಅವಳ ಎಡಗೈ ತೋರುಬೆರಳು ತೋರಿಸಿದರು. ಚೇಳು ಕಡಿಸಿಕೊಂಡು ಹೀಗೆ ನಿರಾಂತಕವಾಗಿ ಕುಳಿತದ್ದು ಕಂಡು ಡಾಕ್ಟರಿಗೇ ಆಶ್ಚರ್ಯ.
ಅಮ್ಮ ಬೆರಳ ಬಟ್ಟೆ ಬಿಚ್ಚಿ ಅತ್ತ ಹಾಕಿದಳು. ಡಾಕ್ಟರು ಬೆರಳು ಹಿಡಿದು ನೋಡಿದರು. ಅಮ್ಮನ ಮುಖವನ್ನೊಮ್ಮೆ, ಅಪ್ಪನ ಮುಖವನ್ನೊಮ್ಮೆ, ಸುಂದರಮೂರ್ತಿಗಳ ಮುಖವನ್ನೊಮ್ಮೆ ನೋಡಿದಾಗ ನಮಗೆಲ್ಲಾ ಗಾಬರಿ. ಏನು ಹೇಳಿ ಬಿಡುತ್ತಾರೋ? ಬೆರಳನ್ನೇ ಕತ್ತರಿಸಿಬಿಡಬೇಕೆಂದು ಬಿಟ್ಟರೆ ಎಂಬ ಆತಂಕ. ಹುಡುಗರಾದ ನಾವು ಮೂವರೂ ಹೆದರಿ ಅಕ್ಕನ ಹಿಂದೆ ಅವಿತಿಟ್ಟುಕೊಂಡು ಪಿಳಿಪಿಳಿ ಕಣ್ಣು ಬಿಡುತ್ತ ನೋಡತೊಡಗಿದೆವು.
ಅಮ್ಮನ ಬೆರಳ ಪರೀಕ್ಷಿಸಿದ ಡಾಕ್ಟರು ಏನು ಹೇಳಲೇ ಇಲ್ಲ. ಸ್ವಲ್ಪ ಸಮಯದ ನಂತರ ಎಲ್ಲಿ ಚೇಳಿದ್ದುದು, ಜಾಗ ತೋರಿಸ್ತೀರಾ ಸ್ವಲ್ಪ? ಎಂದರು.
ಅಪ್ಪನಿಗೆ ಆಶ್ಚರ್ಯ. ಅಲ್ಲಾ ಟ್ರೀಟ್ಮೆಂಟ್ ಕೊಡಿ ಅಂದ್ರೆ ಚೇಳಿದ್ದ ಜಾಗ ತೋರಿಸಿ ಏನು ಮಾಡ್ತಾರೆ ಎಂದುಕೊಂಡು ಬನ್ನಿ ಡಾಕ್ಟರೆ ಎಂದು ಅಡುಗೆಮನೆಗೆ ಕರೆದೊಯ್ದು ಗೋಡೆಗೆ ಮೊಳೆ ಹೊಡೆದು ಹಗ್ಗ ಕಟ್ಟಿ ತೂಗುಹಾಕಿದ್ದ ಹಲಗೆಯನ್ನು ತೋರಿಸಿ ನೋಡಿ ಈ ಡಬ್ಬಗಳಿವೆಯಲ್ಲ ಇದರ ಸಂದಿಯಲ್ಲೇ ಇತ್ತು. ಹೊಡೆದು ಪರಂಗಿಹಣ್ಣಿನ ಗಿಡಕ್ಕೆ ತೂಗಿ ಬಿಟ್ಟಿದ್ದೇನೆ ಎಂದರು.
ಚೇಳನ್ನು ತೂಗಿ ಹಾಕಿ ಏನು ಮಾಡ್ತೀರಾ ನರಸಿಂಗರಾಯರೇ ಎಂದ ಡಾಕ್ಟರು ನಗುತ್ತ ಡಬ್ಬಗಳನ್ನು ಸರಿಸಿ ನೋಡಿದಾಗ ಹರಿತವಾದ ಚಾಕುವೊಂದು ಇದ್ದುದನ್ನು ಗಮನಿಸಿ ಕೈಗೆತ್ತಿಕೊಂಡು ಹಜಾರಕ್ಕೆ ಬಂದರು.
ಚಾಕುವನ್ನು ಏಕೆ ತೆಗೆದುಕೊಂಡರೆಂದು ಅಪ್ಪನಿಗೆ ಆಶ್ಚರ್ಯ. ಬೆರಳನ್ನೇನಾದರೂ ಕತ್ತರಿಸಿ ಬಿಡುತ್ತಾರಾ? ಚಾಕುವನ್ನು ಉಪಯೋಗಿಸಿಯೇ ಟ್ರೀಟ್ಮೆಂಟ್ ಕೊಡುತ್ತಾರಾ ಎಂಬ ಸಂಶಯ. ಡಾಕ್ಟರ್ ಹಿಂದೆಯೇ ಬಂದರು.
ನೋಡಿ ನಿಮ್ಮಾಕೆಗೆ ಚೇಳು ಕಚ್ಚೇಯಿಲ್ಲ. ಕಚ್ಚಿದ್ದರೆ ಗಾಯದ ಗುರುತು ಬೇರೆ ರೀತಿಯೇ ಇರುತ್ತಿತ್ತು. ಬಹುಶಃ ಅವರು ಡಬ್ಬ ತೆಗೆಯುವಾಗ ಈ ಹರಿತವಾದ ಚಾಕು ತಗುಲಿ ಗಾಯವಾಗಿದೆ. ನೋಡಿ ಬೇಕಾದರೆ ಇದು ಕತ್ತರಿಸಿದ ಗಾಯವೇ ಹೊರತು ಕಡಿದಿರುವುದಲ್ಲ. ಅದೂ ಅಲ್ದೆ ಅವರು ಹೀಗೆ ಸುಟಿಸುಟಿಯಾಗಿ ಕುಳಿತಿರುವುದಕ್ಕಾದರೂ ಸಾಧ್ಯವಿತ್ತೆ? ಚೇಳು ಕಡಿದಾಗ ಶರೀರದ ಮೇಲಾಗುವ ಲಕ್ಷಣಗಳೇ ಬೇರೆ! ಆದರೆ ಅದಾವುದೂ ಕಾಣ್ತಾ ಇಲ್ಲ. ಬಂದ ತಕ್ಷಣ ನೋಡಿದಾಗಲೇ ಆಶ್ಚರ್ಯದ ಜೊತೆಗೆ ಸಂಶಯವೂ ಬಂತು. ಸದ್ಯ ಅಲ್ಲೇ ಚೇಳಿದ್ರೂ ಕಚ್ಚಿರಲಿಲ್ಲವಲ್ಲ. ಥ್ಯಾಂಕ್ಗಾಡ್ ಎಂದಾಗ ಎಲ್ಲರೂ ನಿಟ್ಟುಸಿರುಬಿಟ್ಟರು. ಅಪ್ಪ, ಸುಂದರಮೂರ್ತಿ ಇಬ್ಬರೂ ನಸುನಗೆ ಬೀರುತ್ತಿದ್ದರೆ ಅಕ್ಕ ಸದ್ಯ, ಅಡುಗೆಮನೆ ಕೆಲಸ ತಪ್ಪಿತಲ್ಲ ಎಂದು ನಿರಾಳವಾದಳು. ನಾವು ಮೂವರು ಚಿಕ್ಕ ಹುಡುಗರೂ ಬೆಳಗಿನಿಂದ ಅಮ್ಮನ ಬಳಿ ಸುಳಿಯದಿದ್ದವರು ಓಡಿ ಹೋಗಿ ಅಮ್ಮನನ್ನು ತಬ್ಬಿಕೊಂಡೆವು.
ಫೀ ಕೊಡಿಪ್ಪ ಎಂದು ಅಪ್ಪನನ್ನು ರೇಗಿಸುತ್ತಲೇ ಮೆಡಿಕಲ್ ಕಿಟ್ ಎತ್ತಿಕೊಂಡು ಡಾಕ್ಟರು ಹೊರನಡೆದರು.