ಈ ಟೈಲ್ಸ್ ಕಾಲ ಬಂತು ನೋಡಿ. ಇಲ್ಲಿಂದ ಗೃಹಿಣಿಯರ ಗೋಳು ಶುರುವಾಗಿದ್ದು. ಗ್ರಾನೈಟು, ಮಾರ್ಬಲ್ಲು, ವಿಟ್ರಿಫೈಡು – ಅದೂ ಇದೂ ಎಂದು ಬಹುಆಯ್ಕೆಗಳು ಕಣ್ಣಮುಂದಿವೆ. ಇವುಗಳನ್ನು ಆಯ್ಕೆ ಮಾಡುವುದೂ, ನಮ್ಮ ಹೆಣ್ಣುಮಕ್ಕಳು ಸೀರೆ ಆಯ್ಕೆ ಮಾಡುವುದೂ, ಎರಡೂ ಹೆಚ್ಚುಕಡಮೆ ಒಂದೇ. ಆದರೆ ಇವುಗಳ ನಿರ್ವಹಣೆ ಮಾತ್ರ ಒಂದು ರೀತಿ ದೊಡ್ಡದೊಡ್ಡ ಬೆಂಜ್, ಫಾರ್ಚೂನರ್, ಆಡಿಗಾಡಿಗಳಂತೆ. ಒಂದಿಷ್ಟು ಗಾಢ ಅಥವಾ ಡಲ್ ಬಣ್ಣದ ಡಿಸೈನ್ಗಳಿರುವ ಟೈಲ್ಸ್ ಹಾಕಿಕೊಂಡವರು ಚೂರು ಜಾಣರು ಅಂದುಕೊಳ್ಳಬಹುದು. ಅದರಲ್ಲೂ ಕೆಲವರು ಮೊದಲೇ ತಲೆ ಓಡಿಸಿ, ಅದೆಂತೆಂತಹ ವಿನ್ಯಾಸದ ಟೈಲ್ಸ್ ಹಾಕಿಸಿರುತ್ತಾರೆ ಎಂದರೆ ಕಸ ಬಿಡಿ, ಹಾವು ಬಂದು ಸಿಂಬೆ ಸುತ್ತಿ ಕುಳಿತರೂ ಬೇಗನೆ ಕಣ್ಣಿಗೆ ಬೀಳುವುದಿಲ್ಲ.
ಮುಖಪುಟದ ಸ್ನೇಹಿತರೊಬ್ಬರು, ಸೆಗಣಿಯಿಂದ ನೆಲ ಸಾರಿಸುತ್ತಿರುವ ಮಹಿಳೆಯ ಫೋಟೋ ಪೋಸ್ಟ್ ಮಾಡಿ ಯಾರಿಗಾದರೂ ಈ ತರಹದ ಮನೆಯಲ್ಲಿ ವಾಸ ಮಾಡಿದ ನೆನಪಿದೆಯಾ? ಎಂದು ಕೇಳಿದ್ದರು. ಹತ್ತಾರು ಜನ ತಮ್ಮತಮ್ಮ ನೆನಪುಗಳನ್ನು ಕಮೆಂಟು ಮಾಡಿದರು ಬಿಡಿ, ಅದು ಬೇರೆಯ ಮಾತು.
ಆದರೆ ಆ ಸೆಗಣಿಯ ನೆಲದಲ್ಲಿ ವಾಸವಿದ್ದ ಕಾಲದಲ್ಲಿನ ಹೆಣ್ಣುಮಕ್ಕಳು ತುಂಬ ಪುಣ್ಯಮಾಡಿದ್ರು ಎನಿಸಿತು. ಪ್ರತಿದಿನ ಮನೆ ಸಾರಿಸಬೇಕೆಂಬ ಫಜೀತಿ ಇರಲಿಲ್ಲ. ಬಹುತೇಕರು ಮನೆಯ ವಾರದ ದಿನ ಜೊತೆಗೆ ಹಬ್ಬ, ಹುಣ್ಣಿಮೆ, ಶುಭಕಾರ್ಯಗಳಿದ್ದಾಗ ಮಾತ್ರ ಸಾರಿಸುವುದಿತ್ತು. ಸಾರಿಸುವಾಗ ಅಡ್ಡಡ್ಡ ಓಡಾಡಿ ಎಂದು ಪರ್ಮಿಷನ್ ಕೊಟ್ಟರೂ ಅಪ್ಪಿತಪ್ಪಿಯೂ ಕೂಡ ಯಾರೂ ಓಡಾಡುತ್ತಿರಲಿಲ್ಲ. ಹೆಜ್ಜೆಯ ಗುರುತು ನೆಲದ ಮೇಲಲ್ಲ, ಸೆಗಣಿಯ ಗುರುತು ಪಾದದ ಮೇಲೆ ಮೂಡುವ ಸಾಧ್ಯತೆಗಳಿದ್ದುದರಿಂದ ಅಘೋಷಿತ ಬಂದ್ನ ಹಾಗೆ ನೆಲ ಒಣಗುವ ತನಕ ಮನೆಮಂದಿಯೆಲ್ಲ ತೆಪ್ಪಗೆ ಹೊರಗಡೆ ಇರುತ್ತಿದ್ದರು. ಕಾಫಿ, ಟೀ, ನೀರು, ಪಾನಕ ಏನೇ ಚೆಲ್ಲಿದರೂ ಜಾರಿ ಬೀಳುತ್ತಾರೆ ಅಥವಾ ತುಳಿದು ಮನೆಯೆಲ್ಲ ಹೊಲಸು ಮಾಡುತ್ತಾರೆ ಎನ್ನುವ ಭಯವೇ ಇರಲಿಲ್ಲ. ಓಡಿಹೋಗಿ ಒರೆಸುವ ಬಟ್ಟೆ ತರಬೇಕೆಂಬ ಅವಸರ ಇರುತ್ತಿರಲಿಲ್ಲ. ಚೆಲ್ಲಿರುವುದರ ಸುಳಿವೂ ಬಿಟ್ಟುಕೊಡದಂತೆ ಈಗಿನ ವ್ಯಾಕ್ಯೂಮ್ ಕ್ಲೀನರ್ನ ಹಾಗೆ ನೆಲ ಸರಕ್ಕನೆ ಎಲ್ಲವನ್ನೂ ಹೀರಿಕೊಂಡು ಬಿಡುತ್ತಿತ್ತು. ಹಸಿಯಾದರೂ ಹಸಿರನ್ನು ಬಿಟ್ಟುಕೊಡುತ್ತಿರಲಿಲ್ಲ. ಧೂಳು, ಕಸ ನೆಲದ ಬಣ್ಣದೊಂದಿಗೇ ಬೆರೆತು, ನಿನ್ನೊಳಗೆ ನಾನು, ನನ್ನೊಳಗೆ ನೀನು ಎಂದು ಬಿದ್ದಿರುವುದೂ ಎದ್ದುಕಾಣದಂತೆ ಹಾಲು ಜೇನಿನಂತೆ ಆರಾಮಾಗಿದ್ದವು. ನೆಲಕ್ಕೆ ಚೂಪಾದ ವಸ್ತುಗಳು ತಾಕಿದಾಗ, ತರಚಿದ ಗಾಯದಂತೆ ಸೆಗಣಿಯ ಚಕ್ಕೆಗಳು ಏಳುತ್ತಿದ್ದವು. ಅದಕ್ಕೆಲ್ಲ ತಲೆಕೆಡಿಸಿಕೊಳ್ಳದೆ ಕಸ ಗುಡಿಸಿ ಗಾಯವನ್ನು ತೊಳೆದು ಗಾಳಿಗೆ ಬಿಟ್ಟ ಹಾಗೆ ಬಿಡುತ್ತಿದ್ದರು. ಮತ್ತೆ ನೆಲ ಸಾರಿಸುವ ದಿನವೇ ಅವು ಬ್ಯಾಂಡೇಜ್ ಭಾಗ್ಯ ಕಾಣುತ್ತಿದ್ದುದು. ತೆಂಗಿನಕಾಯಿಯನ್ನು ನೆಲಕ್ಕೆ ಕುಟ್ಟಿದರೆ, ನೆಲ ಒಳಗೆ ಹೋಗುತ್ತಿತ್ತೇ ಹೊರತು ಹೋಳಾಗುತ್ತಿರಲಿಲ್ಲ. ಹುಳ, ಹುಪ್ಪಟೆ ಅಂತೂ ಸೆಗಣಿಯ ನೆಲದ ಮೇಲೆ ಕಾಲಿಡಲು ಹೆದರುತ್ತಿದ್ದವು. ಕಸ ಗುಡಿಸಿದರೂ, ಬಿಟ್ಟರೂ ಅಷ್ಟೇನೂ ಗೊತ್ತಾಗುತ್ತಿರಲಿಲ್ಲ. ಆದರೆ ಮುಂಜಾನೆ ಹಾಗೂ ಸಂಜೆಯ ಹೊತ್ತು ಕಸ ಗುಡಿಸದೆ ಇರುತ್ತಿರಲಿಲ್ಲ. ಒಲೆ, ಅಂಗಳ, ಹಿತ್ತಲು, ಮನೆ ಎಲ್ಲವೂ ಸೆಗಣಿಯ ನೆಲವೇ ಆಗಿದ್ದರಿಂದ ‘ಹಸಿರು ಗಿಡದಲ್ಲಿ ಮೊಸರು ಚೆಲ್ಲಿದಂತೆ’ ಎನ್ನುವ ನಾಣ್ಣುಡಿಗೆ ಅನ್ವರ್ಥಕವಾಗುವಂತೆ ಇಡೀ ಮನೆಯಲ್ಲಿ ಎಲ್ಲೆಡೆಯೂ ರಂಗೋಲಿಯದೇ ಪಾರುಪತ್ಯ.
ಸೆಗಣಿಯಂತೂ ಸದಾಕಾಲ ಲಭ್ಯವಾಗುತ್ತಿತ್ತು. ಬಹುತೇಕ ಮನೆಗಳಲ್ಲಿನ ಕೊಟ್ಟಿಗೆಯಲ್ಲಿ ಧಾರಾಳವಾಗಿ ಬಿದ್ದಿರುತ್ತಿತ್ತು. ಇಲ್ಲದಿದ್ದರೆ ಮನೆ ಮುಂದೆ ಮೇಯುತ್ತ ಬರುತ್ತಿದ್ದ ದನ, ಎಮ್ಮೆ, ಹಸು, ಕರುಗಳ ಹಿಂದೆ ಕಬ್ಬಿಣದ ಬುಟ್ಟಿಯನ್ನೋ, ಬಕೆಟನ್ನೋ ಹಿಡಿದು ಅವುಗಳನ್ನು ಹಿಂಬಾಲಿಸಿಕೊಂಡು ಹೋಗಿ ತರುತ್ತಿದ್ದರು. ಒಟ್ಟಿನಲ್ಲಿ ಮಲಗಿದಾಗ ರೂಮ್ ಫ್ರೆಷ್ನರ್ನ ಹಾಗೆ ಸೆಗಣಿಯ ಘಮಲು ಆವರಿಸುತ್ತಿತ್ತು. ಸುಣ್ಣದ ಗೋಡೆಗಳೂ ಸಹಿತ ಹಬ್ಬ, ಹರಿದಿನಗಳಲ್ಲಿ ಪೌಡರ್ ಹಚ್ಚಿಕೊಂಡು ಥಳಥಳ ಹೊಳೆಯುತ್ತಿದ್ದವು. ಸ್ವಲ್ಪ ದಿನಗಳಲ್ಲಿ ಗೋಡೆಯನ್ನು ಸವರಿಕೊಂಡು ಓಡಾಡುವವರ ಮೈ, ಕೈ, ತಲೆಗಳಿಗೆಲ್ಲ ತಮ್ಮ ಪೌಡರನ್ನು ವರ್ಗಾಯಿಸಿ ಮೇಕಪ್ ಕಳಚಿದಂತೆ ಎಣ್ಣೆಜಿಡ್ಡಿನ ಮುಖಹೊತ್ತು ನಿಲ್ಲುತ್ತಿದ್ದವು.
ಮುಂದೆ ಕರಿಬಂಡೆ ನೆಲದ ಕಡೆ ಬಹುತೇಕ ಜನ ಹೊರಳಿದರೂ ಅಷ್ಟೇನೂ ವ್ಯತ್ಯಾಸವಿರಲಿಲ್ಲ. ಅದು ಎಲ್ಲ ಕಾಲದಲ್ಲಿಯೂ ತಣ್ಣನೆಯ ಅನುಭವ ಕೊಡುತ್ತಿತ್ತು. ಚಚ್ಚೌಕ ಕಲ್ಲುಗಳ ಸುತ್ತ ಸಿಮೆಂಟನ್ನು ದೊರಗುದೊರಗಾಗಿ ಮೆತ್ತುತ್ತಿದ್ದುದ್ದರಿಂದ ಈಚಲ ಪೊರಕೆಯ ಕೂದಲುಗಳೆಲ್ಲ ಹೊರಬಂದು ಕಸದ ಜೊತೆಗೇ ಸೇರಿ ಹೊರಹೋಗುತ್ತಿದ್ದುದರಿಂದ ಪುಕ್ಕಗಳಿಲ್ಲದ ಕೋಳಿಯಂತಾಗುತ್ತಿತ್ತು. ನೆಲ ಒರೆಸುವ ಬಟ್ಟೆಯಂತೂ ಕೆಲವೇ ದಿನಕ್ಕೆ ಹರಿದು ದಿಕ್ಕಾಪಾಲಾಗಿ ಹೋಗುತ್ತಿತ್ತು. ಮಕ್ಕಳಂತೂ ಒಂದು ಬಂಡೆಯ ಮೇಲೆ ಚೌಕಾಬಾರದ ಮನೆ ಕೊರೆದುಕೊಂಡು, ಮತ್ತೊಂದಿಷ್ಟು ಬಂಡೆಗಳನ್ನು ಕುಂಟೆಬಿಲ್ಲೆಗಳ ಮನೆಗಳನ್ನಾಗಿ ಬರೆದುಕೊಂಡು ಆಡುತ್ತಿದ್ದರು. ಇರುವೆ, ಗೊದ್ದಗಳು ಸಿಮೆಂಟ್ ಮೆತ್ತಿದ ಕಡೆಯಲ್ಲಿ ಹೋಲ್ ಮಾಡಿಕೊಂಡು ಆಗಾಗ ಹೊರಬಂದು, ಮನೆತುಂಬ ವಾಕ್ ಮಾಡಿ, ಮತ್ತೆ ಗುದ್ದು ಸೇರಿಕೊಂಡು ಹೋಲ್ಸೇಲಾಗಿ ಸುಖವಾಗಿ ಸಂಸಾರ ಮಾಡಿಕೊಂಡಿರುತ್ತಿದ್ದವು.
ಇನ್ನು ಕೆಂಪುಸುಂದರಿ ಅಂದರೆ ರೆಡ್ ಆಕ್ಸೈಡ್ ನೆಲದ ಗಮ್ಮತ್ತನ್ನು ಕೇಳುವುದೇ ಬೇಡ. ಬಕೆಟ್ ನೀರಿನಲ್ಲಿ ಒರೆಸುವ ಬಟ್ಟೆ ನೆನೆಸಿಕೊಂಡು, ಹಿಂಡಿ ಒರೆಸಿಕೊಂಡು ಬಂದರೆ ಸಾಕು, ಮಿರಿಮಿರಿ ಮಿಂಚುತ್ತಿದ್ದಳು. ಕಸ, ನೆಲ ಎರಡೂ ಸುಲಭವಿತ್ತು. ಗೋಡೆಗಳ ಸುಣ್ಣ ಹತ್ತಬಾರದೆಂದು ಮೂರಡಿ ಗೋಡೆಗಳನ್ನು ರೆಡ್ ಆಕ್ಸೈಡ್ ಮಾಡಿಸುವುದಿತ್ತು. ಅದು ಮನೆಯ ಮಕ್ಕಳ ಬೋರ್ಡ್ ಆಗಿ ಹೆಚ್ಚು ಉಪಯೋಗವಾಗುತ್ತಿತ್ತು ಎನ್ನಬಹುದು. ಕಾಲ ಬಳಿ ಸುಣ್ಣ ಹತ್ತದಿದ್ದರೂ, ತಲೆ ಬೆನ್ನು ತಪ್ಪಿಸಿಕೊಳ್ಳಲು ಸಾಧ್ಯವಿರಲಿಲ್ಲ. ಆದರೆ ಈ ಕಲ್ಲು, ಸಿಮೆಂಟಿನ ನೆಲಗಳ ಮೇಲೆ ಪುಡಿ ರಂಗೋಲಿ ನಿಲ್ಲದ ಕಾರಣ, ಅಕ್ಕಿ ಹಿಟ್ಟನ್ನು ರುಬ್ಬಿ ಪೇಸ್ಟ್ ರೀತಿ ಮಾಡಿಕೊಂಡು ಅಥವಾ ಕಿಟಕಿಯ ಸರಳುಗಳಿಗೆ ಹೊಡೆಯುತ್ತಿದ್ದ ಬಿಳಿ ಪೇಂಟ್ನಿಂದ ಮನೆಯ ತುಂಬ ರಂಗೋಲಿ ಬಿಡಿಸುತ್ತಿದ್ದರು. ಕಟ್ಟಿಗೆ ಕಡಿದರೂ, ಈ ನೆಲಗಳಿಗೆ ಹಾನಿಯಾಗುತ್ತಿದ್ದುದು ಕಡಮೆ. ಸ್ಕೂಟರು, ಬೈಕು, ಸೈಕಲ್ಲುಗಳನ್ನು ಸಲೀಸಾಗಿ ಮನೆಯ ಒಳಗೆ ತಂದು ನಿಲ್ಲಿಸಬಹುದು. ಒಂದು ಸಂತಸದ ಸಂಗತಿಯೆಂದರೆ ಈ ಯಾವ ನೆಲಗಳೂ ಗೃಹಿಣಿಯರಿಂದ ಹೆಚ್ಚು ಪರಿಶ್ರಮ ಬೇಡುತ್ತಿರಲಿಲ್ಲ.
ಈ ಟೈಲ್ಸ್ ಕಾಲ ಬಂತು ನೋಡಿ. ಇಲ್ಲಿಂದ ಗೃಹಿಣಿಯರ ಗೋಳು ಶುರುವಾಗಿದ್ದು. ಗ್ರಾನೈಟು, ಮಾರ್ಬಲ್ಲು, ವಿಟ್ರಿಫೈಡು – ಅದೂ ಇದೂ ಎಂದು ಬಹುಆಯ್ಕೆಗಳು ಕಣ್ಣಮುಂದಿವೆ. ಇವುಗಳನ್ನು ಆಯ್ಕೆ ಮಾಡುವುದೂ, ನಮ್ಮ ಹೆಣ್ಣುಮಕ್ಕಳು ಸೀರೆ ಆಯ್ಕೆ ಮಾಡುವುದೂ, ಎರಡೂ ಹೆಚ್ಚುಕಡಮೆ ಒಂದೇ. ಆದರೆ ಇವುಗಳ ನಿರ್ವಹಣೆ ಮಾತ್ರ ಒಂದು ರೀತಿ ದೊಡ್ಡದೊಡ್ಡ ಬೆಂಜ್, ಫಾರ್ಚೂನರ್ ಗಾಡಿಗಳಂತೆಯೇ ಸರಿ. ಒಂದಿಷ್ಟು ಗಾಢ ಅಥವಾ ಡಲ್ ಬಣ್ಣದ ಡಿಸೈನ್ಗಳಿರುವ ಟೈಲ್ಸ್ ಹಾಕಿಕೊಂಡವರು ಚೂರು ಜಾಣರು ಅಂದುಕೊಳ್ಳಬಹುದು. ಅದರಲ್ಲೂ ಕೆಲವರು ಮೊದಲೇ ತಲೆ ಓಡಿಸಿ ಅದೆಂತೆಂತಹ ವಿನ್ಯಾಸದ ಟೈಲ್ಸ್ ಹಾಕಿಸಿರುತ್ತಾರೆ ಎಂದರೆ ಕಸ ಬಿಡಿ, ಹಾವು ಬಂದು ಸಿಂಬೆ ಸುತ್ತಿ ಕುಳಿತರೂ ಬೇಗನೆ ಕಣ್ಣಿಗೆ ಬೀಳುವುದಿಲ್ಲ.
ಮಾರ್ಬಲ್ ಎಂಬ ಶ್ವೇತಸುಂದರಿಯನ್ನು ಮನೆಯ ತುಂಬ ಹರಡಿಬಿಟ್ಟರೆ ಏಳುಮಲ್ಲಿಗೆ ತೂಕದ ನಾಜೂಕು ರಾಜಕುಮಾರಿಯ ಸೇವೆಯಂತೆ ೨೪x೭ ಕಾಲವೂ ಸತತ ಗಮನವಿಟ್ಟಿರಬೇಕು. ಇನ್ನು ಬೇರೆಬೇರೆ ರೀತಿಯ ಟೈಲ್ಸ್ಗಳನ್ನು ಹಾಕಿಸುವಾಗಲೂ ಬಣ್ಣ ತಿಳಿಯಾಗಿದ್ದನ್ನು ಹಾಕಿಸಿದರೆ ನೋಡಲು ಅಂದ, ರೂಮುಗಳೆಲ್ಲ ದೊಡ್ಡದಾಗಿ ಕಾಣುತ್ತವೆ, ಬೆಳಕು ಚೆನ್ನಾಗಿ ಪ್ರತಿಫಲಿಸುತ್ತದೆ ಎಂದೆಲ್ಲ ಅವರಿವರ ಮಾತು ಕೇಳಿ ಹಾಕಿಸಿದವರಿಗಿಂತ ಮೂರ್ಖರು ಮತ್ಯಾರೂ ಇರಲಾರರು. ದೇವಿ ರಾಕ್ಷಸರ ಸಂಹಾರಕ್ಕಾಗಿ ತ್ರಿಶೂಲ ಹಾಗೂ ಖಡ್ಗವನ್ನು ಹಿಡಿದಂತೆ ಕಸ ಸಂಹಾರಕ್ಕಾಗಿ ಸದಾ ಒಂದು ಕೈಯಲ್ಲಿ ಮಾಪು ಮತ್ತೊಂದು ಕೈಯಲ್ಲಿ ಪೊರಕೆಧಾರಿಯಾಗಿರಲೇಬೇಕು. ಬೆಳಗ್ಗೆಯಿಂದ ಸಂಜೆಯವರೆಗೂ ಗುಡಿಸಿದ್ದೂ ಗುಡಿಸಿದ್ದೇ, ಒರೆಸಿದ್ದೂ ಒರೆಸಿದ್ದೇ. ಒಂದು ಚಿಕ್ಕ ಕಸ, ಕೂದಲು ಬಿದ್ದರೂ ಭೂತಕನ್ನಡಿಯೊಳಗಿನಿಂದ ಕಾಣುವಷ್ಟು ದೊಡ್ಡದಾಗಿ ಕಾಣುತ್ತಿರುತ್ತದೆ. ಕೋಳಿಗಳು ತಲೆಬಗ್ಗಿಸಿ ಕಾಳುಗಳನ್ನು ಹೆಕ್ಕುತ್ತಾ ಸಾಗುವಂತೆ ಗೃಹಿಣಿಯರು ನಡುಬಗ್ಗಿಸಿ ಕಸ ಕಂಡಾಗಲೆಲ್ಲ ಹೆಕ್ಕುತ್ತಲೇ ಇರಬೇಕು. ಪ್ರತಿದಿನ ಬೆಳಗ್ಗೆ ಗುಡಿಸಿ ಒರೆಸಿ, ಮನೆಯ ತುಂಬ ಮ್ಯಾಟುಗಳನ್ನು ಹಾಸಿದರೂ ಫುಟ್ಪ್ರಿಂಟ್ಸ್ ಬೀಳದೇ ಇರದು. ನೀರು ಗೀರು ಚೆಲ್ಲಿ ಬಿಟ್ಟರಂತೂ ಬೇಗನೆ ಕಣ್ಣಿಗೆ ಬೀಳುವುದಿಲ್ಲವಾದ್ದರಿಂದ, ಎಲ್ಲಿ ಯಾರು ಕಾಲು ಜಾರುತ್ತಾರೋ ಎಂದು ಎದ್ದೆನೋ ಬಿದ್ದೆನೋ ಅಂತ ಓಡಿಹೋಗಿ ಒರೆಸಬೇಕು. ಇನ್ನು ಕಾಫಿ ಟೀಯಂತಹ ಗಾಢಬಣ್ಣದ ಪಾನೀಯಗಳು ಚೆಲ್ಲಿದರೆ ನಾಲ್ಕಾರು ಸಲ ಒರೆಸಿದ ನಂತರವೇ ಕಲೆ ಹೋಗುವುದು. ಇನ್ನು ಜೋರಾಗಿ ಕುಟ್ಟುವಂತಿಲ್ಲ, ಚೂಪಾದ ವಸ್ತುಗಳಿಂದ ತಿವಿಯುವಂತಿಲ್ಲ. ಎಲ್ಲದಕ್ಕೂ ಈಗಿನ ಚಿಕ್ಕಮಕ್ಕಳಿಗೆ ಡೈಪರ್ ಹಾಕಿದಂತೆ ಕೆಳಗೆ ದಪ್ಪನೆಯ ಬಟ್ಟೆಯನ್ನೋ, ಮ್ಯಾಟನ್ನೋ ಹಾಸಿಕೊಂಡು ಬಂದೋಬಸ್ತ್ ಮಾಡಿಕೊಂಡೇ ಮುಂದುವರಿಯಬೇಕು. ಗ್ಯಾಸ್ ಸಿಲಿಂಡರ್ ಕೂಡ ತಳ್ಳುವ ಗಾಡಿಯಲ್ಲಿ ನೂಕಿ ತರಬೇಕು. ಇತ್ತೀಚೆಗೆ ಅದನ್ನೂ ಮನೆಯ ಹೊರಗಡೆಯೇ ನಾಯಿಯ ತರಹ ಒಂದು ಪಂಜರದಲ್ಲಿ ಕೂಡಿಹಾಕಿ, ಅಲ್ಲಿಂದಲೇ ಇಡೀ ಮನೆಗೆ ಕನೆಕ್ಷನ್ ಕೊಟ್ಟುಕೊಳ್ಳುವವರು ಹೆಚ್ಚಾಗಿದ್ದಾರೆ.
ಹೆಣ್ಣುಮಕ್ಕಳು ಚಂದ ಕಾಣಲು ಬಳಸುವ ಮೇಕಪ್ಪಿನ ಸೆಟ್ನಲ್ಲಿರುವ ಸಾಮಾನುಗಳಂತೆ ಈ ಟೈಲ್ಸ್ಗಳನ್ನು ಗುಡಿಸಲು ನುಣ್ಣನೆಯ ಕೂದಲುಗಳುಳ್ಳ ಪೊರಕೆ, ವ್ಯಾಕ್ಯೂಮ್ ಕ್ಲೀನರ್, ನಾನಾ ಅಳತೆಯ, ವಿನ್ಯಾಸದ ಮಾಪುಗಳು, ಒರೆಸುವ ಬಕೆಟುಗಳು, ನೀರಿಗೆ ಹಾಕಲು ತರೇಹವಾರಿ ಲಿಕ್ವಿಡ್ಡುಗಳಿಗೇ ಒಂದಿಷ್ಟು ಹೆಚ್ಚುವರಿ ಹಣ ಹಾಗೂ ಮನೆಯಲ್ಲಿ ಪ್ರತ್ಯೇಕ ಸ್ಥಳ ಮೀಸಲಿಡಬೇಕು.
ಬರಿಯ ನೆಲವಾಗಿದ್ದರೆ ಬೇರೆ ಮಾತು. ಎಲ್ಲವೂ ಥೀಮ್ ಬೇಸ್ಡ್. ಬಚ್ಚಲುಮನೆ ಹಾಗೂ ಟಾಯ್ಲೆಟ್ನ ನೆಲ ಹಾಗೂ ಗೋಡೆಗಳ ಟೈಲ್ಸ್ ವಿನ್ಯಾಸಗಳೇ ಬೇರೆ. ಅಡುಗೆಮನೆಯಲ್ಲಿ ಅಡುಗೆಕಟ್ಟೆಯ ಸುತ್ತಮುತ್ತ ಹೆಚ್ಚುಕಡಮೆ ಲಿಂಟಲ್ ಲೆವೆಲ್ ತನಕ ತಿನಿಸು ಪಾನೀಯಗಳ ಟೈಲ್ಸ್, ದೇವರಮನೆಯ ನೆಲ ಮತ್ತು ಗೋಡೆಗಳೆಲ್ಲ ದೀಪ, ಗಂಟೆ, ದೇವರ ಫೋಟೋ ಮುಂತಾದವುಗಳನ್ನೊಳಗೊಂಡ ಟೈಲ್ಸ್ಗಳು, ಸಿಂಕ್ ಇರುವಲ್ಲಿ ಅದರ ನಳದ ಹಿಂಭಾಗ, ಯುಟಿಲಿಟಿ ಸ್ಥಳಗಳಲ್ಲಿ, ಹೆಬ್ಬಾಗಿಲ ಸುತ್ತಮುತ್ತ, ಮೆಟ್ಟಿಲುಗಳು ಹಾಗೂ ಅದನ್ನು ಹತ್ತುವಾಗಿನ ಗೋಡೆಗಳಲ್ಲಿ ದೊರಗು ದೊರಗಾಗಿರುವ ಇಟ್ಟಿಗೆ, ಗಿಡಗಂಟಿಗಳ ವಿನ್ಯಾಸದ ಟೈಲ್ಸ್ಗಳು ಸಾಮಾನ್ಯ. ಅಂಗಳಕ್ಕೆ ವಿವಿಧ ನಮೂನೆಯ ಪಾರ್ಕಿಂಗ್ ಟೈಲ್ಸ್ ಎಂದೇ ಲಭ್ಯವಿವೆ. ಹೀಗೆ ಟೈಲ್ಸ್ಗಳು ಎಲ್ಲೆಡೆ ತಮ್ಮ ವ್ಯಾಪ್ತಿಯನ್ನು ಹಿಗ್ಗಿಸಿವೆ. ಕೆಲವರು ಸ್ವಚ್ಛ ಮಾಡಲು ಸುಲಭ ಎಂದು ಪುಡಿ, ಪುಕ್ಕಲು ಟೈಲ್ಸ್ಗಳನ್ನೆಲ್ಲ ಸೇರಿಸಿ ಟೆರೇಸಿನ ಮೇಲೆ ಹೊಸ ವಿನ್ಯಾಸದಲ್ಲಿ ಅಂಟಿಸುವುದುಂಟು. ಹಾಗಾಗಿ ಯಾವಾಗ ಯಾವ ಟೈಲ್ಸ್ಗಳನ್ನು ಸ್ವಚ್ಛಗೊಳಿಸಬೇಕು ಎನ್ನುವುದಕ್ಕೆ ಹೆಣ್ಣುಮಕ್ಕಳು ಒಂದು ಟೈಮ್ ಟೇಬಲ್ಲನ್ನೇ ಹಾಕಿಕೊಳ್ಳಬೇಕಾಗಿದೆ. ಕೆಲಸದವರು ಮೊದಲು ಬರೀ ಕಸ, ನೆಲ ಎಂದು ಮಾತ್ರ ಲೆಕ್ಕ ಹಾಕುತ್ತಿದ್ದವರು, ಈಗ ಇಡೀ ಮನೆಯನ್ನು ಸ್ಕ್ಯಾನ್ ಮಾಡಿ, ನೆಲ, ಗೋಡೆ, ಮೆಟ್ಟಿಲು, ವರಾಂಡಾ ಎಂದು ಎಲ್ಲ ಟೈಲ್ಸ್ ವಿಭಾಗಗಳಿಗೂ ಬೇರೆ ಬೇರೆ ದರ ಫಿಕ್ಸ್ ಮಾಡಿಬಿಡುತ್ತಾರೆ. ಹಾಗಾಗಿ ಹಾಕಿಸುವಾಗಿದ್ದ ಹುರುಪು ನಂತರ ಇಷ್ಟಿಷ್ಟೇ ಇಳಿಯಲು ತೊಡಗಿ ಅನಂತರ ಎಲ್ಲದಕ್ಕೂ ಕೆಲಸದವರ ಮೇಲೆ ಅವಲಂಬಿತರಾಗದೆ ವಿಧಿಯಿಲ್ಲ. ಅಕಸ್ಮಾತ್ ನಾಲ್ಕೈದು ದಿನ ಕೈಕೊಟ್ಟರೆಂದರೆ ‘ಎಂಥ ನೆಲವಯ್ಯ, ಇದು ಎಂಥಾ ನೆಲವೋ’ ಎಂದು ಶಪಿಸುತ್ತಲೇ, ಬೆವರೊರೆಸಿಕೊಳ್ಳುತ್ತ ಒರೆಸುವ ಕೆಲಸ ತಪ್ಪದು.