ರಾಮನ ರಾವಣಸಂಹಾರ ಕಾರ್ಯದಲ್ಲಿ ಪ್ರಾರಂಭದಿಂದ ಅಂತ್ಯದವರೆಗೆ ಅನೇಕರ ತಪಸ್ಸು, ಶಕ್ತಿ, ಪ್ರಾರ್ಥನೆಗಳು ಜೊತೆಗೂಡಿವೆ. ಕೆಲವು ವಿರೋಧಾಭಾಸದಂತೆ ಕಾಣುವ ಕೈಗಳಿಂದಲೂ ಸಹಕಾರ ದೊರೆತಿದೆ. ವಿಶೇಷವಾಗಿ ನಾರಿಯರ ಪಾತ್ರಗಳು ಮನನಾರ್ಹವಾಗಿವೆ. ರಾವಣ ಸಂಹಾರಕ್ಕೆ ಸೀತೆಯೇ ಕಾರಣ ಎನ್ನುವುದು ಮೇಲುನೋಟಕ್ಕೇ ಕಂಡುಬರುತ್ತದೆ. ಯಾವರೀತಿಯಲ್ಲಿ ಈ ಘಟ್ಟಕ್ಕೆ ತಲಪಿದೆ ಎನ್ನುವುದು ಚಿಂತಿಸಬೇಕಾದ ವಿಷಯವಾಗಿದೆ. ನಾಯಕನ ಕಾರ್ಯದ ಫಲಿತಾಂಶಕ್ಕೆ, ಕರ್ಯಸಾಧನೆಗೆ ಬೆಂಬಲಿಸಿದ ನಾರಿಯರ ಕಥೆ ತಿಳಿಯಬೇಕು. ಕೌಸಲ್ಯೆ, ಸೀತೆ, ಕೈಕೇಯಿ, ಮಂಥರೆ, ಶೂರ್ಪನಖಿ, ಶಬರಿ ಮುಂತಾದವರ ಜೊತೆಗೆ ಅಪ್ರತ್ಯಕ್ಷವಾಗಿ ಸಹಕರಿಸಿದವರೂ ಇದ್ದಾರೆ. ಅವರೆಲ್ಲರ ಕೊಡುಗೆಗಳನ್ನು ಸ್ಮರಿಸೋಣ.

“ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ|
ಅಭ್ಯುತ್ಥಾನಮಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಂ||”
ಧರ್ಮಕ್ಕೆ ಗ್ಲಾನಿಯಂಟಾದಾಗ, ಅಧರ್ಮವನ್ನು ಖಂಡಿಸಿ ಸ್ಥಾಪನೆಗೈಯಲು ನಾನೇ ಅವತರಿಸಿ ಬರುತ್ತೇನೆ’ ಇದು ಭಗವಂತನ ಅಭಯವಾಣಿ. ಲಂಕಾಧಿಪತಿ ರಾವಣೇಶ್ವರನು ತ್ರಿಲೋಕಾಧಿಪತಿಯಾಗಿ ದರ್ಪ, ಅಹಂಕಾರಗಳಿಂದ ನಡೆಸಿದ ಆಡಳಿತವು ಧರ್ಮಕ್ಕೆ ವಿರುದ್ಧವಾಗಿ, ಎಲ್ಲೆಲ್ಲೂ ಅಧರ್ಮವೇ ಮೆರೆದಾಗ, ಲೋಕಲ್ಯಾಣಕ್ಕಾಗಿ ಶ್ರೀಮನ್ನಾರಾಯಣನೇ ಧರೆಯಲ್ಲಿ ರಾಮನಾಗಿ ಅವತರಿಸಿದನು. ಮರ್ಯಾದಾ ಪುರುಷೋತ್ತಮನಾದ ರಾಮನ ಕಥೆಯೇ ರಾಮಾಯಣ. ಆದಿಕವಿ ವಾಲ್ಮೀಕಿ ಮಹರ್ಷಿಗಳಿಂದ ರಚಿಸಲ್ಪಟ್ಟು, ಧಾರ್ಮಿಕ ಗ್ರಂಥವೆನಿಸಿದೆ. ರಾಮನ ಕಥೆಯಾದರೂ ಇದರ ಸುತ್ತ ಸಾಮಾಜಿಕ, ಆರ್ಥಿಕ, ಧಾರ್ಮಿಕ ಹಾಗೂ ರಾಜಕೀಯ ವಿಷಯಗಳೊಂದಿಗೆ ಹೆಣೆದು ಸಮಾಜಕ್ಕೆ ಮಾರ್ಗದರ್ಶನವನ್ನು ತೋರಿಸಿದೆ. ಸಮಾಜಕ್ಕೆ ಹಿತವನ್ನುಂಟು ಮಾಡುವಂತಹ ಕಾವ್ಯವನ್ನು ರಚಿಸಿದ್ದಾರೆ. ಸಮಾಜದ ಅಂಕು-ಡೊಂಕುಗಳನ್ನು ತೋರಿಸಿ, ಅದರಿಂದ ಪಾರಾಗುವ ರೀತಿಗಳು ಶಿಲ್ಪಕಲೆಯಾಗಬಹುದು, ಚಿತ್ರಕಲೆಯಾಗಬಹುದು, ಸಂಗೀತವಾಗಬಹುದು, ಬರವಣಿಗೆ ಆಗಬಹುದು ತನ್ಮೂಲಕ ಸಮಾಜವನ್ನು ಎಚ್ಚರಿಸಿ ಜನಮನಕ್ಕೆ ತಲಪಿಸುವ ಕಾರ್ಯ ಸಾಹಿತ್ಯಕ್ಕೆ ಸೇರಿದ್ದು. ರಾವಣನ ಸಂಹಾರವೇ ರಾಮಾವತಾರಕ್ಕೆ ನಿಮಿತ್ತ.
ಒಂದು ಕಾರ್ಯ ಯಶಸ್ವಿಯಾಗಬೇಕಾದರೆ ನಾಲ್ಕಾರು ಕಡೆಗಳಿಂದ ಬೆಂಬಲವೂ ಬೇಕು, ಸಹಕಾರವೂ ಬೇಕು. ಜೊತೆಗೆ ದೈವ ಸಹಾಯವಿದ್ದೇ ಇರುತ್ತದೆ. ರಾವಣಸಂಹಾರಕ್ಕಾಗಿಯೇ ರಾಮನು ಅವತರಿಸಿದ್ದು. ಈ ಅವತಾರ ಕರ್ಯದಲ್ಲಿ ಜೊತೆಗೂಡಲು ಧರೆಗಿಳಿದು ಬಂದಿದ್ದರು ಇತರ ದೇವತೆಗಳು ಎನ್ನಬಹುದು. ವಿಶ್ವಾಸಿಗಳಾಗಿ, ವಿರೋಧಿಗಳಾಗಿ, ಕಂಟಕರಾಗಿ, ವಂಚಕರಾಗಿಯೂ ತಮ್ಮ ಸಹಕಾರವನ್ನು ನೀಡಿದ್ದಾರೆ. ನಾರಿಯರೂ ಇದ್ದಾರೆ, ಪುರುಷರೂ ಇದ್ದಾರೆ. ಪಶು, ಪಕ್ಷಿಗಳೂ ಸಹಕರಿಸಿವೆ. ಇದರಲ್ಲಿ ನಾರಿಯರ ಪಾತ್ರವನ್ನು ಸ್ಮರಿಸುವುದೇ ಈ ಬರಹದ ಅಭಿಲಾಷೆ. ವಾಲ್ಮೀಕಿ ರಾಮಾಯಣ, ರಾಮಚರಿತಮಾನಸ ಮತ್ತು ಕುವೆಂಪು ಅವರ ರಾಮಾಯಣದರ್ಶನಂಗಳ ಆಧಾರದ ಮೇಲೆ ಮನಸ್ಸಿನಲ್ಲಿ ಮೂಡಿದ ಭಾವನೆಗಳನ್ನು ಬರಹರೂಪಕ್ಕೆ ತರಲು ಇಲ್ಲಿ ಯತ್ನಿಸಲಾಗಿದೆ. ಪೂರ್ಣ ವಿವರಣೆಗಳೊಂದಿಗೆ ಬರೆಯುವಷ್ಟು ವಿದ್ವತ್ ಇಲ್ಲ. ಕಥಾರೂಪದಂತೆ ಕೆಲವು ನಾರಿಯರ ಸಹಕಾರ ರಾವಣಸಂಹಾರಕ್ಕೆ ಹೇಗೆ ಅನುಕೂಲವಾಯಿತು ಎಂದು ಸರಳವಾಗಿ ಬರೆಯಲು ಪ್ರಯತ್ನಿಸಿದ್ದೇನೆ.
ರಾವಣನು ದೈತ್ಯಚಕ್ರವರ್ತಿ, ಲಂಕಾಧಿಪತಿ, ಮಹತ್ತ್ವಾಕಾಂಕ್ಷಿ, ಛಲಗಾರ, ದೈವಭಕ್ತನೂ ಹೌದು. ಆದರೇನು, ಸ್ವಾರ್ಥಕ್ಕಾಗಿ ಬದುಕನ್ನು ಬಳಸಿ ಕುಲಕಂಟಕನಾದ. ರಾವಣನ ಹೆಸರಿನ ಜೊತೆಗೇ ರಾಮನ ಹೆಸರೂ ಬಳಕೆಯಲ್ಲಿದೆ. ಹುಟ್ಟಿನ ಜೊತೆಯಲ್ಲಿಯೇ ಮರಣದ ಸೂಚನೆ ಇದ್ದ ಹಾಗೆ. ಆದರೆ ಇಬ್ಬರ ಕರ್ಯರೀತಿಗಳೂ ಭಿನ್ನ-ಭಿನ್ನವಾಗಿವೆ. ಧರ್ಮ-ಅಧರ್ಮಗಳ ಹೋರಾಟದಲ್ಲಿ ಧರ್ಮಕ್ಕೇ ಜಯ ಎಂಬುದು ಸತ್ಯ. ಇಬ್ಬರಿಂದ ಲೋಕಕ್ಕೊಂದು ಸಂದೇಶವಿದೆ. ಲೋಕಹಿತಕ್ಕಾಗಿ ಹೋರಾಡಿ ಗೆಲ್ಲುವವನು ಧನ್ಯ. ಸ್ವಾರ್ಥಕ್ಕಾಗಿ ಬದುಕು ನಡೆಸಿದವನ ಹೆಸರು ನಿಕೃಷ್ಟವೆನಿಸುತ್ತದೆ. ಬದುಕಿದ್ದಾಗಲೂ ಅತೃಪ್ತಿ, ಅಶಾಂತಿ ನೆಮ್ಮದಿಯಿಂದ ವಂಚಿತನಾಗುತ್ತಾನೆ. ರಾವಣ ತ್ರಿಲೋಕಾಧಿಪತಿಯಾಗಿ ಮೆರೆದ. ಬಂಧು-ಬಳಗದವರಿಂದ ದೂರವಾದ. ಪ್ರತಿಕ್ಷಣದಲ್ಲಿಯೂ ತನ್ನ ಸ್ಥಾನವನ್ನು ಉಳಿಸಿಕೊಳ್ಳುವ ಚಿಂತೆಯಲ್ಲಿಯೇ ಮುಳುಗಿಹೋಗಿದ್ದ. ತ್ರಿಲೋಕಾಧಿಪತ್ಯವನ್ನು ಅಮರನಾಗಿ ಅನುಭವಿಸಬೇಕೆಂಬ ವರವನ್ನು ಬಯಸಿ ಬ್ರಹ್ಮದೇವನನ್ನು ಕುರಿತು ತಪಸ್ಸು ಮಾಡಿ ಸಾಕ್ಷಾತ್ಕರಿಸಿಕೊಂಡ. ‘ಪ್ರಕೃತಿಯಲ್ಲಿ ಯಾವುದೂ ಸ್ಥಿರವಲ್ಲ. ಹುಟ್ಟಿದ್ದು ಸಾಯಲೇಬೇಕು. ಬೇರೆ ವರವನ್ನು ಬೇಡು’ ಎಂದು ಬ್ರಹ್ಮನಿಂದ ಬಂದ ಉತ್ತರಕ್ಕೆ ಪ್ರತಿಯಾಗಿ ರಾವಣನು –
“ಸುರಾಸುರರಿಂದಾಗಲಿ ನಾಗರಿಂದಾಗಲಿ, ಪಕ್ಷಿ, ಪಶುಗಳಿಂದಾಗಲಿ ಮರಣವಾಗಬಾರದು. ಈ ವರವನ್ನು ದಯಪಾಲಿಸು’ ಎಂದು ಕೇಳಿದ. ಬ್ರಹ್ಮದೇವ ‘ತಥಾಸ್ತು’ ಎನ್ನುತ್ತ ಅದೃಶ್ಯನಾದ. ರಾವಣನ ದೃಷ್ಟಿಯಲ್ಲಿ ನರ-ವಾನರರು ಅತ್ಯಂತ ನಿಕೃಷ್ಟರಾದ್ದರಿಂದ, ಅವರಿಂದ ಮರಣವಾಗಬಾರದೆಂದು ಕೇಳಲಿಲ್ಲ. ಇದು ದೈವಶಕ್ತಿಯ ರಹಸ್ಯವಲ್ಲವೆ?
ಈಗ ರಾವಣನ ಅಟ್ಟಹಾಸಕ್ಕೆ ಮೂರು ಲೋಕಗಳೂ ತಲ್ಲಣಿಸಿಹೋದವು. ರಾವಣನ ಅಹಂಕಾರವೆಷ್ಟಿತ್ತು ಎಂದರೆ, ಶಿವನನ್ನು ತಪಸ್ಸಿನ ಮೂಲಕ ಒಲಿಸಿಕೊಂಡು, ತನ್ನ ತಾಯಿಯು ಆರಾಧಿಸುತ್ತಿದ್ದ ಶಿವಲಿಂಗಕ್ಕೆ ಬದಲಾಗಿ ಶಿವನ ಆತ್ಮಲಿಂಗವನ್ನೇ ಪಡೆದು, ಕೊಡುವುದಕ್ಕಾಗಿ ಸಿದ್ಧನಾದ. ಆದರೇನಾಯಿತು! ದೇವರು ವರ ಕೊಟ್ಟರೂ ಪೂಜಾರಿ ಅದನ್ನು ಕೊಡಲಿಲ್ಲ ಎಂಬಂತೆ ಗಣಪತಿಯ ಚಾತರ್ಯದಿಂದ ಆತ್ಮಲಿಂಗವು ರಾವಣನ ಕೈ ಸೇರಲಿಲ್ಲ. ಅಧರ್ಮಕ್ಕೆ ಎಂದಿದ್ದರೂ ಸೋಲೇ ಅಲ್ಲವೆ? ದೇವಾಧಿದೇವತೆಗಳು, ಋಷಿಮುನಿಗಳು ರಾವಣನ ಉಪಟಳವನ್ನು ಸಹಿಸಲಾರದೆ, ಬ್ರಹ್ಮದೇವರ ನಾಯಕತ್ವದಲ್ಲಿ ಶ್ರೀಮನ್ನಾರಾಯಣನನ್ನು ಕಂಡು, ತಮ್ಮ ತೊಂದರೆಯನ್ನು ಹೇಳಿಕೊಂಡರು. ಲೋಕರಕ್ಷಕನಾದ ನಾರಾಯಣನು, ಅವರಿಗೆ ಸಾಂತ್ವನದ ಮಾತುಗಳನ್ನು ಹೇಳಿ, ‘ನಾನೇ ಅಧರ್ಮವನ್ನು ಖಂಡಿಸಿ ಧರ್ಮಸಂಸ್ಥಾಪನೆಗೆ ಧರೆಯಲ್ಲಿ ಅವತರಿಸುತ್ತೇನೆ’ ಎಂದು ಅಭಯವನ್ನು ಕೊಟ್ಟ ಬಳಿಕ, ಎಲ್ಲರೂ ಸ್ವಸ್ಥಾನಗಳಿಗೆ ತೆರಳಿದರು. ರಾಮನು ರಾವಣಸಂಹಾರಕ್ಕಾಗಿಯೇ ಅವತರಿಸಿದನು. ಈ ಕರ್ಯದಲ್ಲಿ ಸಹಕರಿಸಲು ದೇವತೆಗಳೂ ಸಹ ನಾನಾ ರೂಪದಲ್ಲಿ ಧರೆಗಿಳಿದರು.
ಮಾತು ಕೊಟ್ಟಂತೆ ಅಯೋಧ್ಯೆಯ ರಾಜ ದಶರಥನ ಮಗನಾಗಿ ರಾಮ ಜನಿಸಿದ. ರಾವಣಸಂಹಾರವೇ ಮುಖ್ಯ ಉದ್ದೇಶವಾಗಿತ್ತಲ್ಲವೆ? ಹಾಗೆಂದ ಮಾತ್ರಕ್ಕೆ ರಾಮ ಅವತರಿಸಿದ ಕೂಡಲೇ ರಾವಣನ ಸಂಹಾರ ಮಾಡಿದನೆ? ಯಾವ ಕಾರ್ಯವಾದರೂ ಅದಕ್ಕೆ ತಕ್ಕಂತೆ ಸಿದ್ಧತೆಗಳಾಗಬೇಕು. ಸಕಾರಣವೂ ಆಗಿರಬೇಕು. ಕಾಲವೂ ಕೂಡಿ ಬರಬೇಕು. ಲೋಕರೂಢಿಯಂತೆ ಸಮಯ, ಸನ್ನಿವೇಶಗಳು ಒದಗಿ ಬರಬೇಕು. ಎಲ್ಲಿಯೂ ನ್ಯಾಯ, ನೀತಿ, ಧರ್ಮ, ಸತ್ಯಗಳಿಗೆ ಧಕ್ಕೆ ಆಗದಂತೆ ಎಚ್ಚರದಿಂದ ಮುನ್ನಡೆಯಬೇಕು. ಒಂದು ನದಿಯು ಹರಿಯುವಾಗ ತನ್ನ ಇಕ್ಕೆಲಗಳಿಗೂ ಅನುಕೂಲ ಮಾಡುತ್ತ ಗುರಿ ಮುಟ್ಟುತ್ತದೆ. ಹಾಗೆಯೇ ಒಂದು ಉದ್ದೇಶಿತ ಕರ್ಯ ನಿರ್ವಹಿಸುವಾಗ ಇತರ ಅಧರ್ಮಗಳನ್ನೂ ನಿವಾರಿಸಿ ಧರ್ಮಮಾರ್ಗದಲ್ಲಿ ಸಾಗಬೇಕು. ಇಲ್ಲಿ ರಾಮನು ದೈತ್ಯಚಕ್ರವರ್ತಿಯ ಸಂಹಾರಕರ್ಯದ ಜೊತೆಗೆ ಲೋಕಕಲ್ಯಾಣದ ಕಡೆಗೂ ಗಮನಕೊಡಬೇಕಾಗಿತ್ತು. ಇಷ್ಟೆಲ್ಲ ಕ್ರಮಬದ್ಧವಾಗಿ ನಡೆಯಬೇಕಾದರೆ ಹತ್ತಾರು ಜನರ ಸಹಕಾರ, ಒತ್ತಾಸೆ, ಮಾರ್ಗದರ್ಶನವೂ ಬೇಕಾಗುತ್ತದೆ. ಹೀಗಾಗಿ ರಾಮನ ರಾವಣಸಂಹಾರ ಕಾರ್ಯದಲ್ಲಿ ಪ್ರಾರಂಭದಿಂದ ಅಂತ್ಯದವರೆಗೆ ಅನೇಕರ ತಪಸ್ಸು, ಶಕ್ತಿ, ಪ್ರಾರ್ಥನೆಗಳು ಜೊತೆಗೂಡಿವೆ. ಕೆಲವು ವಿರೋಧಾಭಾಸದಂತೆ ಕಾಣುವ ಕೈಗಳಿಂದಲೂ ಸಹಕಾರ ದೊರೆತಿದೆ. ವಿಶೇಷವಾಗಿ ನಾರಿಯರ ಪಾತ್ರಗಳು ಮನನಾರ್ಹವಾಗಿವೆ. ರಾವಣ ಸಂಹಾರಕ್ಕೆ ಸೀತೆಯೇ ಕಾರಣ ಎನ್ನುವುದು ಮೇಲುನೋಟಕ್ಕೇ ಕಂಡುಬರುತ್ತದೆ. ಯಾವರೀತಿಯಲ್ಲಿ ಈ ಘಟ್ಟಕ್ಕೆ ತಲಪಿದೆ ಎನ್ನುವುದು ಚಿಂತಿಸಬೇಕಾದ ವಿಷಯವಾಗಿದೆ. ನಾಯಕನ ಕಾರ್ಯದ ಫಲಿತಾಂಶಕ್ಕೆ, ಕರ್ಯಸಾಧನೆಗೆ ಬೆಂಬಲಿಸಿದ ನಾರಿಯರ ಕತೆ ತಿಳಿಯಬೇಕು. ಕೌಸಲ್ಯೆ, ಸೀತೆ, ಕೈಕೇಯಿ, ಮಂಥರೆ, ಶೂರ್ಪನಖಿ, ಶಬರಿ ಮುಂತಾದವರ ಜೊತೆಗೆ ಅಪ್ರತ್ಯಕ್ಷವಾಗಿ ಸಹಕರಿಸಿದವರೂ ಇದ್ದಾರೆ. ಅವರೆಲ್ಲರ ಕೊಡುಗೆಗಳನ್ನು ಸ್ಮರಿಸೋಣ.
ಆಕಾಶವಾಣಿ: ತನಗೆ ಯಾರೂ ಎದುರಿಲ್ಲೆಂಬ ಮದದಿಂದ ರಾವಣ ಸ್ವೇಚ್ಛೆಯಾಗಿ ತ್ರಿಲೋಕಗಳಲ್ಲಿಯೂ ಸಂಚರಿಸುತ್ತಿದ್ದ. ಒಂದು ದಿನ ಸಂಚಾರದಲ್ಲಿದ್ದಾಗ ಅಶರೀರವಾಣಿಯೊಂದು ಕಿವಿಗೆ ಅಪ್ಪಳಿಸಿತು. ‘ಕೋಸಲದೇಶದ ರಾಜಕುಮಾರಿಯ ಮಗನಿಂದ ನಿನಗೆ ಮರಣ ಸಂಭವಿಸುತ್ತದೆ!’ ಧೀರ ರಾವಣನ ಎದೆ ಝಲ್ಲೆಂದಿತು. ಕೂಡಲೇ ತನ್ನ ಶರ್ಯದ ದರ್ಪ ಪುಟಿದೆದ್ದಿತು. ‘ಕೇವಲ ಒಬ್ಬ ಮಾನವನಿಂದ ನನ್ನ ಮರಣ. ಛೇ, ಇದು ಅಸಂಗತ’ ಎಂದು ಮನಸ್ಸಿನಲ್ಲಿಯೇ ಧರ್ಯ ತಂದುಕೊAಡ. ಆದರೂ ಮುಂಜಾಗ್ರತೆಗಾಗಿ ಕೋಸಲ ದೇಶವನ್ನೇ ನಾಶ ಮಾಡುತ್ತೇನೆ ಎಂದು ಸಿದ್ಧನಾದಾಗ, ಅವನ ಆಸ್ಥಾನದವರು ತಡೆದರು. ‘ಇದು ನಿನ್ನ ಪರಾಕ್ರಮಕ್ಕೆ ತಕ್ಕುದಲ್ಲ. ಅಲ್ಲದೆ ರಾಜನಿಗೆ ಸಂತಾನವಾಗಿ, ಅವಳ ವಿವಾಹವಾಗಿ, ಅವಳಿಗೆ ಗಂಡು ಸಂತಾನವಾದಾಗಲ್ಲವೇ ಅಶರೀರವಾಣಿಯ ಮಾತಿಗೆ ಬೆಲೆ’ ಎಂದು ರಾವಣನ ಕಾರ್ಯವನ್ನು ನಿಲ್ಲಿಸಿದರು. ಇದೂ ಒಂದು ರೀತಿಯ ದೈವಕರ್ಯಕ್ಕೆ ಸಹಾಯವಾಯಿತಲ್ಲವೆ? ರಾವಣನಿಗೂ ಇದು ಸರಿಯೆನಿಸಿ ಸುಮ್ಮನಾದ.
ಕಾಲಚಕ್ರ ಉರುಳಿತು. ಸುದ್ದಿಯೊಂದು ಕೇಳಿಬಂತು: ‘ಕೋಸಲಾಧೀಶನ ಮಗಳು ಕೌಸಲ್ಯೆಯ ಸ್ವಯಂವರ.’ ರಾವಣನ ಬುದ್ಧಿ ಚುರುಕಾಯಿತು. ದರ್ಪ, ಭುಜಬಲಕ್ಕಿಂತ ಯುಕ್ತಿಯಿಂದ ಈ ಸ್ವಯಂವರವನ್ನು ತಡೆಗಟ್ಟಲೇಬೇಕೆಂದು ನಿಶ್ಚಯಿಸಿ, ಸೋದರನಾದ ಕುಬೇರನನ್ನು ಕರೆಸಿದ. ‘ಹೇಗಾದರೂ ಮಾಡಿ ಈ ಸ್ವಯಂವರವನ್ನು ತಡೆಗಟ್ಟಬೇಕು’ ಎಂದು ಆಜ್ಞಾಪಿಸಿದ. ರಾವಣ ದೈತ್ಯ ಚಕ್ರವರ್ತಿಯಲ್ಲವೇ? ಸತ್ಯಸಂಗತಿಯನ್ನು ಮುಚ್ಚಿಟ್ಟ. ಕುಬೇರನು ವರುಣದೇವನನ್ನು ಕರೆದು, ಈ ಕರ್ಯವನ್ನು ಅವನ ಹೆಗಲಿಗೆ ಹೊರಿಸಿಬಿಟ್ಟ. ಕೋಸಲ ರಾಜ್ಯದಲ್ಲಿ ಸ್ವಯಂವರದ ಸಡಗರ. ಕನ್ಯೆ ಸಾಲಂಕೃತಳಾಗಿ ವಿವಾಹಮಂಟಪಕ್ಕೆ ಆಗಮಿಸುತ್ತಿದ್ದಾಳೆ. ಉಪಾಯಾಂತರದಿಂದ ವರುಣ ಅವಳನ್ನು ಅಪಹರಿಸಿ, ಒಂದು ಪೆಟ್ಟಿಗೆಯಲ್ಲಿ ಮುಚ್ಚಿಟ್ಟು, ತುಂಬಿ ಹರಿಯುವ ನದಿಯೊಳಕ್ಕೆ ಹಾಕಿದ! ನೀರಿನ ಜೊತೆಯಲ್ಲಿ ಹರಿಯುತ್ತ ಸಾಗರವನ್ನು ಸೇರಿಬಿಡುತ್ತದೆ ಎಂಬುದು ಅವನ ಲೆಕ್ಕಾಚಾರವಾಗಿತ್ತು.
ದೈವಸಂಕಲ್ಪಕ್ಕೆ ಎದುರಾರು! ಅಯೋಧ್ಯೆಯ ರಾಜ ದಶರಥ ತಕ್ಕ ಪರಿವಾರದೊಡನೆ ಮೃಗಯಾವಿಹಾರಕ್ಕಾಗಿ ಹೊರಟು, ಬೇಟೆಯಾಡುತ್ತ ಶಿಕಾರಿಯ ಹಿಂದೆ-ಹಿಂದೆ ನಡೆದ. ಬಲುದೂರ ಬಂದಿದ್ದಾನೆ. ಈಗ ಏಕಾಂಗಿಯಾಗಿದ್ದಾನೆ. ಸುತ್ತಲೂ ಕಾಡು. ಅಲ್ಲೊಂದು ನದಿ ಹರಿಯುತ್ತಿದೆ. ಸಂಜೆ ಆಯಿತು. ಇದ್ದಕ್ಕಿದ್ದಂತೆ ಮೋಡ ಮುಸುಕಿತು. ಬಿರುಗಾಳಿ ಎದ್ದಿತು. ಮಳೆ ಸುರಿಯಲಾರಂಭಿಸಿತು. ದಶರಥನಿಗೆ ತೋಚದಂತಾಗಿ, ನದಿಯ ಮಧ್ಯೆ ಇದ್ದ ಎತ್ತರದ ಬಂಡೆಯನ್ನು ಆಶ್ರಯಿಸಿ, ಮೇಲೆ ಕುಳಿತುಕೊಂಡ. ಮೈಮರೆತ! ಕಾಲ ಕಳೆಯಿತು. ಪರಿವೆಯೇ ಇಲ್ಲ. ಮಳೆಯ ಹೊಡೆತಕ್ಕೆ ನದಿಯಲ್ಲಿ ಪ್ರವಾಹ ಹೆಚ್ಚಾಗಿದೆ. ಕ್ರಮೇಣ ಪ್ರಕೃತಿಯು ಸಹಜ ಸ್ಥಿತಿಗೆ ತಲಪಿದಾಗ ದಶರಥನಿಗೆ ಎಚ್ಚರವಾಯಿತು. ಪ್ರವಾಹವೂ ಇಳಿದಿತ್ತು. ಬಂಡೆಯ ಮೇಲೆ ನಿಂತುಕೊಂಡು ಸುತ್ತಲೂ ಕಣ್ಣು ಹಾಯಿಸಿದಾಗ, ತಾನು ಕುಳಿತಿದ್ದ ಬಂಡೆಯ ಸಂದಿಗೆ ಯಾವುದೋ ಪದಾರ್ಥ ಸಿಕ್ಕಿಹಾಕಿಕೊಂಡಿರುವುದನ್ನು ಗಮನಿಸಿದ. ಶ್ರಮಪಟ್ಟು ಮೇಲಕ್ಕೆ ಎತ್ತಿದ. ಮುಚ್ಚಿದ್ದ ಬಾಗಿಲಿನ ಪೆಟ್ಟಿಗೆ ಅದಾಗಿತ್ತು. ಬಾಗಿಲನ್ನು ತೆರೆದ. ಕಂಡದ್ದೇನು? ಸಾಲಂಕೃತ ವಧು! ಇಬ್ಬರ ದೃಷ್ಟಿಯೂ ಪರಸ್ಪರ ಮಿಲನವಾದ ಶುಭಮುಹೂರ್ತ. ಬ್ರಹ್ಮದೇವ ತನ್ನ ಆಸ್ಥಾನದಲ್ಲಿದ್ದ. ಇದ್ದಕ್ಕಿದ್ದಂತೆ ‘ತಥಾಸ್ತು’ ಎಂದಾಗ ನೆರೆದಿದ್ದ ಸಭೆಯವರಿಗೆ ಆಶ್ಚರ್ಯವಾಗಿ, ಕಾರಣವನ್ನು ಕೇಳಿದರು. ‘ದಶರಥ-ಕೌಸಲ್ಯೆಯರ ವಿವಾಹವಾಯಿತು. ಆಶೀರ್ವದಿಸಿದ್ದೇನೆ’ ಎಂದು ವಿವರವನ್ನೆಲ್ಲ ತಿಳಿಸಿದಾಗ ದೇವತೆಗಳಿಗೆ ಅತ್ಯಂತ ಸಂತೋಷವಾಯಿತು. ರಾವಣನ ಸಂಹಾರಕ್ಕೆ ಇದು ನಾಂದಿ. ಈ ವೇಳೆಗೆ ದಶರಥನ ಪರಿವಾರದವರೂ ತಮ್ಮ ಅರಸನನ್ನು ಹುಡುಕುತ್ತ ಅಲ್ಲಿಗೆ ಬಂದರು. ನವ ವಧು-ವರರನ್ನು ಕಂಡು ಸಂಭ್ರಮಿಸಿ, ಅಯೋಧ್ಯೆಗೆ ಹಿಂತೆರಳಿದರು. ವೈಭೋಗದಿಂದ ವಿವಾಹ ನೆರವೇರಿತು.
‘ಆಕಾಶವಾಣಿ’ಗೆ ಪೂರಕವೆಂಬಂತೆ ಘಟನೆ ನಡೆದಿದೆ. ‘ವಾಣಿ’ ಅಂದರೆ ಮಾತು. ಮಾತಿಗೆ ಅಧಿದೇವತೆ ವಾಗ್ದೇವಿ – ಸಾಕ್ಷಾತ್ ಸರಸ್ವತಿ! ಅವಳ ಮೂಲಕವೇ ರಾವಣನ ಮರಣದ ಸುದ್ದಿ ತಲಪಿದಂತಾಯಿತು. ವಾಕ್ಶಕ್ತಿಯೇ ಬುನಾದಿ ಆದಂತಾಯಿತು.
ಕೌಸಲ್ಯೆ ಅಯೋಧ್ಯೆಯ ರಾಜ ದಶರಥನ ಪಟ್ಟದ ರಾಣಿ. ಕೈಕೇಯಿ ಹಾಗೂ ಸುಮಿತ್ರೆಯರೂ ದಶರಥನ ಪತ್ನಿಯರು. ಪುತ್ರಕಾಮೇಷ್ಟಿಯಲ್ಲಿ ಅಗ್ನಿದೇವನ ಕೃಪೆಯಿಂದ ಲಭ್ಯವಾದ ಪ್ರಸಾದವನ್ನು ದಶರಥನು ಮೂವರು ಪತ್ನಿಯರಿಗೂ ಹಂಚಿದ. ಕ್ರಮೇಣ ಗರ್ಭವತಿಯರಾದರು. ಸಕಾಲದಲ್ಲಿ ಕೌಸಲ್ಯೆಗೆ ಜನಿಸಿದ ಮಗುವಿಗೆ ರಾಮನೆಂದೂ, ಕೈಕೇಯಿಯ ಮಗನಿಗೆ ಭರತನೆಂದೂ, ಸುಮಿತ್ರೆಗೆ ಜನಿಸಿದ ಅವಳಿಮಕ್ಕಳಿಗೆ ಲಕ್ಷ್ಮಣ-ಶತ್ರುಘ್ನರೆಂದೂ ನಾಮಕರಣವಾಯಿತು. ಅಶರೀರವಾಣಿಯ ಫಲವನ್ನು ಕಾಣುತ್ತೇವೆ ಇಲ್ಲಿ. ರಾಮನೇ ರಾವಣಸಂಹಾರಕ್ಕೆ ಜನಿಸಿದ. ಶ್ರೀಮನ್ನಾರಾಯಣನ ಅವತಾರ. ಲೋಕಹಿತಕ್ಕಾಗಿ ಮಗನನ್ನು ಕೊಟ್ಟವಳು ಕೌಸಲ್ಯೆ! ಮಾತೃಶಕ್ತಿಯ ಬೆಂಬಲ ರಾಮನಿಗೆ ರಾವಣಸಂಹಾರಕ್ಕೆ ಕೊಡುಗೆ ಆಯಿತು. ಮುಂದೆ ರಾಮನು ಪಿತೃವಾಕ್ಯ ಪರಿಪಾಲನೆಗಾಗಿ ವನವಾಸಕ್ಕೆ ಹೊರಟಾಗಲೂ, ಆಶೀರ್ವದಿಸಿ ಕಳುಹಿಸುತ್ತಾಳೆ. ಪುತ್ರವಿರಹದ ನೋವನ್ನು ನುಂಗಿ ಸತ್ಯಕ್ಕಾಗಿ ಬೆಂಬಲ ನೀಡುತ್ತಾಳೆ. ತಾಯಿಯ ಹರಕೆಗೆ ಬೆಲೆಯುಂಟೆ? ಧರ್ಮಸಂಸ್ಥಾಪನೆಯ ಕರ್ಯದಲ್ಲಿ ರಾಮನಿಗೆ ಪ್ರೋತ್ಸಾಹಿಸಿದ ಕೌಸಲ್ಯೆ ಮಾನ್ಯೆ!
ವ್ಯಕ್ತಿಯ ಸಾಮರ್ಥ್ಯವನ್ನು ಅರಿಯಬೇಕಾದರೆ ತಕ್ಕ ಪರೀಕ್ಷೆ ನಡೆದು ಜಯಶೀಲನಾಗಬೇಕಲ್ಲವೆ? ದೇವತೆಗಳ ಪ್ರಾರ್ಥನೆಯಂತೆ ರಾಮನೇನೊ ಧರೆಯಲ್ಲಿ ಅವತರಿಸಿದನು. ದುಷ್ಟಶಿಕ್ಷಣ, ಶಿಷ್ಟರಕ್ಷಣೆ ಅವನಿಂದ ಸಾಧ್ಯವೇ ಎಂದು ಸಂದೇಹಿಸಿದವರಿಗೆ, ತನ್ನ ಸಾಮರ್ಥ್ಯವನ್ನು ತೋರಿಸುವ ಅವಕಾಶವೊಂದು ಒದಗಿತು. ಅಯೋಧ್ಯೆಯಲ್ಲಿ ರಾಜಕುಮಾರರು ಬೆಳೆಯುತ್ತಿದ್ದಾರೆ. ವಯಸ್ಸಿಗೆ ತಕ್ಕಂತೆ ಶಿಕ್ಷಣವನ್ನು ಪಡೆಯುತ್ತಿದ್ದಾರೆ. ಕ್ಷತ್ರಿಯಧರ್ಮಕ್ಕೆ ತಕ್ಕ ಹಾಗೆ ಧನುರ್ವಿದ್ಯೆಯನ್ನೂ ಕಲಿಯುತ್ತಿದ್ದಾರೆ. ಒಂದು ದಿನ ವಿಶ್ವಾಮಿತ್ರರು ಅಯೋಧ್ಯೆಗೆ ದಯಮಾಡಿಸಿ, ದಶರಥನನ್ನು ಭೇಟಿ ಮಾಡಿದರು. ಅವರು ಒಂದು ಯಾಗವನ್ನು ಮಾಡಲು ನಿಶ್ಚಯಿಸಿದ್ದರು. ವಿಶ್ವಕಲ್ಯಾಣಕ್ಕಾಗಿ ಮಾಡುವ ಆ ಯಾಗ ನಿರ್ವಿಘ್ನವಾಗಿ ನಡೆಯಬೇಕಾಗಿದೆ. ದುಷ್ಟ ದೈತ್ಯರು – ವಿಶೇಷವಾಗಿ ತಾಟಕಿ ಮತ್ತು ಅವಳ ಮಕ್ಕಳು – ಇದಕ್ಕೆ ಭಂಗವುಂಟು ಮಾಡುತ್ತಿದ್ದರು. ಅವರಿಂದ ಆಗುತ್ತಿದ್ದ ತೊಂದರೆ ಅಷ್ಟಿಷ್ಟಲ್ಲ. ಅದಕ್ಕಾಗಿ ರಾಮನನ್ನು ತಮ್ಮೊಡನೆ ಕಳಿಸಬೇಕೆಂದು ಕೇಳಿದರು. ದಶರಥನಿಗೆ ಪುತ್ರವ್ಯಾಮೋಹ! ಆದರೆ ಗುರು ವಸಿಷ್ಠರ ಭರವಸೆಯ ಮೇರೆಗೆ ರಾಮನನ್ನು ಕಳುಹಿಸಲು ಒಪ್ಪಿದರು. ಲಕ್ಷö್ಮಣನು ರಾಮನ ನೆರಳಿನಂತೆ ಸದಾ ಜೊತೆಯಲ್ಲಿರುತ್ತಿದ್ದುದರಿಂದ ಅವನೂ ಹೊರಟನು. ಇಬ್ಬರು ಬಾಲಕರೊಡನೆ ವಿಶ್ವಾಮಿತ್ರರು ಅಯೋಧ್ಯೆಯಿಂದ ಹೊರಟರು. ಪಯಣದುದ್ದಕ್ಕೂ ನಾನಾ ರೀತಿಯ ನೀತಿಕತೆಗಳನ್ನು ಹೇಳುತ್ತ, ಅನೇಕ ವಿಧವಾದ ದಿವ್ಯಾಸ್ತçಗಳನ್ನು ಮಂತ್ರಪೂರ್ವಕವಾಗಿ ಉಪದೇಶಿಸಿದರು.
ವಿಶ್ವಾಮಿತ್ರರು ಯಾಗವನ್ನು ಆರಂಭಿಸಿದರು. ರಾಮ, ಲಕ್ಷ್ಮಣರು ಕಾವಲು ಕಾಯುತ್ತಿದ್ದಾರೆ. ಇದ್ದಕ್ಕಿದ್ದಂತೆ ಧೂಳು ಎದ್ದು ದಿಕ್ಕು ಕಾಣದಂತಾಯಿತು. ವಿಶ್ವಾಮಿತ್ರರು ಮುಂಚೆಯೇ ಈ ಆತಂಕದ ವಿಷಯ ತಿಳಿಸಿದ್ದರು. ರಾಮ, ಲಕ್ಷö್ಮಣರು ಮೈಯೆಲ್ಲಾ ಕಣ್ಣಾಗಿ ನೋಡುತ್ತಿದ್ದಾರೆ. ರಾಮನ ಬಾಣಕ್ಕೆ ಮಾರೀಚ ಸಿಲುಕಿದ, ಆದರೆ ಅದರ ಹೊಡೆತದಿಂದ ಎಷ್ಟೋ ಯೋಜನೆಗಳ ದೂರ ಹಾರಿಹೋಗಿ ಬಿದ್ದ! ಇನ್ನೊಬ್ಬ ಮಗ ಸುಬಾಹುವನ್ನು ಕೊಂದು, ಮಾಯಾವಿಯಾದ ತಾಟಕಿಯನ್ನೂ ತನ್ನ ಬಾಣದಿಂದ ಹೊಡೆದುರುಳಿಸಿದ, ರಾಮ. ತಾಟಕಿ ಲಂಕೇಶನ ಬಂಧು. ದೈತ್ಯಕುಲದ ನಾಶಕ್ಕೆ ತಾಟಕಿಯೇ ಪ್ರಥಮ ಬಲಿ ಆದವಳು.
ದೇವತೆಗಳಿಗೆಲ್ಲ ಬಹಳ ಸಂತೋಷವಾಯಿತು. ವಿಶ್ವಾಮಿತ್ರರ ಯಾಗವೂ ನಿರ್ವಿಘ್ನವಾಗಿ ನೆರವೇರಿತು. ದುಷ್ಟಶಿಕ್ಷಣವನ್ನು ರಾಮ ಮಾಡಬಲ್ಲನೆಂಬ ಭರವಸೆಯುಂಟಾಯಿತು. ರಾಮ ಪ್ರಥಮ ಪರೀಕ್ಷೆಯಲ್ಲಿ ಜಯಶೀಲನಾಗಿದ್ದ! ದೈತ್ಯಕುಲದ ದುಷ್ಟಶಕ್ತಿಯ ಬೇರಾದ ತಾಟಕಿಯ ವಧೆಯಿಂದ ರಾಮ ಬಾಣದ ರುಚಿ ದೈತ್ಯರಿಗೆ ಒಂದು ಸವಾಲಾಯಿತು. ಪ್ರಥಮ ಪರೀಕ್ಷೆಯ ವಿಜಯ: ತಾಟಕಿಯ ಸಂಹಾರ!
ದುಷ್ಟಶಿಕ್ಷಣದಲ್ಲಿ ಜಯ ಲಭಿಸಿತು. ಶಿಷ್ಟರಕ್ಷಣೆಯ ಪರೀಕ್ಷೆ ಹೇಗಾಯಿತು? ವಿಶ್ವಾಮಿತ್ರರು ಯಾಗವನ್ನು ಯಶಸ್ವಿಯಾಗಿ ಪೂರೈಸುತ್ತಿದ್ದಂತೆಯೇ ಮಿಥಿಲಾನಗರದಿಂದ ಆಹ್ವಾನಪತ್ರಿಕೆಯು ಬಂದಿತು. ಜನಕರಾಜನ ಮಗಳು ಸೀತೆಯ ಸ್ವಯಂವರದ ಆಹ್ವಾನವದು. ಋಷಿ, ಮುನಿಗಳೆಲ್ಲ ಹೊರಟರು. ರಾಮ, ಲಕ್ಷö್ಮಣರನ್ನೂ ಜೊತೆಯಲ್ಲಿ ಕರೆದುಕೊಂಡೇ ಹೊರಟರು. ರಾಮ, ಲಕ್ಷö್ಮಣರ ಮೇಲೆ ಅಭಿಮಾನ. ತಮ್ಮ ಯಾಗವನ್ನು ರಕ್ಷಿಸಿದವರೆಂಬ ಪ್ರೀತಿ. ನಡೆದು ಬರುತ್ತಿದ್ದಾಗ ಒಂದು ಪಾಳುಬಿದ್ದ ಆಶ್ರಮದ ಜಾಗ, ಬಯಲುಪ್ರದೇಶ, ಅಲ್ಲೊಂದು ಶಿಲೆಯ ಮೇಲೆ ರಾಮ ಹೆಜ್ಜೆ ಇಟ್ಟ. ಕೂಡಲೇ ಅಲ್ಲಿಂದ ಸ್ತ್ರೀ ಮೂರ್ತಿಯೊಂದು ಮೇಲೆದ್ದಿತು. ತನ್ನನ್ನು ಮೆಟ್ಟಿ ನಿಂತಿದ್ದ ರಾಮನಿಗೆ ನಮಸ್ಕರಿಸಿತು. ರಾಮ, ಲಕ್ಷ್ಮಣರಿಗೆ ಕುತೂಹಲವುಂಟಾಗಿ ವಿಶ್ವಾಮಿತ್ರರ ಕಡೆ ನೋಡಿದರು. ಆಗ ವಿಶ್ವಾಮಿತ್ರರು ‘ರಾಮ, ಈಕೆ ಗೌತಮ ಋಷಿಗಳ ಪತ್ನಿ ಅಹಲ್ಯೆ. ಮಹಾಸಾಧ್ವಿ! ಆದರೆ ಇಂದ್ರನ ಕುಟಿಲತನಕ್ಕೆ ಒಳಗಾಗಿ ಮೋಸಹೋದಳು. ಇವಳ ಪಾತಿವ್ರತ್ಯಕ್ಕೆ ಭಂಗ ಉಂಟಾಯಿತು. ಗೌತಮರು ತಮ್ಮ ಕುಟೀರದಲ್ಲಿ ಇಲ್ಲದಿದ್ದಾಗ ನಡೆದ ವಂಚನೆ ಇದು. ಆದರೆ ಗೌತಮರು ದಿವ್ಯದೃಷ್ಟಿಯಿಂದ ನಡೆದದ್ದನ್ನು ತಿಳಿದು, ಇಂದ್ರನಿಗೆ ಮೈಯೆಲ್ಲ ವಿಕಾರವಾಗುವಂತೆ ಶಪಿಸಿದರು. ಜೊತೆಗೆ ಪತ್ನಿ ಅಹಲ್ಯೆಗೂ ‘ನೀನು ಕಲ್ಲಾಗು’ ಎಂದುಬಿಟ್ಟರು. ಅರಿಯದೆ ಆದ ತಪ್ಪಿಗೆ ಶಿಕ್ಷೆ ಅನುಭವಿಸುತ್ತ ಇದ್ದ ಅಹಲ್ಯೆಗೆ, ‘ರಾಮನಿಂದ ನಿನಗೆ ವಿಮೋಚನೆ’ ಎಂದೂ ತಿಳಿಸಿ ತಪಸ್ಸಿಗೆ ಹೊರಟುಹೋದರು. ಈಗ ನಿನ್ನ ಚರಣ ಸ್ಪರ್ಶದಿಂದ ಈಕೆಯ ಶಾಪ ಕಳೆಯಿತು’ ಎಂದು ಹೇಳಿದರು. ಆ ವೇಳೆಗೆ ಗೌತಮರೂ ದಯಮಾಡಿದರು. ಶಾಪಮುಕ್ತಳಾದ ಪತ್ನಿಯನ್ನು ಸ್ವೀಕರಿಸಿ, ರಾಮನನ್ನು ಹರಸಿದರು. ತಾಟಕಿಯ ವಧೆಯಿಂದ ದುಷ್ಟಶಿಕ್ಷಣ, ಅಹಲ್ಯೆಯನ್ನು ಶಾಪಮುಕ್ತಳನ್ನಾಗಿ ಮಾಡಿ, ಶಿಷ್ಟರಕ್ಷಣೆಯ ಪರೀಕ್ಷೆಯಲ್ಲಿ ರಾಮನ ಸಾಮರ್ಥ್ಯ ಲೋಕಕ್ಕೆ ತಿಳಿಯಿತು. ಇವರಿಬ್ಬರೂ ಸ್ತ್ರೀಯರು ಎನ್ನುವುದು ವಿಶೇಷ. ರಾವಣ ಸಂಹಾರಕ್ಕೆ ರಾಮನ ಅವತಾರವಾಗಿದೆ, ಅದು ಸಫಲವಾಗುತ್ತದೆ ಎಂದು ಸಾಬೀತು ಮಾಡಿದವರು ತಾಟಕಿ ಮತ್ತು ಅಹಲ್ಯೆ. ಪತಿತ ಪಾವನ ರಾಮ!
ಸೀತೆ: ರಾಮಾವತಾರದ ಕೇಂದ್ರಬಿಂದು. ರಾವಣಸಂಹಾರಕ್ಕೆ ಕಾರಣಳಾದವಳು. ಮಿಥಿಲೆಯ ರಾಜ ಜನಕ ಮಹಾರಾಜನು ಯಾಗಕ್ಕಾಗಿ ಭೂಮಿಯನ್ನು ನೇಗಿಲಿನಿಂದ ಹದಗೊಳಿಸುವಾಗ, ಸಿಕ್ಕ ಪೆಟ್ಟಿಗೆಯಲ್ಲಿ ಹೆಣ್ಣುಮಗುವೊಂದನ್ನು ಕಂಡು ಅತ್ಯಂತ ಸಂತೋಷವಾಯಿತು. ಅಲ್ಲಿಯವರೆಗೆ ಅವನಿಗೆ ಸಂತಾನವಾಗಿರಲಿಲ್ಲ. ‘ಸೀತೆ’ ಎಂದು ನಾಮಕರಣ ಮಾಡಿ, ಪಾಲಿಸಿ ಪೋಷಿಸಿದ. ವಿವಾಹ ವಯಸ್ಕಳಾದಾಗ ಸ್ವಯಂವರವನ್ನು ಏರ್ಪಡಿಸಿ, ಒಂದು ಸ್ಪರ್ಧೆಯನ್ನೂ ಇಟ್ಟ. ಪೂರ್ವಜರಿಂದ ಆರಾಧಿಸಲ್ಪಟ್ಟ ಶಿವಧನುಸ್ಸು ಜನಕನ ಬಳಿ ಇದ್ದಿತು. ಅದನ್ನು ಭಂಗಿಸಿದವರಿಗೆ ಸೀತೆ ಜಯಮಾಲೆ ಹಾಕುತ್ತಾಳೆ ಎಂದು ಸಾರಿದ. ನಾನಾ ದೇಶದ ರಾಜಕುಮಾರರು ಆಗಮಿಸಿದರು. ತ್ರಿಲೋಕಾಧಿಪತಿಯಾದ ರಾವಣನೂ ಸುದ್ದಿ ಕೇಳಿ, ಸ್ವಯಂವರಕ್ಕೆ ಹೊರಟ. ವಿಶ್ವದ ಅತ್ಯುತ್ತಮ ವಸ್ತುಗಳಿಗೆಲ್ಲ್ಲ ತಾನೇ ಹಕ್ಕುದಾರ ಎಂಬ ಗರ್ವವಿತ್ತು. ತಾನೇ ಜಯಶಾಲಿಯಾಗುತ್ತೇನೆ ಎಂಬ ಅಹಂಕಾರದೊAದಿಗೆ, ತನ್ನ ವೈಭವವನ್ನು ಮೆರೆಸುತ್ತ ಮಿಥಿಲಾನಗರಿಗೆ ಬಂದ. ಸ್ವಯಂವರಮಂಟಪಕ್ಕೂ ಬಂದ. ಶಿವಧನುಸ್ಸಿದ್ದೆಡೆಗೆ ಠೀವಿಯಿಂದ ಹೆಜ್ಜೆಹಾಕುತ್ತ ಬಂದು, ಧನುಸ್ಸನ್ನು ಎತ್ತಲು ಪ್ರಯತ್ನಿಸಿದ. ಒಂದು ಅಂಗುಲದಷ್ಟು ದೂರ ಸರಿಸಲೂ ಆಗದೆ ಮುಗ್ಗರಿಸಿಬಿದ್ದ! ರಾವಣನ ಗರ್ವಭಂಗವಾಯಿತು. ರಾಣಿವಾಸದವರ ಅಪಹಾಸ್ಯಕ್ಕೆ ಗುರಿಯಾಗಿ ಹೊರಟುಬಿಟ್ಟ. ಆದರೆ ಮತ್ಸರದ ಕಿಡಿ ಒಳಗೆ ಸೇರಿತು. ‘ಹೇಗಾದರೂ ಮಾಡಿ ಸೀತೆಯನ್ನು ಪಡೆದೇ ಪಡೆಯುತ್ತೇನೆ’ ಎಂದು ಶಪಥ ಮಾಡಿದ. ತನ್ನ ನಾಶಕ್ಕೆ ತಾನೇ ತೋಡಿಕೊಂಡ ಹಳ್ಳ ಅದಾಗುವುದೆಂದು ತಿಳಿಯಲಿಲ್ಲ. ದುಷ್ಟ ರಾವಣಸಂಹಾರಕ್ಕೆ ಸೀತೆಯೇ ಕಾರಣಳಾಗುತ್ತಾಳೆಂದು ವಿಧಿ ಬರೆದಿದ್ದನ್ನು ತಪ್ಪಿಸಲು ಯಾರಿಂದ ಸಾಧ್ಯ?
ವಿಶ್ವಾಮಿತ್ರರ ಆದೇಶದಂತೆ ರಾಮನು ಶಿವಧನುರ್ಭಂಗಕ್ಕಾಗಿ ಎದ್ದು, ಧನುಸ್ಸಿದ್ದೆಡೆಗೆ ಹೊರಟುಬಂದ. ದೇವತೆಗಳನ್ನೂ, ಗುರುಹಿರಿಯರನ್ನೂ ಸ್ಮರಿಸಿ, ವಂದಿಸುತ್ತ ಧನುಸ್ಸನ್ನು ಲೀಲಾಜಾಲವಾಗಿ ಎತ್ತಿದಾಗ ಅದು ಮುರಿದುಬಿತ್ತು! ಸೀತೆ ರಾಮನಿಗೆ ಜಯಮಾಲೆ ಹಾಕಿದಳು. ದೇವತೆಗಳು ಪುಷ್ಪವೃಷ್ಟಿ ಕರೆದರು. ಲೋಕಕಲ್ಯಾಣಕ್ಕಾಗಿ ಸೀತೆ ರಾಮನ ಶಕ್ತಿಯಾಗಿ, ಸಹಧರ್ಮಿಣಿಯಾದಳು. ‘ಸೀತಾರಾಮರಿಗೆ ಜಯವಾಗಲಿ’ ಎಂಬ ಘೋಷಣೆ ಗಗನವನ್ನು ಮುಟ್ಟಿತು.
ಸೀತೆ ರಾಮನ ಕಾರ್ಯಕ್ಕಾಗಿಯೇ ಧರೆಗೆ ಬಂದವಳು. ತಾನು ಹಣತೆಯಲ್ಲಿನ ಬತ್ತಿಯಂತೆ ಉರಿದು, ಜಗತ್ತಿಗೆ ಬೆಳಕು ನೀಡಿದಳು. ವಿವಾಹವಾಗಿ ರಾಮನೊಡನೆ ಬಂದವಳು, ಅವನ ಸಹವಾಸದಿಂದ ದೂರವಾಗಲೇ ಇಲ್ಲ. ಕಷ್ಟ-ಸುಖಗಳಲ್ಲಿ ಸಮಭಾಗಿಯಾದಳು. ರಾವಣನ ಸಂಹಾರಕ್ಕಾಗಿ ತಾನೇ ಕಷ್ಟಕ್ಕೆ ಸಿಲುಕಿ, ರಾವಣನಿಂದ ಅಪಹರಿಸಲ್ಪಟ್ಟು, ಲಂಕೆಯ ಅಶೋಕವನದಲ್ಲಿ ಪಡಬಾರದ ಕಷ್ಟಗಳನ್ನು ಸಹಿಸಿದಳು. ರಾಮನಿಂದ ದೂರವಾಗಿದ್ದುದು ಕೆಲವು ತಿಂಗಳುಗಳು ಮಾತ್ರ. ‘ಸೀತೆಯನ್ನು ಹೇಗಾದರೂ ಪಡೆದೇ ತೀರುತ್ತೇನೆ’ ಎಂಬ ರಾವಣನ ಶಪಥ ಸೀತೆಯ ಸ್ವಯಂವರದ ಸಮಯದಲ್ಲಿ ಪರಾಜಿತನಾದಾಗಲಲ್ಲವೆ? ಅದೇ ಸಮಯದಲ್ಲಿ ರಾಮನಿಗೆ ಜಯಮಾಲೆ ಹಾಕಿದ ಸೀತೆ, ರಾಮಕಾರ್ಯಕ್ಕೆ ಜೊತೆಗೂಡಿದಳು. ರಾವಣನ ಶಪಥವನ್ನೂ ಸುಳ್ಳು ಮಾಡಲಿಲ್ಲ. ಆದರೆ ರಾವಣನಿಗೆ ಅರ್ಥವಾಗಲಿಲ್ಲ. ತಾನು ಸೀತೆಯನ್ನು ಅಪಹರಿಸಿ ತಂದದ್ದಕ್ಕೆ ಮೀಸೆ ತಿರುವಿಕೊಂಡಿದ್ದಿರಬಹುದು. ಆದರೆ ಅದು ತನ್ನ ಮೃತ್ಯುವಿಗೆ ಕಾರಣವಾಗುತ್ತದೆ ಎಂದು ಅರಿಯಲಿಲ್ಲ. ವಿಧಿ ಬರಹ! ಸೀತೆ ರಾವಣನ ಪಾಲಿಗೆ ಮೃತ್ಯುವಾದಳು. ರಾವಣನ ಸಂಹಾರವಾಯಿತು. ಲೋಕಕಲ್ಯಾಣವಾಯಿತು.
ಸೀತೆಯ ಪಾತ್ರ ಪ್ರಧಾನವಾದದ್ದು. ರಾಮ-ಸೀತೆಯರ ಲೋಕಕಲ್ಯಾಣ ಕರ್ಯಕ್ಕೆ ನಾನಾ ರೀತಿಯಲ್ಲಿ ಸಹಕರಿಸಿದ ನಾರಿಯರು ಅನೇಕರಿದ್ದಾರೆ. ಯಾವ ರೀತಿಯಲ್ಲಿ ಸೀತೆಯ ಪಾತ್ರವನ್ನು ಬೆಂಬಲಿಸಿದ್ದಾರೆ ಎಂದು ಪ್ರಶ್ನೆ ಹಾಕಿಕೊಂಡು ಹುಡುಕುತ್ತ ಹೊರಟಾಗ ಸಿಗುವ ವ್ಯಕ್ತಿಗಳು, ಅವರ ಕರ್ಯಕೌಶಲಗಳು ಅಚ್ಚರಿಯನ್ನುಂಟುಮಾಡುತ್ತವೆ. ಯಥಾಶಕ್ತಿ ಅವರನ್ನು ಪರಿಚಯ ಮಾಡಿಕೊಳ್ಳೋಣ.
ಮಂಥರೆ: ರಾವಣಸಂಹಾರಕ್ಕೆ ತಿರುವು ಕೊಟ್ಟವಳು. ಅವಳ ಹೆಸರಿನಲ್ಲಿಯೇ ಇದೆ ಅವಳ ಕರ್ಯ. ಮಂಥನ ಎಂದರೆ ಕಡೆಯುವುದು ಎಂಬರ್ಥವಿದೆ. ಕೊನೆಯಲ್ಲಿ ಅಮೃತವು ದೊರೆತದ್ದು, ಕ್ಷೀರಸಾಗರವನ್ನು ಕಡೆದ ಮೇಲಲ್ಲವೆ? ಮೊದಲು ಸಿಕ್ಕಿದ್ದು ಹಾಲಾಹಲ! ಹಾಗೆಯೇ ಮಂಥರೆಯಿಂದ ಅಯೋಧ್ಯೆಯ ಶಾಂತಿ ಕದಡಿತು. ಕಡೆಗೆ, ದುಷ್ಟಸಂಹಾರ, ಶಿಷ್ಟರಕ್ಷಣೆಯ ನವನೀತ ಲೋಕಕ್ಕೆ ಸಂದಿತಲ್ಲವೆ?
ಕೇಕಯ ರಾಜನಿಗೆ ಕಾಡಿನಲ್ಲಿ ಸಿಕ್ಕಿದ ಅನಾಥಶಿಶು ಮಂಥರೆ. ವಿಕಲಾಂಗಿ. ಸಂತಾನವಿಲ್ಲದ ಕೇಕಯರಾಜನು ಈ ಮಗುವನ್ನೇ ದೇವರ ಪ್ರಸಾದವೆಂದು ಭಾವಿಸಿ, ಅರಮನೆಗೆ ತಂದು ಪೋಷಿಸಿದ. ರಾಜಭೋಗದಲ್ಲಿ ಬೆಳೆಯಿತು ಮಗು. ಕಾಲಕ್ರಮೇಣ ರಾಜನಿಗೆ ಹೆಣ್ಣು ಸಂತಾನವೊಂದಾಯಿತು. ಆಗಲೂ ರಾಜನು ಆ ಮಗುವಿನ ಕಾಲ್ಗುಣದಿಂದಲೇ ತನಗೆ ಸಂತಾನವಾಗಿದೆ ಎಂದು ಮತ್ತಷ್ಟು ಪ್ರೀತಿಯನ್ನು ಹರಿಸಿದ. ರಾಜಕುಮಾರಿ ಕೈಕೇಯಿಯನ್ನು ಮಂಥರೆ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದಳು. (ಆಂರ್ಯದಲ್ಲಿನ ವಿಷಯ ಯಾರಿಗೆ ಗೊತ್ತು!) ಪ್ರೀತಿಯ ದಾದಿಯಾದಳು. ದಶರಥ ಮಹಾರಾಜನೊಂದಿಗೆ ಕೈಕೇಯಿಯ ವಿವಾಹವಾದ ಮೇಲೂ, ಅಯೋಧ್ಯೆಗೆ ಅವಳ ಜೊತೆಗೇ ಬಂದಳು. ಕೈಕೇಯಿಯ ಮೋಹಕರೂಪಕ್ಕೆ ಮಾರುಹೋದ ದಶರಥ ಅವಳ ಕೈಗೊಂಬೆಯಂತಾದ. ಉಳಿದಿಬ್ಬರು ಪತ್ನಿಯರ ಕಡೆ ಉದಾಸೀನನಾದ. ಈಗ ಮಂಥರೆಯ ದರ್ಪ ಅರಮನೆಯವರಿಗೆ ಚುಚ್ಚುಮುಳ್ಳಾಯಿತು. ಸರ್ವಾಲಂಕಾರಭೂಷಿತೆಯಾಗಿ ಮೆರೆಯತೊಡಗಿದಳು. ರಾಮಾಯಣದರ್ಶನಂನಲ್ಲಿ ಅವಳನ್ನು ಈ ರೀತಿ ವರ್ಣಿಸಿದ್ದಾರೆ – ‘ಹೆಣ್ಣುಕೋತಿಗೆ ಸಿಂಗಾರ ಮಾಡಿದಂತೆ’ ಎಂದು. ಅವಳಿಂದ ಆದದ್ದೇನು?
ಸೀತೆಯ ಸ್ವಯಂವರದ ಸಮಯದಲ್ಲಿಯೇ ದಶರಥರಾಜನ ಉಳಿದ ಗಂಡುಮಕ್ಕಳಿಗೂ ಜನಕಮಹಾರಾಜನ ಮಗಳು ಊರ್ಮಿಳೆ ಹಾಗೂ ಅವನ ತಮ್ಮ ಕುಶಧ್ವಜನ ಮಕ್ಕಳಾದ ಮಾಂಡವಿ ಮತ್ತು ಶ್ರುತಕೀರ್ತಿಯರೊಡನೆ ಕ್ರಮವಾಗಿ ಮದುವೆ ಆಯಿತು. ಅಯೋಧ್ಯೆಯಲ್ಲಿ ದಶರಥ ಈಗ ಸಂಸಾರಸುಖದಲ್ಲಿ ಆರಾಮವಾಗಿದ್ದ. ಪ್ರಕೃತಿಯನ್ನು ಮಾಯೆ ಎಂತಲೂ ಕರೆಯುತ್ತೇವೆ. ದಶರಥನ ಜೀವನದಲ್ಲಿಯೂ ಪ್ರಕೃತಿಸಹಜವಾದ ಬದಲಾವಣೆ ಆಗಿದೆ. ಒಂದು ದಿನ ಯೋಚಿಸಿದ – ‘ನನಗೆ ವಯಸ್ಸಾಯಿತು. ರಾಜ್ಯಕ್ಕೆ ಉತ್ತರಾಧಿಕಾರಿಯನ್ನು ನೇಮಿಸುವುದು ಕ್ಷೇಮಕರ’ ಎಂದು. ಭಾವನೆ ಮನಸ್ಸಿನಲ್ಲಿ ಬರುತ್ತಿದ್ದಂತೆಯೇ ಕುಲಗುರುಗಳಾದ ವಸಿಷ್ಠರನ್ನು ಕರೆಸಿ, ತನ್ನ ಅಭಿಪ್ರಾಯವನ್ನು ತಿಳಿಸಿದನು.
ಅವರು ಲೆಕ್ಕಾಚಾರ ಹಾಕಿ, ‘ಶುಭಸ್ಯ ಶೀಘ್ರಂ’ ಎನ್ನುತ್ತ ‘ನಾಳೆಯೇ ಮುಹೂರ್ತ ಚೆನ್ನಾಗಿದೆ. ಅದಕ್ಕೆ ತಕ್ಕ ಏರ್ಪಾಟು ಮಾಡಿಕೋ’ ಎನ್ನುತ್ತ ತಾವೂ ತಮ್ಮ ಜವಾಬ್ದಾರಿಗೆ ಸೇರಿದ ಕೆಲಸಗಳ ಕಡೆ ಗಮನ ಕೊಡಲು ಹೊರಟುಹೋದರು.
ದಶರಥನ ಮನಸ್ಸಿನಲ್ಲಿ ಹಿರಿಯ ಮಗ ರಾಮನೇ ಆ ಸ್ಥಾನಕ್ಕೆ ಅರ್ಹನೆಂಬ ಯೋಚನೆ ಸುಳಿದಿತ್ತು. ವಸಿಷ್ಠರಿಗೆ ತನ್ನ ಮನಸ್ಸಿನ ಭಾವನೆಯನ್ನು ತಿಳಿಸಿದನು.
ದಶರಥನು ರಾಮನನ್ನೂ ಕರೆಸಿ ವಿಷಯವನ್ನು ಹೇಳಿ, ಅದಕ್ಕೆ ತಕ್ಕ ವ್ರತವನ್ನು ಆ ರಾತ್ರಿಯೇ ಆಚರಿಸುವಂತೆ ಹೇಳಿ ಕಳುಹಿಸಿದನು. ಇತರ ಕರ್ಯಗಳ ಕಡೆ ಗಮನಕೊಡುತ್ತಿದ್ದ ದಶರಥನು ರಾಣಿವಾಸದವರಿಗೆ ಇನ್ನೂ ಸುದ್ದಿಯನ್ನು ತಲಪಿಸಿರಲಿಲ್ಲ. ಊರಲ್ಲೆಲ್ಲ ಸಡಗರದ ವಾತಾವರಣ ಹಬ್ಬಿದೆ. ರಾತ್ರಿ ಕಳೆಯಿತು. ಬೆಳಗಾಯಿತು. ರಾಮನು ತಾಯಿ ಕೌಸಲ್ಯೆಗೆ ಶುಭ ಸಮಾಚಾರವನ್ನು ತಿಳಿಸಿದ. ಕೌಸಲ್ಯೆ ಮಗನ ಶ್ರೇಯೋಭಿವೃದ್ಧಿಗಾಗಿ ಭಗವದಾರಾಧನೆಯಲ್ಲಿ ತೊಡಗಿದಳು. ಇತ್ತ ಅರಮನೆಯಲ್ಲಿ ದಾಸ, ದಾಸಿಯರೂ ಸಂಭ್ರಮದಲ್ಲಿದ್ದಾರೆ. ಎಂದಿನಂತೆ ಮಂಥರೆಗೂ ರಾತ್ರಿ ಕಳೆದು ಬೆಳಗಾಗಿದೆ. ಪುರಪ್ರದಕ್ಷಿಣೆಗೆ ಹೊರಟಿದ್ದಾಳೆ. ತಳಿರು, ತೋರಣಗಳಿಂದ, ರಂಗವಲ್ಲಿಗಳಿಂದ ಸಂಭ್ರಮದ ವಾತಾವರಣವನ್ನು ಕಂಡಳು. ಸಿಕ್ಕ ನಾಗರಿಕರನ್ನು ವಿಚಾರಿಸಿದಳು. ರಾಮನ ಯುವರಾಜ್ಯಾಭಿಷೇಕದ ವಿಷಯವನ್ನು ತಿಳಿಸಿದರು. ಕೂಡಲೇ ಯಾವ ಪ್ರತಿಕ್ರಿಯೆಯೂ ಅವಳಿಂದ ಹೊರಡಲಿಲ್ಲ. ನಿಂತಿದ್ದಾಳೆ. ವಿಶ್ವಚಾಲಿತ ಅಗೋಚರ ಶಕ್ತಿಯ ರಹಸ್ಯವನ್ನು ಅರಿತವರು ಯಾರಿದ್ದಾರೆ? ಕ್ಷಣಮಾತ್ರದಲ್ಲಿ ಅಲ್ಲೋಲಕಲ್ಲೋಲ ಮಾಡಿಬಿಡುತ್ತದೆ!
ದೇವತೆಗಳಿಗೆ ರಾಮನ ಯುವರಾಜ್ಯಾಭಿಷೇಕದ ವಿಷಯ ತಿಳಿಯಿತು. ರಾಮನ ಅವತಾರವಾಗಿರುವುದು ರಾವಣಸಂಹಾರಕ್ಕಾಗಿ, ಧರ್ಮಸಂಸ್ಥಾಪನೆಗಾಗಿ. ಆದರೆ ಈಗ ಅಯೋಧ್ಯೆಯ ಸಿಂಹಾಸನಕ್ಕೆ ಉತ್ತರಾಧಿಕಾರಿಯನ್ನಾಗಿ ಮಾಡುವ ಸಿದ್ಧತೆ ನಡೆದಿದೆ. ಕಳವಳಕ್ಕೀಡಾಗಿ ಬ್ರಹ್ಮದೇವನನ್ನು ಭೇಟಿ ಮಾಡಿದರು. ಯಾವ ರೀತಿಯಲ್ಲಿ ಮುಂದುವರಿಯಬೇಕೆಂದು ಯೋಚಿಸುತ್ತ, ಜ್ಞಾನದೇವತೆಯಾದ ಶಾರದೆಯನ್ನು ಮೊರೆಹೊಕ್ಕರು. ‘ರಾವಣನಿಗೆ ರಾಮನಿಂದ ಮೃತ್ಯು’ ಎಂಬ ವಿಷಯವನ್ನು ಅಶರೀರವಾಣಿಯ ಮೂಲಕ ತಿಳಿಸಿದ್ದೂ ವಾಗ್ದೇವಿಯೇ ಅಲ್ಲವೆ? ಈಗಲೂ ಆ ಕಾರ್ಯದಲ್ಲಿ ಕೈಜೋಡಿಸಲು ಸಿದ್ಧಳಾದಳು. ಎಲ್ಲ ಅಸ್ತçಗಳಿಗಿಂತಲೂ ವಾಗಸ್ತçವೇ ಪ್ರಯೋಜನಕಾರಿಯೆಂದರಿತು, ಈ ಕಾರ್ಯಕ್ಕೆ ಮಂಥರೆಯನ್ನು ಆರಿಸಿಕೊಂಡಳು.
ಯುವರಾಜ್ಯಾಭಿಷೇಕದ ವಿಷಯ ಕೇಳಿ ನಿಂತಿದ್ದ ಮಂಥರೆ ಈಗ ಇದ್ದಕ್ಕಿದ್ದಂತೆ ಚುರುಕಾದಳು. ನಿಂತಲ್ಲಿಂದ ಓಡೋಡುತ್ತ ಬಂದಳು, ತನ್ನ ಒಡತಿಯ ಅರಮನೆಗೆ. ಬಿರುಗಾಳಿಯಂತೆ ನುಗ್ಗಿದಳು. ‘ಕೈಕೇಯಿ, ನೀನು ಕೆಟ್ಟೆ’ ಎಂದು ಅರಚುತ್ತಿದ್ದಾಳೆ. ಸುಖದ ಸುಪ್ಪತ್ತಿಗೆಯಲ್ಲಿ ಮಲಗಿದ್ದ ಕೈಕೇಯಿಗೆ ಇವಳ ಅರಚಾಟ ಕೇಳಿಸಿತು. ಎದ್ದಳು. ‘ಏನು?’ ಎಂದು ಸನ್ನೆಯ ಮೂಲಕ ಕೇಳಿದಳು. ಏದುಸಿರು ಬಿಡುತ್ತ, ರಾಮನ ಯುವರಾಜ್ಯಾಭಿಷೇಕದ ವಿಷಯ ಹೇಳಿದಳು. ಕೈಕೇಯಿಗೆ ಸವತಿಯರ ಬಗ್ಗೆ ತಿರಸ್ಕಾರವಿದ್ದರೂ, ನಾಲ್ಕು ರಾಜಕುಮಾರರ ಬಗೆಗೂ ಪ್ರೀತಿ ಇತ್ತು. ವಿಶೇಷವಾಗಿ ರಾಮನ ಗುಣಗಳನ್ನು ಮೆಚ್ಚಿ, ಹೆಚ್ಚು ವಾತ್ಸಲ್ಯವನ್ನು ತೋರಿಸುತ್ತಿದ್ದಳು. ಈಗ ಅವನ ಪಟ್ಟಾಭಿಷೇಕದ ವಿಷಯ ಅವಳಿಗೆ ಬಹಳ ಸಂತೋಷವನ್ನುಂಟು ಮಾಡಿತು. ತನ್ನ ಕೊರಳಲ್ಲಿದ್ದ ಅಮೂಲ್ಯವಾದ ರತ್ನಹಾರವನ್ನು ಉಡುಗೊರೆಯಾಗಿ ಕೊಟ್ಟಳು! ಮಂಥರೆ ಅದನ್ನು ತಿರಸ್ಕರಿಸಿ, ಕೈಕೇಯಿಯ ಮನಸ್ಸಿನಲ್ಲಿ ವಿಷ ಬೀಜವನ್ನು ಬಿತ್ತಲಾರಂಭಿಸಿದಳು.
ಮಂಥರೆ: ಕೈಕೇಯಿ, ಇದು ಸಂಭ್ರಮದ ವಿಷಯವಲ್ಲ. ಯೋಚಿಸು. ರಾಮ ರಾಜನಾದರೆ ಕೌಸಲ್ಯೆ ರಾಜಮಾತೆ ಆಗುತ್ತಾಳೆ. ನೀನು ಅವಳ ಕೈಕೆಳಗೆ ಬೀಳಬೇಕಾಗುತ್ತದೆ. ನಿನ್ನ ಯಾವ ಮಾತೂ ನಡೆಯುವುದಿಲ್ಲ. ಅಷ್ಟೇ ಅಲ್ಲ, ರಾಜನ ಕುತಂತ್ರವನ್ನೂ ಯೋಚಿಸು. ಭರತ ಇಲ್ಲಿದ್ದರೆ ಅಡ್ಡಿ ಆಗಬಹುದೆಂದು, ಮುಂಚೆಯೇ ಉಪಾಯವಾಗಿ ತಾತನ ಮನೆಗೆ ಕಳಿಸಿಬಿಟ್ಟಿದ್ದಾನೆ ಎಂದು ನಾನಾ ರೀತಿಯಲ್ಲಿ ಕೈಕೇಯಿಯ ಮನಸ್ಸಿಗೆ ಮುಟ್ಟುವಂತೆ ಜಾಣತನದಿಂದ ಮಾತನಾಡಿದಳು.
ಒಂದೇ ವಿಷಯ ಪದೇ ಪದೇ ಕಿವಿಗೆ ಬೀಳುತ್ತಿದ್ದರೆ, ಅದೇ ನಿಜವೆಂದು ಮನಸ್ಸು ಬದಲಾವಣೆ ಆಗಿಬಿಡುತ್ತದೆ. ಈಗ ಕೈಕೇಯಿ ಸುಂದರರೂಪದ ನಾಗಿಣಿಯೇ ಆದಳು. ಮಂಥರೆಯನ್ನು ಅಪ್ಪಿಕೊಂಡು ಹೇಳುತ್ತಾಳೆ ‘ನೀನೇ ನನಗೆ ಈಗ ದಿಕ್ಕು. ನಾನು ಏನು ಮಾಡಲಿ?’ ಎಂದು.
ಕಬ್ಬಿಣವನ್ನು ಕಾದಾಗಲೇ ಬಡಿಯಬೇಕಲ್ಲವೆ? ಮಂಥರೆಯ ಮಾತುಗಳಿಂದ ಬದಲಾದ ಕೈಕೇಯಿಯ ಮೂಲಕ ರಾವಣ ಸಂಹಾರಕ್ಕೆ ಸಹಕರಿಸುವಂತಹ ಮಾತುಗಳನ್ನು ಮಂಥರೆಯು ಹೇಳುತ್ತಿದ್ದಾಳೆ. ‘ಕೈಕೇಯಿ, ದಶರಥ ರಾಜನು ನಿನಗೆ ರಾಮ ಪಟ್ಟಾಭಿಷೇಕದ ವಿಷಯ ತಿಳಿಸಲು ಬರುತ್ತಾನೆ. ಆಗ ನೀನು ಕೋಪಗೃಹದಲ್ಲಿರು. ರಾಜನ ಬೆಡಗಿನ ಮಾತುಗಳಿಗೆ ಮರುಳಾಗಬೇಡ. ನೀನು ಕೇಳಿದ್ದನ್ನು ರಾಜನು ಕೊಡಲು ಮಾತು ಕೊಟ್ಟಾಗ, ನಿನಗೆ ಹಿಂದೆ ಅವನು ನೀಡಿದ್ದ ವರಗಳೆರಡನ್ನು ನಡೆಸಿಕೊಡುವಂತೆ ಕೇಳು – ಭರತನಿಗೆ ರಾಜ್ಯಾಭಿಷೇಕ ಹಾಗೂ ರಾಮನಿಗೆ ಹದಿನಾಲ್ಕು ವರ್ಷ ವನವಾಸ. ರಾಜನು ಒಪ್ಪಿಕೊಳ್ಳುವ ತನಕ ಬಿಡಬೇಡ.’ ಹೇಗಿದೆ ಮಂಥರೆಯ ಪಿತೂರಿ? ವಾಗ್ದೇವಿಯ ಕೆಲಸವಾಯಿತು! ಕೈಕೇಯಿ ಈಗ ಮುಂದಿನ ಕಾರ್ಯಕ್ಕೆ ಸಿದ್ಧಳಾದಳು. ಮುಂದೆ ಹೇಗೆ ಕರ್ಯ ನಡೆಯಿತು ಎಂಬುದನ್ನು ಕೈಕೇಯಿಯ ಪಾತ್ರದಲ್ಲಿ ಕಾಣೋಣ. ವಿಪರೀತವೆನಿಸಿದರೂ ದೈತ್ಯ ಸಂಹಾರಕರ್ಯಕ್ಕೆ ಮಂಥರೆಯ ಸಹಕಾರವನ್ನು ಮರೆಯಲಾಗದು.
(ಮುಂದುವರಿಯುವುದು)