ಯಾನ್ ಹೇಳ್ತೀರಾ ಸೋಮಿ, ಹುಲಿ ಅಂದ್ರೆ ಭರ್ಜರಿ ಹುಲಿ. ಹನ್ನೆರಡು ಅಡಿ ಉದ್ದ, ಸುಮಾರು ನಾನೂರು ಐನೂರು ಪೌಂಡ್ ತೂಗ್ತಿತ್ತು ಅಂತೀನಿ. ಒಂದಫ ನಮ್ಮ ಹಳ್ಳಿಗೆ ನುಗ್ಗಿದ್ದು ಮ್ಯಾಕೆ, ಕುರಿ, ನಾಯಿ ಎಲ್ಲಾನು ಒಂದೊಂದಾಗಿ ಎತ್ಕಂಡು ಹೋಗಾಕೆ ಸುರು ಹಚ್ಕಂಡ್ತು. ಅಯ್ ಬಡ್ಡೆತ್ತದು ಎರಡು ನಾಯಿ ತಾನೆ ತಿನ್ಕತದೆ, ತಿನ್ಕಳ್ಳಿ ಅಂತಾ ಬುಟ್ರೆ ಪಡಸಾಲೆ ಮ್ಯಾಲೆ ಕವುಚ್ಕಂಡು ಮನಿಗಿದ್ದ ಗುಲಗಂಜಿ ಕುಂಟ್ ಬಸವನ್ನ ಎತ್ಕಂಡ್ ಹೋಗೇ ಬುಡದಾ! ಆದ್ರೆ ಅದ್ಕೆ ನರಮನುಸ್ರ ರಕ್ತ-ಮಾಂಸದ ರುಚಿ ಹಲ್ಲಿಗೆ ಹತ್ತರ್ನಿಲ್ಲಾಂತ ಕಾಣುತ್ತೆ. ಇದೇನೊ ಕೋಳೀನೊ, ಕುರೀನೊ ಅಂತಾ ಬಾಯಲ್ಲಿ ಕಚ್ ಹಿಡ್ಕಂಡು ಹೋದದ್ದು, ಅಲ್ಲಾ ಅಂತ ತಿಳಿದ್ಮ್ಯಾಲೆ ಕೆರೆ ಪಕ್ಕದ ಬೋರೆಮರದ ಕೆಳಗೆ ವಗ್ದು ಹೋಗಿತ್ತಾ! ಪಾಪ, ಹನ್ನೆಲ್ಡು ವರ್ಸದ ಕುಂಟ್ ಬಸವ ಸತ್ತೇ ಹ್ವಾದ.
ಹಿಂದೆ ಬೆಟ್ಟಗುಡ್ಡಗಳ ಅಂಚಿನಲ್ಲಿಯೇ ಹಳ್ಳಿಗಳು ಏಕೆ ಅಭಿವೃದ್ಧಿ ಹೊಂದುತ್ತಿದ್ದುವು, ಕಾಡುಪ್ರಾಣಿಗಳ ಉಪಟಳಕ್ಕೆ ಸದಾ ಒಡ್ಡಿಕೊಳ್ಳುವ ಇಂತಹ ಸಂದರ್ಭಗಳು ಬರುವುದು ನಿಶ್ಚಯವೆನಿಸಿದರೂ ಮಾನವರು ಏಕೆ ಗುಡ್ಡದ ಪಕ್ಕದಲ್ಲೇ ನೆಲಸುವ ನಿರ್ಧಾರ ತೆಗೆದುಕೊಳ್ಳುತ್ತಿದ್ದರು ಎಂದು ಚಿಕ್ಕವನಾಗಿದ್ದಾಗ ಆಗಾಗ್ಗೆ ನನಗೆ ಅನಿಸುತ್ತಿದ್ದುದು ಉಂಟು.
ಆದರೆ ತಿಳಿವಳಿಕೆ ಬೆಳೆದಂತೆಲ್ಲ ಉತ್ತರ ತಾನೇತಾನಾಗಿ ಗೋಚರಿಸತೊಡಗಿತು. ಅರಣ್ಯದ ಹಲವಾರು ಉತ್ಪನ್ನಗಳು ಸುಲಭವಾಗಿ, ಉಚಿತವಾಗಿ ದೊರೆಯುತ್ತಿದ್ದುದು ಪ್ರಮುಖ ಕಾರಣವಾಗಿದ್ದಿದ್ದರೆ, ಹಳ್ಳಿಯನ್ನು ಕಟ್ಟಿದವರು ಬೆಟ್ಟದ ತಳಭಾಗಕ್ಕೆ ಮೊದಲೇ ಹೋಗಿ ನೆಲಸುತ್ತಿರಲಿಲ್ಲ. ಆರೆಂಟು ಮೈಲಿಗಳ ದೂರದಲ್ಲಿ ಹಳ್ಳಿಗಳು ನಿರ್ಮಾಣವಾಗಿ ವ್ಯವಸಾಯಕ್ಕೆ ಜಮೀನನ್ನು ಆಶ್ರಯಿಸುತ್ತ, ಜಮೀನನ್ನು ಅಭಿವೃದ್ಧಿಪಡಿಸಿಕೊಂಡು ಹೋಗುತ್ತ ಹೋಗುತ್ತ ಬೆಟ್ಟದ ಬುಡಕ್ಕೆ ಬಂದು ತಲಪಿರಬಹುದು. ಹೀಗೆ ಒಂದಿದ್ದ ಹಳ್ಳಿ ಹತ್ತಾಗಿ ನೆಲೆಗೊಂಡಿರಬಹುದು ಎನಿಸಿತು.
ತನ್ನ ಅಭಿವೃದ್ಧಿಗಾಗಿ ಬೆಟ್ಟದ ಬುಡ ತಲಪಿ ಕಾಡುಪ್ರಾಣಿಗಳ ಉಪಟಳ ಬೇಡವೆಂದರೆ ಹೇಗೆ? ಅದನ್ನು ಅನುಭವಿಸಲು ಸಿದ್ಧನಾಗಲೇಬೇಕಾಯಿತು. ನಮ್ಮ ಹಳ್ಳಿಯೂ ಕೂಡ ಗುಡ್ಡದಿಂದ ಎರಡು-ಮೂರು ಕಿ.ಮೀ. ದೂರದಲ್ಲಿದ್ದರೂ ಆಗಾಗ್ಗೆ ಚಿರತೆ, ನರಿ, ಯಾವಾಗಲಾದರೊಮ್ಮೊಮ್ಮೆ ಹುಲಿ ಉಪಟಳ ಕೊಡುತ್ತಿದ್ದುದುಂಟು. ಹಾಗೆಂದು ಯಾರೂ ಊರು ತೊರೆಯುವ ನಿರ್ಧಾರ ಮಾಡುತ್ತಿರಲಿಲ್ಲ.
ನಾನು ಚಿಕ್ಕವನಾಗಿದ್ದಾಗ ನಮ್ಮಪ್ಪ ಹೇಳಿದ ಬಹು ರಮ್ಯ ಕಥೆ. ನಡೆದಿತ್ತಾ ಇಲ್ಲವಾ ಎಂಬುದಕ್ಕೆ ನನಗೆ ಈಗಲೂ ಖಾತ್ರಿಯಿಲ್ಲ. ಹುಡುಗರಾಗಿದ್ದರಿಂದ ರೋಚಕ ವರ್ಣನೆಯನ್ನು ನಮ್ಮಪ್ಪನ ಬಾಯಿಂದ ಕೇಳಿದಾಗ ಢೋಂಗಿ ಹೊಡೆಯುತ್ತಿದ್ದಾರೆ ಎನ್ನುವುದಕ್ಕಿಂತ ಅವರ ಬೀಭತ್ಸ ವರ್ಣನೆಯನ್ನು ಕೇಳಿ ದಿಗಿಲುಗೊಳ್ಳುತ್ತಿದ್ದೆವು. “ಅದೇನ್ ಹುಲಿ ಕಥೆ ಹೇಳಿ ಹುಡುಗರನ್ನು ಸಂಜೆ ಹೊತ್ತು ಹೆದರಿಸ್ತೀರಾ ಸುಮ್ನಿರಿ” ಎಂದು ಅಮ್ಮ ಹೇಳಿದರೂ ಕೇಳದ ಅಪ್ಪ ಪ್ರಾರಂಭಿಸಿದ ಕಥೆಯನ್ನು ಮುಂದುವರಿಸುತ್ತಿದ್ದರು.
ನಮ್ಮಪ್ಪ ಪ್ರಾಯಕ್ಕೆ ಬಂದಾಗ ಹುಲಿಗಪ್ಪನ ವಯಸ್ಸು ಅರುವತ್ತೋ ಎಪ್ಪತ್ತೋ ದಾಟಿತ್ತಂತೆ.
ಜಗುಲಿಯ ಮೇಲೆ ಕುಳಿತು ಎಲೆ ಅಡಿಕೆ ಸಂಚಿಯಿಂದ ಒಂದು ಗೋಟಡಿಕೆ ತೆಗೆದು ಬಾಯಲ್ಲಿ ಎಸೆದುಕೊಂಡು, ಬಾಯಿಯ ಲಾಲಾರಸದಲ್ಲಿ ಕೊಂಚ ಮಿದುವಾಗುವಷ್ಟರಲ್ಲಿ ಓಡಾಡುತ್ತಿದ್ದ ಹುಡುಗರಲ್ಲಿ ‘ಲೇ ನಿಂಗಾ, ಬಾಯಿಲ್ಲಿ’ ಎಂದೋ ಇಲ್ಲ ‘ಏ ಭರಮ, ಕೂಗ್ತಾಯಿದ್ರೂ ಕೇಳ್ದೆ ಕೆಪ್ ನನಮಗನೇ!’ – ಎಂದು ಬೈದು ವೀಳ್ಯದೆಲೆಯನ್ನು ತರಿಸಿಕೊಂಡು ಸದಾ ಮೇಕೆಯಂತೆ ಮೇಯುತ್ತಾ ಕುಳಿತಿರುತ್ತಿದ್ದನಂತೆ. ಆದರೆ ಅರುಳುಮರುಳು ವಯಸ್ಸಾಗಿದ್ದರೂ ಜಗುಲಿಯ ಮೇಲೆ ಕುಳಿತು ಗದ್ದೆ, ಹೊಲದ ಕಡೆ ಹೋಗುವ ಪ್ರತಿಯೊಬ್ಬರ ಹೆಸರುಹಿಡಿದು ಕರೆದು ಯೋಗಕ್ಷೇಮ ವಿಚಾರಿಸುವುದು ಅವನ ದಿನಚರಿಗಳಲ್ಲಿ ಒಂದಾಗಿತ್ತು ಎನ್ನುವುದಕ್ಕಿಂತ ಅವನ ಜ್ಞಾಪಕಶಕ್ತಿಯನ್ನು ಎಲ್ಲರೂ ಮೆಚ್ಚಲೇಬೇಕು. ದೊಡ್ಡವರು ಹಾಗಿರಲಿ ಮಕ್ಕಳು-ಮರಿಗಳ ಹೆಸರೂ ಕೂಡ ಹುಲಿಗಪ್ಪನ ನಾಲಿಗೆಯ ತುದಿಯಲ್ಲಿರುತ್ತಿದ್ದುವಂತೆ.
ಹುಲಿಗಪ್ಪನನ್ನು ಹುಲಿ-ಹೆಸರಿನಿಂದಲೇ ಏಕೆ ಕರೆಯುತ್ತಿದ್ದರು ಎನ್ನುವುದಕ್ಕೆ ಅಪ್ಪ ಕೊಡುತ್ತಿದ್ದ ವಿವರಣೆ ಹುಲಿಗಪ್ಪನ ಹೆಸರು ಮರಿದೇವ ಎಂದು. ಅವನು ಚಿಕ್ಕವನಾಗಿದ್ದಾಗ ‘ಕಾಡಿನಿಂದ ಒಂದು ಹುಲಿಮರಿಯನ್ನು ಹಿಡಿದು ತಂದು ಸಾಕ್ತೀನಿ’ ಎನ್ನುತ್ತಿದ್ದನಂತೆ. ಆಮೇಲೆ ಅವನನ್ನು ಹುಲಿಗ, ಹುಲಿಗಪ್ಪ ಎಂದೇ ಕರೆಯತೊಡಗಿದರಂತೆ. ಹುಲಿ ಸಾಕದಿದ್ದರೂ ಊರಿಗೆ ಬಂದು ಉಪಟಳ ಕೊಡುತ್ತಿದ್ದ ಹುಲಿಯನ್ನು ಪಳಗಿಸಿದ್ದಂತೂ ನಿಜ -ಎನ್ನುತ್ತಿದ್ದರು ಅಪ್ಪ.
ಹುಡುಗರಾದ ನಾವು ನಮ್ಮಪ್ಪನ ಬಾಯಿಂದ ಹುಲಿಕತೆ ಕೇಳಿದಂತೆ ಹುಲಿಗಪ್ಪನ ಬಾಯಿಂದ ಅಪ್ಪ ಕೇಳಿದ್ದು ಹೀಗೆ:
ಯಾನ್ ಹೇಳ್ತೀರಾ ಸೋಮಿ, ಹುಲಿ ಅಂದ್ರೆ ಭರ್ಜರಿ ಹುಲಿ. ಹನ್ನೆರಡು ಅಡಿ ಉದ್ದ, ಸುಮಾರು ನಾನೂರು ಐನೂರು ಪೌಂಡ್ ತೂಗ್ತಿತ್ತು ಅಂತೀನಿ. ಒಂದಫ ನಮ್ಮ ಹಳ್ಳಿಗೆ ನುಗ್ಗಿದ್ದು ಮ್ಯಾಕೆ, ಕುರಿ, ನಾಯಿ ಎಲ್ಲಾನು ಒಂದೊಂದಾಗಿ ಎತ್ಕಂಡು ಹೋಗಾಕೆ ಸುರು ಹಚ್ಕಂಡ್ತು. ಅಯ್ ಬಡ್ಡೆತ್ತದು ಎರಡು ನಾಯಿ ತಾನೆ ತಿನ್ಕತದೇ, ತಿನ್ಕಳ್ಳಿ ಅಂತಾ ಬುಟ್ರೆ ಪಡಸಾಲೆ ಮ್ಯಾಲೆ ಕವುಚ್ಕಂಡು ಮನಿಗಿದ್ದ ಗುಲಗಂಜಿ ಕುಂಟ್ ಬಸವನ್ನ ಎತ್ಕಂಡ್ ಹೋಗೇ ಬುಡದಾ! ಆದ್ರೆ ಅದ್ಕೆ ನರಮನುಸ್ರ ರಕ್ತ-ಮಾಂಸದ ರುಚಿ ಹಲ್ಲಿಗೆ ಹತ್ತರ್ನಿಲ್ಲಾಂತ ಕಾಣುತ್ತೆ. ಇದೇನೊ ಕೋಳೀನೊ, ಕುರೀನೊ ಅಂತಾ ಬಾಯಲ್ಲಿ ಕಚ್ ಹಿಡ್ಕಂಡು ಹೋದದ್ದು, ಅಲ್ಲಾ ಅಂತ ತಿಳಿದ್ಮ್ಯಾಲೆ ಕೆರೆ ಪಕ್ಕದ ಬೋರೆಮರದ ಕೆಳಗೆ ವಗ್ದು ಹೋಗಿತ್ತಾ! ಪಾಪ, ಹನ್ನೆಲ್ಡು ವರ್ಸದ ಕುಂಟ್ ಬಸವ ಸತ್ತೇ ಹ್ವಾದ.
ಇನ್ನು ಇದನ್ನ ಹಿಂಗೇ ಬುಟ್ರೆ ನರಮಾಂಸಕ್ಕೂ ಬಾಯ್ ಹಾಕ್ದೆ ಬುಟ್ಟಾದಾ! – ಅಂತಾ ಯೇಚ್ಣೆ ಮಾಡಿ ಬೋರೆ ಮ್ಯಾಲಿದ್ದ ಮರ ಹತ್ತಿ ಕುಂತು, ಹುಲಿ ಬರೋ ಟೇಮಿಗೆ ಸರಿಯಾಗಿ ಕಾದು ಅದರ ಬಾಯಿ ಕಟ್ಬುಟ್ನಾ!
“ಏನು, ಮರದಿಂದ ಇಳಿದು ಅದರ ಬಾಯಿ ಕಟ್ಟಿದೆಯಾ ಹುಲಿಗಪ್ಪ?”
“ಅಯ್, ಅದೆಲ್ಲಾಯ್ತದೆ, ನಂಗೊಂಚೂರು ಮಂತ್ರ-ತಂತ್ರ ಗೊತ್ತಿತ್ತು. ಹೀಗ್ ಮಂತ್ರಿಸಿ – ಹಾಗ್ ಕಟ್ಟಿದ್ನಾ? ಅದು ಊರೊಳಗೆ ಬಂದ್ರೂ ಹಸುವಿನ ಕರ-ಗಿರ ಯಾವುದನ್ನೂ ಹಿಡಿಯಲಾಗದೆ ಬರೇ ಬಾಯ್ ತಕ್ಕೊಂಡು ಕಿರಿಚ್ಗಬೇಕು ಹಂಗ್ ಮಾಡ್ಬುಟ್ಟೆ”
“ಕುರಿ, ಕೋಳಿ ಯಾವುದನ್ನೂ ಹಿಡಿಲಿಲ್ಲಾನ್ನು.”
“ಅದೆಲ್ಲಿಂದ ಹಿಡಿದಾತು. ಬಾಯಿ ಬೀಗ ಹಾಕ್ಬುಟ್ಟಿದ್ನಲ್ಲಾ!”
ಈ ರೀತಿ ಕಾಡುಪ್ರಾಣಿಗಳ ಉಪಟಳ ತಾಳಲಾರದೆ ಮಂತ್ರದಿಂದ ಅದರ ಬಾಯಿ ಕಟ್ಟಬಿಡುತ್ತಿದ್ದರಂತೆ. ಇದನ್ನು ಹುಲಿಗಪ್ಪ ಅದು ಹೇಗೋ ಸಾಧಿಸಿದ್ದ ಅಂತಾ ಕಾಣುತ್ತೆ. ಹಿಂದೆ ಎಲ್ಲ ಹಳ್ಳಿಗಳಲ್ಲೂ ಮಂತ್ರ-ತಂತ್ರ ಬಲ್ಲವರು ಯಾರಾದರೊಬ್ಬರು ಇದ್ದೇ ಇರುತ್ತಿದ್ದರಂತೆ. ಅವತ್ತು ರಾತ್ರಿ ಹುಲಿ ಸದ್ದು ಮಾಡ್ದೆ ಬೆಕ್ಕಿನತರ ಮೆಲ್ಲಗೆ ಊರೊಳಕ್ಕೆ ಬಂತು. ಹಸು-ಕರ ಕಟ್ಟಿದ್ದ ಕೊಟ್ಗೆ, ಕುರಿ ತುಂಬಿದ್ದ ರೊಪ್ಪದ ತಾವ್ಕೆ ಹೋಗುತ್ತದೆ. ಆಹಾ! ಪರಮಾಷಿ ಊಟ ಸಿಕ್ತು ಅಂತ ಬಾಗಿಲು ಸಂದಿಗೆ ಬಾಯಿ ಹಾಕ್ತಾದೆ, ಕುರಿ ಕುತ್ಗೆಗೆ ಬಾಯಿ ಹಾಕಕ್ಕೆ ಆಗ್ತಿಲ್ಲ. ನಾಲ್ಕೈದು ಬಾರಿ ಹಿಂಗೆ ಮಾಡ್ತು. ಬಾಯಲ್ಲಿ ಕಚ್ಚಾಕೆ ಆಗ್ತಿಲ್ಲ. ಓಹೋ! ಯಡವಟ್ಟಾಗೋಯ್ತು ಅಂತಾ ಗರ್ಜಿಸಕ್ಕೆ ಸುರು ಹಚ್ಕೊಂಡ್ತು. ಕೈಗೆ ಬಂದ ತುತ್ತು ಬಾಯ್ಗಿಲ್ಲಾ ಅಂತಾರಲ್ಲ ಹಂಗಾಗೋಯ್ತು.
ಎದುರ್ಗೆ ಕುರಿ, ಕೋಳಿ ಇದ್ರೂ ಬಾಯಿ ಹಾಕಕ್ಕಾಯ್ತಾಯಿಲ್ಲ. ಕ್ವಾಪ ಬಂದ್ಬುಟ್ತು ಹುಲಿಗೆ. ಮೊರೆಯೋಕ್ಕೆ ಸುರು ಮಾಡ್ತು. ಯಾನ್ ಮಾಡಿದ್ರೇನ ಯಾರೂ ಬಾಕ್ಲು ತಗೀಬ್ಯಾಡಿ ಅಂತಾ ಮೊದ್ಲೆ ಹೇಳಿಬಿಟ್ಟಿದ್ನಾ. ಎಲ್ರೂ ಕಿಟಕಿಲಿ ನೋಡ್ತಾರೆ. ಹುಲಿ ಗುರಾಯಿಸ್ಕಂಡು ಗುರ್ ಗುರ್ ಅಂತಾ ಗರಗರ ಸುತ್ತುತ್ತಾ ಬೀದಿ ಸುತ್ತೋಕ್ಕೆ ಸುರುಮಾಡ್ತು. ಹಸಿವೆ ತಡೆಯೋಕ್ಕಾಯ್ತಿಲ್ಲ. ಮೇವು ಬಾಯಿಗೆ ಬೀಳ್ತಿಲ್ಲ. ಕ್ವಾಪದಿಂದ ಎಗರಿ ಎಗರಿ ಬಿದ್ದು ಸುಸ್ತ್ ಮಾಡ್ಕೊಂಡು ಬಿಡ್ತು. ಅಷ್ಟರಾಗೆ ಬೆಳಕು ಹರೀತ ಬಂತು. ಇದ್ರೆ ಕಷ್ಟಾಂತ ಬಾಲ ಮುದುರ್ಕಂಡು ಅಲ್ಲಲ್ಲೇ ನಿಂತು ಕೂತು ಹೊಂಟ್ಬುಡ್ತು.
ಕೆರೆ ಕಡೆ, ಹೊಲಗದ್ದೆ ಕಡೆ ಹೊಗೋವುö್ರ ನೋಡ್ತಾರೆ, ಭಾರಿ ಹುಲಿ ರಸ್ತೆ ಮ್ಯಾಗೆ! ಮನೆಯಿಂದಾಚೆ ಬರಾಕೆ ಯಾರ್ಗೂ ಧೈರ್ಯ ಸಾಲ್ದು. ನಾನು ಅದರ ಬಾಯಿ ಕಟ್ಟದ್ನಲ್ಲಾ, ನನ್ನ ಮಂತ್ರದ ಕೋಲು ಹಿಡ್ಕಂಡು ಮನೆ ಹೊರಗೆ ಬಂದ್ನಾ… ಹನುಮಂತರಾಯನ ಗುಡಿ ತಾವ ನಿಂತಿದ್ದ ಹುಲಿ ನನ್ನ ಮುಖ ಕಂಡು ತಕ್ಷಣ ಗುಡ್ಡದ ಕಡೆ ಹೆಜ್ಜೆ ಹಾಕಲು ಸುರು ಹಚ್ಕೊಂಡ್ತು.
ಓಹೊಹೊಹೋ… ಎಂಥಾ ರೂಪ ಸ್ವಾಮಿ.
ಆಚೆ ಬೀದಿ ನಮ್ಮ ಮಿಣಿಯ ಹಲಗೂರು ಸಂತೆಯಿಂದ ತಂದಿದ್ನಲ್ಲಾ ಭಾರಿ ಮಜಬೂತಾದ ಎತ್ತು! ಅದರ ತೊಡೆಯ ನಾಲ್ಕರಷ್ಟು ದಪ್ಪ ಈ ಹುಲಿಯ ಒಂದೊಂದು ತೊಡೆ ಅಂತೀನಿ! ಮಿರಿಮಿರಿ ಮಿಂಚುತ್ತಿದ್ದ ಅದರ ಹಿಂಭಾಗ ಮೂರ್ನಾಲ್ಕು ಅಡಿಗಿಂತ ಅಗಲವಾಗಿತ್ತು. ಹೆಜ್ಜೆ ಹಾಕ್ತಿದ್ರೆ ಎಂಥಾ ಕುಲುಕಾಟ! ಅಳ್ಳಾಡಿಸ್ಕಂಡು ವಯ್ಯಾರದಿಂದ ಹೋಯ್ತಿದ್ರೆ ಅದರ ಹಿಂಭಾಗ ನೋಡ್ಬೇಕಿತ್ತು!
ಇಚಾರಕ್ಕೆ ಬರುತ್ತೀನಿ ಈಗ. ಹುಲಿ ಒಂದ್ಹೆಜ್ಜೆ ಮುಂದೆ ಮಡ್ಗೋದು, ಹಿಂದಕ್ಕೆ ತಿರುಗಿ ನೋಡಾದು. ಕೈಲಾಗ್ದೆ ಪಂಜಾದಿಂದ ನೆಲಕ್ಕೆ ಬಡಿಯಾದು. ಹಿಂಗೆ ಮಾಡ್ಕೊಂಡು ಹೋಯ್ತಿದ್ದ ಅದರ ಬಾಲ ನೋಡ್ಬೇಕಿತ್ತು ಸ್ವಾಮಿ! ನಿಮ್ಮ ಹಟ್ಯಾಗೆ ಹಂಗರಿಕೆ ಸೊಪ್ಪಿನ ಪೊರಕೆ ಇಲ್ವಾ, ಅದಕ್ಕಿಂತ ದಪ್ದು ಇದರ ಬಾಲ. ಒಬ್ಬ ಮನ್ಸ ಎರಡು ಕೈ ಸೇರಿಸಿ ಹಿಡೀಬೇಕು ಅಷ್ಟು ದಪ್ಪದ ಬಾಲ ಅಂತೀನಿ!
ಹಳ್ಳಿಯವರನ್ನೆಲ್ಲಾ ಏಳಿಸಿ, ಬನ್ರಾ ಎಲ್ರೂ, ಹುಲಿ ಯಾನ್ ಮಾಡೀತು. ಬಾಯಿ ಕಟ್ಟಿವ್ನಿ ಅಂದಿದ್ದೆ ತಡ ಕೈಲಿ ಯಾವುದಕ್ಕೂ ಇರ್ಲಿ ಅಂತ ಕುಡುಗೋಲು, ಚೂರಿ, ಕೊಡ್ಲಿಗೆ ಹಾಕಿದ ದಪ್ಪ ಕಾವು, ಕೈ ದೊಣ್ಣೆಗಳು, ತಮಟೆ, ರಂಡೋಲು, ಕೊಂಬು, ಕಹಳೆ ಹೀಗೆ ಸಿಕ್ಕಿದ್ದನ್ನು ಎತ್ಕೊಂಡು ಬಂದೇ ಬುಟ್ರು. ಹೊಹೊಹೋ ನೋಡ್ ನೋಡ್ತಾನೆ ಸುಮಾರು ಜನ ಸೇರ್ಕಂಡ್ರಾ.
ಐನೂರು ಹೆಜ್ಜೆ ದೂರದಲ್ಲಿ ಹುಲಿ. ಅದರ ಹಿಂದೆ ಮಂತ್ರದ ಕೋಲು ಹಿಡಿದು ನಾನು. ನನ್ನ ಹಿಂದೆ ಜನಗಳ ಜಾತ್ರೆ. ಜನಗಳು ಸುಮ್ನೆ ಬಂದಾರಾ? ಹುಯ್, ಡುಯ್, ಹೊಡಿ ಬಡಿ ಎಂಬ ಕೂಗಾಟದ ಜೊತೆಗೆ ತಮ್ಮಟೆ, ರಂಡೋಲು, ಕೊಂಬಿನ ಸದ್ದು. ಕಮಕ್-ಕಿಮಕ್ ಅಂದೆ ಗಂಭೀರವಾಗಿ ನಡಕಂಡು ಹೋಯ್ತಿದ್ದ ಹುಲಿ ರಸ್ತೆ ಬುಟ್ಟು, ಎಲ್ಲಾ ಕೆರೆಗೂ ನೀರು ಕಾಣಿಸ್ತಿತ್ತಲ್ಲ ಆ ಮಾತಾಯಿ ಕೆರೆ ಹುಳಗೆರೆ, ಆ ಕೆರೆ ಏರಿ ಮ್ಯಾಲೆ ಹತ್ಕಂಡ್ತು.
ನಾವು ಅದರ ಹಿಂದೆ, ಅದು ಮುಂದೆ…
ಆಗ್ತಾನೆ ಸೂರ್ಯನಾರಾಯಣ ಹುಟ್ಟಿದ್ನಾ. ಹುಲಿ ಮೈ ಮ್ಯಾಲಿನ ಪಟ್ಟೆಗಳು ನೋಡ್ಬೇಕಿತ್ತು, ನೀವು. ಅಂಗೈ ಅಗಲದ ಪಟ್ಟೆ ಮಿರ ಮಿರ ಮಿಂಚ್ತಿದ್ದು, ನಡಕ್ಕಂಡು ಹೋಗುತ್ತಿದ್ದುದು ಛಕ್ಕನೆ ನಿಂತ್ರೆ ಸಾಕು ಎಲ್ರಿಗೂ ಎದೆಬಡಿತ ಜಾಸ್ತಿಯಾಗೋದು. ಅದರ ಮುಖ ನೋಡ್ಬೇಕಿತ್ತು ಸ್ವಾಮಿ. ಅದರ ಕ್ವಾರೆಹಲ್ಲು ಎಷ್ಟು ಉದ್ದ, ದಪ್ಪ ಅಂತೀರಾ….
ಅAದರೆ ಬೆನ್ನು ನೋಡ್ಬೇಕು, ಬೆನ್ನು. ಸುಮ್ನೆ ಹೋಳಿಲ್ಲ. ಮಲೆಮಾದೇಶ್ವರ ಹುಲಿವಾನ ಮಾಡ್ಕೊಂಡವನೆ ಅಂತ. ಒಬ್ಬ ಮನ್ಸ ಅಂಗಾತನಾಗಿ ಜೋಕಾಗಿ ಮನಿಕಾಬೋದು, ಅಷ್ಟಗಲ ಅದರ ಬೆನ್ನಿನ ವಜನ್ನು.
ಹೊಟ್ಗೆ ಏನೂ ಸಿಕ್ದೆ ಗರ್ಜಿಸ್ತಾ ಹೊಂಟಿದ್ದ ಹುಲಿ ಗಕ್ಕನೆ ನಿಂತೇ ಬುಡ್ತು. ಬಾಯಿ ಕಟ್ಟದ್ನಲ್ಲಾ ಯಾನ್ ಮಾಡೀತು ಅಂತಾ ಜನ ನಿಂತು ನೋಡಾಕೆ ಸುರು ಮಾಡಿದ್ರು. ಹುಲಿ ಮುಂದ್ಕು ಇಲ್ಲ, ಹಿಂದ್ಕು ಇಲ್ಲ ನಿಂತಲ್ಲೇ ನಿಂತುಬುಡ್ತು.
ಲೇ ಬನ್ರೆಲಾ! ಹುಲಿ ಯಾನು ಮಾಡಕ್ಕಿಲ್ಲ ಅಂತ ಧೈರ್ಯ ಕೊಟ್ಮೇಲೆ ಒಬ್ಬೊಬ್ಬರಾಗಿ ನನ್ನ ಹಿಂದೆ ಬಂದು ನಿಂತ್ರು.
ಒAದ್ ಸಾರಿ ಹೊಟ್ಟೆಗಿಲ್ಲದ ಹುಲಿ ಕ್ವಾಪದಿಂದ ಗರ್ಜಿಸಾಕ್ಕೆ ಸುರು ಮಾಡ್ತು. ಮುಂದಕ್ಕೆ ಹೊಂಟಿದ್ದ ಹುಲಿ ಹಿಂದಕ್ಕೆ ತಿರುಕ್ಕೊಂಡು ನಿಂತ್ಬುಡಾದಾ! ಅಂದರೆ ಮುಖ ನೋಡ್ಬೇಕಿತ್ತು ಸ್ವಾಮಿ. ಹಸಿದಹುಲಿ ಮುಖ ಕೆಂಪಗೆ ಕಾದೋಗದೆ. ಜೊತೆಗೆ ಮುಖಕ್ಕೆ ಬಿಸಿಲು ಬ್ಯಾರೆ ಬಿದ್ದು ಇನ್ನೂ ಕೆಂಪಗೆ ಕಾಣಿಸ್ತದೆ. ಕಣ್ಣುಗಳು ಗರಗರ ತಿರುಗ್ತಾಯಿವೆ. ಮೈಮೇಲಿನ ಪಟ್ಟೆಗಳು ಮಿಂಚ್ತಾವೆ. ಬಾಯಿ ಕಟ್ಟಲ್ದೆಯಿದ್ರೆ ಇಷ್ಟೊತ್ತಿಗೆ ನಾಕಾರು ಎಣ ಉರುಳಿಸ್ಬುಡ್ತಿತ್ತು ಸೋಮಿ. ಆದ್ರೆ ಅದ್ಕೆ ಆ ಧೈರ್ಯ ಬರದೆ ಕಾಡಿನ ಕಡೆ ಮುಖ ಮಾಡಿದ್ದೇ ತಡ ನಮ್ ಜನ ಬಿಟ್ಟಾರ? ರಂಡೋಲು, ತಮ್ಮಟೆ ಬಡಿಯಾಕೆ ಹತ್ತಿದ್ದೆ. ಈ ಜನ ಬುಡವಲ್ರು ಅಂತಾ ತಿಳ್ಕಂಡ ಹುಲಿ ನೆಲಕ್ಕೂರಿ ಕೂತು ಚರಪರ, ಚರಪರ ಅಂತಾ ಐದು ನಿಮ್ಸ ಮೈ ಉಜ್ಕಂಡ್ತು. ಅದೇನಾಯ್ತೋ ಯಾನೊ ಎದ್ದದ್ದೆ ಕಾಡಿನ ತವ್ಕೆ ನಡೆದೇಬುಡ್ತು.
ಓ ಈ ಜನಕ್ಕೂ ತಮಾಷೆ ಸಾಕು ಅನ್ನಿಸ್ತೋ ಯಾನೊ! ಸಾಕು ಬನ್ರಪ್ಪ, ಇನ್ನು ಹುಲಿ ಹಳ್ಳಿ ಕಡೆ ಮುಖ ಮಡ್ಗೊ ಹಂಗಿಲ್ಲ ಎಂದದ್ದೇ ತಡ ಕೊಂಬುಕಹಳೆ ಊದುತ್ತಾ ಊರು ಕಡೆ ಹೊಂಟ್ರು.
ಹದಿನೈದು ದಿನ ಆಯ್ತು ನೋಡಿ ಸೋಮಿ, ಆ ಹುಲಿ ಹಳ್ಳಿ ಕಡೆ ತಲೆ ಹಾಕ್ನಿಲ್ಲ. ಅಲ್ಲಾ! ಆನೆ ಗಾತ್ರದ ಹುಲಿ ಹೊಟ್ಟೆಗಿಲ್ಲದೆ ಬದುಕ್ತಾದ? ಹೀಗೆ ಯೋಚಿಸೋದ್ರಲ್ಲಿ ಒಂದು ತಿಂಗಳು ಕಳೆದೇಹೋಯಿತು. ಒಂದಿನ ಬೆಟ್ಟದ ಮೇಲಿಂದ ಇಳಿದು ಬಂದ ರೇಂಜ್ ಆಪೀಸ್ರು ಹೇಳಿದ್ ಕೇಳಿ ಊರಿಗೆ ಊರೇ ದಂಗಾಗೋಯ್ತು. ಹಸಿವು ತಡೀಲಾರ್ದೆ ಭಾರಿ ಗೋಣಿಮರದ ಕೆಳಗೆ ಸತ್ ಬಿದ್ದೋಗಿತ್ತಂತೆ.
ಇದು ಚಿಕ್ಕವರಾಗಿದ್ದಾಗ ನಮ್ಮಪ್ಪನ ಬಾಯಿಂದ ಕೇಳಿದ ಕಥೆ. ಆದರೆ ಹುಲಿಗೆ ಆಹಾರ ತಿನ್ನಲಾರದಂತಹ ಸ್ಥಿತಿಗೆ ತರುವಂತಹ ಬಾಯಿಕಟ್ಟುವ ಮಂತ್ರ ಹಾಕಲು ಸಾಧ್ಯವೇ? ಮಾಟ-ಮಂತ್ರ ಕಲಿತವರಿಗೆ ಇದು ಸಾಧ್ಯವೋ ಏನೋ! ಇದು ನಡೆದ ಕಥೆ ಅಂತ ಅಪ್ಪ ಹೇಳಿದ್ದನ್ನು ನಿಮ್ಮ ಮುಂದಿಟ್ಟಿದ್ದೇನೆ. ನಂಬುವುದು ಬಿಡುವುದು ನಿಮಗೆ ಬಿಟ್ಟಿದ್ದು.