ಚೊಂಬುಗಳು ಒಂದೆಡೆ ಸಮೃದ್ಧಿಯ ಸಂಕೇತವಾದರೆ, ಇತ್ತೀಚಿನ ಚಿತ್ರಗೀತೆಗಳಲ್ಲಿ ‘ಚಂಬೋ ಚಂಬೋ ಖಾಲಿ ಚಂಬೋ, ನನ್ನ ತಲೆ ಎಮ್ಟಿ ಚಂಬೋ…’ ಎಂಬ ಉಪೇಂದ್ರರ ಸೂಪರ್ ರಂಗಾದ ಸಾಲುಗಳು, ‘ಸ್ನಾನಕೆ ನಿಂತ್ರೆ ಚೊಂಬಿಗೆ ಟ್ಯಾಕ್ಸು…’ ಎಂಬ ಜಿಎಸ್ಟಿ ಬಗೆಗಿನ ಭಟ್ಟರ ವ್ಯಂಗ್ಯ, ‘ಮಂಜುನಾಥನ ನಂಬು… ಅದರ್ ವೈಸ್ ಕೈಗೆ ಚೊಂಬು ಚೊಂಬು…’ ಎಂಬ ಕಾಸರಗೋಡಿನ ಶಾಲೆಯ ಗೀತೆಗಳಲ್ಲಿ ಚೊಂಬು ಅವನತಿಯ ಸಂಕೇತವಾಗಿಯೂ ಇಂದಿನ ವ್ಯವಸ್ಥೆಯ ವ್ಯಂಗ್ಯವಾಗಿಯೂ ಬಿಂಬಿತವಾಗಿರುವುದು.

ಶಿಲಾಯುಗದ ಜನರು ತಮ್ಮ ಆಯುಧ ಉಪಕರಣಗಳನ್ನು ಕಲ್ಲು, ಮೂಳೆ, ಮರ, ಕೊಂಬಿನಂತಹ ವಸ್ತುಗಳಿಂದ ತಯಾರಿಸಿ ಬಳಸುತ್ತಿದ್ದರು. ನಾಗರಿಕತೆ ಬೆಳೆದಂತೆ ಮೆಟಲ್ ಏಜ್ ಎಂಬ ಲೋಹಯುಗಕ್ಕೆ ಕಾಲಿರಿಸಿದ ಮನುಷ್ಯ ಲೋಹವನ್ನು ಬಳಸಿ ತರಹೇವಾರಿ ವಸ್ತುಗಳನ್ನು ತಯಾರಿಸುತ್ತ ಹೋದಂತೆ ಅಡುಗೆಮನೆಗೆ ಹಿತ್ತಾಳೆ, ಕಂಚು, ತಾಮ್ರ ನಂತರ ಸ್ಟೀಲಿನ ಪಾತ್ರೆ-ಪಡಗಗಳು ಕಾಲಿರಿಸಿದವು. ಅದರಲ್ಲೆಲ್ಲ್ಲ ಹ್ಯಾಂಡಿಯಾಗಿದ್ದ ವಸ್ತು ಎಂದರೆ ಅದು ಚೊಂಬು ಅರ್ಥಾತ್ ಚಂಬು. ಹೊರಗೆ ದಣಿದು ಬಂದ ಗಂಡಸರು ಕಾಲು ತೊಳೆದೇ ಒಳಬರಬೇಕೆಂಬ ನಿಯಮವಿದ್ದುದರಿಂದ ಬಾಗಿಲಲ್ಲೇ ನೀರು ತುಂಬಿದ ಚೊಂಬಿನೊಂದಿಗೆ ಚೆಂದದ ನಗೆ ಚೆಲ್ಲುತ್ತಿದ್ದ ಗೃಹಿಣಿಯರು ಅಂದಿನ ಡೊಮೆಸ್ಟಿಕ್ ರಿಸೆಪ್ಷನಿಸ್ಟ್ಗಳು. ಕಾರ್ಯೇಷು ದಾಸಿ, ಕರಣೇಷು ಮಂತ್ರಿ – ಎಂಬ ಸ್ತ್ರೀ ಸಹಭಾಗಿತ್ವದ ಆರು ಸಿದ್ಧಸೂತ್ರಗಳಲ್ಲಿ ಈ ಸ್ವಾಗತಕಾರಿಣಿಯ ಪಾತ್ರವೂ ಒಂದು ಉಪಸೂತ್ರ. ಚೊಂಬಿನೊಂದಿಗಿನ ಅವರ ಆ ನಗುವಿಗೆ ಹೊರಗೆ ದುಡಿದು ಬಂದವರ ದಣಿವನ್ನು ತಣಿಸುವ ಶಕ್ತಿ ಇತ್ತು ಎಂಬ ನಂಬಿಕೆಯಿತ್ತು. ಇಂದೂ ಕೂಡಾ ವಿದ್ವಾಂಸರು, ಸಂತರು, ಮಹಾತ್ಮರು ಆಗಮಿಸಿದಾಗ ಸಾಂಪ್ರದಾಯಿಕವಾಗಿ ಅಲಂಕರಿಸಿಕೊಂಡ ಸುಂದರಿಯರು ಪೂರ್ಣಕುಂಭವೆAಬ ಅಲಂಕೃತ ಚೊಂಬನ್ನು ಹೊತ್ತು ಮುಖ್ಯದ್ವಾರದಲ್ಲಿ ಚೆಂದದ ನಗುವಿನೊಂದಿಗೆ ಸ್ವಾಗತಿಸುವುದುಂಟು. ಚಂಬೋ ಚಂಕರ!
ಈ ಚೊಂಬು, ಕುಂಭಗಳೊಂದಿಗೆ ಎದುರುಗೊಳ್ಳುವ ಸಂಪ್ರದಾಯವೇ ಮೊಡಿಫೈ ಆಗಿ ಇಂದಿನ ಚಿಯರ್ ಗರ್ಲ್ಸ್ ಎಂಬ ಹೊಸ ಸಂಸ್ಕೃತಿ ಸೃಷ್ಟಿಯಾಗಿರಬಹುದೆಂಬ ಗುಮಾನಿ ನನ್ನದು. ಆ ಸಾಂಪ್ರದಾಯಿಕ ಉಡುಗೆಗೆ ಸಂಪೂರ್ಣ ವ್ಯತಿರಿಕ್ತವಾದ ಔಟ್ಫಿಟ್ನೊಂದಿಗೆ ಕೈಯಲ್ಲಿ ಮಿನುಗುವ ಮಲ್ಟಿಕಲರ್ಸ್ ಪೋಮ್ ಪೋಮ್ ಹಿಡಿದ ಚಿಯರ್ ಗರ್ಲ್ಸ್ ವಿವಿಧ ಸ್ಲೋಗನ್ ಬಳಸಿ ನರ್ತಿಸುತ್ತ ಕ್ರಿಕೆಟ್ ಆಡಲು, ನೋಡಲು ಬಂದವರನ್ನು ವಿಭಿನ್ನ ರೀತಿಯಲ್ಲಿ ಆಕರ್ಷಿಸಿ ಹುರಿದುಂಬಿಸುವರು. ಅವರ ಪ್ರೋತ್ಸಾಹಕ್ಕೆ ಆಟಗಾರರು ಓವರ್ ಮೋಟಿವೇಟ್ ಆಗಿ ಏಕಾಗ್ರತೆ ಕಳೆದುಕೊಂಡರೆ ಬೆಟ್ ಮಾಡಿದವರಿಗೂ, ಟಿಕೆಟ್ ಕೊಂಡವರಿಗೂ ಚೊಂಬೇ ಚೊಂಬು! ಆಟಗಾರರ ಪ್ರದರ್ಶನ ನೀರಸವಾದಾಗ ಪ್ರೇಕ್ಷಕರ ಪೇಶೆನ್ಸ್ ಬ್ಯಾಲೆನ್ಸ್ ಮಾಡುವ ಸವಾಲು ಚಿಯರ್ ಗರ್ಲ್ಸ್ನದ್ದು. ಈ ಹುರಿದುಂಬಿಸುವ ಹುಡುಗಿಯರ ಅಂದವನ್ನು ಕಣ್ತುಂಬಿಕೊಳ್ಳುತ್ತ ಅವರ ಗ್ಲಾö್ಯಮರ್ನೊಂದಿಗೆ ತಮ್ಮ ನಿರೀಕ್ಷೆಯನ್ನು ಸರಿದೂಗಿಸಿಕೊಳ್ಳುತ್ತ ಕೆಲವು ಮಂದಿ ಸಮಾಧಾನಗೊಳ್ಳುವುದಿದೆ.
ಗಾತ್ರ ಚಿಕ್ಕದಾದರೂ ಚೊಂಬಿನ ಪಾತ್ರ ಹಿರಿದು. ಕುಡಿಯುವ ನೀರಿನಿಂದ ಮೊದಲ್ಗೊಂಡು ಸ್ನಾನ ಶೌಚದವರೆಗೂ ಇದರದ್ದು ಬಿಡುವಿಲ್ಲದ ಬಳಕೆ. ಇದರಲ್ಲೇ ಸ್ವಲ್ಪ ದೊಡ್ಡದು ಬಿಂದಿಗೆಯಾದರೆ, ಚಿಕ್ಕದು ಮಿಳ್ಳೆ. (ಚಮಚಕ್ಕೂ ಕೆಲವರು ಮಿಳ್ಳೆ ಎನ್ನುವುದಿದೆ.) ಚೊಂಬಿನ ದೊಡ್ಡಮ್ಮ ಎನ್ನಬಹುದಾದ ಬಿಂದಿಗೆಯದೂ ದೊಡ್ಡ ಇತಿಹಾಸ. ‘ತಾರಕ್ಕ ಬಿಂದಿಗೆ, ನಾ ನೀರಿಗೋಗುವೆ ತಾರೇ ಬಿಂದಿಗೆಯ’ ಎಂಬ ಸುಂದರ ಗೀತೆಗೆ ನರ್ತಿಸುವ ಚಿಣ್ಣರು ಬಿಂದಿಗೆ ಎತ್ತುವ ಶ್ರಮ ಬೇಡವೆಂದು ಚೊಂಬನ್ನೇ ತಮ್ಮ ಸೊಂಟ, ತಲೆಯ ಮೇಲಿರಿಸಿಕೊಂಡು ವಯ್ಯಾರ ತೋರುವುದಿದೆ. ಮಿಳ್ಳೆ ಎಂಬ ಜೂನಿಯರ್ ಚಂಬುಗಳನ್ನು ಅದರ ಚಿಕ್ಕಮ್ಮ ಎಂದೂ ಹೇಳಬಹುದು. ಒಟ್ಟಾರೆ ಚರಿಗೆ, ಚವರಿಗೆ, ಕುಂಭ, ಕೊಡಪಾನಗಳೆಲ್ಲಾ ಚೊಂಬಿನ ಕುಟುಂಬಕ್ಕೇ ಸೇರಿದಂತವುಗಳು. ಇವೇ ಅಂದಿನ ಪೀಳಿಗೆಯವರ ಡಂಬಲ್ಸ್, ಬಾರ್ಬೆಲ್ಸ್, ವೆಯ್ಟ್ಪ್ಲೇಟ್ಸ್ ರೂಪದ ಫಿಟ್ನೆಸ್ ಪರಿಕರಗಳು. ಅಂದಿನವರ ಕಾಫಿ ಸೇವನೆಯೂ ಚೊಂಬು ಮಿಳ್ಳೆಗಳಲ್ಲೆ! ಮಾನವನ ಜೀರ್ಣಶಕ್ತಿ ಕುಂದಿದAತೆ ಲೋಟಗಳು ತಲೆಯೆತ್ತಿದವು. ಅವೂ ಪ್ರಾರಂಭದಲ್ಲಿ ಒಂದು ಗೇಣಿನಷ್ಟಿದ್ದು ನಂತರ ತಮ್ಮ ಗಾತ್ರದಲ್ಲಿ ಕುಗ್ಗುತ್ತ ಬಂದು ಇಂದು ಒಂದೂವರೆ ಇಂಚಿನಷ್ಟಾಗಿವೆ.
ಚೊಂಬಿಗೆ ನೀರು ತುಂಬಿಸಿ ಅಲಂಕರಿಸಿ ಭಗವಂತನ ಸಾನಿಧ್ಯದಲ್ಲಿರಿಸಿದರೆ ಅದೇ ಕಳಸ. ಇದು ಸಮೃದ್ದಿಯ ಸಂಕೇತ. ಅವರವರ ಆರ್ಥಿಕ ಪರಿಸ್ಥಿತಿಗೆ ತಕ್ಕಂತೆ ಕಳಸದ ಚೊಂಬುಗಳು ಕೂಡಾ ತಾಮ್ರ, ಹಿತ್ತಾಳೆ, ಬೆಳ್ಳಿ, ಸ್ಟೀಲ್ನಲ್ಲಿ ಪ್ರತಿಷ್ಠಾಪನೆಗೊಳ್ಳುವವು. ಗ್ರಹಪ್ರವೇಶದ ದಿನಗಳಂದು ಐದು ಜನ ಮುತ್ತೈದೆಯರು ಲಕ್ಷ್ಮಿ ಸ್ವರೂಪಿಗಳಾಗಿ ನೀರು ತುಂಬಿದ ಚೊಂಬು ಅಥವಾ ಬಿಂದಿಗೆಯೊಂದಿಗೆ ಬ್ರಾಹ್ಮಿ ಮುಹೂರ್ತದಲ್ಲಿ ಒಳಗಡೆ ಇರಿಸುವ ಪದ್ಧತಿ ಇದೆ. ಮದುವೆಮನೆಗಳಲ್ಲೂ ಹೀಗೆಯೇ ಹೊಂಬಾಳೆಯಿಂದ ಅಲಂಕೃತಗೊಂಡ ಚೊಂಬನ್ನು ಹಿಡಿದು ಸಡಗರದಿಂದ ಸರಬರನೆ ಓಡಾಡುವ ಕಳಸಗಿತ್ತಿಯರನ್ನೂ ಕಾಣಬಹುದು. ಇತ್ತೀಚಿನ ದಿನಗಳಲ್ಲಿ ಫಾಸ್ಟ್ಫುಡ್ ಮೆದ್ದು ಉದರದಲ್ಲಿ ಮಧು ಕೈಟಭರು ನಾಟ್ಯವಾಡಿ ನಲುಗಿಸುತ್ತಿರಲು ತಾಮ್ರದ ಚೊಂಬಿನಲ್ಲಿ ಶೇಖರಿಸಿಟ್ಟ ನೀರು ಇದನ್ನು ಶಮನಗೊಳಿಸುವುದೆಂಬ ತಿಳಿವಳಿಕೆ ಮೂಡಿದೆ. ಇದರಿಂದ ಔಟ್ಡೇಟೆಡ್ ವಸ್ತುಗಳೆಂಬ ಹಣೆಪಟ್ಟಿ ಹೊತ್ತು ಗೋಡೌನ್ ಹಾಗೂ ಅಟ್ಟಗಳಲ್ಲಿ ಸೇರಿಹೋಗಿದ್ದ ತಾಮ್ರದ ಚೊಂಬು, ಬಿಂದಿಗೆಗಳೆಲ್ಲ ಪತಂಜಲಿ ಪೀತಾಂಬರಿ ಪುಡಿಗಳಿಂದ ನವಚೈತನ್ಯ ಪಡೆದು ನವೀಕೃತ ಕಿಚನ್ಗಳಲ್ಲೂ ಸ್ಥಾನ ಪಡೆದಿವೆ. ‘ಇವನಾರವ ಇವನಾರವ…’ ಎಂದು ಅಸಡ್ಡೆಯಿಂದ ಮೂಲೆಗೆ ತಳ್ಳಲ್ಪಟ್ಟಿದ್ದ ತಾಮ್ರ, ಹಿತ್ತಾಳೆಯ ಪರಿಕರಗಳು ಇಂದು ಬಹುಬೇಡಿಕೆ ಪಡೆದು ‘ಇವ ನಮ್ಮವ… ಇವ ನಿಮ್ಮವ…” ಎಂದು ಹೆರಿಟೇಜ್ ರೆಸಾರ್ಟ್, ಹೋಮ್ ಸ್ಟೇ, ಫಾರ್ಮ್ಹೌಸ್ಗಳಲ್ಲಿ ಅಲಂಕೃತಗೊಂಡು ಆಧುನಿಕ ಜಗತ್ತನ್ನು ಆಕರ್ಷಿಸುತ್ತಿವೆ.
ಶ್ರಾವಣಮಾಸದ ಪ್ರಥಮ ಶನಿವಾರಗಳಂದು ವಟುಗಳು ಕೈಯಲ್ಲಿ ಹೊಳೆಯುವ ತಾಮ್ರದ್ದೋ, ಹಿತ್ತಾಳೆಯದೋ ಚೊಂಬು ಹಿಡಿದು ಹಣೆಗೂ ಚೊಂಬಿಗೂ ನಾಮ ಏರಿಸಿ ಮನೆಮನೆಗೂ ತೆರಳಿ ಹೊಸ್ತಿಲು ಬಳಿ ನಿಂತು ‘ಶ್ರೀನಿವಾಸಾಯ ಮಂಗಳಂ…” ಎನ್ನುತ್ತ ಪಡಿಬೇಡುವುದನ್ನು ನೋಡಿದ್ದೆವು. ಇಂದೂ ಕೆಲವೆಡೆ ಇದು ಚಾಲ್ತಿಯಲ್ಲಿರಬಹುದು. (ಹಲವು ಸರ್ಕಾರೀ ಕಚೇರಿಗಳಲ್ಲೂ ಬೇಡುವ ಚೊಂಬು ಹಾಗೂ ಹಾಕುವ ನಾಮಗಳು ಇರುತ್ತವೆಯಾದರೂ ಅವು ಅಗೋಚರ.) ಹಾಗೆ ಅಂಜುತ್ತಲೇ ಪಡಿಬೇಡಲು ಬರುತ್ತಿದ್ದ ವಟುಗಳಿಗೆ ಹೆಂಗಳೆಯರು ಚೊಂಬಿನ ತುಂಬಾ ಅಕ್ಕಿ, ಬೆಲ್ಲ, ದಕ್ಷಿಣೆ ನೀಡಿ ಹರಸುತ್ತಿದ್ದರು. ಹೀಗೆ ಹಣ ಸಂಗ್ರಹಿಸುವ ಗೋಲಕದಂತಿದ್ದ ಚೊಂಬುಗಳು ಇಂದು ಹೆಡ್ಕಾಯಿನ್ ಬಾಕ್ಸ್ಗಳೆಂಬ ಹೊಸ ಹೆಸರಿನಲ್ಲಿ ಬೋರಲಾದ ಚೊಂಬಿನ ಸ್ವರೂಪದಲ್ಲಿದ್ದು ಅದಕ್ಕೊಂದು ಸ್ಮೈಲಿ (ಎಮೋಜಿ)ಯನ್ನು ಚಿತ್ರಿಸಿ ಅದರ ಹಣೆಯ ಭಾಗದಿಂದ ಹಣ ಜಾರಿಸುವ ವ್ಯವಸ್ಥೆ ಇರುತ್ತದೆ. ಚಂಬೋ ಲಾಕರ!
ಬಿಸ್ಲೇರಿ ಬಾಟಲುಗಳು, ವಾಟರ್ಕ್ಯಾನ್ಗಳು ಬರುವ ಮೊದಲು ಪ್ರವಾಸದ ಸಮಯದಲ್ಲಿ ಮುಚ್ಚಳವಿರುವ ಚಂಬುಗಳಲ್ಲಿ ಕುಡಿಯುವ ನೀರನ್ನು ಕೊಂಡೊಯ್ಯುತ್ತಿದ್ದರು. ಇವು ಋಷಿಮುನಿಗಳ ಕಮಂಡಲುವಿನ ಆಕಾರದಲ್ಲಿದ್ದು ನಮ್ಮ ಆಡುಭಾಷೆಯಲ್ಲಿ ರೈಲು ಚೊಂಬುಗಳೆಂದು ಪ್ರಖ್ಯಾತವಾಗಿದ್ದವು. ನಮ್ಮ ಮನೆಯ ಪಕ್ಕದ ಮಲೆಯಾಳಿ ಕುಟುಂಬದವರು ಮಾತನಾಡುತ್ತಿದ್ದರೆ ಖಾಲಿ ಚೊಂಬಿನೊಳಗೆ ಒಂದೆರಡು ಕಲ್ಲಿರಿಸಿ ಅಲ್ಲಾಡಿಸಿದಂತೆ ಧ್ವನಿಸುತ್ತಿರುತ್ತದೆ. ಅಲ್ಲೇ ಪಾಸ್ ಆಗುವ ಹಲವರು ಆ ಚೊಂಬಿನೊಳಗಿನ ಧ್ವನಿಯ ಸಾರವನ್ನರಿಯದೆ ಗೊಂದಲದಿಂದ ತಲೆ ತುರಿಸುತ್ತ ಸಾಗುವರು. ಹೀಗೆ ಆಗಾಗ ತುರಿತಕ್ಕೊಳಗಾಗಿ ಅಲ್ಲಲ್ಲಿ ಖಾಲಿ ಸೈಟಿನಂತಾಗುವ ಅರೆಬಕ್ಕ ತಲೆಯನ್ನು ಪೂರ್ತಿ ಚೊಕ್ಕಗೊಳಿಸಿ ಹೊಳೆಯುವ ತಾಮ್ರದ ಚೊಂಬಿನಂತಾಗಿಸಿಕೊಳ್ಳುವುದೂ ಇಂದಿನ ಟ್ರೆಂಡ್. ಇಂತಹ ಹೊಳೆಯುವ ಗಟ್ಟಿಬುರುಡೆಗಳೇ ಘಟಂನ ಸೃಷ್ಟಿಯ ಮೂಲವಿರಬಹುದು! ಚೊಂಬಿಗಿಂತ ಸ್ವಲ್ಪ ದೊಡ್ಡ ಗಾತ್ರದ ಘಟಂ ವಿಶೇಷ ಗುಣವುಳ್ಳ ಮಣ್ಣು ಹಾಗೂ ಕಬ್ಬಿಣದ ಪುಡಿಯ ಮಿಶ್ರಣದಿಂದ ತಯಾರಿಸಲ್ಪಡುವ ತಾಳವಾದ್ಯ. ಅಂಗೈ ಹಾಗೂ ಬೆರಳುಗಳಿಂದ ನುಡಿಸುವ ಈ ವಾದ್ಯಕ್ಕೆ ಬಹುಶಃ ತಟ್ಟಿಸಿಕೊಳ್ಳುತ್ತಿದ್ದ ತಲೆಗಳೇ ಪ್ರೇರಣೆ.
ಚೊಂಬುಗಳು ಒಂದೆಡೆ ಸಮೃದ್ಧಿಯ ಸಂಕೇತವಾದರೆ, ಇತ್ತೀಚಿನ ಚಿತ್ರಗೀತೆಗಳಲ್ಲಿ ‘ಚಂಬೋ ಚಂಬೋ ಖಾಲಿ ಚಂಬೋ, ನನ್ನ ತಲೆ ಎಮ್ಟಿ ಚಂಬೋ…’ ಎಂಬ ಉಪೇಂದ್ರರ ಸೂಪರ್ ರಂಗಾದ ಸಾಲುಗಳು, ‘ಸ್ನಾನಕೆ ನಿಂತ್ರೆ ಚೊಂಬಿಗೆ ಟ್ಯಾಕ್ಸು…’ ಎಂಬ ಜಿಎಸ್ಟಿ ಬಗೆಗಿನ ಭಟ್ಟರ ವ್ಯಂಗ್ಯ, ‘ಮಂಜುನಾಥನ ನಂಬು… ಅದರ್ ವೈಸ್ ಕೈಗೆ ಚೊಂಬು ಚೊಂಬು…’ ಎಂಬ ಕಾಸರಗೋಡಿನ ಶಾಲೆಯ ಗೀತೆಗಳಲ್ಲಿ ಚೊಂಬು ಅವನತಿಯ ಸಂಕೇತವಾಗಿಯೂ ಇಂದಿನ ವ್ಯವಸ್ಥೆಯ ವ್ಯಂಗ್ಯವಾಗಿಯೂ ಬಿಂಬಿತವಾಗಿರುವುದು.
ಹಿಂದೆ ಹಳ್ಳಿಗಳಲ್ಲಿ ಹೆಂಗಳೆಯರು ಮೂಡಣದಿ ರವಿ ಮೂಡುವ ಮುನ್ನವೇ ನೀರು ತುಂಬಿದ ಪ್ಲಾಸ್ಟಿಕ್ ಚಂಬುಗಳೊಂದಿಗೆ ಸಾಮೂಹಿಕವಾಗಿ ಬಯಲಿಗೋ ಹಿತ್ತಲಿಗೋ ಹೊರಡುತ್ತಿದ್ದರು. ಬೆಳ್ಳನೆ ಬೆಳಗಾಗುವಷ್ಟರಲ್ಲಿ ಖಾಲಿ ಚೊಂಬುಗಳೊಂದಿಗೆ ವಾಪಸ್ಸಾಗುತ್ತಿದ್ದರು. ಎರಡನೇ ಶಿಫ್ಟ್ನಲ್ಲಿ ಪ್ರಾರಂಭವಾಗುತ್ತಿದ್ದ ಪುರುಷರ ಚೊಂಬಿನ ಪರ್ವಕ್ಕೆ ಪೂರ್ವದಿಂದ ಭಾಸ್ಕರನೂ ಜೊತೆಯಾಗುತ್ತಿದ್ದ. ಹೀಗೆ ಬೆಳಗಿನ ಮೊದಲ ಭಾಗದಲ್ಲಿ ಎಲ್ಲೆಲ್ಲೂ ಚೊಂಬುಗಳದ್ದೇ ಪಾರಮ್ಯ. ಆ ದಿನಗಳು ನಿಜಕ್ಕೂ ಚೊಂಬುಗಳ ಸುವರ್ಣಯುಗ! ನೈರ್ಮಲ್ಯ ಆಂದೋಲನ ಅಭಿಯಾನಗಳು, ಬಯಲು ಶೌಚಮುಕ್ತ ಭಾರತ ನಿರ್ಮಾಣವಾಗಿ ಮನೆಮನೆಗಳಲ್ಲಿ ಶೌಚಾಲಯಗಳು ತಲೆಯೆತ್ತಿ ಚೊಂಬುಗಳ ನಸುಕಿನ, ಮುಸುಕಿನ ಮೆರವಣಿಗೆ ಅಂತ್ಯ ಕಾಣುವಂತಾಯಿತು. ಶೌಚಾಲಯಗಳು ಆಧುನೀಕರಣಗೊಂಡಂತೆ ಶವರ್, ಕಮೋಡ್, ಫಾಸೆಟ್ಗಳು, ಹ್ಯಾಂಡ್ ಶವರ್ಗಳು ಸ್ಥಾನಪಡೆದು ಬಚ್ಚಲಿನಲ್ಲೂ ಚಂಬುಗಳ ಆದ್ಯತೆ ಕಡಮೆಯಾಯಿತು. ಇನ್ನು ಗ್ರಾಮೀಣ ಪ್ರದೇಶಗಳಲ್ಲೂ ತಲೆ ಎತ್ತಿದ ಶೌಚಾಲಯಗಳಲ್ಲಿ ಹಿಡಿ ಇರುವ ಮಗ್ಗಳು ಬಳಕೆಗೆ ಬಂದು ಚಂಬುಗಳು ಮರೆಯಾದವು. ಭೌತಿಕವಾಗಿ ಚಂಬುಗಳು ಮರೆಯಾಗುತ್ತಿದ್ದರೂ ಹಾಸ್ಯ, ವ್ಯಂಗ್ಯ ವಿಡಂಬನೆಗಳಿಗೆ ಇಂಬು ಕೊಡುವ ಚೊಂಬುಗಳು ಆಗಾಗ ಚತುರರ ಚಾಟು ವಾಕ್ಯಗಳ ನಡುವೆ ಧ್ವನಿಸುತ್ತಿರುತ್ತವೆ.