
ನೆಹರು–ಚರಣಸಿಂಗ್ ಸಂಪುಟದಲ್ಲಿ ಕೃಷಿ ಉಪಸಚಿವರಾಗಿಯೂ ಅನಂತರ ರಾಜ್ಯ ಸಚಿವರಾಗಿಯೂ ಕೃಷ್ಣಪ್ಪನವರು ಮಾಡಿದ ಸಾಧನೆಗಳು ಚರಿತ್ರಾರ್ಹವೆನಿಸಿದವು. ಹಾಲಿನ ಉತ್ಪಾದನೆ ಹೆಚ್ಚಬೇಕಾದುದರ ಅನಿವಾರ್ಯತೆಯನ್ನು ಮನಗಂಡು ಮಿಶ್ರತಳಿ ದನಗಳನ್ನು ಡೆನ್ಮಾರ್ಕಿನಿಂದ ತರಿಸಿದರು. ಸೀಮೆ ಹಸುಗಳನ್ನು ವಿ.ಐ.ಪಿ.ಗಳಂತೆ ವಿಶೇಷ ವಿಮಾನದಲ್ಲಿ ತರಿಸಿದುದೂ ಆ ದಿನಗಳಲ್ಲಿ ರೋಚಕ ಸುದ್ದಿಯಾಗಿತ್ತು; ಹಿಂದೆಂದೂ ಹೀಗೆ ನಡೆದಿರಲಿಲ್ಲ. ಅದರಂತೆ ಹೆಚ್ಚಿನ ಪ್ರಮಾಣದ ಉಣ್ಣೆ ನೀಡುವ ಕುರಿಗಳನ್ನು ಆಸ್ಟ್ರೇಲಿಯದಿಂದ ತರಿಸಿ ಇಲ್ಲಿಯ ರೈತರಿಗೆ ಪರಿಚಯ ಮಾಡಿಸಿದವರು ಕೃಷ್ಣಪ್ಪ. ಹೈನುಗಾರಿಕೆ, ಕುರಿಸಾಕಣೆ ಮೊದಲಾದವಕ್ಕೆ ಅವಶ್ಯವಾದ ತರಬೇತಿ ಕಾರ್ಯಕ್ರಮಗಳನ್ನು ಏರ್ಪಡಿಸಿದವರೂ ಅವರೇ. ಕರ್ನಾಟಕದಲ್ಲಿ […]