ಹಗಲಿಗಿಂತ ಮುಖ್ಯವಾಗಿ ನಿಶ್ಶಬ್ದ ರಾತ್ರಿಯಲ್ಲಿ ಜನಸಮುದಾಯದ ಪ್ರಜ್ಞೆಯನ್ನು ಆಳುವ ಯಕ್ಷಗಾನದ (ಕನ್ನಡದ) ನೆಲವೇ ಆಗಿದ್ದ ಕುಂಬಳೆ–ಕಾಸರಗೋಡು ಪರಿಸರದಿಂದ ಬಂದವರು ಸುಂದರರಾವ್. ತೆಂಕುತಿಟ್ಟು ಯಕ್ಷಗಾನಕ್ಕೆ ಈಗಲೂ ಆ ಭಾಗ ದೊಡ್ಡ ಸಂಖ್ಯೆಯಲ್ಲಿ ಕಲಾವಿದರನ್ನು ಒದಗಿಸುತ್ತಿದೆ. ಆದರೆ ಈಗ ಅಲ್ಲಿ ಭಾಷೆಯೊಂದಿಗೆ ಧರ್ಮೀಯ (ಮತೀಯ) ಆಕ್ರಮಣ ಕೂಡ ನಡೆಯುತ್ತಿದ್ದು, ಯಕ್ಷಗಾನದ ಪ್ರದರ್ಶನಗಳು ನಡೆಯುವುದು, ಆ ಮೂಲಕ ಪ್ರೇಕ್ಷಕ ವರ್ಗದ ಬೆಳವಣಿಗೆಗೆ ದೊಡ್ಡ ಪೆಟ್ಟು ಬೀಳುತ್ತಿದೆ ಎಂದು ಬಲ್ಲ ಸ್ನೇಹಿತರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ತಮ್ಮ ಎಣೆಯಿಲ್ಲದ ಮಾತುಗಾರಿಕೆಯ ಮೂಲಕ ಯಕ್ಷಗಾನ, ತಾಳಮದ್ದಳೆಗಳ ಕ್ಷೇತ್ರಕ್ಕೆ, ಹಾಗೆಯೇ ಕನ್ನಡ ಭಾಷೆ-ಸಂಸ್ಕೃತಿಗಳಿಗೆ ಅಪೂರ್ವ ಸೇವೆ ಸಲ್ಲಿಸಿದ ಕುಂಬ್ಳೆ ಸುಂದರರಾವ್ ಕನ್ನಡ ರಾಜ್ಯೋತ್ಸವದ ತಿಂಗಳಾದ ನವೆಂಬರ್ ಕೊನೆಯ ದಿನ (೨೦೨೨) ನಿಧನ ಹೊಂದಿದರು. ಆ ಕುರಿತು ಸಂತಾಪ ವ್ಯಕ್ತಪಡಿಸಿದ, ಅವರು ಸುದೀರ್ಘ ಕಾಲು ಶತಮಾನ (೧೯೬೯-೯೪) ತಿರುಗಾಟ ನಡೆಸಿದ ಶ್ರೀಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯ ಯಜಮಾನರೂ ಆದ ಧರ್ಮಾಧಿಕಾರಿ ಡಾ|| ಡಿ. ವೀರೇಂದ್ರ ಹೆಗ್ಗಡೆಯವರು ಸುಂದರ ರಾಯರೊಂದಿಗಿನ ಒಂದು ಸಂದರ್ಭವನ್ನು ನೆನಪಿಸಿಕೊಂಡರು.
ಅದು ಸುರತ್ಕಲ್ ವಿಧಾನಸಭಾ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ಆಯ್ಕೆಯಾಗಿ ಮೇಳವನ್ನು ಬಿಡಬೇಕಾಗಿ ಬಂದ ಸಂದರ್ಭ. ಖಾವಂದರನ್ನು ಭೇಟಿ ಮಾಡಿ ಮೇಳದಿಂದ ಹೊರಬರಲು ಅನುಮತಿ ಕೋರಿದ ಸುಂದರರಾಯರು ತಮ್ಮ ಎಂದಿನ ಪ್ರಾಸಬದ್ಧ ಶೈಲಿಯಲ್ಲಿ ಹೀಗೆ ಹೇಳಿದ್ದರಂತೆ: “ಗೆದ್ದರೆ ಎಮ್ಮೆಲ್ಲೆ; ಸೋತರೆ ನಿಮ್ಮಲ್ಲೆ.” ಇದು ಸುಂದರರಾಯರ ಶೈಲಿ. ಮೇಳದ ಯಜಮಾನರಾದ ಹೆಗ್ಗಡೆಯವರಲ್ಲಿ ಅವರಿಗೆ ಅಂತಹ ಆತ್ಮೀಯತೆಯಿತ್ತು; ಮತ್ತು ಖಾವಂದರು ಅದಕ್ಕೆ ಅದೇ ರೀತಿಯಲ್ಲಿ ಸ್ಪಂದಿಸುತ್ತಿದ್ದರು ಎಂಬುದಿಲ್ಲಿ ಉಲ್ಲೇಖಾರ್ಹ.
ಅದಕ್ಕೆ ಕಾರಣ ಇಲ್ಲದಿಲ್ಲ; ಕುಂಬ್ಳೆಯವರು ಅಂತಹ ಜನಪ್ರಿಯ ಕಲಾವಿದರಾಗಿದ್ದರು. ಅವರು ಇದ್ದಾರೆಂದು ಮೇಳದ ಆಟ ನೋಡಲು ಬರುವ ದೊಡ್ಡ ಪ್ರೇಕ್ಷಕ ಗಣವಿತ್ತು. ಧರ್ಮಸ್ಥಳ ಮೇಳವು ರಂಗದ ಮೇಲೆ ತರುತ್ತಿದ್ದ ಪ್ರಸಂಗಗಳ ಪ್ರಮುಖ ಪಾತ್ರಗಳು ಅವರವಾಗಿ ಇರುತ್ತಿದ್ದವು. ಆಯಾ ಪ್ರಸಂಗಗಳ ಸಂದೇಶವನ್ನು ಬಿಂಬಿಸುವ ವೇಷಧಾರಿಗಳಲ್ಲಿ ಒಬ್ಬರು ಅವರಾಗಿರುತ್ತಿದ್ದರು. ಯಕ್ಷಗಾನ ತಿರುಗಾಟಕ್ಕೆ ಅವರು ಬಹುತೇಕ ವಿದಾಯ ಹೇಳಿದ ೧೯೯೪ರಲ್ಲಿ ಕೊನೆಗೊಳ್ಳುವ ೪೧ ವರ್ಷಗಳು ಯಕ್ಷಗಾನದ ‘ಸುವರ್ಣಯುಗ’ ಎಂದರೂ ಸಲ್ಲುತ್ತದೆ. ತೆಂಕು-ಬಡಗು ತಿಟ್ಟುಗಳೆಂಬ ಭೇದವಿಲ್ಲದೆ ಅದೆಷ್ಟೋ ಮಹಾನ್ ಕಲಾವಿದರು ಈ ಅವಧಿಯಲ್ಲಿ ಬಂದು ಹೋಗಿದ್ದಾರೆ. ಅವರಲ್ಲಿ ಕುಂಬ್ಳೆ ಒಬ್ಬರು.
ಹಗಲಿಗಿಂತ ಮುಖ್ಯವಾಗಿ ನಿಶ್ಶಬ್ದ ರಾತ್ರಿಯಲ್ಲಿ ಜನಸಮುದಾಯದ ಪ್ರಜ್ಞೆಯನ್ನು ಆಳುವ ಯಕ್ಷಗಾನದ (ಕನ್ನಡದ) ನೆಲವೇ ಆಗಿದ್ದ ಕುಂಬಳೆ-ಕಾಸರಗೋಡು ಪರಿಸರದಿಂದ ಬಂದವರು ಸುಂದರರಾವ್. ತೆಂಕುತಿಟ್ಟು ಯಕ್ಷಗಾನಕ್ಕೆ ಈಗಲೂ ಆ ಭಾಗ ದೊಡ್ಡ ಸಂಖ್ಯೆಯಲ್ಲಿ ಕಲಾವಿದರನ್ನು ಒದಗಿಸುತ್ತಿದೆ. ಆದರೆ ಈಗ ಅಲ್ಲಿ ಭಾಷೆಯೊಂದಿಗೆ ಧರ್ಮೀಯ (ಮತೀಯ) ಆಕ್ರಮಣ ಕೂಡ ನಡೆಯುತ್ತಿದ್ದು, ಯಕ್ಷಗಾನದ ಪ್ರದರ್ಶನಗಳು ನಡೆಯುವುದು, ಆ ಮೂಲಕ ಪ್ರೇಕ್ಷಕವರ್ಗದ ಬೆಳವಣಿಗೆಗೆ ದೊಡ್ಡ ಪೆಟ್ಟು ಬೀಳುತ್ತಿದೆ ಎಂದು ಬಲ್ಲ ಸ್ನೇಹಿತರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಅದು ಪಕ್ಕಾ ಕನ್ನಡ ನೆಲ ಆಗಿದ್ದಾಗ ೧೯೩೪ರಲ್ಲಿ ತಮ್ಮ ಹೆತ್ತವರ ಐದನೇ ಮಗನಾಗಿ ಸುಂದರ ಜನಿಸಿದರು. ಅವರಿಗೆ ಇಬ್ಬರು ಅಣ್ಣಂದಿರು; ಒಡಹುಟ್ಟು ಒಟ್ಟು ಹತ್ತು ಮಂದಿ. ನಿವೃತ್ತ ಪ್ರಾಧ್ಯಾಪಕ, ರಂಗಭೂಮಿ ಕಲಾವಿದ, ಲೇಖಕ ಡಾ|| ನಾ. ದಾಮೋದರಶೆಟ್ಟಿ ಅವರು ಕೊನೆಯ ತಮ್ಮ. ಮಲೆಯಾಳಿ ಮನೆಮಾತಿನ ಅವರ ಕುಲಕಸುಬು ನೇಯ್ಗೆ; ಪದ್ಮಶಾಲಿ ಅಥವಾ ಶೆಟ್ಟಿಗಾರ್ ಎಂದೂ ಹೇಳುತ್ತಾರೆ.
ಅಜ್ಜನ ವೈಭವ
ಸುಂದರರಾಯರ ಹಿನ್ನೆಲೆಯನ್ನು ಗಮನಿಸುವಾಗ ಎದ್ದುಕಾಣುವ ಒಂದು ಅಂಶವೆಂದರೆ ಅವರ ಅಜ್ಜ (ತಂದೆಯ ತಂದೆ) ಅಯ್ಯಪ್ಪ ಕೋಮರ ಅವರು ಸಮಾಜದಲ್ಲಿ ಹೊಂದಿದ್ದ ಗೌರವದ ಸ್ಥಾನ; ಅದು ಅವರ ಊರಿಗೆ ಸೀಮಿತವಾದುದಲ್ಲ. ಬಹುದೂರವೂ ಅವರ ಕೀರ್ತಿ ಹಬ್ಬಿತ್ತು; ಒಂದು ದೊಡ್ಡ ಸಂಸ್ಥೆಯಂತಹ ಮನೆತನವನ್ನು ಅವರು ನಡೆಸಿದರು. ಕೋಮರ ಅಂದರೆ ದರ್ಶನಪಾತ್ರಿ. ಅವರು ಕುಂಬಳೆ ಸಮೀಪದ ನಾಯ್ಕಾಪಿನ ಭಗವತಿಯ ಪಾತ್ರಿ. ಎಳವೆಯಲ್ಲಿ ಯಕ್ಷಗಾನದ ಗೀಳು ಅಂಟಿಸಿಕೊಂಡು ಮೇಳದ ಜೊತೆ ತಿರುಗಾಟಕ್ಕೆ ಹೋದಾಗ ಅವರಿಗೆ ದೇವಿ ಆವೇಶ ಉಂಟಾಗಿ ಯಾವ ಮಂತ್ರವಾದ, ತಾಯಿತಗಳಿಂದಲೂ ಬಿಡುಗಡೆ ಸಿಗದಿದ್ದಾಗ ಯಕ್ಷಗಾನ ಬಿಟ್ಟು ದೇವಿದರ್ಶನಕ್ಕೆ ತನ್ನನ್ನು ಅರ್ಪಿಸಿಕೊಂಡರಂತೆ. ಅವರ ದರ್ಶನ ನೋಡುವುದಕ್ಕೆ ಬಲುಸೊಗಸು. ಮೈಮೇಲೆ ಆವಾಹನೆಗೊಳ್ಳುವಾಗ ಹೆಜ್ಜೆ, ಹಸ್ತಭಾವ ಅವರದೇ ವಿಶಿಷ್ಟತೆಯಿಂದ ಕೂಡಿರುತ್ತಿತ್ತಂತೆ. ಅದಕ್ಕಿಂತ ಮುಖ್ಯವಾಗಿ ಉಚ್ಚ ಸ್ವರದಲ್ಲಿ ಸ್ಪಷ್ಟಭಾಷೆಯಲ್ಲಿ ಬರುವ ನುಡಿಗಟ್ಟುಗಳು ಹೃದಯದಲ್ಲಿ ಭಕ್ತಿಭಾವವನ್ನು ಮೂಡಿಸುವಂತಿದ್ದವು. ಮುಂದೆ ನಡಾವಳಿಯ ಸಮಯದಲ್ಲಿ ಬೇರೆ ಯಾವುದೇ ಕೋಮರರ ನುಡಿಯಲ್ಲಾಗಲಿ ಆವೇಶದಲ್ಲಾಗಲಿ ಅಂತಹ ಪರಿಣಾಮವನ್ನು ತಾನು ಕಂಡಿಲ್ಲ ಎಂದು ಕುಂಬ್ಳೆ ಸುಂದರರಾಯರು ನೆನಪಿಸಿಕೊಂಡಿದ್ದಾರೆ. (ಅಭಿನಂದನ ಗ್ರಂಥ ‘ಸುಂದರಕಾಂಡ’ದಲ್ಲಿ – ಸಂಪಾದಕರು ಅಮೃತ ಸೋಮೇಶ್ವರ-ರಾಯರ ಸ್ಮೃತಿಸಂಚಯ-ಯಕ್ಷಪಥದ ಯಾತ್ರಿಕ). ಯೋಗ್ಯ ಅಂಗಸೌಷ್ಠವ. ನಡಾವಳಿಯ ದಿನಗಳಲ್ಲಿ ಗೊನೆ ಕಡಿಯುವ ದಿನದಿಂದ ಉತ್ಸವದ ಕೊನೆಯವರೆಗೆ ದೇವಸ್ಥಾನದಲ್ಲಿದ್ದು ಎಲ್ಲ ಕಾರ್ಯಕ್ರಮಗಳಿಗೆ ಮಾರ್ಗದರ್ಶನ ಮಾಡುತ್ತಿದ್ದ ಅವರು ಕಾರ್ಯಪಾಡಿಯ ಚರಿತ್ರೆಯ ಮೂಲಪುರುಷರಾಗಿದ್ದರು.
ಅಯ್ಯಪ್ಪ ಅವರಿಗೆ ಒಂಭತ್ತು ಜನ ಮಕ್ಕಳು; ಏಳು ಗಂಡು, ಇಬ್ಬರು ಹೆಣ್ಣು. ಅವರಿಗೆ ಕುಂಬಳೆ ಪೇಟೆಯಲ್ಲಿ ಜವಳಿ ಅಂಗಡಿಯಿತ್ತು. ಅದಕ್ಕೆ ಒಳ್ಳೆಯ ಹೆಸರಿತ್ತು. ಅವರ ಹಿರಿಯ ಮಗ ಕುಞಿಕಣ್ಣ ಸುಂದರರಾಯರ ತಂದೆ. ಮನೆಯಲ್ಲಿ ಮಗ್ಗಗಳೂ ಇದ್ದವು. ಕುಞಿಕಣ್ಣ ಮನೆ ವಾರ್ತೆಯಲ್ಲಿ ತಂದೆಗೆ ನೆರವಾಗುತ್ತಿದ್ದರು. ಮನೆಯಲ್ಲಿ ಮಲೆಯಾಳಿ ನಾಟಕ ತರಬೇತಿ, ಕಂಬರಾಮಾಯಣದ ವಾಚನ, ಸಂಸ್ಕೃತ ಶ್ಲೋಕಗಳ ಪಠನ ಎಲ್ಲ ಇತ್ತು. ಸುಂದರರಾಯರ ತಾಯಿ ಅಮರಕೋಶದ ಶ್ಲೋಕಗಳನ್ನು ಗುನುಗುತ್ತಿದ್ದರಂತೆ. ಇವರ ಚಿಕ್ಕಪ್ಪ ಎ.ಕೆ. ದೇವದಾಸ ಅವರು ತಂಜಾವೂರಿಗೆ ಹೋಗಿ ಸಂಸ್ಕೃತ ಶಿರೋಮಣಿ ಕಲಿತು ಉಡುಪಿ ಬೋರ್ಡ್ ಹೈಸ್ಕೂಲಿನಲ್ಲಿ ಸಂಸ್ಕೃತ ಅಧ್ಯಾಪಕರಾಗಿದ್ದರು. ಮುಂದೆ ಯಕ್ಷಗಾನಕ್ಕೆ ಬಂದ ಮೇಲೆ ಸುಂದರರಾಯರು ಅವರಿಂದ ಸಂಸ್ಕೃತ ಪಾಠ ಹೇಳಿಸಿಕೊಂಡರು. ಮನೆಯ ಮದುವೆಗಳ ಹೊತ್ತಿಗೆ ಕೆಲಸದವರಿಗೂ ಮದುವೆ ಮಾಡಿಸುವ ಆದರ್ಶವನ್ನು ಅಜ್ಜ ಇರಿಸಿಕೊಂಡಿದ್ದರು. ಕಾರ್ಯಪಾಡಿ ಮನೆಯಲ್ಲಿ ಸುಮಾರು ಐವತ್ತು ಜನ ಇದ್ದರು.
ತಂದೆ ಮಗ್ಗಗಳ ವಿಸ್ತರಣೆ ಮಾಡಿದರು; ಕೆಲವು ಕಾಯಿಲೆಗಳಿಗೆ ಮದ್ದು ಕೊಡುತ್ತಿದ್ದರು. ತಮ್ಮಂದಿರು ಬೇರೆ ಬೇರೆ ಮಾರ್ಗ ಹಿಡಿದರೂ ಮನೆಯ ಖರ್ಚಿನ ಜವಾಬ್ದಾರಿ ದೊಡ್ಡದಿತ್ತು. ತಂದೆ ಜನ ಇರಿಸಿಕೊಂಡು ಬಟ್ಟೆ ಹೊತ್ತು ಮನೆ ಮನೆಗೆ ಹೋಗಿ ಮಾರಾಟ ಮಾಡುವ ಕೆಲಸವನ್ನೂ ಮಾಡಿದರು. ಈ ನಡುವೆ ಮಗ ಸುಂದರನ ಶಾಲಾಶಿಕ್ಷಣ ಸುಗಮವಾಗಿ ಸಾಗಲಿಲ್ಲ; ಮಾತ್ರವಲ್ಲ, ಯಾವ ಮಾರ್ಗ ಹಿಡಿದರೂ ಕುಂಟುವುದೇ ಆಯಿತು. ಮೊದಲಿಗೆ ಡಿ.ವಿ. ಹೊಳ್ಳರು ನಡೆಸುತ್ತಿದ್ದ ನಾಯ್ಕಾಪು ಶಾಲೆಗೆ ಸೇರಿದರು. ಇವರು ಮುಂದೆ ಕುಂದಾಪುರದಲ್ಲಿ ನೆಲೆಸಿ ಯಕ್ಷಗಾನ ಪ್ರಸಂಗಕರ್ತ, ಗ್ರಂಥಕರ್ತರಾದರು. ಡಿ.ವಿ. ಹೊಳ್ಳರ ತಮ್ಮ ಪುತ್ತಿಗೆ ರಾಮಕೃಷ್ಣ ಜೋಯಿಸರು ಸುಂದರರಾಯರಿಗೆ ಮುಂದೆ ಧರ್ಮಸ್ಥಳ ಮೇಳದಲ್ಲಿ ಜೊತೆಯಾದ ಪ್ರಸಿದ್ಧ ಭಾಗವತ ಪುತ್ತಿಗೆ ರಾಘುರಾಮ ಹೊಳ್ಳರ ತಂದೆ.
ಶಾಲೆ ತಪ್ಪಿಸಿ ಓದು
ಎರಡನೇ ಮಹಾಯುದ್ಧದ ಕಾಲದಲ್ಲಿ ಇವರ ವಸತಿಯಿದ್ದ ಶಾಂತಿಪಳ್ಳದ ಮುಂದಿನ ಪ್ರದೇಶ ಮಿಲಿಟರಿ ಕ್ಯಾಂಪಿಗೆ ಸೇರಿತು. ಇವರ ತಂದೆ ಒಮ್ಮೆ ಮಂಗಳೂರಿಗೆ ಸ್ಥಳಾಂತರಗೊಂಡರಾದರೂ ಅಲ್ಲಿ ನೇಯ್ಗೆಗೆ ನೂಲಿನ ಅಭಾವದ ಸಮಸ್ಯೆ ಉಂಟಾದ ಕಾರಣ ಮಂಗಳೂರು ಬಿಟ್ಟು ಉಪ್ಪಳ ಸಮೀಪದ ಅಂಬಾರುವಿಗೆ ಮರಳಿದರು. ಆರನೇ ತರಗತಿಗೆ ಕುಕ್ಕಾರು ಶಾಲೆಗೆ ಸೇರಿದ್ದಾಯಿತು. ಸಮೀಪದ ಮುಳ್ಳಂಗೈನ ಒಂದು ಹೊಟೇಲಿನ ತಿಂಡಿಯ ರುಚಿ ಹತ್ತಿ ಮನೆಯಲ್ಲಿ ಸಣ್ಣಪುಟ್ಟ ಕಳ್ಳತನವೂ ಅಭ್ಯಾಸವಾಯಿತು; ಶಿಕ್ಷೆ ಸ್ವಲ್ಪದರಲ್ಲಿ ತಪ್ಪಿತು. ತಂದೆ ಮತ್ತೆ ಜಾಗ್ರತೆ ಮಾಡಿದರು. ಯುದ್ಧ ಮುಗಿದ ಕಾರಣ ಮಿಲಿಟರಿ ಕ್ಯಾಂಪ್ ರದ್ದಾಗಿ ಇವರು ಊರಿಗೆ ವಾಪಸಾದರು. ಹಾಳಾಗಿದ್ದ ಊರು ಮತ್ತೆ ಜೀವಕಳೆ ತಳೆಯಿತು. ಶಾಲೆಯಲ್ಲಿ ಇಂಗ್ಲಿಷ್ ತಲೆಗೆ ಹತ್ತದೆ (ಆರನೇ ತರಗತಿ) ಉತ್ತರಪತ್ರಿಕೆಯಲ್ಲಿ “ಉತ್ತರಿಸಲು ಕಷ್ಟವಾಗಿದೆ; ಕ್ಷಮಿಸಿ” ಎಂದು ಬರೆದು ಗುರುಗಳಿಂದ ಎಲ್ಲರ ಎದುರು ಮಾನ ಹರಾಜಾಯಿತು. ಆದರೂ ಏಳನೇ ತರಗತಿ ಪಾಸಾಯಿತು. ಕನ್ನಡ ಅಧ್ಯಾಪಕ ಪಂಜಾಜೆ ಶಂಕರಭಟ್ಟರಿಂದ ಸುಂದರ ಕಥೆ-ಕಾದಂಬರಿ ಓದಿಗೆ ಬಹಳ ಪ್ರೇರಣೆ ಪಡೆದರು.
ಎಂಟನೇ ತರಗತಿಯ ಹೊತ್ತಿಗೆ ಬೇರೆ ಪಾಠಗಳನ್ನು ತಪ್ಪಿಸಿಕೊಂಡು ಪಾಳುಬಿದ್ದ ಮಿಲಿಟರಿ ಕ್ಯಾಂಪ್ನಲ್ಲಿ ಕುಳಿತು ಕಥೆ ಪುಸ್ತಕ ಓದಿ ಕಾಲ ಕಳೆದರು. ಅದು ಮನೆಗೆ ತಿಳಿದು ವಿಚಾರಣೆ ನಡೆಯಿತು. ಶಾಲೆಯಂತೂ ಸುಂದರನಿಗೆ ಬಿಲ್ಕುಲ್ ಬೇಡ. ‘ಎರಡನೇ ಅಣ್ಣನಂತೆ ಮನೆಯಲ್ಲಿ ಮಗ್ಗದ ಕೆಲಸ ಮಾಡು’ ಎನ್ನುವ ಆದೇಶ ಬಂತು. (ಮೊದಲ ಅಣ್ಣ ಟೈಲರ್). ಗುಳಿಮಗ್ಗದಲ್ಲಿ ಟವೆಲ್ ನೇಯುವ ಮೂಲಕ ಕೆಲಸ ಆರಂಭವಾಯಿತು. ಆದರೆ ಕೆಲಸ ಕಲಿತರೂ ವೇಗ ಇಲ್ಲ; ನೇಯ್ಗೆಗೆ ಬೇಕಾದ ತಾಳ್ಮೆ ಕೂಡ ಇಲ್ಲ; ಎಷ್ಟು ನೇಯ್ದೆ ಎಂದು ಸಂಜೆ ಲೆಕ್ಕ ಕೊಡಬೇಕು; ಅಂದರೆ ಸಿಕ್ಕಿಬೀಳುವುದೇ. ಪರಿಣಾಮವಾಗಿ ಅದರಲ್ಲಿ ಆಸಕ್ತಿಯೂ ಕುಂದಿತು. ಮಗ್ಗ ಬಿಡಿಸೆಂದು ಭಗವತಿಯಲ್ಲಿ ಪ್ರಾರ್ಥಿಸಿದ್ದಾಯಿತು. ಜೊತೆಗೆ ಮನೆಯಿಂದ ಅರ್ಧ ಕಿ.ಮೀ. ದೂರದ ವಿಷ್ಣುದೇವಸ್ಥಾನದ ಕೆರೆಯ ಬಳಿ ಧ್ಯಾನ ಕೂಡ ಸಾಗುತ್ತಿತ್ತು. ತಂದೆಯ ಆದಾಯ ಇಳಿಮುಖವಾಗಿತ್ತು.
ಆ ಹೊತ್ತಿಗೆ ರೇಶನ್ ತರಲು ಅಪ್ಪ ಅಮ್ಮನಿಗೆ ಹಣ ಕೊಟ್ಟದ್ದು ಕಣ್ಣಿಗೆ ಬಿತ್ತು. ಅದನ್ನು ಹಾರಿಸಿ ಯಾರಿಗೂ ಹೇಳದೆ ಮನೆ ಬಿಟ್ಟ ಸುಂದರ ಕೊಯಮತ್ತೂರಿಗೆ ರೈಲಿನಲ್ಲಿ ಪ್ರಯಾಣಿಸಿದರು. ಹುಡುಗನಾದ ಇವರಲ್ಲಿ ಯಾವ ಕೌಶಲ ಇದೆ? ಸಿಕ್ಕಿದ ಕೆಲಸ ಹೊಟೇಲಲ್ಲಿ ಲೋಟ ಎತ್ತುವುದು ಮತ್ತು ತೊಳೆಯುವುದು. ಅದನ್ನೂ ಸರಿಯಾಗಿ ಮಾಡಲಾಗದೆ ಮಾಲೀಕರು ಹೊರಹಾಕಿದರು. ಅಲ್ಲಿಂದ ಬೆಂಗಳೂರಿಗೆ. ಅಷ್ಟು ಹೊತ್ತಿಗೆ ಕೈ ಖಾಲಿ. ವಿಶ್ವೇಶ್ವರಪುರದ ಒಂದು ಹೊಟೇಲಲ್ಲಿ ಹಿಂದಿನದೇ ಕೆಲಸ; ಪ್ರಗತಿ ಇಲ್ಲ. “ನಿನ್ನ ಸಂಬಳ ನೀನು ಒಡೆಯುವ ಗ್ಲಾಸಿನ ಲೆಕ್ಕಕ್ಕೆ ಸರಿಹೋಗುತ್ತದೆ. ಊರಿಗೆ ಹೋಗಿ ಶಾಲೆಗೆ ಸೇರು” ಎಂದು ಓರ್ವ ಸಹೋದ್ಯೋಗಿ ಸಲಹೆ ನೀಡಿದ.
ಮನೆ ಬಿಟ್ಟು ಹೋದದ್ದು
ಅಷ್ಟು ಹೊತ್ತಿಗೆ ಮನೆಯೇ ಸುಖ ಎನಿಸತೊಡಗಿತ್ತು. ಆದರೆ ಹೋಗುವುದು ಹೇಗೆ? ಕೈ ಖಾಲಿ. ದೊಡ್ಡಣ್ಣನಿಗೆ ಮನಿ ಆರ್ಡರ್ ಮಾಡುವಂತೆ ಪತ್ರ ಬರೆದಾಗ ಹತ್ತು ದಿನದಲ್ಲಿ ಹಣ ಬಂತು. ಮನೆಗೆ ಹೋಗಿ ನಿಂತಾಗ ತಂದೆ ಹೊಡೆಯಲಿಲ್ಲ. ಎರಡನೇ ಅಣ್ಣನಿಂದ ಕದ್ದುಕೊಂಡು ಓಡಿಹೋದವ ಎಂದು ಗಲಾಟೆ ನಡೆಯಿತು. ಅಮ್ಮ ಅಳುತ್ತಿದ್ದರು. ದೊಡ್ಡಣ್ಣ ಮಾಯಿಪ್ಪಾಡಿಯಲ್ಲಿ ಟೈಲರಿಂಗ್ ಕಲಿಯುವುದಕ್ಕೆ ಹಾಕಿದರು. ನಾಲ್ಕೈದು ತಿಂಗಳಾದರೂ ಗುಂಡಿ ಹಾಕುವುದರಲ್ಲೂ ಪರಿಣತಿ ಬರಲಿಲ್ಲ. ಅದರ ಮೇಲೂ ಬೇಸರ ಬಂತು.
ಅಲ್ಲಿದ್ದ ಕೋ-ಆಪರೇಟಿವ್ ಸೊಸೈಟಿಯಲ್ಲಿ ಸುಬ್ಬಯ್ಯ ಶೆಟ್ಟಿ ಎನ್ನುವ ಓರ್ವ ಯಕ್ಷಗಾನ ಕಲಾವಿದ, ಸ್ತ್ರೀವೇಷಧಾರಿ ಇದ್ದು ಸೊಸೈಟಿಯ ಅಂಗಡಿಯನ್ನು ನೋಡಿಕೊಳ್ಳುತ್ತಿದ್ದರು. ಅವರಿಂದ ಯಕ್ಷಲೋಕ, ಯಕ್ಷಗಾನ ಕಲಾವಿದರಿಗೆ ಸಂಬಂಧಿಸಿದ ಕಥೆ ಕೇಳಿ ಬಾಲಕ ಸುಂದರನಿಗೆ ರೋಮಾಂಚನವಾಗುತ್ತಿತ್ತು. ಈತನ ಹೊಲಿಗೆ ಕಲಿಕೆ ವಿಫಲ ಆಯಿತೆಂದು ತೀರ್ಮಾನಿಸಿ ಮನೆಗೆ ಕಳುಹಿಸಿದರು. ದೊಡ್ಡಣ್ಣ ಕೊಟ್ಟ ಹಣದಲ್ಲಿ ಸಿನೆಮಾ ನೋಡುತ್ತಿದ್ದರು.
ಆ ದಿನಗಳಲ್ಲಿ ಮನೆಯ ಸಮೀಪ ಕೋಚಪ್ಪ ಮೂಲ್ಯ ಎಂಬವರು ಹೊಟೇಲ್ ನಡೆಸುತ್ತಿದ್ದರು. ಹೊಟೇಲ್ ಮುಗಿದ ಮೇಲೆ ರಾತ್ರಿ ಮೂಲ್ಯರು ತಾಳಮದ್ದಳೆ ನಡೆಸುತ್ತಿದ್ದರು. ಅರ್ಥಧಾರಿಗಳು, ಪ್ರೇಕ್ಷಕರು ಎಲ್ಲ ಅವರೇ. ಅಲ್ಲಿಯ ಅರ್ಥ (ಮಾತು) ಕೇಳಿ ಸುಂದರನಿಗೆ ನಗು ಬರುತ್ತಿತ್ತು. ಅವರೆಲ್ಲ ಅವಿದ್ಯಾವಂತರು. ತಾನು ಏಳನೇ ತರಗತಿಗೆ ಶಾಲೆ ನಿಲ್ಲಿಸಿದ್ದರೂ ಪಂಜಾಜೆ ಶಂಕರಭಟ್ಟರ ಶಿಷ್ಯನಾದ ತಾನು ಅವರಿಗಿಂತ ಚೆನ್ನಾಗಿ ಅರ್ಥ ಹೇಳಬಲ್ಲೆ ಎನಿಸುತ್ತಿತ್ತು. ಒಂದು ರಾತ್ರಿ ಅಲ್ಲಿ ನಿದ್ರೆ ತೂಗುತ್ತ ಅರ್ಥ ಕೇಳುತ್ತಿದ್ದಾಗ ಕೋಚಪ್ಪ ಇದ್ದಕ್ಕಿದ್ದಂತೆ ‘ಏ ಸುಂದರ, ಒಂದು ಅರ್ಥ ಹೇಳು; ಒಂದೇ ಮಾತು’ ಎಂದರು. ಅತಿಕಾಯ ಕಾಳಗದ ದೂತನಾಗಿ ರಾವಣನಿಗೆ ಯುದ್ಧದ ವೃತ್ತಾಂತ ಹೇಳುವ ಮಾತು. ದೂತನ ಅರ್ಥವನ್ನು ಎಲ್ಲರೂ ಹೊಗಳಿದರು.
ಮೊದಲು ತಾಳಮದ್ದಳೆ
ಯಕ್ಷಗಾನದ ಆಕರ್ಷಣೆ ಕ್ರಮೇಣ ಬೆಳೆಯಿತು. ಬೀಡಿ ಕಟ್ಟುವ ಜೊತೆಗೆ ಯಕ್ಷಗಾನದ ಭಾಗವತಿಕೆ ಮತ್ತು ಹಾಸ್ಯ ಪಾತ್ರ ಮಾಡುತ್ತಿದ್ದ ಮನೆ ಸಮೀಪದ ಕಮಲಾಕ್ಷ ನಾಯ್ಕರು ಪದ್ಯಕ್ಕೆ ಅರ್ಥ ಹೇಳಲು ಕಲಿಸಿದರು. ನಾಯ್ಕಾಪಿನ ಸಂಘದ ಹಾಗೆಯೇ ನೆರೆಯ ಸೂರಂಬೈಲು, ಕುಂಟಂಗೇರಡ್ಕಗಳಲ್ಲೂ ತಾಳಮದ್ದಳೆ ಸಂಘಗಳಿದ್ದವು. ನಾರಾಯಣ ಗಟ್ಟಿ ಎಂಬವರ ಪ್ರೋತ್ಸಾಹದಿಂದ ಯುವಕ ಸುಂದರರಾವ್ ಖಾಯಂ ಅರ್ಥಧಾರಿಯಾದರು. ‘ಅಂಗದ-ಸಂಧಾನ’ದ ಅಂಗದನ ಅರ್ಥ ಹೇಳುವ ಮಟ್ಟಕ್ಕೆ ಬಹುಬೇಗ ಆತ ಬೆಳೆದಿದ್ದರು. ಮತ್ತೆ ಹಿಂದೆ ನೋಡಿದ್ದಿಲ್ಲ. ಆದರೆ ಇದು ತೀರಾ ಸೀಮಿತ ಪ್ರೇಕ್ಷಕರ ಮುಂದೆ ನಡೆದದ್ದು. ಆಗ ಜಿದ್ದಾಜಿದ್ದಿ ತಾಳಮದ್ದಳೆಗಳ ಪ್ರಮುಖ ಲಕ್ಷಣವಾಗಿತ್ತು. ಮಾತಿಗೆ ಮಾತು ಬೆಳೆದು ತಾಳಮದ್ದಳೆ ಮಧ್ಯದಲ್ಲಿ ನಿಂತುಹೋದ ಎಷ್ಟೋ ಸಂದರ್ಭಗಳಿದ್ದವು. ಅದು ಗೆಳೆಯ ಅಮೃತ ಸೋಮೇಶ್ವರರನ್ನು ತಾಳಮದ್ದಳೆ ನೋಡಲೆಂದು ಕರೆದ ದಿನವೇ ಹಾಗಾಗಬೇಕೆ! ಪ್ರಹಸ್ತ ಪಾತ್ರಧಾರಿ ತೋರಿದ ಅಸಹಕಾರದಿಂದಾಗಿ ‘ಅಂಗದ-ಸಂಧಾನ’ದ ಒಂದು ತಾಳಮದ್ದಳೆ ಹಾಗೆಯೆ ಆಯಿತು. ಅದರ ಕಾರಣವೂ ತಿಳಿಯಿತು. ಆ ಅರ್ಥಧಾರಿ ತಾಳಮದ್ದಳೆಗೆ ಬರುವ ಮುನ್ನ ಕೆಲವರು “ಅವನನ್ನು ಸ್ವಲ್ಪ ನೋಡಿಕೊಳ್ಳಿ. ಬಹಳ ಮೆರೆಯುತ್ತಾನೆ” ಎಂದು ಕಿವಿಯೂದಿದ್ದರಂತೆ!
ಈ ನಡುವೆ ನಾಯ್ಕಾಪಿನ ಸಂಘಕ್ಕೆ ಬಯಲಾಟದಲ್ಲಿ ಆಸಕ್ತಿ ಬಂತು. ಮುಜಂಗಾವು ದೇವಳದ ಮುಖ್ಯಸ್ಥರಾಗಿದ್ದ ಬೋನಂತಾಯ ಶಂಭಟ್ಟರ ಸಹಕಾರದಿಂದ ಆಸಕ್ತರಿಗೆ ತರಬೇತಿ ಕೊಡಿಸಿ ಆಟ ಮಾಡುವುದೆಂದಾಯಿತು. ಕುಂಬಳೆ ಕುಟ್ಯಪ್ಪನವರು ನಾಟ್ಯಗುರು. ತರಬೇತಿ ಪಡೆಯುವವರು ಅವರಿಗೆ ಹಣ ಕೊಡಬೇಕಿತ್ತು. ಸುಂದರರಲ್ಲಿ ಹಣ ಇಲ್ಲವಾಗಿ ಇವರನ್ನು ಕೈಬಿಡುವ ಮಾತು ಬಂದರೂ ಕೂಡ ಗುರುಗಳು ತರಬೇತಿ ಸ್ವಲ್ಪ ನೀಡಿದರು. ಪ್ರದರ್ಶಿಸಿದ ‘ಪಾಂಡವಾಶ್ವಮೇಧ’ದಲ್ಲಿ ಇವರಿಗೆ ವೇಷ ಇಲ್ಲ. ಇವರಿಗೆ ವೇಷ ಏಕಿಲ್ಲ ಎಂದು ಗುರುಗಳು ಕೇಳಿದ್ದೂ ಆಯಿತು. ಆದರೆ ಕಲಿಸಿದರೂ ಕೂಡ ಈತ ಕುಣಿತದಲ್ಲಿ ಹಿಂದೆ. ಆ ಬಗ್ಗೆ ಸುಂದರರಾಯರ ವಿವರಣೆ ಹೀಗಿದೆ: “ನಾನು ನಾಟ್ಯಾಭ್ಯಾಸದಲ್ಲಿ ಪರಿಣತನಾಗದೆ ಇರಲು ಕಾರಣ ಆಗ ನನಗೆ ತಿಳಿದಿರಲಿಲ್ಲ. ಈಗ ಹೇಳಬಲ್ಲೆ. ಕಲಾವಿದನಿಗೆ ಇರಬೇಕಾದ ಲಯಜ್ಞಾನವೇ ನನಗೆ ಇರಲಿಲ್ಲ. ಇಷ್ಟು ವರ್ಷ ಸೇವೆ ಸಲ್ಲಿಸಲು ನನಗೆ ಸಾಧ್ಯವಾದರೂ ಆ ಕೊರತೆ ಈಗಲೂ ನನ್ನನ್ನು ಬಾಧಿಸುತ್ತದೆ.” ಇದು ಅವರನ್ನು ಯಾವಾಗಲೂ ಚುಚ್ಚುತ್ತಿತ್ತು ಎಂಬಂತೆ ಆತ್ಮಚರಿತ್ರೆಯ ಪುಟಗಳಲ್ಲಿ ಹಲವೆಡೆ ಅದನ್ನು ಹೇಳಿಕೊಂಡಿದ್ದಾರೆ.
ಆದರೆ ನೆರೆಕರೆಯ ತಾಳಮದ್ದಳೆಗಳಲ್ಲಿ ಅವರ ಬೇಡಿಕೆ ಬೆಳೆಯುತ್ತಲೇ ಇತ್ತು. ಬೇರೆ ಬೇರೆ ಸಂಘಗಳವರು ಕರೆಯುತ್ತಿದ್ದರು. ಅದರಿಂದ ಆದಾಯ ಇರಲಿಲ್ಲ ಎಂಬುದು ಬೇರೆ ಮಾತು. ಆಗ ತಾಳಮದ್ದಳೆ ಅರ್ಥಧಾರಿಗಳಿಗೆ ಸಂಭಾವನೆ ಇರಲಿಲ್ಲ. ಕೊಟ್ಟು ಪೂರೈಸಲಿಕ್ಕಿಲ್ಲ; ಅಷ್ಟೊಂದು ತಾಳಮದ್ದಳೆಗಳು ನಡೆಯುತ್ತಿದ್ದವು. ಮಧ್ಯರಾತ್ರಿ ಹೊತ್ತಿಗೆ ಒಣ ಅವಲಕ್ಕಿ, ಚಾ ಅಷ್ಟೆ. ಸಂಪಾದನೆ ಇಲ್ಲದ ಕಾರಣ ಯುವಕ ಸುಂದರ ಮನೆಯವರ ಚುಚ್ಚುಮಾತುಗಳನ್ನು ಕೇಳಬೇಕಾಗಿತ್ತು. ಊಟ ಮಾಡುವುದಕ್ಕೂ ಇವರಿಗೆ ಮುಜುಗರ; ಅಮ್ಮನ ಅವ್ಯಾಜ ಪ್ರೀತಿಯಷ್ಟೇ ಆಶ್ರಯವಾಗಿತ್ತು. ಮನೆಯಲ್ಲಿ ‘ಸ್ವಲ್ಪ ಮಗ್ಗದ ಕೆಲಸ, ಮತ್ತೆ ಓದು’ ಮಾಡಿಕೊಂಡಿದ್ದರು. ಓದು ಗಂಭೀರವಾಗಿಯೇ ಇತ್ತು. ಏಳನೇ ತರಗತಿಗೆ ಶಾಲೆ ಬಿಟ್ಟವರಾದರೂ ಮುಳಿಯ ತಿಮ್ಮಪ್ಪಯ್ಯನವರ ‘ನಾಡೋಜ ಪಂಪ’ ಗ್ರಂಥ ಅವರ ಕೈಗೆಟುಕಿತ್ತು. ಚಿಕ್ಕಪ್ಪ ದೇವದಾಸರು ಅದನ್ನು ಪ್ರೋತ್ಸಾಹಿಸುತ್ತಿದ್ದರು.
ಮಾತೇ ಮೊದಲ ವೇಷ
“ಅತ್ತ ಶಾಲೆಯೂ ಇಲ್ಲ, ಇತ್ತ ಮನೆಯವರ ಪ್ರೀತಿಯೂ ಇಲ್ಲ ಎಂಬಂತಿರುವಾಗಲೇ ನನಗೆ ಯಕ್ಷಗಾನದ ರುಚಿ ಹತ್ತಿತ್ತು. ತಾಳಮದ್ದಳೆಗಳಲ್ಲಿ ಸಣ್ಣ ಸಣ್ಣ ಅರ್ಥ ಹೇಳುತ್ತಿದ್ದುದರಿಂದ ಯಕ್ಷಗಾನದ ಬಳಗದಲ್ಲಿ ನನ್ನನ್ನು ಬೆನ್ನುತಟ್ಟಿ ಪ್ರೋತ್ಸಾಹಿಸುವವರಿಗೆ ಕೊರತೆಯಿರಲಿಲ್ಲ. ಯಾವಾಗ ನೋಡಿದರೂ ಒಂದಲ್ಲ ಒಂದು ಪುಸ್ತಕ ಹಿಡಿದು ತಿರುಗುತ್ತಿದ್ದ ನನಗೆ ‘ಮೇಳಕ್ಕೆ ಸೇರಿದರೆ ಒಳ್ಳೆಯ ಭವಿಷ್ಯ ಇದೆ, ಪ್ರಯತ್ನ ಮಾಡು’ ಎಂದು ಬಹಳ ಮಂದಿ ಹುರಿದುಂಬಿಸಿದ್ದರು. ಮೇಳಕ್ಕೆ ಸೇರಬೇಕಾದರೆ ಪದ್ಯದ ಅರ್ಥ ಹೇಳಿದರೆ ಸಾಲದು; ಅದಕ್ಕೆ ಸಂಬಂಧಿಸಿದ ಅಂಗಗಳನ್ನು ತಿಳಿದಿರಬೇಕು. ಅದಕ್ಕೆ ದೊಡ್ಡ ಪ್ರಯತ್ನ ಬೇಕು ಎಂಬುದನ್ನು ಅವರು ಗ್ರಹಿಸಿರಲಿಲ್ಲ. ನಾನಂತೂ ಹಾಗೆ ಚಿಂತಿಸುವಷ್ಟು ಪ್ರಾಯವುಳ್ಳವನೂ ಆಗಿರಲಿಲ್ಲ” ಎನ್ನುವ ಅವರಿಗೆ ವೇಷಧಾರಿಯಾಗಿ ಕೈತುಂಬ ದುಡ್ಡು ಸಂಪಾದಿಸಿ ಊರಲ್ಲಿ ದೊಡ್ಡಮನುಷ್ಯನಾಗುವ ಯೋಚನೆಯೇನೋ ಇತ್ತು. ತನಗೆ ಬೇರೆ ದಾರಿಯಿಲ್ಲ; ಯಕ್ಷಗಾನವೇ ಕಲ್ಪವೃಕ್ಷ ಎಂದು ಕೂಡ ತೋರಿತು. ಶೇಣಿ, ಸಾಮಗರಷ್ಟು ಅಲ್ಲದಿದ್ದರೂ ನಾನೂ ಮಾತುಗಾರನಾಗಿದ್ದೇನಲ್ಲ; ಆಟದವರು ಸ್ವಾಗತಿಸಿಯೇ ಸ್ವಾಗತಿಸುತ್ತಾರೆ ಎನ್ನುವ ನಂಬಿಕೆ ಕೂಡ ಎಲ್ಲೋ ಹೊಳೆಯುತ್ತಿತ್ತು.
ಅದು ಬಯಲಾಟದ ಮೇಳಗಳು ಟೆಂಟಿನ ಮೇಳಗಳಾಗಿ ಪರಿವರ್ತನೆಯಾಗುತ್ತಿದ್ದ ಕಾಲ. ಕೂಡ್ಳು ಮೇಳ ಕೂಡ ಟೆಂಟಿನ ಮೇಳವಾಗಿ ಬದಿಯಡ್ಕದಲ್ಲಿ ಕ್ಯಾಂಪ್ ಹೂಡಿತ್ತು. ಇದ್ದಕ್ಕಿದ್ದಂತೆ ಸುಂದರ ಮೇಳಕ್ಕೆ ಸೇರಲು ಹೊರಟೇಬಿಟ್ಟರು. ಮೇಳದ ಚೌಕಿಯನ್ನು ಸೇರಿದ್ದೂ ಆಯಿತು. ಹೇಗೆ ಸೇರುವುದು ಗೊತ್ತಿಲ್ಲ. ಆದರೂ ಊರಿನ ಯಾರೋ ಗುರುತು ಹಿಡಿದು ‘ಈ ಹುಡುಗ ಒಳ್ಳೆ ಮಾತಾಡುತ್ತಾನೆ; ಮೇಳಕ್ಕೆ ಸೇರುತ್ತಾನಂತೆ. ಒಂದು ವೇಷ ಕೊಡಿ’ ಎಂದು ಶಿಫಾರಸು ಮಾಡಿದರು. ಹಾಸ್ಯಗಾರರಾಗಿದ್ದ ಮದವೂರು ನಾರಾಯಣ ಹಾಸ್ಯಗಾರರು ತಾವು ಮಾಡುವ ಒಂದು ಸಣ್ಣ ಪಾತ್ರವನ್ನು ನೀಡಿದರು. ರಂಗಕ್ಕೆ ಬರುವುದಕ್ಕಿಲ್ಲ; ಹಿಂದಿನಿಂದ ಎರಡು ಪದ್ಯಗಳ ಅರ್ಥ ಹೇಳಿದ್ದನ್ನು ಮೆಚ್ಚಿದ ಹಾಸ್ಯಗಾರರು ರಂಗಕ್ಕೆ ಬರುವ ಒಂದು ಸಣ್ಣ ಪಾತ್ರವನ್ನು ಕೂಡ ನೀಡಿದರು. ಯಾರೋ ಬಣ್ಣ ಹಚ್ಚಿ ವೇಷ ಮಾಡಿಬಿಟ್ಟರು.
ಪ್ರಥಮ ಚುಂಬನೇ…
ಇದು ಒಂದು ದಿನ ಅಷ್ಟೆ. ಯಕ್ಷಗಾನದಲ್ಲಿ ಒಬ್ಬರು ಇನ್ನೊಬ್ಬರಿಗೆ ವೇಷ ಮಾಡುವ ಕ್ರಮ ಇಲ್ಲ. ತಾವೇ ಮಾಡಿಕೊಳ್ಳಬೇಕು. ಇವರಿಗೆ ದೇವೇಂದ್ರನ ಒಡ್ಡೋಲಗದ ಒಂದು ವೇಷ ಎಂದರು. “ಹುಡುಗರೆಲ್ಲ ಬಣ್ಣ ಕಲಸುತ್ತಿದ್ದರು. ಕಳೆದ ರಾತ್ರಿ ವೇಷ ಕಟ್ಟಿ ಬಿಟ್ಟ ಯಾರೂ ಹತ್ತಿರ ಸುಳಿಯಲಿಲ್ಲ. ಬೇರೆಯವರು ಬಣ್ಣ ಕಲಸುವುದನ್ನು ನೋಡಿ ನಾನೂ ಕಲಸಿದೆ. ಯಾವುದಕ್ಕೆ ಯಾವ ಬಣ್ಣ ಸೇರಿಸಿದರೆ ಯಾವ ಬಣ್ಣ ಆಗುತ್ತದೆ ಎಂಬುದು ನನಗೆ ಗೊತ್ತಿಲ್ಲ. ಮುಖ ತುಂಬ ಬಣ್ಣ ಮೆತ್ತಿಕೊಂಡ ನನಗೆ ಮತ್ತೇನು ಮಾಡಬೇಕೆಂದು ತಿಳಿಯಲಿಲ್ಲ; ದೇವೇಂದ್ರ ಮತ್ತು ಬಲ (ಇತರ ವೇಷಗಳು) ರಂಗಸ್ಥಳಕ್ಕೆ ಹೊರಟಾಯಿತು. ನಾನು ಚೌಕಿಯಲ್ಲೇ ಬಾಕಿ! ಯಾರೂ ಹತ್ತಿರ ಸುಳಿಯುವವರಿಲ್ಲ. ಒಂದು ವೇಳೆ ವೇಷ ಕಟ್ಟಿಬಿಟ್ಟರೂ ಪ್ರವೇಶ ಹೇಗೆ ಮಾಡಬೇಕೆಂದು ಗೊತ್ತಿಲ್ಲ. ನನ್ನ ಭ್ರಮೆ ಜಾರಿತು. ಯಾಕಾದರೂ ಗೊತ್ತಿಲ್ಲದ ಈ ಪ್ರಪಂಚಕ್ಕೆ ಬಂದೆನೋ ಎನ್ನುವ ಹಾಗಾಯಿತು. ಅನಾಥವಾಗಿ ಕುಳಿತಿದ್ದ ನನ್ನ ಬಗ್ಗೆ ವೇಷಧಾರಿಯೊಬ್ಬರು ‘ಇವನಿಗೆ ಸೊಕ್ಕು; ಮನೆಯಲ್ಲಿ ಹೇಳದೆ ಬಂದಿರಬೇಕು’ ಎಂದು ಇನ್ನೊಬ್ಬರಲ್ಲಿ ಹೇಳುತ್ತಿದ್ದರು. ಮುಂದೇನು ಮಾಡಬೇಕೆಂದು ತಿಳಿಯದೆ, ಯಾರಾದರೂ ಸಹಾಯಕ್ಕೆ ಬಂದಾರೇ ಎಂದು ಕಾಯುತ್ತಿದ್ದ ನನಗೆ ಹೆದರಿಕೆ ಆರಂಭವಾಯಿತು. ಇಲ್ಲಿಂದ ಒಮ್ಮೆ ಪಾರಾದರೆ ಸಾಕು ಎನ್ನಿಸಿತು” ಎನ್ನುವ ಭೀಕರ ವಿವರವನ್ನವರು ನೀಡಿದ್ದಾರೆ.
ಮುಖಕ್ಕೆ ಹಚ್ಚಿದ ಬಣ್ಣ ತೆಗೆಯುವುದು ಹೇಗೆಂದು ಗೊತ್ತಿಲ್ಲ. ತೆಗೆದರೆ ಏನು ಹೇಳಿಯಾರೆಂಬ ಭಯ. ಹಾಗಾಗಿ ಬಣ್ಣ ಸಮೇತ ಚೌಕಿಯಿಂದ ಪಾರಾಗಲು ನಿರ್ಧರಿಸಿ, ಆಚೀಚೆ ಇದ್ದ ಕಲಾವಿದರ ಲಕ್ಷ್ಯ ತನ್ನ ಕಡೆಗೆ ಇಲ್ಲದ ಸಮಯ ಸಾಧಿಸಿ, ಆಟದ ಚಲ್ಲಣ ಜಾರಿಸಿ ಸ್ವಂತದ ಚೆಡ್ಡಿ ಸಿಕ್ಕಿಸಿ ಅಂಗಿಯನ್ನು ಮುದ್ದೆ ಮಾಡಿ ಹಿಡಿದುಕೊಂಡು ಟೆಂಟಿನ ಬಟ್ಟೆಯೆತ್ತಿ ಹೊರಗೆ ತೂರಿ ಬಯಲು ಸೇರಿದರು; ಯಾರಾದರೂ ಬೆನ್ನಟ್ಟುತ್ತಾರೋ ಬೈಯುತ್ತಾರೋ ಎಂಬ ಭಯದೊಂದಿಗೆ ಓಟ ಕಿತ್ತರು. ಸಮೀಪದ ಸಂಬAಧಿಕರ ಮನೆಗೆ ಹೋಗಿ ಸ್ವಲ್ಪ ಎಣ್ಣೆ ತೆಗೆದುಕೊಂಡು ಆದಷ್ಟು ಬಣ್ಣ ಒರೆಸಿ ಮತ್ತೆ ಆಟದ ಟೆಂಟ್ ಬಳಿಗೆ ಹೋಗಿ ಹೊರಗೆಲ್ಲೋ ಕುಳಿತು ಬೆಳಗು ಮಾಡಿ ಮತ್ತೆ ಮನೆಗೆ ಸೇರಿದರು. ಆ ವರ್ಷ ಮತ್ತೆ ಯಕ್ಷಗಾನಕ್ಕೆ ಸೇರುವ ಧೈರ್ಯ ಬರಲಿಲ್ಲವಂತೆ!
ಇತರ ಕ್ಷೇತ್ರಗಳಲ್ಲಿ ವಿಫಲವಾದಂತೆಯೇ ಯಕ್ಷಗಾನ ಕೂಡ ಯುವಕ ಸುಂದರನ ಕೈಬಿಟ್ಟಿತೇ ಎಂದು ಈ ಹಂತದಲ್ಲಿ ತೋರದಿರದು. ಆದರೆ ಹಾಗಾಗಲಿಲ್ಲ. ನಾಲಗೆ ಅವರನ್ನು ಎತ್ತಿ ಹಿಡಿಯಿತು; ಮಾತೇ ಮಾಣಿಕ್ಯವಾಯಿತು. ಈ ಕುಟ್ಯಪ್ಪಣ್ಣನವರನ್ನು ಆಗಾಗ ಭೇಟಿ ಮಾಡುತ್ತಿದ್ದರು. ಮಳೆಗಾಲದಲ್ಲಿ ಸಂಪಾದನೆ ಇಲ್ಲ. ಒಂದು ದಿನ ಆತ “ನಾವು ಸ್ತ್ರೀವೇಷದ ಸೆಟ್ಟು ಮಾಡುವ. ದೇವರ ದಯೆಯಿದ್ದರೆ ಸಂಪಾದನೆ ಒಳ್ಳೆಯದಾಗಬಹುದು” ಎಂದರು. ಒಬ್ಬ ಭಾಗವತ, ಒಂದು ಸ್ತ್ರೀವೇಷ, ಒಂದು ಕೃಷ್ಣವೇಷ, ಒಬ್ಬ ಮದ್ದಳೆಯವ, ಗ್ಯಾಸ್ಲೈಟ್ ಮತ್ತು ಶ್ರುತಿಗೆ ಒಬ್ಬ – ಇದು ಸ್ತ್ರೀವೇಷದ ಸೆಟ್ಟು. ಸಂಜೆ ೭ ರಿಂದ ರಾತ್ರಿ ೧೨ಗಂಟೆವರೆಗೆ ಆದಷ್ಟು ಮನೆಗಳಿಗೆ ಭೇಟಿ. ೩-೪ ಸಂವಾದ ಬಾಯಿಪಾಠವಿದ್ದರೆ ಮುಗಿಯಿತು. ಕೃಷ್ಣವೇಷ ಸುಂದರರ ಪಾಲಿಗೆ ಬಂತು. ಈ ಪ್ರಯತ್ನ ಧೈರ್ಯವನ್ನಂತೂ ಕೊಟ್ಟಿತು. ಮೇಳಕ್ಕೆ ಹೋದರೆ ಏನಿಲ್ಲದಿದ್ದರೂ ಮಾತಿನ ವೇಷವಾದರೂ ಸಿಕ್ಕೀತು ಎಂಬ ಭರವಸೆ ಬಂತು. ಅದಕ್ಕೆ ಸರಿಯಾಗಿ ವೆಂಕಟ್ರಾವ್ ಕಾಂದಿಲ್ಕರ್ ಎನ್ನುವವರು ಕೂಡ್ಳು ಮೇಳದ ಮುಂದಿನ ತಿರುಗಾಟವನ್ನು ತಾವು ನಡೆಸಲು ಮುಂದೆ ಬಂದರು. ಕುಟ್ಯಪ್ಪಣ್ಣ ಅವರು ತಾನು ಆ ಮೇಳಕ್ಕೆ ಸೇರಿದ್ದಲ್ಲದೆ ಸುಂದರನಿಗೂ ಒಂದು ಅವಕಾಶ ಕಲ್ಪಿಸಿದರು. ಅದು ೧೯೫೩ರ ಕೊನೆಯ ಹೊತ್ತಿಗೆ ಆರಂಭವಾಗುವ ತಿರುಗಾಟ. ಮೊದಲ ಸೇವೆಯಾಟ ‘ಪಾಂಡವಾಶ್ವಮೇಧ’ ದಲ್ಲಿ ಕೃಷ್ಣನ ವೇಷವನ್ನೇ ನೀಡಿದರು. ಅಗರಿ ಶ್ರೀನಿವಾಸ ಭಾಗವತರು ಮೇಳದ ಭಾಗವತರು. ಕದ್ರಿ ವಿಷ್ಣು, ಕುಂಞಿ ಬಾಬು, ಉದ್ಯಾವರ ಬಸವ, ಅಡೂರು ರಾಮಚಂದ್ರ, ಪುತ್ತೂರು ಕೃಷ್ಣಭಟ್ಟ, ವೇಣೂರು ವೆಂಕಟ್ರಮಣ ಭಟ್ಟ, ಮದವೂರು ನಾರಾಯಣ ಹಾಸ್ಯಗಾರ, ಅಗಲ್ಪಾಡಿ ಅಪ್ಪಯ ಮಣಿಯಾಣಿ – ಹೀಗೆ ಅಂದಿನ ಅಗ್ರಸ್ಥಾನದ ಕಲಾವಿದರು ಅಲ್ಲಿದ್ದರು.
ಕಲಿಯಲು ಬಹಳವಿದೆ
ಆ ಮೊದಲ ತಿರುಗಾಟದ ಬಗ್ಗೆ ಕುಂಬ್ಳೆ ಹೀಗೆ ಹೇಳಿದ್ದಾರೆ: “ನಾನು ಆ ವರ್ಷದ ತಿರುಗಾಟದಲ್ಲಿ ಕಲಿತದ್ದು ಕಡಮೆಯಾದರೂ, ಕಲಿಯಬೇಕಾದ್ದು ತುಂಬಾ ಇದೆ ಎಂಬುದನ್ನಂತೂ ಕಲಿತೆ. ಯಕ್ಷಗಾನ ಕಲಾವಿದನಾಗುವವನು ಮೊದಲು ಸಾಧಿಸಬೇಕಾದ ಅರ್ಹತೆಯೆಂದರೆ ನಿದ್ರೆ ಬಿಡುವುದು. ಬೆಳಗಿನ ತನಕ ಎಚ್ಚರದಲ್ಲಿದ್ದು ಪಾತ್ರ ಮಾಡುವುದರ ಜೊತೆಗೆ ಬೇರೆಯವರ ಪಾತ್ರ ನಿರ್ವಹಣೆಯನ್ನು ನೋಡುವುದೂ ಬಹಳ ಮುಖ್ಯವಾದ ವಿಷಯ. ಅಗರಿ, ಬಲಿಪರ ಭಾಗವತಿಕೆಯನ್ನು ಮನಸ್ಸಿನಲ್ಲಿ ತುಂಬಿಕೊಂಡು ಅದಕ್ಕೆ ಸರಿಯಾಗಿ ಒಬ್ಬೊಬ್ಬ ವೇಷಧಾರಿಯ ರಂಗಕ್ರಿಯೆಗಳನ್ನು ನೋಡಿ ಬೆರಗುಪಡುವುದು ನನ್ನ ಯೋಗವೆಂದು ಆ ದಿನಗಳಲ್ಲಿ ಗ್ರಹಿಸುತ್ತಿದ್ದೆ. ಮಾತು ಹೆಚ್ಚು ಇದ್ದ, ಕುಣಿತ ಕಡಮೆ ಇದ್ದ ಪಾತ್ರಗಳನ್ನು ನನಗೆ ಮೀಸಲಿಡುವ ಪರಿಪಾಟಿ ಮೇಳದಲ್ಲಿ ಒಂದು ವರ್ಷದಲ್ಲಿ ನನ್ನ ಪಾಲಿಗೆ ಬಂದ ಗೌರವವೆಂದು ನಾನು ತಿಳಿಯುತ್ತಿದ್ದೆ.”
“ಮೇಳದ ಕಲಾವಿದರು ಸಂಜೆ ೭ ಗಂಟೆಯೊಳಗೆ ಚೌಕಿಯಲ್ಲಿ ಇರಬೇಕು. ಕೆಲವು ಸಲ ಪ್ರಸಂಗ ನಿರ್ಣಯವೇ ರಾತ್ರಿ ೧೦ ಗಂಟೆಗೆ ಆಗುವುದಿದೆ; ಮತ್ತೆ ಪಾತ್ರ ಹಂಚಬೇಕು, ಸಮಯ ಸರಿಯಾದ ಬಳಕೆಯಲ್ಲಿ ನಿದ್ರೆಗೆ ಅವಕಾಶವಾದರೆ, ಆತಂಕವಿಲ್ಲದೆ ನಿದ್ರಿಸುವುದಕ್ಕೆ ಸಾಧ್ಯವಾದರೆ ಮಾತ್ರ ರಾತ್ರಿ ನಿದ್ದೆಗೆ ಆಸೆಪಡುತ್ತಿದ್ದೆ. ಮುಂದೆ ಟೆಂಟಿನ ಆಟಕ್ಕೆ ಹೊಂದಿಕೊಂಡ ಮೇಲೆ ಪ್ರಸಂಗ ಮೊದಲೇ ನಿಶ್ಚಯವಾಗುತ್ತಿದ್ದುದರಿಂದ ಎಷ್ಟು ಹೊತ್ತಿಗೆ ವೇಷಕ್ಕೆ ಕುಳಿತುಕೊಳ್ಳಬೇಕು, ಯಾವಾಗ ವೇಷ ಕಳಚಬೇಕು ಎಂಬ ಸರಿಯಾದ ಲೆಕ್ಕಾಚಾರ ಸಾಧ್ಯವಾಗುತ್ತಿತ್ತು. ಇಷ್ಟು ಗಂಟೆಗೆ ಪ್ರವೇಶ ಎಂದು ಭಾಗವತರು ಹೇಳಿದರೆ ಹೆಚ್ಚೆಂದರೆ ೧೦-೧೫ ನಿಮಿಷ ಮಾತ್ರ ವ್ಯತ್ಯಾಸ ಆಗುತ್ತಿತ್ತು. ಮುಂದೆ ಶೇಣಿ, ಸಾಮಗರ ಪ್ರವೇಶವಾದ ಮೇಲೆ ಈ ಲೆಕ್ಕಾಚಾರ ನಿಲ್ಲುತ್ತಿರಲಿಲ್ಲ. ಅವರು ಎಷ್ಟು ಹೊತ್ತು ಮಾತನಾಡುತ್ತಾರೆ ಎಂಬ ನಿರ್ಣಯ ಭಾಗವತರಲ್ಲೂ ಇರುತ್ತಿರಲಿಲ್ಲ. ಅವರಿಗೆ ಭಾಗವತರ ಜಾಗಟೆ ಶಬ್ದ ಹೊರಡುವುದು (ಆ ಮೂಲಕ ಸೂಚನೆ ಕೊಡುವುದು) ಸಾಧ್ಯವಿರಲಿಲ್ಲ. ಯಾಕೆಂದರೆ ಅವರು (ಮೇಳದಲ್ಲಿ) ಮಾತನಾಡುವುದಕ್ಕೇ ಇದ್ದವರು. ಅದಕ್ಕೇ ಅವರನ್ನು ಕರೆಸಿಕೊಂಡದ್ದು. ಅಗರಿಯವರು ಮೇಳದ ಕಲಾವಿದರಿಗೆ ಅನ್ಯಾಯವಾಗಲು ಬಿಡುತ್ತಿರಲಿಲ್ಲ. ಆಟದ ಗುಣಮಟ್ಟ ಕಾಯುವಲ್ಲಿ ಅವರ ಲಕ್ಷ್ಯ ಯಾವಾಗಲೂ ಇರುತ್ತಿತ್ತು. ಆದರೆ ಇಂದಿನ ಭಾಗವತರು ವೇಷದ ಪಟ್ಟಿ (ಯರ್ಯಾರು ಯಾವ ಪಾತ್ರ ಎಂದು) ಬರೆದು ಕಾಣೆಯಾಗುತ್ತಾರೆ. ಅಗರಿಯವರು ಯಾವ ಪಾತ್ರ ಎಷ್ಟು ಪದ್ಯ ಎಂದು ತಯಾರು ಮಾಡುತ್ತಿದ್ದರು. ೬೦-೭೦ ಪ್ರಸಂಗಗಳು ಅವರಿಗೆ ಕಂಠಪಾಠವಿತ್ತು. ಆದರೆ ಇಂದು ಪುಸ್ತಕ ನೋಡದೆ ಇಡೀ ರಾತ್ರಿ ಪದ್ಯ ಹೇಳುವವರು ವಿರಳ” ಎಂದು ಸುಂದರರಾವ್ ಹಲವು ಸಂಕೀರ್ಣ ವಿಷಯಗಳನ್ನು ತಿಳಿಸಿದ್ದಾರೆ.
ಅಗರಿಯವರು ಆಟ ಮುಗಿದು ಬೆಳಗ್ಗೆ ಪಾತ್ರಧಾರಿಗಳಿಗೆ ಅವರು ಮಾಡಿದ ತಪ್ಪನ್ನು ತಿಳಿಸುತ್ತಿದ್ದರು. ಸುಂದರರಾಯರಿಗೆ ಮೊದಲ ವರ್ಷವೇ ಅಂತಹ ಮಾರ್ಗದರ್ಶನ ಸಿಕ್ಕಿ ಪ್ರಗತಿಗೆ ಸಹಾಯವಾಯಿತು. ಕೂಡ್ಳು ಮೇಳದ ಎರಡು ವರ್ಷಗಳ ತಿರುಗಾಟದಲ್ಲಿ ‘ಅಗರಿ ಶೈಲಿ’ ಅಂದರೆ ಏನೆಂದು ಅರ್ಥವಾಯಿತು. ಇಂತಹ ವಾತಾವರಣವನ್ನು ಈಗ ನಿರೀಕ್ಷಿಸುವಂತೆಯೇ ಇಲ್ಲ. ಈಗ ರಾತ್ರಿ ಆಟ ಮುಗಿಯುತ್ತಲೇ ಭಾಗವತರೂ, ವೇಷಧಾರಿಗಳೂ ಮನೆಗೆ ಹೋಗುವುದೇ ಹೆಚ್ಚು. ಬಿಡಾರದ ಕಲ್ಪನೆಯೇ ಬದಲಾಗಿದೆ. ಕಾಲಮಿತಿಯ ಪ್ರದರ್ಶನಗಳು ಬಂದ ಮೇಲಂತೂ ಇಡೀ ರಾತ್ರಿ ಕೂಡ ಒಟ್ಟಿಗೆ ಇರುವ ಆವಶ್ಯಕತೆ ಇಲ್ಲ.
ಮಳೆಗಾಲದಲ್ಲೂ ಅಭ್ಯಾಸ
ಅಂದು ಮಳೆಗಾಲದ ದಿನಗಳು ಅಭ್ಯಾಸಕ್ಕೆ ಅನುಕೂಲವಾಗಿದ್ದವು. ಆಗ ತಾಳಮದ್ದಳೆ ಜಾಸ್ತಿ. ಅವುಗಳಲ್ಲಿ ಭಾಗವಹಿಸುವ ಮೂಲಕ ಸುಂದರ ತನ್ನ ಅನುಭವವನ್ನು ಹೆಚ್ಚಿಸಿಕೊಂಡರು. ಆ ಹೊತ್ತಿಗೆ ಕಲ್ಲಾಡಿ ಕೊರಗಶೆಟ್ಟರು ಇರಾ ಸೋಮನಾಥೇಶ್ವರ ಮೇಳ (ಕುಂಡಾವು ಮೇಳ)ವನ್ನು ಆರಂಭಿಸಿ ಸುಂದರರನ್ನು ಅದಕ್ಕೆ ಕರೆದರು. ಆರು ತಿಂಗಳು ಆಟ ಹೊಂದಿಸುವ ಕಷ್ಟದ ಕಾರಣದಿಂದ ಇದನ್ನು ‘ಟೆಂಟ್ ಮೇಳ’ವಾಗಿ ಮಾಡಿದ್ದರು. ಇದು ಕೂಡ್ಳು ಮೇಳಕ್ಕಿಂತ ತೀರಾ ಭಿನ್ನ. ಅದನ್ನು ‘ಯಕ್ಷಗಾನ ನಾಟಕ ಸಭಾ’ ಎಂಬುದಾಗಿ ಕರೆದರು. ವೇಷಗಳಲ್ಲಿ ನಾಟಕೀಯತೆ ಬಂತು. ಭಾಗವತಿಕೆ ಶಾಸ್ತ್ರೀಯ ಸಂಗೀತಕ್ಕೆ ಹತ್ತಿರವಾಯಿತು. ಅಲ್ಲಿ ಸಾಂಪ್ರದಾಯಿಕ ಕುಣಿತ ಮುಖ್ಯವಾದರೆ ಇಲ್ಲಿ ಅದು ಗೌಣವಾಯಿತು. ಅಲ್ಲಿ ಮಾತು ಮಿತವಾದರೆ ಇಲ್ಲಿ ಜಾಸ್ತಿ. ಆ ಮಟ್ಟಿಗೆ ಇದು ಸುಂದರರಾಯರಿಗೆ ಅನುಕೂಲ ಎಂಬಂತಿತ್ತು.
ಮೇಳದ ಕಲಾವಿದರು ಸಾಧಾರಣಮಟ್ಟದವರಲ್ಲ. ನಾರಂಬಾಡಿ ಸುಬ್ಬಯ್ಯಶೆಟ್ಟರು, ಬೋಳಾರ ನಾರಾಯಣ ಶೆಟ್ಟರು, ಅಳಕೆ ರಾಮಯ್ಯ ರೈಗಳು, ಮಂಕುಡೆ ಸಂಜೀವಶೆಟ್ಟರು, ಕುದ್ರೆಂಜ ಗೋಪಾಲಶೆಟ್ಟರು, ಮೂಡಬಿದ್ರೆ ಕಿಟ್ಟು ಅವರು, ಹಾಸ್ಯಗಾರ ಮಿಜಾರು ಅಣ್ಣಪ್ಪನವರು ಎಲ್ಲ ಒಂದು ಕಡೆ ಸೇರಿ ಗಜಮೇಳ ಎನಿಸಿತು. ಯಕ್ಷಗಾನ ಮೇಳವನ್ನು ಬಯಲಾಟದಿಂದ ಡೇರೆಯಾಟವಾಗಿ ಮಾರ್ಪಡಿಸಲು ಕೊರಗಶೆಟ್ಟರು ಬಹಳ ಶ್ರಮವಹಿಸಿದ್ದರು. ಆದಾಯ ಹೆಚ್ಚಲು ಕೆಲಕಾಲ ಮೊದಲಿಗೆ ಭರತನಾಟ್ಯ ಇತ್ಯಾದಿ ತಂದರಾದರೂ ಮುಂದೆ ಜನ ಆಟಕ್ಕಾಗಿಯೇ ಆಟಕ್ಕೆ ಬರತೊಡಗಿದರು. ನಾರಂಬಾಡಿಯವರು ಆಟದ ರಂಗದ ದೊಡ್ಡ ಮಾತುಗಾರರು; ಅವರು ಕುಣಿತದ ಗೋಜಿಗೆ ಹೋದವರಲ್ಲ. ಭಾಗವತ ಮೈಂದಪ್ಪ ರೈಗಳು ಎಷ್ಟು ಉದ್ದ ಪದ್ಯ ಹೇಳಿದರೂ ಮುಂದೆ ಹಿಂದೆ ಹೋಗಿ ಕಾಲ ತಳ್ಳುತ್ತಿದ್ದರು. ಹೆಚ್ಚುಕಡಮೆ ತಾನೂ ಸೇರಿದಂತೆ ಮಾತೇ ಬಂಡವಾಳವಾಗಿ ಉಳ್ಳ ಎಲ್ಲರ ಕಥೆಯೂ ಅದೇ ಆಗಿತ್ತು ಎನ್ನುತ್ತಾರೆ ಕುಂಬ್ಳೆ.
ತುಳು ಪ್ರಸಂಗಗಳು
ಬೋಳಾರ ನಾರಾಯಣಶೆಟ್ಟರು ಕೂಡ ದೊಡ್ಡ ಕುಣಿತಗಾರರಲ್ಲ. ಬಹಳ ಕಡಮೆ ಹೆಜ್ಜೆ. ಒಂದು ಕಾಲು ಎತ್ತಿ ಮೂರು ಜಿಗಿತ ಮಾಡಿದರೆ ಮುಗಿಯಿತು. ಕಂಸ, ಹಿರಣ್ಯಕಶಿಪು ಮುಂತಾಗಿ ಖಳ ಪಾತ್ರಗಳಲ್ಲಿ ಮೆರೆದ ಅವರ ವೇಷ ಬಹಳ ಚೆಂದ. ಕೋಟಿ ಚೆನ್ನಯ, ದೇವುಪೂಂಜ ಪ್ರತಾಪ ಮುಂತಾಗಿ ತುಳು ಪ್ರಸಂಗಗಳು ಬಂದಾಗ ಅವರ ವೇಷಗಳು (ಉದಾ: ಕೋಟಿ) ದಾಖಲೆಯನ್ನೇ ಮಾಡಿದವು. ಅವರದ್ದು ಸ್ವಚ್ಛ ತುಳು. ಕೋಟಿಚೆನ್ನಯದಲ್ಲಿ ಕುಂಬ್ಳೆ ಅವರದ್ದು ದೇವಣ್ಣ ಬಲ್ಲಾಳನ ಪಾತ್ರ. ಅಳಕೆ ರಾಮಯ್ಯ ರೈಗಳ ಕೃಷ್ಣನಿಗೆ ಇವರದ್ದು ಅಕ್ರೂರ. ಅವರ ನೃತ್ಯವೈವಿಧ್ಯವನ್ನು ಕಂಡು ಕುಂಬ್ಳೆ ತುಂಬ ಮೆಚ್ಚಿಕೊಂಡಿದ್ದರು. ಮೂಡಬಿದ್ರೆ ಕಿಟ್ಟು ಮತ್ತು ಮಾಡಂಗಾಯಿ ಕೃಷ್ಣಭಟ್ಟರು ಉತ್ತಮ ಕುಣಿತಗಾರರು. ಅದರ ನಡುವೆ ಶನಿಯ ಪಾತ್ರದಲ್ಲಿ ಮಿಂಚುತ್ತಿದ್ದ ಮದ್ದಡ್ಕ ಗೋಪಾಲಶೆಟ್ಟರು ಮತ್ತು ಮಿಜಾರು ಅಣ್ಣಪ್ಪನವರಿಗೆ ಕುಂಬ್ಳೆ ನಿಕಟವರ್ತಿಯಾಗಿದ್ದರು. ಇದೇ ವೇಳೆ ಕರಪತ್ರದಲ್ಲಿ ಇವರ ಹೆಸರು ಮಾಸ್ಟರ್ ಸುಂದರ ಎಂಬುದರಿಂದ ಕುಂಬ್ಳೆ ಸುಂದರರಾವ್ ಎನ್ನುವ ಬದಲಾವಣೆಯನ್ನು ಕಂಡಿತು. ಅದನ್ನು ಮಾಡಿದವರು ಮುಂದೆ ಮೇಳದ ನಿರ್ವಹಣೆಯಲ್ಲಿ ತೊಡಗಿಸಿಕೊಂಡ ಕೊರಗಶೆಟ್ಟರ ಪುತ್ರ ವಿಠಲಶೆಟ್ಟರು. “ನನಗೆ ರಾವ್ ಉಪಕಾರ ಮಾಡಿದ್ದು ಕಡಮೆ, ಉಪದ್ರವ ತುಂಬ ಆಗುತ್ತಿತ್ತು. ಬ್ರಾಹ್ಮಣ ಎಂದು ತಿಳಿದು ಊಟದ ಹೊತ್ತಿಗೆ ಮುಜುಗರ ಆಗುವುದಿತ್ತು. ಅದನ್ನು ಮೊದಲೇ ತಿಳಿಸಿ ವ್ಯವಸ್ಥೆ ಮಾಡಿಕೊಳ್ಳಬೇಕಾಗುತ್ತಿತ್ತು. ಆದರೆ ನನಗೆ ಬಳಕೆಯಿದ್ದ ರಾಷ್ಟಿçÃಯ ಸ್ವಯಂಸೇವಕ ಸಂಘದ ವಲಯಗಳಲ್ಲಿ ಸಮಸ್ಯೆ ಆಗುತ್ತಿರಲಿಲ್ಲ” ಎಂದವರು ಹೇಳಿಕೊಂಡಿದ್ದಾರೆ. ಅವರ ತಂದೆ, ಚಿಕ್ಕಪ್ಪ ಮತ್ತು ಒಬ್ಬ ತಮ್ಮ ಶೆಟ್ಟಿ ಎನ್ನುವ ಉಪನಾಮ ಬಳಸಿದರೆ ಇಬ್ಬರು ತಮ್ಮಂದಿರು ಅಣ್ಣನಂತೆ ರಾವ್ ಹಾಕಿಕೊಂಡರು.
ತಮ್ಮ ಮೇಳದವರಿಗೆ ಕುಣಿತ ಕಲಿಯುವ ಬಗ್ಗೆ ಕೊರಗಶೆಟ್ಟರು ಮಳೆಗಾಲದಲ್ಲಿ ಮಂಗಳೂರಿನಲ್ಲಿ ತರಬೇತಿ ಕೇಂದ್ರ ಮಾಡಿದರು. ಕಾವು ಕಣ್ಣ ನೃತ್ಯಗುರುವಾಗಿ ಬಂದರು. ಆದರೆ ಸುಂದರರಾಯರ ಪ್ರಗತಿ ಅಷ್ಟಕ್ಕಷ್ಟೆ. “ಏನಿದ್ದರೂ ನನ್ನ ಪಾಲಿಗೆ ನೃತ್ಯ ಒಲಿಯಲಿಲ್ಲ, ಎಷ್ಟು ಸಾಧನೆ ಮಾಡಿದರೂ ಲಯಜ್ಞಾನದ ಕೊರತೆ ಅಲ್ಲಲ್ಲಿ ಕಂಡೇ ಕಾಣುತ್ತದೆ. ಆಗಲೇ ನಾನು ಮುಖ್ಯಪಾತ್ರಕ್ಕೆ ಮುಟ್ಟಿದ್ದೆ. ಬಿಡಾರದಲ್ಲಿ ಮಕ್ಕಳ ಹಾಗೆ ಅಭ್ಯಾಸ ಮಾಡಲು ಮನಸ್ಸು ಒಪ್ಪಲಿಲ್ಲ. ಗೊತ್ತಿದ್ದ ನಾಲ್ಕು ಹೆಜ್ಜೆ ಬಿಟ್ಟರೆ ನನ್ನ ನೃತ್ಯದ ಪ್ರಗತಿ ಅಷ್ಟಕ್ಕೆ ಸ್ಥಗಿತವಾಗಿತ್ತು” ಎಂದು ಒಪ್ಪಿಕೊಂಡರು.
ಸಹಕಲಾವಿದರಿಗೆ ಉತ್ತೇಜನ
ಹಿರಿಯ ಸ್ತ್ರೀವೇಷಧಾರಿ ಕೋಳ್ಯೂರು ರಾಮಚಂದ್ರರಾಯರು ಹೇಳಿದಂತೆ ಸುಂದರರಾಯರು ಸಹ-ಕಲಾವಿದರನ್ನು ಉತ್ತೇಜಿಸುತ್ತ ಪ್ರಸಂಗವನ್ನು ಸುಂದರವಾಗಿ ಕೊಂಡುಹೋಗುತ್ತಿದ್ದರು. ಮೇಳದಲ್ಲಿ ಅದು ತುಂಬ ಮುಖ್ಯ; ಮತ್ತು ವಿವಾದ ಬಂದರೆ ಅವರು ಅದಕ್ಕೆ ದೂರ. “ಅಂದಿಗೂ ಇಂದಿಗೂ ನಾನು ವಿವಾದದ ಉತ್ಸಾಹಿ ಅಲ್ಲವೇ ಅಲ್ಲ. ಯಾವುದಾದರೂ ವಿಷಯ ವಿಪರೀತಕ್ಕೆ ಹೋಗಿ ಪಾತ್ರಕ್ಕೆ ಹೊರತಾದ ಮಾರ್ಗ ಬರುತ್ತದೆ ಎಂದಾದರೆ ನಾನು ಬದಿಗೆ ನಿಲ್ಲುವವನು. ಭಯವೇನೂ ಇಲ್ಲ. ನನ್ನ ಪದ್ಯದ ಅರ್ಥ ನನ್ನದು. ಅಷ್ಟಾದರೆ ಮುಗಿಯಿತು, ಇನ್ನೇನಾಗಬೇಕು ಎಂಬ ಧೈರ್ಯ. ಯಾರೋ ಜೋರಿನವರು ಬಂದಿದ್ದಾರೆಂದು ಓಡಿಹೋಗುವುದಕ್ಕಂತೂ ಸಾಧ್ಯವಿಲ್ಲವಲ್ಲ!” ಇದು ಅವರ ನಿಲವು. ಸೊಗಸಾದ ಮಾತಂತೂ ಅವರ ಬೆಂಬಲಕ್ಕೆ ಇದ್ದೇ ಇತ್ತು. ಅವರ ಮಾತುಗಾರಿಕೆ ಬಹುಬೇಗ ಊರಿನ ಪರಿಸರದಲ್ಲಿ ಮನೆಮಾತಾಗಿತ್ತು. ಅಭಿನಂದನ ಗ್ರಂಥದ ಪ್ರಕಟಣೆಯ ಹೊಣೆ ಹೊತ್ತ ಚೌಟ ಪ್ರತಿಷ್ಠಾನದ ಡಿ.ಕೆ. ಚೌಟ ಅವರ ಅಜ್ಜಿ ಆಟ ನೋಡಿದವರು ‘ಆಟಿದ ರ್ಸದ ಲೆಕ ಪಾತೆರುವೆ ಅತ್ತಾ?’ (ಆಷಾಢದ ಮಳೆಯಂತೆ ಮಾತನಾಡುತ್ತಾನೆ ಅಲ್ಲವಾ?) ಎಂದು ಆಶ್ಚರ್ಯ ಸೂಚಿಸಿದ್ದರಂತೆ. ಮಳೆಯಂತಿದ್ದ ಮಾತು ಮುಂದೆ ಪಾಂಡಿತ್ಯಪೂರ್ಣವಾಯಿತು ಎನ್ನುತ್ತಾರೆ ಡಿ.ಕೆ. ಚೌಟ.
“ಮೇಳ ಆರಂಭವಾಗುವವರೆಗೆ (ನವೆಂಬರ್) ಮನೆಯಲ್ಲಿ ಕುಳಿತು ಮೇಳದ ಅಡ್ವಾನ್ಸ್ ಹಣದಲ್ಲಿ ದಿನ ಕಳೆಯುವ ಕಲಾವಿದರಿಗಿಂತ ಬೇರೆಯಾಗಿ (ತಾಳಮದ್ದಳೆ) ಅರ್ಥಗಾರಿಕೆ ನೆಲೆಯಲ್ಲಿ ಕಾಲಕಳೆಯುವ, ಮಳೆಗಾಲದ ದಿನಗಳು ನೀರಸವಾಗದಂತೆ ಕಳೆಯುವ ವ್ಯವಸ್ಥೆಗೆ ನಾನಂತೂ ಹೊಂದಿಕೊಂಡೆ” ಎಂದಿದ್ದಾರೆ ಸುಂದರರಾವ್ ಅವರಲ್ಲಿ ಹೆಚ್ಚಿನ ಕಲಾವಿದರಿಗೆ ಸಾಮಾನ್ಯವಾದ ಆರ್ಥಿಕ ಅಶಿಸ್ತು ಇರಲಿಲ್ಲ. ಅವರು ತಪ್ಪಿಲ್ಲದೆ ಸಂಸ್ಕೃತ ಶ್ಲೋಕಗಳನ್ನು ಹೇಳಲು ಕಲಿತದ್ದು ಮಹತ್ತ್ವದ್ದೇ. “ನನ್ನ ಬದುಕಿಗೆ ಆಧಾರವಾದದ್ದು ಅಥವಾ ನನಗೆ ಅಷ್ಟೋ ಇಷ್ಟೋ ಪ್ರಸಿದ್ಧಿ ದೊರೆಯಲು ಕಾರಣವಾದದ್ದು ನನ್ನ ಭಾಷಾಶುದ್ಧಿ. ಒಂದು ಮಳೆಗಾಲದಲ್ಲಿ ಉಡುಪಿ ವಳಕಾಡಿನಲ್ಲಿದ್ದ ದೇವದಾಸ ಚಿಕ್ಕಪ್ಪನ ಮನೆಯಲ್ಲಿ ಕುಳಿತು ಸಂಸ್ಕೃತ ಕಲಿತೆ. ಭಾಷಾಶುದ್ಧಿ ನನ್ನ ಏಳನೇ ತರಗತಿ ಅನುಭವದಿಂದ ಸಿದ್ಧಿಸಲಿಲ್ಲ. ಅದಕ್ಕೆ ಕಾರಣ ಚಿಕ್ಕಪ್ಪ ದೇವದಾಸ ಶಿರೋಮಣಿಯವರ ಅನುಗ್ರಹ” ಎಂದವರು ಪ್ರಾಂಜಲವಾಗಿ ತಿಳಿಸಿದ್ದಾರೆ.
ಮುಂದಿನ ವರ್ಷ ಕೊರಗಶೆಟ್ಟರು ಹೊಸ ಮೇಳ ಮಾಡಿದರು; ‘ಕರ್ನಾಟಕ ಯಕ್ಷಗಾನ ನಾಟಕ ಮಂಡಳಿ’ ಎಂದು ಅದರ ಹೆಸರು. ಹಳೆಯ ಮೇಳವನ್ನು ಮಗನಿಗೆ ಕೊಟ್ಟರು. ಹೊಸದರಲ್ಲಿ ದಾಮೋದರ ಮಂಡೆಚ್ಚರು ಭಾಗವತರು. ಮಲ್ಪೆ ರಾಮದಾಸ ಸಾಮಗರು, ನಿಡುಗಾಲದ ಒಡನಾಡಿ ಗೋವಿಂದಭಟ್ಟರು, ಹಾಸ್ಯಗಾರ ವಿಟ್ಲ ಗೋಪಾಲಕೃಷ್ಣ ಜೋಶಿ, ರಾಮಚಂದ್ರ ಬಲ್ಯಾಯ – ಹೀಗೆ ಕಲಾವಿದರನ್ನು ಸೇರಿಸಿದರು. ಕುಂಬ್ಳೆ ತಮ್ಮನ್ನು ಸಮರ್ಥಿಸಿಕೊಳ್ಳುತ್ತಿರಲಿಲ್ಲ; ವೇಷಧಾರಿಗೆ ಕುಣಿತ ಅಗತ್ಯ ಎಂದೇ ಹೇಳುತ್ತಿದ್ದರು. “ಪದ್ಯ ಹೇಳುವಾಗ ನಿಲ್ಲುವುದಂತೂ ನನ್ನಿಂದ ಆಗುತ್ತಿರಲಿಲ್ಲ. ಎಷ್ಟೋ ಜನ ಮಿತ್ರರು ‘ನಿಮ್ಮ ಕುಣಿತ ನಮಗೆ ಬೇಡ; ಮಾತು ಮಾತ್ರ ಸಾಕು’ ಎಂದದ್ದುಂಟು. ಶೇಣಿ ಅವರಂತೂ ನನ್ನ ಕುಣಿತವನ್ನು ಸ್ಕೂಟರು ಬಿಟ್ಟ ಹಾಗೆ, ಮಗ್ಗದ ಲಾಳಿ ಓಡಿಸಿದ ಹಾಗೆ ಎಂದೆಲ್ಲ ಲೇವಡಿ ಮಾಡಿದ್ದುಂಟು. ಹಾಗೆಂದು ಆ ಮಾತು ಹೇಳಿದವರು ನನಗೆ ಶತ್ರುಗಳೆಂದು ಯಾವತ್ತೂ ತೋರಿದ್ದಿಲ್ಲ” ಎಂದು ಕೂಡ ಹೇಳಿದ್ದಿದೆ. ಕೋಳ್ಯೂರರು ಹೇಳಿದಂತೆ ಆಟವನ್ನು ಸುಂದರವಾಗಿ ಕೊಂಡುಹೋಗುತ್ತಿದ್ದ ಕಾರಣ ಅವರು ಪ್ರೇಕ್ಷಕರಿಗೂ ಮೇಳದ ಯಜಮಾನರಿಗೂ ಇಷ್ಟದ ವ್ಯಕ್ತಿಯಾಗಿದ್ದರು.
ಸಾಗರ, ತೀರ್ಥಹಳ್ಳಿ, ಹೊಸನಗರ ಮುಂತಾಗಿ ತಿರುಗಾಟ ಮಲೆನಾಡಿನ ಭಾಗಕ್ಕೆ ಹೋದಾಗ ರಾತ್ರಿ ತೀವ್ರ ಚಳಿ ಬಾಧಿಸುತ್ತಿತ್ತು. ಅದಕ್ಕಾಗಿ ಚೌಕಿಯ ಬದಿಯಲ್ಲಿ ಬೆಂಕಿ ಹಾಕಿ ಮೈ ಕಾಯಿಸಿಕೊಳ್ಳಬೇಕಾಗುತ್ತಿತ್ತು. ಆದರೆ ಮನೆಗಳಲ್ಲಿ ಬಿಸಿನೀರಿನ ಸ್ನಾನದ ಉಪಚಾರ ಸಿಗುತ್ತಿತ್ತು. ನನಗೆ ಸಂಘದವರ ಮನೆಗಳಲ್ಲೂ ಆತಿಥ್ಯ ಲಭ್ಯವಿತ್ತು ಎನ್ನುವ ಕುಂಬ್ಳೆ, ಆ ತಿರುಗಾಟದಲ್ಲಿ ರಾಮದಾಸ ಸಾಮಗರು, ಭೀಮಭಟ್ಟರು ಮತ್ತು ತಮ್ಮ ಜೋಡಣೆಯಿಂದ ಉತ್ತಮ ಕಥಾನಕಗಳು ರೂಪಗೊಂಡದ್ದನ್ನು ನೆನಪಿಸಿಕೊಂಡಿದ್ದಾರೆ. ಕೊರಗಶೆಟ್ಟರ ಮೇಳದಲ್ಲಿ ಇವರ ಸಂಬಳ ಏರುತ್ತಿತ್ತು. ಮನೆಗೆ ಹಣ ಕೊಡುವ ಸ್ಥಿತಿಯೂ ಬಂತು. ಈ ನಡುವೆ ಸುಶೀಲಾ ಅವರೊಂದಿಗೆ ಮದುವೆಯಾಗಿ ಕ್ರಮೇಣ ಐವರು ಮ್ಕಕಳ ಸಂಸಾರವೂ ಅವರದಾಯಿತು.
ಸುರತ್ಕಲ್ ಮೇಳ
ಸುರತ್ಕಲ್ ಮೇಳದ ತಿರುಗಾಟಗಳು ಸುಂದರರಾಯರ ಕಲಾಜೀವನದಲ್ಲಿ ಮಹತ್ತ್ವದ್ದೇ. ಮೇಳ ಹೊರಡಲು ಕಾರಣ ಅಗರಿ ಶ್ರೀನಿವಾಸ ಭಾಗವತರು. ಅವರು ತಿರುಗಾಟ ಬಿಟ್ಟು ಮನೆಯಲ್ಲಿದ್ದರು. ಆಗ ಸುರತ್ಕಲ್ನ ಪೈ ಸಹೋದರರಿಗೆ (ವಾಸುದೇವ ಪೈ, ವರದರಾಯ ಪೈ) ಮೇಳ ಮಾಡುವಂತೆ ಹಲವರು ಒತ್ತಾಯಿಸಿದರು. ಅಗರಿಯವರಲ್ಲಿ ಕೇಳಿದಾಗ ಒಪ್ಪಿಯೂ ಬಿಟ್ಟರು. “ಅಗರಿಯವರ ಹಾಡುಗಾರಿಕೆ ಅವರದೇ ಆದ ವಿಶೇಷತೆಯಿಂದ ಕೂಡಿತ್ತು. ರಂಗಸ್ಥಳಕ್ಕೆ ಎಷ್ಟು ಬೇಕೋ ಅಷ್ಟೇ ವಿಸ್ತಾರ, ಅಷ್ಟೇ ಸ್ಪಷ್ಟತೆ ಅವರ ವೈಶಿಷ್ಟ್ಯ. ಇಂದಿನ ಭಾಗವತರು ಒಂದೊಂದು ಶಬ್ದವನ್ನು ಹತ್ತಾರು ಸಲ ಹೇಳಿ ಕಛೇರಿ ನಡೆಸುವುದನ್ನು ನೋಡುವಾಗ ಅಗರಿಯವರ ಹಾಡುಗಾರಿಕೆ ನೆನಪಾಗುತ್ತದೆ. ಯಕ್ಷಗಾನದಲ್ಲಿ ಒಂದು ಕಡೆಯಿಂದ ಹಾಡು ಉದ್ದವಾಗಿ ಬೆಳೆಯಿತು, ಇನ್ನೊಂದು ಕಡೆಯಿಂದ ಮಾತೂ ಲಂಬಿಸಿತು, ಮತ್ತೊಂದು ಕಡೆಯಿಂದ ಕುಣಿತವೂ ನಿಯಂತ್ರಣ ಇಲ್ಲದೆ ವಿಸ್ತಾರವಾಯಿತು. ಯಾರಿಗೆ ಯಾವುದರಲ್ಲಿ ಪರಿಣತಿಯೋ ಅವರು ಅದನ್ನು ಪ್ರದರ್ಶಿಸುವುದಕ್ಕೆ ಯಾವ ತಡೆಯೂ ಇಲ್ಲದ ಕ್ಷೇತ್ರವಾಗಿ ಬೆಳೆದ ಇಂದಿನ ಯಕ್ಷಗಾನವನ್ನು ಕಂಡರೆ ನನಗೆ ನಾನು ಬಂದ ಕಾಲ ನೆನಪಾಗುತ್ತದೆ. ಅಗರಿಯವರು ಒಳ್ಳೆಯ ರಂಗತಜ್ಞರಾಗಿದ್ದರು. ಹಿಂದೆ ತೆಂಕುತಿಟ್ಟಿನಲ್ಲಿ ಪದ್ಯವನ್ನು ಮತ್ತೆ ಮತ್ತೆ ಆವರ್ತನೆಗೆ ಒಳಪಡಿಸುತ್ತಿರಲಿಲ್ಲ. ಅಗರಿ ಅವರು ಅದೇ ಸಂಪ್ರದಾಯದಲ್ಲಿ ಬೆಳೆದು ಬಂದವರು. ಹಾಗಂತ ಅವರು ಕುರುಡು ಸಂಪ್ರದಾಯ ಪಾಲಕರೂ ಆಗಿರಲಿಲ್ಲ. ತೆಂಕಿನಲ್ಲಿ ಕಡಮೆಯಾಗಿದ್ದ ಅಭಿನಯದ ಭಾಗವನ್ನು ತುಂಬುವವರಿಗೆ ಅವರ ಪದ್ಯ ಪೋಷಕವಾಗಿ ಬರುತ್ತಿತ್ತು” ಎಂದು ಕುಂಬ್ಳೆ ಕಾಲ ಈ ಕಲೆಯ ಮೇಲೆ ತಂದ ಪ್ರಭಾವವನ್ನು ಬಿಡಿಸಿಟ್ಟಿದ್ದಾರೆ. ಬಡಗು ತಿಟ್ಟಿನಲ್ಲೂ ಅದೇ ಕಥೆ. ಹಾಡಿನಲ್ಲಿ ಪದಗಳ ಆವರ್ತನೆ ಎಷ್ಟೋ! ಕುಣಿತ, ಅಭಿನಯಗಳೆಲ್ಲ ಜಾಳು ಜಾಳು, ದಿಕ್ಕಾಪಾಲು; ಚಪ್ಪಾಳೆ, ಶಿಳ್ಳೆಗಳೇ ನಿರ್ಣಾಯಕ!
ವರದರಾಯ ಪೈಗಳು ಸಂಘದ ಸ್ವಯಂಸೇವಕರು. ಆ ಗೆಳೆತನದ ಮೂಲಕ ತಮ್ಮ ಮೇಳಕ್ಕೆ ಬರುವುದಕ್ಕೆ ಕುಂಬ್ಳೆಯವರನ್ನು ಕರೆದರು. ಬರುವುದಕ್ಕೆ ಇವರಿಗೆ ಸಮಸ್ಯೆಯೇನೂ ಇಲ್ಲ. ಯಜಮಾನ ಕೊರಗಶೆಟ್ಟರಿಗೆ ಏನು ಹೇಳುವುದು ಎಂಬುದೊಂದೇ ಸಮಸ್ಯೆ. ಸುರತ್ಕಲ್ ಮೇಳದವರು ಇಷ್ಟು (ಸಂಬಳ) ಕೊಡುತ್ತಾರಂತೆ ಎಂದರು. ಅಷ್ಟು ಕೊಡುವುದಕ್ಕೆ ಕೊರಗಶೆಟ್ಟರಿಗೊಂದು ತೊಂದರೆ: ಅದೇ ರೀತಿಯಲ್ಲಿ ಬೇರೆ ವೇಷಧಾರಿಗಳ ಸಂಬಳವನ್ನು ಏರಿಸಬೇಕು. ಅದೇ ಕಾರಣದಿಂದ ಬಿಡುಗಡೆ ಸಿಕ್ಕಿತು. ಕುಂಬ್ಳೆ ಸುರತ್ಕಲ್ ಮೇಳಕ್ಕೆ ಸೇರಿದರು. ಇಲ್ಲಿ ಆಗಲೇ ಶೇಣಿ ಗೋಪಾಲಕೃಷ್ಣ ಭಟ್ಟರಿದ್ದಾರೆ. ಸ್ತ್ರೀ ವೇಷಕ್ಕೆ ಕೋಳ್ಯೂರು ರಾಮಚಂದ್ರರಾವ್. ಮೊದಲಿಗೆ ‘ಚಂದ್ರಾವಳಿ ವಿಲಾಸ’ ಪ್ರಸಂಗವನ್ನು ಎತ್ತಿಕೊಂಡರು. ಸುಂದರರಾಯರು ಕೃಷ್ಣ, ಕೋಳ್ಯೂರು ಚಂದ್ರಾವಳಿ, ವಿಟ್ಲ ಜೋಶಿಯವರ ಅತ್ತೆ ಮತ್ತು ಶೇಣಿಯವರ ಚಂದಗೋಪ. ಒಂದೇ ವರ್ಷದಲ್ಲಿ ಮೇಳ ಭದ್ರವಾಯಿತು.
ಆದರೆ ಇತರ ಮೇಳಗಳು ತುಳು ಪ್ರಸಂಗ ಆಡಿ ಹಣದ ಕೊಯ್ಲು ಮಾಡುವಾಗ ಇವರು ಸುಮ್ಮನಿರುವಂತಿರಲಿಲ್ಲ. ಆದರೆ ಅಗರಿಯವರು ತುಳು ಪ್ರಸಂಗದ ಭಾಗವತಿಕೆ ಮಾಡಲು ಒಪ್ಪಲಿಲ್ಲ. ಕೊನೆಗೆ ಬಗೆಬಗೆಯಾಗಿ ಒತ್ತಡ ತಂದು ಪ್ರಸಾದ ನೋಡಿ ಒಪ್ಪಿಸಿದ್ದಾಯಿತು. ಅಷ್ಟಾಗುವಾಗ ಶೇಣಿ ಬೇರೆ ಮೇಳಕ್ಕೆ ಹೋಗಿ ಮಲ್ಪೆ ಶಂಕರನಾರಾಯಣ ಸಾಮಗರು (ದೊಡ್ಡ ಸಾಮಗರು) ಇಲ್ಲಿಗೆ ಬಂದಿದ್ದರು. ‘ತುಳುನಾಡ ಸಿರಿ’ಯಲ್ಲಿ ಸಿರಿಯಾಗಿ ಕೋಳ್ಯೂರು, ಸೂಳೆ ಸಿದ್ದುವಾಗಿ ಕಡಬ ಸಾಂತಪ್ಪ, ಕಾಂತು ಪೂಂಜನಾಗಿ ಸುಂದರರಾವ್ ಮಾಡಿದರು. ವಿಟ್ಲ ಜೋಶಿಯವರ ಹಾಸ್ಯವು ಉತ್ತಮಮಟ್ಟದಲ್ಲಿತ್ತು. ಇಡೀ ಮೇಳವನ್ನು ಅಭಿಮಾನಿಗಳು ಮುಂಬಯಿಗೆ ಕರೆಸಿಕೊಂಡಿದ್ದು ಅಲ್ಲಿ ಸಿರಿ ದಿಗ್ವಿಜಯವೇ ಆಯಿತು. ಆದರೆ ಕೊಡಲೊಪ್ಪಿದ ಸಂಬಳ ಕೊಡಲಿಲ್ಲವೆಂದು ಯಜಮಾನರಲ್ಲಿ ಬೇಸರವಾಯಿತು. ಮತ್ತೆ ಕೊಟ್ಟರಾದರೂ ಯಾವುದೋ ಕಾರಣದಿಂದ ಅಗರಿ ಅವರಿಗೂ ಬೇಸರವಾಗಿತ್ತು.
ಮತ್ತೆ ಕೂಡ್ಳು ಮೇಳ
ಅದೇ ಹೊತ್ತಿಗೆ ಕೊರಗಶೆಟ್ಟರ ಆಪ್ತರಾಗಿ ಕಟೀಲು ಮೇಳವನ್ನು ನಡೆಸುತ್ತಿದ್ದ ನೂಜಿಪ್ಪಾಡಿ ಸಂಕಣ್ಣಯ್ಯ ಅವರು ಹೊಸದಾಗಿ ಕೂಡ್ಲು ಮೇಳವನ್ನು ನಡೆಸಲು ಮುಂದೆಬಂದರು. ಅಲ್ಲಿಗೆ ಅಗರಿ ಬಂದಾಗ ಸುಂದರರಾಯರೂ ಬಂದರು. ಶೇಣಿ, ಕೋಳ್ಯೂರು, ಜೋಯಿಸರು, ಕಟೀಲು ಶ್ರೀನಿವಾಸರಾವ್, ವಂಡ್ಸೆ ನಾರಾಯಣ ಎಲ್ಲ ಅಲ್ಲಿ ಸೇರಿದರು. ಪ್ರಸಂಗ ಬಪ್ಪನಾಡು ಕ್ಷೇತ್ರ ಮಹಾತ್ಮೆ; ಜೊತೆಗೆ ಚಂದ್ರಾವಳಿ ವಿಲಾಸವೂ ಇತ್ತು. ಶೇಣಿ ಅವರದ್ದು ದಾರಕಾಸುರ ಮತ್ತು ಬಪ್ಪಬ್ಯಾರಿ ಪಾತ್ರ. ಈ ಸಂದರ್ಭದಲ್ಲಿ ಸಹೃದಯ ಕಲಾವಿದ ಕುಂಬ್ಳೆ ಅವರು ಹೇಳುವ ಮಾತು: “ಶಂಕರನಾರಾಯಣ ಸಾಮಗರ ಮಾತುಗಾರಿಕೆಗೆ ಮಾರುಹೋಗಿದ್ದ ನಾನು ಶೇಣಿ ಅವರ ಮುಂದೆ ಶರಣಾಗಿಬಿಟ್ಟೆ. ಸಾಮಗರು ಮಾತನಾಡುವಾಗ ಎದುರಿನವನನ್ನು ತಡೆಯುವುದಿಲ್ಲ. ಪೂರ್ತಿ ಹೇಳಲು ಅವಕಾಶ ಕೊಟ್ಟು ಮತ್ತೆ ಖಂಡಿಸುತ್ತಾರೆ. ಆದ್ದರಿಂದ ಸುರತ್ಕಲ್ ಮೇಳದಲ್ಲಿ ಅವರು ನನಗೆ ಆಪತ್ತಾಗಿ ಕಾಣಿಸಲಿಲ್ಲ. ಇಲ್ಲಿ ಕೂಡ್ಳು ಮೇಳದಲ್ಲಿ ಶೇಣಿ ಎದುರಾದರು. ಎಷ್ಟೋ ಸಲ ಈ ಹುಲಿಯ ಜೊತೆ ಈ ಮೇಳಕ್ಕೆ ಯಾಕೆ ಸೇರಿದೆ ಎನಿಸುತ್ತಿತ್ತು. ಆದರೆ ನಾನು ಆಕ್ರಮಣಕ್ಕೆ ಹೋಗಲಿಲ್ಲ; ಆತ್ಮರಕ್ಷಣೆಯಲ್ಲಿ ಹಿಂದೆ ಬೀಳಲಿಲ್ಲ. ಅವರ ಪ್ರಖರ ತರ್ಕಶಕ್ತಿಯ ಮುಂದೆ ಎಷ್ಟು ಮಾತನಾಡಿದರೂ ನಾನು ದುರ್ಬಲ ಎನಿಸುತ್ತಿತ್ತು. ಅದೇ ವೇಳೆ ದಿನಗಳೆದಂತೆ ಅವರ ವಲಯದಲ್ಲಿ ನಾನು ಆತ್ಮೀಯನಾಗಿ ಗುರುತಿಸಲ್ಪಟ್ಟೆ. ಅದಕ್ಕೆ ಕಾರಣ ಮುಖ್ಯವಾಗಿ ಅವರಿಗೆ ನನ್ನ ಹಿರಿಯರೆಲ್ಲ ಪರಿಚಿತರು. ಹಾಗಾಗಿ ‘ನಮ್ಮ ಸುಂದರ ಅಡ್ಡಿಯಿಲ್ಲೆ’ ಎಂದು ಸ್ವೀಕರಿಸಿದರು – ‘ನನ್ನಲ್ಲಿ ಮಲೆಯಾಳದಲ್ಲಿ ಮಾತನಾಡುತ್ತಿದ್ದರು’ ಎಂದಿದ್ದಾರೆ. ಶೇಣಿಯವರೊಂದಿಗೆ ಹಲವರಿಗೆ ಇಂತಹ ಅನುಭವ ಆದದ್ದಿದೆ. ಒಮ್ಮೆ ಅವರ ನೋಟವನ್ನು ಎದುರಿಸುವುದು ಕಷ್ಟ. ಹೊಂದಿಕೊಂಡರೆ ಮತ್ತೆ ತೊಂದರೆಯಿಲ್ಲ.
ಮುಂದಿನ ತಿರುಗಾಟ ಮತ್ತೆ ಸುರತ್ಕಲ್ ಮೇಳದಲ್ಲಿ. ಕಾರಣ ವರದರಾಯ ಪೈಗಳ ಸ್ನೇಹ. ಈಗ ಸುರತ್ಕಲ್ ಮೇಳದಲ್ಲಿ ಅಗರಿಯವರು ಇರಲಿಲ್ಲ. ಪ್ರತಿಭೆಯನ್ನು ಹೊರಗೆಳೆಯುವ ಅವರ ಕೌಶಲ, ಹಾಡುಗಾರಿಕೆಯ ಮಟ್ಟು, ಸಾಹಿತ್ಯಶುದ್ಧಿಗಳನ್ನು ನೆನಪಿಸಿಕೊಂಡರು. ಇವರು ಮೆಚ್ಚಿದ ಇನ್ನೊಬ್ಬ ಭಾಗವತರು ದಾಮೋದರ ಮಂಡೆಚ್ಚರು. ಅವರು ಸಂಗೀತ ವಿದ್ವಾಂಸರಾದರೂ ಯಕ್ಷಗಾನಕ್ಕೆ ಹೊಂದಿಕೊಂಡಿದ್ದರು. ಚೆನ್ನಾಗಿ ಆಟ ಆಡಿಸುತ್ತಿದ್ದರು. ಇರಾ ಮೇಳದಲ್ಲಿದ್ದಾಗ ಅವರ ಜೊತೆ ಬೆಳೆದ ಆತ್ಮೀಯತೆ ನಿರಂತರವಾಗಿತ್ತು. ಆದರೆ ಮುಂಬಯಿಗೆ ಯಕ್ಷಗಾನಕ್ಕೆ ಹೋಗಿದ್ದಾಗ ಸಂಭವಿಸಿದ ಅವರ ಹಠಾತ್ ನಿಧನ ಯಕ್ಷರಂಗಕ್ಕೇ ನಷ್ಟ ಎನಿಸಿತು. ಸುರತ್ಕಲ್ ಮೇಳಕ್ಕೆ ತಂದೆಯ ಸ್ಥಾನವನ್ನು ತುಂಬಲು ವಿದ್ಯಾ ಇಲಾಖೆಯಲ್ಲಿ ಉದ್ಯೋಗದಲ್ಲಿದ್ದ ಅಗರಿ ರಘುರಾಮ ಭಾಗವತರನ್ನು ಕರೆದು ತಂದರು.
ಜಗನ್ನಾಥರಾಯರ ಆದರ್ಶ
ಇದರ ಮಧ್ಯೆ ಸುಂದರರಾವ್ ಮತ್ತು ಆರೆಸ್ಸೆಸ್ ಸಂಬಂಧ ಗಾಢವಾಗುತ್ತಾ ನಡೆದಿತ್ತು. ಅವರು ಮೇಳದ ಕಲಾವಿದನೆಂಬ ಮಾನ್ಯತೆ ಆ ವಲಯದಲ್ಲಿ ತಾನೇತಾನಾಗಿ ಬೆಳೆದಿತ್ತು. ಕುಂಬ್ಳೆ ಪರಿಸರದ ಯಾವುದೇ ಊರಿಗೆ ಹೋದರೂ ಅಲ್ಲಿ ಸಂಘದ ಶಾಖೆ ಇರುತ್ತಿತ್ತು. ಬೌದ್ಧಿಕ್ಗೆ ಜನಸಂಘ, ಭಾರತೀಯ ಜನತಾ ಪಕ್ಷದ ಸಭೆಗಳಿಗೆ ಕರೆಯುತ್ತಿದ್ದರು. ಪಕ್ಷದ ಗ್ವಾಲಿಯರ್ ಅಧಿವೇಶನಕ್ಕೆ ಹೋದಾಗ ಜಗನ್ನಾಥರಾವ್ ಜೋಶಿ ಅವರ ಭೇಟಿ ಆಯಿತು. ಯಕ್ಷಗಾನ ಕಲಾವಿದ ಎಂದು ಪರಿಚಯಿಸಿಕೊಂಡಾಗ “ಏನು, ಅಲ್ಲಿ ಯಕ್ಷಗಾನ; ಇಲ್ಲಿ ರಾಜನೀತಿ ಗಾನವೆ? ಮಾಡಿ, ಮಾಡಿ” ಎಂದರಂತೆ. “ಮುಂದಿನ ದಿನಗಳಲ್ಲಿ ನನ್ನ ರಾಜಕೀಯ ಭಾಷಣಗಳಿಗೆ ಅವರೇ ಸ್ಫೂರ್ತಿ ಆದರೆಂದುಕೊಳ್ಳುವೆ” ಎಂದಿದ್ದಾರೆ ಸುಂದರರಾವ್.
೧೯೬೫ರಲ್ಲಿ ಸುರತ್ಕಲ್ ಮೇಳಕ್ಕೆ ಮರುಪ್ರವೇಶ ಆದಾಗ ಶಂಕರ ನಾರಾಯಣ ಸಾಮಗರಲ್ಲದೆ ಸ್ತ್ರೀವೇಷಧಾರಿ ಪಾತಾಳ ವೆಂಕಟ್ರಮಣ ಭಟ್, ತೆಕ್ಕಟ್ಟೆ ಆನಂದ ಮಾಸ್ತರ್, ಶಿವರಾಮ ಜೋಗಿ ಅವರೆಲ್ಲ ಇದ್ದರು. ಧರ್ಮಸ್ಥಳ ಕ್ಷೇತ್ರ ಮಹಾತ್ಮೆ ಆಡಿದಾಗ ಕ್ಷೇತ್ರದವರು ತಡೆದದ್ದು, ಮತ್ತೆ ಅಂದಿನ ಧರ್ಮಾಧಿಕಾರಿ ರತ್ನವರ್ಮ ಹೆಗ್ಗಡೆಯವರು ಉದಾರವಾಗಿ ಒಪ್ಪಿದ್ದು ಆಯಿತು.
ಪ್ರಾಸಗಳ ಸರಣಿ
ಸುಂದರರಾಯರ ಅರ್ಥದ ವಿಷಯ ಬಂದಾಗೆಲ್ಲ ಅವರ ಪ್ರಾಸಗಳ ವಿಷಯ ಬಂದೇ ಬರುತ್ತದೆ. “ಶಂಕರನಾರಾಯಣ ಸಾಮಗರು ಪ್ರಾಸವನ್ನು ಬಳಸುತ್ತಿದ್ದು ಅವರ ಪ್ರಾಸ ನನಗೆ ಅದ್ಭುತ ಎನಿಸುತ್ತಿತ್ತು. ಅವರು ಅಪರೂಪಕ್ಕೆ ಪ್ರಾಸವನ್ನು ಬಳಸುತ್ತಿದ್ದು, ತಲೆ ತಗ್ಗಿ ಬೆನ್ನು ಬಗ್ಗಿ ಕಾಯ ಕುಗ್ಗಿ ಹೀಗೆ ಅಂತ್ಯಪ್ರಾಸದ ನುಡಿಗಳು ನನ್ನ ಮನಸ್ಸಿನ ಮೂಲೆಯಲ್ಲಿ ಪ್ರಭಾವ ಉಂಟು ಮಾಡುತ್ತಿತ್ತು. ಅದರ ಪರಿಣಾಮವೆಂಬಂತೆ ನನಗೂ ಮಾತಿನಲ್ಲಿ ಪ್ರಾಸ ಬಳಸುವುದು ರೂಢಿಯಾಯಿತು. ಅಂತಹ ಪ್ರಾಸಗಳು ಜನರಲ್ಲಿ ಪುಳಕ ಉಂಟುಮಾಡುತ್ತಿವೆ ಎಂದು ಗಮನಕ್ಕೆ ಬಂದ ಮೇಲೆ ಮಾತುಗಾರಿಕೆಯಲ್ಲಿ ಅದು ಉಪಯುಕ್ತ ಎಂದು ತೀರ್ಮಾನಿಸಿದೆ. ನನ್ನ ಪ್ರಾಸವಾಕ್ಯಗಳು ರೆಡಿಮೇಡ್ ಅಲ್ಲ; ಸಮಯ ಸ್ಫೂರ್ತಿಯಿಂದ ಮೂಡಿಬಂದಂಥವು” ಎಂದವರು ವಿವರಣೆ ನೀಡಿದ್ದಿದೆ. ಮುಂದೆ ಧರ್ಮಸ್ಥಳ ಮೇಳದಲ್ಲಿ ಭಾಗವತ ಕಡತೋಕ ಮಂಜುನಾಥ ಭಾಗವತರಿಂದಲೂ ಅದಕ್ಕೆ ಪ್ರೋತ್ಸಾಹ ಸಿಗುತ್ತಿತ್ತು. ಪ್ರಾಸವನ್ನು ಎಲ್ಲ ಕಡೆ ಬಳಸಬಾರದು; ಶೃಂಗಾರ, ವೀರರಸ (ಯುದ್ಧ)ಗಳಿಗೆ ಬಳಕೆ ಸರಿ ಎಂಬುದು ಅವರ ಸಲಹೆ.
ನೋವಿನ ಪ್ರಸಂಗ
ನಿದ್ದೆ ಬಿಟ್ಟು ಮಾಡುವ ಕೆಲಸದಲ್ಲಿ ಅಸಹನೆ, ಅಸೂಯೆಗಳು ಇದ್ದೇ ಇರುತ್ತವೆ. ಇನ್ನು ಇವರೆಲ್ಲ ಭಾವಜೀವಿಗಳಾದ ಕಲಾವಿದರು ಬೇರೆ. ಸುರತ್ಕಲ್ ಮೇಳದಲ್ಲಿ ಎದುರಾದ ಅಂತಹ ಒಂದು ಸಂದರ್ಭ ಮೇಳ ಬಿಡುವಷ್ಟು ಬೇಸರ ಉಂಟುಮಾಡಿತ್ತು. ಸಾಗರದ ಬಳಿ ಒಂದು ಪ್ರದರ್ಶನ ನಡೆಯುತ್ತಿದ್ದಾಗ ಸುಂದರರಾಯರಿಗೆ ಯಾರೋ ಅಭಿಮಾನಿಗಳು ನೋಟಿನ ಮಾಲೆ ಹಾಕಿದರು. ಮೇಳದಲ್ಲಿ ಅವರನ್ನು ವಿರೋಧಿಸುತ್ತಿದ್ದ ಒಂದು ಗುಂಪು ಶಂಕರನಾರಾಯಣ ಸಾಮಗರಿಗೆ ಅದು ಮಾಲೆ ಹಾಕಿಸಿಕೊಂಡದ್ದು ಎಂಬಂತಹ ವರದಿ ನೀಡಿ ಚಾಡಿ ಹೇಳಿತು. ಅವರು ಕೂಡ ವಿಚಾರಣೆಗೆ ಮುಂದಾದುದಲ್ಲದೆ ಪ್ರದರ್ಶನದ ವೇಳೆ ಮಾತಿನ ಬಾಣವನ್ನೂ ಎಸೆಯತೊಡಗಿದರು. ಇದು ಅಸಹನೀಯವಾಗಿ ಕುಮಟಾ ಬಳಿ ಒಂದು ದಿನ ರಾವ್ ಯಾರಿಗೂ ಹೇಳದೆ ಹೊರಟುಬಿಟ್ಟರು. ಅಂದು ಯಜಮಾನರು ಸೇರಿ ಹಿರಿಯ ಕಲಾವಿದರು ರಾಜಿ ಮಾಡಿಸಿದರಾದರೂ ಮನಸ್ಸು ಮುರಿಯಿತು. ಇನ್ನೊಂದೆಡೆ ರತ್ನವರ್ಮ ಹೆಗ್ಗಡೆಯವರು ಇವರನ್ನು ಧರ್ಮಸ್ಥಳ ಮೇಳಕ್ಕೆ ಕರೆದುಕೊಳ್ಳುವ ಆಸಕ್ತಿಯನ್ನು ತೋರಿಸಿದರು. ಮೇಳ ನಡೆಸುವಲ್ಲಿ ಒಂದು ಬಿಗಿತನ ಬೇಕು; ಕೊರಗಶೆಟ್ಟರಲ್ಲಿ ಅದಿತ್ತು; ಸುರತ್ಕಲ್ ಮೇಳದ ಯಜಮಾನರಲ್ಲಿ ಅದು ಕಾಣಲಿಲ್ಲ ಎಂಬುದು ಕುಂಬ್ಳೆ ಅವರ ಅಭಿಪ್ರಾಯ.
ಹೆಗ್ಗಡೆಯವರ ಕರೆ
ಮಾತನಾಡಲು ಬರುವಂತೆ ರತ್ನವರ್ಮರು ನಾರಾಯಣ ಕಾಮತ್ ಮೂಲಕ ಮೇಲಿಂದ ಮೇಲೆ ಹೇಳಿಕಳುಹಿಸಿದ ಕಾರಣ ಸುಂದರರಾವ್ ಒಮ್ಮೆ ಹೋದರು. ಆ ಹೊತ್ತಿಗೆ ಅವರಿಗೆ ಸ್ವಲ್ಪ ದೊಡ್ಡ ಮೊತ್ತದ ಅಗತ್ಯವಿತ್ತು; ಸುರತ್ಕಲ್ ಮೇಳದಿಂದ ಅಡ್ವಾನ್ಸ್ ಹಣ ಪಡೆದದ್ದೂ ಇತ್ತು. ಹೆಗ್ಗಡೆಯವರು ಒಂದೇ ಪೆಟ್ಟಿಗೆ ಅದನ್ನೆಲ್ಲ ಸರಿಪಡಿಸಿ ಮೇಳಕ್ಕೆ ಬರುವಂತೆ ಒಪ್ಪಿಸಿಬಿಟ್ಟರು. ಆದರೂ ವರದರಾಯ ಪೈಗಳು ಬಿಡುವುದಕ್ಕೆ ತಯಾರಿಲ್ಲ. ರತ್ನವರ್ಮ ಹೆಗ್ಗಡೆ ಅವರಲ್ಲೇ ಮಾತನಾಡಿ ಸುಂದರರಾಯರನ್ನು ಉಳಿಸಿಕೊಳ್ಳಬೇಕೆಂದು ತುಂಬ ಶ್ರಮಿಸಿದರು. ಹೆಗ್ಗಡೆಯವರಲ್ಲಿ ಮಾತನಾಡುವುದಕ್ಕೆಂದು ಹೋದರೆ ಅವರು ತೀವ್ರ ಅನಾರೋಗ್ಯದಲ್ಲಿದ್ದರು; ಮಾತ್ರವಲ್ಲ, ಕೆಲವು ಸಮಯದಲ್ಲಿ ಇಹಲೋಕ ಯಾತ್ರೆಯನ್ನು ಮುಗಿಸಿಯೂಬಿಟ್ಟರು. ತಮ್ಮ ಪ್ರಯತ್ನವನ್ನು ಬಿಟ್ಟುಕೊಡದ ವರದರಾಯರು ಮುಂದೆ ಪಟ್ಟವೇರಿದ (೧೯೬೮) ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರ ಮುಂದೆ ತಮ್ಮ ಅಹವಾಲನ್ನು ಮಂಡಿಸಿದರು. ಅವರಾದರೂ ತಂದೆಯವರು ಮೇಳಕ್ಕೆ ಸೇರಿಸಿದ ಕಲಾವಿದರನ್ನು ಬಿಟ್ಟುಕೊಡುವುದು ತಮ್ಮಿಂದ ಸಾಧ್ಯವಿಲ್ಲವೆಂದು ಹೇಳಿಯೂಬಿಟ್ಟರು. ಹೀಗೆ ೧೯೬೯ರಿಂದ ಸುಂದರರಾಯರ ತಿರುಗಾಟ ಧರ್ಮಸ್ಥಳ ಮೇಳದಲ್ಲಿ ಆರಂಭವಾಯಿತು. ಅವರ ಸ್ಥಾನಮಾನಗಳು ಅಲ್ಲಿ ಮೇಲಕ್ಕೇರುತ್ತ ಹೋದವು; ೧೯೯೨ರ ಡಿಸೆಂಬರ್ನಲ್ಲಿ ಅಯೋಧ್ಯೆಗೆ ಹೋಗುವ ಬಗ್ಗೆ ಪಡೆದ ಒಂದು ವಾರದ ರಜೆ ಬಿಟ್ಟರೆ ಅವರು ಮೇಳದಲ್ಲಿ ಅಷ್ಟು ಉದ್ದದ ರಜೆ ಹಾಕಿದ್ದೇ ಇಲ್ಲವಂತೆ. ಏಕೆಂದರೆ ಜನಾಕರ್ಷಣೆಯ ಕಲಾವಿದರು ರಜೆ ಹಾಕುವುದನ್ನು ಪ್ರೇಕ್ಷಕರು ಇಷ್ಟಪಡುವುದಿಲ್ಲ. ಅಂತಹ ನಿಷ್ಠೆಯಿಂದ ಅಲ್ಲಿ ಇಪ್ಪತ್ತೈದು ವರ್ಷ ದುಡಿದರು. ಬಿಡುಗಡೆ ಪಡೆದದ್ದು ೧೯೯೪ರಲ್ಲಿ ಸುರತ್ಕಲ್ ವಿಧಾನಸಭಾ ಕ್ಷೇತ್ರದಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸುವುದಕ್ಕಾಗಿ.
ಧರ್ಮಸ್ಥಳ ಮೇಳದಲ್ಲಿ
ಧರ್ಮಸ್ಥಳ ಮೇಳವೆಂದರೆ ಪ್ರತಿಷ್ಠೆಯ ಮೇಳವೆಂದು ಪ್ರತ್ಯೇಕ ಹೇಳಬೇಕಾಗಿಲ್ಲ. ಗಜಮೇಳವೆಂದರೂ ಸರಿಯೇ. ಕಡತೋಕ ಮಂಜುನಾಥ ಭಾಗವತರು, ಮುಂದೆ ಪುತ್ತಿಗೆ ರಘುರಾಮ ಹೊಳ್ಳರಂತಹ ಭಾಗವತರು, ಪುತ್ತೂರು ನಾರಾಯಣ ಹೆಗ್ಡೆ, ಕೆ. ಗೋವಿಂದಭಟ್, ಪಾತಾಳ ವೆಂಕಟ್ರಮಣಭಟ್, ಎಂಪೆಕಟ್ಟೆ ರಾಮಯ್ಯ ರೈ, ವಿಟ್ಲ ಜೋಶಿ, ನಯನಕುಮಾರ್ ಮುಂತಾದ ವೇಷಧಾರಿಗಳು, ಚಿಪ್ಪಾರು ಕೃಷ್ಣಯ್ಯ ಬಲ್ಲಾಳರಂತಹ ತಾಳವಾದ್ಯ ಪ್ರವೀಣರು ಅಲ್ಲಿದ್ದರು. ಧರ್ಮಾಧಿಕಾರಿ ಹೆಗ್ಗಡೆಯವರ ಆತ್ಮೀಯ ವ್ಯವಹಾರ, ತಮ್ಮ ಹರ್ಷೇಂದ್ರ ಕುಮಾರರ ಸಮರ್ಥ ಆಡಳಿತ, ಅಗತ್ಯವಿದ್ದಾಗ ವಿಶೇಷ ನೆರವು ಹೀಗೆ ಮೇಳವು ಸುದೀರ್ಘ ಸೇವೆಗೆ ಪೂರಕವಾಗಿಯೇ ಇತ್ತು.
ಅಲ್ಲಿ ಆಡಿದ ಮಹಾರಥಿ ಕರ್ಣ ಕುಂಬ್ಳೆ ಅವರಿಗೆ ವಿಶೇಷ ಕೀರ್ತಿಯನ್ನು ತಂದಿತು. ಅದರ ದಾಖಲೆಯ ಪ್ರದರ್ಶನಗಳಾದವು. ಸೇವೆಯ ಆಟಗಳು ಹೆಚ್ಚಾದ ಕಾರಣ ಇವರು ಸೇರುವಾಗ ಟೆಂಟ್ ಮೇಳ ಆಗಿದ್ದುದು ಮತ್ತೆ ಸೇವೆಯಾಟಕ್ಕೆ ಬದಲಾಯಿತು. ಕಲಾವಿದ ಕುರಿಯ ವಿಠಲಶಾಸ್ತ್ರಿಗಳು ಹಾಕಿಕೊಟ್ಟ ಭದ್ರ ಬುನಾದಿಯಲ್ಲಿ ಮೇಳ ಮುಂದುವರಿಯುತ್ತಿತ್ತು. ಕುಂಬ್ಳೆಯವರಿಗೆ ಕುಣಿತ ಕಲಿಸಲು ವಿಠಲಶಾಸ್ತ್ರಿಗಳು ಕೂಡ ಶ್ರಮಿಸಿದರೆಂಬುದು ಇನ್ನೊಂದು ವಿಶೇಷ. ಪ್ರದರ್ಶನದ ಘನಸ್ತಿಕೆ ಉಳಿಸಿಕೊಳ್ಳಲು ಶ್ರಮಿಸಿದ ಧರ್ಮಸ್ಥಳ ಮೇಳ ಕಾಲ್ಪನಿಕ ಪ್ರಸಂಗಗಳಿಗೆ ತಿರುಗದೆ ಪತ್ರಕರ್ತ ರಾಘವ ನಂಬಿಯಾರ್ ಮತ್ತು ಸಾಹಿತಿ-ವಿದ್ವಾಂಸ ಅಮೃತ ಸೋಮೇಶ್ವರರು ಬರೆದ ಬಹಳಷ್ಟು ಪೌರಾಣಿಕ ಪ್ರಸಂಗಗಳನ್ನು ವೇದಿಕೆಗೆ ತಂದಿತು. ಅವುಗಳಲ್ಲಿ ಸುಂದರರಾಯರದು ಪ್ರಮುಖ ಪಾತ್ರಗಳೇ ಆಗಿರುತ್ತಿದ್ದವು. ಆ ಪ್ರಸಂಗಗಳಿಂದ ಬರುವ ಸಂದೇಶಕ್ಕೆ ಒತ್ತು ನೀಡಿ ಇವರು ನೀಡುತ್ತಿದ್ದ ವ್ಯಾಖ್ಯಾನಗಳು ಜನರಿಗೆ ಇಷ್ಟವಾಗುತ್ತಿದ್ದವು. ಆ ಬಗ್ಗೆ ಅವರು “ನನ್ನ ಬಲ ಮಾತಿನಲ್ಲಿ ಅಧಿಕವಾಗಿದ್ದರಿಂದ ಹೊಸ ಆಲೋಚನೆಗಳಿಗೆ ಅವಕಾಶ ಒದಗಿಸುತ್ತಿದ್ದೆ. ವರ್ತಮಾನ ಕಾಲವನ್ನು ಹಾಗೆಯೇ ಪುರಾಣಪಾತ್ರಗಳಲ್ಲಿ ಹೇಳಬಾರದೆಂಬ ಪ್ರಜ್ಞೆಯನ್ನು ಕಳೆದುಕೊಳ್ಳದೆ ಇಂದಿನ ಅನುಭವಗಳು ಅಂದಿನ ದಿನಮಾನಕ್ಕೆ ಅನುಯೋಗ್ಯ ಎನಿಸಿದರೆ ಮಾತ್ರ ಬಳಸಿಕೊಳ್ಳುತ್ತಿದ್ದೆ” ಎಂದವರು ಹೇಳಿದ್ದಾರೆ. ಇಲ್ಲಿ ದಾರಿ ತಪ್ಪುವ ತುಂಬ ಅರ್ಥಧಾರಿಗಳನ್ನು ನಾವಿಂದು ಕಾಣಬಹುದು.
“ಪದ್ಯ ಉಂಟು; ಅದಕ್ಕೆ ಅರ್ಥ ಹೇಳಿದರಾಯಿತು ಎಂದುಕೊಳ್ಳದೆ ಪಾತ್ರದ ಪರಕಾಯಪ್ರವೇಶದ ಅರ್ಥವನ್ನು ಮನಗಂಡರೆ ಆತ ಜಯಶಾಲಿಯಾಗುತ್ತಾನೆ” ಎಂಬುದವರ ಅನುಭವದ ಮಾತು; ಕಿರಿಯರಿಗೆ ಸಲಹೆ. ಪುಸ್ತಕಗಳನ್ನು ಓದುವ ಹವ್ಯಾಸವನ್ನು ಅವರು ಕೊನೆತನಕವೂ ಉಳಿಸಿಕೊಂಡಿದ್ದರು. “ಸಂಗ್ರಹಿಸಿಟ್ಟ ಪುಸ್ತಕ ಓದಲು ಸಮಯವಿಲ್ಲ; ಅವು ನನ್ನನ್ನು ಅಣಕಿಸುತ್ತಿವೆ” ಎಂದವರು ಒಮ್ಮೆ ಹೇಳಿದ್ದರು; “ನನ್ನ ಕಲಾಜೀವನದ ಸುದೀರ್ಘ ಅವಧಿಯಲ್ಲಿ ಯಾರನ್ನಾದರೂ ಅವಮಾನಿಸಬೇಕು, ತೇಜೋವಧೆ ಮಾಡಬೇಕು ಎಂದು ಯೋಚಿಸಿದ್ದಿರಲಿಲ್ಲ. ಹಾಗಿದ್ದೂ ಯಾಕೆ ನನ್ನ ಮೇಲೆ ದಾಳಿ ನಡೆಯುತ್ತದೆ ಎಂದು ಯೋಚಿಸುತ್ತ ಒಂದು ಪ್ರಕರಣಕ್ಕೆ ಎರಡು ದಿನವಾದರೂ ತಲೆಕೆಡಿಸಿಕೊಂಡು ನರಳುತ್ತಿದ್ದೆ” ಎಂಬುದು ಅವರ ಒಂದು ಮಾತು. ಅಂತಹ ಸೂಕ್ಷö್ಮ ಮನೋಭಾವದವರು ಅವರು.
ರಾಜಕೀಯಕ್ಕೆ ಪ್ರವೇಶಿಸುವ ಮುನ್ನ ಮಂಡಿನೋವು ಅವರನ್ನು ಬಾಧಿಸುತ್ತಿತ್ತು. ಐದು ವರ್ಷಗಳ ಶಾಸಕತ್ವವನ್ನು ಪೂರೈಸಿ ಎರಡನೇ ಸಲ ಅದೇ ಸುರತ್ಕಲ್ ಕ್ಷೇತ್ರದಲ್ಲಿ ನಿಂತು ಸೋತರು. ಧರ್ಮಸ್ಥಳ ಮೇಳದ ಆಟಕ್ಕೆ ಅತಿಥಿ ಕಲಾವಿದನಾಗಿ ಹೋಗುವುದು, ತಾಳಮದ್ದಳೆಗಳು ಮುಂದೆಯೂ ಇದ್ದವು. ಕರೆದಲ್ಲಿಗೆ ಬರುವ ಉದಾರಿ ಅವರು; ಅವರು ಅರ್ಥ ಹೇಳುತ್ತಿದ್ದ ಪಾದುಕಾ ಪಟ್ಟಾಭಿಷೇಕದ ಭರತನ ಒಂದಂಶ ಅವರಲ್ಲಿತ್ತು ಎನಿಸುತ್ತದೆ.
ಅವರು ಶಾಸಕರಾದ ಹೊತ್ತಿಗೆ ರಾಜ್ಯದಲ್ಲಿ ಜನತಾದಳ ಸರ್ಕಾರವಿತ್ತು. ಸುರತ್ಕಲ್ ಕ್ಷೇತ್ರ ಸಮಸ್ಯೆಗಳ ಮೂಟೆಯಾಗಿತ್ತು. ಅದರಲ್ಲಿ ಮುಖ್ಯವಾದದ್ದು ಎಂಆರ್ಪಿಎಲ್ ವಿರುದ್ಧ ನಡೆದ ಪರಿಸರ ಹೋರಾಟಗಾರರ ಚಳವಳಿ. ಸಮುದ್ರದ ನೀರು ಮಲಿನವಾಗುತ್ತದೆಂದು ಮೀನುಗಾರರು ಮತ್ತಿತರರು ಚಳವಳಿ ನಡೆಸಿದಾಗ ಸುಂದರರಾಯರಿಗೆ ಹೊಸ ಹೊಸ ವಿಷಯಗಳನ್ನು ತಿಳಿದುಕೊಂಡು ಸ್ಪಂದಿಸುವ ಸಂದರ್ಭಗಳೂ ಬರುತ್ತಿದ್ದವು. ೧೯೯೮ರಲ್ಲಿ ಸುರತ್ಕಲ್ ಪ್ರದೇಶದಲ್ಲೊಂದು ಕೋಮುಗಲಭೆಯೂ ನಡೆಯಿತು. ಶಾಸಕನಾಗಿ ವಿವಿಧ ಸಮಿತಿಗಳಲ್ಲಿ, ಯಕ್ಷಗಾನ-ಜಾನಪದ ಅಕಾಡೆಮಿ ಅಧ್ಯಕ್ಷ ಮುಂತಾದ ಹುದ್ದೆಗಳಲ್ಲಿ ಅವರು ತಮ್ಮಿಂದಾದ ಉತ್ತಮ ಸೇವೆಯನ್ನೇ ಸಲ್ಲಿಸಿದರು; ಯಕ್ಷಗಾನಕ್ಕೆ ಅವಮಾನವಾದಾಗ ತಪ್ಪದೆ ಪ್ರತಿಭಟಿಸಿದರು. ಕಲೆಯ ಕ್ಷೇತ್ರದ ಓರ್ವ ಹಿರಿಯ ಸಾಧಕ ಜನಪ್ರತಿನಿಧಿಯಾಗಿಯೂ ಮೆರೆದರು ಎನ್ನುವುದು ಹೆಮ್ಮೆಪಡಬಹುದಾದ ಅಂಶವಾಗಿದೆ.
ಯಕ್ಷಗಾನಕ್ಕಾಗಿ ‘ಬಾವಿ’ಗೆ ಬಿದ್ದದ್ದು
ವಿಧಾನಸಭಾ ಸದಸ್ಯರಾಗಿ ಕುಂಬ್ಳೆ ಸುಂದರರಾಯರು ಸೌಮ್ಯವಾಗಿ ಮತ್ತು ಪಕ್ಷ ರಾಜಕಾರಣದ ಪರಿಮಿತಿಯೊಳಗೇ ಇದ್ದವರು. ಆದರೂ ಅವರು ಒಮ್ಮೆ ವಿಧಾನಸಭೆಯ ‘ಬಾವಿ’ಗೆ ಇಳಿದು ಪ್ರತಿಭಟಿಸುವ ಒಂದು ಸಂದರ್ಭವು ಎದುರಾಯಿತು. ಶಾಸಕರ ಭವನಕ್ಕೆ ಅವರನ್ನು ಹುಡುಕಿಕೊಂಡು ಬಂದ ಯಕ್ಷಗಾನ ಕಲಾವಿದರು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರವನ್ನು ಯಕ್ಷಗಾನಕ್ಕೆ ಕೊಡುತ್ತಿಲ್ಲ ಎಂಬ ಆತಂಕಕಾರಿ ಸುದ್ದಿಯನ್ನು ತಿಳಿಸಿದರು. ಕನ್ನಡ-ಸಂಸ್ಕೃತಿ ಇಲಾಖೆಯನ್ನು ಸಂಪರ್ಕಿಸಿದಾಗ ಅದು ನಿಜವೆಂದು ತಿಳಿಯಿತು. ಕಾರಣ ಕೇಳಿದಾಗ, ಅವರ ಆಟ ಬೆಳಗಿನ ತನಕ ಇರುತ್ತದೆ ಎಂಬುದು ಒಂದು ಕಾರಣವಾದರೆ, ಎಲೆ ಅಡಿಕೆ ತಿಂದು ಬೇಸಿನ್ಗಳಲ್ಲಿ ಉಗಿದು ಗಲೀಜು ಮಾಡುತ್ತಾರೆಂಬುದು ಇನ್ನೊಂದು ಕಾರಣ ಎಂಬ ಉತ್ತರ ಬಂತು. ಇದು ಬಾಲಿಶ ಕಾರಣವೆಂದು ತಿಳಿಸಿ ಹೇಳಿದರೂ ಯಾವುದೇ ಪರಿಣಾಮ ಕಾಣಲಿಲ್ಲ. ಇಲಾಖೆಯ ಉನ್ನತಾಧಿಕಾರಿಗಳು ಈ ವಿಷಯದಲ್ಲಿ ಮೃದುಮಾರ್ಗಕ್ಕೆ ಸಿದ್ಧರಿಲ್ಲವೆಂದು ತಿಳಿಯಿತು. ಬೆಂಗಳೂರಿನ ಯಕ್ಷಗಾನ ಪ್ರೇಕ್ಷಕರಲ್ಲಿ ದೊಡ್ಡ ಪಾಲು ಹೊಟೇಲ್ ಕೆಲಸಗಾರರದ್ದು. ಅವರಿಗೆ ರವೀಂದ್ರ ಕಲಾಕ್ಷೇತ್ರ ಬಿಟ್ಟು ಬೇರೆಡೆಗೆ ಹೋಗುವುದು, ಹಿಂದೆ ಬರುವುದು ಅನುಕೂಲಕರವಲ್ಲ. ಇಲಾಖೆಯ ಸಚಿವೆಯವರನ್ನು (ಲೀಲಾದೇವಿ ಆರ್. ಪ್ರಸಾದ್) ಒಲಿಸುವುದೇ ಮಾರ್ಗವೆಂದು ಅವರನ್ನು ಸಂಪರ್ಕಿಸಿದರು. ಅವರು ಕೆಳಗಿನವರು ಕೊಟ್ಟ ಹೇಳಿಕೆಯ ಆಧಾರದ ಮೇಲೆ ಉತ್ತರ ಕೊಟ್ಟರು ಹೊರತು ಸ್ವಂತ ವಿವೇಚನೆಗೆ ಮುಂದಾಗಲಿಲ್ಲ. “ಬೆಳಗಿನವರೆಗೆ ಆಟ ಆಡುವುದು ಬೆಂಗಳೂರಿಗಾಗಿ ಅಳವಡಿಸಿದ ಕ್ರಮವಲ್ಲ; ಅದು ಶತಮಾನಗಳಿಂದ ಬಂದ ಕ್ರಮ. ನಿದ್ದೆಗೆಡುವುದಕ್ಕೆ ಜನ ಸಿದ್ಧರಿದ್ದಾರೆಂದರೆ ಅದÀರ ಹಿಂದಿರುವುದು ಯಕ್ಷಗಾನ ಕಲೆಯ ಪ್ರಭಾವ. ಉಗುಳುತ್ತಾರೆ ಎಂದರೆ ಶುಚಿಗೊಳಿಸುವುದಕ್ಕೆ ಹಣ ಒದಗಿಸಿ ವ್ಯವಸ್ಥೆಗೊಳಿಸಿದರಾಯಿತು” ಎಂದರೆ ಅದಕ್ಕೆ ಆಕೆ ಕಿವಿಗೊಡಲಿಲ್ಲ.
ಶಾಸಕರಿಗೆ ಇದೊಂದು ಅಭಿಮಾನದ ಪ್ರಶ್ನೆಯಾಯಿತು. ಕಲಾವಿದರ ಮುಂದೆ ತಲೆಯೆತ್ತಿ ನಿಲ್ಲುವುದಕ್ಕೆ ಸಾಧ್ಯವಿಲ್ಲದ ಅವಸ್ಥೆ. ನಮ್ಮವನೊಬ್ಬ ಶಾಸಕನಿದ್ದಾನೆ; ಆದರೆ ಇಷ್ಟು ಸಣ್ಣ ಕೆಲಸವನ್ನೇ ಮಾಡಲಿಲ್ಲ ಎಂಬ ಮಾತೂ ಕಲಾವಿದರ ವಲಯದಲ್ಲಿ ಹರಡಿ ಅವರನ್ನು ಚಿಂತೆಗೀಡು ಮಾಡಿತು. ನೇರ ಮುಖ್ಯಮಂತ್ರಿಗಳನ್ನು ಕಾಣಲು ಹೋದರು. ಮುಖ್ಯಮಂತ್ರಿ ಜೆ.ಎಚ್. ಪಟೇಲರಿಗೆ ಇವರ ಪರಿಚಯ ಚೆನ್ನಾಗಿತ್ತು. ಕಚೇರಿಗೆ ಹೋಗಿ ತಿಳಿಸಿದಾಗ ಒಡನೆ ಸಂದರ್ಶನಕ್ಕೆ ಕರೆಬಂತು. ಯಕ್ಷಗಾನವು ರವೀಂದ್ರ ಕಲಾಕ್ಷೇತ್ರದ ಸೌಲಭ್ಯದಿಂದ ವಂಚಿತವಾದ ವಿಷಯವನ್ನು ಅವರಿಗೆ ವಿವರಿಸಿದಾಗ, ಕೂಡಲೇ ಅಧಿಕಾರಿಯನ್ನು ಕರೆದುಹಿಂದಿನಂತೆ ಮುಂದೆಯೂ ಕಲಾಕ್ಷೇತ್ರವನ್ನು ಯಕ್ಷಗಾನಕ್ಕೆ ಕೊಡತಕ್ಕದ್ದು ಎಂದು ಆಜ್ಞೆ ಕೊಟ್ಟರು. ಅದರ ಮರುದಿನ ಅದನ್ನು ಯಕ್ಷಗಾನದವರಿಗೆ ತಿಳಿಸಿ ರಾವ್ ಸುಮ್ಮನಾದರು. ಹಾಲ್ ನಿರ್ಣಯ ಮಾಡಿ ಹಣ ಕಟ್ಟಲು ಹೋದವರಿಗೆ ಯಥಾಸ್ಥಿತಿಯೇ ಎದುರಾಯಿತು. ಆಟದ ವ್ಯವಸ್ಥಾಪಕರು ಕಂಗಾಲಾಗಿ ರಾಯರ ಬಳಿಗೆ ಓಡಿಬಂದರು. ವಿಚಾರಿಸಿದಾಗ “ಮುಖ್ಯಮಂತ್ರಿಗಳು ಹೇಳಿದರೆಂದು ಹಾಗೆಲ್ಲ ಯಕ್ಷಗಾನಕ್ಕೆ ಕಲಾಕ್ಷೇತ್ರವನ್ನು ಕೊಡಲು ಆಗುವುದಿಲ್ಲ; ನಾವು ಅವರಲ್ಲಿ ಮಾತನಾಡುತ್ತೇವೆ ಎಂದು ತಿಳಿಸಿ ವಿಷಯಕ್ಕೆ ತೆರೆ ಎಳೆದರು.
ಹೀಗೆ ಕುಂಬ್ಳೆ ಅವರಿಗೆ ಇದೊಂದು ಸವಾಲಾಗಿ ಸ್ವೀಕರಿಸಬೇಕಾದ ಸಂಗತಿಯಾಯಿತು. ಯಕ್ಷಗಾನ ವಲಯದ ಶಾಸಕರಿಗೆಲ್ಲ ತಿಳಿಸಿ ಸದನದಲ್ಲಿ ವಿಷಯವನ್ನು ಪ್ರಸ್ತಾವಿಸಲು ತಯಾರಾದರು. ಮುಖ್ಯಮಂತ್ರಿಗಳು ಹಾಜರಿದ್ದಾಗ ವಿಷಯವನ್ನು ಎತ್ತಿದರು. ಸರ್ಕಾರದ ಕಡೆಯಿಂದ ಸಮರ್ಥನೆಯೂ ಬಂತು. ಪ್ರತಿಭಟನೆ ಅನಿವಾರ್ಯವಾಯಿತು. ಯಕ್ಷಗಾನಕ್ಕೆ ಸಂಬಂಧಿಸಿದ ಈ ಬೇಡಿಕೆ ಉಳಿದವರಿಗೆ ಮಹತ್ತ್ವದ ವಿಷಯವಾಗಿರಲಿಲ್ಲ. ಜಿಲ್ಲೆಯ (ದ.ಕ.) ಶಾಸಕರು ಸ್ವರಸೇರಿಸಿ ಸುಮ್ಮನಾದರು. ಕುಂಬ್ಳೆ ಅವರು ಕೂಡಲೆ “ರವೀಂದ್ರ ಕಲಾಕ್ಷೇತ್ರವನ್ನು ಯಕ್ಷಗಾನಕ್ಕೆ ಕೊಡಿಸಲೇಬೇಕು. ಸರ್ಕಾರ ಕುಂಟುನೆಪ ಹೇಳುತ್ತಿದೆ. ನನಗೆ ನ್ಯಾಯ ಬೇಕು” ಎನ್ನುತ್ತಾ ಸದನದ ‘ಬಾವಿ’ಗೆ ಬಿದ್ದರು. ಈ ಪ್ರತಿಭಟನೆಯನ್ನು ಅವರು ಏಕಾಂಗಿಯಾಗಿ ಹಿಂದೆಯೂ ಮಾಡಿರಲಿಲ್ಲ, ಮುಂದೆಯೂ ಮಾಡಲಿಲ್ಲ. ಅದು ಇಡೀ ಸದನದ ಗಮನಸೆಳೆಯಿತು. ಈ ಹಠಾತ್ ಕ್ರಮಕ್ಕೆ ಮುಖ್ಯಮಂತ್ರಿಗಳು ಬೆರಗಾದರು. “ಸಂಬಂಧಪಟ್ಟ ಸಚಿವರಿಗೆ ಹೇಳುತ್ತೇನೆ; ನೀವು ನಿಮ್ಮ ಸೀಟಿಗೆ ಹೋಗಿ ಕುಳಿತುಕೊಳ್ಳಿ” ಎಂದು ಅಪ್ಪಣೆ ಕೊಟ್ಟರು. ಹತ್ತು ನಿಮಿಷದಲ್ಲಿ ಸಚಿವೆಯವರ ಕಾರ್ಯಾಲಯದಿಂದ ಕರೆ ಬಂತು. ಆಕೆ ಮೃದುವಾಗಿದ್ದರು. ಯಕ್ಷಗಾನಕ್ಕೆ ಕಲಾಕ್ಷೇತ್ರವನ್ನು ಕೊಡುವಂತೆ ಆದೇಶಿಸುವುದಾಗಿ ತಿಳಿಸಿದರು. ಹೀಗೆ ಸಮಸ್ಯೆ ಸುಖಾಂತ್ಯವಾಯಿತು.