‘ಒಬ್ಬ ಕವಿ ಗೌರವಿಸಬಹುದಾದ ಸಂಗೀತದ ಬಗೆ ಇದ್ದರೆ ಅದು ಸುಗಮ ಸಂಗೀತ’ ಎಂದು ಶ್ಲಾಘಿಸುವ ಭಟ್ಟರು ಸಂಗೀತ ಹುಟ್ಟುವುದೇ ಕವಿತೆಯ ದರ್ಶನದಿಂದ ಎಂದಿದ್ದಾರೆ. ಯಾರೋ ಒಬ್ಬರು ಪಂಡಿತರು ಒಮ್ಮೆ ಇದನ್ನು ಲೈಟ್ ಮ್ಯೂಸಿಕ್ ಎಂದಾಗ ಅಲ್ಲಿದ್ದ ಬಾಲಮುರಳಿಕೃಷ್ಣ ಅವರು, ‘Light music is the music that gives you light’ ಎಂದು ತಿದ್ದಿದ್ದರಂತೆ. ಕವಿ ಪುತಿನ ಅವರು ಒಂದು ವಿಚಾರಸಂಕಿರಣದಲ್ಲಿ “ಸುಗಮಸಂಗೀತ ಲಘುನೆಲೆಯದು ಎಂಬ ಭಾವನೆ ಅನೇಕ ಸಂಗೀತ ವಿದ್ವಾಂಸರಲ್ಲಿದೆ; ಶಾಸ್ತ್ರೀಯ ಸಂಗೀತ ಡಿಗ್ರಿಯಾದರೆ ಸುಗಮಸಂಗೀತ ಒಂದು ಡಿಪ್ಲೊಮಾ ಎಂದವರು ಹೇಳುತ್ತಾರೆ; ಇದು ತಪ್ಪು. ಸುಗಮಸಂಗೀತವು ಸೃಜನಶೀಲ ವ್ಯಕ್ತಿತ್ವದಿಂದ ಸೃಷ್ಟಿಯಾಗುವ ಸಂಗೀತ. ಡಿಪ್ಲೊಮಾ ಎನ್ನುವುದೇ ನಿಜವಾದರೆ ಅದು ಸ್ನಾತಕೋತ್ತರ ಡಿಪ್ಲೊಮಾ ಅಷ್ಟೆ” ಎಂದಿದ್ದರಂತೆ.
ನಮ್ಮ ಜೀವನವನ್ನು ಸಂತೋಷಮಯವೂ ಸಾರ್ಥಕವೂ ಮಾಡುವಲ್ಲಿ ನಮ್ಮ ಭಾಷೆಯ ಸ್ಥಾನವೇನು, ಮತ್ತು ಏಕೆ? ಮಾಡುವ ಕೆಲಸಗಳಿಂದ ಸ್ವಲ್ಪ ಬಿಡುವು ದೊರೆತಾಗ ನಾವೇನು ಮಾಡುತ್ತೇವೆ? ಅಲ್ಲಿ ನಮ್ಮ ಭಾಷೆ ಮತ್ತು ಅದು ನಮಗೆ ಬಳುವಳಿಯಾಗಿ ಕೊಟ್ಟಿರುವ ಸಾಹಿತ್ಯದ ಪಾತ್ರ ಏನಾದರೂ ಇದೆಯೆ? ಜೊತೆಗೇ ಬರುವ ಒಂದು ಅಂಶವೆಂದರೆ ಆ ಬಗೆಯ ಮೇಲ್ಮಟ್ಟದ ಸಾಹಿತ್ಯ ನಮ್ಮ ಭಾಷೆಯಲ್ಲಿದೆಯೆ? – ಇವೆಲ್ಲ ನಾವು ಕೇಳಿಕೊಳ್ಳಬೇಕಾದ ಪ್ರಶ್ನೆಗಳು. ಆಧುನಿಕ ಜೀವನದ ಆಡಂಬರ, ಗದ್ದಲಗಳಲ್ಲಿ ಸಿಕ್ಕಿಬಿದ್ದಿರುವ ನಮಗೆ ಈ ಪ್ರಶ್ನೆಗಳನ್ನು ಕೇಳಿಕೊಳ್ಳುವ ವ್ಯವಧಾನ ಇಂದು ಇದೆಯೆ ಎನ್ನುವ ಪ್ರಶ್ನೆಗಳು ನಮ್ಮ ಅಂತರಂಗದ ಜೀವನವನ್ನು ಶ್ರೀಮಂತಗೊಳಿಸುವಲ್ಲಿ ಮುಖ್ಯವೆನಿಸುತ್ತವೆ. ಏಕೆಂದರೆ ಭಾಷೆ ಕೇವಲ ಸಂವಹನ ಮಾಧ್ಯಮವಷ್ಟೇ ಅಲ್ಲ. ಮಾನವ ತಲೆಮಾರುಗಳಿಂದ ಈ ಪ್ರಪಂಚದಲ್ಲಿ ಕೂಡಿಟ್ಟ ದೊಡ್ಡ ಸಂಪತ್ತು ಅದು. ಹಾಗೆ ನೋಡುವಾಗ ನಮ್ಮ ಕನ್ನಡ ಬಹುದೊಡ್ಡ ಅನರ್ಘ್ಯ ಸಂಪತ್ತು ಎನಿಸದೆ ಇರುವುದಿಲ್ಲ. ಪ್ರಾದೇಶಿಕ ಎನಿಸಿಕೊಂಡೇ ಜಗದಗಲ ಕೈಚಾಚುವ ಸಾಮರ್ಥ್ಯವನ್ನು ಬೆಳೆಸಿಕೊಂಡ ಭಾಷೆ ಇದು.

ನವೆಂಬರ್ ಒಂದು ನಮ್ಮ ಕನ್ನಡಕ್ಕೆ ವಿಶಿಷ್ಟವಾದ ಒಂದು ದಿನ; ಕನ್ನಡ ಮಾತನಾಡುವವರೆಲ್ಲ ಒಂದು ರಾಜ್ಯ ಎನ್ನುವ ನಂಟಿಗೆ ಒಳಪಟ್ಟ ದಿನ. ಆದ್ದರಿಂದಲೇ ನಮಗೆ ಈ ದಿನ ಆಚರಣೀಯ ಎನಿಸುವಂತೆಯೇ ಈ ಭಾಷೆಯನ್ನು, ಇದರ ಸಂಪತ್ತನ್ನು ಬೆಳೆಸಿದವರನ್ನು ಇನ್ನೊಮ್ಮೆ ಸ್ಮರಿಸುವ ದಿನ ಕೂಡ ಆಗಿದೆ. ಹಾಗೆ ಸ್ಮರಿಸಬೇಕಾದವರಲ್ಲಿ ಒಬ್ಬರು ಸುಮಾರು ಎರಡು ವರ್ಷಗಳ ಹಿಂದೆ ಕೋವಿಡ್ ಒಂದನೇ ಅಲೆಯ ವೇಳೆ ನಮ್ಮನ್ನಗಲಿದ ಕವಿ, ವಿದ್ವಾಂಸ, ಪ್ರಾಧ್ಯಾಪಕ ಡಾ|| ಎನ್.ಎಸ್. ಲಕ್ಷ್ಮಿನಾರಾಯಣ ಭಟ್ಟ ಅವರು. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಮೂರು ದಶಕಗಳಿಗೂ ಮಿಕ್ಕಿ ಕನ್ನಡ ಬೋಧಿಸಿದ ಪ್ರೊ|| ಭಟ್ಟರು ಕನ್ನಡ ಭಾಷೆ, ಸಾಹಿತ್ಯಗಳು ಹೆಮ್ಮೆಪಡಬಹುದಾದ ಅಮೂಲ್ಯ ಕೃತಿಗಳನ್ನು ನಮ್ಮ ನಡುವೆ ಬಿಟ್ಟುಹೋಗಿದ್ದಾರೆ. ಅವರ ಸಾಧನೆ ಮತ್ತು ಅವರು ರಚಿಸಿದ ಕೃತಿಗಳನ್ನು ನೋಡಿದರೆ ಈ ಹಂತದಲ್ಲಿ ನಮ್ಮ ಭಾಷೆಗೆ ಏನನ್ನು ಕೊಟ್ಟರೆ ಅದು ಅತ್ಯಂತ ಅಮೂಲ್ಯ ಎನಿಸಬಹುದೆಂದು ಬಹಳಷ್ಟು ಚಿಕಿತ್ಸಕ ಬುದ್ಧಿಯಿಂದ ಕೆಲಸ ಮಾಡಿ ಕೊಡುಗೆಗಳನ್ನು ನೀಡಿದಂತೆ ಅನ್ನಿಸುತ್ತದೆ. ಅವರು ಕವಿ ಎಂದು ಪ್ರಸಿದ್ಧರಾದರೂ ಕೂಡ ಅವರ ಕೊಡುಗೆ ಕೇವಲ ಒಂದು ಕ್ಷೇತ್ರಕ್ಕೆ ಸೀಮಿತವಾದುದಲ್ಲ. ವಿವಿಧ ಕ್ಷೇತ್ರಗಳಿಗೆ ಚಿರಸ್ಥಾಯಿಯಾದ ಕೊಡುಗೆಗಳನ್ನು ಅವರು ನೀಡಿದ್ದಾರೆ. ಅದೃಷ್ಟವೆಂಬಂತೆ ಅವರಿಗೆ ಮೈಸೂರಿನ ಮಹಾರಾಜ ಕಾಲೇಜು ಮತ್ತು ಮೈಸೂರು ವಿಶ್ವವಿದ್ಯಾಲಯಗಳಲ್ಲಿ ಅಪ್ರತಿಮವಾದ ಗುರುಗಳು ಸಿಕ್ಕಿದರು. ಅದರ ಪೂರ್ಣ ಪ್ರಯೋಜನ ಪಡೆದುಕೊಂಡ ನೈಶಿಲ ಭಟ್ಟರು ಕಲಿತು ವಿಶ್ವವಿದ್ಯಾಲಯದಿಂದ ಹೊರಬರುವಾಗಲೇ ಒಂದು ಉನ್ನತಮಟ್ಟಕ್ಕೆ ತಲಪಿಬಿಟ್ಟಿದ್ದರು.
ಬಾಲ್ಯ–ಬಡತನ
ಈ ನಡುವೆ ಕಡುಬಡತನದಲ್ಲಿ ಬಾಲ್ಯವನ್ನು ಕಳೆದ ಭಟ್ಟರು ವಿಶ್ವವಿದ್ಯಾಲಯದ ಶಿಕ್ಷಣವನ್ನು ಪಡೆಯುವ ಮಟ್ಟಕ್ಕೆ ಏರಿದ್ದು ಶಿಕ್ಷಣ, ವಿದ್ವತ್ತುಗಳ ಬಗೆಗಿನ ಅವರ ಅದಮ್ಯ ಆಕರ್ಷಣೆ ಮತ್ತು ನೀರು ಕುಡಿದಂತೆ ಸಲೀಸಾಗಿ ಸಾಧಿಸುವ ಅವರ ಸಾಮರ್ಥ್ಯಕ್ಕೆ ಸಾಕ್ಷಿಗಳಾಗಿವೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ, ಈಗಿನ ಉಡುಪಿ ಜಿಲ್ಲೆ ಮೂಲದವರಾದ ಅವರ ತಂದೆ ಶಿವರಾಮ ಭಟ್ಟರು ಬಾಲ್ಯದಲ್ಲೇ ಹುಟ್ಟೂರು ನೈಲಾಡಿಯನ್ನು ಬಿಟ್ಟಿದ್ದರು. ಹತ್ತು ವರ್ಷದವರಿದ್ದಾಗಲೇ ತಂದೆ-ತಾಯಿಯನ್ನು ಕಳೆದುಕೊಂಡ ಕಾರಣ ಊರುಬಿಟ್ಟು ಶೃಂಗೇರಿಗೆ ಹೋಗಿ ಅಲ್ಲಿಯ ಸಂಸ್ಕೃತ ಪಾಠಶಾಲೆಯಲ್ಲಿ ಹನ್ನೆರಡು ವರ್ಷ ವ್ಯಾಸಂಗ ಮಾಡಿದರು. ಮೊದಲಿಗೆ ಹಾಸನದಲ್ಲಿ ಪ್ರಾಥಮಿಕ ಶಾಲೆಯ ಉಪಾಧ್ಯಾಯರಾಗಿ, ಅನಂತರ ಭದ್ರಾವತಿಯ ದೇವಸ್ಥಾನವೊಂದರಲ್ಲಿ ಕೆಲಕಾಲ ಅರ್ಚಕರಾಗಿದ್ದ ಶಿವರಾಮ ಭಟ್ಟರು ಬಳಿಕ ಶಿವಮೊಗ್ಗಕ್ಕೆ ಬಂದು ಪುರೋಹಿತ ವೃತ್ತಿಯನ್ನು ಕೈಗೊಂಡರು. ಬಡತನದಲ್ಲಿದ್ದರೂ ಅವರಿಗೆ ವಿದ್ಯಾವಂತರೆಂದೂ ಸಂಸ್ಕೃತ, ವೇದಶಾಸ್ತçಗಳನ್ನು ಬಲ್ಲವರೆಂದೂ ಊರಿನಲ್ಲಿ ಗೌರವವಿತ್ತು. ಅನೇಕ ಶಿಷ್ಯರಿಗೆ ವೇದಮಂತ್ರಗಳನ್ನು ಹೇಳಿಕೊಟ್ಟಿದ್ದರು. ಮೈಮೇಲೆ ಹೊದ್ದುಕೊಂಡ ಶಲ್ಯದ ಒಂದು ತುದಿಯಲ್ಲಿ ಭಗವದ್ಗೀತೆಯ ಪುಟ್ಟ ಪುಸ್ತಕವನ್ನು ಗಂಟುಹಾಕಿ ಇಟ್ಟುಕೊಂಡಿದ್ದು, ಸಮಯ ಸಿಕ್ಕಿದಾಗೆಲ್ಲ ಅದನ್ನು ಓದುತ್ತಿದ್ದರಂತೆ. ಮಾತು ಕಡಮೆ. ಶಿಷ್ಯರೊಬ್ಬರು ಆ ಬಗ್ಗೆ ಕೇಳಿದ್ದಕ್ಕೆ “ಮಾತು ಹೆಚ್ಚಾದರೆ ಅದರಲ್ಲಿ ಸುಳ್ಳು ಹಣುಕುವ ಸಂಭವವಿರುತ್ತದೆ” ಎಂದಿದ್ದರಂತೆ. ಕಾಳಿದಾಸ ರಘುಕುಲದ ರಾಜರ ಬಗ್ಗೆ ಹೇಳುವಾಗ ‘ಸತ್ಯಾಯ ಮಿತಭಾಷಿಣಾಂ’ ಎಂದಿಲ್ಲವೆ, ಹಾಗೆ. ದೊಡ್ಡ ವಿದ್ಯಾವಂತರಾದ ಭಟ್ಟರು ಮಲಗುವಾಗಲೂ ಪುಸ್ತಕ ಓದುತ್ತ ಅದನ್ನು ಎದೆಯ ಮೇಲೆ ಇಟ್ಟುಕೊಂಡು ಹಾಗೆಯೇ ನಿದ್ದೆ ಮಾಡುತ್ತಿದ್ದರಂತೆ.
ಲಕ್ಷ್ಮಿನಾರಾಯಣನಿಗೆ ಒಂದೂವರೆ ವರ್ಷ ಆಗುವಾಗ ತಂದೆ ತೀರಿಕೊಂಡರು. ಅಕ್ಕಂದಿರಲ್ಲಿ ದೊಡ್ಡವಳಿಗೆ ಮಾತ್ರ ಮದುವೆಯಾಗಿತ್ತು. ಉಳಿದ ನಾಲ್ಕೂ ಮಕ್ಕಳನ್ನು ದಡ ಸೇರಿಸುವ ಹೊಣೆ ತಾಯಿ ಮೂಕಾಂಬಿಕೆಯಮ್ಮನವರ ಮೇಲೆ ಬಿತ್ತು. “ನನ್ನ ತಾಯಿ ಶಾಲೆ ಕಲಿತವಳಲ್ಲವಾದರೂ ಧೈರ್ಯಸ್ಥೆ, ವಿವೇಕಿ” ಎಂದಿದ್ದಾರೆ ಭಟ್ಟರು. ಅವರು ವಾಸವಾಗಿದ್ದ ಮನೆ ಸ್ವಂತದ್ದು. ಅದನ್ನು ಎರಡು ಭಾಗವಾಗಿ ವಿಂಗಡಿಸಿ ಒಂದನ್ನು ಬಾಡಿಗೆಗೆ ಕೊಟ್ಟರು. ತಮ್ಮ ಗೆಳತಿಯರ ಮನೆಗಳಲ್ಲಿ ಅವಲಕ್ಕಿ ಕುಟ್ಟುವುದು, ಸಾರಿನ ಪುಡಿ ತಯಾರಿಸುವುದು, ಅಡಿಗೆಗೆ ಸಹಕರಿಸುವುದು ಮುಂತಾದ ಕೈಕೆಲಸಗಳನ್ನು ಮಾಡಿಕೊಡಲು ಆರಂಭಿಸಿದರು. ಸ್ವಲ್ಪ ದೊಡ್ಡವರಾಗುತ್ತಲೇ ನೈಶಿಲ ಮೂರು ಮನೆಗಳಲ್ಲಿ ಮಕ್ಕಳಿಗೆ ಮನೆ ಪಾಠ ಶುರು ಮಾಡಿದರು. ಅದರಿಂದ ತಿಂಗಳಿಗೆ ತಲಾ ನಾಲ್ಕಾರು ರೂಪಾಯಿ ಸಿಗುತ್ತಿತ್ತು. ಮನೆ ಸಮೀಪದ ತುಂಗಾನದಿ ಆಚೆಗಿನ ಮುತ್ತುಗದ ಮರದ ಎಲೆಗಳನ್ನು ತಂದು ಅಕ್ಕಂದಿರು ಊಟದ ಎಲೆ ಮಾಡಿ ಮಾರುತ್ತಿದ್ದರು. ಇದರಲ್ಲಿ ತಾಯಿಯದ್ದು ಮಕ್ಕಳಿಗಾಗಿ ಮಾಡಿದ ಆತ್ಮಯಜ್ಞ ಎಂದು ಭಟ್ಟರು ತಮ್ಮ ಆತ್ಮಚರಿತ್ರೆ ‘ನಿಲುವುಗನ್ನಡಿಯ ಮುಂದೆ’ಯಲ್ಲಿ ಉಲ್ಲೇಖಿಸಿದ್ದಾರೆ; ಇಂಥ ಅನುಭವದ ಫಲವಾಗಿಯೇ ಅವಳ ನೆನಪು ನನ್ನ ಕವಿತೆಗಳಲ್ಲಿ ಮತ್ತೆ ಮತ್ತೆ ನುಗ್ಗಿ ಬಂದಿದೆ ಎಂದಿದ್ದಾರೆ. ಆ ಕಾಲದಲ್ಲಿ ಬಿಡುವಿನ ವೇಳೆ ಈ ಬಾಲಕ ಒಂದು ಪುಟ್ಟ ಊದಿನಬತ್ತಿ ಫ್ಯಾಕ್ಟರಿಯಲ್ಲಿ ಕೂಡ ಕೆಲಸ ಮಾಡಿದ್ದರು.
ತಾಯಿಯ ಶ್ರಮ
ಈಗ ಬೆಳೆಯುವ ಮಕ್ಕಳಿಗೆ ಸಾಹಿತ್ಯವನ್ನು ಪ್ರವೇಶಿಸುವುದಕ್ಕೆ ಮನೆ-ಮನೆಗಳಲ್ಲಿ ಬಂದು ಕುಳಿತಿರುವ ಟಿವಿಸೆಟ್ ಒಂದು ತಡೆಯಾಗಿ ಪರಿಣಮಿಸುತ್ತಿದೆ ಎನ್ನಬಹುದೇನೋ. ಆಗ ಹಾಗೇನೂ ಇರಲಿಲ್ಲ. ಭಟ್ಟರ ತಾಯಿ ಅನಕ್ಷರಸ್ಥೆಯಾದರೂ ವಿದ್ಯೆಯ ಬಗ್ಗೆ ತುಂಬ ಗೌರವ ಇದ್ದವರು. ಕಷ್ಟಪಟ್ಟು ಕನ್ನಡ ವರ್ಣಮಾಲೆಯನ್ನು ಬರೆಯಲು ಕಲಿತುಕೊಂಡಿದ್ದರು. ಸರಾಗವಾಗಿ ಓದಲು ಸಾಧ್ಯವಾಗದಿದ್ದರೂ ಅಕ್ಷರ ಅಕ್ಷರ ಕೂಡಿಸಿ ಸ್ವಲ್ಪ ಓದುತ್ತಿದ್ದರು. ಭಟ್ಟರ ಕಡೆಯ ಅಕ್ಕ ಊರಿನ ಹಂಚಿನ ಕಾರ್ಖಾನೆ ಮಾಲೀಕರಾದ ಕಾಳಪ್ಪನವರ ಮಗಳ ಸಹಪಾಠಿ. ಕಾಳಪ್ಪನವರ ಮನೆಯಲ್ಲಿ ಅನಕೃ ಅವರ ಕಾದಂಬರಿಗಳೆಲ್ಲ ಇದ್ದವು. ಅಕ್ಕನ ಮೂಲಕ ಆ ಪುಸ್ತಕಗಳು ಇವರ ಮನೆಗೆ ಬರುತ್ತಿದ್ದವು. ವಾರದಲ್ಲಿ ೩-೪ ದಿನ ರಾತ್ರಿ ಇವರ ಮನೆಯಲ್ಲಿ ಅವುಗಳ ವಾಚನ ನಡೆಯುತ್ತಿತ್ತು. ಅಕ್ಕಂದಿರು ಮತ್ತು ಬಾಲಕ ಲಕ್ಷ್ಮಿನಾರಾಯಣ ಸರದಿಯ ಮೇಲೆ ಅವುಗಳನ್ನು ಓದಿದರೆ ಉಳಿದವರು ಸುತ್ತ ಕುಳಿತು ಕೇಳುವುದು. ನಡುವೆ ಭಾವಮಯ ಸನ್ನಿವೇಶ ಬಂದಾಗ ಎಲ್ಲರ ಕಣ್ಣಲ್ಲಿ ನೀರು. ಸ್ವತಃ ಅಳುವ ಅಮ್ಮ “ಏನೋ ಇದು? ಗಂಡು ಹುಡುಗನಾಗಿ ಹೀಗೆ ಅಳುತ್ತಾರೇನೋ” ಎಂದು ಮಗನಿಗೆ ಬುದ್ಧಿ ಹೇಳುತ್ತಿದ್ದರು. ಅಂತೂ ಅನಕೃ ಮೂಲಕ ಸಾಹಿತ್ಯವು ಇವರ ಮನೆಯಲ್ಲಿ ಪ್ರವೇಶ ಪಡೆದಿತ್ತು.
ತುಂಗಾನದಿ ದಂಡೆಯ ಬ್ರಾಹ್ಮಣರ ಬೀದಿಯಲ್ಲಿ ಇವರ ಮನೆ. ನೆರೆ ಬಂದಾಗ ನಗರಸಭೆಯವರು, ಜನರಿಗೆ ಮನೆಬಿಟ್ಟು ಸುರಕ್ಷಿತ ಸ್ಥಳಕ್ಕೆ ಹೋಗುವಂತೆ ಡಂಗುರ ಸಾರಿ ತಿಳಿಸುತ್ತಿದ್ದರು. ಆದರೆ ಇವರಿಗೆ ಮನೆಬಿಟ್ಟು ಹೋಗುವುದೆಂದರೆ ತಮ್ಮ ಮನೆಯ ಹರಿದ ಬಟ್ಟೆಗಳನ್ನು ಪ್ರದರ್ಶಿಸುವುದೆಂಬ ಅಳುಕು. ಅದಕ್ಕಾಗಿ ಅಮ್ಮ ನೆರೆನೀರಿಗೆ ಅರಿಶಿನ, ಕುಂಕುಮ ಹಾಕಿ ನೀರು ಹಿಂದಕ್ಕೆ ಹೋಗಲಿ ಎಂದು ಪ್ರಾರ್ಥಿಸುತ್ತಿದ್ದರು.
ಬಡತನದ ಕಡುಕಷ್ಟವಿದ್ದರೂ ಅದೃಷ್ಟ ಭಟ್ಟರನ್ನು ಆಗಾಗ ಕೈಹಿಡಿದು ಮೇಲಕ್ಕೆತ್ತಿದ್ದು ಅವರ ೮೪ ವರ್ಷಗಳ ಸುದೀರ್ಘ ಜೀವನದಲ್ಲಿ ಕಾಣಿಸುತ್ತದೆ; ಹಲವು ಸಲ ಅದು ಯಾರೋ ವ್ಯಕ್ತಿಗಳ ರೂಪದಲ್ಲೂ ಬಂದಿರಬಹುದು. ಹೆಡ್ಮಾಸ್ಟರ್ ಶಾಮಣ್ಣನವರು ಅಂಥವರಲ್ಲಿ ಒಬ್ಬರು. ಭಟ್ಟರಿಗೆ ಒಂದನೇ ತರಗತಿಯ ವಾರ್ಷಿಕ ಪರೀಕ್ಷೆಯ ದಿನ ಎರಡನೇ ಅಕ್ಕನ ಮದುವೆ. ಪರೀಕ್ಷೆಗೆ ಹೋಗಲು ಮನೆಯವರು ಒಪ್ಪಲಿಲ್ಲ. ಆಗ ಶಾಮಣ್ಣನವರು ಮುಂದೊಂದು ದಿನ ಇವರನ್ನು ಕರೆಯಿಸಿ ಒಂದು ಪಾಠವನ್ನು ಓದಲು ಹೇಳಿದರು; ಈತ ಅದನ್ನು ಸರಿಯಾಗಿ ಓದುತ್ತಲೇ ಶಾಮಣ್ಣ ಮುಂದಿನ ತರಗತಿಗೆ ಪ್ರವೇಶವನ್ನೂ ಕೊಡಿಸಿದರು. ಹೆಡ್ಮಾಸ್ಟರ್ ಶಾಮಣ್ಣ ಉಕ್ತಲೇಖನವನ್ನು ಕೂಡ ಬರೆಸುತ್ತಿದ್ದರು. ಅದರಲ್ಲಿ ಭಟ್ಟರಿಗೆ ಯಾವಾಗಲೂ ಹತ್ತಕ್ಕೆ ಹತ್ತು ಅಂಕ. ಈ ಹೆಡ್ಮಾಸ್ಟರ್ ಮಕ್ಕಳಿಗೆ ಹಾಡನ್ನೂ ಹೇಳಿಕೊಡುತ್ತಿದ್ದರು.

ಗಮಕ ವಾಚನದ ಪ್ರಭಾವ
ಮನೆ ಎದುರಿನ ಲಕ್ಷ್ಮಿನಾರಾಯಣ ದೇವಾಲಯದಲ್ಲಿ ನಡೆಯುತ್ತಿದ್ದ ಗಮಕವಾಚನ ಭಟ್ಟರಿಗೆ ದೊಡ್ಡ ಶಿಕ್ಷಣವೇ ಆಗಿತ್ತು. ನಾಲ್ಕು ಮೈಲು ದೂರದ ಮತ್ತೂರಿನ ದೊಡ್ಡ ವೆಂಕಟೇಶಯ್ಯ ವಾಚನ ಮಾಡಿದರೆ ಲಕ್ಷ್ಮಿಕೇಶವ ಶಾಸ್ತ್ರಿಗಳು ವ್ಯಾಖ್ಯಾನಿಸುತ್ತಿದ್ದರು. ರಾಮಾಯಣ, ಮಹಾಭಾರತದ ಕಥೆಗಳು, ಕುಮಾರವ್ಯಾಸಭಾರತ ಇವೆಲ್ಲ ಅವರಿಗೆ ಅಲ್ಲಿ ದಕ್ಕಿದವು. ಇದರ ಪ್ರಭಾವ ಎಷ್ಟಿತ್ತೆಂದರೆ ದೇವರಿಗೆ ನಮಸ್ಕರಿಸುವಾಗ ಶ್ಲೋಕಗಳನ್ನು ಪಠಿಸುವ ಬದಲು ‘ಶ್ರೀವನಿತೆಯರಸನೆ’ ಇತ್ಯಾದಿ ಕುಮಾರವ್ಯಾಸನ ಪದ್ಯಗಳನ್ನು ಹೇಳುವಷ್ಟು. “ನನ್ನ ಮೊದಲ ಶ್ರೇಷ್ಠಗುರುಗಳು ಶಿಕ್ಷಕರಲ್ಲ; ಹೊರಗಿನ (ವಾಚನ-ಪ್ರವಚನದ) ಹಿರಿಯರು” ಎಂದವರು ಹೇಳಿದ್ದಾರೆ.
ಕನ್ನಡ ಭಾಷೆಯನ್ನು ತಪ್ಪಿಲ್ಲದೆ ಆಡುವುದಕ್ಕೆ, ಬರೆಯುವುದಕ್ಕೆ ಸಂಸ್ಕೃತದ ಜ್ಞಾನ ಅವಶ್ಯ; ಇದಕ್ಕೆ ಸಂಸ್ಕೃತ ಭಾಷಾಜ್ಞಾನ ಎಷ್ಟಿದ್ದರೂ ಅಷ್ಟು ಉತ್ತಮ. ಲಕ್ಷ್ಮಿನಾರಾಯಣ ಭಟ್ಟರಿಗೆ ಸಂಸ್ಕೃತ ಪಾಠ ಸಿಗುವಂತಾದ ಸಂದರ್ಭ ಕುತೂಹಲಕರ. ಕೇಶವ ಘನಪಾಠಿಗಳು ವೇದಪಾರಂಗತರು, ಸಂಸ್ಕೃತ ಭಾಷಾಜ್ಞಾನಿಗಳು. ಭೀಮೇಶ್ವರ ದೇವಸ್ಥಾನದ ಬಳಿ ಒಂದು ಸಂಪಿಗೆ ಮರವಿತ್ತು. ಭಟ್ಟರು ಕದ್ದು ಅದರ ಹೂ ಕೊಯ್ಯಲು ಹೋಗುತ್ತಿದ್ದರು; ಅದನ್ನು ಪಕ್ಕದ ಮನೆಗಳಿಗೆ ಕೊಡುತ್ತಿದ್ದರು ಅಷ್ಟೆ. ಅದಕ್ಕೆ ಬೆಳಗ್ಗೆ ಬೇಗ ಹೋಗುತ್ತಿದ್ದರು. ಒಂದು ದಿನ ಅದೇ ರೀತಿ ಹೋಗಿ ಮರ ಏರಿದಾಗ ಘನಪಾಠಿಗಳ ಆಗಮನವಾಯಿತು; ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ‘ಏಕೆ ಮರ ಏರಿದ್ದು’ ಎಂದು ಕೇಳಿದಾಗ ‘ಊರು ನೋಡಲು’ ಎಂದು ಉತ್ತರಿಸಿದರು. ‘ಬೆಳಗಿನ ಮಂಜಿನಲ್ಲಿ ಊರು ನೋಡುತ್ತೀರಾ?’ ಎನ್ನುವ ಪ್ರಶ್ನೆಗೆ ಇವರ ಬಳಿ ಉತ್ತರ ಇಲ್ಲ.
ಸಂಸ್ಕೃತದ ಉಚಿತ ಶಿಕ್ಷಣ
ಕೊಯ್ದ ಹೂವನ್ನು ಅವರಿಗೆ ಕೊಡಲು ಹೋದಾಗ ಇಟ್ಟುಕೋ ಎಂದರು; ಮಾತ್ರವಲ್ಲ, ದೇವರ ಪೂಜೆಯ ಸರಿಯಾದ ರೀತಿ ಹೇಳಿಕೊಡುತ್ತೇನೆ ಎಂದು ಸಂಸ್ಕೃತಪಾಠವನ್ನು ಶುರು ಮಾಡಿಯೇಬಿಟ್ಟರು. ಏಟು ಕೊಡುತ್ತಾರೇನೋ ಎಂಬ ಭಯ ಹೀಗೆ ಪರ್ಯವಸಾನಗೊಂಡಿತು. ‘ಬಹಳ ಕಾಲ ಅವರ ಪಾಠಕ್ಕೆ ಹೋಗುತ್ತಿದ್ದೆ; ಒಂದು ಶ್ಲೋಕವನ್ನು ಹಿಡಿದು ಅರ್ಧ ಗಂಟೆ ಪಾಠ ಮಾಡುತ್ತಿದ್ದರು. ಮರುದಿನ ಆ ಪಾಠವನ್ನು ಒಪ್ಪಿಸಬೇಕಿತ್ತು’ ಎನ್ನುವ ಭಟ್ಟರು, “ಮುಂದೆ ಸಂಸ್ಕೃತ ಪದಭರಿತ ಕನ್ನಡ ಕಾವ್ಯಗಳ ಓದಿಗೆ ಇದರಿಂದ ಅನುಕೂಲವಾಯಿತು” ಎಂದು ಕೃತಜ್ಞತೆ ಸೂಚಿಸಿದ್ದಾರೆ.
ಲಕ್ಷ್ಮಿನಾರಾಯಣ ದೇವಸ್ಥಾನದಲ್ಲಿ ಪ್ರತಿ ಶನಿವಾರ ಭಜನೆ ನಡೆಯುತ್ತಿತ್ತು. ಅದಕ್ಕೆ ಇವರು ಹೋಗುತ್ತಿದ್ದರು. ಅಲ್ಲಿ ತಾಳ ತಟ್ಟುತ್ತಿದ್ದರು ಅಥವಾ ಖಂಜರಿ ನುಡಿಸುತ್ತಿದ್ದರು. ಅದರಿಂದ ಹಾಡು ಬಂತು; ಲಯಪ್ರಜ್ಞೆ ಚುರುಕಾಯಿತು. ಕವಿತೆಗಳನ್ನು ಲಯಬದ್ಧವಾಗಿ ಓದುವ ತಿಳಿವಳಿಕೆ ಬಂತು.
ಮನೆ ಸಮೀಪ ವಕೀಲರಾದ ಹವಾಲ್ದಾರ್ ರಂಗನಾಥರಾವ್ ಎನ್ನುವವರು ಸ್ವಂತ ಲೈಬ್ರರಿಯನ್ನು ಹೊಂದಿದ್ದರು. ಅಲ್ಲಿಗೆ ಈ ಹುಡುಗ (ಹೈಸ್ಕೂಲ್ ವಿದ್ಯಾರ್ಥಿ) ವಾರಕ್ಕೆ ೩-೪ ದಿನ ಹೋಗುತ್ತಿದ್ದ. ಆಗ ಇವರಿಂದ ಕಥೆ-ಕಾದಂಬರಿಗಳ ಓದು ನಡೆಯುತ್ತಿತ್ತು. ಮನೆಗೆ ಪುಸ್ತಕ ತರಬೇಕಿದ್ದರೆ ಹಣ ಕಟ್ಟಬೇಕಿತ್ತು. ಇವರಿಗದು ಅಸಾಧ್ಯ.
ರಂಗನಾಥರಾಯರಲ್ಲಿ ಕೇಳಿದಾಗ ಉಚಿತ ವ್ಯವಸ್ಥೆಯನ್ನು ಕಲ್ಪಿಸಿದರು; ಮತ್ತು ಅದನ್ನು ಇವರು ಸುಮಾರು ಐದು ವರ್ಷ ಬಳಸಿಕೊಂಡರು. ಇಂಟರ್(ಪಿಯು)ಗೆ ಹೋದ ಮೇಲೆ ತನ್ನ ವಿಚಾರಾತ್ಮಕ ಓದು ಆರಂಭವಾಯಿತೆAದು ಭಟ್ಟರು ಸ್ಮರಿಸಿಕೊಂಡಿದ್ದಾರೆ.
ಶಿಕ್ಷೆ ಕೊಟ್ಟವರ ಪಶ್ಚಾತ್ತಾಪ
ಸಾಮಾಜಿಕ ಜೀವನದಲ್ಲಿ ಅಂದು ಬಹಳಷ್ಟು ಮನಮಿಡಿಯುವ ಘಟನೆಗಳು ನಡೆಯುತ್ತಿದ್ದವು; ಜನ ತಮ್ಮ ತಪ್ಪಿನ ಅರಿವಾದಾಗ ಯಾವುದೇ ಬಿಗುಮಾನವಿಲ್ಲದೆ ಪೂರ್ತಿ ಕರಗಿಹೋಗುತ್ತಿದ್ದರು. ಮಾಧ್ಯಮಿಕ ಶಾಲೆಯಲ್ಲಿ ಭಟ್ಟರಿಗೆ ಶ್ರೀನಿವಾಸಮೂರ್ತಿ ಎನ್ನುವ ಗುರುಗಳಿದ್ದರು. ಗಾಂಧೀವಾದಿಯಾಗಿದ್ದ ಅವರು ಖಾದಿವಸ್ತ್ರಗಳನ್ನೇ ತೊಡುತ್ತಿದ್ದರು. ಗಾಂಧಿಯವರ ಹತ್ಯೆ ನಡೆದಾಗ ಅವರು ತಲೆಗೂದಲನ್ನು ಪೂರ್ತಿ ತೆಗೆಸಿಕೊಂಡಿದ್ದರಂತೆ. ಇವರಿಗೆ ಇಂಗ್ಲಿಷ್ ಮತ್ತು ಕನ್ನಡ ಪಾಠ ಮಾಡುತ್ತಿದ್ದ ಅವರು ಎರಡು ಎಕ್ಸರ್ಸೈಜ್ ಪುಸ್ತಕಗಳಲ್ಲಿ ಆ ಪಾಠಗಳನ್ನು ಬರೆದುಕೊಂಡು ಬರಲು ಹೇಳಿದ್ದರು. ಪುಸ್ತಕ ಕೊಳ್ಳಲು ಅಸಾಧ್ಯವಾಗಿ ಮೂರು ದಿನವಾದರೂ ಇವರು ಬರೆದುಕೊಂಡು ಹೋಗಿರಲಿಲ್ಲ. ಗುರುಗಳು ಕೆನ್ನೆಗೆ ಹೊಡೆದಾಗ ಇವರು ಅತ್ತರು. ‘ಅಳುವುದಕ್ಕೆ ಬರತ್ತೆ, ಬರೆದು ತರಲು ಬರುವುದಿಲ್ಲ ಅಲ್ಲವೆ?’ ಎಂದು ಅವರು ಗದರಿದಾಗ ಇವರು ನಿಜಸಂಗತಿಯನ್ನು ಬಾಯಿಬಿಟ್ಟರು. ಪೂರ್ತಿ ಕರಗಿಹೋದ ಮೇಷ್ಟ್ರು ‘ಹಾಗಂತ ಮೊದಲೇ ಯಾಕೆ ಹೇಳಲಿಲ್ಲ?’ ಎಂದು ಹೇಳಿ ಮರುದಿನ ತಾವೇ ಎರಡು ಪುಸ್ತಕ ತಂದುಕೊಟ್ಟರು. ‘ಗೊತ್ತಿಲ್ಲದೆ ನಿನಗೆ ಹೊಡೆದೆ, ತಪ್ಪು’ ಎಂದ ಅವರು ತರಗತಿಯಲ್ಲಿ ತಮ್ಮ ಕೆನ್ನೆಗೆ ತಾವೇ ಒಂದೇಟು ಹಾಕಿಕೊಂಡರಂತೆ! ಇಡೀ ತರಗತಿ ಬೆರಗಾಗಿಹೋಯಿತು.
ಆ ದಿನಗಳಲ್ಲಿ ಕುವೆಂಪು ಮತ್ತು ಜಿ.ಎಸ್. ಶಿವರುದ್ರಪ್ಪ ಅವರ ಕವಿತೆಗಳನ್ನು ಓದಿ ಪ್ರಭಾವಿತರಾದುದನ್ನು ಸ್ಮರಿಸಿಕೊಂಡ ನೈಶಿಲಭಟ್ಟರು, ಕುವೆಂಪು ಅವರ ನಾದಲಯ ಹಾಗೂ ಜಿಎಸ್ಸೆಸ್ ಅವರ ಲಲಿತಪದ ಶೈಲಿ ಇಷ್ಟವಾಯಿತೆಂದು ಉಲ್ಲೇಖಿಸಿದ್ದಾರೆ.

ಕಾಲೇಜು ಸೇರಿದ್ದು
ಎಸ್.ಎಸ್.ಎಲ್.ಸಿ.ಯನ್ನು ಭಟ್ಟರು ಉತ್ತಮ ಅಂಕಗಳೊಂದಿಗೆ ಪೂರೈಸಿದರೂ ಕೂಡ ಕಾಲೇಜು ಸೇರಿ ಇಂಟರ್ಮೀಡಿಯೆಟ್ಗೆ ಮುಂದುವರಿಯುವ ನಿರೀಕ್ಷೆ ಇರಲಿಲ್ಲ. ಫೀಸು ಕಟ್ಟುವ ಕಷ್ಟ ಒಂದಾದರೆ, ಮನೆಯ ಜವಾಬ್ದಾರಿಗೆ ಹೆಗಲು ಕೊಡಬೇಕಾಗುವುದು ಇನ್ನೊಂದು. ಗೆಳೆಯರೊಂದಿಗೆ ಹೋಗಿ ಅದೇ ಶಿವಮೊಗ್ಗದಲ್ಲಿದ್ದ ಕಾಲೇಜಿನಿಂದ ಅರ್ಜಿಫಾರಂ ತಂದು ತುಂಬಿಸಿಕೊಟ್ಟದ್ದೇನೋ ಆಯಿತು; ಸೀಟು ಸಿಕ್ಕಿರುವುದಾಗಿ ಗೆಳೆಯರು ಹೇಳಿದರು. ಆದರೆ ಫೀಸು ತುಂಬಲು ಹಣ ಎಲ್ಲಿಂದ ಬರಬೇಕು? ಮಗನ ಕಷ್ಟ ತಾಯಿಗಲ್ಲದೆ ಇನ್ನು ಯಾರಿಗೆ ಅರ್ಥವಾಗಬೇಕು? ಪ್ರೀತಿಯಿಂದ “ನೋಡು ಮರಿ, ನಮಗೆ ಕಾಲೇಜು ಓದು ಬಹಳ ಕಷ್ಟ, ಗೊತ್ತಲ್ಲ?” ಎಂದರು. “ಹೌದು, ನನಗೆ ಚೆನ್ನಾಗಿ ಗೊತ್ತು. ಸೇರಬೇಕು ಅಂತ ಅಲ್ಲ. ಸುಮ್ಮನೆ ತಮಾಷೆಗೆಂದು ಗೆಳೆಯರಂತೆಯೇ ಅರ್ಜಿ ಹಾಕಿ ಬಂದಿದ್ದೆ ಅಷ್ಟೆ” ಎಂದು ಉತ್ತರಿಸಿದರು.
ಅಮ್ಮ ಮುಂದುವರಿದು “ನಿನಗೆ ಆಸೆಯಿದ್ದರೆ ಕಾಲೇಜು ಸೇರಿಕೊ. ಪ್ರಾರಂಭದಲ್ಲಿ ಸೇರಲು ಬೇಕಾದ ದುಡ್ಡನ್ನು ಹೇಗೋ ಸೇರಿಸೋಣ. ಆದರೆ ನೀನು ಇನ್ನೊಂದು ಮನೆಪಾಠವನ್ನು ಎಲ್ಲಾದರೂ ಹುಡುಕಿಕೊಳ್ಳಬೇಕು. ಮೇಲಿನವರಿಗೆ ಹೇಳಿಕೊಂಡು ಫ್ರೀಶಿಪ್ ಮಾಡಿಸಿಕೊಳ್ಳಬೇಕು, ಆಯಿತಾ?” ಎಂದರು. ಆಗ ಇವರಿಗಾದ ಸಂತೋಷಕ್ಕೆ ಪಾರ ಇರಲಿಲ್ಲ. ಏಕೆಂದರೆ ಮುಂದೆ ಓದಬೇಕೆಂಬ ಆಸೆ ಬಲವಾಗಿಯೇ ಇತ್ತು. ಮನೆಯ ಅನಿವಾರ್ಯ ಪರಿಸ್ಥಿತಿಯಿಂದ ಓದು ನಿಲ್ಲಿಸಲು ಮನಸ್ಸು ಸಿದ್ಧಮಾಡಿಕೊಂಡಿದ್ದರು ಅಷ್ಟೆ. ಇನ್ನೊಂದು ಮನೆಯ ಪಾಠವೂ ಸಿಕ್ಕಿತು. ಖಾದಿಭಂಡಾರ ಏರ್ಪಡಿಸಿದ್ದ ಗಾಂಧಿ ಪ್ರಬಂಧ ಸ್ಪರ್ಧೆಯಲ್ಲಿ ಆಗಷ್ಟೆ ಸಿಕ್ಕಿದ ಮೊದಲ ಬಹುಮಾನದಿಂದ ಬಟ್ಟೆ ದೊರೆತು ಪೈಜಾಮ ಹೊಲಿಸಿಕೊಳ್ಳಲು ಸಾಧ್ಯವಾಯಿತು. ನಿಕ್ಕರ್ನಿಂದ ಪೈಜಾಮಕ್ಕೆ ಬಡ್ತಿ ದೊರೆಯಿತು. ನದಿಯ ಆಚೆ ಬದಿಯಲ್ಲಿ ಕಾಲೇಜು (ಸಹ್ಯಾದ್ರಿ). ಅಲ್ಲಿ ಗುರುಗಳಾಗಿ ಸಿಕ್ಕಿದ ಜಿಎಸ್ಸೆಸ್ ಅವರಿಗೆ ಮುಂದೆ ಭಟ್ಟರು ಸಹೋದ್ಯೋಗಿಯೂ ಆದರು. ಇಂಟರ್ ಆರ್ಟ್ಸ್ನಲ್ಲಿ ಲಕ್ಷ್ಮಿನಾರಾಯಣ ಭಟ್ಟರು ಹತ್ತನೇ ರ್ಯಾಂಕ್ ಗಳಿಸಿದರು.
ಮೈಸೂರಿಗೆ ಪಯಣ
ಮುಂದಿನ ವ್ಯಾಸಂಗಕ್ಕೆ ಮೈಸೂರು ಅವರನ್ನು ಕೈಬೀಸಿ ಕರೆಯಿತು. ಮಹಾರಾಜರ ಪರಂಪರೆಯಿಂದಾಗಿ ಮೈಸೂರಿನಲ್ಲಿ ಶಿಕ್ಷಣವು ಬೆಳೆದಿತ್ತು. ದಿವಾನರಾಗಿದ್ದ ಸರ್ ಎಂ. ವಿಶ್ವೇಶ್ವರಯ್ಯನವರ ಪ್ರಯತ್ನ ಮತ್ತು ಮಹಾರಾಜರ ಔದಾರ್ಯದ ಫಲವಾಗಿ ಸ್ಥಾಪನೆಗೊಂಡ ಮೈಸೂರು ವಿಶ್ವವಿದ್ಯಾನಿಲಯವು ಆ ಹೊತ್ತಿಗೆ ಉಚ್ಛ್ರಾಯಸ್ಥಿತಿಯನ್ನು ತಲಪಿತ್ತು. ಇವರು ಹಾಕಿದ ಒಂದು ಕಾರ್ಡಿಗೆ ಮಹಾರಾಜ ಕಾಲೇಜಿನ ಅಂದಿನ ಪ್ರಿನ್ಸಿಪಾಲರಾದ ಕುವೆಂಪು ಅವರು ಉತ್ತರಿಸಿದ ಫಲವಾಗಿ ಮೈಸೂರಿನ ಹಾದಿ ಸುಗಮವಾಯಿತು. “ವಾರಾನ್ನ ನೋಡುವೆ; ಮನೆಪಾಠ ಮಾಡುವೆ; ಜಾಸ್ತಿ ಸಿಕ್ಕಿದ ಹಣವನ್ನು ಮನೆಗೆ ಕಳುಹಿಸುವೆ” ಎನ್ನುವ ಭರವಸೆಯ ಮೇರೆಗೆ ತಾಯಿಯು ಮೈಸೂರಿಗೆ ಹೋಗುವುದಕ್ಕೆ ಸಮ್ಮತಿಸಿದರು; “ಅಲ್ಲಿ ಸರಿಯಾಗದಿದ್ದರೆ ವಾಪಸು ಬಾ” ಎನ್ನುವ ಸಲಹೆಯನ್ನೂ ನೀಡಿದರು. ಭಾವಂದಿರಲ್ಲಿ ಒಬ್ಬರು ಭಟ್ಟರು ಮೈಸೂರಿಗೆ ಹೋಗುವುದನ್ನು ವಿರೋಧಿಸಿದರಾದರೂ ಅಮ್ಮ ಜಗ್ಗಲಿಲ್ಲ; ೧೯೫೫ರಲ್ಲಿ ಅವರು ಮೈಸೂರಿಗೆ ತೆರಳಿದರು. ಬಡವಿದ್ಯಾರ್ಥಿಗಳ ಶಿಕ್ಷಣಕ್ಕೆ ಮೈಸೂರು ವಾರಾನ್ನದಂತಹ ಒಂದು ಅಪೂರ್ವ ಅನುಕೂಲತೆಯನ್ನು ತನ್ನ ಒಡಲಲ್ಲಿ ಇರಿಸಿಕೊಂಡಿತ್ತು; ಮತ್ತು ಮಾನವೀಯತೆಯ ಸಾಕಾರ ರೂಪದಂತಿದ್ದ ಪ್ರಾಧ್ಯಾಪಕರು, ಪ್ರಾಚಾರ್ಯರು ಇತ್ಯಾದಿ.
ಟಿ.ಎಸ್. ವೆಂಕಣ್ಣಯ್ಯನವರ ತಮ್ಮಂದಿರಾದ ತ.ಸು. ಶಾಮರಾಯರು ಆದ್ಯಗುರು. ಭಟ್ಟರಿಗೆ ಅವರೊಂದಿಗೆ ಏರ್ಪಟ್ಟ ಮೊದಲ ಮುಖಾಮುಖಿಯೇ ಅದ್ಭುತವಾಗಿತ್ತು; ಪ್ರೀತಿ-ವಾತ್ಸಲ್ಯದಲ್ಲಿ ಅದ್ದಿ ತೆಗೆದಂತಹ ಮಾತುಗಳು!

ವಾರಾನ್ನದ ನೆನಪು
ವಾರಾನ್ನದ ಕ್ರಮದಂತೆ ಒಂದು ದಿನ ಎರಡು ಊಟ ಕೇಳಲು ಭಟ್ಟರು ಶಾಮರಾಯರ ಮನೆಗೆ ಹೋಗಿದ್ದರು. ತಾಯಿ ಸಂಬಂಧಿಕರು, ಪರಿಚಿತರ ಮನೆಯಲ್ಲಿ ಚಿಕ್ಕಪುಟ್ಟ ಕೆಲಸ ಮಾಡುತ್ತಾರೆ; ತಾನು ಚಿಕ್ಕ ಹುಡುಗರಿಗೆ ಮನೆಪಾಠ ಹೇಳಿ ದುಡ್ಡು ಸಂಪಾದಿಸುತ್ತೇನೆ ಎಂದುದನ್ನು ಕೇಳುತ್ತಲೇ ಇವರ ಕಷ್ಟಕ್ಕೆ ಬೇಸರಿಸುವ ಶಾಮರಾಯರು ಅಂದು ರಾತ್ರಿಯಿಂದಲೇ ಊಟಕ್ಕೆ ಬರುವಂತೆ ಹೇಳುತ್ತಾರೆ. ಇವರ ಉತ್ತಮ ಕಲಿಕೆ-ಸಾಧನೆಗಳನ್ನು ಕಂಡು ಸಂತೋಷಪಡುತ್ತಾರೆ; ಪರೀಕ್ಷೆಯ ಶುಲ್ಕ ತುಂಬಲು ತಾವಾಗಿಯೇ ವಿಚಾರಿಸಿ ಹಣ ಕೊಡುತ್ತಾರೆ. ಭಗಿನಿ ಸೇವಾಸಮಾಜದಲ್ಲಿ ಪಾಠ ಗೊತ್ತುಮಾಡಿ ತಿಂಗಳಿಗೆ (ಆ ಕಾಲಕ್ಕೆ ಸಾಕಷ್ಟು ದೊಡ್ಡ ಮೊತ್ತವಾದ) ಇಪ್ಪತ್ತು ರೂ. ಸಿಗುವಂತೆ ಮಾಡುತ್ತಾರೆ. ಭಟ್ಟರು ಎಂ.ಎ. ಮುಗಿಯುವವರೆಗೂ ಆ ಪಾಠವನ್ನು ಮುಂದುವರಿಸಿದರು. ಅವರ ಮುಂದಿನ ಅಧ್ಯಾಪಕ ಜೀವನಕ್ಕೆ ಅದರಿಂದ ಅನುಕೂಲವೇ ಆಯಿತು.
ಮಹಾರಾಜ ಕಾಲೇಜಿನಲ್ಲಿ ಮಾಡಿದ ಬಿ.ಎ. ಆನರ್ಸ್ನಲ್ಲಿ ಇವರಿಗೆ ಮೂವರು ವಿದ್ಯಾರ್ಥಿನಿಯರು ಸೇರಿದಂತೆ ಇಪ್ಪತ್ತು ಮಂದಿ ಸಹಪಾಠಿಗಳು. ಅ.ರಾ. ಮಿತ್ರ, ಹಂಪನಾ, ಕಮಲಾ ಹಂಪನಾ, ಸಣ್ಣಗುಡ್ಡಯ್ಯ, ಎಂ.ಎಚ್. ಕೃಷ್ಣಯ್ಯ ಅವರಲ್ಲಿ ಸೇರಿದ್ದರು. ಮೊದಲ ವರ್ಷವೇ ೨೫ ಪದ್ಯಗಳನ್ನು ಬರೆದರು. ಗೆಳೆಯರು ಹೊಗಳಿದರಾದರೂ ಇವರು ಅದನ್ನು ಹರಿದುಹಾಕಿ ಮತ್ತೆ ಪಶ್ಚಾತ್ತಾಪಪಟ್ಟರು. ಎಲ್ಲ ಆನರ್ಸ್ಗಳ ನಡುವೆ ಪ್ರಥಮ ಸ್ಥಾನ ಪಡೆದು ಬಿ.ಎಂ.ಶ್ರೀ ವಿದ್ಯಾರ್ಥಿವೇತನವನ್ನು ಗಳಿಸಿದರು.
ಕನ್ನಡ ಸಾಹಿತಿ ಮತ್ತು ಇಂಗ್ಲಿಷ್ ಪ್ರೊಫೆಸರ್ ಎಸ್.ವಿ. ರಂಗಣ್ಣ ಅವರು ಕೂಡ ಎನ್.ಎಸ್. ಲಕ್ಷ್ಮಿನಾರಾಯಣ ಭಟ್ಟರಿಗೆ ವಾರಾನ್ನ ನೀಡಿದ್ದರು. ಗಣೇಶನ ಹಬ್ಬದ ದಿನ ಇವರನ್ನು ಬೇಗ ಬರುವಂತೆ ಹೇಳಿದ್ದರು. ಹೋಗುವಾಗ ರಂಗಣ್ಣ ಜರತಾರಿ ಪಂಚೆ ಉಟ್ಟು ಪೂಜೆಗೆ ಕುಳಿತಿದ್ದರು. ಭಟ್ಟರಿಗೂ ಅಂತಹ ಪಂಚೆ ಉಡಿಸಿ ತಮ್ಮೊಂದಿಗೆ ಅವರಿಂದಲೂ ಪೂಜೆ ಮಾಡಿಸಿದರು. ಕೇಳಿದವರಿಗೆ ‘ಇವನು ನಮ್ಮ ಮನೆಯ ಹುಡುಗ’ ಎಂದೇ ಹೇಳಿದರು. ಅವರ ಇಬ್ಬರು ಗಂಡುಮಕ್ಕಳು ದೂರವಿದ್ದ ಕಾರಣ ವಿದ್ಯಾರ್ಥಿ ಭಟ್ಟರನ್ನೇ ತನ್ನೊಂದಿಗೆ ಸೇರಿಸಿಕೊಂಡಿರಬೇಕು. ಸಾಹಿತಿ ತೀ.ನಂ.ಶ್ರೀ ಕೂಡ ಒಂದು ದಿನದ ಊಟ ನೀಡಿದ್ದರು.
ವಾರಾನ್ನದಲ್ಲಿ ಪ್ರೀತಿ ತೋರಿದವರೇ ಜಾಸ್ತಿ. ಎಲ್ಲೋ ಒಂದೊಂದು ಕಡೆ ಮನೆಯವರು ಅಲಕ್ಷö್ಯ ಮಾಡುವುದಿತ್ತು. ಉಪಚಾರ ಮಾಡಿ ಜಾಸ್ತಿಯೇ ಬಡಿಸುವ ಹೆಂಗಸರೂ ಇದ್ದರು. ಕೆ.ವಿ. ಮೂರ್ತಿ ಎಂಬವರು ನಿರ್ದಿಷ್ಟ ದಿನ ತಾವು ಮನೆಯಲ್ಲಿ ಇಲ್ಲದಿದ್ದರೆ ಹೊಟೇಲ್ ಊಟದ ಟಿಕೆಟ್ ತಂದು ಮುಂಚಿತವಾಗಿ ಕೊಡುತ್ತಿದ್ದರು. ಅಷ್ಟೊಂದು ಕಾಳಜಿ ವಹಿಸುತ್ತಿದ್ದರಂತೆ.
ಒಂದು ಮನೆಯಲ್ಲಿ ಉಂಟಾದ ಸಮಸ್ಯೆಯಿಂದಾಗಿ ಸುಮಾರು ಮೂರು ತಿಂಗಳು ಭಾನುವಾರ ಇವರು ಉಪವಾಸ ಮಾಡಬೇಕಾಯಿತು; ಅದು ನಡೆದದ್ದು ಅಮೃತೇಶ್ವರ ದೇವಾಲಯದ ಅರ್ಚಕರ ಮನೆಯಲ್ಲಿ. ಅವರ ಪತ್ನಿಗೆ ವಿಶಾಲ ಮನಸ್ಸಿಲ್ಲ ಎನ್ನುವ ಭಟ್ಟರು ಆ ಬಗ್ಗೆ ಹೇಳಿದ್ದಾರೆ. ಅರ್ಚಕರ ಆರೇಳು ವರ್ಷದ ಮಗಳು ಊಟ ಮಾಡುವಾಗ ಸಿಟ್ಟಾಗಿ ಎಂಜಲನ್ನು ತೂರಿದಳು. ಅದು ಇವರ ಬಟ್ಟಲಿಗೂ ಬಿತ್ತು. ಊಟ ನಿಲ್ಲಿಸಿದಾಗ ಮಗುವಿನ ತಾಯಿ ಊಟ ಮಾಡುವಂತೆ ಹೇಳಿದರು. ಒಂದು ತುತ್ತು ಬಾಯಿಗೆ ಹಾಕಿ ತಿಂದಂತೆ ನಟಿಸಿದರು. ಅದು ತಾಯಿಗೆ ಕೋಪ ತರಿಸಿತು. ಊಟ ಮುಗಿಸಿದವರು ಏನೂ ಮಾತಾಡದೆ ಬರುತ್ತೇನೆ ಎಂದಷ್ಟೇ ಹೇಳಿ ಹೊರಟುಹೋದರು. ಮತ್ತೆ ಆ ಮನೆಗೆ ಊಟಕ್ಕೆ ಹೋಗಲಿಲ್ಲ. ಸುಮಾರು ಮೂರು ತಿಂಗಳು ಭಾನುವಾರ ಉಪವಾಸವೇ ಇದ್ದರು. ಇದು ತಿಳಿದ ಸಹಪಾಠಿ ಅ.ರಾ. ಮಿತ್ರ ಪ್ರತಿ ಭಾನುವಾರ ತಮ್ಮ ಮನೆಗೆ ಕರೆದು ಊಟ ನೀಡಿದರಂತೆ.
ಅಪ್ರತಿಮ ಗುರುಗಣ
ತೀನಂಶ್ರೀ, ಡಿ.ಎಲ್. ನರಸಿಂಹಾಚಾರ್, ತ.ಸು. ಶಾಮರಾವ್ ಮೊದಲಾದವರ ಪಾಠಗಳು ಲಕ್ಷ್ಮಿನಾರಾಯಣ ಭಟ್ಟರಿಗೆ ಇಷ್ಟವಾಗಿದ್ದಂತೆಯೇ ಇವರು ಅವರಿಗೆ ಪ್ರಿಯಶಿಷ್ಯನೂ ಆಗಿದ್ದರು. ತೀನಂಶ್ರೀ ಮನೆಯಲ್ಲಿ (ಸರಸ್ವತೀಪುರಂ) ವರ್ಷಕ್ಕೊಮ್ಮೆ ಹರಟೆ ಗೋಷ್ಠಿ ನಡೆಯುತ್ತಿದ್ದು, ಅದರಲ್ಲಿ ಭಟ್ಟರಿಗೂ ಆಹ್ವಾನ ಇರುತ್ತಿತ್ತು. ಕನ್ನಡ ವಿದ್ಯಾರ್ಥಿಗಳ ಆ ಕೂಟದಲ್ಲಿ ಅಧ್ಯಾಪಕರು ಬಿಗುಮಾನವಿಲ್ಲದೆ ಭಾಗಿಯಾಗುತ್ತಿದ್ದರಂತೆ. ಗೋಪಾಲಕೃಷ್ಣ ಅಡಿಗರ ‘ಭೂಮಿಗೀತ’ ಕವನಸಂಗ್ರಹ ಬಂದಾಗ ಹೆಚ್ಚಿನ ವಿದ್ಯಾರ್ಥಿಗಳು ನವ್ಯದ ಪರ ಇದ್ದರೆ, ನವೋದಯ ಪರ ಇದ್ದ ಗುರುಗಳು ನವ್ಯವನ್ನು ಟೀಕಿಸುತ್ತಿದ್ದರು; ಯು.ಆರ್. ಅನಂತಮೂರ್ತಿ ಅವರು ಬರೆದ ಪುಸ್ತಕದ ಮುನ್ನುಡಿ ಕೂಡ ಅದೇ ರೀತಿ ಪ್ರಶಂಸೆ ಮತ್ತು ಟೀಕೆಗೆ ಗುರಿಯಾಗಿತ್ತು. ‘ನವ್ಯರು ಕೊಚ್ಚೆಯನ್ನೇ ಕಾಣುವವರು’ ಎಂದೊಬ್ಬ ಅಧ್ಯಾಪಕರು ಟೀಕಿಸಿದಾಗ ಸಿಡಿದ ತೀನಂಶ್ರೀ “ನಿಮಗೆ ಹಾಗೆನ್ನಿಸಿತೇನೋ. ಆದರೆ ನನಗೆ ಅದು ಇಷ್ಟವಾಯಿತು. ಆತ ಬಹಳ ಸಮರ್ಥರಾಗಿ ಕಾಣುತ್ತಾರೆ. ಕಾವ್ಯದ ಸ್ವರೂಪದ ಕುರಿತು ಅವರು (ಅನಂತಮೂರ್ತಿ) ಬರೆದ ಮಾತು ನನಗೆ ಪೂರಾ ಒಪ್ಪಿಗೆ. ಆದರೆ ಅಡಿಗರದ್ದೇ ತೊಂದರೆ. ಅವರ ಕವಿತೆಯಲ್ಲಿ ಉದ್ದಕ್ಕೂ ಮಿಂಚುವ ಸಾಲುಗಳಿರುತ್ತವೆ. ಆದರೆ ಇಡೀ ಕವನಕ್ಕೆ ವಾಚ್ಯಾರ್ಥದ ಒಂದು ಪೂರ್ಣ ನೆಲೆಗಟ್ಟು ಇರುವುದಿಲ್ಲ. ಇದೇ ನನ್ನ ಆಕ್ಷೇಪ” ಎಂದರಂತೆ. ಆಗ ಅನಂತಮೂರ್ತಿ ಚಿಕ್ಕವರಾದರೂ ಪರಿಚಿತರಲ್ಲದಿದ್ದರೂ ತೀನಂಶ್ರೀ ಅವರ ಪರವಾಗಿ ನಿಂತಿದ್ದರು. ಬರಹ ಘನವಾದದ್ದು ಎನ್ನಿಸಿದರೆ ಹಾಗೆ ನಿಂತುಬಿಡುತ್ತಿದ್ದರು. ಅಂಥದ್ದರ ನಿಂದೆ ಅವರಿಗೆ ಸಹ್ಯವಾಗುತ್ತಿರಲಿಲ್ಲ ಎಂದು ಭಟ್ಟರು ದಾಖಲಿಸಿದ್ದಾರೆ.
ಅದೇ ತೀನಂಶ್ರೀ ಕವಿ ದ.ರಾ. ಬೇಂದ್ರೆ ಅವರ ಬಗ್ಗೆ “ಬೇಂದ್ರೆ ಶಾಸ್ತçವಿಷಯದ ಚರ್ಚೆಗೂ ತುಂಬ ಊಹೆ, ಕಲ್ಪನೆ ಬಳಸುತ್ತಾರೆ; ಜೊತೆಗೆ ವಿಚಿತ್ರ ತರ್ಕ ಬೆಳೆಸುತ್ತಾರೆ. ಕೇಳುತ್ತ ಕೂತರೆ ನಿಮ್ಮನ್ನು ಒಪ್ಪಿಸಿಯೂಬಿಡುತ್ತಾರೆ. ಎಷ್ಟೇ ಆಗಲಿ ಅವರು ಕವಿ. ಕವಿಗಳು ಶಾಸ್ತ್ರಾಧೀನರೆ? ಶಾಸ್ತ್ರವನ್ನೇ ಸೃಷ್ಟಿಸುವವರು” ಎಂದು ವಿನೋದವಾಗಿ ಹೇಳಿದ್ದರು.
ತೀನಂಶ್ರೀ ಗೋಷ್ಠಿಗಳು
ಪು.ತಿ. ನರಸಿಂಹಾಚಾರ್ ಅವರ ‘ಮಲೆದೇಗುಲ’ ಬಂದಾಗ ತೀನಂಶ್ರೀ ಕವಿಯಿಂದಲೇ ಆ ಪದ್ಯಗಳ ವಾಚನ ಮಾಡಿಸಿದರು; ನಡುವೆ ಕವಿಯ ಮಾತು, ವಿವರಣೆ ಇತ್ಯಾದಿ. “ಪುತಿನ ಒಳ್ಳೆಯ ಭಾಷಣಕಾರರಲ್ಲ. ಆದರೆ ಮಿತವಾದ ಗೋಷ್ಠಿಯಲ್ಲಿ ಆಪ್ತವಾಗಿ ಮಾತಾಡುವಾಗ ಅತ್ಯುತ್ತಮ ಮಾತುಗಾರರು. ಮಾತನಾಡುತ್ತ ಮಿಂಚಿನಂಥ ಮಾತುಗಳನ್ನು ಎಸೆದು ಕೇಳುಗರ ಮನಸ್ಸನ್ನು ಹಠಾತ್ತನೆ ಬೆಳಗಿಸಿಬಿಡಬಲ್ಲರು. ನಿರ್ಮಲ ಸರೋವರದಲ್ಲಿ ಬೆಳ್ಳಿ ಮೈ ಹೊಳೆಸುತ್ತ ಥಟ್ಟನೆ ಹಾಯುವ ಮೀನುಗಳಂತೆ ಆ ಮಾತುಗಳು. ಆ ದಿನ ಇಂಥ ಮೋಡಿ ಎರಚಿ ಮಧ್ಯೆ ಎರಡು ನಿಮಿಷ ಎದ್ದುಹೋದರು. ಆಗ ಅಲ್ಲಿದ್ದವರೊಬ್ಬರು ‘ನಾವು ನಮ್ಮ ಕಾಲದ ಅತ್ಯುತ್ತಮ ಲೇಖಕ-ಚಿಂತಕರ ಜೊತೆ ಇದ್ದೇವೆ ಎನಿಸುತ್ತಿಲ್ಲವೆ?’ ಎಂದರು” ಎಂದು ಭಟ್ಟರು ವಿವರಿಸಿದ್ದಾರೆ.
ಅದೇ ವೇಳೆ ಪುತಿನ ‘ತೀನಂಶ್ರೀ ನನ್ನ ಕವಿತೆಗಳ ‘ಸಾಕುತಾಯಿ’ ಎಂದು ಕೂಡ ಹೇಳಿದ್ದಿದೆ. ಹೀಗೆ ಭಟ್ಟರು ಪುಸ್ತಕದಲ್ಲಿ ಆ ಕಾಲದ ಕೆಲವು ಅಪೂರ್ವ ಸಂದರ್ಭಗಳನ್ನು ದಾಖಲಿಸಿದ್ದಾರೆ. ಅಂತಹ ಹಲವು ಗೋಷ್ಠಿಗಳನ್ನು ತೀನಂಶ್ರೀ ಏರ್ಪಡಿಸುತ್ತಿದ್ದರು. ಎ.ಎನ್. ಮೂರ್ತಿರಾವ್ (ಲೇಖಕ, ಇಂಗ್ಲಿಷ್ ಪ್ರಾಧ್ಯಾಪಕ) ಅಲ್ಲಿ ಸಾಮಾನ್ಯವಾಗಿ ಇರುತ್ತಿದ್ದರು. ಒಮ್ಮೆ ಭಟ್ಟರು ತೀನಂಶ್ರೀ ಅವರ ತರಗತಿಗೆ ಅನಿವಾರ್ಯವಾಗಿ ಗೈರು ಹಾಜರಾದಾಗ ಮರುದಿನ “ಬುದ್ಧಿವಂತರಾದ ವಿದ್ಯಾರ್ಥಿಗಳು ತರಗತಿಗೆ ಬಾರದಿದ್ದರೆ ಉಪಾಧ್ಯಾಯರಿಗೆ ಪಾಠ ಹೇಳಲು ಉತ್ಸಾಹ ಕಡಮೆ ಆಗುತ್ತದೆ” ಎಂದರಂತೆ. ೧೯೫೯ರಲ್ಲಿ ಲಕ್ಷ್ಮೀನಾರಾಯಣ ಭಟ್ಟರ ಎಂ.ಎ. ಮುಗಿದು ಮೈಸೂರನ್ನು ಬಿಡುವ ದಿನಗಳು ಬಂದವು.
ಭಟ್ಟರು ಮೈಸೂರನ್ನು ಅಲ್ಲಿ ಕೇಳಬಹುದಾಗಿದ್ದ ಸಂಗೀತ ಕಛೇರಿಗಳಿಗಾಗಿ ಕೂಡ ನೆನಪಿಸಿಕೊಂಡಿದ್ದಾರೆ;
ಎ. ಸುಬ್ಬರಾವ್, ಚೌಡಯ್ಯ, ಅರುಣಾಚಲಪ್ಪ (ಹಾರ್ಮೋನಿಯಂ) ಅವರಿದ್ದ ಒಂದು ಕಛೇರಿ ಮರೆಯಲಾಗದ್ದು. ಅರಿಯಾಕುಡಿ ರಾಮಾನುಜ ಅಯ್ಯಂಗಾರ್, ಮಧುರೆ ಮಣಿ ಅಯ್ಯರ್, ಎಂ.ಎಲ್. ವಸಂತಕುಮಾರಿ, ಬಾಲಮುರಳಿಕೃಷ್ಣ, ಲಾಲ್ಗುಡಿ ಜಯರಾಮನ್, ಎಂ.ಎಸ್. ಗೋಪಾಲಕೃಷ್ಣನ್, ಉಮಯಾಳಪುರಂ ಶಿವರಾಮನ್ ಅವರು ಭಾಗಿಯಾದ ಕಛೇರಿಗಳು, ದೇವೇಂದ್ರಪ್ಪನವರು ನಡೆಸುತ್ತಿದ್ದ ೧೫ ದಿನಗಳ ಹನುಮಜಯಂತಿ ಸಂಗೀತೋತ್ಸವ, ಕುಡಿದು ತೂರಾಡುತ್ತ ಬಂದರೂ ಅದ್ಭುತ ಕಛೇರಿ ನಡೆಸಿಕೊಟ್ಟ ಟಿ.ಆರ್. ಮಹಾಲಿಂಗಮ್ – ಹೀಗೆ ಶ್ರೀಮಂತ ನೆನಪು ಅವರ ಜೊತೆಗಿತ್ತು. ಮೈಸೂರಿನ ದಿನಗಳಲ್ಲೇ ಸ್ವಾಮಿ ವಿವೇಕಾನಂದ, ರಾಮಕೃಷ್ಣ ಪರಮಹಂಸ, ರಮಣಮಹರ್ಷಿ ಮುಂತಾಗಿ ಇತರ ಓದು ಕೂಡ ನಡೆದಿತ್ತು. “ಇವು ಮನಸ್ಸಿನ ಒಂದು ಮುಖ್ಯ ಭಾಗವನ್ನು ದೀಪ್ತಗೊಳಿಸಿವೆ” ಎಂದವರು ಹೇಳಿದ್ದಾರೆ. ರಮಣರ ಕಡೆಗೆ ಹೆಚ್ಚು ಆಕರ್ಷಿತರಾದ ಭಟ್ಟರು ಮುಂದೆ ‘ಅರುಣಾಚಲದ ಆತ್ಮಜ್ಯೋತಿ ರಮಣ ಮಹರ್ಷಿ’ ಎನ್ನುವ ಪುಸ್ತಕವನ್ನೇ ಬರೆದರು.
ಉದ್ಯೋಗದ ಬೇಟೆ
ಕನ್ನಡ ಎಂ.ಎ. ಆದ ಬಳಿಕ ಬೆಂಗಳೂರಿನಲ್ಲಿ ಉದ್ಯೋಗದ ಬೇಟೆ ಆರಂಭವಾಯಿತು. ಎಂ.ಎ. ಪ್ರಥಮದರ್ಜೆಯಲ್ಲಿ ಪಾಸಾದ ಕಾರಣ ಕೆಲಸ ಸಿಗುವುದು ಕಷ್ಟವಾಗಲಿಲ್ಲ. ಆದರೆ ಲಭ್ಯವಾಗಿದ್ದ ಫೆಲೋಶಿಪ್ ಪಡೆದು ಪಿಎಚ್.ಡಿ. ಮಾಡುವಂತೆ ತೀನಂಶ್ರೀ ಸಲಹೆ ನೀಡಿದರು. ಅದರಂತೆ ಸಂಶೋಧನೆಗೆ ಭಾಷಾಶಾಸ್ತ್ರವನ್ನು ಆರಿಸಿಕೊಂಡರು. ಸ್ವಲ್ಪ ಕಾಲ ಮಹಾರಾಣಿ ಕಾಲೇಜಿನಲ್ಲಿ ಅಧ್ಯಾಪಕರಾಗಿದ್ದು, ಅನಂತರ ಆಚಾರ್ಯ ಪಾಠಶಾಲೆ (ಎಪಿಎಸ್) ಕಾಲೇಜಿಗೆ ಸೇರಿದರು. ಅಲ್ಲಿ ಕಾದಂಬರಿಕಾರ ಕೊರಟಿ ಶ್ರೀನಿವಾಸರಾವ್ ವಿಭಾಗ ಮುಖ್ಯಸ್ಥರು ಹಾಗೂ ವೀಣೆ ರಾಜಾರಾವ್ ಸಂಗೀತ ವಿಭಾಗದ ಮುಖ್ಯಸ್ಥರಾಗಿದ್ದರು. ಪಾಠ ಮಾಡಲು ಅಳುಕಿಲ್ಲದಿದ್ದರೂ ತಲೆತಗ್ಗಿಸಿ ಅಥವಾ ಅಕ್ಕಪಕ್ಕ ನೋಡಿ ಪಾಠ ಮಾಡುವ ಇವರ ಅಭ್ಯಾಸ ಹೆಣ್ಣುಮಕ್ಕಳಿಗೆ ಮೋಜಿನ ಸಂಗತಿಯಾಯಿತು; ‘ಮಿಸ್ಟರ್ ಫ್ಲೋರ್’ ಎನ್ನುವ ಹೆಸರು ಕೂಡ ಬಂತು; ಎಪಿಎಸ್ನಲ್ಲಿ ನಾಲ್ಕು ವರ್ಷ ಕಳೆಯಿತು.
ನ್ಯಾಷನಲ್ ಕಾಲೇಜಿನ ಜಾಹೀರಾತು ನೋಡಿ ಅರ್ಜಿ ಹಾಕಿದರೂ ಸಂದರ್ಶನಕ್ಕೆ ಕರೆಯಲಿಲ್ಲ; ಕೋರಿಕೆ ಮೇರೆಗೆ ಕರೆದರೂ ಆಯ್ಕೆಯಾಗಲಿಲ್ಲ. ಆಗ ಪ್ರೊ|| ಜಿ. ವೆಂಕಟಸುಬ್ಬಯ್ಯ (ಮುಂದೆ ನಿಘಂಟುಕಾರರಾದವರು) ಅವರನ್ನು ಭೇಟಿ ಮಾಡಿ ಸಲಹೆ ಕೇಳಿದಾಗ, “ಸದ್ಯವೇ (ಬೆಂಗಳೂರು) ವಿಶ್ವವಿದ್ಯಾಲಯ ಆಗಲಿದೆ. ನೀವು ಅಲ್ಲಿಗೆ ಸೇರುವುದೇ ಸರಿ” ಎಂದರು. ಅದರಂತೆ ವಿವಿ ಸ್ಥಾಪನೆಯಾಯಿತು; ನ್ಯಾಷನಲ್ ಕಾಲೇಜಿಗೆ ಆಯ್ಕೆ ಆಗದಿದ್ದುದೇ ಒಳ್ಳೆಯದಾಯಿತು; ಹೀಗೆ ೧೯೬೫ರಲ್ಲಿ ಬೆಂಗಳೂರು ವಿವಿ ಕನ್ನಡ ವಿಭಾಗಕ್ಕೆ ಸೇರಿದರು. ಇವರ ಅನಂತರ ಕೆ. ಮರುಳಸಿದ್ದಪ್ಪ, ಎಚ್.ಕೆ. ಜಯದೇವ್ ಸೇರಿದರು. ಮಳಗಿ, ಬಿ.ಎನ್. ಶಾಸ್ತ್ರಿ ಮೊದಲೇ ಇದ್ದರು. ರಂ.ಶ್ರೀ. ಮುಗಳಿ ಬಂದು ವಿಭಾಗ ಮುಖ್ಯಸ್ಥರಾದರು. ಅನಂತರ ಜಿ.ಎಸ್. ಶಿವರುದ್ರಪ್ಪ, ಎಂ. ಚಿದಾನಂದಮೂರ್ತಿ ಬಂದರು. ಶಿವರುದ್ರಪ್ಪ ಮುಖ್ಯಸ್ಥರಾದರು; ಮುಂದೆ ಕೆ.ವಿ. ನಾರಾಯಣ, ಕೃಷ್ಣ ಪರಮೇಶ್ವರ ಭಟ್ಟ, ಸಿ. ವೀರಣ್ಣ, ಬರಗೂರು ರಾಮಚಂದ್ರಪ್ಪ, ಬಸವರಾಜು ಕಲ್ಗುಡಿ, ದಲಿತಕವಿ ಸಿದ್ದಲಿಂಗಯ್ಯ ಅವರೆಲ್ಲ ಕನ್ನಡ ವಿಭಾಗಕ್ಕೆ ಸೇರಿದರು. ಶಿವರುದ್ರಪ್ಪ ಸುಮಾರು ಎರಡು ದಶಕ ಮುಖ್ಯಸ್ಥರಾಗಿದ್ದು ೧೯೮೫ರಲ್ಲಿ ನಿವೃತ್ತರಾದರು. ಅವರ ಅಡಿಯಲ್ಲಿ ವಿಭಾಗ ದೊಡ್ಡದಾಗಿ ಬೆಳೆಯಿತು. “ಪ್ರತಿವರ್ಷ ಮೂರು ದಿನಗಳ ವಿಚಾರಸಂಕಿರಣ ಏರ್ಪಡಿಸುತ್ತಿದ್ದೆವು. ಮೂರನೇ ದಿನ ಸಂಜೆ ಕವಿಗೋಷ್ಠಿ. ಸಂಕಿರಣದ ಪ್ರಬಂಧಗಳು (ಉಪನ್ಯಾಸ) ವಿವಿಯಿಂದ ಪುಸ್ತಕಗಳಾಗಿ ಪ್ರಕಟಗೊಂಡವು. ವಿಭಾಗದಿಂದ ಇತರ ಪುಸ್ತಕಗಳು, ‘ಸಾಧನೆ’ ಎಂಬ ಸಾಹಿತ್ಯ ಸಂಚಿಕೆ, ‘ಸಾಹಿತ್ಯ ವಾರ್ಷಿಕ’ ಎಂಬ ಪುಸ್ತಕಗಳೂ ಪ್ರಕಟ ಆಗುತ್ತಿದ್ದವು. ವಿಭಾಗಕ್ಕೆ ‘ಕನ್ನಡ ಅಧ್ಯಯನ ಕೇಂದ್ರ’ ಎಂಬ ಹೆಸರು ಬಂತು. ವಿವಿಯಲ್ಲಿ ಎಚ್.ಎಸ್. ವೆಂಕಟೇಶಮೂರ್ತಿ, ನರಹಳ್ಳಿ ಬಾಲಸುಬ್ರಹ್ಮಣ್ಯ, ಎಚ್.ಎಸ್. ರಾಘವೇಂದ್ರರಾವ್, ಕೆ.ವಿ. ನಾರಾಯಣ, ಕಿ.ರಂ. ನಾಗರಾಜ್, ಡಿ.ಆರ್. ನಾಗರಾಜ್, ಬರಗೂರು, ಸಿದ್ದಲಿಂಗಯ್ಯ ಇವರೆಲ್ಲ ನನ್ನ ವಿದ್ಯಾರ್ಥಿಗಳು. ಅವರಲ್ಲಿ ಕೆಲವರು ಮುಂದೆ ಸಹೋದ್ಯೋಗಿಗಳೂ ಆದರು.” ರೀಡರ್, ಪ್ರೊಫೆಸರ್, ಕೇಂದ್ರದ ನಿರ್ದೇಶಕ, ಡೀನ್ ಮುಂತಾದ ಹುದ್ದೆಗಳಿಗೇರಿ ೧೯೯೬ರಲ್ಲಿ ಭಟ್ಟರು ನಿವೃತ್ತರಾದರು.
ಸುಗಮ ಸಂಗೀತ
ಸುಮಾರು ೧೯೭೦-೮೦ರ ದಶಕಗಳಲ್ಲಿ ಸುಗಮ ಸಂಗೀತ ಕ್ಷೇತ್ರಕ್ಕೆ ತಾನು ಸಾಕಷ್ಟು ಸೇವೆ ಸಲ್ಲಿಸಿರುವುದಾಗಿ ಮುಕ್ತವಾಗಿ ಹೇಳಿಕೊಳ್ಳುವ ಭಟ್ಟರು, ಆ ಕ್ಷೇತ್ರಕ್ಕೆ ಒಲಿಯಲು ಮೈಸೂರಿನಲ್ಲಿ ಓದುತ್ತಿದ್ದ ದಿನಗಳಲ್ಲಿ ಸುಗಮ ಸಂಗೀತಕ್ಕೆ ಅನನ್ಯ ಕೊಡುಗೆ ನೀಡಿದ ಪಿ. ಕಾಳಿಂಗರಾವ್, ಎಚ್.ಆರ್. ಲೀಲಾವತಿ ಮತ್ತು ಮೈಸೂರು ಅನಂತಸ್ವಾಮಿ ಅವರ ಗಾಯನ ಕೇಳಿ ಮರುಳಾದದ್ದೇ ಕಾರಣ ಎನ್ನುತ್ತಾರೆ. “ನಾಡಿನ ಉದ್ದಗಲಕ್ಕೆ ಬಿರುಗಾಳಿಯಂತೆ ಬೀಸಿದ ಕಾಳಿಂಗರಾವ್ ಅವರಿಂದಾಗಿ ಜನಕ್ಕೆ ಅದೆಷ್ಟೋ ಭಾವಗೀತೆಗಳು ಬಾಯಿಪಾಠ ಆಗಿದ್ದವು. ಎಚ್.ಆರ್. ಲೀಲಾವತಿ ಓರ್ವ ಆದರ್ಶ ಗಾಯಕಿ; ಮತ್ತು ಮೈಸೂರು ಅನಂತಸ್ವಾಮಿ ಅವರ ಹಾಡು ಕೇಳುತ್ತ ನಾನು ಊಟ ತಪ್ಪಿಸಿಕೊಂಡದ್ದಿದೆ” ಎಂದಿದ್ದಾರೆ.
‘ಒಬ್ಬ ಕವಿ ಗೌರವಿಸಬಹುದಾದ ಸಂಗೀತದ ಬಗೆ ಇದ್ದರೆ ಇದೇ’ ಎಂದು ಸುಗಮ ಸಂಗೀತವನ್ನು ಶ್ಲಾಘಿಸುವ ಅವರು, ಸಂಗೀತ ಹುಟ್ಟುವುದೇ ಕವಿತೆಯ ದರ್ಶನದಿಂದ ಎಂದಿದ್ದಾರೆ. ಯಾರೋ ಒಬ್ಬರು ಪಂಡಿತರು ಒಮ್ಮೆ ಇದನ್ನು ಲೈಟ್ ಮ್ಯೂಸಿಕ್ ಎಂದಾಗ ಅಲ್ಲಿದ್ದ ಬಾಲಮುರಳಿಕೃಷ್ಣ ಅವರು, ‘Light music is the music that gives you light’ ಎಂದು ತಿದ್ದಿದ್ದರಂತೆ. ಕವಿ ಪುತಿನ ಅವರು ಒಂದು ವಿಚಾರಸಂಕಿರಣದಲ್ಲಿ “ಸುಗಮಸಂಗೀತ ಲಘುನೆಲೆಯದು ಎಂಬ ಭಾವನೆ ಅನೇಕ ಸಂಗೀತ ವಿದ್ವಾಂಸರದಲ್ಲಿದೆ; ಶಾಸ್ತ್ರೀಯ ಸಂಗೀತ ಡಿಗ್ರಿಯಾದರೆ ಸುಗಮಸಂಗೀತ ಒಂದು ಡಿಪ್ಲೊಮಾ ಎಂದವರು ಹೇಳುತ್ತಾರೆ; ಇದು ತಪ್ಪು. ಸುಗಮಸಂಗೀತವು ಸೃಜನಶೀಲ ವ್ಯಕ್ತಿತ್ವದಿಂದ ಸೃಷ್ಟಿಯಾಗುವ ಸಂಗೀತ. ಡಿಪ್ಲೊಮಾ ಎನ್ನುವುದೇ ನಿಜವಾದರೆ ಅದು ಸ್ನಾತಕೋತ್ತರ ಡಿಪ್ಲೊಮಾ ಅಷ್ಟೆ” ಎಂದಿದ್ದರಂತೆ.
“ಕೆಲವರು ಹಿರಿಯರಿಂದ ಸುಗಮಸಂಗೀತವು ಹೀಗೆ ಪ್ರಶಂಸೆ ಗಳಿಸಿ ಬೆಳೆಯುತ್ತಿದ್ದರೂ ಅದಕ್ಕೆ ದುಡಿಯುವವರ ದಾರಿ ಸುಗಮವಾಗಿಲ್ಲ. ಅದರ ಯಶಸ್ಸಿಗೆ ಕಾರಣರಾದ ಕವಿಗಳ ಮೇಲೆ, ಕಲಾವಿದರ ಮೇಲೆ ಒಂದು ಬಗೆಯ ವಿರೋಧದ ಆಕ್ರಮಣ ಉದ್ದಕ್ಕೂ ನಡೆಯುತ್ತಲೇ ಇದೆ. ಕವಿಗಳನ್ನು ಜರೆಯುವವರ ವಾದವೆಂದರೆ, ಕವಿತೆಗೂ ಗಾಯನಕ್ಕೂ ಸ್ನೇಹ ಯಾಕೆ? ‘ಕವಿತೆಯು ಗಾಯನಕ್ಕೆ ಹೊಂದುವಂತೆ ಇರಲೇಬಾರದು. ಅದೇನಿದ್ದರೂ ಮಾತಿಗೆ ಹತ್ತಿರವಾದದ್ದು. ಅದರದ್ದು ಮಾತಿನ ಲಯವೇ ಹೊರತು ಗೀತಲಯವಲ್ಲ. ಅದು ಸಾಧಿಸಬೇಕಾದ್ದು ಸಂಕೀರ್ಣವಾದ ಅನುಭವವನ್ನೇ ಹೊರತು ಸರಳವಾದ ಭಾವಲಹರಿಯನ್ನಲ್ಲ. ಭಾವಗೀತೆಯು ಸಂಕೀರ್ಣ ಅನುಭವದ ಪ್ರಕಾಶಕ್ಕೆ ತಕ್ಕ ಮಾಧ್ಯಮವೇ ಅಲ್ಲ. ಭಾವಗೀತೆ ಬರೆಯುವುದರಿಂದ ಗಾಢ ಅನುಭವದ, ಬಿಕ್ಕಟ್ಟಾದ ಹೆಣಿಗೆಯ (ನವ್ಯಕಾವ್ಯದಂತಹ) ಕಾವ್ಯ ಬರೆಯುವುದು ಕಷ್ಟವಾಗುತ್ತ ಹೋಗುತ್ತದೆ. ಭಾವಗೀತೆ ಬರೆಯುವವರು ಜನಪ್ರಿಯತೆಗಾಗಿ ಬರೆಯುತ್ತಿದ್ದಾರೆ. ರೇಡಿಯೊ, ಕ್ಯಾಸೆಟ್ಗಳ ಮೂಲಕ ಜನಪ್ರಿಯತೆ ಪಡೆಯುತ್ತಿದ್ದಾರೆ’ ಇತ್ಯಾದಿ. “‘ನೀವು ನವ್ಯ ಕವನಗಳನ್ನು ಬರೆಯುತ್ತಿದ್ದೀರಲ್ಲ. ಅದು ಸಾಕು. ಈ ಭಾವಗೀತೆ ಬರೆಯುವುದನ್ನು ಬಿಟ್ಟುಬಿಡಿ’ ಅಂತ ಬುದ್ಧಿವಾದ ಹೇಳಿ ನನ್ನ ಉದ್ಧಾರಕ್ಕೆ ಶ್ರಮಿಸಿ ವಿಫಲರಾದ ನವ್ಯ ಕವಿವರೇಣ್ಯರು ಒಬ್ಬರು ಉಂಟು. ಭಾರತೀಯ ಪರಂಪರೆಯಲ್ಲಿ ಕಾವ್ಯಕ್ಕೂ ಗಾಯನಕ್ಕೂ ಇರುವ ಸಂಬಂಧ, ಅದರಿಂದ ಸಾಧಿತವಾದ ಕಾವ್ಯಪ್ರಯೋಜನಗಳ ಅರಿವು ಇಲ್ಲದವರು ಮಾತ್ರ ಹೀಗೆ ಮಾತಾಡುವುದು ಸಾಧ್ಯ” ಎಂದು ಭಟ್ಟರು ಸಮರ್ಥನೆಯನ್ನು ನೀಡಿದ್ದಾರೆ. ಇಲ್ಲಿ ಹೇಳಿದ ನವ್ಯ ಕವಿವರೇಣ್ಯರು ಬಿ.ಸಿ. ರಾಮಚಂದ್ರ ಶರ್ಮ ಅವರು.
ಹಾಡಾಗಿ ಹರಿದ ಕಾವ್ಯ
ಎಲ್ಲ ಕಡೆ ಕವಿತೆ ಹಾಡಾಗಿ ಹರಿದಿದೆ. ಗಮಕದ ಮೂಲಕ ಕಾವ್ಯಗಳು ಜನರಿಗೆ ಬಾಯಿಪಾಠ ಆಗಿದ್ದವು. ಬಸವಣ್ಣ ಆನು ಒಲಿದಂತೆ ಹಾಡುವೆ ಎಂದರೆ ದಾಸಸಾಹಿತ್ಯ ರಾಗತಾಳಗಳ ಸಹಿತವಾಗಿಯೇ ಬಂತು. ಬೇಂದ್ರೆ, ಕುವೆಂಪು, ಕೆ.ಎಸ್. ನರಸಿಂಹಸ್ವಾಮಿ ಅವರು ಜನರಿಗೆ ತಲಪಿದ್ದು ಗಾಯನದ ಮೂಲಕ. ನವ್ಯ ಕಾವ್ಯ ಬಂದ ಮೇಲೆ ಈ ಸಂಬಂಧ ಕಡಿದುಹೋಯಿತು; ಕಾವ್ಯವು ತನ್ನ ಕಾಲ ಮೇಲೆ ನಿಲ್ಲಬೇಕೆಂಬ ಹಟ ಮುಂದೆ ಬಂತು – ಎನ್ನುವ ಭಟ್ಟರು, ಈಗ ಬರುತ್ತಿರುವ ಭಾವಗೀತೆಯು ನವ್ಯಕಾವ್ಯದ ರಾಗವಿರೋಧಿ ಧೋರಣೆಗೆ ಪ್ರತಿಕ್ರಿಯೆಯಾಗಿ ಹುಟ್ಟಿದ ಕಾವ್ಯಪ್ರಭೇದವಾಗಿದೆ. ಗೋಪಾಲಕೃಷ್ಣ ಅಡಿಗರು ನವ್ಯದ ಅನಂತರ ಗೀತೆಗಳನ್ನು ಬರೆದಿದ್ದಾರೆ. ಜನ ಬಳಸಬೇಕಿದ್ದರೆ ಗಾಯನ ಬೇಕು. ಕ್ಯಾಸೆಟ್ಗಾಗಿ ಬರೆಯುತ್ತಾರೆನ್ನುವುದು ಕೇವಲ ಕುಹಕವಷ್ಟೆ. ಸಂಗೀತದಿಂದ ಕಾವ್ಯ ನೀರಾಗುತ್ತದೆ ಎನ್ನುತ್ತಾರೆ. ಆದರೆ ನವ್ಯ ಕವನಗಳ ಜೊತೆಗೆ ಬಿಗಿಯಾದ ಗೀತೆಗಳು ಕೂಡ ಬರುತ್ತಿವೆ ಎನ್ನುವ ಬಲವಾದ ಸಮರ್ಥನೆ ನೀಡಿದ್ದಾರೆ; ಪುತಿನ, ಜಿಎಸ್ಸೆಸ್, ಚಂದ್ರಶೇಖರ ಕಂಬಾರ, ಸುಮತೀಂದ್ರ ನಾಡಿಗ, ಎಚ್.ಎಸ್. ವೆಂಕಟೇಶಮೂರ್ತಿ, ಬಿ.ಆರ್. ಲಕ್ಷ್ಮಣರಾವ್, ದೊಡ್ಡರಂಗೇಗೌಡ ಹಾಗೂ ಕಮಲಾ ಹೆಮ್ಮಿಗೆ ಅವರನ್ನು ಉದಾಹರಿಸಿದ್ದಾರೆ. ಕವನವು ಗಾಯನದ ಜೊತೆ ಕೂಡಿ ಬಂದರೆ ಅದರ ಯೋಗ್ಯತೆ ತಿಳಿಯುವುದಿಲ್ಲ ಎನ್ನುವವರು ಎಂತಹ ವಿಮರ್ಶಕರು? – ಎಂದು ಪ್ರಶ್ನಿಸಿದ್ದಾರೆ.
ಕವಿ ಅಡಿಗರು “ಭಾವಗೀತೆಗಳು ಇನ್ನೂ ಬರಬೇಕು. ಬರೆಯುತ್ತಿದ್ದಾರೆ. ಸಂಗೀತದ ಆಧಿಪತ್ಯ ಮೆರೆದು ಸರಸ್ವತೀ ದ್ರೋಹ ಆಗಬಾರದಷ್ಟೆ. ನಿಜವಾದ ಕವಿ ಕೂಡ ಕ್ಯಾಸೆಟ್ ಮಾಡಿಸಬಹುದು” ಎಂದಿದ್ದಾರೆ. ಕೆ.ಎಸ್.ನ ಅವರು “ನವ್ಯ ಕವಿತೆ ತಿರಸ್ಕರಿಸಿದ ಗೇಯತೆ ಈಗ ಮತ್ತೆ ಕವಿತೆಯಲ್ಲಿ ಕಾಣಿಸುತ್ತಿರುವುದಕ್ಕೆ ಕಾರಣ ಬಹುಜನರಿಗೆ ತಲಪಬೇಕೆನ್ನುವುದೇ. ಇದೊಂದು ಶುಭ ಸೂಚನೆ” ಎಂದರೆ ಪುತಿನ “ಭಾವಗೀತೆಗಳ ಕ್ಯಾಸೆಟ್ಗಳ ಜನಪ್ರಿಯವಾಗುತ್ತಿರುವುದು ಸಂತೋಷದ ಸಂಗತಿ” ಎಂದು ಹೇಳಿದ್ದಿದೆ.
ಮುಂದುವರಿದು ಭಟ್ಟರು ಭಾವಗೀತೆ ಗಾಯನದ ಅಗ್ರಗಣ್ಯರಾದ ಮೈಸೂರು ಅನಂತಸ್ವಾಮಿ, ಎಚ್.ಕೆ. ನಾರಾಯಣ, ಸಿ. ಅಶ್ವತ್ಥ್, ಶಿವಮೊಗ್ಗ ಸುಬ್ಬಣ್ಣ, ರತ್ನಮಾಲಾ, ಮಾಲತಿ, ಗರ್ತಿಕೆರೆ ರಾಘಣ್ಣ, ಜಿ.ವಿ. ಅತ್ರಿ, ರಾಜು ಅನಂತಸ್ವಾಮಿ, ಮೃತ್ಯುಂಜಯ ದೊಡ್ಡವಾಡ ಮುಂತಾದವರೊಂದಿಗೆ ತಮ್ಮ ಒಡನಾಟ, ಅವರ ಕೊಡುಗೆ, ತಾನು ಅವರಿಗೆ ನೀಡಿದ ಸಹಕಾರ, ಪ್ರೋತ್ಸಾಹ ಮುಂತಾದ ಬಗ್ಗೆ ಹೇಳಿಕೊಂಡಿದ್ದಾರೆ. ರತ್ನಮಾಲಾ ಮತ್ತು ಮಾಲತಿ ಅವರ ಕುರಿತು ಭಟ್ಟರು ಹೇಳುವ ಮಾತಿದು: “ಇಬ್ಬರಿಗೂ ಗಾಯನದಲ್ಲಿ ಸ್ವಂತಿಕೆಯಿದೆ. ಆದರೆ ಜೊತೆಗೂಡಿ ಹಾಡುವಾಗ ಇಬ್ಬರ ಧ್ವನಿಗಳು ಆಶ್ಚರ್ಯವೆನಿಸುವಂತೆ ಬೆರೆಯುತ್ತವೆ; ಸಮೂಹದಲ್ಲಿ ಕರಗುತ್ತವೆ. ಒಟ್ಟು ಸೇರಿ ಮನೋಹರ ಧ್ವನಿಯಾಗಿ ಹೊಮ್ಮುತ್ತದೆ.”
ಇಬ್ಬರ ಮುಖಾಮುಖಿ
ಇಬ್ಬರು ಮಹಾನ್ ಸಂಗೀತಗಾರರೊಂದಿಗೆ ಲಕ್ಷ್ಮಿನಾರಾಯಣಭಟ್ಟರಿಗೆ ಏರ್ಪಟ್ಟ ಮುಖಾಮುಖಿಯ ಸಂದರ್ಭಗಳು ಉಲ್ಲೇಖಾರ್ಹವೆನಿಸುತ್ತದೆ. ಏಮನಿ ಶಂಕರಶಾಸ್ತ್ರಿ ಹಾಗೂ ಬಾಲಮುರಳಿಕೃಷ್ಣ ಆ ಮಹಾನ್ ಕಲಾಕಾರರು.
ಇಸವಿ ೧೯೮೦-೮೧. ಭಟ್ಟರು ಬೆಂಗಳೂರು ವಿವಿ ಕನ್ನಡ ವಿಭಾಗದಲ್ಲಿ ರೀಡರ್. ಸ್ಥಳೀಯ ಆಕಾಶವಾಣಿ ನಿಲಯದಿಂದ ಏಮನಿಯವರು ನಿಮ್ನನ್ನು ನೋಡಬೇಕಂತೆ ಎನ್ನುವ ಫೋನ್ ಕರೆ ಬಂತು. ದೆಹಲಿ ಆಕಾಶವಾಣಿಯಲ್ಲಿ ಲಘುಸಂಗೀತದ ಪ್ರೊಡ್ಯೂಸರ್ ಜನರಲ್ ಆಗಿದ್ದ ಏಮನಿಯವರಿಗೆ ಆಗ ಸುಮಾರು ೬೫ ವರ್ಷ. ಆಕಾಶವಾಣಿಯ ತಿಂಗಳ ಪದ್ಯಕ್ಕೆ ಇವರ ಒಂದು ಪದ್ಯವನ್ನು ಕೇಳಿ ಪಡೆದುಕೊಂಡಿದ್ದರು. ಅದನ್ನು ಪರಿಶೀಲಿಸಿದ ಏಮನಿ ಶಾಸ್ತ್ರಿಗಳು ‘ಇದು ತಾಳಕ್ಕೆ ಹೊಂದುವುದಿಲ್ಲ; ಬೇರೆ ಪದ್ಯ ಬರೆದುಕೊಡಿ’ ಎಂದರು. ಭಟ್ಟರು ಅದಕ್ಕೊಪ್ಪಲಿಲ್ಲ. ‘ಸಿನೆಮಾದಲ್ಲಿ ಧಾಟಿಗೆ ಹೊಂದುವ ಪದ್ಯ ಬರೆಯುವ ಕ್ರಮ ಇರಬಹುದು; ಅಂತಹ ಕ್ರಮಕ್ಕೆ ನನ್ನ ಒಪ್ಪಿಗೆಯಿಲ್ಲ’ ಎಂದುಬಿಟ್ಟರು. ಸ್ಥಳೀಯ ಅಧಿಕಾರಿಗಳಿಗೆ ಇರುಸುಮುರುಸು. ಬೇರೆ ಪದ್ಯ ಬರೆದು ಕೊಡುವಂತೆ ಬಗೆಬಗೆಯಾಗಿ ಕೇಳಿದರು. ಭಟ್ಟರು ಜಗ್ಗಲೇ ಇಲ್ಲ; ಕೊನೆಗೆ ತಮ್ಮದೇ ಸಂಕಲನದಲ್ಲಿದ್ದ ಬೇರೆ ಒಂದು ಪದ್ಯವನ್ನು ತೋರಿಸಿದರು; ಅದು ಏಮನಿಯವರಿಗೆ ಒಪ್ಪಿಗೆಯಾಗಿ ಸಮಸ್ಯೆ ಪರಿಹಾರವಾಯಿತು.
ಒಮ್ಮೆ ಬೆಂಗಳೂರು ಗಾಯನಸಮಾಜದಲ್ಲಿ ಬಾಲಮುರಳಿಕೃಷ್ಣ ಅವರು ಸ್ಥಳದಲ್ಲೇ ಹೊಸ ರಾಗವನ್ನು ಸೃಷ್ಟಿಸಿ ತೋರಿಸುವುದಾಗಿ ಹೇಳಿದರು. ಗಾಯನಸಮಾಜದವರು ಕೂಡ ಹೊಸ ರಾಗ ರಚನೆ ಬೇಡ ಎಂದರು. ಪರಂಪರೆಯು ವ್ಯಕ್ತಿ ಪ್ರತಿಭೆಗೆ ಅವಕಾಶ ನೀಡುತ್ತದೆಂದು ಲಕ್ಷ್ಮಿನಾರಾಯಣ ಭಟ್ಟರು ಟಿ.ಎಸ್. ಎಲಿಯಟ್ ಮಾತನ್ನು ಉಲ್ಲೇಖಿಸಿದಾಗ ಬಾಲಮುರಳಿ ಅವರಿಗೆ ಸಮರ್ಥನೆ ಸಿಕ್ಕಿದಂತಾಗಿ ಸಂತೋಷವಾಯಿತು. ಒಂದು ಗಂಟೆಯೊಳಗೆ ರಾಗದೊರೈ ಎನ್ನುವ ಹೊಸ ರಾಗವನ್ನು ರಚಿಸಿ ಪ್ರಸ್ತುತಪಡಿಸಿದರು. ಭಟ್ಟರನ್ನು ಕರೆದು ಅವರಿಗೆ ಹಾರವನ್ನೂ ಹಾಕಿದರು. ಹೀಗೆ ‘ಆಧುನಿಕ ತ್ಯಾಗರಾಜ’ರ ಜೊತೆ ಕೆಲಸ ಮಾಡಿದ ಸಂತೋಷ ತನ್ನದಾಯಿತು ಎಂದು ಭಟ್ಟರು ಉಲ್ಲೇಖಿಸಿದ್ದಾರೆ.
ಭಟ್ಟರ ಕೃತಿಶ್ರೇಣಿ
“ನಾನು ಕಾವ್ಯ, ವಿಮರ್ಶೆ, ಅನುವಾದ, ಶಾಸ್ತ್ರಸಾಹಿತ್ಯ ಮೊದಲಾಗಿ ಐದಾರು ಸಾಹಿತ್ಯಪ್ರಕಾರಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ಬರೆದಿದ್ದರೂ ಜನ ಮೆಚ್ಚುವುದು ಮುಖ್ಯವಾಗಿ ನಾನು ಬರೆದಿರುವ (ಮತ್ತು ಹೆಚ್ಚು ಮುಖ್ಯವಾದುದೆಂದು ನಾನು ಭಾವಿಸಿರುವ) ನನ್ನ ನವ್ಯ ಕವಿತೆಗಳಲ್ಲ, ನನ್ನ ಭಾವಗೀತೆಗಳು ಹೆಚ್ಚು ಸಂಖ್ಯೆಯಲ್ಲಿವೆ. ಗಾಯನದ ಜೊತೆಗೂಡಿರುವ ಅವುಗಳಿಗೆ ದೊರೆತ ವಿಶೇಷ ಜನಪ್ರಿಯತೆ ನಾನು ಕವಿ ಎನಿಸಿಕೊಂಡಿರುವುದಕ್ಕೆ ಮುಖ್ಯ ಕಾರಣ” ಎಂದು ಲಕ್ಷ್ಮಿನಾರಾಯಣ ಭಟ್ಟರು ಹೇಳಿದ್ದಾರೆ.
ಅವರು ೧೯೬೦ರ ದಶಕದಲ್ಲೇ ಕಾವ್ಯರಚನೆಗೆ ಆರಂಭಿಸಿದರು. ಆಗ ನವೋದಯ ಕಾಲದ ಕಾವ್ಯ ಮುಗಿದು ನವ್ಯಕಾವ್ಯ ಪ್ರಚಲಿತವಾಗಿತ್ತು. ಅವರ ಮೊದಲ ನಾಲ್ಕೈದು ಕವನಸಂಕಲನಗಳು ನವ್ಯಮಾರ್ಗದಲ್ಲೇ ಇದ್ದವು – ವೃತ್ತ, ಸುಳಿ, ನಿನ್ನೆಗೆ ನನ್ನ ಮಾತು, ಚಿತ್ರಕೂಟ, ಹೊಳೆ ಸಾಲಿನ ಮರ ಹೀಗೆ. ಆಗಲೇ ಅವರಿಗೆ ನವ್ಯಕವಿಯೆಂದು ಹೆಸರು ಬಂದಿತ್ತು. ಅನಂತರವೇ ಅವರು ನವ್ಯ ಕವಿಗಳು ಕೈಬಿಟ್ಟಿದ್ದ ಹಿಂದಿನ ನವೋದಯ ಕವಿಗಳು ಮಾತ್ರವೇ ರಚಿಸುತ್ತಿದ್ದ ಭಾವಗೀತೆಗಳನ್ನು ಬರೆಯಲು ಆರಂಭಿಸಿದ್ದು. ನವ್ಯಕವಿತೆಗಳು ನವೋದಯದಂತೆ ಸರಳರಚನೆಗಳಲ್ಲ. ಬಹಳ ಸಂಕೀರ್ಣ ರಚನೆಗಳು; ಸಾಮಾನ್ಯರಿಗೆ ಸುಲಭವಾಗಿ ಅರ್ಥವಾಗುವಂಥವಲ್ಲ. ಭಾವಗೀತೆಗಳ ರಚನೆ ೨೫-೩೦ ವರ್ಷ ನಿಂತೇಹೋಗಿತ್ತು. ನವ್ಯಕವಿಗಳು ಭಾವಗೀತೆಗಳನ್ನು ರಚಿಸಬಾರದೆಂಬ ಭಾವನೆ ಕೂಡ ಪ್ರಚಲಿತವಾಗಿತ್ತು. ಅನೇಕ ನವ್ಯ ಕವಿಗಳಿಗೆ ಭಾವಗೀತೆಗಳ ರಚನೆ ಸಾಧ್ಯವೂ ಇರಲಿಲ್ಲ. ಆಗ ನಾನು ಭಾವಗೀತೆಗಳ ರಚನೆಗೆ ಕೈಹಾಕಿದೆ ಎನ್ನುವ ವಿವರಣೆಯನ್ನು ಅವರು ನೀಡಿದ್ದಾರೆ. ಅರ್ಥ ಆಗುವುದಿಲ್ಲ ಎಂಬುದು ಒಂದಾದರೆ ಹಾಡಲು ಬರುತ್ತಿರಲಿಲ್ಲವಾಗಿ ಕೂಡ ನವ್ಯಕವಿತೆಗಳು ಜನರಿಂದ ದೂರವಾಗಿದ್ದವು – ಎನ್ನುವ ಭಟ್ಟರು, ಯಾವುದೇ ಕಾರಣದಿಂದ ಜನ ಕಾವ್ಯಪ್ರಪಂಚದಿಂದ ದೂರ ಸರಿಯುವಂತೆ ಕವಿ ಮಾಡಬಾರದು. ಯಾರು ಒಪ್ಪಲಿ ಬಿಡಲಿ ತಾನು ಭಾವಗೀತೆ ಬರೆಯಬೇಕೆಂದು ತನಗೆ ಅನ್ನಿಸಿತು ಎಂದಿದ್ದಾರೆ.
ಆಗ ೧೯೭೦ರ ದಶಕದ ಹೊತ್ತಿಗೆ ಬೆಂಗಳೂರು ಆಕಾಶವಾಣಿಯವರು ಸಂಗೀತರೂಪಕ ರಚಿಸುವುದಕ್ಕೆ ಭಟ್ಟರನ್ನು ಆರಿಸಿಕೊಂಡರು. ವಿಶೇಷ ಸಂದರ್ಭಗಳಿಗೆ ಗದ್ಯದ ವಿವರಣೆಗೆ ಹೊಂದಿಕೊಳ್ಳುವಂತೆ ಪದ್ಯಗಳು ಬೇಕಿದ್ದವು. ಅದಕ್ಕಾಗಿ ಮೊದಲಿಗೆ ಕುವೆಂಪು, ಬೇಂದ್ರೆ, ಕೆಎಸ್ನ ಮುಂತಾದವರ ಪದ್ಯಗಳನ್ನು ಸೇರಿಸುತ್ತಿದ್ದರು. ಅವರ ಪದ್ಯಗಳು ಸಿಗದಾಗ ಭಟ್ಟರು ಸ್ವತಃ ರಚಿಸತೊಡಗಿದರು. ಮೈಸೂರು ಅನಂತಸ್ವಾಮಿ, ಸಿ. ಅಶ್ವತ್ಥ್, ಶಿವಮೊಗ್ಗ ಸುಬ್ಬಣ್ಣ, ರತ್ನಮಾಲಾ, ಮಾಲತಿ, ಕಸ್ತೂರಿ ಶಂಕರ್ ಮೊದಲಾದ ಗಾಯಕರು ಹಾಡಿದ ಹಾಡುಗಳು ತುಂಬ ಜನಪ್ರಿಯವಾದವು. ಹಲವು ವರ್ಷಗಳಿಂದ ಹೊಸ ಭಾವಗೀತೆಗಳು ಸಿಗದೆ ಬೇಸತ್ತಿದ್ದ ಸುಗಮಸಂಗೀತಗಾರರಿಗೆ ಇವರ ಭಾವಗೀತೆಗಳು ತುಂಬ ಇಷ್ಟವಾದವು. ಅವರೆಲ್ಲ ಭಾವಗೀತೆಗಳಿಗಾಗಿ ಭಟ್ಟರಿಗೆ ದುಂಬಾಲುಬಿದ್ದರು. ಹೊಸ ಹಾಡುಗಳಾದುದರಿಂದ ಅವು ಜನಪ್ರಿಯವೂ ಆದವು. ಹಾಗೆ ಮೊದಲಿಗೆ ಬಂದದ್ದು ‘ಬಾರೋ ವಸಂತ’ ಎಂಬ ಗೀತಸಂಗ್ರಹ. ಸ್ವಲ್ಪ ಕಾಲದಲ್ಲೇ ಸುಮಾರು ೧೧೦ ಭಾವಗೀತೆಗಳಿರುವ ‘ದೀಪಿಕಾ’ ಎನ್ನುವ ಪುಸ್ತಕವನ್ನು ಪ್ರಕಟಿಸಿದರು. ಮುಂದೆ ಭಾವಸಂಗಮ, ನೀಲಾಂಜನ, ಬಂದೇ ಬರತಾವ ಕಾಲ, ಸಂವೇದನ ಹೀಗೆ ಆರೇಳು ಸಂಕಲನಗಳು ಪ್ರಕಟವಾದವು. ಅವು ಏಳೆಂಟು ಮುದ್ರಣಗಳನ್ನೂ ಕಂಡವು. ೪೩೬ ಭಾವಗೀತೆಗಳಿರುವ ಸಮಗ್ರ ಸಂಗ್ರಹವೂ ಬಂತು. ಕೇವಲ ನೈಶಿಲ ಅವರ ಭಾವಗೀತೆಗಳಿರುವ ಹದಿನಾರು ಧ್ವನಿಮುದ್ರಿಕೆಗಳು ಹೊರಬಂದಿವೆ. ಇಷ್ಟೊಂದು ಸಂಖ್ಯೆಯಲ್ಲಿ ಭಾವಗೀತೆಗಳನ್ನು ರಚಿಸಿರುವ ಕವಿ ನಾನೊಬ್ಬನೇ ಎಂಬುದು ಭಟ್ಟರ ಹೆಮ್ಮೆ. ನವ್ಯಕಾವ್ಯಕ್ಕೆ ಭಟ್ಟರು ಈ ರೀತಿ ಸಡ್ಡುಹೊಡೆದು ನಿಲ್ಲುತ್ತಲೇ ಇತರ ಕೆಲವು ನವ್ಯಕವಿಗಳು ಕೂಡ ಭಾವಗೀತೆಗಳನ್ನು ರಚಿಸಿದರು; ಕ್ಯಾಸೆಟ್ಗಳೂ ಬಂದವು. ಮಕ್ಕಳಿಗಾಗಿ ಭಟ್ಟರು ಬರೆದ ಪದ್ಯಗಳು ಅವರ ನಡುವೆ ತುಂಬ ಜನಪ್ರಿಯವಾದವು. ಅದರ ಕ್ಯಾಸೆಟ್ಗಳೂ ಬಂದವು. ರಾಷ್ಟ್ರೋತ್ಥಾನದ ‘ಭಾರತ-ಭಾರತಿ’ ಸರಣಿಗೂ ಭಟ್ಟರು ಪುಸ್ತಕ ಬರೆದಿದ್ದರು. ಭಾಳಾ ಒಳ್ಳೇವ್ರ್ ನಂ ಮಿಸ್ಸು, ಗೇರ್ ಗೇರ್ ಮಂಗಣ್ಣ ಇಂದಿಗೂ ಜನರ ನಾಲಗೆಯ ಮೇಲೆ ಇವೆ. ‘ಶಿಶುನಾಳ ಶರೀಫ್ ಸಾಹೇಬರ ಗೀತೆಗಳು’ ಎನ್ನುವ ಭಟ್ಟರ ಪುಸ್ತಕ ತುಂಬ ಗಮನಸೆಳೆದ ಒಂದು ಪುಸ್ತಕವಾಯಿತು. ಈ ಹಾಡುಗಳ ಶಕ್ತಿಯನ್ನು ಮನಗಂಡ ಸಿ. ಅಶ್ವತ್ಥ್ ಅವರು ಲಕ್ಷ್ಮಿನಾರಾಯಣ ಭಟ್ಟರ ಸಲಹೆ-ಸಹಕಾರಗಳ ಮೇರೆಗೆ ಶರೀಫರ ಬಹಳಷ್ಟು ಗೀತೆಗಳನ್ನು ಹಾಡಿದರು; ಅವು ನಾಡಿನಾದ್ಯಂತ ಮೆಚ್ಚುಗೆಗೆ ಪಾತ್ರವಾದವು.
ಷೇಕ್ಸ್ಪಿಯರ್ ಸಾನೆಟ್ ಚಕ್ರ
ಮಹಾನ್ ನಾಟಕಕಾರ ಷೇಕ್ಸ್ಪಿಯರ್ನ ನೂರು ಸಾನೆಟ್ಗಳನ್ನು ಎನ್ನೆಸ್ಸೆಲ್ ಕನ್ನಡಕ್ಕೆ ಅನುವಾದಿಸಿ ಪ್ರಕಟಿಸಿದರು. ಎ.ಎನ್. ಮೂರ್ತಿರಾವ್, ಎಲ್.ಎಸ್. ಶೇಷಗಿರಿರಾವ್, ಎಚ್.ಕೆ. ರಾಮಚಂದ್ರಮೂರ್ತಿ ಅವರಂತಹ ಹಿರಿಯರು ಅದನ್ನು ಮೆಚ್ಚಿಕೊಂಡರು. ಎಂಟು ಮುದ್ರಣಗಳನ್ನು ಕಂಡ ಆ ಪುಸ್ತಕದ ಮುನ್ನುಡಿಯಲ್ಲಿ ಖ್ಯಾತ ವಿಮರ್ಶಕ ಕೀರ್ತಿನಾಥ ಕುರ್ತಕೋಟಿ ಅವರು, “ಇಂಥ ಕಾವ್ಯದ ಅನುವಾದ ಬಹಳ ಕಷ್ಟಕರವಾದದ್ದು. ಹಾಗಿದ್ದರೂ ಭಟ್ಟರು ಇದರಲ್ಲಿ ಬಹಳಷ್ಟು ಯಶಸ್ವಿಯಾಗಿದ್ದಾರೆ” ಎಂದು ಶ್ಲಾಘಿಸಿದ್ದಾರೆ; ಕವಿ ಅಡಿಗರ ಶ್ಲಾಘನೆಯೂ ಅದಕ್ಕೆ ದೊರೆತಿದೆ.
ಡಬ್ಲ್ಯು. ಬಿ. ಯೇಟ್ಸ್ ಕವಿಯ ೫೦ ಕವನಗಳ ಕನ್ನಡ ಅನುವಾದ ‘ಚಿನ್ನದ ಹಕ್ಕಿ’ ಮತ್ತು ಎಲಿಯಟ್ ಕಾವ್ಯಸಂಪುಟಗಳು ಕನ್ನಡ ಕಾವ್ಯಲೋಕಕ್ಕೆ ಲಕ್ಷ್ಮಿನಾರಾಯಣ ಭಟ್ಟರ ದೊಡ್ಡ ಕೊಡುಗೆಗಳೆಂದು ಪರಿಗಣಿತವಾಗಿವೆ. ‘ಚಿನ್ನದ ಹಕ್ಕಿ’ ಮುನ್ನುಡಿಯಲ್ಲಿ ಅನಂತಮೂರ್ತಿ ಅವರು “ಲಕ್ಷ್ಮಿನಾರಾಯಣ ಭಟ್ಟರು ಯೇಟ್ಸ್ನ ಘನವಾದ ಪದ್ಯಗಳನ್ನೆಲ್ಲ ಕಿವಿಗೆ ಹಿತವಾಗುವಂತೆ, ಆಯ ತಪ್ಪದಂತೆ, ಅರ್ಥಕ್ಕೆ ನಷ್ಟವಾಗದಂತೆ ನಿರ್ವಹಿಸಿದ್ದಾರೆ; ನಾನು ಈ ಅನುವಾದಗಳನ್ನು ಓದಿ ಹಿಗ್ಗಿದ್ದೇನೆ” ಎಂದಿದ್ದಾರೆ. ಕುರ್ತಕೋಟಿ ಅವರು “ಭಟ್ಟರ ಅನುವಾದಗಳು ಸಮರ್ಥವಾಗಿವೆ” ಎಂದರು.
ಯೇಟ್ಸ್, ಎಲಿಯಟ್ ಅನುವಾದ
ಎಲಿಯಟ್ ಕಾವ್ಯ ಸಂಪುಟವನ್ನು ಕುರಿತು ಹಿರಿಯ ವಿಮರ್ಶಕ ಜಿ.ಎಸ್. ಆಮೂರರು “ಈ ಶತಮಾನದ ಶ್ರೇಷ್ಠ ಕವಿಗಳಲ್ಲೊಬ್ಬನಾದ ಟಿ.ಎಸ್. ಎಲಿಯಟ್ನಿಂದ ಅಡಿಗರನ್ನು ಒಳಗೊಂಡಂತೆ ಹಲವು ಭಾರತೀಯ ಕವಿಗಳು ಸ್ಫೂರ್ತಿ ಪಡೆದಿದ್ದಾರೆ. ಆದರೂ ಅವನ ಕಾವ್ಯವನ್ನು ಕನ್ನಡಕ್ಕೆ ಅನುವಾದಿಸುವ ಗಂಭೀರ ಹಾಗೂ ದೀರ್ಘಪ್ರಯತ್ನ ಇದುವರೆಗೂ ನಡೆದಿರಲಿಲ್ಲ. ಭಟ್ಟರು ಈ ಸಾಹಸಕ್ಕೆ ಕೈಹಾಕಿದ್ದಲ್ಲದೆ ಅದರಲ್ಲಿ ಅಪೂರ್ವ ಯಶಸ್ಸನ್ನೂ ಕಂಡಿದ್ದಾರೆ” ಎಂದು ಶ್ಲಾಘಿಸಿದ್ದಾರೆ.
ಲಕ್ಷ್ಮಿನಾರಾಯಣ ಭಟ್ಟರು ಕಾವ್ಯಕರ್ಮದಲ್ಲಿ ತೊಡಗಿದ ಸುಮಾರು ಆರು ದಶಕಗಳಲ್ಲಿ ಕನ್ನಡ ಸಾಹಿತ್ಯದಲ್ಲಿ ಅದೆಷ್ಟೋ ಚಳವಳಿಗಳು ಬಂದುಹೋಗಿವೆ; ಸಾಹಿತ್ಯದೊಳಗೇ ಸಾಹಿತ್ಯೇತರ ಚಳವಳಿಗಳು ಕೂಡ ಬಂದಿವೆ. ಆದರೆ ಇವರು ಅವುಗಳಿಂದ ವಿಚಲಿತರಾಗದೆ ತಮ್ಮದೇ ದಾರಿಯಲ್ಲಿ ಸಾಗಿ ಉತ್ಕೃಷ್ಟವಾದುದನ್ನು ಕೊಟ್ಟಿದ್ದಾರೆ. ಇಡೀ ಸಾಹಿತ್ಯಜೀವನದಲ್ಲಿ ಅವರು ಶ್ರದ್ಧೆಯಿಂದ ನಡೆಸಿಕೊಂಡು ಬಂದ ಇನ್ನೊಂದು ಕೆಲಸ ಆಸಕ್ತರ ಮುಂದೆ ಉಪನ್ಯಾಸ, ಸಂವಾದಗಳನ್ನು ನಡೆಸಿದ್ದು. ಇದು ಅಮೆರಿಕ, ಇಂಗ್ಲೆಂಡ್ಗಳಲ್ಲೂ ವಿಸ್ತಾರವಾಗಿ, ವ್ಯಾಪಕವಾಗಿ ನಡೆದಿತ್ತು. ಅಮೆರಿಕದಲ್ಲಂತೂ ಇವರ ಭಾಷಣಗಳಿಗೆ ದೊಡ್ಡ ಬೇಡಿಕೆಯೇ ಇತ್ತು. ಅದರ ಆಯ್ದ ಭಾಗವಾಗಿ ‘ಕನ್ನಡ ಸಾಹಿತ್ಯ ಚರಿತ್ರೆ: ಪ್ರಾಚೀನ ಆಧುನಿಕ’ ಎನ್ನುವ ಗ್ರಂಥವನ್ನೂ ತಂದರು.
ಲಕ್ಷ್ಮಿನಾರಾಯಣ ಭಟ್ಟರ ಪತ್ನಿ ಜ್ಯೋತಿ ಶಿವಮೊಗ್ಗದವರು; ಚೈತ್ರ ಮಗ, ಕ್ಷಮಾ ಮಗಳು. ಚೈತ್ರ ಅಮೆರಿಕದಲ್ಲಿ ನೆಲಸಿದ್ದಾರೆ. ಮಗಳು-ಅಳಿಯ ಇವರ ಮನೆಯಲ್ಲೇ ಇದ್ದು ವೃದ್ಧಾಪ್ಯ, ಅನಾರೋಗ್ಯಗಳ ವೇಳೆ ಚೆನ್ನಾಗಿ ನೋಡಿಕೊಂಡರು. ಅನ್ಯಾಯದ ವಿರುದ್ಧ ಪ್ರತಿಭಟಿಸಿ ೧೯೮೮ರಲ್ಲಿ ಕನ್ನಡ ಅಧ್ಯಯನ ಕೇಂದ್ರದ ನಿರ್ದೇಶಕ ಹುದ್ದೆಗೆ ರಾಜೀನಾಮೆ ನೀಡಿದ ಭಟ್ಟರು, ಎರಡು ವರ್ಷಗಳ ಬಳಿಕ ಎರಡನೇ ಬಾರಿಗೆ ನಿರ್ದೇಶಕರಾಗಿ ನೇಮಕಗೊಂಡರು; ಉಳಿದಂತೆ ಬೆಂಗಳೂರು ವಿವಿಯಲ್ಲಿ ಅವರ ಸೇವೆ ಅಬಾಧಿತವಾಗಿತ್ತು. ಒಟ್ಟಿನಲ್ಲಿ ಓರ್ವ ಕವಿಯಾಗಿ, ವಿಶೇಷವಾಗಿ ಭಾವಗೀತೆಗಳಿಗೆ ಮರುಹುಟ್ಟು ನೀಡಿದ ಕವಿಯಾಗಿ ಕನ್ನಡ ಸಾಹಿತ್ಯದಲ್ಲಿ ಅವರ ಸ್ಥಾನ ಅಚಲವಾದದ್ದು.
ಸಹಾಯಹಸ್ತ: ಒಂದು ಉದಾಹರಣೆ
ಗರ್ತಿಕೆರೆ ರಾಘಣ್ಣನವರದು ಸುಗಮಸಂಗೀತದಲ್ಲಿ ದೊಡ್ಡ ಹೆಸರು; ಅವರಿಗೆ ಶರೀಫ ಪ್ರಶಸ್ತಿ ಲಭಿಸಿದೆ. ಆದರೆ ಜೀವನದುದ್ದಕ್ಕೂ ಅವರು ಬಡತನದಲ್ಲಿ ಬಳಲಿದ್ದೇ ಹೆಚ್ಚು. ಅವರು ಲಕ್ಷ್ಮಿನಾರಾಯಣ ಭಟ್ಟರ ಸಂಪರ್ಕಕ್ಕೆ ಬಂದದ್ದು ಮತ್ತು ಅವರಿಗೆ ಇವರಿಂದಾದ ಸಹಾಯ ಕುತೂಹಲಕರ.
೧೯೮೦ರ ದಶಕದಲ್ಲಿ ಒಂದು ದಿನ ರಾತ್ರಿ ೧೦ ಗಂಟೆಯ ವೇಳೆಗೆ ಭಟ್ಟರ ಒಂದು ಪದ್ಯ ಅವರ ನೆರೆಮನೆಯಿಂದ ಸುಶ್ರಾವ್ಯವಾಗಿ ಕೇಳಿಸುತ್ತಿತ್ತು. ‘ತಾಯೆ ನಿನ್ನ ಮಡಿಲಲ್ಲಿ.’ ಮರುದಿನ ಬೆಳಗ್ಗೆ ಹಾಡಿದ್ದು ಯಾರೆಂದು ಭಟ್ಟರು ಕೇಳಿದರು. ಕೋರಿಕೆ ಮೇರೆಗೆ ರಾಘಣ್ಣ ಭಟ್ಟರ ಮನೆಗೆ ಬಂದು ಸುಮಾರು ಎರಡು ಗಂಟೆ ಹಾಡಿದರು. ಹಾಡಿದ್ದಕ್ಕೆ ಹಣ ಎಷ್ಟೆಂದು ಅವರು ಕೇಳುವವರಲ್ಲ; ತನ್ನ ಹಾಡನ್ನು ಯಾರಾದರೂ ಕೇಳಿದ್ದೇ ಸಂತೋಷ ಎನ್ನುವ ಗಾಯಕ ಅವರು. ಅದೇ ರೀತಿ ಅವರ ಜೀವನ ನಡೆದುಹೋಯಿತು. ಕೇಂದ್ರಸರ್ಕಾರದ ಕ್ಷೇತ್ರ ಪ್ರಚಾರದಲ್ಲಿ ಎಚ್.ಕೆ. ರಂಗನಾಥ್ (ಕುಟುಂಬ ಯೋಜನೆ ಇತ್ಯಾದಿ ಬಗ್ಗೆ ಹಾಡಲು) ರಾಘಣ್ಣರಿಗೆ ಅವಕಾಶ ನೀಡಿದರು. ಕೊಡುತ್ತಿದ್ದ ಹಣ ಹಾಡಿಗೆ ತಲಾ ೨೫ ರೂ. ‘ಅಷ್ಟು ಸ್ವಲ್ಪವೆ’ ಎಂದು ಭಟ್ಟರು ಕೇಳಿದರೆ ರಾಘಣ್ಣ ‘ಅದು ಸ್ವಲ್ಪ ಹೇಗೆ ಸ್ವಾಮಿ? ಬೇಕಾದಷ್ಟಾಯಿತು’ ಎಂದು ಉತ್ತರಿಸಿದರು. ಭಟ್ಟರಿಗೆ ಈತನ ಹತ್ತಿರ ಹಣದ ವಿಷಯ ಮಾತಾಡಿ ಪ್ರಯೋಜನವಿಲ್ಲ, ಈತನಿಗೆ ಸಿಕ್ಕಿರುವುದೇನಿದ್ದರೂ ಕವಿತೆಯ ‘ಅರ್ಥ’ ಮಾತ್ರ ಎನಿಸಿತು. ಅತ್ರಿಯವರ ಏಳು ದಿನಗಳ ಕಾರ್ಯಕ್ರಮದಲ್ಲಿ ರಾಘಣ್ಣನಿಗೆ ಅವಕಾಶ ಒದಗಿಸಿದರು. ಒಂದು ಅಭಿನಂದನ ಕಾರ್ಯಕ್ರಮವನ್ನು ಏರ್ಪಡಿಸಿ ೨೫ ಸಾವಿರ ರೂ. ಹಮ್ಮಿಣಿ ಸಂಗ್ರಹಿಸಿ ನೀಡಿದರು. ಇತರ ಗಾಯಕರೊಂದಿಗೆ ರಾಘಣ್ಣ ಹಾಡಿದ ಅಭಿನಂದನ ಎನ್ನುವ ಕ್ಯಾಸೆಟನ್ನು ಲಹರಿ ಮೂಲಕ ತಂದರು. ಭಟ್ಟರ ಸಹಾಯದ ರೀತಿಗೆ ಇದೊಂದು ಉದಾಹರಣೆ.
ದ್ವಿಜನಾದ ಶಿಶುನಾಳ ಶರೀಫ
ಬಹುತೇಕ ತನ್ನ ಊರಿನ ಸುತ್ತ ಮಾತ್ರ ಪರಿಚಿತವಿದ್ದ ಶಿಶುನಾಳ ಶರೀಫ ಮತ್ತು ಆತನ ಹಾಡುಗಳನ್ನು ಕರ್ನಾಟಕದಾದ್ಯಂತ ಮತ್ತು ಹೊರಗೆ ಕೂಡ ಚಿರಪರಿಚಿತವಾಗಿಸಿದ್ದರಲ್ಲಿ ಎನ್.ಎಸ್.ಲಕ್ಷ್ಮಿನಾರಾಯಣ ಭಟ್ಟರ ದೊಡ್ಡ ಪಾಲಿದೆ. ಶರೀಫನ ದೊಡ್ಡ ಸಮರ್ಥಕರಾಗಿಯೇ ಅವರು ಕಾಣಿಸಿಕೊಂಡಿದ್ದಾರೆ. ಅದರಿಂದಾಗಿ ಅವರನ್ನು ‘ಶರೀಫ ಭಟ್ಟರು’ ಎಂದು ಕರೆಯುವವರೂ ಇದ್ದಾರೆ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿದ್ದಾಗ ಶರೀಫರ ಪದ್ಯಗಳ ಒಂದು ಸಂಗ್ರಹವನ್ನು ಅವರು ಪ್ರಕಟಿಸಿದ್ದರು.
ಮುಂದೊಮ್ಮೆ ವಿವಿಯವರು ದಾಸರ ಕೀರ್ತನೆಗಳ ಒಂದು ಸಂಗ್ರಹವನ್ನು ಮಾಡಿಕೊಡುವಂತೆ ಭಟ್ಟರಿಗೆ ಹೇಳಿದರು. ಪುರಂದರದಾಸರ ಹಲವು ಪದ್ಯ, ಕನಕದಾಸ ಮತ್ತು ಶರೀಫರ ತಲಾ ಆರು ಪದ್ಯ ಮತ್ತು ಇತರರ ಒಂದೆರಡು ಪದ್ಯಗಳನ್ನು ಸೇರಿಸಿದರು. ಅದು ಪರಿಶೀಲನೆಗೆ ರಂ.ಶ್ರೀ. ಮುಗಳಿ ಅವರಿಗೆ ಹೋಯಿತು. ಶರೀಫರು ಹರಿದಾಸರಲ್ಲ; ಮುಸ್ಲಿಂ ಪದ್ಯಕಾರರು ಬೇಡ ಎಂದು ಮುಗಳಿ ಅಭಿಪ್ರಾಯ ನೀಡಿದರು. ಇದು ಭಟ್ಟರಿಗೆ ಒಪ್ಪಿಗೆಯಾಗಲಿಲ್ಲ. “ಅಧ್ಯಾಪಕನಾದ ನಾನು ಅಪ್ರಾಮಾಣಿಕವಾಗಿ ನಡೆದುಕೊಳ್ಳಬಾರದೆಂದು ದೃಢನಿರ್ಧಾರ ಮಾಡಿದ್ದೆ. ಪುಸ್ತಕದಿಂದ ಶರೀಫರ ಪದ್ಯವನ್ನು ತೆಗೆಯುವುದಾದರೆ ಸಂಪಾದಕನಾಗಿ ನನ್ನ ಹೆಸರು ಬೇಡವೆಂದು ತಿಳಿಸಿದರು. ವಿಷಯ ಕುಲಪತಿಯವರ ಬಳಿಗೆ ಹೋಯಿತು. ಐಎಎಸ್ ಅಧಿಕಾರಿ ಜಯರಾಮನ್ ಆಗ ಕುಲಪತಿಗಳು. “ಮುಗಳಿ ದೊಡ್ಡ ಸ್ಕಾಲರ್; ಅವರು ಹೇಳಿದಂತೆ ಮಾಡಿ” ಎಂದರು. ಭಟ್ಟರು ಜಗ್ಗಲಿಲ್ಲ. “ಆ ಮುಸ್ಲಿಮ ಯಾರೋ ಒಬ್ಬ ಅನಾಮಿಕನಲ್ಲ. ಕೀರ್ತನ ರೂಪದ ಶ್ರೇಷ್ಠ ತತ್ತ್ವಪದಗಳನ್ನು ಬರೆದಿರುವ ಒಬ್ಬ ಸತ್ತ್ವಶಾಲಿ ಕವಿ. ಮತದ ಕಾರಣದಿಂದ ಅವನನ್ನು ಕೈಬಿಡುವುದು ಸರಿಯಲ್ಲ” ಎಂದರು. ಅವನು ಮತದೃಷ್ಟಿಯನ್ನು ಮೀರಿದವನು. ಗೋವಿಂದಭಟ್ಟ ಎಂಬ ಬ್ರಾಹ್ಮಣನ ಶಿಷ್ಯ. ಆತನಿಗೆ ಉಪನಯನವೂ ಆಗಿತ್ತು ಎಂದು ವಾದಿಸಿದರು. ಕುಲಪತಿಗಳು ಇದು ಕಾಕಾಬೂಕಾ ಕತೆ ಎಂದಾಗ ಶರೀಫರೇ ತಮ್ಮ ಒಂದು ಕವಿತೆಯಲ್ಲಿ ಉಪನಯನ ಸಂಸ್ಕಾರ ದೊರೆತ ವಿಷಯ ಹೇಳಿದ್ದಾರೆಂದು ಘಟನೆಯನ್ನು ವಿವರಿಸಿದರು. ಗೋವಿಂದಭಟ್ಟರು ಒಮ್ಮೆ ಕಳಸದಲ್ಲಿದ್ದಾಗ ಶರೀಫ ಅಲ್ಲಿಗೆ ಬಂದದ್ದು, ಗುರು ಆತನನ್ನು ಸಮೀಪ ಕುಳ್ಳಿರಿಸಿಕೊಂಡಾಗ ಮೇಲುಜಾತಿಯವರು ಎಂದು ತಮಾಷೆ ಮಾಡಿ ಆತನಿಗೆ ಉಪನಯನ ಮಾಡಬಹುದಲ್ಲವೆ ಎಂದು ತಮಾಷೆ ಮಾಡಿದ್ದು, ಗೋವಿಂದಭಟ್ಟರು ಅದನ್ನೇ ಸವಾಲಾಗಿ ತೆಗೆದುಕೊಂಡು ತಮ್ಮ ಎರಡು ಜನಿವಾರಗಳಲ್ಲಿ ಒಂದನ್ನು ತೆಗೆದು ಅವನ ಕೊರಳಿಗೆ ಹಾಕಿದ್ದು, ಮುಂತಾದದ್ದನ್ನು ತಿಳಿಸಿದಾಗ ಕುಲಪತಿಗಳು ಕ್ಲೀನ್ಬೋಲ್ಡ್. ಪುಸ್ತಕಕ್ಕೆ ಶರೀಫನ ಪದ್ಯಗಳನ್ನು ಸೇರಿಸಲು ಒಪ್ಪಿಗೆ ಸಿಕ್ಕಿ ಹೋಯಿತು. ‘ಹಾಕಿದ ಜನಿವಾರವ – ಸದ್ಗುರುನಾಥ ಹಾಕಿದ ಜನಿವಾರವ’ ಹಾಡನ್ನು ಭಟ್ಟರು ಕುಲಪತಿಗಳ ಗಮನಕ್ಕೆ ತಂದರು.