1920ರಲ್ಲಿ ಗಾಂಧಿ ಕರನಿರಾಕರಣೆಯ ಅಸಹಕಾರ ಚಳವಳಿಗೆ ಮುಂದಾಗಲು ಕರೆ ನೀಡಿದ್ದೇ ಕನ್ನೆಗಂಟಿ ಹನುಮಂತುವಿನ ಬಂಡಾಯಕ್ಕೆ ದೊಡ್ಡ ಶಕ್ತಿಯಾಗಿ ಪರಿಣಮಿಸಿತು. ಯಾವೊಬ್ಬ ರೈತ ಕೂಡ ಬ್ರಿಟಿಷ್ ಸರಕಾರಕ್ಕೆ ಈ ಸುಂಕವನ್ನು ನೀಡಬಾರದೆಂದು ಅವರು ನಾಲ್ಕಾರು ಗ್ರಾಮಗಳ ರೈತರನ್ನು ಒಗ್ಗೂಡಿಸಿದರು. ಆಗ ಬ್ರಿಟಿಷ್ ಅಧಿಕಾರಿಗಳು ಗ್ರಾಮಕ್ಕೆ ಬಂದು ಸುಂಕ ನಿರಾಕರಿಸಿದರೆ ತೀವ್ರ ಪರಿಣಾಮ ಎದುರಿಸಬೇಕಾದೀತು ಎಂದು ಎಚ್ಚರಿಸಿದರು.

ಬ್ರಿಟಿಷರ ದಬ್ಬಾಳಿಕೆಯ ವಿರುದ್ಧ ಭಾರತದಾದ್ಯಂತ ಧಗಧಗಿಸಿದ ಸ್ವಾತಂತ್ರ್ಯ ಸಂಗ್ರಾಮದ ದಳ್ಳುರಿಯ ನಡುವೆ ಆಂಧ್ರಪ್ರದೇಶದ ಒಂದು ಹಳ್ಳಿಯಿಂದ ಸಿಡಿದೆದ್ದ ಘೋಷಣೆಯೊಂದು ಬ್ರಿಟಿಷ್ ಆಡಳಿತಗಾರರ ಎದೆಯನ್ನು ನಡುಗಿಸಿದ್ದಂತೂ ಸತ್ಯ. “ನೀವು ಎಂದಾದರೂ ಈ ಭೂಮಿಯಲ್ಲಿ ಗಿಡ ನೆಟ್ಟಿದ್ದೀರಾ? ಒಣಗಿದ ಭೂಮಿಗೆ ನೀರುಣ್ಣಿಸಿದ್ದೀರಾ? ಗೊಬ್ಬರ ಹಾಕಿದ್ದೀರಾ? ಬೆಳೆಯ ಕೊಯ್ಲು ಮಾಡಿದ್ದೀರಾ? ಇದು ನಮ್ಮ ಭೂಮಿ. ಇದಕ್ಕೆ ನಾವು ನಿಮಗೆ ಏಕೆ ತೆರಿಗೆ ಕೊಡಬೇಕು?” – ಎಂಬ ಈ ಸುದೀರ್ಘ ಪ್ರಶ್ನೆಯಿರುವ ಘೋಷಣೆ ಮನೆಮನೆಗಳಲ್ಲೂ ನಿನದಿಸಿತು. ಪರಕೀಯ ಆಡಳಿತದ ಮುಂದೆ ಬ್ರಹ್ಮಾಸ್ತ್ರದ ಮಂತ್ರವಾಗಿ ಪಠನೆಯಾಯಿತು.
ಬ್ರಿಟಿಷ್ ಸರಕಾರ 1880ರಲ್ಲಿ ಮದ್ರಾಸ್ ಅರಣ್ಯ ಕಾಯಿದೆಯನ್ನು ಜಾರಿಗೆ ತಂದಿತ್ತು. ಶತಶತಮಾನಗಳಿಂದ ಅರಣ್ಯದಲ್ಲಿ ಕುರಿ, ಮೇಕೆ, ಹಸುಗಳನ್ನು ಮೇಯಿಸಲು, ಗೊಬ್ಬರ ತಯಾರಿಸಲು ಹಸುರೆಲೆ, ಹುಣಸೆಹಣ್ಣಿನಂತಹ ಮಸಾಲೆ ಉತ್ಪನ್ನಗಳು, ಒಲೆ ಉರಿಸಲು ಒಣ ಕಟ್ಟಿಗೆಯನ್ನು ತರಲು ಅನಿರ್ಬಂಧಿತವಾಗಿ ತೆರಳುತ್ತಿದ್ದ ರೈತರ ಹಕ್ಕಿಗೆ ಅದರಿಂದ ಚ್ಯುತಿ ಬಂದಿತು. ಒಂದು ಜಾನುವಾರಿಗೆ ಎರಡು ರೂಪಾಯಿ ದರದಲ್ಲಿ ಸುಂಕ ಕೊಡಬೇಕು, ತಪ್ಪಿದರೆ ಜಾನುವಾರುಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದಾಗಿ ಎಚ್ಚರಿಕೆ ನೀಡಲಾಯಿತು. ತೆಲುಗು ಭಾಷೆಯಲ್ಲಿ ‘ಪುಲ್ಲರಿ’ ಎಂದು ಕರೆಯಲಾಗುತ್ತಿದ್ದ ಈ ಕರಾಳ ಸುಂಕ ಹೇರಿಕೆಯ ವಿರುದ್ಧ ಸಿಡಿದೆದ್ದವರು ಕಾಡನ್ನೇ ನಂಬಿ ಬದುಕುತ್ತಿದ್ದವರು. ಆಂಧ್ರಪ್ರದೇಶದ ಅಂದಿನ ಕೃಷ್ಣಾ ಜಿಲ್ಲೆಯ (ಇಂದಿನ ಮಿಂಚಲವಾಡು) ಪಲ್ನಾಡು ಭಾಗದ ಮಾಚರ್ಲ, ವೆಲ್ದುರ್ತಿ, ದುರ್ಗಿ, ರೆಂಟಚಿಂತಲ ಗ್ರಾಮಗಳ ಅರಣ್ಯ ಉತ್ಪನ್ನವನ್ನೇ ಆಧರಿಸಿ ಬದುಕಿಕೊಂಡಿದ್ದರು ರೈತರು.
ಅರಣ್ಯವನ್ನು ಆಶ್ರಯಿಸಿ ಬದುಕುಸಾಗಿಸಿದ್ದ ಯಾರೂ ಸರಕಾರಕ್ಕೆ ಪುಲ್ಲರಿ ಸುಂಕ ಕೊಡಬಾರದೆಂದು ಎಲ್ಲರನ್ನೂ ಸಂಘಟಿಸಿದವರು ನಲ್ಲಮಲ್ಲ ಬೆಟ್ಟದ ಕೊಳಗಟ್ಲು ಗ್ರಾಮದ ಕನ್ನೇಗಂಟಿ ಹನುಮಂತು. ತೆಲುಗು ಬಲಿಜ ಕುಟುಂಬದ ಆಚಮ್ಮ-ವೆಂಕಟಪ್ಪಯ್ಯ ದಂಪತಿಯ ಎರಡನೆಯ ಮಗ. 1870ರಲ್ಲಿ ಜನಿಸಿದ್ದ ಅವರು ಬ್ರಿಟಿಷ್ ದಬ್ಬಾಳಿಕೆಯ ಕಾರಣ ಜನರು ಅನುಭವಿಸುತ್ತಿದ್ದ ತೊಂದರೆ ಅವಮಾನಗಳಿಂದ ಅವರ ವಿರುದ್ಧ ಕೆಂಡವಾಗಿದ್ದರು. ಅವರೇ ಈ ಮಂತ್ರಘೋಷದ ಸೃಷ್ಟಿಕರ್ತರು. 1182ರಲ್ಲಿ ಹೈಹಯ ಅರಸ ನಲಗಾಮ ರಾಜುವಿನ ಐತಿಹಾಸಿಕ ಸಂಗ್ರಾಮಕ್ಕೆ ನೆಲ ನೀಡಿದ ಈ ಪ್ರದೇಶದ ಜನರಲ್ಲಿ ಹೋರಾಟ ಪ್ರವೃತ್ತಿ ರಕ್ತಗತವಾಗಿಯೇ ಬಂದಿತ್ತು.
1920ರಲ್ಲಿ ಗಾಂಧಿ ಕರನಿರಾಕರಣೆಯ ಅಸಹಕಾರ ಚಳವಳಿಗೆ ಮುಂದಾಗಲು ಕರೆ ನೀಡಿದ್ದೇ ಕನ್ನೆಗಂಟಿ ಹನುಮಂತುವಿನ ಬಂಡಾಯಕ್ಕೆ ದೊಡ್ಡ ಶಕ್ತಿಯಾಗಿ ಪರಿಣಮಿಸಿತು. ಯಾವೊಬ್ಬ ರೈತ ಕೂಡ ಬ್ರಿಟಿಷ್ ಸರಕಾರಕ್ಕೆ ಈ ಸುಂಕವನ್ನು ನೀಡಬಾರದೆಂದು ಅವರು ನಾಲ್ಕಾರು ಗ್ರಾಮಗಳ ರೈತರನ್ನು ಒಗ್ಗೂಡಿಸಿದರು. ಆಗ ಬ್ರಿಟಿಷ್ ಅಧಿಕಾರಿಗಳು ಗ್ರಾಮಕ್ಕೆ ಬಂದು ಸುಂಕ ನಿರಾಕರಿಸಿದರೆ ತೀವ್ರ ಪರಿಣಾಮ ಎದುರಿಸಬೇಕಾದೀತು ಎಂದು ಎಚ್ಚರಿಸಿದರು.
ಆದರೂ ರೈತರು ಮಣಿಯಲಿಲ್ಲ. ಪೊಲೀಸರು ಕೆಲವು ರೈತರ ಹಸುಗಳನ್ನು ಎಳೆದುಕೊಂಡು ಹೋಗಿ ಠಾಣೆಯಲ್ಲಿ ಕಟ್ಟಿಹಾಕಿದರು. ಹನುಮಂತುವಿನ ಹೋರಾಟಕ್ಕೆ ಎಲ್ಲ ಮಹಿಳೆಯರೂ ಬೆನ್ನೆಲುಬಾಗಿದ್ದರು. ಹನುಮಂತುವಿನ ಸೂಚನೆಯ ಪ್ರಕಾರ ಮುನ್ನೂರು ಮಂದಿ ಮಹಿಳೆಯರು ಠಾಣೆಯ ಆವರಣಕ್ಕೆ ನುಗ್ಗಿ ತಮ್ಮ ಹಸುಗಳನ್ನು ಬಿಡಿಸಿಕೊಂಡು ಬಂದಾಗ ತಡೆಯಲು ಪೊಲೀಸರು ಶಕ್ತರಾಗಲಿಲ್ಲ. ಆದರೆ ಈ ರೋಷವನ್ನು ತೀರಿಸಲು ಬ್ರಿಟಿಷ್ ಸೈನಿಕರು ಜಂಗಮೇಶ ರಾಮಾಪುರದಲ್ಲಿ ಹದಿನೆಂಟು ಮಂದಿ ರೈತರನ್ನು ಬಂಧಿಸಿ, ‘ಇವರು ತೆರಿಗೆ ಕಳ್ಳರು’ ಎಂದು ಕರೆಯುತ್ತ ಇಡೀ ಹಳ್ಳಿಯಲ್ಲಿ ಮೆರವಣಿಗೆ ಮಾಡಿದರು.
ಈ ಕೃತ್ಯದಿಂದ ಕನಲಿದ ಹನುಮಂತು ಗ್ರಾಮದಲ್ಲಿ ಬಂಡಾಯದ ದಾವಾಗ್ನಿಯನ್ನೇ ಹಚ್ಚಲು ಕಾರಣವಾದರು. ರೈತರ ಹೋರಾಟಕ್ಕೆ ಸ್ಥಳೀಯ ಮುಖಂಡರಾದ ಕೊಂಡಾ ವೆಂಕಟಪ್ಪಯ್ಯ, ರಾಮಕೋಟೀಶ್ವರರಾವ್, ಬೆಲ್ಲಂಕೊಂಡ ರಾಘವರಾವ್ ಮತ್ತಿತರರು ಬೆಂಬಲಕ್ಕೆ ನಿಂತರು. ಸಾವಿರಾರು ಜನರೂ ಹನುಮಂತುವಿನ ಬೆನ್ನೆಲುಬಾದರು. ಜನಸಂಘಟನೆ ಕಂಡು ಹೌಹಾರಿದ ಬ್ರಿಟಿಷ್ ಅಧಿಕಾರಿಗಳು ಒಡೆದು ಆಳುವ ನೀತಿ ಪ್ರಯೋಗಿಸಲು ಮುಂದಾದರು. ಹನುಮಂತುವನ್ನು ರಹಸ್ಯವಾಗಿ ಬಳಿಗೆ ಕರೆಸಿಕೊಂಡು ಬ್ರಿಟಿಷ್ ಜನರಲ್ ಟಿ.ಜಿ. ರುದರ್ಫೋರ್ಡ್ ಚಳವಳಿಯಿಂದ ದೂರ ಉಳಿದರೆ ಹನುಮಂತುವಿಗೆ 45 ಗ್ರಾಮಗಳ ಅಧಿಕಾರ ನೀಡುವುದಾಗಿ ಆಮಿಷವೊಡ್ಡಿದ. ‘ಈ ಗ್ರಾಮಗಳಿಂದ ನೀನು ಎಷ್ಟು ಬೇಕಿದ್ದರೂ ತೆರಿಗೆ ವಸೂಲು ಮಾಡಿಕೋ. ನಮಗೆ ನಮ್ಮ ಲೆಕ್ಕಾಚಾರದ ತೆರಿಗೆ ಕೊಟ್ಟರೆ ಸಾಕು’ ಎಂದು ಹೇಳಿದ. ಆತನ ಆಮಂತ್ರಣವನ್ನು ಕಟುವಾಗಿ ನಿರಾಕರಿಸಿದ ಹನುಮಂತು, “ನಾನು ನಿಷ್ಕಳಂಕಿತ ದೇಶಭಕ್ತ. ನನ್ನ ದೇಶದ ಜನರಿಗೆ ದ್ರೋಹ ಬಗೆದು ರಕ್ತ ಕುಡಿಯುವ ರಣಹದ್ದು ನಾನಲ್ಲ” ಎಂದು ಹೇಳಿ ಎದ್ದುಬಂದರು. ರುದರ್ಫೋರ್ಡ್ “ಇದರ ದುಷ್ಪರಿಣಾಮವನ್ನು ನೀನು ಎದುರಿಸಬೇಕಾದೀತು” ಎಂದು ಎಚ್ಚರಿಕೆ ನೀಡಿದ.
ಆದರೂ ಹನುಮಂತು ಕಾಡೊಳಗೆ ಜಾನುವಾರುಗಳನ್ನು ಬಲವಂತವಾಗಿ ನುಗ್ಗಿಸಿ, ಮೇಯಿಸಿದರು. ಅರಣ್ಯ ಉತ್ಪನ್ನಗಳನ್ನು ಮನೆಗೆ ಸಾಗಿಸಿದರು. ಕಟ್ಟಿಗೆ ಸಂಗ್ರಹಿಸಿದರು. ‘ಸಾಧ್ಯವಿದ್ದರೆ ನಮ್ಮಿಂದ ಪುಲ್ಲರಿ ಸುಂಕ ವಸೂಲು ಮಾಡಿ’ ಎಂದು ಅಧಿಕಾರಿಗಳಿಗೆ ಸವಾಲೆಸೆದರು. ಇದರ ಬಳಿಕ ರೈತರಿಗೆ ಅಧಿಕಾರಿಗಳು ಅಸಹನೀಯ ಕಿರುಕುಳ ನೀಡಲಾರಂಭಿಸಿದರು. ಜಾನುವಾರುಗಳನ್ನು ವಶಪಡಿಸಿಕೊಂಡು ಚರ್ಮ ಸುಲಿಯಲು ಪ್ರಯತ್ನಿಸಿದರು. ಆಗ ಹನುಮಂತು ಅಧಿಕಾರಿಗಳಿಗೆ ಗ್ರಾಮದಲ್ಲಿ ಕಾಲಿಡದಂತೆ ಬಹಿಷ್ಕಾರ ಹಾಕಿಸಿದರು. ಅವರಿಗೆ ನೀರು ಹಾಗೂ ಯಾವುದೇ ಬಳಕೆಯ ಸಾಮಗ್ರಿಗಳನ್ನು ಯಾರೂ ಕೊಡಬಾರದು, ಕ್ಷೌರಿಕನು ಕ್ಷೌರ ಮಾಡಬಾರದು. ಅಗಸನು ಬಟ್ಟೆ ಒಗೆಯಬಾರದು – ಎಂಬ ನಿಯಮವನ್ನು ಜಾರಿಗೆ ತಂದರು. ಪೊಲೀಸರು ಹನುಮಂತುವನ್ನು ಹಲವು ಸಲ ಬಂಧಿಸಿದರೂ ಅವರ ನಿರ್ಧಾರದಲ್ಲಿ ಬದಲಾವಣೆಯಾಗಲಿಲ್ಲ. ಇದರಿಂದ ಬ್ರಿಟಿಷರಿಗೆ ಈ ಚಳವಳಿಯನ್ನು ಹತ್ತಿಕ್ಕಲು ಹನುಮಂತುವಿನ ಹತ್ಯೆಯೊಂದೇ ದಾರಿ ಅನಿಸಿತು. ಗುಪ್ತಚರರನ್ನು ನೇಮಿಸಿ ಹನುಮಂತುವಿನ ಚಲನವಲನಗಳ ಮಾಹಿತಿ ಕಲೆ ಹಾಕತೊಡಗಿದರು.
ಇದೇ ವೇಳೆಗೆ ಗಾಂಧಿ ಕರನಿರಾಕರಣೆಯ ಚಳವಳಿಯನ್ನು ಸ್ಥಗಿತಗೊಳಿಸಿದರು. ಹನುಮಂತು ಕೂಡ ಸಹಚರರೊಂದಿಗೆ ‘ಗಾಂಧಿಯೇ ತೆರಿಗೆ ಕೊಡಲು ಒಪ್ಪಿದ ಮೇಲೆ ನಾವೂ ನಿರಾಕರಿಸುವಂತಿಲ್ಲ. ತೆರಿಗೆ ಕೊಡೋಣ. ಆದರೆ ಹೊಸದೊಂದು ಚಳವಳಿಯನ್ನು ಹೂಡುವ ಮೂಲಕ ಆಡಳಿತಶಾಹಿಗೆ ಮದ್ದು ಅರೆಯೋಣ’ ಎಂದು ಹೇಳಿ ಒಡಂಬಡಿಸಿದರು.
1922ರ ಫೆಬ್ರುವರಿ 22ರಂದು ಶಿವರಾತ್ರಿಯ ದಿನ. ಕೋಟಪ್ಪಕೊಂಡ ಗ್ರಾಮದಲ್ಲಿ ನಡೆಯುವ ದೇವರ ಪ್ರಭಾಳು ಮೆರವಣಿಗೆಯಲ್ಲಿ ಭಾಗವಹಿಸಲು ಹನುಮಂತು ತನ್ನ ಅನುಯಾಯಿಗಳೊಂದಿಗೆ ಹೋಗಿದ್ದರು. ಅದೇ ಸಮಯಕ್ಕೆ ವಿಷಯವನ್ನು ತಿಳಿದುಕೊಂಡ ಜಿಲ್ಲಾಧಿಕಾರಿ ವಾರ್ನರ್ ಇನ್ಸ್ಪೆಕ್ಟರ್ ರಾಘವಯ್ಯನಿಗೆ ಪೊಲೀಸ್ ಪಡೆಯೊಂದಿಗೆ ಗ್ರಾಮಕ್ಕೆ ಮುತ್ತಿಗೆ ಹಾಕಲು ಆದೇಶಿಸಿದ. ಪೊಲೀಸ್ ಪಡೆ ಹನುಮಂತುವಿನ ಅನುಪಸ್ಥಿತಿಯಲ್ಲಿ ಗ್ರಾಮವನ್ನು ಸುತ್ತುವರಿದು ರೈತರ ಕೊಟ್ಟಿಗೆಗಳಿಂದ ಜಾನುವಾರುಗಳನ್ನು ಸಾಗಿಸಲು ಮುಂದಾಯಿತು. ಮನೆಯಲ್ಲಿದ್ದವರು ಹೆಂಗಸರು, ಮಕ್ಕಳು ಮಾತ್ರ. ಇದಕ್ಕೆ ಪ್ರತಿರೋಧವೊಡ್ಡಿದ ಅವರಿಗೆ ಬಂದೂಕಿನ ನಳಿಗೆಯಿಂದ ಹೊಡೆದು ಪೊಲೀಸರು ದೂರ ಓಡಿಸಿದರು.
ಮೆರವಣಿಗೆಯಲ್ಲಿ ಭಾಗವಹಿಸಿದ್ದ ಹನುಂತುವಿಗೆ ಈ ವಿಷಯ ತಿಳಿಯಿತು. ಸಹಚರರೊಂದಿಗೆ ಮನೆಗೆ ಧಾವಿಸಿದರು. ದೂರದಿಂದಲೇ ಪೊಲೀಸರೊಂದಿಗೆ ‘ನಾವು ಸುಂಕ ಕೊಡುತ್ತೇವೆ. ಹೆಂಗಸರಿಗೆ ಥಳಿಸಬೇಡಿ. ಕಿರುಕುಳ ಕೊಡಬೇಡಿ. ಜಾನುವಾರುಗಳನ್ನು ಒಯ್ಯಬೇಡಿ’ ಎಂದು ಕೂಗಿ ಹೇಳಿದರು. ಆದರೆ ಪೊಲೀಸ್ ಅಧಿಕಾರಿ ಕರಣಮ್, ದುರ್ಗಿ, ಯಂಡವಳ ಸದಾಶಿವಯ್ಯ ನೇತೃತ್ವದ ಪೊಲೀಸ್ಪಡೆ ಹನುಮಂತುವನ್ನು ಸುತ್ತುವರಿಯಿತು. ಬಂದೂಕುಗಳು ಒಂದೇ ಸವನೆ ಹೊಗೆಯುಗುಳಿದವು. ಎಲ್ಲಂಪಲ್ಲಿ ಶೇಷಯ್ಯ ಸೇರಿ ಇಬ್ಬರು ಸಹಚರರು ಗುಂಡೇಟಿನಿಂದ ಪ್ರಾಣ ಕಳೆದುಕೊಂಡರು. ಹನುಮಂತುವಿನ ದೇಹದ ಮೇಲೆ ಸತತ ನಡೆದ ಗುಂಡಿನ ಪ್ರವಾಹದಲ್ಲಿ 26 ಗುಂಡುಗಳು ದೇಹದಲ್ಲಿ ನಾಟಿಕೊಂಡವು. ಹನುಮಂತು ನೆಲಕ್ಕುರುಳಿ ‘ನೀರು ಬೇಕು’ ಎಂದು ಕೋರಿಕೊಂಡಾಗ ನೀರು ತಂದ ಅವರ ಪತ್ನಿ ಗಂಗಮ್ಮನನ್ನು ಸನಿಹಕ್ಕೆ ಸುಳಿಯಲೂ ಪೊಲೀಸರು ಬಿಡಲಿಲ್ಲ. ಕೈಯಲ್ಲಿದ್ದ ನೀರಿನ ಲೋಟವನ್ನು ಒಡೆದುಹಾಕಿದರು. ಆರು ತಾಸುಗಳ ಕಾಲ ರಕ್ತದ ಮಡುವಿನಲ್ಲಿ ಹೊರಳುತ್ತ ‘ವಂದೇ ಮಾತರಂ’ ಘೋಷಣೆ ಕೂಗುತ್ತ ಹನುಮಂತು ದೇಶಮಾತೆಯ ಮಡಿಲಿನಲ್ಲಿ ಉಸಿರು ಚೆಲ್ಲಿದರು. ಅವರು ಹಾಗೂ ಬಲಿದಾನ ನೀಡಿದ ಇನ್ನಿಬ್ಬರ ದೇಹಗಳಿಗೆ ನಾಲ್ಕು ದಿನಗಳ ಕಾಲ ಅಂತಿಮಸಂಸ್ಕಾರಕ್ಕೂ ಅವಕಾಶ ನೀಡದೆ ಬ್ರಿಟಿಷ್ ಆಧಿಪತ್ಯ ನೀಚತನ ಮೆರೆಯಿತು. ಬಳಿಕ ಕೋಲಗುಂಟ್ ಎಂಬಲ್ಲಿ ಈ ಹುತಾತ್ಮರಿಗೆ ಸಮಾಧಿ ಮಾಡಲಾಯಿತು.
ಈ ಹತ್ಯೆಯಿಂದ ರೊಚ್ಚಿಗೆದ್ದ ಜನಸಮೂಹ ಕಾಳುಮೆಣಸಿನ ಹುಡಿ, ಬಿಲ್ಲು, ಬಾಣ, ಈಟಿ, ಮಚ್ಚು ಬಳಸಿ ಪೊಲೀಸರ ವಿರುದ್ಧ ಸಮರಕ್ಕೆ ಮುಂದಾದರೂ ಅವರನ್ನು ಪೊಲೀಸರು ಹತ್ತಿಕ್ಕಿದರು. ಇಡೀ ಗ್ರಾಮವನ್ನೇ ಲೂಟಿ ಮಾಡಲಾಯಿತು.
ಕನ್ನೇಗಂಟಿ ಹನುಮಂತುವಿನ ಹೋರಾಟದ ಕಥೆಯ ಚಲನಚಿತ್ರ 2006ರಲ್ಲಿ ತೆರೆ ಕಂಡಿದೆ. 1974ರಲ್ಲಿ ಸಿದ್ಧವಾದ ‘ಅಲ್ಲೂರಿ ಸೀತಾರಾಮರಾಜು’ ಚಿತ್ರದ ಹಾಡಿನಲ್ಲಿ ಹನುಮಂತುವಿನ ಸಾಹಸದ ವಿವರಗಳಿವೆ. ಹನುಮಂತು ಬದುಕಿನ ಕಥೆ ಹೇಳುವ ಗರ್ರಂ ಜೋಶುವಾ ಬರೆದ ಲಾವಣಿ ಆಂಧ್ರಪ್ರದೇಶದಲ್ಲಿ ಮನೆಮಾತಾಗಿದೆ.