ನೆಹರು–ಚರಣಸಿಂಗ್ ಸಂಪುಟದಲ್ಲಿ ಕೃಷಿ ಉಪಸಚಿವರಾಗಿಯೂ ಅನಂತರ ರಾಜ್ಯ ಸಚಿವರಾಗಿಯೂ ಕೃಷ್ಣಪ್ಪನವರು ಮಾಡಿದ ಸಾಧನೆಗಳು ಚರಿತ್ರಾರ್ಹವೆನಿಸಿದವು. ಹಾಲಿನ ಉತ್ಪಾದನೆ ಹೆಚ್ಚಬೇಕಾದುದರ ಅನಿವಾರ್ಯತೆಯನ್ನು ಮನಗಂಡು ಮಿಶ್ರತಳಿ ದನಗಳನ್ನು ಡೆನ್ಮಾರ್ಕಿನಿಂದ ತರಿಸಿದರು. ಸೀಮೆ ಹಸುಗಳನ್ನು ವಿ.ಐ.ಪಿ.ಗಳಂತೆ ವಿಶೇಷ ವಿಮಾನದಲ್ಲಿ ತರಿಸಿದುದೂ ಆ ದಿನಗಳಲ್ಲಿ ರೋಚಕ ಸುದ್ದಿಯಾಗಿತ್ತು; ಹಿಂದೆಂದೂ ಹೀಗೆ ನಡೆದಿರಲಿಲ್ಲ. ಅದರಂತೆ ಹೆಚ್ಚಿನ ಪ್ರಮಾಣದ ಉಣ್ಣೆ ನೀಡುವ ಕುರಿಗಳನ್ನು ಆಸ್ಟ್ರೇಲಿಯದಿಂದ ತರಿಸಿ ಇಲ್ಲಿಯ ರೈತರಿಗೆ ಪರಿಚಯ ಮಾಡಿಸಿದವರು ಕೃಷ್ಣಪ್ಪ. ಹೈನುಗಾರಿಕೆ, ಕುರಿಸಾಕಣೆ ಮೊದಲಾದವಕ್ಕೆ ಅವಶ್ಯವಾದ ತರಬೇತಿ ಕಾರ್ಯಕ್ರಮಗಳನ್ನು ಏರ್ಪಡಿಸಿದವರೂ ಅವರೇ.
ಕರ್ನಾಟಕದಲ್ಲಿ ಹೈನು ಉದ್ಯಮದ ಪ್ರವರ್ತನೆಯನ್ನೂ ಪ್ರಗತಿಯನ್ನೂ ಕುರಿತು ಯೋಚಿಸುವಾಗ ಮೊದಮೊದಲಿಗೇ ಅವಶ್ಯವಾಗಿ ನೆನೆಯಬೇಕಾದ ಹೆಸರು ಎಂ.ವಿ. ಕೃಷ್ಣಪ್ಪನವರದು. ಆ ಆದ್ಯರ ಸಾಧನೆ ಈಗಿನ ಪೀಳಿಗೆಯ ಸ್ಮೃತಿಪಟಲದಿಂದ ಮಾಸಿಹೋಗಿರುವುದು ದುರದೃಷ್ಟ; ಅದು ಅಕ್ಷಮ್ಯವೂ ಹೌದು. ನಮ್ಮ ದೇಶದ ಜನಜೀವನದ ಬೆನ್ನೆಲುಬಾದ ಕೃಷಿಗೂ ಪಶುಸಂಗೋಪನೆಗೂ ಪ್ರಾಥಮಿಕತೆ ಸಲ್ಲಬೇಕೆಂದು ಒಂದು ನಿರ್ಣಾಯಕ ಕಾಲಘಟ್ಟದಲ್ಲಿ ಯಶಸ್ವಿಯಾಗಿ ಪ್ರತಿಪಾದಿಸಿದವರು ಎಂ.ವಿ. ಕೃಷ್ಣಪ್ಪ. ಇದಕ್ಕೆ ಒಂದು ಸಾಂದರ್ಭಿಕತೆ ಇತ್ತು. ಸ್ವಾತಂತ್ರ್ಯೋದಯ ವರ್ಷಗಳಲ್ಲಿ ಜವಾಹರಲಾಲ್ ನೆಹರು ಸರ್ಕಾರದ ಗಮನವೆಲ್ಲ ಇಂಜಿನಿಯರಿಂಗ್ ಉದ್ಯಮಗಳಲ್ಲಿ ನೆಟ್ಟಿತ್ತು. ಆ ಹಿನ್ನೆಲೆಯಲ್ಲಿ ಕೈಗಾರಿಕೆಗಳಷ್ಟೆ ಬೇಸಾಯ-ಪಶುಪಾಲನೆಗಳ ಸಂವರ್ಧನೆಗೂ ಪ್ರಾಮುಖ್ಯ ನೀಡುವುದು ಅತ್ಯವಶ್ಯವೆಂದು ನೆಹರುರವರ ಮನವೊಲಿಸುವುದರಲ್ಲಿ ಕೀಲಕಪಾತ್ರ ವಹಿಸಿದವರು ಎಂ.ವಿ. ಕೃಷ್ಣಪ್ಪ. ಭಾರತದ ಸಂದರ್ಭದಲ್ಲಿ ಬೇಸಾಯಕ್ಕೂ ಪ್ರಾಣಿ-ಸಾಕಣೆಗೂ ಮಹತ್ತ್ವ ಸಲ್ಲುತ್ತದೆಂದು ಕೃಷ್ಣಪ್ಪನವರು ಸಮರ್ಥವಾಗಿ ಅಂಕಿ-ಅಂಶಗಳ ಸಹಿತ ಲೋಕಸಭೆಯಲ್ಲಿ ಮಾಡಿದ ಮಂಡನೆಗಳು ಎಲ್ಲರ ಪ್ರಶಂಸೆಗೆ ಪಾತ್ರವಾದವು. ಇದರ ಪರಿಣಾಮವಾಗಿ ನೆಹರು ತಮ್ಮ ಸಂಪುಟದಲ್ಲಿ ಎಂ.ವಿ. ಕೃಷ್ಣಪ್ಪನವರನ್ನು ಕೃಷಿವಿಭಾಗ ಸಚಿವರಾಗಿ ನೇಮಕ ಮಾಡಿಕೊಂಡರು. ಆಗ – ಎಂದರೆ ೧೯೫೦ರ ದಶಕದ ಉತ್ತರಾರ್ಧ – ಕೃಷ್ಣಪ್ಪನವರು ಇನ್ನೂ ೩೮ ವರ್ಷದ ತರುಣ. ನೆಹರು ಸಂಪುಟದಲ್ಲಿ ವಯಸ್ಸಿನಲ್ಲಿ ಅತ್ಯಂತ ಕಿರಿಯರೆಂಬ ಪ್ರಥೆಗೂ ಅವರು ಪಾತ್ರರಾಗಿದ್ದರು. ಆ ವೇಳೆಗೇ ರಾಜ್ಯ ಸ್ತರದಲ್ಲಿ ಕಂದಾಯ, ಮುಜರಾಯಿ, ತೋಟಗಾರಿಕೆ, ಕೃಷಿ ಮೊದಲಾದ ವಿಭಾಗಗಳನ್ನು ದಕ್ಷವಾಗಿ ನಿರ್ವಹಿಸುವುದರಲ್ಲಿಯೂ ಹೆಚ್ಚು ಕ್ರಿಯಾಶೀಲಗೊಳಿಸುವುದರಲ್ಲಿಯೂ ಕೃಷ್ಣಪ್ಪನವರ ಕಾರ್ಯವಂತಿಕೆ ಜನರ ಗಮನಕ್ಕೆ ಬಂದಿದ್ದಿತು. ರಾಜ್ಯ ಕೃಷಿ ಬೆಲೆ ಆಯೋಗ ಮೊದಲಾದವುಗಳ ಕಲಾಪಗಳಲ್ಲೂ ಅವರು ಸಕ್ರಿಯರಾಗಿದ್ದರು.
ನೆಹರು-ಚರಣಸಿಂಗ್ ಸಂಪುಟದಲ್ಲಿ ಕೃಷಿ ಉಪಸಚಿವರಾಗಿಯೂ ಅನಂತರ ರಾಜ್ಯ ಸಚಿವರಾಗಿಯೂ ಕೃಷ್ಣಪ್ಪನವರು ಮಾಡಿದ ಸಾಧನೆಗಳು ಚರಿತ್ರಾರ್ಹವೆನಿಸಿದವು. ಹಾಲಿನ ಉತ್ಪಾದನೆ ಹೆಚ್ಚಬೇಕಾದುದರ ಅನಿವಾರ್ಯತೆಯನ್ನು ಮನಗಂಡು ಮಿಶ್ರತಳಿ ದನಗಳನ್ನು ಡೆನ್ಮಾರ್ಕಿನಿಂದ ತರಿಸಿದರು. ಸೀಮೆ ಹಸುಗಳನ್ನು ವಿ.ಐ.ಪಿ.ಗಳಂತೆ ವಿಶೇಷ ವಿಮಾನದಲ್ಲಿ ತರಿಸಿದುದೂ ಆ ದಿನಗಳಲ್ಲಿ ರೋಚಕ ಸುದ್ದಿಯಾಗಿತ್ತು; ಹಿಂದೆಂದೂ ಹೀಗೆ ನಡೆದಿರಲಿಲ್ಲ. ಅದರಂತೆ ಹೆಚ್ಚಿನ ಪ್ರಮಾಣದ ಉಣ್ಣೆ ನೀಡುವ ಕುರಿಗಳನ್ನು ಆಸ್ಟ್ರೇಲಿಯದಿಂದ ತರಿಸಿ ಇಲ್ಲಿಯ ರೈತರಿಗೆ ಪರಿಚಯ ಮಾಡಿಸಿದವರು ಕೃಷ್ಣಪ್ಪ. ಹೈನುಗಾರಿಕೆ, ಕುರಿಸಾಕಣೆ ಮೊದಲಾದವಕ್ಕೆ ಅವಶ್ಯವಾದ ತರಬೇತಿ ಕಾರ್ಯಕ್ರಮಗಳನ್ನು ಏರ್ಪಡಿಸಿದವರೂ ಅವರೇ. ಆಯ್ಕೆ ಮಾಡಿದ ಸ್ಥಳೀಯ ರೈತರನ್ನು ಹೆಚ್ಚಿನ ಶಿಕ್ಷಣಕ್ಕಾಗಿ ವಿದೇಶಗಳಿಗೆ ಕಳಿಸುವ ಯೋಜನೆಯನ್ನೂ ಕೇಂದ್ರಸರ್ಕಾರದಡಿಯಲ್ಲಿ ಕೃಷ್ಣಪ್ಪನವರು ಕಾರ್ಯಗತಗೊಳಿಸಿದರು. ಹೆಚ್ಚು ಕಾರ್ಯಕ್ಷಮವಾದ ಹೊಸಹೊಸ ಕೃಷಿ ಉಪಕರಣಗಳನ್ನೂ ಪ್ರಚಲಿತಗೊಳಿಸಿದರು. ರಾಜ್ಯದ ಹಲವಾರೆಡೆ ದನಗಳ ಮತ್ತು ಸುಧಾರಿತ ಕೃಷಿವಿಧಾನಗಳ ಪ್ರದರ್ಶನಗಳನ್ನು ಏರ್ಪಡಿಸಿದರು. ೧೯೬೦ರ ದಶಕದ ನಡುಭಾಗದಲ್ಲಿ ಬೆಂಗಳೂರು ಮಧ್ಯದಲ್ಲಿ ಈಗ ಬಸ್ನಿಲ್ದಾಣವಿರುವ ವಿಶಾಲ ಮೈದಾನದಲ್ಲಿ (ಆಗ ‘ಸುಭಾಷ್ನಗರ’) ಬೃಹತ್ ಪ್ರಮಾಣದ ಅಖಿಲಭಾರತ ಮಟ್ಟದ ದನಗಳ ಪ್ರದರ್ಶನವನ್ನು ಏರ್ಪಡಿಸಿ ಆಗಿನ ಪ್ರಧಾನಮಂತ್ರಿ ಲಾಲಬಹಾದುರ್ ಶಾಸ್ತಿç ಅವರಿಂದ ಅದನ್ನು ಉದ್ಘಾಟನೆ ಮಾಡಿಸಿದುದು ಬೆಂಗಳೂರಿನ ಈಚಿನ ಇತಿಹಾಸದ ಒಂದು ಮೈಲಿಗಲ್ಲು ಎನಿಸಿತು.
* * *
ಹಳೆಮೈಸೂರು ಕೋಲಾರ ಜಿಲ್ಲೆ ನಾಡಿಗೆ ನೀಡಿದ ಮುತ್ಸದ್ದಿಗಳಲ್ಲಿ ಮಕುಟಪ್ರಾಯರಾದ ಒಬ್ಬರು ಎಂ.ವಿ. ಕೃಷ್ಣಪ್ಪ (೧೯೧೯-೧೯೮೦). ಅವರ ಮನೆತನ ನೆಲಸಿದ್ದುದು ಮುಳಬಾಗಲು ತಾಲೂಕಿನ ಮೋತಕಪಲ್ಲಿ ಗ್ರಾಮದಲ್ಲಿ. ಕೃಷ್ಣಪ್ಪನವರ ತಂದೆ ವೆಂಕಟರಾಮೇಗೌಡರು ರೈತರು; ಹೀಗಾಗಿ ಕೃಷಿ-ಪಶುಸಂಗೋಪನೆಗಳಲ್ಲಿ ಆಸಕ್ತಿಯೂ ರೀತಿನೀತಿಗಳೂ ಕೃಷ್ಣಪ್ಪನವರಲ್ಲಿ ಹುಟ್ಟಿನಿಂದಲೇ ಮನೆಮಾಡಿದ್ದವು. ತಾಯಲೂರು, ಮುಳಬಾಗಲು, ಬೆಂಗಳೂರು, ಮೈಸೂರುಗಳಲ್ಲಿ ಆರಂಭಿಕ ಶಿಕ್ಷಣದ ತರುವಾಯ ಕೃಷ್ಣಪ್ಪನವರು ಮದರಾಸು ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಪಡೆದುಕೊಂಡರು.
ಕಾಲೇಜು ವ್ಯಾಸಂಗ ನಡೆಸಿದ್ದ ದಿನಗಳಿಂದಲೇ ಕೃಷ್ಣಪ್ಪನವರು ಸ್ವಾತಂತ್ರ್ಯ ಹೋರಾಟದಿಂದ ಆಕರ್ಷಿತರಾಗಿದ್ದರು. ೧೯೪೨ರ ‘ಕ್ವಿಟ್ ಇಂಡಿಯ’ ಆಂದೋಲನದಲ್ಲಿಯೂ ಸಕ್ರಿಯವಾಗಿ ಭಾಗವಹಿಸಿದ್ದರು. ನಾಲ್ಕು ವರ್ಷ ಕಾರಾಗೃಹವಾಸವನ್ನೂ ಅನುಭವಿಸಿದ್ದರು. ಆ ದಿನಗಳಲ್ಲಿ ಅವರ ಸಹಪಾಠಿಗಳಾಗಿದ್ದವರಲ್ಲೊಬ್ಬರು ಉತ್ತರೋತ್ತರ ನೆಹರುರವರಿಗೂ ಇಂದಿರಾಗಾಂಧಿಯವರಿಗೂ ಮಾಧ್ಯಮ ಕಾರ್ಯದರ್ಶಿಗಳಾದ ಎಚ್.ವೈ. ಶಾರದಾಪ್ರಸಾದ್ (ನಮ್ಮ ಆಪ್ತವಲಯದಲ್ಲಿ ‘ಶಾರಿ’).
ಕೃಷ್ಣಪ್ಪನವರದು ಒಳ್ಳೆಯ ಆಳ್ತನ. ಹತ್ತು ಮಂದಿಯ ನಡುವೆ ಎದ್ದುಕಾಣುವ ಸ್ಫೂರದ್ರೂಪದ ಪ್ರಭಾವೀ ವ್ಯಕ್ತಿತ್ವ. ಈಜುಗಾರಿಕೆ, ಕುದುರೆಸವಾರಿ – ಇವೂ ಅವರ ಹವ್ಯಾಸಗಳಲ್ಲಿ ಸೇರಿದ್ದವು.
ಎಂ.ವಿ. ಕೃಷ್ಣಪ್ಪನವರಿಂದ ಪ್ರತ್ಯಕ್ಷ ಹಾಗೂ ಪರೋಕ್ಷ ಬೆಂಬಲ ಪ್ರೋತ್ಸಾಹನ ಪಡೆದ ಕ್ಷೇತ್ರಗಳು ಹಲವಾರು. ‘ಗೋಲ್ಡನ್ ವ್ಯಾಲಿ’ ಶಿಕ್ಷಣಸಂಸ್ಥೆಯ ಸ್ಥಾಪಕರು ಅವರು. ವಿವಿಧೋದ್ದೇಶ ಸಹಕಾರ ಸಂಘವೂ ಅವರದೇ ನಿರ್ಮಿತಿ. ಕೃಷಿ-ಪಶುಸಂಗೋಪನೆಗಳಲ್ಲದೆ ಮೀನುಗಾರಿಕೆ-ಕೋಳಿಸಾಕಣೆಗಳ ಸಂವರ್ಧನೆಗೂ ಅವರಿಂದ ಪೋಷಣೆ ದೊರೆತಿತ್ತು.
ಭಾರತಸರ್ಕಾರವನ್ನು ಪ್ರತಿನಿಧಿಸಿ ೧೯೭೩ರಲ್ಲಿ ವಿಶ್ವಸಂಸ್ಥೆಯಲ್ಲಿ ಭಾಗವಹಿಸಿದ ತಂಡದ ಸದಸ್ಯರಾಗಿದ್ದ ಎಂ.ವಿ. ಕೃಷ್ಣಪ್ಪ ರಷ್ಯಾ, ಚೀನಾ, ಜಪಾನ್ ಮೊದಲಾದ ದೇಶಗಳಿಗೆ ಭಾರತಸರ್ಕಾರ ಕಳುಹಿಸಿದ ಸಂಸದೀಯ ನಿಯೋಗಗಳ ಪ್ರಮುಖ ಸದಸ್ಯರಾಗಿದ್ದರು.
ಅರ್ತ್ ಮೂವರ್ಸ್ ಕಾರ್ಖಾನೆಯ ಸ್ಥಾಪನೆ, ದೊಡ್ಡಬಳ್ಳಾಪುರ ಘಾಟಿಸುಬ್ರಹ್ಮಣ್ಯ ಕ್ಷೇತ್ರದ ಅಭಿವೃದ್ಧಿ, ರೇಷ್ಮೆ ಉದ್ಯಮದ ಪ್ರವರ್ತನೆ – ಇಂತಹ ಹಲವಾರು ಕ್ಷೇತ್ರಗಳು ಕೃಷ್ಣಪ್ಪನವರಿಂದ ದೋಹದ ಪಡೆದವು.
ರಾಜ್ಯದ ಅಭ್ಯುದಯ ಯಾವ ದಿಶೆಯಲ್ಲಿ ನಡೆಯಬೇಕೆಂಬ ನಕ್ಷೆಯನ್ನು ಮನಸ್ಸಿನಲ್ಲಿ ನಿಶ್ಚಿತಗೊಳಿಸಿಕೊಂಡು ಅನುಕೂಲ ಸನ್ನಿವೇಶ ಒದಗಿದಾಗ ಅಥವಾ ತಾವೇ ಅಂತಹ ಸನ್ನಿವೇಶ ನಿರ್ಮಿಸಿಕೊಂಡು ಪ್ರವೃತ್ತರಾಗುತ್ತಿದ್ದ ಎಂ.ವಿ. ಕೃಷ್ಣಪ್ಪನವರ ಕಾರ್ಯವಂತಿಕೆಯೂ ಜನಹಿತಸಾಧನೋತ್ಸಾಹವೂ ವಿರಳ ರೀತಿಯವು. ನಿಧನರಾದಾಗ (೧ ಆಗಸ್ಟ್ ೧೯೮೦) ಕೃಷ್ಣಪ್ಪನವರ ವಯಸ್ಸು ೬೨ನ್ನೂ ದಾಟಿರಲಿಲ್ಲ.