ಮಹಾಭಾರತದ ಅಭೂತಪೂರ್ವ ವರ್ಣಚಿತ್ರಗಳಿಂದ, ಅಂಚೆ ಮೂಲಕ ಚಿತ್ರಕಲಿಸುವ ಕಲಾಶಾಲೆ ನಡೆಸಿದ, ಖ್ಯಾತ ಕಲಾವಿದ ಎಂ.ಟಿ.ವಿ. ಆಚಾರ್ಯ ಅವರು ‘ಚಂದಮಾಮ’ಕನ್ನಡ ಅವತರಣಿಕೆಯಲ್ಲಿ ಮೊದಲ ಐದು ವರ್ಷಗಳ ಕಾಲ ಮುಖಚಿತ್ರ, ಒಳಪುಟಗಳ ಕಲಾವಿದರಾಗಿದ್ದಷ್ಟೇ ಅಲ್ಲದೆ ಸಂಪಾದಕರಾಗಿಯೂ ಕಾರ್ಯನಿರ್ವಹಿಸಿದರು. ಅನಂತರ ಸಂಪಾದಕರಾದವರೇ ‘ನವಗಿರಿನಂದ’. ಇದರ ಬಗ್ಗೆ ‘ಕಲೆ ಮತ್ತು ನಾನು’ಎಂಬ ತಮ್ಮ ಆತ್ಮಕಥೆಯಲ್ಲಿ ಎಂ.ಟಿ.ವಿ. ಆಚಾರ್ಯ ಅವರು ನೆನಪು ಮಾಡಿಕೊಂಡಿದ್ದಾರೆ.
ಐವತ್ತು ಅರವತ್ತು ವರ್ಷಗಳ ಹಿಂದೆ ಚಿಕ್ಕವರು, ದೊಡ್ಡವರು ಎಂದು ವಯಸ್ಸಿನ ಅಂತರವಿಲ್ಲದೆ ಕನ್ನಡ ಓದು-ಬರಹ ಗೊತ್ತಿದ್ದ ಬಹುತೇಕ ಮಂದಿ ಪ್ರತಿ ತಿಂಗಳೂ ಚಾತಕಪಕ್ಷಿಯಂತೆ ಎದುರುನೋಡುತ್ತಿದ್ದ ಅಪರೂಪದ ಪತ್ರಿಕೆ ‘ಚಂದಮಾಮ’. ನಮ್ಮ ನಾಡಿನದ್ದಷ್ಟೇ ಅಲ್ಲದೆ ಗ್ರೀಕ್ನ ಇಲಿಯಡ್, ಒಡಿಸ್ಸಿ, ಷೇಕ್ಸ್ಪಿಯರ್ ಕೃತಿಗಳು, ಅರೇಬಿಯನ್ ನೈಟ್ಸ್ ಮುಂತಾದ ದೇಶ-ವಿದೇಶಗಳ ಆಖ್ಯಾಯಿಕೆಗಳನ್ನೂ ಇಲ್ಲಿನ ನೆಲಕ್ಕೊಗ್ಗಿಸಿ, ತಿಳಿಗನ್ನಡದಲ್ಲಿ ನಿರೂಪಿಸಿ, ಪ್ರತಿ ಪುಟವನ್ನೂ ಅತ್ಯಾಕರ್ಷಕ ಬಣ್ಣದ ಚಿತ್ರಗಳಿಂದ ವಿನ್ಯಾಸಗೊಳಿಸಿ ಬಾಲ್ಯದಲ್ಲಿ ನಮಗೆ ರಸದೌತಣ ನೀಡುತ್ತಿದ್ದ ಪತ್ರಿಕೆಯ ನೆನಪು ಜೀವಮಾನದುದ್ದಕ್ಕೂ ಉಳಿಯುವಂಥದ್ದು.
ಆ ಕಾಲದಲ್ಲಿ ಆರು ಆಣೆಗೆ (ಮೂವತ್ತೇಳು ಪೈಸೆ) ದೊರೆಯುತ್ತಿದ್ದ ಪತ್ರಿಕೆಯ ಕೆಲವು ಸಂಚಿಕೆಗಳು ತಮ್ಮ ಬಳಿ ಇವೆಯೆಂದೂ, ಆಸಕ್ತರು ಖರೀದಿಸಬಹುದೆಂದೂ ಫೇಸ್ಬುಕ್ನಲ್ಲಿ ಒಬ್ಬರು ಪ್ರಕಟಿಸಿದ್ದರು. ಕುತೂಹಲ ತಡೆಯಲಾರದೆ ಒಂದು ಸಂಚಿಕೆಗೆ ನೂರು ರೂಪಾಯಿನಂತೆ ಕೊಟ್ಟು ಕೆಲವು ಪ್ರತಿಗಳನ್ನು ಖರೀದಿಸಿದೆ. ಓದುತ್ತ, ಓದುತ್ತ ಒಂದಿಷ್ಟು ದಿನಗಳು ಬಾಲ್ಯಕಾಲದ ಕನಸಿನ ಲೋಕದಲ್ಲಿ ಕಳೆದೆ.
‘ಚಂದಮಾಮ’ ಹನ್ನೆರಡು ಪ್ರಾದೇಶಿಕ ಭಾಷೆಗಳಲ್ಲಷ್ಟೇ ಅಲ್ಲದೆ ಇಂಗ್ಲಿಷ್ ಮತ್ತು ಸಂಸ್ಕೃತದಲ್ಲೂ ಪ್ರಕಟವಾಗುತ್ತಿತ್ತು. ಪ್ರತಿ ಪುಟದ ವಿನ್ಯಾಸ, ಮನೋಹರ ಚಿತ್ರಗಳನ್ನು ನೋಡುವುದೇ ಕಣ್ಣಿಗೆ ಹಬ್ಬ. ಮುಂದೆ ‘ಬಾಲಮಿತ್ರ’, ‘ಬೊಂಬೆ ಮನೆ’ ಮುಂತಾದ ಇದೇ ಮಾದರಿಯ ಪತ್ರಿಕೆಗಳು ಪ್ರಕಟವಾದದ್ದುಂಟು. ಆದರೆ ಏಕಕಾಲದಲ್ಲಿ, ಇಷ್ಟು ಭಾಷೆಗಳಲ್ಲಿ ಪ್ರಕಟವಾಗುತ್ತಿದ್ದ ಇನ್ನೊಂದು ಪತ್ರಿಕೆ ನಮ್ಮ ದೇಶದಲ್ಲಿ ಇದ್ದಂತಿಲ್ಲ.
ಇನ್ನೂ ಒಂದು ವಿಶೇಷವೆಂದರೆ, ಬಡವರಿಗೆ ಮತ್ತು ದಲಿತರಿಗೆ ಅನುಕೂಲವಾಗಲೆಂದು ಅವರಿಗಾಗಿ ವಾರ್ಷಿಕ ಚಂದಾ ಹಣದಲ್ಲಿ ‘ಚಂದಮಾಮ’ ಕೆಲವು ಕಾಲ, ವಿಶೇಷ ರಿಯಾಯಿತಿ ಘೋಷಿಸಿತ್ತೆಂದರೆ ನಂಬಲಸಾಧ್ಯ!
ಮಹಾಭಾರತದ ಅಭೂತಪೂರ್ವ ವರ್ಣಚಿತ್ರಗಳಿಂದ, ಅಂಚೆ ಮೂಲಕ ಚಿತ್ರಕಲಿಸುವ ಕಲಾಶಾಲೆ ನಡೆೆಸಿದ, ಖ್ಯಾತ ಕಲಾವಿದ ಎಂ.ಟಿ.ವಿ. ಆಚಾರ್ಯ ಅವರು ‘ಚಂದಮಾಮ’ ಕನ್ನಡ ಅವತರಣಿಕೆಯಲ್ಲಿ ಮೊದಲ ಐದು ವರ್ಷಗಳ ಕಾಲ ಮುಖಚಿತ್ರ, ಒಳಪುಟಗಳ ಕಲಾವಿದರಾಗಿದ್ದಷ್ಟೇ ಅಲ್ಲದೆ ಸಂಪಾದಕರಾಗಿಯೂ ಕಾರ್ಯನಿರ್ವಹಿಸಿದರು. ಅನಂತರ ಸಂಪಾದಕರಾದವರೇ ‘ನವಗಿರಿನಂದ’. ಇದರ ಬಗ್ಗೆ ‘ಕಲೆ ಮತ್ತು ನಾನು’ ಎಂಬ ತಮ್ಮ ಆತ್ಮಕಥೆಯಲ್ಲಿ ಎಂ.ಟಿ.ವಿ. ಆಚಾರ್ಯ ಅವರು ಹೀಗೆ ನೆನಪು ಮಾಡಿಕೊಂಡಿದ್ದಾರೆ:
“…ನನ್ನದು ಮುಖ್ಯವಾಗಿ ಕಲಾ ವೃತ್ತಿಯಾದದ್ದರಿಂದ ಈ ಸಂಪಾದಕತ್ವದ ಹೊಣೆಯಿಂದ ಮುಕ್ತನಾಗಲು ನಿರ್ಧರಿಸಿದೆ. ನನ್ನ ಈ ಅಭಿಪ್ರಾಯವನ್ನು ತಿಳಿದ ಮಾಲೀಕರು ಒಪ್ಪಿ ಬೇರೆ ಸೂಕ್ತ ಸಂಪಾದಕರನ್ನು ಆರಿಸುವ ಹೊಣೆಯನ್ನು ನನಗೇ ಒಪ್ಪಿಸಿದರು. ಚಂದಮಾಮದಲ್ಲಿ ಪ್ರಕಟಣೆಗೆ ಆಗ್ಗಾಗೆ ಉತ್ತಮ ಕವನಗಳನ್ನೂ ಲೇಖನಗಳನ್ನೂ ಕಳುಹಿಸುತ್ತಿದ್ದ ‘ನವಗಿರಿನಂದ’ ಎಂಬವರ ನೆನಪಾಯಿತು. ಅವರನ್ನು ಎಂದೂ ಕಂಡಿರಲಿಲ್ಲ. ಅವರು ಮದ್ರಾಸಿನಲ್ಲೇ ವಾಸವಿದ್ದುದರಿಂದ ಒಂದು ದಿನ ಅವರ ವಿಳಾಸವನ್ನು ಹುಡುಕಿಕೊಂಡು ಹೊರಟೆನು.
“ಆ ಮನೆಯಲ್ಲಿ ವಿಚಾರಿಸಿದಾಗ ಕಪ್ಪನೆಯ, ಕೃಶರಾದ ಬರಿಮೈಯಲ್ಲಿ ದಟ್ಟ ಪಂಚೆಯುಟ್ಟ ಅಡುಗೆಭಟ್ಟರು ಎದುರಾಗಿ ಉಗ್ಗಿನಿಂದ ತಡವರಿಸುತ್ತಾ “ನಾ…ನಾ…ನಾ..ನೇ ನವಗಿರಿನಂದ” ಎಂದಾಗ ಅಚ್ಚರಿಯಿಂದ ಬೆರಗಾದೆನು. ನಿಧಾನವಾಗಿ ಅವರ ಬಗ್ಗೆ ವಿಚಾರಿಸಿದಾಗ ಅವರು ಆ ಮನೆಯಲ್ಲಿ ಅಡುಗೆ ಕೆಲಸ ಮಾಡುತ್ತಿರುವುದಾಗಿಯೂ, ಇಲ್ಲಿ ಒಂಟಿಯಾಗಿ ತಾವಿದ್ದರೂ ತಮ್ಮ ಸಂಸಾರವೆಲ್ಲ ಮಂಗಳೂರಿನ ಬಳಿ ಹೊಸಬೆಟ್ಟು ಗ್ರಾಮದಲ್ಲಿ ವಾಸವಿರುವುದಾಗಿಯೂ ತಿಳಿಸಿದರು. ಅವರ ಅಪಾರ ಸಾಹಿತ್ಯಪ್ರೇಮದಿಂದಾಗಿ ಬಿಡುವಿನ ವೇಳೆಯಲ್ಲಿ ಅನೇಕ ಪುಸ್ತಕಗಳನ್ನು ಓದುವುದಲ್ಲದೆ ಕಥೆ ಕವನಗಳನ್ನು ರಚಿಸಿ ಪ್ರಕಟಣೆಗೆ ಕಳುಹಿಸುತ್ತಿದ್ದರು. ಅವರ ‘ಇಂದ್ರಜಾಲ’, ‘ಮಹೇಂದ್ರ ಜಾಲ’ ಎಂಬ ಎರಡು ಕಾದಂಬರಿಗಳು ಪ್ರಕಟವಾಗಿದ್ದು, ಇನ್ನೊಂದು ಕಥೆಯನ್ನು ಗಣ್ಯರೊಬ್ಬರು ಪಡೆದು ತಮ್ಮದೇ ಹೆಸರಿನಲ್ಲಿ ಪ್ರಕಟಿಸಿ ಮೋಸ ಮಾಡಿದ ಸಂಗತಿಯನ್ನೂ, ಇನ್ನೂ ಇತರ ವಿಷಯಗಳನ್ನೂ ಅರುಹಿದರು.
“ಒಬ್ಬ ಬಡಕಲಾವಿದನಂತೆಯೇ ಈ ಅಸಹಾಯಕ ಬಡ ಸಾಹಿತಿಯ ಬಗ್ಗೆ ನನಗೆ ಮರುಕವಾಯಿತು. ಅವರ ಸಾಹಿತ್ಯದ ಪ್ರೌಢಿಮೆಯನ್ನು ನಾನು ಮೆಚ್ಚಿದ್ದೆನಾದ್ದರಿಂದ ಇಂತಹವರಿಗೆ ಸಹಾಯ ಮಾಡುವುದು ನನ್ನ ಧರ್ಮವೆಂದೆಣಿಸಿ ನಾನು ಬಂದ ಉದ್ದೇಶ ವಿವರಿಸಿದೆನು. ನನ್ನ ಸ್ಥಾನದಲ್ಲಿ ಬೇರೊಬ್ಬರಿದ್ದಿದ್ದರೆ ತಮ್ಮ ಸ್ನೇಹಿತರು ಅಥವಾ ಕುಟುಂಬದವರಿಗೆ ಲಾಭವಾಗಲೆಂದು ಅಂತಹವರನ್ನು ಕರೆಸಿ ನೇಮಿಸುತ್ತಿದ್ದರೇನೋ. ನನಗೆ ಅಂತಹ ಬಾಂಧವ್ಯದ ಮೋಹವಿರದೆ ಯಾರಿಗಾದರೂ ಅರ್ಹತೆಗೆ ತಕ್ಕ ಫಲವಿರಬೇಕೆಂದೂ, ಸತ್ಯ, ನ್ಯಾಯ, ಧರ್ಮಗಳೇ ದೇವರ ಕೆಲಸವೆಂದೂ ನಂಬಿದ್ದುದರಿಂದ ಯಾರಾದರಾಗಲಿ ಅರ್ಹರಿಗೆ ತಕ್ಕ ಪ್ರೋತ್ಸಾಹ ಲಭಿಸಬೇಕೆಂಬ ದೃಷ್ಟಿಯಿಂದ ನಾನು ಮಾಡುತ್ತಿದ್ದ ಸಂಪಾದಕತ್ವದ ಹೊಣೆಯನ್ನು ನಿರ್ವಹಿಸಲು ಅವರನ್ನು ಒಪ್ಪಿಸಿದೆನು.
“ಅವರಿಗೆ ಹೇಗೋ ಏನೋ ಎಂಬ ಅಂಜಿಕೆ ಇದ್ದುದರಿಂದ ಭಯಪಡಬೇಕಾಗಿಲ್ಲವೆಂದೂ ನಾನೂ ಅವರ ನೆರವಿಗೆ ಇರುವೆನೆಂದೂ ಆಶ್ವಾಸನೆ ನೀಡಿದೆನು. ಅವರು ಮಾತನಾಡುವಾಗ ಉಗ್ಗು ಇದ್ದುದರಿಂದ ಸ್ವಾಭಾವಿಕವಾಗಿಯೇ ದೊಡ್ಡವರನ್ನು ಕಾಣಲು ಹಿಂದೇಟು ಹಾಕುತ್ತಿದ್ದರು. ಮರುದಿನ ಅವರನ್ನು ನಾನಿದ್ದಲ್ಲಿಗೆ ಬರಹೇಳಿ ಮಾಲೀಕರಲ್ಲಿಗೆ ಕರೆದುಕೊಂಡು ಹೋಗಿ ಭೇಟಿ ಮಾಡಿಸಿದೆನು. ಮಾಲೀಕರ ಒಪ್ಪಿಗೆ ಪಡೆದ ನಂತರ ನವಗಿರಿನಂದರು ಕನ್ನಡ ಚಂದಮಾಮದ ಸಂಪಾದಕರಾದರು. ಹೀಗೆ ಐದು ವರ್ಷಗಳ ಸಂಪಾದನೆಯ ಹೊಣೆಯಿಂದ ಮುಕ್ತನಾಗಿ ಮುಖಚಿತ್ರ ರಚನೆ ಮತ್ತು ಒಳಗಿನ ಕಥಾಚಿತ್ರಗಳ ರಚನೆಗೆ ನನ್ನ ಪೂರ್ಣ ಸಮಯ ವಿನಿಯೋಗವಾಯಿತು. ಅಂದಿನಿಂದ ಇಂದಿಗೂ ‘ನವಗಿರಿನಂದ’ರೇ ಕನ್ನಡ ಸಂಚಿಕೆಯ ಸಂಪಾದಕರಾಗಿ ಮುಂದುವರಿದು ಸಾಹಿತ್ಯ ಕ್ಷೇತ್ರದಲ್ಲಿ ಅಭಿವೃದ್ಧಿ ಹೊಂದಿ ಸಾಕಷ್ಟು ಹಣವನ್ನೂ ಸಂಪಾದಿಸಿ ಮದ್ರಾಸಿನಲ್ಲೇ ಈಗ ಸ್ವಂತ ಮನೆಯನ್ನೂ ಮಾಡಿ ಸಂಸಾರ ಸಮೇತ ಸುಖದಿಂದಿರುವುದಾಗಿ ತಿಳಿದುಬಂದಿದೆ. ನನ್ನ ಪಾಲಿಗೆ ಒಂದು ಸತ್ಕಾರ್ಯ ಮಾಡಿದ ಸಂತೋಷ ತೃಪ್ತಿ ಮಾತ್ರವಿದೆ. ಆದರೆ ಕಾರಣಾಂತರದಿಂದ ಅವರೊಡನೆ ಸಂಪರ್ಕ ಮಾತ್ರ ತಪ್ಪಿದೆ.”
ನವಗಿರಿನಂದ, ಮಾರಂಗ, ಮಧ್ವಗಿರಿ ಜಲಜನಾಭ ತನಯ, ಕಮಲಪ್ರಿಯ ಮುಂತಾದ ಹಲವಾರು ಹೆಸರುಗಳಿಂದ ಬರೆಯುತ್ತಿದ್ದ ಅವರ ನಿಜನಾಮಧೇಯ ಮಾದನಬೆಟ್ಟು ರಂಗರಾವ್. ಮೂಲಮನೆ ಇದ್ದದ್ದು, ಆಗ ಮದ್ರಾಸ್ ಪ್ರಾಂತಕ್ಕೆ ಸೇರಿದ್ದ ಈಗಿನ ದಕ್ಷಿಣ ಕನ್ನಡಜಿಲ್ಲ್ಲೆಯಲ್ಲಿ.
ರಂಗರಾವ್ ಅವರ ನಿಜಜೀವನದ ಕಥೆ, ಚಂದಮಾಮದ ಕಾಲ್ಪನಿಕ ರಮ್ಯಕಥೆಗಳನ್ನೂ ಮೀರಿಸುತ್ತದೆ ಎಂದರೆ ಅತಿಶಯೋಕ್ತಿಯೇನೂ ಆಗಲಾರದು.
೧೯೧೩ ಜನವರಿ ೩೦ರಂದು ಜನಿಸಿದ ಇವರದು ಕೆಳ ಮಧ್ಯಮವರ್ಗದ ಕುಟುಂಬ. ತಂದೆಯ ಹೆಸರು ಪದ್ಮನಾಭಯ್ಯ; ತಾಯಿ ಜಲಜ. ಚಿಕ್ಕಂದಿನಲ್ಲಿ ಗಣಿತ ಎಂದರೆ ಬಾಲಕನಿಗೆ ಸಿಂಹಸ್ವಪ್ನ. ಹಾಗಾಗಿ ವಿದ್ಯಾಭ್ಯಾಸ ಪ್ರಾಥಮಿಕ ನಾಲ್ಕನೆಯ ತರಗತಿಯವರೆಗೆ ಮಾತ್ರ. ಅವರ ತಂದೆ ಊರಿನ ಸಾಹುಕಾರರಲ್ಲಿ ಮಾಡಿದ ಹನ್ನೆರಡು ರೂಪಾಯಿ ಸಾಲದ ಹೊರೆಯನ್ನು ತೀರಿಸಲು ಹುಡುಗ ಒಂದುವರ್ಷ ಅವರ ಮನೆಯಲ್ಲಿ ಬಾಲಕಾರ್ಮಿಕನಾಗಿ ದುಡಿದು ತಿಂಗಳಿಗೆ ಒಂದು ರೂಪಾಯಿಯಂತೆ ಸಂಬಳ ತೆಗೆದುಕೊಂಡು ವರ್ಷದಲ್ಲಿ ತಂದೆಯ ಸಾಲ ತೀರಿಸಿದರು. ಸಾಹುಕಾರರ ಮನೆಯಲ್ಲಿ ಕೆಲಸ ಮಾಡುತ್ತಿದ್ದಾಗ ಯಜಮಾನರು ತಪ್ಪು ಮಾಡಿದ್ದೀಯಾ ಎಂದು ಬೆಂಕಿಯಲ್ಲಿ ಕಾಯಿಸಿದ ದಬ್ಬಣದಿಂದ ಕೈ ಮೇಲೆ ಬರೆ ಹಾಕಿದ್ದರು.
ಈ ಘಟನೆಯ ಪರಿಣಾಮವಾಗಿ ‘ಎಂದೂ ಸಾಲ ಮಾಡಬಾರದು; ಯಾರ ಹಂಗಿನಲ್ಲೂ ಜೀವಿಸಬಾರದು’ ಎಂದು ಸಂಕಲ್ಲಿಸಿ, ಈ ನಿಯಮಕ್ಕೆ ಚ್ಯುತಿಬಾರದಂತೆ ಕೊನೆಯವರೆಗೂ ಬದುಕಿ ತೋರಿಸಿದವರು ನವಗಿರಿನಂದ.
ಬಾಲ್ಯದಲ್ಲೇ ಮನೆಯಿಂದ ಹೊರಟ ಅವರು ಮೊದಲು ವಲಸೆ ಹೋದದ್ದು ಕೇರಳಕ್ಕೆ. ಅನಂತರ ಆಂಧ್ರದ ಗೂಡೂರು, ನೆಲ್ಲೂರು; ಕೊನೆಗೆ ಮದರಾಸು. ಪ್ರಾರಂಭದಲ್ಲಿ ಒಂದು ಕುದುರೆ ಕೊಟ್ಟಿಗೆಯಲ್ಲಿ ವಾಸವಿದ್ದ ಅವರು ಮಾಡುತ್ತಿದ್ದುದು ಅಡುಗೆ ಕೆಲಸ. ವಲಸೆಹೋದ ಪ್ರತಿ ತಮಿಳು, ತೆಲುಗು ಮನೆಯಲ್ಲೂ ಸಾಹಿತ್ಯಕ ವಾತವರಣವಿದ್ದುದು ರಂಗರಾಯರಿಗೆ ವರದಾನವಾಯಿತು. ತೆಲುಗು, ತಮಿಳನ್ನೂ ಓದಲು, ಬರೆಯಲು ಕಲಿತರು. ಅಡುಗೆ ಮಾಡುತ್ತಲೇ ಸಿಕ್ಕ ಅಲ್ಪ ಬಿಡುವಿನ ವೇಳೆಯಲ್ಲಿ ಕಥೆ, ಕವನ ಬರೆಯತೊಡಗಿದರು. ಜೊತೆಗೆ ಚಿತ್ರವನ್ನೂ ಬಿಡಿಸಲು ಕಲಿತರು.
ಒಬ್ಬ ಕನ್ನಡಿಗರು, ದಕ್ಷಿಣಕನ್ನಡದವರೇ ಮದರಾಸಿನಲ್ಲಿ ಶಿಕ್ಷಣಾಧಿಕಾರಿಗಳಾಗಿದ್ದರು. ರಂಗರಾಯರು ಅವರ ಮನೆಯಲ್ಲಿ ಅಡುಗೆಮಾಣಿ. ಒಮ್ಮೆ ಇವರು ಬರೆಯುತ್ತಿದ್ದ ಮಕ್ಕಳ ಕಥೆಗಳು, ಚಿತ್ರಗಳು ಯಜಮಾನರ ಕಣ್ಣಿಗೆ ಬಿತ್ತು. ‘ಕೊಡು ನೋಡೋಣ’ ಎಂದು ಕೈಗೆ ತೆಗೆದುಕೊಂಡರು. ಓದಿ ಅವರಿಗೆ ನಂಬಲೇ ಆಗಲಿಲ್ಲ. ಇರಲಿ ಎಂದು ತಮ್ಮ ಬಳಿಯೇ ಇಟ್ಟುಕೊಂಡರು.
ಮತ್ತೆ ವರ್ಷದ ನಂತರವೊ, ಯಾವಾಗಲೋ ಹುಡುಗ ಊರಿಗೆ ಹೋದಾಗ ಪಠ್ಯಪುಸ್ತಕವೊಂದು ಕಣ್ಣಿಗೆ ಬಿತ್ತು. ನೋಡಿದರೆ, ತಾನೇ ಬರೆದ ಮಕ್ಕಳ ಕಥೆಗಳು; ತಾನೇ ಬಿಡಿಸಿದ ಚಿತ್ರಗಳು! ಲೇಖಕರ ಜಾಗದಲ್ಲಿ ಮಾತ್ರ ತಾನು ಕೆಲಸ ಮಾಡುತ್ತಿದ್ದ ಮನೆಯ ವಿದ್ಯಾಧಿಕಾರಿಯ ಹೆಸರು!
‘ಯಾಕೆ ಹೀಗೆ ಮಾಡಿದಿರಿ?’ ಎಂದು ಕೇಳುವ ಧೈರ್ಯ ಅಡುಗೆ ಹುಡುಗನಿಗೆ ಎಲ್ಲಿಯದು! ಆದರೂ ಅಳುಕುತ್ತಲೇ ಮುಂದೊಂದು ದಿನ ಈ ವಿಚಾರ ಪ್ರಸ್ತಾಪಿಸಿದಾಗ, ‘ನಿನ್ನ ಹೆಸರು ಯಾರು ಕೇಳಿದ್ದಾರೆ? ಜನರಿಗೆ ಪರಿಚಯವಿಲ್ಲದವರ ಪುಸ್ತಕ, ಅದೂ ಪಠ್ಯಪುಸ್ತಕ, ಯಾರು ಪ್ರಕಟಿಸುತ್ತಾರೆ? ಇರಲಿ ಏನೀಗ?’ ಎಂದು ಹೇಳಿ ಕೈಗೆ ಹತ್ತು ರೂಪಾಯಿ ಇಟ್ಟರಂತೆ ಆ ಪುಣ್ಯಾತ್ಮ!
ಹೀಗೆ ಅಡುಗೆ ಕೆಲಸಮಾಡುತ್ತಲೇ ವಯಸ್ಸು ನಲವತ್ತರ ಗಡಿ ಸಮೀಪಿಸಿತು. ಸಾಹಿತ್ಯದಲ್ಲಿ ಇವರ ರಚನೆಗಳಿಂದಾಗಿ ಮದರಾಸಿನ ಕನ್ನಡಿಗರಕೂಟದಲ್ಲಿ ಹೆಸರು ಗಳಿಸಿದರು. ಬಹುಜನ ಪರಿಚಿತರಾದರು. ಆ ಸಮಯದಲ್ಲೇ, ಪ್ರಖ್ಯಾತ ಚಿತ್ರಕಲಾವಿದರಾದ ಎಂ.ಟಿ.ವಿ. ಆಚಾರ್ಯರ ಕಣ್ಣಿಗೆ ಬಿದ್ದರು.
ಅನಂತರ ಅವರು ಹಿಂದಿರುಗಿ ನೋಡಿದ್ದೇ ಇಲ್ಲ. ಚಂದಮಾಮ ಬಳಗದಲ್ಲಿ ಕನ್ನಡ ತೆಲುಗು ಎರಡೂ ಭಾಷೆಗಳಲ್ಲೂ ಕೃತಿರಚನೆ ಮಾಡಿ ಎರಡು ರಾಜ್ಯಸರ್ಕಾರಗಳಿಂದಲೂ ಪುರಸ್ಕೃತರಾಗಿರುವ ಹಿರಿಯ, ಜನಪ್ರಿಯ ಸಾಹಿತಿ ಶೇಷನಾರಾಯಣ ಅವರು ಕೆಲವು ಕಾಲ ನವಗಿರಿನಂದರ ಒಡನಾಡಿಯಾಗಿದ್ದವರು. ‘ಚಂದಮಾಮದ ನವಗಿರಿನಂದ’ ಎಂಬ ಇವರ ಕೃತಿಯನ್ನು ನಾ ಮೊಗಸಾಲೆಯವರ ನೇತ್ರತ್ವದ ಕಾಂತಾವರ ಕನ್ನಡ ಸಂಘ ಪ್ರಕಟಿಸಿದೆ. ಅವರು ಅದರಲ್ಲಿ ಚಿತ್ರಿಸಿರುವ ಒಂದು ಘಟನೆ:
‘ಆನಂದವಿಕಟನ್’ತಮಿಳಿನ ಅತ್ಯಧಿಕ ಪ್ರಸಾರದ ಜನಪ್ರಿಯ ವಾರಪತ್ರಿಕೆ. ಅದು ತನ್ನ ದೀಪಾವಳಿ ಸಂಚಿಕೆಯನ್ನು ಅದ್ಧೂರಿಯಗಿ ಹೊರತರುತ್ತಿತ್ತು; ದಕ್ಷಿಣಭಾರತದ ಇನ್ನುಳಿದ ಭಾಷೆಗಳಲ್ಲಿ ಇಂಥ ಸಂಚಿಕೆ ಬಂದಿಲ್ಲ ಎನ್ನುವ ಹಾಗೆ. ಜನ ಈ ಸಂಚಿಕೆಗೆ ಮುಗಿಬೀಳುತ್ತಿದ್ದರು. ಆಗ ನವಗಿರಿನಂದರ ಸಹೋದ್ಯೋಗಿಗಳು ‘ನಿಮ್ಮ ಅಷ್ಟದಿಕ್ಪಾಲಕರು ಚಿತ್ರಮಾಲೆ ಬಹಳ ಸೊಗಸಾಗಿದೆ, ಶಾಸ್ತ್ರೀಯವೂ ಆಗಿದೆ. ಅಷ್ಟಲ್ಲದೆ ಆನಂದವಿಕಟನ್ ಪತ್ರಿಕೆಯಲ್ಲಿ ಪ್ರಕಟಿಸಲು ಯೋಗ್ಯವೂ ಆಗಿದೆ. ಕಳಿಸಿ ನೋಡೋಣ’ ಎಂದು ಹುರಿದುಂಬಿಸಿದರು.
ಅದು ಅದ್ಧೂರಿಯಗಿ ‘ವಿಕಟನ್’ ಪತ್ರಿಕೆಯಲ್ಲಿ ಬಣ್ಣಬಣ್ಣಗಳಲ್ಲಿ ಪ್ರಕಟವಾಯಿತು. ತುಂಬ ಜನಗಳಿಂದ ಪ್ರಶಂಸೆಗಳೂ ಬಂದವು.
ದೀಪಾವಳಿ ಹಬ್ಬ ಇನ್ನೂ ಎರಡು ಮೂರು ದಿನಗಳು ಇವೆ ಎನ್ನುವಾಗ ಒಂದು ದಿನ. ಅವರ ಮನೆಯನ್ನು ಹುಡುಕಿಕೊಂಡು ಯಾರೋ ಬಂದರು. ಯಾರು ಎಂದು ವಿಚಾರಿಸಿದರೆ ‘ಆನಂದವಿಕಟನ್’ ಬಟವಾಡೆ ಮನುಷ್ಯ.
ಸಂಪಾದಕ, ಜೆಮಿನಿ ಸ್ಟುಡಿಯೋ ಒಡೆಯ ಎಸ್.ಎಸ್. ವಾಸನ್ ಒಬ್ಬ ದಿಲ್ದಾರ್ ಮನುಷ್ಯ. ಅದ್ಭುತ ವ್ಯಕ್ತಿ. ಉದಾರಿ. ಬರಹಗಾರ, ಚಿತ್ರಕಾರರ ಕಷ್ಟ-ನಷ್ಟಗಳನ್ನು ಚೆನ್ನಾಗಿ ಅರಿತವರು. ಹೀಗಾಗಿ ಹಬ್ಬಕ್ಕೆ ಮೊದಲೇ ಗೌರವಪ್ರತಿಯೂ, ಗೌರವಧನವೂ ಲೇಖಕರಿಗೆ ಸೇರಲಿ ಎಂದು ಕಳಿಸಿಕೊಟ್ಟಿದ್ದರು. ಆ ದಿನಗಳನ್ನು ನವಗಿರಿನಂದರು ಬಹಳ ಕೃತಜ್ಞತೆಯಿಂದ ಸ್ಮರಿಸುತ್ತಿದ್ದರು.
ತಾನು ಬರೆಯಬಲ್ಲೆ, ಸಮರ್ಥವಾಗಿ ಚಿತ್ರಿಸಬಲ್ಲೆ ಎನ್ನುವ ಧೈರ್ಯ ದಿನದಿಂದ ದಿನಕ್ಕೆ ವೃದ್ಧಿಸಿ ನವಗಿರಿನಂದ ಧಾರಾಳವಾಗಿ ಬರೆಯತೊಡಗಿದರು.
ಅನಂತರದ ದಿನಗಳಲ್ಲಿ ವಡಪಳನಿಯ ಚಂದಮಾಮ ಕಾರ್ಯಾಲಯಕ್ಕೆ ಹತ್ತಿರದಲ್ಲೇ ಸ್ವಂತ ಮನೆ ಮಾಡಿಕೊಂಡರು. ಚಂದಮಾಮ ಕಥಾ ಮಾಂತ್ರಿಕ ದಾಸರಿ ಸುಬ್ರಹ್ಮಣ್ಯಂ, ಎಂ.ಟಿ.ವಿ. ಆಚಾರ್ಯ ಮತ್ತು ಇವರ ಮನೆ ಅಕ್ಕಪಕ್ಕದಲ್ಲೇ ಇದ್ದವು .
ರಾಯರು ಕೆಲಸ ಮಾಡುತ್ತಿದ್ದ ಪತ್ರಿಕೆ ವಾಹಿನಿ ಸ್ಟುಡಿಯೋ ಮಾಲೀಕರಾದ ನಾಗಿರೆಡ್ಡಿ ಚಕ್ರಪಾಣಿ ಅವರಿಗೆ ಸೇರಿದ್ದು. ಚಂದಮಾಮ ಬಳಗಕ್ಕೆ ಸೇರಿದ ಎಲ್ಲ ನೌಕರರನ್ನೂ ಅವರು ಚೆನ್ನಾಗಿಯೇ ನಡೆಸಿಕೊಳ್ಳುತ್ತಿದ್ದರು; ಎಲ್ಲ ಸೌಕರ್ಯಗಳನ್ನೂ ಒದಗಿಸುತ್ತಿದ್ದರು. ರಂಗರಾವ್ ಅವರಂತೂ ಒಂದು ಪುಸ್ತಕ ಬೇಕು ಎಂದರೆ ಸಾಕು. ದೇಶದ ಯಾವುದೇ ಭಾಗದಲ್ಲಿ ಆ ಕೃತಿ ದೊರಕುತ್ತಿದ್ದರೂ ಒಂದೆರಡು ದಿನಗಳಲ್ಲಿ ಅದು ಕೈ ಸೇರುತ್ತಿತ್ತು. ಚಂದಮಾಮಕ್ಕೆ ಅದರ ಆವಶ್ಯಕತೆ ಇದೆಯೋ ಇಲ್ಲವೋ ಎಂದು ಮಾಲೀಕರು ಕೇಳುತಿರಲಿಲ್ಲ.
ಮೊದಲೇ ಹೇಳಿದ ಹಾಗೆ ನವಲಗಿರಿನಂದ ಅವರು ಅನೇಕ ಹೆಸರುಗಳಲ್ಲಿ ಬರೆಯುತ್ತಿದ್ದರು. ‘ಪರೋಪಕಾರಿ ಪಾಪಣ್ಣ’, ‘ಗುಂಡು ಭೀಮಣ್ಣ’ನ ಕಥೆಗಳ ಲೇಖಕರು ‘ಸುನಂದ’. ಆದರೆ ಇವುಗಳ ಕರ್ತೃವೂ ರಂಗರಾವ್ ಅವರೇ. ಸುನಂದ ಎಂಬುದು ಅವರ ಮಗಳ ಹೆಸರು! ಪಂಚತಂತ್ರದ ಮಿತ್ರಭೇದ, ಮಿತ್ರಲಾಭ, ಕಾಕೋಲೂಕೀಯ, ಲಬ್ದ ಪ್ರಣಾಶ ಮತ್ತು ಅಪರೀಕ್ಷಿತಕಾರಕ ಈ ಐದೂ ಕಥೆಗಳನ್ನು ಕವನ ರೂಪದಲ್ಲಿ ಬರೆದವರು ‘ಮಧ್ವಗಿರಿ ಜಲಜನಾಭ ತನಯ’. ಮಧ್ವಗಿರಿ ಎಂದರೆ ಮಾದನ ಬೆಟ್ಟು; ಜಲಜ(ತಾಯಿ) ನಾಭ (ತಂದೆ ಪದ್ಮನಾಭಯ್ಯ) ತನಯ! ಚಂದಮಾಮದ ಕಥೆಗಳ ಗಂಧರ್ವಲೋಕದಲ್ಲಿ ವಿಹರಿಸುತ್ತಿದ್ದ ಅವರಿಗೆ ಮಾದನಬೆಟ್ಟು ಮಧ್ವಗಿರಿಯಾಗಿ ಕಾಣಿಸಿದ್ದರಲ್ಲಿ ಆಶ್ಚರ್ಯವೇನಿಲ್ಲ!
ಅವರು ಪದ್ಯರೂಪದಲ್ಲಿ ಬರೆದ ಪಂಚತಂತ್ರದ ಕಥೆ ಈಗಲೂ ನೆನಪಿದೆ;
ಹಿಂದೋರ್ವ ರಾಜನಲಿ
ಕೋತಿಯೊಂದಿತ್ತು
ರಾಜನನು ನೆಹದಿಂ
ಸೇವಿಸುತಲಿತ್ತು
ಒಮ್ಮೆ ರಾಜನು ನಿದ್ರಿ
ಸಿದ್ದ ವೇಳೆಯಲಿ
ಬೀಸುತಿತ್ತಾ ಕೋತಿ
ಬೀಸಣಿಗೆ ಕೈಲಿ
ಅಡಿಗಡಿಗೆ ನೊಣವೊಂದು
ರಾಜನೆದೆಯಲಿ
ಬಂದೆರಗೆ ಕಾಣುತಲೆ
ಕೋತಿ ಕೋಪದಲಿ
ಬದಿಯಲಿಹ ಕತ್ತಿಯನು
ಎತ್ತಿ ದೊರೆ ಎದೆಗೆ
ಕುತ್ತಲಾ ನೊಣ ಹಾರಿ
ಸತ್ತ ದೊರೆ ಕಡೆಗೆ
ನವಗಿರಿನಂದರು ರಚಿಸಿದ ‘ಪರೋಪಕಾರಿ ಪಾಪಣ್ಣ’ ಮೊದಲು ಪ್ರಕಟವಾಗಿದ್ದು ತೆಲುಗಿನಲ್ಲಿ. ಅವರೇ ಅದನ್ನು ಕನ್ನಡಕ್ಕೆ ಅನುವಾದಿಸಿದರು. ಅನಂತರ ಚಂದಮಾಮದ ಎಲ್ಲ ಆವೃತ್ತಿಗಳಲ್ಲೂ ಅದು ಪ್ರಕಟವಾಗಿ ಜನಮೆಚ್ಚುಗೆ ಗಳಿಸಿತು. ಚಂದಮಾಮದ ಎಲ್ಲ ಭಾಷೆಗಳಲ್ಲಿಯೂ ಪ್ರಕಟವಾದ ಹೆಗ್ಗಳಿಕೆ ಈ ಕಥೆಗಳಿಗೆ ಮಾತ್ರ ಎನ್ನುವುದೊಂದು ವಿಶೇಷ. ಪಾಪಣ್ಣನ ಕಥೆಗಳು ಜನಮನದಲ್ಲಿ ಬೇರೂರಿ ಎಷ್ಟು ಪ್ರಸಿದ್ಧಿ ಪಡೆದವೆಂದರೆ ಈವತ್ತಿಗೂ, ಯಾರಾದರೂ ತಮಗೇ ಸಾಲದಿರುವಾಗ ಬೇರೆಯವರಿಗೆ ಸಹಾಯಮಾಡಲು ಹೋದರೆ ಅಂತಹವರನ್ನು ‘ಅವನು ಬಿಡು; ಪರೋಪಕಾರಿ ಪಾಪಣ್ಣ’ ಎಂದು ಹೇಳುವ ವಾಡಿಕೆಯಿದೆ!
ಕಥೆ, ಪದ್ಯಗಳು ಮಾತ್ರವಲ್ಲದೆ ಇವರ ವ್ಯಂಗ್ಯಚಿತ್ರಗಳೂ ಪ್ರಕಟವಾಗುತ್ತಿದ್ದವು. ೧೯೫೦-೬೦ರ ಕಾಲದ ಚಂದಮಾಮ ಸಂಚಿಕೆಗಳ ಕೊನೆಯ ಎರಡು ಪುಟಗಳಲ್ಲಿ ಪ್ರಕಟವಾಗುತ್ತಿದ್ದ ‘ವಾಸು-ಗೋಪಿ’ – ಕಾಮಿಕ್ ಮಾದರಿ ಬರಹದ ಎಲ್ಲ ಚಿತ್ರಗಳೂ ರಂಗರಾವ್ ಅವರೇ ಬರೆದಿದ್ದೆಂದೂ ಅನೇಕರಿಗೆ ತಿಳಿಯದಿರಲಿಲ್ಲ. ಚಿತ್ರದಲ್ಲಿ ಅವರು ಹೆಸರು ಹಾಕುತ್ತಿರಲಿಲ್ಲ.
ಕನ್ನಡದಲ್ಲಿ ರಂಗರಾವ್ ಅವರು ಬರೆದಷ್ಟು ಮಕ್ಕಳ ಕಥೆಗಳನ್ನು ಮತ್ತಾವ ಲೇಖಕನೂ ಬರೆದ ಉದಾಹರಣೆಗಳಿಲ್ಲ. ಸಾವಿರಕ್ಕೂ ಹತ್ತಿರ. ಜೊತೆಗೆ ಚಿತ್ರಕಥಾ ಕವನಗಳು. ಚಂದಮಾಮದ ಮೊದಲೆರಡು ಪುಟಗಳಲ್ಲಿ ಅಚ್ಚಾಗುತ್ತಿದ್ದ ಎಲ್ಲ ಚಿತ್ರಕವನಗಳೂ ಹೆಚ್ಚುಕಡಮೆ ನವಗಿರಿನಂದರ ರಚನೆಗಳೇ!
ಅಷ್ಟೇ ಅಲ್ಲ. ಅವರು ಹಲವಾರು ಕಾದಂಬರಿಗಳನ್ನೂ, ನೂರಕ್ಕೂ ಹೆಚ್ಚು ಸಣ್ಣಕತೆಗಳನ್ನೂ ಬರೆದಿದ್ದಾರೆ. ಶೇಷನಾರಾಯಣ ಅವರ ಕೃತಿ ಮತ್ತು ಡಾ. ಬಿ. ಜನಾರ್ದನಭಟ್ ಅವರು ಬರೆದ ರಂಗರಾಯರ ಕೃತಿಗಳ ಬಗೆಗಿನ ಪರಿಚಯಾತ್ಮಕ ವಿಮರ್ಶೆಗಳಲ್ಲಿ ಈ ಬಗ್ಗೆ ವಿವರ ಇದೆ. ೧೯೪೮ರಲ್ಲಿ ಅವರ ಇಂದ್ರಜಾಲ, ರಾಣಿಅಜ್ಞತಾ, ಪ್ರಸಾದ, ಪ್ರೇಮಾವತಿ, ವಿಷಮವೃತ್ತ ಮೊದಲಾದವು ಸಾಮಾಜಿಕ ಕಾದಂಬರಿಗಳು; ಕಾಲಾ ಬಜಾರ್, ಹಂತಕರು ಯಾರು, ಕೊಲೆಗಾರ ಮುಂತಾದವು ಪತ್ತೇದಾರಿ ಕಾದಂಬರಿಗಳು. ಅವರು ಬರೆದ ಮಕ್ಕಳ ಕಥೆಗಳ ಹತ್ತಕ್ಕೂ ಹೆಚ್ಚು ಕೃತಿಗಳನ್ನು ನವಕರ್ನಾಟಕ ಪ್ರಕಾಶನದವರು ಹೊರತಂದಿದ್ದಾರೆ.
ನವಗಿರಿನಂದ ೧೯೫೦ರಲ್ಲಿ ಚಂದಮಾಮದ ಸಂಪಾದಕರಾಗಿ ಸೇರಿದವರು ೧೯೯೦ರಲ್ಲಿ ನಿವೃತ್ತರಾದರು. ನಲವತ್ತು ವರ್ಷಗಳ ಕಾಲ, ಹೆಚ್ಚುಕಡಮೆ ತಮ್ಮ ೮೦ನೇ ವಯಸ್ಸಿನವರೆಗೆ ಒಬ್ಬ ಉದ್ಯೋಗಿ ಒಂದೇ ಪತ್ರಿಕೆಯ ಸಂಪಾದಕರಾಗಿ ಕೆಲಸ ನಿರ್ವಹಿಸಿದ ಉದಾಹರಣೆ ಭಾರತೀಯ ಪತ್ರಿಕೋದ್ಯಮದಲ್ಲಿ ವಿರಳಾತಿವಿರಳ.
ಚಂದಮಾಮದ ಬರಹ, ಚಿತ್ರಗಳ ಮೂಲಕ ಲಕ್ಷಾಂತರ ಜನರ ಹೃದಯವನ್ನು ಸೂರೆಗೊಂಡ ನವಗಿರಿನಂದ ಅವರಿಗೆ ಅಲ್ಲಲ್ಲಿ ಸಂಮಾನಗಳು ನಡೆದಿವೆ. ಆದರೆ ಅವರದು ಅದ್ಭುತ ಪ್ರತಿಭೆ. ಮಕ್ಕಳ ಸಾಹಿತ್ಯಕ್ಕೆ ಅವರು ನೀಡಿದ ಸೇವೆ ಅಪೂರ್ವವಾದುದು. ಅವರನ್ನು ಕರ್ನಾಟಕ ಸರ್ಕಾರವಾಗಲಿ, ಕನ್ನಡ ಜನತೆಯಾಗಲಿ ಸೂಕ್ತವಾಗಿ ಗುರುತಿಸಿ ಗೌರವಿಸಿರುವಂತೆ ಕಾಣುವುದಿಲ್ಲ. ನವಗಿರಿನಂದ ಅವರು ಕರ್ನಾಟಕದ ಆಚೆ ವಾಸಿಸುತ್ತಿದ್ದುದೂ, ಚಂದಮಾಮ ಬರಹಗಳನ್ನು ಸಾಹಿತ್ಯವಲಯದವರು ಗಂಭೀರವಾಗಿ ಪರಿಗಣಿಸದೇ ಇದ್ದುದೂ ಇದಕ್ಕೆ ಕಾರಣವಾಗಿರಬಹುದು.
ಕನ್ನಡ ಸಾಹಿತ್ಯ ಲೋಕದ ಸಂಶೋಧಕರೂ, ಹಿರಿಯ ವಿದ್ವಾಂಸರೂ ಆದ ಟಿ.ವಿ. ವೆಂಕಟಾಚಲಶಾಸ್ತ್ರಿ ಅವರು ‘ನಾನು ಪ್ರತಿದಿನ ಮಲಗುವ ಮೊದಲು ಚಂದಮಾಮದ ಒಂದು ಕಥೆಯನ್ನಾದರೂ ಓದದೇ ಮಲಗಿಕೊಳ್ಳುವುದಿಲ್ಲ’ ಎಂದು ಹೇಳಿದ್ದನ್ನು ಅವರ ನಿಕಟವರ್ತಿಗಳು ಹೇಳಿದ್ದುಂಟು.
(ಚಿತ್ರ: ಚಿದಂಬರ ಕಾಕತ್ಕರ್)