ಕಳೆದ ಐದೂವರೆ ದಶಕಗಳಿಂದ ವಿಜಾಪುರದ ಜ್ಞಾನಯೋಗಾಶ್ರಮವನ್ನು ವಾಸ್ತವ್ಯವನ್ನಾಗಿಸಿಕೊಂಡಿದ್ದ ಸಿದ್ಧೇಶ್ವರಸ್ವಾಮಿಗಳು ತಮ್ಮ ಅಷ್ಟೂ ಸಮಯವನ್ನು ಧ್ಯಾನ, ಅಧ್ಯಯನ, ಚಿಂತನೆ, ಪ್ರವಚನಗಳಿಗೆ ವಿನಿಯೋಗಿಸುತ್ತಿದ್ದರು. ಸರಳಜೀವಿಯಾಗಿದ್ದ ಸ್ವಾಮಿಗಳು ಎಂದೂ ಯಾರಿಂದಲೂ ಏನನ್ನೂ ಸ್ವೀಕರಿಸದೆ ಸತತವೂ ಭಗವದ್ಭಾವದಲ್ಲಿ ಆತ್ಮಾರಾಮರಾಗಿರುತ್ತಿದ್ದುದು ಜನಜನಿತವೇ ಆಗಿತ್ತು. ಅವರಿಗಿದ್ದ ‘ಆಸ್ತಿ’ಯೆಂದರೆ ಅವರು ಸತತ ಅಧ್ಯಯನ–ಚಿಂತನೆಗಳಿಂದ ಗಳಿಸಿಕೊಂಡಿದ್ದ ಜ್ಞಾನರಾಶಿಯಷ್ಟೆ. “ಇಂಗ್ಲಿಷ್ ಬಾರದ ನಾನು ಹೆಚ್ಚು ಓದಿಕೊಳ್ಳಲಾಗಲಿಲ್ಲ. ನೀನಾದರೋ ಪ್ರತಿಭಾಶಾಲಿ. ಧಾರ್ಮಿಕತೆಯ ಸಂದೇಶವನ್ನು ನೀನು ಸಾಗರಗಳಾಚೆಗೂ ತಲಪಿಸಬೇಕು” ಎಂದಿದ್ದ ಗುರುಗಳಾದ ಶ್ರೀ ಮಲ್ಲಿಕಾರ್ಜುನಸ್ವಾಮಿಗಳ ಆದೇಶವನ್ನು ಸಿದ್ಧೇಶ್ವರಸ್ವಾಮಿಗಳು ಅನುಪಮವಾಗಿ ಈಡೇರಿಸಿದರು.
ಅವರನ್ನು ‘ಶತಮಾನದ ಸಂತ’, ‘ನಡೆದಾಡುವ ದೇವರು’ ಎಂದೆಲ್ಲ ಜನರು ಕರೆದರು. ಇಂತಹ ನುಡಿಗಟ್ಟುಗಳಲ್ಲಿ ಸ್ವಲ್ಪಮಟ್ಟಿನದಾದರೂ ಉತ್ಪ್ರೇಕ್ಷೆಯೊ ಔಪಚಾರಿಕತೆಯೊ ಆಲಂಕಾರಿಕತೆಯೊ ಸೇರಿಕೊಂಡಿರುವುದು ವಿರಳವಲ್ಲ. ಆದರೆ ವಿಜಾಪುರದ ಜ್ಞಾನಯೋಗಾಶ್ರಮದಲ್ಲಿ ನೆಲೆನಿಂತಿದ್ದ ಪೂಜ್ಯ ಶ್ರೀ ಸಿದ್ಧೇಶ್ವರಸ್ವಾಮಿಗಳ ವಿಷಯದಲ್ಲಿ ಇಂತಹ ಬಣ್ಣನೆಗಳು ಅವರ ಸಮುನ್ನತಿಯ ಹಿನ್ನೆಲೆಯಲ್ಲಿ ತೀರಾ ಅಪರ್ಯಾಪ್ತವೆಂದೇ ಎಲ್ಲರಿಗೂ ಅನ್ನಿಸುತ್ತಿತ್ತು. ಏಕೆಂದರೆ ಅವರ ಮನೋವಾಕ್ಕಾಯಗಳ ಕಣಕಣದಿಂದ ಹೊರಸೂಸುತ್ತಿದ್ದ ಅಧ್ಯಾತ್ಮತೇಜದೆದುರು ಶಬ್ದಗಳು ಸೊರಗುತ್ತಿದ್ದವು. ಅವರ ನಡೆಯಲ್ಲಾಗಲಿ ನುಡಿಯಲ್ಲಾಗಲಿ ಆಂತರ್ಯದಲ್ಲಾಗಲಿ ಅಧ್ಯಾತ್ಮೇತರವಾದ ಯಾವುದಕ್ಕೂ ಎಡೆಯೇ ಇರಲಿಲ್ಲ; ಅಷ್ಟು ಪಾರದರ್ಶಕವಾಗಿತ್ತು ಅವರ ತತ್ತ್ವನಿಶ್ಚಲತೆ. ಲೋಕದ ನಡುವೆ ಇದ್ದೂ ಪರಾಕಾಷ್ಠ ವಿರಕ್ತಭಾವದಲ್ಲಿ ಹಲವರು ಸಾಧಕರು ಇರುತ್ತಾರೆಂದು ಗ್ರಂಥಗಳಲ್ಲಿ ಹೇಳಿಕೆಗಳುಂಟು. ಆದರೆ ಆತ್ಯಂತಿಕ ವಿರಕ್ತಿಯ ಮೂರ್ತಸ್ವರೂಪರಾಗಿದ್ದವರು ನಾವು ಕಣ್ಣಿಂದ ನೋಡಿದ, ನಮ್ಮ ನಡುವೆಯೇ ಇದ್ದ ಸಿದ್ಧೇಶ್ವರಸ್ವಾಮಿಗಳು.
ಸ್ವಾಮಿಗಳ ಬಾಯಿಂದ ಹೊಮ್ಮಿದ ಒಂದೊಂದು ಮಾತೂ ಸ್ವಾನುಭವದಿಂದಲೂ ಅಂತರ್ನಿಶ್ಚಯದಿಂದಲೂ ಉಗಮಗೊಂಡದ್ದೆಂಬುದು ಅತಿಸಾಮಾನ್ಯರಿಗೂ ಗ್ರಹಿಕೆಗೆಟಕುತ್ತಿತ್ತು. ಯಾವುದೇ ಮಾತುಗಳನ್ನು ಯಾರು ಬೇಕಾದರೂ ಬಳಸಿಯಾರು. ಆದರೆ ಮಾತುಗಳಿಗೆ ನೈಜ ಘನತೆ ಸಿದ್ಧಿಸುವುದು ಅವುಗಳ ಹಿಂದೆ ತಪಸ್ಸು ಇದ್ದರೆ ಮಾತ್ರ.
ಹೃದಯದ ಭಾಷೆ
ಈ ತಥ್ಯವು ಸಿದ್ಧೇಶ್ವರಸ್ವಾಮಿಗಳ ಲಕ್ಷಲಕ್ಷ ಭಕ್ತರ ಮನವರಿಕೆಗೆ ಬಂದಿತ್ತು. ಅವರ ಮಾತಿಗೂ ಜೀವನಕ್ರಮಕ್ಕೂ ನಡುವೆ ಅತ್ಯಲ್ಪ ಅಂತರವೂ ಇರಲಿಲ್ಲ. ಅವರ ಪ್ರವಚನಗಳು ಇರುತ್ತಿದ್ದುದಾದರೋ ಜನರ ಬಳಕೆಯ ಸರಳ ಆಡುಮಾತುಗಳಲ್ಲಿ. ಇಂತಹ ಸರಳತೆ ಬರಬಹುದಾದ್ದು ಆಂತರಂಗಿಕ ನಿಶ್ಚಯದಿಂದ ಮತ್ತು ವಿಷಯದ ಮೇಲಿನ ಪ್ರಭುತ್ವದಿಂದ ಮಾತ್ರ. ವ್ಯಾವಹಾರಿಕ ಲೋಕದಲ್ಲಿ ಒಂದು ಸಣ್ಣ ವಿಷಯವನ್ನು ಇತರರಿಗೆ ಸರಿಯಾಗಿ ಸಂವಹನಗೊಳಿಸಲು ಜನರು ಅಗಾಧ ಶ್ರಮ ತೊಡಗಿಸುವುದನ್ನು ನೋಡುತ್ತೇವೆ. ಆದರೆ ಸಿದ್ಧೇಶ್ವರಸ್ವಾಮಿಗಳಿಗೆ ಇಂತಹ ಕ್ಲೇಶ ಎದುರಾದದ್ದೇ ಇಲ್ಲ. ಏಕೆಂದರೆ ಅವರ ಒಂದೊಂದು ಮಾತೂ ಹೊರಡುತ್ತಿದ್ದುದು ಹೃದಯದಾಳದಿಂದ; ಅದು ನೇರವಾಗಿ ತಲಪುತ್ತಿದ್ದುದು ಕೇಳುಗರ ಹೃದಯವನ್ನು.
ಹೃದಯದ ಭಾಷೆಗೆ ಯಾವುದೇ ನಿರ್ಬಂಧಗಳು ಇರುವುದಿಲ್ಲ; ಅದು ಸದ್ಯೋಜಾತ ಮತ್ತು ವೇಗಗಾಮಿ. ಪ್ರಜ್ಞಾನದ ಹಿಮನದಿಯಲ್ಲಿ ಉದಿಸಿ ಹೊರಸೂಸುವ ಅದು ಒಡನೆಯೇ ಶ್ರೋತೃಗಳ ಅಂತರಂಗವನ್ನು ತಲಪಿ ಜ್ಯೋತಿಯನ್ನು ಪಸರಿಸುತ್ತದೆ. ಹೀಗೆ ಸ್ವಾಮಿಗಳಿಂದ ನಿರಂತರ ನಡೆದ ಜ್ಞಾನಪ್ರಸರಣಕ್ಕೆ ಅವಲಂಬವಾಗಿದ್ದುದು ಅಂತಜ್ಯೋðತಿಯ ಪ್ರಖರತೆ. ಅವರದು ‘ಹಿತ-ಮಿತ-ಮೃದು-ವಚನ’. ಆದರೂ ಆ ಬೋಧನೆಯಲ್ಲಿ ಭಾಷೆಯ ಸೊಗಸಿಗಾಗಲಿ ಶೈಲಿಯ ಶಕ್ತಿವಂತಿಕೆಗಾಗಲಿ ಉಪಮೆಗಳ ಸರಸತೆಗಾಗಲಿ ಉದ್ಧೃತಗಳ ಔಚಿತ್ಯಕ್ಕಾಗಲಿ ಎಂದೂ ಕೊರತೆಯಾಗುತ್ತಿರಲಿಲ್ಲ. ಭೌತಶಾಸ್ತ್ರ-ಖಗೋಲಶಾಸ್ತ್ರಾದಿ ಜ್ಞಾನಾಂಗಗಳೂ ಅವರಿಗೆ ಸುಪರಿಚಿತ. ಉಪನಿಷದ್ವಾಙ್ಮಯವಂತೂ ಅವರಿಗೆ ಉಸಿರೇ ಆಗಿತ್ತು. ವಚನಸಾಹಿತ್ಯ ಸ್ವಂತ ವಾರಸಿಕೆಯೇ ಆಗಿತ್ತು. ಈ ಕಾರಣದಿಂದಾಗಿಯೇ ಅವರ ಪ್ರವಚನಗಳು ಲಿಪೀಕರಣಗೊಂಡು ಮುದ್ರಿತರೂಪ ಪಡೆದಿರುವ ನೂರರಷ್ಟು ಸಂಕಲನಗಳೂ ವ್ಯಾಪಕ ಪ್ರಸಾರ ಪಡೆದವು.
ನಿರ್ಲಿಪ್ತಿ
ಆದರೆ ಅವರ ಮಾತು-ಬರಹಗಳಿಗಿಂತ ನೂರುಪಾಲು ಹೆಚ್ಚಾಗಿ ಜನರನ್ನು ಸಮ್ಮೋಹನಗೊಳಿಸಿದ್ದುದು ಅವರ ಸ್ಫಟಿಕೋಪಮ ವ್ಯಕ್ತಿತ್ವ ಮತ್ತು ನಿರ್ಲಿಪ್ತ ಬದುಕು – ಎಂದು ಹೇಳಲೇಬೇಕು. ಮಾತುಗಳ ಜಾಣ್ಮೆಯಿಂದಲೊ ಬರಹದ ಚಮಕಿನಿಂದಲೊ ಒಂದಷ್ಟು ಜನರನ್ನು ಆಕರ್ಷಿಸಬಲ್ಲವರು ಹಲವರಿದ್ದಾರು. ಆದರೆ ಪೂರ್ಣ ವೈರಾಗ್ಯ ಹೇಗಿರುತ್ತದೆಂಬುದನ್ನು ಪ್ರಕಟೀಕರಿಸಿದ ಸಿದ್ಧೇಶ್ವರಸ್ವಾಮಿಗಳಂತಹ ಸಿದ್ಧಪುರುಷರು ಶತಮಾನದಲ್ಲಿ ಬೆರಳೆಣಿಕೆಯಷ್ಟು ಮಾತ್ರ ಕಾಣಸಿಗುತ್ತಾರೆ.
ಮುಮುಕ್ಷುಗಳು ಕಷ್ಟಪಟ್ಟು ಅಭ್ಯಾಸ ಮಾಡಿಕೊಳ್ಳುವ ‘ಅಪರಿಗ್ರಹ’ ಸಿದ್ಧೇಶ್ವರಸ್ವಾಮಿಗಳಿಗೆ ಸ್ವಭಾವಗತವೇ ಆಗಿತ್ತು. ಕೇಂದ್ರಸರ್ಕಾರ ಈಗ್ಗೆ ನಾಲ್ಕು ವರ್ಷ ಹಿಂದೆ ನೀಡಲಿಚ್ಛಿಸಿದ್ದ ‘ಪದ್ಮಶ್ರೀ’ ಪ್ರಶಸ್ತಿಯನ್ನು ನಮ್ರವಾಗಿ ತಿರಸ್ಕರಿಸಿ “ಸಂನ್ಯಾಸಿಯಾದ ನಾನು ಪ್ರಶಸ್ತಿಯನ್ನು ಹೇಗೆ ಸ್ವೀಕರಿಸಲಿ?” ಎಂದಿದ್ದರು. ಕರ್ನಾಟಕ ವಿಶ್ವವಿದ್ಯಾಲಯ ನೀಡಬಯಸಿದ ಗೌರವ ಡಾಕ್ಟೊರೇಟ್, ಕರ್ನಾಟಕ ಸರ್ಕಾರ ಜ್ಞಾನಯೋಗಾಶ್ರಮಕ್ಕೆ ನೀಡಿದ ಅನುದಾನ, ವಿದೇಶಗಳಿಂದ ಹರಿದು ಬರುತ್ತಿದ್ದ ದೊಡ್ಡ ಪ್ರಮಾಣದ ಹಣ, ಅನ್ಯಾನ್ಯ ಸಂಸ್ಥೆಗಳು ಕೊಡಲು ಇಚ್ಛಿಸಿದ ಪ್ರಶಸ್ತಿಗಳು – ಎಲ್ಲವನ್ನೂ ಕ್ಷಣಮಾತ್ರವೂ ಹಿಂದೆಗೆಯದೆ ನಿರಾಕರಿಸಿದರು ಸ್ವಾಮಿಗಳು.
ಗುರುಸಾನ್ನಿಧ್ಯ
ಸಿದ್ಧೇಶ್ವರಸ್ವಾಮಿಗಳನ್ನು (೨೪.೮.೧೯೪೦ -೨.೧.೨೦೨೩) ‘ಆಗರ್ಭ ವಿರಕ್ತ’ರೆಂದೇ ಗಣಿಸಬಹುದು. ಮೂಲತಃ ವಿಜಯಪುರ ಜಿಲ್ಲೆಯ ಬಿಜ್ಜರಗಿ ಗ್ರಾಮಕ್ಕೆ ಸೇರಿದ ಓಗೆಪ್ಪ ಬಿರಾದಾರ-ಸಂಗಮ್ಮ ದಂಪತಿಗಳ ಆರು ಮಕ್ಕಳಲ್ಲಿ ಹಿರಿಯ ಮಗ ಸಿದ್ಧಗೊಂಡಪ್ಪನೇ ಉತ್ತರೋತ್ತರ ‘ಸಿದ್ಧೇಶ್ವರಸ್ವಾಮಿ’ಗಳಾದದ್ದು. ಹುಟ್ಟಿನಿಂದಲೇ ವೈರಾಗ್ಯಪ್ರವಣತೆಯಿದ್ದ ಸಿದ್ಧಗೊಂಡಪ್ಪ ಬಾಲ್ಯದ ದಿನಗಳಲ್ಲಿಯೆ ವಿಜಯಪುರದ ಶಿವಾನುಭವಮಂಟಪದಲ್ಲಿ ವಿರಾಜಮಾನರಾಗಿದ್ದು ‘ವೇದಾಂತ-ಕೇಸರಿ’ ಎಂದೇ ವ್ಯವಹೃತರಾಗುತ್ತಿದ್ದ ಶ್ರೀ ಮಲ್ಲಿಕಾರ್ಜುನಸ್ವಾಮಿಗಳ ಅಧ್ಯಾತ್ಮ ಪ್ರವಚನಗಳಿಂದ ಅತಿಶಯವಾಗಿ ಪ್ರಭಾವಗೊಂಡ. ಸ್ವಂತ ಊರಿಗೆ ಮರಳಿ ವ್ಯಾಸಂಗವನ್ನು ಪೂರ್ಣಗೊಳಿಸುವಂತೆ ಗುರುಗಳೇ ಸೂಚಿಸಿದರೂ ಗುರುಸಾನ್ನಿಧ್ಯಕ್ಕೆ ಮಾರುಹೋಗಿ ಮತ್ತೆಮತ್ತೆ ಮಠಕ್ಕೆ ವಾಪಸಾಗುತ್ತಿದ್ದ. ಅವನ ಸಮರ್ಪಿತತೆಯ ಅದಮ್ಯತೆಯನ್ನು ಕಂಡ ಗುರುಗಳು ಅವನನ್ನು ಮಠದಲ್ಲಿರಿಸಿಕೊಂಡರು; ತಮ್ಮ ನಿರಂತರ ಪ್ರವಚನಪ್ರವಾಸಗಳಲ್ಲಿ ಸಂಗಡ ಒಯ್ಯತೊಡಗಿದರು. ಹಾಗೆ ೧೯೫೭ರಲ್ಲಿ ಚಡಚಣ ಪ್ರವಾಸದಲ್ಲಿದ್ದಾಗ ಗುರುಗಳು ಸಿದ್ಧಗೊಂಡಪ್ಪನನ್ನು ಅಧಿಕೃತವಾಗಿ ಶಿಷ್ಯನನ್ನಾಗಿ ಘೋಷಿಸಿ ಅವನಿಗೆ ‘ಸಿದ್ಧೇಶ್ವರ’ನೆಂದು ನಾಮಕರಣ ಮಾಡಿದರು. ಅನಂತರದ ದಿನಗಳಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕ ಪದವಿಯನ್ನೂ ಕೊಲ್ಹಾಪುರ ವಿಶ್ವವಿದ್ಯಾಲಯದಿಂದ ತತ್ತ್ವಶಾಸ್ತçದಲ್ಲಿ ಸ್ನಾತಕೋತ್ತರ ಎಂ.ಎ. ಪದವಿಯನ್ನೂ ಪಡೆದುಕೊಂಡರು.
ಎಡೆಬಿಡದ ಜ್ಞಾನಾಧ್ವರ
ಕಳೆದ ಐದೂವರೆ ದಶಕಗಳಿಂದ ವಿಜಾಪುರದ ಜ್ಞಾನಯೋಗಾಶ್ರಮವನ್ನು ವಾಸ್ತವ್ಯವನ್ನಾಗಿಸಿಕೊಂಡಿದ್ದ ಸಿದ್ಧೇಶ್ವರಸ್ವಾಮಿಗಳು ತಮ್ಮ ಅಷ್ಟೂ ಸಮಯವನ್ನು ಧ್ಯಾನ, ಅಧ್ಯಯನ, ಚಿಂತನೆ, ಪ್ರವಚನಗಳಿಗೆ ವಿನಿಯೋಗಿಸುತ್ತಿದ್ದರು. ಸರಳಜೀವಿಯಾಗಿದ್ದ ಸ್ವಾಮಿಗಳು ಎಂದೂ ಯಾರಿಂದಲೂ ಏನನ್ನೂ ಸ್ವೀಕರಿಸದೆ ಸತತವೂ ಭಗವದ್ಭಾವದಲ್ಲಿ ಆತ್ಮಾರಾಮರಾಗಿರುತ್ತಿದ್ದುದು ಜನಜನಿತವೇ ಆಗಿತ್ತು. ಅವರಿಗಿದ್ದ ‘ಆಸ್ತಿ’ಯೆಂದರೆ ಅವರು ಸತತ ಅಧ್ಯಯನ-ಚಿಂತನೆಗಳಿಂದ ಗಳಿಸಿಕೊಂಡಿದ್ದ ಜ್ಞಾನರಾಶಿಯಷ್ಟೆ. “ಇಂಗ್ಲಿಷ್ ಬಾರದ ನಾನು ಹೆಚ್ಚು ಓದಿಕೊಳ್ಳಲಾಗಲಿಲ್ಲ. ನೀನಾದರೋ ಪ್ರತಿಭಾಶಾಲಿ. ಧಾರ್ಮಿಕತೆಯ ಸಂದೇಶವನ್ನು ನೀನು ಸಾಗರಗಳಾಚೆಗೂ ತಲಪಿಸಬೇಕು” ಎಂದಿದ್ದ ಗುರುಗಳಾದ ಶ್ರೀ ಮಲ್ಲಿಕಾರ್ಜುನಸ್ವಾಮಿಗಳ ಆದೇಶವನ್ನು ಸಿದ್ಧೇಶ್ವರಸ್ವಾಮಿಗಳು ಅನುಪಮವಾಗಿ ಈಡೇರಿಸಿದರು. ಅವರ ನಿರಂತರಾಭಿಮಾನಿಗಳಾಗಿದ್ದ ಮೈಸೂರು ಸುತ್ತೂರು ಮಠದ ಶ್ರೀ ಶಿವರಾತ್ರಿದೇಶಿಕೇಂದ್ರ ಸ್ವಾಮಿಗಳು ವ್ಯವಸ್ಥೆ ಮಾಡಿದಂತೆ ಅಮೆರಿಕ ಯೂರೋಪ್ ಮೊದಲಾದ ನಾಲ್ಕಾರು ದೇಶಗಳಲ್ಲಿಯೂ ಸಿದ್ಧೇಶ್ವರಸ್ವಾಮಿಗಳ ಪ್ರವಚನಗಳು ನಡೆದು ಆದರಣೆ ಪಡೆದವು.
ಸಂಸ್ಕೃತ, ಕನ್ನಡ, ಇಂಗ್ಲಿಷ್ಗಳಲ್ಲದೆ ಹಿಂದೀ, ಮರಾಠಿ, ಪರ್ಶಿಯನ್ ಭಾಷೆಗಳಲ್ಲಿಯೂ ಪ್ರಾವೀಣ್ಯವಿದ್ದ ಸ್ವಾಮಿಗಳು ಅಪಾರಜ್ಞಾನದ ನಿಧಿಯಾಗಿದ್ದರು. ಜಗತ್ತಿನ ಎಲ್ಲ ಧಾರೆಗಳ ಧರ್ಮಗಳ ಸ್ವರೂಪಗಳೂ ವಿವರಗಳೂ ಅವರಲ್ಲಿ ಶೇಖರಗೊಂಡಿದ್ದವು. ಆದರೆ ಅವರು ಎಂದೂ ತಮ್ಮ ಪಾಂಡಿತ್ಯವನ್ನು ಮೆರೆಸಿದವರಲ್ಲ. ‘ಎಲ್ಲರೊಳಗೊಂದಾಗಿ’ ಇರುವುದರಲ್ಲಿ ಆನಂದಿಸಿದವರು ಅವರು. ಹೀಗೆ ಜನಮಾನಸದಲ್ಲಿ ಅಭಿನ್ನವಾಗಿ ಬೆರೆತುಹೋಗಿದ್ದರು. ಆಗೊಮ್ಮೆ ಈಗೊಮ್ಮೆ ಯುವಕರೊಡನೆ ಆಟಗಳಲ್ಲಿಯೂ ಸೇರಿಕೊಳ್ಳುತ್ತಿದ್ದುದುಂಟು.
ಪ್ರೇರಕ ಸತ್ಸಂಗ
ಶಾಸ್ತçಗಳೂ ಹಲವು ಭಾಷೆಗಳ ಪ್ರೌಢ ವಾಙ್ಮಯವೂ ಪ್ರಾಚ್ಯ-ಪಾಶ್ಚಾತ್ಯ ಚಿಂತಕಶ್ರೇಷ್ಠರ ಮಥಿತ ದರ್ಶನಗಳೂ ಸ್ವಾಮಿಗಳಿಗೆ ಕರತಲಾಮಲಕವಾಗಿದ್ದರೂ ಅವರು ತಮ್ಮ ಸತ್ಸಂಗಗಳಲ್ಲಿ ಸದಾ ಮಾತನಾಡುತ್ತಿದ್ದುದು ಅಧ್ಯಾತ್ಮದ ಬೆಳಕಿನಿಂದ ನಿತ್ಯಜೀವನವನ್ನು ಉದಾತ್ತೀಕರಿಸಿಕೊಳ್ಳಬೇಕಾದುದನ್ನು ಕುರಿತೇ. ಬದುಕಿನ ಕ್ಷಣ ಕ್ಷಣವೂ ಅಧ್ಯಾತ್ಮಜ್ಯೋತಿಯಿಂದ ದೀಪ್ತಿಗೊಂಡಿರಬೇಕು; ಅರ್ಥಪೂರ್ಣ ಉಪಯುಕ್ತ ಜೀವನಾನುಭವಗಳನ್ನು ಎಲ್ಲರೊಡನೆ ಹಂಚಿಕೊಳ್ಳುವುದಕ್ಕೇ ಧರ್ಮವೆಂದು ಹೆಸರು; ಎಲ್ಲರನ್ನೂ ಪ್ರೀತಿಸಬೇಕು; ಸೌಹಾರ್ದದಿಂದ ಮಾತ್ರ ನಿಜವಾದ ಆನಂದವು ಲಭ್ಯ; ನಿರ್ಭಯವಿದ್ದಲ್ಲಿ ಸಂಘರ್ಷಕ್ಕೆ ಕಾರಣ ಇರುವುದಿಲ್ಲ; ಸದಾ ನಾವು ನಾವಾಗಿರೋಣ; ಕಳೆದ ಸಾವಿರಾರು ವರ್ಷಗಳುದ್ದಕ್ಕೂ ಒಳ್ಳೆಯದೆಂದರೇನೆಂಬುದನ್ನು ಹೇಳಿದ್ದಾಗಿದೆ, ಉಳಿದಿರುವುದು ಆಚರಣೆಯಷ್ಟೆ; ಪರರ ಹಿತಕ್ಕಾಗಿ ಕಾರ್ಯ ಮಾಡುವುದೇ ತಪಸ್ಸೆನಿಸಿಕೊಳ್ಳುವುದು, ಅದರಿಂದಲೇ ಸತ್ಯಸಾಕ್ಷಾತ್ಕಾರ; ನಾವೇ ಕಟ್ಟಿಕೊಂಡಿರುವುದು ಈ ಬದುಕು, ಆದ್ದರಿಂದ ಜಗತ್ತಿಗೆ ಹೊಂದಿಕೊಳ್ಳುವುದನ್ನು ಕಲಿಯಬೇಕು, ಬಂದದ್ದನ್ನು ಸ್ವೀಕರಿಸುವ ಮನಃಸ್ಥಿತಿಯನ್ನು ಬೆಳೆಸಿಕೊಳ್ಳೋಣ; ನಮ್ಮನ್ನು ಸುತ್ತುವರಿದು ಪೋಷಿಸುವ ಪ್ರಕೃತಿಯನ್ನು ಗಮನಿಸುವುದರಿಂದಲೇ ತಿಳಿದೀತು -ಯಾರೂ ಸಿರಿವಂತರಲ್ಲ, ಯಾರೂ ಬಡವರಲ್ಲ -ಎಂದು; ಆಶೆ ನೀಗಿದವನು ಈಶನಾಗುತ್ತಾನೆ. ತೋರಿಕೆಗೆ ಸರಳವೆನಿಸುವ ಆದರೆ ಉತ್ಕರ್ಷಪಯಣಕ್ಕೆ ಆಧಾರಭೂತಗಳಾದ ಇಂತಹ ಮೌಲಿಕ ಸಂಗತಿಗಳನ್ನೂ ಅವಕ್ಕೆ ಪೂರಕವಾದ ಪ್ರೇರಣಾದಾಯಕ ನಿಜಜೀವನ ಪ್ರಸಂಗಗಳನ್ನೂ ಉದ್ಬೋಧಕ ಉಪಕಥೆಗಳನ್ನೂ ಸಮುಚಿತ ಉಪಮೆಗಳನ್ನೂ ಒಳಗೊಂಡಿರುತ್ತಿದ್ದವು ಸ್ವಾಮಿಗಳ ಪ್ರವಚನಗಳು. ಅವನ್ನು ಕೇಳಲು ಸಾವಿರ ಸಾವಿರ ಜನ ದಟ್ಟಯಿಸುತ್ತಿದ್ದುದೂ ಅವುಗಳ ಈ ಅತ್ಯಂತ ಆತ್ಮೀಯ ಸ್ವರೂಪದಿಂದಾಗಿ. ಇದಕ್ಕೂ ಮಿಗಿಲಾದ್ದೆಂದರೆ ಸ್ವಾಮಿಗಳು ಏನನ್ನು ನುಡಿಯುತ್ತಿದ್ದರೋ ಅದಕ್ಕೆ ಅವರೇ ದೃಷ್ಟಾಂತಸ್ವರೂಪವಾಗಿದ್ದುದು. ಒಮ್ಮೆ ಅವರ ಪ್ರವಚನವನ್ನಾಲಿಸಿದ ಯಾರೂ ಅವರ ಪ್ರಭಾವಕ್ಕೊಳಗಾಗದಿರುವುದು ಸಾಧ್ಯವೇ ಇರಲಿಲ್ಲ.
ಜನಶಿಕ್ಷಣ
ಇನ್ನೊಂದು ಆಯಾಮವೂ ಇತ್ತು. ಗ್ರಾಮಾಂತರಗಳವರು ಪ್ರವಚನಕ್ಕಾಗಿ ಆಮಂತ್ರಿಸಿದಲ್ಲಿ ಅವರು ಸೂಚಿಸುತ್ತಿದ್ದುದು “ನೀವು ನಿಮ್ಮ ಗ್ರಾಮವನ್ನು ನಿಗಿನಿಗಿ ಸ್ವಚ್ಛಗೊಳಿಸಿರಿಸಿದಲ್ಲಿ ಮಾತ್ರ ನಾನು ನಿಮ್ಮಲ್ಲಿಗೆ ಬರುತ್ತೇನೆ.” ಹೀಗೆ ಪ್ರವಚನಗಳೊಡಗೂಡಿ ಪರಿಸರಸ್ವಾಸ್ಥ್ಯ ಕುರಿತ ನೇರ ಜನಶಿಕ್ಷಣವೂ ನಡೆಯುತ್ತಿತ್ತು. ಸ್ವಾಮಿಗಳಲ್ಲಿ ಪರಿಸರಪ್ರೇಮ ರಕ್ತಗತವಾಗಿತ್ತು; ಪಾರಿಶುದ್ಧ್ಯಾದಿಗಳು ಅವರಿಂದ ಪ್ರವರ್ತಿತವಾದ ಅಧ್ಯಾತ್ಮದರ್ಶನದ ಅಂಗಗಳೇ ಆಗಿದ್ದವು. ತಾತ್ಪರ್ಯವೆಂದರೆ – ಅಧ್ಯಾತ್ಮವೆಂಬುದು ಯಾವುದೊ ಲೋಕಭಿನ್ನ ಕಲಾಪವಾಗಿರದೆ ಒಂದು ಉದಾತ್ತ ಜೀವನದೃಷ್ಟಿ ಮತ್ತು ವೈಶಾಲ್ಯದ ಅನುವರ್ತನೆ ಎಂಬ ಸಂದೇಶವನ್ನೇ ಅವರು ಸದಾ ಪ್ರಸಾರ ಮಾಡಿದುದು. ವೈಚಾರಿಕತೆಗೆ ವಿಮುಖವಾಗದ ಭಗವಚ್ಚಿಂತನ ಅವರದು.
ನಿರ್ಮೋಹ
ಹೀಗೆ ಸಿದ್ಧೇಶ್ವರಸ್ವಾಮಿಗಳು ಜಗತ್ತಿಗೆ ಕೊಟ್ಟದ್ದು ಪರ್ವತೋಪಮ; ಜಗತ್ತಿನಿಂದ ಏನನ್ನೂ ಸ್ವೀಕರಿಸಲಿಲ್ಲ. ಅವರಿಗೆ ಸ್ವಂತ ಹೆಸರಿನ ಬ್ಯಾಂಕ್ ಖಾತೆಯೂ ಇರಲಿಲ್ಲ. ಕಿಸೆಯೇ ಇಲ್ಲದ ಶುಭ್ರವರ್ಣದ ನಿಲುವಂಗಿ ಕಾಣುತ್ತಿದ್ದುದು ಅವರ ಮೈಮೇಲೆ ಮಾತ್ರವೇನೊ. ಇದೂ ಸಾಂಕೇತಿಕವಷ್ಟೆ. ಇಸ್ತಿç ಇರಬೇಕೆಂದೂ ಯೋಚಿಸಿದವರಲ್ಲ. ಅಕಸ್ಮಾತ್ತಾಗಿ ಅಂಗಿ ಎಲ್ಲೊ ಒಂದೆಡೆ ಹರಿದಿದ್ದರೆ ತಮ್ಮ ಕೈಯಿಂದಲೇ ಹೊಲಿದುಕೊಳ್ಳುತ್ತಿದ್ದರು. ಅವರದು ಅತ್ಯಂತ ಸರಳ ಆಹಾರ – ಜೋಳದ ರೊಟ್ಟಿ, ಪಲ್ಯ, ಒಂದೆರಡು ಹಣ್ಣು. ಮುನ್ನೂರ ಅರವತ್ತೈದು ದಿನವೂ ಅಷ್ಟೆ. ಖಾರ, ಕರಿದ ಪದಾರ್ಥಗಳಿಂದ ದೂರ. ಅವರಿಗೆ ಅತ್ಯಂತ ಅಲ್ಪ ಕೈಂಕರ್ಯವನ್ನು ಸಲ್ಲಿಸುವ ಅವಕಾಶವೂ ಯಾರಿಗೂ ಲಭಿಸಲಿಲ್ಲ. ಜೀವನವನ್ನು ಅವರಿಗಿಂತ ಸರಳಗೊಳಿಸುವುದು ಸಾಧ್ಯವೇ ಇರಲಿಲ್ಲ.
ಒಮ್ಮೆ ಒಡನಾಡಿಗಳ ಇಚ್ಛೆಯನ್ನು ಗೌರವಿಸಿ ಸಿದ್ಧೇಶ್ವರಸ್ವಾಮಿಗಳು ತಮಗೆ ಸಂನ್ಯಾಸ ನೀಡುವಂತೆ ಕೋರಿದಾಗ ಗುರುಗಳು ಹೇಳಿದ್ದರು: “ನೀನು ಸಂನ್ಯಾಸಕ್ಕಿಂತ ಬಹಳ ಮೇಲಿನ ನೆಲೆಯನ್ನು ಈಗಾಗಲೇ ತಲಪಿಯಾಗಿದೆ. ಹೀಗಿರುವ ನಿನಗೆ ಕಾವಿ ವಸ್ತçದಿಂದ ಏನಾಗಬೇಕಾಗಿದೆ! ನೀನು ಇರುವಂತೆಯೆ ಇರು.”
ಹೀಗೆ ಪೂರ್ಣ ವಿರಕ್ತರಾಗಿದ್ದರೂ ಸಿದ್ಧೇಶ್ವರಸ್ವಾಮಿಗಳು ಸಭ್ಯತೆಯ ಕಟ್ಟುಪಾಡುಗಳಿಂದ ಎಂದೂ ವಿನಾಯಿತಿ ಬಯಸಲಿಲ್ಲ. ಪ್ರತಿಯಾಗಿ ವ್ಯವಸ್ಥಿತತೆಗೂ ಶಿಸ್ತಿಗೂ ಸಮಯಪಾಲನೆಗೂ ಹೆಸರಾಗಿದ್ದರು.
ನಿತ್ಯವಿಸ್ಮಯ
ಅವರ ಸಂಗಡ ಗಡಿಯಾರವಾಗಲಿ ಎದುರಿಗೆ ಟಿಪ್ಪಣಿ ಚೀಟಿಯಾಗಲಿ ಎಂದೂ ಇರುತ್ತಿರಲಿಲ್ಲ. ಆದರೆ ಅವರ ‘ಬಯೊಲಾಜಿಕಲ್ ಕ್ಲಾಕ್’ ಎಷ್ಟು ಕರಾರುವಾಕ್ಕಾಗಿ ಕೆಲಸ ಮಾಡುತ್ತಿತ್ತೆಂದರೆ ನಿಗದಿಯಾದ ನಲವತ್ತೆöÊದನೇ ನಿಮಿಷಕ್ಕೋ ಅರವತ್ತನೇ ನಿಮಿಷಕ್ಕೋ ಅಲಾರಂ ಇರಿಸಿದಂತೆ ಅವರ ಮಾತೂ ನಿಶ್ಚಿತವಾಗಿದ್ದ ವಿಷಯವೂ ಮುಗಿದಿರುತ್ತಿತ್ತು. ಅವರ ಈ ಕ್ರಮಬದ್ಧತೆ ಒಂದು ನಿತ್ಯವಿಸ್ಮಯವಾಗಿತ್ತು.
ಸಂಪೂರ್ಣವಾಗಿ ಅಧ್ಯಾತ್ಮಾರ್ಪಿತವಾದ ಜೀವನ ಎಷ್ಟು ಅನುಕರಣೀಯವೂ ಮಾಧುರ್ಯಮಯವೂ ಆಗಿರಬಲ್ಲದೆಂಬುದೂ ಸಿದ್ಧೇಶ್ವರಸ್ವಾಮಿಗಳಿಂದ ನಿದರ್ಶನಗೊಂಡಿತ್ತು.
ಶರೀರಧರ್ಮದಂತೆ ಕೊನೆಯ ಒಂದು ವರ್ಷದಲ್ಲಿ ಸ್ವಾಮಿಗಳು ಅನಾರೋಗ್ಯಕ್ಕೀಡಾದರು. ಕನ್ನೇರಿ ಆಶ್ರಮದಲ್ಲಿ ಎರಡು ತಿಂಗಳ ಕಾಲ ಚಿಕಿತ್ಸೆ ನಡೆದರೂ ಹೆಚ್ಚಿನ ಪ್ರಯೋಜನವಾಗಲಿಲ್ಲ. ವಯಸ್ಸೂ ಎಂಬತ್ತೆರಡು ಆಗಿತ್ತು. ಆ ದುರ್ಬಲ ಸ್ಥಿತಿಯಲ್ಲಿಯೂ ಕಾಖಂಡಕಿಯಲ್ಲಿ ಒಂದು ತಿಂಗಳ ಪ್ರವಚನಮಾಲೆ ನಡೆಸಿದ್ದರು. ಅಂತಿಮಹಂತದಲ್ಲಿ ತಮ್ಮ ಜೀವಿತಕಾರ್ಯ ಮುಗಿದಿದೆಯೆನಿಸಿ ಹೆಚ್ಚಿನ ಚಿಕಿತ್ಸೆಯನ್ನೂ ನಿರಾಕರಿಸಿ ಪ್ರಶಾಂತರಾಗಿದ್ದರು. ಕಳೆದ (೨೦೨೩) ಜನವರಿ ೨ಕ್ಕೆ ಇಹಯಾತ್ರೆಯನ್ನು ಮುಗಿಸಿ ಬ್ರಹ್ಮಲೀನರಾದರು. ದಂತಕಥೆಯೆ ಆಗಿದ್ದ ಆ ತೇಜೋಮಯ ಜೀವನವು ದಿಗಂತಕ್ಕೆ ಸರಿಯಿತು. ಅವಧೂತೋಪನಿಷತ್ತು ಉದ್ಗರಿಸಿದಂತೆ
ಧನ್ಯೋಹಂ ಧನ್ಯೋಹಂ
ಪ್ರಾಪ್ತವ್ಯಂ ಸರ್ವಮತ್ರ ಸಂಪನ್ನಂ
– ಎನ್ನುತ್ತ ಪಂಚಭೂತಗಳಲ್ಲಿ ಸೇರಿಹೋದರು. ಆ ಜ್ಞಾನಯೋಗಿಗೆ ಸಹಸ್ರ ನಮನಗಳು.