ಗಾಯಕ ಎಂ.ಡಿ.ಆರ್. ಸಂಗೀತವನ್ನು ಬೇರೆ ಯಾರಲ್ಲೂ ಕಾಣಲು ಸಾಧ್ಯವಿರಲಿಲ್ಲ; ಅದು ಅದ್ವಿತೀಯ. ಸಂಗೀತರಸಿಕರ ಮೇಲೆ ಅವರು ಮೋಡಿಯನ್ನೇ ಮಾಡಿದ್ದರು. ಅವರೊಬ್ಬ ನಾದೋಪಾಸಕರಾಗಿದ್ದು, ಸಂಗೀತಕ್ಕಾಗಿ ಸಂಗೀತವನ್ನು ಹಾಡುತ್ತಿದ್ದರು. ಶ್ರೋತೃಗಳ ಸಂಖ್ಯೆ ಕಡಮೆಯಿದ್ದರೆ ಅವರಿಗೇನೂ ಚಿಂತೆಯಿಲ್ಲ. ತನ್ನ ಶೈಲಿಯನ್ನು ಯಾರಾದರೂ ಆಕ್ಷೇಪಿಸಿದರೆ ಅದಕ್ಕೆ ತಲೆಕೆಡಿಸಿಕೊಳ್ಳುವವರೂ ಅಲ್ಲ. ಮುಖ್ಯವಾಗಿ ಅವರು ತನ್ನ ತೃಪ್ತಿಗಾಗಿ ಹಾಡುತ್ತಿದ್ದರು. ಭಾವನೆಗಳಿಂದ ಶ್ರೀಮಂತವಾಗಿ ಶಾಂತಿಯನ್ನು ನೀಡುವ ಸಂಗೀತ ಅವರದಾಗಿದ್ದು, ಆ ರೀತಿಯಲ್ಲಿ ಅವರು ಹೆಚ್ಚಿನ ಸಮಕಾಲೀನರಿಗಿಂತ ಭಿನ್ನವಾಗಿದ್ದರು. ಅವರದ್ದು ಸೌಮ್ಯ, ಶುದ್ಧ ಮತ್ತು ಮನಸ್ಸಿಗೆ ಸಮಾಧಾನ ತರುವ ಸಂಗೀತವಾಗಿತ್ತು. ಮತ್ತು ಯಾವುದೋ ನದಿದಡದಲ್ಲಿ ಬೆಳದಿಂಗಳಿನಲ್ಲಿ ಕುಳಿತು ಕೇಳಿದ ಅನುಭವವಾಗುತ್ತಿತ್ತು – ಎಂದು ಸಂಗೀತಗಾರರಾದ ಬಿ.ವಿ. ರಾಮನ್ ಮತ್ತು ಬಿ.ವಿ. ಲಕ್ಷ್ಮಣನ್ ಹೇಳಿದ್ದರು.

ನಾಲ್ಕೈದು ದಶಕಗಳ ಹಿಂದಿನ ಜೀವನಕ್ಕೆ ಹೋಲಿಸಿದರೆ ಇಂದು ಜೀವನವು ತುಂಬಾ ವೇಗವನ್ನು ಪಡೆದುಕೊಂಡಿದೆ ಎಂದು ಹೇಳುತ್ತೇವೆ. ಇದರ ಹಿಂದೆ ವಿಜ್ಞಾನ ಮತ್ತು ತಂತ್ರಜ್ಞಾನಗಳ ಪಾತ್ರ ದೊಡ್ಡದಿದೆ ಎನ್ನುತ್ತೇವೆ. ಜೀವನವು ಬದಲಾಗುವಾಗ ಅದನ್ನು ಆಧರಿಸಿರುವ ಅಥವಾ ಅದಕ್ಕೆ ಸಂಬಂಧಿಸಿದ ಹಲವು ಅಂಶಗಳು ಬದಲಾಗಲೇಬೇಕಲ್ಲವೆ? ಇದನ್ನು ಶಾಸ್ತ್ರೀಯ ಸಂಗೀತಕ್ಕೆ, ವಿಶೇಷವಾಗಿ ಕರ್ನಾಟಕ ಶಾಸ್ತ್ರೀಯ ಸಂಗೀತಕ್ಕೂ ಅನ್ವಯಿಸಬಹುದು. ಈ ಬದಲಾವಣೆಯಲ್ಲಿ ಕಲಾವಿದರು, ಅಂದರೆ ಗಾಯಕರು, ವಾದಕರು ಹೇಗೆ ಪಾಲ್ಗೊಂಡಿದ್ದಾರೆ ಎನ್ನುವ ಅಧ್ಯಯನವು ಕುತೂಹಲಕರವಾಗಿರಬಲ್ಲದು. ಈ ನಿಟ್ಟಿನಲ್ಲಿ ತಪ್ಪದೆ ನೆನಪಾಗುವ ಓರ್ವ ಸಂಗೀತಗಾರರೆAದರೆ ಗಾಯಕ ಎಂ.ಡಿ. ರಾಮನಾಥನ್ ಅವರು. ನಾವೀಗ ಅವರ ಜನ್ಮಶತಮಾನೋತ್ಸವ ವರ್ಷದಲ್ಲಿದ್ದೇವೆ.
ಸುಮಾರು ೪೦ ವರ್ಷಗಳ ಹಿಂದೆಯೇ ನಮ್ಮನ್ನು ಅಗಲಿದ ಮಂಜಪಾರ ದೇವೇಶ ಭಾಗವತರ್ ರಾಮನಾಥನ್ ಅವರ ಜನನದ ಅಮೃತವರ್ಷದ ಹೊತ್ತಿಗೆ ೧೯೯೮-೯೯ರ ವೇಳೆ ಚೆನ್ನೈನಲ್ಲಿ ಎಂ.ಡಿ.ಆರ್. ಅಭಿಮಾನಿಗಳು ಅದನ್ನು ಆಚರಿಸಿದರು. “ಇಂದು ಕರ್ನಾಟಕ ಸಂಗೀತದಲ್ಲಿ ವೇಗ, ಲಯ ಮತ್ತು ಸ್ವರಗಳು ಸಂಗೀತದ ಸೌಂದರ್ಯಶಾಸ್ತ್ರ (ಈಸ್ತೆಟಿಕ್ಸ್) ಮತ್ತು ಪ್ರೇರಣೆಗಳನ್ನು ಆಳುತ್ತಿರುವಾಗ ಎಂ.ಡಿ. ರಾಮನಾಥನ್ ಅವರ ಶೈಲಿ ಪ್ರಸ್ತುತ (ಅರ್ಥಪೂರ್ಣ) ಎನಿಸುತ್ತದೆ” ಎಂದು ಹೇಳಲಾಗಿತ್ತು. ಸಂಗೀತದಲ್ಲಿ ಎಂ.ಡಿ.ಆರ್. ಅವರ ಮಾರ್ಗವು ಅವರ ಸಮಕಾಲೀನರಿಂದ ಕೂಡ ತುಂಬಾ ವಿಭಿನ್ನವಾಗಿತ್ತು. ಸಂಪ್ರದಾಯಕ್ಕೆ ಮಹತ್ತ್ವ, ಟೈಗರ್ ವರದಾಚಾರ್ಯರ ಮೂಲಕ ತ್ಯಾಗರಾಜಪರಂಪರೆಯ ಪ್ರಮುಖರಾದ ಪಟ್ನಂ ಸುಬ್ರಹ್ಮಣ್ಯ ಅಯ್ಯರ್ರಿಂದ ಸ್ಫೂರ್ತಿ ಪಡೆಯುವುದು ಅವರ ಸಂಗೀತದ ಪ್ರಮುಖ ಲಕ್ಷಣವಾಗಿತ್ತು ಎನ್ನುತ್ತದೆ ‘The Hindu Speakes on Music’.
ಟೈಗರ್ ವರದಾಚಾರ್ಯರು ಮತ್ತು ಎಂ.ಡಿ. ರಾಮನಾಥನ್ ಅವರ ಗುರು-ಶಿಷ್ಯ ಸಂಬಂಧವೇ ಅಪೂರ್ವವಾದದ್ದು. ಅದು ಆರಂಭವಾದ ಬಗೆಯನ್ನು ಪ್ರಸಿದ್ಧ ಗಾಯಕ ಮತ್ತು ವಾಗ್ಗೇಯಕಾರ ಮೈಸೂರು ವಾಸುದೇವಾಚಾರ್ಯರ ಮೊಮ್ಮಗ ಎಸ್. ಕೃಷ್ಣಮೂರ್ತಿ ಅವರು ಹೀಗೆ ವಿವರಿಸಿದ್ದಾರೆ (ಪುಸ್ತಕ: ‘ಸಂಗೀತ ಸಮಯ’, ಪ್ರಕಾಶಕರು: ಡಿ.ವಿ.ಕೆ. ಮೂರ್ತಿ, ಮೈಸೂರು, ೧೯೪೪): “ರುಕ್ಮಿಣೀದೇವಿಯವರ ಅಪೇಕ್ಷೆಯ ಮೇರೆಗೆ ಕಲಾಕ್ಷೇತ್ರದಲ್ಲಿ ‘ಸಂಗೀತ ಶಿರೋಮಣಿ’ ಪದವಿ ತರಗತಿಯನ್ನು ಪ್ರಾರಂಭಿಸಲಾಯಿತು. ಮದ್ರಾಸು ಹಾಗೂ ಅಣ್ಣಾಮಲೈ ವಿಶ್ವವಿದ್ಯಾನಿಲಯಗಳಲ್ಲಿ ಸಂಗೀತ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ, ದಕ್ಷ ಆಡಳಿತಗಾರರೂ ಆದರ್ಶ ಗುರುಗಳೂ ಎಂದು ಖ್ಯಾತಿ ಪಡೆದಿದ್ದ ಟೈಗರ್ ವರದಾಚಾರ್ಯರು ಪ್ರಾಂಶುಪಾಲರಾಗಿ ನೇಮಕಗೊಂಡರು. ತರಗತಿಗೆ ಆಯ್ಕೆಯಾದ ಪ್ರಪ್ರಥಮ ಹಾಗೂ ಏಕೈಕ ವಿದ್ಯಾರ್ಥಿಯೆಂದರೆ ಎಂ.ಡಿ. ರಾಮನಾಥನ್. ತಂದೆ ದೇವೇಶ ಭಾಗವತರ್ ಅವರಿಂದ ಆರಂಭದ ಪಾಠವಾಗಿತ್ತು. ಬಾಲಪಾಠದ ಗೀತೆಯನ್ನೇ ಪ್ರೌಢಶೈಲಿಯಲ್ಲಿ ಹಾಡಿ, ಮಲಹರಿ ರಾಗದ ಸೌಂದರ್ಯವನ್ನು ಸಂದರ್ಶನದ ಪರೀಕ್ಷಕರ ಮುಂದೆ ಹಾಜರುಪಡಿಸಿದರು; ಆಯ್ಕೆಯಾದರು. ತರಗತಿಯಲ್ಲಿ ಎಂ.ಡಿ.ಆರ್. ಒಬ್ಬರೇ ವಿದ್ಯಾರ್ಥಿಯಾಗಿದ್ದುದರಿಂದ ಗುರು-ಶಿಷ್ಯರ ಸಂಬಂಧ ನಿಕಟವಾಗಲು ಸಾಧ್ಯವಾಯಿತು; ಈ ಸಂಬಂಧ ಬೇರೆ ಕಡೆ ಕಾಣದಂಥದಾಗಿತ್ತು.
ತಂದೆಯೇ ಮೊದಲ ಗುರು
ಕೇರಳದ ಪಾಲ್ಘಾಟ್ (ಪಾಲಕ್ಕಾಡ್) ಜಿಲ್ಲೆಯ ಮಂಜಪಾರ ಎನ್ನುವ ಹಳ್ಳಿಯ ನಿಸರ್ಗಸೌಂದರ್ಯದ ನಡುವೆ ಮೇ ೨೦, ೧೯೨೩ರಂದು ರಾಮನಾಥನ್ ಜನಿಸಿದರು. ಸಂಗೀತದ ಕಲಿಕೆಗೆ ತಂದೆ ದೇವೇಶ ಭಾಗವತರೇ ಮೊದಲ ಗುರು; ಅವರು ಸಂಗೀತ ಶಿಕ್ಷಕರಾಗಿದ್ದರು; ಪಾಲ್ಘಾಟ್ನ ವಿಕ್ಟೋರಿಯ ಕಾಲೇಜಿನಲ್ಲಿ ರಾಮನಾಥನ್ ಬಿ.ಎಸ್ಸಿ. ಪದವೀಧರರಾದರು. ಭೌತಶಾಸ್ತ್ರ ಅವರ ಮೇಜರ್ ವಿಷಯವಾಗಿತ್ತು. ಶಾಲಾಶಿಕ್ಷಣದ ನಡುವೆಯೇ ಅವರ ಸಂಗೀತ ಶಿಕ್ಷಣವು ಸಾಗಿದ್ದು, ಕಾಲೇಜಿನಲ್ಲಿ ಅವರೊಬ್ಬ ಪ್ರತಿಭಾವಂತ ಗಾಯಕನೆಂದು ಹೆಸರಾಗಿದ್ದರು. ಸಂಗೀತ ಶಿಕ್ಷಕರಾದ ತಂದೆ, ಮಗನ ಪ್ರತಿಭೆಯನ್ನು ಸರಿಯಾಗಿಯೆ ಗುರುತಿಸಿದರೆನಿಸುತ್ತದೆ. ಪದವಿ ಮುಗಿಯುತ್ತಲೇ (೧೯೪೪) ಸಂಗೀತ ಶಿಕ್ಷಣವನ್ನು ಮುಂದುವರಿಸಲು ಮಗನನ್ನು ಮದ್ರಾಸ್(ಚೆನ್ನೈ)ಗೆ ಕರೆದೊಯ್ದರು.
ಅದೇ ಹೊತ್ತಿಗೆ ಹಿಂದೆ ಪ್ರಸ್ತಾವಿಸಿದಂತೆ ಖ್ಯಾತ ನೃತ್ಯ ಕಲಾವಿದೆ ಶ್ರೀಮತಿ ರುಣ್ಮಿಣಿದೇವಿ ಅರುಂಡೇಲ್ ಅವರು ತಮ್ಮ ಕಲಾಕ್ಷೇತ್ರದಲ್ಲಿ ಸಂಗೀತ ಶಿರೋಮಣಿ ತರಗತಿಗಳನ್ನು ಆರಂಭಿಸುವವರಿದ್ದರು. ಖ್ಯಾತರಾದ ಟೈಗರ್ ಎಸ್. ವರದಾಚಾರ್ಯರೇ ಈ ಸಂಗೀತ ಕಾಲೇಜಿನ ಪ್ರಾಂಶುಪಾಲರು. ಬೇರೆ ಯೋಚನೆಯಿಲ್ಲದೆ ರಾಮನಾಥನ್ರನ್ನು ತಂದೆ ಅಲ್ಲಿಗೆ ಸೇರಿಸಿದರು. ಹಾಡುಗಾರಿಕೆ ತರಗತಿಗೆ ಆ ವರ್ಷ ಇವರೊಬ್ಬರೇ ವಿದ್ಯಾರ್ಥಿಯಾದ ಕಾರಣ ಅದ್ಭುತವಾದ ಈ ಗುರು-ಶಿಷ್ಯ ಸಂಬಂಧಕ್ಕೆ ದಾರಿಯಾಯಿತು. ವಿಶೇಷ ಗಮನಕೊಟ್ಟು ಗುರು ಟೈಗರ್ ಅವರು ಶಿಷ್ಯನನ್ನು ತರಬೇತುಗೊಳಿಸಿದರು.
ಶಿಷ್ಯನ ಶಾರೀರದ ಘನತೆ-ಸೌಂದರ್ಯ, ರಾಗದ ಬಗೆಗಿನ ಪ್ರಜ್ಞೆ, ಭಾವಾಭಿವ್ಯಕ್ತಿ, ಕುಶಾಗ್ರಬುದ್ಧಿ ಇವುಗಳನ್ನು ಗಮನಿಸಿದ ಗುರುಗಳು ತಮ್ಮ ಸಂಗೀತಸಂಪತ್ತಿಗೆ ಯೋಗ್ಯ ಉತ್ತರಾಧಿಕಾರಿ ದೊರೆತನೆಂದು ಉತ್ಸಾಹಭರಿತರಾಗಿ ಮನಸಾರೆ ವಿದ್ಯೆಯನ್ನು ಧಾರೆಯೆರೆದರು. ಗುರುವನ್ನು ಬಿಟ್ಟು ಶಿಷ್ಯ ಒಂದು ಕ್ಷಣ ಇರಲಾರ; ಶಿಷ್ಯನನ್ನು ಬಿಟ್ಟು ಗುರುಗಳು ಒಂದು ಕ್ಷಣ ಇರಲಾರರು – ಎನ್ನುವ ರೀತಿಯಲ್ಲಿ ಅವರ ಸಂಬಂಧ ಪರಸ್ಪರ ಹೆಣೆದುಕೊಂಡಿತು.
ಮೈಸೂರಿನ ದಿನಗಳು
ವರದಾಚಾರ್ಯರು ಹತ್ತು ವರ್ಷಗಳಿಗೂ ಮಿಕ್ಕಿ ಮೈಸೂರಿನಲ್ಲಿ ನೆಲೆಸಿದ್ದುದರಿಂದ ಮೈಸೂರಿನ ಸಂಗೀತಪ್ರಿಯರಿಗೆ ಅವರು ಮೈಸೂರಿನವರೇ ಆಗಿದ್ದರು. ದೇವದಾಸಿಯೊಬ್ಬಳು ತನ್ನ ಮಗಳಿಗೆ ಸಂಗೀತ ಶಿಕ್ಷಣ ಕೊಡಿಸುವ ಉದ್ದೇಶದಿಂದ ಅವರನ್ನು ಮೈಸೂರಿಗೆ ಬಂದು ನೆಲೆಸುವಂತೆ ಪ್ರಾರ್ಥಿಸಿದ್ದು, ಅದರಂತೆ ಅವರು ಮೈಸೂರಿಗೆ ಬಂದು ನಮ್ಮ ಹಳೆಮನೆಯ ಸಮೀಪವೇ ವಾಸಿಸುತ್ತಿದ್ದರಂತೆ. ಸ್ವಲ್ಪಕಾಲ ತಿರುಮಕೂಡ್ಲು ನರಸೀಪುರದಲ್ಲಿ ವಾಸಿಸುತ್ತ, ಅಲ್ಲಿಯ ಕಾವೇರಿ-ಕಪಿಲಾ ನದಿಗಳ ಸಂಗಮದ ಕಾವೇರಿ ದಂಡೆಯಲ್ಲಿ ಸಂಜೆ ಹೊತ್ತು ಸಂಗೀತಾಸಕ್ತ ರಸಿಕರಿಗೆ ಗಾನಸುಧೆಯನ್ನು ಉಣಬಡಿಸುತ್ತಿದ್ದರೆಂದು ಎಸ್. ಕೃಷ್ಣಮೂರ್ತಿ ದಾಖಲಿಸಿದ್ದಾರೆ. ವರದಾಚಾರ್ಯರು ಮೈಸೂರಿನಲ್ಲಿದ್ದಾಗ ಅವರು ಮತ್ತು ವಾಸುದೇವಾಚಾರ್ಯರ ಸ್ನೇಹ ಗಾಢವಾಯಿತು. ದಿನದ ಕೆಲವು ಹೊತ್ತು ವಾಸುದೇವಾಚಾರ್ಯರ ಮನೆಯಲ್ಲಿ ಕಳೆಯುತ್ತಿದ್ದರು. ಇಬ್ಬರೂ ಜೊತೆಗೆ ಅರಮನೆಯ ಆಸ್ಥಾನಕ್ಕೆ ಹೋಗುತ್ತಿದ್ದರು. ಅಲ್ಲಿ ಟೈಗರ್ ಅವರಿಗೆ ವಾಸುದೇವಾಚಾರ್ಯರು ಹೆಚ್ಚಿನ ಗೌರವ ದೊರೆಯಲು ಕಾರಣರಾದರು. ಮಹಾರಾಜ ಜಯಚಾಮರಾಜ ಒಡೆಯರ್ ಇಬ್ಬರನ್ನೂ ತುಂಬಾ ಆದರದಿಂದ ನೋಡುತ್ತಿದ್ದರು. ಈ ನಡುವೆ ತನಗೆ ಮತ್ತು ಯುವಕ ರಾಮನಾಥನ್ಗೆ ಹೆಚ್ಚಿನ ಗೆಳೆತನ ಬೆಳೆಯಲು ಕಾರಣವಾಯಿತೆಂದು ಎಸ್. ಕೃಷ್ಣಮೂರ್ತಿ ನೆನಪಿಸಿಕೊಂಡಿದ್ದಾರೆ.
“ಎಂ.ಡಿ. ರಾಮನಾಥನ್ ಅವರದು ಎತ್ತರವಾದ ಭವ್ಯವಾದ ತುಂಬಿದ ಮೈಕಟ್ಟು. ಗುರುಗಳು ನೀಲಮೇಘಶ್ಯಾಮನಾದರೆ, ಶಿಷ್ಯನ ಮೈಬಣ್ಣ ಪರಶಿವನ ಶುಭ್ರ ದೇಹಕಾಂತಿಯಂತೆ! ಗುರುಗಳ ಕಪ್ಪು ಹಣೆಯ ಮೇಲೆ ಬಿಳಿಯ ನಾಮ ಎದ್ದುಕಾಣುತ್ತಿದ್ದರೆ, ಶಿಷ್ಯನ ಮುಖದ ಬಿಳುಪಿನ ಹೊಳಪಿನಲ್ಲಿ ಧರಿಸಿದ ವಿಭೂತಿ ಮಂಕಾಗುತ್ತಿತ್ತು. ದುಂಡನೆಯ ಗಂಧದ ಬೊಟ್ಟು, ಅದರ ನಡುವಿನ ಕುಂಕುಮದ ಬಿಂದು ಮಾತ್ರವಷ್ಟೇ ದೂರಕ್ಕೆ ಕಾಣುತ್ತಿದ್ದುದು. ಬಾದಾಮಿ ಕ್ರಾಪಿನಿಂದಾಗಿ ಮೊದಲೇ ಅಗಲವಾಗಿದ್ದ ಹಣೆ ಮತ್ತಷ್ಟು ಅಗಲವಾಗಿ ಕಾಣಿಸುತ್ತಿತ್ತು. ವಿದ್ಯೆ, ವಿನಯಶೀಲತೆ, ವಿನೋದಪ್ರವೃತ್ತಿ, ಹೃದಯಶೀಲತೆ, ಗಾಯನಶೈಲಿ, ನಡೆ-ನುಡಿ, ಹಾವಭಾವ ಎಲ್ಲದರಲ್ಲೂ ಗುರುವಿನ ಪಡಿಯಚ್ಚಿನಂತಿರಬೇಕು ಎಂಬ ಹಂಬಲದಿಂದ ಭಗವಂತ ಕರುಣಿಸಿದ್ದ ಸುಂದರವಾದ ನೇತ್ರಕಮಲಗಳನ್ನು ಕಷ್ಟಪಟ್ಟು ಗುರುವಿನ ಮೆಳ್ಳೆಗಣ್ಣಿನಂತೆ ಪರಿವರ್ತಿಸಿಕೊಂಡಿದ್ದ ಗುರುಭಕ್ತ ಶಿರೋಮಣಿ ರಾಮನಾಥನ್! ಸುಲಭವಾದ ಶಸ್ತçಚಿಕಿತ್ಸೆಯಿಂದ ಕಣ್ಣನ್ನು ಸರಿಪಡಿಸಬಹುದೆಂದು ವೈದ್ಯರು ಆಶ್ವಾಸನೆ ಕೊಟ್ಟರೂ ರಾಮನಾಥನ್ ಅದನ್ನು ನಿರಾಕರಿಸಿದರು. ಗುರುಶಿಷ್ಯರು ಎದುರುಬದುರು ನಿಂತು ಮಾತುಕತೆಯಾಡುತ್ತಿದ್ದಾಗ ಯಾರು ಯಾರನ್ನು ಉದ್ದೇಶಿಸಿ ಮಾತನಾಡುತ್ತಿದ್ದಾರೆ ಎಂದು ಹೇಳುವುದೇ ಕಷ್ಟವಾಗುತ್ತಿತ್ತು” ಎಂದಿದ್ದಾರೆ ಎಸ್. ಕೃಷ್ಣಮೂರ್ತಿ.
ವಿನೋದಪ್ರವೃತ್ತಿ
ಎಂ.ಡಿ.ಆರ್. ಸ್ವಭಾವದಲ್ಲಿದ್ದ ಒಂದು ಪ್ರಮುಖ ಅಂಶವೆಂದರೆ ಅವರ ಹಾಸ್ಯಪ್ರವೃತ್ತಿ. ತಮ್ಮನ್ನು ತಾವು ಹಾಸ್ಯ ಮಾಡಿಕೊಳ್ಳುವುದರಲ್ಲಿ ಅವರು ಯಾವಾಗಲೂ ಮುಂದಿರುತ್ತಿದ್ದರು. ತಮ್ಮ ಮೆಳ್ಳೆಗಣ್ಣಿನ ಬಗ್ಗೆ ಹೀಗಿತ್ತು ಅವರ ಕಮೆಂಟ್: “ನಾನೇನಾದರೂ ಪರೀಕ್ಷೆಗಳಲ್ಲಿ ಇನ್ವಿಜಿಲೇಟರ್ ಆಗಿದ್ದಿದ್ದರೆ ವಿದ್ಯಾರ್ಥಿಗಳು ಮಣ್ಣುಮುಕ್ಕಬೇಕಾಗುತ್ತಿತ್ತು. ನನ್ನ ದೃಷ್ಟಿ ಕಾಶಿ ವಿಶ್ವನಾಥನ ಮೇಲಿದೆ; ತಾನು ರಾಮೇಶ್ವರದಲ್ಲಿದ್ದೇನೆ ಎಂದು ಮೋಸಹೋಗಿ ವಿದ್ಯಾರ್ಥಿ ಕಾಪಿ ಹೊಡೆದು ಸಿಕ್ಕಿಬೀಳುತ್ತಿದ್ದ.” ಇದು ಅವರ ವಿನೋದಪ್ರವೃತ್ತಿಗೊಂದು ಮಾದರಿ.
“ಗುರುಗಳ ಸಂಗಡ ಅರಮನೆಗೆ ಹೋಗಬೇಕಾದ ಸಂದರ್ಭದಲ್ಲಿ ದರ್ಬಾರ್ ಡ್ರೆಸ್ಸನ್ನು ತೊಟ್ಟು ತಲೆಯ ಮೇಲೆ ಜರಿಪೇಟ ಇಟ್ಟುಕೊಳ್ಳುತ್ತಿದ್ದರು; ಸರ್ಕಾರದ ಉನ್ನತಾಧಿಕಾರಿಗಳಂತೆ ವಿಜೃಂಭಿಸುತ್ತಿದ್ದರು. ಉಳಿದಂತೆ ಅವರದು ಸರಳವಾದ ಉಡುಪು. ಶುಭ್ರವಾದ ದಟ್ಟಿಪಂಚೆ; ಬಿಳಿಯ ಮಲ್ಲಿನ ಅಥವಾ ಸಿಲ್ಕಿನ ಜುಬ್ಬ; ಜುಬ್ಬಕ್ಕೆ ಬಂಗಾರದ ಗುಂಡಿಗಳು; ಕುತ್ತಿಗೆಯನ್ನು ಸುತ್ತುವರಿದು ಇಳಿಬಿಟ್ಟ ಪಟ್ಟಿ ಮಾಡಿದ ಕಪ್ಪು ಅಂಚಿನ ಉದ್ದನೆಯ ಅಂಗವಸ್ತç (ಶಾಲು); ಥೇಟ್ ಮದ್ರಾಸಿ ಉಡುಪು! ಕೈಬೆರಳಿಗೆ ನವರತ್ನದುಂಗುರ” ಇದು ಎಂ.ಡಿ.ಆರ್. ಅವರ ಬಾಹ್ಯರೂಪ.
ತಿಂಡಿತೀರ್ಥದ ವಿಷಯದಲ್ಲಿ ಮಾತ್ರ ಗುರು-ಶಿಷ್ಯರದು ಬೇರೆ ಬೇರೆ ದಾರಿ. ಆ ವಿಷಯದಲ್ಲಿ ಟೈಗರ್ ಅವರಿಗೆ ಗಾತ್ರ, ಪ್ರಮಾಣ ಮುಖ್ಯ; ಗುಣವು ಗೌಣ. ರಾಮನಾಥನ್ ಅವರಿಗೆ ಹಾಗಲ್ಲ. ಊಟ-ಉಪಚಾರಗಳಲ್ಲಿ ಸೊಗಸುಗಾರಿಕೆ ಹೆಚ್ಚು. ತಿಂಡಿತೀರ್ಥಗಳು ಶುಚಿರುಚಿಯಾಗಿರಬೇಕು. ಅವುಗಳ ಶೀತೋಷ್ಣಗಳ ಇತಿಮಿತಿಯಲ್ಲಿ ಸ್ವಲ್ಪವೂ ವ್ಯತ್ಯಾಸವಿರಬಾರದು. ಹಾಗಿಲ್ಲದಿದ್ದಲ್ಲಿ ತಮ್ಮ ಅಸಮಾಧಾನವನ್ನು ಮುಚ್ಚುಮರೆಯಿಲ್ಲದೆಯೆ ಪ್ರಕಟಪಡಿಸುತ್ತಿದ್ದರು.
ನೇರಮಾತಿನ ಸರಳತೆ
ಒಮ್ಮೆ ಮಿತ್ರರೊಬ್ಬರ ಮನೆಯಲ್ಲಿ ನೀಡಿದ ಕಾಫಿ ಅವರಿಗೆ ಹಿಡಿಸಲಿಲ್ಲ “The qualification of this coffee is its temperature! (ಈ ಕಾಫಿಯ ಒಂದೇ ಗುಣವೆಂದರೆ ಅದರ ಬಿಸಿ) ಎಂದು ಮನೆಯವರೆದುರು ಹೇಳಿಯೇಬಿಟ್ಟರಂತೆ! ಕಾಫಿ ಏನಾದರೂ ಬಿಸಿ ಜಾಸ್ತಿಯಿದ್ದರೆ ‘ಸ್ವಲ್ಪ ಆರಿಸಿಕೊಡಿ’ ಎಂದು ನೇರವಾಗಿ ಹೇಳುತ್ತಿರಲಿಲ್ಲ. ‘ಒಂದೆರಡಾವರ್ತಿ ಆರೋಹಣ ಅವರೋಹಣ ನಡೆಯಲಿ’ – ಹೀಗೆ ಪಾರಿಭಾಷಿಕ ಪದ ಬಳಸಿ ಹೇಳುತ್ತಿದ್ದರು. ಸಂಗೀತದವರು ಹಾಗೆಯೆ ಹೇಳಬೇಕಷ್ಟೆ.
ಉಳಿದಂತೆ ಕೂಡ ಎಂ.ಡಿ.ಆರ್. ಅವರಿಗೆ ಪಾರಿಭಾಷಿಕ ಶೈಲಿಯಲ್ಲಿ ಮಾತನಾಡುವುದೆಂದರೆ ಬಲು ಖುಷಿ. ಸಮಯಕ್ಕೆ ತಕ್ಕಂತೆ ಮಾತುಗಳು ತಾವಾಗಿಯೇ ಒದಗಿಬರುತ್ತಿದ್ದವು ಎಂದು ಕೃಷ್ಣಮೂರ್ತಿ ಅವರು ಮಿತ್ರ ಟಿ.ಎನ್. ಪದ್ಮನಾಭನ್ ಹೇಳಿದ ಕೆಲವು ಪ್ರಸಂಗಗಳನ್ನು ಉಲ್ಲೇಖಿಸಿದ್ದಾರೆ. ‘ಈಗ ನಿಮ್ಮ ವಯಸ್ಸೆಷ್ಟು?’ ಎನ್ನುವ ಅಭಿಮಾನಿಯೊಬ್ಬರ ಪ್ರಶ್ನೆಗೆ ರಾಮನಾಥನ್ ಅವರ ಉತ್ತರ ‘ಷಣ್ಮುಖಪ್ರಿಯ’ ಎಂಬುದಾಗಿ. ಷಣ್ಮುಖಪ್ರಿಯ ೫೬ನೇ ಮೇಳಕರ್ತರಾಗ; ಅಂದರೆ ಆಗ ಅವರ ವಯಸ್ಸು ೫೬ ವರ್ಷ.
ಸ್ನೇಹಿತರೊಬ್ಬರ ಮಗುವಿಗೆ ಯಾವುದಾದರೊಂದು ಉಡುಪನ್ನು ಕೊಳ್ಳೋಣವೆಂದು ರಾಮನಾಥನ್ ಗೆಳೆಯರೊಂದಿಗೆ ಅಂಗಡಿಗೆ ಹೋದರು; ಉಡುಗೊರೆ ಎಷ್ಟರಲ್ಲಿರಬೇಕು ಎಂದು ಗೆಳೆಯರು ಕೇಳಿದಾಗ ‘ನನ್ನ ಬಜೆಟ್ ಒಂದು ಮಾಯಾಮಾಳವಗೌಳ’ ಎಂದರಂತೆ. ಮಾಯಾಮಾಳವಗೌಳ ೧೫ನೇ ಮೇಳಕರ್ತ ರಾಗ; ಅಂದರೆ ಎಂ.ಡಿ.ಆರ್. ಬಜೆಟ್ ಹದಿನೈದು ರೂಪಾಯಿ.
ಎಂ.ಡಿ.ಆರ್. ಅವರು ಉಳಿದುಕೊಂಡಿದ್ದ ಹೊಟೇಲ್ ರೂಮಿನಲ್ಲಿದ್ದದ್ದು ಒಂದೇ ಮಂಚ. ಸಂಗಡ ಹೋಗಿದ್ದ ಶಿಷ್ಯನಿಗೆ ಅವರು ಹೇಳಿದರು: “ಮಂದ್ರಸ್ಥಾಯಿ ನನ್ನ ಬಲದ ಸ್ಥಾನ. ಆದ್ದರಿಂದ ನಾನು ಮಂದ್ರದಲ್ಲಿ (ಕೆಳಗೆ ನೆಲದ ಮೇಲೆ) ಮಲಗುತ್ತೇನೆ; ನೀನು ತಾರಸ್ಥಾಯಿಯಲ್ಲಿ (ಮಂಚದ ಮೇಲೆ) ಮಲಗು” ಎಂದರಂತೆ!
ಶ್ರೀ ರಾಮಸೇವಾ ಮಂಡಳಿಯವರು (ಬೆಂಗಳೂರು) ಕಛೇರಿಗೆ ಅವರಿಗೆ ನೀಡುತ್ತಿದ್ದ ಸಂಭಾವನೆಯನ್ನು ಐವತ್ತು ರೂಪಾಯಿ ಹೆಚ್ಚಿಸಿದ್ದರು. ಆಗ ರಾಮನಾಥನ್ ಗೆಳೆಯರೊಂದಿಗೆ “ಈ ವರ್ಷ ಮಂಡಳಿಯವರು ಹತ್ತು ಖಂಡಗಳ (ಖಂಡ ಎಂದರೆ ಐದು) ಬಡ್ತಿ ನೀಡಿದ್ದಾರೆ” ಎಂದು ಮುಗುಳ್ನಗೆಯೊಂದಿಗೆ ಹೇಳಿದರಂತೆ!
ಸಂಭಾವನೆಯ ತಾರತಮ್ಯ
ಇಂತಹ ಪ್ರಾಂಜಲ ವ್ಯಕ್ತಿಗೆ ಮೋಸ ಮಾಡುವವರು ಕೂಡ ಇದ್ದರೆಂದು ಹೇಳಿದರೆ ನಂಬುವಿರಾ? “ರಾಮನಾಥನ್ ಎಂದೂ ತಮ್ಮ ಕಲೆಯನ್ನು ವ್ಯಾಪಾರ ದೃಷ್ಟಿಯಿಂದ ನೋಡಿದವರಲ್ಲ. ಕಛೇರಿಗೆ ಇಷ್ಟೇ ಕೊಡಬೇಕು ಎಂದು ಷರತ್ತು ಹಾಕಿದವರಲ್ಲ. ತಮ್ಮ ಪಾಲಿಗೆ ಬಂದ ಸಂಭಾವನೆಗೆ ತೃಪ್ತಿಪಟ್ಟುಕೊಳ್ಳುತ್ತಿದ್ದರು. ಇವರ ಸರಳತನದ ದುರುಪಯೋಗ ಮಾಡಿಕೊಂಡ ಸಣ್ಣ ಜನಗಳಿಗೇನೂ ಕೊರತೆಯಿರಲಿಲ್ಲ. ಎಷ್ಟೋ ಸಂದರ್ಭಗಳಲ್ಲಿ ಪಕ್ಕವಾದ್ಯ ವಿದ್ವಾಂಸರಿಗೆ ಇವರ ಸಂಭಾವನೆಗಿಂತ ಹೆಚ್ಚಾಗಿ ಕೊಟ್ಟಿದ್ದೂ ಉಂಟು!” ಇದಕ್ಕೆ ಏನೆನ್ನಬೇಕು? ಎಷ್ಟೋ ಸಂದರ್ಭಗಳಲ್ಲಿ ಒಟ್ಟು ಸಂಭಾವನೆಯಲ್ಲಿ ಅರ್ಧಪಾಲು (ಅಥವಾ ಅದಕ್ಕೂ ಹೆಚ್ಚು) ಮುಖ್ಯ ಕಲಾವಿದರಾದ ಗಾಯಕರಿಗೆ; ಉಳಿದುದರಲ್ಲಿ ಪಕ್ಕವಾದ್ಯದವರಾದ ಮೂವರಿಗೆ (ವಯೊಲಿನ್, ಮೃದಂಗ, ಘಟ ವಾದಕರು) ಪಾಲು ಎಂಬಂತಹ ವಾತಾವರಣ ಇರುತ್ತದೆ.
‘ಕಲಾಕ್ಷೇತ್ರ’ದಲ್ಲಿ ಬೋಧಕ
ಮದ್ರಾಸಿನ ‘ಕಲಾಕ್ಷೇತ್ರ’ದಲ್ಲಿ ಸಂಗೀತ ಶಿರೋಮಣಿ ಪದವಿಯನ್ನು ಗಳಿಸಿದ ಅನಂತರ ರಾಮನಾಥನ್ ಅದೇ ಸಂಸ್ಥೆಯಲ್ಲಿ ಮುಂದುವರಿದರು; ಮೊದಲಿಗೆ ತಮ್ಮ ಗುರು ಟೈಗರ್ ಅವರಿಗೆ ಸಹಾಯಕನಾಗಿದ್ದರೆ, ಮುಂದೆ ಸಂಗೀತದ ಪ್ರೊಫೆಸರರಾದರು. ಈ ಹುದ್ದೆಯ ಜೊತೆಗೆ ಅವರು ಕಲಾಕ್ಷೇತ್ರದ ಲಲಿತಕಲೆ ಕಾಲೇಜಿನ ಪ್ರಿನ್ಸಿಪಾಲರಾಗಿದ್ದರು; ಸಂಗೀತದ ಥಿಯರಿ, ಪ್ರಾಕ್ಟೀಸ್ ಎರಡನ್ನೂ ಬೋಧಿಸುತ್ತಿದ್ದರು. ಕಲಾಕ್ಷೇತ್ರದ ಸಂಬಂಧದ ಮೂಲಕ ಅವರು ಬಹಳಷ್ಟು ವಿದ್ಯಾರ್ಥಿಗಳಿಗೆ ಸಂಗೀತವನ್ನು ಬೋಧಿಸಿದ್ದು ಅವರಲ್ಲಿ ದಿ|| ಜಯ ಪಶುಪತಿ ಅವರು ಪ್ರಸಿದ್ಧರಾಗಿದ್ದರು. ರಾಮನಾಥನ್ ಅವರ ಸಂಗೀತಜ್ಞಾನದ ಬಗ್ಗೆ ಸಮಕಾಲೀನ ಸಂಗೀತಗಾರರ ನಡುವೆ ತುಂಬಾ ಗೌರವವಿತ್ತು. ಹಿರಿಯ ಗಾಯಕ-ವಿದ್ವಾಂಸ ಶೆಮ್ಮಂಗುಡಿ ಶ್ರೀನಿವಾಸ ಅಯ್ಯರ್ ಅವರು ಎಂ.ಡಿ.ಆರ್. ಅವರನ್ನು ‘ಸಂಗೀತಗಾರರ ಸಂಗೀತಗಾರ’ (Musician of musicians) ಎಂದು ಕೊಂಡಾಡಿದ್ದಾರೆ.
ರಾಮನಾಥನ್ ಅವರ ಬಳಿ ಕೃತಿಗಳ ಬಹುದೊಡ್ಡ ಸಂಗ್ರಹವೇ ಇದ್ದರೂ ಕೆಲವು ಕೃತಿಗಳು ಅವರಿಗೆ ತುಂಬಾ ಇಷ್ಟವಾಗಿದ್ದವು. ಅವರ ಒಂದು ವಿಶೇಷವೆಂದರೆ, ಒಂದೇ ಕೃತಿಯನ್ನು ಅವರು ಎರಡು ಸಲ ಹಾಡಿದರೆ ಎರಡು ಸಲವೂ ವಿಭಿನ್ನವಾಗಿರುತ್ತಿತ್ತು. ಅವರ ‘ಎಂದರೋ ಮಹಾನುಭಾವುಲು’ವನ್ನು ಹಲವು ಸಲ ಕೇಳಿದವರು ಎಲ್ಲ ಸಲವೂ ಬೇರೆ ಬೇರೆ ರೀತಿಯ ಅನುಭವವನ್ನು ನೀಡಿತೆಂದು ಹೇಳಿದ್ದಾರೆ. ಕೆಲವು ಸಲ ಅವರು ‘ಮಹಾನುಭಾವುಲು’ದಿಂದ ಆರಂಭಿಸಿಬಿಡುವರು.
ದಿನವೂ ಹೊಸತು
ಇತರ ಸಂಗೀತಗಾರರು ತಮ್ಮ ಪಾಠಾಂತರಕ್ಕೆ ಗಟ್ಟಿಯಾಗಿ ಅಂಟಿಕೊಂಡರೆ ಇವರು ಅದರಲ್ಲಿ ವೈವಿಧ್ಯವನ್ನು ತರುತ್ತಿದ್ದರು. ಉದಾಹರಣೆಗೆ, ಹಿಂದೋಳ ರಾಗದ ‘ಸಾಮಜವರಗಮನ’ವನ್ನು ಹಲವು ಬಣ್ಣಗಳಲ್ಲಿ ಪ್ರಸ್ತುತಪಡಿಸುತ್ತಿದ್ದರು. ಒಂದು ದಿನ ಅದನ್ನು ತುಂಬಾ ವೇಗವಾಗಿ ಹಾಡಿದರೆ (ಮಧ್ಯದಲ್ಲಿ ತಿಸ್ರ ನಡೆಯನ್ನು ಬಳಸುವ ಮೂಲಕ) ಇನ್ನೊಂದು ದಿನ ಆರಾಮವಾಗಿ ಧ್ರುಪದ್ ಶೈಲಿಯಂತೆ ಹಾಡುತ್ತಿದ್ದರು.
ಅವರ ಶೈಲಿಯ ಸಂಗೀತವನ್ನು ಬೇರೆ ಯಾರಲ್ಲೂ ಕಾಣಲು ಸಾಧ್ಯವಿರಲಿಲ್ಲ; ಅದು ಅದ್ವಿತೀಯ. ಸಂಗೀತ ರಸಿಕರ ಮೇಲೆ ಅವರು ಮೋಡಿಯನ್ನೇ ಮಾಡಿದ್ದರು. ಅವರೊಬ್ಬ ನಾದೋಪಾಸಕರಾಗಿದ್ದು, ಸಂಗೀತಕ್ಕಾಗಿ ಸಂಗೀತವನ್ನು ಹಾಡುತ್ತಿದ್ದರು. ಶ್ರೋತೃಗಳ ಸಂಖ್ಯೆ ಕಡಮೆಯಿದ್ದರೆ ಅವರಿಗೇನೂ ಚಿಂತೆಯಿಲ್ಲ. ತನ್ನ ಶೈಲಿಯನ್ನು ಯಾರಾದರೂ ಆಕ್ಷೇಪಿಸಿದರೆ ಅದಕ್ಕೆ ತಲೆಕೆಡಿಸಿಕೊಳ್ಳುವವರೂ ಅಲ್ಲ. ಮುಖ್ಯವಾಗಿ ಅವರು ತನ್ನ ತೃಪ್ತಿಗಾಗಿ ಹಾಡುತ್ತಿದ್ದರು. ಭಾವನೆಗಳಿಂದ ಶ್ರೀಮಂತವಾಗಿ ಶಾಂತಿಯನ್ನು ನೀಡುವ ಸಂಗೀತ ಅವರದಾಗಿದ್ದು, ಆ ರೀತಿಯಲ್ಲಿ ಅವರು ಹೆಚ್ಚಿನ ಸಮಕಾಲೀನರಿಗಿಂತ ಭಿನ್ನವಾಗಿದ್ದರು. ಅವರದ್ದು ಸೌಮ್ಯ, ಶುದ್ಧ ಮತ್ತು ಮನಸ್ಸಿಗೆ ಸಮಾಧಾನ ತರುವ ಸಂಗೀತವಾಗಿತ್ತು. ಗಾಯನದಲ್ಲಿ ಪ್ರಶಾಂತಿಯಿತ್ತು; ವಿಳಂಬಕಾಲದ ಗಾಯನವು ಅವರಿಗೆ ಕೃತಿಯ ಸಾಹಿತ್ಯದ ಬಗೆಗಿನ ಚಿಂತನೆ, ಶೋಧಗಳಿಗೆ ಅವಕಾಶ ನೀಡುತ್ತಿತ್ತು; ಶ್ರೋತೃಗಳಿಗೆ ಕೂಡ ಅಲ್ಲಿಯ ಸಂದೇಶವನ್ನು ಗ್ರಹಿಸಿ ಅರಗಿಸಿಕೊಳ್ಳಲು, ಆ ಕುರಿತು ಚಿಂತಿಸಲು ಅವಕಾಶ ನೀಡುತ್ತಿತ್ತು. ಗಾಯನದ ವೇಳೆ ಅವರು ನಿರ್ಮಿಸುತ್ತಿದ್ದ ವಾತಾವರಣವು ಅತ್ಯಂತ ಆನಂದವನ್ನೇ ತಂದುಕೊಡುತ್ತಿತ್ತು; ಮತ್ತು ಯಾವುದೋ ನದಿದಡದಲ್ಲಿ ಬೆಳದಿಂಗಳಿನಲ್ಲಿ ಕುಳಿತು ಕೇಳಿದ ಅನುಭವವಾಗುತ್ತಿತ್ತು – ಎಂದು ಸಂಗೀತಗಾರರಾದ ಬಿ.ವಿ. ರಾಮನ್ ಮತ್ತು ಬಿ.ವಿ. ಲಕ್ಷö್ಮಣನ್ ಹೇಳಿದ್ದರು.
ಮಂದ್ರಕ್ಕೊಂದು ಮೃದಂಗ
ಎಂ.ಡಿ.ಆರ್. ಅವರ ಸಂಗೀತವನ್ನು ಜನ ಕೇಳಿದೊಡನೆ ಗುರುತಿಸುತ್ತಿದ್ದರು. ಶ್ರೀಮಂತವಾದ ಮಂದ್ರ ಧ್ವನಿ. ಅದು ನಿಸರ್ಗದತ್ತವಾದದ್ದು. ಸಾಮಾನ್ಯವಾಗಿ ಅವರು ಮಂದ್ರ ಸ್ವರದಲ್ಲೇ ಹಾಡುತ್ತಿದ್ದು, ಮೃದಂಗವನ್ನು ಆ ಸ್ಥಾಯಿಗೆ ಹೊಂದಿಸುವುದು ತುಂಬಾ ಕಷ್ಟವಾಗುತ್ತಿತ್ತು. ಅದಕ್ಕಾಗಿ ಖ್ಯಾತ ಮೃದಂಗ ವಾದಕ ಟಿ.ವಿ. ಗೋಪಾಲಕೃಷ್ಣನ್ ಅವರು ಇವರ ಕಛೇರಿಗಳಿಗಾಗಿಯೆ ಒಂದು ವಿಶೇಷ ಮೃದಂಗವನ್ನು ಇರಿಸಿಕೊಂಡಿದ್ದರಂತೆ!
ಅವರದ್ದು ವಿಳಂಬಕಾಲದ ಸಂಗೀತವಾದರೂ ಕೂಡ ಅದನ್ನು ಪೂರ್ತಿಯಾಗಿ ವಿಳಂಬಕಾಲದ್ದೆಂದು ವರ್ಗೀಕರಿಸಲಾಗದು. ಏಕೆಂದರೆ ಕೆಲವು ಸಲ ಅವರು ಮಧ್ಯೆ ಕೆಲವು ವೇಗದ ರಚನೆಗಳನ್ನು ತಂದು, ವೇಗದ ಕಲ್ಪನಾಸ್ವರಗಳನ್ನು ಹಾಡಿ ಕಛೇರಿಯನ್ನು ಚುರುಕುಗೊಳಿಸುತ್ತಿದ್ದರು. ಏನಿದ್ದರೂ ತನ್ನ ಬಲ ಏನೆಂಬುದು ಅವರಿಗೆ ಗೊತ್ತಿತ್ತು; ಅವರ ಮಂದ್ರಸ್ವರ ವಿಳಂಬಕಾಲಕ್ಕೆ ಹೊಂದುವಂಥದಾಗಿದ್ದು ಅದನ್ನವರು ಚೆನ್ನಾಗಿಯೇ ದುಡಿಸಿಕೊಂಡರು. ಅದರಲ್ಲಿ ಅವರ ಸಮೀಪ ಬರುವವರು ಕೂಡ ಇಲ್ಲ. ಇವೆರಡು ಸೇರಿದ್ದರಿಂದ ಅವರ ಸಂಗೀತವು ತುಂಬಾ ಆರಾಮದಾಯಕವಾಗಿತ್ತು (relaxing). ಅವರ ಸಂಗೀತವನ್ನು ನಿರಂತರವಾಗಿ ಕೇಳಿದರೆ ರಕ್ತದ ಒತ್ತಡ (Blood pressure) ಮತ್ತು ಮಾನಸಿಕ ಒತ್ತಡಗಳು ನಿವಾರಣೆಯಾಗುತ್ತವೆ ಎಂದು ಸಲಹೆ ನೀಡಲಾಗುತ್ತಿತ್ತು.
ರಾಗದ ಆಲಾಪನೆಗಳಲ್ಲಿ ರಾಮನಾಥನ್ ಗಮಕಗಳನ್ನು ಪರಿಣಾಮಕಾರಿಯಾಗಿ ಬಳಸುತ್ತಿದ್ದರು. ಅಲ್ಲಿ ಭಾವವು ತುಂಬಿತುಳುಕುತ್ತಿತ್ತು; ಅವರ ಮಂದ್ರ ಸ್ವರ ಇದಕ್ಕೂ ಕೂಡಿ ಬರುತ್ತಿತ್ತು. ಅವರ ರಾಗಬಂಧವು ಸಾಮಾನ್ಯವಾಗಿ ದೀರ್ಘವಾಗಿ ಇರುತ್ತಿರಲಿಲ್ಲ, ಆಲಾಪನೆಯಲ್ಲಿ ಖಚಿತತೆ, ಅಚ್ಚುಕಟ್ಟುತನಗಳು ಅಲ್ಲಿ ಎದ್ದುಕಾಣುತ್ತಿದ್ದವು. ಅವರು ರೂಪಿಸಿದ ರಾಗದ ವಿನ್ಯಾಸವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಒಂದು ರಾಗಕ್ಕೆ ಅಗತ್ಯವಾದ ಸ್ವರಗುಚ್ಛಗಳು (phrase) ಯಾವುವು ಎಂಬುದು ತಿಳಿಯುತ್ತಿತ್ತು; ಏಕೆಂದರೆ ಕಸರತ್ತು ಮತ್ತು ಪಾಂಡಿತ್ಯ ಪ್ರದರ್ಶನಗಳಿಗೆ ಅವರು ದೂರ. ಆ ರಾಗದ ಸ್ವರೂಪ ಏನು ಎಂಬುದು ಶ್ರೋತೃವಿಗೆ ಮನದಟ್ಟಾಗುತ್ತಿತ್ತು; ಮತ್ತು ಆ ರಾಗದ ಸಾರ ಅವನ ಹೃದಯಕ್ಕೆ ಮುಟ್ಟುತ್ತಿತ್ತು.
ಸಹಾನಾ, ಶ್ರೀರಾಗ, ಆನಂದಭೈರವಿ, ರೀತಿಗೌಳ ಮತ್ತು ಯದುಕುಲ ಕಾಂಭೋಜಿ ರಾಗಗಳ ಅವರ ಆಲಾಪನೆಗಳಿಗೆ ಕರ್ನಾಟಕ ಸಂಗೀತದ ಇತಿಹಾಸದಲ್ಲಿ ಶಾಶ್ವತವಾದ ಸ್ಥಾನವಿದೆ. ಅವರು ಈ ಅಪೂರ್ವ ರಾಗಗಳನ್ನು ಹಾಡಿದಾಗ ಅವಕ್ಕೆ ಹೊಸ ಆಯಾಮ ಸಿಗುತ್ತಿತ್ತು. ರಾಮನಾಥನ್ ಅವರಿಗೆ ಪ್ರಿಯವಾದ ಇತರ ರಾಗಗಳಲ್ಲಿ ಕೇದಾರ, ಕಾಂಭೋಜಿ, ಹಂಸಧ್ವನಿ ಮುಂತಾದವು ಸೇರುತ್ತವೆ. ಕಲ್ಪನಾ ಸ್ವರವನ್ನು ಹಾಡುವಾಗ ರಾಮನಾಥನ್ ಸಂಕೀರ್ಣವಾದ ತಾಳದ ಲೆಕ್ಕಾಚಾರಗಳಿಗೆ ನುಗ್ಗುವವರಲ್ಲ; ಆದರೆ ಲಯದ ಮೇಲೆ ಶ್ರೇಷ್ಠಮಟ್ಟದ ಹಿಡಿತ ಇದ್ದೇ ಇದೆ. ವಿಳಂಬಕಾಲದ ಗಾಯನವನ್ನು ಅನುಸರಿಸುತ್ತ ಪಾಲ್ಘಾಟ್ ಮಣಿ ಅಯ್ಯರ್ ಅವರಂತಹ ಮಹಾನ್ ಮೃದಂಗವಾದಕರು ನುಡಿಸಿದ್ದನ್ನು ಕೇಳುವುದೇ ಒಂದು ಸೊಗಸು.
ಸಾಹಿತ್ಯದ ಗಾಯನದಲ್ಲಿ ಅವರ ಅಪೂರ್ವ ಸ್ಪರ್ಶ ಇದ್ದೇ ಇರುತ್ತಿತ್ತು. ನಿಧಾನವಾಗಿ ಚಲಿಸುವುದಲ್ಲದೆ ಮಧ್ಯೆ ಅಲ್ಲಲ್ಲಿ ನಿಲುಗಡೆಗಳು (pause) ಕೂಡ ಇರುತ್ತಿದ್ದವು. ಈ ಶೈಲಿಯು ಪ್ರೊ| ಟಿ.ಎನ್. ಕೃಷ್ಣನ್ ಅವರಂತಹ ಅದ್ಭುತ ವಯೊಲಿನ್ವಾದಕರಿಗೆ ತುಂಬಾ ಅವಕಾಶ ನೀಡುತ್ತಿತ್ತು; ಕೃಷ್ಣನ್ ಅವರು ಗಾಯಕನ ಸ್ವರಗುಚ್ಛಗಳನ್ನು ನಿಧಾನವಾಗಿ ಅನುಸರಿಸುತ್ತ, ಅದರಲ್ಲಿ ಸಂಗೀತಗಾರನ ಸ್ವರವನ್ನೇ ತಂದುಬಿಡುತ್ತಿದ್ದರು; ಅಷ್ಟೊಂದು ಸಮಾನತೆ ಮತ್ತು ಗುಣಮಟ್ಟ! ಪಲ್ಲವಿ ಮತ್ತು ಅನುಪಲ್ಲವಿ ಹಾಗೂ ಚರಣಗಳ ಮಧ್ಯಾಂತರದಲ್ಲಿ ಕೂಡ ಈ ನಿಲುಗಡೆಗಳು ಚೆನ್ನಾಗಿ ಕೂಡಿಬರುತ್ತಿದ್ದವು; ಆಗ ಮೃದಂಗವಾದಕರು ಸುಂದರವಾದ ಲಯವಿನ್ಯಾಸಗಳನ್ನು ನುಡಿಸುತ್ತಿದ್ದರು.
‘ಎಂ.ಡಿ.ಆರ್. ಪಂಥ’
“ರಾಮನಾಥನ್ ಅವರದು ಒಂದು ರೀತಿಯಲ್ಲಿ ವಿಲಕ್ಷಣ ಶಾರೀರ. ಕೇವಲ ಅರ್ಧ ಮನೆಯಷ್ಟು ತಗ್ಗಿನ ಶ್ರುತಿಯಲ್ಲಿ ದುಂಬಿಯಂತೆ ಝೇಂಕರಿಸುತ್ತ ವಿಜೃಂಭಿಸುತ್ತಿದ್ದರು. ಪಕ್ಕವಾದ್ಯ ವಿದ್ವಾಂಸರಿಗೆ ತಗ್ಗು ಶ್ರುತಿ ತೊಡಕಿನ ಸವಾಲಾಗಿದ್ದರೂ ವಿಳಂಬಕಾಲದ ಅವರ ಗಾಯನಕ್ಕೆ ಅದರಿಂದಲೇ ಒಂದು ವಿಶೇಷ ಕಾಂತಿ ಬರುತ್ತಿತ್ತು” ಎಂದು ಎಸ್. ಕೃಷ್ಣಮೂರ್ತಿ ವಿಶ್ಲೇಷಿಸಿದ್ದಾರೆ.
ಮುಂದುವರಿದು “ಟೈಗರ್ ಅವರು ಹಚ್ಚಿಟ್ಟ ಹಣತೆಗೆ ಗುರುಭಕ್ತಿಯ ತೈಲವನ್ನೆರೆದು ಅದನ್ನು ಪ್ರಾಜ್ವಲ್ಯಮಾನವಾಗಿ ಎಂ.ಡಿ.ಆರ್. ಬೆಳೆಸಿದರು ನಿಜ. ಅನೇಕ ವೇಳೆ ಟೈಗರ್ ಅವರಲ್ಲಿ ಆವಿರ್ಭವಿಸುತ್ತಿದ್ದ ಕಲ್ಪನಾವಿಲಾಸಗಳಿಗೆ ಎಂ.ಡಿ.ಆರ್. ಮೂರ್ತ ಸ್ವರೂಪವನ್ನು ಒದಗಿಸುತ್ತಿದ್ದರು ಎಂಬ ಮಾತೂ ಬಹುಮಟ್ಟಿಗೆ ನಿಜ. ಆದರೆ ಟೈಗರ್ ಅವರ ಶೈಲಿಯಷ್ಟನ್ನೂ ಎಂ.ಡಿ.ಆರ್. ಮೈಗೂಡಿಸಿಕೊಂಡಿದ್ದರು ಎಂದು ನನಗೆ ಅನ್ನಿಸುತ್ತಿರಲಿಲ್ಲ. ತಮ್ಮ ಶಾರೀರಧರ್ಮಕ್ಕೆ ಒಪ್ಪುವ ಅಂಶಗಳನ್ನು ಗುರುವಿನಿಂದ ಸಂಗ್ರಹಿಸಿ ತಮ್ಮದಾಗಿಸಿಕೊಂಡು, ‘ಎಂ.ಡಿ.ಆರ್. ಪಂಥ’ ಎಂಬ ತಮ್ಮದೇ ಆದ ಶೈಲಿಯೊಂದನ್ನು ರಾಮನಾಥನ್ ರೂಪಿಸಿಕೊಂಡಿದ್ದರು” ಎಂದು ಕೂಡ ವಿವರಿಸಿದ್ದಾರೆ. ಟೈಗರ್ ಅವರಿಗೆ ಸಾಹಿತ್ಯಭಾವಕ್ಕಿಂತ ರಾಗತಾಳಗಳ ಸೌಂದರ್ಯಾನುಭವ ಮುಖ್ಯವೆನಿಸಿತ್ತು. ಆದರೆ ರಾಮನಾಥನ್ ಅವರಿಗೆ ಸಾಹಿತ್ಯದ ಮೇಲೆ ಸಾಕಷ್ಟು ಪ್ರಭುತ್ವ, ಅಭಿಮಾನ. ರಚನಕಾರರ ಅಂತರಂಗವನ್ನು ಪ್ರವೇಶಿಸಿ ಅವರ ಆಶಯವನ್ನು ಅಭಿವ್ಯಕ್ತಗೊಳಿಸುವ ಕೌಶಲ ಕರಗತವಾಗಿತ್ತು.
ಇನ್ನೊಂದು ಅಂಶವೆಂದರೆ ಟೈಗರ್ ಅವರ ಕಲ್ಪನಾಸಾಮರ್ಥ್ಯಕ್ಕೆ ಸರಿದೂಗುವಂಥ ಶಾರೀರ ಸಂಪತ್ತು ಅವರಿಗೆ ಇರಲಿಲ್ಲವಂತೆ.
ಕೃಷ್ಣಮೂರ್ತಿ ಅವರ ಒಂದು ನೆನಪು ಹೀಗಿದೆ: “ರಸ್ತೆಯಲ್ಲಿ ಅಡ್ಡಾದಿಡ್ಡಿ ಹೆಜ್ಜೆಹಾಕುತ್ತ, ಅಲ್ಲಲ್ಲೇ ನಿಂತು ಮಂಟಪೋತ್ಸವಗಳನ್ನು ನಡೆಸುತ್ತ ಟೈಗರ್ ಅವರಾಗಲಿ ನನ್ನ ತಾತನವರಾಗಲಿ ಹೋಗುವುದನ್ನು ನೋಡುವುದೇ ಒಂದು ಚೆಂದ. ಹತ್ತು ನಿಮಿಷದ ಹಾದಿಯನ್ನು ಸಾಗಲು ಅರ್ಧ, ಮುಕ್ಕಾಲು ಗಂಟೆಯಾದರೂ ಬೇಕಾಗುತ್ತಿತ್ತು. ಆದರೆ ರಾಮನಾಥನ್ ಅವರಿಗೆ ರಸ್ತೆಯಲ್ಲಿ ನಡೆಯುವುದೆಂದರೆ ಆಗದು. ಈ ಬೀದಿಯಿಂದ ಆ ಬೀದಿಗೆ ಹೋಗಬೇಕಾದರೂ ಟಾಂಗಾ, ಜಟಕಾ, ಟ್ಯಾಕ್ಸಿ – ಹೀಗೆ ಯಾವುದಾದರೊಂದು ವಾಹನದ ವ್ಯವಸ್ಥೆ ಇದ್ದೇ ಇರಬೇಕು!” ಬಹುಶಃ ರಾಮನಾಥನ್ ಅಭಿಮಾನಿ ಮಹಾನ್ ಸಾಹಿತಿ, ಕವಿ ಡಿವಿಜಿ ಅವರು ಕೂಡ ಇದೇ ರೀತಿ ಮಂಟಪೋತ್ಸವ ಮಾಡುತ್ತಿದ್ದಿರಬೇಕಲ್ಲವೆ?
ಗುರುಗಳ ಅಗಲಿಕೆ
೧೯೫೦ರ ಜನವರಿ ೩೧ ಬೆಳಗ್ಗೆ ೮ರ ಸಮಯ. ಟೈಗರ್ ವರದಾಚಾರ್ ಅವರು ಭಾವಮೈದುನ ರಂಗರಾಜನ್ ಅವರನ್ನು ಹತ್ತಿರಕ್ಕೆ ಕರೆದು “ರಾಜು, ನನ್ನನ್ನು ತಮ್ಮ ಲೋಕಕ್ಕೆ ಕರೆದೊಯ್ಯಲು ನನ್ನ ಪೂಜ್ಯರೆಲ್ಲರೂ ದಯಮಾಡಿಸಿದ್ದಾರೆ. ಈ ಸಂಜೆಯೊಳಗಾಗಿ ನನ್ನ ಪ್ರಯಾಣ!” ಎಂದರು. ರಂಗರಾಜನ್ಗೆ ದಿಕ್ಕೇ ತೋಚದಂತಾಯಿತು. ಮಧ್ಯಾಹ್ನ ೨ ಗಂಟೆಯ ಸಮಯ. ಪ್ರಿಯಶಿಷ್ಯ ಎಂ.ಡಿ.ಆರ್. ಅವರನ್ನು ಹತ್ತಿರ ಕರೆದು ಅಕ್ಕರೆಯಿಂದ ತಲೆ ಸವರುತ್ತ, ತ್ಯಾಗರಾಜರ ಹರಿಕಾಂಭೋದಿ ರಾಗದ ‘ಎಂತರಾನೀ ತನಕೆಂತ ಪೋನಿ’ ಎಂಬ ಕೃತಿಯನ್ನು ಹಾಡುವಂತೆ ಹೇಳಿದರು ಟೈಗರ್. ಶಿಷ್ಯ ತೇಲಿಬಿಟ್ಟ ನಾದನೌಕೆಯಲ್ಲಿ ಕುಳಿತು ಗುರುಗಳು ನಾದಬ್ರಹ್ಮನ ದಿವ್ಯಸಾನ್ನಿಧ್ಯದತ್ತ ತೆರಳಿದರು! ಕಲಾಕ್ಷೇತ್ರದಲ್ಲಿ ಕಣ್ಣೀರ ಕಾಲುವೆಯೇ ಹರಿಯಿತಂತೆ.
ಟೈಗರ್ ಅವರಿಗೆ ವಕ್ರಸಂಚಾರ ರಾಗಗಳಲ್ಲಿ ವಿಶೇಷ ಆಸಕ್ತಿ, ಅಭಿರುಚಿಯಾದರೆ, ರಾಮನಾಥನ್ ಅವರಿಗೆ ಸ್ವರವಿಹಾರಕ್ಕಿಂತ ರಾಗವಿಹಾರದ ಕಡೆಗೆ ಹೆಚ್ಚಿನ ಒಲವು. ಸಾಗರದಂತೆ ವಿಸ್ತಾರವಾದ ರಾಗಗಳೇ ಅವರಿಗೆ ಪ್ರಿಯ. ತಾಳದ ಚಮತ್ಕಾರಗಳು ಅವರಿಗೆ ಬೇಡ. ಭಾವುಕತೆ ಅವರ ಸಂಗೀತದ ಜೀವನಾಡಿ. ತಮ್ಮ ಸಂಗೀತದಲ್ಲಿ ತಮ್ಮನ್ನೇ ತಾವು ಮರೆಯುತ್ತಿದ್ದರು. ಆಗ ಕೆಲವು ಸಲ ಸಾಹಿತ್ಯ ಆಚೀಚೆ ಆಗುವುದೂ ಇತ್ತು.
‘ತಲೆಗೆಲ್ಲ ಒಂದೇ ಶಾಸ್ತ್ರ’ ಎನ್ನುವಂತೆ ರಾಮನಾಥನ್ ಎಲ್ಲ ರಚನೆಗಳನ್ನು ಒಂದೇ ಕಾಲಪ್ರಮಾಣದಲ್ಲಿ ಹಾಡುತ್ತಾರೆ, ಇದರಿಂದ ಅವರ ಕಛೇರಿಯಲ್ಲಿ ವೈವಿಧ್ಯವಿರುವುದಿಲ್ಲ – ಎಂಬ ಅಪಸ್ವರ ಕೆಲವು ಸಲ ಕೇಳಿಬಂದದ್ದಿದೆ. ಆದರೆ ಇದು ಮೇಲುನೋಟದ ಆಕ್ಷೇಪಣೆ ಎಂದಿದ್ದಾರೆ ಎಸ್. ಕೃಷ್ಣಮೂರ್ತಿ. ಅದೇ ರೀತಿ ಹಾಡುವಾಗ ಕೃತಿಯ ಸಾಹಿತ್ಯದಲ್ಲಿ ಮಧ್ಯೆ ಮಧ್ಯೆ ತಮ್ಮ ಕೆಲವು ಪದಗಳನ್ನು ಸೇರಿಸುತ್ತಾರೆ. ಉದಾಹರಣೆಗೆ, ತ್ಯಾಗರಾಜರ ಒಂದು ಕೃತಿಯನ್ನು ಹಾಡುವಾಗ ರಾಮ ಎಂದಿದ್ದ ಕಡೆ ಅವರು ಶ್ರೀ ಅಥವಾ ಆನಂದ ಎಂಬ ಪದವನ್ನು ಸೇರಿಸಿಬಿಡುತ್ತಾರೆ. ಇದು ವಾಗ್ಗೇಯಕಾರರ ವಿಷಯದಲ್ಲಿ ಹೆಚ್ಚಿನ ಸ್ವಾತಂತ್ರ್ಯ ವಹಿಸಿದಂತೆ – ಎನ್ನುವ ಟೀಕೆ ಇತ್ತು.
ಇದನ್ನು ಮೆಚ್ಚಿಕೊಂಡವರು ಕೂಡ ಇದ್ದಾರೆ. “ಒಬ್ಬ ಗಾಯಕ ಒಂದು ಹಾಡನ್ನು ತನ್ನದಾಗಿ ಮಾಡಿಕೊಂಡು ಹಾಡಬೇಕು” ಎಂದವರು ಸಂಗೀತಗಾರ ಪ್ರಿನ್ಸ್ ರಾಮವರ್ಮ ಅವರು. “ಎಂ.ಡಿ.ಆರ್. ಅವರು ತ್ಯಾಗರಾಜ ಅಥವಾ ದೀಕ್ಷಿತರ ಕೃತಿಯನ್ನು ಹಾಡುವಾಗ ಅದು ಎಂ.ಡಿ.ಆರ್. ಅವರ ಸ್ವಂತ ರಚನೆಯೇನೋ ಎಂಬಂತೆ ಕಾಣಿಸುತ್ತದೆ ಎಂದು ಜನ ಹೇಳುತ್ತಾರೆ. ಇದರ ಅರ್ಥವೆಂದರೆ ಎಂ.ಡಿ.ಆರ್. ಅವರು ಸಂಗೀತ ತ್ರಿಮೂರ್ತಿಗಳ ಕೃತಿಯನ್ನು ಹಾಡಿದರೂ ಕೂಡ ಅದರ ಮೇಲೆ ಎಂ.ಡಿ.ಆರ್. ಅವರ ಖಚಿತ ಮುದ್ರೆ ಇರುತ್ತಿತ್ತು” ಎಂದವರು ಹೇಳಿದ್ದಾರೆ. ತ್ಯಾಗರಾಜರ ರೀತಿಗೌಳ ರಾಗದ ಕೃತಿಯನ್ನು ಹಾಡುವಾಗ ಅವರು ರಾಮನ ವರ್ಣನೆಯ ವಿಶೇಷಣಗಳನ್ನು ಸೇರಿಸುವವರೇ.
ವಾಗ್ಗೇಯಕಾರನಾಗಿ
ರಾಮನಾಥನ್ ಅವರು ಸುಮಾರು ೩೦೦ ಕೃತಿಗಳನ್ನು ರಚಿಸಿದ್ದರು. ತಮ್ಮ ಗುರುಗಳನ್ನು ಕುರಿತು ಹಂಸಧ್ವನಿ ರಾಗದಲ್ಲಿ ರಚಿಸಿದ ‘ಶ್ರೀ ಗುರುವರಮ್’ ಕೃತಿ ಅದರಲ್ಲೊಂದು. “ಹಂಸಧ್ವನಿಯಂತಹ ಸುಂದರರಾಗವನ್ನು ಕೆಟ್ಟದಾಗಿ ಹಾಡಿದರೆ ಅದು ಹಿಂಸಧ್ವನಿಯಾಗುತ್ತದೆ” ಎಂಬುದು ಅವರ ಒಂದು ಮಾತು ಮತ್ತು ಜೋಕು. “ಒಂದು ಒಳ್ಳೆಯ ಹಂಸಧ್ವನಿ ಬೇಕಿದ್ದರೆ ಆರೋಹಣ ಅವರೋಹಣಗಳನ್ನು ಸ್ವಲ್ಪ ಹೊತ್ತು ಮರೆಯಿರಿ. ರಾಗವನ್ನು ಮರೆಯಬೇಡಿ; ಆದರೆ ಆರೋಹಣ ಅವರೋಹಣದಲ್ಲೇ ನಿಂತುಬಿಡಬೇಡಿ. ನಾನು ಹಂಸಧ್ವನಿಯನ್ನು ಹಾಡುವಾಗ ಕೇದಾರದ ಸ್ವರಗುಚ್ಛಗಳು ನುಸುಳುತ್ತವೆ ಎಂದು ಕೆಲವು ವಿಮರ್ಶಕರು (ಟೀಕಾಕಾರರು?) ಹೇಳುತ್ತಾರೆ. ಆದರೆ ನನ್ನ ಪ್ರಕಾರ ಅವರು ನನ್ನನ್ನು ಟೀಕಿಸುವುದಕ್ಕೆ ಏನಾದರೂ ಸಿಗುತ್ತದೆಯೇ ಎಂದು ನೋಡುತ್ತಿದ್ದಾರಷ್ಟೆ” ಎಂದವರು ಹೇಳಿದರು.
ವಿಮರ್ಶಕರಿಗೆ ಸಲಹೆ
ಮುಂದುವರಿದು, “ಒಬ್ಬ ಚಿತ್ರಕಾರ ಒಂದು ಪ್ರಾಣಿಯ ಚಿತ್ರವನ್ನು ಬಿಡಿಸುತ್ತಾನೆ ಎಂದಿಟ್ಟುಕೊಳ್ಳಿ; ಮೊದಲ ಪ್ಯಾನೆಲ್ನಲ್ಲಿ ಕೇವಲ ಬಾಲದ ಚಿತ್ರ ಬರಬಹುದು. ಆತ ಬಾಲವನ್ನು ಮುಗಿಸುವ ಮೊದಲೇ ಆ ಪ್ರಾಣಿ ಏನೆಂದು ನೀವು ಹೇಳಬಹುದೆ? ಆತ ಆರಂಭಿಸಿದ್ದು ಮಾತ್ರ. ಆತ ಏನು ಬಿಡಿಸುತ್ತಾನೆಂದು ನೀವು ಮೊದಲೇ ಹೇಳಲು ಸಾಧ್ಯವಾಗುವುದಿಲ್ಲ. ಆತನ ಕೆಲಸದ ಗುಣಮಟ್ಟವನ್ನು ಹೇಳಬೇಕಿದ್ದರೆ ಮುಗಿಯುವವರೆಗೆ ನೀವು ಕಾಯಬೇಕು. ಅದೇ ರೀತಿ ಇಡೀ ಚಿತ್ರವನ್ನು ಗಮನಿಸದೆ ನೀವು ಸಂಗೀತದ ಬಗ್ಗೆ ತೀರ್ಮಾನ ಹೇಳಬಾರದು. ಹಾಡುವಾಗ ಕೆಲವು ಸಲ ನಿಮಗೆ ಸಮೀಪದ ರಾಗಗಳ ಮಿಂಚು ಕಾಣಿಸಬಹುದು. ಚಿಂತೆ ಬೇಡ. ಶಂಕರಾಭರಣ ರಾಗದಲ್ಲಿ ಕೆಲವು ಸಲ ನಿಮಗೆ ಕಾನಡದ ಫ್ರೇಸ್ಗಳು ಕಾಣಿಸಬಹುದು. ವಿಮರ್ಶಕರು ಇದೇ ರೀತಿ ಬರೆಯುವುದನ್ನು ಮುಂದುವರಿಸಿದರೆ ಮತ್ತು ನಾನು ಅವರೇನು ಹೇಳುತ್ತಾರೆಂದು ನೋಡುತ್ತ ಕುಳಿತರೆ, ನನಗೆ ಒಂದು ರಾಗದ ಆರೋಹಣ ಅವರೋಹಣವನ್ನು ಬಿಟ್ಟು ಬೇರೆ ಏನನ್ನೂ ಹಾಡಲು ಸಾಧ್ಯವಾಗಲಾರದು. ವಿಮರ್ಶಕರು ಅಪ್ರಯೋಜಕ ವಿಶ್ಲೇಷಣೆಯಲ್ಲೇ ಕಾಲಕಳೆಯಬಾರದು” ಎಂದು ನಿರ್ಭಿಡೆಯಿಂದ ಹೇಳಿದ್ದರು. ಈ ಸಂಬಂಧವಾಗಿ ಬಹುದೊಡ್ಡ ಒಂದು ಪ್ರಶ್ನೆಗೆ ಅವರಿಲ್ಲಿ ಉತ್ತರಿಸಿದಂತಾಗಿದೆ. ಕಾಳಿದಾಸನ ಕಾವ್ಯದ ಸೌಂದರ್ಯವನ್ನು ಆಸ್ವಾದಿಸುವ ಬದಲು ಅಲ್ಲಿ ವ್ಯಾಕರಣದೋಷ ಇದೆಯೇ ಎಂದು ಹುಡುಕುತ್ತ ಕುಳಿತರೆ ನಷ್ಟ ಯಾರಿಗೆ?
“ಕೃತಿಗಳನ್ನು ಹಾಡುವುದಕ್ಕೆ ಒಂದು ಕ್ರಮವಿದೆ; ಅಲ್ಲಿ ಕೃತಿಯ ಅರ್ಥ ಹೊರಕ್ಕೆ ಬರಬೇಕು. ‘ತಲ್ಲಿ ನಿನ್ನು’ ವನ್ನು ರೂಲ್ಬುಕ್ನ ಪ್ರಕಾರ ಹಾಡುತ್ತ ಕುಳಿತರೆ ಕಾಮಾಕ್ಷಿದೇವಿ ಅಷ್ಟರಲ್ಲಿ ಓಡಿಹೋಗಿರುತ್ತಾಳೆ” ಎಂದೂ ಅವರು ತನ್ನ ನಿಲವನ್ನು ಸ್ಪಷ್ಟಪಡಿಸಿದ್ದರು.
ಅವರ ಇನ್ನೊಂದು ಮಾತು ಹೀಗಿದೆ: “ಒಬ್ಬ ಸಂಗೀತಗಾರನ ಜೀವನವು ಗುಲಾಬಿಹೂವಿನ ಹಾಸಿಗೆಯಾಗಿರಲು ಸಾಧ್ಯವಿಲ್ಲ. ಒಬ್ಬಾತನಿಗೆ ನೀವು ಅಂತಹ ಹಾಸಿಗೆ ನೀಡಿದರೆ ಆತ ಅದರಿಂದ ಮೇಲಕ್ಕೇಳುವುದಿಲ್ಲ; ಸೋಮಾರಿಯಾಗುತ್ತಾನೆ ಅಷ್ಟೆ. ಸವಾಲುಗಳು ಒಬ್ಬ ವ್ಯಕ್ತಿಯನ್ನು ರೂಪಿಸುತ್ತವೆ. ಅದಲ್ಲದೆ ಹಾಡಿದ್ದೆಲ್ಲ ಸಂಗೀತ ಆಗುವುದಿಲ್ಲ. ಹಕ್ಕಿಗಳು ಕೂಡ ಹಾಡುತ್ತವೆ. ಅದನ್ನು ಸಂಗೀತ ಎನ್ನಬಹುದೆ?”
ಸಂಶೋಧಕರಾದ ಎಮಿ ಕ್ಯಾಟ್ಲಿನ್ ಮತ್ತು ಫ್ರೆಡರಿಕ್ ಲಿಬರ್ಮ್ಯಾನ್ಗೆ ನೀಡಿದ ಸಂದರ್ಶನದಲ್ಲಿ ಎಂ.ಡಿ.ಆರ್. “ಸಂಗೀತವನ್ನು ಸೃಷ್ಟಿಸುವ ಪ್ರಕ್ರಿಯೆಯು ಸಂಗೀತಕ್ಕಿಂತಲೂ ಅರ್ಥಪೂರ್ಣವಾದದ್ದು. ಒಂದು ಒಳ್ಳೆಯ ಕಲೆಗೆ ಇದೇ ಸಾರರೂಪವಾದದ್ದು. ಇಲ್ಲವಾದರೆ ಒಬ್ಬರ ಸಂಗೀತವು ವ್ಯಾಕರಣ ಮತ್ತು ತಾಂತ್ರಿಕತೆಯ ದೃಷ್ಟಿಯಿಂದ ಪರಿಪೂರ್ಣ ಇರಬಹುದು; ಆದರೆ ಶ್ರೋತೃವಿಗೆ ಏನೋ ಮಿಸ್ಸಾಗಿದೆ ಎಂದು ಅನ್ನಿಸುತ್ತಿರಬಹುದು” ಎಂದಿದ್ದರು. ಅವರ ಸಂಗೀತವು ಬೌದ್ಧಿಕ ಕಸರತ್ತೂ ಅಲ್ಲ; ಕೇವಲ ಮನೋರಂಜನೆಯೂ ಅಲ್ಲ. ಮನಸ್ಸು, ಹೃದಯ ಎರಡಕ್ಕೂ ಅದು ಮುಟ್ಟುತ್ತಿತ್ತು. ಅವರ ಸಂಗೀತವನ್ನು ಕೇಳಿ ಹಲವು ಸಲ ಶ್ರೋತೃಗಳ ಕಣ್ಣು ಹನಿಗೂಡುತ್ತಿದ್ದವು. “ಯಾರಿಗೂ ಅರೆಕಾಲಿಕ ಸಂಗೀತಗಾರನಾಗಲು ಸಾಧ್ಯವಿಲ್ಲ. ದಿನದ ೨೪ ತಾಸು ಕೂಡ ಸಂಗೀತದ ಜೊತೆಗೇ ಇರಬೇಕು” ಎಂದವರು ಹೇಳುತ್ತಿದ್ದರು. ಸಿನೆಮಾ ನೋಡಲೆಂದು ಹೋದ ಅವರಿಗೆ ಮಧ್ಯದಲ್ಲಿ ಹಠಾತ್ತಾಗಿ ಯಾವುದೋ ಕೃತಿ ಅಥವಾ ರಾಗದ ಯೋಚನೆ ಬಂದು ಮಧ್ಯದಲ್ಲೇ ಎದ್ದು ಮನೆಗೆ ಬಂದ ಉದಾಹರಣೆಗಳಿವೆಯಂತೆ.
ಬಿಡಲಾಗದ ಅಂಗಚೇಷ್ಟೆ
“ರಾಗಭಾವಗಳನ್ನಾಗಲಿ ಸಾಹಿತ್ಯದ ಸ್ವಾರಸ್ಯಗಳನ್ನಾಗಲಿ ಅಭಿವ್ಯಕ್ತಗೊಳಿಸುವಾಗ ರಾಮನಾಥನ್ ವಿವಿಧ ಮುಖವಿನ್ಯಾಸ, ಕರವಿನ್ಯಾಸ, ನೇತ್ರ ವಕ್ತç ವಿಕಾರಗಳನ್ನು ಮಾಡುತ್ತಿದ್ದರು (ಗುರು ಟೈಗರ್ ಕೂಡಾ ಹಾಗೇ ಇದ್ದರು). ಸಮಾನಧರ್ಮಿಗಳಿಗೆ ಅವೆಲ್ಲ ಅರ್ಥಪೂರ್ಣವಾದರೂ ಸಾಮಾನ್ಯ ಜನರಿಗೆ ಅವು ವಿಕಟ ಅಭಿನಯದಂತೆ ಕಾಣಿಸುತ್ತಿದ್ದವು. ಜನರ ದೃಷ್ಟಿಯಲ್ಲಿ ಒಂದು ಟೈಗರ್, ಇನ್ನೊಂದು ಟೈಗರ್ ಮರಿ!” ಎಂದು ಬಹಳಷ್ಟು ಜನ ಹೇಳಿದ ಈ ವಿಷಯದ ಬಗ್ಗೆ ಎಸ್. ಕೃಷ್ಣಮೂರ್ತಿ ಪ್ರಸ್ತಾವಿಸಿದ್ದಾರೆ. ಎಂ.ಡಿ.ಆರ್. ವೇದಿಕೆಯ ಮ್ಯಾನರಿಸಮ್ನಿಂದಲೇ ಹೆಚ್ಚು ಪ್ರಸಿದ್ಧರಾದರು ಎಂದವರೂ ಇದ್ದಾರೆ. ಮೆಳ್ಳಗಣ್ಣು ಒಂದಾದರೆ, ಪಿಳ್ಳೆಜುಟ್ಟು, ಅದರ ಅಲುಗಾಟ, ಬಿಚ್ಚಿಹೋದ ಅದನ್ನು ಆಗಾಗ ಕಟ್ಟಿಕೊಳ್ಳುವುದು ಇನ್ನೊಂದು. ಅದಲ್ಲದೆ ಒಮ್ಮೊಮ್ಮೆ ಕೃತಿಯ ಅರ್ಥ ಹೇಳುತ್ತ ಶ್ರೋತೃಗಳೊಂದಿಗೆ ಮಾತಿಗಿಳಿಯುವುದು ಕೂಡ ಇತ್ತು.
ಇದು ಹೆಚ್ಚಾಯಿತೆನಿಸಿ ಅವರ ಸಂಗೀತದ ಅಭಿಮಾನಿಯಾದ ಶೆಮ್ಮಂಗುಡಿ ಅವರೇ ಒಮ್ಮೆ ಅದನ್ನು ಸರಿಪಡಿಸುವ ಪ್ರಯತ್ನ ಮಾಡಿದರು: “ಇದೆಲ್ಲ ಸರಿ, ರಾಮನಾಥ. ಹಾಡುವಾಗ ನಿನ್ನ ಅಂಗಚೇಷ್ಟೆಗಳನ್ನು ಸ್ವಲ್ಪ ಕಡಮೆ ಮಾಡಲು ಸಾಧ್ಯವಿಲ್ಲವೆ?” ಎಂದು ಕಿವಿಮಾತು ಹೇಳಿದರು. ಆಗ ಎಂ.ಡಿ.ಆರ್. “ಅದೆಲ್ಲ ಕಡಮೆ ಮಾಡಲು ಹೋದರೆ ನನ್ನ ಸಂಗೀತದ ಜೀವಾಳವೇ ಬತ್ತಿಹೋದಂತಾಗುವುದಲ್ಲ!” ಎಂದು ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿದರು. ತಡವಿಲ್ಲದೆ ಶೆಮ್ಮಂಗುಡಿ “ಅಯ್ಯಯ್ಯೋ, ಹಾಗಾಗುವುದು ಮಾತ್ರ ಬೇಡ. ನಿನ್ನ ಸಂಗೀತಕ್ಕೋಸ್ಕರ ಎಷ್ಟು ಬೇಕಾದರೂ ನಿನ್ನ ಮುಖವಿಕಾರ ಅಂಗಚೇಷ್ಟೆಗಳನ್ನು ಸಹಿಸಿಕೊಳ್ಳೋಣವಂತೆ” ಎಂದರಂತೆ.
ಎಂ.ಡಿ.ಆರ್. ರಚಿಸಿದ ಸುಮಾರು ೩೦೦ ಕೃತಿಗಳಲ್ಲಿ ವರ್ಣ, ಕೃತಿಗಳು ಮತ್ತು ತಿಲ್ಲಾನಗಳು ಸೇರಿವೆ. ಸಂಸ್ಕೃತ, ತಮಿಳು ಮತ್ತು ತೆಲುಗುಗಳಲ್ಲಿ ಅವರು ಕೃತಿಗಳನ್ನು ರಚಿಸಿದ್ದಾರೆ. ಕೆಲವು ಕೃತಿಗಳು ದೇವಸ್ಥಾನಗಳಲ್ಲಿ ಹಾಡುವಾಗ ಆಗಲೇ ಅವರ ಬಾಯಿಂದ ಹೊರಹೊಮ್ಮಿದಂಥವು. ಆದರೆ ತಮ್ಮ ಕೃತಿಗಳನ್ನು ಹಾಡಲು ಅವರು ಹಿಂಜರಿಯುತ್ತಿದ್ದರು; ಮೆರೆಸುವ ಪ್ರಯತ್ನವಂತೂ ಇಲ್ಲವೇ ಇಲ್ಲ. ‘ವರದದಾಸ’ (ಗುರುಗಳ ಹೆಸರಿನಲ್ಲಿ) ಅವರ ಅಂಕಿತ. ಅವುಗಳಲ್ಲಿ ಹೆಚ್ಚಿನವು ಅವರ ಕೈಬರೆಹದ ನೋಟ್ಬುಕ್ಗಳಿಂದ ಹೊರಗೆ ಬಂದಿಲ್ಲ. ಇದರಲ್ಲಿ ಕವಿತ್ವಕ್ಕಿಂತ ಕಪಿತ್ವವೇ ಜಾಸ್ತಿಯಿದೆ ಎಂದೂ ಅವರೇ ಹೇಳುತ್ತಿದ್ದುದುಂಟು. ಒಟ್ಟು ಸುಮಾರು ೨೫ ಮಾತ್ರ ಪ್ರಚಲಿತವಿದ್ದು, ಕೇದಾರ ರಾಗದ ‘ತ್ಯಾಗರಾಜ ಗುರುಮ್’, ಬಾಗೇಶ್ರೀಯ ‘ಸಾಗರ ಶಯನ ವಿಭೋ’, ಅಠಾಣದ ‘ಹರಿಯುಮ್ ಹರನುಮ್’, ನೀಲಾಂಬರಿಯ ‘ರಾಮ ಕೋದಂಡರಾಮ’, ಬಿಲಹರಿಯ ತಿಲ್ಲಾನ ಪ್ರಸಿದ್ಧಿ ಪಡೆದಿವೆ.
ಬಹುಭಾಷಾವಿದ
ಹಾಡುವ ಸಾಹಿತ್ಯಕ್ಕೆ ಭಾವವನ್ನು ತುಂಬಬೇಕಿದ್ದರೆ ಅದು ಅರ್ಥವಾಗಬೇಕಲ್ಲವೆ? ಗಾಯಕರು ಹಾಡುವಾಗ ಸಾಮಾನ್ಯವಾಗಿ ಯಾವುದು ಅವರಿಗೆ ಗೊತ್ತಿರುವ ಭಾಷೆ ಮತ್ತು ಯಾವುದು ಗೊತ್ತಿಲ್ಲದ ಭಾಷೆ ಎಂಬುದು ಶ್ರೋತೃಗಳಿಗೆ ತಿಳಿಯದೆ ಇರುವುದಿಲ್ಲ. ತೆಲುಗು, ತಮಿಳು, ಮಲೆಯಾಳ, ಕನ್ನಡ ಮತ್ತು ಸಂಸ್ಕೃತ ಭಾಷೆಗಳು ಅವರಿಗೆ ಚೆನ್ನಾಗಿ ತಿಳಿದಿದ್ದವು. ಇದರಲ್ಲಿ ನಾಲ್ಕು ಭಾಷೆಗಳನ್ನು (ಕನ್ನಡ ಹೊರತು) ಅವರು ಆಯಾ ಲಿಪಿಗಳಲ್ಲಿ ಬರೆಯಬಲ್ಲವರಾಗಿದ್ದರು.
ಮದ್ರಾಸಿನ ಕಲಾಕ್ಷೇತ್ರದಲ್ಲಿ ಸಂಗೀತದ ಶಿಕ್ಷಕರಾಗಿ, ಪ್ರಾಧ್ಯಾಪಕರಾಗಿ ದೀರ್ಘ ಕಾಲ ಬೋಧಿಸಿದ ರಾಮನಾಥನ್, ಅದಕ್ಕೆ ತಮ್ಮದಾದ ವಿಶಿಷ್ಟ ಕ್ರಮವನ್ನು ರೂಪಿಸಿಕೊಂಡಿದ್ದರು. ಕಟ್ಟುನಿಟ್ಟಾದ ಒಂದು ವಿಧಾನ ಅವರದಾಗಿತ್ತು. ತರಗತಿಯಲ್ಲಿ ವಿದ್ಯಾರ್ಥಿಗಳು ನೋಟ್ಸ್ ತೆಗೆದುಕೊಳ್ಳುವುದಕ್ಕೆ ಅವಕಾಶವಿಲ್ಲ. ಇದು ಶಾಸ್ತ್ರೀಯ ಕಲೆಗಳ ಬೋಧನೆಯಲ್ಲಿ ಪ್ರಾಚೀನಕಾಲದಿಂದ ನಡೆದುಬಂದ ಕ್ರಮ. ಕಲಿಕೆಯು ವಿದ್ಯಾರ್ಥಿಯ ಅನುಭವಕ್ಕೆ ಸೇರಿಕೊಳ್ಳಬೇಕು. ನೋಟ್ಸ್ ಬರೆದುಕೊಂಡರೆ ಅದು ಪುಸ್ತಕದಲ್ಲೇ ಉಳಿದುಬಿಡುತ್ತದೆ ಎಂಬುದು ತಾತ್ಪರ್ಯ. ಬರೆದುಕೊಳ್ಳದೆ ಎಲ್ಲವೂ ನೆನಪಿನಲ್ಲಿ ಉಳಿಯುತ್ತದೆಯೆ ಎಂಬ ಪ್ರಶ್ನೆ ಇಲ್ಲಿ ಬರಬಹುದು. ಆದರೆ ಎಂ.ಡಿ.ಆರ್. ಅವರ ಪಾಠಗಳು ಎಷ್ಟು ರಸವತ್ತಾಗಿ ಇರುತ್ತಿದ್ದವೆಂದರೆ, ವಿದ್ಯಾರ್ಥಿಗಳಿಗೆ ಅದನ್ನು ನೆನಪಿಡಲು ಕಷ್ಟವಾಗುತ್ತಲೇ ಇರಲಿಲ್ಲ; ನೆನಪಿಡುವ ಹಲವು ತಂತ್ರಗಳು ಅಲ್ಲಿದ್ದವು. ಉದಾಹರಣೆಗೆ, ನೀ ಧ ಪ ಮಾ ವನ್ನು ‘ನೀ ತಪ್ಪಮ್ಮಾ’ (ನೀನು ಮಾಡುತ್ತಿರುವುದು ತಪ್ಪು), ಇತ್ಯಾದಿ. ‘ನೆನಪಿಡುವ ನಿಮ್ಮ ರೀತಿಯನ್ನು ನೀವೇ ಕಂಡುಕೊಳ್ಳಿ’ ಎಂದು ಕೂಡ ಹೇಳುತ್ತಿದ್ದರು.
ಶರಣ-ಮರಣ
ಜೀವನವು ಸುಖದ ಸುಪ್ಪತ್ತಿಗೆಯಲ್ಲಿ ಇರಬಾರದೆಂದು ರಾಮನಾಥನ್ ಹೇಳಿದರು. ಜೀವಿತಕಾಲದಲ್ಲಿ ಅವರದನ್ನು ಸಾಕಷ್ಟು ಅನುಭವಿಸಿದರು. ಕೊನೆಯ ದಿನಗಳಂತೂ ತುಂಬಾ ನೋವು ನೀಡಿದವು. ಎಸ್. ಕೃಷ್ಣಮೂರ್ತಿ ಅದನ್ನು ಹೀಗೆ ವಿವರಿಸುತ್ತಾರೆ: “ಯೋಗ್ಯತೆಗೆ ಸಲ್ಲಬೇಕಾದ ಯೋಗ ಸಕಾಲದಲ್ಲಿ ಪ್ರಾಪ್ತವಾಗುವುದು ವಿರಳ. ರಾಮನಾಥನ್ ಭಾಗ್ಯಲಕ್ಷ್ಮಿಯಿಂದ ವಂಚಿತರಾದವರು. ಸಲ್ಲಬೇಕಾದ ಎಷ್ಟೋ ಗೌರವ, ಪುರಸ್ಕಾರಗಳು ಅವರ ಪಾಲಿಗೆ ಬರಲೇ ಇಲ್ಲ. ಕರುಳಿನ ಕ್ಯಾನ್ಸರ್ ರೋಗದಿಂದ ನರಳುತ್ತ ಸಾವಿನ ಅಂಚಿನಲ್ಲಿದ್ದಾಗಲೂ ವೃತ್ತಿಬಾಂಧವರು ತೋರಿದ ಅನಾದರಣೆಯೂ, ಅವರ ನಾದಸುಧೆಯಲ್ಲಿ ಮಿಂದು ನಲಿದಾಡಿದ ಜನ ಅವರನ್ನು ಕಡೆಗಾಣಿಸಿದ್ದೂ ದುರ್ದೈವದ ಸಂಗತಿ. ಆದರೆ ಶಸ್ತ್ರಚಿಕಿತ್ಸೆಗೆ ತಗಲುವ ವಿಷಯವನ್ನು ಶಸ್ತ್ರತಜ್ಞರಲ್ಲಿ ಚರ್ಚಿಸಿದಾಗ ಅವರು ಆಡಿದ ಮಾತು ಮಾತ್ರ ಮರ್ಮಭೇದಕವಾದದ್ದು: “ನಮ್ಮ ತನು-ಮನಗಳನ್ನು ನಾದಸುಧೆಯಿಂದ ತಣಿಸಿದ ಈ ಮಹಾನುಭಾವನ ಕರುಳಿಗೆ ಕತ್ತರಿ ಹಾಕಲು ನಾನು ಹಣ ಪಡೆದರೆ ದೈವ ಮೆಚ್ಚುವುದೆ?” ಎಂದು ಉಚಿತ ಚಿಕಿತ್ಸೆಗೆ ಅನುವಾದರು. ಆದರೆ ಅದಕ್ಕೆ ಮುಂಚಿತವಾಗಿಯೇ ಎಂ.ಡಿ.ಆರ್. ಸಾವನ್ನಪ್ಪಿದ್ದರು!
ಎಂ.ಡಿ.ಆರ್. ಅವರ ಮರಣವಾರ್ತೆಯನ್ನು ಕೇಳಿದ ಶೆಮ್ಮಂಗುಡಿ “ಗಟ್ಟಿ ಸಂಗೀತ ಇನ್ನು ಹೋಯಿತು!” ಎಂದು ಒಂದೇ ಮಾತಿನಲ್ಲಿ ರಾಮನಾಥನ್ ಅವರ ಸಂಗೀತದ ಔನ್ನತ್ಯವನ್ನು ಕೊಂಡಾಡಿದರಂತೆ. ಅಂದು ಏಪ್ರಿಲ್ ೨೭, ೧೯೮೪. ಪತ್ನಿ ಮತ್ತು ಬಾಲಾಜಿ ಎನ್ನುವ ಸುಮಾರು ಹತ್ತು ವರ್ಷ ವಯಸ್ಸಿನ ದತ್ತು ಪುತ್ರ (ಎಂ.ಡಿ.ಆರ್. ಅವರ ಸಹೋದರಿಯ ಮಗ)ನನ್ನು ಅವರು ಅಗಲಿದ್ದರು. ಹಲವು ಸಂಗೀತಗಾರರು ಮತ್ತು ಸಂಗೀತಪ್ರೇಮಿಗಳು (ಅದರಲ್ಲಿ ಶಂಕರ ಮೆನನ್, ಟಿ.ಎನ್. ಕೃಷ್ಣನ್, ಕೆ.ಜೆ. ಯೇಸುದಾಸ್ ಮತ್ತು ಟಿ.ವಿ. ಗೋಪಾಲಕೃಷ್ಣನ್ ಇದ್ದರು) ಒಂದು ಸ್ಮಾರಕ ನಿಧಿಯನ್ನು ಸ್ಥಾಪಿಸಿ ಕುಟುಂಬಕ್ಕೆ ನೆರವಾಗಲು ಮುಂದಾದರು. ಅವರ ಜೀವನವನ್ನು ಕುರಿತು ಒಂದು ಚಲನಚಿತ್ರವನ್ನೂ ನಿರ್ಮಿಸಲಾಗಿತ್ತು; ಆದರೆ ಅದು ವಾಣಿಜ್ಯಾತ್ಮಕವಾಗಿ ಲಭ್ಯವಿಲ್ಲ. ಕ್ಯಾಸೆಟ್ಗಳಲ್ಲಿ ಅವರ ಒಂದಷ್ಟು ಸಂಗೀತ ಉಳಿದಿತ್ತು. ಈಗಲೂ ಅದು ಯುಟ್ಯೂಬ್ ಮತ್ತಿತರ ಕಡೆ ಲಭ್ಯವಿದೆ. ಪಾಲಕ್ಕಾಡ್ನ ಚೆಂಬೈ ಸ್ಮಾರಕ ಸರ್ಕಾರಿ ಸಂಗೀತ ಕಾಲೇಜಿನಲ್ಲಿ ‘ಎಂ.ಡಿ. ರಾಮನಾಥನ್ ಆಡಿಟೋರಿಯಮ್’ ಎನ್ನುವ ಒಂದು ಸಭಾಗೃಹವನ್ನು ನಿರ್ಮಿಸಿದ್ದಾರೆ.
ಸಂಗೀತಕ್ಕೆ, ಅದರ ನಾದಕ್ಕೆ, ಆ ನಾದದ ಈ ಮಹಾನ್ ಉಪಾಸಕನಿಗೆ ನಮೋ ಎನ್ನೋಣವೆ?
ಸಂಗೀತಕ್ಕೆ ಚಪ್ಪಾಳೆ ಬೇಡ
ಎಂ.ಡಿ. ರಾಮನಾಥನ್ ಅವರು ತಮ್ಮ ಗುರು ಟೈಗರ್ ವರದಾಚಾರ್ಯರನ್ನು ಕುರಿತು ಮದ್ರಾಸ್ ಮ್ಯೂಸಿಕ್ ಅಕಾಡೆಮಿಯಲ್ಲಿ ಭಾಷಣ ಮಾಡಿದರು. ಭಾಷಣದ ಮಧ್ಯೆ ಅವರು ‘ಅರಗಿಂಪವೆ’ ಮತ್ತು ‘ಓ ರಂಗಶಾಯೀ’ ಕೃತಿಗಳನ್ನು ಹಾಡಿದಾಗ ಶ್ರೋತೃಗಳಲ್ಲಿ ಹೆಚ್ಚಿನವರ ಕಣ್ಣು ಮಂಜಾದವು. ಆದರೆ ಚಪ್ಪಾಳೆ ಬರಲಿಲ್ಲ. ಆಗ ರಾಮನಾಥನ್ “ಈ ಚಪ್ಪಾಳೆ ಎನ್ನುವುದು ಈಚಿನ ಒಂದು ಸಂಗತಿ. ಅದು ಬೇಕೆಂದು ನನಗೆ ತೋರುವುದಿಲ್ಲ. ಒಳ್ಳೆಯ ಸಂಗೀತಕ್ಕೆ ಚಪ್ಪಾಳೆ ಬರುವುದಿಲ್ಲ ಎನ್ನುವುದು ನನ್ನ ಭಾವನೆ. ನಿಜವೆಂದರೆ, ಗಾಯಕ (ಸಂಗೀತಗಾರ) ಮತ್ತು ಶ್ರೋತೃವಿನ ನಡುವೆ ಪರಿಪೂರ್ಣವಾದ ಪರಸ್ಪರ ತಿಳಿವಳಿಕೆ ಇರುವುದು ಮುಖ್ಯ. ನಾನು ನನಗಾಗಿ ಹಾಡಿಕೊಳ್ಳುತ್ತೇನೆ; ನೀವು ನಿಮಗಾಗಿ ಕೇಳುತ್ತೀರಿ. ಇಲ್ಲಿ ಚಪ್ಪಾಳೆಗೆ ಎಲ್ಲಿದೆ ಸ್ಥಾನ?” ಎಂದು ವಿವರಣೆ ನೀಡಿದರು. ಇದು ಅವರ ಅಂತರAಗದ ಪಕ್ವತೆಯನ್ನು ತೋರಿಸುತ್ತದೆ ಎಂದರೆ ತಪ್ಪಾಗದು.
ಡಿವಿಜಿಗೆ ಪ್ರಿಯವಾದ ಸಂಗೀತ
ರಾಮನಾಥನ್ ಬೆಂಗಳೂರಿಗೆ ಬಂದಾಗಲೆಲ್ಲ ಪೂಜ್ಯ ಡಿವಿಜಿಯವರನ್ನು ತಪ್ಪದೆ ಭೇಟಿ ಮಾಡುತ್ತಿದ್ದರು. ಡಿವಿಜಿಯವರಿಗೆ ಎಂ.ಡಿ.ಆರ್. ಅವರ ಗಾಯನವೆಂದರೆ ತುಂಬಾ ಪ್ರಿಯ. ಮನೆಗೆ ಬಂದಾಗಲೆಲ್ಲ ತಮಗೆ ಇಷ್ಟವಾದ ರಾಗಗಳನ್ನೂ ರಚನೆಗಳನ್ನೂ ಅವರಿಂದ ಹಾಡಿಸಿ ಕೇಳಿ ಆನಂದಪಡುತ್ತಿದ್ದರೆಂದು ಎಸ್. ಕೃಷ್ಣಮೂರ್ತಿ ವಿವರಿಸಿದ್ದಾರೆ.
ಡಿವಿಜಿಯವರ ಅನಾರೋಗ್ಯ ಉಲ್ಬಣಿಸಿದಾಗ ಸೈಂಟ್ ಮಾರ್ಥಾಸ್ ಆಸ್ಪತ್ರೆಯನ್ನು ಸೇರಿದ್ದರು. ಅವರು ಚಿಕಿತ್ಸೆಗೊಂಡು ಚೇತರಿಸಿಕೊಳ್ಳುತ್ತಿದ್ದಾಗ ರಾಮನಾಥನ್ ಅವರನ್ನು ನೋಡಲು ಹೋದರು. ತಮ್ಮ ಸ್ಥಿತಿ ಚಿಂತಾಜನಕವಾಗಿದ್ದರೂ ಸಹ ಡಿವಿಜಿ ಎಂ.ಡಿ.ಆರ್. ಅವರನ್ನು ಏನಾದರೂ ಸ್ವಲ್ಪ ಹಾಡುವಂತೆ ಕೇಳಿಕೊಂಡರು. ಆಗ ಅವರು ಮೋಹನ ರಾಗವನ್ನು ಸಂಕ್ಷೇಪವಾಗಿ ಆಲಾಪಿಸಿ ನಾರಾಯಣತೀರ್ಥರ ‘ಕ್ಷೇಮಂ ಕುರುಗೋಪಾಲ’ ಎಂಬ ತರಂಗವನ್ನು ಭಾವಪೂರ್ಣವಾಗಿ ಹಾಡಿದರು. ಸಂದರ್ಭೋಚಿತವಾದ ಅವರ ದಿವ್ಯಗಾನ ಡಿವಿಜಿಯವರ ಹೃದಯಕ್ಕೆ ಚೈತನ್ಯ ನೀಡಿದುದು ಸಹಜ!
ಕೈಕೊಟ್ಟ ಸಂಗೀತ ಕಳಾನಿಧಿ
ಗಾಯಕ ಎಂ.ಡಿ.ಆರ್. ಪ್ರಶಸ್ತಿಗಳನ್ನು ಕುರಿತು ಚಿಂತಿಸಿದವರೇ ಅಲ್ಲ ಎಂದು ಅವರನ್ನು ಕಿಂಚಿತ್ತಾದರೂ ಬಲ್ಲ ಯಾರಾದರೂ ಹೇಳದೆ ಇರಲಾರರು. ಅವರ ಸಂಗೀತದ ಸಾಧನೆಯನ್ನು ಗುರುತಿಸಿದ ಕೇಂದ್ರಸರ್ಕಾರ ೧೯೭೪ರಲ್ಲಿ ಅವರಿಗೆ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿತು. ಮರುವರ್ಷ ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಪ್ರಶಸ್ತಿ ಬಂದರೆ, ೧೯೭೬ರಲ್ಲಿ ಇಂಡಿಯನ್ ಫೈನ್ ಆರ್ಟ್ಸ್ ಸೊಸೈಟಿಯ ‘ಸಂಗೀತ ಕಲಾ ಶಿಖಾಮಣಿ’ ಪ್ರಶಸ್ತಿ ಲಭಿಸಿತು. ಅವರು ಹಲವು ವರ್ಷ ಮದ್ರಾಸ್ ಮ್ಯೂಸಿಕ್ ಅಕಾಡೆಮಿಯ ತಜ್ಞರ ಸಮಿತಿಯ ಒಬ್ಬ ಸದಸ್ಯರಾಗಿದ್ದರು. ೧೯೮೩-೮೪ರ ಸಾಲಿಗೆ ಅವರಿಗೆ ಅಕಾಡೆಮಿಯ ಪ್ರತಿಷ್ಠಿತ ‘ಸಂಗೀತ ಕಳಾನಿಧಿ’ ಪ್ರಶಸ್ತಿಯನ್ನು ನೀಡುವ ಬಗ್ಗೆ ತೀರ್ಮಾನವೂ ಆಗಿತ್ತು; ಆದರೆ ಪ್ರಶಸ್ತಿಯ ಪ್ರದಾನ ನಡೆಯಲಿಲ್ಲ. ಅದಕ್ಕೆ ಸಂಸ್ಥೆಯ ಒಳಗಿನ ರಾಜಕೀಯವು ಕಾರಣವೆಂದು ಕೆಲವರು ಹೇಳಿದರೆ, ಆ ವರ್ಷ ಕೇರಳದ ಒಬ್ಬರಿಗೆ ಕೊಡುವುದು ಬೇಡವೆಂದು ತೀರ್ಮಾನಿಸಿದ್ದೇ ಕಾರಣವೆಂದು ಮತ್ತೆ ಕೆಲವರು ಹೇಳಿದರು. ಏನಿದ್ದರೂ ಅದು ರಾಜಕೀಯವೇ ಸರಿ. ಇಲ್ಲವಾದರೆ ಸುಮಾರು ೪೦ ವರ್ಷ ಮದ್ರಾಸಿನಲ್ಲಿ (ಚೆನ್ನೈ) ನೆಲಸಿ, ಅಲ್ಲಿಯ ಸಂಗೀತ ಪ್ರಪಂಚವನ್ನು ಬೆಳಗಿದ ಓರ್ವ ಮಹಾನ್ ಕಲಾಕಾರನನ್ನು ಈ ರೀತಿ ವಂಚಿಸಿದ್ದಕ್ಕೆ ಬೇರೆ ವಿವರಣೆ ಸಿಗಲಾರದು. ಪ್ರಶಸ್ತಿಯನ್ನು ಅವರಿಗೆ ಮರಣೋತ್ತರವಾಗಿ ನೀಡಬಹುದೆಂದು ಕೆಲವರು ಸೂಚಿಸಿದರಾದರೂ ಅದು ಮುಂದುವರಿಯಲಿಲ್ಲ.