ಎಚ್. ಮಂಜುನಾಥ ಭಟ್
ಜನರು ಮತ್ತು ಮಠಮಾನ್ಯಗಳು ಕೊಟ್ಟ ಬಿರುದು, ಪ್ರಶಸ್ತಿಗಳ ಸರಮಾಲೆಯೇ ಆಚಾರ್ಯರನ್ನು ಅಲಂಕರಿಸಿತ್ತು. ಸರ್ಕಾರದ ಪ್ರಶಸ್ತಿಗಳ ಹಿಂದೆ ಅವರು ಹೋಗಲಿಲ್ಲ. ವಿದುರನಂತೆ ಸದಾ ಆಡಳಿತಯಂತ್ರಕ್ಕೆ ದಾರಿ ತೋರುತ್ತ, ತಪ್ಪಿನಡೆದಾಗ ಕಿವಿ ಹಿಂಡಿ ಬುದ್ಧಿ ಹೇಳುತ್ತ ಉಳಿದರೇ ವಿನಾ ಎಂದೂ ಅಧಿಕಾರದ ಬಳಿ ನಿಲ್ಲಲಿಲ್ಲ. ಆದರೂ ಸರ್ಕಾರದಿಂದ ಗಮಕ ಸಮ್ಮೇಳನಾಧ್ಯಕ್ಷತೆಯೊಂದಿಗೆ ಗಮಕ ರತ್ನಾಕರ ಪ್ರಶಸ್ತಿ ಬಂದಿತ್ತು. ಸಂಗೀತ–ನೃತ್ಯ ಅಕಾಡೆಮಿಯಿಂದ ಕರ್ನಾಟಕ ಕಲಾಶ್ರೀ, ವೇದ ಸಂಸ್ಕೃತಿ ಗ್ರಂಥಮಾಲೆಗೆ ರಾಜ್ಯ ಸಾಹಿತ್ಯ ಅಕಾಡೆಮಿಯಿಂದ ಬಹುಮಾನ, ಮುಕ್ತ ವಿಶ್ವವಿದ್ಯಾಲಯದ ಗೌರವ ಡಿ.ಲಿಟ್, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (೨೦೦೮) ಮುಂತಾದವು ಅವರಿಗೆ ಬಂದಿದ್ದವು.
ಪ್ರಸಿದ್ಧ ಪ್ರಕಾಶನ ಸಂಸ್ಥೆ ಸಾಹಿತ್ಯ ಪ್ರಕಾಶನ, ಹುಬ್ಬಳ್ಳಿ ಅವರು ಒಂದೆರಡು ವರ್ಷಗಳ ಹಿಂದೆ ಒಂದು ಪ್ರಕಟಣೆಯನ್ನು ಹೊರಡಿಸಿದ್ದರು. ಅದರಂತೆ ಡಾ|| ಕೆ.ಎಸ್. ನಾರಾಯಣಾಚಾರ್ಯರ ಎಲ್ಲ ಪುಸ್ತಕಗಳನ್ನು ಖರೀದಿಸುವವರಿಗೆ ಸಾಕಷ್ಟು ದೊಡ್ಡದಾದ ಒಂದು ಕಪಾಟನ್ನು ಉಚಿತವಾಗಿ ಕೊಡಲಾಗುವುದು ಎಂಬುದೇ
ಆ ಪ್ರಕಟಣೆ. ಆ ಪ್ರಕಟಣೆ ತನ್ನಿಂದ ತಾನೇ ಒಂದೆರಡು ವಿಷಯಗಳನ್ನು ತಿಳಿಸುತ್ತದೆ ಎಂದರೆ ತಪ್ಪಲ್ಲ. ಒಂದು ನಾರಾಯಣಾಚಾರ್ಯರು ಬರೆದ ಪುಸ್ತಕಗಳು ಒಂದು ಬೀರು ತುಂಬುವಷ್ಟು ಇವೆ ಎನ್ನುವುದು. ಇನ್ನೊಂದು ಅವರ ಪುಸ್ತಕಗಳು ಒಮ್ಮೆ ಓದಿ ಕಳೆದುಬಿಡುವಂಥವಲ್ಲ; ಹತ್ತಿರವೇ ಇಟ್ಟುಕೊಂಡು ಆಗಾಗ, ಬೇಕೆಂದಾಗ ಓದುವಂಥವು. ಮತ್ತೊಂದು ಅವರ ಪುಸ್ತಕಗಳು ಆಸಕ್ತ ಓದುಗರ ನಡುವೆ ಅಷ್ಟೊಂದು ಜನಪ್ರಿಯ ಆಗಿವೆ ಎನ್ನುವ ಅಂಶ. ಧಾರವಾಡವನ್ನು ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡು ಪ್ರಾಧ್ಯಾಪಕ, ಪ್ರವಚನಕಾರ ಹಾಗೂ ಲೇಖಕ – ಹೀಗೆ ಮೂರು ಮುಖ್ಯ ಮುಖಗಳಲ್ಲಿ ಕೆಲಸ ಮಾಡಿದ ಆಚಾರ್ಯರು ಈಚೆಗೆ ನಮ್ಮನ್ನು ಅಗಲಿದ್ದಾರೆ.
ಕೆಲವು ಸಮಯದ ಹಿಂದೆ ನಾಡಿನ ಯಾವುದೋ ಪತ್ರಿಕೆಯಲ್ಲಿ ಒಂದು ಫೋಟೋ ಪ್ರಕಟವಾಗಿತ್ತು; ಚಿತ್ರದಲ್ಲಿ ಬೆಂಗಳೂರಿನ ಒಬ್ಬರು ಶ್ರೀವೈಷ್ಣವ ಸ್ವಾಮಿಗಳು ಮತ್ತು ಡಾ|| ನಾರಾಯಣಾಚಾರ್ಯರು ಇದ್ದಾರೆ ಎಂದು ಬರೆಯಲಾಗಿತ್ತು. ನೋಡಿದವರಿಗೆ ಈ ಇಬ್ಬರಲ್ಲಿ ನಾರಾಯಣಾಚಾರ್ಯರು ಯಾರು, ಸ್ವಾಮಿಗಳು ಯಾರು ಎಂಬ ಬಗ್ಗೆ ಸಂದೇಹ. ಏಕೆಂದರೆ ಇಬ್ಬರೂ ಒಂದೇ ರೀತಿ ಇದ್ದರು. ಒಬ್ಬರು ಸ್ವಲ್ಪ ದಡೂತಿ ಇದ್ದರೆ ಇನ್ನೊಬ್ಬರು ಸುಮಾರಾಗಿ ಸಾಮಾನ್ಯ ಗಾತ್ರದವರು.
ದಡೂತಿ ಇರುವವರು ನಾರಾಯಣಾಚಾರ್ಯರು ಎನ್ನುವ ತೀರ್ಮಾನಕ್ಕೆ ಬರೋಣವೆಂದರೆ ಕೆಲವು ಸ್ವಾಮಿಗಳು ಕೂಡ ದಡೂತಿ ಶರೀರದವರಿರುತ್ತಾರೆ. ಅಂತೂ ಕೊನೆಗೆ ಇನ್ನಷ್ಟು ಪರಿಶೀಲನೆ ನಡೆಸಿ ದಪ್ಪವಾಗಿ ಇರುವವರೇ ನಾರಾಯಣಾಚಾರ್ಯರು ಎನ್ನುವ ತೀರ್ಮಾನಕ್ಕೆ ಬರುವಂತಾಯಿತು. ಅಂತಹ ಘನಗಂಭೀರ ಗಾತ್ರ ಮತ್ತು ಅದಕ್ಕೊಪ್ಪುವ ವರ್ಚಸ್ಸು, ವೇಷಭೂಷಣ ಆಚಾರ್ಯರದ್ದು.
೮೮ ವರ್ಷಗಳ ತಮ್ಮ ಸುದೀರ್ಘ ಜೀವಿತಾವಧಿಯಲ್ಲಿ ಡಾ|| ಕೆ.ಎಸ್. ನಾರಾಯಣಾಚಾರ್ಯರು ಕೆಲವು ಮಹತ್ತ್ವದ ಸಾಧನೆಗಳನ್ನು ಮಾಡಿದ್ದಾರೆ; ಮತ್ತು ಸಮಾಜಕ್ಕೆ ಬಹಳಷ್ಟು ಬಳುವಳಿಗಳನ್ನು ಬಿಟ್ಟು ಹೋಗಿದ್ದಾರೆ. ಅವರು ಹಿಂದೂಧರ್ಮದ ಅರ್ಥೈಸುವಿಕೆಯನ್ನು ಸರಿಯಾದ ದಿಕ್ಕಿನಲ್ಲಿ ಮಾಡಿದರು. ಸನಾತನಧರ್ಮದ ಅಧ್ಯಾತ್ಮ ಮತ್ತು ಆಚರಣೆಗಳ ಮರ್ಮವನ್ನು ಜನರಿಗೆ ತಿಳಿಸಿದ್ದರು. ವೇದ, ಉಪನಿಷತ್, ರಾಮಾಯಣ, ಮಹಾಭಾರತ, ಭಾಗವತ, ಭಗವದ್ಗೀತೆ ಮತ್ತು ಪುರಾಣಗಳ ಅಂತರಂಗದ ಅರಿವನ್ನು ಮೂಡಿಸಿದರು; ಈ ನಿಟ್ಟಿನಲ್ಲಿ ಪ್ರವಚನಕಾರರಾಗಿ ಮತ್ತು ದಣಿವರಿಯದ ಲೇಖಕರಾಗಿ ಅವರು ಮಾಡಿದ ಸಾಧನೆ ಬಹಳ ದೊಡ್ಡದು.
ಅವರ ಬರವಣಿಗೆ ಎಷ್ಟೊಂದು ಜನಪ್ರಿಯವಾಗಿತ್ತೆಂದರೆ ಪತ್ರಿಕೆಯಲ್ಲಿ ಅವರ ಒಂದು ಧಾರಾವಾಹಿ ಅಥವಾ ಧಾರಾ ತೀರ್ಥವಾಹಿನಿ ಆರಂಭವಾಯಿತೆಂದರೆ ಪತ್ರಿಕೆಯ ಪ್ರಸಾರ ಹೆಚ್ಚುತ್ತಿತ್ತು. ಇದನ್ನು ಸ್ವತಃ ‘ತರಂಗ’ ವಾರಪತ್ರಿಕೆಯ ಸಂಪಾದಕರು ಹೇಳಿದ್ದಾರೆ. ಅವರ ಪ್ರಕಾಶಕರು ಕೂಡ ನಾರಾಯಣಾಚಾರ್ಯರ ಕೃತಿಗಳ ಬಗೆಗೆ ಅಂಥದೇ ಅನುಭವವನ್ನು ವ್ಯಕ್ತಪಡಿಸಿದ್ದಾರೆ.
ಬಾಲ್ಯ, ವಿದ್ಯಾಭ್ಯಾಸ
ಅಂದಿನ ಬೆಂಗಳೂರು ಜಿಲ್ಲೆ ಕಾನಕಾನಹಳ್ಳಿಯ (ಈಗಿನ ಕನಕಪುರ) ಒಂದು ಶ್ರೀವೈಷ್ಣವ ವೈದಿಕ ಕುಟುಂಬದಲ್ಲಿ ೧೯೩೩ರಲ್ಲಿ ನಾರಾಯಣಾಚಾರ್ಯರ ಜನನವಾಯಿತು. ತಂದೆ ಕೆ.ಎಸ್. ಶ್ರೀನಿವಾಸ ದೇಶಿಕಾಚಾರ್ಯರು, ತಾಯಿ ರಂಗನಾಯಕಮ್ಮ. ಇವರಿಗೆ ೧೧ರ ಎಳೆವಯಸ್ಸಿನಲ್ಲೇ ತಂದೆ ಅಗಲಿದರು. ತಾಯಿಯೇ ಗುರು, ಮಾರ್ಗದರ್ಶಕರಾಗಿ ಅವರನ್ನು ಬೆಳೆಸಿದರು. ಚುರುಕು ಮತ್ತು ಬುದ್ಧಿವಂತ ಹುಡುಗನಾಗಿದ್ದ ನಾರಾಯಣ ಕಲಿಸಿದ್ದನ್ನು ಮರುದಿನ ಗುರುಗಳಿಗೆ ಯಥಾವತ್ ಒಪ್ಪಿಸಬಲ್ಲವನಾಗಿದ್ದ. ತಮ್ಮನ ವಿದ್ಯಾಭ್ಯಾಸದ ಹೊಣೆ ಹೊತ್ತ ಅಣ್ಣ ನರಸಿಂಹಾಚಾರ್ಯರು ತಮ್ಮನು ಕೂಪಮಂಡೂಕವಾಗದೆ ಇರಲೆಂಬ ದೃಷ್ಟಿಯಿಂದ ಇಂಗ್ಲಿಷ್ ಕಲಿಯುವುದನ್ನು ಪ್ರೋತ್ಸಾಹಿಸಿದರು. ಸಂಸ್ಕೃತ, ವೇದ, ಉಪನಿಷತ್ತುಗಳ ಜ್ಞಾನವು ಮನೆತನದಿಂದಲೇ ಬಂದಿತ್ತು. ಮೈಸೂರಿನ ಮಹಾರಾಜ ಮತ್ತು ಯುವರಾಜ ಕಾಲೇಜುಗಳಲ್ಲಿ ಓದಿ, ೧೯೫೪ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಬಿ.ಎಸ್ಸಿ. ಪದವಿಯನ್ನು ಪಡೆದರು. ಅನಂತರ ಓದಿನ ದಿಕ್ಕು ಬದಲಿಸಿ, ಬಿ.ಎ. ತರಗತಿಗೆ ಸೇರಿದ ಯುವಕ ನಾರಾಯಣಾಚಾರ್ಯ ಬಿ.ಎ. ಆನರ್ಸ್, ಎಂ.ಎ. (ಇಂಗ್ಲಿಷ್) ಪದವಿಗಳನ್ನು (೧೯೫೮) ಪಡೆದರು. ಮುಂದಿನ ಮೂರು ವರ್ಷಗಳಲ್ಲಿ ಪಿಎಚ್.ಡಿ ಕೂಡ ಮುಗಿಯಿತು. ಆ ಸಂಶೋಧನೆಗೆ ಅವರು ತೆಗೆದುಕೊಂಡಿದ್ದ ವಿಷಯ ‘ಇಂಗ್ಲಿಷ್ ಕವಿಗಳಾದ ಡಬ್ಲ್ಯು.ಬಿ. ಯೇಟ್ಸ್ ಮತ್ತು ಟಿ.ಎಸ್. ಎಲಿಯಟ್ ಅವರುಗಳ ಕಾವ್ಯದ ಮೇಲೆ ಭಾರತೀಯ ತತ್ತ್ವಶಾಸ್ತ್ರದ ಪ್ರಭಾವ.’
ಪ್ರೊ. ಎಂ. ಗೋಪಾಲಕೃಷ್ಣ ಅಡಿಗ ಮುಂತಾದವರ ಮೇಲೆ ಎಲಿಯಟ್ ಪ್ರಭಾವದಿಂದ ಕನ್ನಡದಲ್ಲಿ ನವ್ಯಕಾವ್ಯವು ದಾಂಗುಡಿ ಇಡುತ್ತಿದ್ದಾಗ ನಾರಾಯಣಾಚಾರ್ಯರು ಯೇಟ್ಸ್, ಎಲಿಯಟ್ರ ಮೂಲ ಶೋಧನೆಯಲ್ಲಿ ತೊಡಗಿದ್ದರು. ಈ ವಿಷಯದ ಸಂಶೋಧನೆಗೆ ಆಚಾರ್ಯರು ಅತ್ಯಂತ ಅರ್ಹರಾಗಿದ್ದರು. ಎಂ.ಎ. ಮುಗಿಯುವ ಹೊತ್ತಿಗೆ ಅವರು ವೇದಜ್ಞಾನದ ಆಳಕ್ಕೆ ಇಳಿದಿದ್ದರು. ಕನ್ನಡ, ಇಂಗ್ಲಿಷ್ ಮತ್ತು ಸಂಸ್ಕೃತ ಭಾಷೆಗಳು ಅವರಿಗೆ ಲೀಲಾಜಾಲ. ಅದಲ್ಲದೆ ತಮಿಳು ಭಾಷೆಯೂ ಸೇರಿದಂತೆ ಅವರು ನಾಲ್ಕು ಭಾಷೆಗಳಲ್ಲಿ ಕೃತಿ ರಚಿಸಿದ್ದಾರೆ.
ಧಾರವಾಡದಲ್ಲಿ ದಾಂಗುಡಿ
೧೯೬೧ರಲ್ಲಿ ನಾರಾಯಣಾಚಾರ್ಯರು ಧಾರವಾಡದ ಕರ್ನಾಟಕ ಆರ್ಟ್ಸ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇರಿದರು. ಮುಂದಿನ ಆರು ವರ್ಷಗಳಲ್ಲಿ ಪ್ರವಾಚಕ (ರೀಡರ್), ಮತ್ತೆ ಆರು ವರ್ಷಗಳಲ್ಲಿ ಪ್ರಾಧ್ಯಾಪಕ (ಪ್ರೊಫೆಸರ್)ರಾಗಿ ಬಡ್ತಿ ಹೊಂದಿದರು. ವಿಭಾಗ ಮುಖ್ಯಸ್ಥರೂ ಆಗಿ ದುಡಿದು ೧೯೯೧ರಲ್ಲಿ ಕಾಲೇಜಿನ ಪ್ರಿನ್ಸಿಪಾಲರಾದರು; ಎರಡು ವರ್ಷ ಆ ಹುದ್ದೆಯಲ್ಲಿದ್ದು ೧೯೯೩ರಲ್ಲಿ ನಿವೃತ್ತರಾದರು.
ಬೌದ್ಧಿಕತೆಯಲ್ಲೂ ದೇಹದಾರ್ಢ್ಯದಲ್ಲೂ ಅವರದ್ದು ಎತ್ತರವೇ; ಅದೇ ರೀತಿಯಲ್ಲಿ ಧಾರವಾಡದಲ್ಲಿ ಈ ಯುವ ವಿದ್ವಾಂಸನ ಪರಿಚಯವಾಯಿತು. ಅಗಲವಾದ ಹಣೆಯಲ್ಲಿ ಶ್ರೀ ವೈಷ್ಣವರ ನಾಮ. ಏನನ್ನೋ ಹೇಳಬಯಸುವಂತೆ ಕಾಣುವ ಬಾಯಿ. ಮೊದಲಿಗೆ ಧಾರವಾಡ ಪರಿಸರದಲ್ಲಿ ಅವರ ಕಚ್ಚೆ ನಾಮ ಶಾಲುಗಳಿಗೆ ನಗಾಡಿದವರಿದ್ದರಂತೆ. ಆದರೆ ಆಚಾರ್ಯರ ಎದುರು ನಿಲ್ಲಬೇಕಾದರೆ ಅವರಿಗಿದ್ದ ಶಾಸ್ತ್ರದ ಹಿನ್ನೆಲೆ, ಪಾಂಡಿತ್ಯದ ಔನ್ನತ್ಯ ಬೇಕು. ಆದಕಾರಣ ಮೊದಲಿಗೆ ಕೆಲವು ಹಿರಿಯರಿಗೆ ಆಚಾರ್ಯರು ದಕ್ಕಲಿಲ್ಲವೇನೋ. ಆದರೆ ವಿದ್ಯಾರ್ಥಿಗಳಿಗೆ ದಕ್ಕಿದ್ದರು. ಶೇಕ್ಸ್ಪಿಯರ್, ಯೇಟ್ಸ್, ವರ್ಡ್ಸ್ವರ್ತ್ ಮುಂತಾದ ಸಾಹಿತ್ಯ ದಿಗ್ಗಜರ ಬಗ್ಗೆ ಆಚಾರ್ಯರು ಪಾಠ ಮಾಡಿದರೆ ತರಗತಿ ಸ್ತಬ್ಧವಾಗಿ ಆಲಿಸುತ್ತಿತ್ತು. ಇತರ ತರಗತಿಗಳ ಮಕ್ಕಳು ಕೂಡ ಸೇರಿಕೊಳ್ಳುತ್ತಿದ್ದರು. ಅದರಿಂದಾಗಿ ಆ ತರಗತಿಗಳು ಖಾಲಿ. ಪ್ರಿನ್ಸಿಪಾಲರಿಗೆ ದೂರು ಹೋಯಿತು. ಪ್ರಿನ್ಸಿಪಾಲ್ ಮಾಳವಾಡರು ಇವರನ್ನು ಕರೆಯಿಸಿ, ಈ ಸಮಸ್ಯೆಗೆ ಏನು ಮಾಡುವುದೆಂದು ಕೇಳಿದರು. ಅದಕ್ಕೆ ನಾರಾಯಣಾಚಾರ್ಯರು ನೀವು ತಪ್ಪು ವ್ಯಕ್ತಿಯಲ್ಲಿ ಕೇಳುತ್ತಿದ್ದೀರಿ. ಕೇಳಬೇಕಾದ್ದು ಆ ಅಧ್ಯಾಪಕರಲ್ಲಿ ಅಲ್ಲವೆ? ಎಂದು ಮರುಪ್ರಶ್ನೆ ಹಾಕಿದರು. ಆಚಾರ್ಯರು ತಮ್ಮ ತರಗತಿಗಳಲ್ಲಿ ಹಾಜರಿಯನ್ನೇ ಕರೆಯುತ್ತಿರಲಿಲ್ಲವಂತೆ!
ಈಗ ಸ್ವತಃ ಪ್ರಾಧ್ಯಾಪಕರಾಗಿರುವ ಪ್ರೊ. ಸಿದ್ದು ಯಾಪಲಪರವಿ ಅವರು ಡಾ. ಕೆ.ಎಸ್. ನಾರಾಯಣಾಚಾರ್ಯರ ವಿದ್ಯಾರ್ಥಿಯಾಗಿದ್ದ ದಿನಗಳನ್ನು ಮತ್ತು ಅವರ ಜೊತೆಗಿನ ಸಂಬಂಧವನ್ನು ನೆನಪಿಸಿಕೊಳ್ಳುತ್ತಾ, “ದಡೂತಿ ದೇಹ, ಕಚ್ಚೆ ಪಂಚೆ, ಮೇಲೆ ಕರಿಯ ಕೋಟು, ತಲೆಯ ಮೇಲೆ ಕಪ್ಪು ಟೊಪ್ಪಿಗೆ ಧರಿಸುತ್ತಿದ್ದ ಕರ್ನಾಟಕ ಕಾಲೇಜಿನ ಇಂಗ್ಲಿಷ್ ವಿಭಾಗ ಮುಖ್ಯಸ್ಥರಾದ ಅವರನ್ನು ಕಂಡಾಗ ನಮಗೆಲ್ಲ ಭಯದ ಜೊತೆಗೆ ಭಕ್ತಿಭಾವ ಉಂಟಾಗುತ್ತಿತ್ತು. ಐದು ವರ್ಷ ಅವರ ಪಾಠ ಕೇಳಿದವ ಈಗ ಇಂಗ್ಲಿಷ್ ಪಾಠ ಹೇಳುತ್ತಾ ಕನ್ನಡದಲ್ಲಿ ಬರೆಯುತ್ತಿದ್ದೇನೆ. ಅವರೊಬ್ಬ ಅದ್ವಿತೀಯ, ಅಪರೂಪದ ಪ್ರಾಧ್ಯಾಪಕರು. ಇಂಗ್ಲಿಷ್, ಕನ್ನಡ, ಸಂಸ್ಕೃತ ಮತ್ತು ತಮಿಳು ಭಾಷೆಗಳಲ್ಲಿ ಅವರಿಗೆ ಅಪಾರ ಹಿಡಿತವಿತ್ತು. ಅವರ ಕ್ಲಾಸಿಕ್ಸ್ ಪಾಠಗಳನ್ನು ಎಂದೂ ಮರೆಯಲಾಗದು. ತರಗತಿಯಲ್ಲಿ ಅದರಲ್ಲೂ ಇಂಗ್ಲಿಷ್ ಮೇಜರ್ ತರಗತಿಯಲ್ಲಿ ಪಟ್ಟಾಗಿ ಕುಳಿತು ಪಾಠ ಮಾಡುತ್ತಿದ್ದ ಅವರ ಮಾತಿನ ವೈಖರಿ ರೋಮಾಂಚಕಾರಿ. ಜಗತ್ತಿನ ಇತರ ಮಹಾಕಾವ್ಯಗಳನ್ನು ನಮ್ಮ ಮಹಾಕಾವ್ಯಗಳಾದ ರಾಮಾಯಣ, ಮಹಾಭಾರತಗಳೊಂದಿಗೆ ಹೋಲಿಸಿ ರಸವತ್ತಾಗಿ ವಿವರಿಸುತ್ತಿದ್ದರು” ಎಂದಿದ್ದಾರೆ.
ಅಪ್ಪಟ ಬಲಪಂಥೀಯ
ತಾವು ನಂಬಿದ ಅಪ್ಪಟ ಬಲಪಂಥೀಯ ಮೌಲ್ಯಗಳನ್ನು ಆಚಾರ್ಯರು ಆತ್ಮವಿಶ್ವಾಸದಿಂದ ವಿವರಿಸುತ್ತಿದ್ದರು. ಸನಾತನ ಧರ್ಮದ ಶ್ರೇಷ್ಠತೆಯ ಬಗೆಗಿನ ತಮ್ಮ ನಂಬಿಕೆಗಳನ್ನು ನೂರಾರು ಉದಾಹರಣೆಗಳಿಂದ ಸಮರ್ಥಿಸುತ್ತಿದ್ದರು ಎನ್ನುವ ಸಿದ್ದು ಯಾಪಲಪರವಿ, “ಪ್ರಶ್ನೆ ಕೇಳುವ ಜ್ಞಾನ-ಧೈರ್ಯಗಳು ಆಗ ನಮಗೆ ಇರಲಿಲ್ಲ. ಆದರೆ ಕೊನೆಯ ವರ್ಷದ ಬಿ.ಎ. ಓದುವಾಗ ಒಂದು ದಿನದ ದಾಂಡೇಲಿ ಪ್ರವಾಸವನ್ನು ಹಮ್ಮಿಕೊಂಡಾಗ ಅವರು ಜೊತೆಯಾಗಿದ್ದರು. ಆಗ ನಾನು ಧೈರ್ಯವಾಗಿ ಕೇಳಿದ ಪ್ರಶ್ನೆಗಳಿಗೆ ಅವರು ಪರಿಣಾಮಕಾರಿಯಾಗಿ ಉತ್ತರಿಸಿದರು. ಅವರ ವೈಯಕ್ತಿಕ ಬದುಕಿನ ಆಚಾರ-ವಿಚಾರಗಳನ್ನು ಕೂಡ ಸಮರ್ಥಿಸಿಕೊಂಡರು. ಅದರಲ್ಲಿ ತಪ್ಪು-ಸರಿ ಎಂಬುದು ನನಗೆ ಮುಖ್ಯವೆನಿಸಲಿಲ್ಲ. ಅವರ ನಂಬಿಕೆಯನ್ನು ನಾನು ಪೂಜ್ಯತೆಯಿಂದ ಸ್ವೀಕರಿಸಿದೆ. ಅವರು ಪಾಲಿಸುತ್ತಿದ್ದ ಮಡಿ-ಮೈಲಿಗೆ, ಇಂಗ್ಲಿಷ್ ಸಾಹಿತ್ಯವನ್ನು ಓದಿ ಆ ಭಾಷೆಯ ಪ್ರಾಧ್ಯಾಪಕರಾದರೂ ತಲೆಯ ಮೇಲಿನ ಜುಟ್ಟು ಇದಕ್ಕೆಲ್ಲ ಉತ್ತರ ನೀಡಿ ನನ್ನ ಹೊಸ ಆಲೋಚನಾಕ್ರಮಕ್ಕೆ ನಾಂದಿ ಹಾಡಿದರು ಎಂದು ನೆನಪಿಸಿಕೊಂಡಿದ್ದಾರೆ. ಮಾತ್ರವಲ್ಲ, ಶೂದ್ರರಾದ ನಿಮಗೆ ಸಾಧಿಸುವ ಛಲ ಇರುವುದಿಲ್ಲ” ಎಂದು ಆಗ ಅವರು ಹೇಳಿದ ಮಾತು ತನಗೆ ಸವಾಲಾಗಿ ಸ್ವೀಕರಿಸಲು ಪ್ರೇರಣೆಯಾಯಿತು ಎಂದು ಕೂಡ ತಿಳಿಸಿದ್ದಾರೆ.
‘ತರಂಗ’ ಪತ್ರಿಕೆಯಲ್ಲಿ ಪ್ರೊ. ನಾರಾಯಣಾಚಾರ್ಯರು ‘ರಾಮಾಯಣ ಪಾತ್ರಪ್ರಪಂಚ’ವನ್ನು ಬರೆದಾಗ ವಿದ್ಯಾರ್ಥಿಯಂತೆ ಅದನ್ನು ಓದಿ ಮಹಾಕಾವ್ಯಗಳ ಒಳನೋಟವನ್ನು ಗ್ರಹಿಸಿಕೊಂಡೆ. ಆ ಬರವಣಿಗೆಗಳಲ್ಲಿ ಅವರು ಆ ಪಾತ್ರಗಳ ಉದ್ದೇಶ, ಅವುಗಳ ಮಾನವಶಾಸ್ತ್ರ ಮತ್ತು ಮಾನಸಶಾಸ್ತ್ರಗಳ ಅಗಾಧ ವಿವರಣೆ ಹಾಗೂ ವಿಶಾಲತೆಯನ್ನು ಮನಮುಟ್ಟುವಂತೆ ದಾಖಲಿಸಿದ್ದಾರೆ. ‘ನಾನು ಬರೆಯಲು ಆರಂಭಿಸಿದಾಗ ಒಂದೆರಡು ಸಲ ಅವರನ್ನು ಭೇಟಿಯಾದೆ. ಅದೇ ಲವಲವಿಕೆಯಿಂದ ಮಾತನಾಡಿ ಪ್ರೋತ್ಸಾಹಿಸಿದರು’ ಎಂದು ಈ ಹಳೆ ವಿದ್ಯಾರ್ಥಿ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.
ಈಚಿನ ಅವರ ಬಲಪಂಥೀಯ ಧೋರಣೆಗಳಲ್ಲಿ ಕೂಡ ಅದೇ ಖಚಿತತೆ ಇತ್ತು. ಇತರ ಕೆಲವು ಬಲಪಂಥೀಯರ ಸುಳ್ಳುಗಳ ಸರಮಾಲೆಯ ವೈಭವೀಕರಣವನ್ನು ತಿರಸ್ಕರಿಸಿ ತಾವು ನಂಬಿದ ಸಿದ್ಧಾಂತವನ್ನು ಆಧಾರಸಹಿತವಾಗಿ, ಪರಿಣಾಮಕಾರಿಯಾಗಿ, ತಾರ್ಕಿಕವಾಗಿ ಮುಂದಿಡುತ್ತಿದ್ದರು. ವೈಯಕ್ತಿಕ ನಿರೀಕ್ಷೆ, ಪ್ರಲೋಭನೆಗಳಿಗೆ ಎಂದೂ ಗುರಿಯಾಗಲಿಲ್ಲ. ಅವರಿಗೆ ಅಂತಸ್ತು, ಅಧಿಕಾರ, ಪದವಿ, ಪುರಸ್ಕಾರಗಳ ಆಕರ್ಷಣೆ ಇರಲಿಲ್ಲ – ಎಂದು ಗೌರವಿಸುವ ಈ ವಿದ್ಯಾರ್ಥಿ ಆಚಾರ್ಯರ ಸೂಕ್ಷ್ಮ ಮನಸ್ಸಿಗೊಂದು ಉದಾಹರಣೆ ನೀಡುತ್ತಾರೆ. ಕೊನೆಯ ವರ್ಷ ಪದವಿ ತರಗತಿಗೆ ಆಚಾರ್ಯರು ಸಾಹಿತ್ಯ ವಿಮರ್ಶೆ ಪಾಠ ಮಾಡುತ್ತಿದ್ದರು. ಬೀಳ್ಕೊಡುವ ಸಮಾರಂಭದಲ್ಲಿ ಓರ್ವ ವಿದ್ಯಾರ್ಥಿ “ಆಚಾರ್ಯರು ತುಂಬಾ ವಿಷಯಾಂತರ ಮಾಡಿ ನಾವು ನಂಬದಿರುವ ಸಿದ್ಧಾಂತಗಳನ್ನು ನಮ್ಮ ಮೇಲೆ ಹೇರುವ ಪ್ರಯತ್ನ ಮಾಡುತ್ತಾರೆ” ಎಂದಾಗ ಅವರು ತುಂಬ ನೊಂದುಕೊಂಡರಂತೆ. ಮಾತ್ರವಲ್ಲ, ಮುಂದಿನ ವರ್ಷದಿಂದ ಆ ವಿಷಯ ಪಾಠ ಮಾಡುವುದನ್ನೇ ನಿಲ್ಲಿಸಿದರು. ಅದರಿಂದಾಗಿ ವಿದ್ಯಾರ್ಥಿಗಳು ಅವರ ಸಾಹಿತ್ಯ ವಿಮರ್ಶೆಯ ಪಾಠದಿಂದ ವಂಚಿತರಾದರು. ಆಗ ಆಚಾರ್ಯರು ಹೇಳಿದ್ದು: “ಶಿಕ್ಷಕನಾದವನು ವಿದ್ಯಾರ್ಥಿಗಳ ಅಭಿಪ್ರಾಯಕ್ಕೆ ಗೌರವ ಕೊಡಬೇಕು; ಸಾಹಿತ್ಯ ವಿಮರ್ಶೆಯನ್ನು ಕಲಿಸುವ ಅವಕಾಶ ಇತರರಿಗೆ ಸಿಗಲಿ.”
ಸಂಜೆ ಧಾರವಾಡದಲ್ಲಿ ಪ್ರವಚನ ಮಾಡುವಾಗ ಅಪ್ಪಟ ಸನಾತನ ವೇಷಭೂಷಣದಲ್ಲಿ ಇರುತ್ತಿದ್ದರು. ಜೊತೆಗೆ ಅವರ ಅದ್ಭುತ ಕನ್ನಡ, ಸಂಸ್ಕೃತಗಳನ್ನು ಕೇಳುವ ಅವಕಾಶ. ಸಾಹಿತ್ಯದ ಅಧ್ಯಯನ, ಕಾವ್ಯದ ವಿಮರ್ಶೆ, ಆಧ್ಯಾತ್ಮಿಕ ಔನ್ನತ್ಯಗಳನ್ನು ಪರಿಣಾಮಕಾರಿಯಾಗಿ ಕಲಿಸಿಕೊಟ್ಟು ಈ ಗುರುಗಳು ಸಿದ್ಧಾಂತಗಳಾಚೆ ಅನೇಕ ಅನುಕರಣೀಯ ವಿಷಯಗಳನ್ನು ಬಿಟ್ಟು ಹೋಗಿದ್ದಾರೆ – ಎನ್ನುತ್ತಾರೆ ಈ ವಿದ್ಯಾರ್ಥಿ.
ಒಮ್ಮೆ ಸಿದ್ದು ಯಾಪಲಪರವಿ ನಾರಾಯಣಾಚಾರ್ಯರಲ್ಲಿ “ನೀವು ನಮ್ಮ ಜೊತೆ ಊಟ ಮಾಡದೆ ಇರುವುದು ಭೇದಭಾವ ಮಾಡಿ ಅವಮಾನಿಸಿದಂತಲ್ಲವೆ?” ಎಂದು ಕೇಳಿದರಂತೆ. ಆಗ ಅವರು ಇಲ್ಲ, ಇದರಲ್ಲಿ ಯಾರನ್ನೂ ಅವಮಾನಿಸುವ ಉದ್ದೇಶ ಇಲ್ಲ. ನಾನು ನಂಬಿದ ಜೀವನಶೈಲಿ ಅಷ್ಟೆ ಎಂದು ಉತ್ತರಿಸಿದ್ದರು. ಅದರಲ್ಲಿ ಅವರ ಜಿಗುಟುತನವೇನೂ ಇರಲಿಲ್ಲ ಎಂಬುದು ಅವರ ಒಟ್ಟಾರೆ ಜೀವನಕ್ರಮದಿಂದ ತಿಳಿಯುತ್ತದೆ.
ದಲಿತ ವಿದ್ಯಾರ್ಥಿಗೆ ಆಶ್ರಯ
ಒಮ್ಮೆ ಮುರುಕಲು ಮನೆಯಲ್ಲಿದ್ದ ಒಬ್ಬ ದಲಿತ ವಿದ್ಯಾರ್ಥಿಯ ಪ್ರತಿಭೆಯನ್ನು ಗಮನಿಸಿ ಅವನಿಗೆ ತಮ್ಮ ಔಟ್ಹೌಸನ್ನು ಕೊಟ್ಟಿದ್ದರು. ಅದಕ್ಕೆ ಕಾಲೇಜಿನಲ್ಲಿ ಗುಲ್ಲೆದ್ದಿತು. ಆಚಾರ್ಯರು ಔಟ್ಹೌಸನ್ನು ಬಾಡಿಗೆಗೆ ಕೊಟ್ಟಿದ್ದಾರೆಂದು ಕೆಲವರು ವಿಶ್ವವಿದ್ಯಾಲಯದ ಕುಲಪತಿಗಳಿಗೆ ದೂರು ನೀಡಿದರು. ಕುಲಪತಿ ಅವರು ಪ್ರೊ. ಆಚಾರ್ಯರನ್ನು ವಿಚಾರಣೆಗೆಂದು ಕರೆಯಿಸಿದರು. ಕೇಳಿದಾಗ ಆಚಾರ್ಯರು ನಗುತ್ತಾ “ಹೌದು, ನನ್ನ ಮಗುವಿಗೆ ಬಾಡಿಗೆಗೆ ಕೊಟ್ಟಿದ್ದೇನೆ” ಎಂದು ಉತ್ತರ ಕೊಟ್ಟರು. ವಿರೋಧ ಬಂದ ಹಿನ್ನೆಲೆಯಲ್ಲಿ ಆನಂತರ ಆ ವಿದ್ಯಾರ್ಥಿಯನ್ನು ತಮ್ಮ ಮನೆಯಲ್ಲೇ ಇರಿಸಿಕೊಂಡು “ನೀನು ನನ್ನ ಮಗನಿದ್ದ ಹಾಗೆ. ನೀನಿಲ್ಲಿ ಎಲ್ಲಿ ಬೇಕಾದರೂ ಇರಬಹುದು” ಎಂದು ಆಶ್ರಯದ ಜೊತೆಗೆ ಸ್ವಾತಂತ್ರ್ಯವನ್ನೂ ಕೊಟ್ಟಿದ್ದರು. ಒಂದು ನೆಲೆಯಲ್ಲಿ ಕರ್ಮಠರಾದರೂ ಅವರು ಎಲ್ಲ ಎಲ್ಲೆ ಮೀರಿದ ಸಂತನಂತಿದ್ದರು; ಧರ್ಮಗಳ ಬ್ರಾಕೆಟ್ಟು, ಚೌಕಟ್ಟು ಅವರಿಗೆ ಇರಲಿಲ್ಲ ಎನ್ನುತ್ತಾರೆ ಆಪ್ತರು.
ಇಂತಹ ಇನ್ನೊಂದು ಸಂದರ್ಭವನ್ನು ಪ್ರಕಾಶಕ ಎಂ.ಎ. ಸುಬ್ರಹ್ಮಣ್ಯ ಅವರು ಹಂಚಿಕೊಂಡಿದ್ದಾರೆ. ಒಮ್ಮೆ ಗೋಕರ್ಣದಲ್ಲಿ ಆಚಾರ್ಯರ ಪ್ರವಚನ ನಡೆಯುತ್ತಿತ್ತು. ಆಗ ಹಿಂದೂ ಧರ್ಮ-ಸಂಸ್ಕೃತಿಗಳಲ್ಲಿ ಅಪಾರ ಗೌರವವಿದ್ದ ಓರ್ವ ವಿದೇಶೀ ಮಹಿಳೆ ಭಾರತಕ್ಕೆ ಬಂದಿದ್ದರು. ಆಕೆಯ ಅಪೇಕ್ಷೆಯ ಮೇರೆಗೆ ಆಚಾರ್ಯರನ್ನು ಭೇಟಿ ಮಾಡಿಸಲು ಸುಬ್ರಹ್ಮಣ್ಯ ಆಕೆಯನ್ನು ಗೋಕರ್ಣಕ್ಕೆ ಕರೆದುಕೊಂಡು ಹೋದರು. “ನನಗೆ ಮುಜುಗರ. ಆಕೆ ಅನ್ಯಧರ್ಮೀಯರಾದರೆ ಆಚಾರ್ಯರು ಮಡಿವಂತರು. ಆಕೆಗೆ ಹೊರಗೆ ಊಟ ಹಾಕಿದರೆ ನನ್ನ ಬಗ್ಗೆ ಇವರು ತಪ್ಪು ತಿಳಿದಾರೆಂದು ಅವರ ಬಳಿಗೆ ಹೋದೆ. ಆಚಾರ್ಯರು ನಗುತ್ತಲೇ ಬರಮಾಡಿಕೊಂಡು ಪತ್ನಿಯನ್ನು ಕರೆದು ಸ್ವೀಟು ಮೊದಲಾದವನ್ನು ವಿದೇಶೀ ಮಹಿಳೆಗೆ ಬಡಿಸಲು ಹೇಳಿದರು; ಮತ್ತು ಆಕೆಗೆ ‘ನೀವು ನನ್ನ ಜೊತೆಗೇ ಕುಳಿತುಕೊಳ್ಳಿ. ನನಗೆ ಮಂಡಿನೋವು. ಹಾಗಾಗಿ ಕುರ್ಚಿ ಮೇಲೆಯೇ ಕೂತಿದ್ದೇನೆ’ ಎಂದು ಸಮಜಾಯಿಷಿ ಹೇಳಿದರು; ಮತ್ತು ಪಕ್ಕದಲ್ಲಿ ಮೇಜು ಹಾಕಿಸಿ ಕೂರುವಂತೆ ಹೇಳಿದರು. ಆದರೆ ಆಕೆ ತನಗೆ ನೆಲದಲ್ಲಿ ಚಕ್ಕಳಮಕ್ಕಳ ಹಾಕಿ ಕೂರಬೇಕೆಂದು ಹಠ ಹಿಡಿದು ನೆಲದಲ್ಲೇ ಕುಳಿತು ಊಟ ಮಾಡಿದರು. ಊಟವಾದ ಮೇಲೆ ಆಚಾರ್ಯರು ಆಕೆಗೆ ನಮ್ಮ ಸಂಸ್ಕೃತಿಯನ್ನು ಸರಳವಾಗಿ ಪರಿಚಯಿಸಿದರು ಎಂದು ಸುಬ್ರಹ್ಮಣ್ಯ ಆಚಾರ್ಯರ ಹೃದಯವೈಶಾಲ್ಯವನ್ನು ಕೊಂಡಾಡಿದ್ದಾರೆ.
ವಿಶಾಲ ಓದು
ವಿಶಾಲ ಮತ್ತು ವ್ಯಾಪಕ ಓದಿನಿಂದಾಗಿ ಡಾ. ನಾರಾಯಣಾಚಾರ್ಯರು ಸಾರ್ವಜನಿಕ ರಂಗದಲ್ಲಿ ಬಹುಬೇಗ ಬೆಳೆಯಲು ಸಾಧ್ಯವಾಯಿತು. ವಿಶ್ವ ಸಾಹಿತ್ಯ, ಇತಿಹಾಸ, ಇಂಗ್ಲಿಷ್ ಸಾಹಿತ್ಯ, ವೇದ, ಉಪನಿಷತ್, ಪುರಾಣಗಳು, ರಾಮಾಯಣ, ಮಹಾಭಾರತ, ಭಾಗವತ, ಸಂಸ್ಕೃತ-ಕನ್ನಡ- ತಮಿಳು ಭಾಷೆಗಳ ಸಾಹಿತ್ಯ, ಜೊತೆಗೆ ದಟ್ಟ ಜೀವನಾನುಭವ -ಇವೆಲ್ಲ ಅವರಿಗೆ ಎಂಥ ಶಕ್ತಿಯನ್ನು ತಂದುಕೊಟ್ಟವೆಂದರೆ ಇಡೀ ಆರ್ಷ ಸಾಹಿತ್ಯಕ್ಕೆ ಹೊಸ ಬೆಳಕು ಚೆಲ್ಲುವುದು ಅವರಿಗೆ ಸಾಧ್ಯವಾಯಿತು. ಆರ್ಷ ಸಾಹಿತ್ಯದ ಹಾಸು-ಬೀಸು, ಒಳಗುಟ್ಟು, ಒಳನೋಟ, ಮಾರ್ಮಿಕತೆ, ಅವುಗಳ ಧಾರ್ಮಿಕ, ಸಾಂಸ್ಕೃತಿಕ, ಆಧ್ಯಾತ್ಮಿಕ, ಸಾಮಾಜಿಕ, ರಾಜಕೀಯ ಮುಖ, ಪ್ರಸ್ತುತತೆ -ಇವುಗಳನ್ನು ಯಥಾರ್ಥವಾಗಿ ತಿಳಿಸಿಕೊಡುವಲ್ಲಿ ಅವರಿಗೆ ಅವರೇ ಸಾಟಿ. ಕನ್ನಡ, ಇಂಗ್ಲಿಷ್, ಸಂಸ್ಕೃತ ಸಾಹಿತ್ಯಗಳನ್ನು ಆಯಾ ಭಾಷೆಯಲ್ಲಿ ಸಮದಂಡಿಯಾಗಿ ಓದಿಕೊಂಡು ತಿಳಿದ ಅವರು ಇಂಗ್ಲಿಷ್ ಸಾಹಿತ್ಯದ ಸ್ವತಂತ್ರ ವಿಚಾರಧೋರಣೆ, ವೈಜ್ಞಾನಿಕ ಮನೋಭಾವ, ಸಂಸ್ಕೃತದ ಸಾಂಪ್ರದಾಯಿಕ ಪಾಂಡಿತ್ಯಗಳನ್ನು ತಮ್ಮದಾಗಿಸಿಕೊಂಡಿದ್ದರು. ಜೊತೆಗೆ ಅವರ ಸ್ಮೃತಿ, ಮತಿ, ಬುದ್ಧಿ ಮತ್ತು ಪ್ರಜ್ಞೆಗಳು ಪ್ರಖರವಾಗಿದ್ದವು.
ಬೇಂದ್ರೆ ಆಶೀರ್ವಾದ
ಧಾರವಾಡದಲ್ಲಿ ಮೊದಲಿಗೆ ಅವರು ವೇದ, ರಾಮಾಯಣ, ಮಹಾಭಾರತಗಳ ಮೇಲೆ ಪ್ರವಚನಗಳನ್ನು ಕೊಡುತ್ತಿದ್ದು, ಪ್ರವಚನಾಚಾರ್ಯರೆಂದು ಪ್ರಸಿದ್ಧಿಗೂ ಬಂದರು. ಕನ್ನಡದ ಅಗ್ರಮಾನ್ಯ ಕವಿ ದ.ರಾ. ಬೇಂದ್ರೆ ಅವರು ಆಚಾರ್ಯರ ಪ್ರವಚನಗಳಿಗೆ ತಪ್ಪದೆ ಹಾಜರಾಗುತ್ತಿದ್ದರು. ಹಾಗೆ ಬಂದವರು ಒಮ್ಮೆ ಮಾತನಾಡಿಸಿ, “ಇವತ್ತಲ್ಲ ನಾಳೆ ನೀನು ಸತ್ತುಹೋಗುತ್ತಿ. ಆಗ ನಿನ್ನ ಜ್ಞಾನವೂ ಸತ್ತುಹೋಗುತ್ತದೆ. ಹಾಗಾಗಬಾರದು; ನಿನ್ನ ಜ್ಞಾನ ಮುಂದಿನ ಮಂದಿಗೆ ಸಿಗಬೇಕು; ಅದಕ್ಕಾಗಿ ಬರಿ. ತಗೊ ಇನ್ನೂರು ರೂಪಾಯಿ. ಈ ರೊಕ್ಕ ಇಟ್ಕೊ. ಈಗ ನೀನು ಹೇಳಿದ್ದನ್ನು ಬರೆದು ಪುಸ್ತಕ ಬಿಡುಗಡೆಮಾಡು” ಎಂದು ಹೇಳಿ ಸ್ಥಳದಲ್ಲೇ ೨೦೦ ರೂ. ಕೊಟ್ಟರು. ಅದನ್ನು ನೋಡಿ ಸಭಿಕರು ಕೂಡ ಐದು ಹತ್ತು, ಇಪ್ಪತ್ತು ರೂಪಾಯಿಗಳನ್ನು ಕೊಟ್ಟರು. (ಆ ಕಾಲದಲ್ಲಿ ಅದು ದೊಡ್ಡ ಮೊತ್ತವೇ.) ಬೇಂದ್ರೆ ಅವರ ಈ ಪ್ರೋತ್ಸಾಹದಿಂದ ಉತ್ಸಾಹಗೊಂಡು ನಾರಾಯಣಾರ್ಯರು ವೇದವಿದ್ಯಾ ಪ್ರಕಾಶನ ಮತ್ತು ಮಾಲೋಲ ಎನ್ನುವ ಎರಡು ಪ್ರಕಾಶನಗಳನ್ನು ಆರಂಭಿಸಿದರು; ವೇದಗಳನ್ನು ಕುರಿತು ಹತ್ತು ಸಂಪುಟಗಳನ್ನು ಪ್ರಕಟಿಸಿದರು. ಆಚಾರ್ಯರು ಮಾತನಾಡಿದಷ್ಟೇ ಸರಳವಾಗಿ ಸರಸವಾಗಿ ಬರೆದರು. “ನಾನು ಬರೆಯುವುದು ಜನಸಾಮಾನ್ಯರಿಗೆ; ವಿದ್ವಾಂಸರಿಗಲ್ಲ. ಆದ್ದರಿಂದ ವೇದದ ಗಟ್ಟಿತನವನ್ನು ದುರ್ಬಲವಾಗಿಸದೆ ತಿಳಿಯಾಗಿ ಕೊಡಬೇಕು; ತಿಳಿವಳಿಕೆ ಕೊಡಬೇಕು” ಎಂದು ಬರೆದರು. ಓದುಗನಿಗೆ ಕಠಿಣ ಸಿದ್ಧಾಂತವು ಗೋಜಲು ಎನಿಸಬಾರದು. ರಾಮ, ಕೃಷ್ಣರ ಕಥೆಯನ್ನು ಹೇಳುತ್ತಲೇ ಭಾರತೀಯ ತತ್ತ್ವಶಾಸ್ತ್ರದ ಪರಿಚಯವನ್ನು ಮಾಡಿಸಬೇಕು. ಭಾಗವತದ ಕಥೆಯನ್ನು ಹೇಳುತ್ತಲೇ ಅಧ್ಯಾತ್ಮದ ರುಚಿ ಹತ್ತಿಸಬೇಕು. ಯಾವುದೋ ಸಾವಿರಾರು ವರ್ಷಗಳ ಹಿಂದೆ ನಡೆದುದೆಂದು ಅನ್ನಿಸದೆ ‘ನಿನ್ನ ಕಣ್ಣೆದುರೇ ಇದೆಲ್ಲ ಆಗುತ್ತಿಲ್ಲವೇನಪ್ಪಾ’ ಎನ್ನುತ್ತ ಬರೆದರು. ಓದುಗ ಭೂತಕಾಲವನ್ನು ವರ್ತಮಾನ ಕಾಲದಲ್ಲಿಟ್ಟು ವಿಶ್ಲೇಷಿಸುವಂತೆ ಬೆಳೆಸಿದರು. ಕೈ ಹಿಡಿದು ನಡೆಸಿದರು. ಸುಲಭದ ರಾಜಮಾರ್ಗ ನಿರ್ಮಿಸಿಕೊಟ್ಟು ಅದರಲ್ಲಿ ನಡೆಸಿದರು. ಅವರ ಈ ಮಾರ್ಗ ತುಂಬ ಯಶಸ್ವಿಯಾಯಿತು.
“ಸ್ವಾತಂತ್ರ್ಯಾನಂತರ ನಾಲ್ಕು ‘ಉಪಾಯ’ಗಳಲ್ಲಿ ಭೇದ ದಂಡ ಬಿಟ್ಟು ಎಲ್ಲರೂ ಒಳ್ಳೆಯವರೆಂಬ ಸಾಮಾಜಿಕ ವಾದವು ಬೆಳೆದು ರಾಜಾಶ್ರಯವನ್ನು ಪಡೆದ ಕಾರಣ ಇಂದು ದೇಶವು ಇಲ್ವಲಮಯವಾಗಿದೆ. ಜೀವನವು ನಿರಂತರ ಯುದ್ಧ – ದೇವಾಸುರ ಕಾಳಗ. ಅದು ಬಿಟ್ಟು ಆತ್ಮವಂಚನೆಯನ್ನು ದೂರ ಮಾಡದ ಸುಳ್ಳು ತತ್ತ್ವಶಾಸ್ತ್ರದಿಂದಾಗಿ ನೀಚರನ್ನು ಸಹಿಸುತ್ತ ಶಿಷ್ಟರು ನಿರುಪಾಯರಾಗುವಂತೆ ಮಾಡುವ ಸಾಮಾಜಿಕ ಸ್ಥಿತಿ ಬಂದಿದೆ. ಇದಕ್ಕೆ ಐವತ್ತರವತ್ತು ವರ್ಷ ನಮ್ಮ ರಾಜನೀತಿ ರೂಪಿಸಿದ ಅಜ್ಞರೇ ಹೊಣೆ. ಈ ಕೆಟ್ಟ ಅಧ್ಯಾಯವು ಮುಗಿಯಬೇಕಾದರೆ ಅಗಸ್ತ್ಯರು, ಚಾಣಕ್ಯರಂಥವರು ಬೇಕು. ಬ್ರಾಹ್ಮ ಮತ್ತು ಕ್ಷಾತ್ರ ಶಕ್ತಿಗಳು ಸಂಘಟಿತ ಹಾಗೂ ಜಾಗೃತವಾಗಬೇಕು” ಎಂದು ಆಚಾರ್ಯರು ಹೇಳುತ್ತಾ ಬಂದರು.
ಕಥೆ ನೆಪಕ್ಕೆ ಮಾತ್ರ
ಅವರು ಕಥೆಯನ್ನು ಕಥೆಯಾಗಿ ಹೇಳುತ್ತಿರಲಿಲ್ಲ. ಅದರಲ್ಲಿ ನೀತಿಯನ್ನು ತುಂಬುತ್ತಿದ್ದರು. ಮೌಲ್ಯ ಪ್ರತಿಪಾದನೆಗೆ ಅವರಿಗೆ ಕಥೆ ನೆಪ ಮಾತ್ರ. ಹೇಳಬೇಕಿದ್ದುದು ಕಥೆಯಲ್ಲ. ದಿಕ್ಕುತಪ್ಪಿ ದಿಕ್ಕೆಟ್ಟು ಕುಳಿತಿರುವ ವರ್ತಮಾನದ ಸಮಾಜಕ್ಕೆ ಮಾರ್ಗದರ್ಶನದ ಪಾಠ. ಮಹಾಭಾರತದ ಕಥೆ ಹೇಳುವುದರ ಜೊತೆಗೆ ಇಂದಿನ ಸಮಾಜದಲ್ಲಿರುವ ಭೀಷ್ಮ, ದುರ್ಯೋಧನ, ಕರ್ಣರಿಗೆ ಸರ್ಚ್ಲೈಟ್ ಹಾಕಿ ತೋರಿಸುತ್ತಿದ್ದರು. ಕೃಷ್ಣ, ಅರ್ಜುನ, ಧರ್ಮರಾಯರಿಗೆ ಅವರ ಪ್ರೀತಿ, ಅನುಕಂಪಗಳು ಸಿಗುತ್ತಿದ್ದವು.
ಕೆ.ಎಸ್. ನಾರಾಯಣಾಚಾರ್ಯರ ಬರವಣಿಗೆ ತುಂಬ ವೇಗದ್ದು. ದಿನಕ್ಕೆ ಆರೇಳು ಅಧ್ಯಾಯ, ೬೦-೭೦ ಪುಟ ಬರೆಯುವುದಿತ್ತು. ರಾಮಾಯಣ, ಮಹಾಭಾರತ ಇತ್ಯಾದಿ ಕಥೆಗಳನ್ನು ಆಧರಿಸಿದ ಒಂದು ಕಾದಂಬರಿ ಬರೆಯಲು ಅವರಿಗೆ ಒಂದು ತಿಂಗಳು ಸಾಕಿತ್ತು.
೧೯೮೦-೯೦ರ ದಶಕಗಳು ಮುದ್ರಣ ಮಾಧ್ಯಮವು ವಿಜೃಂಭಿಸುತ್ತಿದ್ದ ಕಾಲ. ಜನಪ್ರಿಯ ವಾರಪತ್ರಿಕೆಗಳು ದಾಖಲೆ ಮಾರಾಟವಾಗುತ್ತಿದ್ದು, ಗೃಹಿಣಿಯರು, ವಿದ್ಯಾರ್ಥಿಗಳು, ವೃದ್ಧರು, ಉದ್ಯೋಗಸ್ಥರೆಲ್ಲ ಅವುಗಳಿಗೆ ಕಾದಿರುತ್ತಿದ್ದರು. ಆಗ ಇವರ ಧಾರಾವಾಹಿಗಳು ಕೃಷ್ಣನ ಕಥೆ, ಕುರುಕ್ಷೇತ್ರದ ವೀಕ್ಷಕ ವಿವರಣೆಯಂತಹ ‘ಆ ಹದಿನೆಂಟು ದಿನಗಳು’, ರಾಜಸೂಯದ ರಾಜಕೀಯದ ಒಳಸುಳಿಗಳು, ಮತ್ತೆ ಭಾಗವತವನ್ನು ಓದುತ್ತಿದ್ದರೆ ಇಲ್ಲೇ ನಮ್ಮೆದುರಲ್ಲೇ ಕೃಷ್ಣ, ಅರ್ಜುನ, ಭೀಮ, ದುರ್ಯೋಧನ, ಧೃತರಾಷ್ಟ್ರ, ಕುಂತಿ, ದ್ರೌಪದಿ, ಭೀಷ್ಮ ಎಲ್ಲ ಇದ್ದಾರೇನೋ; ನಮ್ಮ ಎದುರಲ್ಲೇ ಅವರ ಮಾತುಕತೆ, ಪ್ರೀತಿ, ಅಸಮಾಧಾನ, ಹೊಡೆದಾಟ, ಉಪದೇಶ ಎಲ್ಲ ನಡೆಯುತ್ತಿದೆಯೇನೋ ಎಂಬಂತಹ ಭಾವ. ನೀವೇ ಯುದ್ಧವನ್ನು ನೋಡಿದಂತಹ ಅನುಭವ, ರೋಮಾಂಚನ. ಒಬ್ಬೊಬ್ಬರ ಮನಸ್ಸಿನ ಒಳಗೂ ನಡೆಯುತ್ತಿರುವ ತಾಕಲಾಟಗಳಿಗೆ ಆಚಾರ್ಯರು ಮಸೂರವಿಟ್ಟು ಹಿಗ್ಗಿಸಿ ನಮಗೆ ತೋರಿಸುತ್ತಿದ್ದಾರೆ ಎನ್ನುವ ಲೇಖಕ ರೋಹಿತ್ ಚಕ್ರತೀರ್ಥ, ೧೮ ಅಕ್ಷೌಹಿಣಿ ಸೈನ್ಯದ ನಡುವೆ ನಿಂತ ಅರ್ಜುನ ಅಂತಹ ಸಂದಿಗ್ಧವನ್ನು ಅನುಭವಿಸಿದನೋ ಇಲ್ಲವೋ. ಓದುಗನಂತೂ ಪ್ರಕ್ಷುಬ್ಧನಾಗಿ ಕೈ ಕೈ ಹಿಸುಕಿಕೊಳ್ಳುತ್ತಿದ್ದ ಎನ್ನುತ್ತಾರೆ. ನಾರಾಯಣಾಚಾರ್ಯರ ಶೈಲಿ ಆ ಥರದ್ದು; ‘ಕುಮಾರವ್ಯಾಸನು ಹಾಡಿದನೆಂದರೆ ಕಲಿಯುಗ ದ್ವಾಪರವಾಗುವುದು’ ಎನ್ನುವ ಕವಿವಾಣಿಯಂತೆ.
ಪ್ರಕಾಶಕರ ಸ್ನೇಹ
ತಮ್ಮ ಕೃತಿ-ಗ್ರಂಥಗಳಿಗೆ ಬೇಡಿಕೆ ಹೆಚ್ಚಿದಂತೆ ಆಚಾರ್ಯರು ತಾವೇ ಪ್ರಕಾಶನ ಮಾಡುವುದನ್ನು ಬಿಟ್ಟು ಬೇರೆ ಪ್ರಕಾಶಕರಿಗೆ ವಹಿಸಿಕೊಟ್ಟರು. ಅದೇ ಹುಬ್ಬಳ್ಳಿಯ ಸಾಹಿತ್ಯ ಪ್ರಕಾಶನ. ಈ ವಿಷಯದಲ್ಲಿ ಎಸ್.ಎಲ್. ಭೈರಪ್ಪನವರಿಗೂ ಕೆ.ಎಸ್. ನಾರಾಯಣಾಚಾರ್ಯರಿಗೂ ಒಂದು ಹೋಲಿಕೆಯಿದೆ. ಅದೆಂದರೆ ಇವರು ಪ್ರಕಾಶಕರನ್ನು ಬದಲಾಯಿಸುವವರಲ್ಲ. ಸಾಹಿತ್ಯ ಪ್ರಕಾಶನ ಮತ್ತು ಬೆಂಗಳೂರಿನ ಸಾಹಿತ್ಯ ಭಂಡಾರ ಸಹ-ಸಂಸ್ಥೆಗಳು. ಸಾಹಿತ್ಯ ಭಂಡಾರ ಭೈರಪ್ಪನವರ ಪ್ರಕಾಶಕರು. ಆಯಾ ಪ್ರಕಾಶನ ಸಂಸ್ಥೆಗಳಿಗೆ ಈ ಇಬ್ಬರು ಲೇಖಕರು ಪ್ರಮುಖ ಆಧಾರ ಎಂಬುದು ಇನ್ನೊಂದು ವಿಶೇಷ. ಕನ್ನಡದ ಮಟ್ಟಿಗೆ ಹೇಳುವುದಾದರೆ ಆಚಾರ್ಯರ ಕೃತಿಗಳು ದೊಡ್ಡ ಸಂಖ್ಯೆಯಲ್ಲಿ ಮಾರಾಟವಾಗುತ್ತವೆ. ಚಾಣಕ್ಯ ಇಪ್ಪತ್ತು ಸಾವಿರ ಪ್ರತಿಗಳಾದರೆ, ಅಗಸ್ತ್ಯ ೧೮ ಸಾವಿರ. ಇವರ ಹತ್ತಕ್ಕೂ ಅಧಿಕ ಪುಸ್ತಕಗಳು ಹತ್ತು ಸಾವಿರ ಪ್ರತಿಗಳನ್ನು ದಾಟಿವೆ.
ಬರವಣಿಗೆ, ಪ್ರವಚನ, ಮಧ್ಯೆ ಬಿಡುವು ಪಡೆದಾಗ ಗಮಕ; ನಡುವೆ ಪತ್ರಿಕೆಗಳಿಗೆ ಅಂಕಣ ಬರಹ. ಅಲ್ಲಿ ರಾಜಕೀಯ ಮತ್ತು ಪ್ರಸಕ್ತ ವಿದ್ಯಮಾನಗಳ ಪ್ರಖರ ವಿಶ್ಲೇಷಣೆ; ದೇಶ-ವಿದೇಶಗಳ ಸಂಗತಿಗಳಿಗೆ ಪ್ರತಿಕ್ರಿಯೆ. ಮಾತು, ಬರಹ, ಚಿಂತನ -ಎಲ್ಲ ಕಡೆಯಲ್ಲೂ ರಾಷ್ಟ್ರೀಯತೆಗೆ ಅಗ್ರಸ್ಥಾನ. “ರಾಷ್ಟ್ರೀಯತೆಯಿಂದ ನೀವು ದೂರ ಸರಿದ ದಿನ ನಿಮ್ಮ ಪತ್ರಿಕೆಗೆ ಅಂಕಣ ಬರೆಯುವುದನ್ನು ನಿಲ್ಲಿಸುತ್ತೇನೆ” ಇದು ಆಚಾರ್ಯರ ಸ್ಪಷ್ಟ ಮಾತು. ಲಕ್ಷಗಟ್ಟಲೆ ಪ್ರತಿ ಮಾರುವ ಪತ್ರಿಕೆಗಳಿಗೂ ಅದೇ ನಿಯಮ; ಮತ್ತು ಅದನ್ನು ಅವರು ಪಾಲಿಸಿದ್ದಾರೆ ಕೂಡ. “ಏನಾದರೂ ಮಾಡಿ. ಆದರೆ ದೇಶದ ಕೈ ಬಿಡಬೇಡೀಪ್ಪ. ಈ ದೇಶ ಜಗತ್ತಿನ ನೂರಾರು ಸಂಸ್ಕೃತಿಗಳಿಗೆ ಆಸರೆ ಕೊಟ್ಟು, ನೀರು-ನೆರಳು ನೀಡಿ ಸಲಹಿದ ಮಾತೆ. ಇದನ್ನು ನಡುಬೀದಿಗೆ ಚೆಲ್ಲಬೇಡೀಪ್ಪ” ಎಂದು ಅವರು ತಮ್ಮ ಸಂಪರ್ಕಕ್ಕೆ ಬಂದವರಿಗೆ ಯಾವಾಗಲೂ ಹೇಳುತ್ತಿದ್ದರು.
ಯುವ ಲೇಖಕರಲ್ಲಿ ಪ್ರೀತಿ
ರಾಷ್ಟ್ರೀಯತೆಯನ್ನು ಮುಂದಿಟ್ಟುಕೊಂಡು ಬರೆಯುವವರ ಬಗೆಗೆ ಅವರು ಅಪಾರ ಪ್ರೀತಿ, ಆತ್ಮೀಯತೆಗಳನ್ನು ಇಟ್ಟುಕೊಂಡಿದ್ದರೆಂದು ರೋಹಿತ್ ಚಕ್ರತೀರ್ಥ ತಮ್ಮ ಅನುಭವವನ್ನು ನೆನಪಿಸಿಕೊಂಡಿದ್ದಾರೆ. ಯಾವುದಾದರೂ ಪತ್ರಿಕೆಯಲ್ಲಿ ಚಕ್ರತೀರ್ಥ ಅವರ ಒಂದು ಲೇಖನ ಪ್ರಕಟವಾಗಿದೆ ಎಂದರೆ ಬೆಳಗ್ಗೆಯೇ ಆಚಾರ್ಯರ ಫೋನು ಬರುತ್ತಿತ್ತಂತೆ. ಅದು ರಾಷ್ಟ್ರೀಯತೆಯ ಬಗೆಗಿನ ಲೇಖನಗಳು ಮತ್ತು ಅದನ್ನು ಬರೆಯುವವರನ್ನು ಡಾ. ಆಚಾರ್ಯರು ಗಮನಿಸುತ್ತಿದ್ದ ರೀತಿ. ಮುಂಜಾನೆ ಎದ್ದು ಎಲ್ಲ ಪತ್ರಿಕೆಗಳ ಮೇಲೆ ಕಣ್ಣಾಡಿಸಿ, ವರ್ತಮಾನ ತಿಳಿದುಕೊಂಡು, ಅಗತ್ಯವೆನಿಸಿದ ಲೇಖನವನ್ನು ಪೂರ್ತಿ ಓದಿ, ಆಯಾ ಲೇಖಕರ ಜೊತೆ ಫೋನ್ನಲ್ಲಿ ಮಾತನಾಡಿ ಒಂದಷ್ಟು ವಿಷಯಗಳನ್ನು ಹಂಚಿಕೊಂಡರೇನೇ ಅವರಿಗೆ ಸಮಾಧಾನ. ಕಿರಿಯರ ಮೇಲೆ ಮನೆಯ ಹಿರಿಯರು ತೋರಿಸುವಂತಹ ಪ್ರೀತಿ-ವಾತ್ಸಲ್ಯ. ತರುಣ ಲೇಖಕರು ಯಾರಾರು ಎಲ್ಲೆಲ್ಲಿ ಬರೆಯುತ್ತಿದ್ದಾರೆ, ರಾಷ್ಟ್ರೀಯತೆಯನ್ನು ಕುರಿತು ಮಾತನಾಡುತ್ತಿದ್ದಾರೆ ಎಂಬುದನ್ನು ಸದಾ ಗಮನಿಸುತ್ತಿದ್ದರು. ತಮಗೆ ಗೊತ್ತಿಲ್ಲದ ಪತ್ರಿಕೆ, ಯೂ ಟ್ಯೂಬ್ಗಳಲ್ಲೂ ಅಂತಹ ವಿಷಯ ಇದೆ ಎಂದಾಗ ‘ಅಯ್ಯೋ, ಇಷ್ಟು ದಿನ ಗೊತ್ತಿಲ್ಲದೆಹೋಯಿತಲ್ಲ’ ಎಂದು ಚಡಪಡಿಸುತ್ತಿದ್ದರಂತೆ.
ಲೋಕವಿಮುಖರಲ್ಲ
ಧಾರವಾಡ ಆಕಾಶವಾಣಿಯಲ್ಲಿ ಸುದೀರ್ಘ ಕಾಲ ಕೆಲಸ ಮಾಡಿದ ದಿವಾಕರ ಹೆಗಡೆ ಅವರು ವಿದ್ವಾಂಸರು-ಕವಿ-ಸಾಹಿತಿಗಳ ಆ ನೆಲದಲ್ಲಿ ಡಾ. ನಾರಾಯಣಾಚಾರ್ಯರ ಹೆಜ್ಜೆಗುರುತುಗಳನ್ನು ಬಹಳಷ್ಟು ಗಮನಿಸಿದವರು. “ಅಧ್ಯಾತ್ಮವು ಆಚಾರ್ಯರ ಸ್ವಭಾವವೇ ಆಗಿದ್ದರೂ ಲೋಕವಿಮುಖತೆ ಅವರಲ್ಲಿ ಇರಲಿಲ್ಲ; ಅವರು ನಿರ್ಲಿಪ್ತರಲ್ಲ. ಲೋಕದ ವ್ಯವಹಾರವನ್ನು ನೇರ್ಪಡಿಸುವುದಕ್ಕೆ ಮೌಲ್ಯವ್ಯವಸ್ಥೆಯನ್ನು ರೂಢಿಸುವುದು ಅಗತ್ಯವೆಂದು ಅವರು ನಂಬಿದ್ದರು. ಪೌರುಷಹೀನ ಬದುಕನ್ನು ನಿಂದಿಸಿ, ಧೀರ ಬದುಕನ್ನು ಪ್ರತಿಪಾದಿಸುತ್ತಿದ್ದರು. ಭಾರತೀಯ ಪರಂಪರೆಯಲ್ಲಿ ಅಸೀಮಶ್ರದ್ಧೆ, ಅಪಾರಜ್ಞಾನವನ್ನು ಹೊಂದಿದ್ದು ಅತ್ಯಂತ ಸಂಯಮದ ಬದುಕನ್ನು ನಡೆಸುತ್ತಿದ್ದರು. ಲೋಕ(ಜನ) ಶಿಕ್ಷಣವು ತನ್ನ ಕರ್ತವ್ಯವೆಂದು ತಿಳಿದಿದ್ದರು. ಅಧ್ಯಯನ ಮತ್ತು ವಿಚಾರಗಳಲ್ಲಿ ಆಧುನಿಕರಾದರೂ ನಿತ್ಯಜೀವನದಲ್ಲಿ ಸಂಪ್ರದಾಯಕ್ಕೆ, ಪರಂಪರೆಗೆ ಅಂಟಿಕೊಂಡಿದ್ದರು; ಪರಂಪರೆಯ ಸಾಕಾರಮೂರ್ತಿಯಾಗಿದ್ದರು. ಋಷಿ ಪರಂಪರೆಯ ಮೌಲ್ಯಗಳು ಕಾಲಬಾಹ್ಯವಲ್ಲ, ನಿತ್ಯನೂತನ ಎಂದು ನಂಬಿ ಅದರಂತೆ ನಡೆದುಕೊಳ್ಳುತ್ತಿದ್ದರು” ಎಂದು ಹೆಗಡೆ ಗುರುತಿಸಿದ್ದಾರೆ. ಜನಭಾಷೆಯಲ್ಲಿ ಬರೆದ ಬೇಂದ್ರೆ ಕಾವ್ಯದಲ್ಲಿ ಋಷಿಪರಂಪರೆ ಹೇಗೆ ಹರಿದುಬಂದಿದೆ ಎಂದು ತಮ್ಮ ಒಂದು ಪುಸ್ತಕದಲ್ಲಿ ಆಚಾರ್ಯರು ಬರೆದಿದ್ದಾರೆ.
ಭಾವ ಮತ್ತು ಬುದ್ಧಿಗಳನ್ನು ಪ್ರತ್ಯೇಕಿಸಿ ಬೌದ್ಧಿಕತೆಯ ಎದುರು ಮನುಷ್ಯನ ಶ್ರದ್ಧೆಯನ್ನು ಅಣಕಿಸತೊಡಗಿದಾಗ ಆಚಾರ್ಯರು ಶ್ರದ್ಧಾವಂತರ ಭಾವಕ್ಕೆ ಬಲ ತುಂಬಿದರು. ಭಾರತೀಯವಾದದ್ದೆಲ್ಲ ಹೊಸ ಬದುಕಿಗೆ ಉಪಯೋಗವಿಲ್ಲದ್ದು ಎಂಬ ವಾದವನ್ನು ಮುಂದಿಟ್ಟು ಕೆಲವರು ಪರಂಪರೆಯ ಸಂಗತಿಗಳನ್ನು ಅವಹೇಳನ ಮಾಡಿದಾಗ, ಸೆಕ್ಯುಲರ್ ಶಬ್ದದ ಅಪವ್ಯಾಖ್ಯಾನ ಮತ್ತು ದುರುಪಯೋಗದಿಂದ ಭಾರತೀಯ ಮಾನಸಿಕತೆಯನ್ನು ತುಳಿಯಲು ಯತ್ನಿಸಿದಾಗ ಪ್ರಾಚೀನ ಪರಂಪರೆ ಮತ್ತು ಅರ್ವಾಚೀನ ವಿಜ್ಞಾನ ಎರಡನ್ನೂ ಬಲ್ಲ ಆಚಾರ್ಯರು ಅದಕ್ಕೆ ಉತ್ತರವಾಗಿ ನಿಂತರು. ಮನುಷ್ಯನ ಬದುಕು ಕೇವಲ ಹೊಟ್ಟೆಬಟ್ಟೆಗಾಗಿ ಇದ್ದುದಲ್ಲ. ಅವನಿಗೆ ಬುದ್ಧಿ, ಭಾವ, ಚಿತ್ತ, ಆತ್ಮ ಎಲ್ಲವೂ ಇವೆ; ಸಾಹಿತ್ಯ ಮತ್ತು ಸಂಸ್ಕೃತಿಗಳು ಅವನ ಆಧ್ಯಾತ್ಮಿಕ ಹಂಬಲಕ್ಕೆ ಬೆಂಬಲವಾಗಿ ನಿಲ್ಲುತ್ತವೆ ಎಂದು ಸಮರ್ಥಿಸಿದರು.
ಕನ್ನಡದ ಗರಡಿಯಾಳು
ರಾಮಾಯಣ, ಮಹಾಭಾರತಗಳ ಅಪವ್ಯಾಖ್ಯಾನಕಾರರಿಗೆ ಅಥವಾ ಅವುಗಳ ಒಂದೆರಡು ಪ್ರತ್ಯೇಕಿತ ಭಾಗಗಳನ್ನು ಆಯ್ದುಕೊಂಡು ಲಘುವಾಗಿ ಮಾತನಾಡುವವರಿಗೆ ಡಾ. ನಾರಾಯಣಾಚಾರ್ಯರು ಸಿಂಹಸ್ವಪ್ನವಾಗಿದ್ದರು. ನಿಂದಕರ ಯಾವುದೇ ಪ್ರಶ್ನೆಗೂ ಅಧಿಕೃತ ಉತ್ತರ ನೀಡುತ್ತಿದ್ದರು. ಶ್ರದ್ಧಾಹೀನರ (ಸೆಕ್ಯುಲರ್) ಅತಿತರ್ಕಗಳಿಗೆ ತಮ್ಮ ಉತ್ತರದ ಈಟಿಯಿಂದ ತಿವಿದರು. ಪ್ರಖರ ರಾಷ್ಟ್ರವಾದಿಯ ನೆಲೆಯಲ್ಲಿ ಅವರು ಚಾಣಕ್ಯನ ಬದುಕನ್ನು ಕಾದಂಬರಿಯಾಗಿ ಬರೆದರು. ಅಗಸ್ತ್ಯ ಕೃತಿಯ ಮೂಲಕ ಋಷಿಸಂಸ್ಕೃತಿಯನ್ನು ಪರಿಚಯಿಸಿದರು. ಹತ್ತು ಸಂಪುಟಗಳಲ್ಲಿ ವೇದ ಸಂಸ್ಕೃತಿಯನ್ನು ಪರಿಚಯಿಸಿದ ಆಚಾರ್ಯರ ಸಾಹಸ ಕನ್ನಡಕ್ಕೆ ಸಂದ ಅನನ್ಯ ಜ್ಞಾನಭಂಡಾರವಾಗಿದೆ. ರಾಮಾಯಣ ಪಾತ್ರಪ್ರಪಂಚ, ಮಹಾಭಾರತ – ಹೀಗೆ ಕೊನೆಯವರೆಗೂ ಭಾರತೀಯ ಮೌಲ್ಯಗಳನ್ನು ಎತ್ತಿಹಿಡಿಯುತ್ತ ಬಂದರು. ಆಸಕ್ತ ಲೌಕಿಕರ ಪ್ರಶ್ನೆಗಳಿಗೆ ಉತ್ತರವಾಗಿದ್ದ ಆಚಾರ್ಯರು ಜಾಣರ ಕುತರ್ಕಗಳಿಗೆ ಖಡ್ಗವಾಗಿದ್ದರು. ಲೋಕೋತ್ತರ ಹಂಬಲದವರಿಗೆ ಮಾರ್ಗದರ್ಶಕರಾಗಿದ್ದರು ಎನ್ನುವ ದಿವಾಕರ ಹೆಗಡೆ, ಬಹುಭಾಷಾವಿದರಾಗಿದ್ದ ಆಚಾರ್ಯರು ಒಂದು ಪುಸ್ತಕದ ಲೇಖಕನ ಬಿನ್ನಹದ ಕೊನೆಯಲ್ಲಿ ತಮ್ಮನ್ನು ‘ಕನ್ನಡದ ಗರಡಿಯಾಳು’ ಎಂದುದನ್ನು ಶ್ಲಾಘಿಸಿದ್ದಾರೆ.
ಈಚೆಗೆ ಪ್ರಕಟವಾದ ಆಚಾರ್ಯರ ನಹುಷ ಮತ್ತು ಊರ್ವಶೀ-ಪುರೂರವ ಕಾದಂಬರಿಗಳನ್ನು ಪ್ರಸ್ತಾವಿಸುವ ಅಂಕಣಕಾರ ಟಿ. ದೇವಿದಾಸ್ ಅವರು, ಮೂಲದರ್ಶನಕ್ಕೆ ಕಿಂಚಿತ್ತೂ ಚ್ಯುತಿಬಾರದಂತೆ ಮೂಲಗ್ರಂಥಗಳಿಂದ ಹೆಕ್ಕಿ ತೆಗೆದು ಪೂರ್ಣರೂಪದಲ್ಲಿ ಚಿತ್ರಿಸಿ ಕಾದಂಬರೀಕರಣಗೊಳಿಸಿದ್ದಾರೆ. ಇದು ಅವರ ಓದು-ಬರಹಗಳ ತಾಕತ್ತು; ಮತ್ತು ಸತ್ಯವನ್ನು ಜನರಿಗೆ ಉಣಿಸಬೇಕೆಂಬ ಮಹತ್ತ್ವಾಕಾಂಕ್ಷೆ. ಇತರರು ಲೇಖಕನ ಸ್ವಾತಂತ್ರ್ಯ ಮುಂತಾದ ಹೆಸರಿನಲ್ಲಿ ಮೂಲಕ್ಕೆ ಅಪಚಾರ ಎಸಗುವುದಿದೆ; ಸಂಸ್ಕೃತ ಬಾರದ ಓದುಗರಿಗೆ ಇದೇ ನಿಜವಾದ ಮಹಾಭಾರತ ಎಂದು ವಂಚಿಸುವುದಂತೂ ಇದ್ದೇ ಇದೆ. ಇದರ ನಡುವೆ ಆಚಾರ್ಯರು ತಲಸ್ಪರ್ಶಿ ಅಧ್ಯಯನವಿಲ್ಲದೆ ಏನನ್ನೂ ಬರೆಯದವರು – ಎಂದಿದ್ದಾರೆ.
‘ನಹುಷ’ ಬರೆಯುವಾಗ
ನಹುಷ ಕಾದಂಬರಿಯ ಅವರ ಮೊದಲ ಮಾತು ಕೃತಿರಚನೆಯ ವೇಳೆ ಎದುರಾದ ತೊಡಕುಗಳನ್ನು ವಿವರಿಸುತ್ತದೆ. “ಒಬ್ಬ ವೈದಿಕ ಕಾದಂಬರಿಕಾರರು ನಹುಷನನ್ನು ‘ಮಹಾಕ್ಷತ್ರಿಯ’ ಎಂದೇ ನಮೂದಿಸಿದರು. ನಾನು ‘ಮಹಾ’ ಶಬ್ದದ ಅರ್ಥವನ್ನು ಇಲ್ಲೆಲ್ಲಾ ಹುಡುಕಿದೆ. ಹುಡುಕುತ್ತಾ ಹುಡುಕುತ್ತಾ ಬೇರೆಯೇ ಚಿತ್ರ ಕಾಣಬಂದು ಗಾಬರಿಯಾಯಿತು. ಇದರ ಸೂಚನೆ ‘ಸರ್ಪಯಾಗ’ ಬರೆಯುವಾಗಲೇ ಸಿಕ್ಕಿತ್ತು. ‘ನಾಹುಷ್ಯನಾಗರು’ ಜನಮೇಜಯನ ಸರ್ಪಯಾಗದಲ್ಲಿ ಸುಟ್ಟದ್ದು, ಈ Reference ಏಕೆ ಹಾಗೆ ಮಹಾಭಾರತದಲ್ಲಿ ದಾಖಲೆಯಾಯಿತು? ಯೋಚಿಸಿದೆ” ಮುಂತಾಗಿ ಅವರು ಶೋಧಕ್ಕೆ ತೊಡಗುತ್ತಾರೆ. ಮುಂದುವರಿದು “ನನ್ನ ಶೈಲಿಯಲ್ಲಿ Dialogues -ಸಂಭಾಷಣೆಗಳೇ ಉಸಿರು ಎಂದು ಓದಿದವರು ಹೇಳುತ್ತಾರೆ. ಕಥೆ ಮುಂದೆ ಮುಂದೆ ಸಾಗುವುದನ್ನು ಇಲ್ಲೇ ನಾನು ಹೆಣೆಯುತ್ತೇನೆ. Description, narrative ಎಂಬವು ಇದಕ್ಕೆ ಅಂಗ, ಅಂಶ, ಪೂರಕ. ಇದು ಅಕೃತಕವಾಗಿ ರೂಢಿಯಾದ ನನ್ನ ಬರಹದ ರೀತಿ. ಇಂದಿನ ಪೀಳಿಗೆಯ ಓದುಗರಿಗೆ ಈ ಕಥೆಯಿಂದ ತಿಳಿಯಬೇಕಾದ ವ್ಯಾಸಬೋಧೆ ಏನು? – ಎಂಬುದನ್ನು ಅಲ್ಲಲ್ಲಿ ತೋರಿಸಿದ್ದೇನೆ. ಹೆಗ್ಗುರುತಾಗಿ ಇಲ್ಲಿ ಆರಂಭದಲ್ಲೇ ಬರೆದರೆ ಓದಲು ನಿಮಗೂ ಅನುಕೂಲ. ಓದಿಗೂ ದೃಷ್ಟಿಬಿಂದು – Focal Point ಇರಬೇಕೆಂದು ನನ್ನ ಗ್ರಹಿಕೆ. ಮಹಾಭಾರತ, ರಾಮಾಯಣ, ಭಾಗವತಗಳು ಅಧ್ಯಯನ ಮಾತ್ರವಲ್ಲ, ಪಾರಾಯಣಯೋಗ್ಯ! ನನ್ನ ಗ್ರಂಥಗಳೂ ಈ ಆಧಾರದಲ್ಲಿರಲು ವ್ಯಾಸದೃಷ್ಟಿ ಬಿಂದುವನ್ನಿಟ್ಟೇ ಬರೆಯಲು ಯತ್ನಿಸಿದ್ದೇನೆ. ಆ ಬೋಧೆ ಏನು? ಎಂಥವನೂ ಉತ್ತಮಜೀವನ ನಡೆಸಲು ಪರಿವರ್ತನೆಗೆ ಅವಕಾಶವುಂಟು. ಪತನಕ್ಕೆ ಅವನವನ ಆಯ್ಕೆ, ಶೀಲ, ಸಂಗ, ವಿಚಾರ, ಆಚಾರಗಳೇ ಕಾರಣ! ಬಿದ್ದವನು ಏಳಲೂಬಹುದು; ಎದ್ದವನು ಬೀಳಲೂಬಹುದು. ನೋಡುತ್ತಲೇ ಇದ್ದೀರಲ್ಲ ಇಂದಿನ ಭಾರತ ಚರಿತ್ರೆಯಲ್ಲಿ!” – ಅಲ್ಲಲ್ಲಿ ವಿಶ್ವಚರಿತ್ರೆಯಲ್ಲಿ! ಹೀಗೆ ಮುಂದುವರಿಯುತ್ತದೆ.
ಆಚಾರ್ಯರ ಬಗೆಗೆ ಹಲವು ವಿಷಯಗಳನ್ನು ಇಲ್ಲಿ ಏಕಕಾಲಕ್ಕೆ ಗ್ರಹಿಸಬಹುದು; ವಿವರಣೆ ಬೇಕಿಲ್ಲ. ಅವರು ಇಲ್ಲಿ ಹೇಳಿದ ‘ಮಹಾಕ್ಷತ್ರಿಯ’ ಕಾದಂಬರಿ ಯಶಸ್ವೀ ವೈದಿಕ ಕಾದಂಬರಿಕಾರ ದೇವುಡು ನರಸಿಂಹಶಾಸ್ತ್ರಿ ಅವರದ್ದು. ಯಕ್ಷಗಾನ ವೇಷಧಾರಿ ಸಿದ್ದಕಟ್ಟೆ ವಿಶ್ವನಾಥಶೆಟ್ಟಿ ಅವರು ಒಮ್ಮೆ ಆಚಾರ್ಯರ ಕೃತಿಗಳ ಬಗ್ಗೆ “ಅವರು ಪ್ರಮಾಣವಿಲ್ಲದೆ ಏನನ್ನೂ ಬರೆಯಲಾರರು… ವೇದ, ಉಪನಿಷತ್ತು, ಭಗವದ್ಗೀತೆ, ಪುರಾಣ, ಇತಿಹಾಸಗಳ ಬಗ್ಗೆ ಗೊಂದಲವಿದ್ದರೆ ಅವರು ಬರೆದದ್ದನ್ನು ಓದಿದರೆ ಗೊಂದಲ ನಿವಾರಣೆಯಾಗುತ್ತದೆ. ಸತ್ಯವನ್ನು ತಿಳಿಯಬೇಕಿದ್ದರೆ ನಾರಾಯಣಾಚಾರ್ಯರ ಕೃತಿಗಳನ್ನು ಓದಬೇಕು” ಎಂದು ಹೇಳಿದ್ದರು.
ಚಾಣಕ್ಯನ ಆಕರ್ಷಣೆ
ಹಾಸ್ಯ ಭಾಷಣಪಟು ಗಂಗಾವತಿ ಪ್ರಾಣೇಶ್ ಕೂಡ ಆಚಾರ್ಯರ ಕೃತಿಗಳ ಕುರಿತು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. “ಪುರಾಣ ಹಾಗೂ ಇತರ ಧಾರ್ಮಿಕ ಗ್ರಂಥಗಳನ್ನು ಕಣ್ಣಿಗೊತ್ತಿಕೊಂಡು ಓದಿದ್ದ ನನಗೆ ಆಚಾರ್ಯರ ಪುಸ್ತಕಗಳು, ಕಥೆ, ಕಾದಂಬರಿಗಳ ಶೈಲಿಯಲ್ಲಿ ಇರುವುದು ಕಂಡು ಆಶ್ಚರ್ಯವಾದರೂ ಓದಿಸಿಕೊಂಡು ಹೋದವು. ದೇವರುಗಳು ಆ ಕಾಲದಲ್ಲಿ ಸಾಮಾನ್ಯ ವ್ಯಕ್ತಿಗಳಾಗಿ ಚಿಂತಿಸಿದ್ದು, ಬೇಸರಗೊಂಡದ್ದು, ಸಿಟ್ಟಾದದ್ದು, ಹತಾಶೆಗೊಂಡದ್ದು, ಆಸೆಪಟ್ಟುದನ್ನು ಓದಿದಾಗ ಇವರೆಲ್ಲ ದೇವರಾಗಲು ವ್ಯಕ್ತಿಯಾಗಿ, ಮಗನಾಗಿ, ಹೆಂಡತಿಯಾಗಿ ಅನುಭವಿಸಿದ ತೊಳಲಾಟಗಳೇ, ಕಷ್ಟಗಳೇ ಅವರನ್ನಿಂದು ದೇವರಾಗಿ ಮಾಡಿವೆ ಎನಿಸುತ್ತದೆ” ಎಂಬುದು ಅವರ ಒಂದು ಅಭಿಪ್ರಾಯ. ‘ಆಚಾರ್ಯ ಚಾಣಕ್ಯ’ ಕೃತಿಯನ್ನು ಮೆಚ್ಚಿಕೊಳ್ಳುತ್ತಾ, ಇದು ಚಾಣಕ್ಯನ ಜನನ, ಬುದ್ಧಿಮತ್ತೆ, ಸಂಘಟನಾ ಕೌಶಲಗಳನ್ನು ಬಣ್ಣಿಸುವ ಮೇರುಕೃತಿ. ನಮ್ಮ ಶಾಲೆಯ ಪಠ್ಯಗಳಲ್ಲಿರುವ ಚಾಣಕ್ಯನಿಗೂ ಇಲ್ಲಿ ಬರುವ ಚಾಣಕ್ಯನಿಗೂ ಆಕಾಶ-ಪಾತಾಳಗಳ ಅಂತರ. ೬೪ ವಿದ್ಯೆಗಳನ್ನು ತಿಳಿದಿದ್ದ ಚಾಣಕ್ಯ ಆ ವಿದ್ಯೆಗಳನ್ನು ಸ್ವಂತಕ್ಕೆ ಎಂದೂ ಬಳಸಿಕೊಳ್ಳಲಿಲ್ಲ. ಮಾಟಮಂತ್ರಗಳನ್ನು ಬಲ್ಲವನಾದರೂ ನಂದರನ್ನು ಅದರಿಂದ ಕೊಲ್ಲದೆ ಚಂದ್ರಗುಪ್ತನನ್ನು ಹುಡುಕಿ ಬೆಳೆಸಿ ಅವನಿಂದ ಮಣಿಸಿದ.
ಪರ್ಜನ್ಯಜಪ ಮಾಡಿ ಮಳೆ ಬರಿಸಿದ ಚಾಣಕ್ಯ ಆಗ ಹೇಳುವ ಮಾತು ಹೀಗಿದೆ: “ದೊರೆಯೆ, ಆರ್ಯ-ಅನಾರ್ಯ ಧರ್ಮಗಳ ವ್ಯತ್ಯಾಸ ಈಗಲಾದರೂ ತಿಳಿಯಿತೆ? ನಾನು ಮಾಡಿದ ಪರ್ಜನ್ಯಜಪದ ಪವಾಡ ಯಾವಾಗಲೂ ಮಾಡುವಂಥದ್ದಲ್ಲ. ದೇವರನ್ನು ಒತ್ತಾಯಿಸಿ ಪಡೆಯುವ ಫಲ ಅಧಮ, ಅಧರ್ಮ. ನಮ್ಮ ಧರ್ಮವನ್ನು ನಾವು ನಡೆಸಿದರೆ ಪ್ರಕೃತಿ ತನ್ನ ಧರ್ಮವನ್ನು ತಾನು ಮಾಡುತ್ತದೆ. ಇದೇ ವೇದದ ಬೋಧೆ, ಗೀತೆಯ ಬೋಧೆ” ಎಂದು ಗಂಗಾವತಿ ಪ್ರಾಣೇಶ್ ಉಲ್ಲೇಖಿಸುತ್ತಾರೆ. “ಪ್ರಕೃತಿಯು ತನ್ನ ಧರ್ಮವನ್ನು ಬಿಟ್ಟಾಗ ಅದನ್ನು ಮತ್ತೆ ಅದಕ್ಕೆ ಸಾಧಿಸಿ ಕೊಡುವುದು ಮಂತ್ರ-ಯಾಗಗಳ ನಿಯಮ. ಸಿಕ್ಕಸಿಕ್ಕಂತೆ ಅದನ್ನು ಮಾಡುವುದಲ್ಲ” ಎಂಬ ಮಾತು ಕೂಡ ಕಾದಂಬರಿಯಲ್ಲಿದೆ.
‘ತರಂಗ’ದಲ್ಲಿ ಆಚಾರ್ಯರ ಚಾಣಕ್ಯ ಕಥಾಮಾಲಿಕೆಯು ಟಿವಿ ಚಾಣಕ್ಯನಿಗಿಂತ ಮೊದಲೇ ಬಂತು. ಚಾಣಕ್ಯನ ಐತಿಹಾಸಿಕ ಸತ್ಯದ ಬಗ್ಗೆ ಅಪಸ್ವರ ಎದ್ದಾಗ ಪತ್ರಿಕೆ ಲೇಖಕ-ಓದುಗರ ನಡುವೆ ಸಂವಾದವನ್ನು ಏರ್ಪಡಿಸಿತು. ಆಗ ಆಚಾರ್ಯರು ಸೂಕ್ತ ನಿದರ್ಶನ, ದೃಷ್ಟಾಂತಗಳೊಂದಿಗೆ ಸಮಾಧಾನಕರ ಉತ್ತರ ನೀಡಿದಾಗ ಪ್ರಕರಣ ತಿಳಿಯಾಯಿತು – ಎಂದು ಸಂಪಾದಕಿ ಯು.ಬಿ. ರಾಜಲಕ್ಷ್ಮೀ ನೆನಪಿಸಿಕೊಂಡಿದ್ದಾರೆ.
“ಆಧುನಿಕ ವೇದವ್ಯಾಸರಾಗಿ ವೇದಗಳ ಬಗ್ಗೆ ಭಾರತೀಯರ ಕಣ್ಣು ಮತ್ತೊಮ್ಮೆ ತೆರೆಯುವಂತೆ ಮಾಡಿದ ಶ್ರೇಯಸ್ಸು ಆಚಾರ್ಯರದ್ದು. ವೇದಗಳನ್ನು ಹೇಗೆ ತಿಳಿಯಬೇಕು? ಹೇಗೆ ಅರ್ಥೈಸಬೇಕು? ಸಂಶೋಧಕ ಬುದ್ಧಿ ಹೇಗಿರಬೇಕೆಂದು ಬೆಳಕು ಚೆಲ್ಲುತ್ತ ವೇದಾಧ್ಯಯನಕ್ಕೆ ಹೊಸ ತಿರುವು ಕೊಟ್ಟವರು ಅವರು.
“ವಿಕೃತ ಬುದ್ಧಿಜೀವಿಗಳು, ಸಂಸ್ಕೃತವನ್ನು ಅರೆಬರೆ ತಿಳಿದವರು ದೇಶದ ಹಿರಿಮೆ, ಮಹತ್ತ್ವ ಮತ್ತು ಅಸ್ಮಿತೆ (ಐಡೆಂಟಿಟಿ)ಗಳಿಗೆ ಹಾಗೂ ಹಿಂದೂಧರ್ಮ ಸಂಸ್ಕೃತಿಗಳಿಗೆ ಹಾನಿ ಎಸಗುವುದನ್ನು ನಾವು ಆಗಾಗ ನೋಡುತ್ತೇವೆ. ಅಂತಹ ಅಪಪ್ರಚಾರ, ಅಪವ್ಯಾಖ್ಯಾನ, ಬ್ರೈನ್ವಾಷಿಂಗ್ಗಳಿಗೆ ಸರಿಯಾದ ಉತ್ತರ ನೀಡಿದ ಒಬ್ಬರೆಂದರೆ ಕೆ.ಎಸ್. ನಾರಾಯಣಾಚಾರ್ಯರು. ತಮ್ಮ ಬರಹ ಮತ್ತು ಪ್ರವಚನಗಳ ಮೂಲಕ ಅವರಿದನ್ನು ಮಾಡಿದರು” ಎಂದು ಲೇಖಕ ಗ.ನಾ. ಭಟ್ಟ ಅವರು ಗುರುತಿಸಿದ್ದಾರೆ.
ಆಚಾರ್ಯರ ಶ್ರೀಕೃಷ್ಣ
ಪಾತ್ರಗಳ ಒಳಹೊಕ್ಕು ನೋಡುವ ಅವರ ವಿಧಾನವಂತೂ ತುಂಬ ಮೆಚ್ಚುಗೆಗೆ ಪಾತ್ರವಾಗಿದೆ. ಅವರು ತೋರಿಸಿದ ಆದರ್ಶ ನಾಯಕ ಶ್ರೀಕೃಷ್ಣನನ್ನು ಹೀಗೆ ಚಿತ್ರಿಸುತ್ತಾರೆ: “ಶ್ರೀಕೃಷ್ಣ ನಮ್ಮ ದೇಶ ಕಂಡ ಅದ್ಭುತ ನಾಯಕ. ಅವನೊಬ್ಬ ಧರ್ಮಗುರು, ಧರ್ಮರಕ್ಷಕ, ಸಮಾಜದ ಸ್ವಾಸ್ಥ್ಯ ಚಿಂತಕ, ಸಮಾಜದ ಸಮಗ್ರತೆಯ ಸಮರ್ಥ ಚಿಂತನಕಾರ; ಅತಿ ವಿಲಕ್ಷಣ ಯೋಧ, ಬೋಧಕ, ಪ್ರಚಾರಕ, ಧರ್ಮದ ವ್ಯಾಖ್ಯಾನಕಾರ, ಅನುಷ್ಠಾನಶೀಲ ಆಡಳಿತಗಾರ, ಪ್ರಾಚೀನ – ಅರ್ವಾಚೀನ ಚಿಂತನೆಗಳ ಸಮನ್ವತೆಯ ಸಾಕಾರಮೂರ್ತಿ.”
ಆದರೆ ನಾವಿಂದು ಮಕ್ಕಳಿಗೆ ಅವನ ವೇಷಭೂಷಣ ಹಾಕುತ್ತೇವೆ. ಪ್ರೌಢವಾದ ಭಗವದ್ಗೀತೆ ನಮಗೆ ಬೇಡ, ಸ್ತೋತ್ರ, ಭಜನೆಗಳು ಸಾಕು ಎಂದಾಗಿರುವುದು ಆಚಾರ್ಯರ ಬೇಸರ. ಶ್ರೀರಾಮ, ಶ್ರೀಕೃಷ್ಣ, ಚಾಣಕ್ಯರಂತಹ ಮಹನೀಯರನ್ನು ಮರೆತಿದ್ದರ ಫಲವಾಗಿಯೆ ನಾವಿಂದು ಸಮರ್ಥ ನಾಯಕತ್ವವನ್ನು ಪಡೆಯದೆ ಗೊಂದಲ, ಫಜೀತಿಗೆ ಒಳಗಾಗಿರುವುದು ಎಂದು ವ್ಯಾಖ್ಯಾನಿಸುತ್ತಾರೆ.
ವ್ಯಾಸದೃಷ್ಟಿ ಮರಳಲಿ
‘ರಾಜಸೂಯದ ರಾಜಕೀಯ’ ಕಾದಂಬರಿಯ ಮುನ್ನುಡಿಯಲ್ಲಿ ಆಚಾರ್ಯರು ಹೇಳುವ ಮಾತು: ನಮಗೆ ವ್ಯಾಸದೃಷ್ಟಿಯೇ ಕಳೆದುಹೋಗಿದೆ. ಅದು ಮತ್ತೆ ಕಾಣಬೇಕಾದರೆ “ನಮಗೆ ಹಿಡಿದ ಗ್ರಹಣ, ಧೃತರಾಷ್ಟ್ರಪ್ರಜ್ಞೆ, ತಬ್ಬಲಿತನಗಳು ಹೋಗಬೇಕು; ಆತ್ಮವಿಸ್ಮೃತಿ ದೂರವಾಗಬೇಕು. ಸಾವಿರ ವರ್ಷಗಳಷ್ಟು ಕಾಲ ಪರಕೀಯ ಆಕ್ರಮಣ, ಅಪಸ್ಮಾರ, ಅಂಧಕಾರ ಅಂಟಿದ ನಮಗೆ ನಮ್ಮತನ ಮತ್ತೆ ದೊರೆಯಬೇಕಾದರೆ ವ್ಯಾಸದೃಷ್ಟಿ ಮತ್ತು ನಮ್ಮ ನಡುವೆ ಇರುವ ಅಂತರಪಟ ಕಳಚಲೇಬೇಕು. ಆದರೆ ಅಂತರಪಟ ಹೋಗಿ ಒಂದೇ ಅಡಿಯ ಅಂತರದಲ್ಲಿರುವ ವ್ಯಾಸಪ್ರಜ್ಞೆಯ ವಧುವನ್ನು ನವಭಾರತೀಯ ವರಿಸುವುದಕ್ಕೆ ಪಶ್ಚಿಮಬುದ್ಧಿಯ ಪುರೋಹಿತರು ಬಿಡುತ್ತಿಲ್ಲ ಎಂಬುದು ದುಃಖದ ಸಂಗತಿ.”
“ನಾವು ಪ್ರತಿದಿನ ಸಂಕಲ್ಪದಲ್ಲಿ ಹೇಳುವ ‘ಭರತಖಂಡೇ ಭಾರತವರ್ಷೇ’ ಎಂಬ ಪದಗಳು ತಮ್ಮ ನಿಜಾರ್ಥವನ್ನೂ ವ್ಯಾಪ್ತಿಯನ್ನೂ ಕಳೆದುಕೊಂಡಿವೆ. ನಾವದನ್ನು ಬಿಡಲಾರದ ಬೇತಾಳಪ್ರಜ್ಞೆಯಂತೆ ಗತಾನುಗತಿಕವಾಗಿ ಉಚ್ಚರಿಸುತ್ತಿದ್ದೇವೆ. ನಮಗದರ ಅರಿವೇ ಇಲ್ಲದೆ ಬದುಕುತ್ತಿದ್ದೇವೆ. ಹಿಮಾಲಯದಿಂದ ಹಿಂದೂಸಾಗರದವರೆಗಿನ ಭೂಭಾಗವೇ ಭರತಖಂಡ. ಇಂದಿನ ಪಾಕಿಸ್ತಾನ, ಬಂಗ್ಲಾದೇಶ, ಬರ್ಮಾ, ಶ್ರೀಲಂಕಾ, ನೇಪಾಳಗಳನ್ನೆಲ್ಲ ಅದು ಒಳಗೊಳ್ಳುತ್ತದೆ. ಖಂಡ ಹೋಗಿ ಇಂದು ಬರೇ ಉಪಖಂಡವಾಗಿದೆ. Truncated India -ತುಂಡಾದ ಭರತಖಂಡವಾಗಿದೆ” ಎಂಬುದು ಅವರ ಅಳಲು.
“ವೈರಿ ಪಕ್ಷದವರ ಎದುರು ಕೂಡ ನಾವು ಆಡಳಿತಪಕ್ಷ, ವಿರೋಧಪಕ್ಷ ಎಂದು ಕಚ್ಚಾಡುತ್ತೇವೆ. ಇದು ತಪ್ಪು. ಪಾಂಡವರು ವನವಾಸದಲ್ಲಿದ್ದಾಗ ಅವರ ಹೊಟ್ಟೆ ಉರಿಸಲೆಂದು ಕೌರವರು ಘೋಷಯಾತ್ರೆಯನ್ನು ನಡೆಸುತ್ತಾರೆ. ಪಾಂಡವರಿದ್ದ ಕಡೆಗೆ ಬಂದು ಅಲ್ಲಿ ಬೀಡುಬಿಡುವ ಮೊದಲೇ ಗಂಧರ್ವರಾಜ ಚಿತ್ರಸೇನ (ಅರ್ಜುನನ ಗೆಳೆಯ) ಅಲ್ಲಿ ಬೀಡು ಬಿಡುತ್ತಾನೆ. ಜಾಗಕ್ಕಾಗಿ ಜಗಳವಾಗಿ ಚಿತ್ರಸೇನ ದುರ್ಯೋಧನನನ್ನು ಬಂಧಿಸುತ್ತಾನೆ. ಬಿಡಿಸುವವರಿಲ್ಲ; ಕರ್ಣ ಓಡಿಹೋಗಿದ್ದ. ಆಗ ದರ್ಯೋಧನನ ಹೆಂಡತಿ ಮತ್ತಿತರರು ಪಾಂಡವರ ಬಳಿಗೆ ಬಂದು ದುರ್ಯೋಧನನನ್ನು ಬಿಡಿಸಿ ತರುವಂತೆ ಕೋರುತ್ತಾರೆ. ಬಿಡಿಸಿ ತರುವ ಅಗತ್ಯವಿಲ್ಲವೆಂದು ಭೀಮ ಹೇಳಿದಾಗ ಧರ್ಮರಾಜ ‘ನಮ್ಮೊಳಗೆ ಜಗಳ ಇರಬಹುದು. ಆದರೆ ಬೇರೆಯವರು ಎದುರಾದಾಗ ನಾವು ಪೂರ್ತಿ ನೂರ ಐದು ಮಂದಿ’ ಎಂದು ಹೇಳಿ ಬಿಡಿಸಿ ತರುವಂತೆ ತಮ್ಮಂದಿರಿಗೆ ಆಜ್ಞಾಪಿಸುತ್ತಾನೆ. ಇದು ಎಲ್ಲ ಕಾಲಕ್ಕೆ ಎಲ್ಲರಿಗೆ ಅನ್ವಯವಾಗುವ ಮಾತು. ರಾಷ್ಟ್ರವನ್ನು ಆಳುವವನ ಹೊಣೆಗಾರಿಕೆ ಗುರುತರವಾದುದು. ವೈರಿಗಳ ವಿಚಾರದಲ್ಲಿ ವಿರೋಧಪಕ್ಷದವರು ಹೇಗೆ ವರ್ತಿಸಬೇಕು; ಆಡಳಿತಪಕ್ಷಕ್ಕೆ ಹೇಗೆ ಸಹಕಾರ ನೀಡಬೇಕು ಎಂಬುದಕ್ಕೆ ಇದಕ್ಕಿಂತ ಸೊಗಸಾದ ಉದಾಹರಣೆ ಬೇರೆ ಸಿಗಲಾರದು ಎಂದು ಆಚಾರ್ಯರು ಯಾವಾಗಲೂ ನಿರೂಪಿಸುತ್ತಿದ್ದರು. ಉಳಿದವರು ಸವೆಸಿದ ದಾರಿಯಲ್ಲಿ ಅವರಿಗೆ ರುಚಿ ಕಾಣಲಿಲ್ಲ. ‘ಮುರಾರಿಗೆ ಮೂರನೇ ದಾರಿ’ ಎಂಬಂತೆ ಸ್ವತಂತ್ರವಾಗಿ ನಡೆದುಕೊಂಡರು.
ರಾಷ್ಟ್ರೀಯತೆ ಸಹಜಗುಣ
ರಾಷ್ಟ್ರೀಯಪ್ರಜ್ಞೆ, ದೇಶಪ್ರೇಮಗಳು ನಾರಾಯಣಾಚಾರ್ಯರಿಗೆ ಮೇಲುಮೇಲಿನ ಸಂಗತಿಗಳಾಗಿರಲಿಲ್ಲ; ಅವರು ಅವುಗಳ ಆಳಕ್ಕಿಳಿದಿದ್ದರು; ಅದರ ಅನುಷ್ಠಾನದಲ್ಲಿ ಪ್ರಾಮಾಣಿಕತೆಯಿತ್ತು ಎಂಬುದಕ್ಕೆ ಎರಡು ಉದಾಹರಣೆಗಳನ್ನು ನೀಡಬಹುದು. ಪ್ರಕಾಶಕ ಸುಬ್ರಹ್ಮಣ್ಯ ಆಗಾಗ ಆಚಾರ್ಯರ ಮನೆಗೆ ಹೋಗಿ ಬರುತ್ತಿದ್ದವರು. ಒಮ್ಮೆ ಮಗಳ ಮದುವೆಯ ಆಮಂತ್ರಣವನ್ನು ನೀಡಲು ಮಗಳೊಂದಿಗೆ ಧಾರವಾಡದ ಅವರ ಮನೆಗೆ ಹೋಗಿದ್ದರು. ಮದುವೆಯ ಬಳಿಕ ಮಗಳು ಅಮೆರಿಕಕ್ಕೆ ಹೋಗುತ್ತಾಳೆಂದು ತಿಳಿದಾಗ ಆಚಾರ್ಯರಿಗೆ ಬೇಸರವಾಯಿತು. ‘ನಿಮ್ಮಂಥ ಪ್ರತಿಭಾವಂತರೆಲ್ಲ ಅಮೆರಿಕ ಸೇರಿದರೆ ಭಾರತದ ಗತಿಯೇನು?’ -ಎಂದು ಆಕ್ಷೇಪಿಸಿದರು. ಆಗ ವಧು ‘ಮೂರು ವರ್ಷದಲ್ಲಿ ವಾಪಸ್ಸಾಗುತ್ತೇನೆ’ ಎಂದು ತಿಳಿಸಿದಳು. ಅದಕ್ಕೆ ಆಚಾರ್ಯರು ತುಸು ನಕ್ಕು ‘ನನಗೆ ಪ್ರಾಮಿಸ್ ಮಾಡು’ ಎಂದು ಪ್ರಾಮಿಸ್ ಮಾಡಿಸಿಕೊಳ್ಳದೆ ಬಿಡಲಿಲ್ಲವಂತೆ.
ಒಮ್ಮೆ ಅವರನ್ನು ಕಾಣಲು ಬಂದ ಒಬ್ಬರು ತಮ್ಮದು ಭಾರದ್ವಾಜ ಗೋತ್ರ ಎಂದರು. ಅದನ್ನು ಕೇಳುತ್ತಲೇ ಆಚಾರ್ಯರ ಕಣ್ಣಿನಲ್ಲಿ ನೀರಾಡಿತು. “ಭಾರತೀಯ ಸಂಸ್ಕೃತಿಯನ್ನು ರಕ್ಷಿಸಿ ಪೋಷಿಸಿ ಬೆಳೆಸಿದ ಮಹಾಋಷಿಯ ಪರಂಪರೆಯಲ್ಲಿ ಹುಟ್ಟಿ ಬಂದಿದ್ದೀರಪ್ಪ. ನಿಮ್ಮ ಕಾಲು ಮುಟ್ಟಿ ನಮಸ್ಕರಿಸಿ ಆ ಋಷಿಯ ಋಣ ಸಂದಾಯವನ್ನು ಮಾಡಬೇಕು ನಾನು” ಎಂದು ನಮಸ್ಕರಿಸಿದರಂತೆ. ಅದು ಅವರ ಹೃದಯದಿಂದ ಬಂದ ಮಾತು. ಭಾರತೀಯ ಸಂಸ್ಕೃತಿ ಅವರಿಗೆ ದೂರದ ಬೆಟ್ಟವಲ್ಲ; ಪುಸ್ತಕದ ಬದನೆಕಾಯಿಯೂ ಅಲ್ಲ. ಅದು ಅವರ ರಕ್ತದ ಹನಿಹನಿಯಲ್ಲಿದ್ದ ಗುಣ, ಅವರ ಉಸಿರು, ಅವರ ಜೀವ.
“ಆಚಾರ್ಯರ ಬರಹಗಳಲ್ಲಿ ಒಂದಕ್ಷರ ತಪ್ಪು ಇರುತ್ತಿರಲಿಲ್ಲ. ಬರೆದ ಪದಗಳ ಮೇಲೆ ಕಾಟು ಹೊಡೆದದ್ದು ಕಂಡೇ ಇಲ್ಲ. ಅಂಡರ್ಲೈನ್, ಮಾರ್ಜಿನ್ ಹಾಕಿ ಮುತ್ತಿನಂತೆ ಪೋಣಿಸಿದ ಅಕ್ಷರದಲ್ಲಿ ನೀಟಾಗಿ ಬರೆದುಕೊಡುತ್ತಿದ್ದರು. ಅವರ ಪುಸ್ತಕಗಳ ಪ್ರೂಫ್ರೀಡಿಂಗ್ ಕಷ್ಟವಾಗಲೇ ಇಲ್ಲ” ಎಂದು ಪ್ರಕಾಶಕ ಸುಬ್ರಹ್ಮಣ್ಯ ತಿಳಿಸುತ್ತಾರೆ. “ನನಗೊಂದು ಹೆಮ್ಮೆಯಿದೆ. ರಾಜ್ಯದಲ್ಲಿ ಯಾವುದೇ ಬರಹಗಾರನಿಗೆ ಸಿಗದಷ್ಟು ಪ್ರತಿಕ್ರಿಯೆ ಅವರಿಗೆ ಸಿಗುತ್ತಿತ್ತು. ಭೈರಪ್ಪನವರ ಅನಂತರ ಅತಿ ಹೆಚ್ಚು ಮಾರಾಟವಾಗುವ ಪುಸ್ತಕವಿದ್ದರೆ ಅದು ಆಚಾರ್ಯರದ್ದು. ಪ್ರತಿವರ್ಷ ಅವರ ಸುಮಾರು ೩೫ ಲಕ್ಷ ರೂ. ಬೆಲೆಯ ಪುಸ್ತಕಗಳು ಖರೀದಿ ಆಗುತ್ತಿದ್ದವು. ಅವರ ಎಲ್ಲ ಪುಸ್ತಕಗಳನ್ನು ೨೧ ಸಾವಿರ ರೂ.ಗೆ ಮಾರಾಟಕ್ಕಿಟ್ಟಿದ್ದೆವು” ಎಂಬ ಮಾಹಿತಿಯನ್ನು ಸುಬ್ರಹ್ಮಣ್ಯ ಹಂಚಿಕೊಂಡಿದ್ದಾರೆ.
ಜನರು ಮತ್ತು ಮಠಮಾನ್ಯಗಳು ಕೊಟ್ಟ ಬಿರುದು, ಪ್ರಶಸ್ತಿಗಳ ಸರಮಾಲೆಯೇ ಆಚಾರ್ಯರನ್ನು ಅಲಂಕರಿಸಿತ್ತು. ಸರ್ಕಾರದ ಪ್ರಶಸ್ತಿಗಳ ಹಿಂದೆ ಅವರು ಹೋಗಲಿಲ್ಲ. ವಿದುರನಂತೆ ಸದಾ ಆಡಳಿತಯಂತ್ರಕ್ಕೆ ದಾರಿ ತೋರುತ್ತ, ತಪ್ಪಿನಡೆದಾಗ ಕಿವಿ ಹಿಂಡಿ ಬುದ್ಧಿ ಹೇಳುತ್ತ ಉಳಿದರೇ ವಿನಾ ಎಂದೂ ಅಧಿಕಾರದ ಬಳಿ ನಿಲ್ಲಲಿಲ್ಲ. ಆದರೂ ಸರ್ಕಾರದಿಂದ ಗಮಕ ಸಮ್ಮೇಳನಾಧ್ಯಕ್ಷತೆಯೊಂದಿಗೆ ‘ಗಮಕ ರತ್ನಾಕರ’ ಪ್ರಶಸ್ತಿ ಬಂದಿತ್ತು. ಸಂಗೀತ-ನೃತ್ಯ ಅಕಾಡೆಮಿಯಿಂದ ‘ಕರ್ನಾಟಕ ಕಲಾಶ್ರೀ’, ವೇದ ಸಂಸ್ಕೃತಿ ಗ್ರಂಥಮಾಲೆಗೆ ರಾಜ್ಯ ಸಾಹಿತ್ಯ ಅಕಾಡೆಮಿಯಿಂದ ಬಹುಮಾನ, ಮುಕ್ತ ವಿಶ್ವವಿದ್ಯಾಲಯದ ಗೌರವ ಡಿ.ಲಿಟ್, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (೨೦೦೮) ಮುಂತಾದವು ಅವರಿಗೆ ಬಂದಿದ್ದವು.
ಏನಿದ್ದರೂ ಅವರು ಇದಕ್ಕೆಲ್ಲ ಮೀರಿದವರು. ಕೈಗೊಂಡ ಕಾರ್ಯ, ಮಾಡಿದ ಸಾಧನೆಗಳು ವ್ಯಕ್ತಿಯ ಮಿತಿಯನ್ನು ದಾಟಿ ಒಂದು ವಿಶ್ವವಿದ್ಯಾಲಯ ಮಾಡುವ ಗಾತ್ರ, ಗುಣಮಟ್ಟದವು. ತುಂಬುಜೀವನ ನಡೆಸಿ ನಾಡಿನ ಬದುಕನ್ನು ಶ್ರೀಮಂತಗೊಳಿಸಿದ ಆಚಾರ್ಯರಿಗಿದು ನುಡಿನಮನ.