ಅರಣ್ಯರಕ್ಷಣೋದ್ಯಮದಲ್ಲಿ ಮುಳುಗಿದಂತೆಲ್ಲ ಜನಶಿಕ್ಷಣದ ಆವಶ್ಯಕತೆಯೂ ಇದೆಯೆಂದು ಚಿಣ್ಣಪ್ಪನವರಿಗೆ ಮನವರಿಕೆಯಾಯಿತು. ಹೀಗೆ ಜನರೊಡನೆ ನಿರಂತರ ಸಂವಾದ ಕಾರ್ಯಕ್ರಮಗಳನ್ನು ನಡೆಸತೊಡಗಿದರು. ಚಿಣ್ಣಪ್ಪನವರ ಇಂತಹ ಒಂದೊಂದು ಪ್ರಯಾಸವೂ ಅಭೂತಪೂರ್ವವೇ ಆಗಿತ್ತು. ಅವರು ಜನರಿಗೆ ಪದೇಪದೇ ಹೇಳುತ್ತಿದ್ದ ಮಾತು: “ಮನುಷ್ಯರಿಲ್ಲದಿದ್ದರೂ ಕಾಡು ಉಳಿಯುತ್ತದೆ. ಆದರೆ ಕಾಡು ಇಲ್ಲದಿದ್ದರೆ ಮನುಷ್ಯರ ಬದುಕು ಅಸಾಧ್ಯ.” ವಿಶೇಷವಾಗಿ ಮಕ್ಕಳಿಗೆ ಪರಿಸರ ಕುರಿತು ಅರಿವು ಮೂಡಿಸಲು ಖಾಸಗಿಯಾದ ಸರ್ಕಾರೇತರ ಸಂಸ್ಥೆಯೊಂದನ್ನೂ ಚಿಣ್ಣಪ್ಪ ನಡೆಸುತ್ತಿದ್ದರು.
ನಾಗರಹೊಳೆಯ ಸಂರಕ್ಷಕ’ ಎಂಬ ಹೆಸರಿನ ಪ್ರಶಸ್ತಿ ಏನಾದರೂ ಇದ್ದಿದ್ದರೆ ಅದಕ್ಕೆ ಪೂರ್ಣವಾಗಿ ಪಾತ್ರರಾಗುತ್ತಿದ್ದವರು ಕಳೆದ ಫೆಬ್ರುವರಿ ೨೬ರಂದು ನಿಧನರಾದ ಕೊಟ್ರಿಂಗಡ ಎಂ. ಚಿಣ್ಣಪ್ಪ. ಹಾಗೆಂದು ಇವರಿಗೆ ಬೇರೆ ಒಂದೆರಡು ಪ್ರಶಸ್ತಿಗಳು ಬಂದಿರಲಿಲ್ಲವೆಂದೇನಲ್ಲ. ೧೯೮೫ರಷ್ಟು ಹಿಂದೆಯೆ ಅವರಿಗೆ ಕರ್ನಾಟಕ ಸರ್ಕಾರದ ‘ಮುಖ್ಯಮಂತ್ರಿಗಳ ಚಿನ್ನದ ಪದಕ’ ಬಂದಿತ್ತು. ಚಿಣ್ಣಪ್ಪ (ಜನನ ೧೯೪೧, ನಾಗರಹೊಳೆಯಿಂದ ಅನತಿದೂರದ ಕುಮಟೂರಿನಲ್ಲಿ) ಅರಣ್ಯ ಇಲಾಖೆಯ ಸೇವೆಯಲ್ಲಿ ಸೇರಿದ್ದು ೧೯೬೭ರಲ್ಲಿ; (ಅವಧಿಪೂರ್ವದಲ್ಲಿಯೆ) ನಿವೃತ್ತರಾದದ್ದು ೧೯೯೩ರಲ್ಲಿ. ಆ ಇಪ್ಪತ್ತೈದು ವರ್ಷಗಳಲ್ಲಿ ಅವರು ನಾಗರಹೊಳೆಯ ಜೀವಾಳದ ಸಂರಕ್ಷಣೆಗಾಗಿ ಮಾಡಿದ ಸಾಧನೆ ದಂತಕಥೆಯೇ ಆಯಿತು. ಈಗ ನಾಗರಹೊಳೆ ಜನಪ್ರಿಯ ಪ್ರವಾಸಿತಾಣವಾಗಿದ್ದರೆ ಅದರ ಹಿಂದೆ ಇರುವುದು ಕೆ.ಎಂ. ಚಿಣ್ಣಪ್ಪನವರು ಎಲ್ಲ ಪ್ರತಿಕೂಲತೆಗಳ ನಡುವೆ ನಿಶ್ಚಲಮನಸ್ಕರಾಗಿ ಹಗಲುರಾತ್ರಿ ಮಾಡಿದ ಕಠಿಣ ಪರಿಶ್ರಮ. ಅದಕ್ಕೆ ಹಿಂದೆ ನಾಗರಹೊಳೆ ಅಭಯಾರಣ್ಯದ ದುಃಸ್ಥಿತಿ ಹೇಗಿತ್ತೆಂಬುದನ್ನು ಈಗ ಕಲ್ಪಿಸಿಕೊಳ್ಳುವುದೇ ಕಷ್ಟ. ವನ್ಯಮೃಗಗಳನ್ನು ಅಲ್ಲಿ ಅಪ್ಪಿತಪ್ಪಿಯೂ ಕಾಣಲು ಆಗುತ್ತಿರಲಿಲ್ಲ. ಅಂಚಿನ ಪ್ರದೇಶಗಳೆಲ್ಲ ಒತ್ತುವರಿಯಾಗಿದ್ದಾಗ ಪ್ರಾಣಿಗಳು ಅಲ್ಲಿ ಹೇಗೆ ಬರಬೇಕು! ತಥೋಕ್ತ ‘ಕಾಡಿನ’ ಭಾಗದಲ್ಲಿ ಹಳ್ಳಿಗಳ ಜಾನುವಾರುಗಳು ಸ್ವೇಚ್ಛೆಯಾಗಿ ಮೇಯುತ್ತಿದ್ದವು. ಇದ್ದ ಹಲಕೆಲವು ಪ್ರಾಣಿಪಕ್ಷಿಗಳು ಬೇಟೆಗಾರರಿಗೆ ಆಹುತಿಯಾಗುತ್ತಿದ್ದವು. ಇದ್ದ ಹಲಕೆಲವು ಹುಲಿ-ಆನೆಗಳು ಚರ್ಮ-ದಂತಕ್ಕಾಗಿ ಪ್ರಾಣ ತೆರುತ್ತಿದ್ದವು. ಇನ್ನು ಕಾಡಿನ ‘ನಾಟಾ’ ಕಡಿದು ಹೊತ್ತೊಯ್ಯುವ ಕಳ್ಳಸಾಗಣೆದಾರರನ್ನು ಕೇಳುವವರೇ ಇಲ್ಲ. ಕಡಿದ ಮರಗಳಿಗೆ ಬದಲಾಗಿ ಹೊಸದಾಗಿ ಗಿಡ-ಮರ ನೆಡುವುದು ಅವಶ್ಯವೆಂದೇ ಯಾರಿಗೂ ಅನಿಸುತ್ತಿರಲಿಲ್ಲ.
ಈ ಅರಾಜಕ ಸ್ಥಿತಿಯನ್ನು ಸುಧಾರಿಸಲು ಟೊಂಕಕಟ್ಟಿ ನಿಂತವರು ಕೆ.ಎಂ. ಚಿಣ್ಣಪ್ಪ. ಅದೇ ಸ್ಥಿತಿ ಮುಂದುವರಿದಲ್ಲಿ ಕೆಲವೇ ವರ್ಷಗಳಲ್ಲಿ ನಾಗರಹೊಳೆ ಪೂರ್ತಿ ಬೆಂಗಾಡು ಆದೀತು – ಎಂದು ವ್ಯಾಕುಲಗೊಂಡರು ಅವರು. ಇದ್ದ ಒಂದೋ ಅರ್ಧವೋ ಪ್ರಾಣಿಗಳು ಆಹಾರಕ್ಕಾಗಿ ಮೈಲುಗಟ್ಟಲೆ ಸಂಚರಿಸಬೇಕಾಗಿತ್ತು. ಇಂದಿರಾಗಾAಧಿ ಸರ್ಕಾರದಿಂದ ವನ್ಯಜೀವಿ ಸಂರಕ್ಷಣೆಗೆ ವಿಶೇಷ ಪ್ರೋತ್ಸಾಹನ ೧೯೭೦ರ ದಶಕದಲ್ಲಿ ದೊರೆತದ್ದನ್ನು ಸ್ಮರಿಸಬೇಕು.
ತಮ್ಮ ಅರಣ್ಯರಕ್ಷಣ ನಿಷ್ಠೆಗೆ ಚಿಣ್ಣಪ್ಪನವರು ವೈಯಕ್ತಿಕವಾಗಿ ತುಂಬಾ ಬೆಲೆ ತೆರಬೇಕಾಯಿತು. ಒಮ್ಮೆ ಅವರ ಮನೆಯನ್ನೇ ವಿರೋಧಿಗಳು ಸುಟ್ಟುಹಾಕಿದ್ದರು.
ಚಿಣ್ಣಪ್ಪನವರು ಹರಸಾಹಸ ಮಾಡಿ ಹಿಡಿಯುತ್ತಿದ್ದ ಕಳ್ಳಸಾಗಣೆದಾರರು ಸುಲಭವಾಗಿಯೆ ಖುಲಾಸೆಯಾಗಿಬಿಡುತ್ತಿದ್ದರು. ಚಿಣ್ಣಪ್ಪನವರಲ್ಲಿ ಇದ್ದುದು ತೀರಾ ಪ್ರಾಥಮಿಕ ಮಟ್ಟದ ತುಪಾಕಿಗಳು. ಆದರೆ ಸಾಧನಗಳಿಗಿಂತ ಮಿಗಿಲಾಗಿ ಅವರ ನಿರ್ಭೀತಿ ಮನೋದಾರ್ಢ್ಯಗಳು ಕ್ರಮೇಣ ನಿಯಂತ್ರಣ ತರುವುದರಲ್ಲಿ ಸಫಲವಾಗತೊಡಗಿದವು.
ಇದು ಸುಲಭದ ಮಾರ್ಗವಾಗಿರಲಿಲ್ಲ. ‘ಜನವಿರೋಧಿ’ ಎಂದು ಅವರ ವಿರುದ್ಧ ಯಥೇಚ್ಛ ಪ್ರತಿಭಟನೆಗಳೂ ನಡೆದದ್ದುಂಟು. ಅವರಿಗೆ ಅವಶ್ಯವಿದ್ದಷ್ಟು ಬೆಂಬಲ ಕಾನೂನುವ್ಯವಸ್ಥೆಗಳಿಂದ ಲಭಿಸುತ್ತಿತ್ತೆಂದೇನಿಲ್ಲ. ಶ್ರೀಮಂತ ಹಿತಾಸಕ್ತರು ಹೂಡಿದ ಬಗೆಬಗೆಯ ಖಟ್ಲೆಗಳನ್ನು ಚಿಣ್ಣಪ್ಪ ಎದುರಿಸಬೇಕಾಯಿತು. ‘ಪಿಶಾಚಿ’, ‘ಸೈತಾನ’ ಮೊದಲಾದ ಎಷ್ಟೊ ‘ಬಿರುದು’ಗಳೂ ಅವರನ್ನು ಅಲಂಕರಿಸಿದವು. ಅಕ್ರಮ ಬೇಟೆಗಾರರನ್ನು ‘ಕೊಂದದ್ದಕ್ಕಾಗಿ’ ಕೂಡಾ ಚಿಣ್ಣಪ್ಪ ಖಟ್ಲೆಗಳಲ್ಲಿ ಸಿಲುಕಿ ನ್ಯಾಯಾಲಯಗಳಿಗೆ ಅಲೆದದ್ದುಂಟು. ಒಮ್ಮೆ ೧೨ ದಿನಗಳ ಸೆರೆವಾಸದ ಬಹುಮಾನವೂ ಅವರಿಗೆ ದೊರೆತಿತ್ತು. ನ್ಯಾಯಾಲಯದಲ್ಲಿ ಸಮರ ನಡೆಸಿ ತಮ್ಮ ಪದವಿಯನ್ನು ಮತ್ತೆ ಸ್ಥಾಪಿಸಿಕೊಳ್ಳಬೇಕಾಯಿತು.
ವ್ಯವಸ್ಥೆಗಳ ಯಾಂತ್ರಿಕತೆ, ಜನಸಾಮಾನ್ಯರ ನಿರಾಸಕ್ತಿ ಮೊದಲಾದ ಅಡಚಣೆಗಳನ್ನೆಲ್ಲ ಕ್ರಮಕ್ರಮೇಣ ಚಿಣ್ಣಪ್ಪ ದಾಟಿದುದು ದೊಡ್ಡ ಸಾಹಸಗಾಥೆ. ಈ ಉಪಟಳಗಳ ಜೊತೆಜೊತೆಗೇ ಚಿಣ್ಣಪ್ಪನವರ ದೃಢ ಪ್ರಯಾಸಗಳ ಫಲವಾಗಿ ನಾಗರಹೊಳೆ ಉಜ್ಜೀವಿತವಾಗುತ್ತಿದ್ದುದೂ ಕಣ್ಣಿಗೆ ಎದ್ದು ಕಾಣತೊಡಗಿತ್ತು. ವರ್ಷಗಳಿಂದ ಕಾಣೆಯಾಗಿದ್ದ ಹುಲಿ, ಚಿರತೆ, ಕಾಡುಹಂದಿ, ಜಿಂಕೆ, ಮೊಲ, ಕೋತಿ, ಮುಳ್ಳುಹಂದಿ ಮೊದಲಾದ ಪ್ರಾಣಿಸಂಕುಲವನ್ನು ಜನರು ನಾಗರಹೊಳೆಯಲ್ಲಿ ಮತ್ತೆ ಕಾಣುವಂತೆ ಆಗಿತ್ತು. ಉತ್ತರೋತ್ತರ ಅವರಿಗೆ ‘ವೈಲ್ಡ್ ಲೈಫ್ ಕಾನ್ಸರ್ವೇಶನ್ ಸೊಸೈಟಿ’ ಪ್ರತಿಷ್ಠಿತ ಸಂಸ್ಥೆಯಿಂದ ಪ್ರಶಸ್ತಿಯೂ ಬಂದಿತು. ಚಿಣ್ಣಪ್ಪನವರ ಸಾಧನೆ ಇಡೀ ದೇಶದಲ್ಲಿ ವನ್ಯಜೀವನಾಸಕ್ತ ವಲಯಗಳಲ್ಲಿ ಮುಕ್ತ ಪ್ರಶಂಸೆಗೊಳಗಾಯಿತು; ಈ ಕ್ಷೇತ್ರದ ಒಂದು ಮೈಲಿಗಲ್ಲು ಎಂದೇ ಪರಿಗಣಿತವಾಯಿತು.
ಒಂದು ವಿಪರ್ಯಾಸವೆಂದರೆ ಚಿಣ್ಣಪ್ಪನವರು ಯಾವುದೊ ಹಳೆಜಾಡಿನ ಆಯುಧಗಳಿಂದ ನಿರ್ವಾಹ ಮಾಡುತ್ತಿದ್ದರೆ ಗಂಧದಮರದ ಮತ್ತು ‘ನಾಟಾ’ದ ಕಳ್ಳಸಾಗಣೆದಾರರ ಬಳಿ ಶಿಕಾರಿಗಳ ಷಾಟ್ಗನ್ ಮೊದಲಾದ ಅತ್ಯಾಧುನಿಕ ಆಯುಧಗಳಿರುತ್ತಿದ್ದವು.
ಅರಣ್ಯ ನಿರ್ವಹಣೆಗಾಗಿ ಯೋಜಿತರಾಗಿದ್ದ ಸಿಬ್ಬಂದಿಯಲ್ಲಿಯೂ ಶಾಸ್ತ್ರೀಯ ತಿಳಿವಳಿಕೆ ಇದ್ದವರು ಕಡಮೆ. ಇನ್ನು ರಾಜಕಾರಣಿಗಳ ಹಸ್ತಕ್ಷೇಪವಂತೂ ಯಾವಾಗಲೂ ಇರುವುದೇ. ಹೀಗೆ ಎಲ್ಲ ದಿಕ್ಕುಗಳಲ್ಲೂ ಚಿಣ್ಣಪ್ಪನವರಿಗೆ ಅಡಚಣೆಗಳೇ ಇದ್ದವು. ಅರಣ್ಯಸಂಬಂಧಿತ ಕಾನೂನು ಸಮರಗಳಿಗಾಗಿಯೇ ಅವರು ಉತ್ತರೋತ್ತರ ‘ವೈಲ್ಡ್ಲೈಫ್ ಫಸ್ಟ್’ ಎಂಬ ಸಂಘಟನೆಯನ್ನು ರೂಪಿಸಿದರು.
ಅರಣ್ಯರಕ್ಷಣೋದ್ಯಮದಲ್ಲಿ ಮುಳುಗಿದಂತೆಲ್ಲ ಜನಶಿಕ್ಷಣದ ಆವಶ್ಯಕತೆಯೂ ಇದೆಯೆಂದು ಚಿಣ್ಣಪ್ಪನವರಿಗೆ ಮನವರಿಕೆಯಾಯಿತು. ಹೀಗೆ ಜನರೊಡನೆ ನಿರಂತರ ಸಂವಾದ ಕಾರ್ಯಕ್ರಮಗಳನ್ನು ನಡೆಸತೊಡಗಿದರು. ಚಿಣ್ಣಪ್ಪನವರ ಇಂತಹ ಒಂದೊಂದು ಪ್ರಯಾಸವೂ ಅಭೂತಪೂರ್ವವೇ ಆಗಿತ್ತು. ಅವರು ಜನರಿಗೆ ಪದೇಪದೇ ಹೇಳುತ್ತಿದ್ದ ಮಾತು: “ಮನುಷ್ಯರಿಲ್ಲದಿದ್ದರೂ ಕಾಡು ಉಳಿಯುತ್ತದೆ. ಆದರೆ ಕಾಡು ಇಲ್ಲದಿದ್ದರೆ ಮನುಷ್ಯರ ಬದುಕು ಅಸಾಧ್ಯ.” ವಿಶೇಷವಾಗಿ ಮಕ್ಕಳಿಗೆ ಪರಿಸರ ಕುರಿತು ಅರಿವು ಮೂಡಿಸಲು ಖಾಸಗಿಯಾದ ಸರ್ಕಾರೇತರ ಸಂಸ್ಥೆಯೊಂದನ್ನೂ ಚಿಣ್ಣಪ್ಪ ನಡೆಸುತ್ತಿದ್ದರು.
ಅವರು ಎದುರಿಸಿದ ಸಮಸ್ಯೆಗಳ ರಾಶಿಯನ್ನು ಪ್ರಸ್ತಾವಿಸಿದರೆ ಚಿಣ್ಣಪ್ಪ ಮುಗುಳ್ನಕ್ಕು ಅದನ್ನೆಲ್ಲ ತಳ್ಳಿಹಾಕಿ “ಅದನ್ನೆಲ್ಲ ಬಿಡಿ. ನಮಗೆ ಕೆಲಸ ಮಾಡುವ ದಾರ್ಢ್ಯ, ತಾಳ್ಮೆ ಇರಬೇಕಷ್ಟೆ” ಎನ್ನುತ್ತಿದ್ದರು.
ಇಂತಹ ಸಾಧಕರನ್ನು ಸಮಾಜ ಮರೆಯಬಾರದು.