ಈಚೆಗಷ್ಟೇ ನಮ್ಮನ್ನಗಲಿ ತಾವು ಸೃಜಿಸುತ್ತಿದ್ದ ವರ್ಣ–ರೇಖೆಗಳ ಲೋಕದಲ್ಲಿ ಶಾಶ್ವತವಾಗಿ ಸೇರಿಹೋದ ಚಿತ್ರಬ್ರಹ್ಮ ಬಿ.ಕೆ.ಎಸ್. ವರ್ಮ ಅವರ ಅನುಪಸ್ಥಿತಿಯ ನಷ್ಟವನ್ನು ಮತ್ತಾವ ಕಲಾವಿದರೂ ತುಂಬಿಕೊಡಲಾರರು. ವರ್ಮರು ಕಣ್ಮರೆಯಾದದ್ದು ಅವರ ಅಭಿಮಾನಿಗಳೂ ಕಲಾರಾಧಕರೂ ಆದ ಅಶೇಷ ಸಹೃದಯರ ಪಾಲಿಗೆ ಚೇತರಿಸಿಕೊಳ್ಳಲಾಗದ ಆಘಾತ. ಶ್ರೇಷ್ಠ ಕಲಾವಿದರಾಗಿ ಮಾತ್ರವಲ್ಲದೆ ಉತ್ತಮ ವ್ಯಕ್ತಿಯಾಗಿಯೂ ವರ್ಮ ಮರೆಯಲಾಗದ ಮಹನೀಯರು. ಇವರ ಪುಣ್ಯಸ್ಮರಣೆಯ ನಿಮಿತ್ತವಾಗಿ ಈ ಲೇಖನ ಹವಣುಗೊಂಡಿದೆ.
ಸುಮಾರು ೧೯೬೮-೬೯ರ ಆಸುಪಾಸಿನ ದಿನಗಳವು. ಆಗ ನನಗಿನ್ನೂ ಬಾಲ್ಯ. ಅಕ್ಷರಗಳನ್ನು ಕೂಡಿಸಿಕೊಂಡು ಪ್ರತಿಯೊಂದು ಪದವನ್ನೂ ಮೆಲ್ಲಮೆಲ್ಲನೆ ಓದಿಕೊಳ್ಳುವ ತೊದಲುತನ ಮೊದಲ ಹೆಜ್ಜೆ ಇರಿಸಿದ ಕಾಲ. ನನ್ನ ತಾಯಿ ಆಗಷ್ಟೇ ಮನೆಗೆ ಬಂದ ‘ಕಸ್ತೂರಿ’ ಮಾಸಪತ್ರಿಕೆಯಲ್ಲಿ ಪ್ರಕಟಿತವಾದ ಲೇಖನವೊಂದನ್ನು ಸಂಭ್ರಮದಿಂದ ಓದಿ ನನಗೆ ಹೇಳಿದ್ದರು. ಅದು ಕುಂಚಬ್ರಹ್ಮ ಡಾ|| ಬಿ.ಕೆ.ಎಸ್. ವರ್ಮರ ಕೈಶೋರದ ಪ್ರತಿಭಾಪರಿಚಯ. ಇದೇ ನನಗೆ ವರ್ಮರ ಪರಿಚಯದ ಮೊದಲ ಮೆಟ್ಟಿಲು. ಆ ಲೇಖನದ ಎಳೆಎಳೆಗಳೂ ನನ್ನ ಮನದಲ್ಲಿ ಇನ್ನೂ ಹಸುರಾಗಿ ಬೇರೂರಿವೆ. ಅದನ್ನು ಬರೆದವರಾರೋ ನನಗೆ ನೆನಪಿಲ್ಲ. ಆದರೆ ಆ ಪುಟಗಳಲ್ಲಿದ್ದ ವಿವರ, ಅದು ಕಟ್ಟಿಕೊಟ್ಟ ಬೆರಗು ಹಾಗೂ ಎಲ್ಲಕ್ಕಿಂತ ಮಿಗಿಲಾಗಿ ವರ್ಮರ ಚಿತ್ರಗಳಷ್ಟೇ ಚೆಲುವಾದ ಅವರ ಆ ಕೈಶೋರ ಆಕೃತಿಯ ಪಡಿಯಚ್ಚು – ಒಂದೊಂದೂ ಮಾಸದೆ ನೆಲೆನಿಂತಿವೆ. ಅನಂತರ ನನ್ನ ಶಕ್ತಿಗೆ ಮೀರಿದ ಆ ಸಣ್ಣಕ್ಷರದ ಲೇಖನದ ಸಾಲುಗಳನ್ನು ಓದಿಕೊಂಡು ಏನೋ ಹಿರಿದಾದುದನ್ನು ಸಾಧಿಸಿದವನಂತೆ ಹೆಮ್ಮೆಪಟ್ಟಿದ್ದೆ.
ಬಹುಶಃ ೧೯೯೪ರಲ್ಲಿರಬೇಕು, ಅದೊಂದು ಆಕಸ್ಮಿಕ ಯೋಗಾಯೋಗದಿಂದ ವರ್ಮರನ್ನು ನೇರವಾಗಿ ಕಾಣುವ ಪುಣ್ಯಾವಕಾಶ ನನಗೆ ದಕ್ಕಿತ್ತು. ಅದು ಆದದ್ದಾದರೂ ಹೀಗೆ: ರಾಷ್ಟ್ರೋತ್ಥಾನದ ‘ಯೋಗಭಾರತೀ’ ವಿಭಾಗವು ಯೋಗಗೀತಗಳ ದನಿಸುರುಳಿಯೊಂದನ್ನು ಹೊರತರಲಿತ್ತು. ಅದರ ಲೋಕಾರ್ಪಣ ನನ್ನಿಂದ ಆಗಬೇಕಿತ್ತು. ಅಂದಿನ ಸಮಾರಂಭಕ್ಕೆ ವರ್ಮರೂ ಬರಲಿದ್ದರು. ಆ ದನಿಸುರುಳಿಯ ಮೇಲಣ ಚಿತ್ರವಿನ್ಯಾಸ ಅವರದೇ ಆಗಿತ್ತು. ನನಗೆ ಇಂಥ ಅವಕಾಶವನ್ನು ದೊರಕಿಸಿಕೊಟ್ಟವರು ರಾಷ್ಟ್ರೋತ್ಥಾನ ಕಲಾಕೇಂದ್ರದ ನಿರ್ದೇಶಕರಾಗಿದ್ದ ಕೀ.ಶೇ. ಚಕ್ರವರ್ತಿ ತಿರುಮಗನ್ ಅವರು. ವರ್ಮರಿಗೆ ನಿಡುಗಾಲದ ಗೆಳೆಯರಾದ ಚಕ್ರವರ್ತಿ ನನಗೂ ಆತ್ಮೀಯರಾಗಿದ್ದರು. ಅವರೊಡನೆ ಲೋಕಾಭಿರಾಮವಾಗಿ ಮಾತನಾಡುವಾಗ ಆಕಸ್ಮಿಕವೆಂಬಂತೆ ವರ್ಮರ ಪ್ರಸ್ತಾವ ಬಂದಿತ್ತು. ಒಡನೆಯೇ ಅವರಿಗೆ ನನ್ನ ಬಹುಕಾಲದ ಬಯಕೆಯನ್ನು ನಿವೇದಿಸಿದ್ದೆ. ಅದು ಹೀಗೆ ಸಾಫಲ್ಯ ಕಂಡಿತ್ತು.
ವರ್ಮರು ತಮ್ಮ ಕೈಶೋರದಲ್ಲಿಯೇ ಸಾರ್ವಜನಿಕವಾಗಿ ತಮ್ಮ ಆಶುಚಿತ್ರಕೌಶಲವನ್ನು ಪ್ರದರ್ಶಿಸಿದ್ದರು. ಇದನ್ನು ತಿಳಿದ ನಾನು ‘ಕಾವ್ಯ-ಚಿತ್ರ’ ಜುಗಲ್ಬಂದಿಯನ್ನು ಅವರ ಸಹಕಾರದಿಂದ ರೂಪಿಸುವ ಹವಣಿನಲ್ಲಿದ್ದೆ. ನನ್ನ ಆಲೋಚನೆಯನ್ನು ಅಂದಿನ ಸಭೆಯ ಬಳಿಕ ‘ಕೇಶವಶಿಲ್ಪ’ ಸಭಾಂಗಣದಲ್ಲಿ ವರ್ಮರಿಗೆ ಸಂಕ್ಷಿಪ್ತವಾಗಿ ನಿವೇದಿಸಿದ್ದೆ. ಸ್ವಭಾವತಃ ಶಾಂತರೂ ಸಮಾಧಾನಿಗಳೂ ಆದ ವರ್ಮರಿಗೆ ನನ್ನ ಉತ್ಸಾಹ-ಉದ್ರೇಕಗಳ ಅಭಿವ್ಯಕ್ತಿ ತತ್ಕ್ಷಣ ಗ್ರಹಣೆಗೆ ಬರದಾಯಿತೇನೋ. ಹೀಗಾಗಿ ಕಾವ್ಯ-ಚಿತ್ರದ ಸಾಧ್ಯತೆಯ ಬಗೆಗೆ ಸಂದಿಗ್ಧಮನಸ್ಕರಾಗಿದ್ದ ಅವರಿಗೆ ವಿರಾಮವಾಗಿ ಮತ್ತಷ್ಟು ವಿಶದವಾಗಿ ತಿಳಿಸಲು ಅವರ ಮನೆಗೇ ಹೋಗಲು ನಿಶ್ಚಯಿಸಿಕೊಂಡೆ. ಹಾಗೆ ಮಾಡಿದಾಗ ವರ್ಮರು ಕಾವ್ಯ-ಚಿತ್ರದ ಸ್ವರೂಪವನ್ನು ವಿಶದವಾಗಿ ನನ್ನಿಂದ ತಿಳಿದುಕೊಂಡು, ಅದರ ಒಂದು ಸಣ್ಣ ಪ್ರಯೋಗವನ್ನೂ ಮಾಡಿ ಕಡೆಗೆ ಸಮ್ಮತಿ ಸೂಚಿಸಿದರು.
* * *
೧೯೯೫ ಆಗಸ್ಟ್ ೧೧ರಂದು ಬೆಂಗಳೂರಿನ ‘ಕೇಶವಶಿಲ್ಪ’ದಲ್ಲಿ ಮೊತ್ತಮೊದಲ ಕಾವ್ಯ-ಚಿತ್ರ ಜುಗಲ್ಬಂದಿ ಏರ್ಪಾಟಾಯಿತು. ಇದು ಕಂಡ ಯಶಸ್ಸು ಮುಂದಿನ ಇತಿಹಾಸಕ್ಕೆ ನಾಂದಿ ಹಾಡಿತು. ಕಾವ್ಯ-ಚಿತ್ರ ಕಾರ್ಯಕ್ರಮಗಳು ನಾಡಿನಾದ್ಯಂತ ಶರವೇಗದಲ್ಲಿ ದಾಂಗುಡಿಯಿಟ್ಟು ಸಾಗಿದವು. ಇದರ ವಿಸ್ತರಣವಾಗಿ ಮುಂದಿನ ವರ್ಷವೇ (೨೨.೮.೧೯೯೬) ಕಾವ್ಯ-ಚಿತ್ರ-ಗೀತ-ನೃತ್ಯ ಕಾರ್ಯಕ್ರಮ ಆವಿರ್ಭವಿಸಿತು. ಇಲ್ಲಿ ಆಶುವಾದ ಕಾವ್ಯ-ಚಿತ್ರಗಳಿಗೆ ಇದೇ ರೀತಿ ಗೀತ-ನೃತ್ಯಗಳೂ ಬೆಸೆದುಕೊಂಡವು. ಹೀಗೆ ನಾಲ್ಕು ಮೂಲಭೂತ ಅಭಿಜಾತ ಕಲಾಮಾಧ್ಯಮಗಳಿಗೆ ಏಕವೇದಿಕೆ ಕಲ್ಪಿತವಾಯಿತು. ಗೀತದಲ್ಲಿ ಡಾ|| ನಾಗವಲ್ಲೀ ನಾಗರಾಜ್ ಅವರೂ ನೃತ್ಯದಲ್ಲಿ ಡಾ|| ಶ್ರೀಧರ್ ಅವರೂ ಸಮರ್ಥ ಕಲಾವಿದರಾಗಿ ಬೆಳಗಿದರು. ಈ ವಿಸ್ತರಣ ಕೂಡ ಅನೇಕ ಪ್ರದರ್ಶನಗಳನ್ನು ಕಂಡಿತು. ಮತ್ತೂ ಹೆಚ್ಚಿನ ಸಂತಸದ ಸಂಗತಿ ಏನೆಂದರೆ, ಕಾವ್ಯ-ಚಿತ್ರದಂಥ ಪ್ರಯೋಗಗಳು ಕೇವಲ ನಮ್ಮಿಬ್ಬರ ಸುತ್ತ ತಿರುಗದೆ ನಮ್ಮ ನಾಡಿನ ಅನೇಕ ಕಲಾವಿದರು ಈ ಬಗೆಯ ಕಾರ್ಯಕ್ರಮಗಳನ್ನು ರೂಪಿಸಿಕೊಂಡು ಹೊಸ ಹೊಸ ಹಾದಿಗಳನ್ನು ಕಾಣಲು ಅವು ಸ್ಫೂರ್ತಿ ನೀಡಿದವು.
ಕಾವ್ಯ-ಚಿತ್ರದ ಯಶಸ್ಸು ‘ನಿರಂತರ ಕಾವ್ಯ-ಚಿತ್ರ’ ಎಂಬ ಅಭೂತಪೂರ್ವ ಕಾರ್ಯಕ್ರಮಕ್ಕೆ ಸ್ಫೂರ್ತಿ ನೀಡಿತು. ಎಂದಿನಿಂದಲೂ ಹೊಸಬಗೆಯ ಸಾಹಸಗಳತ್ತ ಕೈಚಾಚುತ್ತಿದ್ದ ನನ್ನ ಮನಸ್ಸು ಇದೀಗ ಇಪ್ಪತ್ನಾಲ್ಕು ಗಂಟೆಗಳ ಕಾಲ ಸತತವಾಗಿ ಸಾಗುವಂಥ ಕಾವ್ಯ-ಚಿತ್ರ ಜುಗಲ್ಬಂದಿಯ ಕನಸು ಕಂಡಿತ್ತು. ಇದಕ್ಕೆ ನನಗಿದ್ದ ಗಟ್ಟಿ ವಿಶ್ವಾಸ ವರ್ಮರ ಕಲೆಯ ಪರಿಣಾಮರಮಣೀಯತೆಯೇ. ಆ ವೇಳೆಗೆ ಪ್ರತಿವರ್ಷದ ಶ್ರಾವಣಮಾಸದಲ್ಲಿ ರಾಷ್ಟ್ರೋತ್ಥಾನ ಕಲಾಕೇಂದ್ರದ ಮೂಲಕ ಹೊಸತೊಂದು ವಿಕ್ರಮವನ್ನು ಆರಂಭಿಸುವುದು ಪದ್ಧತಿಯೆಂಬಂತಾಗಿತ್ತು. ಅದೀಗ ಭಾರತದ ಸ್ವಾತಂತ್ರ್ಯ ಪ್ರಾಪ್ತಿಯ ಸುವರ್ಣಮಹೋತ್ಸವದ ಮಂಗಳವೆಂಬಂತೆ ಈ ಕಾರ್ಯಕ್ರಮ ರೂಪಿತವಾಯಿತು. ಸುಮ್ಮನೆ ದಾಖಲೆಗಾಗಿ ದಾಖಲೆ ಎಂಬಂತೆ ಕಾವ್ಯ-ಚಿತ್ರವನ್ನು ಪ್ರದರ್ಶಿಸುವುದಕ್ಕೆ ಬದಲಾಗಿ ಯಾವುದಾದರೂ ಸಾರ್ಥಕ-ಸುಂದರ ವಸ್ತುವಿನ ಸುತ್ತ ನಮ್ಮ ಕಲಾವಲ್ಲಿ ಹಬ್ಬಿದಲ್ಲಿ ಒಳಿತೆಂದು ಭಾವಿಸಿ ನಮ್ಮ ದೇಶವು ವಿಶ್ವಸಂಸ್ಕೃತಿಗೆ ತನ್ನ ಬಹುಮುಖ ಸಾಧನೆಗಳ ಮೂಲಕ ನೀಡಿದ ಕೊಡುಗೆಯನ್ನೇ ಆಧರಿಸಿ ಈ ಕಾರ್ಯಕ್ರಮವು ೧೯೯೭ ಆಗಸ್ಟ್ ೨೩-೨೪ರಂದು ಪ್ರಸ್ತುತವಾಯಿತು. ಭಾರತೀಯ ಕಲೆ, ಸಾಹಿತ್ಯ, ಸಮಾಜ, ವಿಜ್ಞಾನ, ಅಧ್ಯಾತ್ಮ, ರಾಜನೀತಿ, ಜಾನಪದ ಮುಂತಾದ ಹತ್ತಾರು ಕ್ಷೇತ್ರಗಳ ಅಸಂಖ್ಯ ವಿಕ್ರಮಗಳನ್ನೇ ಆಧರಿಸಿ ನಲವತ್ತೈವತ್ತು ಮಂದಿ ಪರಿಣತ ಸಹೃದಯರು ವಿಶಿಷ್ಟವಾದ ಪ್ರಶ್ನೆಗಳನ್ನು ಮುಂದೊಡ್ಡಿದರು. ಇವಕ್ಕೆ ನಾನೂ ವರ್ಮರೂ ನಮ್ಮ ನಮ್ಮ ಮಾಧ್ಯಮಗಳ ಮೂಲಕ ಉತ್ತರ ನೀಡಿದೆವು. ನಾನು ಎಂಟು ಭಾಷೆಗಳಲ್ಲಿ ನೂರ ಎಂಬತ್ತೆಂಟು ಪದ್ಯಗಳನ್ನು ರಚಿಸಿದರೆ ವರ್ಮರು ಕಣ್ಣಿಗೆ ಹಬ್ಬವೆನಿಸಬಲ್ಲ ನೂರ ಹದಿನಾರು ಚಿತ್ರಗಳನ್ನು ನಿರ್ಮಿಸಿದರು. ‘ಕೇಶವಶಿಲ್ಪ’ ಸಭಾಂಗಣವು ಮೂವತ್ತು ಗಂಟೆಗಳಿಗೂ ಹೆಚ್ಚು ಕಾಲ ಸಹೃದಯರಿಂದ ತುಂಬಿ ತುಳುಕಿತು. ಸುಮ್ಮನೆ ಒಂದೆಡೆ ಕುಳಿತು ಪದ್ಯಗಳನ್ನು ರಚಿಸಿ ವಿವರಿಸುವ ಸೌಲಭ್ಯ ನನ್ನದಾಗಿದ್ದರೆ ನನಗಿಂತ ಹತ್ತು-ಹನ್ನೆರಡು ವರ್ಷಗಳಿಗೂ ಹಿರಿಯರಾದ ವರ್ಮರು ಹದಿಹರೆಯದ ತರುಣರನ್ನೂ ನಾಚಿಸುವಂತೆ ರಂಗವೆಲ್ಲ ನಲಿದಾಡುತ್ತ ಚಿತ್ರಜಗತ್ತನ್ನೇ ಸೃಜಿಸುವ ಸವಾಲನ್ನು ಅವಲೀಲೆಯಿಂದ ಹೊತ್ತರು.
ಆಶುವಾಗಿ ಅಲ್ಲದಿದ್ದರೂ ಪೂರ್ವಸಿದ್ಧವಾದ ಹಾಡುಗಳನ್ನೂ ಕವಿತೆಗಳನ್ನೂ ಚಿತ್ರದ ಇತಿವೃತ್ತಗಳನ್ನೂ ಹೊಂದಿಸಿಕೊಂಡು ‘ಗೀತ-ಚಿತ್ರ’, ‘ಕುಂಚ-ಕವಿತೆ’ ಮುಂತಾದ ಹತ್ತಾರು ಕವಲುಗಳು ಒಡೆದುಕೊಂಡವು. ಇವುಗಳಲ್ಲೆಲ್ಲ ವರ್ಮರೇ ಕೇಂದ್ರಬಿಂದು. ಸುಗಮಸಂಗೀತದವರಿಗೂ ವರ್ಮರು ಆಪದ್ಬಾಂಧವರಾದರು. ಅಂತೂ ವರ್ಮರ ಪ್ರೀತಿಯಿಂದ ಹರಳುಗಟ್ಟಿದ ಕಾವ್ಯ-ಚಿತ್ರವು ಕರ್ಣಾಟಕದ ಕಲಾರಂಗದಲ್ಲಿಯೇ ಕಲ್ಯಾಣಕರ ಕ್ರಾಂತಿಯನ್ನು ಮಾಡಿ ಲಕ್ಷಾಂತರ ಸಹೃದಯರಿಗೆ ಸಂತೋಷ ನೀಡಿತು. ಈ ಪ್ರಯೋಗಗಳು ರಾಜ್ಯದಿಂದ ರಾಷ್ಟçವ್ಯಾಪಿಯಾಗಿ, ಅದರಾಚೆಗೆ ಸಾಗರವನ್ನೂ ದಾಟಿದವು. ಕಾವ್ಯ-ಚಿತ್ರದ ಮೂಲಕ ರಾಷ್ಟ್ರಭಕ್ತಿ, ಸದಭಿರುಚಿ, ಅಭಿಜಾತಸಂಸ್ಕೃತಿ, ಭಾರತೀಯ ಮೌಲ್ಯಪ್ರಜ್ಞೆ ಮುಂತಾದ ಮತ್ತೆಷ್ಟೋ ಅಂಶಗಳು ಪ್ರದರ್ಶನಕಾಲದಲ್ಲಿ ಜನತೆಗೆ ಮುಟ್ಟುವಂತಾಯಿತು.
* * *
ವರ್ಮರ ಸಾಕ್ಷಾತ್ ಪರಿಚಯ ನನಗಾಗುವ ಮುನ್ನ ಅವರು ಬೆಳೆದುಬಂದ ವಿವರಗಳನ್ನೂ ವೈಯಕ್ತಿಕ ಸಂಗತಿಗಳನ್ನೂ ಅವರೇ ಸ್ವತಃ ನನಗೆ ಈ ಮೂರು ದಶಕಗಳ ಅವಧಿಯಲ್ಲಿ ಆಗೀಗ ತಿಳಿಸಿದ ಮೇರೆಗೆ ಮುಂದಿನ ಹಲವು ಸಂದರ್ಭಗಳನ್ನು ನಿರೂಪಿಸಿದ್ದೇನೆ.
ಬುಕ್ಕಸಾಗರ ಕೃಷ್ಣಮಾಚಾರ್ಯ ಶ್ರೀನಿವಾಸಾಚಾರ್ಯ ‘ಬಿ.ಕೆ.ಎಸ್. ವರ್ಮ’ರಾದದ್ದು ಒಂದು ರೋಚಕ ಸಾಹಸಗಾಥೆ. ಬೆಂಗಳೂರಿನ ದಕ್ಷಿಣದ ತುದಿಯಲ್ಲಿರುವ ಅತ್ತಿಬೆಲೆಯ ತಾಲ್ಲೂಕಿನ ಕರ್ನೂರು ಗ್ರಾಮದಲ್ಲಿ ೧೯೪೯ರ ಸೆಪ್ಟೆಂಬರ್ ಐದರಂದು ಹುಟ್ಟಿ ಉತ್ತರದ ತುದಿಯ ದೇವನಹಳ್ಳಿಯಲ್ಲಿ ಬಾಲ್ಯವನ್ನು ಕಳೆದ ಇವರ ಬಾಳು ನಡುವಿನ ಮಹಾನಗರದಲ್ಲಿ ನೆಲೆ ಕಂಡಿತು. ತಂದೆ ಕೃಷ್ಣಯ್ಯ ಅಥವಾ ಕೃಷ್ಣಮಾಚಾರ್ಯರು ಅರ್ಚಕರಾಗಿ, ಕಥಾಕೀರ್ತನಕಾರರಾಗಿ ಬದುಕನ್ನು ಕಟ್ಟಿಕೊಂಡಿದ್ದವರು. ಇವರ ಭಕ್ತಿ-ಶ್ರದ್ಧೆಗಳೂ ಗೀತ-ವಾದ್ಯಪ್ರೀತಿಯೂ ವರ್ಮರಿಗೆ ಬಳುವಳಿಯಾಗಿ ಬಂದಿದ್ದವು. ತಾಯಿ ಜಯಲಕ್ಷ್ಮಿಯವರು ಉತ್ತಮ ಶಿಲ್ಪಿಗಳ ಮನೆತನದಲ್ಲಿ ಹುಟ್ಟಿದವರು; ಸ್ವಯಂ ಚಿತ್ರಕಲಾವಿದರು, ಸಿದ್ಧಪದ್ಧತಿಯ ವೈದ್ಯರು ಕೂಡ. ಅವರ ತಂದೆ ಚೆನ್ನಕೇಶವಾಚಾರ್ಯರಿರಲಿ, ತಾಯಿ ಶೇಷಾಂಬೆ ಕೂಡ ಶಿಲ್ಪಕೋವಿದೆ. ಆಕೆಯ ನಿರ್ಮಾಣವೇ ಬೆಂಗಳೂರಿನ ಪ್ರಸಿದ್ಧ ಬನಶಂಕರೀದೇವಿಯ ದೇವಾಲಯದ ಮೂಲಮೂರ್ತಿ. ವರ್ಮರ ಚಿಕ್ಕಮ್ಮನ ಪತಿ ಎ.ಸಿ. ಹನುಮಂತಾಚಾರ್ಯರು ತಮ್ಮ ಕಲೆಗಾಗಿ ರಾಷ್ಟ್ರಪ್ರಶಸ್ತಿ ಗಳಿಸಿದ ಶಿಲ್ಪಿವರ್ಯರು. ನಾನು ಅವರನ್ನು ವರ್ಮರ ಪರಿಚಯಕ್ಕೂ ಮುನ್ನವೇ ಕಂಡು ಮಾತನಾಡಿದ್ದೆ. ಆದರೆ ಆಗ ಇವರಿಬ್ಬರ ಬಂಧುತ್ವ ನನಗೆ ತಿಳಿದಿರಲಿಲ್ಲ. ಮುಂದೆ ಅವರು ವರ್ಮರಿಗೆ ಸಾಂಪ್ರದಾಯಿಕ ಚಿತ್ರ-ಶಿಲ್ಪಗಳ ಮಾರ್ಗದರ್ಶಿಯೂ ಆದರು.
ಹೀಗೆ ಆಗರ್ಭಕಲಾವಿದರಾದ ವರ್ಮ ಬಾಲ್ಯದಿಂದ ತಮ್ಮ ಕೌಶಲವನ್ನು ಪ್ರಕಟಿಸುತ್ತ ಬಂದುದರಲ್ಲಿ ಅಚ್ಚರಿ ಏನಿಲ್ಲ. ಓದು-ಬರೆಹಗಳಲ್ಲಿ ಮನಸ್ಸಿಲ್ಲದ ಹುಡುಗ ವರ್ಮ ಶಾಲೆಯಲ್ಲಿ ತಮ್ಮ ಮುಂದೆ ಕುಳಿತಿರುತ್ತಿದ್ದ ಸಹಪಾಠಿಗಳ ಬಿಳಿಯಂಗಿಗಳ ಬೆನ್ನ ಮೇಲೆ ಇದ್ದಿಲಿನಿಂದ ಆಶುಚಿತ್ರಗಳನ್ನು ಬರೆದು ಗೆಳೆಯರ ಮುನಿಸಿಗೂ ಉಪಾಧ್ಯಾಯರ ಆಗ್ರಹಕ್ಕೂ ತುತ್ತಾಗುತ್ತಿದ್ದರಂತೆ. ಇವರೆಲ್ಲರ ಫಿರ್ಯಾದಿಯಿಂದ ಕೆರಳಿದ ತಂದೆ ಕೃಷ್ಣಮಾಚಾರ್ಯರು ಮಗನನ್ನು ಕತ್ತಲಕೋಣೆಯೊಳಗೆ ದಿನವೆಲ್ಲ ಬಂಧಿಸಿ ಮರುಹಗಲು ಬಾಗಿಲು ತೆರೆದಾಗ ಅಲ್ಲಿ ಗೋಡೆಗಳ ಮೇಲೆಲ್ಲ ಕಂಡದ್ದು ತಮ್ಮದೇ ಕೋಪಗೊಂಡ ಮುಖದ ಅನೇಕ ಭಂಗಿಗಳ ಹತ್ತಾರು ಚಿತ್ರಗಳನ್ನು! ನಿರುಪಾಯರಾದ ತಂದೆ ಮತ್ತೂ ಕೆರಳಿ ಮಗನನ್ನು ಕೆಲವು ಕಾಲ ಕುರಿ ಕಾಯಲು ಕಳುಹಿಸಿದರಂತೆ. ಇದರಿಂದ ಬೇಸತ್ತ ವರ್ಮ ಹೇಳದೆ ಕೇಳದೆ ಮನೆ ಬಿಟ್ಟು ಒಂಟಿಯಾಗಿ ಬೆಂಗಳೂರಿಗೆ ಬಂದರಂತೆ. ಇಲ್ಲಿ ಹಾದಿ-ಬೀದಿಗಳಲ್ಲಿ ಚಿತ್ರ ಬರೆದುಕೊಂಡು ಹೊಟ್ಟೆ ಹೊರೆದುಕೊಳ್ಳುತ್ತಿದ್ದರು. ಚಿಕ್ಕ ವಯಸ್ಸಿನ ಸ್ಫುರದ್ರೂಪಿಯಾದ ಆ ಸಂಸ್ಕಾರವಂತ ಕಲಾವಿದ ಯಾರಿಗೆ ತಾನೆ ಇಷ್ಟವಾಗುತ್ತಿರಲಿಲ್ಲ? ಎಲ್ಲರೂ ಪೈಪೋಟಿಯಿಂದ ತಮ್ಮ ತಮ್ಮ ಮನೆಗಳಿಗೆ ಕರೆದೊಯ್ದು ಆದರಿಸುತ್ತಿದ್ದರು. ಆದರೆ ಎಲ್ಲ ದಿನಗಳೂ ಹೀಗೆ ಇರುವುದಿಲ್ಲವಷ್ಟೆ.
ಇಷ್ಟಾದರೂ ಮನೆಗೆ ಹೋಗದ ವರ್ಮ ತಮ್ಮ ಎಳವೆಗೆ ತಕ್ಕಂತೆ ಚಲನಚಿತ್ರತಾರೆಗಳ ಬಗೆಗೆ ಎಣೆಮೀರಿದ ಆಸಕ್ತಿ-ಕುತೂಹಲಗಳಿಂದ ಸದ್ದಿಲ್ಲದೆ ಅಂದಿನ ಮದ್ರಾಸಿಗೆ (ಈಗ ‘ಚೆನ್ನೈ’) ಓಡಿದ್ದರು. ಮೊದಲಿನಿಂದ ತಮ್ಮ ಮನೆಮಾತಾದ ತೆಲುಗಿನ ಚಲನಚಿತ್ರಗಳೆಂದರೆ ಅವರಿಗೆ ಪಂಚಪ್ರಾಣ. ವಿಶೇಷತಃ ಕಲೆಯ ಸೊಗಸು ಎದ್ದುಕಾಣುವ ಪೌರಾಣಿಕ ಚಿತ್ರಗಳೆಂದರೆ, ಅವುಗಳಲ್ಲಿ ನಟಿಸುವ ಎನ್.ಟಿ. ರಾಮರಾವ್, ಎಸ್.ವಿ. ರಂಗರಾವ್, ಅಂಜಲಿ, ಸಾವಿತ್ರಿ ಮುಂತಾದ ನಟ-ನಟಿಯರೆಂದರೆ, ಇವರಿಗಾಗಿ ಹಾಡುವ ಘಂಟಸಾಲ, ಮಾಧವಪೆದ್ದಿ ಸತ್ಯಂ, ಪಿ. ಲೀಲಾ, ಪಿ. ಸುಶೀಲಾ ಮುಂತಾದ ನೇಪಥ್ಯಗಾಯಕರೆಂದರೆ ತುಂಬ ಅಭಿಮಾನ, ಆರಾಧನೆ. ಹೀಗಾಗಿ ಬೆಳ್ಳಿತೆರೆಯ ಈ ದೇವತೆಗಳನ್ನು ಸಾಕ್ಷಾತ್ಕರಿಸಿಕೊಳ್ಳಲು ಮದ್ರಾಸ್ ಯಾತ್ರೆ ಅನಿವಾರ್ಯವಾಗಿತ್ತು.
ಬೆಂಗಳೂರಿನಲ್ಲಿರುವಾಗ ಆ ಕಾಲದಲ್ಲಿ ಜನಪ್ರಿಯವಾಗಿದ್ದ ಬೆಳ್ಳಿಯ ದೇವರ ಪಟಗಳ ರಚನಾಕ್ರಮವನ್ನು ಗಮನಿಸಿಕೊಂಡು ಸ್ವಯಮಾಚಾರ್ಯರಾಗಿ ಉಗುರಿನ ಮೂಲಕ ದಪ್ಪ ಹಾಳೆಗಳ ಮೇಲೆ ಉಬ್ಬುಶಿಲ್ಪದಂಥ ಆಕೃತಿಗಳನ್ನು ರೂಪಿಸಬಲ್ಲ ‘ನಖಚಿತ್ರ’ಕಲೆಯನ್ನು ವರ್ಮ ಆವಿಷ್ಕರಿಸಿಕೊಂಡಿದ್ದರು. ಇದನ್ನೇ ಮದ್ರಾಸಿನ ಬದುಕಿಗೆ ಬಂಡವಾಳವಾಗಿ ರೂಢಿಸಿಕೊಂಡು ರೈಲು ಹತ್ತಿದ್ದರು. ರಸ್ತೆಗಳ ಮೇಲೆ ಚಿತ್ರ ಬಿಡಿಸುವ ಕೌಶಲವಂತೂ ಅದಕ್ಕೂ ಮೊದಲೇ ಸಿದ್ಧಿಸಿತ್ತಷ್ಟೆ. ಎಂಟು-ಹತ್ತು ವರ್ಷಗಳ ಬಾಲಕ ವರ್ಮ ಆಗಲೇ ತಮ್ಮದಾದ ವಿಸಿಟಿಂಗ್ ಕಾರ್ಡ್ ಕೂಡ ಮಾಡಿಸಿಕೊಂಡಿದ್ದರಂತೆ: ‘ಬಿ.ಕೆ. ಶ್ರೀನಿವಾಸವರ್ಮ, ನೇಯ್ಲ್ ಆರ್ಟಿಸ್ಟ್’ ಎಂದು! ಈ ಕಾರ್ಡಿನಲ್ಲಿ ಅವರು ಮದ್ರಾಸಿನ ಯಾವ ಯಾವ ರಸ್ತೆಗಳಲ್ಲಿ ದಿನದ ಯಾವ ಯಾವ ಹೊತ್ತಿನಲ್ಲಿ ಇರುವರೆಂಬ ವಿವರಗಳೂ ಇದ್ದುವಂತೆ! ಬಹುಶಃ ಶ್ರೀನಿವಾಸಾಚಾರ್ಯ ‘ಶ್ರೀನಿವಾಸವರ್ಮ’ ಆದದ್ದೂ ಆ ಅವಧಿಯಲ್ಲಿಯೇ. ಆ ವೇಳೆಗಾಗಲೇ ದಂತಕಥೆಯಾಗಿದ್ದ, ಸಾಮಾನ್ಯ ಭಾರತೀಯರ ಪಾಲಿಗೆ ಏಕಮೇವಾದ್ವಿತೀಯ ಚಿತ್ರಕಲಾವಿದನಾಗಿದ್ದ ರಾಜಾ ರವಿವರ್ಮನ ಹಾಗೆಯೇ ತಾವು ಕೂಡ ಆಗಬೇಕೆಂಬ ಹಂಬಲದಿಂದಲೇ ತಮ್ಮ ಹೆಸರಿನಲ್ಲಿ ಈ ಮಾರ್ಪಾಟನ್ನು ತಾವೇ ಮಾಡಿಕೊಂಡಿದ್ದರು. ಬೀದಿಗಳಲ್ಲಿ ಅವರು ಬಿಡಿಸುತ್ತಿದ್ದ ಮಸಿ-ಸೀಮೆಸುಣ್ಣಗಳ ಚಿತ್ರಗಳನ್ನು ಕಂಡು ವರ್ಮರ ಬದುಕಿನ ಹಿನ್ನೆಲೆಯಲ್ಲಿ ತಮಿಳಿನ ಖ್ಯಾತ ಲೇಖಕರೊಬ್ಬರು ‘ಕರಿತ್ತುಂಡು’ ಎಂಬ ಹೆಸರಿನ ಕಾದಂಬರಿಯನ್ನೇ ಬರೆಯುವ ಮಟ್ಟಿಗೆ ಅವರ ಮದ್ರಾಸು ವಾಸ ಪ್ರಸಿದ್ಧಿಗೇರಿತು.
ತಾವು ಆರಾಧಿಸುತ್ತಿದ್ದ ನಟನಟಿಯರನ್ನು ಕಾಣಲು ಮದ್ರಾಸಿನ ಫಿಲ್ಮ್ ಸ್ಟುಡಿಯೋಗಳ ಸುತ್ತಮುತ್ತ ಠಳಾಯಿಸಿದ ವರ್ಮರಿಗೆ ಎದುರಾದದ್ದು ‘ಅಪ್ಪಣೆಯಿಲ್ಲದೆ ಪ್ರವೇಶವಿಲ್ಲ’ ಎಂಬ ತಡೆಹಲಗೆ. ಇದನ್ನು ಹೇಗಾದರೂ ದಾಟಬೇಕೆಂಬ ಸಂಕಲ್ಪದಿಂದ ವರ್ಮ ಒಂದು ಅದ್ಭುತ ಉಪಾಯ ಮಾಡಿದರು. ಅಂದಿನ ಮದ್ರಾಸಿನ ವಿಜಯಾ-ವಾಹಿನೀ ಸ್ಟುಡಿಯೋ ಭಾರತದಲ್ಲಿಯೇ ಪ್ರಖ್ಯಾತವಾಗಿತ್ತು. ಆ ಚಿತ್ರಸಂಸ್ಥೆಯ ಮೂಲಕವೇ ವರ್ಮರ ಕನಸಿನ ಹೀರೋ-ಹೀರೋಯಿನ್ನುಗಳು ಬೆಳ್ಳಿಯ ಪರದೆಯ ಮೇಲೆ ಮಿಂಚಿದ್ದರು. ಆ ಸ್ಟುಡಿಯೋಗಳ ಮುಖ್ಯಸ್ಥರು ನಾಗಿರೆಡ್ಡಿ-ಚಕ್ರಪಾಣಿ ಸ್ನೇಹಿತರು. ಇವರ ಪೈಕಿ ಚಕ್ರಪಾಣಿಯವರು ಆ ಎಲ್ಲ ಸಂಸ್ಥೆಗಳ ಜೀವನಾಡಿ ಮತ್ತು ಪ್ರಜ್ಞಾಕೇಂದ್ರವಾಗಿದ್ದರು. ಇವರು ಪ್ರತಿದಿನ ಬೆಳಕು ಹರಿಯುವ ಮುನ್ನವೇ ಮನೆಯಿಂದ ಬಂದು ಕೆಲಸಕ್ಕೆ ತೊಡಗುತ್ತಿದ್ದರು. ಇದನ್ನು ಹೇಗೋ ತಿಳಿದುಕೊಂಡ ವರ್ಮ ಚಕ್ರಪಾಣಿಯವರ ಕಾರು ಬರುವ ಟಾರ್ ರಸ್ತೆಯ ಮೇಲೆ ದೊಡ್ಡದೊಂದು ಹಳ್ಳವನ್ನು ಚಿತ್ರಿಸಿ ಹತ್ತಿರದಲ್ಲಿಯೇ ಹೊಂಚುತ್ತ ನಿಂತರು. ಮುಂಜಾನೆಯ ಮಬ್ಬುಗತ್ತಲಿನಲ್ಲಿ ಚಿತ್ರದ ಹಳ್ಳವನ್ನು ನಿಜವೆಂದೇ ಭ್ರಮಿಸಿದ ವಾಹನಚಾಲಕ ಕಾರನ್ನು ಗಕ್ಕನೆ ನಿಲ್ಲಿಸಿದ. ಇದೇನೆಂದು ನೋಡಲು ಚಕ್ರಪಾಣಿಯವರು ಕಾರಿನಿಂದ ಇಳಿದು ಹೊರಬರುತ್ತಿದ್ದಂತೆಯೇ ವರ್ಮ ಮುನ್ನುಗ್ಗಿ ತಮ್ಮ ಪರಿಚಯವನ್ನೂ ಉದ್ದೇಶವನ್ನೂ ರೋಚಕವಾಗಿ ಹೇಳಿಕೊಂಡರು. ವರ್ಮರ ಮನೆಮಾತಾದ ತೆಲುಗು ಚೆನ್ನಾಗಿ ನೆರವಾಗಿತ್ತು. ಚಕ್ರಪಾಣಿ ಸ್ವಯಂ ತೆಲುಗಿನಲ್ಲಿ ಲೇಖಕರು, ಬಂಗಾಳಿ ಕಾದಂಬರಿಗಳ ಅನುವಾದಕರು; ತಮ್ಮ ಕಟಕಿ-ಚಾಟೂಕ್ತಿ-ಚಮತ್ಕಾರಗಳಿಗೆ ಇಡಿಯ ದಕ್ಷಿಣಭಾರತ ಚಲನಚಿತ್ರಪ್ರಪಂಚದಲ್ಲಿಯೇ ಪ್ರಖ್ಯಾತರಾದವರು. ಎಲ್ಲರನ್ನು ತಮ್ಮ ನಡೆ-ನುಡಿಗಳ ಮೂಲಕ ಬೇಸ್ತು ಬೀಳಿಸುತ್ತಿದ್ದವರಲ್ಲದೆ ತಾವೇ ಎಂದೂ ಬೇಸ್ತುಬಿದ್ದವರಲ್ಲ. ಅಂಥ ಚಲನಚಿತ್ರಚಾಣಕ್ಯ ಇದೀಗ ವರ್ಮರ ಪ್ರಾಕ್ಟಿಕಲ್ ಜೋಕಿನ ಮುಂದೆ ಚಿತ್ತಾಗಿದ್ದರು. ಗುಣಗ್ರಾಹಿಗಳಾದ ಆವರು ಆ ಕೂಡಲೇ ವರ್ಮರಿಗೆ ತಮ್ಮ ಸ್ಟುಡಿಯೋಗಳಲ್ಲಿ ಸಹಕಲಾನಿರ್ದೇಶಕನ ಉದ್ಯೋಗ ಮಾಡಲು ಪರವಾನಗಿ ನೀಡಿದ್ದರು! ತಿಂಗಳಿಗೆ ನೂರೈವತ್ತು ರೂಪಾಯಿಗಳ ಸಂಬಳ ಕೂಡ ನಿಶ್ಚಿತವಾಗಿತ್ತು. ಚಕ್ರಪಾಣಿಯವರು ತೆಲುಗಿನ ಮಹಾನಟರಾದ ಎನ್.ಟಿ. ರಾಮರಾವ್, ಎ. ನಾಗೇಶ್ವರರಾವ್ ಮುಂತಾದವರನ್ನೇ ತಿಂಗಳಿಗೆ ನಾನೂರು-ಐನೂರು ರೂಪಾಯಿಗಳ ಸಂಬಳಕ್ಕೆ ದುಡಿಸಿಕೊಂಡವರೆAಬ ಸಂಗತಿಯನ್ನು ನೆನೆದಾಗ ವರ್ಮರ ವಯಸ್ಸು-ಕಲಾಕೌಶಲಗಳಿಗೆ ಸಿಕ್ಕ ಪುರಸ್ಕಾರ ಅದೆಷ್ಟು ದೊಡ್ಡದೆಂದು ನಾವು ಊಹಿಸಬಹುದು. ಹೀಗೆ ನಟ-ನಟಿಯರನ್ನು ಕಾಣಲು ಬಂದ ಹತ್ತು-ಹನ್ನೆರಡರ ಹರೆಯದ ಪೋರ ಆ ಎಲ್ಲ ಘಟಾನುಘಟಿಗಳ ಚಿತ್ರಗಳಿಗೆ ಕಲಾನಿರ್ದೇಶನ ಮಾಡುವ ಯೋಗ ಗಳಿಸಿದ್ದ!
‘ವಿಜಯ-ವಾಹಿನೀ’ ಸಂಸ್ಥೆಗಳ ಹಿರಿಯ ಕಲಾನಿರ್ದೇಶಕರಾದ ಗೋಖಲೆ ಮಾಧವಪೆದ್ದಿ, ಕಲಾಧರ್ ಮುಂತಾದವರಿಗೆ ವರ್ಮ ಸಹಾಯಕರಾದರು; ಅಲ್ಲಿಯ ಇನ್ನಿತರ ತಂತ್ರಜ್ಞ-ಕಲಾವಿದರ ಪರಿಚಯವನ್ನೂ ಬೆಳಸಿಕೊಂಡರು. ವಿಶೇಷತಃ ಪ್ರಮುಖ ಪ್ರಸಾಧನಕಲಾವಿದ ಪೀತಾಂಬರಂ ಅವರಿಗೆ ತುಂಬ ಅಚ್ಚುಮೆಚ್ಚಾಗಿ ಅವರ ಮನೆಯ ಮಕ್ಕಳೊಡನೆ ತಾವೂ ಒಬ್ಬರೆಂಬಂತೆ ಅಲ್ಲಿಯೇ ಉಳಿದುಕೊಂಡರು. ಪೀತಾಂಬರ ಅವರ ಧರ್ಮಪತ್ನಿ ಪ್ರತಿದಿನ ತಮಗೆ ತಲೆಬಾಚಿ, ಪೌಡರ್ ಹಚ್ಚಿ, ತಿಲಕ ತಿದ್ದುತ್ತಿದ್ದ ವಾತ್ಸಲ್ಯವನ್ನು ವರ್ಮ ಸದಾ ನೆನೆಯುತ್ತಿದ್ದರು. ದೇಶ-ಕಾಲವ್ಯತ್ಯಾಸಗಳಿಗೆ ಕಳವಳಗೊಳ್ಳದೆ ಎಲ್ಲಿಯೂ ಹಾಯಾಗಿ ಹೊಂದಿಕೊಳ್ಳುವುದು ವರ್ಮರ ಹಿರಿಮೆ. ಈ ಸದ್ಗುಣ ಅವರನ್ನು ಅಗಲದೆ ಉಳಿದಿತ್ತು. ಇದೊಂದು ಬಗೆಯ ಅವಧೂತಪ್ರಜ್ಞೆಯೂ ಹೌದು. ಈ ಸದ್ಗುಣದ ಮತ್ತೊಂದು ಮುಖವಾದ ಜಂಗಮಪ್ರಜ್ಞೆ ವರ್ಮರನ್ನು ಮದ್ರಾಸಿನಲ್ಲಿ ಹೆಚ್ಚು ಕಾಲ ಉಳಿಸಲಿಲ್ಲ. ಆರು ತಿಂಗಳು ಕಳೆಯುವಷ್ಟರಲ್ಲಿ ಅವರಿಗೆ ಸ್ಟುಡಿಯೋ ಜೀವನ ಬೇಸರ ತಂದಿತ್ತು. ಹೇಗೂ ಅವರ ಮೆಚ್ಚಿನ ನಟ-ನಟಿಯರ ಜೊತೆಯಲ್ಲಿ ತಾವು ನಿಂತು ನಲಿಯುವ ವಿವಿಧ ಭಂಗಿಗಳ ಹತ್ತಾರು ಛಾಯಾಚಿತ್ರಗಳನ್ನು ತೆಗೆಸಿಕೊಂಡದ್ದಾಗಿತ್ತು; ಹಸ್ತಾಕ್ಷರಗಳನ್ನೂ ಪಡೆದುಕೊಂಡದ್ದಾಗಿತ್ತು. ಇನ್ನು ಇವನ್ನೆಲ್ಲ ತಮ್ಮ ಶಾಲೆಯ ಗೆಳೆಯರಿಗೆ ತೋರಿಸಿ ಹೆಮ್ಮೆಯ ಹಿಗ್ಗನ್ನು ಬೀರಬೇಕಲ್ಲವೇ! ಹೀಗಾಗಿ ಮತ್ತೆ ತಾಯ್ನಾಡಿಗೆ ಓಡಿದ್ದರು.
ಬೆಂಗಳೂರಿಗೆ ಬಂದ ಬಳಿಕ ವರ್ಮರ ಎಂದಿನ ‘ಕರತಲಭಿಕ್ಷಾ ತರುತಲವಾಸಃ’ ಎಂಬ ರೀತಿಯ ಜೀವನ ಸಾಗಿತು. ಬಹುಶಃ ಈ ಹೊತ್ತಿನಲ್ಲಿಯೇ ನಮ್ಮ ನವೋದಯಸಾಹಿತ್ಯದ ಶಿಖರಗಳಾದ ಡಿ.ವಿ.ಜಿ., ಮಾಸ್ತಿ, ಕುವೆಂಪು, ಕಾರಂತ, ವಿ.ಸೀ. ಮುಂತಾದವರನ್ನು ಕಂಡು ಅವರ ಆಶೀರ್ವಾದ ಪಡೆದಿದ್ದರು. ಕುವೆಂಪು ಅವರಂತೂ ಕವಿತೆಯನ್ನೇ ಬರೆದು ಹರಸಿದ್ದರು. ಆ ಸಾಲುಗಳು ವರ್ಮರ ನೆನಪಿನಲ್ಲಿ ಶಾಶ್ವತವಾಗಿ ಉಳಿದಿದ್ದವು. ಮಾಸ್ತಿಯವರು ಆಗೀಗ ಹಣ ಕೊಟ್ಟು ಉತ್ತೇಜನ ನೀಡುತ್ತಿದ್ದರು. ವಿ.ಸೀ. ಬಾಲಕ ವರ್ಮನ ಚಿತ್ರಗಳನ್ನು ವಿಮರ್ಶಕನಂತೆ ನೋಡಿ ಮೆಚ್ಚುತ್ತಿದ್ದರು. ಕಾರಂತರು ತಮ್ಮ ಎಂದಿನ ನಿಷ್ಠುರ ನುಡಿಗಳಿಂದಲೇ ಚಿತ್ರಗಳ ಓರೆ-ಕೋರೆಗಳನ್ನು ತಿದ್ದಿಕೊಳ್ಳಲು ಸಲಹೆ ನೀಡಿದ್ದರು. ವರ್ಮ ಮೈಸೂರಿನ ಒಂದು ಕಲಾಪ್ರದರ್ಶನದಲ್ಲಿ ಮಹಾರಾಜ ಜಯಚಾಮರಾಜ ಒಡೆಯರ ನಖಚಿತ್ರ ರಚಿಸಿ ಬಹುಮಾನ ಗಳಿಸಿದ್ದರು. ಸರ್ ಎಂ. ವಿಶ್ವೇಶ್ವರಯ್ಯನವರಿಂದಲೂ ಇಂಥ ಮೆಚ್ಚುಗೆ ಪಡೆದಿದ್ದರು. ವರ್ಮರಿಗೆ ಚಿತ್ರಕಲೆಯನ್ನು ಕ್ರಮವಾಗಿ ಕಲಿಯಲು ಅವಕಾಶವಾಗಿರಲಿಲ್ಲ.
ಪ್ರಾಯಶಃ ಆ ಹೊತ್ತಿನಲ್ಲಿಯೇ ‘ಕಲಾಮಂದಿರ’ದ ಅ.ನ. ಸುಬ್ಬರಾಯರ ಆಶ್ರಯಕ್ಕೆ ಅವರು ಬಂದರು. ಸುಮಾರು ಎಂಟು ವರ್ಷ ಶಿಕ್ಷಣ ಸಾಗಿತು. ಸುಬ್ಬರಾಯರ ವಾತ್ಸಲ್ಯ ವರ್ಮರನ್ನು ಅಷ್ಟು ಕಾಲ ಹಿಡಿದಿಟ್ಟಿತ್ತು. ತನ್ನ ಅಜ್ಜನ ವಯಸ್ಸಿನ ಗುರುವಿನಲ್ಲಿ ಪ್ರೀತಿ-ಗೌರವಗಳನ್ನು ಬೆಳೆಸಿಕೊಂಡ ವರ್ಮ ಚಿತ್ರಕಲೆಯ ವ್ಯವಸ್ಥಿತ ಅಭ್ಯಾಸಕ್ಕೆ ಮುಂದಾದರು. ಸುಬ್ಬರಾಯರಿಂದ ವರ್ಣಸಂಯೋಜನೆಯನ್ನು ಕಲಿತರಂತೆ. ಮೊದಲಿನಿಂದ ಗಣಿತ, ತರ್ಕ, ಅಳತೆ, ಎಣಿಕೆ ಮುಂತಾದ ಶಿಸ್ತುಗಳ ವಿಷಯದಲ್ಲಿ ವರ್ಮರಿಗೆ ಶಾಲೆಯ ದಿನಗಳಿಂದ ವೈರಸ್ಯ. ಇಲ್ಲಿಯೂ ಇದು ತಲೆದೋರಿತು. ಹೀಗಾಗಿಯೇ ಚಿತ್ರಕಲಾಶಿಕ್ಷಣದ ಅಂಗಗಳಾದ ಪರ್ಸ್ಪೆಕ್ಟಿವ್ ಪ್ರೊಜೆಕ್ಶನ್, ಶ್ಯಾಡೊ ಎಕ್ಸ್ಟೆನ್ಶನ್ ಮೊದಲಾದ ಜ್ಯಾಮಿತೀಯ ಅಂಶಗಳು ಅವರಿಗೆ ಬೇಸರ ತಂದವು. ಇವುಗಳನ್ನು ಸುಬ್ಬರಾಯರು ಪಾಠ ಮಾಡುವಾಗ ತರಗತಿಯಿಂದಲೇ ಜಾರಿಕೊಳ್ಳುತ್ತಿದ್ದರಂತೆ!
ಆ ದಿನಗಳಲ್ಲಿ ವರ್ಮರ ಲೀಲಾಭೂಮಿ ಮೆಜೆಸ್ಟಿಕ್, ಮೈಸೂರು ಬ್ಯಾಂಕ್ ಸರ್ಕಲ್, ಗಾಂಧಿ ಬಜಾರ್, ಸಿಟಿ ಮಾರ್ಕೆಟ್ ಮೊದಲಾದ ಪೇಟೆಯ ತಾಣಗಳು; ಗವಿಪುರಂ, ಬಸವನಗುಡಿ, ವಿಶ್ವೇಶ್ವರಪುರಂ ಮುಂತಾದ ಬಡಾವಣೆಗಳು. ಇಲ್ಲಿಯ ಬೀದಿಬೀದಿಗಳಲ್ಲಿಯೂ ವರ್ಮರಿಗೆ ಅಭಿಮಾನಿಗಳಿದ್ದರು; ಇದ್ದಾರೆ ಕೂಡ. ಹನುಮಂತನಗರದಲ್ಲಿ ಹಳೆಯ ಮುರುಕಲು ಮನೆಯೊಂದು ಇವರಿಗೆ ಆಶ್ರಯ ನೀಡಿತ್ತು. ಅಲ್ಲಿಯೇ ಒಡಕಲು ಕುರ್ಚಿಯೊಂದರಲ್ಲಿ ಕುಳಿತು ತೆಲುಗಿನ ಪ್ರಸಿದ್ಧ ಚಲನಚಿತ್ರನಟ ಕೃಷ್ಣ ತಮ್ಮ ಚಿತ್ರ ಬರೆಸಿಕೊಂಡಿದ್ದರಂತೆ. ಮುಂದೆ ತಮಿಳಿನ ಚಿತ್ರಜಗತ್ತನ್ನು ಆಳಿ ಇಡಿಯ ಭಾರತದ ಚಲನಚಿತ್ರಪ್ರಪಂಚದಲ್ಲಿ ಕೂಡ ಛಾಪು ಮೂಡಿಸಿದ ರಜನೀಕಾಂತ್ (ಅಂದಿನ ಶಿವಾಜಿರಾವ್) ವರ್ಮರ ಚಿತ್ರಲೇಖನಕ್ಕೆ ಒತ್ತಾಸೆಯಾಗಿ ನಿಂತು ಕಾಫಿ-ತಿಂಡಿ ತಂದುಕೊಡುವುದರಿಂದ ಮೊದಲ್ಗೊಂಡು ಬಣ್ಣಗಳ ತಟ್ಟೆಯನ್ನು ಹಿಡಿದು ಪಕ್ಕದಲ್ಲೇ ಗಂಟೆಗಟ್ಟಲೆ ನಿಲ್ಲುವವರೆಗೆ ಬಗೆಬಗೆಯ ನೆರವು ನೀಡಿದ್ದರು. ಮುಂದೆಂದೋ ರಜನೀಕಾಂತ್ ವರ್ಮರನ್ನು ಕಂಡು ತಮಗಾಗಿ ರಾಘವೇಂದ್ರಸ್ವಾಮಿಗಳ ಚಿತ್ರವನ್ನು ಬರೆಸಿಕೊಳ್ಳುವಾಗ “ನಿಮಗೆ ಆ ದಿನಗಳಲ್ಲಿ ನಾನು ಬಣ್ಣದ ತಟ್ಟೆ ಹಿಡಿಯುವ ಸೇವೆ ಮಾಡುತ್ತಿದ್ದುದು ನೆನಪಿದೆಯೇ?” ಎಂದು ಕೇಳಿದ್ದರಂತೆ!
ಪ್ರಸಿದ್ಧ ಆಭರಣನಿರ್ಮಾಣಸಂಸ್ಥೆ ‘ಗಂಜಾಂ’ನ ಮಾಲೀಕರಾದ ಭೀಮಾಜಿ ಅವರೂ ಅವರ ತಂಗಿ ಉಮಾ ಅವರೂ ವರ್ಮರ ಆರಾಧಕರಾಗಿದ್ದರು. ಉಮಾ ಇವರ ಶಿಷ್ಯೆ ಕೂಡ. ಇವರ ಅಪೇಕ್ಷೆಯ ಮೇರೆಗೆ ಗಾಂಧಿನಗರದಲ್ಲಿದ್ದ ಒಡವೆಗಳ ಮಳಿಗೆಯಲ್ಲಿ ನೂರಾರು ಅಡಿಗಳ ಉದ್ದಕ್ಕೆ ಬಾಗಿಲುವಾಡದಿಂದ ತಾರಸಿಯವರೆಗಿರುವ ಮೂರಡಿ ಅಗಲದ ಸ್ಥಳದಲ್ಲಿ ‘ಗೀತಗೋವಿಂದ’ದ ಚಿತ್ರಸರಣಿಯನ್ನು ವರ್ಮ ರಚಿಸಿದ್ದರು. ಆ ಚಿತ್ರಗಳ ಫೋಟೊ ಮತ್ತು ವಿಡಿಯೋಗಳನ್ನು ನಾನೂ ಕಂಡಿದ್ದೇನೆ. ಅವು ಅಜಂತೆಯ ಶೈಲಿಯನ್ನು ಕೆಲಮಟ್ಟಿಗೆ ಹೋಲುವ ಅತ್ಯದ್ಭುತವಾದ ಶೃಂಗಾರಸೃಷ್ಟಿಗಳು. ದುರ್ದೈವವೆಂದರೆ, ಗಾರೆಯ ಗೋಡೆಯ ಮೇಲಿನ ಆ ಚಿತ್ರಗಳ ಬಾಳು ಅಲ್ಪಾಯುವಾಯಿತು. ಧೂಳು, ಜೌಗು ಮತ್ತು ಗಾರೆಯ ರಾಸಾಯನಿಕ ಮಾರ್ಪಾಡುಗಳು ಚಿತ್ರಗಳನ್ನು ಹಾಳ್ಗೆಡವಿದವು. ಅಲ್ಲದೆ ಆ ಒಡವೆಗಳ ಮಳಿಗೆ ಸ್ಥಾನಾಂತರಗೊಂಡ ಬಳಿಕ ಕಟ್ಟಡವೇ ಕಣ್ಮರೆಯಾಗುವಂತಾಯಿತು. ವರ್ಮ ಗಂಜಾಂ ಕುಟುಂಬಕ್ಕಾಗಿ ಹಲವು ಚಿತ್ರಗಳನ್ನು ರಚಿಸಿಕೊಟ್ಟರು. ಅವುಗಳ ಪೈಕಿ ತ್ಯಾಗರಾಜರ ಚಿತ್ರವನ್ನು ಮರೆಯುವಂತಿಲ್ಲ. ಹೆಚ್ಚಿನ ಬಣ್ಣ-ಬೆಡಗಿಲ್ಲದ, ತುಂಬ ಸರಳವಾದ ಈ ಚಿತ್ರದ ಕೇಂದ್ರ ತಂಬೂರಿಗೆ ತಲೆಯಾನಿಸಿಕೊಂಡು ಕಣ್ಮುಚ್ಚಿ ನಾದಯೋಗದಲ್ಲಿರುವ ತ್ಯಾಗರಾಜರ ಮುಖ. ಇಲ್ಲಿ ವರ್ಮರು ಕಾಣಿಸಿರುವ ಶಾಂತಿ ಲಾಲಿತ್ಯದ ಸೋಂಕಿಲ್ಲದೆ, ನೈಷ್ಠುರ್ಯದ ನೆರಳಿಲ್ಲದೆ ಪ್ರಸನ್ನತೆಯ ಪರಾಕಾಷ್ಠೆಯಾಗಿ ಮೆರೆದಿದೆ. ತಂಬೂರಿಯ ಮೇಲಿನ ತುದಿ ಕ್ಯಾನ್ವಾಸಿನಲ್ಲಿಯೇ ಕರಗಿಹೋಗುವ ಮೂಲಕ ನಾದದ ಆನಂತ್ಯವನ್ನು ಸೂಚಿಸಿದೆ. ಇದು ಅವ್ಯಾಕೃತವಾದ ಶ್ರುತಿ-ಲಯಗಳನ್ನು ತ್ಯಾಗರಾಜರು ತಮ್ಮ ರಾಗ-ತಾಳಗಳ ಮೂಲಕ ವ್ಯಾಕೃತವಾಗಿಸುತ್ತಿರುವ ಸೂಚನೆಯೂ ಆಗಿದೆ.
ವರ್ಮ ಅವರು ‘ಕಲಾಮಂದಿರ’ದಿಂದ ದೇವನಹಳ್ಳಿಯಲ್ಲಿದ್ದ ತಮ್ಮ ಚಿಕ್ಕಪ್ಪ ಶಿಲ್ಪಿವರ್ಯ ಹನುಮಂತಾಚಾರ್ಯರ ಹತ್ತಿರಕ್ಕೆ ಹಾರಿದರು. ಅವರ ಬಳಿ ಒಂದು ವರ್ಷ ಕಟ್ಟುನಿಟ್ಟಿನ ಗುರುಕುಲವಾಸವಾಯಿತು. ಬ್ರಾಹ್ಮಮುಹೂರ್ತದಲ್ಲಿಯೇ ಎದ್ದು, ಯೋಗ-ಪ್ರಾಣಾಯಾಮಗಳನ್ನು ಮಾಡಿ, ಕೆರೆಯ ತಣ್ಣೀರಿನಲ್ಲಿ ಮಿಂದು ಗುರುಕುಲಕ್ಕೆ ಬರಬೇಕು. ಅಲ್ಲಿ ಧ್ಯಾನ-ಸಂಧ್ಯಾವಂದನೆಗಳು ಸಾಗಿದ ಬಳಿಕ ವಿಧಿವತ್ತಾಗಿ ಸಾಂಪ್ರದಾಯಿಕ ಚಿತ್ರ-ಶಿಲ್ಪಗಳ ಕಲಿಕೆ ನಡೆಯುತ್ತಿತ್ತು. ಇದಕ್ಕೆ ಪೂರಕವಾಗಿ ಪುರಾಣೇತಿಹಾಸಗಳ ಪರಿಚಯವೂ ಶಿಲ್ಪಾಗಮಗ್ರಂಥಗಳ ಪಠನವೂ ಸಾಗುತ್ತಿದ್ದವು. ಅಲ್ಪಕಾಲದ್ದಾದರೂ ಬಿರುಸಿನ ಆ ಶಿಕ್ಷಣ ವರ್ಮರ ಮೇಲೆ ಸತ್ಪçಭಾವ ಬೀರಿತು.
ಎಲ್ಲಿಯೂ ನಿಲ್ಲದ ವರ್ಮ ಈಗ ಇಡಿಯ ಭಾರತದಲ್ಲೆಲ್ಲ ತಮ್ಮ ಪ್ರತಿಭೆಯನ್ನು ಚಲ್ಲಾಡಲು ಸಿದ್ಧವಾದರು. ಮ್ಯಾಕ್ಸಿಂ ಗಾರ್ಕಿಯ ಬದುಕನ್ನು ಓದಿಕೊಂಡ ವರ್ಮ ಅವರಂತೆ ತಾನೂ ಅನಾಮಧೇಯನಾಗಿ ದೇಶಾಟನೆ ಮಾಡಬೇಕೆಂದು ಬಯಸಿದರು. ೧೯೬೪ ಮತ್ತು ೧೯೬೭ರಲ್ಲಿ ಅಖಿಲಭಾರತಯಾತ್ರೆಗೆ ಮುಂದಾದರು. ಮೊದಲ ಯಾತ್ರೆಯಲ್ಲಿ ನಲವತ್ತು ರೂಪಾಯಿಗಳನ್ನು ಕೈಯಲ್ಲಿ ಹಿಡಿದು ಹೊರಟ ಹದಿಹರೆಯದ ವರ್ಮ ಹಿಂದಿ-ಇಂಗ್ಲಿಷುಗಳನ್ನು ಬಲ್ಲವರಲ್ಲ. ಯಾವುದೇ ಶಿಫಾರಸು ಪತ್ರಗಳನ್ನು ಸಂಪಾದಿಸಿಕೊಂಡವರಲ್ಲ. ಅವರ ಪ್ರವಾಸವನ್ನು ಯಾವ ಸಂಸ್ಥೆಯೂ ಪ್ರಾಯೋಜಿಸಿರಲಿಲ್ಲ. ಹೆಗಲಿಗೊಂದು ಚೀಲವನ್ನೇರಿಸಿಕೊಂಡು, ಅದರಲ್ಲಿ ಒಂದಿಷ್ಟು ಹಾಳೆ, ಬಣ್ಣ, ಕುಂಚ, ಕಾರ್ಡುಗಳನ್ನು ತುಂಬಿಕೊಂಡು ಹೊರಟೇಬಿಟ್ಟರು ವರ್ಮ! ಕೊರಳಿನಲ್ಲಿ ಗೆಳೆಯನೊಬ್ಬ ರೈಲುನಿಲ್ದಾಣದಲ್ಲಿ ಬೀಳ್ಕೊಡಲೆಂದು ಬಂದಾಗ ಹಾಕಿದ್ದ ಹಾರವೂ ಇತ್ತು. ಆ ಮಾಲೆ ಬಾಡುವ ಮುನ್ನವೇ ರೈಲಿನಲ್ಲಿ ಅವರಿಗೆ ನೆರವು ನೀಡುವ ಕಲಾರಸಿಕರು ಪರಿಚಿತರಾಗಿದ್ದರು. “ವಿದ್ಯಾ ಬಂಧುಜನೋ ವಿದೇಶಗಮನೇ” ಎಂಬ ಭರ್ತೃಹರಿಯ ಸೂಕ್ತಿ ಸತ್ಯವಾಗಿತ್ತು. ಆಂಧ್ರ, ಉತ್ಕಲ, ಮಹಾರಾಷ್ಟç, ಬಂಗಾಳ, ಉತ್ತರಪ್ರದೇಶ ಮುಂತಾದ ಹಲವು ರಾಜ್ಯಗಳನ್ನು ಹತ್ತಾರು ತಿಂಗಳುಗಳ ಕಾಲ ಸುತ್ತಿ ಮುಂಬಯಿಗೆ ಬಂದರು. ಅಲ್ಲಿ ಕಲಾವಿದ ಕೆ.ಕೆ. ಹೆಬ್ಬಾರ್ ಅವರನ್ನು ಕಂಡರು; ಹಿಂದಿ ಚಿತ್ರಜಗತ್ತಿನ ಅಗ್ರಮಾನ್ಯ ನಾಯಕನಟರಾಗಿದ್ದ ದಿಲೀಪ್ಕುಮಾರ್ ಮತ್ತು ಮನೋಜ್ಕುಮಾರ್ ನಟಿಸಿದ ‘ಆದ್ಮಿ’ ಚಿತ್ರದ ಉಪ-ಕಲಾನಿರ್ದೇಶಕರಾಗಿ ಕೂಡ ದುಡಿದರು. ಅದೇ ಪಯಣದಲ್ಲಿ ಬಂಗಾಳದ ಶಾಂತಿನಿಕೇತನಕ್ಕೂ ಹೋಗಿ, ಆಧುನಿಕ ಭಾರತದ ಚಿತ್ರಕಲಾಜಗತ್ತಿನ ಯುಗಪ್ರವರ್ತಕರಾಗಿದ್ದ ಅವನೀಂದ್ರನಾಥ ಠಾಕೂರರ ಪ್ರಮುಖಶಿಷ್ಯರನ್ನು ಕಂಡು ನುಡಿಸಿ ಬಂದರು. ಮಥುರಾ, ವಾರಾಣಸಿ, ಪ್ರಯಾಗಗಳಂಥ ಪುಣ್ಯಕ್ಷೇತ್ರಗಳನ್ನೂ ದರ್ಶಿಸಿದರು. ಅಂತೂ ಜೇಬಿನಲ್ಲಿ ನಲವತ್ತು ರೂಪಾಯಿ ಇಟ್ಟುಕೊಂಡು ಹೊರಟ ವರ್ಮ ಬರುವಾಗ ಹದಿನಾಲ್ಕು ಸಾವಿರ ರೂಪಾಯಿಗಳನ್ನು ತಂದಿದ್ದರು! ವ್ಯಾವಹಾರಿಕ ಜಾಣ್ಮೆಯುಳ್ಳ ಮತ್ತಾವುದೇ ಕಲಾವಿದನಾಗಿದ್ದರೆ ಈ ಹಣಕ್ಕೆ ಅಂದಿನ ಬೆಂಗಳೂರಿನಲ್ಲಿ ಮೂರು-ನಾಲ್ಕು ಸೈಟುಗಳನ್ನು ಕೊಂಡು ಹಾಯಾಗಿರುತ್ತಿದ್ದ. ಸುಮಾರು ಐವತ್ತೈದು-ಅರವತ್ತು ವರ್ಷಗಳ ಹಿಂದೆ ಇದು ಸರ್ವಥಾ ಸಾಧ್ಯವಿತ್ತು. ಆದರೆ ಅಪ್ಪಟ ಕಲಾವಿದ ವರ್ಮ ಬೇರೆಯೇ ಕನಸನ್ನು ಕಂಡಿದ್ದರು.
ತಮ್ಮ ಎರಡನೆಯ ಯಾತ್ರೆಯಲ್ಲಿ ಅಜಂತೆಯ ಚಿತ್ರಗಳನ್ನು ಕಂಡು ಕಣ್ತುಂಬಿಸಿಕೊಂಡ ವರ್ಮ ಅಂಥ ಜಗತ್ತನ್ನು ಬೆಂಗಳೂರಿನಲ್ಲಿ ರೂಪಿಸಬೇಕೆಂಬ ಕನಸಿನಿಂದ ಅಷ್ಟೂ ಹಣವನ್ನು ದೇವನಹಳ್ಳಿಯ ಬಳಿಯಿರುವ ಬೆಟ್ಟಗಳ ಬಂಡೆಗಳ ಮೇಲೆ, ಹನುಮಂತನಗರದ ಆಸುಪಾಸಿನ ಗುಡ್ಡಗಳ ಮೇಲೆ ಚಿತ್ರ ಬರೆಯಲು ಬೇಕಾದ ಬಣ್ಣಗಳಿಗಾಗಿ ಬಳಸಿಕೊಂಡರು. ಆಗೆಲ್ಲ ಅವರು ತಮ್ಮನ್ನು ‘ಬಂಡೆಯ ಕಲಾವಿದ’ (ಬಿ.ಕೆ.) ಶ್ರೀನಿವಾಸ ವರ್ಮ ಎಂದೇ ವಿಡಂಬಿಸಿಕೊಳ್ಳುತ್ತಿದ್ದರಂತೆ. ಅಂದು ಅವರು ನಿರ್ಮಿಸಿದ ಚಿತ್ರಜಗತ್ತು ಕಾಲನ ಕೈಗಳ ಒರಟಾಟಕ್ಕೆ, ಬೆಳೆಯುವ ನಗರದ ಬಂಡವಳಿಗರ ದಾಹಕ್ಕೆ ಸಿಲುಕಿ ಅಳಿದುಹೋಗಿದೆ. ಇಂದು ಕೇವಲ ನೆನಪು ಮಾತ್ರ ನಿಂತಿದೆ. ಅಂತೂ ಕೈಲಿದ್ದ ಕಾಸೆಲ್ಲ ಕರಗಿದ ಬಳಿಕ ಮತ್ತೆ ಜೀವನಕ್ಕೆ ಏನೆಂಬ ಪ್ರಶ್ನೆ ಬಂದಿತು. ಹೀಗಾಗಿ ಅವರೆಲ್ಲರ ಒತ್ತಾಯದ ಮೇರೆಗೆ ಅಂದಿನ ಪ್ರಸಿದ್ಧ ವಾರಪತ್ರಿಕೆ ‘ಪ್ರಜಾಮತ’ಕ್ಕೆ ಚಿತ್ರಕಾರರಾಗಿ ಸೇರಿದರು.
ಅದೊಮ್ಮೆ ಕಥೆಯೊಂದಕ್ಕೆ ಚಿತ್ರ ಬರೆಯಬೇಕಾಯಿತು. ಅಲ್ಲಿ ನಾಯಿಯೊಂದರ ಪ್ರಸ್ತಾವ ಬರಬೇಕಿತ್ತು. ಇಲ್ಲಿಯವರೆಗೆ ದೇವ-ದೇವಿಯರನ್ನೂ ಯಕ್ಷ-ಗಂಧರ್ವರನ್ನೂ ಅಂದದ ಅಪ್ಸರೆಯರನ್ನೂ ಚಿತ್ರಿಸುತ್ತಿದ್ದ ವರ್ಮ ನಾಯಿ, ಬೆಕ್ಕು, ಹಂದಿ, ಕೋಳಿಗಳಂಥ ತಿರ್ಯಗ್ಜಂತುಗಳತ್ತ ತಿರುಗಿಯೂ ನೋಡಿರಲಿಲ್ಲ. ಹೀಗಾಗಿ ನಾಯನ್ನೊಮ್ಮೆ ಸಾಕ್ಷಾತ್ತಾಗಿ ನೋಡಿ ಆ ಬಳಿಕ ಚಿತ್ರಿಸೋಣವೆಂದು ಕಾರ್ಯಾಲಯದಿಂದ ಹೊರಗೆ ಹೋದರು. ಗಾಂಧಿಬಜಾûರಿನ ಬೀದಿಗಳಲ್ಲಿ ನಾಯಿಗಳ ಸುಳಿವೇ ಕಾಣಲಿಲ್ಲ. ಸುತ್ತಮುತ್ತಲಿನ ಹತ್ತಾರು ಮದುವೆಮಂಟಪಗಳಲ್ಲಿ ಎಂಜಿಲೆಲೆಗಾಗಿ ಕಾದಾಡುವ ನಾಯಿಗಳು ಇರಲೇಬೇಕಿತ್ತು. ಆದರೆ ಅಂದು ಆಷಾಢದ ಮಂಗಳವಾರ; ಶುಭಸಮಾರಂಭಗಳಿಗೆ ಅವಕಾಶವೇ ಇಲ್ಲ! ಹೀಗಾಗಿ ತಮ್ಮ ಚಿತ್ರಕ್ಕೆ ತಕ್ಕ ರೂಪದರ್ಶಿಯನ್ನು ಕಾಣಲಾಗದೆ ನಿರಾಶರಾಗಿ ಮರಳಿ ಬಂದಾಗ ಅವರ ಮೇಜಿನ ಮೇಲೆ ಮೇಲಧಿಕಾರಿಗಳ ಖಾರವಾದ ಪತ್ರ ಕಾದಿತ್ತು: “ಕೆಲಸದ ಹೊತ್ತಿನಲ್ಲಿ ನೀವೆಲ್ಲಿ ಅಲೆಯುತ್ತಿದ್ದೀರಿ?” ಈ ಒಕ್ಕಣೆಯನ್ನು ಕಂಡೊಡನೆಯೇ ವರ್ಮ ತಮ್ಮ ರಾಜೀನಾಮೆಯ ಪತ್ರವನ್ನು ಬರೆದು – ಅಲ್ಲಲ್ಲ, ಚಿತ್ರಿಸಿ – ಅಧಿಕಾರಿಗಳತ್ತ ಬಿಸುಟು ಹೊರಬಿದ್ದರು. ಆ ಪತ್ರದಲ್ಲಿ ಇದ್ದುದೇನು? ಬಣ್ಣದ ಹಕ್ಕಿಯೊಂದು ಕೊಕ್ಕಿನಲ್ಲಿ ಕುಂಚವನ್ನು ಹಿಡಿದು ಪಂಜರದಿಂದ ಹೊರಕ್ಕೆ ಹಾರುತ್ತಿರುವ ಚಿತ್ರ!
ಜೀವಿಕೆಗಾಗಿ ಮತ್ತೆ ಹೋರಾಟ ಮೊದಲಾಯಿತು – ವರ್ಮರ ಪಾಲಿಗಲ್ಲ, ಅವರ ಹಿತೈಷಿಗಳಿಗೆ. ಸ್ವಭಾವತಃ ಮುಗ್ಧರೂ ಸರಳರೂ ಆದ ವರ್ಮ ವ್ಯವಹಾರದಕ್ಷರಲ್ಲವೆಂದೇ ಲೋಕಪ್ರಸಿದ್ಧಿ. ಇದು ವಾಸ್ತವ ಕೂಡ. ಆದರೆ ಅವರು ಲೋಕದ ತಂತ್ರ-ಕಪಟಗಳನ್ನು ತಿಳಿಯದ ಹೆಡ್ಡರೇನಲ್ಲ. ಅವರ ಯೌವನದಲ್ಲಿ ಸೋಗಲಾಡಿ ಸ್ವಾಮಿಯೊಬ್ಬರ ಹತ್ತಿರ ಕೆಲಸ ಮಾಡುವ ಸಂದರ್ಭ ಎದುರಾಗಿತ್ತಂತೆ. ಹುಸಿಯಾದ ಪವಾಡಗಳನ್ನು ಮಾಡಿ ಜನರನ್ನು ಮರುಳುಗೊಳಿಸುವ ತಂತ್ರಗಳನ್ನೂ ವರ್ಮ ಆ ಸ್ವಾಮಿಯಿಂದ ತಿಳಿದುಕೊಳ್ಳಬೇಕಾಯಿತಂತೆ. ಆದರೂ ಅವರು ಇವನ್ನು ಬಳಸಿ ಲೋಕವಂಚನೆಗೆ ಮುಂದಾಗಲಿಲ್ಲ. ಆಗ ಬಂಗಾರದ ಜಿಂಕೆ, ಚದುರಿದ ಚಿತ್ರಗಳು, ನಿನಗಾಗಿ ನಾನು, ರಾಜೇಶ್ವರಿ ಮುಂತಾದ ಕನ್ನಡಚಿತ್ರಗಳಿಗೆ ಕಲಾನಿರ್ದೇಶನ ಮಾಡಿ ಜೀವಿಕೆಯನ್ನು ಕಂಡುಕೊಳ್ಳಬೇಕಾಯಿತು. ಇವೆಲ್ಲ ಒತ್ತಾಯದ, ದಾಕ್ಷಿಣ್ಯದ ಕೆಲಸಗಳಾಗಿದ್ದವು; ದುಡಿಮೆಗೆ ತಕ್ಕ ಫಲವನ್ನೂ ಕೊಡದಂಥವಾಗಿದ್ದವು. ಅದೇ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕಾಗಿಯೂ ಹತ್ತಾರು ಚಿತ್ರಗಳನ್ನು ಅವರು ರಚಿಸಿಕೊಟ್ಟರು. ಪ್ರತಿವರ್ಷ ಯುಗಾದಿಯಂದು ಡಾ|| ಕೇಶವ ಬಲಿರಾಮ ಹೆಡಗೆವಾರರ ರೂಪಚಿತ್ರವನ್ನು ರಂಗವಲ್ಲಿಯ ಮಾಧ್ಯಮದಲ್ಲಿ ರೂಪಿಸುತ್ತಿದ್ದರು.
ಬಹುಶಃ ಈ ಅವಧಿಯಲ್ಲಿಯೇ ವರ್ಮರು ಮದುವೆಯಾಗಿ ಸಂಸಾರ ಹೂಡಿದ್ದು. ಅವರ ಬಂಧುವರ್ಗದ ವಧುವೇ ಆದ ಶ್ರೀಮತಿ ಶಾಂತಾ ಅವರ ಪಾಣಿಗ್ರಹಣದ ವೇಳಾವಿಶೇಷವೋ ಏನೋ, ವರ್ಮರು ಜಂಗಮಪ್ರವೃತ್ತಿಯನ್ನು ತೊರೆದು ಸ್ಥಾವರ ಪ್ರಕೃತಿಯಲ್ಲಿ ನೆಲೆನಿಂತರು. ಮಿನರ್ವಾ ಸರ್ಕಲ್ಲಿನ ಬಳಿಯ ಎನ್.ಎಮ್.ಎಚ್. ಹೋಟೆಲಿನ ಹತ್ತಿರವಿದ್ದ ವರ್ಮ ಮುಂದೆ ಗೆಲಾಕ್ಸಿ ಚಿತ್ರಮಂದಿರದ ಹತ್ತಿರಕ್ಕೆ ಸರಿದರು. ಆ ಬಳಿಕ ನಾಗವಾರದಲ್ಲಿ ಸ್ವಂತ ಮನೆ ಕಟ್ಟಿಕೊಂಡರು. ಅನಂತರ (ಈಗಿನ) ಶಿವರಾಮ ಕಾರಂತ ಬಡಾವಣೆಯ ಸುಂದರ ಸ್ವಗೃಹದಲ್ಲಿ ನೆಲೆಸಿದರು.
* * *
ವರ್ಮರ ನಿಸರ್ಗಚಿತ್ರಗಳ ಸರಣಿಗೆ ಸ್ಫೂರ್ತಿ ನೀಡಿದ ಮೊತ್ತಮೊದಲ ನಿರ್ಮಿತಿ ‘ಮೇಘಮಿಲನ’. ಇದೊಂದು ಅದ್ಭುತವಾದ ಚಿತ್ರ. ವಿಜ್ಞಾನಿ ಜಗದೀಶ್ ಚಂದ್ರ ಬೋಸರ ಬಗೆಗೆ ಕೇಳಿ ತಿಳಿದ ವರ್ಮರಿಗೆ ಅವರು ಸಸ್ಯಗಳಿಗೂ ಜೀವವಿದೆ, ಮಾನುಷಸದೃಶ ಸಂವೇದನೆಗಳಿವೆ ಎಂದು ಕಾಣಿಸಿದ ತಿಳಿವು ವಿಶೇಷವೆನಿಸಿತು. ಸಸ್ಯವಿಜ್ಞಾನದ ಆ ಸತ್ಯವು ರಸ್ಯಕಲೆಯ ಈ ಸೌಂದರ್ಯವಾದದ್ದು ಅವರ ಪ್ರತಿಭೆಯ ಮೂಲಕ. ಬೋಸರ ಮಾತುಗಳ ಗುಂಗಿನಲ್ಲಿ ಬೆಂಗಳೂರಿನ ಬಿನ್ನಿ ಮಿಲ್ಲಿನ ಪಕ್ಕದ ಬೀದಿಯಲ್ಲಿ ಆಷಾಢದ ಒಂದು ದಿನ ತರುಣ ವರ್ಮರು ಸಾಗುತ್ತಿದ್ದಾಗ ಅದೊಂದು ಮರ ಬೀಸುಗಾಳಿಗೆ ಮೈಚಾಚಿ ಕೊಂಬೆ-ರೆಂಬೆಗಳನ್ನು ತೂಗಿಸುತ್ತಿರುವುದು ಕಾಣಿಸಿತು. ತತ್ಕ್ಷಣವೇ ಅವರ ಕಲ್ಪನೆ ಅರಳಿತು. ಆ ಮರವೇ ಕೊಂಬೆಯ ರೂಪದ ತೋಳುಗಳನ್ನು ಬಾನತ್ತ ಚಾಚಿ, ರೆಂಬೆಯ ರೂಪದ ಬೆರಳುಗಳನ್ನು ಅಲಪದ್ಮಹಸ್ತವಾಗಿ ಎತ್ತಿಹಿಡಿಯಿತು. ಮರದ ತುದಿ ಮುಗುದೆಯ ಮೊಗವಾಯಿತು. ಅದು ಪ್ರಣಯಕ್ಕೆ ಹಾತೊರೆದ ಪ್ರೋಷಿತಪತಿಕೆಯ ಭಾವ-ಭಂಗಿಗಳನ್ನು ತಾಳಿತು. ಮೇಲಿಂದ ಆಷಾಢದ ಮೋಡ ಪಯಣದಿಂದ ಅನಿರೀಕ್ಷಿತವಾಗಿ ಮರಳಿ ಬಂದ ಕಾಂತನಂತೆ ಕಂಗೊಳಿಸಿತು. ಹೀಗೆ ವಿಪ್ರಲಂಭವು ಸಂಭೋಗದ ಸೋಪಾನವಾಯಿತು. ಮುಗಿಲ ಚೆಲುವನು ತರುತರುಣಿಯ ಚೆಂದುಟಿಯನ್ನು ಎಟುಕಿಸಿಕೊಳ್ಳಲು ತನ್ನ ತೋಳು ಬಳಸಿ ತಲೆಬಾಗಿಸುತ್ತಿದ್ದಾಗ ಸಂಧ್ಯಾಸೂರ್ಯನ ಸುಂದರಕಾಂತಿ ಆಕೆಯ ಲಜ್ಜಾರಾಗವಾಗಿ ಹಬ್ಬಿತು. ಈ ಜೋಡಿಯ ಮುಖಗಳಲ್ಲಿ ಕಾಣುವುದು ಚರ್ಮಕಾಮದ ಲೌಲ್ಯವಲ್ಲ; ಶರ್ಮಪ್ರೇಮದ ಶೀಲ. ವರ್ಮರ ಸದಭಿರುಚಿಯ ಔಚಿತ್ಯಪ್ರಜ್ಞೆ ನಲ್ಲ-ನಲ್ಲೆಯರ ತುಟಿಗಳನ್ನು ಹತ್ತಿರ ತಂದಿದೆಯಲ್ಲದೆ ಬೆಸೆದಿಲ್ಲ! ವಿದ್ಯುಚ್ಚಾಪವು (Electric Arc) ಆವಿರ್ಭವಿಸಲು ಸಮುಚಿತಪ್ರಮಾಣದ ಅಂತರ ಬೇಕಷ್ಟೆ. ಶೃಂಗಾರರಸದ ಆವಿಷ್ಕಾರಕ್ಕೂ ಈ ಹದ ಅವಶ್ಯ. ವರ್ಮರ ಅಭಿಜಾತಕಲೆಗೆ ಇಂಬಾಗುವಂತೆ ಈ ಚಿತ್ರದ ನಾಯಿಕೆ ತರುತರುಣಿಯ ತೊಡೆಯೇರಿ ಮಳೆಗಾಲದ ಬರವಿಗೆ ಸಂಭ್ರಮಿಸುವ ನವಿಲುಗಳೂ ಚಾತಕಗಳೂ ಗರಿಗೆದರಿ, ಬಾಯ್ಬಿಟ್ಟು ಕ್ರೀಡಾಶಕುಂತಗಳಾಗಿ ಮೆರೆದಿವೆ. ವರ್ಮರು ಈ ಚಿತ್ರದ ಹತ್ತಾರು ಪ್ರತಿಕೃತಿಗಳನ್ನು ಮಾಡಲು ಕಲಾರಸಿಕರ ಬೇಡಿಕೆ ಬಂದಿತು. ಇವು ಮೂಲಕ್ಕಿಂತ ಕಿಂಚಿದೂನವಾದರೂ ತಮ್ಮ ತಮ್ಮ ರೂಪಣದಲ್ಲಿಯ ಸಣ್ಣ-ಪುಟ್ಟ ವ್ಯತ್ಯಾಸಗಳ ಮೂಲಕ ವಿಭಿನ್ನವೆನಿಸಿವೆ. ಇವುಗಳೆಲ್ಲ ದೇಶ-ವಿದೇಶಗಳ ಚಿತ್ರಶಾಲೆಗಳಲ್ಲಿ ನೆಲಸಿವೆ. ಒಟ್ಟಿನಲ್ಲಿ ಕಾಳಿದಾಸನ ಪಾಲಿಗೆ ‘ಮೇಘದೂತ’ವಿದ್ದಂತೆ ವರ್ಮರಿಗೆ ‘ಮೇಘಮಿಲನ’ವೆಂದು ನನ್ನ ಅನಿಸಿಕೆ.
ವರ್ಮರು ಸೀತಾ-ರಾಮರ ಹಾಗೂ ಪದ್ಮಾವತೀ-ಶ್ರೀನಿವಾಸರ ವಿವಾಹಗಳನ್ನು ನಿರೂಪಿಸುವ ದೊಡ್ಡ ದೊಡ್ಡ ಎರಡು ಚಿತ್ರಗಳನ್ನು ಬರೆದಿದ್ದಾರೆ. ಇಲ್ಲಿಯ ಒಬ್ಬೊಬ್ಬ ದೇವತೆಯ, ಮಹರ್ಷಿಯ ಮುಖಮುದ್ರೆಗಳೂ ಅಂಗಭಂಗಿಗಳೂ ನಾಟ್ಯಧರ್ಮಿ-ಲೋಕಧರ್ಮಿಗಳ ಸಮನ್ವಯಕ್ಕೆ ಸುಂದರ ದೃಷ್ಟಾಂತಗಳು. ಇಂಥ ಸಮನ್ವಯವನ್ನು ಅವರ ಉಳಿದೆಲ್ಲ ಚಿತ್ರಗಳಲ್ಲಿಯೂ ಕಾಣಬಹುದಾದರೂ ಈ ಚಿತ್ರಗಳಲ್ಲಿ ಹೆಚ್ಚಿನ ಜನರ ಬಗೆಬಗೆಯ ವರ್ತನೆಗಳ ವಿಲಾಸವಿದೆ, ವೈವಿಧ್ಯವಿದೆ; ಈ ಕಾರಣಕ್ಕಾಗಿಯೇ ಪೂರ್ವೋಕ್ತ ಸಮನ್ವಯ ಮತ್ತಷ್ಟು ಪ್ರಸ್ಫುಟವಾಗಿದೆ. ಈ ಚಿತ್ರಗಳಲ್ಲಿ ರಾಮ-ಶ್ರೀನಿವಾಸರ ವರತ್ವದ ಸ್ನಿಗ್ಧಗಾಂಭೀರ್ಯ ಹಾಗೂ ಸೀತೆ-ಪದ್ಮಾವತಿಯರ ವಧೂತ್ವದ ಲಜ್ಜೆ-ಲಾಲಿತ್ಯಗಳು ಕೇಂದ್ರಸ್ಥಾನದಲ್ಲಿವೆ. ಕನ್ಯಾದಾನ ಮಾಡುವ ಜನಕ-ಆಕಾಶರಾಜರ ಮುಖದಲ್ಲಿ ಸುತೆಯ ವಿಯೋಗದ ವೇದನೆಯನ್ನು ಮರೆಯಿಸುವಂಥ ಕೃತಕೃತ್ಯತೆಯ ತೃಪ್ತಿ ತುಂಬಿದೆ. ಮಹರ್ಷಿಗಳಾದ ವಸಿಷ್ಠ, ವಿಶ್ವಾಮಿತ್ರ, ಶತಾನಂದ, ನಾರದ ಮುಂತಾದವರ ತಪೋವ್ಯಕ್ತಿತ್ವ ಚಿತ್ರಗಳ ನಾಗರಕ-ಕೌಟುಂಬಿಕ ಶ್ರೀಮಂತಿಕೆಗೆ ಆರಣ್ಯಕ-ಧ್ಯಾನಶೀಲತೆಯ ಹೃದ್ಯ ವಿಸಂವಾದವನ್ನು ಕಲ್ಪಿಸಿದೆ. ವರ್ಮರ ನಾಟ್ಯ-ಶಿಲ್ಪಶಾಸ್ತ್ರಗಳ ಸಂವೇದನೆಗೆ ಸೀತೆ-ಪದ್ಮಾವತಿಯರ ಆಯತಸ್ಥಾನಕವೇ ಅದ್ಭುತ ನಿದರ್ಶನವಾಗಿದೆ. ನಾಲ್ಕು ಕೈಗಳ ಗಣಪತಿ ನಾಟ್ಯಭಂಗಿಯಲ್ಲಿ ನಿಂತು ಚಪ್ಪಾಳೆ ಮತ್ತು ನಮಸ್ಕಾರಗಳೆರಡನ್ನೂ ಧ್ವನಿಸುವಂಥ ಹಸ್ತಮುದ್ರೆಗಳನ್ನು ತಾಳಿದ ಪರಿ ನೋಡುಗರ ಮನದಲ್ಲಿ ಮೆಚ್ಚುಗೆಯ ಮುಗುಳ್ನಗೆಯನ್ನು ಮೂಡಿಸುತ್ತದೆ.
ವರ್ಮರು ತಮ್ಮ ಯೌವನದ ದಿನಗಳಲ್ಲಿ ಬರೆದ ಸುಪ್ರಸಿದ್ಧ ಚಿತ್ರಗಳಲ್ಲೊಂದು ‘ಗುಹಾತಿಥ್ಯ’. ಗುಹನು ಮಾಡುತ್ತಿರುವ ಪಾದಪೂಜೆಯನ್ನು ಸ್ವೀಕರಿಸುತ್ತಿರುವ ರಾಮನ ಅನುಗ್ರಹಮುದ್ರೆಯಲ್ಲಿ ಅಕ್ಕರೆ ತುಂಬಿದ್ದರೆ, ಆ ನಿಷಾದರಾಜನ ಭಕ್ತಿಗೇ ಭಕ್ತೆಯಾದ ಸೀತೆಯ ಕೈಗಳು ಮುಗಿದಿವೆ. ಲಕ್ಷ್ಮಣ ಇದನ್ನೆಲ್ಲ ಆದರದಿಂದ ನೋಡುತ್ತಿದ್ದಾನೆ. ಗುಹನ ಕಂಗಳಲ್ಲಿ ಆನಂದಬಾಷ್ಪ ತುಳುಕಿದೆ. ಸೀತಾ-ರಾಮ-ಲಕ್ಷ್ಮಣರನ್ನು ಕಂಡು ಮೈಮರೆತ ಕಟ್ಟುಮಸ್ತಾದ ಭಿಲ್ಲತರುಣನೊಬ್ಬ ಕಣ್ಮುಚ್ಚಿ ಕೈಮುಗಿದು ನಿಂತಿದ್ದಾನೆ. ಇನ್ನೊಬ್ಬ ಪ್ರೌಢವ್ಯಕ್ತಿ ತನ್ನ ಪುಟ್ಟ ಮಗನಿಂದ ಸೀತಾರಾಮರಿಗೆ ನಮಸ್ಕಾರ ಮಾಡಿಸುತ್ತಿದ್ದಾನೆ. ಸಾಧ್ವಿ ಸೀತೆಯ ದರ್ಶನದಿಂದ ಪುಳಕಿತೆಯಾದ ಭಿಲ್ಲಯುವತಿಯೊಬ್ಬಳು ಮುಗ್ಧತೆಯೇ ಮೈವೆತ್ತ ಹಾಗೆ ಅರಳುಗಂಗಳಿಂದ ನೋಡುತ್ತ ತನ್ನ ಬೊಗಸೆಯ ಹೂಗಳನ್ನು ಅರ್ಪಿಸುತ್ತಿದ್ದಾಳೆ. ಅಂಧನಾದ ವೃದ್ಧನೊಬ್ಬನಿಗೆ ಸದ್ಯದ ಸಂದರ್ಭ ಏನೆಂದು ಸ್ಪಷ್ಟವಾಗದ ಕಾರಣ ಆತನಿಗೆ ಮತ್ತೊಬ್ಬ ತರುಣ ಅದನ್ನು ವಿವರಿಸಲೆಳಸಿ ಅವನತ್ತ ತಿರುಗಿದ್ದಾನೆ. ಗುಹನ ಬದಿಯಲ್ಲಿ ನರುಗೆಂಪಿನ ತಾವರೆಗಳೂ ಬಂಗಾರದ ಹೊಗರನ್ನು ಮೂದಲಿಸುವ ಸಂಪಗೆಗಳೂ ಪೂಜೆಗೆ ಕಾದಿವೆ. ಒಟ್ಟಿನಲ್ಲಿ ಈ ಚಿತ್ರವನ್ನು ಕಂಡು ವಾಲ್ಮೀಕಿಮುನಿಗಳೂ ಕರುಬುವಂತಿದೆ.
ವರ್ಮರು ರಚಿಸಿರುವ ಸರಸ್ವತಿಯ ಚಿತ್ರಗಳ ಪೈಕಿ ಶಿವಮೊಗ್ಗೆಯ ಡಿ.ವಿ.ಎಸ್. ಕಾಲೇಜಿಗಾಗಿ ರಚಿಸಿಕೊಟ್ಟ ಕಲಾಕೃತಿಯನ್ನು ನಾನು ಅತ್ಯುತ್ತಮವೆಂದು ಭಾವಿಸುತ್ತೇನೆ. ಬಿಳಿಯುಡುಗೆ ತೊಟ್ಟು ಬೆಳ್ದಾವರೆಯಲ್ಲಿ ಕುಳಿತ ಸರಸ್ವತಿ ನಿಜಕ್ಕೂ ಸರ್ವಶುಕ್ಲೆ. ಇವಳ ಸೀರೆಯ ಅಂಚು-ಸೆರಗುಗಳೆಲ್ಲ ಹಂಸಗಳ ಬಗೆಬಗೆಯ ಭಂಗಿಗಳಿಂದ ವಿನ್ಯಾಸಗೊಂಡಿವೆ. ಒಡ್ಯಾಣ, ಕರ್ಣಪೂರ, ಕಂಠಹಾರಗಳೂ ಹಂಸರೂಪಗಳಿಂದ ಸೊಗಯಿಸಿವೆ. ಇವೆಲ್ಲ ಶಾರದೆಯ ನಿರ್ಮಲೋನ್ನತಿಯನ್ನೂ ಸದಸದ್ವಿವೇಕವನ್ನೂ ಧ್ವನಿಸಿವೆ. ದೇವಿಯ ಪ್ರೀತಿಸ್ನಿಗ್ಧವಾದ ಕಣ್ಣುಗಳು ಆನಂದಬಾಷ್ಪಗಳಿಂದ ತುಂಬಿ ತುಳುಕಿವೆ. ಹಿಡಿದ ಜಪಮಾಲೆಯ ನೆಳಲೂ ಕೈಯ ಮೇಲೆ ಬಿದ್ದಿದೆ. ಮುಖದಲ್ಲಿ ಅಲೌಕಿಕಶಾಂತಿ-ಶೋಭೆಗಳು ನುಡಿಗೆಟುಕದ ಚೆಲುವನ್ನು ಚಿಮ್ಮಿಸಿವೆ.
ಕೃಷ್ಣ-ರಾಧೆಯರು ಎಲ್ಲ ಕಾಲದ ಎಲ್ಲ ಕಲೆಗಳಿಗೂ ಸ್ಫೂರ್ತಿ ನೀಡಿದ್ದಾರೆ. ವರ್ಮರ ಕಲೆಯೂ ಇದಕ್ಕೆ ಹೊರತಲ್ಲ. ಅವರು ರಾಧಾ-ಮಾಧವರನ್ನು ಹಲವು ಬಗೆಗಳಿಂದ ಚಿತ್ರಿಸಿದ್ದಾರೆ. ಶಿವ-ಪಾರ್ವತಿಯರ ಅರ್ಧನಾರೀಶ್ವರತತ್ತ್ವವನ್ನು ಕೃಷ್ಣ-ರಾಧೆಯರಿಗೂ ಒಪ್ಪವಿಟ್ಟಿರುವುದು ಅವರದೇ ವೈಶಿಷ್ಟ್ಯ. ಸಾಮಾನ್ಯವಾಗಿ ಅರ್ಧನಾರೀಶ್ವರರೂಪವನ್ನು ಚಿತ್ರಿಸುವಾಗ ಎರಡು ಕಣ್ಣುಗಳ ಮುಖವೊಂದರ ಸಮಾರ್ಧಭಾಗಗಳನ್ನು ಶಿವ-ಶಿವೆಯರಾಗಿ ಕಂಡರಿಸುವುದು ಶತಶತಮಾನಗಳ ಸಂಪ್ರದಾಯ. ಆದರೆ ವರ್ಮರು ಮೂರು ಕಣ್ಣುಗಳ, ಎರಡು ಮೂಗು ಮತ್ತು ಎರಡು ಬಾಯಿಗಳ ಎರಡು ಮುಖಗಳನ್ನು ಪರಸ್ಪರ ಹೊಂದಿಕೊಳ್ಳುವಂತೆ ಚಿತ್ರಿಸುವ ಮೂಲಕ ಪ್ರತಿಯೊಂದು ರೂಪವೂ ಸ್ವಯಂಪೂರ್ಣವಾಗಿರುವಂತೆ ಮಾಡಿದ್ದಾರೆ. ಇದು ನೋಡುಗರ ನೋಟಕ್ಕೆ ಸ್ವಲ್ಪವೂ ವೈರಸ್ಯ ತಾರದಂತೆ ಹವಣಿಸುವ ಕೌಶಲ ಅವರದು. ಈ ಪದ್ಧತಿ ಸಂಪೂರ್ಣವಾಗಿ ವರ್ಮರದೇ.
ಸಾಮಾನ್ಯವಾಗಿ ನಮ್ಮ ಕಲಾವಿದರು ಶಿವ-ಕೇಶವಾದಿಗಳ ಚಿತ್ರಣ ಮಾಡುವಂತೆ ಇಂದ್ರಾದಿಗಳನ್ನು ಚಿತ್ರಿಸಲು ಉತ್ಸಾಹ ತೋರುವುದಿಲ್ಲ. ವರ್ಮರು ಅಪೂರ್ವವೆಂಬಂತೆ ಐರಾವತವನ್ನು ಏರಿದ ಇಂದ್ರನ ಚಿತ್ರ ಬಿಡಿಸಿದ್ದಾರೆ. ಮೋಡಗಳ ಮೇಲೆ ತೇಲಿಬರುವ ದಿವ್ಯಧವಳ ಗಜ ಐರಾವತ ಮಾನುಷಭಾವವನ್ನು ಸೂಸುವಂತೆ ನಮ್ರಗಂಭೀರ ರೂಪದಲ್ಲಿದ್ದರೆ, ಅದರ ಮೇಲೆ ಇಂದ್ರನು ಧೀರೋದಾತ್ತ ಭಂಗಿಯಲ್ಲಿ ಕುಳಿತಿದ್ದಾನೆ. ಬಲಗೈ ವಜ್ರಾಯುಧವನ್ನು ಧರಿಸಿದ್ದರೆ ಎಡಗೈ ಡೋಲಹಸ್ತವನ್ನು ತಳೆದಿದೆ. ಹಿಂದೆ ಛತ್ರಧಾರಿಣಿಯೊಬ್ಬಳು ತ್ರಿಭಂಗಿಯಲ್ಲಿ ನಿಂತು ತನ್ನ ಸೇವೆ ಸಲ್ಲಿಸುತ್ತಿದ್ದಾಳೆ. ಅನತಿದೂರದಲ್ಲಿ ಕೆಲವರು ಅಪ್ಸರೆಯರು ಪುಷ್ಪಸಮರ್ಪಣೆ ಮಾಡುತ್ತಿದ್ದಾರೆ. ಚಿತ್ರದ ಕೇಂದ್ರಬಿಂದುವಾದ ಇಂದ್ರ ಹಲಕೆಲವು ಪುರಾಣಗಳಲ್ಲಿ ಚಿತ್ರಿತನಾದ ಅಗ್ಗದ ವ್ಯಕ್ತಿಯಲ್ಲ; ಇವನು ವೇದೋಪನಿಷತ್ತುಗಳಲ್ಲಿ ಹರಳುಗಟ್ಟಿದ ಬ್ರಾಹ್ಮ-ಕ್ಷಾತ್ತ್ರಗಳ ಸಮಾಹಾರ. ಈತನ ಮುಖಮುದ್ರೆಯಲ್ಲಿ ತೋರುವ ಅಧಿಕಾರ ಮತ್ತು ಅನುಗ್ರಹಗಳು ರಜೋಗುಣದಿಂದ ರೂಷಿತವಾಗದೆ ಸತ್ತ್ವದ ಸಂಪನ್ನತೆಯನ್ನು ಹೊಂದಿವೆ. ಇಡಿಯ ಚಿತ್ರದಲ್ಲಿ ಎದ್ದುತೋರುವುದು ಸಮೃದ್ಧಿ-ಸಂಯಮಗಳ ಅಭಿಜಾತ ಸಾಮರಸ್ಯ. ಇದು ಆರ್ಷವಾದ ಭಾರತೀಯ ಚಿತ್ರಕಲೆಯ ಪ್ರಾತಿನಿಧಿಕ ರೂಪವೇ ಆಗಿದೆ. ಏನೆಲ್ಲ ಪ್ರಭಾವಗಳನ್ನು ಜೀರ್ಣಿಸಿಕೊಂಡು ಭಾರತೀಯ ಕಲಾತತ್ತ್ವದಲ್ಲಿ ನೆಲೆನಿಂತ ಪ್ರತಿಭೆ ಎಂಥ ಉತ್ಕöÈಷ್ಟ ಚಿತ್ರವನ್ನು ರೂಪಿಸಬಲ್ಲುದೆಂಬುದಕ್ಕೆ ಇದೊಂದು ಸಮರ್ಥ ಸಾಕ್ಷಿ.
ಬುದ್ಧ, ಶಂಕರ, ರಾಮಾನುಜ, ಮಧ್ವ, ರಾಘವೇಂದ್ರ, ಬಸವಣ್ಣ ಮುಂತಾದ ಅಧ್ಯಾತ್ಮಜೀವಿಗಳ ಚಿತ್ರಗಳನ್ನೂ ವರ್ಮ ರಚಿಸಿದ್ದಾರೆ. ಇವರ ಮುಖಗಳಲ್ಲೆಲ್ಲ ಸಾರ್ವತ್ರಿಕವಾಗಿ ತೋರುವುದು ಅಪೂರ್ವವಾದ ಸ್ನಿಗ್ಧಶಾಂತಿ. ಎಲ್ಲ ಮತಗಳ ಪರಮೋದ್ದೇಶ ಇಂಥ ಶಾಂತಿಯೇ ಎಂಬ ಸತ್ಯವನ್ನು ವರ್ಮರ ಕಲೆ ಮತಾತೀತವಾಗಿ ಧ್ವನಿಸಿರುವ ಪರಿ ಅನ್ಯಾದೃಶ. ಯತಿಗಳ ಚಿತ್ರಗಳಲ್ಲಿ ವರ್ಮರು ತುಂಬಿಕೊಡುವ ಆಚೀಚಿನ ವಿವರಗಳೂ ಗಮನಾರ್ಹ. ಶಂಕರರ ಕೈಯ ಏಕದಂಡವಾಗಲಿ; ರಾಮಾನುಜರ ಮುಂದಿರುವ ಶಠಾರಿಯಾಗಲಿ; ರಾಘವೇಂದ್ರರ ಪಕ್ಕದಲ್ಲಿರುವ ಶ್ರೀರಾಮನ ಮೂರ್ತಿ, ಪಾತ್ರೆಯಲ್ಲಿರುವ ತೀರ್ಥದ ಬಣ್ಣ, ಮಂತ್ರಾಕ್ಷತೆಯ ಬಟ್ಟಲಲ್ಲಿರುವ ಅಕ್ಷತೆ-ಅಂಜೂರಗಳಾಗಲಿ – ಒಂದೊಂದು ವಿವರವೂ ವರ್ಮರ ಸಂಪ್ರದಾಯಪರಿಜ್ಞಾನ, ಸಂದರ್ಭಶುದ್ಧಿ ಮತ್ತು ರಚನಾಚಾತುರ್ಯಗಳಿಗೆ ಸಾಕ್ಷಿ. ಇವುಗಳೊಟ್ಟಿಗೆ ‘ಭಾರತ-ಭಾರತಿ’ ಪುಸ್ತಕಸಂಪದದ ವಾಲ್ಮೀಕಿಮಹರ್ಷಿ ಹೊತ್ತಗೆಗಾಗಿ ವರ್ಮರು ರಚಿಸಿಕೊಟ್ಟ ಮುಖಚಿತ್ರದ ನೆನಪಾಗುತ್ತದೆ. ಇಲ್ಲಿ ಅವರು ಆದಿಕವಿಯ ಮುಖದಲ್ಲಿ ಮರುಗಟ್ಟಿಸಿರುವ ಕರುಣೆಯಾಗಲಿ, ನೇಪಥ್ಯದಲ್ಲಿ ಅಸ್ಪಷ್ಟವಾಗಿ ಸೂಚಿಸಿರುವ ಕ್ರೌಂಚಮಿಥುನದ ದುರಂತವಾಗಲಿ ಉದ್ದಿಷ್ಟ ವಸ್ತುವಿನ ಔಚಿತ್ಯ-ಮಹತ್ತ್ವಗಳನ್ನು ಬಿಂಬಿಸುವಲ್ಲಿ ಸಾರ್ಥಕವಾಗಿವೆ.
ವರ್ಮರು ಸಾವಿರಾರು ರೇಖಾಚಿತ್ರಗಳನ್ನೂ ರಚಿಸಿದ್ದಾರೆ. ಮನೆಯಿಂದ ಹೊರಗೆ ಹೆಜ್ಜೆಯಿಟ್ಟ ಅವರನ್ನು ಕಂಡ ಅಭಿಮಾನಿಗಳೆಲ್ಲ ಒಂದಲ್ಲ ಒಂದು ಚಿತ್ರವನ್ನು ಬೇಡಿ ಬರೆಸಿಕೊಂಡೇ ಇರುತ್ತಾರೆ. ಅವರಿಗೆಲ್ಲ ಅಕ್ಕರೆಯ ಉಡುಗೊರೆಯಾಗಿ ನೀಡಿದ ಚಿತ್ರಗಳನ್ನು ಲೆಕ್ಕಿಸಿದರೆ ಲಕ್ಷಕ್ಕೂ ಲಕ್ಷ್ಯವಿಲ್ಲ! ಹೀಗಾಗಿ ಕೇವಲ ಎರಡು ರೇಖಾಚಿತ್ರಗುಚ್ಛಗಳನ್ನು ನಾನಿಲ್ಲಿ ನೆನೆದು ವಿರಮಿಸುತ್ತೇನೆ. ಮೊದಲನೆಯದು ಕೆ.ಸಿ. ಶಿವಪ್ಪನವರ ‘ರಾಧಾ-ಮಾಧವ’ ಕವನಸಂಕಲನಕ್ಕಾಗಿ ಬರೆದ ಐವತ್ತು ಚಿತ್ರಗಳ ಗುಚ್ಛ. ಇಲ್ಲಿ ಉದಾತ್ತರಮಣೀಯವಾದ ಶೃಂಗಾರದ ಎಲ್ಲ ಮಜಲುಗಳೂ ರೇಖೆಗಳ ಮೂಲಕ ಹೊಮ್ಮಿವೆ. ಜಯದೇವ, ಲೀಲಾಶುಕ, ಕ್ಷೇತ್ರಜ್ಞರಂಥ ಮಹಾಕವಿಗಳ ಕಲ್ಪನೆಗಳೂ ಸೋಲುವಂಥ ಸಿದ್ಧಿ ಇಲ್ಲಿದೆ. ಎರಡನೆಯದು ‘ಪ್ರಜಾವಾಣಿ’ ಪತ್ರಿಕೆಯಲ್ಲಿ ಸೂರ್ಯಪ್ರಕಾಶ ಪಂಡಿತ್ ಬರೆದ ರಾಮಾಯಣಲೇಖನಮಾಲೆಗಾಗಿ ಮೂಡಿದ ಚಿತ್ರಗುಚ್ಛ. ಇಲ್ಲಿ ಸರಿಸುಮಾರು ಬಾಲಕಾಂಡವೆಲ್ಲ ಆವಿರ್ಭವಿಸಿದೆ. ವಾಲ್ಮೀಕಿ, ಕಾಳಿದಾಸ, ಭೋಜ ಮುಂತಾದ ಕವಿಗಳ ಹೃದಯವನ್ನು ಗೆರೆಗಳ ಮೂಲಕ ಕಾಣಲು ಈ ಚಿತ್ರಗಳೇ ಶರಣ್ಯ.
* * *
ವರ್ಮರೊಡನೆ ಕಾವ್ಯ-ಚಿತ್ರ ಕಾರ್ಯಕ್ರಮಗಳಿಗಾಗಿ ನಾಡಿನುದ್ದಗಲಕ್ಕೂ ಸುತ್ತಾಡುವಾಗ ನನಗೆ ಅವರ ಸಂಪರ್ಕ ಮತ್ತಷ್ಟು ನಿಕಟವಾಯಿತು. ಆ ಸ್ನೇಹ ಮೂವತ್ತು ವರ್ಷಗಳಿಂದ ಬೆಳೆಯುತ್ತಲೇ ಬಂದಿತು. ಈ ಅವಧಿಯಲ್ಲಿ ಚರ್ಚಿಸಿಕೊಂಡ ವಿಷಯಗಳು ಹತ್ತಾರು. ಉಂಟಾದ ರೋಚಕ ಸಂದರ್ಭಗಳು ನೂರಾರು. ಇವುಗಳ ಪೈಕಿ ಕೆಲವನ್ನಾದರೂ ನೆನೆಯದಿರಲು ಸಾಧ್ಯವಿಲ್ಲ.
ಅದೊಮ್ಮೆ ಹಿರೇಮಗಳೂರಿನ ಕಾವ್ಯ-ಚಿತ್ರದಲ್ಲಿ ಗೊಮ್ಮಟನ ಮಹಾಮಸ್ತಕಾಭಿಷೇಕವನ್ನು ವರ್ಮರು ಚಿತ್ರಿಸಬೇಕಿತ್ತು. ಇದ್ದಿಲಿನಲ್ಲಿ ಧೀರಸುಂದರನಾದ ಬಾಹುಬಲಿಯನ್ನು ಕ್ಯಾನ್ವಾಸಿನ ಮೇಲೆ ಕಂಡರಿಸಿದ ವರ್ಮ ಕಟ್ಟಕಡೆಗೆ ಹಳದಿಯ ನೀರಿನಲ್ಲಿ ಕರವಸ್ತ್ರವನ್ನದ್ದಿ ಅದನ್ನು ಧಾರೆಧಾರೆಯಾಗಿ ಹಿಂಡಿ ಹರಿದ್ರಾಭಿಷೇಕದ ವೈಭವವನ್ನೇ ಮೂಡಿಸಿದ್ದರು; ಅಲ್ಲಲ್ಲ, ಮಾಡಿದ್ದರು!
ಇನ್ನೊಮ್ಮೆ ಬುದ್ಧ-ಅಂಗುಲೀಮಾಲರ ಪ್ರಸಂಗವನ್ನು ವರ್ಮರು ಚಿತ್ರಿಸಬೇಕಾಯಿತು. ಆಗ ಮಸಿತುಂಡಿನಿಂದ ಅದನ್ನು ಚಿತ್ರಿಸಿದವರೇ ಎರಡೂ ಕೈಗಳನ್ನು ಕೆಂಬಣ್ಣದಲ್ಲಿ ಅದ್ದಿ ಚಟ್ಟು ಮೂಡಿಸುವಂತೆ ಕ್ಯಾನ್ವಾಸಿನ ಮೇಲೆ ವರ್ತುಲಾಕಾರವಾಗಿ ರೇಖಾಚಿತ್ರಕ್ಕೊಂದು ಪ್ರಭಾವಲಯದಂತೆ ತಮ್ಮ ಅಂಗುಲಿಗಳ ಮಾಲೆಯನ್ನು ರೂಪಿಸಿದ್ದರು. ಇದು ತುಂಬಿದ ಧ್ವನಿಶಕ್ತಿ ಹಾಗೂ ಮೂಡಿಸಿದ ಪರಿಣಾಮ ಮಾತಿಗೆ ನಿಲುಕುವಂಥದ್ದಲ್ಲ.
ವರ್ಮ ಮೂಲತಃ ಲಹರಿಯ ಮನುಷ್ಯರು. ಕಲಾವಿದರೇ ಹೀಗೆನ್ನಿ. ವರ್ಮರಂತೂ ಆಗರ್ಭಕಲಾವಿದರು. ಹೀಗಾಗಿ ಅವರು ನಿಂತಾಗಲೂ ತೇಲುತ್ತಿರುವಂತೆ ತೋರುತ್ತಾರೆ; ಲೋಕದೊಡನೆ ವ್ಯವಹರಿಸುವಾಗಲೂ ಕಲ್ಪನೆಗಳಲ್ಲಿ ಕೊಚ್ಚಿಹೋಗಿರುತ್ತಾರೆ. ಇಂಥ ಭಾವಸಮಾಧಿಗಳು ಸಹಜವಾಗಿಯೇ ಉದಾತ್ತ ಸನ್ನಿವೇಶಗಳಿಗೂ ವಿನೋದ ಸಂದರ್ಭಗಳಿಗೂ ವಿಪುಲವಾಗಿ ಅವಕಾಶ ನೀಡುತ್ತವೆ. ಇವಕ್ಕೆ ಜೊತೆಯಾಗಿ ವರ್ಮರ ಅಲೋಕಸಾಮಾನ್ಯವಾದ ಮುಗ್ಧತೆಯೂ ಕಾವ್ಯೋಪಮ.
ಅಮೆರಿಕೆಯ ‘ಅಕ್ಕ’ ಸಮ್ಮೇಳನಕ್ಕೆ ಹೊರಟಾಗ ಮೂರು-ನಾಲ್ಕು ತಿಂಗಳ ಸುದೀರ್ಘಪ್ರವಾಸಕ್ಕೆ ಬೇಕಾದಷ್ಟು ಬಟ್ಟೆಗಳನ್ನು ವರ್ಮ ಜೋಡಿಸಿಕೊಂಡು ಬಂದಿದ್ದರು. ವಸ್ತುತಃ ಇದನ್ನೆಲ್ಲ ಅವರ ಪತ್ನಿ ಶಾಂತಾ ಅವರೇ ತುಂಬ ಮುತುವರ್ಜಿಯಿಂದ ಮಾಡಿದ್ದರು. ಪ್ರವಾಸದ ಮೊದಲ ಹೆಜ್ಜೆಯಾಗಿ ಇಂಗ್ಲೆಂಡಿನಲ್ಲಿ ಕಾಲಿಟ್ಟಾಗ ವರ್ಮರ ಸೂಟ್ಕೇಸ್ ಮತ್ತಾವುದೋ ದೇಶಕ್ಕೆ ಪಲಾಯನ ಮಾಡಿತ್ತು. ನನ್ನದೂ ಅಷ್ಟೇ. ಪುಣ್ಯವಶಾತ್ ಅದು ಹೇಗೋ ಒಂದೇ ದಿನಕ್ಕೆ ಮರಳಿ ಕೈಗೆ ಬಂದವು. ಆದರೆ ವರ್ಮರ ಪೆಟ್ಟಿಗೆ ತೆಗೆದಾಗ ಕಂಡದ್ದು ಮಸಿಯಾದ ಬಟ್ಟೆಗಳ ರಾಶಿ! ಚಿತ್ರಕ್ಕೆ ಬೇಕಾದ ಸಾಮಗ್ರಿಗಳುಳ್ಳ ಪೆಟ್ಟಿಗೆಯಲ್ಲಿಡಬೇಕಾದ ಇಂಡಿಯನ್ ಇಂಕ್ ಡಬ್ಬಿಯನ್ನು ವರ್ಮ ಹೊರಡುವ ಅವಸರದಲ್ಲಿ ಬಟ್ಟೆಯ ಪೆಟ್ಟಿಗೆಯೊಳಗೆ ತುರುಕಿದ್ದರು. ಜೊತೆಗೆ ಅದರ ಮುಚ್ಚಳವನ್ನೂ ಗಟ್ಟಿಯಾಗಿ ಮುಚ್ಚಿರಲಿಲ್ಲ. ಹೀಗಾಗಿ ಹದಿನಾರು ಜೊತೆ ಉಡುಪುಗಳ ಪೈಕಿ ಹತ್ತಕ್ಕೂ ಹೆಚ್ಚಿನವು ಇಂಡಿಯನ್ ಇಂಕಿನಿAದ ಅಲಂಕೃತವಾಗಿದ್ದವು. ವಿದೇಶಕ್ಕೆ ಹೋಗುವಾಗ ಸ್ವದೇಶದ ಮುದ್ರೆ ಇರಬೇಡವೇ? ನನಗೆ ಅದನ್ನು ಕಂಡು ತುಂಬ ಸಂಕಟವಾಯಿತು. ಆದರೆ ವರ್ಮ ಚಿಂತಿಸಲೇ ಇಲ್ಲ.
ಅದೇ ಪ್ರವಾಸದಲ್ಲಿ ವಿಮಾನವಿನ್ನೇನು ಹ್ಯೂಸ್ಟನ್ನಿನ ನೆಲವನ್ನು ಮುಟ್ಟುವಾಗ ವರ್ಮ ಒಂದು ಸಂದೇಹ ವ್ಯಕ್ತಪಡಿಸಿದರು: “ಗಣೇಶರೇ, ಪ್ರವಾಸಕ್ಕೆ ಸಜ್ಜು ಮಾಡಿಕೊಳ್ಳುವಾಗ ಶಾಂತಂಗೆ ಸಹಾಯ ಆಗಲಿ ಅಂತ ನಾನೇ ನನ್ನ ಬಟ್ಟೆ ಒಗೆಯೋಕೆ ಹೋದೆ. ನನ್ನ ವಜ್ರದ ಉಂಗುರ ಬೆರಳಿಂದ ಜಾರಿ ಒಗೆಯುವ ಕಲ್ಲಿನ ಸಂದಿಯಲ್ಲಿ ಮಾಯವಾಯಿತು. ಹೇಳಿದರೆ ಶಾಂತಂಗೆ ಬೇಜಾರಾಗಿ ಬೈತಾಳೆ ಅಂತ ಸುಮ್ನೆ ಆದೆ, ಮರೆತೂಬಿಟ್ಟೆ. ಊರಿಗೆ ಹೋದ ಮೇಲೆ ಅದನ್ನ ಹುಡುಕಿ ತೊಗೋಬಹುದಲ್ವೇ?” ತುಂಬ ನಿರುದ್ವಿಗ್ನವಾಗಿ ಲೋಕಾಭಿರಾಮದ ಮಾತಿನಂತೆ ವರ್ಮರು ಆಡಿದ್ದನ್ನು ಕೇಳಿ ನಾನು ಕಂಗಾಲಾದೆ. ನಾವಿನ್ನು ತವರು ಸೇರುವುದು ತಿಂಗಳುಗಳ ಬಳಿಕ. ಅಲ್ಲಿಯವರೆಗೂ ವಜ್ರದುಂಗುರ ಬೆಚ್ಚಗೆ ಬಂಡೆಯ ಕೆಳಗೆ ಮಲಗಿರುವುದೇ? ಮತ್ತಾರಿಗಾದರೂ ಕಾಣಿಸದೆ ಹೋದೀತೇ? ಕಂಡವರು ಸದ್ದಿಲ್ಲದೆ ಕದ್ದೊಯ್ಯದೆ ಇರುವರೇ? ಹೀಗೆ ನನ್ನ ಸಂಶಯಪಿಶಾಚ ಚೀತ್ಕರಿಸಿತು. ವಿಮಾನ ನಿಲ್ದಾಣದಿಂದಲೇ ಅವರ ಮನೆಗೆ ಫೋನ್ ಮಾಡಿಸುವವರೆಗೆ ನಾನು ಸಮಾಧಾನದಿಂದ ಇರಲಿಲ್ಲ. ಆದರೆ ವರ್ಮ ಮಾತ್ರ ಏನೂ ಆಗಿಲ್ಲವೆಂಬಂತೆ ಶಾಂತರಾಗಿಯೇ ಇದ್ದರು. ಅವರ ಈ ನೆಮ್ಮದಿಯ ಗುಣವನ್ನು ನಾನು ತುಂಬ ಬಾರಿ ಕಂಡಿದ್ದೇನೆ. ಇದು ನನಗೆ ದಕ್ಕದ ಸಿದ್ಧಿ.
ಪ್ರಾಯಶಃ ಪ್ರತಿಯೊಂದು ಊರಿನಲ್ಲಿ ಕಾವ್ಯ-ಚಿತ್ರವಾದಾಗಲೂ ವರ್ಮರು ಅಲ್ಲಿ ನಮ್ಮ ಆತಿಥೇಯರಿಗೆಲ್ಲ ಚಿತ್ರಗಳನ್ನು ಆಗಿಂದಾಗ ಬರೆದುಕೊಟ್ಟು ಸಂತೋಷಪಡಿಸುತ್ತಿದ್ದರು. ಇವಕ್ಕೆ ನನ್ನಿಂದಲೂ ಆಶುಪದ್ಯಗಳನ್ನು ಬರೆಸುತ್ತಿದ್ದರು. ಅವರ ಈ ಕೊಡುಗೆ ವಿದೇಶದಲ್ಲೂ ಮುಂದುವರಿಯಿತು. ಆಗ ನಮ್ಮೊಡನೆ ನಾಲ್ಕು ಜನ ಯಕ್ಷಗಾನಕಲಾವಿದರೂ ಇದ್ದರು. ಅವರೆಲ್ಲರ ಸಹಿಗಳನ್ನು ಕೂಡ ತಮ್ಮ ಚಿತ್ರದ ಮೇಲೆ ಹಾಕಿಸಿ ನಮ್ಮೆಲ್ಲರ ಸಮಷ್ಟಿ ಉಡುಗೊರೆಯೆಂದು ಆತಿಥೇಯರಿಗೆ ಅರ್ಪಿಸುತ್ತಿದ್ದರು. ಇದು ನಾನು ಮತ್ತೆಲ್ಲಿಯೂ ಕಾಣದ ಔದಾರ್ಯ. ನಾನು ಬಲ್ಲಂತೆ ಸಣ್ಣತನ ವರ್ಮರ ಆಸುಪಾಸಿನಲ್ಲಿ ಕೂಡ ಸುಳಿದದ್ದಿಲ್ಲ.
* * *
ಚಿತ್ರಬ್ರಹ್ಮ ಬಿ.ಕೆ.ಎಸ್. ವರ್ಮರ ಕಲೆಯಂತೆಯೇ ಬದುಕೂ ಆಕರ್ಷಕ. ಅವರ ಚಿತ್ರಗಳಂತೆಯೇ ವ್ಯಕ್ತಿತ್ವ ಕೂಡ ಉದಾತ್ತ. ಇದನ್ನು ಮೂರು ದಶಕಗಳಿಂದ ಅನುಭವಿಸಲು ನನಗೆ ಅವಕಾಶ ನೀಡಿದ ನನ್ನ ಭಾಗಧೇಯಕ್ಕೆ ವಂದನೆ ಸಲ್ಲಿಸುತ್ತೇನೆ.
ವರ್ಣಗಳಿಗೆ ಚೈತನ್ಯ ಬಂದಿತೋ ಕುಂಚಕುಸಿರು ಬಂತೋ
ಊಹೆಗಳಿಗೆ ಬಣ್ಣಗಳು ಬಂದುವೋ ಕವಿತೆಗೊಡಲು ಬಂತೋ |
ವೇಗಕಿಲ್ಲಿ ರಸರಾಗ ಬಂದುದೋ ಎಂದು ಬಗೆಯುತಿರಲು
ಶ್ರೀನಿವಾಸ ನಿಮಗಿದುವೆ ನಮನ; ಮತ್ಕವನ ಕರಗುತಿರಲು ||
[ಈ ಲೇಖನವು ‘ಪಂಕ್ತಿಪಾವನರು’
(ವಸಂತ ಪ್ರಕಾಶನ, ೨೦೨೨) ಪುಸ್ತಕದಲ್ಲಿರುವ ವರ್ಮರ
ಬಗೆಗಿನ ವಿಸ್ತೃತ ಪ್ರಬಂಧದ ಹ್ರಸ್ವರೂಪ.]