ನಮಗೂ ಬೇರೆ ಎಲ್ಲಿಂದ ದುಡ್ಡು ಬರುತ್ತೆ? ದೇಶದ ಹಬ್ಬ, ನಾಡ ಹಬ್ಬ ಮತ್ತು ಸಾರ್ವಜನಿಕವಾಗಿ ಗಣೇಶೋತ್ಸವ ಇವಕ್ಕೆ ಮಾತ್ರ ಸಮ್ಮ ಸಂಘದಿಂದ ಒಂದು ಸ್ವಲ್ಪ ಹಣ ತೆಗೆದಿಡೋದು. ಉಳಿದದ್ದೆಲ್ಲ ಫಂಡ್ ರೈಸ್ ಮಾಡೋದೇ, ಬಿಟ್ರೆ ಬೇರೆ ದಾರಿ ಇಲ್ಲ’ ಸುಮ್ಮನೆ ತಲೆಯಾಡಿಸಿದೆ. ‘ನಮ್ಮ ಏರಿಯಾ ಮುಖಂಡರು ಹೆಲ್ಪ್ ಮಾಡ್ತಾರೆ, ಇಲ್ಲಿನ ಸಣ್ಣ ಪುಟ್ಟ ಸಮಸ್ಯೆ ಅಂದರೆ ಅವರನ್ನೇ ಹಿಡಿಯಬೇಕಲ್ಲ? ಅದಕ್ಕೆ ಅವರಿಗೂ ಇಂಥ ಸಮಾರಂಭಗಳಿಗೆ ಆಹ್ವಾನ ಕೊಡ್ತೀವಿ. ಇವತ್ತು ಅವರೂ ಬರೋವ್ರಿದ್ದಾರೆ. ನಾನು ಹೂಂಗುಟ್ಟಿದೆ. ‘ಇನ್ನೊಂದು ಸ್ವಲ್ಪ ಬಡಿಸಿಕೊಳ್ತೀರಾ? ಹೇಳಲಾ?’ ಎಂದಾಗ ‘ಬೇಡಿ ಸರ್, ಊಟದ ಹೊತ್ತಿಗೆ ಹೊಟ್ಟೇಲಿರೋದು ಕರಗಬೇಕಲ್ಲ’ ಎಂದು ನೀರು ಕುಡಿದು ಮೇಲೆದ್ದೆ.
ಪಾರ್ಕಿನ ಆವರಣದೊಳಗೆ ಕಾಲಿಡುತ್ತಿದ್ದಂತೆ, ಗೇಟಿನ ಪಕ್ಕಕ್ಕೆ ಇದ್ದ ಕಾರ್ಮಿಕರ ವಸತಿಗೃಹದತ್ತ ಕಣ್ಣು ಹಾಯಿಸಿದೆ. ಮೊದಲೆರಡು ಮನೆಗಳೂ ಬೀಗ ಜಡಿದಿವೆ. ‘ಊರಿಗೆ ಹೋಗಿದ್ದಾರೆ’ – ಅಲ್ಲೇ ಬಟ್ಟೆ ತೊಳೆಯುತ್ತಿದ್ದ ಹೆಂಗಸು ನನ್ನನ್ನು ಉದ್ದೇಶಿಸಿ ಹೇಳಿದಳು. ಅವಳ ಬದಿಗಿದ್ದ ಮೂರ್ನಾಲ್ಕು ವಯಸ್ಸಿನ ಪೋರ ನನ್ನನ್ನೇ ಆಸೆಕಂಗಳಿಂದ ನೋಡಿದಾಗ ‘ಬಾ’ ಎಂದು ಸನ್ನೆ ಮಾಡಿದೆ. ತಟ್ಟನೆ, ಒಮ್ಮೆ ಅಮ್ಮನತ್ತ ನೋಡಿ, ಸಮ್ಮತಿ ಸಿಕ್ಕಾಗ ಪುಟಪುಟನೆ ಓಡಿ ಬಂತು. ಜೇಬಿನಿಂದ ಚಾಕೋ-ಬಿಸ್ಕತ್ ಪೊಟ್ಟಣ ಕೊಟ್ಟು “ಏನು ನಿನ್ನ ಹೆಸರು?” ಎಂದು ಕೆನ್ನೆ ಸವರಿದೆ. “ಶಿವರಾಜ್” ಎಂದು ಗತ್ತಿನಲ್ಲಿ ಹೇಳಿ ಒಂದೇ ಉಸಿರಿಗೆ ಅಮ್ಮನ ಬಳಿ ಓಡಿತು.
ಮನೆಯಲ್ಲಿ ಹಣ್ಣು, ತರಕಾರಿ, ಸಿಹಿ – ಹೀಗೆ ಯಾವುದು ನನಗೆ ಹೆಚ್ಚು ಅನ್ನಿಸಿದರೂ ಪಾರ್ಕಿನ ಮಂದಿಗೆ ಕೊಡುತ್ತಿದ್ದೆ. ಅಲ್ಲಿದ್ದ ನಾಲ್ಕು ಮನೆಯವರೆಲ್ಲ ದಿನಕೂಲಿಯವರೇ! ವಲಸೆ ಬಂದಿರುವವರು- ಒಮ್ಮೊಮ್ಮೆ ಆರು ತಿಂಗಳಿಗೆ ಕೆಲವರು ಬದಲಾಯಿಸುತ್ತಿದ್ದದ್ದೂ ಉಂಟು. ಮನೆಗೆರಡು ಮಕ್ಕಳು ಎಂಬಂತೆ ಎರಡು ಮನೆಯಿಂದ ನಾಲ್ಕು, ಮತ್ತೊಂದರ ಮಹಿಳೆ ತುಂಬು ಗರ್ಭಿಣಿ, ಕೊನೆಯ ಮನೆಯ ಮಗು ಈ ಶಿವರಾಜ್. ಆ ಮಕ್ಕಳಲ್ಲೇ ಸ್ವಲ್ಪ ದೊಡ್ಡವಳು ಅನ್ನಿಸಿದ ಹೆಣ್ಣು ಮಗಳು ಮತ್ತು ಅವಳ ತಮ್ಮ ಶಾಲೆಗೆ ಹೋಗ್ತಿರಲಿಲ್ಲ ಎಂಬ ವಿಷಯ ತಿಳಿದಾಗ ಕಾರಣ ಕೇಳಿದ್ದೆ. “ಇಲ್ಲಿ ಸೇರಿಸೋಕ್ಕೆ ಟಿಸಿ ಬೇಕು ಅಂದ್ರು ಸಾರ್, ನಾವು ಊರಿಂದ ತರ್ಬೇಕು’ ಎಂದಿದ್ದ ಅವರ ಅಪ್ಪ, ತೆಂಗಿನ ಪೊರಕೆಯನ್ನು ದೊಡ್ಡ ಕೋಲಿಗೆ ಸಿಗಿಸಿ ಸುತ್ತಲೂ ಗಟ್ಟಿಯಾಗಿ ದಪ್ಪ ಹುರಿಯಿಂದ ಬಿಗಿಯುತ್ತ. ‘ಅದೇನು ಕಷ್ಟವಲ್ಲ, ಇಲ್ಲಿ ಶಾಲೆಯಲ್ಲಿ ಅರ್ಜಿ ಕೊಟ್ಟರೆ ನಿಮ್ಮ ಕೆಲಸ ಆಗುತ್ತಲ್ಲ? ಅದಕ್ಕೆ ಮಕ್ಕಳನ್ನು ಮನೆಯಲ್ಲಿ ಯಾಕೆ ಕೂರಿಸ್ತೀರಿ? ಎಂದೆ. “ಹಾಗಲ್ಲ ಸಾರ್, ಇವತ್ತು ಈ ಜಾಗ, ನಾಳೆ ಎಲ್ಲೋ? ಕಾಂಟ್ರಾಕ್ಟರ್ ಎಲ್ಲಿಗೆ ಯಾವಾಗ ಕಳಿಸಿದರೂ ನಾವು ಹೋಗ್ತಾ ಇರ್ಬೇಕು. ಇಲ್ಲಿ ಸೇರಿಸಿ ಮತ್ತೆ ಸ್ವಲ್ಪ ತಿಂಗಳಿಗೆ ಇನ್ನೊಂದು ಕಡೆ ಅಂದ್ರೆ ಕಷ್ಟ ಆಗುತ್ತೆ” ಅಂದಾಗ ಅವನ ಮುಗ್ದತೆ, ಅಂಜಿಕೆ ನೋಡಿ ಕನಿಕರವೆನಿಸಿತು. ‘ಆದರೂ ಮಕ್ಕಳು ಸುಮ್ಮನೆ ಇಲ್ಲ ಸಾರ್, ಟ್ಯೂಷನ್ಗೆ ಹೋಗ್ತಾರೆ’ ಎಂದ. ಮಕ್ಕಳು ಎಷ್ಟನೇ ತರಗತಿಯಲ್ಲಿ ಇರಬೇಕಿತ್ತು ಎಂದು ವಿಚಾರಿಸಿಕೊಂಡೆ. ಪಾರ್ಕಿನ ಇನ್ನೊಂದು ಬದಿಗಿರುವ ಕಾರ್ಪೊರೇಷನ್ ಶಾಲೆಯಲ್ಲಿ ನನ್ನ ಗೆಳೆಯನ ಅಕ್ಕ ಟೀಚರ್. ತಾತ್ಕಾಲಿಕವಾಗಿ ಏನಾದರು ಸಹಾಯವಾದರೆ ಮಾಡಬೇಕು ಅಂದುಕೊಂಡು ಅವರಲ್ಲಿ ಮಾತನಾಡಿದೆ.
‘ಟಿ.ಸಿ. ಬರುವ ತನಕ ಆಯಾ ಕ್ಲಾಸ್ನಲ್ಲಿ ಬಂದು ಕೂರಲಿ. ತಾವೇ ಟಿ.ಸಿ. ತರಿಸೋಕ್ಕೆ ಆಗುತ್ತಾ ವಿಚಾರಿಸ್ತೀನಿ, ಓದುವ ಮಕ್ಕಳಿಗೆ ತಾಂತ್ರಿಕ ಕಾರಣದಿಂದ ಕಲಿಕೆ ನಿಲ್ಲೋದು ಬೇಡ. ನಾಳೆ ಸೋಮವಾರ ರಜೆ ಇದೆ, ಬುಧವಾರದಿಂದ ಬರಲಿ’ ಅನ್ನುವ ಮಟ್ಟಿಗೆ ಶಾಲೆಯಿಂದ ಭರವಸೆ ಸಿಕ್ಕಿತು. ನನ್ನ ಕೆಲಸದ ಅವಧಿ ಬೆಳಗ್ಗೆ ಹನ್ನೊಂದರಿಂದ ಎಂಟು. ಒಂದು ದಿನದ ಮಟ್ಟಿಗೆ ಮನೆಯಿಂದ ಲಾಗಿನ್ ಆಗುವೆ ಎಂದು ಟಿ.ಎಲ್.ಗೆ ಹೇಳಿದರಾಯಿತು ಎಂದುಕೊಂಡು “ಮೊದಲ ದಿನ, ಮಕ್ಕಳೊಂದಿಗೆ ನಾನೇ ಬರುವೆ” ಎಂದು ಖಾತರಿ ನೀಡಿ ಥ್ಯಾಂಕ್ಸ್ ಹೇಳಿದ್ದೆ.
ಎರಡು ದಿನದಿಂದ ಬೆಳಗಿನ ವಾಕಿಗೆ ಪಾರ್ಕಿಗೆ ಬಂದಿರಲಿಲ್ಲ. ಇವತ್ತು ಮಕ್ಕಳಿಗೆ ಶಾಲೆಯ ಬಗ್ಗೆ ಹೇಳೋಣ ಅಂದುಕೊಂಡರೆ ಊರಿಗೆ ಹೋಗಿದ್ದಾರೆ. ಎಂದು ಬರುವರೋ ತಿಳಿಯದು- ನೋಡುವ ಎಂದುಕೊಂಡು ಹತ್ತು ನಿಮಿಷದ ನಡಿಗೆಯ ನಂತರ ನಾನು ಮಾಮೂಲಾಗಿ ಕುಳಿತುಕೊಳ್ಳುವ ಕಲ್ಲುಬೆಂಚಿನಲ್ಲಿ ಕುಳಿತೆ. ಸೂರ್ಯನ ಕಿರಣ ನೇರ ನನ್ನ ಮೈ ಮೇಲೆ ಬೀಳುತಿತ್ತು. ಚಪ್ಪಲಿ ಬಿಚ್ಚಿ ಕೈಕಾಲು ಸ್ವಲ್ಪ ಆಡಿಸಿದೆ. ಯಥೇಚ್ಛವಾಗಿ ಸಿಗುವ ವಿಟಮಿನ್-ಡಿ ಹೀಗೆ ನೇರ ಸೂರ್ಯದೇವನಿಂದ ಪಡೆಯುವುದು ಎಷ್ಟು ಚಂದ! ಈ ವೈದ್ಯ ಒಂದು ಕಾಸೂ ಕೇಳೋಲ್ಲ, ಪುಕ್ಕಟೆಯಾಗಿ ಯಾವುದೇ ಜಾತಿ-ಮತದ ಭೇದಭಾವವಿಲ್ಲದೆ ಹಂಚುತ್ತಾನೆ. ನಾವು ಬಳಸಿಕೊಳ್ಳದಿದ್ದರೆ ವಿಟಮಿನ್-ಡಿಯದ್ದೇ ದೊಡ್ಡ ಕೊರತೆ ಆ ನೆಪದಲ್ಲಿ ಮಾತ್ರೆ, ಔಷದಿ ಅಂತ ಒಂದಿಷ್ಟು ಖರ್ಚು. ನಗು ಬಂತು. ಮನಸ್ಸಿನಲ್ಲಿ ಆದಿತ್ಯ ಹೃದಯ ಹೇಳಿಕೊಳ್ಳುತ್ತಲೇ ಕಣ್ಮುಚ್ಚಿ ಸೂರ್ಯನತ್ತ ಮುಖ ಮಾಡಿದೆ. ಎಳೆಬಿಸಿಲು ಹಿತವಾಗಿತ್ತು. ಸಾಕೆನಿಸಿದಾಗ ಮಖ ಇಳಿಸಿ ನೆಲದತ್ತ ನೋಡಿದೆ. ಯಾರೋ ಚೆಲ್ಲಿದ್ದ ಸಕ್ಕರೆ ಕಣಗಳನ್ನು ಶ್ರದ್ದೆಯಿಂದ ಸರತಿಯಲ್ಲಿ ಇರುವೆಗಳು ಸಾಗಿಸುತ್ತಿದ್ದದು ನೋಡಿ ಕಣ್ಣರಳಿಸಿದೆ. ಏನೋ ನೆನಪಾಗಿ ನಾನು ಬಾಯಾಡಲು ತಂದಿದ್ದ ಎರಡು ಬಿಸ್ಕತ್ತಿದ್ದ ಪೊಟ್ಟಣದಿಂದ ಒಂದನ್ನು ತೆಗೆದು ಕೈಯಲ್ಲೇ ಪುಡಿಪುಡಿಮಾಡಿ ಅಲ್ಲಲ್ಲಿ ಚೆಲ್ಲಿ ಮತ್ತೊಂದನ್ನು ನಾನು ತಿನ್ನತೊಡಗಿದೆ. ಮಣ್ಣಿನ ಬಣ್ಣಕ್ಕಿದ್ದ ಬಿಸ್ಕತ್ತನ್ನು ಗ್ರಹಿಸಿದ ಇರುವೆಗಳು, ಈಗ ಹೊಸ ಆಹಾರದತ್ತ ಗಮನ ಚೆಲ್ಲಿದವು. ಮತ್ತೆ ಸಾಗಾಣಿಕೆ ಶುರು. ತಮಗಿಂತ ಗಾತ್ರದಲ್ಲಿ ದೊಡ್ಡದಾದ ತುಂಡುಗಳನ್ನುಹೊತ್ತು ಹರಸಾಹಸದಿಂದ ಚಲಿಸತೊಡಗಿದವು. ಒಂದೆರಡರ ಚಲನೆಯನ್ನೇ ವಿಸ್ಮಯದಿಂದ ಗಮನಿಸತೊಡಗಿದೆ. ಅವಕ್ಕೆ ಅಡ್ಡಲಾಗಿ ಒಂದು ಸಣ್ಣ ಕಲ್ಲು. ತಕ್ಷಣ ಆ ಕಲ್ಲನ್ನು ಅಲ್ಲಿಂದ ಸರಿಸಿದೆ. ಈಗ ಸರಾಗವಾಗಿ ಮುಂದುವರಿಯಿತು. ಪರೋಕ್ಷವಾಗಿ ನನಗೆ ಥ್ಯಾಂಕ್ಸ್ ಹೇಳುತ್ತಿರಬಹುದೇ ಅನ್ನಿಸಿ, ಹಿಂದೆಯೇ ನನ್ನ ಯೋಚನೆಗೆ ನಗು ಬಂತು. ಹೇಗೋ ಒಂದಷ್ಟು ದಿನಕ್ಕೆ ಇರುವೆಗೆ ಆಹಾರ ಒದಗಿಸಿದ ತೃಪ್ತಿ. ಅದು ಕೇಳದಿದ್ದರೂ!
ಅರೆ, ನನಗೂ ಹಾಗೆ ಅಲ್ಲವೇ ಆಗಿರುವುದು? ಇಲ್ಲದಿದ್ದರೆ ಎಲ್ಲೋ ಪಿ.ಜಿ.ಯಲ್ಲಿದ್ದ ನನಗೆ ಹೀಗೊಂದು ಆಸರೆ? ನಾನು ಕೇಳಿದ್ದಲ್ಲ.
ನನ್ನ ಆಫೀಸಿನಲ್ಲಿ ಕೆಲಸ ಮಾಡುತ್ತಿದ್ದ ಸೀನಿಯರ್ ಸಂದೇಶ್ ನಮ್ಮ ಊರಿನವನೇ ಎಂದು ತಿಳಿದಾಗ ಕೆಲಸದ ಮೇಲೆ ಅಕ್ಕರೆ ಮತ್ತು ವಿಶ್ವಾಸ ಎರಡೂ ಹೆಚ್ಚಾಗಿತ್ತು. ತಪ್ಪುಒಪ್ಪಾದರೂ ಅವನನ್ನು ಆಶ್ರಯಿಸಬಹುದು ಎಂಬ ಧೈರ್ಯ. ಅವನಿಗೆ ವಿದೇಶದಲ್ಲಿ ಪ್ರಾಜೆಕ್ಟ್ ಮೇಲೆ ತೆರಳುವ ಅವಕಾಶ ಸಿಕ್ಕಾಗ, ತಾನಿದ್ದ ಫ್ಲಾಟ್ನಲ್ಲಿ ನನ್ನನ್ನು ತಂಗಲು ಹೇಳಿದ್ದ. ‘ವರ್ಷವೋ ಎರಡು ವರ್ಷವೋ ಗೊತ್ತಿಲ್ಲ ಬಾಡಿಗೆಗೆ ಬಿಡಲು ಮನಸ್ಸಿಲ್ಲ. ನೀನೇ ಇರು’ ಎಂದು ನಂಬಿಕೆಯಿಂದ ಧಾರಾಳತನ ತೋರಿದ್ದ. ‘ಅಮ್ಮ ಯಾವಾಗಲಾದರೂ ಊರಿನಿಂದ ಮದುವೆ, ಮುಂಜಿ ಅಂತ ಬಂದರೆ ಇಲ್ಲೇ ಇಳ್ಕೋತಾರೆ. ಆ ಸಮಯದಲ್ಲಿ ನೀನೂ ಸ್ವಲ್ಪ ಸಹಾಯ ಮಾಡು’ ಎಂದಿದ್ದ.
‘ನನ್ನ ಅಮ್ಮಅಪ್ಪ ಬರಬಹುದಾ?’ ಸಂಕೋಚದಿಂದ ಕೇಳಿದ್ದೆ. ‘ಅದನ್ನೂ ಕೇಳ್ಬೇಕಾ? ನಿನ್ನ ಮನೆ ಅಂತ ನೋಡ್ಕೋ ಸಾಕು, ತಿಂಗಳ ನಿರ್ವಹಣೆ ಮೂರುಸಾವಿರ ಕಟ್ಟಬೇಕು ಮತ್ತು ವಿದ್ಯುತ್ ಬಿಲ್ ಅಷ್ಟೇ’ ಮುಂದುವರಿದು, ‘ರಜೆ ಗಿಜೆ ತೊಂದರೆಯಾದರೆ, ನನಗೆ ಹೇಳು ಐ ವಿಲ್ ಮ್ಯಾನೇಜ್’ ಎಂದಿದ್ದು ಇನ್ನೊಂದಷ್ಟು ಧೈರ್ಯ ಬಂದಿತ್ತು. ನನ್ನ ಟಿಎಲ್ ಸ್ವಲ್ಪ ಸ್ಟ್ರಿಕ್ಟು. ಸಂದೇಶನ ಜೊತೆ ಗುರ್ತಿಸಿಕೊಂಡ ಮೇಲೆ ಸ್ವಲ್ಪ ತೆಪ್ಪಗಾಗಿದ್ದ. ಈ ತೆರನಾದ ಸಣ್ಣಪುಟ್ಟ ರಾಜಕೀಯ ಎಲ್ಲ ಕಡೆ ಇರುವುದೇ. ಅವಕಾಶವಾದಾಗ ನಮ್ಮ ಬೇಳೆ ಬೇಯಿಸಿಕೊಳ್ಳಬೇಕು, ಆದರೆ ಇತರರ ಪಾಲು ಕಿತ್ತುಕೊಳ್ಳಬಾರದು ಅಷ್ಟೇ! ಇದು ನನ್ನ ನಿಯಮ.
ಪಿಜಿಗೆ ಕೊಡುತ್ತಿದ್ದ ಹನ್ನೆರಡು ಸಾವಿರದಲ್ಲಿ ನೀರು ವಿದ್ಯುತ್ತಿನ ಪಾಲೂ ಸೇರಿರುತ್ತಿತ್ತು. ಸಂದೇಶ ಸ್ವತಃ ಅಡುಗೆ ಮಾಡಿಕೊಳ್ಳುತ್ತಿದ್ದ – ಹೀಗಾಗಿ ಆ ಪರಿಕರಗಳೆಲ್ಲ ಇದ್ದವು. ಅಷ್ಟರಮಟ್ಟಿಗೆ ಹೋಟೆಲಿಗೆ ಸುರಿವುದೂ ಉಳಿತಾಯವಲ್ಲ – ಕಾಣದ ದೇವರಿಗೆ ಕೈಮುಗಿದು ಪಿಜಿ ಖಾಲಿಮಾಡಿ ಈಗಿರುವ ಫ್ಲಾಟ್ ಪ್ರವೇಶಿಸಿದ್ದೆ.
‘ನಾಳೆ ಬೆಳಗ್ಗೆ ತಿಂಡಿ ಮಧ್ಯಾಹ್ನ ಹೋಮ, ಪೂರ್ಣಾಹುತಿ ನಂತರ ಊಟದ ವ್ಯವಸ್ಥೆ ಇದೆ, ನಿವಾಸಿಗಳೆಲ್ಲರೂ ಭಾಗವಹಿಸಿ ಸಮಾರಂಭ ಯಶಸ್ವಿಯಾಗಿಸಲು ಸಹಕರಿಸಬೇಕಾಗಿ ಕೋರಿಕೆ’ ಎಂಬ ಸಂದೇಶ ನಿವಾಸಿಗಳ ವಾಟ್ಸಾಪ್ ಗ್ರೂಪಿಗೆ ಬಿತ್ತು. ‘ನಮ್ಮ ಸಮುಚ್ಚಯದ ವಾರ್ಷಿಕೋತ್ಸವ, ಫಂಡ್ ರೈಸ್ ಮಾಡ್ತಿದ್ದೀವಿ.’ ಹದಿನೈದು ದಿನಗಳ ಹಿಂದೆ ಚಂದಾ ಕೇಳಲು ಕೆಲವು ಪದಾಧಿಕಾರಿಗಳು ಮನೆಮುಂದೆ ನಿಂತಾಗ ಐನೂರು ರೂಪಾಯಿ ಫೋನ್ ಪೇ ಮಾಡಿದ್ದು ನೆನಪಾಯಿತು. ಒಂದು ರೀತಿ ಒಳ್ಳೆಯದೇ ಆಯಿತು, ರಾತ್ರಿ ಊಟಕ್ಕೆ ಏನೋ ಒಂದು ನಡೆಯುತ್ತೆ. ಅಲ್ಲಿಯವರೆಗೂ ಬಿಡುವು’ ಎಂದುಕೊಳ್ಳುತ್ತ ಮನೆಯತ್ತ ಹೊರಟೆ. ಗೇಟಿನ ಬಳಿ ನನಗಾಗಿ ಶಿವರಾಜನ ತಾಯಿ ಕಾಯುತ್ತಿದ್ದು, ನನ್ನನ್ನು ನೋಡುತ್ತಲೇ ‘ಅವರಿಗೆ ಫೋನ್ ಹಾಕಿದ್ದೆ. ಸೋಮವಾರ ಸಾಯಂಕಾಲ ಬರ್ತಾರಂತೆ’ ಎಂದು ಸುದ್ದಿ ಕೊಟ್ಟಳು. ಅಂದರೆ ಬುಧವಾರ ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗಬಹುದು, ಗೊಂದಲವಿಲ್ಲ. ‘ಸರಿ’ ಎಂಬಂತೆ ನಕ್ಕು ಶಿವರಾಜನಿಗೆ ಟಾಟಾ ಮಾಡಿ ಗೇಟು ದಾಟಿದೆ.
* * *
ಸಮುಚ್ಚಯದ ಹಿಂಬದಿಯಲ್ಲಿದ್ದ ಪಾರ್ಟಿ ಹಾಲ್ನಲ್ಲಿ ನಿವಾಸಿಗಳಿಗೆ ಊಟ, ತಿಂಡಿಯ ವ್ಯವಸ್ಥೆ ಇತ್ತು. ನನ್ನ ಎಡಕ್ಕೆ ಕುಳಿತ ಸುಮಾರು ಎಪ್ಪತ್ತರ ಸಮೀಪದ ವ್ಯಕ್ತಿ ‘ನೀವು ಹೊಸಬರೆ? ಈ ಮೊದಲು ನೋಡಿದಂತಿಲ್ಲ’ ಎಂದಾಗ ನನ್ನ ಪರಿಚಯ ಮಾಡಿಕೊಂಡೆ. ‘ನಾನು, ಮುರಾರಿ ತ್ರಿವೇದಿ, ಇಲ್ಲಿಯ ಫೌಂಡರ್ ಮೆಂಬರ್ಗಳಲ್ಲಿ ನಾನೂ ಒಬ್ಬ. ಕಳೆದ ವರ್ಷ ನಾನೇ ಅಧ್ಯಕ್ಷನಾಗಿದ್ದೆ’ ಎಂದು ಪರಿಚಯಿಸಿಕೊಂಡಾಗ ಅಚ್ಚರಿ ಮತ್ತು ಸಂತೋಷ.
ಒಮ್ಮಿಂದೊಮ್ಮೆ ಆಗಿತ್ತು, ತ್ರಿವೇದಿ ಎಂದ ಕೂಡಲೇ ಕೇವಲ ಹಿಂದಿ ಅಥವಾ ಇಂಗ್ಲಿಷ್ ಮಾತಾಡುವರೇನೋ ಎಂಬ ಊಹೆ ಹುಸಿಯಾಗಿತ್ತು. “ತಮ್ಮಂಥ ಹಿರಿಯರ ಅನುಭವ, ಮಾರ್ಗದರ್ಶನ ಬೇಕು ಸರ್” ಎಂದೆ. ಅವರಿಗೆ ಖುಷಿಯಾಯಿತೇನೋ ಮುಖವರಳಿಸಿದರು. ಉಪ್ಪಿಟ್ಟಿನ ಜೊತೆ ಸಜ್ಜಿಗೆ ಬಡಿಸಿದಾಗ, “ಇದೇ ವರ್ಕ್ ಔಟ್ ಆಗೋದು ನಮ್ಮ ಬಜೆಟ್ಟಿಗೆ, ಅದೂ ಅಲ್ದೆ ಪೂರ್ಣಾಹುತಿ ಆಗಿ ಅನ್ನಸಂತರ್ಪಣೆ ಹೊತ್ತಿಗೆ ಲೇಟಾಗಿರುತ್ತೆ ಅಲ್ಲಿ ತನಕ ತಡೀಬೇಕಲ್ಲ? ನಾನೇ ಸಜೆಸ್ಟ್ ಮಾಡಿದ್ದು” ಎಂದರು “ಅದೂ ನಿಜ, ಈ ತುಟ್ಟಿ ಕಾಲದಲ್ಲಿ ತುಂಬಾನೇ ಯೋಚನೆ ಮಾಡಬೇಕು” ಎಂದೆ. “ಇನ್ನೊಂದು ವಿಷಯ ತಪ್ಪಾಗಿ ತಿಳ್ಕೊಬೇಡಿ, ತೀರಾ ನೂರೋ, ಇನ್ನೂರೋ ಡೊನೇಟ್ ಮಾಡಿ ನಾಲ್ಕೈದು ಮಂದಿ ಒಂದು ಮನೆಯಿಂದ ಬರ್ತಾರೆ, ಕೊಡೋದರಲ್ಲೂ ಕಂಜೂಸ್ ಇದಾರೆ. ಆದರೆ ವಿತರಣೆ ಅಂದ ಕೂಡಲೇ ಮನೆಮಂದಿಯೆಲ್ಲ ಬರ್ತಾರೆ” ಎಂದು ಕಣ್ಣು ಮಿಟುಕಿಸಿದರು ಬದಲಿಗೆ ನಾನು ನಕ್ಕೆ.
“ನಮಗೂ ಬೇರೆ ಎಲ್ಲಿಂದ ದುಡ್ಡು ಬರುತ್ತೆ? ದೇಶದ ಹಬ್ಬ, ನಾಡ ಹಬ್ಬ ಮತ್ತು ಸಾರ್ವಜನಿಕವಾಗಿ ಗಣೇಶೋತ್ಸವ ಇವಕ್ಕೆ ಮಾತ್ರ ಸಮ್ಮ ಸಂಘದಿಂದ ಒಂದು ಸ್ವಲ್ಪ ಹಣ ತೆಗೆದಿಡೋದು. ಉಳಿದದ್ದೆಲ್ಲ ಫಂಡ್ ರೈಸ್ ಮಾಡೋದೇ, ಬಿಟ್ರೆ ಬೇರೆ ದಾರಿ ಇಲ್ಲ.” ಸುಮ್ಮನೆ ತಲೆಯಾಡಿಸಿದೆ. “ನಮ್ಮ ಏರಿಯಾ ಮುಖಂಡರು ಹೆಲ್ಪ್ ಮಾಡ್ತಾರೆ, ಇಲ್ಲಿನ ಸಣ್ಣಪುಟ್ಟ ಸಮಸ್ಯೆ ಅಂದರೆ ಅವರನ್ನೇ ಹಿಡಿಯಬೇಕಲ್ಲ? ಅದಕ್ಕೆ ಅವರಿಗೂ ಇಂಥ ಸಮಾರಂಭಗಳಿಗೆ ಆಹ್ವಾನ ಕೊಡ್ತೀವಿ. ಇವತ್ತು ಅವರೂ ಬರೋವ್ರಿದ್ದಾರೆ.” ನಾನು ಹೂಂ ಗುಟ್ಟಿದೆ. “ಇನ್ನೊಂದು ಸ್ವಲ್ಪ ಬಡಿಸಿಕೊಳ್ತೀರಾ? ಹೇಳಲಾ?” ಎಂದಾಗ “ಬೇಡಿ ಸರ್, ಊಟದ ಹೊತ್ತಿಗೆ ಹೊಟ್ಟೇಲಿರೋದು ಕರಗಬೇಕಲ್ಲ” ಎಂದು ನೀರು ಕುಡಿದು ಮೇಲೆದ್ದೆ.
* * *
ಮಕ್ಕಳ ಆಟಕ್ಕೆಂದು ಮೀಸಲಿಟ್ಟಿದ್ದ ಜಾಗದಲ್ಲಿ ಪೆಂಡಾಲ್ ಹಾಕಿ, ಒಂದು ಕಡೆಗೆ ಇಟ್ಟಿಗೆಯ ಕಟ್ಟೆ ಕಟ್ಟಿ ಕಬ್ಬಿಣದ ಹೋಮ ಕುಂಡ ಇರಿಸಲಾಗಿತ್ತು. ಅದರ ಬಳಿ ಪೂಜೆಯ ಸಾಮಗ್ರಿಗಳು, ಹೋಮಕ್ಕೆ ಕೂರುವ ಮಂದಿ, ಶ್ಲೋಕ-ಮಂತ್ರಾದಿಗಳನ್ನು ಹೇಳಲು ಪುರೋಹಿತರು – ಹೀಗೆ ಸುತ್ತಲೂ ಎರಡುಮೂರು ಅಡಿಯ ಜಾಗ ಬಿಟ್ಟಿದ್ದರು. ಸಮೀಪದಲ್ಲಿ ಕುಳಿತು ವೀಕ್ಷಿಸಲು ಜಮಖಾನಗಳನ್ನು ಹರಡಿದ್ದರು. ಇದರ ಹಿಂದೆ ಒಂದಷ್ಟು ಕುರ್ಚಿಗಳು. “ಬನ್ನಿ ಇಲ್ಲೇ ಕೂರೋಣವಂತೆ” ಎಂದು ಮೊದಲ ಸಾಲಿನ ಕುರ್ಚಿಯೆಡೆ ನಡೆದಾಗ ಅವರನ್ನು ಹಿಂಬಾಲಿಸಿದೆ. ತ್ರಿವೇದಿಯವರು ಮತ್ತೆ ಸಮುಚ್ಚಯದ ಬಗ್ಗೆ ಹೇಳತೊಡಗಿದರು.
“ಇಲ್ಲಿರುವವರಲ್ಲಿ ಬಹುತೇಕ ಅಪ್ಪರ್ ಮಿಡ್ಲ್ ಕ್ಲಾಸ್ನವರು. ಶೇಕಡಾ ಅರವತ್ತಕ್ಕಿಂತ ಹೆಚ್ಚು ಮನೆಗಳಲ್ಲಿ, ಮೊದಲು ಕೊಂಡವರೇ ಇದ್ದಾರೆ. ಕೆಲವು ಮನೆಗಳು ಎರಡುಮೂರೂ ಕೈ ದಾಟಿವೆ. ಉಳಿದವರು ಇನ್ವೆಸ್ಟ್ಮೆಂಟ್ಗೋಸ್ಕರ ಕೊಂಡವರೂ ಇದ್ದಾರೆ, ಅಲ್ಲೆಲ್ಲ ಬಾಡಿಗೆಯವರು ಇದ್ದಾರೆ. ಇಲ್ಲಿ ವಾಸಿಸದ ಮಾಲೀಕರಲ್ಲಿ ಬೆರಳೆಣಿಕೆಯಷ್ಟು ಮಾತ್ರ ಇವತ್ತು ಬಂದಿರ್ತಾರೆ.
“ಯು ನೋ, ಮಾಲೀಕರಲ್ಲಿ ಕೆಲವರು ಮಾಜಿ ಸೈನಿಕ ವೃಂದದವರೂ ಇದ್ದಾರೆ. ಅವರಿಗೆ ನಿರ್ವಹಣಾ ಶುಲ್ಕದಲ್ಲಿ ೨೦% ರಿಯಾಯಿತಿ ಕೊಟ್ಟಿದ್ದೀವಿ. ಇದನ್ನು ಪ್ರೊಪೋಸ್ ಮಾಡಿದ್ದು ನಾನೇ” ಎಂದು ಹೆಮ್ಮೆಯಿಂದ ಬೀಗಿದಾಗ “ಒಳ್ಳೆಯ ನಿರ್ಧಾರ ಸರ್, ಇದು ನಮ್ಮ ಕಡೆಯ ಕಿಂಚಿತ್ ಗೌರವ ಎಂದೇ ಭಾವಿಸಬೇಕು” ಎಂದು ಅನುಮೋದಿಸಿದೆ. “ಇಲ್ಲಿ ಪಾಲಿಟಿಕ್ಸ್ ಇಲ್ಲದಿಲ್ಲ, ಸಹನೆಯ ಮಟ್ಟ ಮೀರಿದರೆ ನಾನು ಅಖಾಡಕ್ಕೆ ಇಳಿಯುವುದೇ!” ಎಂದರು. ನಾನು ಮೆಚ್ಚುಗೆಯಿಂದ ಅವರನ್ನೇ ನೋಡಿದೆ. ತ್ರಿವೇದಿ ಮತ್ತೊಂದು ಇಂಚು ನನಗೆ ಆಪ್ತವಾಗಿದ್ದರು.
ನೋಡನೋಡುತ್ತಿದ್ದಂತೆ ಕುರ್ಚಿಗಳು ಭರ್ತಿಯಾದವು. ಹೋಮಕಟ್ಟೆಯ ಸುತ್ತಲೂ ಸಾಂಪ್ರದಾಯಿಕ ದಿರಸಿನಲ್ಲಿ ಗಂಡಸರು, ಜಮಖಾನದ ಮೇಲೆ ರೇಷ್ಮೆ ಸೀರೆಗಳಿಂದ ಸೆಳೆಯುತ್ತಿದ್ದ ಹೆಂಗಸರು, ಅಲ್ಲಿಂದಿಲ್ಲಿಗೆ ಓಡಾಡುತ್ತಿದ್ದ ಪುಟಾಣಿಗಳು… ಮುಖ್ಯ ಪುರೋಹಿತರು ಮೈಕಿನಲ್ಲಿ ಮಂತ್ರಗಳನ್ನು ಹೇಳುತ್ತಿದ್ದುದು ಸೌಂಡ್ ಬಾಕ್ಸ್ನ ಮೂಲಕ ಪೆಂಡಾಲಿನ ಆಚೆಗೆ, ಹೊರಗಿನವರಿಗೂ ಕೇಳುವಂತೆ ವ್ಯವಸ್ಥೆ ಮಾಡಲಾಗಿತ್ತು. ಒಂದು ರೀತಿ ಹಬ್ಬದ ವಾತಾವರಣ.
ಹೋಮದ ಅಗ್ನಿ ಜ್ವಲಿಸತೊಡಗಿತ್ತು.
‘ಇನ್ನು ಸ್ವಲ್ಪ ಹೊತ್ತಿನಲ್ಲಿ ಪೂರ್ಣಾಹುತಿಯಾಗುತ್ತದೆ. ದಯವಿಟ್ಟು ತಾಳ್ಮೆಯಿಂದ ಸಹಕರಿಸಿ’ ಎಂಬ ಅನೌನ್ಸ್ಮೆಂಟ್ ಕೇಳಿತು. ಎಣ್ಣೆಗೆಂಪು ಬಣ್ಣದ ರೇಷ್ಮೆ ವಸ್ತçದ ಗಂಟೊಂದನ್ನು ಸ್ಟೀಲಿನ ಹರಿವಾಣದಲ್ಲಿಟ್ಟುಕೊಂಡು ಮಧ್ಯವಯಸ್ಕರೊಬ್ಬರು ಸಭಿಕರತ್ತ ನಡೆಯತೊಡಗಿದರು. ಭಕ್ತಾದಿಗಳೆಲ್ಲ ನಾಣ್ಯಗಳನ್ನು ಹರಿವಾಣದಲ್ಲಿ ಹಾಕಿ ಗಂಟನ್ನು ಕಣ್ಣಿಗೊತ್ತಿಕೊಂಡರು. “ಇದೋ ನಾನು ಐದು ರೂಪಾಯಿಯ ನಾಲ್ಕೈದು ನಾಣ್ಯಗಳನ್ನು ತಂದಿದ್ದೀನಿ. ಈ ನಾಣ್ಯಗಳನ್ನು ಆ ಗಂಟಿನೊಳಗೆ ಸೇರಿಸಿ ಹೋಮಕುಂಡಕ್ಕೆ ಅರ್ಪಿಸ್ತಾರೆ. ಸಂಜೆ ಹೊತ್ತಿಗೆ ಬೆಂಕಿ ತಂಪಾದಾಗ, ರ್ರಗಾದ ನಾಣ್ಯಗಳನ್ನು ಜೋಪಾನವಾಗಿ ಎತ್ತಿಟ್ಟುಕೊಂಡು ಧನ್ಯರಾಗ್ತಾರೆ” – ತ್ರಿವೇದಿ ಹೇಳಿದಾಗ ನಾನೂ ಎರಡು ಐದು ರೂಪಾಯಿಯ ನಾಣ್ಯಗಳನ್ನು ತೆಗೆದಿಟ್ಟುಕೊಂಡು, ನಮ್ಮ ಸರದಿ ಬಂದಾಗ ಪೂರ್ಣಾಹುತಿಗೆಂದು ಸಲ್ಲಿಸಿ ನಮಸ್ಕರಿಸಿಕೊಂಡೆ. ಮುಂದಿನ ಹದಿನೈದು ನಿಮಿಷದಲ್ಲಿ ಪೂರ್ಣಾಹುತಿಯಾಗಿತ್ತು. “ಯಾಕೋ ಆಹ್ವಾನಿತ ಅತಿಥಿಗಳು ಇನ್ನೂ ಬಂದಿಲ್ಲ, ಅವರಿಗೆ ಪೂರ್ಣಾಹುತಿಗೆ ಸಾಕ್ಷಿಯಾಗೋದು ಮ್ಯಾಟರ್ ಆಫ್ ಪ್ರೆಸ್ಟೀಜ್” ತ್ರಿವೇದಿ ಗೊಣಗಿಕೊಂಡರು. ಇದಾವುದರ ಪರಿವೆಯೂ ಇಲ್ಲವೆಂಬಂತೆ ಅಗ್ನಿ ಧಗಧಗನೆ ಉರಿಯೆಬ್ಬಿಸಿತು.
“ನಮಸ್ತೇ ಜೀ” ಸಣ್ಣ ತುರುಬು, ಮಲ್ಲಿಗೆ ಹೂ ಮುಡಿದ ಸುಮಾರು ಐವತ್ತರ ಆಸುಪಾಸಿನ ಹೆಂಗಸು, ತ್ರಿವೇದಿಯ ಗಮನ ಸೆಳೆದರು.
“ಓಹ್ ಮಿಸೆಸ್ ಅಮಲಾ, ಹೌ ಆರ್ ಯೂ? ಯಾವಾಗ ಬಂದಿರಿ?”
“ನಿನ್ನೆ ರಾತ್ರಿಯಾಗಿತ್ತು, ಇನ್ನೇನು ಮುಂದಿನ ತಿಂಗಳಿಂದ ಇಲ್ಲೇ ಇರ್ತೀನಿ. ಪೂರ್ಣಾಹುತಿಗೆ ನನ್ನ ಸಮರ್ಪಣೆ ಇಲ್ಲಿದೆ?”
ಬುಟ್ಟಿಯಲ್ಲಿದ್ದ ರವಿಕೆ ಕಣ, ಒಣಕೊಬ್ಬರಿ ಮೊದಲಾದ ಸಾಮಗ್ರಿ ನನ್ನ ಕಣ್ಣಿಗೆ ಬಿತ್ತು.
“…ಮತ್ತೆ ಸಿಗೋಣ, ನಮಸ್ತೆ” ಎಂದು ಹೆಂಗಸರ ಗುಂಪಿನತ್ತ ಹೊರಟರು.
ನನಗೇನು ಅರ್ಥವಾಗದೇ ತ್ರಿವೇದಿಯತ್ತ ಪಿಳಿಪಿಳಿ ನೋಡಿದೆ.
“ಮಿಸೆಸ್ ಅಮಲಾ ಅಂತ, ಹತ್ತು ವರ್ಷಗಳಿಂದ ಇಲ್ಲೇ ಇದ್ದಾರೆ ಸರಸ್ವತಿ ಬ್ಲಾಕ್, ಐದನೇ ಅಂತಸ್ತಿನಲ್ಲಿ. ನಾನು ಗೋದಾವರಿಯಲ್ಲಿ, ಹೇಳಿದ್ದೆನಲ್ಲ?”
“ನಾನೂ ಅದೇ ಬ್ಲಾಕಿನವನು ಆರನೇ ಅಂತಸ್ತು…”
“ಐದಾರು ತಿಂಗಳಾಯ್ತು, ಇವರ ಯಜಮಾನರು ರಾತ್ರಿ ಮಲಗಿದವರು ಮೇಲೇಳಲಿಲ್ಲ. ಅನ್ಯೋನ್ಯ ದಾಂಪತ್ಯ, ಒಬ್ಬನೇ ಮಗ ಮುಂಬೈನಲ್ಲಿ ಇದ್ದಾನೆ. ಮೊಮ್ಮೊಗ ಎಂಟನೇ ಕ್ಲಾಸಿಗೆ ಇಲ್ಲೇ ಜಾಯಿನ್ ಆಗಿದ್ದಾನೆ. ಇವರಿಗೂ ಸ್ವಲ್ಪ ದುಃಖ ಮರೆಯೋಕ್ಕೆ ಅವಕಾಶ. ಒಂದು ದಿನವೂ ಹೂವು ಮುಡಿಯದೇ ಹೊರಗೆ ಕಂಡವರಲ್ಲ. ಈಗಲೂ ಅದನ್ನೇ ಮುಂದುವರಿಸಿದ್ದಾರೆ. ಭೇಷ್ ಅನ್ಬೇಕು, ಆದರೆ ಇಲ್ಲಿ ಕೆಲವರಿಗೆ ಅಸಹನೀಯ. ಒಂಥರಾ ನೋಡ್ತಾರೆ. ಜನ ಯಾವಾಗ ಬದಲಾಗ್ತಾರೋ! ಇರಲಿ, ನಿನಗೆ ಆಮೇಲೆ ಪರಿಚಯಿಸ್ತೀನಿ, ಒಳ್ಳೆಯವರು; ಸಂಪರ್ಕದಲ್ಲಿರು” ಎಂದಾಗ ತ್ರಿವೇದಿ ಮೇಲಿದ್ದ ಗೌರವ ಮೂರ್ಮಡಿಯಾಯಿತು.
ಸಣ್ಣ ಗದ್ದಲ ನಮ್ಮನ್ನು ಸೆಳೆದಾಗ ಅರಿವಾದದ್ದು ಆಹ್ವಾನಿತ ಮುಖಂಡರ ಆಗಮನವೆಂದು. ಆತ ನಮ್ಮ ಕಡೆ ತಿರುಗಿದಾಗ, ತ್ರಿವೇದಿಯೊಂದಿಗೆ ಹೋಮಕುಂಡದತ್ತ ಹೆಜ್ಜೆ ಹಾಕಿದೆ.
“ಕ್ಷಮಿಸಿ, ನಮ್ಮ ಡ್ರೈವರ್ ದೊಡ್ಡಪ್ಪ ಹಠಾತ್ತಾಗಿ ತೀರಿಕೊಂಡರು, ಅವರಿಗೊಂದು ಅಂತಿಮ ನಮನ ಹಾಕಿ ಬರುವ ಹೊತ್ತಿಗೆ ತಡವಾಯಿತು” ಎಂದು ನಮಗೆ ಮಾತ್ರ ಕೇಳುವಂತೆ ಪಿಸುಗುಟ್ಟಿದಾಗ ಅವರ ಕಮಿಟ್ಮೆಂಟಿಗೆ ಮೆಚ್ಚುಗೆ ತೋರಿದರು ತ್ರಿವೇದಿ.
ಅಷ್ಟರಲ್ಲೇ ಅಧ್ಯಕ್ಷರು ಬಂದರು, “ಕ್ಷಮಿಸಿ ಅಡುಗೆ ವಿಚಾರದಲ್ಲಿ ಬಿಜಿ ಇದ್ದೆ. ನೀವು ಬಂದಿದ್ದು ತುಂಬಾ ಸಂತೋಷವಾಯಿತು” ಎಂದು ಸ್ವಾಗತಿಸಿದರು.
“ನನ್ನ ಕಿರುಕಾಣಿಕೆ” ಮುಖಂಡರು ಐನೂರರ ಸಣ್ಣ ಕಟ್ಟು ಅಧ್ಯಕ್ಷರ ಕೈಗಿಟ್ಟು, “ಪೂರ್ಣಾಹುತಿ ಆಗಿಹೋಯ್ತಾ, ಅದಕ್ಕೋಸ್ಕರ ಬಂದೆ” ಎಂದಾಗ ಹೇಗೆ ಉತ್ತರಿಸಬೇಕೋ ತಿಳಿಯಲಿಲ್ಲ. ಹೌದು ಎನ್ನಲೂ ಕಷ್ಟ ಇಲ್ಲ ಎನ್ನಲೂ ಸಂಕಟ.
ನಮ್ಮ ಕಷ್ಟ ಅರಿತವರಂತೆ, ಮುಖ್ಯ ಪುರೋಹಿತರ ಅನುಪಸ್ಥಿತಿಯಲ್ಲಿ ಅವರ ಕಿರಿಯ ಸಹಾಯಕ “ಅಮ್ಮಾ, ಆ ಬುಟ್ಟಿಯೊಂದಿಗೆ ಇಲ್ಲಿ ಬನ್ನಿ” ಎಂದು ಶ್ರೀಮತಿ ಅಮಲಾರನ್ನು ಕರೆದಾಗ ಆಕೆ ಲಗುಬಗೆಯಿಂದ ಅತ್ತ ಸಾಗಿದರು. ಮತ್ತೊಂದು ಹರಿವಾಣಕ್ಕೆ ಬುಟ್ಟಿಯಲ್ಲಿದ್ದ ಪೂರ್ಣಾಹುತಿಯ ಸಾಮಗ್ರಿಯನ್ನು ಹಾಕಿ ಗಂಟು ಅರಿಸಿನ, ಕುಂಕುಮವಿಟ್ಟು “ಇಲ್ಲಿ ಬನ್ನಿ ಸರ್, ಇದನ್ನು ಮುಟ್ಟಿ ನಮಸ್ಕರಿಸಿ” ಎಂದ. ಮುಖಂಡರು ಹಾಗೇ ಮಾಡಿದರು. ಅವರ ಹಿಂದೆ ನಾನು, ತ್ರಿವೇದಿ, ಶ್ರೀಮತಿ ಅಮಲಾ ಅದನ್ನು ಮುಟ್ಟಿ ಕಣ್ಣಿಗೊತ್ತಿಕೊಂಡ ನಂತರ, ಒಂದೆರಡು ಮಂತ್ರ ಪುಷ್ಪದೊಂದಿಗೆ ಅಗ್ನಿಗೆ ಅರ್ಪಿತವಾಯಿತು. ಅದರ ಮೇಲೆ ಸ್ವಲ್ಪ ತುಪ್ಪ ಸುರುವಿದಾಗ ಜ್ವಾಲೆ ಮೇಲೇಳತೊಡಗಿತು.
ನಾವೆಲ್ಲ ಮತ್ತೆ ಅಗ್ನಿಗೆ ಪ್ರದಕ್ಷಿಣೆ ಹಾಕಿ ವಂದಿಸಿದ್ದೂ ಆಯಿತು.
* * *
“ಅದ್ಯಾಕೋ ನನ್ನನ್ನು ಮೇನ್ ಪುರೋಹಿತ್ ಇಗ್ನೋರ್ ಮಾಡಿದರು, ನನ್ನವರು ಹೋದಾಗಿನಿಂದ ಹೀಗೇ ಟ್ರೀಟ್ ಮಾಡ್ತಾರೆ. ‘ಪೂರ್ಣಾಹುತಿಗೆ ಈಗಾಗಲೇ ರೆಡಿಯಾಗಿದೆ’ ಅಂತ ನನ್ನವನ್ನು ತೆಗೆದುಕೊಳ್ಳಲಿಲ್ಲ. ಆದರೆ ದೇವರು ದೊಡ್ಡವನು’ ಶ್ರೀಮತಿ ಅಮಲಾ ಕಣ್ತುಂಬಿಕೊಂಡರು. “ಇಗ್ನೋರ್ ಸಚ್ ಪೀಪಲ್, ಕೀಪ್ ಮೂವಿಂಗ್” ತ್ರಿವೇದಿ ಸಮಾಧಾನಪಡಿಸಿದರು.
ನಡೆವುದೊಂದೇ ಭೂಮಿ, ಕುಡಿವುದೊಂದೇ ನೀರು, ಸುಡುವಗ್ನಿಯೊಂದೇ ಇರುತಿರಲು ಕುಲಗೋತ್ರ, ನಡುವೆ ಎತ್ತಣದು – ಸರ್ವಜ್ಞ. ಪ್ರಾಥಮಿಕ ಶಾಲೆಯಲ್ಲಿ ಕಲಿತ ತ್ರಿಪದಿ ನೆನಪಾಯಿತು. ಎಲ್ಲ ಪಾಪಗಳನ್ನು ಸುಡುವ ಅಗ್ನಿಯ ಜ್ವಾಲೆ ಪ್ರಖರವಾಗತೊಡಗಿತು.