ಮದುವೆಯ ದಿನ ಹತ್ತಿರ
ಬರುತ್ತಿದ್ದಂತೆ ಸೂರಜ್ ಶಾಪಿಂಗ್
ಅದೂ ಇದೂ ಅಂತ ಬ್ಯುಸಿ ಆದ. ಬರಬರುತ್ತ ಅನನ್ಯಳಿಗೆ ಮೆಸೇಜ್ ಮಾಡುವುದು, ಕಾಲ್ ಮಾಡುವುದು ಕಡಮೆಯಾಯಿತು. ಇದರಿಂದ ಅನನ್ಯಳಿಗೆ ಏನೋ ಖಾಲಿ ಖಾಲಿ ಅನ್ನಿಸತೊಡಗಿತು.
ಯಾವುದರಲ್ಲೂ ಮನಸ್ಸಿಲ್ಲ ತಾನು ಸೂರಜ್ನನ್ನು ಅಷ್ಟೊಂದು ಹಚ್ಚಿಕೊಂಡುಬಿಟ್ಟಿದ್ದೀನಾ ಅನ್ನೋ ಸಂದೇಹ ಕಾಡತೊಡಗಿತು. ಅವಳಿಗೇ ಅರಿವಿಲ್ಲದಂತೆ ಸೂರಜ್ ಮೇಲೆ ಪ್ರೀತಿ ಹುಟ್ಟಿಕೊಂಡಿತ್ತು. ಅವನನ್ನು ತಿರಸ್ಕರಿಸಿ ತಪ್ಪು ಮಾಡಿದೆ ಎನಿಸತೊಡಗಿತು. ಸೂರಜ್ಗೆ ಈಗಲೂ ನನ್ನ ಮೇಲೆ ಪ್ರೀತಿ ಇದೆ, ಅವನು ನನ್ನನ್ನು ಖಂಡಿತಾ ಒಪ್ಪಿಕೊಳ್ಳುತ್ತಾನೆ, ಅವನ ಜೊತೆ ಮಾತನಾಡುವಂತೆ ಅಮ್ಮನಿಗೆ ತಿಳಿಸಬೇಕು ಎಂದು ರಜನಿಗೆ ಹೇಳಿದಳು.
ಅಡುಗೆಮನೆಯಲ್ಲಿ ರಾತ್ರಿಯ ಅಡುಗೆಗೆ ಸಿದ್ಧಮಾಡಿಕೊಳ್ಳುತ್ತಿದ್ದ ರಜನಿಯನ್ನು ಹಿಂದೆಯಿಂದ ಬಂದು ತಬ್ಬಿದಳು ಅನನ್ಯ. ಹಿಂದೆ ತಿರುಗಿ ಕಣ್ಣಲ್ಲಿ ನೀರು ತುಂಬಿಕೊಂಡು ನಿಂತಿದ್ದ ಮಗಳನ್ನು ಕಂಡು ರಜನಿ ಗಾಬರಿಯಾದಳು.
“ಏನಾಯ್ತು ಮಗಳೇ! ಯಾಕಮ್ಮಾ ಕಣ್ಣಲ್ಲಿ ನೀರು?” ಎಂದು ಕೇಳಿದಳು.
“ಅಮ್ಮಾ ನನಗೆ ಸೂರಜ್ನನ್ನು ಮರೆಯೋಕೆ ಆಗುತ್ತಿಲ್ಲಮ್ಮಾ, ಪ್ಲೀಸ್ ಅವನ ಜೊತೆ ಒಂದು ಸಲ ಮಾತಾಡು. ಅವನು ಖಂಡಿತಾ ನನ್ನನ್ನು ಒಪ್ಪಿಕೊಳ್ಳುತ್ತಾನೆ” ಎಂದಳು ಅನನ್ಯ.
“ನಿನಗೇನಾದರೂ ತಲೆಕೆಟ್ಟಿದೆಯೇನೇ? ಇನ್ನು ಹದಿನೈದು ದಿನದಲ್ಲಿ ಅವನ ಮದುವೆ ಇದೆ. ಈಗ ನಾನು ಮಾತನಾಡಲು ಹೊರಟರೆ ಅವನು, ಅವನ ಮನೆಯವರು ಏನೆಂದುಕೊಳ್ಳಲ್ಲ್ಲ ಹೇಳು?” ಎಂದಳು ರಜನಿ.
“ಅಮ್ಮಾ ಪ್ಲೀಸ್, ಒಂದು ಸಲ ಅಮ್ಮಾ…” ಎಂದು ಮಗಳು ಗೋಗರೆಯುತ್ತಿರುವುದನ್ನು ಕಂಡು ತಾಯಿಯ ಹೃದಯ ಮರುಗಿತು.
ಅನನ್ಯ, ವೆಂಕಟೇಶ್-ರಜನಿ ದಂಪತಿಯ ಏಕೈಕ ಮುದ್ದಿನ ಮಗಳು. ತುಂಬಾ ಜಾಣೆ, ಸರಳ ಸುಂದರಿ. ಅತಿ ಸೂಕ್ಷ್ಮ ಸ್ವಭಾವದ ಅನನ್ಯ ಒಳ್ಳೆಯ ವಿಧ್ಯಾಭ್ಯಾಸವನ್ನು ಹೊಂದಿ ಕೆಲಸದ ಬೇಟೆಯಲ್ಲಿ ತೊಡಗಿರುವಾಗ ಅವಳ ತಂದೆತಾಯಿಯರು ಅವಳಿಗೆ ಸೂಕ್ತ ವರನನ್ನು ಹುಡುಕಿ ಮದುವೆ ಮಾಡಬೇಕೆಂದು ವಧುವರಾನ್ವೇಷಣಾ ಕೇಂದ್ರದಲ್ಲಿ ಅವಳ ಹೆಸರನ್ನು ನೋಂದಾಯಿಸಿದರು. ಅಲ್ಲಿ ಅವಳ ಫೋಟೋ, ವಿವರಗಳನ್ನು ನೋಡಿ ಇಷ್ಟಪಟ್ಟು ಬಂದವನೇ ಸೂರಜ್.
ಬೆಂಗಳೂರಿನಲ್ಲಿ ಸಾಫ್ಟವೇರ್ ಕಂಪೆನಿಯೊಂದರಲ್ಲಿ ಇಂಜಿನಿಯರ್ ಆಗಿದ್ದ. ಒಬ್ಬಳೇ ಅಕ್ಕ ಮದುವೆಯಾಗಿ ಬೆಂಗಳೂರಿನಲ್ಲಿ ನೆಲೆಸಿದ್ದಳು. ವರ್ಕ್ ಫ್ರಂ ಹೋಮ್ ಇದ್ದ ಕಾರಣ ಸದ್ಯಕ್ಕೆ ತಂದೆತಾಯಿಯೊಡನೆ ತನ್ನ ಸ್ವಗ್ರಾಮದಲ್ಲಿ ನೆಲೆಸಿದ್ದ. ಸಾಧುಸ್ವಭಾವದ ಸೂರಜ್ ಮಿತಭಾಷಿ. ಅವನ ಅಪ್ಪ-ಅಮ್ಮ ವೆಂಕಟೇಶ್ ದಂಪತಿಗಳಿಗೆ ಕರೆ ಮಾಡಿ, ಅನನ್ಯಳನ್ನು ನೋಡಲು ಅವರೆಲ್ಲರೂ ಬೆಂಗಳೂರಿಗೆ ಬರುತ್ತಿರುವುದಾಗಿ ತಿಳಿಸಿದರು.
ನೋಡಲು ಲಕ್ಷಣವಾಗಿದ್ದ ಅನನ್ಯಳುಸೂರಜ್ ಮನೆಯವರಿಗೆಲ್ಲ ಹಿಡಿಸಿದಳು. ಆದರೆ ಅನನ್ಯ ಮಾತ್ರ ತಾನು ಸೂರಜ್ ಜೊತೆ ಮಾತನಾಡಿ ಅಭಿಪ್ರಾಯ ತಿಳಿಸುವುದಾಗಿ ಹೇಳಿದಳು. ಹೀಗೆ ಮೂರು-ನಾಲ್ಕು ಬಾರಿ ಇವರಿಬ್ಬರೂ ಕಾಫಿ ಶಾಪ್ನಲ್ಲಿ ಭೇಟಿಯಾಗಿ ಬಹಳ ಹೊತ್ತು ಮಾತನಾಡಿ ಬರುತ್ತಿದ್ದರು. ಬರಬರುತ್ತಾ ಸೂರಜ್ಗೆ ಅನನ್ಯ ತುಂಬ ಇಷ್ಟವಾಗತೊಡಗಿದಳು. ಅವನು ತನಗೆ ಮದುವೆಯಾಗಲು ಸಂಪೂರ್ಣ ಒಪ್ಪಿಗೆ ಇದೆಯೆಂದು ತಿಳಿಸಿದನು. ಆದರೆ ಅನನ್ಯ ಮಾತ್ರ ತನ್ನ ನಿರ್ಧಾರ ತಿಳಿಸಲಿಲ್ಲ. ನನಗೆ ಇನ್ನೂ ಟೈಮ್ ಬೇಕೆಂದು ಹೇಳುತ್ತಿದ್ದಳು. ಅವಳಿಗೆ ತಾನು ಬೆಂಗಳೂರಿನ ಕಾನ್ವೆಂಟ್ನಲ್ಲಿ ಓದಿದವಳು, ಅವನಿಗೆ ನನ್ನಷ್ಟು ಚೆನ್ನಾಗಿ ಇಂಗ್ಲಿಷ್ ಮಾತನಾಡಲು ಬರುವುದಿಲ್ಲ. ನಮ್ಮಿಬ್ಬರ ಯೋಚನಾಲಹರಿ ಬೇರೆಬೇರೆ ತರಹ, ನೋಡಲು ಕೂಡ ಸಾಧಾರಣವಾಗಿದ್ದಾನೆ. ನಾಳೆ ನನ್ನ ಸ್ನೇಹಿತೆಯರ ಮುಂದೆ ಅವಮಾನವಾಗಬಹುದೆಂದೆಲ್ಲ ಯೋಚಿಸುತ್ತಿದ್ದಳು. ಆದರೆ ಅವಳ ಅಪ್ಪ-ಅಮ್ಮ ಸೂರಜ್ ಒಳ್ಳೆಯ ಹುಡುಗ, ಅವರ ಮನೆತನ ಒಳ್ಳೆಯದು, ಒಳ್ಳೆಯ ಕೆಲಸದಲ್ಲಿ ಇದ್ದಾನೆ. ಎಲ್ಲಕ್ಕಿಂತಲೂ ಮಿಗಿಲಾಗಿ ನಿನ್ನನ್ನು ತುಂಬ ಇಷ್ಟಪಟ್ಟಿದ್ದಾನೆ. ಅವನ ಅಪ್ಪ, ಅಮ್ಮ, ಅಕ್ಕ ಎಲ್ಲರಿಗೂ ನೀನು ತುಂಬ ಇಷ್ಟವಾಗಿದ್ದೀಯಾ. ಅವನನ್ನು ಮದುವೆಯಾದರೆ ನೀನು ಸುಖವಾಗಿರಬಹುದು ಅಂತ ನಮಗನ್ನಿಸುತ್ತದೆ ಎಂದು ಹೇಳಿದರೂ ಅನನ್ಯಳಿಗೆ ಯಾಕೋ ಮನಸ್ಸಾಗುತ್ತಿರಲಿಲ್ಲ. ಕಡೆಗೆ ಒಂದು ದಿನ ಸೂರಜ್ಗೆ ಹೇಳಿಯೇಬಿಟ್ಟಳು:
ಮದುವೆಯಾಗಲು ನಮ್ಮಿಬ್ಬರ ವೇವ್ಲೆನ್ತ್ ಮ್ಯಾಚ್ ಆಗ್ತಾ ಇಲ್ಲ, ನಾವಿಬ್ಬರೂ ಒಳ್ಳೆಯ ಸ್ನೇಹಿತರಾಗಿ ಇರೋಣ. ಇದರಿಂದ ಸೂರಜ್ ಮನಸ್ಸಿಗೆ ಬಹಳ ಬೇಜಾರಾಯಿತು. ಅವನ ಮನಸ್ಸು ಅನನ್ಯಳನ್ನು ಬಾಳಸಂಗಾತಿ ಎಂದು ಒಪ್ಪಿಕೊಂಡಿತ್ತು. ಆದರೇನು ಮಾಡುವುದು, ಅವಳಿಗೇ ಇಷ್ಟವಿಲ್ಲದ ಮೇಲೆ? ಸೂರಜ್ ಮನೆಯಲ್ಲಿ ವಿಚಾರವನ್ನು ತಿಳಿಸಿದ. ‘ಬೇರೆ ಹುಡುಗಿ ಸಿಗುತ್ತಾಳೆ ಬಿಡು, ಬೇಜಾರಾಗಬೇಡ’ ಎಂದು ಸೂರಜ್ನ ಅಪ್ಪ, ಅಮ್ಮ ಸಮಾಧಾನಿಸಿದರು. ಅವರಿಬ್ಬರೂ ಸ್ನೇಹಿತರಂತೆ ದಿನ ಮೆಸೇಜ್ ಮಾಡುವುದು, ಫೋನ್ ಮಾಡಿ ಎಲ್ಲ ವಿಷಯಗಳನ್ನು ಹಂಚಿಕೊಳ್ಳುತ್ತಿದ್ದರು.
ಸ್ವಲ್ಪ ದಿನ ಕಳೆಯುವಷ್ಟರಲ್ಲಿ ಸೂರಜ್ಗೆ ಅವರ ಅಪ್ಪ, ಅಮ್ಮ ಹೊಸ ಸಂಬಂಧವನ್ನು ಹುಡುಕಿದರು. ಎರಡೂ ಕಡೆಯವರಿಗೆ ಸಂಬಂಧಗಳು ಒಪ್ಪಿಗೆಯಾಗಿ ಮದುವೆ ತೀರ್ಮಾನವಾಯಿತು. ಈ ವಿಷಯವನ್ನು ಸೂರಜ್, ಅನನ್ಯಳಿಗೆ ತಿಳಿಸಿ ಆ ಹುಡುಗಿಯ ಫೋಟೋವನ್ನು ತೋರಿಸಿದನು. ಚೆನ್ನಾಗಿದ್ದಾಳೆ ಕಣೋ ಮದುವೆ ಮಾಡಿಕೋ ಎಂದಳು ಅನನ್ಯ. ಈಗಲಾದರೂ ಮನಸ್ಸು ಬದಲಾಯಿಸಬಹುದೇನೋ ಎಂದು ಕಾದಿದ್ದ ಸೂರಜ್ಗೆ ಅನನ್ಯಳ ಮಾತಿನಿಂದ ನಿರಾಸೆಯಾಯಿತು. ಆದರೂ ತೋರಗೊಡಲಿಲ್ಲ. ಸ್ವಲ್ಪ ದಿನದಲ್ಲಿ ಅವನ ನಿಶ್ಚಿತಾರ್ಥ ನಡೆದು ಮದುವೆಯ ದಿನಾಂಕ ನಿಗದಿಯಾಯಿತು.
ಮದುವೆಯ ದಿನ ಹತ್ತಿರ ಬರುತ್ತಿದ್ದಂತೆ ಸೂರಜ್ ಶಾಪಿಂಗ್ ಅದೂ ಇದೂ ಅಂತ ಬ್ಯುಸಿ ಆದ. ಬರಬರುತ್ತ ಅನನ್ಯಳಿಗೆ ಮೆಸೇಜ್ ಮಾಡುವುದು, ಕಾಲ್ ಮಾಡುವುದು ಕಡಮೆಯಾಯಿತು. ಇದರಿಂದ ಅನನ್ಯಳಿಗೆ ಏನೋ ಖಾಲಿ ಖಾಲಿ ಅನ್ನಿಸತೊಡಗಿತು. ಯಾವುದರಲ್ಲೂ ಮನಸ್ಸಿಲ್ಲ ತಾನು ಸೂರಜ್ನನ್ನು ಅಷ್ಟೊಂದು ಹಚ್ಚಿಕೊಂಡುಬಿಟ್ಟಿದ್ದೀನಾ ಎನ್ನುವ ಸಂದೇಹ ಕಾಡತೊಡಗಿತು. ಅವಳಿಗೇ ಅರಿವಿಲ್ಲದಂತೆ ಸೂರಜ್ ಮೇಲೆ ಪ್ರೀತಿ ಹುಟ್ಟಿಕೊಂಡಿತ್ತು. ಅವನನ್ನು ತಿರಸ್ಕರಿಸಿ ತಪ್ಪು ಮಾಡಿದೆ ಎನಿಸತೊಡಗಿತು. ಸೂರಜ್ಗೆ ಈಗಲೂ ನನ್ನ ಮೇಲೆ ಪ್ರೀತಿ ಇದೆ, ಅವನು ನನ್ನನ್ನು ಖಂಡಿತಾ ಒಪ್ಪಿಕೊಳ್ಳುತ್ತಾನೆ, ಅವನ ಜೊತೆ ಮಾತನಾಡುವಂತೆ ಅಮ್ಮನಿಗೆ ತಿಳಿಸಬೇಕು ಎಂದು ನಿಶ್ಚಯಿಸಿ ರಜನಿಗೆ ಹೇಳಿದಳು.
ಬೆಳಗಾಗುತ್ತಲೇ ರಜನಿ ಸೂರಜ್ಗೆ ಕರೆ ಮಾಡಿ, ಅನನ್ಯ ನಿನ್ನನ್ನು ಒಪ್ಪಿರುವುದಾಗಿಯೂ ಮದುವೆಯಾಗಲು ಬಯಸುತ್ತಿರುವುದಾಗಿ ತಿಳಿಸಿದಳು. ಅವನಿಗೆ ಅನನ್ಯಳ ನಿರ್ಧಾರ ಅಚ್ಚರಿ ಹುಟ್ಟಿಸಿತು. “ಆಂಟಿ, ನಾನು ಈಗಾಗಲೇ ಇನ್ನೊಂದು ಹುಡುಗಿಗೆ ಮದುವೆಯಾಗುತ್ತೇನೆಂದು ಮಾತುಕೊಟ್ಟಿದ್ದೇನೆ. ನಿಶ್ಚಿತಾರ್ಥ ಮುಗಿದು ಮದುವೆಗೆ ಹದಿನೈದು ದಿನಗಳು ಮಾತ್ರ ಉಳಿದಿರುವಾಗ ನಾನು ನನ್ನ ನಿರ್ಧಾರ ಬದಲಿಸಿದರೆ ಅದು ನಾನು ಮದುವೆಯಾಗಲಿರುವ ಹುಡುಗಿಗೆ ಮಾಡುವ ಮೋಸ. ನನ್ನ ಆತ್ಮಸಾಕ್ಷಿ ಇದಕ್ಕೆ ಒಪ್ಪುವುದಿಲ್ಲ. ಮನಸ್ಸು ತುಂಬಾ ಸೂಕ್ಷ್ಮ ಆಂಟಿ, ಅದಕ್ಕೆ ಘಾಸಿಯಾಗಿ ಒಡೆದುಬಿಟ್ಟರೆ ಅದನ್ನು ಸರಿಪಡಿಸುವುದಕ್ಕೆ ಆಗುವುದಿಲ್ಲ. ಪ್ರೀತಿ ಎನ್ನುವುದು ಪದೇಪದೇ ಹುಟ್ಟಲು ಸಾಧ್ಯವಿಲ್ಲ, ಅದು ಸಿಕ್ಕಾಗ ಜೋಪಾನ ಮಾಡಿಕೊಳ್ಳಬೇಕು. ನಿಮ್ಮ ಮಗಳಿಗೆ ಎಲ್ಲ ರೀತಿಯಲ್ಲೂ ಸರಿಹೊಂದುವ ಹುಡುಗ ಸಿಗಲಿ ಅಂತ ಆಶಿಸುತ್ತೇನೆ, ಬೈ” ಎಂದು ಫೋನ್ ಕಟ್ ಮಾಡಿದ. ಸೂರಜ್ನ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದ ಅನನ್ಯಳ ದುಃಖದ ಕಟ್ಟೆ ಒಡೆಯಿತು.
‘ಹೋದೆಯ ದೂರ ಓ ಜೊತೆಗಾರ ಸೇರಲು ಬಂದಾಗ…’ ಹಾಡು ರೇಡಿಯೋದಲ್ಲಿ ಕೇಳಿಬರುತ್ತಿತ್ತು.