ನಿಂಗ್ ಇಷ್ಟ ಇಲ್ದೇ ಇರೂದನ್ನ ಬಿಡುಕ್ಕಲ್ಲ ಬಂದಿರೋದು ಇಲ್ಲಿಗೆ. ನೀನ್ ತುಂಬಾ ಹಚ್ಕೊಂಡಿರೂದನ್ನ ಬಿಡ್ಬೇಕು, ಯಾವ್ದು ಇಲ್ದೇ ನೀನ್ ಬದುಕಕ್ಕಾಗಲ್ಲ ಅನ್ಕೊಂಡರ್ತೀಯೋ ಅದನ್ನ ಬಿಡ್ಬೇಕು, ಬೇಡದೇ ಇರೂದನ್ನ ಕೊಡೋದು ದಾನ ಅಲ್ಲ, ಬೇಕಾಗಿರೂದನ್ನ ಕೊಡ್ಬೇಕು, ಅದು ತ್ಯಾಗ. ಕಾಮ, ಕ್ರೋಧ, ಲೋಭ, ಮೋಹ ಇವನ್ನೆಲ ಬಿಡ್ಬೇಕು ಅನ್ನೋದು ಪದ್ಧತಿ, ಆದ್ರೆ ಇವತ್ತಿನ್ ಕಾಲದಲ್ಲಿ ಅದನ್ನೆಲ್ಲ ಬಿಟ್ಟು ಯಾವೋನ್ ಬದುಕ್ತಾನೆ, ಅದಕ್ಕೆ ಕೊನೇಪಕ್ಷ ಯಾವ್ದಾದ್ರೂ ಒಂದು ವಿಷಯಾನ ಬಿಡೂದು ಆಚಾರ. ನೀನ್ ಏನೂ ಬಿಡ್ದೇ ಇದ್ರೂ ರ್ವಾಗಿಲ್ಲ, ಆದ್ರೆ ಶಾಸ್ತ್ರಕ್ಕೆ ಏನೋ ಒಂದು ಮಾಡ್ತೀನಿ ಅಂತ ಮಾಡೂದ್ ಬೇಡ ಆಯ್ತಾ. ದೇಶ ಬಿಟ್ ತಕ್ಷಣ ಮನುಷ್ಯ ಸಂಬಂಧಾನೂ ಮರೀತಾರೆ ಥೂ” ಎಂದು ಜೋರಾಗಿಯೇ ಬೈದರು
ಸುತ್ತ ನಿಂತಿರುವ ಜನ ತನ್ನತ್ತ ರಾಚುತ್ತಿರುವ ಭಕ್ತಿ, ಪರವಶತೆಯ ಭಾವಗಳಿಂದ, ಪಾಪಗಳನ್ನೆಲ್ಲ ಇವಳು ತೊಳೆಯುತ್ತಾಳೆ ಎಂದು ಬೆಟ್ಟು ಮಾಡಿ ತೋರಿಸಿ ತನ್ನನ್ನು ಕೇಳದೆ ಅನಾಮತ್ತಾಗಿ ಹೊರಿಸುತ್ತಿರುವ ಸಾವಿರ ಭಾರಗಳಿಂದ ತಪ್ಪಿಸಿಕೊಂಡು ಓಡಬೇಕು ಎನ್ನುವಂತೆ ಗಂಗೆ ರಭಸವಾಗಿಯೇ ಹರಿಯುತ್ತಿದ್ದಳು. ಅಲ್ಲಲ್ಲಿ ದೇಹಗಳನ್ನು ಸುಡುತ್ತಿರುವ ಸೌದೆಗಳು ಗಂಗೆಯ ಬಳಿ ಕ್ಷಮೆ ಕೇಳುವಂತೆ ಹೊಗೆಯಾಗಿ ಗಂಗೆಯತ್ತ ಬೀಸದೆ ವಿರುದ್ಧ ದಿಕ್ಕಿಗೆ ಬೀಸುತ್ತಿದ್ದವು. ಸಂಜೆಯ ಗಂಗಾರತಿಗೆ ಆಗಲೇ ಸಾಕಷ್ಟು ಜನ ಪೂಜಾರಿಗಳು ದೀಪ, ಎಣ್ಣೆಯನ್ನು ಅಣಿಗೊಳಿಸಿಕೊಳ್ಳುತ್ತಿದ್ದರು. ಒಂದಷ್ಟು ಟ್ರಾವೆಲ್ ಸಂಸ್ಥೆಯವರು ತಮ್ಮೊಂದಿಗೆ ದಕ್ಷಿಣ ಭಾರತದ ನಾನಾ ಜಾಗಗಳಿಂದ ಕರೆದುಕೊಂಡು ಬಂದಿರುವ ಪ್ರವಾಸಿ ಗುಂಪುಗಳನ್ನು ದೋಣಿ ಹತ್ತಿಸಿ, ಎಲ್ಲರಿಗೂ ಲೈಫ್ ಜಾಕೆಟ್ಟು ತೊಡಿಸುತ್ತ, ಗಂಗಾರತಿ ಶುರುವಾಗುವ ಮುನ್ನ ತ್ರಿವೇಣಿ ಸಂಗಮದಲ್ಲಿ ಅವರನ್ನು ಮುಳುಗು ಹಾಕಿಸಿ ವಾಪಸ್ ಕರೆದುಕೊಂಡು ಬಂದುಬಿಡುವ ಉಮೇದಿನಲ್ಲಿದ್ದರು. ದೋಣಿಯಲ್ಲಿ ಕುಳಿತಿದ್ದ ಒಂದಷ್ಟು ಮಹಿಳೆಯರು ಕೆಳಗಿನ ನದಿಯಲ್ಲಿ ತೇಲಿ ಬರುತ್ತಿರುವ ಬೂದಿ, ಪಿಂಡ, ಪ್ಲಾಸ್ಟಿಕ್ ಬಾಟಲಿಗಳನ್ನು ನೋಡುತ್ತ್ತ ಇಲ್ಲಿ ಮುಳುಗುಹಾಕಿದ ನಂತರ ತಕ್ಷಣ ವಾಪಸ್ ಲಾಡ್ಜ್ಗೆ ಹೋಗಿ ಆರತಿ ಶುರುವಾಗುವ ಮುನ್ನ ಬೇಗ ಟ್ಯಾಪ್ ನೀರಿನಲ್ಲಿ ಒಂದು ಸಣ್ಣ ಸ್ನಾನ ಮಾಡಿ ಓಡಿ ಬಂದುಬಿಡುತ್ತೇವೆ ಎಂದು ಟ್ರಾವೆಲ್ ಸಂಸ್ಥೆಯವರ ಬಳಿ ಅನುಮತಿ ಕೇಳುತ್ತಿದ್ದರು. ಇದೆಲ್ಲದರ ಮಧ್ಯೆ ಸುರೇಶ ಶ್ಯಾಂಭಟ್ಟರ ಪಕ್ಕ ನಿಂತಿದ್ದ. ಶ್ಯಾಂಭಟ್ಟರು ಪೂಜಾವಿಧಿಗಳನ್ನು ಮಾಡುತ್ತ ಸುರೇಶ ರಾಮೇಶ್ವರದಿಂದ ತಂದ ಮರಳನ್ನು ಗಂಗೆಯಲ್ಲಿ ವಿಸರ್ಜಿಸಿದರು. ಸುರೇಶನಿಗೆ ಗಂಗಾಜಲವನ್ನು ಒಂದು ಬಾಟಲಿಯಲ್ಲಿ ಸಂಗ್ರಹಿಸಿಕೊಟ್ಟು “ಇನ್ನೊಂದ್ಸಲ ರಾಮೇಶ್ವರಕ್ಕೆ ಹೋಗಿ ಈ ನೀರಲ್ಲಿ ದೇವ್ರಿಗೆ ಅಭಿಷೇಕ ಮಾಡಿಸ್ಬಿಡು, ಅಲ್ಲಿಗೆ ಕಾಶೀಯಾತ್ರೆ ಸಂಪೂರ್ಣ. ಆಮೇಲೆ ಮನೇಲಿ ಒಂದು ಕಾಶಿ ಸಮಾರಾಧನೆ ಮಾಡಿಸಿ ಗೋದಾನ, ಫಲದಾನ, ದೀಪದಾನ ಮಾಡು. ಕುಟುಂಬದವರನ್ನೆಲ್ಲ ಕರ್ದು ಒಂದು ಊಟ ಹಾಕ್ಸು. ಎಲ್ಲಾ ಒಳ್ಳೇದಾಗುತ್ತೆ” ಎಂದರು. ತಮ್ಮ ಪೂಜಾಸಾಮಗ್ರಿಗಳನ್ನು ಎತ್ತಿಕೊಳ್ಳುತ್ತ “ಲಗೇಜೆಲ್ಲ ರೆಡಿ ಉಂಟಲ್ಲ, ಗಂಗಾರ್ತಿ ಮುಗಿಸ್ಕೊಂಡ್ ನಾಳೆ ಬೆಳಗ್ಗೆ ಮುಂಚೆ ಹೊರ್ಡುವ” ಎಂದರು. ಸುರೇಶ ತಲೆ ಅಲ್ಲಾಡಿಸಿದ. ಅವನತ್ತ ತಿರುಗಿ “ಎಂತ ಬಿಡೂದು ಅಂತ ಯೋಚ್ನೆ ಮಾಡಿದ್ಯಾ?’’ ಎಂದು ಕೇಳಿದರು. ಸುರೇಶನ ನಿರ್ಭಾವುಕ ಮುಖದಲ್ಲಿ ಆತಂಕದ ಗೆರೆಯೊಂದು ಬದಿಯಲ್ಲಿ ಜನಿಸಿತು. ನಾನು ಏನನ್ನು ಬಿಡಲಿ? ನನಗೆ ಅತ್ಯಂತ ಪ್ರಿಯವಾಗಿರುವುದು ಯಾವುದು? ಏನಿಲ್ಲವೆಂದರೂ ಇನ್ನೊಂದು ಮೂವತ್ತು ವರ್ಷವಂತೂ ಬದುಕುತ್ತೇನೆ, ಅಲ್ಲಿಯವರೆಗೂ ಯಾವ ಒಂದರ ಉಪಸ್ಥಿತಿ ಇಲ್ಲದೆಯೂ ತಾಳಿಕೊಳ್ಳಬಲ್ಲೆ?
ಬಸ್ಸು ಉತ್ತರಪ್ರದೇಶದ ಗಡಿಯನ್ನು ದಾಟಿ ಬಿಹಾರವನ್ನು ಪ್ರವೇಶಿಸುತ್ತಿದ್ದರೆ, ಶ್ಯಾಂಭಟ್ಟರು ಸುರೇಶನ ಹೆಗಲಿಗೆ ಒರಗಿ ಇಂಜಿನ್ ಸದ್ದನ್ನೂ ಮೀರಿಸುವಂತೆ ಗೊರಕೆ ಹೊಡೆಯುತ್ತ ಮಲಗಿದ್ದರು. ಹಿಂದಿನ ದಿನವಷ್ಟೇ ಪೂಜೆಯ ಸಮಯದಲ್ಲಿ ಅವರ ಶಲ್ಯದ ಚುಂಗು ತನ್ನ ಕೈಗೆ ತಾಗಿದ್ದಕ್ಕೆ ಸಿಡಿಮಿಡಿ ಮಾಡಿದ್ದ ಭಟ್ಟರು ಈಗ ಮಡಿಯನ್ನು ಮೀರಿ ಅಂಟಿಕೊಂಡು ಮಲಗಿರುವುದನ್ನು ಕಂಡ ಸುರೇಶನಿಗೆ ಪೂಜಾಕ್ರಮಗಳ ಬಗ್ಗೆ ಮತ್ತೊಮ್ಮೆ ಭಯ ಮೂಡಿತು. ಇನ್ನೇನು ಎರಡು-ಮೂರು ಗಂಟೆಗಳಲ್ಲಿ ಗಯಾ ತಲಪಿಬಿಡುತ್ತೇವೆ. ಅಲ್ಲಿಯ ಭಾರತ್ಸೇವಾ ಆಶ್ರಮ, ಬೆಂಗಾಲಿ ಆಶ್ರಮ ಇತ್ಯಾದಿ ಆಶ್ರಮಗಳು ಪಿಂಡದಾನ ಕ್ರಿಯೆಗೆಂದೇ ಉತ್ತಮ ದರದಲ್ಲಿ ಪೂಜಾರಿಗಳನ್ನು ಒದಗಿಸುತ್ತವೆ. ಅವರ ಜಾಗದಲ್ಲಿ ಕಾಶಿಯ ಪೂಜಾರಿಯೊಬ್ಬ ಬಂದು ಪಿಂಡದಾನ ಮಾಡಿಸುವುದನ್ನು ಅವರು ಸುತಾರಾಂ ಒಪ್ಪುವುದಿಲ್ಲ. ಒಂದು ಪಿಂಡದಾನಕ್ಕೆ ಕನಿಷ್ಠ ಹತ್ತು ಸಾವಿರದಿಂದ ಗರಿಷ್ಠ ಇಪ್ಪತ್ತು ಸಾವಿರದವರೆಗೂ ದಕ್ಷಿಣೆ ಇರುವಾಗ ಅವರೇಕೆ ಹೊಸಬರಿಗೆ ವ್ಯವಹಾರ ಮಾಡಲು ಬಿಡುತ್ತಾರೆ? “ನೋಡು, ನೀನ್ ಇಷ್ಟು ಕೇಳ್ತಿದ್ಯಾ ಅಂತ ನಿನ್ ಜೊತೆ ಬರ್ತೀನಿ, ಆದ್ರೆ ಅಲ್ಲಿನ್ ಪೂಜಾರಿಗಳ ಜೊತೆ ನೀನೇ ಮಾತಾಡಿ ಸೆಟಲ್ ಮಾಡ್ಕೊಂಬೇಕು, ನಾನ್ ಜಗಳ-ಗಿಗಳ ಮಾಡಲ್ಲ” ಎಂದು ಶ್ಯಾಂಭಟ್ಟರು ಖಡಾಖಂಡಿತವಾಗಿ ಹೇಳಿದ್ದರು. ದುಡ್ಡೇನು ದೊಡ್ಡ ವಿಷಯವಲ್ಲ. ಅವರು ಪಿಂಡದಾನ ಮಾಡಲು ಎಷ್ಟು ತೆಗೆದುಕೊಳ್ಳುತ್ತಾರೋ ಅಷ್ಟನ್ನೂ ಅವರಿಗೆ ಕೊಟ್ಟು ಶ್ಯಾಂಭಟ್ಟರು ನಮ್ಮೂರ ಕಡೆಯವರು, ಅವರೊಂದಿಗೆ ನನಗೆ ಜಾಸ್ತಿ ಒದಗುತ್ತದೆ, ಕಾರ್ಯ ಮಾಡಲು ಅನುವು ಮಾಡಿಕೊಡಿ ಎಂದು ಕೇಳಿಬಿಡಬಹುದು. ಆದರೆ ಕಾರ್ಯ ಮುಗಿದ ಮೇಲೆ ‘ಬಿಡುವುದು ಏನನ್ನು?’ ಗೊಂದಲದಲ್ಲಿ ಕೊನೇ ಕ್ಷಣದ ಆಯ್ಕೆ ನಂತರ ಸಮಸ್ಯೆಗಳನ್ನು ತಂದೊಡ್ಡುತ್ತದೆ ಎಂದು ಸುರೇಶ ಬಲ್ಲ. ದೊಡ್ಡಪ್ಪ ಹೀಗೆಯೇ ಅಜ್ಜನ ಪಿಂಡಪ್ರದಾನ ಮಾಡಲು ಹೋದಾಗ ಏನು ಬಿಡಬೇಕೆನ್ನುವುದನ್ನು ತೀರ್ಮಾನಿಸಿಕೊಳ್ಳದೆ ಕೊನೆಯ ಕ್ಷಣದಲ್ಲಿ ಉದ್ದ ಕ್ಯೂ ಇದ್ದ ಕಾರಣ ಪೂಜಾರಿಗಳು ಗಡಿಬಿಡಿ ಮಾಡಿದರೆಂದು ದಾಳಿಂಬೆಯನ್ನು ಬಿಟ್ಟು ಬಂದು ನಂತರದಲ್ಲಿ “ಅರ್ಜೆಂಟಲ್ಲಿ ಇಷ್ಟ ಆಗಿದ್ ಹಣ್ಣನ್ನೇ ಬಿಟ್ ಬಂದ್ಬಿಟ್ಟೆ, ಮೂಸಂಬಿ ಬಿಡ್ಬೇಕಿತ್ತು” ಎಂದು ಇಂದಿಗೂ ದಾಳಿಂಬೆ ತಿನ್ನಲಾಗದ ತಮ್ಮ ದುಃಸ್ಥಿತಿಗೆ ಕೊರಗುತ್ತಲೇ ಇರುವುದನ್ನು ಸುರೇಶ ನೋಡಿದ್ದಾನೆ. ತಾನು ಹಾಗೆ ಮಾಡಿಕೊಳ್ಳಬಾರದು ಎಂದು ತನಗೆ ಇಷ್ಟವಿಲ್ಲದ್ದು ಏನು ಎಂದು ಯೋಚಿಸಲು ಶುರುಮಾಡಿದ. ತಮ್ಮನ ಮುಖ ಕಣ್ಮುಂದೆ ಬಂತು.
ನಾನು ಮತ್ತು ಸುಧಾಕರ ತೆಂಗಿನ ತೋಟವನ್ನು ಸರಿಯಾಗಿ ಭಾಗ ಮಾಡಿಕೊಳ್ಳುವ ವಿಷಯದಲ್ಲಿ ಕಚ್ಚಾಡಿಕೊಂಡಿದ್ದನ್ನು ನೋಡಿ ಹಿರಿಯಮ್ಮ ‘ಹುಟ್ತಾ ಹುಟ್ತಾ ಅಣ್ಣತಮ್ಮಂದ್ರು ಬೆಳೀತಾ ಬೆಳೀತಾ ದಾಯಾದಿಗಳು’ ಎಂದಿದ್ದರಂತೆ. ಆದರೆ ನನ್ನ ಮಟ್ಟಿಗೆ ನಾನು ಮತ್ತು ಸುಧಾಕರ ಅಣ್ಣತಮ್ಮಂದಿರಂತೆ ಇದ್ದ ಯಾವ ದಿನಗಳೂ ನೆನಪಿಲ್ಲ. ಹೇಳಬೇಕೆಂದರೆ ನಾವು ಹುಟ್ಟುತ್ತಲೇ ದಾಯಾದಿಗಳು! ನನ್ನದೇ ನೋಟ್ಸು, ನನ್ನದೇ ಮನೆಪಾಠ, ನನ್ನದೇ ಸಲಹೆಗಳು ಎಲ್ಲವೂ ಇದ್ದರೂ ಅವನು ನನ್ನಂತೆ ಬುದ್ಧಿವಂತನಾಗಲೇ ಇಲ್ಲ. ನನಗೆ ಡಿಗ್ರಿ ಇದೆಯೆಂದ ಮಾತ್ರಕ್ಕೆ ತೋಟವನ್ನೇಕೆ ಸಂಪೂರ್ಣ ಅವನಿಗೇ ಬಿಟ್ಟುಕೊಡಬೇಕು? ನನ್ನಂತೆ ಒಳ್ಳೆಯ ಕಂಪೆನಿಯಲ್ಲಿ ಕೆಲಸ ಹಿಡಿಯಲು ಆಗದಿದ್ದುದು ಅವನ ಅಸಮರ್ಥತೆ. ಒಬ್ಬರ ಅಸಮರ್ಥತೆಗೆ ಎಲ್ಲಿಯವರೆಗೆ ಒಬ್ಬ ಸಮರ್ಥನ ತ್ಯಾಗವೇ ಪರಿಹಾರ ಎಂದು ಈ ಸಮಾಜ ಭಾವಿಸುತ್ತದೋ ಅಲ್ಲಿಯವರೆಗೆ ಈ ದೇಶ ಹೀಗೆಯೇ ಇರುತ್ತದೆ ಎಂದು ಸಿಟ್ಟು ಮಾಡಿಕೊಂಡು ತಾನೇ ನಾನು ಕೊನೆಗೆ “ತೋಟ, ಗದ್ದೆ ಬೇಕು ಅಂದ್ರೆ ಅಪ್ಪನ್ನೂ ನೀನೇ ಇಟ್ಕೋ” ಎಂದು ಕಿರುಚಾಡಿ ಫಾರಿನ್ನಿಗೆ ಹೋಗಿದ್ದು? “ಅಪ್ಪ ಸತ್ತಾಗಲೂ ಬರಲಿಲ್ಲ, ಎಂಥಾ ದುರುಳ” ಎಂದು ಕುಟುಂಬದವರು ಬೈದುಕೊಳ್ಳುತ್ತಾರೆಂದು ಗೊತ್ತಿದ್ದೂ ನಾನು ಆ ಕಠಿಣ ನಿರ್ಧಾರ ತೆಗೆದುಕೊಂಡಿದ್ದು ಅವನ ಜೊತೆಗೆ ಅಂತ್ಯಸಂಸ್ಕಾರ ಮಾಡಬೇಕಾಗುತ್ತದೆ ಎಂಬ ಕಾರಣಕ್ಕೇ ತಾನೇ? ಈಗ ಒಂದು ಸಲ ಗಯಾದಲ್ಲಿ ಪಿಂಡಪ್ರದಾನ ಮಾಡಿದರೆ ಇನ್ನು ಮುಂದೆ ಜೀವನದಲ್ಲಿ ಎಂದೂ ಅಪ್ಪನ ವೈದಿಕಕ್ಕಾಗಿ ವಾಷಿಂಗ್ಟನ್ನಿನಲ್ಲಿ ಪ್ರತಿ ವರ್ಷ ಪೂಜಾರಿಗಳನ್ನು ಹುಡುಕಿಕೊಂಡು ಹೋಗುವುದು ತಪ್ಪುತ್ತದೆ ಎಂಬ ಕಾರಣಕ್ಕೇ ನಾನು ಇಲ್ಲಿಗೆ ಬಂದಿರುವುದಲ್ಲವೆ? ಸುಧಾಕರನ ಜೊತೆ ಕೊನೆಯ ಬಾರಿ ಮಾತನಾಡಿದ್ದು ಫಾರಿನ್ನಿಗೆ ಹೊರಡುವ ಮುಂಚೆ. ಈಗಂತೂ ಅವನ ಮುಖ, ಧ್ವನಿ ಯಾವುದೂ ನೆನಪಿಲ್ಲ. ಇದ್ದಕ್ಕಿದ್ದಂತೆ ಅವನು ಎದುರು ಬಂದರೆ ಗುರುತು ಹಿಡಿಯುವುದೂ ಕಷ್ಟವಾಗಬಹುದೇನೋ! ಹಾಗಾದರೆ…
“ನಾನು ನನ್ ತಮ್ಮನ್ನ ಬಿಡ್ತೀನಿ ಭಟ್ರೇ. ಇನ್ನು ಸಾಯೋವರೆಗೂ ಅವನ ಜೊತೆ ಮಾತನಾಡಲ್ಲ, ಮುಖಾನೂ ನೋಡಲ್ಲ” ಸುರೇಶ ಬಸ್ಸಿನಿಂದ ಇಳಿಯುತ್ತ ಶ್ಯಾಂಭಟ್ಟರಿಗೆ ಹೇಳಿದ. ಶ್ಯಾಂಭಟ್ಟರು ಒಮ್ಮೆ ಅವನತ್ತ ದಿಟ್ಟಿಸಿ “ಆಟೋ ಕರಿ” ಎಂದರು. ತೇಲುತ್ತಿರುವ ಉಚ್ಚಿಷ್ಠಗಳ ಮಧ್ಯೆ ಕಷ್ಟಪಟ್ಟು ಈಜಾಡುವ ಗಂಗಾ ನದಿಯ ಮೀನುಗಳಂತೆ ಗಯಾದ ಸಣ್ಣಸಣ್ಣ ಬೀದಿಗಳಲ್ಲಿ ಜನ, ಮನೆಗಳ ಮಧ್ಯೆ ಆಟೋ ನುಸುಳುತ್ತಿತ್ತು. “ಹಂಗೆಲ್ಲ ಮನುಷ್ಯರನ್ನ ಬಿಡುಕ್ಕಾಗಲ್ಲ. ಎಂತಾದ್ರೂ ತಿಂಡಿ, ವಸ್ತು, ಜಾಗ ಹಿಂಗಿದ್ದನ್ನ ಬಿಡ್ಬೇಕು. ಮೊನ್ನೆ ಸುಧಾಮೂರ್ತಿಯೋರು ಬಂದು ಶಾಪಿಂಗನ್ನ ಬಿಟ್ರು ಗೊತ್ತುಂಟಲ್ಲ” ಎಂದು ಸಿಟ್ಟಿನಲ್ಲಿ ಹೇಳುವಾಗ ಭಟ್ಟರು ಸುರೇಶನ ಮುಖವನ್ನೂ ನೋಡಲಿಲ್ಲ. “ತಮ್ಮನ್ನ ಬಿಡ್ತಾನಂತೆ. ಇವೆಲ್ಲ ಮಾತಾಡಕ್ ಸುಲಭ. ಅಪ್ಪನ್ ಕಾಲದಿಂದ ಹೊಳೆ ಬದಿ ದೇವಸ್ಥಾನದಲ್ಲಿ ಪೂಜೆ ಮಾಡ್ಕಂಡ್ ಇದ್ವಿ. ಒಂದ್ ಸಲ ಅದೆಂಥಾ ನೆರೆ ಬಂದಿದ್ದೋ ವಿಗ್ರಹದ್ ಸಮೇತ ಕೊಚ್ಕೊಂಡ್ ಹೋಯ್ತು ನೋಡು. ಜಾಗದಲ್ಲೇ ದೋಷ ಇದೆ ಅಂತ ಮತ್ತೆ ಜೀರ್ಣೋದ್ಧಾರ ಆಗ್ಲಿಲ್ಲ. ಹೆಂಡ್ತಿ ಎರಡನೇ ಮಗೂದು ಗರ್ಭಿಣಿ, ಮಗ್ಳು ಸ್ಕೂಲಿಗ್ ಹೋಗ್ತಿದ್ಲು. ಹೊಟ್ಟೆಪಾಡಿಗ್ ಕಾಶಿಗ್ ಬಂದೆ, ಅವ್ರು ಅಲ್ಲೇ ಉಳ್ಕೊಂಡ್ರು. ಎಲ್ಲರಿಗೂ ಇಷ್ಟ ಆಗಿದ್ದನ್ನ ಬಿಡ್ಸೀ ಬಿಡ್ಸೀ ಆ ಪಾಪ ನಂಗ್ ಸುತ್ಕಂಡಿದೆ ಅನ್ಸುತ್ತೆ. ಹದಿನೈದು ವರ್ಷದಲ್ಲಿ ಸರಿಯಾಗ್ ಹತ್ತು ಸಲಾನೂ ಮನೆಗ್ ಹೋಗಿಲ್ಲ. ಮನುಷ್ಯರನ್ನ ಬಿಡ್ತಾನಂತೆ, ಅಷ್ಟು ಸುಲಭ ಅಲ್ಲ ತಿಳ್ಕೋ’’ ಎಂದು ಗದರುವಾಗ ಭಟ್ಟರ ಕಣ್ಣಲ್ಲಿ ನೀರಿನ ಪಸೆಯೇನಾದರೂ ಇತ್ತೋ ಎಂದು ಗೊತ್ತಿಲ್ಲ. ಸುರೇಶ ಸಪಾಟಾಗಿ “ನಿಮ್ಗೆ ಹೆಂಡ್ತಿ ಮಕ್ಳ ಮೇಲೆ ಪ್ರೀತಿ ಉಂಟು ಭಟ್ರೇ, ನಂಗೆ ನನ್ ತಮ್ಮ ಯಾವತ್ತೋ ಸತ್ತೋಗಿದಾನೆ. ಅವ್ನನ್ನ ಬಿಟ್ರೆ ಏನೂ ಲಾಸ್ ಇಲ್ಲ” ಎಂದ. ಅವನ ಕಡೆಗೆ ತಿರುಗಿದ ಭಟ್ಟರು “ತಮಾಷೆ ಮಾಡ್ತಿದ್ಯಾ ನೀನು? ನಿಂಗ್ ಇಷ್ಟ ಇಲ್ದೇ ಇರೂದನ್ನ ಬಿಡೋಕ್ಕಲ್ಲ ಬಂದಿರೋದು ಇಲ್ಲಿಗೆ. ನೀನ್ ತುಂಬಾ ಹಚ್ಕೊಂಡಿರೂದನ್ನ ಬಿಡ್ಬೇಕು. ಯಾವ್ದು ಇಲ್ದೇ ನೀನ್ ಬದುಕಕ್ಕಾಗಲ್ಲ ಅನ್ಕೊಂಡರ್ತೀಯೋ ಅದನ್ನ ಬಿಡ್ಬೇಕು. ಬೇಡದೇ ಇರೂದನ್ನ ಕೊಡೋದು ದಾನ ಅಲ್ಲ, ಬೇಕಾಗಿರೂದನ್ನ ಕೊಡ್ಬೇಕು, ಅದು ತ್ಯಾಗ. ಕಾಮ, ಕ್ರೋಧ, ಲೋಭ, ಮೋಹ ಇವನ್ನೆಲ ಬಿಡ್ಬೇಕು ಅನ್ನೋದು ಪದ್ಧತಿ. ಆದ್ರೆ ಇವತ್ತಿನ್ ಕಾಲದಲ್ಲಿ ಅದನ್ನೆಲ್ಲ ಬಿಟ್ಟು ಯಾವೋನ್ ಬದುಕ್ತಾನೆ. ಅದಕ್ಕೆ ಕೊನೇಪಕ್ಷ ಯಾವ್ದಾದ್ರೂ ಒಂದು ವಿಷಯಾನ ಬಿಡೂದು ಆಚಾರ. ನೀನ್ ಏನೂ ಬಿಡ್ದೇ ಇದ್ರೂ ರ್ವಾಗಿಲ್ಲ, ಆದ್ರೆ ಶಾಸ್ತ್ರಕ್ಕೆ ಏನೋ ಒಂದು ಮಾಡ್ತೀನಿ ಅಂತ ಮಾಡೂದ್ ಬೇಡ ಆಯ್ತಾ. ದೇಶ ಬಿಟ್ ತಕ್ಷಣ ಮನುಷ್ಯ ಸಂಬಂಧಾನೂ ಮರೀತಾರೆ ಥೂ” ಎಂದು ಜೋರಾಗಿಯೇ ಬೈದರು. ಅವರ ಸ್ವರ ಒಮ್ಮೆ ಆ ಗಿಜಿಗುಡುವ ವಾತಾವರಣದಲ್ಲೂ ಜೋರಾಗಿ ಅನುರಣಿಸಿತು. ಸುರೇಶನಿಗೆ ಒಮ್ಮೆಗೇ ಸಿಟ್ಟು ಉಕ್ಕಿಬಂತು. ದಿನಕ್ಕೆ ಹತ್ತಾರು ಸಾವಿರ ಡಾಲರ್ ದುಡಿಯುವ ನನಗೆ ಈ ಮಾಸಲು ಪಂಚೆ ಉಟ್ಟ ಭಟ್ಟ ಬೈಯುತ್ತಿದ್ದಾನಲ್ಲ ಎಂದು ರೋಷ ಉಮ್ಮಳಿಸಿ ತಾನೂ ಜೋರು ಸ್ವರದಲ್ಲಿ “ಬಿಡ್ತೀನಿ ಭಟ್ರೇ, ಇಷ್ಟ ಆಗಿರೋದನ್ನ ಬಿಟ್ಟೇ ಹರ್ಡೋದು ಆಯ್ತಾ. ರಕ್ತಸಂಬಂಧ ಒಂದೇ ಮನುಷ್ಯ ಸಂಬಂಧ ಅಲ್ಲ. ನೂರಾರ್ ಜನಕ್ಕೆ ಕೆಲಸ ಕೊಟ್ಟಿದೀನಿ ನಾನು, ನಾನ್ ಕೊಡೋ ಸಂಬ್ಳದಿಂದ ಎಷ್ಟೋ ಜನರ ಸಂಸಾರ ನಡೀತಾ ಇದೆ, ಅವ್ರೆಲ್ಲಾರೂ ನಂಗ್ ಸಂಬಂಧಿಕರೇ” ಎಂದು ಕಿರುಚಿದ. ಕನ್ನಡಿಯಲ್ಲಿ ಇಬ್ಬರನ್ನೂ ಒಮ್ಮೆ ನೋಡಿದ ಆಟೋ ಚಾಲಕ ದಕ್ಷಿಣೆ ವಿಷಯದಲ್ಲಿ ಇಬ್ಬರ ಮಧ್ಯೆ ಜಗಳವಾಗಿದೆಯೆಂದು ಭಾವಿಸಿ ತನ್ನ ದಕ್ಷಿಣೆಯ ವಿಷಯದಲ್ಲಿ ಸಮಸ್ಯೆಯಾದರೇನು ಮಾಡುವುದು ಎಂದು ಒಂದು ಕ್ಷಣ ಆತಂಕಿತನಾದ.
ಬೋರ್ಡ್ ಮೆಂಬರುಗಳ ಮೀಟಿಂಗಿನಲ್ಲಿ ಈ ಫೈನಾನ್ಷಿಯಲ್ ವರ್ಷದಲ್ಲಿ ಈಶಾನ್ಯ ರಾಷ್ಟçಗಳ ಮೇಲೆ ಬಂಡವಾಳ ಕಡಮೆ ಮಾಡುವುದು, ಸದ್ಯಕ್ಕೆ ಬೆಳೆಯುತ್ತಿರುವ ಮಾರುಕಟ್ಟೆಯಾದ ಭಾರತದಲ್ಲಿ ಹೆಚ್ಚಿನ ಕಚೇರಿಗಳನ್ನು ಸ್ಥಾಪಿಸುವುದರ ವಿಚಾರವಾಗಿ ತೀರ್ಮಾನವಾಗಿತ್ತು. ಆಗಲೇ ವಿವರವಾದ ವರದಿಯೂ ತಯಾರಾಗಿ ಎಲ್ಲರ ಲಿಖಿತ ಅನುಮೋದನೆಯೂ ದೊರಕಿತ್ತು. ಸಿ.ಇ.ಓ. ಆದ ಸುರೇಶನ ಸಹಿಯೊಂದು ಬಿದ್ದರೆ ಅಲ್ಲಿಗೆ ಸಂಪನ್ನವಾಗಿ ವರದಿ ಕಾರ್ಯರೂಪಕ್ಕೆ ಬರುತ್ತಿತ್ತು. ಕರೆ ಮಾಡಿದ ಎಂ.ಡಿ. ವೈಶಾಖ ಸಹಿಯನ್ನು ಬೇಗ ಕಳಿಸಿ ಎಂದು ಆಜ್ಞೆ ಮಾಡಿದಂತೆ ಹೇಳಿ “ಸ್ವಲ್ಪ ಆಗಾಗ ಮಿಸ್ ಕಾಲ್ ನೋಡಿ ವಾಪಸ್ ಮಾಡಿ” ಎಂದು ಕಟುವಾದ ಧ್ವನಿಯಲ್ಲಿ ಹೇಳಿ ಫೋನಿಟ್ಟ. ಬೆಂಗಳೂರಿನ ವೈಟ್ಫೀಲ್ಡಿನಲ್ಲಿ ಐವತ್ತು ಚಿಲ್ಲರೆ ಸಾವಿರ ಸಂಬಳಕ್ಕೆ ಜೀವನವಿಡೀ ಬದುಕನ್ನು ಟ್ರಾಫಿಕ್ಕಿನಲ್ಲಿ ಅಡವಿಡಬೇಕಾಗಿದ್ದ ಇವನನ್ನು ಕುಟುಂಬಸಮೇತ ವಿಮಾನ ಹತ್ತಿಸಿ ನನ್ನ ಕಂಪೆನಿಯ ಎಂ.ಡಿ. ಮಾಡಿದ್ದಕ್ಕೆ ನಾನು ಕೇಳಬೇಕಾಗಿರುವ ಮಾತುಗಳು ಇವು! ಈ ಹೊತ್ತಿನಲ್ಲಿ ಭಾರತದಲ್ಲಿ ಮಧ್ಯರಾತ್ರಿಯಾಗಿರುತ್ತದೆ ಎಂಬ ಕನಿಷ್ಠ ಸೌಜನ್ಯವಾದರೂ ಬೇಡವೇ? ಇಲ್ಲ, ಅವನು ಬೇಕೆಂದೇ ನನ್ನನ್ನು ನಿದ್ರೆಯಲ್ಲಿ ಎಬ್ಬಿಸಿದ್ದಾನೆ. ನನ್ನ ಬದುಕು ಅವನ ಹಿಡಿತದಲ್ಲಿದೆ ಎಂಬುದನ್ನು ಅರ್ಥ ಮಾಡಿಸುವ ಕಾರ್ಪೊರೇಟ್ ರಣತಂತ್ರಗಳಲ್ಲಿ ಇದೂ ಒಂದು. ನಾನೇ ಎಷ್ಟು ಜನರ ಮೇಲೆ ಇದನ್ನು ಪ್ರಯೋಗಿಸಿಲ್ಲ! ಎಷ್ಟೇ ನಂಬಿಕಸ್ಥ ಕಾಲಾಳುಗಳನ್ನು ಇಟ್ಟುಕೊಂಡರೂ ಸೇನಾಧಿಪತಿ ಯುದ್ಧದ ಎಲ್ಲ ತಂತ್ರಗಳನ್ನೂ ಅವರಿಗೆ ಬಿಟ್ಟುಕೊಡಬಾರದು. ನಾನು ಆ ತಪ್ಪು ಮಾಡಿದೆ. ಭಟ್ಟರಿಗೇನೋ ಗದರಿದೆ, ಆದರೆ ನನ್ನ ಸಂಸ್ಥೆಯಿಂದ ಸಂಬಳ ಪಡೆಯುವ ಒಬ್ಬರಾದರೂ ನನ್ನನ್ನು ನೆನೆಯುತ್ತಾರೆಯೆ? ಒಂದೆರಡು ವರ್ಷ ಮುಂಚೆ ಬರಬೇಕಿತ್ತು ನಾನು, ಆಗ ಈ ಸಿ.ಇ.ಓ. ಸ್ಥಾನವನ್ನೇ ಗಯಾದಲ್ಲಿ ಬಿಟ್ಟು ಹೋಗಬಹುದಿತ್ತು. ಈಗ ಬಿಟ್ಟೆನೆನ್ನಲು ನನ್ನ ಕೈಯಲ್ಲಿ ಏನಾದರೂ ಇದ್ದರೆ ತಾನೇ? ನಾನೇ ಕಟ್ಟಿ ಬೆಳೆಸಿದ ಸಂಸ್ಥೆಗೆ ಇಂದು ನನ್ನ ಸಹಿಯ ಆವಶ್ಯಕತೆ ಇದೆಯೇ ಹೊರತು ನನ್ನ ಆವಶ್ಯಕತೆ ಇಲ್ಲ, ಅದೇ ಸತ್ಯ. ಕಂಪೆನಿ ನನ್ನನ್ನು ಯಾವತ್ತೋ ಬಿಟ್ಟುಬಿಟ್ಟಿದೆ. ಡಿಜಿಟಲ್ ಸಿಗ್ನೇಚರ್ ಅನ್ನು ಇ-ಮೇಲ್ ಮಾಡುತ್ತಿದ್ದ ಸುರೇಶನ ಕಂಗಳು ತುಂಬಿದ್ದವು. ಅಲಾರಾಂ ಹೊಡೆಯಲು ಇನ್ನೂ ಎರಡು ಗಂಟೆ ಬಾಕಿಯಿತ್ತು. ನಿದ್ರೆ ಹತ್ತುವ ಸಾಧ್ಯತೆಯೇ ಇರಲಿಲ್ಲ. ಗೀಸರಿನ ಸ್ವಿಚ್ ಹಾಕಿದ.
ತನಗಿಂತ ಮೊದಲೇ ಎದ್ದು ಸಾಮಗ್ರಿಗಳ ಜೊತೆಗೆ ತಯಾರಾಗಿದ್ದ ಸುರೇಶನನ್ನು ನೋಡಿ ಶ್ಯಾಂಭಟ್ಟರಿಗೆ ಅಚ್ಚರಿಯೇ ಆಯಿತು. “ಕರ್ಮ ಕಳ್ಕಳುಕ್ಕೆ ಅಷ್ಟು ಅರ್ಜೆಂಟಾ ಮಾರಾಯಾ?’’ ಎಂದು ಮುಗುಳ್ನಕ್ಕರು. “ಬೇಗ ಎದ್ದಿದ್ದೆ” ಎಂದಷ್ಟೇ ಹೇಳಿದ ಸುರೇಶ ಅವರ ಕೈಗೂ ಒಂದೆರಡು ಚೀಲಗಳನ್ನು ವರ್ಗಾಯಿಸಿದ. ಮೊದಲಿಗೆ ಫಲ್ಗು ನದಿ ನಂತರದಲ್ಲಿ ವಿಷ್ಣುಪಾದ ದೇವಾಲಯದಲ್ಲಿ ಪಿಂಡದಾನ ಮಾಡಿದ ಸುರೇಶ ಕೊನೆಯದಾಗಿ ಅಕ್ಷಯ ವಟುವೃಕ್ಷದ ಬಳಿ ಬಂದ. ಅಲ್ಲಿ ಆಗಲೇ ಸಾಕಷ್ಟು ಜನಜಂಗುಳಿಯಿತ್ತು. ಯಾರೋ ಒಬ್ಬರು ವಯಸ್ಸಾದ ಪುರೋಹಿತರು ಸ್ಥಳಪುರಾಣವನ್ನು ಹೇಳುತ್ತಿದ್ದರು. ಬಿಸಿಲು ನೆತ್ತಿಗೆ ಬಂದಿತ್ತು. “ಒಂಚೂರು ಜನ ಕಮ್ಮಿ ಅಗ್ಲಿ, ನೆರಳಲ್ಲಿ ಕೂತಿರಣ ಬಾ” ಎಂಬ ಭಟ್ಟರ ಸಲಹೆಯನ್ನು ಸುರೇಶ ನಿರಾಕರಿಸಿದ. ವಯಸ್ಸಾದ ಪುರೋಹಿತರ ಎದುರು ಕೂತಿದ್ದ ಗುಂಪಿನಲ್ಲಿಯೇ ತಾನೂ ಹೋಗಿ ಕೂತ.
“ವನವಾಸದ ಸಮಯದಲ್ಲಿ ದಶರಥನಿಗೆ ಪಿಂಡದಾನ ಮಾಡಬೇಕಾಗಿ ಬಂದಾಗ ರಾಮಲಕ್ಷ್ಮಣ ಸೀತೆಯರು ಗಯಾಕ್ಕೆ ಬಂದರು. ಪೂಜಾರಿಯನ್ನು ಗೊತ್ತು ಮಾಡಿ ಸಾಮಗ್ರಿಗಳನ್ನು ತರಲು ಹೋದ ರಾಮಲಕ್ಷ್ಣಣರು ಎಷ್ಟು ಹೊತ್ತಾದರೂ ಬರಲಿಲ್ಲ. ಸಮಯ ಮೀರುತ್ತಿದ್ದ ಕಾರಣ ಸೀತಾಮಾತೆಯೇ ಫಲ್ಗು ನದಿ, ವಟುವೃಕ್ಷ, ತುಳಸಿಗಿಡ, ಬ್ರಾಹ್ಮಣ ಪೂಜಾರಿ, ಕಾಗೆ ಮತ್ತು ಹಸುವಿನ ಸಾಕ್ಷಿಯಾಗಿ ಮಾವನಿಗೆ ಪಿಂಡದಾನ ಮಾಡಿದಳು. ಎಷ್ಟೋ ಹೊತ್ತಾದ ಮೇಲೆ ಬಂದ ರಾಮ ತನ್ನ ತಂದೆಗೆ ತಾನೇ ಇಲ್ಲದೆ ಪಿಂಡದಾನ ನಡೆದಿದೆ ಎಂದು ಗೊತ್ತಾಗಿ ಸಿಡಿಮಿಡಿಗೊಂಡ. ಅವನ ಕೋಪಕ್ಕೆ ಬೆದರಿ ವಟುವೃಕ್ಷವೊಂದನ್ನು ಬಿಟ್ಟು ಬೇರೆಲ್ಲರೂ ಸೀತೆ ಪಿಂಡದಾನ ಮಾಡಿಯೇ ಇಲ್ಲ, ನಾವ್ಯಾರೂ ನೋಡಿಯೇ ಇಲ್ಲ ಎಂದರು. ಸುಳ್ಳು ಹೇಳಿದ್ದಕ್ಕೆ ಸೀತೆಯಿತ್ತ ಶಾಪದಿಂದ ಇಂದು ಫಲ್ಗು ನದಿ ಅಂತರ್ಗಾಮಿಯಾಗಿದೆ. ಗಯಾದಲ್ಲೆಲ್ಲೂ ತುಳಸಿ ಬೆಳೆಯುವುದಿಲ್ಲ, ಹಸುವಿನ ಹಿಂಭಾಗವನ್ನು ಮಾತ್ರ ಪೂಜಿಸಲಾಗುತ್ತದೆ. ಕಾಗೆಗೆ ಕಚ್ಚಾಡದೆ ತಿನ್ನಲಾಗುವುದಿಲ್ಲ, ಗಯಾದ ಬ್ರಾಹ್ಮಣರಿಗೆ ಯಾವತ್ತೂ ಸಂತೃಪ್ತಿಯಿಲ್ಲ’’ ಎಂದು ಪುರೋಹಿತರು ಕಥೆ ಹೇಳುತ್ತಿದ್ದರು. ಒಂದು ಸುಳ್ಳಿಗೆ ಶತಮಾನಗಳ ಶಿಕ್ಷೆ!
ಪಂಚೆಯೊಳಗಿದ್ದ ದುಬಾರಿ ಅಂಡರ್ವೇರಿನ ಜೇಬಿನಲ್ಲಿದ್ದ ಸುರೇಶನ ಮೊಬೈಲು ರಿಂಗಣಿಸಿತು. ತೆಗೆದು ನೋಡಿದರೆ ಲಾಯರ್ ‘ಮುಂದಿನ ಇಪ್ಪತ್ತೈದಕ್ಕೆ ನೆಕ್ಸ್ಟ್ ಹಿಯರಿಂಗ್, ಅವರೇನೂ ಅಲಿಮನಿ ಕೇಳಿಲ್ಲ, ಡೊಮೆಸ್ಟಿಕ್ ವಯಲೆನ್ಸ್ ಎಲ್ಲ ಇಲ್ದೇ ಇರೋದ್ರಿಂದ ಬೇಗ ಡಿವೋರ್ಸ್ ಗ್ರಾಂಟ್ ಆಗುತ್ತೆ, ನೀವೇನು ಬರುವುದು ಬೇಡ. ಎಲ್ಲ ನಾನು ವ್ಯವಸ್ಥೆ ಮಾಡಿಕೊಳ್ಳುತ್ತೇನೆ’ ಎಂದು ಮೆಸೇಜು ಕಳಿಸಿದ್ದರು. ಅವರ ಖಾತೆಗೆ ಹಿಯರಿಂಗ್ ಪೇಮೆಂಟನ್ನು ವರ್ಗಾಯಿಸಿದ ಸುರೇಶ ಸುಳ್ಳು ಹೇಳದೆ ಇಂದಿಗೂ ನೆಮ್ಮದಿಯಾಗಿ ನಿಂತಿರುವ ವಟುವೃಕ್ಷದತ್ತ ನೋಡಿದ. ತಾನೂ ಹಾಗೆಯೆ ಆಗಬಾರದಿತ್ತೇ ಎನ್ನಿಸಿತು. ಕೊನೆಯದಾಗಿ ಭಾರತದ ವಿಮಾನ ಹತ್ತುವ ಮುನ್ನ ಅವಳು “ನಾನು ಬಿಟ್ ಹೋಗ್ತಾ ಇರೋದು ನಿಂಗೆ ಸಮಸ್ಯೆ ಇದೆ ಅಂತ ಅಲ್ಲ, ನೀನ್ ಇಷ್ಟು ವರ್ಷ ನಂಗ್ ಸುಳ್ ಹೇಳಿದ್ದಕ್ಕೆ” ಎಂಬ ಅವಳ ಮಾತುಗಳು ಈಗಲೂ ಚುಚ್ಚುತ್ತವೆ. ದೋಷ ನನ್ನಲ್ಲಿಯೇ ಇತ್ತು ಎಂದು ಮುಂಚೆಯೇ ಒಪ್ಪಿಕೊಂಡಿದ್ದರೆ ರೇಣುಕಾ ನನ್ನ ಜೊತೆಗೇ ಇರುತ್ತಿದ್ದಳೆ? ಅವಳನ್ನು ನಾನು ನಿಜವಾಗಿಯೂ ಪ್ರೀತಿಸಿದ್ದರೆ ನನ್ನಲ್ಲೇ ಸಮಸ್ಯೆಯಿದ್ದಿದ್ದು ಎಂದು ಪ್ರಾಮಾಣಿಕವಾಗಿ ನಾನು ಒಪ್ಪಿಕೊಳ್ಳುತ್ತಿದ್ದೆನಲ್ಲವೆ? ಮರ್ನಾಲ್ಕು ವೈದ್ಯರಿಗೆ ದುಡ್ಡು ಕೊಟ್ಟು ಸುಳ್ಳು ಹೇಳಿಸುವಾಗ ನನ್ನಲ್ಲಿ ಕೊಂಚವೂ ಪಶ್ಚಾತ್ತಾಪ ಇರಲಿಲ್ಲ ಎನ್ನುವುದಂತೂ ಸತ್ಯ. ತನ್ನ ಸಮಸ್ಯೆಯಿಂದಲೇ ಮಕ್ಕಳಾಗುತ್ತಿಲ್ಲ ಎಂದು ಪಾಪ ಎಷ್ಟು ವರ್ಷ ಕೊರಗಿದಳು. ಅವಳಿಗೆ ಬಿ.ಪಿ. ಬರಲು ಕೂಡಾ ಅದೇ ಕಾರಣವಿರಬಹುದು. ಛೇ, ನಾನೂ ವಟುವೃಕ್ಷವಾಗಿದ್ದರೆ…
“ನಿನ್ನ ಪುತ್ರಕರ್ಮದ ಭಾರ ಇವತ್ತಿಗೆ ಪೂರ್ತಿ ಕೊನೆಯಾಗುತ್ತೆ. ಪೂರ್ತಿ ಮನಸ್ಸಿಂದ ಹೊರಗಡೆ ಇರೋ ಬಡವರಿಗೆ ದಾನ ಮಾಡು. ಇಲ್ಲಿಂದ ಹೋಗುವಾಗ ನಿನ್ನ ಹೆಗಲ ಮೇಲೆ ವರ್ಷಾನುಗಟ್ಟಲೆ ಇದ್ದ ಭಾರ ಇಳಿದ ಹಾಗೆ ಅನ್ನಿಸುತ್ತೆ” ಎಂದು ಶ್ಯಾಂಭಟ್ಟರು ಹೇಳುತ್ತಿದ್ದರೆ ಸುರೇಶನಿಗೆ ಕೊನೆಯದಾಗಿ ಅಪ್ಪನ ನಂಬರಿಂದ ಕರೆ ಬಂದಿದ್ದು, ತಾನು ಎತ್ತದೆ ಇದ್ದಿದ್ದು, ನಂತರ ಅವರು ತೀರಿಕೊಂಡಿದ್ದು ತಿಳಿದಿದ್ದು ಎಲ್ಲವೂ ನೆನಪಾಗಿ ಇಡೀ ದೇಹ ಭಾರಭಾರವೆನ್ನಿಸಲು ಶುರುವಾಯಿತು. ಶ್ಯಾಂಭಟ್ಟರು “ಹೂಂ ಏನ್ ಬಿಡ್ತೀರಿ ಅಂತ ಒಂದ್ ಹೇಳ್ಬಿಡಿ” ಎಂದರು. ಆ ಮಾತುಗಳು ಸುರೇಶನಿಗೆ ದೂರದಲ್ಲೆಲ್ಲೋ ಕೇಳಿದಂತೆ ಭಾಸವಾಯಿತು. ಎಲ್ಲವನ್ನೂ ನಾನೇ ಕಳೆದುಕೊಂಡಿದ್ದೇನೆ ಅಥವಾ ದೂರ ತಳ್ಳಿದ್ದೇನೆ. ದೇಶ, ಸಂಬಂಧ, ಸಂಸ್ಥೆ ಯಾವುದೂ ನನ್ನ ಬಳಿ ಇಲ್ಲ. ಬಿಡಲು ನನ್ನ ಬಳಿ ಇರುವುದಾದರೂ ಏನು? ಶ್ಯಾಂಭಟ್ಟರು ಮತ್ತೊಮ್ಮೆ ಗಟ್ಟಿ ಧ್ವನಿಯಲ್ಲಿ “ಏನ್ ಬಿಡ್ತೀರಿ?’’ ಎಂದು ಕೇಳಿದರು. ಸುರೇಶನ ಕಂಗಳು ನೀರು ತುಂಬಿಕೊಂಡು ಮಂಜಾದವು.