ಸದಾ ಯಾವುದಾದರೂ ಕನ್ನಡ ಕೆಲಸದಲ್ಲಿ ಬ್ಯುಸಿಯಾಗಿದ್ದ ವೀರಭದ್ರಪ್ಪನವರಿಗೆ ಸಂಘದ ಕೆಲಸಗಳಲ್ಲೂ ಕೂಡ ಪಾಲ್ಗೊಳ್ಳಬೇಕೆಂಬ ಆಸೆಯಿತ್ತು, ಕೆಲವು ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿಂದ ಮತ್ತು ಅಧ್ಯಕ್ಷನ ಬಾಲವಾಗಿರುವ ಬಾಲನ ಕಿರಿಕಿರಿಗೆ ಸ್ವಲ್ಪ ದೂರವೇ ಉಳಿದಿದ್ದರು, ಎದುರು ಸಿಕ್ಕವರೆಲ್ಲ “ಏನ್ರಿ ಸಾಹಿತಿಗಳೇ ಯಾಕೆ ಸಂಘದಲ್ಲಿ ಜಾಸ್ತಿ ಇನ್ವಾಲ್ವ್ ಆಗ್ತಾ ಇಲ್ವಂತೆ, ನಿಮ್ಮಂತೋರು ಆಗಬೇಕು ಕಣ್ರೀ, ಅಲ್ಲಿರೋರಿಗಂತೂ ಎದೆ ಸಿಗುದ್ರೆ ನಾಲಕ್ ಅಕ್ಷರ ಇಲ್ಲ, ಆ ರಮಾಕಾಂತ ಮುಂದಿನ ಸಲ ವೆಲ್ಫೇರ್ ಅಸೋಸಿಯೇಷನ್ಗೆ ನಿಲ್ತಾನೆ ಅದಕ್ಕೆ ಹೆಸರು ಮಾಡಕ್ಕೆ ದುಡ್ಡು ಮಾಡ್ಕಳ್ಲಕ್ಕೇ ಕನ್ನಡಸಂಘಕ್ಕೆ ಬಂದಿರೋದು, ಸುಮ್ನೆ ಅವರಿಗೆ ಎಲ್ಲ ಬಿಟ್ಟು ನೀವು ನಿಮ್ ಪಾಡಿಗೆ ಇದ್ರೆ ಗಬ್ಬೆದ್ದು ಹೋಗುತ್ತೆ ಕಣ್ರೀ” ಎನ್ನುತ್ತಿದ್ದರು, ಅವರ ಮಾತಿನಲ್ಲಿ ಸತ್ಯ ಕೂಡ ಇದ್ದ ಕಾರಣ ಯಾವುದೇ ಕಾರಣಕ್ಕೂ ಸಂಘದ ಚಟುವಟಿಕೆಯನ್ನು ಬಿಡಬಾರದು ಎಂದುಕೊಂಡರು.
ನಲ್ವತ್ತು ವರ್ಷಗಳ ಹಿಂದೆ ಇಂದಿರಾನಗರದಿಂದ ನಾಲ್ಕು ಕಿ.ಮೀ. ದೂರದಲ್ಲಿರುವ ರಾಮಪ್ಪನಹಳ್ಳಿಯಲ್ಲಿ ಕಾಮನಬಿಲ್ಲಿನ ಕಲ್ಪನೆ ಇಟ್ಟುಕೊಂಡು ದೆಹಲಿಯಲ್ಲಿರುವ ‘ರಂಗ್ ರಂಗೀನ್’ ಎಂಬ ಏಳು ಟವರುಗಳುಳ್ಳ ಕ್ವಾಟ್ರರ್ಸ್ ಕಟ್ಟಿದ್ದನ್ನೇ ಸ್ಫೂರ್ತಿಯಾಗಿಟ್ಟುಕೊಂಡು ಸೀನಿಯರ್ ಪಟೇಲರ ಏಕೈಕ ಮಗ ಜೂನಿಯರ್ ಪಟೇಲ್ ಬೆಂಗಳೂರಲ್ಲೂ ಅಂಥದ್ದೇ ಒಂದು ಅಪಾರ್ಟ್ಮೆಂಟ್ ಕಟ್ಟಬೇಕೆಂದು ಶುರುಮಾಡಿ ಮಧ್ಯದಲ್ಲೇ ದಿವಾಳಿಯಾಗಿದ್ದು ಈಗ ಸದ್ಯಕ್ಕೆ ಹಳೆಯ ವಿಷಯ.
ಜೂನಿಯರ್ ಪಟೇಲ್ ಕಟ್ಟಿಸಲು ಶುರುಮಾಡಿದ ಅಪಾರ್ಟ್ಮೆಂಟಿನಲ್ಲಿ ಎರಡು ಟವರುಗಳು ಮಾತ್ರ ಪೂರ್ಣವಾಗಿ, ಮಿಕ್ಕ ಐದು ಟವರುಗಳ ಪಾಯವಷ್ಟೇ ಉಳಿದಿದ್ದವು. ಪೂರ್ಣವಾದ ಎರಡು ಟವರುಗಳಲ್ಲಿ ಪಟೇಲರ ಕುಟುಂಬದವರು, ಸಂಬಂಧಿಕರು, ಜೊತೆಗೆ ತೆಲುಗು ತಮಿಳು ಭಾಷೆಯವರೇ ಹೆಚ್ಚು ಇದ್ದರು. ಗೋಕಾಕ್ ಚಳವಳಿ ಶುರುವಾಗುವ ಸಮಯದಲ್ಲಿ ಜೂನಿಯರ್ ಪಟೇಲ್ ಹೃದಯಾಘಾತದಿಂದ ತೀರಿಕೊಂಡರು. ಅದೇ ಸಮಯದಲ್ಲೇ ಕನ್ನಡ ಭಾಷೆಯ ಅಭಿಮಾನದ ಅಲೆ ಎದ್ದ ಕಾರಣ ಆ ಭಾಗದ ಶ್ರೀಮಂತ ಕನ್ನಡಿಗನಾದ ರಾಜಪ್ಪ ಎನ್ನುವರು ಆ ಅಪಾರ್ಟ್ಮೆಂಟ್ ದಿವಾಳಿಯಾದ ಜೂನಿಯರ್ ಪಟೇಲ್ ಕುಟುಂಬದವರಿಂದ ಕೊಂಡುಕೊಂಡಿದ್ದು, ಅಲ್ಲದೆ ಭಾರಿ ರಿಯಾಯಿತಿಯಲ್ಲಿ ಅಲ್ಲಿನ ಫ್ಲಾಟುಗಳನ್ನು ಕನ್ನಡಿಗರಿಗೆ ಕೊಟ್ಟ ಕಾರಣ ಕನ್ನಡಿಗರು ಆ ಅಪಾರ್ಟ್ಮೆಂಟ್ಗೆ ಬರುವಂತಾಯಿತು. ಜೊತೆಗೆ ‘ರಂಗ್ ರಂಗೀನ್’ ಎನ್ನುವ ಹಿಂದಿ ಹೆಸರನ್ನು ಬದಲಿಸಿ ‘ಕಾಮನಬಿಲ್ಲು’ ಎಂದು ಮರುನಾಮಕರಣ ಮಾಡಿ, ‘ಹರಾ’ ‘ಪೀಲ’ ಎನ್ನುವ ಟವರುಗಳ ಹೆಸರನ್ನು ‘ಹಳದಿ’ ಮತ್ತು ‘ಹಸಿರು’ ಟವರ್ ಎಂದು ನಾಮಕರಣ ಮಾಡಲಾಯಿತು. ಈಗ ಅಲ್ಲಿ ಮೆಟ್ರೋ ಹಳಿಗಳು ಹಾದುಹೋಗುತ್ತವೆ, ರಾಜಪ್ಪರಿಗೆ ಕಣ್ಣು ಮಂಜಾಗುವಷ್ಟು ವಯಸ್ಸಾಗಿದೆ, ಅವನ ಮಗ ಸುಹಾಸ ಅದರ ನಿರ್ವಹಣೆ ಮಾಡುತ್ತಿದ್ದಾನೆ.
ಅಪರೂಪಕ್ಕೆ ಕನ್ನಡ ಕಿವಿಗೆ ಬೀಳುತ್ತಿದ್ದ ವಿವೇಕನಗರದಲ್ಲಿದ್ದ ವೀರಭದ್ರಪ್ಪನವರು ಹೆಂಡತಿ ಸತ್ತ ಮೇಲೆ ತಾವು ಮಾಡುತ್ತಿದ್ದ ಸರ್ಕಾರೀ ನೌಕರಿಗೆ ಇನ್ನೂ ಹತ್ತು ವರ್ಷ ಸೇವೆಯ ಅವಧಿ ಇದ್ದರೂ ವಿ.ಆರ್.ಎಸ್ ಪಡೆದುಕೊಂಡು, ವಿವೇಕನಗರದಲ್ಲಿದ್ದ ಮನೆಯನ್ನು ಮಾರಿ ಸೀದಾ ಕಾಮನಬಿಲ್ಲು ಅಪಾರ್ಟ್ಮೆಂಟ್ಗೆ ಸೇರಲು ಮುಖ್ಯ ಕಾರಣ ಕನ್ನಡ ಭಾಷೆ, ಅಭಿಮಾನ, ಪ್ರೀತಿ ಮತ್ತು ಇವತ್ತಿಗೆ ಕಣ್ಣು ಮಂಜಾಗಿರುವ ರಾಜಪ್ಪನ ಜೊತೆಗಿನ ಸ್ನೇಹ.
ವೀರಭದ್ರಪ್ಪನವರು ಸರ್ಕಾರೀ ನೌಕರರು ಅಷ್ಟೇ ಅಲ್ಲದೆ, ಸಾಹಿತಿ ಕೂಡ ಆಗಿದ್ದರು. ಆದರೆ ಅದನ್ನು ಹೇಳಿಕೊಳ್ಳಲು ನಾಚಿಕೆಪಡುವಷ್ಟು ಮುಗ್ಧರು ಕೂಡ ಆಗಿದ್ದರು. ನಾಲ್ಕೆöÊದು ಕಥಾಸಂಕಲನ, ಒಂದೆರಡು ಜೀವನಚಿತ್ರ, ಮೂರು ಕವಿತಾ ಸಂಕಲನ ಮತ್ತು ಎರಡು ಪ್ರಬಂಧಗಳ ಪುಸ್ತಕ ಕೂಡ ಬರೆದು ಕನ್ನಡ ಸಾಹಿತ್ಯಲೋಕದಲ್ಲಿ ಹೆಸರು ಮಾಡಿದ್ದರು. ಅವರಿಗೆ ರಾಜ್ಯ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಕೂಡ ಸಿಕ್ಕಿತ್ತು. ಎಷ್ಟೋ ವೇದಿಕೆಗಳನ್ನು ಹತ್ತಿ-ಇಳಿದು ಅದೂ ಬೇಜಾರಾಗಿ ಅಪರೂಪಕ್ಕೆ ಬರೆಯುತ್ತ ಮಿಕ್ಕ ಸಮಯ ಓದುತ್ತ ಕಾಲ ಕಳೆಯುತ್ತಿದ್ದರು.
ಕನ್ನಡ ಸಾಹಿತ್ಯದ ಒಲವನ್ನು ಈಗಿನ ಕಾಲದ ಯುವಕರಿಗೆ ಹಚ್ಚಿಸುವ ಸಲುವಾಗಿ ಅಪಾರ್ಟ್ಮೆಂಟಿನಲ್ಲಿದ್ದ ವಯಸ್ಸಿನ ಹುಡುಗ-ಹುಡುಗಿಯರಿಗೆ ಕನ್ನಡದ ಹಳೆಯ ಹೊಸಬರ ಪುಸ್ತಕಗಳನ್ನು ತಾವೇ ಖರೀದಿಸಿ ಕೊಟ್ಟು ಓದಿಸುತ್ತಿದ್ದರು. ಪ್ರತಿ ವಾರ ಪುಸ್ತಕ ಕೊಡಲು ಹೋದಾಗ ಯಾರಾದರೂ ಹೊಸ ಪುಸ್ತಕದ ಬೇಡಿಕೆ ಇಟ್ಟಾಗ ಯಾವ ಪುಸ್ತಕಗಳು ಬೇಕು ಎಂದು ಪಟ್ಟಿ ಮಾಡಿಕೊಂಡು ಪ್ರತಿ ವಾರ ಸಪ್ನಾ, ನವಕರ್ನಾಟಕ, ಅಂಕಿತ ಪುಸ್ತಕದ ಅಂಗಡಿಗಳಿಗೆ ಹೋಗಿ ಹೊಸ ಪುಸ್ತಕಗಳನ್ನೇ ಖರೀದಿಸಿ ಕೊಡುತ್ತಿದ್ದರು. ಅಪಾರ್ಟ್ಮೆಂಟಿನಲ್ಲಿದ್ದ ಕನ್ನಡಿಗರು ವೀರಭದ್ರಪ್ಪನವರ ಈ ಕನ್ನಡಪ್ರೀತಿ ಕಂಡು ಮತ್ತು ಸಾಹಿತ್ಯದಲ್ಲಿ ಅವರ ಸಾಧನೆ ಕಂಡು ಸಿಕ್ಕಾಗಲೆಲ್ಲ “ಏನ್ರಿ ಸಾಹಿತಿಗಳೇ, ಏನ್ರಿ ಕವಿಗಳೇ, ಏನ್ರಿ ಬರಹಗಾರರೇ” ಎಂದೇ ಸಂಬೋಧಿಸುತ್ತಿದ್ದರು.
ವೀರಭದ್ರಪ್ಪನವರು ಕಾಮನಬಿಲ್ಲಿಗೆ ಬರುವ ಹತ್ತು ವರ್ಷ ಮುನ್ನ ಅಪಾರ್ಟ್ಮೆಂಟಿನಲ್ಲಿ ಭಾಷೆಯ ತಿಕ್ಕಾಟಗಳು ನಡೆದು, ಜಾತಿಯ ಕಿತ್ತಾಟಗಳು ಆಗಿ, ಧರ್ಮದ ಶೀತಲಯುದ್ಧವೂ ಆಗಿ, ಒಂದೆರಡು ಸಣ್ಣಪುಟ್ಟ ಜಗಳಗಳಾಗಿ ಪೊಲೀಸರು ಕೂಡ ಬಂದುಹೋದ ಮೇಲೆ ಕಾಮನಬಿಲ್ಲು ನಿವಾಸಿಗಳ ಕ್ಷೇಮಕ್ಕಾಗಿ ಒಂದು ವೆಲ್ಫೇರ್ ಅಸೋಸಿಯೇಷನ್ ಆಗಬೇಕೆಂದು ಮಾತುಕತೆ ನಡೆದು ಒಂದೇ ವರ್ಷದಲ್ಲಿ ಬೈಲಾ ಸಿದ್ಧಪಡಿಸಿ ಅಧಿಕೃತವಾಗಿ ‘ಕಾಮನಬಿಲ್ಲು ನಿವಾಸಿಗಳ ವೆಲ್ಫೇರ್ ಅಸೋಸಿಯೇಶನ್’ ಎಂಬ ಹೆಸರಲ್ಲಿ ರಿಜಿಸ್ಟರ್ ಆಯಿತು.
ಪ್ರತಿ ಮೂರು ವರ್ಷಕ್ಕೆ ಸಂಘದ ಚುನಾವಣೆ ನಡೆಯುತ್ತಿತ್ತು. ಕಳೆದ ಹತ್ತು ವರ್ಷಗಳಿಂದಲೂ ಅಧ್ಯಕ್ಷ ಸ್ಥಾನ ಹಿಡಿದು ಕೂತವನು ಬಂಕ್ಶೀನ, ಕುಣಿಗಲ್ ಕಡೆಯವನು. ಕುಣಿಗಲ್ ತುಮಕೂರು ಮಧುಗಿರಿಯಲ್ಲಿ ಕನಿಷ್ಠ ಹದಿನೈದು ಪೆಟ್ರೋಲ್ ಬಂಕುಗಳನ್ನು ಇಟ್ಟುಕೊಂಡು ರಾಜಕೀಯಕ್ಕೆ ಇಳಿಯಬೇಕೆಂದಿದ್ದ ಶ್ರೀನಿವಾಸ್ ಅಲಿಯಾಸ್ ಬಂಕ್ಶೀನ ತನ್ನ ಹೆಸರಿನ ಜನಪ್ರಿಯತೆಗಾಗಿ ಈ ಸಂಘಕ್ಕೆ ಬಂದು ಅದರಲ್ಲಿ ಸತತವಾಗಿ ಗೆದ್ದಿದ್ದನು.
ಯಾವಾಗ ಭಾಷೆಯ ತಿಕ್ಕಾಟಗಳು ನಡೆದವೋ ಆಗ ಅಪಾರ್ಟ್ಮೆಂಟಿಗೆ ಒಂದು ‘ಕನ್ನಡಸಂಘ’ ಅವಶ್ಯವಿದೆ ಎಂದು ಮಾತಾಯಿತು. ಕನ್ನಡಿಗರೆಲ್ಲ ಒಂದೆಡೆ ಸೇರಿ ಮಾತಾಡಿ ಕೊನೆಗೂ ಕನ್ನಡಸಂಘ ಮುನ್ನೆಲೆಗೆ ಬಂತು. ಅದಕ್ಕೆ ‘ಕಾಮನಬಿಲ್ಲು ಕನ್ನಡಸಂಘ’ ಎಂದು ಹೆಸರಿಟ್ಟರು. ವೀರಭದ್ರಪ್ಪನವರು ಕಾಮನಬಿಲ್ಲಿಗೆ ಬಂದಾಗ ಅದಾಗಲೇ ಎರಡು ಚುನಾವಣೆಗಳು ನಡೆದಿತ್ತು.
ಇನ್ನೆರಡು ತಿಂಗಳಿಗೆ ಮತ್ತೆ ಕನ್ನಡ ಸಂಘದ ಚುನಾವಣೆ ಇದ್ದ ಕಾರಣ ವೀರಭದ್ರಪ್ಪನವರಿಗೆ ಕನ್ನಡಸಂಘಕ್ಕೆ ನಿಲ್ಲಲು ಒತ್ತಾಯಗಳು ಬರುತ್ತಿದ್ದವು. ರಾಜಕೀಯದಿಂದ ದೂರ ಇರುವ ರಾಜಕೀಯ ಮಾಡಲು ಬಾರದ ಸಾಹಿತ್ಯದಲ್ಲೇ ರಾಜಕೀಯವನ್ನು ಕಂಡು ಬೇಸತ್ತುಹೋಗಿದ್ದ ವೀರಭದ್ರಪ್ಪನವರು ಶುರುವಿನಲ್ಲಿ ನಯವಾಗಿ ನಕ್ಕು ತಿರಸ್ಕರಿಸಿದರು. ಆದರೂ ಅವರ ಮೇಲೆ ಒತ್ತಾಯ ನಡೆಯುತ್ತಲೇ ಇತ್ತು. “ನೀವು ಸಾಹಿತಿಗಳು, ಕನ್ನಡದ ಕೆಲಸಗಳು ಆಗಬೇಕು, ಕನ್ನಡಸಂಘವೆಂದರೆ ಬರೀ ರಾಜ್ಯೋತ್ಸವ, ರಕ್ತದಾನ ಶಿಬಿರಕ್ಕೆ ನಿಲ್ಲಬಾರದು, ಪ್ರತಿ ಫ್ಲ್ಯಾಟ್ನಿಂದ ತಿಂಗಳಿಗೆ ಸಾವಿರ ರೂಪಾಯಿ ಸಂಘಕ್ಕೆ ಹೋಗುತ್ತಿದೆ. ಅದು ಕನ್ನಡದ ಕೆಲಸಕ್ಕೆ ವಿನಿಯೋಗವಾಗಬೇಕು. ಕನ್ನಡಸಂಘದಲ್ಲಿ ಕನ್ನಡವನ್ನು ಧ್ಯಾನಿಸೋರು ಯಾರೂ ಇಲ್ಲ. ಅಲ್ಲಿ ಕನ್ನಡದ ಕೆಲಸ ಏನು ಆಗ್ತಾ ಇಲ್ಲ. ನೀವು ನಿಲ್ಲಬೇಕು. ನಿಮ್ಮ ಕಣ್ಣಮುಂದೆಯೇ ಕನ್ನಡ ಸಂಘ ನಿಶ್ಶಕ್ತಿಯಿಂದ ಇರೋದು ನೋಡಕ್ಕೆ ಆಗೊಲ್ಲ ಕವಿಗಳೇ” ಎಂದೆಲ್ಲ ತಲೆ ಸವರಿದ ಮೇಲೆ ವೀರಭದ್ರಪ್ಪನವರಿಗೂ ನಿಲ್ಲುವ ಮನಸ್ಸು ಆಯ್ತು, ಸಂಘಕ್ಕೆ ನಿಲ್ಲಲು ಒಪ್ಪಿಗೆ ಕೊಟ್ಟರು.
ಸಂಘಕ್ಕೆ ಸೇರುತ್ತಿರುವುದರಿಂದ ಅಲ್ಲಿ ಆಗಬೇಕಾದ ಕೆಲಸಗಳೇನು ಎಂದು ಪಟ್ಟಿ ಮಾಡತೊಡಗಿದರು. ಕನ್ನಡ ಬಾರದವರಿಗೆ ಕನ್ನಡ ಕಲಿಸೋದು, ಪ್ರತಿ ತಿಂಗಳು ಬೀಗ ಜಡಿದ ಆಡಿಟೋರಿಯಂನಲ್ಲಿ ಕನ್ನಡ ಓದಿಸೋದು ಕೇಳೋದು, ಹೌಸ್ಕೀಪಿಂಗ್ ಸೆಕ್ಯೂರಿಟಿ ತರದ ಕೆಲಸಗಾರರ ಮಕ್ಕಳ ಫೀಸ್ ಕನ್ನಡಸಂಘ ಭರಿಸೋದು, ಅಪಾರ್ಟ್ಮೆಂಟಿನಲ್ಲಿ ಬರಹಗಾರರಿದ್ದಾರೆ, ಅವರನ್ನು ಪ್ರೋತ್ಸಾಹಿಸುವ ಸಲುವಾಗಿ ಅವರ ಪುಸ್ತಕಗಳನ್ನು ಖರೀದಿಸೋದು, ಕನ್ನಡ ಶಾಲೆಗೆ ಹೋಗದ ಮಕ್ಕಳಿಗೆ ಕನ್ನಡ ಕಲಿಸುವುದು, ಪ್ರತಿ ತಿಂಗಳು ಕನ್ನಡ ಸೇವೆ ಕೆಲಸ ಮಾಡುವವರನ್ನು ಗುರುತಿಸಿ ಸನ್ಮಾನ ಮಾಡೋದು, ಉಪಯೋಗಕ್ಕೆ ಬಾರದ ಆಡಂಬರದ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಕಮ್ಮಿ ಖರ್ಚಿನಲ್ಲಿ ಆಚರಿಸೋದು – ಹೀಗೆ ಪಟ್ಟಿ ಮಾಡಿಕೊಂಡರು.
* * *
ಕನ್ನಡ ಸಂಘದಲ್ಲಿ ಒಂದು ಅಧ್ಯಕ್ಷ, ಎರಡು ಉಪಾಧ್ಯಕ್ಷ, ಒಂದು ಖಚಾಂಚಿ, ಎರಡು ಸಂಘಟನಾ ಕಾರ್ಯದರ್ಶಿ, ಎರಡು ಜಂಟಿ ಕಾರ್ಯದರ್ಶಿ, ಒಂದು ಮಹಿಳಾ ಸ್ಥಾನ ಇತ್ತು. ಎರಡು ಟವರ್ಗಳಿದ್ದ ಕಾರಣ ಒಂದು ಟವರಿನಿಂದ ಒಬ್ಬರು ಇರುವಂತೆ ಸಂಘದ ಸ್ಥಾನಗಳ ಹಂಚಿಕೆಯಾಗಿದ್ದವು. ಅದು ಬಿಟ್ಟು ಐದು ಸದಸ್ಯ ಸ್ಥಾನಗಳಿದ್ದವು. ಹಸಿರು ಟವರಲ್ಲಿದ್ದ ವೀರಭದ್ರಪ್ಪನವರು ನಾಮಿನೇಷನ್ ಸಲ್ಲಿಸುವ ದಿನವೇ, ಅದೇ ಟವರ್ನಲ್ಲಿದ್ದ ಪಳನಿಯಪ್ಪ ಕೂಡ ಅರ್ಜಿ ಸಲ್ಲಿಸಿದ. ಅವಿರೋಧವಾಗಿ ಆಯ್ಕೆಯಾಗುವ ಅವಕಾಶವನ್ನು ತಪ್ಪಿಸಿ ನಕ್ಕ. ಅಲ್ಲಿಯವರೆಗೂ ಚುನಾವಣೆಯ ರಾಜಕೀಯದ ತಿಳಿವಳಿಕೆ ಇಲ್ಲದ ವೀರಭದ್ರಪ್ಪ ಈಗ ಸ್ಥಾನ ಗೆಲ್ಲುವುದಕ್ಕೆ ಪ್ರತಿ ಮನೆಗೂ ಹೋಗಿ ವೋಟ್ ಕೇಳಬೇಕಾಗಿ ಬಂತು! ಅವರ ಅದೃಷ್ಟಕ್ಕೆ ಅವರು ಗೆದ್ದರು ಕೂಡ.
ಆದರೆ ನಿಜವಾದ ರಾಜಕೀಯ ಶುರುವಾಗಿದ್ದು ಹದಿನಾಲ್ಕು ಜನರು ಗೆದ್ದು ಅವರಲ್ಲೇ ಒಂಭತ್ತು ಸ್ಥಾನಗಳಿಗೆ ಕುದುರೆ ವ್ಯಾಪಾರ ಶುರುವಾದಾಗ. ವೀರಭದ್ರಪ್ಪನವರು ಗೆದ್ದ ಮೇಲೆ ಏನು ಮಾಡುವುದು ಎಂದು ಅವರಿಗೂ ಕೂಡ ಗೊತ್ತಿರಲಿಲ್ಲ, ಬೈಲಾ ಓದಿರಲಿಲ್ಲ. ಅವರು ಗೆದ್ದ ಕೂಡಲೇ ಕನ್ನಡ ಕೆಲಸವನ್ನು ಒಟ್ಟಾಗಿ ಮಾಡುವ ಭ್ರಮೆಯಲ್ಲಿದ್ದರು.
ಚುನಾವಣೆಯಲ್ಲಿ ಗೆದ್ದ ದಿನವೇ ವೀರಭದ್ರಪ್ಪನವರಿಗೆ ಬಂಕ್ಶೀನ ಕಾಲ್ ಮಾಡಿ “ನಮ್ ಕಡೆಗೆ ಬಂದ್ಬಿಡಿ ಕವಿಗಳೇ, ಅಧ್ಯಕ್ಷಸ್ಥಾನ ಕೊಡಿಸೋಣ” ಎಂದಿದ್ದ. ನಮ್ ಕಡೆ ಬನ್ನಿ ಎಂದರೆ ಏನು ಎಂದು ವೀರಭದ್ರಪ್ಪನವರಿಗೆ ತಿಳಿಯದೆ ಒಣನಗೆ ನಕ್ಕರು. ಬೆಳಗಾವಿಯ ಬಸಯ್ಯ ಕೂಡ ಕಾಲ್ ಮಾಡಿ “ನಮ್ ಕಡೆಗೆ ಬನ್ನಿ ಕವಿಗಳೇ, ಏನಾದರೂ ಒಂದು ಪೋಸ್ಟ್ ಕೊಡೋಣ” ಎಂದ. ಉಡುಪಿಯ ಪೂಜಾರಿ ಕೂಡ ಕಾಲ್ ಮಾಡಿ ಹುದ್ದೆ ಕೊಡುವ ಮಾತನಾಡಿದ. ಯಾರು ಯಾವ ಕಡೆಯವರು, ತಾನು ಯಾವ ಕಡೆಗೆ ಹೋಗೋದು ಎಂಬುದು ಗೊತ್ತಾಗದೆ ವೀರಭದ್ರಪ್ಪನವರು ಕಂಗಾಲಾದರು. ಕೊನೆಗೂ ಒಂದು ದಿನ ಸಂಜೆ ಯಾವುದೋ ಪುಸ್ತಕ ಕೈಯಲ್ಲಿ ಹಿಡಿದು ಹಾಗೆ ನಿದ್ದೆಗೆ ಹೋಗಿದ್ದಾಗ ಅವರ ಫ್ಲ್ಯಾಟ್ನ ಬೆಲ್ ಕೂಗಿಕೊಂಡಿತು.
ಎದ್ದು ಬಾಗಿಲು ತೆಗೆದರೆ ಬಸವಯ್ಯ ಹಾಗೂ ಇನ್ನೊಂದು ನಾಲ್ಕು ಜನ ಬಂದು ವೀರಭದ್ರಪ್ಪನವರಿಗೆ ಹೂವು-ಹಣ್ಣು ಕೊಟ್ಟು ಶಾಲು ಹೊದೆಸಿ ಗೆದ್ದಿದ್ದಕ್ಕೆ ಅಭಿನಂದಿಸಿ ಅವರ ಜೊತೆ ಸೆಲ್ಫಿ ಹೊಡೆದುಕೊಂಡು ಸ್ಟೇಟಸ್ ಕೂಡ ಹಾಕಿಕೊಂಡು ಅಲ್ಲಿಂದ ಹೊರಟುಬಿಟ್ಟರು. ವೀರಭದ್ರಪ್ಪನವರಿಗೆ ನಿದ್ದೆಗಣ್ಣಿನಲ್ಲೇ ಎಲ್ಲವೂ ನಡೆದಂತೆ ಆಗಿ ಶಾಲನ್ನು ಒಂದು ಕಡೆ ಬಿಸಾಕಿ ಮತ್ತೆ ಕಣ್ಣು ಮುಚ್ಚಿದರು.
* * *
ಬೆಳಗ್ಗೆ ಆಗುವುದರೊಳಗೆ ವೀರಭದ್ರಪ್ಪನವರು ಬಸವಯ್ಯನ ಕಡೆಯವರೆಂದು ಅಧ್ಯಕ್ಷ ಸ್ಥಾನದ ಆಕಾಂಕ್ಷಿಯೆಂದು ಸುದ್ದಿ ಹರಡಿಹೋಗಿತ್ತು. ಎದುರಿಗೆ ಸಿಕ್ಕವರೆಲ್ಲ “ಬಸವಯ್ಯ ಕಡೆ ಯಾಕ್ ಹೋದ್ರಿ ಅಲ್ಲಿ ಜನನೇ ಇಲ್ವಲ್ಲ” ಎಂದು ಇನ್ನೂ ಕೆಲವರು, “ಛೆ ತಪ್ಪು ಮಾಡಿಬಿಟ್ರಿ ಸಾಹಿತಿಗಳೇ, ಬಂಕ್ಶೀನ ಕಡೆ ಸೇರ್ಬೇಕಿತ್ತು, ಕನಿಷ್ಠ ಉಪಾಧ್ಯಕ್ಷ ಸ್ಥಾನ ಆದರೂ ಸಿಕ್ತಾ ಇತ್ತು” ಎಂದರು. ಯಾವ ಗುಂಪಿಗೂ ಸೇರದ ವೀರಭದ್ರಪ್ಪನವರು ಬಸವಯ್ಯ ಹಾಕಿಕೊಂಡ ಒಂದು ಸ್ಟೇಟಸ್ಸಿನಿಂದ ಬಸವಯ್ಯ ಕಡೆ ಸೇರಿಹೋದರು. ರಾಜಕೀಯದ ನಯಾಪೈಸೆ ಜ್ಞಾನ ಇಲ್ಲದ ವೀರಭದ್ರಪ್ಪನವರು “ನಾನು ಯಾರ ಗುಂಪಿಗೂ ಅಲ್ಲ, ನಾನು ಕನ್ನಡ ಸೇವೆ ಮಾಡಲು ಅಷ್ಟೇ ಬಂದಿರೋದು” ಎಂದು ಹೇಳುವಷ್ಟರಲ್ಲಿ ಒಳಗಿನ ಚುನಾವಣೆ ನಡೆದುಹೋಯಿತು. ಅವರಿಗೆ ಯಾವ ಸ್ಥಾನವೂ ಕೂಡ ಸಿಗದೆ ಕೇವಲ ಚುನಾಯಿತ ಸದಸ್ಯನಾಗಿ ಉಳಿದುಹೋದರು.
ಯಾವ ಸ್ಥಾನ ಸಿಗದೆ ಹೋಗಿದ್ದಕ್ಕೆ ವೀರಭದ್ರಪ್ಪನವರಿಗೆ ಅಂತಹ ನೋವೇನು ಆಗಲಿಲ್ಲ. ಅವರಿಗೆ ಸಂಘದ ಒಳಗಿನ ರಾಜಕೀಯ ಗೊತ್ತಿರಲಿಲ್ಲ. ಜೊತೆಗೆ ಕನ್ನಡ ಸೇವೆ ಎಂದು ಬಂದ ಮೇಲೆ ಯಾವ ಸ್ಥಾನವಾದರೇನು? – ಎಂದುಕೊಂಡರು. ಚುನಾವಣೆ ಆಗಿ ಎರಡು ವಾರಕ್ಕೆ ಹೊಸ ಕನ್ನಡಸಂಘದ ಎಲ್ಲ ಸ್ಥಾನ ಸಮೇತ ಹೊಸ ಸಂಘ ಅಧಿಕಾರಕ್ಕೆ ಬಂತು. ಮೊದಲ ಸಭೆಯನ್ನು ಕೂಡ ಕರೆಯಲಾಯಿತು.
ಸಭೆಯಲ್ಲಿ ಎಲ್ಲರೂ ತಾವು ಯಾಕೆ ಕನ್ನಡ ಸಂಘಕ್ಕೆ ಬಂದೆ ಎಂದು, ತಾವು ಮಾಡಲು ಇಚ್ಛಿಸುವ ಕಾರ್ಯಗಳ ಪಟ್ಟಿಯನ್ನು ಬಿಚ್ಚಿಟ್ಟರು. ಕೆಲವರು ಆಕ್ರೋಶಭರಿತರಾಗಿ “ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯ ತಡೆಯುವೆ” ಎಂದು ಕಿರುಚಿದರು. ಇನ್ನು ಕೆಲವರು “ಬೇರೆ ಭಾಷೆಯವರಿಗೆ ತಕ್ಕ ಪಾಠ ಕಲಿಸುತ್ತೇವೆ” ಎಂದರು. ಇನ್ನೊಬ್ಬರು “ಕನ್ನಡಕ್ಕಾಗಿ ರಕ್ತ ಕೊಡೋಣ” ಎಂದರು. ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದ ರಮಾಕಾಂತ “ಕನ್ನಡಕ್ಕಾಗಿ ತನ್ನ ಪ್ರಾಣ ಕೂಡ ಕೊಡುವೆ” ಎಂದನು. ಅದಕ್ಕೆ ಅವನ ದೊಡ್ಡ ಅನುಯಾಯಿಯಾದ ಬಾಲ “ಸೂಪರ್ ಅಣ್ಣ, ಅಧ್ಯಕ್ಷರಿಗೆ ಜೈ” ಎಂದು ಕಿರುಚಿದ. ಉಳಿದವರು ಸುಮ್ಮನೆ ಇರಲಾಗದೆ ಚಪ್ಪಾಳೆ ತಟ್ಟಿದರು. ವೀರಭದ್ರಪ್ಪನವರ ಸರತಿ ಬಂದು ಅವರು ಮಾಡಿಟ್ಟುಕೊಂಡ ಪಟ್ಟಿಯನ್ನು ಒಂದೊಂದೇ ಹೇಳುವಾಗ ಯಾರು ಏನು ಹೇಳದೆ ಸುಮ್ಮನೆ ಕೇಳಿಸಿಕೊಂಡರು.
ಮಾರನೆ ದಿನವೇ ವೀರಭದ್ರಪ್ಪನವರ ಪಟ್ಟಿಯೂ ಎಲ್ಲ ವಾಟ್ಸ್ಯಾಪ್ ಗುಂಪುಗಳಿಗೆ ಹೋಗಿ, “ಈವಯ್ಯ ಬರೀತಾನೆ ಅಂತ ಬುಕ್ ತಗೋಳಕ್ ಆಗುತ್ತಾ? ಇವನ ಬೇಳೆ ಬೇಯ್ಸಿಕೊಳ್ಳಕ್ಕೆ ಸಂಘಕ್ಕೆ ಬಂದಿದ್ದಾನೆ” ಎಂದು ಅಧ್ಯಕ್ಷನ ಅನುಯಾಯಿಯಾದ ಬಾಲ ಒಂದೆರಡು ಕಡೆ ಮಾತಾಡುತ್ತ ಬೆಂಕಿ ಹಚ್ಚಿದ್ದ.
ವೀರಭದ್ರಪ್ಪನವರ ಕಿವಿಗೆ ವಿಷಯ ಬಿದ್ದರೂ ಅವರು ಅಷ್ಟೊಂದು ಪ್ರಬುದ್ಧನಲ್ಲದ, ಮಾನಸಿಕವಾಗಿ ಇನ್ನೂ ಬೆಳೆಯದ, ಮೂರನೇ ದರ್ಜೆಯ ಚಿಂತನೆಯ, ಅಧ್ಯಕ್ಷನ ನಿಜಾರ್ಥದ ಬಾಲವಾಗಿರುವ ಬಾಲನ ಬಗ್ಗೆ ಅಷ್ಟೊಂದು ತಲೆಕೆಡಿಸಿಕೊಳ್ಳಲು ಹೋಗಲಿಲ್ಲ, ಅವರ ಮನಸ್ಸಿನಲ್ಲಿ ಇದ್ದುದು, ಸಂಘದಲ್ಲಿದ್ದುಕೊಂಡು ಮೂರು ವರ್ಷ ಕನ್ನಡಸೇವೆ ಮಾಡಬೇಕು – ಎಂದು ಅಷ್ಟೇ.
ಸದಾ ಯಾವುದಾದರೂ ಕನ್ನಡದ ಕೆಲಸಗಳಲ್ಲಿ ಬ್ಯುಸಿಯಾಗಿದ್ದ ವೀರಭದ್ರಪ್ಪನವರಿಗೆ ಸಂಘದ ಕೆಲಸಗಳಲ್ಲೂ ಕೂಡ ಪಾಲ್ಗೊಳ್ಳಬೇಕೆಂಬ ಆಸೆಯಿತ್ತು. ಕೆಲವು ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿಂದ ಮತ್ತು ಅಧ್ಯಕ್ಷನ ಬಾಲವಾಗಿರುವ ಬಾಲನ ಕಿರಿಕಿರಿಗೆ ಸ್ವಲ್ಪ ದೂರವೇ ಉಳಿದಿದ್ದರು. ಎದುರು ಸಿಕ್ಕವರೆಲ್ಲ “ಏನ್ರಿ ಸಾಹಿತಿಗಳೇ, ಯಾಕೆ ಸಂಘದಲ್ಲಿ ಜಾಸ್ತಿ ಇನ್ವಾಲ್ವ್ ಆಗ್ತಾ ಇಲ್ವಂತೆ? ನಿಮ್ಮಂತೋರು ಆಗಬೇಕು ಕಣ್ರೀ, ಅಲ್ಲಿರೋರಿಗಂತೂ ಎದೆ ಸಿಗುದ್ರೆ ನಾಲಕ್ ಅಕ್ಷರ ಇಲ್ಲ. ಆ ರಮಾಕಾಂತ ಮುಂದಿನ ಸಲ ವೆಲ್ಫೇರ್ ಅಸೋಸಿಯೇಷನ್ಗೆ ನಿಲ್ತಾನೆ ಅದಕ್ಕೆ ಹೆಸರು ಮಾಡುವುದಕ್ಕೆ ದುಡ್ಡು ಮಾಡ್ಕಳ್ಲಕ್ಕೆ ಕನ್ನಡಸಂಘಕ್ಕೆ ಬಂದಿರೋದು. ಸುಮ್ನೆ ಅವರಿಗೆ ಎಲ್ಲ ಬಿಟ್ಟು ನೀವು ನಿಮ್ ಪಾಡಿಗೆ ಇದ್ರೆ ಗಬ್ಬೆದ್ದು ಹೋಗುತ್ತೆ ಕಣ್ರೀ” ಎನ್ನುತ್ತಿದ್ದರು. ಅವರ ಮಾತಿನಲ್ಲಿ ಸತ್ಯ ಇದೆ, ಹೀಗಾಗಿ ಯಾವುದೇ ಕಾರಣಕ್ಕೂ ಸಂಘದ ಚಟುವಟಿಕೆಯನ್ನು ಬಿಡಬಾರದು ಎಂದುಕೊಂಡರು.
ಕನ್ನಡದಲ್ಲಿ ಓದುವ ಕಾರ್ಯಕ್ರಮದ ರೂಪರೇಷೆಯನ್ನು ಅಧ್ಯಕ್ಷರಿಗೆ ಕಳುಹಿಸಿ ಆಡಿಟೋರಿಯಂ ಬಿಡಿಸಲು ಹೇಳಿದರು. ಅಧ್ಯಕ್ಷರು “ಸರಿ” ಎಂದಿದ್ದರು. ಆಮೇಲೆ ಮೂರು ವಾರಕ್ಕೆ “ಅದು ರಿನೋವೇಷನ್ನಲ್ಲಿದೆ ಸದ್ಯಕ್ಕೆ ಎರಡು ಮೂರು ತಿಂಗಳು ಸಿಗೋಲ್ಲ” ಎಂದರು. ಆಮೇಲೆ ಕಿವಿಗೆ ಬಿದ್ದ ವಿಷಯ ಏನಂದರೆ ಈ ವೀರಭದ್ರಪ್ಪನವರ ಹೆಸರು ಎಲ್ಲಿ ಅಧ್ಯಕ್ಷನ ಹೆಸರಿಗಿಂತ ಜಾಸ್ತಿ ಆಗುತ್ತೋ ಎಂದು ಅವನೇ ಈ ರಿನೋವೇಷನ್ ಕತೆ ಕಟ್ಟಿದ್ದ. ಆಡಿಟೋರಿಯಂ ಬೀಗ ತೆಗೆಯಲಿಲ್ಲ, ಯಾವ ರಿನೋವೇಷನ್ ಕೂಡಾ ನಡೆಯಲಿಲ್ಲ.
ವೀರಭದ್ರಪ್ಪನವರ ದುರದೃಷ್ಟವೋ ಏನೋ ಕನ್ನಡಸಂಘದ ಮುಂದಿನ ಮೂರು ಕಾರ್ಯಕ್ರಮಗಳನ್ನು ಅವರು ಮಿಸ್ ಮಾಡಿಕೊಳ್ಳಬೇಕಾಗಿ ಬಂತು. ಮೊದಲ ಕಾರ್ಯಕ್ರಮ ‘ರಕ್ತದಾನ ಶಿಬಿರ’, ಆ ದಿನದಂದು ವೀರಭದ್ರಪ್ಪನವರಿಗೆ ಒಂದು ಪುಸ್ತಕ ಬಿಡುಗಡೆಯ ಕಾರ್ಯಕ್ರಮ ಇತ್ತು. ಅದರಲ್ಲಿ ಅವರು ಅತಿಥಿಯಾಗಿದ್ದರು. ಮೊದಲೇ ತಿಳಿಸಿದ್ದರೂ ಅದೇ ದಿನಾಂಕಕ್ಕೆ ರಕ್ತದಾನ ಶಿಬಿರ ಏರ್ಪಡಿಸಿ ಅವರನ್ನು ತಪ್ಪಿಸುವಲ್ಲಿ ಬಂಕ್ಶೀನನ ಅಭ್ಯರ್ಥಿ ರಮಾಕಾಂತ ಯಶಸ್ವಿಯಾಗಿದ್ದ. ಆದರೆ ಆ ಕಾರ್ಯಕ್ರಮದಲ್ಲಿ ಸಂಘದ ಸದಸ್ಯರಿಗಿಂತ ಬಂಕ್ಶೀನನೇ ಓಡಾಡುತ್ತ ಗಣ್ಯರನ್ನು ಆಹ್ವಾನಿಸುತ್ತ ಬೀಳ್ಕೊಡುತ್ತ ತನ್ನ ಬೇಳೆ ಬೇಯಿಸ್ಕೊಂಡದನ್ನು ಸಂಘದ ಸದಸ್ಯರೇ ವಿರೋಧಿಸಿದರು. ಅದಕ್ಕೆ ಅಧ್ಯಕ್ಷನು “ಅದು ಕನ್ನಡದ ಸೇವೆ. ಅದಕ್ಕೆಲ್ಲ ನಾವು ಅಡ್ಡಿಪಡಿಸಬಾರದು” ಎಂದು ಬೆನ್ನು ಸವರಿದ್ದ.
ವೀರಭದ್ರಪ್ಪನವರಿಗೆ ಸುಡುಸುಡು ಜ್ವರ ಬಂದ ಎರಡು ದಿನದಲ್ಲಿ ಇತ್ತ ಕಡೆ ಸಭೆ ನಡೆದು ಬೆಂಗಳೂರಿನ ಒಂದು ಕಾಲದ ಜೀವನದಿ ವೃಷಭಾವತಿ ಉಳಿಸುವ ಅಭಿಯಾನ ಪಾದಯಾತ್ರೆ ಸಂಘ ಶುರುಮಾಡಿತ್ತು. ಅದಕ್ಕೆ ವೀರಭದ್ರಪ್ಪ “ಜ್ವರದ ಕಾರಣ ಬರಲಾಗುವುದಿಲ್ಲ” ಎಂದು ವಾಟ್ಸಾಪ್ ಗೂಪ್ನಲ್ಲಿ ಹಾಕಿದಾಗ ಬಾಲ “ನೀವು ಸುಮ್ನೆ ತಮಾಷೆಗೆ ಸಂಘವನ್ನು ಸೇರಿದ್ದಿರಿ ಅನ್ಸುತ್ತೆ. ಮನೇಲಿ ಇದ್ದುಬಿಡಿ, ಯಾವ ಜ್ವರನು ಇಲ್ಲ ನಿಮಗೆ” ಎಂದು ರೇಗಿಸಿದ್ದ. ಅದಕ್ಕೆ ಸಿಟ್ಟಿಗೆದ್ದ ವೀರಭದ್ರಪ್ಪನವರು ಸೆಲ್ಫೀ ತೆಗೆದು ಗುಂಪಲ್ಲಿ ಹಾಕಿದರು, ಸಂಘದ ಇತರೆ ಸದಸ್ಯರು ವಯಸ್ಸಾದ ವೀರಭದ್ರಪ್ಪರ ಬಗ್ಗೆ ಅನುಕಂಪ ತೋರಿಸಿ ಬಾಲನಿಗೆ ಬಯ್ದು ಸುಮ್ಮನಾಗಿಸಿದರು.
ವೀರಭದ್ರಪ್ಪನವರು ಮಿಸ್ ಮಾಡಿಕೊಂಡ ಕೊನೆಯ ಕಾರ್ಯಕ್ರಮ ಸರ್ಕಾರೀ ಶಾಲೆ ಉಳಿಸಿ ಅಭಿಯಾನ. ಅದು ಕನಕಪುರದ ಒಂದು ಸರ್ಕಾರೀ ಶಾಲೆಗೆ ಸುಣ್ಣ ಬಣ್ಣ ಬಳಿದು ಉಳಿಸುವ ಅಭಿಯಾನ. ಅದೇ ದಿನ ಪ್ರಜಾರಾಜ್ಯ ಪತ್ರಿಕೆಯ ದೀಪಾವಳಿ ವಿಶೇಷಾಂಕ ಕಥಾಸ್ಪರ್ಧೆಯ ಅಂತಿಮ ಚರ್ಚೆಗೆ ವೀರಭದ್ರಪ್ಪ ಪ್ರಜಾರಾಜ್ಯ ಆಫೀಸಿಗೆ ಹೋಗಿದ್ದರು, ಅದನ್ನು ತಿಳಿಸಿದ್ದರು ಕೂಡ. ಈ ಸಲ ಬಾಲ “ಅಲ್ಲರೀ ಪ್ರತಿ ಸಲ ಏನಾದ್ರು ಹೇಳಿ ತಪ್ಪಿಸ್ಕೊಳ್ತೀರಾ. ನಿಮಗೆ ಆ ಕಾರ್ಯಕ್ರಮ ಈ ಕಾರ್ಯಕ್ರಮಕ್ಕೆ ಹೋಗಕ್ಕೆ ಆಗುತ್ತೆ, ನಮ್ಮ ಸಂಘದ ಕಾರ್ಯಕ್ರಮಕ್ಕೆ ಬರೋಕೆ ಆಗೋಲ್ಲ. ಯಾರು ನಿಮಗೆ ಅಹ್ವಾನ ಮಾಡಿದ್ದೂ ನಮಗೆ ಯಾಕೆ ತಿಳಿಸಿಲ್ಲ” ಎಂದು ಕ್ಲಾಸ್ ತೆಗೆದುಕೊಂಡ. ಮೂರ್ಖನ ಜೊತೆ ಮಾತನಾಡಿ ಪ್ರಯೋಜನವಿಲ್ಲ ಎಂದು ವೀರಭದ್ರಪ್ಪನವರು ಪ್ರಜಾರಾಜ್ಯ ಕೆಲಸ ಮುಗಿಸಿ ಮನೆಗೆ ಬಂದು ಮಲಗಿದರು.
ಸರ್ಕಾರೀ ಶಾಲೆಗೆ ಬಣ್ಣ ಬಳಿದ ಮಾತ್ರಕ್ಕೆ ಶಾಲೆ ಉಳಿಯುತ್ತೆ ಎನ್ನುವುದು ಅವರಿಗೆ ಅರ್ಥವಾಗದ ಪ್ರಶ್ನೆಯಾಯಿತು. ಆದರೆ ಅದನ್ನು ಕೇಳುವಂತಿಲ್ಲ. ಹೇಸಿಗೆಯ ಹೊಂಡದಂತಿರುವ ಈ ಬಾಲ, ದರ್ಶನ, ಪ್ರದೀಪ, ರಮಾಕಾಂತರ ಬಾಯಿ ಮುಚ್ಚಿಸೋದು ಅಸಾಧ್ಯ ಎಂದು ತಿಳಿದ ಕಾರಣ ತೆಪ್ಪಗಾದರು.
* * *
ವೀರಭದ್ರಪ್ಪನವರು ತಮ್ಮ ಸಹನೆ ಕಳೆದುಕೊಳ್ಳುವ ದಿನವೂ ಬಂತು. ಮಧ್ಯರಾತ್ರಿ ವಾಟ್ಸಾಪ್ ಗ್ರೂಪ್ನಲ್ಲಿ ಸಭೆ ಇದೆ ಎಂದು ತಿಳಿಸಿ ಬೆಳಗ್ಗೆ ಸಭೆ ಸೇರಿ, ರಾಜ್ಯೋತ್ಸವ ಆಚರಿಸಲು ಆರೇಳು ಸಮಿತಿಗಳನ್ನು ಮಾಡಿದರು. ಆ ಯಾವ ಸಮಿತಿಗಳಲ್ಲೂ ವೀರಭದ್ರಪ್ಪನವರ ಹೆಸರು ಸೇರಿಸದೆ, ಸಭೆಯನ್ನು ಮುಗಿಸಿದ್ದರು. ವೀರಭದ್ರಪ್ಪನವರು ಬೆಳಗ್ಗೆ ಎದ್ದು ವಾಟ್ಸಾಪ್ ಮೆಸೇಜು ತೆಗೆದು ನೋಡುವಷ್ಟರಲ್ಲಿ ಸಭೆಯೇ ಮುಗಿದುಹೋಗಿತ್ತು. ಜೊತೆಗೆ ಯಾವ ಸಮಿತಿಯಲ್ಲೂ ಅವರ ಹೆಸರು ಇಲ್ಲದೆ ಇರುವುದನ್ನು ನೋಡಿ ಅವರ ಸಹನೆ ಕೆರಳಿತು.
ಸಭೆ ನಡೆದ ಮೂರು ದಿನಕ್ಕೆ ಅಪಾರ್ಟ್ಮೆಂಟ್ ಆಡಳಿತ ಮಂಡಳಿಯಿಂದ ಇಪ್ಪತ್ತೈದು ಲಕ್ಷ ಸ್ಯಾಂಕ್ಷನ್ ಕೂಡ ಮಾಡಿಸಲಾಯಿತು. ಅದರಲ್ಲಿ ಬಂಕ್ಶೀನನ ಪಾತ್ರ ದೊಡ್ಡದಿತ್ತು. ರಾಜ್ಯೋತ್ಸವಕ್ಕೆ ಮೂರು ಸಿನೆಮಾ ನಟರು, ಮತ್ತು ಕಾಮನಬಿಲ್ಲು ರಾಜ್ಯೋತ್ಸವ ಪ್ರಶಸ್ತಿಗೆ ಭಾಷಾತಜ್ಞ ರಾಜೀವ್ ಅವರ ಹೆಸರು ತೆಗೆದುಕೊಳ್ಳಲಾಯಿತು. ಇವೆಲ್ಲವೂ ಕಣ್ಮುಂದೆಯೇ ನಡೆದರೂ ಯಾವುದಕ್ಕೂ ವೀರಭದ್ರಪ್ಪರ ಒಂದು ಮಾತು ಕೂಡ ಸಂಘದ ಅಧ್ಯಕ್ಷ ಸುಮ್ಮನೆ ಕೇಳಲೂ ಇಲ್ಲ. ಇಡೀ ಸಂಘ ತನ್ನನ್ನು ಯಾಕೆ ಹೀಗೆ ನಿರ್ಲಕ್ಷಿಸುತ್ತಿದೆ ಎಂದು ವೀರಭದ್ರಪ್ಪನವರಿಗೆ ಗೊತ್ತಾಗದೆ ಒದ್ದಾಡಿದರು. ರಾಜೀನಾಮೆ ಕೊಟ್ಟು ತನ್ನ ಪಾಡಿಗೆ ಸುಮ್ಮನಿರಬೇಕು ಎಂದುಕೊಂಡರು. ಯಾವುದಕ್ಕೂ ಈ ರಾಜ್ಯೋತ್ಸವ ಒಂದು ಮುಗಿದುಬಿಡಲಿ ಅಲ್ಲಿವರೆಗೂ ಹಲ್ಕಚ್ಚಿಕೊಂಡು ಸುಮ್ಮನಿರಬೇಕೆಂದು ನಿರ್ಧರಿಸಿದರು.
ತಾವೇ ಹೋಗಿ ರಾಜ್ಯೋತ್ಸವ ಕೆಲಸಗಳಲ್ಲಿ ಪಾಲ್ಗೊಳ್ಳಲು ಪ್ರಯತ್ನಿಸಿದರೂ ಸಂಘದವರು ಏನಾದರೂ ಒಂದು ಕಿತಾಪತಿ ಮಾಡಿ ಅವರನ್ನು ದೂರವಿಡುವಲ್ಲಿ ಯಶಸ್ವಿಯಾದರು.
* * *
ರಾಜ್ಯೋತ್ಸವದ ದಿನ ಬೆಳಗ್ಗೆಯೇ ಗರಿಗರಿಯಾದ ಬಿಳಿ ಶರ್ಟು, ಬಿಳಿ ಪಂಚೆ ಧರಿಸಿಕೊಂಡು ಬಲು ಉತ್ಸಾಹದಲ್ಲಿ ಬಂದರು, ಒಂದು ಕಡೆ ಅತಿಥಿಗಳನ್ನು ಬರಮಾಡಿಕೊಳ್ಳಲು, ಆಡಳಿತ ಮಂಡಳಿಯವರನ್ನು ನೋಡಿಕೊಳ್ಳಲು ಡೊಳ್ಳು ನಗಾರಿಯೊಂದಿಗೆ ಬಂಕ್ಶೀನ ಮತ್ತು ರಮಾಕಾಂತ ಒಂದೇ ಬಣ್ಣದ ಜುಬ್ಬಾ ಪೈಜಾಮ ಧರಿಸಿ ಕನ್ನಡ ಬಾವುಟದ ಶಾಲು ಹಾಕಿಕೊಂಡು ಅದರಲ್ಲೇ ಬಂದ ಬೆವರನ್ನು ಒರೆಸಿಕೊಂಡು ಓಡಾಡುತ್ತಿದ್ದರು. ವೀರಭದ್ರಪ್ಪನವರು ಕನ್ನಡ ಬಾವುಟ ಹಾರಿಸಲು ಸಿದ್ಧತೆ ನಡೆಸುವ ಸ್ಥಳಕ್ಕೆ ಬಂದರು. ಅಲ್ಲಿದ್ದ ಸಂಘದ ಸದಸ್ಯರು ಇವರನ್ನು ನೋಡಿ ನಕ್ಕು ತಮ್ಮ ಪಾಡಿಗೆ ಹಳದಿ ಮತ್ತು ಕೆಂಪು ಗುಲಾಬಿ ಹೂಗಳಿಂದ ಪಕಳೆಗಳನ್ನು ಬಿಡಿಸಿ ಬಿಳಿಯ ಟ್ರೇಗೆ ತುಂಬಿಸುತ್ತಿದ್ದರು. ಅಲ್ಲಿಂದ ವೀರಭದ್ರಪ್ಪನವರು ರಾಜ್ಯೋತ್ಸವದ ವೇದಿಕೆ ಕಡೆಗೆ ಹೋದರು. ಅಲ್ಲಿಯೂ ಹೊರಗಿನಿಂದ ಬಂದ ನಿರೂಪಕಿ ಏನೋ ಮಾತಾಡುತ್ತ ಇದ್ದಳು. ಅಲ್ಲಿದ್ದ ಸಂಘದ ಸದಸ್ಯರು ವೀರಭದ್ರಪ್ಪನವರನ್ನು ನೋಡಿದರು ಹೊರತು ಯಾರೂ ಬನ್ನಿ ಎಂದು ಕರೆಯಲಿಲ್ಲ. ಇನ್ನೊಂದು ಕಡೆ ಮಹಿಳಾ ಸ್ಥಾನದ ಸಾವಿತ್ರಮ್ಮ ಅಪಾರ್ಟ್ಮೆಂಟ್ ಮಹಿಳೆಯರಿಗೆ ರಂಗೋಲಿ ಸ್ಪರ್ಧೆ ಏರ್ಪಡಿಸಿ ನೋಡಿಕೊಳ್ಳುತ್ತಿದ್ದಳು. ಅಲ್ಲಿಗೂ ಹೋಗಿ ನಿಂತರು. ಅಲ್ಲಿ ಕೂಡ ಅವರನ್ನು ಮಾತಾಡಿಸುವವರೇ ಇರಲಿಲ್ಲ. ಅಷ್ಟರಲ್ಲಿ ಸಿನೆಮಾ ನಟರ ಕಾರುಗಳು ಬಂದವು. ಡೊಳ್ಳು ನಗಾರಿ ಬಡಿಯಲು ಶುರುವಾಯ್ತು. ಬೆವರು ಒರೆಸಿಕೊಳ್ಳುತ್ತ ರಮಾಕಾಂತ ಮತ್ತು ಅವನಿಗಿಂತ ಮುಂದಿದ್ದ ಬಂಕ್ಶೀನ ನಟರನ್ನು ನಗುತ್ತ ಬರಮಾಡಿಕೊಂಡರು. ನಟರೆಲ್ಲ ನೆರೆದಿದ್ದ ಜನಸ್ತೋಮ ಕಡೆಗೆ ಕೈಬೀಸುತ್ತ ಬಂದು ಕನ್ನಡದ ಬಾವುಟ ಹಾರಿಸಿದರು. ಅಲ್ಲಿಂದ ಸೀದಾ ವೇದಿಕೆಗೆ ಹೋಗಿ ಕುಳಿತುಕೊಂಡರು. ಇಷ್ಟೆಲ್ಲ ಸಂಭ್ರಮಗಳ ಬಗ್ಗೆ ವೀರಭದ್ರಪ್ಪರಷ್ಟೇ ನಿರ್ಲಕ್ಷö್ಯಕ್ಕೆ ಒಳಗಾಗಿದ್ದು ಭಾಷಾತಜ್ಞ ರಾಜೀವ್. ಅವರನ್ನು ಮಾತನಾಡಿಸುವವರೇ ಅಲ್ಲಿರಲಿಲ್ಲ. ಅವರೇ ಸುಮ್ಮನೆ ಮುಂದಿನ ಸಾಲಿನಲ್ಲಿ ಕೂತಿದ್ದರು. ಒಂದು ಹಂತದಲ್ಲಿ ಸಂಘದವರು ಅವರನ್ನು ಗುರುತು ಹಿಡಿದು ಕೈ ಹಿಡಿದು ವೇದಿಕೆ ಮೇಲೆ ಕರೆದುಕೊಂಡು ಬಂದು ಕೂರಿಸಿದರು. ವೀರಭದ್ರಪ್ಪನವರು ಕೊನೆಯ ಸಾಲಿನಲ್ಲಿ ಸುಮ್ಮನೆ ನಿಂತು ಎಲ್ಲವನ್ನೂ ನೋಡುತ್ತಿದ್ದರು.
ಸ್ವಾಗತ ಭಾಷಣ ಶುರುಮಾಡಿದರು. ಬಂದ ನಟರಿಗೆ ಹೊಗಳಿಕೆ ಮೇಲೆ ಹೊಗಳಿಕೆ, ಸಂಘಕ್ಕಾಗಿ ದುಡಿದ ರಮಾಕಾಂತ ಮತ್ತು ಬಂಕ್ಶೀನರನ್ನು ವೇದಿಕೆ ಮೇಲೆ ಗಣ್ಯರ ಜೊತೆ ಕೂರಿಸಿದರು. ಬಂಕ್ಶೀನ ವೇದಿಕೆಯಲ್ಲಿ ಕೂತಿದ್ದು ನೋಡಿ ಸಂಘದ ಸದಸ್ಯರು ಉರಿದುಕೊಂಡರೂ ವಿಧಿಯಿಲ್ಲದೆ ನೋಡುತ್ತ ಸುಮ್ಮನಿದ್ದರು. ಸ್ವಾಗತ ಭಾಷಣ ಮುಗಿದು ನಿತ್ಯೋತ್ಸವ ಹಾಡು ಹಾಡಲಾಯಿತು. ಅದು ಮುಗಿದ ಕೂಡಲೇ ದೀಪ ಬೆಳಗುವುದರ ಮೂಲಕ ರಾಜ್ಯೋತ್ಸವ ಅಧಿಕೃತವಾಗಿ ಶುರುವಾಯಿತು.
ಮೊದಲು ಅಧ್ಯಕ್ಷರ ಭಾಷಣ. ಆಮೇಲೆ ನಟರು ಕೂಡ ಬಾಯಿಗೆ ಬಂದದನ್ನು ಬಡಬಡಿಸಿ ಒಂದೆರಡು ತಮ್ಮ ಸಿನೆಮಾ ಡೈಲಾಗ್ ಹೊಡೆದು, ಚಪ್ಪಾಳೆ ಸಿಳ್ಳೆ ಗಿಟ್ಟಿಸಿ ಕೈಬೀಸಿ ವೇದಿಕೆಯಿಂದ ಇಳಿದುಹೋದರು. ಬಂಕ್ಶೀನ ಕೂಡ ಕನ್ನಡ ಸಂಘದ ಬಗ್ಗೆ ದೊಡ್ಡ ಮಾತು ಆಡಿದ. ಅಷ್ಟರಲ್ಲಿ ಯಾರೋ “ಊಟ ಶುರುವಾಗಿದೆ” ಎಂದರು. ನೆರೆದಿದ್ದ ಅರ್ಧ ಜನ ಊಟ ಬಡಿಸುತ್ತಿದ್ದ ಸ್ಥಳದ ಕಡೆಗೆ ಹೊರಟರು. ಇದ್ದ ಅರ್ಧ ಜನರ ಮುಂದೆಯೇ ಭಾಷಾತಜ್ಞ ರಾಜೀವ್ ಅರ್ಧ ಗಂಟೆ ಕನ್ನಡ ಭಾಷೆಯ, ಕನ್ನಡಿಗರ, ಕನ್ನಡ ರಾಜರ, ಸಾಮ್ರಾಜ್ಯದ ಕುರಿತು ಅದ್ಭುತವಾಗಿ ಮಾತನಾಡಿದರು. ರಮಾಕಾಂತ, ಅದನ್ನು ಆಕಳಿಸುತ್ತ ಕೇಳುತ್ತಿದ್ದ. ಬಂಕ್ ಶೀನ ಮಧ್ಯದಲ್ಲೇ ಫೋನಿನಲ್ಲಿ ಮಾತಾಡುತ್ತ ಎದ್ದುಹೋಗಿದ್ದ, ನೆರೆದಿದ್ದ ಜನಕ್ಕೆ ರಾಜೀವ್ ಮಾತು ಕಿವಿ ತಾಗಿ ಹೋಗುತ್ತಿತ್ತೇ ವಿನಃ ಮನಸ್ಸನ್ನು ತಾಕಿರಲಿಲ್ಲ. ಅವರ ಮಾತು ಮುಗಿದ ಕೂಡಲೇ ಅದಕ್ಕಾಗಿಯೇ ಕಾದವನಂತೆ ರಮಾಕಾಂತ ರಾಜೀವರನ್ನು ಕುರ್ಚಿಯ ಮೇಲೆ ಕೂರಿಸಿ ಅವರಿಗೆ ಸಂನ್ಮಾನ ಮಾಡಿ, ರಾಜ್ಯೋತ್ಸವ ಫಲಕ ನೀಡಿ, “ಆಟೋ ಕಾಯ್ತಿದೆ ಹೊರಡಿ” ಎಂದು ಹೇಳಿ ಕಳುಹಿಸಿದ. ನಿರೂಪಕಿ ಕೆಟ್ಟ ಧ್ವನಿಯಲ್ಲಿ “ಈಗ ನೀವೆಲ್ಲ ಕಾಯುತ್ತಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳ ಆರಂಭ” ಎಂದು ಅರಚಿದಳು. ಊಟದ ಕಡೆಗೆ ಏನಾಗುತ್ತಿದೆ ನೋಡಲು ವೀರಭದ್ರಪ್ಪ ಹೋದರು.
ಊಟಕ್ಕಾಗಿ ಮೂರು ಕೌಂಟರ್ಗಳಿದ್ದವು ಆದರೆ ಕ್ಯೂ ವ್ಯವಸ್ಥೆ ಇಲ್ಲದ ಕಾರಣ ಜಾತ್ರೆಯಂತೆ ಜನರು ತಳ್ಳಾಡುತ್ತ ಕಿರುಚಾಡುತ್ತ ಮುಂದೆ ಹೋಗುತ್ತಿದ್ದರು. ಊಟದ ಒಟ್ಟಾರೆ ವ್ಯವಸ್ಥೆ ಜವಾಬ್ದಾರಿ ಹೊತ್ತಿದ್ದ ಬಾಲ ಸುಮ್ಮನೆ ಫೋನಿನಲ್ಲಿ ಮಾತಾಡುತ್ತ ಅತ್ತಿಂದ ಇತ್ತ, ಇತ್ತಿಂದ ಅತ್ತ ಓಡಾಡುತ್ತಿದ್ದ. ‘ಅಂದಾಜು ಎರಡು ಸಾವಿರ ಜನರಿಗೆ ಊಟ’ ಎಂದು ಮೊದಲೇ ಹೇಳಿದ್ದರು. ಕಾರ್ಯಕ್ರಮ ಶುರುವಾಗಿ ಇನ್ನೂ ಎರಡು ಗಂಟೆಯಾಗಿಲ್ಲ, ಆಗಲೇ ಮೆನುವಿನಲ್ಲಿದ್ದ ಹತ್ತು ಐಟಮ್ಗಳಲ್ಲಿ ಎಂಟು ಐಟಮ್ಗಳು ಖಾಲಿಯಾಗಿ ‘ಕೇವಲ ಪಲಾವು ಅನ್ನ ಸಾಂಬಾರು ಅಷ್ಟೇ’ ಎಂದು ಬಡಿಸೋರು ಹೇಳಿದರು. ವೀರಭದ್ರಪ್ಪ ಎಲ್ಲ ಕೌಂಟರ್ ಕಡೆ ಹೋಗಿ ನೋಡಿದರೆ ಖಾಲಿ ತಟ್ಟೆ ಹಿಡಿದ ಅಪಾರ್ಟ್ಮೆಂಟ್ ಜನರು, ಇವರನ್ನು ನೋಡಿದ ಕೂಡಲೇ “ಸಾಹಿತಿಗಳೇ ಏನ್ರಿ ಊಟ ಖಾಲಿ ಅಂತೀರಾ ತಿಂಗಳು ತಿಂಗಳು ಸಾವಿರ ತಗೊಂಡು ಹಿಂಗ್ ಮಾಡ್ತೀರಾ?” ಎಂದು ತೆಗಳಲು ಶುರುಮಾಡಿದರು. ವೀರಭದ್ರಪ್ಪನವರು ಬಾಲನಿಗೆ ಕಾಲ್ ಮಾಡಿದರೆ ಬಾಲ ಅವರ ಕಾಲ್ ಪಿಕ್ ಮಾಡಲೇ ಇಲ್ಲ. ಯಾವುದಕ್ಕೂ ಒಂದು ಮಾತು ಅಧ್ಯಕ್ಷರಿಗೆ ಹೇಳೋಣ ಎಂದು ವೇದಿಕೆ ಕಡೆಗೆ ಹೊರಟರು.
ವೇದಿಕೆಯಲ್ಲಿ ಅಧ್ಯಕ್ಷರಾಗಲಿ ಉಪಾಧ್ಯಕ್ಷರಾಗಲಿ ಜಂಟಿ ಕಾರ್ಯದರ್ಶಿಗಳಾಗಲಿ ಇರಲಿಲ್ಲ. ಕೇಳಿದರೆ ಆಡಳಿತ ಮಂಡಳಿಯ ರೂಮಿನಲ್ಲಿದ್ದಾರೆ ಎಂದು ಗೊತ್ತಾಯಿತು. ಅಲ್ಲಿಗೆ ಓಡಿದರು. ಅಲ್ಲಿ ಹೋಗಿ ನೋಡಿದರೆ ಅಧ್ಯಕ್ಷರು ಉಪಾಧ್ಯಕ್ಷರು, ಕಾರ್ಯದರ್ಶಿಗಳು, ಬಂಕ್ಶೀನ ಮತ್ತು ಅವರ ಸ್ನೇಹಿತರು ಕುಟುಂಬದವರೆಲ್ಲ ಪ್ಲೇಟುಗಳಿಗೆ ಎಲ್ಲ ಐಟಂ ಹಾಕಿಕೊಂಡು ಅರ್ಧ ತಿಂದು ಇನ್ನರ್ಧ ಹಾಗೆ ಬಿಟ್ಟ ಚಿತ್ರ ನೋಡಿ ಗರಬಡಿದವರಂತೆ ನಿಂತರು. ಅವರನ್ನು ನೋಡಿ ಯಾರೋ “ಬನ್ನಿ ಕವಿಗಳೇ ಊಟ ಮಾಡಿ” ಎಂದರು. ವೀರಭದ್ರಪ್ಪನವರಿಗೆ ಮುನ್ನೂರು ಜನ ಖಾಲಿ ತಟ್ಟೆ ಹಿಡಿದು ಅನ್ನಕ್ಕಾಗಿ ಕಾಯುತ್ತ ನಿಂತ ಚಿತ್ರಣ ನೆನಪಾಗಿ ಸೋತ ಕಾಲಿನಲ್ಲಿ ಅಲ್ಲಿಂದ ಹೊರಟರು. ಬೆಳಗ್ಗೆಯಿದ್ದ ಉತ್ಸಾಹ ಕರಗಿ ಅವರ ಮನಸ್ಸಿನಲ್ಲಿ ಗಾಢವಾದ ನೋವೊಂದು ಎದೆಯನ್ನು ಕಿವುಚಿ ಕಣ್ಣುಗಳಲ್ಲಿ ಅಳು ತುಂಬಿಕೊಂಡಿತು. ಮಂಜಾದ ದಾರಿಯಲ್ಲಿ ತಮ್ಮ ಫ್ಲ್ಯಾಟ್ ಕಡೆಗೆ ಸೋತ ಕಾಲುಗಳನ್ನು ಎಳೆದುಕೊಂಡು ಹೋರಟರು.
* * *
ವೀರಭದ್ರಪ್ಪನವರಿಗೆ ಮಧ್ಯರಾತ್ರಿಯವರೆಗೂ ನಿದ್ದೆ ಬಾರದೆ ಒದ್ದಾಡುತ್ತ, ಮೊಬೈಲ್ ನೋಡುತ್ತ ಕೂತಿದ್ದರು. ಕನ್ನಡ ಸಂಘದ ವಾಟ್ಸಾಪ್ ಗುಂಪಿನಲ್ಲಿ ಕನ್ನಡ ರಾಜ್ಯೋತ್ಸವದ ಫೋಟೋಗಳು, ಸಿನೆಮಾ ನಟರ ಡೈಲಾಗ್ಗಳು, ರಮಾಕಾಂತನ ಮಾತುಗಳು, ಕೊನೆಯಲ್ಲಿ ಇಡೀ ಸದಸ್ಯರೆಲ್ಲ ಸೇರಿ ‘ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪ’ ಹಾಡಿಗೆ ನೃತ್ಯ ಮಾಡಿದ ತುಣುಕುಗಳು ಹರಿದಾಡುತ್ತ, ಅವರವರೇ ಕಾರ್ಯಕ್ರಮ ಭಯಂಕರ ಯಶಸ್ವಿಯಾಗಿದೆ ಎಂದು ಒಬ್ಬರ ಬೆನ್ನು ಇನ್ನೊಬ್ಬರು ತಟ್ಟುತ್ತ ಮೆಸೇಜು ಕುಟ್ಟುತ್ತಿದ್ದರು. ವೀರಭದ್ರಪ್ಪನವರಿಗೆ ಸಿಟ್ಟು ನೆತ್ತಿಗೇರಿ ಮೈ ನಡುಗಿಸಿಕೊಂಡು ಮೆಸೇಜು ಕುಟ್ಟತೊಡಗಿದರು.
“ಪೂರ್ಣಪ್ರಮಾಣದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ. ಆದರೆ ರಾಜ್ಯೋತ್ಸವ ಅದ್ಧೂರಿಯಾಗಿ ಮೂಡಿಬಂತು.
ಸಂಘದ ಯಶಸ್ಸಿಗೆ ಶುಭಾಶಯಗಳು.
ಮಧ್ಯಾಹ್ನಕ್ಕೆ ಊಟ ಖಾಲಿಯಾಗಿದ್ದು, ಎಂದಿನಂತೆ ಬಂಕ್ಶೀನ ಮೆರೆದದ್ದು, ಇಬ್ಬರು ನಟರ ಬದಲಾಗಿ ಒಬ್ಬರು ಸಾಹಿತಿಯೋ ಕನ್ನಡದ ಕಟ್ಟಾಳುವನ್ನು ಕರೆಯಬಹುದಾಗಿತ್ತು. ಸಣ್ಣ ಆಪಾದನೆಗಳು (ನನ್ನದಲ್ಲ, ನನ್ನ ಕಿವಿಗೆ ಬಿದ್ದದ್ದು ನೇರವಾಗಿ ಹೇಳಿದ್ದು). ಮುಂದಿನ ದಿನಗಳಲ್ಲಿ ಇನ್ನೂ ಅತ್ಯದ್ಭುತ ಕೆಲಸಗಳಲ್ಲಿ ನಾನಂತೂ ಇರುವೆ.’’
– ಎಂದು ಹಾಕಿ ಮೊಬೈಲ್ ಸ್ವಿಚ್ ಆಫ್ ಮಾಡಿ ಮಲಗಿಕೊಂಡರು. ಮಾರನೆ ದಿನ ಕಣ್ಣುಬಿಟ್ಟಾಗ ವೀರಭದ್ರಪ್ಪನವರ ಶುಭಾಶಯಕ್ಕೆ ಸಂಘದ ಅಧ್ಯಕ್ಷ ತುಂಬಾ ಖಾರವಾಗಿ ಪ್ರತಿಕ್ರಿಯಿಸಿದ್ದ.
“ಈ ಕನ್ನಡ ರಾಜ್ಯೋತ್ಸವವು ನಮ್ಮ ಈಗಿನ ಸಂಘದ ಮೊದಲನೇ ಜವಾಬ್ದಾರಿಯುತ ಕೆಲಸವಾಗಿತ್ತು. ಅದನ್ನು ಕೆಲವು ಹಳೆಯ ಸಂಘದ ಮತ್ತು ಮುಂಚೂಣಿಯಲ್ಲಿ ನಿಂತು ಮಾಡಿಕೊಂಡು ಹೋಗುವವರ ಹತ್ತಿರ ಕೂಲಂಕಷವಾಗಿ ಚರ್ಚಿಸಿ ನಡೆಸಿ ಅದ್ಭುತವಾಗಿ ಮುಗಿಸಿದ್ದೇವೆ.
ಅದಕ್ಕೆ ಕೆಲವೇ ಕೆಲವರ ಮುಂದಾಳತ್ವ ಮತ್ತು ಬೆಂಬಲ, ಕನ್ನಡಸಂಘದ ಬಗ್ಗೆ ಒಳ್ಳೆಯ ಅಭಿಪ್ರಾಯ ವ್ಯಕ್ತವಾಗಿದೆ.
ಮಧ್ಯಾಹದ ಊಟಕ್ಕೆ ಹೇಳುವುದಾದರೆ ಸ್ವಲ್ಪ ಗಲಿಬಿಲಿಗಳಾಗಿವೆ. ಊಟ ನಾವು ಮಾಡಿಸಿದ್ದು ಸುಮಾರು ೨೫೦೦-೨೮೦೦ ಜನಕ್ಕೆ. ಆದರೆ ಬಂದಿದ್ದು ೩,೫೦೦ ಜನಕ್ಕೂ ಮೇಲೆ. ಅದರಿಂದ ಮಧ್ಯಾಹ್ನದ ಮೇಲೆ ಬಂದವರಿಗೆ ಸಿಕ್ಕಿಲ್ಲ ಅದನ್ನು ಮುಂದಿನ ದಿನಗಳಲ್ಲಿ ಸರಿ ಮಾಡಿಕೊಡೋಣ.
ಇನ್ನು ನಿಮ್ಮ ಯಾವಾಗಲೂ ಮತ್ತು ಕೆಲವರ ಕಾರ್ಯಸೂಚಿಯಾದ ಬಂಕ್ ಶ್ರೀನಿವಾಸ್ ಬಗ್ಗೆ ಹೇಳುವುದಾದರೆ ಕೆಲವರಿಗೆ ಕಾಮಾಲೆಯ ಕಣ್ಣು ಇದೆ. ಅವರಿಗೆ ಕಾಣುವುದೆಲ್ಲ ಹಳದಿ. ಅಂತಹ ಜನಗಳಿಗೆ ಜವಾಬು ಕೊಡುವ ಆವಶ್ಯಕತೆ ನನಗಿಲ್ಲ ಮತ್ತು ನಮ್ಮ ಕೆಲವೇ ಕೆಲವು ಚುನಾಯಿತ ಸದಸ್ಯರುಗಳಿಗೂ ಇಲ್ಲ. ಅಲ್ಲಿ ನಮ್ಮ ಸಂಘದ ಮೇಲೆ ಮತ್ತು ನಮ್ಮ ಮೇಲೆ ಅಭಿಮಾನವಿದ್ದವರು ಎಲ್ಲರೂ ಓಡಾಡಿ ಕೆಲಸ ಮಾಡುತ್ತಿದ್ದರು. ಅದು ಕಾಮಾಲೆ ಕಣ್ಣಿನವರಿಗೆ ಬಂಕ್ ಶ್ರೀನಿವಾಸ್ ಮಾತ್ರ ಕಾಣಿಸಿದ್ದು, ಅಂತವರ ಮಾತಿಗೆ ನೀವು ಕಿವಿಕೊಟ್ಟು ಕೇಳಿಕೊಂಡು ಕೂತರೆ ಅದಕ್ಕೆ ನಾವೇನು ಮಾಡಲಾಗುವುದಿಲ್ಲ. ಅದು ನಿಮ್ಮ ವೈಯಕ್ತಿಕ ಮತ್ತು ವ್ಯಕ್ತಿತ್ವದ ಅಭಿಪ್ರಾಯ.
ಇನ್ನು ನಟರ ಬದಲಾಗಿ ಅಂತ ಹೇಳುವ ಮಾತಿಗೆ:
ಇಲ್ಲಿ ಸಾಹಿತಿಗಳು, ಕವನಗಾರರು, ಕಾದಂಬರಿಕಾರರು ಬಂದರೆ ಮಾತ್ರ ಅದು ಕನ್ನಡ ಸಂಘದ ಸಭೆ ಅಂದುಕೊಂಡಿರುವ ಮೂರ್ಖರಿಗೆ ನಾನು ಹೇಳುವುದೇನೆಂದರೆ ಕನ್ನಡ ಮತ್ತು ಕರ್ನಾಟಕವನ್ನು ದೇಶದಲ್ಲಿ ಮತ್ತು ಪ್ರಪಂಚದಲ್ಲಿ ಚಿರಪರಿಚಿತ ಮಾಡಿಕೊಡುವ ಮತ್ತು ಬೆಳಸುವ ಯಾವುದೇ ಕ್ಷೇತ್ರವಿರಲಿ ಅದನ್ನು ನಾವು ಗಮನದಲ್ಲಿಟ್ಟುಕೊಳ್ಳಬೇಕು ಮತ್ತು ಅವರನ್ನು ನಾವು ಗುರುತಿಸಬೇಕು. (ಈಗಾಗಲೇ ೫ ವರ್ಷದಲ್ಲಿ ನಾವು ಎಲ್ಲಾ ರೀತಿಯ ಕ್ಷೇತ್ರವನ್ನು ಗುರುತಿಸಿದ್ದೇವೆ.) ಅದು ಎಲ್ಲಾ ಕನ್ನಡಪರ ಸಂಘಗಳ ಬೈಲಾದಲ್ಲೂ ಇರುತ್ತದೆ. ನೀವು ಕಣ್ಣುಹರಿಸಿ ನೋಡಿ ಅವರಿಗೆ ಜವಾಬು ನೀಡಬೇಕು. ಇದು ನಂದಲ್ಲ, ಕಿವಿಗೆ ಬಿತ್ತು, ಕಣ್ಣಿಗೆ ಬಿತ್ತು ಅಂತ ಕಾಲಹರಣದ ಮಾತು ಗುಂಪಿನಲ್ಲಿ ಹೇಳುವುದನ್ನು ನಿಲ್ಲಿಸಿ.
ಮುಂದಿನ ದಿನಗಳಲ್ಲಿ ಖಂಡಿತಾ ನಮ್ಮ ಕನ್ನಡ ಸಂಘವು ಸಮಾಜಸೇವೆಯಲ್ಲಿ ಉನ್ನತಮಟ್ಟ ತಲಪುತ್ತದೆ ಸಂದೇಹ ಬೇಡ. ನೀವು ಈ ಗುಂಪಿನಲ್ಲಿ ಬರಿ ಸಂದೇಶವನ್ನು ಹಂಚಿಕೊಳ್ಳುವಲ್ಲಿ ಇರದೆ ಸಾಮಾಜಿಕ ಸೇವೆಗಳಲ್ಲಿ ಪಾಲ್ಗೊಂಡಲ್ಲಿ ಸಂಘದ ಕೆಲಸವು ಚೆನ್ನಾಗಿ ನೆಡೆಯುವುದು.
ಧನ್ಯವಾದಗಳು
ಎಲ್ಲರಿಗೂ ಶುಭವಾಗಲಿ
ಶುಭರಾತ್ರಿ.”
ಅಧ್ಯಕ್ಷನ ಉತ್ತರಕ್ಕೆ ಅವನ ಬಾಲ ಎಂದಿನಂತೆ “ಸೂಪರ್ ಅಣ್ಣಾ ಸಕತ್” ಎಂದು ಹೇಳಿ ಹಾರ್ಟಿನ ಈಮೊಜಿ ಒತ್ತಿದ್ದ. ಇವರನ್ನು ತಿದ್ದಲು ಸಾಧ್ಯವಿಲ್ಲ ಎಂದು ವೀರಭದ್ರಪ್ಪನವರಿಗೆ ತಿಳಿದು ನೋವಿನಿಂದಲೇ ಎದ್ದು ಕೂತರು. ಕನ್ನಡಸಂಘಕ್ಕೆ ಹೋಗಿದ್ದು ಯಾಕೆ? – ಎಂದು ತಮ್ಮನ್ನು ತಾವೇ ಕೇಳಿಕೊಂಡರು. ಯಾರು ಏನಾದರೂ ಮಾಡಿಕೊಳ್ಳಲಿ, ನನ್ನ ಪಾಡಿಗೆ ಕೈಲಾದ ಕನ್ನಡಸೇವೆ ಸಂಘದ ಮೂಲಕ ಅಥವಾ ವೈಯಕ್ತಿಕವಾಗಿ ಎಂದಿನಂತೆ ಮಾಡಿದರೆ ಆಯ್ತು ಎಂದುಕೊಂಡರು. ಅಧ್ಯಕ್ಷನ ಉತ್ತರಕ್ಕೆ ಕೈ ಮುಗಿಯುವ ಎಮೋಜಿ ಒತ್ತಿ ಬಾಲನ ಉತ್ತರಕ್ಕೆ ನಗುವ ಎಮೋಜಿ ಒತ್ತಿ ಸುಮ್ಮನಾದರು.
ಬೆಳಗ್ಗೆ ಸ್ನಾನ ಮುಗಿಸಿ, ನಾಸ್ತಾ ತಿಂದು ಒಂದು ರೌಂಡು ಈ ವಾರ ಪುಸ್ತಕ ಓದಿದವರ ಮೆಸೇಜು ನೋಡಿ ಹೋಗಿ ಅವರು ಓದಬೇಕು ಎನ್ನುತ್ತಿರುವ ಪುಸ್ತಕಗಳ ಪಟ್ಟಿ ತೆಗೆದುಕೊಳ್ಳಲು ಹೊರಟರು. ಹೋದ ಕಡೆಯೆಲ್ಲ ‘ರಾಜ್ಯೋತ್ಸವದ ದಿನ ಊಟ ಸಿಗಲಿಲ್ಲ’ ಎಂದೂ, ‘ಸಿನೆಮಾ ನಟರನ್ನು ಕರೆಸಿ ದುಡ್ಡು ಯಾಕ್ ಹಾಳ್ ಮಾಡಿದ್ರಿ?’ ಎಂದು, ‘ಆ ಬಂಕ್ಶೀನ ಸರಿ ಇಲ್ಲ ಯಾಕ್ ಜೊತೇಲಿ ಹಾಕೊಂಡ್ ಓಡಾಡ್ತೀರಾ?’ ಎಂದು ಕೇಳಿದರು. ವೀರಭದ್ರಪ್ಪನವರು ಅವರಿಗೆಲ್ಲ ಏನು ಉತ್ತರಿಸಬೇಕು ತಿಳಿಯದೆ ಸುಮ್ಮನೆ ನಕ್ಕು, ಪುಸ್ತಕದ ಲಿಸ್ಟ್ ಹಿಡಿದು ಹೊರಟರು.
ಯಾವಾಗಲೂ ಖುಷಿಖುಷಿಯಾಗಿ ಮಾತನಾಡುತ್ತ ಪುಸ್ತಕಗಳ ಮೇಲೆ ಬೆರಳಾಡಿಸುತ್ತ, ಪುಸ್ತಕಗಳ ಹಾಳೆಗಳನ್ನು ತಿರುವಿ ಅದರ ಬಗ್ಗೆ ಏನೇನೋ ನೆನಪಿಸ್ಕೊಂಡು ಮಾತನಾಡುತ್ತಿದ್ದ ವೀರಭದ್ರಪ್ಪನವರು ಸುಮ್ಮನೆ ಅನ್ಯಮನಸ್ಕರಾಗಿ ಪುಸ್ತಕಗಳನ್ನು ಕೊಂಡು ತಮ್ಮ ಜೋಳಿಗೆಗೆ ಹಾಕಿಕೊಳ್ಳುತ್ತಿರುವುದನ್ನು ನೋಡಿದ ಪುಸ್ತಕದ ಅಂಗಡಿಯವರು,
“ಯಾಕ್ ಸರ್ ಹುಷಾರಿಲ್ವಾ? ಏನೋ ಬೇಜಾರ್ ಅಲ್ಲಿದ್ದೀರಿ ಅನ್ಸುತ್ತೆ, ಮುಖ ಒಂಥರ ಇದೀರಾ?” ಎಂದು ಕೇಳಿದರು. ಅದಕ್ಕೂ ಏನೂ ಉತ್ತರಿಸದೆ ಸುಮ್ಮನೆ ಒಂದು ಜೀವವಿಲ್ಲದ ನಗೆ ತೋರಿಸಿ ಆಟೋ ಹತ್ತಿ ಕೂತರು.
ಆಟೋ ಅಪಾರ್ಟ್ಮೆಂಟ್ ಹತ್ತಿರ ಬಂದಾಗ ಎಂಟು-ಒಂಭತ್ತು ಜನರ ಗುಂಪಿತ್ತು. ಬಂಕ್ಶೀನ ಫೋನ್ ಕೈಯಲ್ಲಿಟ್ಟುಕೊಂಡು ಏನೋ ಮಾತಾಡುತ್ತಿದ್ದ. ಆಟೋದವನು ಗೇಟಿನಲ್ಲೇ ನಿಲ್ಲಿಸಿ ದುಡ್ಡು ತೆಗೆದುಕೊಂಡು ಹೊರಟುಹೋದ. ವೀರಭದ್ರಪ್ಪನವರು ಅಲ್ಲಿರುವ ಯಾರನ್ನೂ ನೋಡದೆ ಸುಮ್ಮನೆ ಮುಂದೆ ಹೆಜ್ಜೆ ಇಟ್ಟರು. ಅಷ್ಟರಲ್ಲಿ ಫೋನಿನಲ್ಲಿ ಮಾತು ಮುಗಿದು ಮುಂದೆ ಹೋಗುತ್ತಿರುವ ವೀರಭದ್ರಪ್ಪನವರನ್ನು ಬಂಕ್ಶೀನ ನೋಡಿ ಓಡಿಬಂದು ಅಡ್ಡಗಟ್ಟಿ ನಿಂತನು. ಅವನ ಹಿಂದೆ ಅವನ ಚೇಲಾಗಳು ಬಂದು ವೀರಭದ್ರಪ್ಪನವರನ್ನು ಸುತ್ತುವರಿದು ಚಕ್ರವ್ಯೂಹ ಕಟ್ಟಿದರು.
ಬಂಕ್ಶೀನ ಮುಂದೆ ಬಂದು “ಯಾಕ್ರೀ ಕವಿಗಳೇ ನಾನೇನು ಮಾಡಿದೆ ನಿಮಗೆ, ನಿಮ್ ಮನೆ ಲೂಟಿ ಮಾಡಿದ್ನ, ಇಲ್ಲ ನಿಮ್ಮದು ದುಡ್ಡು ಏನಾದ್ರು ಹೊಡಿದೀನ ಅಥವಾ ನಿಮಗೇನಾದ್ರೂ ತೊಂದರೆ ಕೊಟ್ಟಿದ್ದೇನ?” ಎಂದು ಕೇಳಿದನು. ಅವನು ಹೇಳಿದ ಮಾತುಗಳಲ್ಲಿ ವಿನಯತೆ ಇದ್ದರೂ ಧ್ವನಿಯಲ್ಲಿ ಸಿಟ್ಟು ಕೋಪ ಇತ್ತು. ಅದಕ್ಕೆ ಅವನ ತುಟಿ ನಡುಗುತ್ತಿದ್ದು ಮುಷ್ಠಿ ಹಿಡಿದಿಟ್ಟುಕೊಂಡಿದ್ದೆ ಸಾಕ್ಷಿಯಾಗಿತ್ತು. ಬಂಕ್ಶೀನನ ಮಾತಿಗೆ ಉತ್ತರ ಕೊಡಲೇಬೇಕು ಎಂದು ಕಣ್ಣಲ್ಲೇ ಕೆಂಡಕಾರುತ್ತಾ ಹಾವಭಾವದಲ್ಲಿ ಅಪಾಯವೊಂದನ್ನು ಸೂಚಿಸುತ್ತ ಅವನ ಚೇಲಾಗಳು ನಿಂತಿದ್ದರು.
ವೀರಭದ್ರಪ್ಪನವರು “ನಾನೇನು ಮಾಡಿದೆ ಶ್ರೀನಿವಾಸ್?” ಎಂದು ಕೇಳಿದರು. “ಮತ್ತೆ ನಾನು ನಿಮಗೆ ಹೇಗ್ರಿ ಕಾಣುಸ್ತಿನಿ? ನಾನು ಮೆರೆದೆ ಎಂದು ಹೇಳಿದ್ದೀರಲ್ಲ. ಏನು ಮೆರೆದೆ, ನಾನು ಮೆರೆದ್ರೆ ನಿಮಗೇನು?” ಎಂದು ಗುಡುಗಿದ. ನಿಧಾನವಾಗಿ ಬಂಕ್ಶೀನ ಯಾಕೆ ಹಾಗೆ ಮಾತನಾಡುತ್ತಿದ್ದಾನೆ ವೀರಭದ್ರಪ್ಪನವರಿಗೆ ಸುಳಿವು ಸಿಕ್ಕಿತ್ತು. ನಿನ್ನೆ ಮಧ್ಯರಾತ್ರಿ ಅವರು ಹಾಕಿದ ಮೆಸೇಜು ಬಂಕ್ಶೀನ ಮತ್ತು ಅವನ ಚೇಲಗಳಿಗೆ ತಲಪಿಸುವಲ್ಲಿ ಅಧ್ಯಕ್ಷ ರಮಾಕಾಂತ ಅವನ ಚೇಲ ಬಾಲ ಯಶಸ್ವಿಯಾಗಿದ್ದರು. ಅದಕ್ಕೆ ವೀರಭದ್ರಪ್ಪನವರು “ನೋಡಿ ಸ್ವಾಮಿ ನಿಮಗೆ ಕನ್ನಡ ಸೇವೆ ಮಾಡುವ ಮನಸಿದ್ದರೆ ನೀವು ಈಗ ಮಾಡ್ತಾ ಇರೋ ವೆಲ್ಫೇರ್ ಅಶೋಷಿಯೇಷನ್ ಬಿಟ್ಟು ಇಲ್ಲಿಗೆ ಬನ್ನಿ ಯಾರು ಬೇಡ ಅಂತಾರೆ. ಸಂಘದವರಿಗಿಂತ ನೀವೇ ಜಾಸ್ತಿ ಪಾಲು ತೆಗೆದುಕೊಳ್ಳೋದು ಯಾರಿಗೂ ಇಷ್ಟವಿಲ್ಲ, ಅದನ್ನು ಯಾರು ಹೇಳಿಲ್ಲ ನಾನು ಹೇಳಿದೆ ಅಷ್ಟೇ ಅದು ಬಿಟ್ರೆ ನಮಗೂ ನಿಮಗೂ ವೈಯುಕ್ತಿಕ ಏನು ಇಲ್ಲ” ಎಂದರು.
ಅಷ್ಟಕ್ಕೇ ಸುಮ್ಮನಾಗಲಿಲ್ಲ, ಮಾತಿಗೆ ಮಾತು ಬೆಳೆಯುತ್ತ ಹೋಯಿತು. ಮಾತು ಬೆಳೆಯುತ್ತಿದ್ದಂತೆ ಬಂಕ್ಶೀನನ ಧ್ವನಿಯೂ ಬದಲಾಯ್ತು. ಮುತ್ತಿಕೊಂಡ ಅವನ ಚೇಲಾಗಳು ಬಾಯಿಗೆ ಬಂದಂತೆ ಮಾತನಾಡತೊಡಗಿದರು. ವೀರಭದ್ರಪ್ಪನವರಿಗೆ ಉಸಿರುಗಟ್ಟುವಂತಾಯ್ತು. ಜೊತೆಗೆ ಯಾರು ಅವರ ಮಾತು ಕೇಳದೆ ಏನೇನೋ ಮಾತಾಡುತ್ತಿದ್ದರು, ಕಿರುಚುತ್ತಿದ್ದರು, ಕೆಲವರಂತೂ ಅವರ ಮೈ ಮುಟ್ಟುವುದು ಮಾಡುತ್ತಿದ್ದರು, ಒಂದು ಹಂತದವರೆಗೂ ಸುಮ್ಮನಿದ್ದ ವೀರಭದ್ರಪ್ಪನವರು ಒಮ್ಮೆಲೇ ತಾಳ್ಮೆ ಕಳೆದುಕೊಂಡು “ಮತ್ತೇನೂ ಕೀಳಕ್ ಬರ್ತೀಯ ಕನ್ನಡಸಂಘಕ್ಕೆ” ಅಂದುಬಿಟ್ಟರು. ಯಾವಾಗ ಆ ಮಾತು ಅವರ ಧ್ವನಿ ಇಂದ ಬಂತೋ ರೊಚ್ಚಿಗೆದ್ದ ಬಂಕ್ಶೀನನ ಕಡೆಯವರು ವೀರಭದ್ರಪ್ಪನವರನ್ನು ಮನಸೋ ಇಚ್ಛೆ ಥಳಿಸತೊಡಗಿದರು. ಕೈಯಲ್ಲಿದ್ದ ಜೋಳಿಗೆ ಎಳೆದು ಬಿಸಾಡಿದರು. ಅವರ ಶರ್ಟು ಪಂಚೆ ಕಿತ್ತೆಸೆದರು. ಮುಖಕ್ಕೆ ಬೆನ್ನಿಗೆ ತೊಡೆಗೆ ಒದ್ದರು. ಇದೆಲ್ಲ ಆಗುವಷ್ಟರಲ್ಲಿ ಬಂಕ್ಶೀನ ಅಲ್ಲಿಂದ ಹೊರಟುಹೋಗಿದ್ದ. ವಿಷಯ ಅಲ್ಲಿ ಇಲ್ಲಿ ಹಬ್ಬಿ ಒಂದಷ್ಟು ಅಪಾರ್ಟ್ಮೆಂಟ್ ನಿವಾಸಿಗಳು ಬಂದಾಗಲೇ ಶೀನನ ಚೇಲಾಗಳು ಹೊರಟು ಹೋಗಿದ್ದು, ವೀರಭದ್ರಪ್ಪನವರು ಎದ್ದು ನಿಂತರು.
ಸುತ್ತಲಿನ ಜನರು ಏನಾಯ್ತು ಹೇಗಾಯ್ತು ಕೇಳುತ್ತಿದ್ದರೆ ವೀರಭದ್ರಪ್ಪನವರು ಕುಂಟುತ್ತಲೇ ಹೆಜ್ಜೆ ಹಾಕಿದರು. ಧ್ವನಿ ಕೂಡ ಕೇಳಿಸದಂತೆ ಏನೋ ತಮಗೆ ತಾವೇ ಹೇಳಿಕೊಳ್ಳುತ್ತ ನಡೆಯುತ್ತಿದ್ದರು. ‘…ರಮಾಕಾಂತ, …ಬಾಲ, ಥೂ ನನ್ಮಕ್ಕಳ ಇದೇನಾ ಕನ್ನಡಸೇವೆ’ ಎನ್ನುವುದಷ್ಟೆ ಒಂದಿಬ್ಬರಿಗೆ ಕೇಳಿಸಿತು. ಸ್ವಲ್ಪ ಹೊತ್ತು ಸಿಟ್ಟಿನಲ್ಲಿ ಕುಂಟುತ್ತಾ ಸಾಗಿದವರಿಗೆ ಅದು ಏನನಿಸಿತೋ ಕುಸಿದುಕೂತರು, ಅಳತೊಡಗಿದರು. ಅದನ್ನು ಕಂಡ ಜನರು “ಪಾಪ ಮೊದಲೇ ಏಜ್ ಆಗಿದೆ, ಹಿಂಗ್ ಹೊಡುದ್ರೆ ತಡ್ಕಳಕ್ ಆಗುತ್ತಾ” ಎಂದು ಕರುಣೆಯ ಮಾತಾಡುತ್ತ ನಿಂತಲ್ಲೇ ನಿಂತು ನೋಡುತ್ತಿದ್ದರು.
ಸೆಕ್ಯೂರಿಟಿ ಅದನ್ನು ನೋಡಿ ಬಿದ್ದ ಪುಸ್ತಕಗಳನ್ನು ಆಯ್ದುಕೊಂಡು ಜೋಳಿಗೆಗೆ ತುಂಬಿಸಿಕೊಂಡ, ನಾಲ್ಕೈದು ಫ್ಲಾಟ್ನಲ್ಲಿ ಮನೆಕೆಲಸ ಮಾಡುತ್ತಿದ್ದ ರಾಜಮ್ಮ ಓಡಿ ಬಂದು ಅಲ್ಲೇ ಬಿದ್ದಿದ್ದ ಶರ್ಟು ಪಂಚೆ ಹಿಡಿದುಕೊಂಡಳು. ಸೆಕ್ಯೂರಿಟಿ ವೀರಭದ್ರಪ್ಪರ ಹತ್ತಿರ ಬಂದು ‘ಉಠಾವ್ ಸಾಬ್’ ಎಂದು ಕಣ್ಣೀರು ತುಂಬಿಕೊಂಡು ಕೇಳಿದ ಕೆಳಗೆ ಬಿದ್ದು ಒಡೆದಿದ್ದ ಮೊಬೈಲ್ ಜೋಳಿಗೆಯ ಒಳಗೆ ಇಟ್ಟ. ಅವನ ಕಡೆ ಶೂನ್ಯ ದೃಷ್ಟಿ ನೆಟ್ಟು ಎದ್ದೇಳಲು ಪ್ರಯತ್ನಿಸಿದರೂ, ಎದ್ದೇಳಲಾಗದೆ ಮತ್ತೆ ಕೂತರು. ರಾಜಮ್ಮ ‘ಎದ್ದೇಳಿ ಅನ್ನ’ ಎಂದು ಅಸ್ಖಲಿತ ಕನ್ನಡದಲ್ಲಿ ಎದ್ದೇಳಿಸಿ ಭುಜವನ್ನು ಹಿಡಿದಳು. ಒಂದು ಭುಜವನ್ನು ಸೆಕ್ಯೂರಿಟಿ ಹೆಗಲಿಗೂ, ಮತ್ತೊಂದನ್ನು ರಾಜಮ್ಮನ ಹೆಗಲಿಗೂ ಹಾಕಿ ಮೆಲ್ಲಗೆ ನಡೆದರು.
ಹಿಂದಿ ಹೇರಿಕೆ ವಿಷಯದಲ್ಲಿ ಸೆಕ್ಯುರಿಟಿಯವನಿಗೆ, ಹತ್ತು ವರ್ಷದಿಂದ ಇದ್ರೂ ನೆಟ್ಟಗೆ ಕನ್ನಡ ಕಲಿತಿಲ್ಲ ತಮಿಳಲ್ಲೇ ಮಾತಾಡ್ತಾಳೆ ಎಂದು ರಾಜಮ್ಮನಿಗೂ ಬೈದಿದ್ದ ವೀರಭದ್ರಪ್ಪನವರು, ಅವರಿಬ್ಬರ ಹೆಗಲಮೇಲೆ ಭುಜ ಇಟ್ಟು ನೋವಿನಿಂದ ಕಾಲನ್ನು ಇಡುತ್ತ ತಮ್ಮ ಫ್ಲಾಟ್ ತಲಪಿದರು.
ಅದೇ ಸಮಯಕ್ಕೆ ಕನ್ನಡಸಂಘ ವಾಟ್ಸಾಪ್ನಲ್ಲಿ ಸಂಘದ ವಿರುದ್ಧವಾಗಿ ಇಲ್ಲಸಲ್ಲದ ಹೇಳಿಕೆ ಕೊಟ್ಟಿದ್ದಕ್ಕೆ ಸಭೆಯೊಂದು ಕರೆದು ವೀರಭದ್ರಪ್ಪನವರನ್ನು ವೋಟಿನ ಆಧಾರದ ಮೇಲೆ ಸಂಘದಿಂದ ಉಚ್ಚಾಟಿಸಲಾಗಿ ಅವರನ್ನು ವಾಟ್ಸಾಪ್ ಗ್ರೂಪಿನಿಂದ ಹೊರಹಾಕಲಾಯಿತು. ವೀರಭದ್ರಪ್ಪನವರಿಗೆ ಈ ವಿಷಯ ಗೊತ್ತಾಗಲಿಲ್ಲ, ಅವರ ಮೊಬೈಲ್ ಪುಸ್ತಕಗಳ ನಡುವೆ ಜೋಳಿಗೆಯಲ್ಲಿ ಬೆಚ್ಚನೆ ಕೂತಿತ್ತು.