ಡೀಗೋ ಮತ್ತು ಸಂಗಡಿಗರು ಮಲಪು ತೀರದಿಂದ ಯಾರೋ ಒಬ್ಬನನ್ನು ಎತ್ತಿಹಾಕಿಕೊಂಡು ಬರುತ್ತಿರುವುದನ್ನು ದೂರದಿಂದಲೇ ದುರ್ಬೀನು ಇಟ್ಟುಕೊಂಡು ನೋಡುತ್ತಿದ್ದ ನಾವಿಕರು ಮಸ್ಕರೇನ್ಯಾಸನಿಗೆ ತಿಳಿಸಿದ್ದರು. ಹಾಗಾಗಿ ಅವನೂ ಕುತೂಹಲದಿಂದಲೇ ದೋಣಿಯ ಆಗಮನವನ್ನು ನಿರೀಕ್ಷಿಸುತ್ತಿದ್ದ. ದೋಣಿ ಹಡಗಿನ ಪಕ್ಕಕ್ಕೆ ಬಂದು ಅದರಲ್ಲಿದ್ದವರೆಲ್ಲ ಹಡಗಿಗೆ ಹತ್ತಿದಾಗ ವಿಜಯಧ್ವಜ ಸ್ವಾಮಿಗಳನ್ನು ಕೂಡ ಹಡಗಿನ ಅಟ್ಟಕ್ಕೆ ಹತ್ತಿಸಿದರು. ಸ್ವಾಮಿಗಳು ಕೋಪ, ಭಯ ಹಾಗೂ ಆತಂಕಗಳಿಂದ ಏದುಸಿರುಬಿಡುತ್ತಿದ್ದರು. ದೇವರು ಇದು ಯಾವ ಪರೀಕ್ಷೆಯನ್ನು ತಮಗಾಗಿ ಏರ್ಪಡಿಸಿದ್ದಾನೆಂದು ಅವರಿಗೆ ತಿಳಿಯಲಿಲ್ಲ. ಅಥವಾ ಯಾವ ತಪ್ಪಿಗಾಗಿ ಈ ಶಿಕ್ಷೆ ತನಗೆ ಸಿಕ್ಕಿದೆ ಎಂದು ಗೊತ್ತಾಗದೆ ಮೌನವಾಗಿ ಭಗವಂತನನ್ನು ಧ್ಯಾನಿಸತೊಡಗಿದರು.
೧೫೪೨ನೆಯ ಈಸಾಯಿ ಸಂ|| ಫೆಬ್ರುವರಿ ತಿಂಗಳ ಇಪ್ಪತ್ತೇಳನೆಯ ತೇದಿ.
ಅರಬಿ ಸಮುದ್ರದ ದಂಡೆಯಲ್ಲಿದ್ದ ಮಲಪು ಎಂಬ ಹೆಸರಿನ ಕರಾವಳಿಯ ತೀರದಲ್ಲಿ ಕಾವಿ ಬಟ್ಟೆ ಧರಿಸಿದ ಸಂನ್ಯಾಸಿಯೊಬ್ಬರು ಸಂಜೆಯ ಹೊತ್ತಿನ ಧ್ಯಾನಕ್ಕಾಗಿ ಕಡಲತೀರದತ್ತ ಒಬ್ಬರೇ ನಡೆದುಕೊಂಡು ಬಂದರು. ಅವರು ರಜತಪುರದ ಮಠದ ಕಿರಿಯ ಪಟ್ಟದ ಸ್ವಾಮಿಗಳಾದ ವಿಜಯಧ್ವಜ ಯತಿಗಳು. ಊರಲ್ಲಿದ್ದರೆ, ಬೇರೇನೂ ಉತ್ಸವಾದಿಗಳು ಇಲ್ಲದಿದ್ದರೆ ಮಲಪಿನ ಸಮುದ್ರದಂಡೆಯಲ್ಲಿ ಧ್ಯಾನಮಾಡುವುದು ಅವರ ನಿತ್ಯದ ಅಭ್ಯಾಸವೆನ್ನಬಹುದು. ಮಠದಿಂದ ಎರಡು ಮೈಲು ದೂರವಿದ್ದ ಸಮುದ್ರದಂಡೆಗೆ ಅವರು ಒಳದಾರಿಯಲ್ಲಿ ಗದ್ದೆ ಹುಣಿಗಳ ಮೇಲೆ ನಡೆದು ಬರುತ್ತಿದ್ದರು. ಅವರು ಕುಳಿತುಕೊಳ್ಳುತ್ತಿದ್ದುದು ಸಮುದ್ರತೀರದ ಮರಳಿನಿಂದೀಚೆಗೆ ಚಪ್ಪಟೆಯಾಗಿ ಆಮೆಯ ಬೆನ್ನಿನಂತೆ ಇದ್ದ ಸಣ್ಣ ಪಾದೆಯೊಂದರ ಮೇಲೆ.
ಮೀನುಗಾರಿಕೆ ಇತ್ಯಾದಿ ಚಟುವಟಿಕೆಗಳು ನಡೆಯುತ್ತಿದ್ದ ಜಾಗ ಅಲ್ಲಿಂದ ಉತ್ತರಕ್ಕೆ ಇನ್ನೂರು ಮೀಟರ್ ದೂರದಲ್ಲಿತ್ತು. ಅಲ್ಲಿ ಕೆಲವೊಮ್ಮೆ ಮೀನುಗಾರರು ಓಡಾಡುತ್ತಿದ್ದರೂ ಇವರು ಧ್ಯಾನಕ್ಕೆ ಕುಳಿತುಕೊಳ್ಳುವ ಬಂಡೆಯ ಬಳಿ ಜನಸಂಚಾರ ಇರುತ್ತಿರಲಿಲ್ಲ. ಅದಕ್ಕಾಗಿ ಅವರು ಈ ಸ್ಥಳವನ್ನು ಆರಿಸಿಕೊಂಡಿದ್ದರು. ಇಲ್ಲಿ ಕುಳಿತರೆ ದೂರದಲ್ಲಿ ಮನುಷ್ಯರು ಓಡಾಡುತ್ತಿದ್ದದ್ದು ಕಾಣಿಸುವಂತಿತ್ತು. ಆದರೆ ಯಾರ ಮಾತುಗಳೂ ಕೇಳಿಸುತ್ತಿರಲಿಲ್ಲ ಮತ್ತು ಕಣ್ಣುಮುಚ್ಚಿ ಕುಳಿತರೆ ಮನುಷ್ಯ ಪ್ರಪಂಚ ಹತ್ತಿರವಿದೆ ಎಂದು ಅನಿಸುತ್ತಿರಲಿಲ್ಲ.
ಆ ದಿನ ವಿಜಯಧ್ವಜರು ಕಡಲಿನತ್ತ ಬಂದವರೇ ದೂರದಲ್ಲೊಂದು ವಿದೇಶೀ ಹಡಗು ನಿಂತಿದ್ದುದನ್ನು ಗಮನಿಸಿದ್ದರು. ಕರಾವಳಿಯಲ್ಲಿ ಅಂತಹ ಹಡಗುಗಳು ಸ್ವಲ್ಪ ದೂರ ಸಮುದ್ರದಲ್ಲಿ ಹಾದುಹೋಗುವುದೇನೂ ಅಪರೂಪವಲ್ಲ.
ಕೆಲವೊಮ್ಮೆ ಹಡಗುಗಳನ್ನು ಲಂಗರು ಹಾಕಿ ನಿಲ್ಲಿಸಿ ದೋಣಿಗಳು ಮಲಪಿನ ತೀರಕ್ಕೆ ಬಂದು ಸಿಹಿನೀರನ್ನು ತುಂಬಿಕೊಂಡು ಹೋಗುತ್ತಿದ್ದುದುಂಟು. ಅಲ್ಲಿ ರಾಮ ಮರಕಾಲನ ಮನೆಯ ಬಾವಿಯಲ್ಲಿ ಸಾಕಷ್ಟು ಸಿಹಿನೀರು ಇದ್ದುದರಿಂದ ಸರಕು ಸಾಗಾಟದ ಮಚವೆ ಮತ್ತು ಪಾಂಡಿಗಳು ಹೆಚ್ಚಾಗಿ ನೀರು ತುಂಬಿಸಿಕೊಳ್ಳಲು ಅಲ್ಲಿಗೆ ಬರುತ್ತಿದ್ದವು. ಕೆಲವು ದೊಡ್ಡ ಹಡಗುಗಳಿಗೂ ಆ ಸ್ಥಳ ಗೊತ್ತಿತ್ತು. ಅಲ್ಲಿಗೆ ನಾವಿಕರು ಸಿಹಿನೀರಿಗಾಗಿ ಬಂದರೆ ರಾಮ ಮರಕಾಲನ ಮನೆಯ ಸುತ್ತಲಿನ ಮೊಗವೀರರು ಸಾಕಷ್ಟು ಕುಡಿಯುವ ನೀರು ಸೇದಿ ಕೊಡುತ್ತಿದ್ದರು. ದೊಡ್ಡ ಪೀಪಾಯಿಗಳಲ್ಲಿ ನೀರು ಬೇಕಾದರೆ ಏತದಿಂದ ನೀರನ್ನು ಎತ್ತಿ ತುಂಬಿಸಿಕೊಡುವ ವ್ಯವಸ್ಥೆಯೂ ಅಲ್ಲಿಯೆ ಸಮೀಪದಲ್ಲಿತ್ತು. ಒಂದು ಸಣ್ಣ ತೋಡನ್ನು ದಾಟಿ ಇತ್ತ ಮೂಡಣಕ್ಕೆ ಬಂದರೆ ತ್ಯಾಂಪಣ್ಣನ ಗದ್ದೆಯ ಬದಿಯ ಗಂಪ(ಸಣ್ಣ ಕೊಳ)ಕ್ಕೆ ಏತ ಹಾಕಿದ್ದುದರಿಂದ ಅದರಿಂದ ನೀರೆತ್ತಿಸಿ ಪೀಪಾಯಿಗಳಲ್ಲಿ ನೀರು ತುಂಬಿಸಿಕೊಂಡು ಹೋಗುತ್ತಿದ್ದವರೂ ಇದ್ದರು. ಇಬ್ಬಿಬ್ಬರು ನಾವಿಕರು ಗಳಕ್ಕೆ ಪೀಪಾಯಿಗಳನ್ನು ನೇತಾಡಿಸಿಕೊಂಡು ನೀರು ಒಯ್ಯುವ ದೃಶ್ಯಗಳೂ ಸ್ಥಳೀಯರಿಗೆ ಅಪರೂಪವಲ್ಲ. ನಾವಿಕರು ತಮಗೆ ಸಹಕರಿಸಿದ ಮೊಗವೀರರಿಗೆ ಏನಾದರೂ ಪುಡಿಕಾಸುಗಳನ್ನು ಕೊಡುತ್ತಿದ್ದರು; ಕೆಲವೊಮ್ಮೆ ಏನೂ ಕೊಡದೆ ಹಾಗೆಯೆ ನೀರು ಒಯ್ಯುತ್ತಿದ್ದವರೂ ಇದ್ದರು. ನೀರಿಗಾಗಿ ಹಣವನ್ನು ಕೊಡುವ ಪದ್ಧತಿ ಇರಲಿಲ್ಲ.
ಈ ದಿನ ಕಡಲಿನಲ್ಲಿ ಲಂಗರು ಹಾಕಿದ್ದ ಹಡಗಿನಿಂದ ಒಂದು ದೋಣಿ ನೀರನ್ನು ಒಯ್ಯಲು ದಡದತ್ತ ಬಂತು. ಅದರಲ್ಲಿದ್ದ ಒಬ್ಬ ಕೆಂಪುಮೂತಿಯ ಪರದೇಶೀ ನಾವಿಕ ಮತ್ತು ಅವನ ಸಹಾಯಕ್ಕೆ ಇದ್ದ ಒಬ್ಬ ಕರಿಯ ಮನುಷ್ಯ (ಅವರಿಗೆ ಹಬಶಿಗಳೆಂದು ಹೇಳುತ್ತಿದ್ದರು.) ಮತ್ತು ನಾಲ್ವರು ಭಾರತದವರಂತೆ ಕಾಣುತ್ತಿದ್ದ ನಾವಿಕರು ನೀರಿನ ಪೀಪಾಯಿಯನ್ನು ದೋಣಿಗೆ ಏರಿಸಿದ ಮೇಲೆಯೂ ತಮ್ಮ ಹಡಗಿನತ್ತ ಹಿಂದಿರುಗದೆ ಅಲ್ಲಿಯೇ ಅತ್ತ-ಇತ್ತ ಠಳಾಯಿಸುತ್ತಿದ್ದರು. ರಾಮ ಮರಕಾಲ ಮತ್ತು ಅವನ ಜತೆಗಿದ್ದ ಮೂವರು ಮೀನುಗಾರರಿಗೆ ಅವರು ಯಾವುದೋ ದುಷ್ಕೃತ್ಯಕ್ಕೆ ಹೊಂಚು ಹಾಕುತ್ತಿರುವವರಂತೆ ಕಂಡರು. ಅವರು ದರೋಡೆಯಂತಹ ಕೆಲಸಕ್ಕೆ ಇಳಿದರೆ ತಾವು ನಾಲ್ವರು ಏನಾದರೂ ಪ್ರತಿರೋಧ ತೋರಿಸಲು ಸಾಧ್ಯವೆ ಎಂದು ಇವರು ರಾಮನ ಗುಡಿಸಲಿನ ಜಗಲಿಯ ಮೇಲೆ ಕುಳಿತು ಆಲೋಚಿಸತೊಡಗಿದರು. ಆಗಾಗ ರಾಮ ಗುಡಿಸಲಿನ ಹಿಂಬದಿಗೆ ಹೋಗಿ ಆಗಂತುಕರ ಚಲನವಲನಗಳನ್ನು ನೋಡಿ ಮತ್ತೆ ಹಿಂದಿರುಗುತ್ತಿದ್ದ. ಅದು ಮೊಗವೀರ ಕೇರಿಯೇ ಆಗಿದ್ದುದರಿಂದ ಆಗಂತುಕರ ದಾಳಿಯನ್ನು ಎದುರಿಸಲು ಧೈರ್ಯಶಾಲಿಗಳನ್ನು ಒಗ್ಗೂಡಿಸುವುದು ಕಷ್ಟವೇನೂ ಆಗಿರಲಿಲ್ಲ. ರಾಮ ಮರಕಾಲ ಮೆತ್ತಗೆ ಒಬ್ಬನನ್ನು ಕರೆದು, ಕೇರಿಯ ಕೆಲವು ಮನೆಗಳಿಗೆ ಹೋಗಿ ಗಂಡಸರಿದ್ದರೆ ತಲವಾರುಗಳನ್ನು ಹಿಡಿದುಕೊಂಡು ಬರುವುದಕ್ಕೆ ಹೇಳಿ ಕಳುಹಿಸಿದ.
ಮೊಗವೀರ ಗಂಡಸರು ಸಿದ್ಧರಾಗಿ ಬರುವಷ್ಟರಲ್ಲಿ ಆಗಂತುಕ ನಾವಿಕರು ದೋಣಿ ಹತ್ತಿ ತಮ್ಮ ಹಡಗಿನತ್ತ ಹುಟ್ಟುಹಾಕತೊಡಗಿದರು. ರಾಮ ಮರಕಾಲ ಮತ್ತು ಅವನ ಸಂಗಡಿಗರು ಸಮುದ್ರದಂಡೆಗೆ ಹೋಗಿ ದೋಣಿಗರು ಸಂಶಯಾಸ್ಪದವಾಗಿ ಅತ್ತಿತ್ತ ಸುಳಿದಾಡಿದ್ದುದು ಯಾಕೆ ಎಂದು ನೋಡಹತ್ತಿದರು. ಅಷ್ಟರಲ್ಲಿ ದೋಣಿ ಹಡಗಿನತ್ತ ಚಲಿಸುವ ಬದಲು ಎಡಕ್ಕೆ ತಿರುವು ತೆಗೆದುಕೊಂಡು ದಕ್ಷಿಣ ದಿಕ್ಕಿನತ್ತ ಚಲಿಸಲಾರಂಭಿಸಿತು. ರಾಮ ಮರಕಾಲ ಮತ್ತು ಸಂಗಡಿಗರಿಗೆ ಅವರು ಏಕೆ ದಕ್ಷಿಣ ದಿಕ್ಕಿನತ್ತ ಹೋಗುತ್ತಿದ್ದಾರೆ ಎನ್ನುವುದು ಅರ್ಥವಾಗಲಿಲ್ಲ.
ಸ್ವಲ್ಪ ಹೊತ್ತಿನಲ್ಲಿ ದೋಣಿ ಸ್ವಾಮಿಗಳು ಧ್ಯಾನ ಮಾಡುತ್ತಿದ್ದ ದಂಡೆಯ ಎದುರಿಗೆ ದಡದತ್ತ ತಿರುಗಿತು. ಅವರು ಯಾವುದೋ ಕೆಟ್ಟ ಕೆಲಸ ಮಾಡಲು ಹೊಂಚುಹಾಕುತ್ತಿರುವುದು ಮೊಗವೀರರಿಗೆ ಖಚಿತವಾಯಿತು. ಆದರೆ ಅದು ಏನೆಂದು ಗೊತ್ತಾಗಲಿಲ್ಲ. ಇವರೂ ಅತ್ತ ಹೋಗಬಹುದಿತ್ತು. ಆದರೆ ಕೆಂಪುಮೂತಿಯ ನಾವಿಕರ ಬಳಿ ಕೋವಿ ಇರುತ್ತದೆ. ಸಿಟ್ಟು ಬಂದರೆ ಹಿಂದುಮುಂದೆ ನೋಡದೆ ಡಿಮ್ಮೆಂದು ಗುಂಡು ಹಾರಿಸಿ ಕೊಂದು ಹೊರಟುಹೋಗುತ್ತಾರೆ. ಕರಾವಳಿಯ ರಾಜರೇ ಅವರಿಗೆ ಭಯಪಟ್ಟು ಸುಮ್ಮನಿರುವಾಗ ಮೀನುಗಾರರು ಅವರನ್ನು ನಿರ್ಬಂಧಿಸುವುದು ಸಾಧ್ಯವೆ? ಸಾಧ್ಯವಾದಷ್ಟು ತಮ್ಮ ತಮ್ಮ ರಕ್ಷಣೆಯನ್ನು ಹೇಗಾದರೂ ಮಾಡಿಕೊಂಡು ಬದುಕಬೇಕಷ್ಟೆ. ಹಾಗಾಗಿ ರಾಮ ಮರಕಾಲನ ತಂಡದವರು ಅಲ್ಲಿಯೇ ನಿಂತು ನೋಡತೊಡಗಿದರು.
ಅಲ್ಲಿಗೆ ಬಂದದ್ದು ಪೋರ್ಚುಗೀಸರ ಹಡಗು ಮತ್ತು ದೋಣಿಯಾಗಿತ್ತು. ಹಡಗಿನಲ್ಲಿದ್ದ ಕಪ್ತಾನನ ಹೆಸರು ಮಸ್ಕರೇನ್ಯಾಸ್. ದೋಣಿಯಲ್ಲಿ ಕಡಲತೀರಕ್ಕೆ ಭಾರತೀಯ ಮತ್ತು ಆಫ್ರಿಕನ್ ನಾವಿಕರ ಜತೆಯಲ್ಲಿ ಬಂದ ಪೋರ್ಚುಗೀಸ್ ನಾವಿಕ ಡೀಗೋ ಲೋಪೆಸ್ ಎಂಬವನು. ಮಸ್ಕರೇನ್ಯಾಸನ ಆದೇಶದಂತೆ ಈ ದೋಣಿಯವರು ಒಂದು ಕಾರ್ಯವನ್ನೆಸಗಬೇಕಿತ್ತು. ಅದನ್ನೀಗ ಸಾಧಿಸಲು ಮತ್ತೊಮ್ಮೆ ದೋಣಿಯನ್ನು ಕಡಲತಡಿಯ ಮರಳಿನಲ್ಲಿ ಎಳೆದು ನಿಲ್ಲಿಸಿದರು. ಇಬ್ಬರು ನಾವಿಕರು ದೋಣಿಯ ಪಕ್ಕದಲ್ಲಿ ಒರಗಿ ನಿಂತು ಕಾಯತೊಡಗಿದರು. ಡೀಗೋ ಲೋಪೆಸ್ ಮತ್ತು ಹಬಶಿಯ ಸಹಿತ ನಾಲ್ಕು ಮಂದಿ ವಿಜಯಧ್ವಜ ಸ್ವಾಮಿಗಳು ಧ್ಯಾನ ಮಾಡುತ್ತಿದ್ದ ಪಾದೆಯತ್ತ ಹೋದರು. ಇವರು ಬರುತ್ತಿರುವುದನ್ನು ಅರಿತ ಸ್ವಾಮಿಗಳು ಕಣ್ಣು ತೆರೆದು ಇವರನ್ನೇ ನೋಡುತ್ತಿದ್ದರು.
ಡೀಗೋ ಮತ್ತು ಮೂವರು ನಾವಿಕರು ಸ್ವಾಮಿಗಳ ಜೊತೆಗೆ ಏನೊಂದೂ ಮಾತಾಡದೆ ಅವರ ಸುತ್ತ ನಿಂತರು. ಎಲ್ಲರೂ ಆರಡಿ ಆಳಂಗ ಇದ್ದವರು. ವಿಜಯಧ್ವಜ ಸ್ವಾಮಿಗಳೂ ದೃಢಕಾಯರಾದ ವ್ಯಕ್ತಿ. ನಿತ್ಯ ಯೋಗ ಮತ್ತು ಅಂಗಸಾಧನೆ ಮಾಡಿ ಬಲಿಷ್ಠರಾಗಿದ್ದರು. ವಿಜಯಧ್ವಜ ಸ್ವಾಮಿಗಳು ಸಾಕಷ್ಟು ಗಟ್ಟಿಗರೂ ಧೈರ್ಯಶಾಲಿಗಳೂ ಆಗಿದ್ದರೂ ಕೂಡ ಯಾರಾದರೂ ಮೈಮೇಲೆ ಬಿದ್ದರೆ ಸೆಣಸಾಡುವಷ್ಟು ಮಾನಸಿಕ ಸಿದ್ಧತೆ ಇದ್ದವರಲ್ಲ. ಸಂನ್ಯಾಸಿಗಳಿಗೆ ಅಂತಹ ಪ್ರಸಂಗ ಎದುರಾಗುವ ಸಂಭವ ಕಡಮೆ. ಆದುದರಿಂದ ಭಯಗೊಂಡು ಕತ್ತೆತ್ತಿ ಅತ್ತಿತ್ತ ತಿರುಗಿಸಿ ನಾಲ್ವರನ್ನೂ ನೋಡಿದರು. ಅವರನ್ನು ಸುತ್ತುವರಿದ ನಾಲ್ವರು, ವಿದೇಶೀ ನಾಯಕನ ಹುಂಕಾರವಾದೊಡನೆ ಇದ್ದಕ್ಕಿದ್ದಂತೆ ಮುನ್ನುಗ್ಗಿ ಸ್ವಾಮಿಗಳು ಕೊಸರಾಡಿ ತಪ್ಪಿಸಿಕೊಳ್ಳಲು ಅವಕಾಶವೇ ನೀಡದಂತೆ ಅವರ ಕೈಕಾಲುಗಳನ್ನು ಗಟ್ಟಿಯಾಗಿ ಬಿಗಿಹಿಡಿದು ಅನಾಮತ್ತಾಗಿ ಎತ್ತಿಕೊಂಡು ಬಂದು ದೋಣಿಯೊಳಗೆ ಕೆಡೆದರು. ಅವರನ್ನು ದೋಣಿಗೆ ಎತ್ತಿಹಾಕುವುದೂ, ಅಲ್ಲಿ ನಿಂತಿದ್ದ ಇಬ್ಬರು ದೋಣಿಯನ್ನು ಸಮುದ್ರದ ನೀರಿಗೆ ದೂಡುವುದೂ ಜೊತೆಜೊತೆಯಾಗಿಯೇ ಸಾಗಿತು. ಸ್ವಾಮಿಗಳನ್ನು ಹೊತ್ತು ತಂದ ನಾಲ್ವರಲ್ಲಿ ಡೀಗೋ ದೋಣಿಗೆ ಜಿಗಿದು ಅವರನ್ನು ಒತ್ತಿ ಹಿಡಿದ. ಉಳಿದವರೆಲ್ಲ ಸೇರಿ ದೋಣಿಯನ್ನು ನೀರಿಗಿಳಿಸಿ ಅದನ್ನು ಹಡಗಿನತ್ತ ವೇಗವಾಗಿ ನಡೆಸಿಕೊಂಡು ಹೋದರು. ಇಂತಹ ಹೊಡೆದಾಟಗಳಲ್ಲಿ ನಾವಿಕರು ಎಷ್ಟು ನುರಿತವರು ಎನ್ನುವುದು ಅದರಿಂದ ತಿಳಿಯುವಂತಿತ್ತು.
ದೋಣಿ ಪೋರ್ಚುಗೀಸರ ಹಡಗಿನತ್ತ ಸಾಗುವುದನ್ನು ಕಂಡ ವಿಜಯಧ್ವಜ ಸ್ವಾಮಿಗಳಿಗೆ ತನ್ನನ್ನು ಅವರು ಅಪಹರಿಸುತ್ತಿರುವುದು ನಿಚ್ಚಳವಾಯಿತು. ಅವರು ದಡದತ್ತ ಮುಖ ತಿರುಗಿಸಿ, “ಓ… ಓ…. ಯಾರಾದರೂ ಇದ್ದೀರಾ? ಇವರು ನನ್ನನ್ನು ಹಿಡಿದುಕೊಂಡು ಹೋಗುತ್ತಿದ್ದಾರೆ….” ಎಂದು ಬೊಬ್ಬೆ ಹೊಡೆದು ಹೇಳುತ್ತ ಇದ್ದರು. ಈಗ ಅವರು ಅಲುಗಾಡದಂತೆ ಇಬ್ಬರು ಒತ್ತಿ ಹಿಡಿದಿದ್ದರು.
ವಿಜಯಧ್ವಜರನ್ನು ಪೋರ್ಚುಗೀಸರು ಹಿಡಿದುಕೊಂಡು ಹೊರಟದ್ದನ್ನು ಕಂಡ ರಾಮ ಮರಕಾಲ ಮತ್ತು ಸಂಗಡಿಗರು ಅತ್ತ ಓಡಿಬಂದರು. ಮೊಗವೀರರನ್ನು ಕಂಡ ಡೀಗೋ ಕೋವಿಯನ್ನೆತ್ತಿ ಆಕಾಶಕ್ಕೆ ಒಂದು ಗುಂಡು ಹೊಡೆದ. ಮೊಗವೀರರ ಓಟ ನಿಧಾನವಾಯಿತು. ಅವರೇನೂ ಮಾಡುವ ಹಾಗಿರಲಿಲ್ಲ. ಆದರೂ ಗಟ್ಟಿಯಾಗಿ ಬೊಬ್ಬೆ ಹಾಕಲಾರಂಭಿಸಿದರು. ಸ್ವಲ್ಪ ಹೊತ್ತಿನಲ್ಲಿ ಕಡಲದಂಡೆಯಲ್ಲಿ ಗಂಡಸರು, ಹೆಂಗಸರು, ಮಕ್ಕಳು, ಮುದುಕರು ಎಂದು ಸುಮಾರು ನೂರು ಜನ ಒಟ್ಟಾದರು. ಅವರೆಲ್ಲ ನೋಡುತ್ತಿರುವಂತೆ ವಿಜಯಧ್ವಜ ಸ್ವಾಮಿಗಳನ್ನು ಅಪಹರಿಸಿದ ಪೋರ್ಚುಗೀಸ್ ದೋಣಿ ಅವರನ್ನು ಹಡಗಿಗೂ ಎತ್ತಿಹಾಕಿಕೊಂಡು ಲಂಗರನ್ನೆತ್ತಿತು. ಅದನ್ನೆಲ್ಲ ಜನ ಹಾಹಾಕಾರ ಮಾಡುತ್ತ್ತ, “ಅಯ್ಯೋ”, “ಛೇ ಛೇ” ಎನ್ನುತ್ತ ಅಸಹಾಯಕರಾಗಿ ನೋಡುತ್ತಿದ್ದರಷ್ಟೆ. ಪೋರ್ಚುಗೀಸ್ ಹಡಗಿನೆದುರು ನಿಲ್ಲುವ ಶಕ್ತಿ ಅಂದು ಮೀನುಗಾರರಿಗೆ ಯಾಕೆ, ಜಗತ್ತಿನ ಯಾವ ನೌಕಾಪಡೆಗೂ ಇರಲಿಲ್ಲ.
* * *
ದಕ್ಷಿಣಕನ್ನಡ ಜಿಲ್ಲೆಯ ಕರಾವಳಿಯ ಉದ್ದಕ್ಕೂ ಪೋರ್ಚುಗೀಸರ ಹಡಗುಗಳು ಸಂಚರಿಸುತ್ತ ಭಯಹುಟ್ಟಿಸಿದ್ದ ಕಾಲ ಅದು. ಸ್ಥಳೀಯ ವರ್ತಕರ ಹಡಗುಗಳು ಸಮುದ್ರಕ್ಕಿಳಿಯಲು ಪೋರ್ಚುಗೀಸರಿಗೆ ಕಪ್ಪ ಕೊಟ್ಟು ಪಾಸ್ಪೋರ್ಟ್ ಮಾಡಿಸಿಕೊಳ್ಳಬೇಕಾಗಿತ್ತು. ಪಾಸ್ಪೋರ್ಟ್ ತೋರಿಸಿದರೂ ಇನ್ನೊಂದು ಪೋರ್ಚುಗೀಸ್ ಹಡಗಿನ ಕಪ್ತಾನ ಅದನ್ನು ಲೆಕ್ಕಕ್ಕೆ ತಗೆದುಕೊಳ್ಳದೆ ಸ್ಥಳೀಯರ ನೌಕೆಗಳಿಗೆ ತನ್ನ ನಾವಿಕರನ್ನು ಕಳುಹಿಸಿ ತಮಗೆ ಬೇಕಾದ ಸಾಮಗ್ರಿಗಳನ್ನು ದೋಚಿಕೊಂಡು ಹೋಗುತ್ತಿದ್ದನು. ಕೆಲವೊಮ್ಮೆ ಹಣವನ್ನೂ ಬಲಾತ್ಕಾರವಾಗಿ ವಸೂಲು ಮಾಡಿಕೊಂಡು ಹೋಗುತ್ತಿದ್ದುದುಂಟು.
ಪೋರ್ಚುಗಲ್ಲಿನ ರಾಜ ಯಾರನ್ನಾದರೂ ಭಾರತ ದೇಶದ ಗವರ್ನರ್ ಎಂದು ನೇಮಿಸಿ ಗೋವಾಕ್ಕೆ ಕಳುಹಿಸಿಕೊಡುತ್ತ ಇದ್ದ. ಈ ಕತೆ ನಡೆದ ಸಂದರ್ಭದಲ್ಲಿ ಗೋವಾದಲ್ಲಿ ಭಾರತದ ಪೋರ್ಚುಗೀಸ್ ವಸಾಹತುಗಳ ಗವರ್ನರ್ ಆಗಿದ್ದವನು ವಾಸ್ಕೋ ಡ ಗಾಮನ ಮಗ ಎಸ್ತೆವಾವೋ ಡ ಗಾಮ. ಅಷ್ಟರಲ್ಲಾಗಲೇ ಉಳ್ಳಾಲ, ಮಂಗಳೂರು, ಉದ್ಯಾವರ, ಬಾರ್ಕೂರು, ಬಸರೂರು (ಬಾರ್ಸೆಲೋರ್), ಕುಂದಾಪುರ, ಗಂಗೊಳ್ಳಿ(ಕ್ಯಾಂಬೊಲಿಮ್)ಗಳಲ್ಲೆಲ್ಲ ಪೋರ್ಚುಗೀಸರು ತಮ್ಮ ಹಡಗುಗಳ ಮೂಲಕ ಬಂದು ವ್ಯಾಪಾರ ಮಾಡುವ ಅಥವಾ ಕಪ್ಪ ವಸೂಲು ಮಾಡುವ ಸಣ್ಣಪುಟ್ಟ ಬಂದರುಗಳನ್ನು ನಿರ್ಮಿಸಿಕೊಂಡಿದ್ದರು. ಕೆಲವು ಕಡೆ ಫ್ಯಾಕ್ಟರಿ ಅಥವಾ ವ್ಯಾಪಾರ ಮಳಿಗೆಗಳನ್ನು ತೆರೆದಿದ್ದರು. ಮೂಲ್ಕಿ, ಕಲ್ಯಾಣಪುರ, ಹಂಗಾರಕಟ್ಟೆ ಮುಂತಾದ ಸಣ್ಣ ಪ್ರದೇಶಗಳಲ್ಲಿಯೂ ಅವರ ಹಡಗುಗಳು ಕಳುಹಿಸಿದ ವ್ಯಾಪಾರಿ ನೌಕೆಗಳು ಸಮುದ್ರತೀರಕ್ಕೆ ಬರುತ್ತಿದ್ದವು. ಅವರಲ್ಲಿದ್ದ ಕೋವಿಗಳು ಮತ್ತು ಅವರ ಹಡಗುಗಳಲ್ಲಿದ್ದ ಫಿರಂಗಿಗಳಿಂದಾಗಿ ದೇಶೀಯರಿಗೆ ಅವರನ್ನೆದುರಿಸುವ ಶಕ್ತಿಯಿಲ್ಲದ ಕಾಲದಲ್ಲಿ ಅವರು ಕರಾವಳಿಯುದ್ದಕ್ಕೂ ಭಯಹುಟ್ಟಿಸಿದ್ದರು.
ಜೊತೆಗೆ ಪೋರ್ಚುಗೀಸರು ಭಾರತೀಯರನ್ನು ಮತಾಂತರ ಮಾಡುವ ಕೆಲಸವನ್ನೂ ಮಾಡಬೇಕಾಗಿತ್ತು. ಸಾಧ್ಯವಾದಷ್ಟು ಹಿಂದುಗಳನ್ನು ಆಮಿಷಗಳ ಮೂಲಕ ಕ್ರೈಸ್ತರನ್ನಾಗಿಸಲು ಪ್ರಯತ್ನಮಾಡಿ, ಅಲ್ಲಿ ಕ್ರೈಸ್ತ ಮಠಗಳನ್ನು ಕಟ್ಟಿಕೊಳ್ಳಲು ಮಿಷನರಿಗಳಿಗೆ ಪೂರ್ಣ ಬೆಂಬಲ ನೀಡಿ ಎಂದು ಎಲ್ಲ ಕೇಂದ್ರಗಳ ಪೋರ್ಚುಗೀಸ್ ಕಮಾಂಡರ್ಗಳಿಗೆ ಗೋವಾದ ಗವರ್ನರ್ ಆದೇಶ ನೀಡಿದ್ದ. “ಅವರಿಗೆ ಸೈನ್ಯದಲ್ಲಿ ಕೆಲಸ ಕೊಡಿ, ಹೋರಾಡಲು ಸಾಧ್ಯವಿಲ್ಲದವರಿಗೆ ಬೇರೇನಾದರೂ ಚಪರಾಸಿ ಕೆಲಸವನ್ನಾದರೂ ಕೊಡಿ. ಕ್ರೈಸ್ತ ಧರ್ಮಕ್ಕೆ ಸೇರಿದವರಿಗೆ ಮಾತ್ರ ಸಹಾಯ ಮಾಡಿ” ಎಂದು ವೈಸ್ರಾಯನ ಆದೇಶವಿತ್ತು. ಪೋರ್ಚುಗೀಸರಿಗೆ ಮತಾಂತರ ಮಾಡಲು ಹಲವು ಅವಕಾಶಗಳನ್ನು ದೇವರೇ ಒದಗಿಸಿಕೊಟ್ಟ ಹಾಗೆ ಅವಕಾಶಗಳ ಬಾಗಿಲುಗಳು ತೆರೆದುಕೊಳ್ಳುತ್ತಹೋದವು.
ಮಂಗಳೂರಿನ ಬಳಿಯ ಊರಿನ ಕಮಲಮ್ಮ ಎಂಬ ಹೆಂಗಸಿನ ಗಂಡ ತೀರಿಕೊಂಡ. ಕಮಲಮ್ಮನ ಮೈದುನ ಕಮಲಮ್ಮನಿಗೆ ತಮ್ಮ ದೊಡ್ಡ ಆಸ್ತಿಯಲ್ಲಿ ಏನನ್ನೂ ಕೊಡದೆ ಮನೆಯಿಂದ ಹೊರಗೆ ಹಾಕಿದ. ಯಾರೋ ಅವಳಿಗೆ ಮಂಗಳೂರಿನ ಪೋರ್ಚುಗೀಸ್ ಕಮಾಂಡರನ ಬಳಿಗೆ ಹೋಗಲು ತಿಳಿಸಿದರು. ಅವಳು ಮಿಷನರಿಗಳ ಮೂಲಕ ಕಮಾಂಡರನಿಗೆ ತನ್ನ ಅಹವಾಲನ್ನು ಸಲ್ಲಿಸಿದಳು. ತನಗೆ ತನ್ನ ಗಂಡನ ಆಸ್ತಿಯನ್ನು ಕೊಡಿಸಿದರೆ ಅದರಲ್ಲಿ ಒಂದು ಭಾಗವನ್ನು ಚರ್ಚಿಗೆ ಬಿಟ್ಟುಕೊಡುತ್ತೇನೆಂದು ಹೇಳಿದಳು. ಅವಳನ್ನು ಮತಾಂತರ ಮಾಡಿ, ಅವಳಿಗೆ ಅವಳ ಗಂಡನ ಆಸ್ತಿಯನ್ನು ಪೋರ್ಚುಗೀಸ್ ಕಮಾಂಡರ್ ಕೊಡಿಸಿದ. ಪೋರ್ಚುಗೀಸರ ಇಬ್ಬರು ಸೈನಿಕರು ಬಂದು ಕಮಲಮ್ಮನ ಮೈದುನನನ್ನು ಹಿಡಿದುಕೊಂಡು ಕಮಾಂಡರನ ಬಳಿಗೆ ಒಯ್ದರು. ಸೈನಿಕರು ಬಂದು ಹೇಳಿದ್ದರೆ ಸಾಕಿತ್ತು, ಅವನು ಮನೆ ಬಿಟ್ಟು ಓಡಿಹೋಗಲು ಸಿದ್ಧನೇ ಆಗಿದ್ದ. ಕಮಾಂಡರನ ಮಾತುಗಳನ್ನು ದುಭಾಷಿ ಹೇಳಿದ ತಕ್ಷಣ ಮೈದುನ ಗೋಗರೆದ, “ನನ್ನದು ಸರ್ವಾಪರಾಧ ಆಯಿತು. ಒಮ್ಮೆ ಬಿಟ್ಟುಬಿಡಿ. ಎಲ್ಲಿಗಾದರೂ ಹೋಗಿ ಬದುಕಿಕೊಳ್ಳುತ್ತೇನೆ.”
ಅವನು ಹೇಳಿದ್ದುದನ್ನು ಕಮಾಂಡರನಿಗೆ ದುಭಾಷಿಗಳು ಹೇಳಿದರು. ಕಮಾಂಡರ್ ಅವನಿಗೆ ಎರಡು ಛಡಿ ಏಟು ನೀಡಿ ಅವನನ್ನು ಓಡಿಸಿಬಿಡಲು ಹೇಳಿದ ಪ್ರಯುಕ್ತ ಸೈನಿಕರು ಮೈದುನನನ್ನು ಕಮಾಂಡರನ ಎದುರಿಗೆ ನಿಲ್ಲಿಸಿ, ಒಂದು ಚಾಟಿಯಿಂದ ಎರಡು ಚಡಿ ಏಟುಗಳನ್ನು ಅವನ ಪೃಷ್ಟಕ್ಕೆ ಬಾರಿಸಿದರು. ಅವನು, “ಅಯ್ಯೋ! ಅಯ್ಯೋ!” ಎಂದು ನೋವಿನಿಂದ ಮುಲುಗಿದ. ನಂತರ ಸೈನಿಕರು ಅವನಿಗೆ, “ಇನ್ನು ನೀನು ನಮಗಾಗಲಿ ಕಮಲಮ್ಮನಿಗಾಗಲಿ ಕಾಣಿಸಬಾರದು. ಕಮಲಮ್ಮನಿಗೆ ಬೇರೆ ಹೆಸರನ್ನು ನಮ್ಮ ಲಾರ್ಡ್ ನೀಡುತ್ತಾರೆ. ಯಾವ ಹೆಸರಿನಿಂದ ಬಂದರೂ ಕಮಲಮ್ಮನೇ ಆಸ್ತಿಗೆ ಒಡತಿ. ತಿಳಿದಿರಲಿ” ಎಂದು ಎಚ್ಚರಿಸಿ ಅವನನ್ನು ಓಡಿಸಿಬಿಟ್ಟರು.
ಮತಾಂತರಕ್ಕೆ ಆಗ ಮಂಗಳೂರಿನಲ್ಲಿ ವ್ಯವಸ್ಥೆ ಇರಲಿಲ್ಲ. ಒಂದು ಹಡಗಿನಲ್ಲಿ ಕಮಲಮ್ಮನನ್ನು ಗೋವಾಕ್ಕೆ ಒಯ್ದು, ಅಲ್ಲಿ ಜ್ಞಾನಸ್ನಾನ ದೀಕ್ಷೆ ನೀಡಿ ಅವಳನ್ನು ಮತಾಂತರಗೊಳಿಸಲಾಯಿತು. ಈಗ ಅವಳ ಹೆಸರು ಮರಿಯಾ ಲಿಯೋನೋರ್ ಡಿಸೋಜ ಎಂದಾಗಿತ್ತು. ಇದು ಹಿಂದಿನ ಒಂದು ಕಥೆ. ಈ ಬಾರಿ ಮಸ್ಕರೇನ್ಯಾಸ್ನ ಹಡಗಿನಲ್ಲಿ ಮತಾಂತರಗೊಳ್ಳಲು ಗೋವಾಕ್ಕೆ ಸಂತೋಷದಿಂದ ಹೊರಟಿದ್ದ ಮಂಗಳೂರಿನ ಒಬ್ಬ ಮನುಷ್ಯನಿದ್ದ. ಅವನ ಹೆಸರು ಪುಂಚಡ್ಕ ಸುಬ್ಬಯ್ಯ. ಪುಂಚಡ್ಕ ಸುಬ್ಬಯ್ಯನ ಮನಸ್ಸನ್ನು ಕ್ರೈಸ್ತಧರ್ಮದ ಕಡೆಗೆ ತಿರುಗಿಸಿದ ಪಾದ್ರಿ ಆಮೇಲೆ ಅವನನ್ನು ಮತಾಂತರ ಮಾಡುವ ಮುನ್ನವೇ ಕೇರಳದ ಕಡೆಗೆ ಹೊರಟುಹೋಗಿದ್ದನಂತೆ. ಬಹುಶಃ ಅವನ ಮಿಷನರಿಯವರು ಅವನನ್ನು ಕೇರಳಕ್ಕೆ ಹೋಗಲು ತಿಳಿಸಿರಬಹುದು. ಈಗ ಸುಬ್ಬಯ್ಯ ತಾನೇ ಮಿಷನರಿಯ ಹಾಗೆ ಮಾತಾಡುತ್ತ್ತ ಕ್ರೈಸ್ತಧರ್ಮವೊಂದೇ ನಮ್ಮನ್ನು ರಕ್ಷಿಸಬಹುದು ಎಂದು ಜನರಿಗೆ ಹೇಳುತ್ತಿದ್ದ. “ನನಗೆ ಒಂದು ದಿವ್ಯ ದರ್ಶನವಾಗಿದೆ. ದೇವದೂತನೊಬ್ಬನು ನನಗೆ ಪ್ರಪಂಚ ಹೇಗೆ ನಡೆಯುತ್ತಿದೆ ಎನ್ನುವುದನ್ನು ತೋರಿಸಿಕೊಟ್ಟು, ಹೇಗೆ ಯೇಸು ಒಬ್ಬನೆ ನಮ್ಮನ್ನು ರಕ್ಷಿಸಬಲ್ಲನೆಂದು ತಿಳಿಸಿಕೊಟ್ಟ” ಎಂದು ಅವನು ಹೇಳುತ್ತಿದ್ದ. ಕೊನೆಗೆ ಅವನನ್ನು ಇಬ್ಬರು ಕ್ರೈಸ್ತ ಸೈನಿಕರು ಕಮಾಂಡರನ ಬಳಿಗೆ ಕರೆದುಕೊಂಡು ಹೋಗಿದ್ದರು. ಅವನನ್ನು ಈಗ ಮಸ್ಕರೇನ್ಯಾಸ್ನ ಹಡಗಿನಲ್ಲಿ ಗೋವಾಕ್ಕೆ ಕಳುಹಿಸಿಕೊಡಲಾಗುತ್ತಿತ್ತು. ಮುಂದೆ ಇಬ್ಬರು ಕಲ್ಯಾಣಪುರದಲ್ಲಿ ಹಡಗಿಗೆ ಬರಲಿಕ್ಕಿದ್ದಾರೆ. ಅವರು ಗಂಡ-ಹೆಂಡತಿ, ಜಾತಿಯಲ್ಲಿ ಬ್ರಾಹ್ಮಣರು; ಸ್ವ ಇಚ್ಛೆಯಿಂದ ಕ್ರೈಸ್ತರಾಗಲು ಹೊರಟಿದ್ದರು.
ಹೀಗೆ ಗೋವಾಕ್ಕೆ ಹೊರಟ ಹಡಗಿನಲ್ಲಿ ದುಡಿಯಲು ಜನ ಬೇಕಾಗಿದ್ದುದರಿಂದ ದಾರಿಯಲ್ಲಿ ಸಮುದ್ರದಂಡೆಯಲ್ಲಿ ಗಟ್ಟಿಮುಟ್ಟಾದ ಏಕಾಂಗಿಗಳು ಸಿಕ್ಕಿದರೆ ಹಿಡಿದುಕೊಂಡು ಹೋಗಲು ಮಸ್ಕರೇನ್ಯಾಸ್ ನಿರ್ಧರಿಸಿದ್ದ. ಹಾಗೆ ದುಡಿಯಲು ಜನಗಳನ್ನು ಹಿಡಿದುಕೊಂಡು ಹೋಗುವುದು ಪೋರ್ಚುಗೀಸರಿಗೆ ಅಭ್ಯಾಸವಾಗಿ ಹೋಗಿತ್ತು. ಆಫ್ರಿಕ ಮತ್ತು ಭಾರತದ ತೀರಗಳಲ್ಲಿ ಅವರಿಗೆ ಗಟ್ಟಿಮುಟ್ಟಾದ ಜನಗಳು ಸಿಗುತ್ತಿದ್ದರು. ಇದು ತೀರಾ ಅನ್ಯಾಯವಾದರೂ ಈ ಪ್ರದೇಶಗಳಲ್ಲಿ ಪೋರ್ಚುಗೀಸರ ನೌಕಾಪಡೆಗಳನ್ನು ನಿಗ್ರಹಿಸುವ ಯಾವ ಕ್ರಮಗಳನ್ನು ಯಾವ ರಾಜರೂ ಕೈಗೊಂಡಿರಲಿಲ್ಲ. ಹಾಗಾಗಿ ಅರಬಿ ಸಮುದ್ರದಲ್ಲಿ ಪೋರ್ಚುಗೀಸರದ್ದೇ ಆಧಿಪತ್ಯವಿತ್ತು.
ಮಲಪು ತೀರಕ್ಕೆ ಹೋದ ನಾವಿಕರಿಗೂ ಸಾಧ್ಯವಾದರೆ ಕೆಲಸಕ್ಕೆ ಆಳುಗಳನ್ನು ಹಿಡಿದು ತನ್ನಿ ಎಂಬ ಸೂಚನೆಯನ್ನು ಮಸ್ಕರೇನ್ಯಾಸ್ ಕೊಟ್ಟಿದ್ದ. ಅಂತಹ ಕಾರ್ಯಾಚರಣೆಗೆ ಮಾರ್ಗದರ್ಶನ ಮಾಡಲೆಂದೇ ಡೀಗೋನನ್ನು ದಡಕ್ಕೆ ಕಳುಹಿಸಿದ್ದ. ತನ್ನ ದೇಶದವರಲ್ಲದೆ ಭಾರತದವರು ಇಂತಹ ಕೆಲಸ ಮಾಡಲು ಧೈರ್ಯ ಸಾಲದವರು ಎನ್ನುವ ಅಭಿಪ್ರಾಯ ಅವನಿಗಿತ್ತು.
ಡೀಗೋ ಮತ್ತು ಸಂಗಡಿಗರು ಮಲಪು ತೀರದಿಂದ ಯಾರೋ ಒಬ್ಬನನ್ನು ಎತ್ತಿಹಾಕಿಕೊಂಡು ಬರುತ್ತಿರುವುದನ್ನು ದೂರದಿಂದಲೇ ದುರ್ಬೀನು ಇಟ್ಟುಕೊಂಡು ನೋಡುತ್ತಿದ್ದ ನಾವಿಕರು ಮಸ್ಕರೇನ್ಯಾಸನಿಗೆ ತಿಳಿಸಿದ್ದರು. ಹಾಗಾಗಿ ಅವನೂ ಕುತೂಹಲದಿಂದಲೇ ದೋಣಿಯ ಆಗಮನವನ್ನು ನಿರೀಕ್ಷಿಸುತ್ತಿದ್ದ. ದೋಣಿ ಹಡಗಿನ ಪಕ್ಕಕ್ಕೆ ಬಂದು ಅದರಲ್ಲಿದ್ದವರೆಲ್ಲ ಹಡಗಿಗೆ ಹತ್ತಿದಾಗ ವಿಜಯಧ್ವಜ ಸ್ವಾಮಿಗಳನ್ನು ಕೂಡ ಹಡಗಿನ ಅಟ್ಟಕ್ಕೆ ಹತ್ತಿಸಿದರು. ಸ್ವಾಮಿಗಳು ಕೋಪ, ಭಯ ಹಾಗೂ ಆತಂಕಗಳಿಂದ ಏದುಸಿರುಬಿಡುತ್ತಿದ್ದರು. ದೇವರು ಇದು ಯಾವ ಪರೀಕ್ಷೆಯನ್ನು ತಮಗಾಗಿ ಏರ್ಪಡಿಸಿದ್ದಾನೆಂದು ಅವರಿಗೆ ತಿಳಿಯಲಿಲ್ಲ. ಅಥವಾ ಯಾವ ತಪ್ಪಿಗಾಗಿ ಈ ಶಿಕ್ಷೆ ತನಗೆ ಸಿಕ್ಕಿದೆ ಎಂದು ಗೊತ್ತಾಗದೆ ಮೌನವಾಗಿ ಭಗವಂತನನ್ನು ಧ್ಯಾನಿಸತೊಡಗಿದರು. ಸ್ವಾಮಿಗಳಾದವರು ಸಮುದ್ರವನ್ನು ದಾಟಬಾರದು; ಆದರೆ ತಾನೀಗ ದಾಟಿರುವೆ. ಇನ್ನು ಮುಂದೆ ತನ್ನನ್ನು ಸ್ವಾಮಿಗಳೆಂದು ಪರಿಗಣಿಸಲಾರರು ಎನ್ನುವುದನ್ನೂ ಯೋಚಿಸಿ ಅವರಿಗೆ ಹತಾಶೆಯೂ ಉಂಟಾಯಿತು. ಒಟ್ಟಿನಲ್ಲಿ ದೇವರ ಮೇಲೆ ಭಾರ ಹಾಕಿ ಮೌನವಾಗಿ ಹಡಗಿನ ಮೇಲೆ ಒಂದು ಕಡೆ ಸುಮ್ಮನೆ ದಿಟ್ಟತನದಿಂದಲೇ ನಿಂತುಕೊಂಡರು.
ಹಡಗಿನ ಕಪ್ತಾನ ಮಸ್ಕರೇನ್ಯಾಸನಿಗೆ ಈ ಹಿಂದೂ ಸಂನ್ಯಾಸಿಯನ್ನು ಕಂಡು ಅಚ್ಚರಿಯಾಯಿತು. ಅವನು ಹಿಂದೂ ಸ್ವಾಮಿಯೊಬ್ಬರನ್ನು ಹಿಂದೆ ನೋಡಿದ್ದ. ಅವರು ಧರಿಸಿದ್ದ ಕಾವಿ ಬಣ್ಣದ ಬಟ್ಟೆಯನ್ನು ನೋಡಿ ತನ್ನ ನಾವಿಕರು ಹಿಡಿದುತಂದ ವ್ಯಕ್ತಿ ಸಾಮಾನ್ಯ ಮನುಷ್ಯನಲ್ಲ, ಒಬ್ಬ ಸಂನ್ಯಾಸಿ ಎಂದು ತಿಳಿಯಿತು.
ಮಸ್ಕರೇನ್ಯಾಸ್ ಡೀಗೋನನ್ನು ಉದ್ದೇಶಿಸಿ ಪೋರ್ಚುಗೀಸ್ ಭಾಷೆಯಲ್ಲಿ, “ಓ ಮೇಇ ಡೇಯಸ್! ಪುರ್ ಕೆ~ಕ್ ತ್ರುಶೆಸ್ತ್ ಎಸ್ತ್ ಸಂನ್ಯಾಸಿ?” (O meu Deus! Por que e que trouxeste este sanyasi? -ಅಂದರೆ, ‘ಓ ಮೈ ಗಾಡ್! ಈ ಸಂನ್ಯಾಸಿಯನ್ನು ಯಾಕೆ ಹಿಡಿದುಕೊಂಡು ಬಂದಿರಿ?’) ಎಂದು ಉದ್ಗರಿಸಿದ.
ಡೀಗೋ, “ಈತ ಗಟ್ಟಿಮುಟ್ಟಾಗಿದ್ದಾನೆ ಎಂದು ತಂದೆವು. ಕೆಲಸ ಮಾಡಲು ಇವನಿಗೆ ಇಷ್ಟವಿಲ್ಲದಿದ್ದರೆ ಕ್ರೈಸ್ತನನ್ನಾಗಿ ಮಾಡಿ ಮತ್ತೆ ಅವನ ಊರಿಗೆ ತಲಪಿಸೋಣ” ಎಂಬ ಸರಳ ಪರಿಹಾರವನ್ನು ಹೇಳಿದ.
“ಹಾಗಾದರೆ ನಮ್ಮ ಪೂಂಚಾದ್ಕನನ್ನು ಆ ಮನುಷ್ಯನ ಜೊತೆಗೆ ಮಾತಾಡಲು ಬಿಡು. ಕ್ರೈಸ್ತನಾಗುವುದಾದರೆ ಅವನಿಗೆ ಯಾವುದಾದರೂ ಕೆಲಸ ಕೊಟ್ಟು ಮಂಗಳೂರಿನಲ್ಲಿ ಇಡೋಣ” ಎಂದು ಮಸ್ಕರೇನ್ಯಾಸ್ ಹೇಳಿದ.
ಅದರಂತೆ ಪುಂಚಡ್ಕ ಸುಬ್ಬಯ್ಯನಿಗೆ ಸ್ವಾಮಿಗಳ ಜೊತೆಗೆ ಮಾತಾಡುವ ಜವಾಬ್ದಾರಿಯನ್ನು ಕೊಟ್ಟರು. ಹಡಗಿನಲ್ಲಿ ಕೆಲಸ ಮಾಡುತ್ತೀರಾ, ಕ್ರೈಸ್ತನಾಗಿ ಒಳ್ಳೆಯ ಹುದ್ದೆ ಪಡೆದು ಮಂಗಳೂರಿನಲ್ಲಿ ಇರುತ್ತೀರಾ ಎಂದು ನಿರ್ಧರಿಸುವ ಅವಕಾಶವನ್ನು ವಿಜಯಧ್ವಜರಿಗೆ ನೀಡಲು ಮಸ್ಕರೇನ್ಯಾಸ್ ನಿರ್ಧರಿಸಿದ್ದ. ಈ ಮನುಷ್ಯ ಹಿಂದು ಸಂನ್ಯಾಸಿ ಆಗಿದ್ದುದರಿಂದ ಹೊಡೆದು ಬಡಿದು ಪಳಗಿಸಲು ಅವನಿಗೆ ಮನಸ್ಸಾಗಲಿಲ್ಲ.
ಹಡಗು ಉತ್ತರಕ್ಕೆ ಸಾಗತೊಡಗಿತು. ಸ್ವಾಮಿಗಳು ಅಲ್ಲಿಯೇ ಒಂದು ಕಡೆ ಪದ್ಮಾಸನ ಹಾಕಿಕೊಂಡು ಕುಳಿತಿದ್ದರು. ಪುಂಚಡ್ಕ ಸುಬ್ಬಯ್ಯನಿಗೆ ತನಗೂ ಒಂದು ಜವಾಬ್ದಾರಿಯ ಕೆಲಸ ಮಾಡಲು ಅವಕಾಶ ಸಿಕ್ಕಿದ್ದು, ಅದೂ ಕ್ರೈಸ್ತನಾಗುವ ಮುನ್ನವೇ ಒಬ್ಬನನ್ನು ಮತಾಂತರ ಮಾಡಲು ಅವಕಾಶ ಸಿಕ್ಕಿದ್ದು ಬಹಳಷ್ಟು ಉತ್ಸಾಹವನ್ನು ಕೊಟ್ಟಿತು. ಅವನು ವಿಜಯಧ್ವಜರ ಎದುರು ಕುಳಿತುಕೊಂಡು ತನ್ನ ಪರಿಚಯ ಹೇಳಿಕೊಂಡ. ಅವರು ಅವನ ಬಳಿ ತನ್ನನ್ನು ಯಾಕೆ ಕರೆದುಕೊಂಡು ಬಂದಿದ್ದಾರೆ ಎಂದು ಕೇಳಿ ತಿಳಿದರು. ಹಡಗಿನ ಕಪ್ತಾನ ನೀಡಿದ ಅವಕಾಶವನ್ನು ಪುಂಚಡ್ಕ ಸುಬ್ಬಯ್ಯ ಅವರಿಗೆ ವಿವರಿಸಿದ.
ಅವರೆಂದರು, “ಅದಕ್ಕಿಂತ ನಾನು ಸಾಯುತ್ತೇನೆ ಮಹಾರಾಯ. ನನಗೆ ಇಲ್ಲಿ ಬದುಕಬೇಕೆಂಬ ಇಚ್ಛೆಯಿಲ್ಲ. ಹೀಗೆಯೆ ಉಪವಾಸ ಕುಳಿತು ಧ್ಯಾನ ಮಾಡಿ ನನ್ನ ಪ್ರಾಣತ್ಯಾಗ ಮಾಡುತ್ತೇನೆ.”
ಪುಂಚಡ್ಕ ಸುಬ್ಬಯ್ಯ ಬಹಳ ಕನಿಕರದಿಂದ ಸ್ವಾಮಿಗಳನ್ನು ನೋಡಿದ. “ಹಾಗೆ ಹೇಳಬೇಡಿ ಮಾನ್ಯರೆ… ನನ್ನನ್ನೇ ನೋಡಿ, ಬಹಳ ಕಾಲದಿಂದ ನನ್ನ ಮನಸ್ಸಿನಲ್ಲಿ ಕ್ರೈಸ್ತನಾಗಬೇಕು, ಯೇಸುಕ್ರಿಸ್ತನ ಧರ್ಮವನ್ನು ಸ್ವೀಕರಿಸಬೇಕು ಎಂಬ ಬಯಕೆಯಿತ್ತು. ನನಗೆ ಒಂದು ದರ್ಶನವಾದ ಮೇಲೆ, ಅದೇ ನಿಜವಾದ ಧರ್ಮವೆಂಬ ನಂಬಿಕೆ ನನಗೆ ಉಂಟಾಯಿತು. ಭಗವಂತನು ದಯಾಮಯನು. ಅವನು ನನ್ನನ್ನು ನೆನೆಯುವ ಕೃಪೆ ತೋರಿಸಿದನು. ಹಿಂದೂ ಆಗಿ ವಿಗ್ರಹಾರಾಧನೆಯಲ್ಲಿ ಮುಳುಗಿಹೋಗಿದ್ದ ನನ್ನ ಮನೆಯವರು ನನಗೆ ಒಡ್ಡಿದ ಎಲ್ಲ ಕಷ್ಟಗಳನ್ನು ನಾನು ಸಹಿಸಿಕೊಂಡೆನು. ಈ ಕಷ್ಟಗಳಿಂದ ಪಾರಾಗಲು ಯೇಸುವೇ ನನಗೆ ಶಕ್ತಿಯನ್ನು ನೀಡಿದನು. ಆಮೇಲೆ ನಾನು ಮನೆ ಬಿಟ್ಟು ಯೇಸುವಿನ ಮನೆಗೆ ಸೇರಿದೆನು. ಈಗ ನನಗೆ ಬಹಳ ನೆಮ್ಮದಿಯಿದೆ. ಮುಂದೆ ನಾನು ಮಂಗಳೂರಿನಲ್ಲಿ ಸೈನಿಕರ ಒಂದು ತುಕಡಿಗೆ ನಾಯಕನಾಗಿ ಇರುತ್ತೇನೆ. ನೀವು ಮನಸ್ಸು ಮಾಡಿದರೆ ನನ್ನ ಹಾಗೆಯೆ ಇರಬಹುದು. ನಾವಿಬ್ಬರೂ ಜತೆಯಾಗಿರೋಣ” ಎಂದು ಹೇಳಿದ.
ಸ್ವಾಮಿಗಳು ಅವನನ್ನು ಕನಿಕರದಿಂದ ನೋಡಿ ಕಣ್ಣುಮುಚ್ಚಿ ಭಗವಂತನ ಧ್ಯಾನದಲ್ಲಿ ತೊಡಗಿದರು. ಪುಂಚಡ್ಕ ಸುಬ್ಬಯ್ಯ ಅಲ್ಲಿಯೇ ಕುಳಿತ. ಒಂದೆರಡು ಬಾರಿ ಅವರನ್ನು ಕರೆದ. ನಂತರ ತಾನೂ ಸುಮ್ಮನಾದ.
ಹಡಗು ಮುಂದೆ ಸಾಗುತ್ತ ಕಲ್ಯಾಣಪುರ ತೀರದಲ್ಲಿ ಲಂಗರು ಹಾಕಿ ದೋಣಿಯ ಮೂಲಕ ಇಬ್ಬರನ್ನು ಕರೆದುಕೊಂಡು ಹತ್ತಿಸಿಕೊಂಡಿತು. ಅವರೇ ಮತಾಂತರವಾಗಲು ಗೋವಾಕ್ಕೆ ಹೊರಟಿದ್ದ, ಜಾತಿಯಲ್ಲಿ ಬ್ರಾಹ್ಮಣರಾಗಿದ್ದ ಗಂಡಹೆಂಡತಿ. ಗಂಡನ ಹೆಸರು ಶಂಕರನಾರಾಯಣಯ್ಯ, ಹೆಂಡತಿ ವಿಶಾಲಾಕ್ಷಿ. ಗಂಡನಿಗೆ ಐವತ್ತು ಐವತ್ತೆರಡು ವರ್ಷ ವಯಸ್ಸಾಗಿರಬಹುದು. ಮುಖದಲ್ಲಿ ಕುರುಚಲು ಗಡ್ಡ ಬೆಳೆದಿದ್ದುದರಿಂದ ಅವನ ವ್ಯಗ್ರವಾದ ಮುಖ ಇನ್ನಷ್ಟು ರೋಷವನ್ನು ಅಭಿನಯಿಸುತ್ತಿತ್ತು. ಮಾಸಿದ ಹಸಿರು ಸೀರೆಯನ್ನು ಉಟ್ಟಿದ್ದ ಅವನ ಹೆಂಡತಿಯು ತನ್ನ ಗಂಡನನ್ನೇ ನಂಬಿಕೊಂಡು, ತನಗೆ ಪ್ರತ್ಯೇಕವಾದ ಯಾವ ಅಸ್ತಿತ್ವವೂ ಇಲ್ಲವೆಂಬಂತೆ ದೈನ್ಯದಿಂದ ತಲೆತಗ್ಗಿಸಿಕೊಂಡು ಅವನನ್ನು ಹಿಂಬಾಲಿಸುತ್ತಿದ್ದಳು. ಅವಳಿಗೆ ಅರ್ಥವಾಗದ ಯಾವುದೇ ಸನ್ನಿವೇಶ ಎದುರಾದರೆ ಅವಳು ಮೌನವಾಗಿ ಗಂಡನ ಮುಖವನ್ನು ನೋಡುತ್ತಿದ್ದಳು. ಅವರು ಕ್ರೈಸ್ತ ಮತಕ್ಕೆ ಸೇರಲು ಇದ್ದ ಕಾರಣ ಕೌಟುಂಬಿಕ ಸಮಸ್ಯೆಯೇ.
ತಾವು ಹಿಡಿದು ತಂದಿದ್ದ ಸ್ವಾಮಿಯು ಪುಂಚಡ್ಕ ಸುಬ್ಬಯ್ಯನಿಗೆ ಸ್ಪಂದಿಸದೆ ಇದ್ದುದನ್ನು ಕಂಡ ಡೀಗೋ ಈ ಬ್ರಾಹ್ಮಣ ಗಂಡಸನ್ನು ಸ್ವಾಮಿಗಳ ಜೊತೆಗೆ ಮಾತಾಡಲು ಕಳುಹಿಸಬಹುದೇನೋ ಎಂದು ಯೋಚಿಸಿದ. ಆದರೆ ಈ ಮನುಷ್ಯ ಸದಾ ರೋಷದಿಂದ ಇರುತ್ತಿದ್ದವನಂತೆ ಕಂಡದ್ದರಿಂದ ಅವನ ಸುದ್ದಿಗೆ ಹೋಗುವುದು ಬೇಡವೆಂದು ಆ ಗಂಡಹೆಂಡತಿಗೆ ಕುಳಿತುಕೊಳ್ಳಲು ಜಾಗ ತೋರಿಸಿ ಸುಮ್ಮನಾದ.
ರಾತ್ರಿ ಊಟದ ಹೊತ್ತು ಎಲ್ಲರೂ ಹಡಗಿನ ಆಹಾರವನ್ನು ಸೇವಿಸಿದರು. ಸ್ವಾಮಿಗಳ ಎದುರಿಗೆ ಪಾವು (ಬ್ರೆಡ್) ಮತ್ತು ಒಂದು ತಂಬಿಗೆಯಲ್ಲಿ ನೀರನ್ನು ಇಟ್ಟುಹೋದರು. ಅವರು ಅದನ್ನು ನೋಡಲೂ ಇಲ್ಲ. ಅದು ಬೆಳಗಿನವರೆಗೂ ಅಲ್ಲಿ ಹಾಗೆಯೇ ಇತ್ತು.
ಹಡಗು ರಾತ್ರಿ ಎಷ್ಟೋ ಹೊತ್ತಿಗೆ ಬಾರ್ಸೆಲೋರ್ (ಬಸರೂರು) ಬಂದರಕ್ಕೆ ತಲಪಿ ಲಂಗರು ಹಾಕಿತ್ತು. ಬೆಳಗ್ಗೆ ಎದ್ದಾಗ ಬಂದರು, ಅದರಾಚೆ ಪಟ್ಟಣದ ಕಟ್ಟಡಗಳು ಕಾಣಿಸತೊಡಗಿದವು. ಅಲ್ಲಿಂದ ಸಂಗ್ರಹಿಸಬೇಕಾಗಿದ್ದ ಸರಂಜಾಮುಗಳನ್ನು ಹೇರಿಸಿಕೊಂಡು, ಇಬ್ಬರು ಪೋರ್ಚುಗೀಸರನ್ನೂ, ಅವರ ಜತೆಗಿದ್ದ ಇಬ್ಬರು ಭಾರತೀಯರನ್ನೂ ಹತ್ತಿಸಿಕೊಂಡು ಹಡಗು ಮುಂದೆ ಸಾಗಿತು.
ಸ್ವಾಮಿಗಳು ಏನನ್ನೂ ತಿನ್ನದೆ, ಕುಡಿಯದೆ ಉಪವಾಸ ಮಾಡುತ್ತ ಸುಮ್ಮನೆ ಕುಳಿತಿದ್ದರು. ಕೊನೆಗೆ ಸಂನ್ಯಾಸಿಯನ್ನು ಎಲ್ಲಾದರೂ ದಡದಲ್ಲಿ ಬಿಟ್ಟುಹೋಗುವುದೇ ಸರಿ ಎಂದು ಮಸ್ಕರೇನ್ಯಾಸ್ ಯೋಚಿಸಿದ. ಡೀಗೋನನ್ನು ಕರೆದು “ಆ ಸಂನ್ಯಾಸಿಯನ್ನು ಗಂಗೊಳ್ಳಿಯಲ್ಲಿ ಇಳಿಸು, ಹೊಟ್ಟೆಗೆ ತಿನ್ನದೆ ಸತ್ತು ಹೋದಾನು. ಅವನು ಇಳಿದ ಮೇಲೆ ಬೇರೆ ದಡದಿಂದ ಯಾರನ್ನಾದರೂ ಎತ್ತಿಹಾಕಿಕೊಂಡು ಬಾ” ಎಂದು ಹೇಳಿದ.
* * *
ರಜತಪುರ ಮಠದ ಹಿರಿಯ ಪಟ್ಟದ ವೃದ್ಧ ಸ್ವಾಮಿಗಳು ತಮ್ಮ ಶಿಷ್ಯನನ್ನು ಪೋರ್ಚುಗೀಸರು ಹೊತ್ತೊಯ್ದರೆಂಬ ಸುದ್ದಿ ಕೇಳಿದ ಮೇಲೆ ಚಿಂತಾಕ್ರಾಂತರಾಗಿದ್ದರು. ರಾಮ ಮರಕಾಲನಿಗೆ ಮತ್ತು ಅಲ್ಲಿನ ಮೊಗವೀರರಿಗೆ ವಿಜಯಧ್ವಜರ ಪರಿಚಯ ಚೆನ್ನಾಗಿದ್ದುದರಿಂದ ಅವರು ನೇರವಾಗಿ ರಜತಪುರಕ್ಕೆ ಬಂದು ಹಿರಿಯ ಸ್ವಾಮಿಗಳಿಗೆ ಸುದ್ದಿ ಮುಟ್ಟಿಸಿದ್ದರು.
ಪೋರ್ಚುಗೀಸ್ ಹಡಗಿನವರು ಎತ್ತಿಕೊಂಡು ಹೋದಮೇಲೆ ವಿಜಯಧ್ವಜರ ವಿಷಯದಲ್ಲಿ ಯಾರಿಗೂ ಏನೂ ಮಾಡಲಾಗದ ಪರಿಸ್ಥಿತಿ. ತೀವ್ರ ದುಃಖದಿಂದ ಹಿರಿಯ ಸ್ವಾಮಿಗಳು ಅಂದು ರಾತ್ರಿ ಅನ್ನ ನೀರು ಸೇವಿಸಲಿಲ್ಲ. ಮರುದಿನವೂ ತೀರ್ಥವನ್ನಷ್ಟೆ ಸೇವಿಸಿ ದೇವರಿಗೆ ಮೊರೆಯಿಡುತ್ತ ಕುಳಿತಿದ್ದರು. ಮಧ್ಯಾಹ್ನದ ಹೊತ್ತು ಪಾರುಪತ್ಯೆದಾರರು ಮತ್ತು ಕೆಲವು ಹಿರಿಯ ಶಿಷ್ಯರು ಸ್ವಾಮಿಗಳಿಗೆ ಸ್ವಲ್ಪವಾದರೂ ಊಟ ಮಾಡಲೇಬೇಕೆಂದು ಒತ್ತಾಯಿಸಿದ್ದರಿಂದ ಎರಡು ತುತ್ತು ತಿಂದರು. ಮತ್ತೆ ಹಾಗೆಯೆ, ನಿರ್ಜಲ ಉಪವಾಸ.
ಮೂರನೆಯ ದಿನ ವಿಜಯಧ್ವಜರು ಇನ್ನು ಹಿಂದಿರುಗಲಾರರು ಎಂದು ಖಚಿತವಾಯಿತು. ಕಳೆಗುಂದಿದ ಮಠದಲ್ಲಿ ನಿಧಾನವಾಗಿ ಜನರ ಓಡಾಟ ಪ್ರಾರಂಭವಾಯಿತು. ಆದಿನ ಸಂಜೆಯ ಹೊತ್ತು ಸ್ವಾಮಿಗಳು ಮಠದ ದೇವರ ಗುಡಿಯೆದುರಿನ ಚಾವಡಿಯಲ್ಲಿ ಮರದ ಒರಗುಮಣೆಗೆ ಒರಗಿ ಕುಳಿತು ಚಿಂತಾಮಗ್ನರಾಗಿ ವಿಜಯಧ್ವಜರ ಬಗ್ಗೆಯೇ ಯೋಚಿಸುತ್ತಿದ್ದರು. ಆಗ ಇಬ್ಬರು ಹುಡುಗರು ಓಡಿ ಬಂದು, “ಬುದ್ಧೀ, ಸಣ್ಣ ಸ್ವಾಮಿಗಳು ಬಂದರು!” ಎಂದು ಉತ್ಸಾಹದಿಂದ ದೊಡ್ಡ ಸ್ವರದಲ್ಲಿ ವರದಿ ಮಾಡಿದರು.
ಹಿರಿಯ ಸ್ವಾಮಿಗಳು ಧಿಗ್ಗನೆದ್ದು ನಿಂತರು. ಅಷ್ಟರಲ್ಲಿ ಬಳಲಿ ಕಳೆಗುಂದಿದ್ದ ವಿಜಯಧ್ವಜರು ಗಳಗಳನೆ ಕಣ್ಣೀರು ಸುರಿಸುತ್ತ ಬಂದು ಹಿರಿಯ ಸ್ವಾಮಿಗಳ ಪಾದಗಳನ್ನು ಗಟ್ಟಿಯಾಗಿ ಹಿಡಿದುಕೊಂಡರು. ಹಿರಿಯ ಯತಿಗಳು ಅವರನ್ನೆತ್ತಿ ಅಪ್ಪಿಕೊಂಡು, ತಲೆ ನೇವರಿಸಿ, “ಕೃಷ್ಣ ಕಾಪಾಡಿದ!” ಎಂದಷ್ಟೆ ಹೇಳಿದರು. ಅವರ ಕಣ್ಣುಗಳೂ ಒದ್ದೆಯಾಗಿದ್ದವು.
ಮುಂದೆ ಮಠದಲ್ಲಿ ಒಂದು ಧರ್ಮಸೂಕ್ಷದ ಸಮಸ್ಯೆ ಉದ್ಭವಿಸಿತು. ವಿಜಯಧ್ವಜರು ಸಮುದ್ರಯಾನ ಮಾಡಿ ಬಂದವರು. ಅವರು ಸ್ವಾಮಿಗಳಾಗಿ ಮುಂದುವರಿಯಲು ಅವಕಾಶವಿದೆಯೆ? ಹಿರಿಯ ವಿದ್ವಾಂಸರನ್ನು ಕೇಳಿದರೆ ‘ಅದು ಕೂಡದು’ ಎಂದು ಹೇಳಿಬಿಡಬಹುದೆಂಬ ಆತಂಕ ಹಿರಿಯ ಯತಿಗಳಿಗೂ ಇತ್ತು. ಧಾರ್ಮಿಕ ವಿಚಾರಗಳಲ್ಲಿ ಅವರೂ ದೊಡ್ಡ ವಿದ್ವಾಂಸರೇ. ಆದರೆ ಶಾಸ್ತ್ರಾದೇಶಗಳನ್ನು ಮಾನವೀಯತೆಯ ದೃಷ್ಟಿಯಿಂದ ಪರಿಷ್ಕರಿಸಿ ನೋಡುತ್ತಿದ್ದವರು ಹಿರಿಯ ಯತಿಗಳು.
ಕೆಲವು ದಿನಗಳ ಕಾಲ ಯೋಚಿಸಿ ಅವರು ಒಂದು ತೀರ್ಮಾನಕ್ಕೆ ಬಂದರು. ವಿಜಯಧ್ವಜರನ್ನು ಕರೆದು ಹೇಳಿದರು, “ವಿಜಯಧ್ವಜ ಸ್ವಾಮಿಗಳೆ, ನೀವು ನಿಮ್ಮ ವಿರೋಧದ ನಡುವೆಯೂ ಮ್ಲೇಚ್ಛರಿಂದ ಅಪಹರಣಕ್ಕೊಳಗಾಗಿ ಸಮುದ್ರಯಾನ ಮಾಡಿಬಂದವರು. ಇದಕ್ಕೆ ಧರ್ಮಸಮ್ಮತಿ ಇಲ್ಲ ಎನ್ನುವುದು ನಿಮಗೆ ತಿಳಿಯದ್ದೇನಲ್ಲ. ಅದಕ್ಕೆ ಪ್ರಾಯಶ್ಚಿತ್ತಾದಿಗಳನ್ನು ಹಿಂದೆ ಯಾರೂ ಹೇಳಿದಂತಿಲ್ಲ. ನನ್ನ ಮನಸ್ಸಿಗೆ ಬಂದ ಒಂದು ಪ್ರಾಯಶ್ಚಿತ್ತವನ್ನು ನೀವು ಆಚರಿಸಬೇಕೆನ್ನುವುದು ನನ್ನ ಅಪೇಕ್ಷೆ.”
“ಗುರುಗಳೆ, ಖಂಡಿತ ಹೇಳಿ. ನಾನದನ್ನು ಆಚರಿಸುತ್ತೇನೆ”, ವಿಜಯಧ್ವಜರು ಹೇಳಿದರು.
“ನೀವು ಭಾಗವತ ಗ್ರಂಥಕ್ಕೆ ಸಂಸ್ಕೃತದಲ್ಲಿ ಟೀಕೆ ಬರೆಯುವುದೋ, ಸಂಕ್ಷೇಪಗೊಳಿಸುವುದೋ ಏನಾದರೊಂದು ವಿದ್ವತ್ ಕಾರ್ಯವನ್ನು ಮಾಡಿ. ನೀವು ಕಾವ್ಯಶಾಸ್ತ್ರಗಳನ್ನು ಬಹಳಷ್ಟು ಅಧ್ಯಯನ ಮಾಡಿದವರು. ಭಾಗವತ ನಿಮಗೆ ಹೇಗೂ ಪ್ರಿಯವಾದ ಗ್ರಂಥವಲ್ಲವೆ? ವ್ಯಾಸ ಮಹರ್ಷಿಗಳು ಅದನ್ನು ಬರೆದದ್ದೂ ಜನರು ಉದ್ಧಾರವಾಗಲಿ ಎಂದೇ ತಾನೆ? ಭಾಗವತವನ್ನು ಕುರಿತು ಕೆಲಸ ಮಾಡಿದಾಗ ನಿಮ್ಮ ಪಾಪಕ್ಕೆ, ಅದು ಪಾಪ ಅಂತ ಆದರೆ, ಪ್ರಾಯಶ್ಚಿತ್ತ ಆಗಿರುತ್ತದೆ ಎಂದು ನಾನು ನಂಬಿದ್ದೇನೆ” ಎಂದು ಹಿರಿಯ ಯತಿಗಳು ಹೇಳಿದರು.
“ಗುರುಗಳೆ, ನಿಮ್ಮ ಸೂಚನೆ ನನಗೆ ವೇದವಾಕ್ಯವಿದ್ದಂತೆ. ನಾನು ‘ಭಾಗವತ’ವನ್ನು ಕನ್ನಡದಲ್ಲಿ ಬರೆಯುತ್ತೇನೆ. ಕನ್ನಡ ಭಾಷೆಯಲ್ಲಿ ಅದನ್ನು ರಚಿಸಿದವರು ಇಲ್ಲ ಅನಿಸುತ್ತದೆ. ನಾನು ಆ ಕೆಲಸವನ್ನು ಮಾಡಬಹುದೆಂದು ನೀವು ಅಪ್ಪಣೆ ಕೊಟ್ಟರೆ ಮಾಡುತ್ತೇನೆ” ಎಂದು ವಿಜಯಧ್ವಜರು ಗುರುಗಳ ಅಪ್ಪಣೆ ಕೇಳಿದರು.
“ಖಂಡಿತವಾಗಿ ಮಾಡಿ. ಅದು ನಿಮ್ಮ ಮನಸ್ಸಿನ ನೋವನ್ನೂ ಮರೆಸುತ್ತದೆ. ಲೋಕಕಲ್ಯಾಣವನ್ನೂ ಮಾಡುತ್ತದೆ. ಶ್ರೀಕೃಷ್ಣನ ಅನುಗ್ರಹ ಪ್ರಾಪ್ತಿಯಾಗಲಿ” ಎಂದು ಗುರುಗಳು ಕೈಯೆತ್ತಿ ಆಶೀರ್ವಾದ ಮಾಡಿದರು.
ಆಮೇಲೆ ವಿಜಯಧ್ವಜ ತೀರ್ಥರು ಮಂಗಳೂರಿನ ದಕ್ಷಿಣದಲ್ಲಿ ಕಡಲ ಕಿನಾರೆಯಲ್ಲಿರುವ ಪುಣ್ಯತೀರ್ಥ ಎಂಬಲ್ಲಿನ ಮಠದಲ್ಲಿ ಕುಳಿತು ಕನ್ನಡದಲ್ಲಿ ಭಾಗವತವನ್ನು ಮರುಸೃಷ್ಟಿಸಿದರು. ಅವರು ಪ್ರಾತಃಕಾಲದ ಜಪತಪಾದಿಗಳನ್ನು ಪೂರೈಸಿ, ಸಮುದ್ರಕ್ಕೆ ಎದುರಾಗಿದ್ದ ಅಶ್ವತ್ಥ ಕಟ್ಟೆಯಲ್ಲಿ ಕುಳಿತು ಈ ಗ್ರಂಥವನ್ನು ಬರೆಯುತ್ತಿದ್ದರು.
ಹೀಗೆ ವಿಜಯಧ್ವಜರು ಪುಣ್ಯತೀರ್ಥದಲ್ಲಿ ಕುಳಿತು ಬರೆಯುತ್ತಿದ್ದಾಗ ನಡೆದ ಒಂದು ಘಟನೆಯು ಸಾಂಕೇತಿಕವಾಗಿದೆ. ಒಂದು ದಿನ ಸಮುದ್ರದ ಗಾಳಿಯೂ ಜೋರಾಗಿ ಬೀಸುತ್ತಿತ್ತು; ಅಶ್ವತ್ಥ ಮರದ ಎಲೆಗಳೂ ಗಲಗಲನೆ ಬಡಿದುಕೊಳ್ಳುತ್ತ್ತ ಸದ್ದು ಮಾಡುತ್ತಿದ್ದವು. ವಿಜಯಧ್ವಜರಿಗೆ ಈ ಶಬ್ದಗಳು ತಮ್ಮ ಏಕಾಗ್ರತೆಗೆ ಭಂಗ ತರುತ್ತಿವೆ ಅನಿಸಿತು. ಅವರು ‘ತಡೆ’ ಎನ್ನುವಂತೆ ಕೈಯೆತ್ತಿ ಮರದ ಎಲೆಗಳಿಗೆ ಸಂಜ್ಞೆ ಮಾಡಿದಾಗ ಮರವು ಮೌನವಾಯಿತಂತೆ. ಕಡಲಿಗೂ ಅದೇ ಸೂಚನೆಯನ್ನು ನೀಡಿದಾಗ ಅತ್ತ ಕಡಲಿನ ಮೊರೆತವೂ ನಿಂತಿತಂತೆ. ಆಶ್ಚರ್ಯವೆಂದರೆ ಈಗಲೂ ಆ ಅಶ್ವತ್ಥಮರದ ಸಮೀಪ ದಿವ್ಯವಾದ ಮೌನವೊಂದು ನೆಲೆಸಿರುತ್ತದೆ. ಬೇರೆಲ್ಲ ಮರಗಳು ಗಾಳಿ ಮೊರೆತಕ್ಕೆ ಗಲಗಲನೆ ಕುಣಿದು ಸದ್ದು ಮಾಡಿದರೂ ಈ ಮರ ಮಾತ್ರ ದಿವ್ಯ ಶಾಂತಿಯಿಂದಿರುತ್ತದೆ.
* * *
ಇಪ್ಪತ್ತನೆಯ ಶತಮಾನದ ಪ್ರಾರಂಭದಲ್ಲಿ ರಜತಪುರದಲ್ಲಿ ಪ್ರಕಾಶನ ಸಂಸ್ಥೆಯೊಂದನ್ನು ಪ್ರಾರಂಭಿಸಿ, ದಾಸರ ಪದಗಳನ್ನು ಮತ್ತು ಧಾರ್ಮಿಕ ಕೃತಿಗಳನ್ನು ಪ್ರಕಟಿಸಿದ ಇನ್ನಂಜೆ ಗುರುರಾಯರು ರಜತಪುರ ಮಠದಲ್ಲಿ ಕನ್ನಡ ಭಾಗವತದ ತಾಳೆಗರಿಯ ಹಸ್ತಪ್ರತಿ ಇರುವುದನ್ನು ತಿಳಿದು ಅದನ್ನು ಓದಲು ಅಪೇಕ್ಷೆಪಟ್ಟು ಮಠಕ್ಕೆ ಹೋದರು. ಆಗ ಪಟ್ಟದಲ್ಲಿದ್ದ ಸ್ವಾಮಿಗಳು ಅದನ್ನು ಓದಲು ಅವರಿಗೆ ಅನುಮತಿ ಕೊಟ್ಟರು. ಕೆಲವು ದಿನಗಳ ಕಾಲ ಮಠದಲ್ಲಿ ಕುಳಿತು ಅದನ್ನು ಓದಿ ಸಂತೋಷಪಟ್ಟ ಇನ್ನಂಜೆಯವರು ಅದನ್ನು ಮುದ್ರಿಸಲು ಆಸೆಪಟ್ಟರು. ಆದರೆ ಅದಕ್ಕೆ ಆ ಯತಿಗಳು ಸಮ್ಮತಿ ಸೂಚಿಸಲಿಲ್ಲ.
“ನಮ್ಮ ಹಿಂದಿನ ಒಬ್ಬರು ಯತಿಗಳು ಇದನ್ನು ಏತಕ್ಕಾಗಿ ಬರೆದರು ಎನ್ನುವುದನ್ನು ನಾವು ಕೇಳಿ ಬಲ್ಲೆವು. ಈ ಕನ್ನಡ ಗ್ರಂಥವನ್ನು ಪ್ರತಿಮಾಡಿಸಿ ಜಗಜ್ಜಾಹೀರುಪಡಿಸಬೇಕೆನ್ನುವ ಅಪೇಕ್ಷೆ ಅವರಿಗೆ ಇತ್ತೋ ಇಲ್ಲವೋ ತಿಳಿಯದು. ಆದರೆ ಅಂತಹ ಕಾರ್ಯವನ್ನು ಅವರು ಮಾಡಲಿಲ್ಲ. ಅಲ್ಲದೆ ಆಗ ಮುದ್ರಣ ಯಂತ್ರಗಳು ಕೂಡ ಇರಲಿಲ್ಲ ಬಿಡಿ. ಆಗ ಪ್ರತಿ ಮಾಡಿಕೊಂಡು ಒಯ್ಯುವ ಪದ್ಧತಿ ಇತ್ತು. ಈ ಗ್ರಂಥವನ್ನು ಯಾರಾದರೂ ಪ್ರತಿ ಮಾಡಿ ಒಯ್ದಿದ್ದಾರೋ ಇಲ್ಲವೋ ನಮಗೆ ತಿಳಿಯದು. ಆದರೆ ಈಗ ನಾವು ಅದನ್ನು ಮುದ್ರಿಸಿ, ಅದರ ಜೊತೆಗೆ ನಮ್ಮ ಮಠದಲ್ಲಿ ನಡೆದ ಘಟನೆಯೊಂದನ್ನು ಕೂಡ ಜನರ ಗಮನಕ್ಕೆ ತರುವುದು ಎಷ್ಟರ ಮಟ್ಟಿಗೆ ಅಗತ್ಯ ಎನ್ನುವುದು ನಮಗೆ ತಿಳಿಯದು. ನಮ್ಮ ಪಟ್ಟದ ದೇವರು ಪ್ರೇರಣೆಕೊಟ್ಟರೆ ಮುಂದೆ ನಿಮ್ಮನ್ನು ಕರೆದು ನಿಮ್ಮ ಕೈಯಲ್ಲಿಯೇ ಇದನ್ನು ಇಡುತ್ತೇವೆ. ಆದರೆ ಈಗ ನಾವು ಅದರ ಬಗ್ಗೆ ಯಾವ ತೀರ್ಮಾನವನ್ನೂ ತೆಗೆದುಕೊಳ್ಳಲಾರೆವು” ಎಂದರು.
ಈ ಅಪ್ರಕಟಿತ ಕನ್ನಡ ಭಾಗವತ ಗ್ರಂಥದ ಬಗ್ಗೆ ತಮ್ಮ ಆಪ್ತರಿಗೆ ಹೇಳಿದ್ದ ಇನ್ನಂಜೆಯವರು, “ಆ ಕನ್ನಡ ಭಾಗವತ ಕಾವ್ಯ ಅತ್ಯುತ್ತಮವಾಗಿತ್ತು. ಕೆಲವು ಅನಗತ್ಯ ವಿವರಗಳನ್ನು ವಿಜಯಧ್ವಜ ತೀರ್ಥರು ಸಂಕ್ಷಿಪ್ತವಾಗಿ ಹೇಳಿದ್ದಾರೆ. ಎಲ್ಲಿಯೂ ವಿಸ್ತರಿಸಿಲ್ಲ. ಆದರೆ ಜಡಭರತನ ಕಥೆಯನ್ನು ಮಾತ್ರ ಸ್ವಾಮಿಗಳು ವಿಶೇಷ ಅನುಭೂತಿಯಿಂದ ವಿಸ್ತರಿಸಿ ಬರೆದಿದ್ದಾರೆ. ಅದನ್ನು ಓದಿ ನನಗೆ ಕಣ್ಣೀರು ಬಂದುಬಿಟ್ಟಿತು” ಎಂದಿದ್ದರು.